ಎಪ್ಪತ್ತೆರಡನೇ ಬರಹ : ಸಂಧಿವಾತ ನಿವಾರಣೆಗೆ ಬೇಕು ಎಡೆಬಿಡದ ಚಿಕಿತ್ಸೆ [ಮಾರ್ಚ್ 18, 2015, ಬುಧವಾರ] [ನೋಡಿ | ನೋಡಿ]
ಸಂಧಿವಾತದಲ್ಲಿ ಹಲವು ನಮೂನೆಗಳಿದ್ದು, ನಿಖರ ಪತ್ತೆ ಹಾಗೂ ನಿರ್ದಿಷ್ಟ ಚಿಕಿತ್ಸೆಯಿಂದ ಗಂಭೀರ ಸಮಸ್ಯೆಗಳನ್ನೂ ತಡೆಯಬಹುದು
ಇಪ್ಪತ್ತೈದರ ಯುವಕನೊಬ್ಬನಿಗೆ ಐದು ವರ್ಷಗಳಿಂದ ತೀವ್ರ ಸಂಧಿ ನೋವು. ಮೊದಮೊದಲು ಕೈಕಾಲುಗಳ ಬೆರಳುಗಳಲ್ಲಿದ್ದ ನೋವು ಕ್ರಮೇಣವಾಗಿ ಮಂಡಿ, ಮೊಣಕೈ, ಭುಜಗಳಿಗೂ ವ್ಯಾಪಿಸಿತು. ಮೊದಲ ಒಂದೆರಡು ತಿಂಗಳು ಅದನ್ನು ಕಡೆಗಣಿಸಿದಾತ ಆಧುನಿಕ ವೈದ್ಯರ ಚಿಕಿತ್ಸೆ ಪಡೆಯಲಾರಂಭಿಸಿದ. ಎರಡು ವಾರಗಳಾದರೂ ನೋವು ಇಳಿಯಲಿಲ್ಲ. ನಗರದಲ್ಲಿದ್ದ ತಜ್ಞರನ್ನು ಕಂಡ. ಮತ್ತೆರಡು ವಾರ ಕಳೆಯಿತು, ನೋವು ಸ್ವಲ್ಪ ಇಳಿಯಿತಾದರೂ ವಾಸಿಯಾಗಲಿಲ್ಲ. ನೆರೆಮನೆಯವನೊಬ್ಬ “ಅಯ್ಯೋ, ಇದಕ್ಕೆಲ್ಲ ಇಂಗ್ಲಿಷ್ ಮದ್ದು ನಾಟುವುದಿಲ್ಲ, ಆಯುರ್ವೇದವೇ ಸರಿ” ಎಂದಾಗ ಅಲ್ಲಿಗೆ ಹೋದ. ಮೂರು ತಿಂಗಳಲ್ಲಿ ರೋಗ ಬಿಗಡಾಯಿಸಿತು. ಮಿತ್ರನೊಬ್ಬನ ಸಲಹೆಯಂತೆ ಹೋಮಿಯೋಪತಿಯೂ ಆಯಿತು. ಒಂದು ವರ್ಷದ ಬಳಿಕ ಮತ್ತೆ ಆಧುನಿಕ ತಜ್ಞರ ಬಳಿಗೆ ಹೋದ. ಕೈಬೆರಳುಗಳು ಅದಾಗಲೇ ಬಾಗದಷ್ಟು ಬೀಗಿದ್ದವು. ನಾಲ್ಕು ತಿಂಗಳ ಚಿಕಿತ್ಸೆಯ ಬಳಿಕ ತೃಪ್ತಿಯಾಗದೆ ಬದಲಿ ಚಿಕಿತ್ಸೆಯ ಮತ್ತೊಂದು ಸುತ್ತು ಆರಂಭವಾಯಿತು. ಹೀಗೆ ನಾಲ್ಕು ವರ್ಷಗಳಾಗುವಾಗ ಆತನ ಸಂಧಿಗಳೆಲ್ಲವೂ ಊದಿಕೊಂಡು, ಪೆಡಸಾದವು, ಕೈಕಾಲುಗಳು ಬಾಗದಂತಾದವು, ಕೂತಲ್ಲಿಂದ, ಮಲಗಿದಲ್ಲಿಂದ ಏಳುವುದಕ್ಕೂ ಅತಿ ದುಸ್ತರವಾಯಿತು. ಈಗ ಮತ್ತೆ ಆಧುನಿಕ ಚಿಕಿತ್ಸೆ ಆರಂಭವಾಗಿದೆ.
ಸಂಧಿವಾತದ ಸಮಸ್ಯೆಯುಳ್ಳ ಹೆಚ್ಚಿನವರು ಹೀಗೇ ಮಾಡುತ್ತಾರೆ. ತಮ್ಮ ನಿರೀಕ್ಷೆಯಂತೆ ಕೆಲವೇ ದಿನಗಳಲ್ಲಿ ರೋಗವು ಶಮನಗೊಳ್ಳದಿದ್ದರೆ ಅವರಿವರ ಸಲಹೆಗಳನ್ನು ಕೇಳಿ ಹತ್ತು ಹಲವು ಚಿಕಿತ್ಸೆಗಳನ್ನು ಪ್ರಯತ್ನಿಸುತ್ತಾರೆ, ಕೊನೆಗೆ ಎಲ್ಲ ವಿಧದ ಸಮಸ್ಯೆಗಳಿಗೆ ತುತ್ತಾಗಿ ನರಳುತ್ತಾರೆ.
ಸಂಧಿವಾತದಲ್ಲಿ ಹಲವು ವಿಧಗಳಿವೆ. ಕೆಲವು ಸಣ್ಣ ಸಂಧಿಗಳನ್ನೇ ಹೆಚ್ಚಾಗಿ ಕಾಡಿದರೆ, ಕೆಲವಲ್ಲಿ ದೊಡ್ಡ ಸಂಧಿಗಳು ಊದಿಕೊಳ್ಳುತ್ತವೆ, ಇನ್ನು ಕೆಲವು ಬೆನ್ನು, ಕುತ್ತಿಗೆ ಹಾಗೂ ಸೊಂಟದ ಸಂಧಿಗಳನ್ನು ಬಾಧಿಸುತ್ತವೆ. ಕೆಲವು ವಾತಗಳಲ್ಲಿ ಸಂಧಿಗಳಲ್ಲಷ್ಟೇ ಸಮಸ್ಯೆಯಿದ್ದರೆ ಇನ್ನು ಕೆಲವಲ್ಲಿ ದೇಹದ ಇನ್ನಿತರ ಅಂಗಗಳಿಗೂ ತೊಂದರೆಯಾಗುತ್ತದೆ. ಕೆಲವು ತನ್ನಿಂತಾನಾಗಿ ವಾಸಿಯಾದರೆ ಕೆಲವಕ್ಕೆ ವರ್ಷಗಟ್ಟಲೆ ಚಿಕಿತ್ಸೆಯ ಅಗತ್ಯವಿರುತ್ತದೆ.
ರುಮಟಾಯ್ಡ್ ಆರ್ಥ್ರೈಟಿಸ್ ಎಂಬ ಸಂಧಿವಾತವು ಹೆಚ್ಚು ಸಾಮಾನ್ಯವಾಗಿದ್ದು, ನಮ್ಮ ದೇಶದಲ್ಲಿ ನೂರಿನ್ನೂರು ಜನರಲ್ಲಿ ಒಬ್ಬರನ್ನು ಕಾಡುತ್ತದೆ. ಈ ಸಂಧಿವಾತವು 30-55 ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ, ಮಹಿಳೆಯರಲ್ಲಿ 2-3 ಪಟ್ಟು ಹೆಚ್ಚಿರುತ್ತದೆ. ಬೆನ್ನೆಲುಬು ಹಾಗೂ ಸೊಂಟದ ಮೂಳೆಗಳನ್ನು ಬಾಧಿಸುವ ಇನ್ನೊಂದು ಬಗೆಯ ವಾತವು ಸಾವಿರಕ್ಕೆ ಇಬ್ಬರಲ್ಲಿ ಕಂಡು ಬರುತ್ತದೆ, ಹೆಚ್ಚಾಗಿ 20-30ರ ವಯಸ್ಸಿನಲ್ಲಿ ಆರಂಭವಾಗುತ್ತದೆ ಮತ್ತು ಪುರುಷರಲ್ಲಿ ಹತ್ತು ಪಟ್ಟು ಹೆಚ್ಚಿರುತ್ತದೆ. ಇವೆರಡರಲ್ಲೂ ಸಂಧಿಗಳೇ ಹೆಚ್ಚು ತೊಂದರೆಗೀಡಾಗುತ್ತವೆ, ಅಪರೂಪಕ್ಕೊಮ್ಮೆ ಹೃದಯ, ಶ್ವಾಸಕೋಶ, ಮೂತ್ರಪಿಂಡಗಳಲ್ಲೂ ಸಮಸ್ಯೆಗಳುಂಟಾಗಬಹುದು. ವಯೋಸಹಜ ಸವೆತದಿಂದ ಮಂಡಿಗಳಲ್ಲಿ ನೋವುಂಟಾಗುವುದು ಬೇರೆಯೇ ಸಮಸ್ಯೆ; ಅದರಲ್ಲಿ ಬೇರೆ ಕೀಲುಗಳಾಗಲೀ, ಇನ್ನಿತರ ಅಂಗಗಳಾಗಲೀ ತೊಂದರೆಗೀಡಾಗುವುದಿಲ್ಲ.
ಸಂಧಿಗಳ ಜೊತೆಗೆ ದೇಹದ ಇತರ ಅಂಗಗಳಿಗೆ ತೊಂದರೆಯಾಗುವ ಕಾಯಿಲೆಗಳೂ ಇವೆ. ಇವುಗಳಲ್ಲಿ ಸಿಸ್ಟಮಿಕ್ ಲುಪಸ್ ಎರಿಥಿಮೆಟೊಸಸ್ (ಎಸ್ಎಲ್ಇ) ಎಂಬ ಕಾಯಿಲೆಯು ಹೆಚ್ಚು ಸಾಮಾನ್ಯವೂ, ಗಂಭೀರವೂ ಆಗಿದೆ. ಅದರಲ್ಲಿ ಸಂಧಿಗಳಲ್ಲದೆ ರಕ್ತನಾಳಗಳೂ ಹಾನಿಗೀಡಾಗಿ ಚರ್ಮ, ಮೂತ್ರಪಿಂಡಗಳು, ರಕ್ತಕಣಗಳು, ಹೃದಯ, ಮಿದುಳು ಮುಂತಾದ ಅಂಗಗಳಲ್ಲಿ ಗಂಭೀರ ಸಮಸ್ಯೆಗಳುಂಟಾಗಬಹುದು. ನಮ್ಮಲ್ಲಿ ಲಕ್ಷಕ್ಕೆ ಮೂವರಲ್ಲಿ ಈ ಕಾಯಿಲೆಯನ್ನು ಗುರುತಿಸಲಾಗುತ್ತಿದ್ದು, ಹೆಚ್ಚಿನವರು 15-45ರೊಳಗಿನ ಮಹಿಳೆಯರೇ ಆಗಿರುತ್ತಾರೆ. ಇದೇ ವಿಧದ ಇತರ ಕಾಯಿಲೆಗಳೂ ಇವೆ; ಕೆಲವು ರಕ್ತನಾಳಗಳನ್ನಷ್ಟೇ ಕಾಡುತ್ತವೆ, ಕೆಲವು ಚರ್ಮವನ್ನೇ ಹೆಚ್ಚಾಗಿ ಹಾನಿಗೊಳಿಸುತ್ತವೆ, ಜೊತೆಗೆ ಅನ್ನನಾಳವನ್ನೂ ಬಾಧಿಸುವ ವಿಧವೂ ಒಂದಿದೆ. ಹೀಗೆ, ಸಂಧಿಗಳನ್ನೂ, ರಕ್ತನಾಳಗಳನ್ನೂ, ದೇಹದ ಇತರ ಅಂಗಗಳನ್ನೂ ಬಗೆಬಗೆಯಾಗಿ ಬಾಧಿಸುವ ಹಲತರದ ರೋಗಗಳಿವೆ.
ಆದ್ದರಿಂದ ಸಂಧಿವಾತದ ಲಕ್ಷಣಗಳನ್ನು ಹೊಂದಿರುವವರನ್ನು ಸವಿವರವಾಗಿ ಪರೀಕ್ಷಿಸಿ, ಅವರಲ್ಲಿರಬಹುದಾದ ಇತರ ಸಮಸ್ಯೆಗಳನ್ನು ಗುರುತಿಸುವುದು ಅತಿ ಮುಖ್ಯವಾಗುತ್ತದೆ. ಕಾಯಿಲೆಯನ್ನು ನಿಖರವಾಗಿ ಗುರುತಿಸಬೇಕಾದರೆ ರೋಗಲಕ್ಷಣಗಳಿಗೆ ಅನುಗುಣವಾಗಿ ನಿರ್ದಿಷ್ಟವಾದ ರಕ್ತದ ಪರೀಕ್ಷೆಗಳನ್ನೂ ಮಾಡಬೇಕಾಗುತ್ತದೆ. ರೋಗದ ವಿಧವನ್ನು ಗುರುತಿಸಿದ ಬಳಿಕ ಅದಕ್ಕೆ ತಕ್ಕ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸಂಧಿನೋವುಳ್ಳ ಎಲ್ಲರಲ್ಲೂ ಒಂದೇ ವಿಧದ ರೋಗವಿರುವುದಿಲ್ಲ, ಚಿಕಿತ್ಸೆಯೂ ಒಂದೇ ಅಲ್ಲ.
ಸಂಧಿಗಳನ್ನೂ, ರಕ್ತನಾಳಗಳನ್ನೂ ಬಾಧಿಸುವ ಈ ಕಾಯಿಲೆಗಳೆಲ್ಲವೂ ದೇಹದ ರೋಗರಕ್ಷಣಾ ವ್ಯವಸ್ಥೆಯಲ್ಲಾಗುವ ಗೊಂದಲಗಳಿಂದ ಉಂಟಾಗುತ್ತವೆ. ದೇಹದ ಮೇಲಾಗುವ ಬಾಹ್ಯ ದಾಳಿಗಳನ್ನು ಗುರುತಿಸಿ, ಕೆಡಹಿ, ದೇಹವನ್ನು ಕಾಪಾಡುವ ರೋಗರಕ್ಷಣಾ ವ್ಯವಸ್ಥೆಯು ಗುರಿ ತಪ್ಪಿ ಸ್ವಂತ ಅಂಗಾಂಗಗಳಿಗೇ ಹಾನಿ ಮಾಡತೊಡಗುತ್ತದೆ. ಹೀಗಾಗುವುದಕ್ಕೆ ಹಲವು ಕಾರಣಗಳನ್ನು ಗುರುತಿಸಲಾಗಿದೆ.
ರೋಗರಕ್ಷಣಾ ವ್ಯವಸ್ಥೆಯು ಗೊಂದಲಗೊಳ್ಳುವ ಸ್ವಭಾವವು ಅನುವಂಶೀಯವಾಗಿ ಬರಬಹುದು. ಇದೇ ಕಾರಣಕ್ಕೆ ರುಮಟಾಯ್ಡ್ ಆರ್ಥ್ರೈಟಿಸ್, ಎಸ್ಎಲ್ಇ ಯಂತಹ ಕಾಯಿಲೆಗಳು ಕುಟುಂಬದ ಇತರರಲ್ಲೂ ಕಾಣಿಸಿಕೊಳ್ಳಬಹುದು. ಅಂಥವರಲ್ಲಿ ಸೂರ್ಯಕಿರಣಗಳು, ಸಿಗರೇಟಿನ ಹೊಗೆ, ಕೆಲವು ಔಷಧಗಳು, ವೈರಸ್ ಗಳು, ಬ್ಯಾಕ್ಟೀರಿಯಾಗಳು ಮುಂತಾದವು ರೋಗರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸಿದಾಗ ಕೆಲವು ಪ್ರತಿಕಾಯಗಳು ಹುಟ್ಟಿಕೊಂಡು, ದೇಹದ ಸ್ವಂತ ಜೀವಕಣಗಳ ವಿರುದ್ಧವೇ ದಾಳಿ ಮಾಡತೊಡಗುತ್ತವೆ. ಈ ಪ್ರತಿಕಾಯಗಳಿಂದ ಸಂಧಿಗಳು, ರಕ್ತನಾಳಗಳು ಹಾಗೂ ಇನ್ನಿತರ ಅಂಗಗಳಿಗೆ ಹಾನಿಯುಂಟಾಗಿ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ರೋಗಿಗಳ ರಕ್ತದಲ್ಲಿ ಇಂತಹಾ ಪ್ರತಿಕಾಯಗಳನ್ನು ಪರೀಕ್ಷಿಸುವ ಮೂಲಕ ರುಮಟಾಯ್ಡ್ ಆರ್ಥ್ರೈಟಿಸ್, ಎಸ್ಎಲ್ಇ ಯಂತಹ ಕಾಯಿಲೆಗಳನ್ನು ನಿಖರವಾಗಿ ಗುರುತಿಸುವುದಕ್ಕೆ ಸಾಧ್ಯವಾಗುತ್ತದೆ.
ಇತ್ತೀಚೆಗೆ, ನಮ್ಮ ಕರುಳೊಳಗಿರುವ ಶತಕೋಟಿಗಟ್ಟಲೆ ಸೂಕ್ಷ್ಮಾಣುಗಳಲ್ಲಿ ಏರುಪೇರಾದರೆ ಇಂತಹ ರೋಗಗಳಿಗೆ ಹೇತುವಾಗಬಹುದೆಂಬ ವರದಿಗಳು ಪ್ರಕಟವಾಗಿವೆ. ಶೇ. 75ರಷ್ಟು ರುಮಟಾಯ್ಡ್ ಆರ್ಥ್ರೈಟಿಸ್ ರೋಗಿಗಳ ಕರುಳಲ್ಲಿ ಪ್ರೆವೋಟೆಲ್ಲ ಕೋಪ್ರಿ ಎಂಬ ಬ್ಯಾಕ್ಟೀರಿಯಾವು ಹೆಚ್ಚಿ, ಬ್ಯಾಕ್ಟಿರಾಯ್ಡ್ಸ್ ಎಂಬ ಬ್ಯಾಕ್ಟೀರಿಯಾಗಳ ಸಂಖ್ಯೆಯು ಕಡಿಮೆಯಿರುವುದನ್ನು ಗುರುತಿಸಲಾಗಿದೆ [ಇಲೈಫ್, ನವೆಂಬರ್ 5, 2013]. ಸೂಕ್ಷ್ಮಾಣುಗಳಲ್ಲಾಗುವ ಈ ಏರುಪೇರುಗಳು ರೋಗರಕ್ಷಣಾ ವ್ಯವಸ್ಥೆಯ ಮೇಲೆ ಪ್ರಭಾವ ಬೀರಿ ವಿವಿಧ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ.
