ಕೊರೋನ ಚಿಕಿತ್ಸೆಯ ಬಗ್ಗೆ ಗೊಂದಲಗಳು

ಕೊರೋನ ಚಿಕಿತ್ಸೆಯ ಬಗ್ಗೆ ಗೊಂದಲಗಳು: ವಾರ್ತಾಭಾರತಿ, ನವೆಂಬರ್ 1, 2020
ಹೊಸ ಕೊರೋನ ವೈರಸ್‌ಗೆ ಚಿಕಿತ್ಸೆಯನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ಅನೇಕರು ಬೇಸರಿಸಿಕೊಳ್ಳುವುದು ಸಾಮಾನ್ಯವಾಗಿದೆ. ಅದನ್ನು ಬಳಸಿಕೊಂಡು, ಆಯುಷ್ ಪದ್ಧತಿಗಳವರು ತಮ್ಮದೊಂದೇ ಚಿಕಿತ್ಸೆ ಎಂದು ಹೇಳಿಕೊಳ್ಳುತ್ತಿದ್ದು, ಸರಕಾರವೂ ಅದಕ್ಕೆ ಬೆಂಬಲ ನೀಡುತ್ತಿದೆ. ಆದರೆ ತೀವ್ರ ರೋಗವಿದ್ದು ಆಧುನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಅಗತ್ಯವುಳ್ಳವರನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ತಮ್ಮ ರೋಗರಕ್ಷಣಾ ವ್ಯವಸ್ಥೆಯ ಬಲದಿಂದಲೇ ಗುಣ ಹೊಂದುವುದರಿಂದ ಅವರಿಗೆಲ್ಲ ಯಾವುದೇ ಚಿಕಿತ್ಸೆಯ ಅಗತ್ಯವೂ ಇರುವುದಿಲ್ಲ.
ಕೊರೋನ ವೈರಸ್‌ಗೆ ಚಿಕಿತ್ಸೆ ಇಲ್ಲ, ಅಗತ್ಯವೂ ಇಲ್ಲ
ಚೀನಾದಲ್ಲೂ, ಅಮೆರಿಕ ಹಾಗೂ ಯುರೋಪುಗಳಲ್ಲೂ ಕೊರೋನ ಸೋಂಕು ಹರಡಲಾರಂಭಿಸಿದ್ದಾಗ ಕೆಲವು ಹಳೆಯ ಔಷಧಗಳನ್ನು ಅದರೆದುರು ಪ್ರಯತ್ನಿಸಿ ನೋಡಲಾಗಿತ್ತು. ಹೈಡ್ರಾಕ್ಸಿ ಕ್ಲೋರೋಕ್ವಿನ್, ಅಝಿತ್ರೋಮೈಸಿನ್, ಡಾಕ್ಸಿಸೈಕ್ಲಿನ್, ಲೊಪಿನಾವಿರ್/ರಿಟೊನಾವಿರ್, ಒಸೆಲ್ಟಾಮಿವಿರ್, ಫಾವಿಪಿರಾವಿರ್, ಐವರ್‌ಮೆಕ್ಟಿನ್, ರೆಮ್ಡಿಸಿವಿರ್, ತೊಸಿಲಿಝುಮಾಬ್‌ ಮುಂತಾದ ಔಷಧಗಳನ್ನೂ, ಸೋಂಕಿನಿಂದ ಗುಣಮುಖರಾದವರ ರಕ್ತದ್ರವದ ಪೂರಣವನ್ನೂ (ಪ್ಲಾಸ್ಮಾ ಚಿಕಿತ್ಸೆ) ಬಳಸಿ ನೋಡಲಾಗಿತ್ತು.
