ವಾರ್ತಾಭಾರತಿ ಪ್ರಚಲಿತ ಅಂಕಣ – 22–05–2021: ಮುಖ ಮತ್ತು ಮುಖವಾಡ – ಸನತ್ ಕುಮಾರ ಬೆಳಗಲಿ
ಭಾರತೀಯ ಬದುಕು ದಿನಕಳೆದಂತೆ ತನ್ನ ಮೂಲ ಸತ್ವ ಕಳೆದುಕೊಳ್ಳುತ್ತಿದೆ. ಸರಳ, ನೇರ, ಸಹಜ ಬದುಕಿನ ಜಾಗದಲ್ಲಿ ಕೃತಕ, ಕುಹಕದ ವ್ಯಾಪಾರಿ ಬದುಕು ಅನಾವರಣಗೊಳ್ಳುತ್ತಿದೆ ಜಾಗತೀಕರಣದ ಅಬ್ಬರದಲ್ಲಿ ಮನುಷ್ಯರು ಕಳೆದು ಹೋಗುತ್ತಿದ್ದಾರೆ. ಇಂಥ ಮಾರುಕಟ್ಟೆಯ ಜಗತ್ತಿನಲ್ಲಿ ಮುಖವಾಡವಿಲ್ಲದೇ ಬದುಕುವುದು ಬಹು ಕಷ್ಟದ ಕೆಲಸ.
ಸಾಮಾಜಿಕ ಕಾಳಜಿ ಬದಲಾಗಿ ಸ್ವಂತದ ವೈಯಕ್ತಿಕ ಸುಖ ಸಂಪತ್ತಿಗಾಗಿ ಧರ್ಮ, ಜಾತಿ, ಕುಲ ಒಣ ಪ್ರತಿಷ್ಠೆಯ ಮುಖವಾಡ ಧರಿಸಲೇಬೇಕಾಗಿದೆ. ಮುಖವಾಡ ಧರಿಸದ ಸರಳ, ಸಜ್ಜನ, ನೇರಾ ನೇರ ವ್ಯಕ್ತಿತ್ವದ ಡಾ. ಶ್ರೀನಿವಾಸ ಕಕ್ಕಿಲ್ಲಾಯರಂಥವರು ಪೊಲೀಸ್ ಕೇಸ್ ಎದುರಿಸಬೇಕಾಗಿ ಬಂದಿದೆ.
ಬೇವಿಂಜೆ ವಿಷ್ಣು ಕಕ್ಕಿಲ್ಲಾಯರು ಹಣ ಮಾಡಲು ಶಾಸಕರಾಗಲಿಲ್ಲ. ಶಾಸಕರಾಗಿ ಹಣ ಕಳೆದುಕೊಂಡರು. ಈಗ ಅವರ ಮಗ ಶ್ರೀನಿವಾಸ ಕಕ್ಕಿಲ್ಲಾಯರು ದುಡ್ಡು ಗಳಿಸಲು ವೈದ್ಯಕೀಯ ವೃತ್ತಿಗೆ ಬಂದವರಲ್ಲ. ಸಮಾಜದ ನಿರ್ಲಕ್ಷಿತ ,ಅವಕಾಶ ವಂಚಿತ ಸಮುದಾಯಗಳಿಗೆ ಸೇವೆ ಸಲ್ಲಿಸಲು ಅವರು ಆಯ್ದುಕೊಂಡ ಮಾರ್ಗ ವೈದ್ಯಕೀಯ ವೃತ್ತಿ. ಅದಕ್ಕೆಂದೇ ಅವರಿಗೆ ಬಡವರ ಡಾಕ್ಟರ್ ಎಂದು ಹೆಸರಿದೆ. ಅಂಥವರು ಮಾಸ್ಕ್ ಧರಿಸದೇ ಟೂತ್‌ಪೇಸ್ಟ್‌್ ತೆಗೆದುಕೊಳ್ಳಲು ಮಾಲ್‌ವೊಂದಕ್ಕೆ ಬಂದಾಗ, ಮಾಸ್ಕ್ ಅಂದರೆ ಮುಖವಾಡ ಧರಿಸಿರಲಿಲ್ಲ ಎಂಬುದೇ ದೊಡ್ಡ ವಿವಾದವಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ಅವರು ಸ್ಪಷ್ಟೀಕರಣವನ್ನೂ ನೀಡಿದ್ದಾರೆ. ಇಷ್ಟೇ ಆಗಿದ್ದರೆ ಅದೊಂದು ದೊಡ್ಡ ವಿಷಯವಲ್ಲ. ಆದರೆ ಇದನ್ನು ಬಳಸಿಕೊಂಡು,‘ಅವರಪ್ಪ ಕಮ್ಯುನಿಸ್ಟ್, ಇವನೂ ಕಮ್ಯುನಿಸ್ಟ್. ಅವನನ್ನು ಹೊಡೆಯಬೇಕಿತ್ತು’ ಎಂಬ ದೂರವಾಣಿಯಲ್ಲಿ ಯಾವುನೊ ಆಡಿದ ಮಾತು ಕೇಳಿ ಬರುತ್ತಿದ್ದೆಯಲ್ಲ. ಅದು ನಮ್ಮ ದೇಶ ಇವತ್ತು ಯಾವ ದಿಕ್ಕಿನತ್ತ ಹೊರಟಿದೆ ಎಂಬುದಕ್ಕೆ ಸಾಕ್ಷಿ.
ಡಾ. ಶ್ರೀನಿವಾಸ ಕಕ್ಕಿಲ್ಲಾಯರು ನನಗೆ ತುಂಬ ವರ್ಷಗಳಿಂದ ಗೊತ್ತು. ಅವರ ತಂದೆ ಬಿ.ವಿ.ಕಕ್ಕಿಲ್ಲಾಯರು ನನಗೆ ಮತ್ತು ನನ್ನ ತಲೆಮಾರಿನ ಯುವಕರಿಗೆ ಮಾರ್ಕ್ಸ್‌ವಾದ, ಲೆನಿನ್‌ವಾದ ಮತ್ತು ಸಮಾಜವಾದಿ ಸಿದ್ದಾಂತದ ಪಾಠ ಮಾಡಿದ ಗುರುಗಳು. ಅವರು ಬರೆದ ‘ಕಮ್ಯೂನಿಸಂ’ ಎಂಬ ಪುಟ್ಟ ಪುಸ್ತಕ ಓದಿ ಅನೇಕರು ಕಮ್ಯುನಿಸ್ಟ್ ಚಳವಳಿಗೆ ಬಂದರು.
ಕಾಸರಗೋಡು ಸಮೀಪದ ಬೇವಿಂಜೆಯ ಭೂಮಾಲೀಕರ ಕುಟುಂಬದಲ್ಲಿ ಜನಿಸಿದ ಕಕ್ಕಿಲ್ಲಾಯರು ಮಂಗಳೂರಿನಲ್ಲಿ ಕಾಲೇಜು ವ್ಯಾಸಂಗ ಮಾಡುವಾಗಲೇ ವಿದ್ಯಾರ್ಥಿ ಸಂಘಟನೆಯ ಮೂಲಕ ಎಡಪಂಥೀಯ ಆಂದೋಲನಕ್ಕೆ ಧುಮುಕಿದವರು. ಒಂದು ಬಾರಿ ರಾಜ್ಯಸಭಾ ಸದಸ್ಯರಾಗಿ ಮತ್ತು ಎರಡು ಬಾರಿ ವಿಧಾನಸಭೆ ಸದಸ್ಯರಾಗಿ ಜನಪ್ರತಿನಿಧಿಗಳ ಸದನವನ್ನು ದುಡಿಯುವ ಜನರ ವೇದಿಕೆಯನ್ನಾಗಿ ಬಳಸಿಕೊಂಡವರು.