ಕಾಯಿಲೆಯ ವಿಧಕ್ಕೆ ಅನುಗುಣವಾಗಿ ಹಲತರದ ಚಿಕಿತ್ಸೆಗಳು ಆಧುನಿಕ ವೈದ್ಯವಿಜ್ಞಾನದಲ್ಲಿ ಲಭ್ಯವಿವೆ. ರೋಗಲಕ್ಷಣಗಳನ್ನು ಶಮನಗೊಳಿಸುವ ಔಷಧಗಳು, ಕಾಯಿಲೆಯನ್ನು ನಿಧಾನವಾಗಿ ಸಹಜ ಸ್ಥಿತಿಗೆ ಮಾರ್ಪಡಿಸುವ ಔಷಧಗಳು, ರೋಗರಕ್ಷಣಾ ವ್ಯವಸ್ಥೆಯನ್ನು ಅದುಮಿ ಪ್ರತಿಕಾಯಗಳ ಉತ್ಪಾದನೆಯನ್ನು ತಡೆಯುವ ಔಷಧಗಳು ಹಲವರ್ಷಗಳಿಂದ ಬಳಕೆಯಲ್ಲಿವೆ. ಇತ್ತೀಚೆಗೆ ರೋಗರಕ್ಷಣಾ ವ್ಯವಸ್ಥೆಯ ಕಣಗಳನ್ನು ಹಾಗೂ ಅವು ಬಿಡುಗಡೆಗೊಳಿಸುವ ಉರಿಯೂತಕಾರಿ ಸಂಯುಕ್ತಗಳನ್ನು ತಡೆಯಬಲ್ಲ ಹೊಸಬಗೆಯ ಔಷಧಗಳನ್ನು ಅಭಿವೃದ್ಧಿಪಡಿಸಲಾಗಿದೆ; ಆದರೆ ವಿಪರೀತ ವೆಚ್ಚ ಹಾಗೂ ಅಡ್ಡ ಪರಿಣಾಮಗಳಿಂದಾಗಿ ಅವುಗಳ ಬಳಕೆಯು ಸೀಮಿತವಾಗಿ ಉಳಿದಿದೆ.
ಆಧುನಿಕ ವೈದ್ಯವಿಜ್ಞಾನದಲ್ಲಿ ಲಭ್ಯವಿರುವ ಇಂತಹಾ ಚಿಕಿತ್ಸೆಯನ್ನು ದೀರ್ಘಕಾಲ, ನಿಯತವಾಗಿ, ವಿವೇಚನೆಯಿಂದ, ದಕ್ಷತೆಯಿಂದ ಬಳಸಿದರೆ ಹೆಚ್ಚಿನವರಲ್ಲಿ ರುಮಟಾಯ್ಡ್ ಆರ್ಥ್ರೈಟಿಸ್, ಎಸ್ಎಲ್ಇ ಯಂತಹ ಕಾಯಿಲೆಗಳನ್ನು ಚೆನ್ನಾಗಿ ನಿಯಂತ್ರಿಸುವುದಕ್ಕೆ ಹಾಗೂ ಮಾರಣಾಂತಿಕವಾಗದಂತೆ ತಡೆಯುವುದಕ್ಕೆ ಸಾಧ್ಯವಿದೆ. ಹಾಲು, ಸಕ್ಕರೆ, ಗೋಧಿ ಹಾಗೂ ಸಂಸ್ಕರಿತ ತಿನಿಸುಗಳ ಸೇವನೆಯನ್ನು ಕಡಿತಗೊಳಿಸಿದರೆ ಕರುಳಿನಲ್ಲಿ ರೋಗಕಾರಕ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ನಿಯಂತ್ರಿಸಲು ಸಹಾಯವಾಗುತ್ತದೆ.
ರುಮಟಾಯ್ಡ್ ಆರ್ಥ್ರೈಟಿಸ್ ನಂತಹ ಸಂಧಿವಾತಗಳಲ್ಲಾಗಲೀ, ಎಸ್ಎಲ್ಇ ಗಳಂತಹ ಕಾಯಿಲೆಗಳಲ್ಲಾಗಲೀ, ಮಂಡಿ ಸವೆತದ ನೋವಿಗಾಗಲೀ ಆಯುರ್ವೇದ, ಹೋಮಿಯೋಪತಿಗಳಂತಹ ಬದಲಿ ಚಿಕಿತ್ಸೆಗಳಿಂದ ಪ್ರಯೋಜನವಾಗುತ್ತದೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿಲ್ಲ. ಇಂಗ್ಲೆಂಡಿನ ಎಕ್ಸ್ ಟರ್ ವಿಶ್ವವಿದ್ಯಾಲಯದಲ್ಲಿ ಬದಲಿ ಪದ್ಧತಿಗಳ ಪ್ರಾಧ್ಯಾಪಕರಾಗಿರುವ ಇಡ್ಜಾರ್ಡ್ ಎರ್ನ್ಸ್ ಹೇಳುವಂತೆ (http://goo.gl/wkBRPu), ಈ ಕಾಯಿಲೆಗಳಲ್ಲಿ ಆಯುರ್ವೇದದ ಔಷಧಗಳ ಬಗ್ಗೆ ವಿಶ್ವಾಸಾರ್ಹ ಅಧ್ಯಯನಗಳು ಸಾಕಷ್ಟಿಲ್ಲ ಹಾಗೂ ರುಮಟಾಯ್ಡ್ ಆರ್ಥ್ರೈಟಿಸ್ ಚಿಕಿತ್ಸೆಯಲ್ಲಿ ಆಯುರ್ವೇದದ ಔಷಧಗಳು ಪರಿಣಾಮಕಾರಿಯೆಂದು ಹೇಳುವುದಕ್ಕೆ ಆಧಾರಗಳಿಲ್ಲ. ಆರ್ಥ್ರೈಟಿಸ್ ರೀಸರ್ಚ್ ಯುಕೆ ಪ್ರಕಟಿಸಿರುವ ವರದಿಯನುಸಾರ (http://goo.gl/wwC9Yx), ರುಮಟಾಯ್ಡ್ ಆರ್ಥ್ರೈಟಿಸ್ ಹಾಗೂ ಮಂಡಿಸವೆತದ ನೋವುಗಳಿಗೆ ಹೋಮಿಯೋಪತಿಯಂತಹ ಯಾವುದೇ ಬದಲಿ ಚಿಕಿತ್ಸೆಯಿಂದಲೂ ಪ್ರಯೋಜನವಾಗುವುದಿಲ್ಲ.
ಆದ್ದರಿಂದ ಸಂಧಿವಾತಗಳಿಂದ ಬಳಲುತ್ತಿರುವವರು ತಜ್ಞವೈದ್ಯರನ್ನು ಕಂಡು, ತಮ್ಮ ಸಮಸ್ಯೆಯ ನಿಜಸ್ವರೂಪವನ್ನು ಗುರುತಿಸಿಕೊಳ್ಳಬೇಕು ಹಾಗೂ ಸೂಕ್ತವಾದ ಚಿಕಿತ್ಸೆಯನ್ನು ಪಡೆಯಬೇಕು. ತಾಳ್ಮೆಗೆಟ್ಟು, ಅವರಿವರ ಸಲಹೆಗಳನ್ನು ಪಡೆದು ಅರ್ಧಂಬರ್ಧ ಚಿಕಿತ್ಸೆಯನ್ನು ಮಾಡಿದರೆ ರೋಗವು ಉಲ್ಬಣಗೊಂಡು ಸಂಧಿಗಳು ಊನಗೊಳ್ಳುವುದಕ್ಕೂ, ಮಾರಣಾಂತಿಕ ಸಮಸ್ಯೆಗಳಿಗೂ ದಾರಿಯಾಗಬಹುದು.
ಎಪ್ಪತ್ತೊಂದನೇ ಬರಹ : ಆರೋಗ್ಯ ವಿಮೆ ಇದ್ದರೂ ಕಷ್ಟ, ಇಲ್ಲದಿದ್ದರೂ ಕಷ್ಟ [ಮಾರ್ಚ್ 4, 2015, ಬುಧವಾರ] [ನೋಡಿ | ನೋಡಿ]
ಅತ್ಯಗತ್ಯವಾಗುತ್ತಿರುವ ಆರೋಗ್ಯ ವಿಮೆಯನ್ನು ವಿವೇಚನೆಯಿಂದ ಬಳಸುವ ಬಗ್ಗೆ ಎಲ್ಲರೂ ಯೋಚಿಸಬೇಕು
ವೈದ್ಯವೃತ್ತಿಯ ಅತಿ ನೂತನ ಆವಿಷ್ಕಾರಗಳನ್ನಾದರೂ ಅರೆದು ಜೀರ್ಣಿಸಿಕೊಳ್ಳಬಹುದು, ಆದರೆ ಆರೋಗ್ಯ ವಿಮೆಯ ಸಣ್ಣಕ್ಷರದ ಶರತ್ತುಗಳನ್ನು ಅರ್ಥೈಸಿಕೊಳ್ಳುವುದು ಕಷ್ಟ. ವೃತ್ತಿಪರತೆ, ಮಾನವೀಯ ಕಾಳಜಿ, ಸಾಮಾನ್ಯ ಜ್ಞಾನ, ಅನುಭವ, ತರ್ಕಗಳಾವುದಕ್ಕೂ ಅವು ನಿಲುಕುವುದಿಲ್ಲ.
ತುರ್ತು ಚಿಕಿತ್ಸೆಗೆ ಅತ್ಯಗತ್ಯವೆನಿಸಿದಾಗ ವಿಮೆ ದೊರೆಯುವುದಿಲ್ಲ, ಆದರೆ ಅನಗತ್ಯವಾದ ಶಸ್ತ್ರಚಿಕಿತ್ಸೆಗೆ ದೊರೆಯುತ್ತದೆ; ಕಡಿಮೆ ಖರ್ಚಿನಲ್ಲಿ, ಸುಲಭವಾಗಿ ಚಿಕಿತ್ಸೆ ನೀಡುವುದಕ್ಕೆ ವಿಮೆಯಿಲ್ಲ, ಅನಗತ್ಯವಾದ ದುಬಾರಿ ಚಿಕಿತ್ಸೆಗೆ ಉಂಟು. ಅನಿರೀಕ್ಷಿತವಾಗಿ ಕಾಯಿಲೆ ಬಂದಾಗ ಹೊರರೋಗಿಯಾಗಿ ಅಗತ್ಯ ಪರೀಕ್ಷೆಗಳನ್ನು ಮಾಡಿಸುವುದಕ್ಕೆ ವಿಮೆಯ ನೆರವಿಲ್ಲ, ರೋಗವೇ ಇಲ್ಲದಿದ್ದರೂ ಆಸ್ಪತ್ರೆಗೆ ದಾಖಲಿಸಿ ಅನಗತ್ಯ ಪರೀಕ್ಷೆಗಳನ್ನು ಮಾಡಿಸುವುದಕ್ಕೆ ಉಂಟು! ಯಾರಿಗೆ, ಯಾವಾಗ, ಯಾವುದಕ್ಕೆ ಈ ವಿಮಾ ಪಾವತಿಗಳು ಮಂಜೂರಾಗುತ್ತವೆ ಎನ್ನುವುದನ್ನು ಊಹಿಸುವುದಕ್ಕೆ ವಿಶೇಷ ಜ್ಞಾನವೇ ಬೇಕೇನೋ?!
ಇತ್ತೀಚಿಗೆ ಆರೋಗ್ಯ ವಿಮಾದಾರರ ಸಂಖ್ಯೆಯು ಹೆಚ್ಚುತ್ತಿದ್ದಂತೆ ಅದರ ಮಂಜೂರಾತಿಯ ಅನಿಶ್ಚಿತತೆಗಳೂ ಹೆಚ್ಚುತ್ತಿವೆ. ಅದರಿಂದಾಗಿ ರೋಗಿಗಳಿಗೂ, ವೈದ್ಯರಿಗೂ, ಆಸ್ಪತ್ರೆಗಳಿಗೂ ಬಗೆಬಗೆಯ ಕಷ್ಟಗಳಾಗುತ್ತಿವೆ, ಒಬ್ಬರನ್ನೊಬ್ಬರು ನಂಬದಂತಹ ಸನ್ನಿವೇಶಗಳುಂಟಾಗುತ್ತಿವೆ; ಅನಗತ್ಯ ಚಿಕಿತ್ಸೆಗಳಿಗೂ, ವಿನಾ ಕಾರಣ ಖರ್ಚಿಗೂ, ಥರಾವರಿ ವಂಚನೆಗಳಿಗೂ ಕಾರಣವಾಗುತ್ತಿವೆ. ಇವನ್ನೆಲ್ಲ ನಾಜೂಕಾಗಿ ನಿಭಾಯಿಸಬಲ್ಲ ‘ತಜ್ಞರೂ’ ಹುಟ್ಟತೊಡಗಿದ್ದಾರೆ: ವಿಮಾದಾರರಿಗೆ ನೆರವಾಗಲು ಏಜಂಟರು, ವಿಮೆಯ ಮಂಜೂರಾತಿಯನ್ನು ನಿಭಾಯಿಸುವ ಆಸ್ಪತ್ರೆಗಳ ವಿಶೇಷಾಧಿಕಾರಿಗಳು, ವಿಮಾದಾರರು ಹಾಗೂ ವಿಮಾ ಕಂಪೆನಿಗಳ ನಡುವಿನ ಮೂರನೇ ಆಡಳಿತಗಾರರು ಇತ್ಯಾದಿ. ಕಂತು ಕಟ್ಟಿದವನಿಗೆ ವಿಮೆಯು ದಕ್ಕಬೇಕಾದರೆ ಇಂಥವರೆಲ್ಲರ ರಾಗ-ತಾಳಗಳು ಮೇಳೈಸಬೇಕಾಗುತ್ತದೆ.
ಇವರೆಲ್ಲರೂ ಪರಸ್ಪರ ವಿರುದ್ಧವಾಗಿ ಜಗ್ಗುವುದರಿಂದಲೇ ಆರೋಗ್ಯ ವಿಮೆಯಲ್ಲಿ ಗೊಂದಲಗಳಾಗುತ್ತಿವೆ. ವಿಮಾದಾರರು ತಾವು ಕೊಟ್ಟ ಕಂತಿಗೆ ಲಾಭವಾಗಬೇಕೆಂದು ಅನಗತ್ಯವಾದ ಪರೀಕ್ಷೆ-ಚಿಕಿತ್ಸೆಗಳಿಗೆ ಮುಂದಾಗುತ್ತಾರೆ; ಕೆಲವರಂತೂ ಆಸ್ಪತ್ರೆಗಳೊಡನೆ ಶಾಮೀಲಾಗಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ವಿಮೆ ಪಡೆಯಲೆಳಸುತ್ತಾರೆ. ವೈದ್ಯರು ಹಾಗೂ ಆಸ್ಪತ್ರೆಗಳು ವಿಮೆಯಿದ್ದವರಿಗೆ ಅನಗತ್ಯ ಪರೀಕ್ಷೆ-ಚಿಕಿತ್ಸೆಗಳನ್ನು ನಡೆಸುವುದು, ದುಪ್ಪಟ್ಟು (ಇನ್ನೂ ಹೆಚ್ಚು) ಶುಲ್ಕ ವಿಧಿಸುವುದು ಸಾಮಾನ್ಯವಾಗುತ್ತಿದೆ. ದೊಡ್ಡ ವಿಮೆಯಿಲ್ಲದ ರೋಗಿಗಳನ್ನು ಒಳ ಸೇರಿಸಿಕೊಳ್ಳದ ದೊಡ್ಡ ಆಸ್ಪತ್ರೆಗಳೂ ಇವೆ. ವಿಮಾ ಕಂಪೆನಿಗಳಿಗೆ ಇವನ್ನೆಲ್ಲ ನಿಭಾಯಿಸುವುದು ಕಷ್ಟವಾಗಿದೆ, ಹಾಗಾಗಿ ಮೂರನೇ ಆಡಳಿತಗಾರರ (ಟಿಪಿಎ) ಪ್ರವೇಶವಾಗಿದೆ.
ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್ ಡಿಎ) ನಿಯಮದಡಿಯಲ್ಲಿ ಈಗ 30ರಷ್ಟು ಟಿಪಿಎಗಳು ಕಾರ್ಯನಿರ್ವಹಿಸುತ್ತಿವೆ. ಆರೋಗ್ಯ ವಿಮೆಯ ಕಂತನ್ನು ಸ್ವೀಕರಿಸಿದ ವಿಮಾ ಕಂಪೆನಿಗಳು ವಿಮಾದಾರನ ಎಲ್ಲ ವಿವರಗಳನ್ನೂ ಈ ಟಿಪಿಎಗಳಿಗೆ ಒದಗಿಸುತ್ತವೆ. ಟಿಪಿಎಗಳು ವಿಮಾದಾರರಿಗೆ ಕಾರ್ಡುಗಳನ್ನು ನೀಡಿ, ತಮ್ಮ ಮಾನ್ಯತೆಯಿರುವ ಹಾಗೂ ಪ್ರಾಶಸ್ತ್ಯವಿರುವ ಆಸ್ಪತ್ರೆಗಳ ಪಟ್ಟಿಯನ್ನೂ ಒದಗಿಸುತ್ತವೆ. ನಗದಿಲ್ಲದೆ ಚಿಕಿತ್ಸೆ ಪಡೆಯುವುದನ್ನು ಅಥವಾ ಚಿಕಿತ್ಸೆಯ ನಂತರ ಮರುಪಾವತಿ ಮಾಡುವುದನ್ನು ಈ ಟಿಪಿಎಗಳೇ ನಿರ್ಧರಿಸುವುದರಿಂದ ವಿಮಾದಾರನು ಟಿಪಿಎಯನ್ನೇ ಸಂಪರ್ಕಿಸಬೇಕಾಗುತ್ತದೆ. ಮಾನ್ಯತೆ ಪಡೆದಿರುವ ಟಿಪಿಎಗಳ ಎಲ್ಲ ವಿವರಗಳು ಐಆರ್ ಡಿಎ ತಾಣದಲ್ಲಿ (http://goo.gl/oIZAjE) ಲಭ್ಯವಿವೆ.
ವಿಮಾದಾರರು ತಾವು ದಾಖಲಾಗುತ್ತಿರುವ ಆಸ್ಪತ್ರೆಯ ಮೂಲಕ ಅಥವಾ ತಾವೇ ನೇರವಾಗಿ ಟಿಪಿಎಯನ್ನು ಸಂಪರ್ಕಿಸಿ ವಿಮೆಯನ್ನು ಮಂಜೂರು ಮಾಡಿಸಿಕೊಳ್ಳಬಹುದು. ನಗದಿಲ್ಲದೆ ಚಿಕಿತ್ಸೆಯನ್ನು ಪಡೆಯುವಾಗ 24 ಗಂಟೆಗಳಲ್ಲಿ, ಹಾಗೂ ಚಿಕಿತ್ಸೆಯ ನಂತರ ಮರುಪಾವತಿಯನ್ನು ಪಡೆಯುವುದಿದ್ದರೆ 3 ವಾರಗಳಲ್ಲಿ ವಿಮೆ ಮಂಜೂರಾಗಬೇಕು. ಆದರೆ ಐಆರ್ ಡಿಎ ವರದಿಯನುಸಾರ ಶೇ. 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಿಮೆ ಮಂಜೂರಾತಿಯು 6 ತಿಂಗಳಿಗೂ ಹೆಚ್ಚು ತಡವಾಗುತ್ತಿದೆ. ಟಿಪಿಎಗಳ ಬಗ್ಗೆ ವಿಮಾದಾರರಷ್ಟೇ ಅಲ್ಲ, ವೈದ್ಯರು, ಆಸ್ಪತ್ರೆಗಳು ಹಾಗೂ ವಿಮಾ ಕಂಪೆನಿಗಳು ಕೂಡ ಅತೃಪ್ತರೆಂದು ಹಲವು ವರದಿಗಳಿವೆ. ಅದಕ್ಕಾಗಿ ಕೆಲವು ವಿಮಾ ಕಂಪೆನಿಗಳು ತಮ್ಮದೇ ಟಿಪಿಎಯನ್ನು ನಿಯುಕ್ತಿಗೊಳಿಸಿವೆ, ಇನ್ನು ಕೆಲವು ಟಿಪಿಎ ನೆರವಿಲ್ಲದೆ ತಾವೇ ವಿಮೆ ಮಂಜೂರಾತಿಯ ನಿರ್ಣಯಗಳನ್ನು ಕೈಗೊಳ್ಳುತ್ತಿವೆ. ವಿಮಾದಾರರಿಗೆ ಮತ್ತು ಆಸ್ಪತ್ರೆಗಳಿಗೆ ಅಲ್ಲೂ ಕಷ್ಟ-ನಷ್ಟಗಳೇ.
