ಲಸಿಕೆಗಳ ಸುತ್ತ ಗಿರಕಿ ಹೊಡೆಯುತ್ತಿದೆ ಅನುಮಾನ

ಲಸಿಕೆಗಳ ಸುತ್ತ ಗಿರಕಿ ಹೊಡೆಯುತ್ತಿದೆ ಅನುಮಾನ – ಆಂದೋಲನ, ಮೇ 19, 20, 2021

ಎಲ್ಲರಿಗಿಂತ ಮೊದಲು ಕೊರೋನ ಲಸಿಕೆ ಮಾಡಿದವರೆಂದು ಹೇಳಿಕೊಳ್ಳಲು ಹೊರಟು, ಅದಾಗದೆ, ಎಲ್ಲರಿಗಿಂತ ದೊಡ್ಡ ಲಸಿಕೆ ಉತ್ಸವ ಅಂತ ಪ್ರಯತ್ನಿಸಿ, ಅದೂ ಆಗದೆ, ಎಲ್ಲರಿಗಿಂತ ವಿಶೇಷವಾದ ಲಸಿಕೆ ಕಾರ್ಯಕ್ರಮ ಮಾಡುವಲ್ಲಿಗೆ ಅಂತೂ ಬಂದು ತಲುಪಿದ್ದೇವೆ. ಘೋಷಣೆ ಮೊದಲು, ಆಚರಣೆಯ ಯೋಚನೆ ಆ ಮೇಲೆ, ಸಾಧನೆಯಂತೂ ಮರೀಚಿಕೆಯೇ ಎನ್ನುವುದೀಗ ಇಲ್ಲಿ ನಿಯಮವೇ ಆಗಿಬಿಟ್ಟಿದೆ.

ಕಳೆದ ವರ್ಷದ ಆರಂಭದಲ್ಲಿ ಹೊಸ ಕೊರೋನ ವೈರಸ್ ಗುರುತಿಸಲ್ಪಟ್ಟು, ಅದರ ತಳಿಯ ವಿವರಗಳು, ಪ್ರೋಟೀನ್ ಗಳು ಮತ್ತು ಅವು ವರ್ತಿಸುವ ಬಗೆಗಳ ವಿವರಗಳು ಎಲ್ಲವೂ ಸ್ಪಷ್ಟವಾಗಿ ತಿಳಿದ ಬೆನ್ನಿಗೇ ಈ ಹೊಸ ವೈರಸಿಗೆದುರಾಗಿ ಲಸಿಕೆ ತಯಾರಿಸುವ ಪ್ರಯತ್ನಗಳೂ ಆರಂಭಗೊಂಡವು. ಈ ಸೋಂಕು ಏನು, ಹೇಗೆ, ಎಷ್ಟು ಹಾನಿ ಮಾಡಬಹುದು ಎಂಬ ಬಗ್ಗೆ ಊಹಾಪೋಹಗಳೂ, ಬಳಿಕ ನಿಜಾನುಭವಗಳೂ ಬಂದಂತೆ ಇದರಿಂದ ಮೋಕ್ಷಕ್ಕೆ ಲಸಿಕೆಯೇ ಪರಿಹಾರ ಎಂಬ ಆಸೆಯನ್ನು ಹುಟ್ಟಿಸಿ ಮಹಾಪ್ರಚಾರ ಮಾಡಲಾಯಿತು. ಸೋಂಕಿನ ಬಗ್ಗೆ ಮಾಧ್ಯಮಗಳಲ್ಲಿ ಬೊಬ್ಬೆ ಮುಂದುವರಿದಂತೆ, ಹಲವು ಸರಕಾರಗಳು ಅತಿರೇಕದ ಲಾಕ್ ಡೌನ್ ಇತ್ಯಾದಿಗಳನ್ನು ಮಾಡಿ ಇದು ಅತಿ ಭಯಂಕರ ಕಾಯಿಲೆ ಎಂದೇ ಜನರನ್ನು ನಂಬಿಸಲಾಯಿತು; ಹೆಚ್ಚಿನವರಲ್ಲಿ ಔಷಧಗಳೇ ಅಗತ್ಯವಿಲ್ಲದೆ ಅದು ವಾಸಿಯಾಗುತ್ತಿದ್ದರೂ ಏನೇನೋ ಔಷಧಗಳನ್ನು ಹುಡುಕಿ ಕೊಡುತ್ತಿದ್ದೇವೆ ಎಂಬಂತೆ, ಲಸಿಕೆಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ದೇಶದ ಮುಖ್ಯಸ್ಥ ರಾಜಕಾರಣಿಗಳೇ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂಬಂತೆ, ಬಿಂಬಿಸಲಾಯಿತು.

ಕಳೆದ ಜುಲೈ 2ರಂದು ಐಸಿಎಂಆರ್ ಮಹಾ ಕಾರ್ಯದರ್ಶಿ ಬಲರಾಂ ಭಾರ್ಗವ ಲಸಿಕೆ ತಯಾರಕರಿಗೆ ಪತ್ರ ಬರೆದು, ಆಗಸ್ಟ್ 15ರಂದು ಸಾರ್ವಜನಿಕ ಬಳಕೆಗೆ ಲಸಿಕೆಗಳನ್ನು ಬಿಡುಗಡೆ ಮಾಡುವ ಯೋಜನೆಯಿದ್ದು, ಎಲ್ಲಾ ಹಂತದ ಪರೀಕ್ಷೆಗಳನ್ನು ಬೇಗನೇ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದ್ದರು. ಇದನ್ನು ಹಲವು ವಿಜ್ಞಾನಿಗಳು ಖಂಡಿಸಿದ್ದರು, ಲಸಿಕೆಗಳ ಪರೀಕ್ಷೆಗಳು ಹೀಗೆ ಒಂದೆರಡು ತಿಂಗಳಲ್ಲಿ ಮುಗಿಯುವಂಥದ್ದಲ್ಲ ಎಂದು ಎಚ್ಚರಿಸಿದ್ದರು. ಅದಾಗಿ ಕೆಲದಿನಗಳಲ್ಲಿ ಭಾರತದ ಶ್ರೇಷ್ಠ ಲಸಿಕೆ ವಿಜ್ಞಾನಿಯಾದ ಡಾ. ಗಗನ್ ದೀಪ್ ಕಾಂಗ್ ಕೇಂದ್ರ ಸರಕಾರದ ಸಲಹಾ ಸಮಿತಿಗೆ ರಾಜೀನಾಮೆಯನ್ನೂ ನೀಡಿದ್ದರು. ಎರಡು ತಿಂಗಳಲ್ಲಿ ಪರೀಕ್ಷೆಗಳನ್ನು ಮುಗಿಸುವುದು ಅಸಾಧ್ಯ ಎಂದು ಲಸಿಕೆ ಉತ್ಪಾದಕರೂ ಹೇಳಿದ ಮೇಲೆ ಆಗಸ್ಟ್ 15ಕ್ಕೆ ಲಸಿಕೆಯ ಘೋಷಣೆ ಸಾಧ್ಯವಾಗಲಿಲ್ಲ. ಇತರ ಹಲವು ದೇಶಗಳಲ್ಲೂ ಲಸಿಕೆಯನ್ನು ತಯಾರಿಸುವ ಪ್ರಯತ್ನಗಳಾಗುತ್ತಿದ್ದಂತೆ, ಆಗಸ್ಟ್ 12ರಂದು ರಷ್ಯಾದ ಅಧ್ಯಕ್ಷ ಪುಟಿನ್ ಅಲ್ಲಿನ ಕೊರೋನ ಲಸಿಕೆ ಸ್ಪುಟ್ನಿಕ್ ಅನ್ನು ಅನಾವರಣಗೊಳಿಸಿ ವಿಶ್ವದ ಮೊದಲ ಲಸಿಕೆ ತಮ್ಮದೆಂದು ಹೇಳಿಕೊಂಡರು, ಅದನ್ನು ವೈಜ್ಞಾನಿಕ ವಲಯವು ನಂಬಲು ಸಿದ್ಧವಿಲ್ಲದೆ ಸಂಶಯದಿಂದಲೇ ನೋಡಿತು.

ಅಂತೂ ನವೆಂಬರ್ ವೇಳೆಗೆ ಅಮೆರಿಕಾದಲ್ಲಿ, ಚೀನಾದಲ್ಲಿ ಲಸಿಕೆಗಳ ಪರೀಕ್ಷೆಗಳು ಮುಗಿದು ಬಳಕೆಗೆ ಸಿದ್ಧವಾದವು. ಭಾರತದಲ್ಲಿಯೂ ಪರೀಕ್ಷೆಗಳು ಮುಂದುವರಿದವು, ಜನವರಿಯಲ್ಲಿ ಅವನ್ನು ನೀಡಲಾರಂಭಿಸುವುದಕ್ಕೆ ಸಿದ್ಧತೆಗಳಾಗತೊಡಗಿದವು. ಭಾರತದಲ್ಲಿ ಎರಡು ಲಸಿಕೆಗಳ ಪರೀಕ್ಷೆಗಳು ನಡೆದವು. ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಅಸ್ತ್ರ ಜೆನೆಕ ಕಂಪೆನಿಗಳು ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಲಸಿಕೆಯನ್ನು ಭಾರತದಲ್ಲಿ ಕೊವಿಶೀಲ್ಡ್ ಎಂಬ ಹೆಸರಲ್ಲಿ ಉತ್ಪಾದಿಸಲು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲೂ ಅದರ ಎರಡನೇ ಹಾಗೂ ಮೂರನೇ ಹಂತದ ಪರೀಕ್ಷೆಗಳು ನಡೆದವು. ಹೈದರಾಬಾದಿನ ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಜೊತೆಗೂಡಿ ಕೊವಾಕ್ಸಿನ್ ಎಂಬ ಹೆಸರಲ್ಕಿ ತಮ್ಮದೇ ಆದ ಲಸಿಕೆಯನ್ನು ಅಭಿವೃದ್ಧಿಪಡಿಸಿ, ಅದರ ಪರೀಕ್ಷೆಗಳೂ ಆರಂಭವಾದವು. ಡಿಸೆಂಬರ್ ವೇಳೆಗೆ ಅಸ್ತ್ರ ಜೆನೆಕ ಲಸಿಕೆಯ ಬಗ್ಗೆ ಬ್ರಿಟನ್ ಮತ್ತು ಬ್ರೆಜಿಲ್ ಗಳಲ್ಲಿ ನಡೆಸಲಾಗಿದ್ದ ಪರೀಕ್ಷೆಗಳ ವರದಿಗಳು ವೈದ್ಯಕೀಯ ಜರ್ನಲ್ ಗಳಲ್ಲಿ ಪಾರದರ್ಶಕವಾದ ವಿಮರ್ಶೆಗೊಳಪಟ್ಟು ಪ್ರಕಟಗೊಂಡವು. ಆ ವರದಿಗಳಲ್ಲಿ ಅದೇ ಲಸಿಕೆಯ ಬಗ್ಗೆ ಭಾರತದಲ್ಲಾಗಿದ್ದ ಪರೀಕ್ಷೆಗಳ ಮಾಹಿತಿಯನ್ನು ಸೇರಿಸಲಾಗಿರಲಿಲ್ಲ. ಭಾರತ್ ಬಯೋಟೆಕ್ ನ ಕೊವಾಕ್ಸಿನ್ ಲಸಿಕೆಯ ಎರಡನೇ ಹಂತದ ಪರೀಕ್ಷೆಗಳಷ್ಟೇ ಈ ವೇಳೆಗೆ ನಡೆಯುತ್ತಿದ್ದವು.

ಅಂತೂ ಡಿಸೆಂಬರ್ ವೇಳೆಗೆ ಅಮೆರಿಕ, ಚೀನಾ, ರಷ್ಯಾ, ಯುಕೆ ಮತ್ತು ಯೂರೋಪಿನ ದೇಶಗಳಲ್ಲಿ ಲಸಿಕೆ ನೀಡಲು ಆರಂಭಿಸಲಾಯಿತು. ಹೀಗೆ ಲಭ್ಯವಾದ ಲಸಿಕೆಗಳನ್ನು ಮೂರು ಬಗೆಗಳಾಗಿ ವಿಂಗಡಿಸಬಹುದು. ಅಮೆರಿಕಾದ ಫೈಜರ್ ಮತ್ತು ಮೊಡರ್ನಾ ಲಸಿಕೆಗಳೆರಡರಲ್ಲೂ ವೈರಸ್‌ನ ಮುಳ್ಳಿನ ಪ್ರೊಟೀನನ್ನು ನಮ್ಮ ದೇಹದ ಜೀವಕಣಗಳೇ ಉತ್ಪಾದಿಸುವಂತೆ ಮಾಡುವ ಎಂಆರ್‌ಎನ್‌ಎ ತುಣುಕನ್ನು ಲಸಿಕೆಯಾಗಿ ಚುಚ್ಚಲಾಗುತ್ತದೆ. ರಷ್ಯಾದ ಸ್ಪುಟ್ನಿಕ್, ಆಕ್ಸ್ ಫರ್ಡ್ ಅಸ್ತ್ರ ಜೆನೆಕ (ಭಾರತದಲ್ಕಿ ಅದು ಕೊವಿಶೀಲ್ಡ್), ಮತ್ತು ಈಗ ಬಂದಿರುವ ಜಾನ್ಸನ್ ಲಸಿಕೆಗಳು ಚಿಂಪಾಂಜಿಯಲ್ಲಿ ಸೋಂಕುಂಟು ಮಾಡುವ ಅಡಿನೋ ವೈರಸ್ ಅನ್ನು ನಿಸ್ತೇಜಗೊಳಿಸಿ, ಅದಕ್ಕೆ ಕೊರೋನ ವೈರಸಿನ ಮುಳ್ಳಿನ ಪ್ರೋಟೀನನ್ನು ಸಿಕ್ಕಿಸಿರುವಂಥವು. ಭಾರತ್ ಬಯೋಟೆಕ್ ನ ಕೊವಾಕ್ಸಿನ್ ಮತ್ತು ಚೀನಾದ ಸೈನೊವಾಕ್ ಲಸಿಕೆಗಳು ಹಳೆಯ ತಂತ್ರಜ್ಞಾನವನ್ನೇ ಬಳಸಿಕೊಂಡಿದ್ದು, ಅವುಗಳಲ್ಲಿ ಕೊರೋನ ವೈರಸಿನ ಕಣಗಳನ್ನೇ ನಿಸ್ತೇಜಗೊಳಿಸಿ ನೀಡಲಾಗುತ್ತಿದೆ.

