ಕೊರೋನ ಸಂಕಷ್ಟವೂ, ವೈದ್ಯರ ಭಕ್ತಿಯೂ

ಕೊರೋನ ಸಂಕಷ್ಟವೂ, ವೈದ್ಯರ ಭಕ್ತಿಯೂ
(ತುಸು ಉದ್ದವೇ ಇದೆ. ಆಸಕ್ತರು ಸ್ಕ್ರೀನ್ ಶಾಟ್ ಗಳನ್ನೂ ಓದಬಹುದು. ಕಳೆದ ವರ್ಷ ಮಾರ್ಚ್ 22-25ರ ನಡುವೆ ನಮ್ಮ ತಜ್ಞ ವೈದ್ಯರ ಬಳಗದಲ್ಲಿ ನಾನು ಬರೆದದ್ದೇನು, ಅದಕ್ಕೆ ಕೆಲವರು ಸ್ಪಂದಿಸಿದ ರೀತಿ ಹೇಗಿತ್ತು ಎಂದು ನೋಡಬಹುದು. ಬಳಗದ ಪೂರ್ಣ ಹೆಸರು, ವೈದ್ಯರ ಹೆಸರನ್ನು ಮರೆಮಾಚಿದ್ದೇನೆ, ಅವರ ಮಾನ ಉಳಿಯಬೇಡವೇ?!)
ಕೊರೋನ ಹೊರಹಾಕಿರುವ ಸತ್ಯಗಳು ಹಲವಿವೆ. ನಮ್ಮ ಸರಕಾರದ ವೈಫಲ್ಯಗಳನ್ನು, ಆರೋಗ್ಯ ವ್ಯವಸ್ಥೆಗಳ ಇತಿಮಿತಿಗಳನ್ನು ಅದು ತೋರಿಸಿಕೊಟ್ಟಿದೆ. ಜೊತೆಗೆ, ಸರಕಾರ ಮಾಡಿದ್ದೆಲ್ಲವೂ ಸರಿ, ಅದನ್ನು ಪ್ರಶ್ನಿಸಲೇಬಾರದು ಎಂದು ಹಾರಿ ಬೀಳುವವರು ದೇಶದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ದಮನಿಸುವುದಕ್ಕೆ ಕಾರಣರಾಗಿರುವುದು ನಿಚ್ಚಳವಾಗಿ ಕಾಣುವಂತಾಗಿದೆ.
ನಮ್ಮ ಜಿಲ್ಲೆಯ ತಜ್ಞರ ವೈದ್ಯರ ವಾಟ್ಸಾಪ್ ಬಳಗದಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಾದ ವೃತ್ತಾಂತ ಇದು. ಸಿಎಎ ದಿನಗಳಲ್ಲಿ (ಡಿಸೆಂಬರ್ 2019) ಚರ್ಚೆ ಕಾವೇರಿದಾಗ ಅಡ್ಮಿನ್ ಮಾತ್ರವೇ ಪೋಸ್ಟ್ ಮಾಡುವಂತೆ ನಿರ್ಬಂಧಿಸಿದ್ದ ಬಳಗವನ್ನು ಕೊರೋನ ನೆಪದಲ್ಲಿ ಮಾರ್ಚ್ 22, 2020ರಂದು ಮುಕ್ತಗೊಳಿಸಲಾಗಿತ್ತು. ಕೂಡಲೇ ಜನತಾ ಕರ್ಫ್ಯೂ ಬೆಂಬಲಿಸಿ, ಚಪ್ಪಾಳೆ, ಜಾಗಟೆಗಳನ್ನು ಹಾಡಿ ಹೊಗಳುವ ಪೋಸ್ಟ್‌ಗಳು ಬೀಳತೊಡಗಿದ್ದವು.
ನಾನು ಮಾರ್ಚ್ 22ರ ಜನತಾ ಕರ್ಫ್ಯೂ ಹಾಗೂ ಚಪ್ಪಾಳೆ-ಜಾಗಟೆಗಳ ಬಗ್ಗೆಯೂ, ಬಳಿಕ ಮಾರ್ಚ್ 24ರಂದು ಘೋಷಿಸಿದ 21 ದಿನಗಳ ಲಾಕ್ ಡೌನ್ ಬಗ್ಗೆಯೂ ನನ್ನ ಅನಿಸಿಕೆಗಳನ್ನು ಬರೆದಿದ್ದೆ.