ಹಾಗಿದ್ದರೂ ವರ್ಷದಿಂದ ವರ್ಷಕ್ಕೆ ಆರೋಗ್ಯ ವಿಮಾದಾರರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಹಲತರದ ವೈಯಕ್ತಿಕ ಆರೋಗ್ಯ ವಿಮೆಗಳಲ್ಲದೆ, ಕಾರ್ಮಿಕರು ಹಾಗೂ ಸರಕಾರಿ ನೌಕರರ ಕಡ್ಡಾಯ ಆರೋಗ್ಯ ವಿಮೆಗಳು, ಆರೋಗ್ಯ ಶ್ರೀ, ಯಶಸ್ವಿನಿ ಮುಂತಾದ ಸಾಮುದಾಯಿಕ ವಿಮಾ ಯೋಜನೆಗಳು ನಮ್ಮಲ್ಲಿ ಲಭ್ಯವಿವೆ; ಒಂದು ಅಂದಾಜಿನಂತೆ ಶೇ. 45ಕ್ಕೂ ಹೆಚ್ಚಿನ ಜನರು ಒಂದಲ್ಲೊಂದು ಆರೋಗ್ಯ ವಿಮೆಯನ್ನು ಹೊಂದಿರುತ್ತಾರೆ. ಕಳೆದ ವರ್ಷ ಸುಮಾರು ಶೇ. 7ರಷ್ಟು ಜನರು ವೈಯಕ್ತಿಕ ವಿಮೆಯನ್ನು ಪಡೆದು, ಕಂತಿನ ಮೌಲ್ಯವು ರೂ. 20000 ಕೋಟಿಗಳಷ್ಟಿರಬಹುದೆಂದು ಅಂದಾಜಿಸಲಾಗಿದೆ.
ಅಮೆರಿಕದಂತಹ ದೇಶಗಳಲ್ಲಿ ವಿಮಾಧಾರಿತ ಆರೋಗ್ಯ ಸೇವೆಗಳು ವಿಪರೀತ ದುಬಾರಿಯಾಗಿ ವಿಫಲಗೊಳ್ಳುತ್ತಿರುವಲ್ಲಿ ಸರಕಾರಿ ಆರೋಗ್ಯ ಸೇವೆಗಳು ಬಲಿಷ್ಠವಾಗಿರುವ ದೇಶಗಳಲ್ಲಿ ಜನರ ಆರೋಗ್ಯ ಮಟ್ಟವು ಅತ್ಯುತ್ತಮವಾಗಿದೆ. ಆದರೆ ನಮ್ಮವರಿಗಿದು ಕಾಣುವುದಿಲ್ಲ. ನಮ್ಮ ಸರಕಾರಗಳು ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಮುಗಿಸಿ, ಅಳಿದುಳಿದವನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೂ, ವಿಮಾ ಕಂಪೆನಿಗಳಿಗೂ ಹೊರಗುತ್ತಿಗೆ ನೀಡತೊಡಗಿವೆ. ಕೇಂದ್ರದ ಹೊಸ ಆಯವ್ಯಯದಲ್ಲಿ ಆರೋಗ್ಯ ಸೇವೆಗಳ ಅನುದಾನವನ್ನು ಕಡಿತಗೊಳಿಸಲಾಗಿದೆ, ವೈಯಕ್ತಿಕ ಆರೋಗ್ಯ ವಿಮೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಹೀಗೆ, ಸರಕಾರಿ ಆರೋಗ್ಯ ಸೇವೆಗಳನ್ನು ನಿರ್ಲಕ್ಷಿಸಿ, ವಿಮಾಧಾರಿತ ಖಾಸಗಿ ಆರೋಗ್ಯ ಸೇವೆಗಳನ್ನು ಉತ್ತೇಜಿಸಿದಂತಾಗಿದೆ. ಅತ್ತ ಖಾಸಗಿ ಆಸ್ಪತ್ರೆಗಳಲ್ಲಿ ವಿಮಾಧಾರಿತ ಸೇವೆಗಳು ಬೆಳೆದಂತೆ ಚಿಕಿತ್ಸೆಯ ವೆಚ್ಚವು ಹೆಚ್ಚಿ, ವಿಶ್ವಾಸಾರ್ಹತೆಯು ಕಡಿಮೆಯಾಗುತ್ತಿದೆ; ವಿಮೆಯಿಲ್ಲದವರೂ ಅದರಿಂದ ಬಾಧಿತರಾಗುತ್ತಿದ್ದಾರೆ. ಆರೋಗ್ಯ ವಿಮೆಯಿಂದ ಸುಖವಿಲ್ಲ, ವಿಮೆಯಿಲ್ಲದೆ ಅನ್ಯ ಗತಿಯಿಲ್ಲ ಎಂಬ ದುಸ್ಥಿತಿ ನಮ್ಮ ಮುಂದಿದೆ.
ಆರೋಗ್ಯ ವಿಮೆಯನ್ನು ಕೊಳ್ಳುವಾಗ ವ್ಯಕ್ತಿಯ ವಯಸ್ಸು, ಅದಾಗಲೇ ಇರುವ ಸಮಸ್ಯೆಗಳು, ವಾಸಸ್ಥಳ ಇತ್ಯಾದಿ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಸಣ್ಣ ನಗರಗಳಲ್ಲಾದರೆ ಒಬ್ಬನ ಚಿಕಿತ್ಸೆಗೆ ಕನಿಷ್ಠ ರೂ. 30-50 ಸಾವಿರದಷ್ಟು, ಮಹಾನಗರಗಳಲ್ಲಿ ಒಬ್ಬನಿಗೆ ರೂ. ಒಂದು ಲಕ್ಷದಷ್ಟು ವಿಮೆಯನ್ನು ಮಾಡಿಸಿಕೊಳ್ಳುವುದೊಳ್ಳೆಯದು; ಕುಟುಂಬದ ಎಲ್ಲರನ್ನೂ ಒಳಗೊಳ್ಳುವ ವಿಮೆಯನ್ನೂ ಪಡೆಯಬಹುದು. ವಿಮಾದಾರನ ವಯಸ್ಸಿಗೆ ಅನುಗುಣವಾಗಿ ಕಂತಿನ ಮೌಲ್ಯವೂ ಭಿನ್ನವಾಗಿದ್ದು, ಸಾಧಾರಣವಾಗಿ ವಿಮೆಯ ಮೊತ್ತದ ಶೇ.1 ರಿಂದ 5ರಷ್ಟನ್ನು ನೀಡಬೇಕಾಗುತ್ತದೆ ಹಾಗೂ ಪ್ರತಿ ವರ್ಷವೂ ಅದನ್ನು ನವೀಕರಿಸಬೇಕಾಗುತ್ತದೆ.
ಆರೋಗ್ಯ ವಿಮೆಯನ್ನು ಬಹು ವಿವೇಚನೆಯಿಂದ ಬಳಸಬೇಕು. ವಿಮೆ ಪಡೆದ ಕಾರಣಕ್ಕೆ ಅದನ್ನು ಅನಗತ್ಯವಾಗಿ ಬಳಸಿಕೊಳ್ಳಬಾರದು. ಹಾಗೆಯೇ, ವಿಮೆಯ ಮೊತ್ತವನ್ನು ಒಮ್ಮೆಗೇ ಮುಗಿಸುವ ಅತ್ಯುತ್ಸುಕತೆಯೂ ಇರಬಾರದು. ವೈದ್ಯರು ಹಾಗೂ ಆಸ್ಪತ್ರೆಗಳು ಪರೀಕ್ಷೆ ಯಾ ಚಿಕಿತ್ಸೆಯ ಬಗ್ಗೆ ನಿರ್ಧರಿಸುವಾಗ ವಿಮೆಯಿಂದ ಪ್ರಭಾವಿತರಾಗದಂತೆ ನೋಡಿಕೊಂಡರೆ ಒಳ್ಳೆಯದು.
ಸರಕಾರದ ಹಾಗೂ ಸಾಮುದಾಯಿಕ ವಿಮೆಗಳು ಕೆಲ ವರ್ಗಗಳ ಜನರಿಗೆ, ಕೆಲವು ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಕೆಲಬಗೆಯ ಚಿಕಿತ್ಸೆಯ ವೆಚ್ಚವನ್ನಷ್ಟೇ ಭರಿಸುತ್ತವೆ. ಅಪಘಾತಗಳಂತಹ ತುರ್ತು ಸ್ಥಿತಿಗಳಿಗೆ, ಅತ್ಯಂತ ಸಾಮಾನ್ಯವಾಗಿರುವ ಸೋಂಕು ರೋಗಗಳಿಗೆ ಅವು ನೆರವಾಗುವುದಿಲ್ಲ; ಮಾತ್ರವಲ್ಲ, ಆಸ್ಪತ್ರೆಗಳಲ್ಲಾಗುವ ಚಿಕಿತ್ಸೇತರ ವೆಚ್ಚಗಳನ್ನೂ ಅವು ನೀಡುವುದಿಲ್ಲ. ವೈಯಕ್ತಿಕ ವಿಮೆಗಳಲ್ಲೂ ಕೆಲವು ಶರತ್ತುಗಳಿರುತ್ತವೆ; ಅಪಘಾತಗಳ ಚಿಕಿತ್ಸೆಗೆ ವಿಮೆ ಪಡೆದಂದಿನಿಂದಲೇ ಅವಕಾಶವಿರುತ್ತದೆ, ಹೊಸ ಸಮಸ್ಯೆಗಳಿಗೆ ತಿಂಗಳ ನಂತರ ವಿಮೆ ದೊರೆಯುತ್ತದೆ, ಆದರೆ ಮೊದಲೇ ಇದ್ದ ಕಾಯಿಲೆಗಳ ಚಿಕಿತ್ಸೆಗೆ ಒಂದರಿಂದ ನಾಲ್ಕು ವರ್ಷಗಳ ನಿರಂತರ ವಿಮೆಯ ಬಳಿಕವಷ್ಟೇ ಅವಕಾಶವಿರುತ್ತದೆ. ಹಲವು ಪರೀಕ್ಷೆ-ಚಿಕಿತ್ಸೆಗಳಿಗೆ ಇಂತಿಷ್ಟೇ ವಿಮೆಯೆಂಬ ನಿರ್ಬಂಧವಿರುತ್ತದೆ, ಕೆಲವೊಮ್ಮೆ ನಿರ್ದಿಷ್ಟ ಆಸ್ಪತ್ರೆಗಳಿಗೆ ಪ್ರಾಶಸ್ತ್ಯವಿರುತ್ತದೆ. ಒಟ್ಟಿನಲ್ಲಿ ಸಾವಿರಾರು ರೂಪಾಯಿ ಕೊಟ್ಟು ಆರೋಗ್ಯ ವಿಮೆಯನ್ನು ಪಡೆದುಕೊಂಡರೂ ಅದರ ಶರತ್ತುಗಳಿಗೆ ಅನುಸಾರವಾಗಿಯೇ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ, ಅವಕ್ಕೆ ಹೊರತಾದ ಚಿಕಿತ್ಸೆಗಳಿಗೆ ಕಿಸೆಯಿಂದಲೇ ಖರ್ಚು ಮಾಡಬೇಕಾಗುತ್ತದೆ.
ನಮ್ಮ ದೇಶದ ಬಹು ಪಾಲು ಜನರನ್ನು, ವಿಶೇಷವಾಗಿ ಮಕ್ಕಳನ್ನು, ಕಾಡುತ್ತಿರುವ ಅಪೌಷ್ಟಿಕತೆ ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಅಥವಾ ಸರಿಪಡಿಸಲು ಯಾವ ಬಗೆಯ ಆರೋಗ್ಯ ವಿಮೆಯಿಂದಲೂ ಸಾಧ್ಯವಿಲ್ಲ. ಮನೋರೋಗಿಗಳು, ದೀರ್ಘಕಾಲೀನ ಕಾಯಿಲೆಗಳುಳ್ಳವರು, ಎಚ್ ಐವಿ ಪೀಡಿತರು, ವಯೋವೃದ್ಧರು ಮುಂತಾದವರ ಚಿಕಿತ್ಸೆಯು ಕಷ್ಟಕರವೂ, ವೆಚ್ಚದಾಯಕವೂ ಆಗಿದ್ದು, ವಿಮೆಯ ಬೆಂಬಲ ದೊರೆಯುವುದಿಲ್ಲ. ಆದ್ದರಿಂದ ಕೆಲವೇ ಜನರಿಗೆ, ಕೆಲವೇ ಸಮಸ್ಯೆಗಳಿಗೆ ಸ್ವಲ್ಪ ಮಟ್ಟಿಗೆ ನೆರವಾಗಬಲ್ಲ ಆರೋಗ್ಯ ವಿಮೆಯಿಂದ ದೇಶವಾಸಿಗಳ ಆರೋಗ್ಯವರ್ಧನೆಯಾಗುತ್ತದೆ ಎಂದು ನಂಬಿ ಕುಳಿತರೆ ಕಷ್ಟ ತಪ್ಪಿದ್ದಲ್ಲ.
ಎಪ್ಪತ್ತನೇ ಬರಹ : ಆರೋಗ್ಯ ಸಚಿವರಿಗೆ ಫ್ಲೂ ವೈರಸ್ ನ ಪತ್ರ [ಫೆಬ್ರವರಿ 18, 2015, ಬುಧವಾರ] [ನೋಡಿ | ನೋಡಿ]
ನನ್ನ ಬಗ್ಗೆ ಭಯ ಉಂಟು ಮಾಡುವ ಬದಲು ಅಪೌಷ್ಟಿಕತೆ, ಕ್ಷಯ, ಮಲೇರಿಯಾಗಳತ್ತ ಗಮನ ಹರಿಸುವುದು ಒಳಿತು
ಮಾನ್ಯ ಆರೋಗ್ಯ ಸಚಿವರಿಗೆ ಎಚ್1ಎನ್1 ಫ್ಲೂ ವೈರಸ್ ನ ಶುಭಾಶಯಗಳು. ತಾವು ನನ್ನಂಥ ಸೂಕ್ಷ್ಮಾತಿಸೂಕ್ಷ್ಮ ಜೀವಿಯ ಬಗ್ಗೆ ಹೆದರಿಕೊಂಡು, ರಾಜ್ಯದ ಜನಸಮಸ್ತರನ್ನು ಹೆದರಿಸತೊಡಗಿರುವುದನ್ನು ಗಮನಿಸಿ ಈ ಪತ್ರವನ್ನು ಬರೆಯುತ್ತಿದ್ದೇನೆ.
ಮೊತ್ತ ಮೊದಲು, ನನ್ನನ್ನು ಹಂದಿಜ್ವರದ ವೈರಸ್ ಎಂದು ಕರೆಯಬಾರದೆಂದು ಕೇಳಿಕೊಳ್ಳುತ್ತೇನೆ. ನಾನು ಹಂದಿಗಳಲ್ಲಿ ಜ್ವರವನ್ನು ಉಂಟು ಮಾಡುವುದಿಲ್ಲ, ಹಂದಿಗಳು ಅಥವಾ ಅವುಗಳ ಮಾಂಸದ ಮೂಲಕ ಮನುಷ್ಯರನ್ನು ಸೋಂಕುವುದಿಲ್ಲ, ಹಂದಿ ಮಾಂಸ ತಿನ್ನುವವರೂ ನನ್ನ ಬಗ್ಗೆ ಹೆದರಬೇಕಾಗಿಲ್ಲ.
ನನ್ನ ಹೆಸರಿನ ಬಗ್ಗೆ ಗೊಂದಲ ಉಂಟು ಮಾಡಿರುವುದೆಲ್ಲ ನೀವೇ, ಮನುಷ್ಯರೇ. ಎಪ್ರಿಲ್ 2009ರಲ್ಲಿ ಅಮೆರಿಕದ ಕೆಲವರಲ್ಲಿ ನನ್ನಂಥವರನ್ನು ಮೊದಲು ಗುರುತಿಸಿದಾಗ, ಅದೆಲ್ಲೋ ಹಂದಿಯೊಳಗೆ ಹುಟ್ಟಿರಬಹುದೆಂದು ತರ್ಕಿಸಿ ಹಂದಿ ಜ್ವರದ ವೈರಸ್ ಅಂತ ಹೆಸರಿಟ್ಟಿರಿ, ನಂತರ ಹೊಸ ಎಚ್1ಎನ್1 ಅಂತ ಮಾಡಿದಿರಿ, ಮತ್ತೆ 2009ರ ಜಗದ್ವ್ಯಾಪಿ ಎಚ್1ಎನ್1 ಅಂತ ಬದಲಿಸಿದಿರಿ. ಈಗ ಮತ್ತೆ ಹಂದಿ ಫ್ಲೂ ಅಂತ ಕರೆದು ಹಂದಿ ಮಾಂಸದೊಂದಿಗೆ ಗಂಟು ಹಾಕುತ್ತಿದ್ದೀರಿ. ನಿಮ್ಮ ಈ ಅವಸ್ಥೆಗೆ ಜೋರಾಗಿ ನಗಬೇಕು ಅನಿಸುತ್ತಿದೆ, ಆದರೆ ಸೂಕ್ಷ್ಮಾಣುವಾಗಿರುವುದರಿಂದ ನಗಲಾಗುತ್ತಿಲ್ಲ.
ನಾನು 2009ರಲ್ಲಿ ಹೊಸದಾಗಿ ಹುಟ್ಟಲಿಲ್ಲ. ಆರೇಳು ವರ್ಷಗಳಿಗೊಮ್ಮೆ ವೇಷ ಬದಲಿಸಿಕೊಳ್ಳುವುದು, ಕೋಟಿಗಟ್ಟಲೆ ಮನುಷ್ಯರನ್ನು ಸೋಂಕುವುದು ನನ್ನ ಎಂದಿನ ಅಭ್ಯಾಸ; 2009ರಲ್ಲೂ ಹಾಗೇ ಮಾಡಿದೆ. (ನೀವೂ ಕೆಲವರು ಐದು ವರ್ಷಗಳಿಗೊಮ್ಮೆ ಹೊಸ ವೇಷ ತೊಟ್ಟು ಕೋಟಿಗಟ್ಟಲೆ ಜನರನ್ನು ಕಾಡುವುದಿಲ್ಲವೇ?) ನನ್ನಿಂದ ಸೋಂಕಿತರಾದವರಲ್ಲಿ ಶೇ. 99.6ರಷ್ಟು ಜನ ಯಾವುದೇ ಚಿಕಿತ್ಸೆಯಿಲ್ಲದೆ, ಯಾವುದೇ ಸಮಸ್ಯೆಗಳಾಗದೆ ಗುಣಮುಖರಾಗುತ್ತಾರೆ. ಕೆಲವೇ ಕೆಲವರು ಸೋಂಕನ್ನು ತಡೆಯಲಾಗದೆ ತೀವ್ರ ಕಷ್ಟಗಳಿಗೀಡಾಗುತ್ತಾರೆ, ತಜ್ಞವೈದ್ಯರ ಶ್ರಮವೆಲ್ಲವೂ ವಿಫಲವಾದರೆ ಸಾವನ್ನಪ್ಪುತ್ತಾರೆ.