ಅಲ್ಲೆಲ್ಲ ಲಸಿಕೆ ನೀಡುವಿಕೆ ಆರಂಭಗೊಂಡಾಗ ನಮ್ಮಲ್ಲೂ ಆಗಲೇಬೇಕಲ್ಲ? ನವೆಂಬರ್‌ನಲ್ಲೇ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಯೋಜನೆಗೆ ಚಾಲನೆ ನೀಡಲಾಯಿತು; ಆರೋಗ್ಯ ಸೇವೆಯ ಕಾಯಿದೆಯೆಡಿ ನೋಂದಾಯಿಸಲ್ಪಟ್ಟಿರುವ ಆಸ್ಪತ್ರೆಗಳಿಗೆ, ಕ್ಲಿನಿಕ್‌ಗಳಿಗೆ ಜಿಲ್ಲಾ ಆರೋಗ್ಯ ಇಲಾಖೆಯು ಮಿಂಚೋಲೆಗಳನ್ನು ಕಳಿಸಿ, ಅಲ್ಲೆಲ್ಲ ಕೆಲಸ ಮಾಡುವ ವೈದ್ಯರು ಮತ್ತು ಇತರ ಸಿಬ್ಬಂದಿಯ ವೈಯಕ್ತಿಕ ವಿವರಗಳನ್ನು ನೀಡಬೇಕೆಂದು ಕೇಳಲಾಯಿತು. ಅಲ್ಲಿಯವರೆಗೆ ಅನೇಕ ಆರೋಗ್ಯ ಕರ್ಮಿಗಳು ಯಾವ ಲಸಿಕೆಯನ್ನೂ ಕಾಯದೆ ತಮ್ಮ ವೃತ್ತಿನಿಷ್ಠೆಯಿಂದ ಕೊರೋನ ಪೀಡಿತರ ಆರೈಕೆ ಮಾಡಿ ಕೊರೋನ ಸೋಂಕನ್ನು ಪಡೆದು ಗುಣಮುಖರಾಗಿದ್ದರು, ನಮ್ಮಲ್ಲೂ ಎಲ್ಲರೂ ಸೋಂಕನ್ನೆದುರಿಸಿ ಗೆದ್ದಿದ್ದರು; ಒಮ್ಮೆ ಕೊರೋನ ಬಾಧಿಸಿದವರಿಗೆ ಮತ್ತೆ ಬಾಧಿಸುವ ಸಾಧ್ಯತೆಗಳು ತೀರಾ ನಗಣ್ಯವೆಂಬ ವರದಿಗಳು ಕೂಡ ಪ್ರಕಟವಾಗಿದ್ದವು. ಲಸಿಕೆಗಳ ಸಾಧಕ-ಬಾಧಕಗಳ ಬಗ್ಗೆ ಪರೀಕ್ಷೆಗಳು ಕೂಡ ಇನ್ನೂ ಮುಗಿದಿರಲಿಲ್ಲ. ಆದ್ದರಿಂದ, ಸರಕಾರವು ಲಸಿಕೆ ನೀಡಲು ಹೊರಟಾಗ ಆ ಬಗ್ಗೆ ನಮ್ಮಲ್ಲಿ ಸಹಜವಾಗಿಯೇ ಹಲವು ಪ್ರಶ್ನೆಗಳಿದ್ದವು. ಹಾಗಾಗಿ, ಕೊನೆಯ ನೆನಪೋಲೆ ಎಂಬ ಒಕ್ಕಣೆಯಲ್ಲಿ ನವೆಂಬರ್ 26ರಂದು ನನಗೆ ಬಂದಿದ್ದ ಮಿಂಚೋಲೆಗೆ ಪ್ರತಿಕ್ರಿಯೆಯಾಗಿ, ಲಸಿಕೆಗಳ ಸಾಧಕ-ಬಾಧಕಗಳ ಬಗ್ಗೆ, ಅದಾಗಲೇ ಸೋಂಕಿತರಾದವರಿಗೆ ಲಸಿಕೆ ನೀಡುವ ಬಗ್ಗೆ, ಆರೋಗ್ಯ ಕರ್ಮಿಗಳಲ್ಲೂ ಅನ್ಯ ರೋಗಗಳುಳ್ಳವರಿಗೆ ಆದ್ಯತೆ ನೀಡುವ ಬಗ್ಗೆ ಸರಕಾರದ ಯೋಜನೆಗಳೇನೆಂದು ತಿಳಿಸಬೇಕೆಂದೂ, ಆ ವಿವರಗಳು ದೊರೆತ ಬಳಿಕ ವೈಯಕ್ತಿಕ ವಿವರಗಳನ್ನು ಒದಗಿಸಲು ಸಾಧ್ಯವೆಂದೂ ಬರೆದಿದ್ದೆ. ಕೂಡಲೇ ಇಲಾಖೆಯವರೊನಬ್ಬರು ಕರೆ ಮಾಡಿ ಅದೆಲ್ಲ ಲಭ್ಯವಿಲ್ಲ ಎಂದಿದ್ದರು, ಹಾಗಾದರೆ ಅದು ದೊರೆತ ಬಳಿಕವಷ್ಟೇ ನಾವು ಲಸಿಕೆಗೆ ಅರ್ಜಿ ಹಾಕುತ್ತೇವೆ, ಅಥವಾ ನಮಗೆ ಎಲ್ಲಾ ಮಾಹಿತಿ ಲಭ್ಯವಾದಾಗ ನಮ್ಮ ಖರ್ಚಿನಲ್ಲೇ ಪಡೆದುಕೊಳ್ಳುತ್ತೇವೆ ಎಂದು ಬರೆದು ತಿಳಿಸಿದ್ದೆ. ಆದರೆ ಹೆಚ್ಚಿನ ಇತರರು ತಮ್ಮ ವಿವರಗಳನ್ನೆಲ್ಲ ಕೊಟ್ಟರು, ಲಸಿಕೆ ಹಾಕುವಾಗ ಆಧಾರ್ ತೋರಿಸುವುದಕ್ಕೂ ಒಪ್ಪಿಕೊಂಡರು.

ಲಸಿಕೆ ಹಾಕುವ ಕಾರ್ಯಕ್ರಮವು ಆರಂಭಗೊಳ್ಳುವ ಮೊದಲು, ಡಿಸೆಂಬರ್ 21ರಂದು, ಮಿಂಟ್ ಪತ್ರಿಕೆಯು ಆಯೋಜಿಸಿದ್ದ ಬಜೆತ್ ಪೂರ್ವದ ಚರ್ಚೆಗಳಲ್ಲಿ ಭಾಗಿಯಾಗಿದ್ದ ಎಐಐಎಂಎಸ್ ನಿರ್ದೇಶಕ ಡಾ। ರಣದೀಪ್ ಗುಲೇರಿಯಾ ಅವರು, ಕೇಂದ್ರ ಸರಕಾರವು ದೇಶದ ಎಲ್ಲರಿಗೂ ಉಚಿತವಾಗಿ ಲಸಿಕೆಗಳನ್ನು ಒದಗಿಸಲಿದೆಯೆಂದೂ, ಅದಕ್ಕೆ ಅಗತ್ಯವಿರುವ ಹಣವನ್ನು ಕೇಂದ್ರದ ಬಜೆಟ್‌ನಲ್ಲಿ ಒದಗಿಸುವ ವಿಶ್ವಾಸವಿದೆಯೆಂದೂ ಹೇಳಿದ್ದರು.

