ಕೊರೋನದಿಂದ ಸಾಯದಂತೆ ರಕ್ಷಿಸಿ, ಶಿಕ್ಷಿಸಬೇಡಿ

ಕೊರೋನದಿಂದ ಸಾಯದಂತೆ ರಕ್ಷಿಸಿ, ಶಿಕ್ಷಿಸಬೇಡಿ: ವಾರ್ತಾಭಾರತಿ, ಏಪ್ರಿಲ್ 10, 2021
ಕೊರೋನ ವೈರಸ್ ಹರಡದಂತೆ ತಡೆಯುವುದಕ್ಕೆ ರಾಜ್ಯದ ಎಂಟು ನಗರಗಳಲ್ಲಿ ಎಪ್ರಿಲ್ 10ರಿಂದ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ವಿಧಿಸಲಾಗುವುದೆಂದು ಮಾನ್ಯ ಮುಖ್ಯಮಂತ್ರಿಗಳು ಹೇಳಿದ್ದಾರೆ; ಮಾನ್ಯ ಪ್ರಧಾನಿಯವರ ಸೂಚನೆಯಂತೆ ಇದನ್ನು ಮಾಡಲಾಗುತ್ತಿದೆ ಎಂದೂ ಹೇಳಿದ್ದಾರೆ. ಇದಕ್ಕೆ ಕೆಲವು ದಿನಗಳ ಹಿಂದೆ, 6-9ರವರೆಗಿನ ತರಗತಿಗಳನ್ನು ಮುಚ್ಚುವುದಾಗಿಯೂ, ಸಿನಿಮಾ, ಜಿಮ್ ಇತ್ಯಾದಿಗಳನ್ನು ನಿರ್ಬಂಧಿಸುವುದಾಗಿಯೂ ಘೋಷಿಸಲಾಗಿತ್ತು; ಅದಾಗಿ ಎರಡೇ ದಿನಗಳಲ್ಲಿ ಸಿನಿಮಾಗಳನ್ನು ಮತ್ತೆ 100% ತೆರೆಯುವುದಾಗಿಯೂ, ಜಿಮ್‌ಗಳಲ್ಲೂ 50% ಅವಕಾಶ ನೀಡುವುದಾಗಿಯೂ ಹೇಳಲಾಯಿತು. ಅದಕ್ಕೂ ಕೆಲದಿನಗಳ ಮೊದಲು ಮಾನ್ಯ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಕರ್ಫ್ಯೂ, ಲಾಕ್ ಡೌನ್ ಇತ್ಯಾದಿ ನಿರ್ಬಂಧಗಳನ್ನು ಹೇರುವ ಪ್ರಶ್ನೆಯೇ ಇಲ್ಲ, ಅವುಗಳಿಂದ ಯಾವುದೇ ಪ್ರಯೋಜನವೂ ಇಲ್ಲ ಎಂದು ಹೇಳಿದ್ದಾಗಿ ವರದಿಯಾಗಿತ್ತು. ಅಂದರೆ, ಕೇವಲ ಹತ್ತೇ ದಿನಗಳಲ್ಲಿ ಕರ್ಫ್ಯೂ ಇಲ್ಲವೇ ಇಲ್ಲ ಎಂಬಲ್ಲಿಂದ ತೊಡಗಿ ರಾತ್ರಿ ಕರ್ಫ್ಯೂ ಹೇರುವವರೆಗೆ ಪದೇ ಪದೇ ಸರಕಾರದ ನಿರ್ಧಾರಗಳು ಬದಲಾಗುತ್ತಾ ಹೋದವು. ಜೊತೆಗೆ, ಶಿಕ್ಷಣ ಸಚಿವರು ‘ಶಾಲೆ ತೆರೆಯುವುದಿಲ್ಲ ಎಂದಿಲ್ಲ, ಪರೀಕ್ಷೆ ನಡೆಸುವುದಿಲ್ಲ ಎಂದಿಲ್ಲ’ ಎಂದರೆ, ಆರೋಗ್ಯ ಸಚಿವರು ‘ಶಾಲೆ ತೆರೆಯಲು ಸಾಧ್ಯವಿಲ್ಲ, ಪರೀಕ್ಷೆ ನಡೆಸುವುದು ಸಾಧ್ಯವಿಲ್ಲ’ ಎಂದರು! ಇವರೆಲ್ಲರೂ ಭಾಗವಹಿಸುವ ಸಚಿವ ಸಂಪುಟದ ಸಭೆ ಒಂದೇ, ಇವರೆಲ್ಲರಿಗೂ ಸಲಹೆ ನೀಡುವ ತಥಾಕಥಿತ ತಾಂತ್ರಿಕ ಸಲಹಾ ಸಮಿತಿಯೂ ಅದುವೇ!