ನನ್ನಿಂದಾಗಿ ಹಲವರು ಸಾಯುತ್ತಿದ್ದಾರೆಂದು ಪ್ರಚಾರ ಮಾಡುತ್ತಿರುವುದರಲ್ಲಿ ಅದೇನೋ ಕುತಂತ್ರವಿದೆ. ಆರು ವರ್ಷಗಳ ಹಿಂದೆ ನನ್ನನ್ನು ಮೊದಲ ಬಾರಿಗೆ ಗುರುತಿಸಿದಾಗಲೂ ಹೀಗೇ ಭಯೋತ್ಪಾದನೆ ಮಾಡಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯೂ ಅದರಲ್ಲಿ ಭಾಗಿಯಾಗಿತ್ತು. ಹಿಂದೆ 1918ರಲ್ಲಿ ಸ್ಪೇನ್ ನಿಂದ ಹರಡಿದ್ದ ಫ್ಲೂ 50 ಕೋಟಿ ಜನರನ್ನು ಸೋಂಕಿ, 5-10 ಕೋಟಿ ಜನರನ್ನು ಕೊಂದಿತ್ತು, ಈ ಹೊಸ ಫ್ಲೂ ಕೂಡ ಭೂಲೋಕವಿಡೀ ಹರಡಿ ಕೋಟಿಗಟ್ಟಲೆ ಜನರನ್ನು ಕೊಲ್ಲಲಿದೆ ಎಂದು ಕೆಲ ತಜ್ಞರು ಹೆದರಿಸಿದ್ದರು. ಹೋದಲ್ಲಿ, ಬಂದಲ್ಲಿ ತಪಾಸಣೆಗಳಾಗಿದ್ದವು. ಆದರೆ ಆ ಭೀತಿ ಸುಳ್ಳಾಯಿತು. ಮೊದಲ ವರ್ಷದಲ್ಲಿ ಕೋಟಿಗಟ್ಟಲೆ ಜನರಿಗೆ ಸೋಂಕು ತಗಲಿತಾದರೂ, ಸತ್ತವರ ಸಂಖ್ಯೆಯು ಬಹು ಕಡಿಮೆಯಿತ್ತು. ಬಿಎಂಜೆ [2009;339:ಬಿ5213] ಹಾಗೂ ಲಾನ್ಸೆಟ್ [2012;12(9):687] ಗಳಲ್ಲಿ ಪ್ರಕಟವಾಗಿರುವ ಅಧ್ಯಯನಗಳನುಸಾರ ಸ್ಪೇನಿನ ಫ್ಲೂನಲ್ಲಿ ಸಾವಿನ ಪ್ರಮಾಣವು ಶೇ. 2-3ರಷ್ಟಿದ್ದರೆ, ಹೊಸ ಫ್ಲೂ ಸೋಂಕಿನಲ್ಲಿ ಅದು ಕೇವಲ ಶೇ. 0.03 (ಲಕ್ಷ ಸೋಂಕಿತರಲ್ಲಿ 30) ರಷ್ಟಿತ್ತು. ಶೇ. 70ರಷ್ಟು ಮೃತರು ಮೊದಲೇ ಅಸ್ತಮಾ, ಮಧುಮೇಹ, ಬೊಜ್ಜು ಇತ್ಯಾದಿಗಳಿಂದ ಬಳಲುತ್ತಿದ್ದವರಾಗಿದ್ದರು. ವಿಶ್ವದಲ್ಲಿ ಪ್ರತೀ ವರ್ಷ 2-5 ಲಕ್ಷ ಜನರು ಫ್ಲೂ ಸೋಂಕಿಗೂ, 1.8 ಕೋಟಿ ಜನ ಇನ್ನಿತರ ಸೋಂಕುಗಳಿಗೂ ಬಲಿಯಾಗುತ್ತಿರುತ್ತಾರೆ [ಲಾನ್ಸೆಟ್ 2015;385(9963):117]. ಹಾಗಿರುವಾಗ ಫ್ಲೂ ಸೋಂಕನ್ನಷ್ಟೇ ಎತ್ತಿ ತೋರಿಸಿ ಬೆದರಿಸುವುದೇಕೆ?
ನಿಮ್ಮೀ ವರದಿಗಳು ಅಪ್ರಾಮಾಣಿಕವಾಗಿವೆ, ಹಸಿಹುಸಿಯಾಗಿವೆ. ನೂರಿನ್ನೂರು ಜನರಿಗೆ ಸೋಂಕು ತಗಲಿ ಹತ್ತಿಪ್ಪತ್ತು ಜನ ಸಾವನ್ನಪ್ಪಿದ್ದಾರೆ ಎಂದರೆ ಅದು ಶೇ. 10ರಷ್ಟಾಗುತ್ತದೆ! ಆದರೆ ಸತ್ಯ ಅದಲ್ಲ. ಹೆಚ್ಚಿನ ಫ್ಲೂ ಸೋಂಕಿತರು ಒಂದೆರಡು ದಿನ ಜ್ವರ, ಗಂಟಲು ನೋವುಗಳಿಂದ ಬಳಲಿ, 4-6 ದಿನಗಳಲ್ಲಿ ತನ್ನಿಂತಾನೇ ಗುಣ ಹೊಂದುತ್ತಾರೆ; ಅವರಾರೂ ಫ್ಲೂ ಪತ್ತೆಯ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದಿಲ್ಲ, ಆರೇಳು ಸಾವಿರ ವೆಚ್ಚದ ಆ ಪರೀಕ್ಷೆಯನ್ನು ಮಾಡಬೇಕಾಗಿಯೂ ಇಲ್ಲ. ಕೇಂದ್ರ ಸರಕಾರವು ಸಹ ಅತಿ ಗಂಭೀರ ಸ್ಥಿತಿಯಲ್ಲಿರುವವರಿಗಷ್ಟೇ ಫ್ಲೂ ಪರೀಕ್ಷೆ ಮಾಡಿಸಿದರೆ ಸಾಕೆಂದು ಆಗಸ್ಟ್ 2009ರಲ್ಲೇ ಹೇಳಿದೆ. ಆದ್ದರಿಂದ 200 ಮಂದಿ ಪರೀಕ್ಷೆಗೊಳಗಾಗಿ, 20 ಮಂದಿ ಮೃತರಾಗಿದ್ದಾರೆ ಎಂದರೆ ಒಟ್ಟು ಫ್ಲೂ ಸೋಂಕಿತರ ಸಂಖ್ಯೆಯು 50-70 ಸಾವಿರಕ್ಕೂ ಹೆಚ್ಚಿರುತ್ತದೆ; ಅದನ್ನೇಕೆ ನೀವು ಹೇಳುವುದಿಲ್ಲ?
ಒಸೆಲ್ಟಾಮಿವಿರ್ (ಟಾಮಿಫ್ಲು) ನಂತಹ ಫ್ಲೂ ನಿರೋಧಕ ಔಷಧಗಳ ವಿಷಯವಂತೂ ತೀರಾ ಹಾಸ್ಯಾಸ್ಪದವಾಗಿದೆ. ಎರಡು ದಿನಗಳಲ್ಲಿ ರೋಗ ಉಲ್ಬಣಿಸಿದವರಿಗೆ ಈ ಔಷಧಗಳನ್ನು ನೀಡಬೇಕೆಂದು ನೀವು ಹೇಳುತ್ತೀರಿ; ಆದರೆ ರೋಗ ತೊಡಗಿದ 48 ಗಂಟೆಗಳೊಳಗೆ, ಯಾವುದೇ ಗಂಭೀರ ಸಮಸ್ಯೆಗಳಾಗದವರಿಗಷ್ಟೇ ನೀಡಬೇಕೆಂದು ಅದರ ಕಂಪೆನಿ ಹೇಳುತ್ತದೆ (http://goo.gl/00kB5)! ಕೊಕ್ರೇನ್ ವಿಮರ್ಶೆಯೂ [2014(4):ಸಿಡಿ008965] ಸಹ ಈ ಔಷಧಗಳಿಂದ ನಿರ್ದಿಷ್ಟವಾದ ಪ್ರಯೋಜನಗಳಿಲ್ಲವೆಂದೂ, ಜ್ವರದ ಅವಧಿಯನ್ನು 7 ದಿನಗಳಿಂದ 6.3 ದಿನಗಳಿಗೆ ಇಳಿಸುವುದಲ್ಲದೆ ಗಂಭೀರ ಸಮಸ್ಯೆಗಳನ್ನು ತಡೆಯುವಲ್ಲಿ ಯಾ ಇಳಿಸುವಲ್ಲಿ ಈ ಔಷಧಗಳಿಗೆ ಪಾತ್ರವಿಲ್ಲವೆಂದೂ ಹೇಳಿದೆ. ಈ ಔಷಧಗಳ ಹಲವು ಅಡ್ಡ ಪರಿಣಾಮಗಳೂ ವರದಿಯಾಗಿವೆ. ಇನ್ನು ಆಯುರ್ವೇದ, ಹೋಮಿಯೋಪತಿಯವರಿಗಂತೂ ನನ್ನ ಪರಿಚಯವೇ ಇಲ್ಲ. ನೀರುಳ್ಳಿ, ಬೆಳ್ಳುಳ್ಳಿ, ಅಮೃತಬಳ್ಳಿ, ಗೋಮೂತ್ರ, ಕರ್ಪೂರ, ಏಲಕ್ಕಿ, ಅರಶಿನ ಇತ್ಯಾದಿಗಳಿಗೆ ನಾನು ಬಗ್ಗುವುದೂ ಇಲ್ಲ. ಫ್ಲೂ ಲಸಿಕೆಗಳಿಂದಲೂ ಹೆಚ್ಚಿನ ಪ್ರಯೋಜನವಿಲ್ಲವೆಂದು ಕೊಕ್ರೇನ್ ವಿಮರ್ಶೆಯಲ್ಲಿ [2014;3:ಸಿಡಿ001269] ಹೇಳಲಾಗಿದೆ.
ನೀವು ಜನರಲ್ಲಿ ಭಯ ಹುಟ್ಟಿಸಿ, ಅನಗತ್ಯ ಖರ್ಚು ಮಾಡುವುದಲ್ಲದೆ ಬೇರೇನೂ ಮಾಡಲಾರಿರಿ. ಆದ್ದರಿಂದ, ನನ್ನ ಸೋಂಕನ್ನು ತಡೆಯಬೇಕಾದರೆ ಜನರೇನು ಮಾಡಬೇಕೆನ್ನುವುದನ್ನು ನಾನೇ ಹೇಳಿ ಬಿಡುತ್ತೇನೆ. ಫ್ಲೂ ಸೋಂಕಿತರಲ್ಲಿ ಜ್ವರ, ತಲೆ-ಮೈಕೈ ನೋವು, ಕೆಮ್ಮು, ಗಂಟಲು ಕೆರೆತ, ನೆಗಡಿ, ವಾಂತಿ-ಭೇದಿಯಂತಹ ಲಕ್ಷಣಗಳಿರುತ್ತವೆ; ಹೆಚ್ಚಿನವರು ನಾಲ್ಕಾರು ದಿನಗಳಲ್ಲಿ ತನ್ನಿಂತಾನಾಗಿ ಗುಣಮುಖರಾಗುತ್ತಾರೆ. ಐದು ವರ್ಷದೊಳಗಿನ ಮಕ್ಕಳು, 65 ಮೀರಿದ ವಯಸ್ಕರು, ಗರ್ಭಿಣಿಯರು, ಹೃದಯ, ಶ್ವಾಸಕೋಶಗಳು ಮುಂತಾದ ಪ್ರಮುಖ ಅಂಗಗಳ ರೋಗಗಳಿರುವವರು, ಮಧುಮೇಹ, ಕ್ಯಾನ್ಸರ್, ಹೆಚ್ಐವಿ ಉಳ್ಳವರು, ಬಹುಕಾಲದಿಂದ ಸ್ಟೀರಾಯ್ಡ್ ನಂತಹ ಔಷಧಗಳನ್ನು ಸೇವಿಸುತ್ತಿರುವವರು ಗಂಭೀರ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಅಂಥವರು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ವಿಪರೀತವಾದ ಜ್ವರ ಯಾ ಗಂಟಲು ನೋವು, ಉಸಿರಾಟದ ತೊಂದರೆ, ಎದೆ ನೋವು, ಮಂಪರು, ರಕ್ತದೊತ್ತಡದಲ್ಲಿ ಇಳಿಕೆ, ಕಫದಲ್ಲಿ ರಕ್ತ, ಉಗುರುಗಳು ನೀಲಿಬಣ್ಣಕ್ಕೆ ತಿರುಗುವುದು ಇತ್ಯಾದಿಗಳಿದ್ದವರು ಕೂಡಲೇ ಸುಸಜ್ಜಿತ ಆಸ್ಪತ್ರೆಗೆ ದಾಖಲಾಗಿ ತಜ್ಞ ವೈದ್ಯರ ನಿಗಾವಣೆಯಲ್ಲಿದ್ದರೆ ಒಳ್ಳೆಯದು.
ಫ್ಲೂ ಲಕ್ಷಣಗಳು ಆರಂಭಗೊಂಡ ಮೊದಲೆರಡು ದಿನಗಳಲ್ಲೇ ಅದು ಅತಿ ಹೆಚ್ಚು ಹರಡುತ್ತದೆ. ಆದ್ದರಿಂದ ಅದನ್ನು ತಡೆಯುವುದು ಸುಲಭವಲ್ಲ; ಸೋಂಕುಳ್ಳವರೇ ತಮ್ಮಿಂದ ಹರಡದಂತೆ ಜಾಗ್ರತೆ ವಹಿಸುವುದು ಅತಿ ಮುಖ್ಯವಾಗುತ್ತದೆ. ಅಂಥವರು ಜ್ವರ ನಿಂತ 24 ಗಂಟೆಗಳವರೆಗೂ ಇತರರಿಂದ ಆರಡಿ ದೂರವಿರಬೇಕು, ಆದಷ್ಟು ಮಟ್ಟಿಗೆ ಜನಸಂದಣಿ, ಬಸ್ಸು, ರೈಲು, ಲಿಫ್ಟ್ ಇತ್ಯಾದಿಗಳಲ್ಲಿ ಸೇರಬಾರದು. ಕೆಮ್ಮುವಾಗಲೂ, ಸೀನುವಾಗಲೂ ಕರವಸ್ತ್ರದಿಂದ ಮುಖ-ಮೂಗುಗಳನ್ನು ಮುಚ್ಚಿಕೊಳ್ಳಬೇಕು, ನಂತರ ಅದನ್ನು ಮಾರ್ಜಕ ಬಳಸಿ ಬಿಸಿನೀರಿನಲ್ಲಿ ತೊಳೆಯಬೇಕು. ಮೂಗಿನ ಸ್ರಾವಗಳನ್ನು ಒರಸಿದ ಕೈಗಳನ್ನು ಆಗಾಗ ಸಾಬೂನಿನಿಂದ ತೊಳೆದುಕೊಳ್ಳಬೇಕು ಮತ್ತು ಅಗತ್ಯವಿಲ್ಲದೆ ಯಾವುದೇ ಮೇಲ್ಮೈಗಳನ್ನು ಮುಟ್ಟಬಾರದು. ಇನ್ನೂ ಸೋಂಕು ತಗಲದಿರುವವರು, ಅದರಲ್ಲೂ ಗಂಭೀರ ಸಮಸ್ಯೆಗಳ ಅಪಾಯವುಳ್ಳವರು, ಸೋಂಕಿತರಿಂದ ಆದಷ್ಟು ದೂರವಿರಬೇಕು, ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುತ್ತಿರಬೇಕು, ಅಶುದ್ಧವಾದ ಕೈಗಳಿಂದ ಮುಖ, ಮೂಗು, ಕಣ್ಣುಗಳನ್ನು ಉಜ್ಜಿಕೊಳ್ಳಬಾರದು.
ಮುಖಕವಚ ಧರಿಸುವುದರಿಂದ ಫ್ಲೂ ತಡೆಯಬಹುದೆನ್ನುವುದಕ್ಕೆ ದೃಢವಾದ ಆಧಾರಗಳಿಲ್ಲವೆಂದೂ, ಜನಸಾಮಾನ್ಯರು ಅದನ್ನು ಧರಿಸಬೇಕಿಲ್ಲವೆಂದೂ ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕದ ಸಿಡಿಸಿ ಹಾಗೂ ಎಫ್ ಡಿಎ ಸ್ಪಷ್ಟವಾಗಿ ಹೇಳಿವೆ. ಗಂಭೀರ ಸಮಸ್ಯೆಗಳ ಅಪಾಯವುಳ್ಳವರು ಅನಿವಾರ್ಯವಾಗಿ ಅತಿ ಜನಜಂಗುಳಿಯೊಳಕ್ಕೆ ಹೋಗಬೇಕಿದ್ದರೆ, ಆರೋಗ್ಯಕರ್ಮಿಗಳು ಫ್ಲೂ ಸೋಂಕಿತರ ಆರೈಕೆ ಮಾಡಬೇಕಿದ್ದರೆ ಮುಖಕವಚ ಧರಿಸಬೇಕಾಗುತ್ತದೆ. ನಾಡಗೀತೆ ಹಾಡುವಾಗ, ನರ್ತಿಸುವಾಗ ಅದೇಕೆ ಬೇಕು?
ಕೊನೆಯದಾಗಿ ನಿಮಗೊಂದು ಸಲಹೆಯಿದೆ. ಫ್ಲೂ ಸೋಂಕನ್ನು ನಿಯಂತ್ರಿಸುವಲ್ಲಿ ಸರಕಾರಕ್ಕೆ ಹೆಚ್ಚಿನ ಪಾತ್ರವಿಲ್ಲ, ಫ್ಲೂ ತಗಲಿದ ಹೆಚ್ಚಿನವರಲ್ಲಿ ಪತ್ತೆ ಅಥವಾ ಚಿಕಿತ್ಸೆಯ ಅಗತ್ಯವೂ ಇಲ್ಲ. ಆದರೆ ಪತ್ತೆ-ಚಿಕಿತ್ಸೆ-ನಿಯಂತ್ರಣಗಳಲ್ಲಿ ಸರಕಾರದ ಜವಾಬ್ದಾರಿಯು ದೊಡ್ಡದಿರುವ ಹಲವು ರೋಗಗಳು ನಿಮ್ಮ ರಾಜ್ಯದಲ್ಲಿವೆ. ತಿಂಗಳಿಗೆ ಒಂದೆರಡು ಮಕ್ಕಳು ಅಪೌಷ್ಟಿಕತೆಯಿಂದ ಸಾಯುತ್ತಿದ್ದಾರೆ, ದಿನಕ್ಕೆ ಐದಾರು ಜನ ಕ್ಷಯರೋಗಕ್ಕೆ ಬಲಿಯಾಗುತ್ತಿದ್ದಾರೆ. ನಿಮ್ಮೂರಿನಲ್ಲೇ ಸಾವಿರಾರು ಜನ ಮಲೇರಿಯಾದಿಂದ ನರಳುತ್ತಿದ್ದಾರೆ, ಹಲವರು ಸಾಯುತ್ತಿದ್ದಾರೆ. ಇವನ್ನೆಲ್ಲ ಮುಚ್ಚಿಟ್ಟು ಫ್ಲೂ, ಫ್ಲೂ ಎಂದು ಬೊಬ್ಬಿರಿಯುವುದೇಕೆ? ಇನ್ನಾದರೂ ತಾವು ಫ್ಲೂ ನಿಯಂತ್ರಣದ ಬಗ್ಗೆ ವಸ್ತುನಿಷ್ಠ ಮಾಹಿತಿಯೊದಗಿಸುವ ಕೆಲಸವನ್ನಷ್ಟೇ ಮಾಡಿ, ತಮ್ಮ ಹೆಚ್ಚಿನ ಗಮನವನ್ನು ಇತರ ಗಂಭೀರ ಸಮಸ್ಯೆಗಳತ್ತ ಹರಿಸಬೇಕೆಂದು ವಿನಮ್ರವಾಗಿ ವಿನಂತಿಸುತ್ತಿದ್ದೇನೆ.
