ನಾಥ ಪಂಥದ ಹಠಯೋಗಿ ಶ್ರೀಶ್ರೀಶ್ರೀ ರಾಜಾ ಸಂಧ್ಯಾನಾಥ್ ಜೀ ವಿಷಾದದ ನುಡಿ
ಕನ್ನಡ ಪ್ರಭ, ಏಪ್ರಿಲ್ 24, 2016
ಯೋಗ ಎನ್ನುವುದು ಈಗ ಫ್ಯಾಷನ್ ಆಗಿದೆ, ಸಣ್ಣ ಯೋಗ ಕೇಂದ್ರಗಳಿಂದ ಹಿಡಿದು ಬಾಬಾ, ಶ್ರೀ ಶ್ರೀ ಮುಂತಾಗಿ ಯೋಗದ ವ್ಯಾಪ್ತಿ ವಿಸ್ತಾರವಾಗುತ್ತಿದೆ, ಎಲ್ಲವೂ ಸಾವಿರಾರು ಕೋಟಿ ರು.ಗಳ ಉದ್ಯಮವಾಗಿದೆ. ದೇಶ-ವಿದೇಶಗಳಲ್ಲಿ ನಾಯಿ ಕೊಡೆಗಳಂತೆ ಉದ್ಭವಿಸುತ್ತಿರುವ ಯೋಗ ಕೇಂದ್ರಗಳು ತಮ್ಮದೇ ನಿಜವಾದ ಯೋಗ ಎಂದು ಬಿಂಬಿಸುತ್ತಿವೆ. ಶಾಲೆಗಳಲ್ಲೂ ಯೋಗ ಶಿಕ್ಷಣ ಬೇಕು ಎಂದು ರಾಜಕಾರಣಿಗಳೂ ಕೂಗುತ್ತಿದ್ದಾರೆ. ಅಂತಾರಾಷ್ಟ್ರೀಯ ಯೋಗದ ದಿನದ ಹೆಸರಿನಲ್ಲಿ ಕಳೆದ ವರ್ಷ ಕೇಂದ್ರ ಸರ್ಕಾರ ದೇಶಾದ್ಯಂತ ಸಾಮೂಹಿಕ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಒಂದು ತಿಂಗಳ ಹಿಂದಷ್ಟೆ ಬೆಂಗಳೂರಿನ ಅರಮನೆ ಮೈದಾನದಲ್ಲಿಯೂ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಸಲಾಗಿತ್ತು. ಆದರೆ ಇವು ನಿಜವಾದ ಯೋಗವಲ್ಲ ಎನ್ನುವ ವಾದಗಳೂ ಕೇಳಿಬರುತ್ತಿವೆ. ಹಾಗಾದರೆ ನಿಜವಾದ ಯೋಗ ಯಾವುದು? ಯೋಗದ ಮೂಲ ಮೌಲ್ಯಗಳನ್ನು ನಿಜರೂಪದಲ್ಲಿ ಉಳಿಸಿಕೊಂಡು, ಈಗಲೂ ಕಠಿಣವಾಗಿ, ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿರುವ ನಾಥ ಪಂಥದ ಯೋಗಿಗಳಲ್ಲಿ ಒಬ್ಬರಾದ ಶ್ರೀಶ್ರೀಶ್ರೀ ರಾಜಾ ಸಂಧ್ಯಾನಾಥ್ಜೀ ಅವರೊಂದಿಗೆ ಹಿರಿಯ ವೈದ್ಯ, ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವರು ನಡೆಸಿದ ಸಂದರ್ಶನ ಇಲ್ಲಿದೆ.
ಪ್ರಶ್ನೆ: ಇಂದು ಯೋಗದ ಬಗ್ಗೆ ಬಹಳಷ್ಟು ಹೇಳಲಾಗುತ್ತಿದೆ, ಹದಿನೈದು ದಿನ ಯೋಗ ತರಬೇತಿ ಪಡೆದವನು ತಾನೊಬ್ಬ ಯೋಗ ಚಿಕಿತ್ಸಕ ಎಂದು ಹೇಳಿಕೊಳ್ಳುವಂತಹ ಸನ್ನಿವೇಶವಿದೆ. ಬೌದ್ಧ-ಜೈನ ಮುನಿಗಳಲ್ಲಿ ಪ್ರಚಲಿತವಿದ್ದು, ಪತಂಜಲಿ ಕ್ರೋಢೀಕರಿಸಿದ ಧ್ಯಾನ ಕೇಂದ್ರಿತ ಯೋಗ, ತಮ್ಮ ನಾಥ ಪಂಥದ ಯೋಗಿಗಳು ಬೆಳೆಸಿರುವ ಆಸನ ಕೇಂದ್ರಿತ ಹಠ ಯೋಗ ಹಾಗೂ ಇಂದು ಪ್ರಚುರ ಪಡಿಸಲಾಗುತ್ತಿರುವ ಯೋಗ ಇವುಗಳ ಬಗ್ಗೆ ತಮ್ಮ ಅಭಿಪ್ರಾಯವೇನು?