ಜನವರಿ 16, 2021ರಂದು ಆರೋಗ್ಯ ಸೇವೆಗಳಲ್ಲಿರುವವರಿಗೆ ಲಸಿಕೆ ಹಾಕುವ ಕಾರ್ಯವು ಆರಂಭಗೊಳ್ಳುವುದಾಗಿ ಪ್ರಕಟಿಸಲಾಯಿತು. ಭಾರತದಲ್ಲಿ ಮೂರನೇ ಹಂತದ ಪರೀಕ್ಷೆಗಳಾಗಿದ್ದರೂ ವಿವರಗಳು ಪ್ರಕಟಿಸಲ್ಪಡದೇ ಇದ್ದ, ಅಸ್ತ್ರ ಜೆನೆಕಾ ಸಂಶೋಧಿಸಿ ಸೀರಂ ಇನ್ಸ್‌ಟಿಟ್ಯೂಟ್ ಉತ್ಪಾದಿಸತೊಡಗಿದ್ದ, ಕೊವಿಶೀಲ್ಡ್ ಲಸಿಕೆಗೆ ತುರ್ತು ಬಳಕೆಗೆ ಪರವಾನಿಗೆ ನೀಡಲಾಯಿತು. ಮೂರನೇ ಹಂತದ ಪರೀಕ್ಷೆಗಳು ಆಗಿನ್ನೂ ಆರಂಭಗೊಳ್ಳದೇ ಇದ್ದ ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಲಸಿಕೆಗೂ ಪ್ರಾಯೋಗಿಕ ನೆಲೆಯಲ್ಲಿ ತುರ್ತು ಬಳಕೆಗೆಂದು ಅನುಮೋದನೆ ನೀಡಲಾಯಿತು; ಹೀಗೆ ಅನುಮೋದನೆ ನೀಡುವುದಕ್ಕೆ ತರಾತುರಿಯಲ್ಲಿ 4 ದಿನಗಳಲ್ಲಿ 3 ಸಭೆಗಳನ್ನು ನಡೆಸಲಾಗಿತ್ತೆಂದು ವರದಿಗಳಾದವು. ನಮ್ಮ ದೇಶದ ಅತಿ ಹಿರಿಯ ಮತ್ತು ಶ್ರೇಷ್ಠ ವೈರಾಣು ಹಾಗೂ ಲಸಿಕೆ ತಜ್ಞರೆನಿಸಿಕೊಂಡಿರುವ ಡಾ. ಗಗನ್‌ದೀಪ್ ಕಾಂಗ್, ಡಾ. ಜೇಕಬ್ ಜಾನ್, ಡಾ. ವಿನೀತಾ ಬಾಲ್, ಡಾ. ಶಹೀದ್ ಜಮಾಲ್ ಅವರಂಥವರು ಇಂಥ ಅವಸರದ ನಿರ್ಧಾರಗಳನ್ನು ಬಹಿರಂಗವಾಗಿಯೇ ಪ್ರಶ್ನಿಸಿದರು, ಸರಿಯಾದ ಪರೀಕ್ಷೆಗಳಾಗದೆ, ಸಾಕಷ್ಟು ವಿವರಗಳಿಲ್ಲದೆ, ಲಸಿಕೆಗಳನ್ನು ನೀಡುವುದಕ್ಕೆ ಅನುಮತಿ ನೀಡಿದ ಕ್ರಮದ ಬಗ್ಗೆ ಅಸಮಾಧಾನವನ್ನು ವ್ಯಕ್ತ ಪಡಿಸಿದರು. ಆದರೆ ಇವೆಲ್ಲವೂ ಕಡೆಗಣಿಸಲ್ಪಟ್ಟವು.

ಅಂತೂ ಲಸಿಕೆ ಹಾಕುವ ಕಾರ್ಯಕ್ರಮವು ಎಲ್ಲ ಅಬ್ಬರದೊಂದಿಗೆ ಆರಂಭಗೊಂಡಾಗ ಅಲ್ಲಲ್ಲಿ ಗೊಂದಲಗಳುಂಟಾದವು, ಅದಕ್ಕಾಗಿ ಒದಗಿಸಲಾಗಿದ್ದ ಕೋವಿನ್ ಆಪ್ ಹಲವೆಡೆ ಕೆಲಸವನ್ನೇ ಮಾಡದೆ ಅಡ್ಡಿಯುಂಟು ಮಾಡಿತು. ಲಸಿಕೆಗಳನ್ನು ಪಡೆದಿದ್ದ ಕೆಲವರಲ್ಲಿ ಅಡ್ಡಪರಿಣಾಮಗಳಾದವು, ಮೊದಲ ವಾರಗಳಲ್ಲಿ ಲಸಿಕೆ ಪಡೆದವರಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೀಡಾಗಿ ಮೃತರಾದರು, ಕೆಲವರಲ್ಲಿ ನರಗಳ ತೀವ್ರ ಸಮಸ್ಯೆಯೂ ಉಂಟಾದ ಬಗ್ಗೆ ವರದಿಗಳಾದವು. ಇವು ತೀರಾ ಅಪರೂಪದ್ದಾಗಿದ್ದರೂ, ಅವುಗಳ ಬಗ್ಗೆ ಸರಿಯಾದ ವಿವರಣೆಗಳು ದೊರೆಯದೆ ಆರೋಗ್ಯ ಕಾರ್ಯಕರ್ತರಲ್ಲಿ ಆತಂಕಕ್ಕೆ ಕಾರಣವಾಯಿತು. ಇನ್ನೊಂದೆಡೆ, ಅನೇಕ ಕಾರ್ಯಕರ್ತರು ಮೇಲಧಿಕಾರಿಗಳು ಮತ್ತು ತಮ್ಮ ಸಂಸ್ಥೆಗಳ ಆಡಳಿತಗಳ ಆದೇಶಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಲಸಿಕೆಗಳನ್ನು ಹಾಕಿಸಿಕೊಂಡರು. ಒಟ್ಟಾರೆಯಾಗಿ, ಮೊದಲ ಸುತ್ತಿನ ಲಸಿಕೆಯನ್ನು ಸುಮಾರು 51% ಆರೋಗ್ಯ ಕಾರ್ಯಕರ್ತರು ಪಡೆದುಕೊಂಡರು. ಎರಡನೇ ಸುತ್ತಿಗಾಗುವಾಗ ಇವರಲ್ಲಿ ಹಲವರು ಮನಸ್ಸು ಮಾಡದೆ, ಅರ್ಧಕ್ಕರ್ಧ ಮಂದಿ ದೂರವುಳಿದರು.