ಅರುವತ್ತೊಂಭತ್ತನೇ ಬರಹ : ವಿದೇಶಗಳಿಗೆ ಬೇಡವಾದ ವೈದ್ಯರು ಇಲ್ಲಿಗೇಕೆ ಬೇಕು? [ಫೆಬ್ರವರಿ 4, 2015, ಬುಧವಾರ] [ನೋಡಿ | ನೋಡಿ]
ಕೋಟಿ ಕೊಟ್ಟು ವೈದ್ಯರಾದವರಿಗೆ ವಿದೇಶಗಳಲ್ಲಿ ಮಾನ್ಯತೆಯಿರಬಾರದೆಂಬ ಒತ್ತಡಗಳು ಹೆಚ್ಚುತ್ತಿವೆ
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆರೋಗ್ಯ ರಕ್ಷಣೆಯನ್ನು ಖಾಸಗಿ ಉದ್ಯಮಕ್ಕೆ ವಹಿಸಹೊರಟಿರುವಂತೆಯೇ, ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಕುಸಿಯುತ್ತಿರುವ ಗುಣಮಟ್ಟಗಳ ಬಗ್ಗೆ ಅಪಸ್ವರವೇರತೊಡಗಿದೆ. ಎರಡು ದಶಕಗಳ ಹಿಂದೆ ವಿಶ್ವ ಬ್ಯಾಂಕಿನಂತಹ ವಿದೇಶಿ ಸಂಸ್ಥೆಗಳು ಇಲ್ಲಿನ ವೈದ್ಯಕೀಯ ಶಿಕ್ಷಣದ ಖಾಸಗೀಕರಣಕ್ಕೆ ಒತ್ತು ನೀಡಿದ್ದವು; ಈಗ ಬ್ರಿಟಿಷ್ ಮೆಡಿಕಲ್ ಜರ್ನಲ್ (ಬಿಎಂಜೆ), ಲಾನ್ಸೆಟ್ ನಂತಹ ವಿದೇಶಿ ಪತ್ರಿಕೆಗಳು ಅದೇ ಖಾಸಗೀಕರಣದ ಅನಾಹುತಗಳ ಬಗ್ಗೆ ಎಚ್ಚರಿಸತೊಡಗಿವೆ.
ಹೊಸ ರಾಷ್ಟ್ರೀಯ ಆರೋಗ್ಯ ನೀತಿಯು ಖಾಸಗಿ ಉದ್ಯಮಗಳತ್ತ ವಾಲಿಕೊಂಡಿದೆ ಎಂದು ಜನವರಿ 24ರ ಲಾನ್ಸೆಟ್ [ಲಾನ್ಸೆಟ್, 2015;385(9965):317] ನಲ್ಲಿ ಹಿರಿಯ ಪತ್ರಕರ್ತ ದಿನೇಶ್ ಶರ್ಮಾ ಬರೆದಿದ್ದಾರೆ. ದೇಶದ ಖಾಸಗಿ ವೈದ್ಯಕೀಯ ಕಾಲೇಜುಗಳ ಅನೈತಿಕ ವ್ಯವಹಾರಗಳ ಬಗ್ಗೆ ಜನವರಿ 21ರ ಬಿಎಂಜೆನಲ್ಲಿ (ಬಿಎಂಜೆ, 2015;ಎಚ್106 ಮತ್ತು ಎಚ್237) ಮುಂಬೈಯ ಪತ್ರಕರ್ತೆ ಜೀತಾ ಡಿಸಿಲ್ವ ಹಾಗೂ ಜಸ್ಲೋಕ್ ಆಸ್ಪತ್ರೆಯ ಶಸ್ತ್ರಚಿಕಿತ್ಸಜ್ಞ ಡಾ. ಸಂಜಯ್ ನಗ್ರಾಲ್ ಬರೆದಿದ್ದಾರೆ. ಈ ಕಾಲೇಜುಗಳು ಕೋಟಿಗಟ್ಟಲೆ ಹಣಕ್ಕೆ ಸೀಟುಗಳನ್ನು ಮಾರುತ್ತಿವೆ, ಅಂತಹ ವೈದ್ಯವಿದ್ಯಾರ್ಥಿಗಳನ್ನು ಪಾಸು ಮಾಡಿ ಪದವಿ ನೀಡುವಲ್ಲೂ ಭ್ರಷ್ಟಾಚಾರವಿದೆ, ಸಾವಿರಾರು ಕೋಟಿ ಕಪ್ಪು ಹಣ ಇವಕ್ಕೆಲ್ಲ ಬಳಕೆಯಾಗುತ್ತಿದೆ, ಇವನ್ನು ನಿಯಂತ್ರಿಸಬೇಕಾದ ಭಾರತೀಯ ವೈದ್ಯಕೀಯ ಪರಿಷತ್ತು (ಎಂಸಿಐ) ಭ್ರಷ್ಟಾಚಾರದ ಕೂಪವಾಗಿದೆ, ಅಂತಲ್ಲಿ ದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯರಾಗುವ ಅವಕಾಶಗಳು ಇಲ್ಲವಾಗುತ್ತಿದೆ, ಒಟ್ಟಿನಲ್ಲಿ ದೇಶದ ವೈದ್ಯಕೀಯ ವ್ಯವಸ್ಥೆಯೇ ಭ್ರಷ್ಟವಾಗುತ್ತಿದೆ ಎಂದು ಈ ಲೇಖನಗಳಲ್ಲಿ ಟೀಕಿಸಲಾಗಿದೆ.
ಬಿಎಂಜೆನ 2014ರ ಮೇ 8 ಹಾಗೂ ಜೂನ್ 25 ರ ಸಂಚಿಕೆಗಳಲ್ಲೂ (ಬಿಎಂಜೆ, 2014;348:ಜಿ3169 ಹಾಗೂ ಜಿ4184) ಈ ಬಗ್ಗೆ ಕಟುವಾಗಿ ಬರೆಯಲಾಗಿತ್ತು. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಭ್ರಷ್ಟಾಚಾರವಿರುವವರೆಗೆ ಅಲ್ಲಿಂದ ಹೊರಬರುವ ವೈದ್ಯರ ಪ್ರಾಮಾಣಿಕತೆ ಮತ್ತು ದಕ್ಷತೆಗಳು ಪ್ರಶ್ನಾರ್ಹವಾಗಿಯೇ ಇರುತ್ತವೆ; ಅಂತಹ ವೈದ್ಯರು ಭಾರತಕ್ಕಾಗಲೀ, ಅನ್ಯ ದೇಶಗಳಿಗಾಗಲೀ ಅಗತ್ಯವಿಲ್ಲ; ಆದ್ದರಿಂದ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ಮುಂತಾದ ದೇಶಗಳು ಅಂತಹ ಖಾಸಗಿ ಕಾಲೇಜುಗಳ ಪದವಿಗಳಿಗೆ ಮಾನ್ಯತೆ ನೀಡಬಾರದು ಎಂದು ಆಸ್ಟ್ರೇಲಿಯಾದ ವೈದ್ಯ ಡೇವಿಡ್ ಬರ್ಜರ್ ಬರೆದಿದ್ದರು. ದಿಲ್ಲಿಯ ಗಂಗಾರಾಂ ಆಸ್ಪತ್ರೆಯ ಡಾ.ಸಮಿರನ್ ನಂದಿ ಮತ್ತಿತರರು ವೈದ್ಯಕೀಯ ಭ್ರಷ್ಟಾಚಾರದ ನಿಗ್ರಹಕ್ಕೆ ಆಂದೋಲನವನ್ನೇ ಆರಂಭಿಸಬೇಕೆಂದು ಕರೆ ನೀಡಿದ್ದರು.
ದೇಶ-ವಿದೇಶಗಳ ವೈದ್ಯರು ಹೀಗೆ ಕಟುವಾಗಿ ಬರೆಯುತ್ತಿರುವುದರಲ್ಲಿ ಅಚ್ಚರಿಯೇನಿಲ್ಲ. ಸಾಕ್ಷ್ಯಾಧಾರಿತ ವೈದ್ಯವೃತ್ತಿಯನ್ನು ಪ್ರಾಮಾಣಿಕವಾಗಿ ನಡೆಸುತ್ತಿರುವವರೆಲ್ಲರೂ ಖಾಸಗಿ ವೈದ್ಯಕೀಯ ಸಂಸ್ಥೆಗಳ ಲಾಭಕೋರತನದಿಂದ ರೋಸಿ ನಿರಾಶರಾಗಿದ್ದಾರೆ, ಎಂಸಿಐ ಹಾಗೂ ಸರಕಾರಗಳ ಭ್ರಷ್ಟಾಚಾರದಿಂದ ಹತಾಶರಾಗಿದ್ದಾರೆ, ವೈದ್ಯಕೀಯ ಕ್ಷೇತ್ರದ ಘನತೆ-ಗೌರವಗಳ ಬಗ್ಗೆ, ಜನಸಾಮಾನ್ಯರ ಆರೋಗ್ಯರಕ್ಷಣೆಯ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ.
ವೈದ್ಯಶಿಕ್ಷಣದ ಖಾಸಗೀಕರಣ ಮತ್ತು ಕ್ಯಾಪಿಟೇಶನ್ ಶುಲ್ಕವನ್ನು ವಿರೋಧಿಸಿ ಎಂಭತ್ತರ ದಶಕದ ಆರಂಭದಲ್ಲಿ ವೈದ್ಯರು ಬೀದಿಗಿಳಿದಿದ್ದರೆನ್ನುವುದನ್ನು ಡಾ. ಸಂಜಯ್ ನಗ್ರಾಲ್ ತಮ್ಮ ಲೇಖನದಲ್ಲಿ ನೆನಪಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಆರಂಭಗೊಂಡಿದ್ದ ಈ ಪ್ರತಿಭಟನೆಗಳಿಗೆ ದೇಶದೆಲ್ಲೆಡೆ ಭಾರೀ ಬೆಂಬಲ ವ್ಯಕ್ತವಾಗಿತ್ತು. ಮೂರು ವಾರ ಆರೋಗ್ಯಸೇವೆಗಳು ಬಾಧಿತವಾಗಿದ್ದರೂ, ಸಾರ್ವಜನಿಕರು, ರಾಜಕಾರಣಿಗಳು, ಮಾಧ್ಯಮಗಳು ಈ ಆಂದೋಲನವನ್ನು ಬೆಂಬಲಿಸಿದ್ದರು; ಭಾರತೀಯ ವೈದ್ಯಕೀಯ ಸಂಘ (ಐಎಂಎ) ವೂ ಅದರಲ್ಲಿ ಭಾಗಿಯಾಗಿತ್ತು. ಆಗ ಕರ್ನಾಟಕದಲ್ಲಿ ವೈದ್ಯವಿದ್ಯಾರ್ಥಿಗಳಾಗಿದ್ದವರೂ ಇಲ್ಲಿನ ಖಾಸಗಿ ಕಾಲೇಜುಗಳಲ್ಲಿ ಸಮಾನ ಶುಲ್ಕಕ್ಕಾಗಿ, ಸಾಮಾನ್ಯ ಪ್ರವೇಶ ಪರೀಕ್ಷೆಗಾಗಿ ಹೋರಾಡಿದ್ದರು. ಖಾಸಗಿ ಹಿತಾಸಕ್ತಿಗಳನ್ನು ಹಿಂದೊತ್ತುವುದಕ್ಕೆ, ಪ್ರತಿಭಾವಂತರಿಗೆ ನ್ಯಾಯವೊದಗಿಸುವುದಕ್ಕೆ ಇದರಿಂದ ಸಾಧ್ಯವಾಗಿತ್ತು.
ತೊಂಭತ್ತರ ಮಧ್ಯ ಭಾಗದಲ್ಲಿ ಆರ್ಥಿಕ ಸುಧಾರಣೆಯ ಬಿರುಗಾಳಿಯಲ್ಲಿ ವೈದ್ಯಕೀಯ ಶಿಕ್ಷಣವೂ ಬುಡಮೇಲಾಯಿತು. ಆಗ ಭಾರತಕ್ಕೆ ಆರ್ಥಿಕ ನೀತಿಯ ಗುರುವಾಗಿದ್ದ ವಿಶ್ವ ಬ್ಯಾಂಕ್ ಪ್ರೇರಣೆಯಿಂದ ಉನ್ನತ ಶಿಕ್ಷಣಕ್ಕೆ ವಿತ್ತೀಯ ಬೆಂಬಲವು ಇಳಿಯತೊಡಗಿತು, ಖಾಸಗಿ ದರ್ಬಾರು ಬೆಳೆಯತೊಡಗಿತು. ಅಲ್ಲಿಂದೀಚೆಗೆ ತೆರೆದಿರುವ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 80ರಷ್ಟು ಖಾಸಗಿ ರಂಗದಲ್ಲಿವೆ; ಕಳೆದ ಐದು ವರ್ಷಗಳಲ್ಲೇ 53 ಖಾಸಗಿ ಕಾಲೇಜುಗಳು (7200 ಸೀಟುಗಳು) ತೊಡಗಿವೆ. ಇಂದು ದೇಶದಲ್ಲಿ 398 ವೈದ್ಯಕೀಯ ಕಾಲೇಜುಗಳಲ್ಲಿ 52105 ಸೀಟುಗಳಿವೆ; ಆ ಪೈಕಿ 215 ಕಾಲೇಜುಗಳ 27170 ಸೀಟುಗಳು ಖಾಸಗಿ ಹಿಡಿತದಲ್ಲಿವೆ, 183 ಕಾಲೇಜುಗಳ 24935 ಸೀಟುಗಳು ಸರಕಾರಿ ಸ್ವಾಮ್ಯದಲ್ಲಿವೆ. ಸುಮಾರು 11000 ಸ್ನಾತಕೋತ್ತರ ಸೀಟುಗಳಲ್ಲೂ ಖಾಸಗಿ ಪಾಲು ಸಾಕಷ್ಟಿದೆ. ಜುಲೈನಲ್ಲಿ ಬಂದ ವರದಿಯನುಸಾರ, ವರ್ಷಕ್ಕೆ ಸುಮಾರು 12000 ಕೋಟಿ ಕಪ್ಪು ಹಣವು ಈ ಖಾಸಗಿ ಸೀಟುಗಳ ವ್ಯವಹಾರದಲ್ಲಿ ಬಳಕೆಯಾಗುತ್ತಿದೆ. ಹೀಗೆ ಪ್ರತಿಭೆಗೂ, ಸಾಮಾಜಿಕ ನ್ಯಾಯಕ್ಕೂ ಅವಕಾಶವುಳ್ಳ ಸರಕಾರಿ ಕಾಲೇಜುಗಳು ಬೆಳೆಯದೆ, ಕಪ್ಪು ಹಣಕ್ಕೆ ಸೀಟು ಕೊಟ್ಟು, ಪಾಸು ಮಾಡಿಸುವ ಖಾಸಗಿ ಕಾಲೇಜುಗಳು ಮೆರೆದಾಡುತ್ತಿವೆ.
ಅಂದು ಪ್ರತಿಭಟಿಸಿದ್ದ ರಾಜಕಾರಣಿಗಳು ಈಗ ವೈದ್ಯಕೀಯ ಕಾಲೇಜುಗಳ ಒಡೆಯರಾಗಿರುವುದರಿಂದ ಸರಕಾರಿ ಸಂಸ್ಥೆಗಳನ್ನು ದುರ್ಬಲಗೊಳಿಸಿ, ಖಾಸಗಿ ಸಂಸ್ಥೆಗಳನ್ನು ಬಲಪಡಿಸುವ ಎಲ್ಲ ತಂತ್ರಗಳನ್ನು ಹೆಣೆಯಲಾಗುತ್ತಿದೆ. ಸರಕಾರಿ ಕಾಲೇಜುಗಳು ಸೌಲಭ್ಯಗಳಿದ್ದೂ ಮಾನ್ಯತೆ ಕಳೆದುಕೊಳ್ಳುತ್ತಿವೆ, ಖಾಸಗಿ ಕಾಲೇಜುಗಳು ಸೌಲಭ್ಯಗಳಿಲ್ಲದೆಯೂ ಮಾನ್ಯತೆ ಪಡೆಯುತ್ತಿವೆ. ಸರಕಾರಿ ನೀತಿಗಳು ಕಠಿಣವಾಗಿ, ಖಾಸಗಿ ಆಮಿಷಗಳು ಹೆಚ್ಚಾಗಿ ಸರಕಾರಿ ವೈದ್ಯ ಶಿಕ್ಷಕರು ಖಾಸಗಿ ಕಾಲೇಜುಗಳನ್ನು ಸೇರುತ್ತಿದ್ದಾರೆ. ಪ್ರವೇಶ ಪರೀಕ್ಷೆಗಳನ್ನು ಕುಲಗೆಡಿಸಿ, ನ್ಯಾಯತೀರ್ಪುಗಳ ಮೂಲಕ ಗೊಂದಲ ಮೂಡಿಸಿ, ಪ್ರತಿಭಾವಂತ, ಬಡ-ಹಿಂದುಳಿದ ವಿದ್ಯಾರ್ಥಿಗಳನ್ನು ದಿಕ್ಕೆಡಿಸಲಾಗುತ್ತಿದೆ.
ವೈದ್ಯಕೀಯ ಜ್ಞಾನವು ವರ್ಷದೊಳಗೆ ದುಪ್ಪಟ್ಟಾಗುತ್ತಿರುವಲ್ಲಿ ವೈದ್ಯಶಿಕ್ಷಣವು ಸರಳಗೊಳ್ಳುತ್ತಿದೆ; ಖಾಸಗಿ ವೈದ್ಯವಿದ್ಯಾರ್ಥಿಗಳು ನಾಡಿಬಡಿತ ನೋಡಲರಿಯದೆಯೂ ತೇರ್ಗಡೆಯಾಗುತ್ತಿದ್ದಾರೆ. ಕೋಟಿ ಕೊಟ್ಟವರು ಅದಕ್ಕೆ ತಕ್ಕ ತರಬೇತಿಯನ್ನು ಒತ್ತಾಯಿಸದೆ, ಕಾಗದದ ಪದವಿಪತ್ರಕ್ಕೆ ತೃಪ್ತರಾಗುತ್ತಿದ್ದಾರೆ. ಇಂಥ ವೈದ್ಯರು ಸಿಟಿ, ಎಂಆರ್ ಐ ಮುಂತಾದ ಪರೀಕ್ಷೆಗಳನ್ನು ನಡೆಸಿ, ಬಗೆಬಗೆಯ ಔಷಧಗಳ ಪಟ್ಟಿಯನ್ನು ಬರೆದು, ಖಾಸಗಿ ಉದ್ಯಮದ ಮಧ್ಯವರ್ತಿಗಳಾಗುತ್ತಾರೆ. ಹೊಸ ವೈದ್ಯರನ್ನು ಹೀಗೆ ಸಜ್ಜುಗೊಳಿಸಿ ಖಾಸಗಿ ಉದ್ಯಮವು ಇನ್ನಷ್ಟು ಶ್ರೀಮಂತವಾಗುತ್ತದೆ, ರೋಗಿಗಳು ಮತ್ತಷ್ಟು ಬಡವರಾಗುತ್ತಾರೆ.