ಉತ್ತರ: ಯೋಗ ಬಹಳ ಪ್ರಾಚೀನವಾದುದು, ನಾಲ್ಕು ಯುಗಗಳಿಗಿಂತಲೂ ಹಿಂದಿನದು, ಗುರು ಗೋರಕ್ಷನಾಥರು ತಂದಿರುವಂಥದ್ದು. ಯೋಗ ಅಂದರೆ ಸಂಸಾರದಿಂದ ದೂರವಿರುವುದು, ಏಕಾಂತ. ಯೋಗಕ್ಕೂ ಗೃಹಸ್ಥ್ಯಕ್ಕೂ ಸಂಬಂಧವಿಲ್ಲ, ನಾವು ಎಷ್ಟು ಯೋಗದೊಳಕ್ಕೆ ಹೋಗುತ್ತೇವೆಯೋ ಅಷ್ಟೇ ಗೃಹಸ್ಥ್ಯದಿಂದ ದೂರವಾಗುತ್ತಾ ಹೋಗುತ್ತೇವೆ. ಎಲ್ಲ ಮರೆತು 6 ತಿಂಗಳಿಂದ 12 ವರ್ಷಗಳ ಕಾಲ ಊಟಗೀಟಗಳ ಪರಿವೆಯೇ ಇಲ್ಲದೆ ಯೋಗನಿರತರಾಗಿರುವುದು ಗೋರಕ್ಷನಾಥರಿಂದ ಬಂದ ಹಠ ಯೋಗ. ಇದನ್ನೇ ಸಿದ್ಧಿ, ಸಮಾಧಿ ಇತ್ಯಾದಿಯಾಗಿ ಹೇಳಲಾಗುತ್ತದೆ. ಗೃಹಸ್ಥರಾಗಿರುವವರು ಆರೋಗ್ಯ, ಬಳಲಿಕೆಯ ನಿವಾರಣೆ ಇತ್ಯಾದಿಗಳಿಗೆಂದು ಪ್ರಾಣಾಯಾಮ, ಧ್ಯಾನ ಎಂಬ ಹೆಸರಲ್ಲಿ ಮಾಡುತ್ತಿರುವುದು ಇಂದಿನ ಯೋಗ. ಒಂದೆರಡು ಗಂಟೆ ಇವನ್ನೆಲ್ಲ ಮಾಡಿದ ಬಳಿಕ ಮನಸ್ಸು ಮತ್ತೆ ಲೌಕಿಕ ವಿಚಾರಗಳತ್ತ ಹೊರಳುತ್ತದೆ.
ಪ್ರ: ಇಂದಿನ ಈ ಯೋಗವು ಪ್ರಾಚೀನ ಯೋಗಕ್ಕೆ ಅಪಮಾನವೆಂದು ನಿಮಗೆ ಅನಿಸುವುದಿಲ್ಲವೇ?
ಉ: ಖಂಡಿತ. ಪತಂಜಲಿಯ ಹೆಸರಿನ ಈ ಯೋಗ ನಿನ್ನೆ ಮೊನ್ನೆಯದು, ಹಠ ಯೋಗ ಪ್ರಾಚೀನವಾದುದು. ಈಗಿನ ಯೋಗವನ್ನು ವ್ಯಾಪಾರದ ಹಾಗೆ ಮಾಡಿದ್ದಾರೆ, ಕ್ಲಾಸುಗಳ ಥರ ಮಾಡಿದ್ದಾರೆ.
ಪ್ರ: ಈ ಹೊಸ ಯೋಗದಲ್ಲಿ ಯಮ-ನಿಯಮ ಎಲ್ಲಿವೆ, ಸತ್ಯ, ಬ್ರಹ್ಮಚರ್ಯ ಎಲ್ಲಿದೆ, ಯೋಗ ಕಲಿಸುವುದಕ್ಕೆ ಸಾವಿರಾರು ರೂಪಾಯಿ ಪಡೆಯುವಾಗ ಅಪರಿಗ್ರಹ ಎಲ್ಲಿದೆ?
ಉ: ಈಗಿನ ಕಾಲಕ್ಕೆ, ಈಗಿನವರ ಬಯಕೆಗೆ ತಕ್ಕಂತೆ ಅದನ್ನು ಕೊಂಡೊಯ್ದಿದ್ದಿದ್ದಾರೆ. ನಿಜವಾದ ಯೋಗಕ್ಕೆ ಇದು ಸರಿ ಹೊಂದದು, ಯೋಗದ ಅರ್ಥ, ಶಕ್ತಿಗಳು ಬೇರೆಯೇ ಆಗಿವೆ. ಯೋಗ ಅಂದರೆ ಸಮಾಧಿ ಮತ್ತು ಧ್ಯಾನ. ಪ್ರಾಚೀನ ಕಾಲದ ನಮ್ಮ ಯೋಗಿಗಳು ಹನ್ನೆರಡು ವರ್ಷ ಹಠ ಯೋಗದಲ್ಲಿ ನಿರತರಾಗಿ ಪರಕಾಯ ಪ್ರವೇಶ ಮಾಡುತ್ತಿದ್ದರು ಎನ್ನುತ್ತಾರೆ. ಈಗಿನ ಯೋಗ ಇದಕ್ಕೆ ಪರಕೀಯವಾದುದು. ಸಾಮಾನ್ಯರು ನಿಜವಾದ ಯೋಗವನ್ನು ಮಾಡಬೇಕಾದರೆ ಮನೆಯನ್ನು ತ್ಯಜಿಸಬೇಕು, ಮನೆಯನ್ನು ತ್ಯಜಿಸಿದರೂ ಸಾಕಾಗದು, ಇನ್ನಷ್ಟು ಸಾಧನೆ ಮಾಡಬೇಕು, ಇಲ್ಲವೆಂದಾದರೆ ಮಧ್ಯದಲ್ಲೇ ಸಿಕ್ಕಿಕೊಳ್ಳಬೇಕಾಗುತ್ತದೆ, ಅತ್ತ ಮನೆಗೂ ಇಲ್ಲ, ಇತ್ತ ಘಾಟಿಗೂ ಇಲ್ಲ – ನಾ ಘರ್ ಕಾ, ನಾ ಘಾಟ್ ಕಾ – ಎಂಬಂತಾಗುತ್ತದೆ. ಇನ್ನೂ ಮುಖ್ಯವೆಂದರೆ ನಿಜವಾದ ಯೋಗವನ್ನು ಕಲಿಸಿಕೊಡಬಲ್ಲ ಯೋಗಿಗಳು ಇಂದು ತೀರಾ ಕಡಿಮೆ ಸಂಖ್ಯೆಯಲ್ಲಿದ್ದಾರೆ. ನಮ್ಮದು ಗುರು-ಶಿಷ್ಯರ ಪರಂಪರೆಯಾಗಿದೆ. ನಿಜವಾದ ಯೋಗ ಲುಪ್ತವಾಗಿಲ್ಲ, ಈ ಗುರು-ಶಿಷ್ಯರ ಮಧ್ಯೆ ಇಂದಿಗೂ ಜೀವಂತವಾಗಿದೆ.