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎನ್ನುತ್ತಾರೆ. ನಮ್ಮ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈಗ ಮಾಡುತ್ತಿರುವುದು ಅದನ್ನೇ. ಕಳೆದ ಒಂದು ವರ್ಷದಿಂದ ದೇಶದಲ್ಲೂ, ನಮ್ಮ ರಾಜ್ಯದಲ್ಲೂ ಕೊರೋನ ನಿಯಂತ್ರಿಸುವುದಕ್ಕೆ ಏನೇನೋ ಭಯಂಕರವಾದುದನ್ನು ಮಾಡುತ್ತಿದ್ದೇವೆ, 21 ದಿನಗಳಲ್ಲಿ ಕೊರೋನ ಕುರುಕ್ಷೇತ್ರವನ್ನು ಸೋಲಿಸಿ ಇಡೀ ವಿಶ್ವಕ್ಕೇ ತೋರಿಸುತ್ತೇವೆ, ಎಂದೆಲ್ಲ ಹೇಳಿಕೊಂಡದ್ದಾಯಿತು, ಜನರು ಅದಕ್ಕೆ ಚಪ್ಪಾಳೆ,ಗಂಟೆ, ಜಾಗಟೆ ಬಡಿದು ಶಂಖ ಊದಿದ್ದಾಯಿತು, ಮನೆ ದೀಪ ಆರಿಸಿ ಹಣತೆ ಉರಿಸಿದ್ದಾಯಿತು, ಕಷಾಯ-ಗೋ ಮೂತ್ರ ಕುಡಿದದ್ದಾಯಿತು. ಯಾವ ಉಪಯೋಗಕ್ಕೂ ಇಲ್ಲದೆ ಇದ್ದ ಔಷಧಗಳನ್ನು ಅಮೆರಿಕಕ್ಕೇ ನೀಡಿದ್ದೇವೆ ಎಂದು ಕೊಚ್ಚಿ ಕೊಂಡದ್ದಾಯಿತು, ಇಡೀ ವಿಶ್ವಕ್ಕೇ ನಮ್ಮದೇ ಲಸಿಕೆ ಎಂದು ಗಡ್ಡ-ಮೀಸೆ ಸವರಿಕೊಂಡದ್ದೂ ಆಯಿತು. ಇದನ್ನೆಲ್ಲ ನೋಡಲಾಗದ, ಕೇಳಲಾಗದ ಕೊರೋನ ಸೋಂಕು ತನ್ನ ಪಾಡಿಗೆ ಹರಡುತ್ತಾ ಹೋಯಿತು, ತನ್ನ ಹಳೆಯ ಅಭ್ಯಾಸದಂತೆ 3000 ರೂಪಗಳನ್ನು ಬದಲಿಸಿಕೊಂಡದ್ದೂ ಆಯಿತು, ಈ ಫೆಬ್ರವರಿ ವರೆಗೆ ದೇಶದ ವಿವಿಧೆಡೆಗಳಲ್ಲಿ 30-60% ಜನರನ್ನು ಸೋಂಕಿದ ಬಳಿಕ, ಇನ್ನುಳಿದವರನ್ನು ಅದು ಈಗ ಸೋಂಕುತ್ತಿದೆ.