ಕೋಟಿ ಕೊಟ್ಟು ವೈದ್ಯರಾದವರು ಹಳ್ಳಿಗಳತ್ತ ಹೋಗುವುದಿಲ್ಲವೆಂದು ಸರಕಾರಿ ಸೀಟು ಪಡೆದವರಿಗೆ ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸಲಾಗಿದೆ. ಅದಕ್ಕೆ ಒಪ್ಪಿದವರು ಒಂದರಿಂದ ಮೂರು ವರ್ಷ ಕಾಯಬೇಕಾಗುತ್ತದೆ, ತಪ್ಪಿದರೆ ಹತ್ತರಿಂದ ಇಪ್ಪತ್ತೈದು ಲಕ್ಷ ದಂಡ ತೆರಬೇಕಾಗುತ್ತದೆ. ಪ್ರತಿಭಾವಂತ, ಬಡ-ಹಿಂದುಳಿದ ಸರಕಾರಿ ವೈದ್ಯವಿದ್ಯಾರ್ಥಿಗಳು ಹೀಗೆ ಕಾಯುತ್ತಿರುವಾಗ, ಕೋಟಿ ಕೊಟ್ಟು ವೈದ್ಯರಾದವರು ತಡೆಗಳಿಲ್ಲದೆ ಮುಂದೆ ಸಾಗುತ್ತಿರುತ್ತಾರೆ; ಅತ್ಯುನ್ನತ ಪದವಿಗೆ ಮುಂಗಡ ಸೀಟು ಕಾದಿರಿಸಿಕೊಂಡವರಂತೂ ಅನಾಯಾಸವಾಗಿ ತೇರ್ಗಡೆಯಾಗುತ್ತಿರುತ್ತಾರೆ. ಸರಕಾರಗಳಿಂದ ಭೂಮಿ, ತೆರಿಗೆ ಇತ್ಯಾದಿ ಹಲಬಗೆಯ ವಿನಾಯಿತಿಗಳನ್ನು ಪಡೆಯುವ ಖಾಸಗಿ ಸಂಸ್ಥೆಗಳು ಸಾಮಾಜಿಕ ಹೊಣೆಗಾರಿಕೆಯಿಂದಲೂ ವಿನಾಯಿತಿ ಪಡೆಯುತ್ತವೆ.
ಸರಕಾರಿ ಸೀಟುಗಳಿಗೆ 25 ಲಕ್ಷ ದಂಡದಿಂದಾಗಿ ಹಳ್ಳಿಗಳಿಗೆ ವೈದ್ಯರು ಹೋಗುತ್ತಿದ್ದಾರೆಯೇ? ಅದೂ ಇಲ್ಲ. ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ಸರಕಾರದಿಂದ ಯಾವ ಸೌಲಭ್ಯವೂ ದೊರೆಯದಿರುವುದರಿಂದ ಹೆಚ್ಚಿನವರು ದಂಡ ಪಾವತಿಸಿ, ಕೆಲವರು ಏನೂ ಪಾವತಿಸದೆ ದೂರವುಳಿಯುತ್ತಾರೆ. ಕಟ್ಟಿದ ಆ ದಂಡವನ್ನು ಮರುಸಂಪಾದಿಸಬೇಕಾಗುವುದರಿಂದ ಪ್ರತಿಭಾವಂತರ ಆದರ್ಶಗಳನ್ನು ಸರಕಾರವೇ ಮಣ್ಣುಪಾಲು ಮಾಡಿದಂತಾಗುತ್ತದೆ.
ಈ ದಂಡ ಪಾವತಿಯ ಕ್ರಮದಿಂದ ಲಾಭವಾಗಿರುವುದು ಖಾಸಗಿ ಕಾಲೇಜುಗಳಿಗೆ! ಈ ಮೊದಲು ಚಿಕಿತ್ಸೇತರ ವಿಭಾಗಗಳ ಸ್ನಾತಕೋತ್ತರ ಸೀಟುಗಳು ಖಾಸಗಿ ಕಾಲೇಜುಗಳಲ್ಲಿ ಖಾಲಿ ಉಳಿಯುತ್ತಿದ್ದವು, ಸರಕಾರಿ ಕಾಲೇಜುಗಳಲ್ಲಿ ತುಂಬುತ್ತಿದ್ದವು. ಚಿಕಿತ್ಸೆ ಮತ್ತು ಚಿಕಿತ್ಸೇತರ ವಿಭಾಗಗಳಿಗೆ ಸಮಾನವಾಗಿ ಇಪ್ಪತ್ತೈದು ಲಕ್ಷಗಳ ದಂಡ ವಿಧಿಸಿದ ಬಳಿಕ ಖಾಸಗಿ ಕಾಲೇಜುಗಳ ಚಿಕಿತ್ಸೇತರ ಸೀಟುಗಳು ಭರ್ತಿಯಾಗುತ್ತಿವೆ, ಸರಕಾರಿ ಕಾಲೇಜುಗಳಲ್ಲಿ ಖಾಲಿ ಉಳಿಯುತ್ತಿವೆ!
ಅಂದು ವೈದ್ಯವಿದ್ಯಾರ್ಥಿಗಳಾಗಿ ಬೀದಿಗಿಳಿದಿದ್ದ ಹಲವರು ಇಂದು ಖಾಸಗಿ ವೈದ್ಯಕೀಯ ಕಾಲೇಜುಗಳ ಶಿಕ್ಷಕರಾಗಿ ಹೊಂದಿಕೊಳ್ಳುತ್ತಿದ್ದಾರೆ; ತಾವು ಪ್ರತಿಭೆಯಿಂದ ಸೀಟು ಪಡೆದದ್ದನ್ನು ಮರೆತು ತಮ್ಮ ಮಕ್ಕಳಿಗೆ ಸೀಟು ಕೊಡಿಸಿ, ಪಾಸು ಮಾಡಿಸಲು ಕಾಯುತ್ತಿದ್ದಾರೆ. ಐಎಂಎಯಂತಹ ಸಂಘಟನೆಗಳೂ ಕಣ್ಣು ಮುಚ್ಚಿ ಕುಳಿತಿವೆ; ಸರಕಾರಿ ಆಸ್ಪತ್ರೆಗಳೆಲ್ಲವೂ ಅಯುಷ್-ಮಯವಾಗಿ, ಆಧುನಿಕ ಚಿಕಿತ್ಸೆಯೆಲ್ಲವೂ ಖಾಸಗಿ ಆಸ್ಪತ್ರೆಗಳಿಗೆ ಹೊರಗುತ್ತಿಗೆಯಾದರೆ ಒಳ್ಳೆಯದೇ ಆಗುತ್ತದೆ ಎನ್ನುವ ಲೆಕ್ಕಾಚಾರವಿರಬಹುದೇ?
ಸರಕಾರಿ ಕಾಲೇಜುಗಳಲ್ಲಿ ಕಲಿತ ಹಲವು ವೈದ್ಯರ ಪ್ರತಿಭೆಯು ವಿದೇಶಗಳಿಗೆ ಪಲಾಯನವಾಗುತ್ತದೆ. ಆದರೆ ಕೋಟಿ ಕೊಟ್ಟು ವೈದ್ಯರಾದವರು ಅಲ್ಲಿಗೆ ಬೇಡವೆಂದಾದರೆ, ಇಲ್ಲೇ ಉಳಿದು ಹಣ ಸುಲಿಯುತ್ತಿರಬೇಕೇ?
ಅರುವತ್ತೆಂಟನೇ ಬರಹ : ಬುನಾದಿಯಿಂದೇಳದ ಆಯುರ್ವೇದ [ಜನವರಿ 21, 2015, ಬುಧವಾರ] [ನೋಡಿ | ನೋಡಿ]
ಅಂದು ಆಯುರ್ವೇದಕ್ಕೆ ತಡೆದವರ ಅನುಯಾಯಿಗಳೇ ಇಂದು ಸುಳ್ಳುಗಳಿಂದ ಅದನ್ನು ಅಟ್ಟಕ್ಕೇರಿಸುತ್ತಿದ್ದಾರೆ
ಏಳೆಂಟು ಸಾವಿರ ವರ್ಷಗಳ ಹಿಂದೆ ಇಲ್ಲಿ ಬಗೆಬಗೆಯ ವಿಮಾನಗಳಿದ್ದವಂತೆ; ಕಾಂಡಕೋಶಗಳಿಂದ ಮಗುವನ್ನು ಸೃಷ್ಟಿಸಲಾಗುತ್ತಿತ್ತಂತೆ; ಗಡಿಗೆಯೊಳಗಿನ ತುಪ್ಪದಲ್ಲೂ ಭ್ರೂಣವರ್ಧನೆ ಮಾಡಲಾಗುತ್ತಿತ್ತಂತೆ; ಆನೆಯ ರುಂಡವನ್ನು ಮನುಷ್ಯನ ಮುಂಡಕ್ಕೆ ಜೋಡಿಸಲಾಗುತ್ತಂತೆ!
ಆಧುನಿಕ ವೈದ್ಯವಿಜ್ಞಾನವು ಮನುಷ್ಯರ ಮೂತ್ರಪಿಂಡ, ಯಕೃತ್ತು, ಹೃದಯ ಇತ್ಯಾದಿಗಳನ್ನು ಕಸಿ ಮಾಡುವ ತಂತ್ರವನ್ನು ಸಾಧಿಸಿರುವುದು ತೀರಾ ಇತ್ತೀಚೆಗಷ್ಟೆ. ತಲೆಯನ್ನೂ, ಮೆದುಳನ್ನೂ ಕಸಿ ಮಾಡುವುದಕ್ಕೆ, ಪ್ರಾಣಿಗಳ ಅಂಗಗಳನ್ನು ಮನುಷ್ಯರಿಗೆ ಜೋಡಿಸುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ; ಸದ್ಯಕ್ಕೆ ಅದರ ಸಾಧ್ಯತೆಗಳೂ ಇಲ್ಲ. ಆದ್ದರಿಂದ, ಆನೆಯ ತಲೆಯನ್ನು ದೇಹಕ್ಕೆ ಜೋಡಿಸುವ ಆ ಅದ್ಭುತ ತಂತ್ರವು ಲಭ್ಯವಾದರೆ ಇಡೀ ಮನುಕುಲಕ್ಕೆ ಮಹದುಪಕಾರವಾದೀತು.
ಏಳು ಸಾವಿರ ವರ್ಷಗಳ ಹಿಂದೆ ಇಲ್ಲಾಗಲೀ, ಎಲ್ಲಾಗಲೀ ವಿಮಾನ-ರುಂಡಕಸಿಗಳಿದ್ದುದಕ್ಕೆ ಕುರುಹುಗಳಿವೆಯೇ? ಅವಿದ್ದುದು ನಿಜವಾದರೆ ಯಾವಾಗ, ಏಕೆ ಮರೆಯಾದವು? ಭಾರತೀಯ ವೈದ್ಯ ಪದ್ಧತಿಗಳ ಉತ್ಥಾನಕ್ಕೆ ಇತ್ತೀಚಿನ ಸರಕಾರಗಳು ಸಾವಿರಾರು ಕೋಟಿ ವ್ಯಯಿಸುತ್ತಿವೆ, ಆದರೆ ಸಾಮಾನ್ಯ ರೋಗಗಳ ಚಿಕಿತ್ಸೆಯಲ್ಲೂ ಅವೇಕೆ ಯಶಸ್ವಿಯಾಗುತ್ತಿಲ್ಲ?
ಇದುವರೆಗೆ ಲಭ್ಯವಾಗಿರುವ ಆಧಾರಗಳಂತೆ, ಆಫ್ರಿಕಾ ಮೂಲದ ಮಾನವರು (ದ್ರಾವಿಡರು) ಸುಮಾರು 60-70 ಸಾವಿರ ವರ್ಷಗಳ ಹಿಂದೆ ಭರತಖಂಡಕ್ಕೆ ಬಂದು, ನಾಲ್ಕೈದು ಸಾವಿರ ವರ್ಷಗಳ ಹಿಂದೆ ಸಿಂಧೂ ಕಣಿವೆಯ ನಾಗರಿಕತೆಯನ್ನು ಕಟ್ಟಲಾಯಿತು. ಅದಕ್ಕೂ ಮೊದಲು ಈಜಿಪ್ಟ್ ಹಾಗೂ ಮೆಸೊಪೊಟೇಮಿಯಾಗಳಲ್ಲಿ ಅದೇ ಆಫ್ರಿಕಾ ಮೂಲದವರ ನಾಗರಿಕತೆಗಳು ಎದ್ದು ನಿಂತಿದ್ದವು. ಈ ಮೂರರ ನಡುವೆಯೂ ಸಂಪರ್ಕ-ಸಂಬಂಧ-ವಿನಿಮಯಗಳಿದ್ದವು. ಆದರೆ ಅತ್ಯುನ್ನತ ವೈದ್ಯಕೀಯ ಪರಿಣತಿಯ ಕುರುಹುಗಳು ಅಲ್ಲಿನ ಅವಶೇಷಗಳಲ್ಲೆಲ್ಲೂ ಸಿಕ್ಕಿಲ್ಲ. ಓದಲು ಸಾಧ್ಯವಾಗಿರುವ ಅಲ್ಲಿನ ಲಿಪಿಗಳಲ್ಲೂ ಅಂತಹ ಮಾಹಿತಿಯಿಲ್ಲ.
ಆದರೆ ಕಾಯಿಲೆಗಳು ಅಲ್ಲೂ ಇದ್ದವು,ಕಸುಬು-ಕಲಹಗಳಿಂದ ಗಾಯ-ಊತ-ಮೂಳೆಮುರಿತಗಳೂ ಇದ್ದವು. ಇವುಗಳಿಗೆಲ್ಲ ತಮ್ಮಿಂದಾದ ಚಿಕಿತ್ಸೆ ನೀಡುತ್ತಾ ವೈದ್ಯರೆನಿಸಿಕೊಂಡವರೂ ಇದ್ದರು. ಆ ಕಾಲದಲ್ಲಿ ದೇಹದ ಒಳ-ಹೊರಗಿನ ಅಸಮತೋಲನದಿಂದ ರೋಗಗಳುಂಟಾಗುತ್ತವೆಂದು ಭಾವಿಸಿ ಬಗೆಬಗೆಯ ಸಸ್ಯಜನ್ಯ-ಪ್ರಾಣಿಜನ್ಯ ವಸ್ತುಗಳನ್ನು ಔಷಧಗಳಾಗಿ ಬಳಸಲಾಗುತ್ತಿತ್ತು, ಆಹಾರ ಹಾಗೂ ಜೀವನ ಕ್ರಮಗಳಿಗೂ ಒತ್ತು ನೀಡಲಾಗುತ್ತಿತ್ತು. ಗಾಯಗಳನ್ನು ಹೊಲಿಯುವುದು, ಮೈಯೊಳಗೆ ಹೊಕ್ಕ ಬಾಣ-ಈಟಿಗಳನ್ನು ಹೊರ ತೆಗೆಯುವುದು, ಮೂಳೆಮುರಿತಕ್ಕೆ ಪಟ್ಟಿ ಕಟ್ಟುವುದು ಮುಂತಾದವು ಸಾಮಾನ್ಯವಾಗಿದ್ದರೆ, ಮೂಲವ್ಯಾಧಿ, ಗುದವೇದನೆಗಳಿಗೆ ಚಿಕಿತ್ಸೆ, ಕೀವು ತೆಗೆಯುವುದು, ಮೂತ್ರದ್ವಾರಕ್ಕೆ ಅಡ್ಡಿಯಾದ ಕಲ್ಲನ್ನು ಹೊರತೆಗೆಯುವುದು, ಗರ್ಭದಲ್ಲೇ ಮೃತಪಟ್ಟ ಶಿಶುವನ್ನು ಹೊರತೆಗೆಯುವುದು ಇತ್ಯಾದಿ ಕ್ಲಿಷ್ಟಕರವಾದ, ತುರ್ತಿನ ಶಸ್ತ್ರಕ್ರಿಯೆಗಳನ್ನು ಪ್ರಯತ್ನಿಸುತ್ತಿದ್ದ ಪರಿಣತರೂ ಕೆಲವರಿದ್ದರು. ಇಂತಹ ಅತಿಪರಿಣತರು ದೂರ-ದೂರದ ಊರುಗಳಿಗೂ, ಇತರ ದೇಶ-ಪ್ರದೇಶಗಳಿಗೂ ತೆರಳಿ ಚಿಕಿತ್ಸೆ ನೀಡುತ್ತಿದ್ದರು, ಅತಿ ಗೌರವಿಸಲ್ಪಡುತ್ತಿದ್ದರು.
ಇದಕ್ಕಿಂತ ಮಿಗಿಲಾದ ಚಿಕಿತ್ಸೆಗಳಾವುವೂ ಆಗ ಲಭ್ಯವಿರಲಿಲ್ಲ. ದೇಹರಚನೆ ಹಾಗೂ ದೇಹದ ಕೆಲಸಕಾರ್ಯಗಳ ಬಗೆಗೂ ಆಗ ಹೆಚ್ಚಿನ ಅರಿವಿರಲಿಲ್ಲ. ಶವಗಳನ್ನು ಕೊಳೆಯಿಸಿ, ಎಲುಬು-ಸ್ನಾಯು ರಜ್ಜು-ನರಗಳಂತಹ ಹೊರಭಾಗಗಳನ್ನು ಪರೀಕ್ಷಿಸಲಾಗುತ್ತಿತ್ತೇ ಹೊರತು ಒಳಗಿನ ಅಂಗಗಳನ್ನು ಕೂಲಂಕಷವಾಗಿ ನೋಡುವುದಕ್ಕೆಂದು ಶವಗಳ ಅಂಗವಿಚ್ಛೇದನ ಮಾಡುತ್ತಿರಲಿಲ್ಲ. ಬದಲಿಗೆ, ಬಲಿಕೊಟ್ಟ ಪ್ರಾಣಿಗಳ ಅಂಗಗಳನ್ನು ನೋಡಿ, ಮಾನವ ಶರೀರವನ್ನು ಅವಕ್ಕೆ ಹೋಲಿಸಲಾಗುತ್ತಿತ್ತು. ಹಾಗಾಗಿ, ಹೃದಯ, ಮಿದುಳು, ಮೂತ್ರಪಿಂಡ ಇತ್ಯಾದಿಗಳ ಬಗ್ಗೆ ಆಗ ಹೆಚ್ಚಿನ ಅರಿವಿರಲಿಲ್ಲ. ಆದರೂ, ಎಲ್ಲಾ ಮನುಷ್ಯರೂ ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜೆ ಹಾಗೂ ಶುಕ್ರಗಳಿಂದಲೇ ಮಾಡಲ್ಪಟ್ಟಿದ್ದಾರೆ ಎಂಬ ಸರ್ವಸಮಭಾವವು ಅಂದಿನ ವೈದ್ಯರಲ್ಲಿತ್ತು; ಪ್ರಾಣಿಗಳೂ ಮನುಷ್ಯರಂತೆಯೇ ದೇಹರಚನೆಯುಳ್ಳ ಸಹಜೀವಿಗಳೆಂಬ ಜ್ಞಾನವೂ ಇತ್ತು.