ಪ್ರ: ಯೋಗಾಭ್ಯಾಸವನ್ನು ಗುರುವು ತನ್ನ ಶಿಷ್ಯನಿಗಷ್ಟೇ ತಿಳಿಸಬೇಕು, ಅದು ಗುಪ್ತವಾಗಿರಬೇಕು, ಇಲ್ಲವಾದರೆ ಯೋಗಿಯ ಶಕ್ತಿಯೇ ಕಳೆದು ಹೋಗುತ್ತದೆ ಎಂದು ಹಠ ಯೋಗ ಪ್ರದೀಪಿಕೆಯಲ್ಲಿ ಹೇಳಲಾಗಿದೆ. ಹಾಗಿರುವಾಗ ಇಂದು ಟಿವಿಯಲ್ಲಿ, ಶಿಬಿರಗಳಲ್ಲಿ ಮತ್ತು ಇತರೆಡೆ ಬಹಿರಂಗವಾಗಿ ಹಲವರಿಗೆ ಯೋಗಾಭ್ಯಾಸವನ್ನು ಹೇಳಿಕೊಡುತ್ತಿರುವುದರ ಬಗ್ಗೆ ತಮ್ಮ ಅಭಿಪ್ರಾಯವೇನು?
ಉ: ನಾಥ ಸಂಪ್ರದಾಯದ ಯೋಗಿಯನ್ನು ನೀವು ಎಂದಿಗೂ ಟಿವಿಯಲ್ಲಾಗಲೀ, ಯಾವುದೇ ಶಿಬಿರಗಳಲ್ಲಾಗಲೀ ಕಾಣಲು ಸಾಧ್ಯವೇ ಇಲ್ಲ. ಅವರು ಪ್ರವಚನ ಮಾಡುವುದನ್ನಾಗಲೀ, ಧ್ಯಾನಸ್ಥರಾಗಿರುವುದನ್ನಾಗಲೀ, ಸಮಾಧಿಯಲ್ಲಿರುವುದನ್ನಾಗಲೀ ನೀವು ಕಾಣಲು ಸಾಧ್ಯವೇ ಇಲ್ಲ. ತಾನು ಸಂಜೆ ಧ್ಯಾನ ಮಾಡುತ್ತೇನೆ, ನಾಳೆ ಸಮಾಧಿ ಸ್ಥಿತಿಯಲ್ಲಿರುತ್ತೇನೆ, ನೀನು ನೋಡು ಎಂಬಿತ್ಯಾದಿಯಾಗಿ ಗುರುವು ತನ್ನ ಶಿಷ್ಯನಿಗೂ ಹೇಳುವುದಿಲ್ಲ. ಗುರು ತನಗೆ ಕಲಿಸಿದ್ದನ್ನು ಶಿಷ್ಯನು ತನ್ನಷ್ಟಕ್ಕೆ ಮುಂದುವರಿಸಿಕೊಂಡು ಹೋಗುತ್ತಾನೆ. ಗುರುವು ಶಿಷ್ಯನಲ್ಲಿ ಯೋಗ್ಯತೆಯನ್ನು ಕಂಡರೆ ಮಾತ್ರವೇ, ಅದಕ್ಕನುಗುಣವಾಗಿ ಹೇಳಿಕೊಡುತ್ತಾನೆ, ಇಲ್ಲದಿದ್ದರೆ ಇಲ್ಲ. ಇದನ್ನು ಪಡೆಯಬೇಕಾದರೆ ಬಹಳಷ್ಟನ್ನು ಕಳೆದುಕೊಳ್ಳಬೇಕಾಗುತ್ತದೆ. ಇಂತಹ ಜ್ಞಾನ ಬೇಕೆಂದರೆ ಸಿಕ್ಕೇ ಸಿಗುತ್ತದೆ, ಆದರೆ ಅದಕ್ಕೆ ಬಹಳ ಸಮಯ ಹಿಡಿಯುತ್ತದೆ, ಅದಕ್ಕಾಗಿ ಕಾಡುಗಳಲ್ಲಿ, ಕಣಿವೆಗಳಲ್ಲಿ, ಪರ್ವತಗಳಲ್ಲಿ, ಗುಹೆಗಳಲ್ಲಿ ಹಠ ಯೋಗಿಗಳನ್ನು ಹುಡುಕಬೇಕಾಗುತ್ತದೆ. ಕಾರಲ್ಲಿ, ವಿಮಾನಗಳಲ್ಲಿ ತಿರುಗುವವರಿಗೆ ಅಂತಹ ಜ್ಞಾನ ಸಿದ್ಧಿಸುವುದಿಲ್ಲ. ಇವತ್ತು ಯೋಗ ಕಲಿಸುವ ಗುರುಗಳೆನ್ನುವವರು ನಮ್ಮ ಹಳ್ಳಿಹಳ್ಳಿಗಳಲ್ಲಿ ಕಾಣ ಸಿಗುತ್ತಾರೆ, ವಿದೇಶಗಳಲ್ಲೂ ಇದ್ದಾರೆ. ಯೋಗ ಗುರು ಎಂದು ಹೇಳಿಕೊಳ್ಳುವ ಮಹಿಳೆಯರೂ ಎಲ್ಲೆಡೆ ಕಾಣಿಸುತ್ತಿದ್ದಾರೆ. ಈಗ ಆರು ತಿಂಗಳೊಳಗೆ ಯಾರು ಬೇಕಾದರೂ ಯೋಗ ಗುರುವಾಗಬಹುದು.