ಕೊರೋನ ನಿಭಾಯಿಸುವಲ್ಲಿ ಅದಾಗಲೇ ಲಭ್ಯವಿದ್ದ ಅಂಕಿ-ಅಂಶಗಳನ್ನು ಸರಿಯಾಗಿ ಪರಿಗಣಿಸುತ್ತಿಲ್ಲ ಎಂದು ಸ್ಟಾನ್‌ಫೋರ್ಡ್ ವಿವಿಯ ಪ್ರೊ. ಜಾನ್ ಇಯೋನಿಡೀಸ್ ಹೇಳಿದ್ದುದನ್ನು ಉಲ್ಲೇಖಿಸಿ, ರಾಜ್ಯದ ಐಎಂಎ ಎಲ್ಲಾ ವೈದ್ಯರ ಕ್ಲಿನಿಕ್‌ಗಳನ್ನು ಮುಚ್ಚಬೇಕೆಂದು ಬರೆದಿದ್ದುದನ್ನು ವಿರೋಧಿಸಿ, ಕೇಂದ್ರದಿಂದ ರಾಜ್ಯದವರೆಗೆ ಎಲ್ಲ ಸರ್ಕಾರಗಳು, ಎಲ್ಲ ನಾಯಕತ್ವ, ಎಲ್ಲ ವೈದ್ಯಕೀಯ ಸಂಘಟನೆಗಳು ತಿಳುವಳಿಕೆಯಿಲ್ಲದವರಂತೆ ವರ್ತಿಸುತ್ತಿರುವುದು ಕೊರೋನಕ್ಕಿಂತಲೂ ದೊಡ್ಡ ದುರಂತವಾಗಿದೆ ಎಂದು ಮಾರ್ಚ್ 22ರಂದು ಬರೆದಿದ್ದೆ.
ಅದೇ ದಿನ ಸಂಜೆ 5 ಗಂಟೆಗೆ ಎಲ್ಲರಿಂದಲೂ ವೈದ್ಯರಿಗೆ ಚಪ್ಪಾಳೆ ತಟ್ಟಿಸಿದ ಮರು ನಿಮಿಷದಲ್ಲೇ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿ ರಾಷ್ಟ್ರೀಯ ಐಎಂಎ ಹೇಳಿಕೆಯನ್ನು ಹೊರಡಿಸಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ, ಚಪ್ಪಾಳೆ ತಟ್ಟಿಸಿದ್ದೇ ಬಂತು, ನಮ್ಮ ಹಳೆಯ ತೆರಿಗೆ ಬಾಕಿ ಸಂದಾಯ ಮಾಡಲಿ, ಆಯುಷ್ಮಾನ್ ಭಾರತ್ ಬಾಕಿಯನ್ನು ಕೊಡಲಿ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಲಿ, ಕೋವಿಡ್ ಆರೈಕೆಗೆ ವಿಶೇಷ ಅನುದಾನ ನೀಡಲಿ; ಇಲ್ಲವಾದರೆ ನೋಟು ರದ್ದತಿಯಾದಾಗ ಬ್ಯಾಂಕ್ ಅಧಿಕಾರಿಗಳನ್ನು ಗಡಿ ಕಾಯುವ ಯೋಧರಿಗೆ ಹೋಲಿಸಿ ಹೂಗುಚ್ಛ, ನೀರು ಕೊಟ್ಟು, ಅದು ಸಂಪೂರ್ಣ ವಿಫಲವಾದಾಗ ಎಲ್ಲ ಹೊಣೆಯನ್ನೂ ಅದೇ ಬ್ಯಾಂಕ್ ಅಧಿಕಾರಿಗಳ ಮೇಲೆಯೇ ಹೊರಿಸಿ ದೇಶದ್ರೋಹಿಗಳೆಂದು ದೂಷಿಸಿ ಮತ್ತೆ ಚುನಾವಣೆಯಲ್ಲಿ ಗೆದ್ದಂತೆ ನಮ್ಮ ಪಾಡು ಕೂಡ ಆಗಲಿದೆ, ಈಗ ವೈದ್ಯರಿಗೆ ತಟ್ಟೆ ಬೊಟ್ಟುವ ಸರದಿ, ಕೆಲವಾರಗಳವರೆಗೆ ಕಾದು ನೋಡಿ ಎಂದು ಬರೆದಿದ್ದೆ.