ಹಿಂದಿನ ಶಕೆಯ (ಕ್ರಿ.ಪೂ) ಮೊದಲ ಶತಮಾನದೊಳಗೆ ರಚಿಸಲ್ಪಟ್ಟ ಚರಕ-ಸುಶ್ರುತ ಸಂಹಿತೆಗಳಲ್ಲಿ ಆ ಕಾಲದ ವೈದ್ಯಕೀಯ ಜ್ಞಾನವೆಲ್ಲವೂ ಸವಿವರವಾಗಿ ದಾಖಲಿಸಲಾಗಿವೆ, ಅನ್ಯ ನಾಗರಿಕತೆಗಳಲ್ಲಿ ಬೆಳೆದಿದ್ದ ವೈದ್ಯಕೀಯ ಪದ್ಧತಿಗಳೂ ಉಲ್ಲೇಖಿತವಾಗಿವೆ. ರೋಗಗಳಿವೆ, ಅವುಗಳಿಗೆ ಗುರುತಿಸಬಲ್ಲ ಕಾರಣಗಳೂ ಇವೆ, ಮತ್ತು ಅವನ್ನು ಗುಣಪಡಿಸುವ ವಿಧಾನಗಳೂ ಇವೆ ಎನ್ನುವುದು ನಿರ್ವಿವಾದಿತ ಸಿದ್ಧಾಂತಗಳೆಂದು ಈ ಸಂಹಿತೆಗಳಲ್ಲಿ ಮನ್ನಣೆಯನ್ನು ನೀಡಲಾಗಿದೆ. ರೋಗದ ಚಿಕಿತ್ಸೆಯಲ್ಲಿ ರೋಗಿ, ವೈದ್ಯ, ದಾದಿ ಮತ್ತು ಔಷಧಗಳಲ್ಲದೆ ಬೇರಾವುದಕ್ಕೂ ಪಾತ್ರವಿಲ್ಲ ಎಂದೂ ಅವುಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹೀಗೆ ವೈದ್ಯಪದ್ಧತಿಗೊಂದು ವೈಚಾರಿಕ ಬುನಾದಿಯನ್ನು ಅವು ಒದಗಿಸಿದ್ದವು ಎನ್ನಲಡ್ಡಿಯಿಲ್ಲ. ಆದರೆ, ಹೆಚ್ಚಿನ ತಂತ್ರಜ್ಞಾನಗಳ ಸುಳಿವೇನೂ ಅಲ್ಲಿಲ್ಲ.
ಆದರೆ ಭಾರತೀಯ ವೈದ್ಯಪದ್ಧತಿಗೆ ಈ ಬುನಾದಿಯಿಂದ ಮೇಲೇಳಲು ಸಾಧ್ಯವಾಗಲಿಲ್ಲ. ಋಗ್ವೇದಾನಂತರದಲ್ಲಿ ವೈದ್ಯರ ವೈಚಾರಿಕತೆಯ ಮೇಲೆ ದಾಳಿಗಳಾಗತೊಡಗಿದವು. ಅವುಗಳನ್ನೆದುರಿಸಲು ವೈದ್ಯರು ಕೆಲ ಹೊಂದಾಣಿಕೆಗಳನ್ನು ಮಾಡತೊಡಗಿದರು (ಚರಕ ಸಂಹಿತೆಯಲ್ಲೇ ಇವಕ್ಕೆ ಸಾಕ್ಷ್ಯಗಳಿವೆ). ಅಂತೂ, ಬುದ್ಧನ ಕಾಲದಲ್ಲಿ (ಹಿಂದಿನ ಶಕೆಯ ಆರನೇ ಶತಮಾನ) ಉಚ್ಛ್ರಾಯದಲ್ಲಿದ್ದ ಭಾರತೀಯ ವೈದ್ಯಪದ್ಧತಿಯು ಈ ಶಕೆಯ (ಕ್ರಿ.ಶ) ಮೊದಲ ಶತಮಾನದ ಬಳಿಕ ಅವನತಿಯ ಹಾದಿ ಹಿಡಿಯಿತು.
ಸಿಂಧೂ ನಾಗರಿಕತೆಯಲ್ಲೂ, ವೇದಕಾಲದ ನಾಗರಿಕತೆಯ (ಹಿಂದಿನ ಶಕೆಯ 16ನೇ ಶತಮಾನ) ಆರಂಭದಲ್ಲೂ ವೈದ್ಯರ ಮೇಲಿನ ಪ್ರೀತಿ-ಗೌರವಗಳು ಉತ್ಕಟವಾಗಿಯೇ ಇದ್ದವು. ಋಗ್ವೇದದಲ್ಲಿ ರುದ್ರ, ಅಶ್ವಿನಿ, ಸೋಮ, ವರುಣ, ಆಪಃ, ಮರುತ್ತುಗಳು ಮುಂತಾದವರ ವೈದ್ಯಕೀಯ ಸಾಮರ್ಥ್ಯಗಳನ್ನು ಹಾಡಿಹೊಗಳಿ ಅತಿ ಹೆಚ್ಚಿನ ಗೌರವವನ್ನು ವ್ಯಕ್ತಪಡಿಸಲಾಗಿತ್ತು. ಆದರೆ ಋಗ್ವೇದಾನಂತರದಲ್ಲಿ ವೈದ್ಯರನ್ನು ಕೀಳುದರ್ಜೆಗಿಳಿಸಿ ದೂರವಿಡಲಾಯಿತು.
ಅಶ್ವಿನಿ ದೇವತೆಗಳು ಯಜ್ಞದ ಹವಿಸ್ಸನ್ನು ಸ್ವೀಕರಿಸಬೇಕೆಂದು ಋಗ್ವೇದವು ಗೌರವಪೂರ್ವಕವಾಗಿ ಆಹ್ವಾನಿಸಿದ್ದರೆ, ಯಜುರ್ವೇದವು ಅವರನ್ನು ಅಶುದ್ಧರೆಂದು ಹೀಗಳೆದು, ಶುದ್ಧೀಕರಣಗೊಂಡ ಬಳಿಕವಷ್ಟೇ ಹವಿಸ್ಸನ್ನು ದಯಪಾಲಿಸಿತು. ಸಾಮಾನ್ಯ ಮನುಷ್ಯರ ನಡುವೆ ಸಂಚರಿಸುವ ವೈದ್ಯರು ಅಶುದ್ಧರೆಂದೂ, ಅದೇ ಕಾರಣಕ್ಕೆ ಬ್ರಾಹ್ಮಣರು ವೈದ್ಯವೃತ್ತಿಗಿಳಿಯಬಾರದೆಂದೂತೈತ್ತರೀಯ ಸಂಹಿತೆಯಲ್ಲಿ ವಿಧಿಸಲಾಯಿತು(ತೈ ಸಂ vi.4.9). ತದನಂತರದ ಹಲವು ಧರ್ಮಶಾಸ್ತ್ರಗಳಲ್ಲೂ, ಮನುಸ್ಮೃತಿಯಲ್ಲೂ ವೈದ್ಯರಹೊರಗಿಡುವಿಕೆಯು ಇನ್ನಷ್ಟು ಹೆಚ್ಚಿತು.
ಶ್ರೇಣೀಕೃತ ವ್ಯವಸ್ಥೆಯ ಸೋಂಕಿಲ್ಲದ ಋಗ್ವೇದವು ವೈದ್ಯರನ್ನು ಹೊಗಳಿತಾದರೆ, ಶ್ರೇಣೀಕೃತ ವ್ಯವಸ್ಥೆಯನ್ನೂ, ಯಜ್ಞ-ಯಾಗಾದಿಗಳ ಪಾರಮ್ಯವನ್ನೂ ಸಾರತೊಡಗಿದ ಧರ್ಮಶಾಸ್ತ್ರಗಳು ವೈದ್ಯರನ್ನು ಅಗ್ರ ವೈರಿಗಳಂತೆ ಬಿಂಬಿಸಿದವು. ಇವು ಸಾಮಾನ್ಯ ಮನುಷ್ಯರನ್ನು ಬೇರೆಯಾಗಿಸಿದ್ದಲ್ಲದೆ, ಮನುಷ್ಯರೆಲ್ಲರೂ ಒಂದೇ ಎನ್ನುತ್ತಿದ್ದ ವೈದ್ಯರನ್ನೂ ಹೊರಗಿಟ್ಟವು, ಸ್ವಚ್ಛತೆಗೆ ಅತಿ ಹೆಚ್ಚಿನ ಆದ್ಯತೆಯಿತ್ತಿದ್ದ ವೈದ್ಯರನ್ನೇ ಅಶುದ್ಧರಾಗಿಸಿದವು. ವೈದ್ಯರು ರೋಗಗಳ ಕಾರಣ ಹಾಗೂ ಚಿಕಿತ್ಸೆಗಳಲ್ಲಿ ಅಗೋಚರ ಶಕ್ತಿಗಳ ಪಾತ್ರವನ್ನು ಅಲ್ಲಗಳೆಯುತ್ತಿದ್ದುದು, ದೇವರು, ಕರ್ಮ ಇತ್ಯಾದಿಗಳನ್ನು ಕಡೆಗಣಿಸಿ, ರೋಗನಿವಾರಣೆಯಲ್ಲಿ ಪುರೋಹಿತವರ್ಗಕ್ಕೆ ಪಾತ್ರವನ್ನು ನಿರಾಕರಿಸುತ್ತಿದ್ದುದು, ಹಾಗೂ ಎಲ್ಲಾ ಪಶು-ಪಕ್ಷಿಗಳ ಮಾಂಸವನ್ನು ಆರೋಗ್ಯವರ್ಧಕವೆಂದು ಉತ್ತೇಜಿಸುತ್ತಿದ್ದುದು ಧರ್ಮಶಾಸ್ತ್ರಕಾರರ ಪಾಲಿಗೆ ಅಪಾಯಕಾರಿಯೆನಿಸಿದವು.
ಆಯುರ್ವೇದವು ಸ್ಥಗಿತವಾಯಿತು. ವೈದ್ಯವೃತ್ತಿಯು ಕೆಲವರಲ್ಲಷ್ಟೇ ಉಳಿಯಿತು; ಬಡಗಿ, ಚಮ್ಮಾರ, ಕಮ್ಮಾರ, ಕ್ಷೌರಿಕ ಮುಂತಾದವರು ಶಸ್ತ್ರಚಿಕಿತ್ಸಕರಾದರು. ಮೈಸೂರು ಯುದ್ಧದಲ್ಲಿ ಟಿಪ್ಪುವಿನ ಸೈನಿಕರು ಮರಾಠಿ ಸೈನಿಕನ ಮೂಗನ್ನು ಕತ್ತರಿಸಿದಾಗ, ಪೂನಾದ ಇಟ್ಟಿಗೆ ತಯಾರಕನು ಅದನ್ನು ಸರಿಪಡಿಸಬೇಕಾಯಿತು. ಅದರ ಸಚಿತ್ರ ವರದಿಗಳು 1793ರ ಮದ್ರಾಸ್ ಗಜೆಟ್ ನಲ್ಲೂ, 1794ರ ಜಂಟಲ್ ಮನ್ಸ್ ಮ್ಯಾಗಜಿನ್ ನಲ್ಲೂ ಪ್ರಕಟವಾದವು; ಅವೇ ಚಿತ್ರಗಳನ್ನು ಸುಶ್ರುತನ ಹೆಸರಲ್ಲಿ ತೋರಿಸಲಾಗುತ್ತಿದೆ!
ಆದರೆ ವೈದ್ಯವಿಜ್ಞಾನದ ಬೆಳವಣಿಗೆಯನ್ನು ಯಾರಿಗೂ ತಡೆಯಲಾಗಲಿಲ್ಲ; ಒಂದೆಡೆ ಅಡ್ಡಿಯಾದಾಗ ಅದು ಇನ್ನೊಂದೆಡೆ ಬೆಳೆಯಿತು. ಇಲ್ಲಿನ ವೈದ್ಯಪದ್ಧತಿಯು ಧರ್ಮಶಾಸ್ತ್ರಗಳಿಂದ ನಲುಗಿ ಮೊದಲ ಶತಮಾನಕ್ಕೇ ಜಡ್ಡುಗಟ್ಟಿದರೆ, ಗ್ರೀಕ್ ವೈದ್ಯಪದ್ಧತಿಯೂ 2-3ನೇ ಶತಮಾನದ ವೇಳೆಗೆ ಯುದ್ಧಗಳಿಂದಾಗಿ ದಣಿದು ಬಿತ್ತು. ಯೂರೋಪಿನಲ್ಲೂ ಧರ್ಮಾಧಿಕಾರಿಗಳ ಒತ್ತಡಕ್ಕೆ ಸಿಲುಕಿದ ವೈದ್ಯವಿಜ್ಞಾನವು 4-16ನೇ ಶತಮಾನದವರೆಗೂ ನರಳಿತು. ಆ ಬಳಿಕ, ಯೂರೋಪಿನ ನವೋದಯದಲ್ಲಿ, ವೈದ್ಯವಿಜ್ಞಾನವು ಹೊಸ ಶಕ್ತಿಯೊಂದಿಗೆ ಮುನ್ನಡೆದು ವೇಗವಾಗಿ ಬೆಳೆಯಿತು. ಚರಕಸಂಹಿತೆಯು ಹೃದಯವನ್ನು ದಶ ಮಹಾಧಮನಿಗಳ ಮೂಲವೆಂದು (ಸೂತ್ರಸ್ಥಾನ 30:3-4) ಹೇಳಿ ಸುಮ್ಮನಾಗಬೇಕಾಯಿತು; ಅದು ರಕ್ತವನ್ನೆತ್ತುವ ರೇಚಕವೆಂದು ತೋರಿಸುವುದಕ್ಕೆ 1628ರಲ್ಲಿ ಇಂಗ್ಲೆಂಡಿನ ವಿಲಿಯಂ ಹಾರ್ವೇ ಬೇಕಾಯಿತು. ಆಧುನಿಕ ವೈದ್ಯವಿಜ್ಞಾನವು 18ನೇ ಶತಮಾನದಲ್ಲಿ ಇಲ್ಲಿಗೆ ಬಂದಾಗ ಧರ್ಮಶಾಸ್ತ್ರಕಾರರು ಸುಮ್ಮನಿರಬೇಕಾಯಿತು.
ಆದರೂ ಮತಧರ್ಮಗಳ ಹೆಸರಲ್ಲಿ ವಿಜ್ಞಾನ ಹಾಗೂ ವೈಚಾರಿಕತೆಗಳಿಗೆ ಅಡ್ಡಿ-ಆತಂಕಗಳನ್ನುಂಟು ಮಾಡುವುದು ಇನ್ನೂ ನಿಂತಿಲ್ಲ. ಚಿಕಿತ್ಸೆ ಹಾಗೂ ಆಹಾರಕ್ರಮಗಳಲ್ಲಿ ಮೂಗು ತೂರಿಸುವುದು, ರೋಗನಿವಾರಣೆಗೆ ಧ್ಯಾನ-ಪ್ರಾರ್ಥನೆಗಳನ್ನೇ ನೆಚ್ಚಿಕೊಳ್ಳುವಂತೆ ಪ್ರೇರೇಪಿಸುವುದು ಈಗಲೂ ಮುಂದುವರಿದಿವೆ. ಅವೇನಿದ್ದರೂ ಕೊನೆಗೆ ವೈಚಾರಿಕ ಚಿಂತನೆಯೇ ಗೆಲ್ಲುತ್ತದೆನ್ನುವುದಕ್ಕೆ ವೈದ್ಯವಿಜ್ಞಾನದ ಬೆಳವಣಿಗೆಯೇ ಅತ್ಯುತ್ತಮ ನಿದರ್ಶನವಾಗಿದೆ.
ಅರುವತ್ತೇಳನೇ ಬರಹ : ಮಾರಕವಾಗಲಿರುವ ಹೊಸ ಆರೋಗ್ಯ ನೀತಿ [ಜನವರಿ 7, 2015, ಬುಧವಾರ] [ನೋಡಿ | ನೋಡಿ]
ಆಧುನಿಕ ವೈದ್ಯವಿಜ್ಞಾನ, ಸರಕಾರಿ ಆಸ್ಪತ್ರೆಗಳ ಬದಲಿಗೆ ಆಯುಷ್ ಚಿಕಿತ್ಸೆ, ಖಾಸಗಿ ಆಸ್ಪತ್ರೆಗಳ ಕಡೆಗೆ ಒತ್ತು ನೀಡಲಾಗಿದೆ
ಕೇಂದ್ರದ ಹೊಸ ಸರಕಾರವು ಹೊಸವರ್ಷಕ್ಕೆ ಹೊಸ ಆರೋಗ್ಯ ನೀತಿಯ ಕರಡನ್ನು ಪ್ರಕಟಿಸಿದೆ. ಅದರಲ್ಲಿ ದೇಶದ ಆರೋಗ್ಯ ಸೇವೆಗಳ ಕುಂದುಕೊರತೆಗಳ ಪಟ್ಟಿಯಿದೆ, ಆದರೆ ನಿರ್ದಿಷ್ಟ ಪರಿಹಾರವೆಲ್ಲೂ ಕಾಣುವುದಿಲ್ಲ. ಸರಕಾರಿ ಆರೋಗ್ಯ ಸೇವೆಗಳನ್ನು ಬಲಪಡಿಸುವ ಬದಲು ಖಾಸಗಿ ವ್ಯವಸ್ಥೆಗೆ ಉತ್ತೇಜನ, ಖಾಸಗಿ ಸಂಸ್ಥೆಗಳನ್ನು ನಿಯಂತ್ರಿಸುವ ಬದಲು ಶರಣಾಗತಿ, ಆಧುನೀಕರಣದ ಬದಲು ಗತವ್ಯವಸ್ಥೆಗಳ ವೈಭವೀಕರಣ ಅಲ್ಲಿ ಎದ್ದು ಕಾಣುತ್ತವೆ.
ಆರೋಗ್ಯ ರಕ್ಷಣೆಗೆ ಅತಿ ಸಮರ್ಥವಾದ ವಿಧಾನಗಳಿವೆಯಾದರೂ ಅತಿ ಹೆಚ್ಚು ಅಗತ್ಯವುಳ್ಳವರಿಗೆ ಅವನ್ನು ಸಮಗ್ರವಾಗಿ, ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ಕರಡಿನ ಮೊದಲಲ್ಲೇ ಹೇಳಲಾಗಿದೆ. ರಾಜ್ಯ-ಪ್ರದೇಶಗಳ ನಡುವೆ, ಹಳ್ಳಿ-ಪಟ್ಟಣಗಳ ನಡುವೆ, ಬಡವರು ಮತ್ತು ಸ್ಥಿತಿವಂತರ ನಡುವೆ ಆರೋಗ್ಯ ಸೇವೆಗಳ ಬಳಕೆಯಲ್ಲಿ ಅಗಾಧ ವ್ಯತ್ಯಾಸಗಳಿರುವುದನ್ನು ಅದರಲ್ಲಿ ಗುರುತಿಸಲಾಗಿದೆ. ಉಚಿತ ಸಾರ್ವತ್ರಿಕ ಆರೋಗ್ಯ ಸೇವೆಗಳ ನ್ಯೂನತೆಗಳಿಂದಾಗಿ ಗಂಭೀರ ರೋಗಗಳಿಗೆ ತಮ್ಮ ಕಿಸೆಯಿಂದಲೇ ವಿಪರೀತ ಖರ್ಚು ಮಾಡಿ ಪ್ರತೀ ವರ್ಷ ಆರೂವರೆ ಕೋಟಿ ಜನರು ಬಡವರಾಗುತ್ತಿದ್ದಾರೆ ಎಂದು ಒಪ್ಪಿಕೊಳ್ಳಲಾಗಿದೆ. ಆದರೆ ಇವನ್ನು ಸುಧಾರಿಸಬಲ್ಲ ಯೋಜನೆಗಳಾವುವೂ ಕರಡಿನ ಕೊನೆಯಕ್ಷರದವರೆಗೆ ಕಾಣಸಿಗುವುದಿಲ್ಲ.