ದೇವರಾಜ ಅರಸು ಮುಖ್ಯ ಮಂತ್ರಿಯಾಗಿದ್ದಾಗ ಕಕ್ಕಿಲ್ಲಾಯರು ರೂಪಿಸಿದ ಭೂ ಸುಧಾರಣಾ ಕಾಯ್ದೆಯು ಲಕ್ಷಾಂತರ ಭೂರಹಿತರಿಗೆ ಭೂ ಒಡೆತನ ನೀಡಿತು. ಭೂ ಒಡೆತನ ಪಡೆದವರ ಮಕ್ಕಳು ಇವತ್ತು ದೇಶದ್ರೋಹಿ ಕೋಮುವಾದಿ ಸಂಘಟನೆಗಳನ್ನು ಸೇರಿ ಆ ಬಿ.ವಿ.ಕಕ್ಕಿಲ್ಲಾಯರ ಪುತ್ರ ಶ್ರೀನಿವಾಸ ಕಕ್ಕಿಲ್ಲಾಯರ ಬಾಯಿ ಮುಚ್ಚಿಸಲು ಹೊರಟವರ ಕಾಲಾಳು ಪಡೆಯಲ್ಲಿ ಹೆಜ್ಹೆ ಹಾಕುತ್ತಿದ್ದಾರೆ.
ಕಳೆದ ವರ್ಷ ಮಾರ್ಚ್‌ನಲ್ಲಿ ಕೊರೊನಾ ಎಂಬ ಮಾರಕ ಸೋಂಕು ವ್ಯಾಪಿಸತೊಡಗಿದಾಗ, ಭಾರತ ಮಾತ್ರವಲ್ಲ ಇಡೀ ವಿಶ್ವವೇ ದಿಕ್ಕು ತಪ್ಪಿ ನಿಂತಿತ್ತು. ಈ ಹೊಸ ವೈರಾಣು ವೈದ್ಯಕೀಯ ಲೋಕಕ್ಕೂ ಒಂದು ಸವಾಲಾಗಿತ್ತು. ಆಗ ಇದರ ಆಳ, ಅಗಲಗಳನ್ನು ಅಧ್ಯಯನ ಮಾಡಿ, ಸರ್ಕಾರ ಮತ್ತು ಜನರಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತ ಬಂದವರು ಡಾ. ಶ್ರೀನಿವಾಸ ಕಕ್ಕಿಲ್ಲಾಯರು.
ಆಗ ನನಗೂ ತುಂಬ ಆತಂಕ ಉಂಟಾಗಿತ್ತು. ಕಕ್ಕಿಲ್ಲಾಯರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಅವರು ಮೊದಲು ನೀಡಿದ ಸಲಹೆ, ‘ವಯಸ್ಸಾದ ನೀವು ಹೊರಗೆಲ್ಲೂ ಹೋಗಬೇಡಿ. ಅಕಸ್ಮಾತ್ ಹೊರಗೆ ಹೋದರೂ ತಪ್ಪದೇ ಮಾಸ್ಕ್ ಧರಿಸಿಕೊಳ್ಳಿ’ ಎಂಬುದಾಗಿತ್ತು. ಬಹುತೇಕ ನಮ್ಮ ಮನೆಯವರೆಲ್ಲ ಕಕ್ಕಿಲ್ಲಾಯರ ಸಲಹೆಯಂತೆ ನಡೆದುಕೊಂಡೆವು. ಇಂದಿಗೂ ಸುರಕ್ಷಿತವಾಗಿ ಇದ್ದೇವೆ. ಅವರು ನೀಡಿದ ವೈದ್ಯಕೀಯ ಸಲಹೆಗಿಂತ ‘ಏನೂ ಆಗುವುದಿಲ್ಲ. ಡೋಂಟ್ ಕೇರ್’ ಎಂದು ಧೈರ್ಯ ತುಂಬಿದರಲ್ಲ, ಅದೇ ನಮಗೆ ರಕ್ಷಾ ಕವಚವಾಯಿತು.