ನಮ್ಮ ರಾಜ್ಯದಲ್ಲಿ, ನಮ್ಮ ಊರಿನಲ್ಲಿ ಕೊರೋನ ನಿಯಂತ್ರಿಸುವುದು ಹೇಗೆನ್ನುವ ಬಗ್ಗೆ ಈ ಬಳಗದಲ್ಲಿ ಚರ್ಚಿಸಿ ಆಡಳಿತದ ಜೊತೆ ಕೆಲಸ ಮಾಡಿ, ಆಸ್ಪತ್ರೆಗಳನ್ನೂ, ಅದಕ್ಕೆ ಬೇಕಾದ ಉಪಕರಣಗಳು ಮತ್ತು ತಜ್ಞರನ್ನೂ ಸಿದ್ಧಪಡಿಸಬೇಕು, ಸೋಂಕಿನ ಹರಡುವಿಕೆಯನ್ನು ತಡೆಯುವುದು ಸುಲಭವಲ್ಲ, ಅದಕ್ಕಿಂತ ಹೆಚ್ಚಾಗಿ ಅದರಿಂದ ಸಮಸ್ಯೆಗೀಡಾಗಬಲ್ಲ ಹಿರಿವಯಸ್ಕರು, ಅನ್ಯ ರೋಗಗಳುಳ್ಳವರು ಮುಂತಾದವರನ್ನು ಸುರಕ್ಷಿತವಾಗಿರಿಸುವ ಉಪಾಯಗಳನ್ನು ಮಾಡಬೇಕು ಎಂದು ಬರೆದಿದ್ದೆ. ಕ್ಲಿನಿಕ್‌ಗಳನ್ನು ಎಷ್ಟು ದಿನ ಮುಚ್ಚಲು ಸಾಧ್ಯವಿದೆ, ಎಂದಾದರೂ ನಮ್ಮೆಲ್ಲರಿಗೂ ಸೋಂಕು ತಗಲಲಿದೆ, ಒಂದು ವಾರ ಪ್ರತ್ಯೇಕವಾಗಿದ್ದು ಮತ್ತೆ ಕರ್ತವ್ಯಕ್ಕೆ ಬಂದರಾಯಿತು, ಚೀನಾದಲ್ಲಿದ್ದುದಕ್ಕಿಂತ ಇಲ್ಲೇನೂ ಭಿನ್ನವಾಗಿರಲಾರದು, ಎಲ್ಲದಕ್ಕೂ ಸಿದ್ಧರಿರೋಣ, ಹೆಚ್ಚಿನವರಲ್ಲಿ ಅದು ಸೌಮ್ಯ ಕಾಯಿಲೆಯಾಗಿರಲಿದ್ದು, ಎಲ್ಲರನ್ನೂ ಪರೀಕ್ಷೆಗಾಗಿ ಕರೆದರೆ, ಅವರಿಗಾಗಿ ವಿಶೇಷ ಕ್ಲಿನಿಕ್ ಮಾಡಿದರೆ, ಸೋಂಕು ಇನ್ನಷ್ಟು ಹರಡುವುದಕ್ಕೆ ಸಹಾಯವಾಗುವುದರಿಂದ ಎಲ್ಲರೂ ಮೊದಲಲ್ಲಿ ಮನೆಯಲ್ಲೇ ಉಳಿಯುವಂತೆ ಹೇಳಬೇಕು ಎಂದು ಎಲ್ಲಾ ವಿವರಗಳನ್ನೂ ಬರೆಯುತ್ತಲೇ ಇದ್ದೆ. ಇವು ನಾವು ಮಾಡಬೇಕಾದ ಕೆಲ್ಸಗಳೂ, ಇದರಲ್ಲಿ ರಾಜಕೀಯ ಬೆರೆಸಬೇಡಿ, ಹಾಗೆ ಮಾಡುವವರಿದ್ದರೆ ಅವರನ್ನು ಬಿಟ್ಟು ನಾವು ಬೇರೆಯೇ ಆಗಿ ಚರ್ಚಿಸೋಣ ಎಂದೂ ನೇರವಾಗಿಯೇ ಬರೆದಿದ್ದೆ.