ಪ್ರ: ಹಠ ಯೋಗ ಪ್ರದೀಪಿಕೆ ಮುಂತಾದ ಯೋಗದ ಕೃತಿಗಳನ್ನು ನೋಡಿದಾಗ ಯೋಗಾಭ್ಯಾಸವು ಪುರುಷರಿಗೇ ಸೀಮಿತವೆಂದು ಅನಿಸುತ್ತದೆ. ಹಾಗಿರುವಾಗ ಮಹಿಳೆಯರು ಯೋಗಾಭ್ಯಾಸವನ್ನು ಮಾಡಬಹುದೇ?
ಉ: ಗೋರಕ್ಷನಾಥರು ಪಾರ್ವತಿಗಷ್ಟೇ ಯೋಗದ ಪೂರ್ಣ ಜ್ಞಾನವನ್ನು ನೀಡಿರುವುದು, ಬೇರಾವ ಸ್ತ್ರೀಗೂ ಅಂತಹ ಬೋಧೆಯಾಗಿಲ್ಲ. ಆದ್ದರಿಂದ ಸ್ತ್ರೀಯರು ಯೋಗವನ್ನು ಮಾಡುವಂತಿಲ್ಲ.
ಪ್ರ: ಇಂದು ಮಹಿಳೆಯರಿಗೆ ಮಾತ್ರವಲ್ಲ, ಗರ್ಭಿಣಿಯರಿಗೂ ಯೋಗವನ್ನು ಕಲಿಸಿಕೊಡಲಾಗುತ್ತಿದೆಯಲ್ಲಾ?
ಉ: ಅವರಿಗೆ ಅಗತ್ಯವಾದ ವ್ಯಾಯಾಮವನ್ನು ಮಾಡಬಹುದು, ಆದರೆ ಅದನ್ನು ಯೋಗ ಎಂದು ಹೇಳುವುದು ಸರಿಯಲ್ಲ.
ಪ್ರ: ಇಂದು ಮಕ್ಕಳಿಗೂ ಯೋಗವನ್ನು ಕಲಿಸಲಾಗುತ್ತಿದೆ, ಮಕ್ಕಳು ಯೋಗಾಭ್ಯಾಸ ಮಾಡಬಹುದೇ?
ಉ: ಮಕ್ಕಳಿಗೆ ಮನಸ್ಸಿಲ್ಲದೆ ಯೋಗಾಭ್ಯಾಸ ಮಾಡಬಾರದು, ಹಾಗೆ ಮಾಡಿದರೆ ಪ್ರಯೋಜನಕ್ಕೆ ಬದಲಾಗಿ ಮಾನಸಿಕ ಕ್ಲೇಷಗಳಿಗೆ ಕಾರಣವಾಗಬಹುದು.
ಪ್ರ: ಹಠ ಯೋಗ ಪ್ರದೀಪಿಕೆಯಲ್ಲಿ ಕೇವಲ 84 ಆಸನಗಳ ಬಗ್ಗೆ ಹೇಳಲಾಗಿದೆ, 15ರಷ್ಟು ಆಸನಗಳನ್ನು ವಿವರಿಸಲಾಗಿದೆ. ಇಂದು ಎಲ್ಲೆಲ್ಲಿಂದಲೋ ಸೇರಿಸಿದ ಸಾವಿರಾರು ಭಂಗಿಗಳನ್ನು ಯೋಗಾಸನಗಳೆಂದು ಬಿಂಬಿಸಲಾಗುತ್ತಿದೆ ಅಲ್ಲವೇ?
ಉ: ಹೌದು. ರಾಮದೇವ್ ಅವರು ನಾಥ ಸಂಪ್ರದಾಯದ ಕೆಲವು ಗುರುಗಳಿಂದ ಕೆಲವೊಂದು ವಿಚಾರಗಳನ್ನು ಪಡೆದು, ಅದಕ್ಕೆ ಏನೇನನ್ನೋ ಸೇರಿಸಿ ಅದುವೇ ಯೋಗ ಎಂಬಂತೆ ಪ್ರಚಾರ ಮಾಡುತ್ತಿದ್ದಾರೆ. ಅವರು ಮಾಡಿಸುತ್ತಿರುವ ಕಪಾಲಭಾತಿಯೂ ಸರಿಯಾದುದಲ್ಲ.