ಆ ಬಳಿಕ 45 ವರ್ಷಕ್ಕೆ ಮೇಲ್ಪಟ್ಟವರಲ್ಲಿ ಅನ್ಯ ರೋಗಗಳಿದ್ದವರಿಗೆ ಮತ್ತು 55ಕ್ಕಿಂತ ಮೇಲ್ಪಟ್ಟ ಎಲ್ಲರಿಗೆ ಲಸಿಕೆ ನೀಡುವ ಕಾರ್ಯವು ಆರಂಭಗೊಂಡಿತು. ಕೋವಿನ್ ಆಪ್‌ನ ಸಮಸ್ಯೆಗಳು, ಲಸಿಕೆ ಪೂರೈಕೆಯಲ್ಲಿ ವಿಳಂಬ ಅಥವಾ ಕೊರತೆಗಳು ಹಲವೆಡೆ ಆದವು, ಲಸಿಕೆ ಹಾಕುವ ಕೇಂದ್ರಗಳಲ್ಲಿ ಸರತಿ ಸಾಲುಗಳಲ್ಲಿ ಜನದಟ್ಟಣೆಯಾಗಿ ದೈಹಿಕ ಅಂತರ ಕಾಯುವುದು ಕಷ್ಟವಾಯಿತು.

ಇವು ಮುಂದುವರಿದಂತೆ, ಅತ್ತ ಚುನಾವಣಾ ಸಭೆಗಳು, ಕುಂಭ ಮೇಳ, ಜಾತ್ರೆಗಳು, ಇತರ ಧಾರ್ಮಿಕ ಸಮಾವೇಶಗಳು, ಮದುವೆ ಮತ್ತಿತರ ಸಮಾರಂಭಗಳು ನಡೆಯುತ್ತಲೇ ಹೋದಂತೆ ಕೊರೋನ ಸೋಂಕಿತರ ಸಂಖ್ಯೆಯೂ ಏರುತ್ತಲೇ ಹೋಯಿತು. ಈ ‘ಎರಡನೇ ಅಲೆ’ಯನ್ನು ನಿಯಂತ್ರಿಸುವುದಕ್ಕೆ 18ಕ್ಕಿಂತ ಮೇಲ್ಪಟ್ಟವರಿಗೂ ಲಸಿಕೆ ನೀಡಬೇಕು ಎಂಬ ಕೂಗುಗಗಳು ಬಲಗೊಂಡವು. ಆ ವರೆಗೆ ನಡೆದಿದ್ದ ಲಸಿಕೆಯ ಕಾರ್ಯಕ್ರಮದಲ್ಲೇ ಅನೇಕ ತೊಡಕುಗಳಾಗಿ ಲಸಿಕೆಗಳ ಲಭ್ಯತೆಯೇ ಕಷ್ಟವೆನಿಸಿದ್ದರೂ, 18ಕ್ಕಿಂತ ಮೇಲ್ಪಟ್ಟವರೂ ಲಸಿಕೆ ಪಡೆಯಬಹುದೆಂದು ಕೇಂದ್ರ ಸರಕಾರವು ಹೇಳಿತು. ಎಪ್ರಿಲ್ 11ರಿಂದ 14ರ ನಡುವೆ ಲಸಿಕೋತ್ಸವನ್ನು ನಡೆಸುವುದಕ್ಕೆ ಮಾನ್ಯ ಪ್ರಧಾನಿಗಳು ಕರೆಯಿತ್ತರು, ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರಿಬ್ಬರ ಜನ್ಮದಿನಗಳನ್ನೂ ಅದರೊಳಕ್ಕೆ ತರಲಾಯಿತು.

ಕೊರೋನ ಸೋಂಕಿಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸತೊಡಗಿದಾಗಲೇ CEPI, GAVI, WHO ಮತ್ತು UNICEF ಸಂಸ್ಥೆಗಳು ಜಂಟಿಯಾಗಿ ಕೋವ್ಯಾಕ್ಸ್ ಎಂಬ ಯೋಜನೆಯನ್ನು ಆರಂಭಿಸಿದವು. ಅದರಡಿಯಲ್ಲಿ ಹಿಂದುಳಿದ ದೇಶಗಳಿಗೆ ಕೊರೋನ ಲಸಿಕೆಗಳನ್ನು ಒದಗಿಸುವ ಯೋಜನೆಯನ್ನು ಹಾಕಿಕೊಳ್ಳಲಾಯಿತು. ಕಳೆದ ಜೂನ್ ತಿಂಗಳಲ್ಲೇ, ಲಸಿಕೆಯ ಸಾಧಕ-ಬಾಧಕಗಳು ಇನ್ನೂ ದೃಢಪಡುವ ಮೊದಲೇ, ಅಸ್ತ್ರ ಜೆನೆಕ ಕಂಪೆನಿಯು CEPI ಮತ್ತು GAVI ಗಳ ಜೊತೆ 30 ಕೋಟಿ ಲಸಿಕೆಗಳನ್ನು ಒದಗಿಸುವುದಕ್ಕೆ 5600 ಕೋಟಿ ರೂಪಾಯಿಗಳ (ಪ್ರತೀ ಡೋಸಿಗೆ 186ರೂ) ಮೌಲ್ಯದ ಒಪ್ಪಂದವನ್ನು ಮಾಡಿಕೊಂಡಿತು. ಅದೇ ಅಸ್ತ್ರ ಜೆನೆಕ ಈ ಲಸಿಕೆಯನ್ನು 100 ಕೋಟಿ ಡೋಸ್ ಗಳನ್ನು ಉತ್ಪಾದಿಸುವುದಕ್ಕೆ ಭಾರತದ ಸೀರಂ ಇನ್ ಸ್ಟಿಟ್ಯೂಟ್ ಜೊತೆಗೆ ಒಪ್ಪಂದ ಮಾಡಿಕೊಂಡಿತು, ಅದರೊಂದಿಗೆ ಭಾರತದಲ್ಲಿ ಇದೇ ಲಸಿಕೆಯನ್ನು ಕೊವಿಶೀಲ್ಡ್ ಹೆಸರಲ್ಲಿ ಮಾರುವುದಕ್ಕೂ ಸೀರಂ ಇನ್ ಸ್ಟಿಟ್ಯೂಟ್ ಅವಕಾಶವನ್ನು ಪಡೆದುಕೊಂಡಿತು. ಡಿಸೆಂಬರ್ ತಿಂಗಳಲ್ಲಿ ಅಸ್ತ್ರ ಜೆನೆಕ ಈ ಲಸಿಕೆಯನ್ನು ಬಳಸಲು ಯೂರೋಪಿನಲ್ಲೂ, ಇತರ ದೇಶಗಳಲ್ಲೂ ಪರವಾನಿಗೆಯನ್ನು ಪಡೆದಾಗ ಅದನ್ನು ಸೀರಂ ಇನ್ ಸ್ಟಿಟ್ಯೂಟ್ ನಲ್ಲಿ ಉತ್ಪಾದಿಸಿ ಆ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಕೊವಾಕ್ಸ್ ಯೋಜನೆಯಡಿಯಲ್ಲೂ, ಆ ದೇಶಗಳೊಂದಿಗೆ ನೇರ ಒಪ್ಪಂದಗಳಡಿಯಲ್ಲೂ ರವಾನಿಸಲಾಯಿತು. ಹಾಗೆಯೇ, ಭಾರತ್ ಬಯೋಟೆಕ್ ನ ಕೊವಾಕ್ಸಿನ್ ಅನ್ನು ಕೂಡ ಕೆಲವು ದೇಶಗಳು ಖರೀದಿಸಿದವು. ಭಾರತದ ಕಂಪೆನಿಯೊಂದು ವಿದೇಶಿ ಕಂಪೆನಿಯ ಲಸಿಕೆಯನ್ನು ಒಪ್ಪಂದದ ಮೇರೆಗೆ ಉತ್ಪಾದಿಸಿ ಕಳುಹಿಸಿದ್ದನ್ನು ಸರಕಾರದ ಕೊಡುಗೆ ಎಂಬಂತೆ ಬಿಂಬಿಸುವ ಪ್ರಯತ್ನಗಳಾದವು.