ಆದರೆ ಸರಕಾರದ ಬೆಂಬಲಿಗರು ಇವನ್ನು ಪರಿಗಣಿಸುವುದು ಬಿಡಿ, ನೋಡುವುದಕ್ಕೂ ಸಿದ್ಧರಿರಲಿಲ್ಲ. ಕೊರೋನ ನಿಭಾಯಿಸುವುದನ್ನು ಚರ್ಚಿಸುವ ಬದಲಿಗೆ, ಮಾರ್ಚ್ 13, 2020 ರಂದು ರಾಜ್ಯದಲ್ಲಿ ಮಳಿಗೆಗಳನ್ನು ಮುಚ್ಚಲು ನಿರ್ಧರಿಸಿದ್ದು ಮೂರ್ಖತನವಾಗಿತ್ತು ಎಂದು ನಾನು ಹೇಳಿದ್ದುದನ್ನು ಒಬ್ಬ ಹಾಕಿದರೆ, ಮತ್ತೊಬ್ಬ ಆ ಬಗ್ಗೆ ಸಲ್ಲಿಸಲಾಗಿದ್ದ ದೂರಿನ ವರದಿಯನ್ನು ಹಾಕಿದ. ಅದಕ್ಕೆಲ್ಲ ಸೂಕ್ತ ಉತ್ತರ ಕೊಟ್ಟದ್ದಾಯಿತು. ಮತ್ತೊಬ್ಬ, ಕೊರೋನ ನಿಭಾಯಿಸಲು ಕೇಂದ್ರ ಸರಕಾರ ಎಲ್ಲವನ್ನೂ ಮಾಡುತ್ತಿದೆ, ಅದಕ್ಕೆ ವಿರೋಧವಾಗಿ ಹೋಗುವುದೇಕೆ, ಕೇರಳದ ಬಗ್ಗೆ ನೀವು ಮೌನವಾಗಿರುವುದೇಕೆ ಎಂದೆಲ್ಲ ಬರೆದ! ರಾಜಕೀಯ ಬೆರೆಸಬೇಡಿ ಎಂದರೂ ಅದನ್ನೇ ಮಾಡುತ್ತಿದ್ದೀರಿ, ಇದನ್ನು ಹಿಂಪಡೆಯಿರಿ, ಇಲ್ಲವಾದರೆ ಈ ಬಳಗದಲ್ಲಿದ್ದು ಸಮಯ ವ್ಯರ್ಥ ಮಾಡುವುದಕ್ಕೆ ಇಷ್ಟವಿಲ್ಲ ಎಂದು ಒಂದು ಗಂಟೆಯ ಕಾಲಾವಕಾಶ ಕೊಟ್ಟೆ, ಯಾರೂ ಏನೂ ಹೇಳಲಿಲ್ಲ, ನಾನು ಹೊರಬಂದೆ.
ಅದಾಗಿ ಕೆಲವು ದಿನಗಳಲ್ಲಿ ಬಳಗದಲ್ಲಿದ್ದ ಇನ್ನೋರ್ವ ವೈದ್ಯರು ಕರೆ ಮಾಡಿ, ‘ನೀವು ಹೇಳಿದ್ದು ಸರಿಯಿದೆ, ನಾನು ಬೇರೆಯೇ ಬಳಗವನ್ನು ಮಾಡುತ್ತೇನೆ, ನೋಡೋಣ’ ಎಂದರು, ಮಾಡಿದರು. ಐದೇ ನಿಮಿಷದಲ್ಲಿ ಇನ್ನೊಬ್ಬರು, ‘ಇದೆಲ್ಲ ಯಾಕೆ ಬೇಕು, ನಮ್ಮದೆಲ್ಲ ರೆಡಿ ಇದೆ’ ಎಂದರು, ಆ ಬಳಗ ಅಲ್ಲಿಗೇ ಸತ್ತಿತು.