ಕಳೆದ ಒಂದು ವರ್ಷದಿಂದ ಒಂದು ರಾಜ್ಯದ ಆರೋಗ್ಯ ಇಲಾಖೆಯ ಪರಿಣಿತರ ತಂಡ ಮಾಡುವ ಕೆಲಸವನ್ನು ಡಾ.ಕಕ್ಕಿಲ್ಲಾಯರು ಏಕಾಂಗಿಯಾಗಿ ಮಾಡಿದ್ದಾರೆ. ಕೋವಿಡ್ ಬಗ್ಗೆ ಕಕ್ಕಿಲ್ಲಾಯರು ಹೇಳುತ್ತ ಬಂದಿದ್ದೆಲ್ಲ ನಿಜವಾಗಿದೆ. ಈ ಬಗ್ಗೆ ಅವರು ಕರ್ನಾಟಕ ಮತ್ತು ಕೇರಳ ಸರ್ಕಾರಗಳಿಗೆ ಆಗಾಗ ಅತ್ಯಮೂಲ್ಯ ಮಾಹಿತಿ ಒಳಗೊಂಡ ಪತ್ರಗಳನ್ನು ಬರೆಯುತ್ತಲೇ ಇದ್ದಾರೆ. ಆದರೆ, ಕರ್ನಾಟಕ ಸರ್ಕಾರ ಯಾವುದಕ್ಕೂ ಸ್ಪಂದಿಸಿಲ್ಲ.
ಈ ಸಲಹೆ ಮತ್ತು ಮಾರ್ಗದರ್ಶನವನ್ನು ಸಾಮಾಜಿಕ ಜಾಲತಾಣದ ಮೂಲಕ ನಾಡಿನ ಜನಸಾಮಾನ್ಯರಿಗೂ ಕಕ್ಕಿಲ್ಲಾಯರು ನೀಡಿದ್ದಾರೆ. ಇದಕ್ಕಾಗಿ ಅವರು ಯಾರಿಂದಲೂ ಒಂದು ಪೈಸೆ ಶುಲ್ಕವನ್ನೂ ಪಡೆದಿಲ್ಲ. ಮಂಗಳೂರಿನ ಹೆಸರಾಂತ ವೈದ್ಯರಾಗಿ ತಮ್ಮ ಅಮೂಲ್ಯ ಸಮಯವನ್ನು ಹೀಗೆ ಕೊರೊನಾದಿಂದ ಮಾರ್ಗದರ್ಶನಕ್ಕಾಗಿ ಅವರು ವ್ಯಯಿಸಿದ್ದಾರೆ.
ಮನಸ್ಸು ಮಾಡಿದ್ದರೆ ತಾವೇ ಒಂದು ಸುಪರ್‌ಸ್ಪೆಷಾಲಿಟಿ ಆಸ್ಪತ್ರೆ ಮಾಡಿ ಕೋಟಿ, ಕೋಟಿ ಹಣ ಗಳಿಸುವ ಸಾಮರ್ಥ್ಯ ಡಾ.ಕಕ್ಕಿಲ್ಲಾಯರಿಗೆ ಇತ್ತು. ಹಾಗೆ ಗಳಿಸಲು ಹೊರಟರೆ, ಅವರು ಮುಖಕ್ಕೆ ಮುಖವಾಡ ಹಾಕಿಕೊಂಡು ನಿಜ ವ್ಯಕ್ತಿತ್ವ ಕೊಂದು ಕೊಂಡು ಬದುಕಬೇಕಾಗಿತ್ತು. ಹಾಗೇ ಬದುಕುವುದೂ, ಆತ್ಮಹತ್ಯೆ ಮಾಡಿಕೊಳ್ಳುವುದೂ ಒಂದೇ. ಅಂತಲೇ ಕಕ್ಕಿಲ್ಲಾಯರು ಆರಿಸಿಕೊಂಡಿದ್ದು ಮುಖವಾಡವಿಲ್ಲದ ಬದುಕನ್ನು. ಅದಕ್ಕಾಗಿ ಈಗ ಪ್ರವಾಹದ ಎದುರು ಈಜುತ್ತಿದ್ದಾರೆ. ಇಂಥ ಸಮಯದಲ್ಲಿ ಅವರ ಜೊತೆಗೆ ನಿಲ್ಲಬೇಕಾಗಿದ್ದ ಮಂಗಳೂರಿನ ಅಖಿಲ ಭಾರತೀಯ ವೈದ್ಯಕೀಯ ಮಹಾಮಂಡಳಿ ಸರ್ಕಾರ ತುತ್ತೂರಿಯಾಗಿ ವೃತ್ತಿಧರ್ಮಕ್ಕೆ ದ್ರೋಹ ಬಗೆದಿದೆ ಎಂದರೆ ಅತಿಶಯೋಕ್ತಿಯಲ್ಲ.