ಆದರೆ ವಿಶ್ವದ ಅತಿ ದೊಡ್ಡ ಲಸಿಕೆಯ ಕಾರ್ಯಕ್ರಮ ಎಂಬ ಭರಾಟೆಯಲ್ಲಿ ಒಮ್ಮೆಗೇ ಎಲ್ಲರಿಗೂ ಲಸಿಕೆಗಳನ್ನು ಕೊಡಲು ತೀರ್ಮಾನಿಸಿದ್ದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಲಸಿಕೆಗಳನ್ನು ಪೂರೈಸುವುದಕ್ಕೆ ಈ ಕಂಪೆನಿಗಳಿಗೆ ಸಾಧ್ಯವಾಗಲಿಲ್ಲ, ತಯಾರಿಗೆ ಬೇಕಾದ ಕಚ್ಚಾವಸ್ತುಗಳು ದೊರೆಯದಿದ್ದುದು ಕೂಡ ಸಮಸ್ಯೆಯಾಯಿತು. ದೇಶದೊಳಗೆ ಹೀಗೆ ಲಸಿಕೆಯ ಕೊರತೆಯುಂಟಾದಾಗ ವಿರೋಧ ಪಕ್ಷಗಳು ಲಸಿಕೆಯನ್ನು ಹೊರದೇಶಗಳಿಗೆ ಕಳಿಸಿದ್ದನ್ನು ಪ್ರಶ್ನಿಸತೊಡಗಿದವು. ಆ ಒತ್ತಡದಲ್ಲಿ ಆಡಳಿತ ಪಕ್ಷದ ವಕ್ತಾರರು ಕೊನೆಗೂ ಸತ್ಯವನ್ನು ಒಪ್ಪಿಕೊಳ್ಳಬೇಕಾಯಿತು; ದೇಶದಿಂದ ಕಳುಹಿಸಿದ 6.6 ಕೋಟಿ ಲಸಿಕೆಗಳ ಪೈಕಿ 5.5 ಕೋಟಿ ಡೋಸ್ ಗಳನ್ನು ಲಸಿಕೆಯ ಕಂಪೆನಿಗಳು ತಮ್ಮ ಒಪ್ಪಂದಗಳ ಭಾಗವಾಗಿ ಕಳಿಸಿದ್ದವೇ ಹೊರತು ಸರಕಾರವು ಕಳಿಸಿದ್ದಲ್ಲ ಎನ್ನುವುದು ಅವರ ಬಾಯಿಂದಲೇ ಬಯಲಾಯಿತು.

ಇದರ ನಡುವೆ, ಕೇಂದ್ರದ 2021ರ ಬಜೆಟ್ ನಲ್ಲಿ ಲಸಿಕೆಗಳಿಗಾಗಿಯೇ 35000 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆಯೆಂದು ಘೋಷಿಸಲಾಯಿತು. ಕೇಂದ್ರ ಸರಕಾರವು ತಲಾ ರೂ 150ರ ದರದಲ್ಲಿ 10 ಕೋಟಿ ಲಸಿಕೆಗಳನ್ನು ಪಡೆಯಲು ಒಪ್ಪಂದ ಮಾಡಿಕೊಂಡಿದೆಯೆಂದು ಮೊದಲೇ ಹೇಳಲಾಗಿದ್ದುದರಿಂದ ಬಜೆಟ್ ನಲ್ಲಿ ಒದಗಿಸಲಾಗಿದ್ದ ಹಣವು ಒಟ್ಟು 233 ಕೋಟಿ ಲಸಿಕೆಗಳಿಗೆ ಸಾಕಾಗುವಂತಿತ್ತು, ಶೇ 10ರಷ್ಟು ಡೋಸ್ ಗಳು ವ್ಯರ್ಥವಾಗುವುದನ್ನೂ ಲೆಕ್ಕಕ್ಕಿಟ್ಟರೆ, ಒಬ್ಬರಿಗೆ ಎರಡು ಡೋಸ್ ಗಳಂತೆ ಸುಮಾರು 100 ಕೋಟಿ ಜನರಿಗೆ ಲಸಿಕೆ ನೀಡಲು ಈ ಹಣದಿಂದ ಸಾಧ್ಯವೆಂದು ಲೆಕ್ಕ ಹಾಕುವುದು ಕಷ್ಟವಿರಲಿಲ್ಲ. ಇದರ ಜೊತೆಗೆ, ಕೊವಾಕ್ಸ್ ಯೋಜನೆಯಲ್ಲೂ ಭಾರತದ ಪಾಲಿಗೆ 5 ಕೋಟಿ ಲಸಿಕೆಗಳು ದೊರೆಯುವ ಭರವಸೆಯನ್ನು ನೀಡಲಾಗಿದೆ. ಅಲ್ಲದೆ, ಬಜೆಟ್ ಮಂಡನೆಯಾದ ಮರುದಿನವೇ ಕೇಂದ್ರದ ವಿತ್ತ ಇಲಾಖೆಯ ಕಾರ್ಯದರ್ಶಿ ಟಿವಿ ಸೋಮನಾಥನ್ ಅವರು ಈ ಹಣದಲ್ಲಿ ಲಸಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ಖರ್ಚುಗಳನ್ನು ಪರಿಗಣಿಸಿದರೆ ಕನಿಷ್ಠ 50 ಕೋಟಿ ಜನರಿಗೆ ಲಸಿಕೆಗಳನ್ನು ನೀಡಲು ಸಾಧ್ಯವಾಗುತ್ತದೆಂದೂ, ಉಳಿದವರಿಗೆ ಲಸಿಕೆ ನೀಡುವುದಕ್ಕೆ ಅಗತ್ಯದ್ದರೆ ಹೆಚ್ಚುವರಿಯಾಗಿ ಇನ್ನಷ್ಟು ಹಣವನ್ನು ಒದಗಿಸಲಾಗುವುದೆಂದೂ ಹೇಳಿದ್ದರು. ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದೆಂದು ಡಾ. ಗುಲೇರಿಯಾ ಡಿಸೆಂಬರ್ ನಲ್ಲೇ ಹೇಳಿದ್ದರಲ್ಲ?