ಪ್ರ: ಸೂರ್ಯ ನಮಸ್ಕಾರದ ಬಗ್ಗೆ ಹಠ ಯೋಗ ಪ್ರದೀಪಿಕೆಯಲ್ಲಿ ಹೇಳಿಲ್ಲ, ಅದು ತೀರಾ ಇತ್ತೀಚೆಗೆ ಮೈಸೂರಿನಲ್ಲಿ ಆರಂಭವಾಯಿತು ಎನ್ನಲಾಗುತ್ತಿದೆ.
ಉ: ಹೌದು, ಅದು ಹಠ ಯೋಗವಲ್ಲ
ಪ್ರ: ಇದನ್ನು ನಾಥ ಪಂಥದವರು ಏಕೆ ವಿರೋಧಿಸುತ್ತಿಲ್ಲ? ಸತ್ಯವೇನೆನ್ನುವುದು ಜನಸಾಮಾನ್ಯರಿಗೆ ತಿಳಿಯಬೇಡವೇ?
ಉ: ನಾವು-ನೀವು ಅದನ್ನು ಹೇಳಬೇಕಾದ ಅಗತ್ಯವಿಲ್ಲ. ಸತ್ಯವು ತನ್ನಿಂತಾನಾಗಿ ಎಲ್ಲರಿಗೆ ತಿಳಿಯಲಿದೆ. ನಾವು ಇತರರ ವ್ಯಾಪಾರಕ್ಕೆ, ಹೊಟ್ಟೆಪಾಡಿಗೆ ಅಡ್ಡಿಯಾಗುವುದಿಲ್ಲ. ಈ ವ್ಯಾಪಾರವು ಈಗಾಗಲೇ ಹಲವು ತುಂಡುಗಳಾಗಿ ಒಡೆದಿದೆ, ಇನ್ನೂ ಒಡೆಯಬಹುದು. ನಾಥ ಪಂಥದ ಗುರು-ಶಿಷ್ಯ ಪರಂಪರೆಯಲ್ಲಿ ನಮ್ಮ ಯೋಗ ಸಾಧನೆಯು ಹೀಗೇ ಅವಿಚ್ಛಿನ್ನವಾಗಿ ಮುಂದುವರಿಯುತ್ತದೆ, ಅಜರಾಮರವಾಗಿ ಉಳಿಯುತ್ತದೆ, ಅದಕ್ಕೆ ಯಾವ ಆತಂಕಗಳೂ ಇಲ್ಲ.
ನೀವು ಇನ್ನೊಂದು ವಿಷಯವನ್ನೂ ಗಮನಿಸಿರಬಹುದು. ನಾಥ ಪಂಥದ ಯೋಗಿಗಳು ಮನಸ್ಸನ್ನು ಬಹಳ ಸ್ಥಿಮಿತದಲ್ಲಿ ಇಟ್ಟಿರುತ್ತಾರೆ. ಆದರೆ ಹೊಸ ಬಗೆಯ ಧ್ಯಾನ, ಯೋಗವನ್ನು ಮಾಡುವ ಕೆಲವರು ಮಾನಸಿಕ ಕ್ಲೇಷಗಳಿಗೆ ಒಳಗಾಗುತ್ತಾರೆ. ಅವರಿಗೆ ಯೋಗದ ಬಗ್ಗೆ ಸರಿಯಾದ, ಪೂರ್ಣವಾದ ಜ್ಞಾನವು ಪ್ರಾಪ್ತವಾಗಿಲ್ಲದಿರುವುದೇ ಅದಕ್ಕೆ ಕಾರಣ. ಮಾತ್ರವಲ್ಲ, ಒಬ್ಬೊಬ್ಬರು ಒಂದೊಂದು ಬಗೆಯ ಸಲಹೆ ನೀಡುವುದರಿಂದ ಗೊಂದಲವುಂಟಾಗುತ್ತದೆ, ದಾರಿ ತಪ್ಪುತ್ತದೆ. ಯೋಗದ ವ್ಯವಹಾರ ಮಾಡುವವರ ಕೈಯೊಳಕ್ಕೆ ಸಿಕ್ಕಿಕೊಂಡು ಕಷ್ಟಕ್ಕೀಡಾಗಿ, ಅಲ್ಲಿಂದ ಬಿಡಿಸಿಕೊಂಡು ಇನ್ನೊಂದೆಡೆ ಹೋದಾಗ ಅಲ್ಲಿ ಬೇರೆಯದನ್ನೇ ಕೇಳಿ ಮತ್ತಷ್ಟು ಸಮಸ್ಯೆಗೆ ಸಿಲುಕುವಂತಾಗುತ್ತದೆ.
ಪ್ರ: ಹಠ ಯೋಗದಿಂದ ದೇಹವು ಬಲಿಷ್ಠವಾಗುತ್ತದೆ ಎಂದು ಪ್ರದೀಪಿಕೆಯಲ್ಲಿ ಹೇಳಲಾಗಿದೆ. ಆದರೆ ಅದಾಗಲೇ ರೋಗವುಳ್ಳವರು ಯೋಗಾಸನ ಮಾಡಬಹುದೇ?