ತಾವು ಹೇಳಿದ್ದು, ಮಾಡಿದ್ದು ಯಾವುದೂ ಫಲ ನೀಡಲಿಲ್ಲ ಎಂದು ಆತ್ಮವಿಮರ್ಶೆ ಮಾಡಿ ಒಪ್ಪಿಕೊಂಡು, ಜನರೆದುರು ವಸ್ತುಸ್ಥಿತಿಯನ್ನು ವಿವರಿಸುವ ಬದಲಿಗೆ, ಕೊರೋನ ಸೋಂಕಿನಿಂದಾಗಲೀ, ಅದರ ನಿಯಂತ್ರಣೋಪಾಯಗಳಿಂದಾಗಲೀ ಜನರಿಗೆ ಸಮಸ್ಯೆಗಳಾಗದಂತೆ ಜಾಣ್ಮೆಯಿಂದ ಅದನ್ನು ನಿಭಾಯಿಸುವ ಬದಲಿಗೆ, ತಮ್ಮ ಹಳೆಯ ತಪ್ಪುಗಳನ್ನೇ ಮತ್ತೆ ಮಾಡಲು ಸರಕಾರಗಳೂ, ತಥಾಕಥಿತ ತಾಂತ್ರಿಕ ಸಮಿತಿಗಳೂ ಮತ್ತೆ ಮುಂದಾಗಿರುವುದು ಶೋಚನೀಯವಾಗಿದೆ. ಒಂದೆಡೆ ಈ ಅವೈಜ್ಞಾನಿಕವಾದ, ನಿಷ್ಪ್ರಯೋಜಕವಾದ ಕ್ರಮಗಳಿಂದ, ಇನ್ನೊಂದೆಡೆ ಕೊರೋನ ಭೀತಿಯಿಂದ, ತತ್ತರಿಸುತ್ತಿರುವ ಜನಸಾಮಾನ್ಯರು ಗರ ಬಡಿದವರಂತೆ ಸುಮ್ಮನಿರುವುದು ಸರಕಾರದ ಸ್ವೇಚ್ಛಾಚಾರವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಆದ್ದರಿಂದ ಈ ಹಿಂದೆ ಸರಕಾರಗಳು ಕೈಗೊಂಡ ಕ್ರಮಗಳಿಂದ ಅದೇನು, ಹೇಗೆ ಪ್ರಯೋಜನಗಳಾಗಿವೆ ಎನ್ನುವುದನ್ನು ಸವಿವರವಾಗಿ ಸಾರ್ವಜನಿಕರೆದುರು ಇಡಲೇ ಬೇಕೆಂದು ಎಲ್ಲರೂ ಒತ್ತಾಯಿಸುವ ಅಗತ್ಯವಿದೆ.
ಈ ಒಂದು ವರ್ಷದಲ್ಲಿ ವಿಶ್ವದಾದ್ಯಂತ 13 ಕೋಟಿಗೂ ಹೆಚ್ಚು ಜನರಲ್ಲಿ ಕೊರೋನ ವೈರಸ್ ಸೋಂಕನ್ನು ಗುರುತಿಸಲಾಗಿದ್ದು, 30 ಲಕ್ಷದಷ್ಟು ಮಂದಿ ಅದರಿಂದ ಮೃತರಾಗಿದ್ದಾರೆ. ನಮ್ಮ ದೇಶದಲ್ಲಿ ಅಧಿಕೃತವಾಗಿ ಒಂದು ಕೋಟಿ ಮೂವತ್ತು ಲಕ್ಷ ಸೋಂಕಿತರಾಗಿದ್ದರೆ, 170000 ಮೃತರಾಗಿದ್ದಾರೆ; ಆದರೆ ಸರಕಾರವೇ ಅಂದಾಜಿಸುವಂತೆ, ಸೋಂಕಿತರ ಸಂಖ್ಯೆಯು ಅದರ 90 ಪಟ್ಟು, ಅಂದರೆ 117 ಕೋಟಿ, ಇರಬಹುದು, ಮೃತರ ಸಂಖ್ಯೆಯು ಐದು ಪಟ್ಟು, ಅಂದರೆ, 850000 ಇರಬಹುದು. ಈ ರೋಗದ ಬಗ್ಗೆ ಸಾಕಷ್ಟು ಮಾಹಿತಿಯು ಕಳೆದ ವರ್ಷದ ಎಪ್ರಿಲ್ ನಲ್ಲೇ ಲಭ್ಯವಿತ್ತು, ಈಗ ಇಷ್ಟೊಂದು ಜನರನ್ನು ಸೋಂಕಿದ ಬಳಿಕ ಕೊರೋನ ಬಗ್ಗೆ ಇನ್ನಷ್ಟು ವಿಷಯಗಳು ತಿಳಿದಿವೆ, ನಮ್ಮ ದೇಶದಲ್ಲೇ, ನಮ್ಮ ರಾಜ್ಯದಲ್ಲೇ ಅದರ ಅನುಭವವು ಬೇಕಾದಷ್ಟಿದೆ. ಇವನ್ನೆಲ್ಲ ಬಳಸಿ, ನಮ್ಮ ಜನರ ಸ್ಥಿತಿಗತಿಗಳು, ಜೀವನಶೈಲಿಗಳು ಎಲ್ಲವನ್ನೂ ಪರಿಗಣಿಸಿ ಇಲ್ಲಿಗೆ ಸೂಕ್ತವಾದ ನಿಯಂತ್ರಣೋಪಾಯಗಳನ್ನು ಕೈಗೊಳ್ಳುವ ಬದಲಿಗೆ ಯಾರನ್ನೋ ಕೇಳಿ, ಯಾವುದನ್ನೋ ನೋಡಿ, ಏನನ್ನೋ ತೋರಿಸುವುದಕ್ಕೆಂದು ಏನನ್ನೋ ಮಾಡಹೊರಟಿರುವುದು ಅನ್ಯಾಯವೂ, ಅಸಂಬದ್ಧವೂ ಆಗಿದೆ.