ಆದರೆ ಒಮ್ಮೆಗೇ 18ಕ್ಕೆ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಪಡೆಯುವುದಕ್ಕೆ ಅವಕಾಶ ನೀಡಿ ಲಸಿಕೆಗಳು ಲಭ್ಯವಿಲ್ಲದೇ ಹೋದಾಗ ಎಲ್ಲರಿಗೂ ತಾನೇ ಉಚಿತವಾಗಿ ಲಸಿಕೆಗಳನ್ನು ನೀಡುತ್ತೇನೆಂದು ನೀಡಿದ್ದ ಭರವಸೆಯು ಕೇಂದ್ರ ಸರಕಾರಕ್ಕೆ ಮರೆತೇ ಹೋಯಿತೇನೋ? ಏನಿದ್ದರೂ, ಅಂಥ ಪರಿಸ್ಥಿತಿಯು ಉದ್ಭವಿಸುತ್ತಿದ್ದಂತೆ ಕೊವಿಶೀಲ್ಡ್ ಮತ್ತು ಕೊವಾಕ್ಸಿನ್ ತಯಾರಕರಿಬ್ಬರೂ ತಮ್ಮ ದರ ಪಟ್ಟಿಯನ್ನು ಬಿಡುಗಡೆ ಮಾಡಿ, ರಾಜ್ಯ ಸರಕಾರಗಳಿಗೆ ಪ್ರತೀ ಡೋಸಿಗೆ 400-600 ರೂಪಾಯಿ, ಖಾಸಗಿಯಾಗಿ 1000-1200 ರೂಪಾಯಿ ಎಂದು ಹೇಳಿದವು; ಕೇಂದ್ರ ಸರಕಾರವು ಇದನ್ನು ಬೆಂಬಲಿಸಿ, ತಾನು ದೊಡ್ಡ ಪ್ರಮಾಣದಲ್ಲಿ ಖರೀದಿವುವುದರಿಂದ ತನಗಷ್ಟೇ 150 ರೂಪಾಯಿಯೆಂದೂ, ಉಳಿದವರಿಗೆ ಹೆಚ್ವಿಜಿನ ದರ ವಿಧಿಸುವುದು ಸಹಜವೆಂದೂ ಮೇ 9 ರಂದು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ ಅಫಿಡವಿಟ್ಟಿನಲ್ಲಿ ಹೇಳಿತು. ಕೆಲವೇ ಕಾಲದ ಹಿಂದೆ ಎಲ್ಲಾ ಔಷಧಗಳ ದರಗಳನ್ನು, ಹೃದಯದ ಸ್ಟೆಂಟ್ ದರವನ್ನು ತನ್ನ ಕಪಿಮುಷ್ಠಿಯಲ್ಲಿ ನಿಯಂತ್ರಿಸಿದ್ದಾಗಿ ಹೇಳಿಕೊಳ್ಳುತ್ತಲೇ ಇದ್ದ ಸರಕಾರವೇ ಕೊರೋನ ಲಸಿಕೆಗಳ ಬಗ್ಗೆ ಎಲ್ಲರಲ್ಲಿ ಆಸೆ ಹುಟ್ಟಿಸಿದ ಬಳಿಕ ವ್ಯವಹಾರದ ಸಹಜ ನ್ಯಾಯಗಳೇ ಅನ್ವಯಿಸುತ್ತದಲ್ಲದೆ ಬೇರೇನೂ ಆಗದು ಎಂದು ಬಿಟ್ಟಿತು!

ಇದುವರೆಗೆ ಕೇಂದ್ರ ಸರಕಾರವು ಸುಮಾರು 5000 ಕೋಟಿಯಷ್ಟನ್ನೇ ಲಸಿಕೆಗಳಿಗೆ ವ್ಯಯಿಸಿದೆಯೆಂದು ಅಂದಾಜಿಸಲಾಗಿದ್ದು, ಈಗ ಲಸಿಕೆಗಳನ್ನು ನೀಡುವ ಜವಾಬ್ದಾರಿಯನ್ನು ರಾಜ್ಯಗಳಿಗೆ ವರ್ಗಾಯಿಸಿದಂತಾಗಿದೆ. ಅತ್ತ ಲಸಿಕೆಯೂ ಇಲ್ಲ, ಇತ್ತ ಕೇಂದ್ರದಿಂದ ಹಣವೂ ಇಲ್ಲ ಎಂಬಂತಾಗಿ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳು 18ರಿಂದ 45ರವರಿಗೆ ಲಸಿಕೆ ನೀಡುವುದನ್ನು ತಡೆಹಿಡಿದಿವೆ, ಕರ್ನಾಟಕವು ಲಸಿಕೆ ಖರೀದಿಗೆ ಜಾಗತಿಕ ಟೆಂಡರ್ ಮೊರೆಹೋಗುವುದಾಗಿ ಹೇಳಿದೆ. ಇಡೀ ವಿಶ್ವಕ್ಕೇ ಲಸಿಕೆ ಕೊಡುತ್ತೇವೆ, ಭಾರತೀಯರೆಲ್ಲರಿಗೂ ಉಚಿತವಾಗಿ ಲಸಿಕೆ ಕೊಡುತ್ತೇವೆ ಎಂಬಲ್ಲಿಂದ ತೊಡಗಿ ಆರೇಳು ವಾರಗಳಲ್ಲೇ ಒಂದೊಂದು ರಾಜ್ಯವೂ ತಾನಾಗಿ ಜಾಗತಿಕವಾಗಿ ಮೊರೆಯಿಡುವಂಥ ಸನ್ನಿವೇಶವುಂಟಾಗಿದೆ.

ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು, ಸೋಂಕಿತರಾಗಿದ್ದವರೂ ಹಾಕಿಸಿಕೊಳ್ಳಬೇಕು, ಎರಡನೇ ಡೋಸನ್ನು 4 ವಾರಗಳಲ್ಲಿ ಹಾಕಿಸಿಕೊಳ್ಳಬೇಕು ಎಂದು ಹೇಳಿದ್ದುದೂ ಬದಲಾಗುತ್ತಲೇ ಹೋಗಿದೆ. ಜನವರಿಯಲ್ಲಿ ಆರೋಗ್ಯ ಕರ್ಮಿಗಳಿಗೆ ಲಸಿಕೆ ಕೊಡಲಾರಂಭಿಸಿದಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಆಕ್ಸ್ ಫರ್ಡ್ ಅಸ್ತ್ರ ಜೆನೆಕ ಲಸಿಕೆಯ ಎರಡನೇ ಡೋಸನ್ನು 8-12 ವಾರಗಳ ನಂತರ ಕೊಟ್ಟರೆ ಒಳ್ಳೆಯದೆಂದು ಹೇಳಿತ್ತು; ಆದರೆ ನಮ್ಮಲ್ಲಿ ಅದನ್ನು ಪುರಸ್ಕರಿಸದೆ, ಕಂಪೆನಿಗಳು ಹೇಳಿದವೆಂದು 4 ವಾರಕ್ಕೇ ಎರಡನೇ ಡೋಸ್ ಹಾಕಿಸಿಕೊಳ್ಳಬೇಕೆಂದು ಹೇಳಲಾಯಿತು. ಕೆಲವು ವಾರಗಳ ಬಳಿಕ ಅದನ್ನು 6-8 ವಾರ ಎಂದು ಬದಲಿಸಲಾಯಿತು, ಈಗ ಲಸಿಕೆಗಳು ದೊರೆಯದಂಥ ಸ್ಥಿತಿಯಾದಾಗ ಅದನ್ನು 12-16 ವಾರ ಎಂದು ಮಾಡಲಾಗಿದೆ! ಹಾಗೆಯೇ, ಸೋಂಕಿತರಾದವರು ಕೂಡಾ ಲಸಿಕೆಯನ್ನು ಪಡೆಯಬಹುದು ಎಂದಿದ್ದುದನ್ನು ಬದಲಿಸಿ, ಸೋಂಕಿತರಾದವರು 6 ತಿಂಗಳ ಬಳಿಕ ಪಡೆಯಬಹುದು ಎಂದು ಬದಲಿಸಲಾಗಿದೆ!