ಒಂದು ವರ್ಷ ಕಳೆದಿದೆ. ಈ ಸಂಘಟನೆಯ ಸಭೆಗಳೆಲ್ಲವೂ ಜೂಮಿನಲ್ಲೇ ನಡೆದಿರಬಹುದು. ಮೊನ್ನೆ ಯಾವುದೋ ಹೋಟೆಲಲ್ಲಿ ಸಭೆ ಇದೆ ಅಂತ ಆಹ್ವಾನ ಬಂತು (ನಾನು ಅಂಥ ಸಭೆಗಳಿಗೆ ಹೋಗದೆ 25 ವರ್ಷಗಳಾದವು). ವಿಷಯ ‘ಪಿತ್ತಜನಕಾಂಗ ಮತ್ತು ಮೂತ್ರಪಿಂಡಗಳ ಕಸಿ’ ಎಂದಾಗಿತ್ತು. ಅಧ್ಯಕ್ಷರಿಗೆ ಕರೆ ಮಾಡಿ, ಸಾರ್, ಕೊರೋನ ಬಗ್ಗೆ ಚರ್ಚೆ ಆಗಿದೆಯೇ ಅಂತ ಕೇಳಿದೆ, ‘ಗೊತ್ತಿಲ್ಲ ಮಾರಾಯರೆ’ ಎಂದರು.
ಕೊರೋನ ಬಂದು ಒಂದು ವರ್ಷ ಆದರೂ ಐಎಂಎ, ಎಪಿಐ ಅಂಠ ಸಂಘಟನೆಗಳೂ ಆ ಬಗ್ಗೆ ಮಾತಾಡದೇ ಇರುವುದು ಯಾಕೆ ಎನ್ನುವುದು, ಕೊರೋನ ಚಿಕಿತ್ಸೆಗೆ ಸಾಕ್ಷ್ಯಾಧಾರಿತವಾದ, ಏಕರೂಪದ ಚಿಕಿತ್ಸಾ ಕ್ರಮ ಯಾಕೆ ಇನ್ನೂ ಸಿದ್ಧಗೊಂಡಿಲ್ಲ ಎನ್ನುವುದು, ನಮ್ಮ ರಾಜ್ಯದಲ್ಲಿ ಸಿದ್ಧಪಡಿಸಿರುವ ಚಿಕಿತ್ಸಾಕ್ರಮದಲ್ಲಿ ಅನಗತ್ಯವಾದ ಪರೀಕ್ಷೆಗಳೂ, ಔಷಧಗಳೂ ಯಾಕೆ ತುಂಬಿಕೊಂಡಿವೆ ಮತ್ತು ಅವುಗಳೇ ಯಾಕೆ ಬಳಸಲ್ಪಡುತ್ತಿವೆ ಎನ್ನುವುದು ಅರ್ಥವಾಗುವುದು ಕಷ್ಟವೇ? ಯಾವುದೇ ವೈಜ್ಞಾನಿಕ, ವೈಚಾರಿಕ ಚರ್ಚೆ ಇಂದು ಬೇಕಿಲ್ಲ, ಭಜನೆ ಮಾತ್ರ ಸಾಕು. ಮಾತಾಡಬೇಕಾದವರು ಮಾತಾಡುತ್ತಿಲ್ಲ, ಗೊತ್ತಿದ್ದು ಮಾತಾಡುವವರ ಬಗ್ಗೆ ಸಹನೆಯಿಲ್ಲ, ಗೊತ್ತಿಲ್ಲದಿದ್ದರೂ ಕಿರುಚುವವರನ್ನು ನೇವರಿಸಿ ಸಾಕಲಾಗುತ್ತಿದೆ.

Be the first to comment

Leave a Reply

Your email address will not be published.


*