‘ಕೊರೊನಾಕ್ಕೆ ಔಷಧಿಯಿಲ್ಲ. ಅದು ಬಂದು ಹೋಗುತ್ತದೆ’ ಎಂದು ಹೇಳುತ್ತಲೇ ಬಂದ ಕಕ್ಕಿಲ್ಲಾಯರು ಗಂಭೀರ ಸ್ಥಿತಿಯಲ್ಲಿರದ ಕೋವಿಡ್ ಪೀಡಿತರಿಗೆ ‘ಸ್ಟೆರಾಯಿಡ್’ ಮತ್ತು ‘ಆ್ಯಂಟಿಬಯೊಟಿಕ್ಸ್’ Antibiotics ಕೊಡಬೇಡಿ ಎಂದು ಹೇಳುತ್ತಲೇ ಬಂದರು. ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು ಇದನ್ನು ಒಪ್ಪಿದ್ದಾರೆ. ಹೀಗೆ ಹೇಳಿ ಅವರು ಸುಮ್ಮನಾಗಲಿಲ್ಲ. ತಮ್ಮ ಬಾಳ ಸಂಗಾತಿ ಡಾ.ಬಾಲಸರಸ್ವತಿ ಅವರ ಜೊತೆ ಸೇರಿ ಜನರಲ್ಲಿ ಅರಿವು ಮೂಡಿಸುವ ಅಭಿಯಾನ ನಡೆಸಿದರು. ವಿಚಾರ ಗೋಷ್ಠಿ ,ವೆಬಿನಾರ್ ಗಳಲ್ಲಿ ಮಾತಾಡಿದರು. ‘ಕೊರೊನಾಕ್ಕೆ ಹೆದರದಿರೋಣ’ ಎಂಬ ಪುಸ್ತಕ ಬರೆದು ನಾಡಿನ ಜನರಿಗೆ ನೀಡಿದರು. ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಮಾಡಬೇಕಾದ ಕೆಲಸವನ್ನು ಡಾ.ಕಕ್ಕಿಲ್ಲಾಯರು ಏಕಾಂಗಿಯಾಗಿ ಮಾಡಿದರು. ನ್ಯಾಯವಾಗಿ ಇದಕ್ಕಾಗಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು. ಆದರೆ ಸರಕಾರ ಕೊಟ್ಟಿದ್ದೇನು? ಮಾಸ್ಕ್ ಧರಿಸಲಿಲ್ಲ ಎಂಬ ಕೇಸು!
ಕೋವಿಡ್ ಸೋಂಕಿನಿಂದ ಕೊನೆಯುಸಿಳೆಯುವ ಜನರ ಸಂಖ್ಯೆಯೂ ಸರಿಯಾಗಿ ದಾಖಲಾಗುತ್ತಿಲ್ಲ. ರಾಜಧಾನಿ ಬೆಂಗಳೂರಿನಲ್ಲೂ ನಿಜವಾದ ಅಂಕಿ ಸಂಖ್ಯೆಗಳು ಬಯಲಿಗೆ ಬರುತ್ತಿಲ್ಲ ಎಂದು ಜನ ಮಾತಾಡುತ್ತಿದ್ದಾರೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಸೂತಕದ ವಾತಾವರಣ ಉಂಟಾಗಿದೆ. ಅಲ್ಲಿ ಸಂಭವಿಸುವ ಸಾವುಗಳು ದಾಖಲಾಗುತ್ತಲೇ ಇಲ್ಲ. ಉದಾಹರಣೆಗೆ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಎಪ್ರಿಲ್ 1 ರಿಂದ ಮೇ 16 ರ ವರೆಗೆ 635 ಜನರು ಸಾವಿಗೀಡಾಗಿದ್ದಾರೆ. ಇದರಲ್ಲಿ ಕೋವಿಡ್‌ನಿಂದ ಸಾವಿಗೀಡಾದವರು 69ಕ್ಕೂ ಹೆಚ್ಚು ಎಂದು ಹೇಳಲಾಗುತ್ತದೆ. ಸರ್ಕಾರದ ನಿರ್ಲಕ್ಷ್ಯ ದಿಂದ ಆಗುವ ಸಾವುಗಳನ್ನು ಹತ್ಯೆಗಳೆಂದು ಪರಿಗಣಿಸಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕಲ್ಲವೇ?