ಮೇಲೆ ಹೇಳಿದಂತೆ, ಒಮ್ಮೆ ಸೋಂಕಿತರಾದರೆ ಜೀವನಪರ್ಯಂತ ರೋಗರಕ್ಷೆ ದೊರೆಯುವುದರಿಂದ ಅಂಥವರು ಲಸಿಕೆಯನ್ನು ತೆಗೆದುಕೊಂಡರೆ ವಿಶೇಷ ಲಾಭವಿದೆ ಎನ್ನುವುದಕ್ಕೆ ಆಧಾರಗಳಿಲ್ಲ. ದೇಶದಲ್ಲಿ ಈಗಾಗಲೇ ಕನಿಷ್ಠ 40-50% ಜನರು ಸೋಂಕಿತರಾಗಿದ್ದರೆ ಅಷ್ಟು ಜನರಿಗೂ ಲಸಿಕೆಯ ಅಗತ್ಯವಿರದು. ಆದರೆ ಇದನ್ನು ಸ್ಪಷ್ಟವಾಗಿ ಜನರಿಗೆ ಹೇಳುವುದಕ್ಕೆ ಸರಕಾರವು ಸಿದ್ಧವಿದ್ದಂತಿಲ್ಲ, ಬದಲಿಗೆ 6 ತಿಂಗಳ ಬಳಿಕ ನೋಡೋಣ ಎಂದಿದೆ! ಹಾಗೆಯೇ, ಮೊದಲ ಡೋಸ್ ಪಡೆದ ಕೆಲವರು ಆ ಬಳಿಕ ಸೋಂಕನ್ನೇ ಪಡೆದಿದ್ದರೆ, ಅಥವಾ ಮೊದಲೇ ಸೋಂಕಿತರಾಗಿದ್ದವರು ಈಗಾಗಲೇ ಮೊದಲ ಡೋಸನ್ನು ಪಡೆದಿದ್ದರೆ, ಅವರಿಗೆ ಎರಡನೇ ಡೋಸ್ ಬೇಕೇ ಎನ್ನುವ ಬಗ್ಗೆ ಸರಕಾರವು ಏನೂ ಹೇಳಿಲ್ಲ. ಇವರ ಜೊತೆಗೆ, 18 ವರ್ಷಕ್ಕಿಂತ ಕೆಳಗಿನವರ ಸಂಖ್ಯೆಯು ಸುಮಾರು 55 ಕೋಟಿಯಷ್ಟಿದ್ದು ಅವರಾರಿಗೂ ಲಸಿಕೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಇವನ್ನೆಲ್ಲ ಪರಿಗಣಿಸಿದರೆ ಇನ್ನುಳಿದವರಲ್ಲಿ ಯಾರು ಕೊರೋನ ಸೋಂಕಿನಿಂದ ಗಂಭೀರ ಸಮಸ್ಯೆಗೀಡಾಗುವ ಅಪಾಯವುಳ್ಳವರಿದ್ದಾರೋ, ಅವರಲ್ಲಿ ಇದುವರೆಗೆ ಲಸಿಕೆ ಅಥವಾ ಸೋಂಕನ್ನು ಪಡೆಯದವರಿದ್ದಾರೋ ಅಂಥವರಿಗಷ್ಟೇ ಆದ್ಯತೆಯ ಮೇರೆಗೆ ಲಸಿಕೆಯನ್ನು ನೀಡುವ ಕಾರ್ಯಯೋಜನೆಯನ್ನು ಮಾಡಬಹುದು ಮತ್ತು ಅವರೆಲ್ಲರಿಗೂ ಕೇಂದ್ರ ಸರಕಾರವೇ ಈ ಹಿಂದೆ ಘೋಷಿಸಿದಂತೆ ಉಚಿತವಾಗಿ ನೀಡಬಹುದು. ಹೀಗೆ ಯಾವ ಗೊಂದಲಗಳಿಗೂ ಆಸ್ಪದವಿಲ್ಲದೆ, ರಾಜ್ಯಗಳಾಗಲೀ, ಖಾಸಗಿಯಾಗಿಯಾಗಲೀ ಯಾರೂ ವೇಚವ್ಹಾ ಮಾಡುವ ಅಗತ್ಯವಿಲ್ಲದೆ ಬಹು ವ್ಯವಸ್ಥಿತವಾಗಿ ಕೊರೋನ ಲಸಿಕೆಯನ್ನು ನೀಡಲು ಸಾಧ್ಯವಿದೆ.

ಆದರೆ ಪ್ರದರ್ಶನ ಪ್ರಿಯ, ಪ್ರಚಾರ ಪ್ರಿಯ, ಬೃಹತ್ ರೂಪ ಪ್ರಿಯ ವ್ಯವಸ್ಥೆಯು ಇದನ್ನು ಮಾಡಗೊಟ್ಟೀತೇ?

ಭಾರತದಲ್ಲಿ ಲಸಿಕೆಗಳ ಬಗ್ಗೆ ನಡೆದಿರುವ ಪರೀಕ್ಷೆಗಳ ವರದಿಗಳು ಇನ್ನೂ ಪ್ರಕಟವಾಗಿಲ್ಲದಿರುವುದರಿಂದ ಲಸಿಕೆಯ ಬಗ್ಗೆ ಏಳುತ್ತಿರುವ ಹಲವಾರು ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರಗಳು ಇಲ್ಲವಾಗಿವೆ. ಜೊತೆಗೆ, ಆರಂಭದಿಂದಲೇ ಮಾಡಿಕೊಂಡು ಬಂದ ಅಪಾರದರ್ಶಕ ನಿರ್ಧಾರಗಳು, ಪದೇ ಪದೇ ಬದಲಿಸುತ್ತಿರುವ ನಿಯಮಗಳು, ಸರಿಯಾದ ಯೋಜನೆಯಿಲ್ಲದೆ ಅಭಿಯಾನವನ್ನು ದೊಡ್ಡದಾಗಿಸುವುದಕ್ಕಷ್ಟೇ ನಡೆದ ಪ್ರಯತ್ನಗಳು ಎಲ್ಲವೂ ಲಸಿಕೆ ಅಭಿಯಾನಕ್ಕೆ ಸಮಸ್ಯೆಗಳನ್ನುಂಟು ಮಾಡಿವೆ. ಇವನ್ನು ಒಪ್ಪಿಕೊಂಡು ಸರಿಪಡಿಸಲು ಪ್ರಯತ್ನಿಸಬೇಕೇ ಹೊರತು ಅನ್ಯರನ್ನು ದೂಷಿಸುವುದರಿಂದ ಪರಿಹಾರ ದೊರೆಯದು.

Be the first to comment

Leave a Reply

Your email address will not be published.


*