ನಮ್ಮ ದೇಶದಲ್ಲಿ, ನಮ್ಮ ರಾಜ್ಯದಲ್ಲಿ ಕೊರೋನ ವೈರಸ್ ನಿಭಾಯಿಸುವುದಕ್ಕೆ ಅಮೆರಿಕ, ತೈವಾನ್, ಕೊರಿಯಾಗಳ ಟೆಸ್ಟ್, ಟ್ರಾಕ್, ಟ್ರೀಟ್ ಮಾದರಿಯು ಅಗತ್ಯವೇ ಇಲ್ಲ. ಇದನ್ನು ಹಿರಿಯ ವೈರಾಣು ತಜ್ಞ ಡಾ. ಜೇಕಬ್ ಜಾನ್ ಕಳೆದ ಜೂನ್-ಜುಲೈ ನಲ್ಲೇ ಹೇಳಿದ್ದರು. ಆದರೆ ನಮ್ಮ ತಥಾಕಥಿತ ತಜ್ಞರು ಇನ್ನೂ ಅದೇ ಟೆಸ್ಟ್, ಟ್ರಾಕ್, ಟ್ರೀಟ್ ಜಪದಲ್ಲೇ ಇದ್ದಾರೆ, ಪ್ರಧಾನಿಗಳೂ, ಮುಖ್ಯಮಂತ್ರಿಗಳೂ ಅದನ್ನೇ ಹೇಳುತ್ತಿದ್ದಾರೆ.
ನಾನು ಕಳೆದ ಮಾರ್ಚ್ 13, 2020ರಂದು ಹೇಳಿದ್ದಂತೆ, ಕೊರೊನಾ ಭಾರತಕ್ಕೆ ಬಂದಾಗಿದೆ, ಶತಮಾನಗಳ ಕಾಲ ಉಳಿಯಲಿದೆ, ಅದು ಹರಡುವುದನ್ನು ತಡೆಯಲು ಸಾಧ್ಯವಿಲ್ಲ. ಈಗಾಗಲೇ 10 ಲಕ್ಷ ಕೊರೋನ ಪ್ರಕರಣಗಳಾಗಿರುವ, ಈಗ ಬೆಂಗಳೂರು ನಗರದಲ್ಲೇ ದಿನಕ್ಕೆ ಐದಾರು ಸಾವಿರ ಸೋಂಕುಗಳು ಪತ್ತೆಯಾಗುತ್ತಿರುವಾಗ, ಬೇರೆ ಊರುಗಳಿಂದ, ಬೇರೆ ರಾಜ್ಯಗಳಿಂದ ಬೆಂಗಳೂರಿಗೋ, ಮೈಸೂರಿಗೋ ಬರುವವರು ಪರೀಕ್ಷೆ ಮಾಡಿ ರಿಪೋರ್ಟ್ ಹಿಡಿದುಕೊಂಡು ಬರಬೇಕೆಂದರೆ ಏನರ್ಥ? ಒಂದು ವೇಳೆ 72ಗಂಟೆಗಳೊಳಗೆ ಒಂದು ಸಾವಿರ ವ್ಯಯಿಸಿ ಪರೀಕ್ಷೆ ಮಾಡಿಸಿಕೊಂಡರೂ, ಅದರ ಮರು ಘಳಿಗೆಯಲ್ಲೇ ಸೋಂಕು ತಗಲಬಾರದು ಎಂದೇನಾದರೂ ಇದೆಯೇ, ನೆಗೆಟಿವ್ ವರದಿ ಕೈಯಲ್ಲಿದ್ದರೂ ಹೊಸದಾಗಿ ತಗಲಿದ ಕೊರೋನ ಗಂಟಲಲ್ಲಿ ಇರಲಾರದು ಎನ್ನಲು ಸಾಧ್ಯವೇ? ಆದ್ದರಿಂದ ಈ ಹಂತದಲ್ಲಿ ಯಾವ ಪ್ರಯೋಜನವೂ ಇಲ್ಲದ ಇಂತಹ ನಿಯಮಗಳಿಂದ ಕೊರೋನ ಪರೀಕ್ಷೆಯ ಲ್ಯಾಬ್‌ಗಳಿಗೆ ವ್ಯಾಪಾರವೇ ಹೊರತು ಕೊರೋನ ತಡೆಯಲು ಚಿಕ್ಕಾಸಿನ ಪ್ರಯೋಜನವೂ ಆಗದು.