ಚಾಮರಾಜನಗರದಲ್ಲಿ ಆಮ್ಲಜನಕವಿಲ್ಲದೇ 30ಕ್ಕೂ ಹೆಚ್ಚು ರೋಗಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟರು. ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೈಕೋರ್ಟ್ ಮಧ್ಯಪ್ರವೇಶ ಮಾಡಿ, ಎಚ್ಚರಿಕೆ ನೀಡಿದ ನಂತರವೂ ಇದಕ್ಕೆ ಯಾರು ಕಾರಣ ಎಂಬುದನ್ನು ಪತ್ತೆ ಹಚ್ಚಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಚಾಮರಾಜನಗರ ಮಾತ್ರವಲ್ಲ, ಆಮ್ಲಜನಕ ಇಲ್ಲದೇ ಕಲಬುರ್ಗಿ, ಬೆಳಗಾವಿ ಮುಂತಾದ ಕಡೆ ಸಾವುಗಳು ಸಂಭವಿಸಿವೆ. ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳದ ಸರ್ಕಾರ ಮಾಸ್ಕ್ ಧರಿಸಲಿಲ್ಲ ಎಂಬ ನೆಪ ಮುಂದೆ ಮಾಡಿ ಡಾ.ಕಕ್ಕಿಲ್ಲಾಯರ ಮೇಲೆ ಕೇಸು ದಾಖಲಿಸಿದೆ.
ಡಾ.ಕಕ್ಕಿಲ್ಲಾಯರು ಸುಳ್ಳು ಔಷಧಿ ಬರೆದು ಔಷಧಿ ಕಂಪನಿಗಳ ಕಮಿಶನ್ ಮತ್ತು ಸ್ಯಾಂಪಲ್‌ಗಳನ್ನು ಬಯಸುವ ವೈದ್ಯರಲ್ಲ. ಅವರು ಹೇಳುತ್ತಿರುವುದು ಸರಳ, ಸಹಜ ಆಹಾರ ಪಥ್ಯವನ್ನು. ಇದರಲ್ಲಿ ಮಾಂಸ, ಮೊಟ್ಟೆ ಸೇರಿದ್ದು ಮನುವ್ಯಾಧಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಮಾಂಸ ತಿನ್ನದವರು ಮಾಂಸ ತಿನ್ನಬೇಕೆಂದೂ ಕಕ್ಕಿಲ್ಲಾಯರ ಒತ್ತಾಯವಿಲ್ಲ. ಮಾಂಸ ಬೇಡವಾದವರು ಸೊಪ್ಪು ,ಕಾಳುಗಳನ್ನು ತಿನ್ನಬಹುದು ಎಂದೂ ಹೇಳುತ್ತಾರೆ. ಆದರೂ ಇವರನ್ನು ಕಂಡರಾಗದವರಿಗೆ ಇದು ಕಾಣುತ್ತಿಲ್ಲ.