ಉ: ಹಠ ಯೋಗದ ಪ್ರಯೋಜನಗಳು ದೊರೆಯಬೇಕಾದರೆ ಅದನ್ನು ಸಂಪೂರ್ಣವಾಗಿ ಅನುಸರಿಸಬೇಕು; ತ್ಯಾಗ, ಮಿತಾಹಾರ, ಧ್ಯಾನ ಎಲ್ಲವೂ ಇರಬೇಕು, ಯೋಗದ ಆಳಕ್ಕೆ ಇಳಿಯಬೇಕು, ಕೇವಲ ಆಸನಗಳಿಂದ ಈ ಪ್ರಯೋಜನಗಳು ದೊರೆಯುವುದಿಲ್ಲ. ನಾಥ ಪಂಥದ ಯೋಗಿಗಳು ಬಹು ಮಿತವಾಗಿ ತಿನ್ನುತ್ತಾರೆ, ಒಂದು ಸೇಬು ಸಿಕ್ಕರೆ ಅದರ ತುಂಡನ್ನಷ್ಟೇ ತಿನ್ನುತ್ತಾರೆ, ಊಟ ಸಿಕ್ಕರಾಯಿತು, ಇಲ್ಲದಿದ್ದರೆ ಇಲ್ಲ ಎಂಬಂತಿರುತ್ತಾರೆ, ಉಳಿದಂತೆ ಧ್ಯಾನ, ಸಮಾಧಿಗಳಲ್ಲೇ ಇರುತ್ತಾರೆ, ಹಾಗೂ ಗುರುವಿನ ಚರಣಗಳಲ್ಲಿದ್ದೇ ಇವನ್ನು ಪಾಲಿಸುತ್ತಾರೆ. ಅಂತಹ ಸಾಧನೆಯಿಂದ ಮಾತ್ರವೇ ಆರೋಗ್ಯ, ಶಕ್ತಿ, ಸಾಮರ್ಥ್ಯಗಳು ದೊರೆಯುತ್ತವೆ. ಹೊಟ್ಟೆ ತುಂಬ ತಿಂದು, ಲೌಕಿಕ ಸುಖಗಳನ್ನೆಲ್ಲ ಅನುಭವಿಸಿಕೊಂಡಿದ್ದರೆ ಹಠ ಯೋಗದ ಪ್ರಯೋಜನಗಳು ದೊರೆಯುವುದಾದರೂ ಹೇಗೆ? ಮನೆ, ವಹಿವಾಟು, ಹಾಲು ಸಿಗುತ್ತದಾ ಇಲ್ಲವೋ, ತುಪ್ಪ ದೊರೆಯುತ್ತದಾ ಇಲ್ಲವೋ ಎಂಬೆಲ್ಲಾ ಯೋಚನೆಗಳಿರಲೇಬಾರದು. ಈಗಿನ ಜನಸಾಮಾನ್ಯರಿಗೆ ಎಲ್ಲವೂ ಥಟ್ಟನೆ ಸಿಗಬೇಕು, ಅಂಥವರು ಬಹಳ ಸುಲಭವಾಗಿ ಮೋಸಕ್ಕೀಡಾಗುತ್ತಾರೆ.
ಪ್ರ: ನಾಥ ಪಂಥದ ಎಷ್ಟು ಯೋಗಿಗಳಿರಬಹುದು? ನಿಮ್ಮ ಮಠಗಳು ಎಲ್ಲೆಲ್ಲಾ ಇವೆ?
ಉ: ನಾಥ ಸಂಪ್ರದಾಯ ಬಹಳ ಪ್ರಾಚೀನವಾದುದು, ಭಾರತದ ಎಲ್ಲಾ ಮೂಲೆಗಳಲ್ಲೂ ನಾಥ ಸಂಪ್ರದಾಯದ ಮಠಗಳಿವೆ, ಮುಖ್ಯ ಮಠವು ಗೋರಖಪುರದಲ್ಲಿದೆ. ಪಾಕಿಸ್ತಾನ, ಕಾಬೂಲ್, ಗಂಧಾರ, ಬರ್ಮಾ, ನೇಪಾಲ, ಚೀನಾ, ಮಂಗೋಲಿಯಾಗಳಲ್ಲೂ ಮಠಗಳಿವೆ. ನಮ್ಮ ದೇಶದಲ್ಲೇ ಸುಮಾರು ಎರಡರಿಂದ ಎರಡೂವರೆ ಲಕ್ಷದಷ್ಟು ನಾಥ ಸಂಪ್ರದಾಯದ ಯೋಗಿಗಳಿದ್ದಾರೆ. ವಿದೇಶಗಳಲ್ಲೂ ಇದ್ದಾರೆ.
ಪ್ರ: ಈಗ ಈ ಪ್ರದೇಶಗಳ ನಡುವೆ ಗಡಿಗಳು ಎದ್ದಿರುವುದರಿಂದ ನಿಮ್ಮ ಪ್ರಯಾಣಕ್ಕೆ ಅಡಚಣೆಯಿಲ್ಲವೇ?
ಉ: ಹಾಗೇನಿಲ್ಲ, ಪಾಸ್ಪೋರ್ಟ್ ಬೇಕಾಗುತ್ತದೆ ಅಷ್ಟೇ. ಅನ್ಯ ದೇಶಗಳ ನಾಥ ಸಂಪ್ರದಾಯದ ಯೋಗಿಗಳು ಇಲ್ಲಿಗೆ ಬರುತ್ತಿರುತ್ತಾರೆ, ಇಲ್ಲಿನವರು ಅಲ್ಲಿಗೆ ಹೋಗುತ್ತಿರುತ್ತಾರೆ. ಇಂಗ್ಲೆಂಡ್, ಆಸ್ಟ್ರೇಲಿಯಾಗಳಲ್ಲೂ ಕೆಲವರಿದ್ದಾರೆ.