ಈ ಚಿಕಿತ್ಸೆಗಳ ಉಪಯುಕ್ತತೆಯ ಬಗ್ಗೆ ಬಲವಾದ ಆಧಾರಗಳು ಲಭ್ಯವಿರದಿದ್ದುದರಿಂದ, ನಮ್ಮ ಕೇಂದ್ರ ಸರಕಾರವು ತನ್ನ ಕೊರೋನ ಚಿಕಿತ್ಸೆಯ ಮಾರ್ಗಸೂಚಿಯಲ್ಲಿ ಈ ಔಷಧಗಳನ್ನು ಸೇರಿಸಿರಲಿಲ್ಲ. ಆದರೆ, ನಮ್ಮ ರಾಜ್ಯ ಸರ್ಕಾರವು ಮೇ 15ರಂದು ಪ್ರಕಟಿಸಿದ ಚಿಕಿತ್ಸಾ ಮಾರ್ಗಸೂಚಿಯಲ್ಲಿ ಈ ಎಲ್ಲಾ ಔಷಧಗಳನ್ನೂ ಸೇರಿಸಲಾಗಿತ್ತು. ಈ ಔಷಧಗಳ ಉಪಯುಕ್ತತೆಯ ಬಗ್ಗೆ ಸಾಕ್ಷ್ಯಾಧಾರಗಳು ಇಲ್ಲವೆಂದೂ, ಅವುಗಳ ಅಗತ್ಯವೂ ಇಲ್ಲವೆಂದೂ ನಾವು ಈ ಹಿಂದೆಯೇ ಬರೆದಿದ್ದೆವು.
ಈಗ ಕೊರೋನ ಚಿಕಿತ್ಸೆಯ ಬಗ್ಗೆ ಬ್ರಿಟನ್‌ನಲ್ಲಿ 14 ಸಾವಿರಕ್ಕೂ ಹೆಚ್ಚು ಸೋಂಕಿತರಲ್ಲಿ ನಡೆಸಲಾಗುತ್ತಿರುವ ರಿಕವರಿ ಎಂಬ ಹೆಸರಿನ ಅಧ್ಯಯನಗಳು, ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ 30 ದೇಶಗಳಲ್ಲಿ 11000ಕ್ಕೂ ಹೆಚ್ಚು ಸೋಂಕಿತರಲ್ಲಿ ನಡೆಸಲಾಗುತ್ತಿರುವ ಸಾಲಿಡಾರಿಟಿ ಎಂಬ ಹೆಸರಿನ ಅಧ್ಯಯನಗಳು ಮುಕ್ತಾಯದ ಹಂತವನ್ನು ತಲುಪಿದ್ದು, ಅವುಗಳ ಹಲವು ವರದಿಗಳು ಈಗಾಗಲೇ ಪ್ರಕಟವಾಗಿವೆ. ಕ್ಲೋರೋಕ್ವಿನ್, ಲೊಪಿನಾವಿರ್/ರಿಟೊನಾವಿರ್, ಇಂಟರ್‌ಫೆರಾನ್ ಮತ್ತು ರೆಮ್ಡಿಸಿವಿರ್‌ಗಳು ಕೊರೋನ ಚಿಕಿತ್ಸೆಯಲ್ಲಿ ಯಾವುದೇ ವಿಶೇಷ ನೆರವನ್ನು ನೀಡುವುದಿಲ್ಲ ಎಂದು ಈ ಅಧ್ಯಯನಗಳಲ್ಲಿ ಸ್ಪಷ್ಟವಾಗಿದೆ. ತೊಸಿಲಿಝುಮಾಬ್‌ ಬಗ್ಗೆಯೂ ವರದಿಗಳು ಪ್ರಕಟವಾಗಿದ್ದು, ಅದರಿಂದಲೂ ಪ್ರಯೋಜನವಿಲ್ಲವೆಂದು ದೃಢಪಟ್ಟಿದೆ. ಒಸೆಲ್ಟಾಮಿವಿರ್ ಕೂಡ ನಿರುಪಯುಕ್ತವೆಂದು ಅದನ್ನು ಉತ್ಪಾದಿಸುವ ಕಂಪೆನಿಯೇ ಹೇಳಿಯಾಗಿದೆ, ಫಾವಿಪಿರಾವಿರ್ ಪ್ರಯೋಜನದ ಬಗ್ಗೆ ಯಾವುದೇ ವರದಿಯು ಇದುವರೆಗೆ ಲಭ್ಯವಿಲ್ಲ. ಪ್ಲಾಸ್ಮಾ ಚಿಕಿತ್ಸೆಯಿಂದ ಯಾವುದೇ ಪ್ರಯೋಜನವಿಲ್ಲವೆಂದು ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಯ ಅಧ್ಯಯನಗಳು ದೃಢಪಡಿಸಿದ್ದು, ಅದನ್ನು ಬಳಸುವುದಕ್ಕೆ ನೀಡಲಾಗಿದ್ದ ಸಲಹೆಯನ್ನು ಹಿಂಪಡೆಯುವುದಾಗಿ ಐಸಿಎಂಆರ್ ಹೇಳಿದೆ. ಹೊಸ ಕೊರೋನ ಸೋಂಕಿನ ಚಿಕಿತ್ಸೆಗೆ ಈಗ ಲಭ್ಯವಿರುವ ಯಾವುದೇ ಔಷಧಗಳು ಉಪಯುಕ್ತವಲ್ಲ ಎಂಬುದು ಹೀಗೆ ದೃಢಗೊಂಡಿದ್ದರೂ, ರಾಜ್ಯ ಸರಕಾರದ ಹೊಸ ಚಿಕಿತ್ಸಾ ಮಾರ್ಗಸೂಚಿಯಲ್ಲಿ ಈ ಎಲ್ಲಾ ಔಷಧಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ!
ಶೇ.90ಕ್ಕೂ ಹೆಚ್ಚು ಸೋಂಕಿತರಲ್ಲಿ ಕೊರೋನ ಯಾವುದೇ ಸಮಸ್ಯೆಗಳನ್ನುಂಟು ಮಾಡದೆ, ಮೊದಲ ಹಂತದಲ್ಲೇ, ನಾಲ್ಕೈದು ದಿನಗಳಲ್ಲೇ, ಯಾವುದೇ ಚಿಕಿತ್ಸೆಯಿಲ್ಲದೆ ತಾನಾಗಿ ವಾಸಿಯಾಗುತ್ತದೆ. ಸೋಂಕು ಉಲ್ಬಣಿಸಿದರೆ, ಎರಡನೇ ಹಂತಕ್ಕೆ ಹೋದರೆ, ರಕ್ತದಲ್ಲಿ ಆಮ್ಲಜನಕದ ಪ್ರಮಾಣವು 95%ಕ್ಕಿಂತ ಕೆಳಗಿಳಿದರೆ, ಅಂಥವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಇದು ವಿಳಂಬವಾಗುವುದರಿಂದಲೇ ಅನೇಕ ಮಂದಿಯಲ್ಲಿ ಚಿಕಿತ್ಸೆಯು ಕಷ್ಟಕರವಾಗಿ ಸಾವುಂಟಾಗಿದೆಯೆಂದು ಹಲವು ವರದಿಗಳಲ್ಲಿ ಹೇಳಲಾಗಿದೆ. ಅವರಿಗೆ ಅಗತ್ಯವಿದ್ದ ಪರೀಕ್ಷೆಗಳನ್ನು ಮಾಡಿ, ಆಮ್ಲಜನಕವನ್ನು ಹೆಚ್ಚುವರಿಯಾಗಿ ನೀಡಬೇಕಾಗಬಹುದು, ಅಥವಾ ಸ್ಥಿತಿಯು ಗಂಭೀರವಾಗಿದ್ದರೆ, ಉಸಿರಾಟಕ್ಕೆ ನೆರವು ನೀಡಬೇಕಾಗಬಹುದು. ಗಂಭೀರ ಸಮಸ್ಯೆಗಳಾಗಿ ಆಮ್ಲಜನಕ ಅಥವಾ ಉಸಿರಾಟದ ನೆರವಿನ ಅಗತ್ಯವುಳ್ಳವರಿಗಷ್ಟೇ ಸ್ಟೀರಾಯ್ಡ್ ಔಷಧಗಳನ್ನು