ಇವುಗಳನ್ನೆಲ್ಲ ಮುಚ್ಚಿ ಹಾಕಲು ಡಾ. ಕಕ್ಕಿಲ್ಲಾಯರ ಮಾಸ್ಕ್ ಪ್ರಕರಣವನ್ನು ದೊಡ್ಡದು ಮಾಡಲಾಗಿದೆ. ಇದಕ್ಕೆ ಕಾರಣ ಹಲವಾರು. ಕೋಮುವಾದದ ಪ್ರಯೋಗ ಶಾಲೆಯಾದ ಕರಾವಳಿಯಲ್ಲಿ ಡಾ.ಕಕ್ಕಿಲ್ಲಾಯರು ಬಹುದೊಡ್ಡ ಜಾತ್ಯತೀತ ಧ್ವನಿಯಾಗಿದ್ದಾರೆ. ನಿರಂತರ ವೈಚಾರಿಕ ಜಾಗೃತಿ ಮೂಡಿಸುತ್ತಿದ್ದಾರೆ. ‘ವೈಜ್ಞಾನಿಕ ಸತ್ಯಗಳನ್ನು ಹೇಳುವ ಬದಲು ದನದ ಗಂಜಲ ಮೈಗೆ ಬಳಿದುಕೊಂಡರೆ, ಗೋವಿನ ಮೂತ್ರ ಕುಡಿದರೆ ಕೊರೊನಾ ವಾಸಿಯಾಗುತ್ತದೆ’ ಎಂದು ಹೇಳಿದ್ದರೆ ಈಗ ಅವರನ್ನು ವಿರೋಧಿಸುತ್ತಿರುವವರೇ ಕಕ್ಕಿಲ್ಲಾಯರನ್ನು ಹೆಗಲ ಮೇಲೆ ಹೊತ್ತು ಮೆರೆಸುತ್ತಿದ್ದರು!
ಕಕ್ಕಿಲ್ಲಾಯರ ಮೇಲಿನ ಕೋಪಕ್ಕೆ ಇನ್ನೊಂದು ಕಾರಣ, ‘ಆರೋಗ್ಯ ಎಂಬುದು ಸೇವಾಕ್ಷೇತ್ರ’ ಎಂಬ ದೇಶ ಒಪ್ಪಿಕೊಂಡ ಪರಿಕಲ್ಪನೆ ಯನ್ನು ಕಕ್ಕಿಲ್ಲಾಯರು ಪ್ರತಿಪಾದಿಸುತ್ತಾರೆ. ಆದರೆ ಇದಕ್ಕೆ ಪ್ರತಿಯಾಗಿ ‘ಹೆಲ್ತ್ ಕೇರ್ ಬಿಸಿನೆಸ್, ಹೆಲ್ತ್ ಕೇರ್ ಇಂಡಸ್ಟ್ರಿ, ಹೆಲ್ತ್ ಕೇರ್ ಟೂರಿಸಂ’ ಎಂಬ ನವ ಉದಾರೀಕರಣದ ಹೈಟೆಕ್ ಶಬ್ಧಗಳ ಮೂಲಕ ಆರೋಗ್ಯ ಎಂಬ ಸೇವಾ ವಲಯ ಕಾಸು ಮಾಡಿಕೊಳ್ಳುವ ಖಾಸಗಿ ವ್ಯಾಪಾರಿ ದಂಧೆಯನ್ನಾಗಿ ಮಾಡಿಕೊಂಡವರಿಗೆ ಕಕ್ಕಿಲ್ಲಾಯರಂಥ ವೈದ್ಯರನ್ನು ಕಂಡರೆ ಆಗುವದಿಲ್ಲ.
ನಮ್ಮ ಸರ್ಕಾರ ಕೂಡ ವೈದ್ಯಕೀಯ ಉದ್ಯಮಪತಿ ಡಾ.ದೇವಿ ಪ್ರಸಾದ ಶೆಟ್ಟಿ ಅಂಥವರನ್ನು ಕೊವಿಡ್ ಮೂರನೇ ಅಲೆಯ ಕಾರ್ಯಪಡೆಯ ಅಧ್ಯಕ್ಷರನ್ನಾಗಿ ಮಾಡಿದೆ. ಕಕ್ಕಿಲ್ಲಾಯರು ಮಾತ್ರವಲ್ಲ, ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡ ಡಾ.ಶಶಿಧರ ಬುಗ್ಗಿ ( ಶ್ವಾಸಕೋಶ ಪರಿಣಿತರು), ಡಾ.ಸಿ.ಎನ್.ಮಂಜುನಾಥ ಅಂಥವರು ಸರ್ಕಾರದ ಕಣ್ಣಿಗೆ ಕಾಣಲಿಲ್ಲ.