ಕೊರೋನ ರಾತ್ರಿಯಲ್ಲಷ್ಟೇ ಹರಡುವುದಲ್ಲ, ರಸ್ತೆಗಳಲ್ಲಿ, ಸಿನಿಮಾ ಮಂದಿರಗಳಲ್ಲಿ, ಶಾಲೆಗಳಲ್ಲಿ ಮಾತ್ರವೇ ಹರಡುವುದೂ ಅಲ್ಲ. ಹಾಗಿದ್ದರೆ ವಿಶ್ವದ ಅತಿ ದೀರ್ಘ, ಅತಿ ಕಠಿಣ ಲಾಕ್‌ಡೌನ್‌ನಿಂದ, ಒಂದಿಡೀ ವರ್ಷ ಶಾಲೆ ಮುಚ್ಚಿ ಮಕ್ಕಳ ಭವಿಷ್ಯವನ್ನೇ ನಾಶ ಮಾಡಿದ್ದರಿಂದ ಕೊರೋನ ನಿಯಂತ್ರಿಸಲ್ಪಡಬೇಕಿತ್ತು. ಆದ್ದರಿಂದ ಈ ರಾತ್ರಿ ಕರ್ಫ್ಯೂ ಆಗಲೀ, ಎಲ್ಲವುಗಳನ್ನು ಮುಚ್ಚುವುದರಿಂದಾಗಲೀ ಕೊರೋನ ನಿಯಂತ್ರಿಸಲು ಸಾಧ್ಯವಿಲ್ಲ.
ಆದ್ದರಿಂದ ಹೀಗೆ ಇನ್ನು ಮುಂದೆ ಯಾವುದನ್ನೂ ಮುಚ್ಚುವುದೇ ಇಲ್ಲವೆಂದು ಹೇಳಿ, ಜನರಿಗೆ ತಮ್ಮ ನಿತ್ಯ ಜೀವನವನ್ನು ಮತ್ತೆ ಕಷ್ಟದಿಂದ ಜೋಡಿಸಿಕೊಳ್ಳಲು, ಮದುವೆ ಇತ್ಯಾದಿಗಳನ್ನು ಏರ್ಪಡಿಸಲು ಸಾಧ್ಯವೆನ್ನುವ ಆಸೆ ಹುಟ್ಟಿಸಿದ ಕೆಲವೇ ದಿನಗಳಲ್ಲಿ ಏಕಾಏಕಿಯಾಗಿ ಮತ್ತೆ ಎಲ್ಲವನ್ನೂ ಮುಚ್ಚಲು ಹೊರಟಿರುವುದು ಅನ್ಯಾಯವಷ್ಟೇ ಅಲ್ಲ, ಅಸಾಂವಿಧಾನಿಕವೂ ಆಗಿದೆ.
ನಮ್ಮ ರಾಜ್ಯದಲ್ಲಿ ಕೊರೋನ ಸೋಂಕನ್ನು ನಿಭಾಯಿಸಲು ಈ ಕೆಳಗಿನ ಕ್ರಮಗಳನ್ನಷ್ಟೇ ಮಾಡಿದರೆ ಸಾಕು.
ಭಾರತದಂತಹ ಜನನಿಬಿಡವಾದ, ಕೂಡು ಕುಟುಂಬಗಳ ದೇಶದಲ್ಲಿ ಕೊರೊನ ಸೋಂಕು ತಗಲದಂತೆ ತಡೆಯಲು ಸಾಧ್ಯವಿಲ್ಲ. ಕೊರೋನ ಸೋಂಕಿತ ವಯಸ್ಕರಿಗೆ ರೋಗಲಕ್ಷಣಗಳು ಆರಂಭಗೊಳ್ಳುವ ಕೆಲಗಂಟೆಗಳ ಮೊದಲೇ ಅದು ಹರಡಲಾರಂಭಿಸುವ ಸಾಧ್ಯತೆಗಳಿರುವುದರಿಂದ ಮನೆಗಳೊಳಗೂ, ಕೆಲಸದ ಜಾಗಗಳಲ್ಲೂ ಅದರ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದು. ಹೆಚ್ಚಿನವರಿಗೆ ಕೊರೋನ ಸೋಂಕು ಮನೆಗಳೊಳಗೇ ತಗಲುತ್ತದೆಯೇ ಹೊರತು ಹೊರಗಿನಿಂದಲ್ಲ. ಮಕ್ಕಳಿಂದ ಇತರರಿಗೆ ಸೋಂಕು ಹರಡುವ ಸಾಧ್ಯತೆಗಳು ಅತ್ಯಲ್ಪ. ಆದ್ದರಿಂದ ಸೋಂಕು ತಡೆಯುವುದಕ್ಕೆ ಶಾಲೆ, ಮಳಿಗೆ, ರಸ್ತೆ ಮುಚ್ಚಿ ಹಾಕುವುದು, ಕರ್ಫ್ಯೂ ವಿಧಿಸುವುದು ನಿಷ್ಪ್ರಯೋಜಕ. ಕೊರೋನ ಸೋಂಕಿನ ಲಕ್ಷಣಗಳಿರುವವರು (ತಲೆ ನೋವು, ಗಂಟಲು ನೋವು, ಕೆಮ್ಮು, ವಾಸನೆ ತಿಳಿಯದಾಗುವುದು) ಮತ್ತು ಅಂಥ ಲಕ್ಷಣಗಳಿರುವವರ ಸಂಪರ್ಕಕ್ಕೆ ಬಂದವರು ತಮ್ಮಿಂದ ತಮ್ಮ ಮನೆ ಮಂದಿಗಾಗಲೀ, ಇತರರಿಗಾಗಲೀ ಕೊರೋನ ಹರಡದಂತೆ ಅಂತರವನ್ನು ಕಾಯ್ದುಕೊಳ್ಳುವುದು, ಗಟ್ಟಿ ದನಿಯಲ್ಲಿ ಮಾತಾಡದಿರುವುದು ಮುಂತಾದ ಎಚ್ಚರಿಕೆಯ ಕ್ರಮಗಳನ್ನು ಪಾಲಿಸುವುದೊಂದೇ ದಾರಿಯಾಗಿದೆ. ಅಂಥವರು ಕೊರೋನ ಪರೀಕ್ಷೆ ಇತ್ಯಾದಿಗಳಿಗೆಂದು ಆಸ್ಪತ್ರೆ, ಲ್ಯಾಬ್‌ಗಳಿಗೆ ತಿರುಗಾಡುತ್ತಿದ್ದರೆ ಹೋದಲ್ಲೆಲ್ಲ ಕೊರೋನ ಹರಡಲು ಕಾರಣರಾಗುವುದರಿಂದ ಅವನ್ನೂ ಮಾಡದಂತೆ ಎಚ್ಚರಿಕೆ ವಹಿಸಬೇಕು. ಇದನ್ನು ಸರಕಾರವೂ, ಮಾಧ್ಯಮಗಳೂ ಜನರಿಗೆ ತಿಳಿಸುವ ಕೆಲಸವಾಗಬೇಕು. ಯಾವುದೇ ಕಾನೂನು, ಲಾಠಿಯೇಟು, ಕರ್ಫ್ಯೂಗಳಿಂದ ಇವನ್ನು ಸಾಧಿಸಲಾಗದು.