ನೀಡಬೇಕಾಗಬಹುದು; ಆದರೆ ಇವನ್ನು ವಿವೇಚನೆಯಿಲ್ಲದೆ ಬಳಸುವುದರಿಂದ ತೊಂದರೆಯಾಗಬಹುದು, ಮತ್ತು ರಕ್ತದಲ್ಲಿ ಗ್ಲೂಕೋಸ್ ಪ್ರಮಾಣದಲ್ಲಿ ಏರಿಕೆಯಾಗಿ ಸಮಸ್ಯೆಗಳಾಗಬಹುದು. ಕೊರೋನ ಸೋಂಕು ನಿಧಾನವಾಗಿ ಒಂದೆರಡು ವಾರಗಳಲ್ಲಿ ಉಲ್ಬಣಗೊಂಡು, ನಿಧಾನವಾಗಿಯೇ ವಾಸಿಯಾಗುವ ರೋಗವಾಗಿರುವುದರಿಂದ ಎಲ್ಲರೂ ತಾಳ್ಮೆಯಿಂದ ಸಹಕರಿಸುವುದು ಅತಿ ಮುಖ್ಯವಾಗಿದೆ.
ಕೊರೋನ ಸೋಂಕಿಗೆ ಆಯುಷ್ ಚಿಕಿತ್ಸೆಯಿಂದ ಪ್ರಯೋಜನವಿದೆಯೇ?
ಇಲ್ಲ. ವಿಶ್ವದಾದ್ಯಂತ ಕೊರೋನದಿಂದ ಪೀಡಿತರಾದ 4 ಕೋಟಿಗೂ ಹೆಚ್ಚು ಮಂದಿಯಲ್ಲಿ ಬಹುತೇಕರು ಯಾವ ಆಯುಷ್ ಬಳಸದೆಯೇ ಗುಣಮುಖರಾಗಿದ್ದಾರೆ; ಕೊರೋನ ವೈರಸ್ ಬಗ್ಗೆ ನಡೆದಿರುವ ಅತ್ಯಾಧುನಿಕ ಸಂಶೋಧನೆಗಳಲ್ಲಿ, ಲಸಿಕೆಗಳ ಅಭಿವೃದ್ಧಿಯಲ್ಲಿ, ಕೊರೋನ ಸೋಂಕಿನಿಂದ ತೀವ್ರ ಸಮಸ್ಯೆಗೀಡಾದವರ ಆರೈಕೆಯಲ್ಲಿ, ಅವರ ಜೀವವುಳಿಸುವ ಕಷ್ಟಕರ ಪ್ರಯತ್ನಗಳಲ್ಲಿ ಆಯುಷ್ ಪಾತ್ರವು ಏನೇನೂ ಇಲ್ಲ. ಆಯುಷ್ ಪದ್ಧತಿಗಳಲ್ಲಿ ವೈರಸ್ ಎಂಬುದೇ ಇಲ್ಲ, ಕೊರೋನ ವೈರಸ್ ಅನ್ನು ಮಣಿಸುವಲ್ಲಿ ರೋಗರಕ್ಷಣಾ ವ್ಯವಸ್ಥೆಯ ಅತಿ ಸಂಕೀರ್ಣ ಕಾರ್ಯಗಳ ಬಗ್ಗೆ ಆಧುನಿಕ ವಿಜ್ಞಾನದಲ್ಲಿರುವ ಅರಿವು ಆಯುಷ್ ಪದ್ಧತಿಗಳಲ್ಲಿ ಇಲ್ಲ, ಅಂತಹ ಪರಿಕಲ್ಪನೆಯೂ ಅಲ್ಲಿಲ್ಲ. ಇದೇ ಕಾರಣಕ್ಕೆ, ಆಯುಷ್ ಪದ್ಧತಿಗಳವರು ಹೇಳುವಂತಹ ರೋಗರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದು, ಉತ್ತೇಜಿಸುವುದು ಎಂಬೆಲ್ಲ ಪದಗಳು ವೈಜ್ಞಾನಿಕವಾಗಿ ಯಾವ ಅರ್ಥವನ್ನೂ ಹೊಂದಿಲ್ಲ, ಹಾಗೆ ಮಾಡುವುದಕ್ಕೆ ಸಾಧ್ಯವೂ ಇಲ್ಲ, ಮಾಡಿದರೆ ಕೊರೋನ ಸೋಂಕಿನೆದುರು ಯಾವ ಪ್ರಯೋಜನವೂ ಇಲ್ಲ.