ಡಾ.ಕಕ್ಕಿಲ್ಲಾಯರು ಆ ದಿನ ಮಾಸ್ಕ್ ಧರಿಸದಿರುವ ಬಗ್ಗೆ ಕೆಲ ಪ್ರಗತಿಪರ ಗೆಳೆಯರಲ್ಲೂ ಪ್ರಶ್ನೆಗಳಿವೆ. ಒಮ್ಮೆ ಕೊರೊನಾದಿಂದ ಬಾಧಿತರಾಗಿ ಚೇತರಿಸಿದವರು ಮತ್ತೆ ಮಾಸ್ಕ್ ಧರಿಸಬೇಕಾಗಿಲ್ಲ ಎಂಬ ಕಕ್ಕಿಲ್ಲಾಯರ ನಿಲುವಿನ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ಆದರೆ, ಕೆಡವಿ ಹಾಕಲು ಕಾಯುತ್ತಿರುವ ದುಷ್ಟ ಫ್ಯಾಸಿಸ್ಟ್ ಶಕ್ತಿಗಳಿಗೆ ಯಾಕೆ ಅವಕಾಶ ಮಾಡಿಕೊಡಬೇಕು. ಮಾಸ್ಕ್ ಹಾಕದಿರುವುದನ್ನೇ ಅವರು ದೊಡ್ಡದು ಮಾಡುತ್ತಾರೆ ಎಂಬ ಅಭಿಪ್ರಾಯಗಳೂ ಇವೆ. ಆದರೆ, ನಾವು ಚರ್ಚಿಸಬೇಕಾದ ನಿಜವಾದ ಸಮಸ್ಯೆ ಮಾಸ್ಕ್ ಹಾಕದಿರುವ ಬಗ್ಗೆ ಅಲ್ಲ. ಕೊರೊನಾ ನಿಭಾಯಿಸುವಲ್ಲಿ ಸಂಪೂರ್ಣ ವಿಫಲಗೊಂಡು ತನ್ನ ನಾಯಕನ ವರ್ಚಸ್ಸನ್ನು ಉಳಿಸಿಕೊಳ್ಳಲು ಬಿಜೆಪಿ ನಡೆಸಿರುವ ಕಸರತ್ತುಗಳ ಬಗ್ಗೆ ಮಾತಾಡಬೇಕಾಗಿದೆ.
ಕೊರೊನಾ ನಿಭಾಯಿಸುವಲ್ಲಿ ಮೋದಿ ಸರ್ಕಾರ ಯಾಕೆ ವಿಫಲಗೊಂಡಿತು? ಪರಿಣಿತರ ಸಲಹೆಗಳನ್ನು ಪರಿಗಣಿಸದಿರುವ ಸರ್ಕಾರದ ಅಸಡ್ಡೆಯನ್ನು ಪ್ರತಿಭಟಿಸಿ ಕೇಂದ್ರ ಸರ್ಕಾರದ ಕೊರೊನಾ ಕುರಿತ ವೈಜ್ಞಾನಿಕ ಸಲಹಾ ಸಮೀತಿ ಸದಸ್ಯ ಡಾ.ಶಹೀದ್ ಜಮೀಲ್ ಯಾಕೆ ರಾಜೀನಾಮೆ ನೀಡಿದರು? ಇಂಥ ಗಂಭೀರ ಸನ್ನಿವೇಶದಲ್ಲಿ ಈ ಸರ್ಕಾರ ವಿಫಲಗೊಂಡಿರುವದರಿಂದ ಸರ್ವಪಕ್ಷಗಳ ರಾಷ್ಟ್ರೀಯ ಸರ್ಕಾರವೊಂದು ರಚನೆಯಾಗುವುದು ಅಗತ್ಯವಾಗಿದೆ. ಈ ಬಗ್ಗೆ ದೇಶದಲ್ಲಿ ಚಿಂತನೆ ನಡೆಯಬೇಕಾಗಿದೆ.
–ಸನತ್ ಕುಮಾರ ಬೆಳಗಲಿ
Leave a Reply