ಪ್ರ: ಹೀಗೆ ಯೋಗಿಯಾಗುವ ಮಾರ್ಗ ಯಾವುದು?
ಉ: ಐದಾರು ವರ್ಷದ ವಯಸ್ಸಿನಲ್ಲೇ ಮನೆಯನ್ನು ಬಿಟ್ಟು ಗುರುವಿನಿಂದ ದೀಕ್ಷೆಯನ್ನು ಪಡೆಯಬೇಕು, ಆ ಮೇಲೆ ಹಂತ ಹಂತವಾಗಿ ಬೆಳೆಯಬೇಕಾಗುತ್ತದೆ. ಕೆಲವರು ವಯಸ್ಕರಾದ ಮೇಲೂ ಬರುವುದಿದೆ, ಆದರೆ ಅಂಥವರು ಪೂರ್ಣ ಯೋಗಿಗಳಾಗಲಾರರು. ಎಲ್ಲರೂ ಯೋಗಿಗಳಾಗುವುದಕ್ಕೆ ಸಾಧ್ಯವಿಲ್ಲ. ಸಾಧುಗಳೆಲ್ಲರೂ ಯೋಗಿಗಳಲ್ಲ. ಬಾಲ್ಯದಲ್ಲೇ ನಾಥ ಪಂಥಕ್ಕೆ ಸೇರಿದವರೂ ತನ್ನಿಂತಾನೇ ಯೋಗಿಗಳಾಗುವುದಿಲ್ಲ. ಸಕಲ ಸಂಸಾರವನ್ನೂ ತ್ಯಜಿಸಿ, ಯೋಗದೀಕ್ಷೆ ಪಡೆದು, ಗುರುವಿನ ಪರೀಕ್ಷೆಗಳಿಗೆ ಒಳಗಾಗಿ ಯೋಗಿ ಅನಿಸಿಕೊಳ್ಳಬೇಕಾಗುತ್ತದೆ, ಅಂತಹ ಮಟ್ಟಕ್ಕೇರಿದವರು ಕನ್ಫಟರಾಗುತ್ತಾರೆ, ಅಂದರೆ ಗೋರಕ್ಷನಾಥ ಸಂಪ್ರದಾಯದಂತೆ ಅವರ ಕಿವಿಗಳಿಗೆ ಬಳೆಯನ್ನು ಸಿಕ್ಕಿಸಲಾಗಿರುತ್ತದೆ. ಅಂಥವರು ಮಾತ್ರವೇ ಯೋಗಿ ಎಂದು ಕರೆಸಿಕೊಳ್ಳಬಹುದು. ಈಗ ಅವರಿವರೆಲ್ಲರೂ ತಮ್ಮ ಹೆಸರಿನ ಹಿಂದೆ-ಮುಂದೆ ಯೋಗಿ ಅಂತ ಸೇರಿಸಿಕೊಳ್ಳುತ್ತಿದ್ದಾರೆ, ಅದು ಸರಿಯಲ್ಲ.
ಪ್ರ: ಬಹು ಆಯುಷ್ಯವನ್ನು ಹೊಂದಿದ ಯೋಗಿಗಳಿದ್ದಾರೆ ಎನ್ನಲಾಗುತ್ತದೆ. ನೀವು ನೋಡಿದ್ದೀರಾ?
ಉ: ನನಗೆ ತಿಳಿದಂತೆ ಶತಾಯುಷಿಗಳಾಗಿರುವ ಸುಮಾರು ನಲುವತ್ತು ಯೋಗಿಗಳಿದ್ದಾರೆ, ಅವರಲ್ಲಿಬ್ಬರು 125 ದಾಟಿದ್ದಾರೆ, ಒಬ್ಬರು 200 ದಾಟಿದ್ದಾರೆ ಎನ್ನಲಾಗುತ್ತದೆ. ಆದರೆ ಅವರು ನಮಗೂ ಸುಲಭದಲ್ಲಿ ಸಿಗುವುದಿಲ್ಲ, ಎಲ್ಲೋ ಪರ್ವತಗಳಲ್ಲಿ ಇರುತ್ತಾರೆ.
ಪ್ರ: ನಾಥ ಸಂಪ್ರದಾಯವನ್ನು ಸೇರುವುದಕ್ಕೆ ಯಾವುದೇ ಜಾತಿ, ಧರ್ಮಗಳ ಕಟ್ಟುಪಾಡುಗಳಿವೆಯೇ?
ಉ: ಏನೂ ಇಲ್ಲ, ಯಾವುದೇ ಜಾತಿ, ಮತಗಳವರೂ ನಾಥ ಸಂಪ್ರದಾಯವನ್ನು ಸೇರಿಕೊಳ್ಳಬಹುದು. ಆದಿನಾಥ ಶಿವನನ್ನು ಸ್ವೀಕರಿಸಿ, ನಾಥ ಸಂಪ್ರದಾಯದ ಆಚರಣೆಗಳಿಗೆ ತಮ್ಮನ್ನು ಒಪ್ಪಿಸಿಕೊಂಡರೆ ಆಯಿತು. ನಾಥ ಯೋಗಿಗಳಲ್ಲಿ ಮುಸ್ಲಿಮರು, ಕ್ರಿಶ್ಚಿಯನರು ಇದ್ದಾರೆ, ಕೆಲವು ವಿದೇಶೀಯರೂ ಇದ್ದಾರೆ.