ಕೊರೋನ ಚಿಕಿತ್ಸೆಗೆಂದು ಆಯುಷ್ ಪದ್ಧತಿಯ ಹೆಸರಲ್ಲಿ ಕಷಾಯ, ಕ್ವಾಥ, ಗುಳಿಗೆ, ಅರಸಿನ ಹಾಲು, ಉಪ್ಪಿನಕಾಯಿ, ಬಿಸಿನೀರು, ನೀರಿನ ಆವಿ ಇತ್ಯಾದಿಗಳನ್ನು ಬಳಸಲು ಹೇಳಲಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡ ಇವಕ್ಕೆ ಉತ್ತೇಜನ ನೀಡುತ್ತಲೇ ಬಂದಿವೆ. ಆದರೆ ಇವಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎನ್ನುವುದನ್ನು ಕೇಂದ್ರ ಸರಕಾರವೇ ಒಪ್ಪಿಕೊಂಡಿದೆ. ಅನೇಕ ಸಚಿವರೂ, ಆಯುಷ್ ವ್ಯವಸ್ಥೆಯನ್ನು ಹೊಗಳುವವರೂ ತಮಗೆ ಕೊರೋನ ಬಾಧಿಸಿದಾಗ ಅತ್ಯಾಧುನಿಕವಾದ ವೈದ್ಯವಿಜ್ಞಾನದ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆಯೇ ಹೊರತು ಯಾವುದೇ ಆಯುಷ್ ಆಸ್ಪತ್ರೆಗಳಲ್ಲಲ್ಲ.
ಈ ಅನ್ಯ ಪದ್ಧತಿಗಳ ಕ್ರಮಗಳನ್ನು ಆಧಾರರಹಿತವಾಗಿ ಜನರ ಮೇಲೆ ಹೇರುತ್ತಿರುವುದು ಅವೈಜ್ಞಾನಿಕವಷ್ಟೇ ಅಲ್ಲ, ಅಪಾಯಕಾರಿಯೂ ಆಗಿದೆ. ಗಿಡಮೂಲಿಕೆಗಳ ಉತ್ಪನ್ನಗಳು ಶ್ವಾಸಾಂಗ, ಪಚನಾಂಗ ಮತ್ತು ಚರ್ಮಗಳ ಮೇಲೆ ಅನೇಕ ಅಡ್ಡ ಪರಿಣಾಮಗಳನ್ನುಂಟು ಮಾಡುವ ಸಾಧ್ಯತೆಗಳಿವೆ ಮತ್ತು ರೋಗರಕ್ಷಣಾ ವ್ಯವಸ್ಥೆಯ ಮೇಲೆ ಪ್ರತಿಕೂಲವಾದ ಪರಿಣಾಮಗಳನ್ನುಂಟು ಮಾಡುವ ಸಾಧ್ಯತೆಗಳೂ ಇವೆ. ಈಗಾಗಲೇ ಹಲವರಲ್ಲಿ ಇಂಥ ಅಡ್ಡ ಪರಿಣಾಮಗಳಾಗಿರುವ ವರದಿಗಳಾಗುತ್ತಲೇ ಇವೆ. ಇನ್ನೊಂದೆಡೆ ಸೋಂಕು ರೋಗಗಳ ಸುಳಿವೇ ಇಲ್ಲದ ಆಯುಷ್ ಪದ್ಧತಿಗಳವರು ಕೊರೋನ ಸೋಂಕಿನ ಬಗ್ಗೆ, ಅದರ ಚಿಕಿತ್ಸೆಯ ಬಗ್ಗೆ, ರೋಗ ರಕ್ಷಣಾ ವ್ಯವಸ್ಥೆಯನ್ನು ‘ಗಟ್ಟಿಗೊಳಿಸುವ’ ಬಗ್ಗೆ ಓತಪ್ರೋತವಾಗಿ ಉಪದೇಶಗಳನ್ನು ನೀಡುತ್ತಿರುವುದು ಮತ್ತು ಯಾವುದೇ ಆಧಾರಗಳಿಲ್ಲದ, ನಿರುಪಯುಕ್ತವಾದ ಉತ್ಪನ್ನಗಳನ್ನು ಮುಂದೊತ್ತುತ್ತಿರುವುದು ಅನೇಕ ಗೊಂದಲಗಳಿಗೂ, ಅನಗತ್ಯ ವೆಚ್ಚಗಳಿಗೂ ಕಾರಣವಾಗುತ್ತಿದೆ.