ಕೊರೋನ ಹರಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದ ಮೇಲೆ ನಮ್ಮೆಲ್ಲರ ಒಂದೇ ಒಂದು ಆದ್ಯತೆಯು ಕೊರೋನದಿಂದ ಯಾರಿಗೂ ಸಮಸ್ಯೆಗಳಾಗದಂತೆ, ಜೀವಹಾನಿಯಾಗದಂತೆ ರಕ್ಷಿಸುವುದೇ ಆಗಿರಬೇಕು. ಕೊರೋನ ಸೋಂಕಿನಿಂದ ದೇಹದ ಉರಿಯೂತವು ಹೆಚ್ಚಿ ಶ್ವಾಸಕೋಶಗಳಿಗೂ, ರಕ್ತನಾಳಗಳಿಗೂ ಸಮಸ್ಯೆಯಾಗುತ್ತವೆ ಎನ್ನುವುದೂ, ಅದಾಗಲೇ ಉರಿಯೂತವು ಹೆಚ್ಚಿರುವ ಸಮಸ್ಯೆಗಳಿದ್ದವರು, ಅಂದರೆ, ಹಿರಿವಯಸ್ಕರು, ಸಕ್ಕರೆ ಕಾಯಿಲೆ, ಬೊಜ್ಜು, ರಕ್ತದ ಏರೊತ್ತಡ ಇತ್ಯಾದಿಗಳುಳ್ಳವರು ಕೊರೋನದಿಂದ ಹೆಚ್ಚಿನ ಸಮಸ್ಯೆಗೀಡಾಗುತ್ತಾರೆ ಎನ್ನುವುದೂ, ಈ ಎಲ್ಲಾ ಸಮಸ್ಯೆಗಳಿಗೆ ಸಕ್ಕರೆ, ಹಣ್ಣಿನ ರಸಗಳು ಮತ್ತು ಸಂಸ್ಕರಿತ ತಿನಿಸುಗಳ (ಬ್ರೆಡ್ಡು, ಬಿಸ್ಕತ್ತು ಇತ್ಯಾದಿ) ಅತಿ ಸೇವನೆಯೇ ಕಾರಣವೆನ್ನುವುದೂ ಈಗಾಗಲೇ ಅತಿ ಸ್ಪಷ್ಟವಾಗಿದೆ. ಆದ್ದರಿಂದ ಇಂಥವರೆಲ್ಲರೂ ತಮಗೆ ಕೊರೋನ ಸೋಂಕದಂತೆ ಮನೆಯೊಳಗೂ, ಹೊರಗೂ ಎಚ್ಚರಿಕೆ ವಹಿಸಬೇಕು, ಹಾಗೊಮ್ಮೆ ಸೋಂಕಿನ ಲಕ್ಷಣಗಳು ತೊಡಗಿದರೆ ಎರಡು ವಾರಗಳ ಕಾಲ ತಮ್ಮ ದೇಹ ಸ್ಥಿತಿಯ ಮೇಲೆ ನಿಗಾ ವಹಿಸಬೇಕು, ರಕ್ತದ ಆಮ್ಲಜನಕದ ಮಟ್ಟವನ್ನು ಪಲ್ಸ್ ಆಕ್ಸಿಮೀಟರ್ ಮೂಲಕ ನೋಡಿಕೊಂಡಿದ್ದು, ಅದು 95%ಕ್ಕಿಂತ ಕೆಳಗಿಳಿದರೆ ಕೂಡಲೇ ತಮ್ಮ ವೈದ್ಯರನ್ನು ಸಂಪರ್ಕಿಸಿ ಆಮ್ಲಜನಕವನ್ನು ಪಡೆಯುವುದಕ್ಕೆ ವ್ಯವಸ್ಥೆ ಮಾಡಬೇಕು.