ಪ್ರ: ನಾಥ ಪಂಥದ ಮುಖ್ಯ ಉದ್ದೇಶ ಏನು? ದೇಶಕ್ಕೆ ಅದರಿಂದ ಏನು ಪ್ರಯೋಜನವಿದೆ?
ಮನುಷ್ಯರನ್ನು ಒಳ್ಳೆಯವರನ್ನಾಗಿಸುವುದೇ ನಮ್ಮ ಮುಖ್ಯ ಉದ್ದೇಶ. ದಾರಿ ತಪ್ಪಿದವರನ್ನು, ದುಶ್ಚಟಗಳಿಗೆ ಸಿಲುಕಿದವರನ್ನು, ಯಾವುದಕ್ಕೂ ಆಗದವರನ್ನು ಸರಿ ದಾರಿಗೆ ತರಲು ನಾವು ಪ್ರಯತ್ನಿಸುತ್ತೇವೆ. ವ್ಯಕ್ತಿಯ ತನು, ಮನ, ಧನಗಳು ದೇಶದ ಸೇವೆಗೆ ದೊರೆಯುವಂತೆ ಮಾಡುವುದು ನಮ್ಮ ಉದ್ದೇಶ. ನಾವು ಯಾವುದನ್ನೂ ಸ್ವಂತಕ್ಕೆ ಇಟ್ಟುಕೊಳ್ಳುವುದಿಲ್ಲ, ಎಲ್ಲವನ್ನೂ ಕೊಡುತ್ತೇವೆ. ಜನಸಾಮಾನ್ಯರೂ ಅದೇ ರೀತಿ ದೇಶಸೇವೆ ಮಾಡುವಂತೆ ಪ್ರೇರೇಪಿಸುತ್ತೇವೆ.
ಪ್ರ: ಯೋಗದ ಹೆಸರಲ್ಲಿ ಇಂದು ಸಾವಿರಾರು ರೂಪಾಯಿ ಗಳಿಸಿದವರಿದ್ದಾರೆ. ಅಂತಹ ಹಣವನ್ನು ಅವರು ತ್ಯಜಿಸಬೇಡವೇ?
ಉ: ಯೋಗದ ಹೆಸರಲ್ಲೇ ಆಗಲಿ, ಧರ್ಮ, ಗೋವು ಇತ್ಯಾದಿಗಳ ಹೆಸರಲ್ಲಾಗಲೀ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವು ಆಯಾ ಕೆಲಸಗಳಿಗೇ ವ್ಯಯವಾಗಬೇಕು, ಜನರ ಒಳಿತಿಗಾಗಿ, ಉನ್ನತಿಗಾಗಿ ಖರ್ಚಾಗಬೇಕು. ಶಿಕ್ಷಣ, ಸ್ವಾಸ್ಥ್ಯ, ಸಂಕಷ್ಟ ಪರಿಹಾರಗಳಿಗಾಗಿ ಬಳಕೆಯಾಗಬೇಕು. ಅದು ಬಿಟ್ಟು ವ್ಯಾಪಾರಕ್ಕೆ, ಕಂಪೆನಿಗಳನ್ನು ಹುಟ್ಟು ಹಾಕುವುದಕ್ಕೆ ಅಂತಹಾ ಹಣವನ್ನು ಬಳಸುವುದು ಸರಿಯಲ್ಲ.
ಪ್ರ: ಯೋಗದ ಸತ್ಯಾಸತ್ಯತೆಯ ವಿಚಾರದಲ್ಲಿ ನಮ್ಮ ಪ್ರಧಾನಿಗಳಿಗೂ, ಮುಖ್ಯಮಂತ್ರಿಗಳಿಗೂ ನಿಮ್ಮ ಸಂದೇಶ ಏನು?
ಉ: ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲ, ಮುಖ್ಯಮಂತ್ರಿ ಇವರೆಲ್ಲರೂ ಯೋಗ್ಯವಾದ ದಾರಿಯನ್ನು ಕಂಡುಕೊಳ್ಳಬೇಕು, ಆರಿಸಿಕೊಳ್ಳಬೇಕು, ಅದರಲ್ಲೇ ನಡೆಯಬೇಕು. ಸತ್ಯ ಏನಿದೆಯೋ, ಆ ದಾರಿಯಲ್ಲಿ ಮುನ್ನಡೆಯಬೇಕು. ಎಲ್ಲರನ್ನೂ ಕೂಡಿಹಾಕಿ ದೊಡ್ಡದಾಗಿ ಮಾಡುವುದಲ್ಲ, ದೇಶ ಈ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಆತಂಕವಾದದ ಭೀತಿಯಿದೆ. ಇಂಥ ಸಂದರ್ಭದಲ್ಲಿ ಎಲ್ಲರೂ ಸತ್ಯ ಮಾರ್ಗದಲ್ಲಿ, ಧರ್ಮ ಮಾರ್ಗದಲ್ಲಿ ನಡೆಯಬೇಕು.
(ನಿರೂಪಣೆ: ಸಂದೀಪ್ ವಾಗ್ಲೆ ಮಂಗಳೂರು)