ಮದ್ಯಪಾನವು ಕೊರೋನ ಸೋಂಕನ್ನು ನಿಯಂತ್ರಿಸುತ್ತದೆಯೇ?
ಇಲ್ಲ. ಮದ್ಯಪಾನವು ಕೊರೋನ ಸೋಂಕನ್ನು ನಿಯಂತ್ರಿಸುವುದಿಲ್ಲ, ಬದಲಿಗೆ ಹಾನಿಯನ್ನೇ ಮಾಡಬಹುದು. ಆಯುಷ್ ಕಷಾಯ, ಉಪ್ಪಿನಕಾಯಿಗಳಿಂದ ಕೊರೋನ ಸಾಯುತ್ತದೆ ಎಂದಂತೆಯೇ ಮದ್ಯಪಾನದಿಂದಲೂ ಕೊರೋನವನ್ನು ಕೊಲ್ಲಬಹುದು ಎಂದು ಭ್ರಮಿಸುವವರಿದ್ದಾರೆ. ಎಲ್ಲಾ ಮದ್ಯಪೇಯಗಳೂ ಹಣ್ಣುಗಳು ಮತ್ತು ಧಾನ್ಯಗಳಿಂದಲೇ ಉತ್ಪಾದಿಸಲ್ಪಡುತ್ತವೆ ಮತ್ತು ಇವೆಲ್ಲವೂ ನಮ್ಮ ಉಪಾಪಚಯದಲ್ಲಿ ಸಮಸ್ಯೆಗಳನ್ನುಂಟು ಮಾಡುತ್ತವೆ, ರೋಗರಕ್ಷಣಾ ವ್ಯವಸ್ಥೆಯನ್ನು ಅಪನಿಯಂತ್ರಿತಗೊಳಿಸುತ್ತವೆ. ಆದ್ದರಿಂದ ಕೊರೋನ ಸೋಂಕಿನ ಸಮಸ್ಯೆಗಳನ್ನು ದೂರವಿಡಬೇಕಾದರೆ ಮದ್ಯಪಾನವನ್ನು ದೂರವಿಡಲೇಬೇಕು.
ಮಾರ್ಜಕಗಳನ್ನು ಅಥವಾ ಮದ್ಯಸಾರವುಳ್ಳ (60% ಹೆಚ್ಚು) ಸಾನಿಟೈಸರ್ ಗಳನ್ನು ಕೈಗಳಿಗೆ ಹಾಕಿ ತಿಕ್ಕಿದಾಗ ಕೈಗಳಲ್ಲಿರಬಹುದಾದ ವೈರಸ್ ಕಣಗಳು ನಾಶವಾಗುತ್ತವೆ ಎನ್ನುವುದು ನಿಜವಾದರೂ, ಮದ್ಯಸಾರವುಳ್ಳ ಪೇಯಗಳನ್ನು ದೇಹದ ಒಳಕ್ಕೆ ಸೇವಿಸುವುದರಿಂದ ವೈರಸ್ ನಾಶವಾಗುವುದಿಲ್ಲ, ಬದಲಿಗೆ ಸೇವಿಸಿದವರ ದೇಹಕ್ಕೆ ಸಮಸ್ಯೆಯಾಗುತ್ತದೆ.