ಸೋಂಕಿತರನ್ನೆಲ್ಲ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ, ಹಾಗೆಯೇ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ 20-50% ಹಾಸಿಗೆಗಳನ್ನು ಕಾಯ್ದಿರಿಸುವುದು ಸರಿಯಲ್ಲ. ಕಳೆದ ಬಾರಿ ಹಾಗೆ ಮಾಡಿದ್ದರಿಂದ ಅತ್ತ ಕೊರೋನ ರೋಗಿಗಳೂ ಬರಲಿಲ್ಲ, ಇತ್ತ ಇತರ ರೋಗಿಗಳಿಗೂ, ಹೆರಿಗೆ, ಮಕ್ಕಳ ಆರೈಕೆಗೂ ಅವಕಾಶವಿಲ್ಲದಂತಾಯಿತು. ಮೇಲೆ ಹೇಳಿದಂತೆ, ಯಾರಿಗೆ ಸಮಸ್ಯೆಗಳಾಗುವ ಸಾಧ್ಯತೆಗಳಿವೆಯೋ, ಅವರನ್ನು ದಾಖಲಿಸುವುದಕ್ಕೆ ಸ್ಥಳೀಯವಾಗಿ ನಿರ್ದಿಷ್ಟ ಆರೋಗ್ಯ ಕೇಂದ್ರಗಳನ್ನು ನಿಗದಿ ಪಡಿಸಿ, ಅಲ್ಲಿ ಆಮ್ಲಜನಕದ ವ್ಯವಸ್ಥೆಯನ್ನು ಕಲ್ಪಿಸಬೇಕು, ತೀವ್ರ ಸಮಸ್ಯೆಗಳಾದವರಿಗಾಗಿಯೂ ಹಾಗೆಯೇ ನಿರ್ದಿಷ್ಟವಾದ ತೀವ್ರ ನಿಗಾ ಘಟಕಗಳನ್ನು ವ್ಯವಸ್ಥೆ ಮಾಡಬೇಕು.
ಕೊರೋನ ಚಿಕಿತ್ಸೆಗೆ ಯಾವುದೇ ನಿರ್ದಿಷ್ಟ ಔಷಧವಾಗಲೀ (ರೆಮ್ಡಿಸಿವಿರ್, ಫಾವಿಪಿರಾವಿರ್, ಒಸೆಲ್ಟಾಮಿವಿರ್ ಇತ್ಯಾದಿ), ಪ್ಲಾಸ್ಮಾ ಚಿಕಿತ್ಸೆಯಾಗಲೀ ಪ್ರಯೋಜನಕ್ಕಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿರುವುದರಿಂದ ಇವುಗಳ ಬಳಕೆಯನ್ನು ಸೂಚಿಸಬಾರದು. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಈ ಬಗ್ಗೆ ಸ್ಪಷ್ಟವಾದ ಹೇಳಿಕೆಯನ್ನು ನೀಡಿದ್ದು, ನಮ್ಮಲ್ಲೂ ಅದನ್ನು ಪಾಲಿಸಬೇಕು. ಕೊರೋನ ಸೋಂಕಿತರು ತಮ್ಮ ದೇಹಸ್ಥಿತಿಯ ಮೇಲೆ ನಿಗಾ ವಹಿಸಬೇಕಾದ ವಿಧಾನಗಳ ಬಗ್ಗೆ, ಸಮಸ್ಯೆಗಳನ್ನು ಬೇಗನೇ ಗುರುತಿಸುವ ಬಗ್ಗೆ, ಹಾಗೆ ಗೊತ್ತಾದೊಡನೆ ಆಸ್ಪತ್ರೆಗೆ ಹೋಗಬೇಕಾದ ಬಗ್ಗೆ, ಗಂಭೀರ ಸಮಸ್ಯೆಗಳಾದವರನ್ನು ಆಸ್ಪತ್ರೆಗಳಲ್ಲಿ ತಾಳ್ಮೆಯಿಂದ, ಜಾಣ್ಮೆಯಿಂದ ನಿಭಾಯಿಸುವ ಬಗ್ಗೆ ಅತ್ಯಂತ ಸ್ಪಷ್ಟವಾದ, ವೈಜ್ಞಾನಿಕವಾದ, ಸಾಕ್ಷ್ಯಾಧಾರಿತವಾದ ಕಾರ್ಯಸೂಚಿಯನ್ನು ಕೂಡಲೇ ಪ್ರಕಟಿಸಬೇಕು.
ಎಲ್ಲಕ್ಕಿಂತ ಹೆಚ್ಚಾಗಿ ಜನರ ನಿತ್ಯ ಜೀವನದ ಮೇಲೆ ಪ್ರಹಾರ ಮಾಡುವ ಬರ್ಬರ ಕ್ರಮಗಳನ್ನು ಕೂಡಲೇ ಕೈಬಿಟ್ಟು, ಜನರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು, ಅವರ ಸಹಕಾರದಿಂದ ಕೊರೋನ ನಿಭಾಯಿಸಲು ಮುಂದಾಗಬೇಕು.

Be the first to comment

Leave a Reply

Your email address will not be published.


*