ಕೊರೋನ ಲಸಿಕೆಗಳು ಯಾವಾಗ ಬರಬಹುದು?
ಕೊರೋನ ಸೋಂಕಿಗಿದಿರಾಗಿ 300ಕ್ಕೂ ಹೆಚ್ಚು ಲಸಿಕೆಗಳು ಅಭಿವೃದ್ಧಿಯ ಹಂತದಲ್ಲಿದ್ದು, ಸುಮಾರು 50ರಷ್ಟು ಲಸಿಕೆಗಳು ಮುಂದುವರಿದ ಹಂತಗಳಲ್ಲಿವೆ, ಅವುಗಳಲ್ಲಿ 6 ಲಸಿಕೆಗಳ ಪ್ರಾಯೋಗಿಕ ಬಳಕೆಯನ್ನು ಆರಂಭಿಸಲಾಗಿದೆ. ಮೂರ್ನಾಲ್ಕು ಲಸಿಕೆಗಳ ಪ್ರಯೋಗಾರ್ಥ ಪರೀಕ್ಷೆಗಳಿಗೆ ಭಾರತವು ಅಸ್ತು ಎಂದಿದ್ದರೂ ಅವೆಲ್ಲವೂ ತೆವಳುತ್ತಲೇ ಇವೆ. ಹಾಗಿರುವಾಗ, ಹೊಸ ಕೊರೋನ ಸೋಂಕಿನೆದುರು ಲಸಿಕೆಯು ಯಾವಾಗ ಲಭ್ಯವಾಗಬಹುದೆಂದು ಹೇಳುವುದು ಕಷ್ಟವೇ. ಭಾರತದಲ್ಲಿ ಲಸಿಕೆಯನ್ನು ಉತ್ಪಾದಿಸುವುದಕ್ಕೆ ಒಪ್ಪಂದ ಮಾಡಿಕೊಂಡಿರುವ ಕಂಪೆನಿಯನುಸಾರ ಮುಂದಿನ ಏಪ್ರಿಲ್ ಬಳಿಕವೇ ಅದು ಲಭ್ಯವಾಗಬಹುದು.
ಹಾಗೊಮ್ಮೆ ಲಭ್ಯವಾದರೂ, ಒಂದು ಸಲ ಕೊಟ್ಟರೆ ಸಾಕೇ ಅಥವಾ ಹೆಚ್ಚು ಸಲ ಕೊಡಬೇಕಾಗಬಹುದೇ, ಯಾರಿಗೆ, ಯಾವಾಗ, ಹೇಗೆ ಕೊಡುವುದು, ಅದನ್ನು ಸಂರಕ್ಷಿಸಿ ಸಾಗಿಸುವುದಕ್ಕೆ ಬೇಕಾದ ಶೀತಲ ಸರಣಿಯ ವ್ಯವಸ್ಥೆಯನ್ನು ಹೇಗೆ ರೂಪಿಸುವುದು, ಇವೆಲ್ಲವುಗಳ ವೆಚ್ಚವನ್ನು ಯಾರು ಭರಿಸುವುದು ಎಂಬ ಪ್ರಶ್ನೆಗಳೆಲ್ಲ ಉತ್ತರಗಳನ್ನು ಕಾಯುತ್ತಿವೆ. ಭಾರತದಲ್ಲಿ ಈ ಲಸಿಕೆಯನ್ನು ಒದಗಿಸುವುದಿದ್ದರೆ ಕನಿಷ್ಠ 40-60 ಸಾವಿರ ಕೋಟಿ ರೂಪಾಯಿಗಳ ಅಗತ್ಯವಿದೆಯೆಂದು ಅಂದಾಜಿಸಲಾಗಿದ್ದು, ಈಗಾಗಲೇ ಹಣಕಾಸಿನ ಅತಿ ಗಂಭೀರವಾದ ಸಂಕಷ್ಟಕ್ಕೆ ಸಿಲುಕಿರುವ ಸರಕಾರವು ಇದನ್ನು ಭರಿಸಲು ಸಾಧ್ಯವೇ ಎನ್ನುವುದೇ ಎಲ್ಲಕ್ಕಿಂತ ದೊಡ್ಡ ಪ್ರಶ್ನೆಯಾಗಿದೆ. ಜನವರಿಯಿಂದ ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆಯ ಮೇರೆಗೆ ಲಸಿಕೆಯನ್ನು ನೀಡುವ ನೆಪದಲ್ಲಿ ಸರಕಾರವು ಅವರ ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿದೆ; ಲಸಿಕೆಯ ವಿತರಣೆಗೆ ಗಣಕೀಕೃತ ಜಾಲವನ್ನು ಬಳಸಲಾಗುವುದು ಎಂದೂ ಹೇಳಲಾಗಿದೆ. ಆದರೆ ಆರೋಗ್ಯ ಸೇತು ಆಪ್ ನ ಗತಿಯನ್ನು ನೋಡಿದಾಗ ಇವುಗಳ ಬಗ್ಗೆಯೂ ಪ್ರಶ್ನೆಗಳೇಳುತ್ತವೆ.
ಆರೋಗ್ಯ ಕಾರ್ಯಕರ್ತರಲ್ಲಿ ಹಲವರು ಈಗಾಗಲೇ ಸೋಂಕಿತರಾಗಿರುವುದರಿಂದ ಅಂಥವರಿಗೂ ಲಸಿಕೆಯನ್ನು ನೀಡಬೇಕೇ, ಇಲ್ಲವೆಂದಾದರೆ ಅಂಥವರನ್ನು ಗುರುತಿಸುವ ಬಗೆ ಹೇಗೆ, ಆರೋಗ್ಯ ಕಾರ್ಯಕರ್ತರಲ್ಲೂ ಹಿರಿವಯಸ್ಕರು ಮತ್ತು ಅನ್ಯ ಸಮಸ್ಯೆಗಳಿದ್ದವರಿಗೆ ಆದ್ಯತೆ ನೀಡಲಾಗುವುದೇ, ಹಾಗಿದ್ದರೆ ಅದಕ್ಕೆ ಮಾನದಂಡಗಳು ಮತ್ತು ಪ್ರಕ್ರಿಯೆಗಳೇನು, ಮುಂದಕ್ಕೆ ಜನಸಾಮಾನ್ಯರಿಗೆ ಲಸಿಕೆ ನೀಡತೊಡಗುವಾಗಲೂ ಈ ಪ್ರಶ್ನೆಗಳನ್ನು ನಿಭಾಯಿಸುವುದು ಹೇಗೆ ಎಂಬುದಕ್ಕೆಲ್ಲ ಯಾವ ಉತ್ತರಗಳೂ ಲಭ್ಯವಿಲ್ಲ.
ಇನ್ನೆರಡು ಮೂರು ತಿಂಗಳುಗಳಲ್ಲಿ ಕೊರೋನ ಸೋಂಕು ಎಲ್ಲೆಡೆ ಹರಡಿ ತಾನಾಗಿ ವಿರಳವಾಗುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಆ ಬಳಿಕವೇ ಬರಲಿರುವ ಕೊರೋನ ಲಸಿಕೆಯುಂದ ಅದೆಷ್ಟು ಪ್ರಯೋಜನವಾಗಬಹುದೆನ್ನುವುದು ಯಕ್ಷ ಪ್ರಶ್ನೆಯೇ ಆಗಿದೆ.

Be the first to comment

Leave a Reply

Your email address will not be published.


*