ಎಲ್ಲರಿಗೂ ಉಚಿತ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಖಾತರಿ ಪಡಿಸುವ ಆಶಯವು ಅದರಲ್ಲಿದ್ದರೂ, ಕೇವಲ ಸರಕಾರದಿಂದಷ್ಟೇ ಅದು ಸಾಧ್ಯವಿಲ್ಲವೆಂದೂ ಹೇಳಲಾಗಿದೆ. ನಾವು ಈಗಾಗಲೇ ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಅತ್ಯಂತ ಕಡಿಮೆ ವ್ಯಯಿಸುವ ದೇಶವೆಂಬ ಕುಖ್ಯಾತಿಯನ್ನು ಹೊಂದಿದ್ದು, ವರ್ಷದಿಂದ ವರ್ಷಕ್ಕೆ ಅದನ್ನು ಇನ್ನಷ್ಟು ಇಳಿಸುತ್ತಿದ್ದೇವೆ. ಹನ್ನೆರಡನೇ ಯೋಜನೆ (2012-17) ಯಲ್ಲಿ ರಾಷ್ಟ್ರೀಯ ಉತ್ಪನ್ನದ ಶೇ. 3ನ್ನು ಆರೋಗ್ಯ ಸೇವೆಗಳಿಗೆ ಒದಗಿಸುವ ಆಶಯವಿತ್ತು; ಹೊಸ ನೀತಿಯಲ್ಲಿ ಅದನ್ನು ಶೇ. 2.5ಕ್ಕಿಳಿಸಲಾಗಿದೆ. ಕಳೆದ ಸರಕಾರವು 2013-14ರಲ್ಲಿ ಆರೋಗ್ಯ ಸೇವೆಗಳಿಗಾಗಿ 33 ಸಾವಿರ ಕೋಟಿ (ರಾಷ್ಟ್ರೀಯ ಉತ್ಪನ್ನದ ಶೇ. 1ಕ್ಕಿಂತಲೂ ಕಡಿಮೆ) ಒದಗಿಸಿ, ಕೊನೆಗೆ ವಿತ್ತೀಯ ಕೊರತೆಯನ್ನು ನೀಗಿಸಲೆಂದು ಅದನ್ನು ಕತ್ತರಿಸಿತ್ತು. ಈ ಹೊಸ ಸರಕಾರವೂ 2014-15ರಲ್ಲಿ 30 ಸಾವಿರ ಕೋಟಿ ಒದಗಿಸಿ, ಡಿಸೆಂಬರ್ ಕೊನೆಗೆ 6000 ಕೋಟಿಗಳನ್ನು ಕತ್ತರಿಸಿದೆ. ಈಗ ಕೊಡಮಾಡಿರುವ ಶೇ. 2.5ರ ಸಣ್ಣ ಮೊತ್ತಕ್ಕೂ ಆ ಕರಡಿನಲ್ಲೇ ಸಂಚಕಾರವಿದೆ: ಈ ಗುರಿಯನ್ನು ತಲುಪಲು ಇನ್ನಷ್ಟು ಕಾಲ ಬೇಕಾಗಬಹುದೆಂದೂ, ಆರೋಗ್ಯ ಸೇವೆಗಳ ಖಾತರಿಗಾಗಿ ಹೊಸ ಆರೋಗ್ಯ ಕರವನ್ನು ವಿಧಿಸಬೇಕಾಗಬಹುದೆಂದೂ ಹೇಳಲಾಗಿರುವುದು ಸರಕಾರದ ನಿರಾಸಕ್ತಿಯನ್ನೂ, ದಿವಾಳಿತನವನ್ನೂ ಸೂಚಿಸುತ್ತದೆ.
ಸರಕಾರಿ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವ ಬಗ್ಗೆ ಹೊಸ ನೀತಿಯಲ್ಲಿ ಹೆಚ್ಚೇನೂ ಹೇಳಲಾಗಿಲ್ಲ. ಬದಲಿಗೆ, ಎಲ್ಲರ ಕೈಗೊಂದು ಆರೋಗ್ಯ ಕಾರ್ಡನ್ನು ಕೊಟ್ಟು, ವಿಮೆಯಾಧಾರಿತ ಸೇವೆಗಳನ್ನೊದಗಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಸ್ಥಿತಿವಂತರು ಸರಕಾರಿ ಆಸ್ಪತ್ರೆಗಳನ್ನು ಬಳಸಬಹುದು ಅಥವಾ ಹೆಚ್ಚಿನ ಹಣಕ್ಕೆ ದೊಡ್ಡ ಮೊತ್ತದ ವಿಮೆಯನ್ನು ಪಡೆದು ಖಾಸಗಿ ಆಸ್ಪತ್ರೆಗಳಲ್ಲಿ ಉನ್ನತ ಸೇವೆಗಳನ್ನು ಪಡೆಯಬಹುದು. ಹಾಗೆ ಮಾಡಲಾಗದ ಬಡವರು ತಮ್ಮ ಕಾರ್ಡಿಗೆ ತಕ್ಕ ಸೇವೆಗಳನ್ನಷ್ಟೇ ಪಡೆಯಬೇಕು! ಈಗಲೂ ಇರುವ ಯಶಸ್ವಿನಿಯಂತಹ ವಿಮಾಧಾರಿತ ಯೋಜನೆಗಳು ಆಯ್ದ ಜನವರ್ಗಗಳಿಗೆ, ಆಯ್ದ ಆಸ್ಪತ್ರೆಗಳಲ್ಲಿ ಸೀಮಿತ ಚಿಕಿತ್ಸೆಯನ್ನಷ್ಟೇ ಒದಗಿಸುತ್ತವೆ, ಅದಕ್ಕಾಗಿ ಬೊಕ್ಕಸದ ಹಣವು ಖಾಸಗಿ ಆಸ್ಪತ್ರೆಗಳಿಗೆ ಸುರಿಯಲ್ಪಡುತ್ತದೆ. ಹೊಸ ಆರೋಗ್ಯ ನೀತಿಯು ಇದೇ ಮಾದರಿಯನ್ನು ಇನ್ನಷ್ಟು ಗಟ್ಟಿಗೊಳಿಸಲಿರುವುದರಿಂದ ಸರಕಾರಿ ಆಸ್ಪತ್ರೆಗಳು ಸೊರಗಿ, ಖಾಸಗಿ ಆಸ್ಪತ್ರೆಗಳು ಬೆಳೆಯಲಿವೆ, ಅತಿಬಡವರು ಹಾಗೂ ಗ್ರಾಮೀಣವಾಸಿಗಳಿಗೆ ಇನ್ನಷ್ಟು ಕಷ್ಟಗಳಿವೆ. ವಿಶೇಷವೆಂದರೆ, ಈ ವಿಮಾ ಯೋಜನೆಗಳಲ್ಲಾಗುತ್ತಿರುವ ಮೋಸಗಳ ಬಗ್ಗೆಯೂ, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಕಷ್ಟಗಳ ಬಗ್ಗೆಯೂ ಅದೇ ಕರಡಿನಲ್ಲಿ ಹೇಳಲಾಗಿದೆ; ಆದರೆ ಅದನ್ನು ಸರಿಪಡಿಸುವ ಗೋಜಿಗೆ ಹೋಗದೆ, ಅದೇ ಮೋಸದ ವ್ಯವಸ್ಥೆಯನ್ನು ಇನ್ನಷ್ಟು ಬೆಳೆಸಲುದ್ದೇಶಿಸಲಾಗಿದೆ! ಆರೋಗ್ಯ ಸೇವೆಗಳಿಗೆ ಈಗಿರುವ ರೋಗವೇ ಮುಂದಿನ ಪರಿಹಾರ ಎಂಬಂತಾಗಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.
ಪ್ರತೀ ಸಾವಿರ ಜನರಿಗೆ ಒಂದು ಆಸ್ಪತ್ರೆ ಹಾಸಿಗೆಯನ್ನು ಒದಗಿಸುವ ಆಶಯವನ್ನು ಕರಡು ನೀತಿಯಲ್ಲಿ ಹೇಳಲಾಗಿದೆ. ಪ್ರತೀ 600 ಜನರಿಗೆ ಒಂದು ಆಸ್ಪತ್ರೆ ಹಾಸಿಗೆಯಿರಬೇಕೆಂಬ ಸ್ವತಂತ್ರ ಭಾರತದ ಮೊದಲ ಸರಕಾರದ ಆಶಯವು ಇಲ್ಲೂ ಮರೀಚಿಕೆಯಾಗಿ ಉಳಿದಿದೆ. ದ್ವಿತೀಯ ಹಾಗೂ ತೃತೀಯ ಸ್ತರದ ಆಸ್ಪತ್ರೆಗಳನ್ನು ಸರಕಾರವೇ ಕಟ್ಟುವ ಬಗ್ಗೆ ಯಾವ ಉತ್ಸುಕತೆಯೂ ಹೊಸ ನೀತಿಯಲ್ಲಿಲ್ಲ; ಬದಲಿಗೆ, ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳುವ ಬಗ್ಗೆ ಅಲ್ಲಲ್ಲಿ ಹೇಳಲಾಗಿದೆ.
ಹೊಸ ಆರೋಗ್ಯ ನೀತಿಯಲ್ಲಿ ಖಾಸಗಿ ಆರೋಗ್ಯ ಸೇವೆಗಳ ಬಗ್ಗೆ ಅತಿ ಮೃದುವಾದ ಧೋರಣೆಯನ್ನು ತಳೆದು ಸರಕಾರವು ತನ್ನ ದೌರ್ಬಲ್ಯವನ್ನು ಜಗಜ್ಜಾಹೀರುಗೊಳಿಸಿದೆ. ಸಾರ್ವಜನಿಕ ಭೂಮಿಯನ್ನೂ, ಹಲಬಗೆಯ ತೆರಿಗೆ ವಿನಾಯಿತಿಗಳನ್ನೂ ಪಡೆದಿರುವ ಹೆಚ್ಚಿನ ಬೃಹತ್ ಖಾಸಗಿ ಆಸ್ಪತ್ರೆಗಳು ತಮ್ಮ ಬಾಧ್ಯತೆಗಳನ್ನು ಮರೆಯುತ್ತವೆ ಎಂದು ಕರಡಿನಲ್ಲಿ ಒಪ್ಪಿಕೊಳ್ಳಲಾಗಿದೆ. ಆದರೆ, ಈ ಆಸ್ಪತ್ರೆಗಳು ವಿದೇಶಿ ರೋಗಿಗಳಿಗೆ ಚಿಕಿತ್ಸೆ ನೀಡಿ ದೇಶದ ಆರ್ಥಿಕ ಪ್ರಗತಿಗೆ ನೆರವಾಗುವುದರಿಂದ ನಮ್ಮ ದೇಶದ ಬಡಜನರಿಗೆ ಚಿಕಿತ್ಸೆ ನೀಡುವಂತೆ ಅವುಗಳ ಮೇಲೆ ಒತ್ತಡ ಹೇರಬೇಕಾದ ಅಗತ್ಯವಿಲ್ಲವೆಂದು ಹೇಳಲಾಗಿದೆ! ಅಂದರೆ, ಈ ದೇಶದ ಬಡವರಿಗೆ ಚಿಕಿತ್ಸೆ ನೀಡುವ ಭರವಸೆಯಿತ್ತು ಸರಕಾರಿ ಭೂಮಿಯನ್ನೂ, ತೆರಿಗೆ ವಿನಾಯಿತಿಗಳನ್ನೂ ಪಡಕೊಂಡು, ನಂತರ ಅದೇ ಬಡವರನ್ನು ಒಳಕ್ಕೂ ಬಿಡದೆ ವಿದೇಶೀಯರಿಗೆ ಚಿಕಿತ್ಸೆ ಕೊಟ್ಟರೆ ಅದರಿಂದಲೇ ದೇಶೋದ್ಧಾರವಾಗುತ್ತದೆ ಎಂದು ಈ ಹೊಸ ಆರೋಗ್ಯ ನೀತಿಯು ಖಾಸಗಿ ಉದ್ಯಮಕ್ಕೆ ಶರಣಾಗಿದೆ!
ಹಾಗೆಯೇ, ಒಂದೆಡೆ ಖಾಸಗಿ ವೈದ್ಯಕೀಯ ಕಾಲೇಜುಗಳ ಲಾಭಕೋರತನವನ್ನು ಪ್ರಸ್ತಾಪಿಸಿ, ಇನ್ನೊಂದೆಡೆ, ಇನ್ನಷ್ಟು ಖಾಸಗಿ ಕಾಲೇಜುಗಳನ್ನು ಸ್ಥಾಪಿಸುವ ಇಂಗಿತವನ್ನು ವ್ಯಕ್ತಪಡಿಸಲಾಗಿದೆ! ವೈದ್ಯಕೀಯ ಶಿಕ್ಷಣವನ್ನು ನಿಯಂತ್ರಿಸುತ್ತಿರುವ ನಾಲ್ಕು ಮಂಡಳಿಗಳ ವೈಫಲ್ಯವು ಚಿಂತಾಜನಕವಾಗಿದೆ ಎನ್ನಲಾಗಿದ್ದರೂ, ಅದನ್ನು ಸರಿಪಡಿಸುವ ಯಾವ ಯೋಜನೆಯನ್ನೂ ಹೇಳದೆ ಕೈಚೆಲ್ಲಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಆಧುನಿಕ ವೈದ್ಯರ ಸೇವೆಗಳನ್ನು ಉತ್ತೇಜಿಸುವುದಕ್ಕೆ ಯಾವೊಂದು ಉಪಕ್ರಮವೂ ಈ ಹೊಸ ನೀತಿಯಲ್ಲಿಲ್ಲ. ಬದಲಿಗೆ, ಬಡವರು ಹಾಗೂ ಗ್ರಾಮೀಣವಾಸಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಆಯುಷ್ ವೈದ್ಯರು, ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯದಲ್ಲಿ ಬಿಎಸ್ಸಿ ಪದವೀಧರರು, ಫಾರ್ಮಸಿಸ್ಟ್ ಗಳು, ದಾದಿಯರನ್ನು ನಿಯೋಜಿಸುವ ಬಗ್ಗೆಯೂ, ಅದಕ್ಕಾಗಿ ಟೆಲಿಮೆಡಿಸಿನ್ ನಂತಹ ತಂತ್ರಜ್ಞಾನಗಳನ್ನು ಬಳಸುವ ಬಗ್ಗೆಯೂ ಹೇಳಲಾಗಿದೆ.
ಹೊಸ ನೀತಿಯಲ್ಲಿ ಏಳು ಆದ್ಯತೆಗಳ ಹೆಸರಲ್ಲಿ ಹಳೇ ಹೂಗಳ ಹೊಸ ಗುಚ್ಛವನ್ನು ತೋರಿಸಲಾಗಿದೆ. ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗಗಳಾಗಲೀ, ಆಧುನಿಕ ರೋಗಗಳಾಗಲೀ ಅದರಲ್ಲಿಲ್ಲ; ಇವುಗಳ ಕಾರಣಗಳು ಮತ್ತು ನಿವಾರಣೋಪಾಯಗಳ ಬಗ್ಗೆ ಸ್ಥಳೀಯ ಸಂಶೋಧನೆಗಳನ್ನು ಉತ್ತೇಜಿಸುವ ಯೋಜನೆಯೂ ಇಲ್ಲ.
ಆರೋಗ್ಯ ಕ್ಷೇತ್ರದಲ್ಲಿ ಸಾಕ್ಷ್ಯಾಧಾರಿತ ವಿಧಾನಗಳಿಗೆ ಪ್ರಾಮುಖ್ಯತೆಯಿರಬೇಕೆಂದು ಒಂದೆಡೆ ಹೇಳಲಾಗಿದ್ದರೂ, ಸಾಕ್ಷ್ಯಾಧಾರಗಳಿಲ್ಲದ ಬದಲಿ ಪದ್ಧತಿಗಳ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿ, ಅತಿ ಪ್ರಾಶಸ್ತ್ಯವನ್ನು ನೀಡಲಾಗಿದೆ! ಬದಲಿ ಪದ್ಧತಿಗಳಿಗೆ ಯಾವುದೇ ಸಂಬಂಧವಿಲ್ಲದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಆಯುಷ್ ಚಿಕಿತ್ಸಕರಿಗೆ ವಹಿಸಿಕೊಡುವ ಬೇಜವಾಬ್ದಾರಿ ಯೋಜನೆಯು ಅದರಲ್ಲಿದೆ. ಆಧುನಿಕ ವೈದ್ಯಕೀಯ ಸಂಶೋಧನೆಗಳಿಗೂ, ಚಿಕಿತ್ಸಾ ಸೌಲಭ್ಯಗಳಿಗೂ ಹೆಚ್ಚಿನ ಹಣ ಒದಗಿಸುವ ಬಗ್ಗೆ ಚಕಾರವಿಲ್ಲದೆ, ಬದಲಿ ಚಿಕಿತ್ಸೆಗಳಿಗೆ ಹೆಚ್ಚಿನ ಧನಸಹಾಯದ ಭರವಸೆಯನ್ನು ನೀಡಲಾಗಿದೆ. ಹೊಸ ನೀತಿಯು ಸಾಕ್ಷ್ಯಾಧಾರಿತ ಆಧುನಿಕ ವೈದ್ಯರನ್ನು ಮರೆತು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ, ಎಲ್ಲಾ ಉನ್ನತ ದರ್ಜೆಯ ಆಧುನಿಕ ಆಸ್ಪತ್ರೆಗಳಲ್ಲೂ ಬದಲಿ ಚಿಕಿತ್ಸಕರನ್ನು ನೇಮಿಸಹೊರಟಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ಆಯುಷ್ ಚಿಕಿತ್ಸಕರಿಗೆ ಆಧುನಿಕ ಔಷಧಗಳ ಬಳಕೆಯಲ್ಲಿ ಕಡ್ಡಾಯ ತರಬೇತಿ ನೀಡಿ, ಆರೋಗ್ಯ ಸೇವೆಗಳಲ್ಲಿ ನಿಯೋಜಿಸಲಾಗುವುದೆಂದು ಈ ಕರಡಿನಲ್ಲಿ ಹೇಳಲಾಗಿದೆ. ವೈದ್ಯವೃತ್ತಿಯೆಂದರೆ ಕೇವಲ ಔಷಧಗಳನ್ನು ಕೊಡುವುದಷ್ಟೇ ಅಲ್ಲ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದ ಈ ಆರೋಗ್ಯ ನೀತಿಯು ವೈದ್ಯ ವಿಜ್ಞಾನಕ್ಕಷ್ಟೇ ಅಲ್ಲ, ದೇಶದ ಎಲ್ಲ ನಾಗರಿಕರಿಗೂ ಅವಮಾನಕಾರಿಯಾಗಿದೆ, ಅಪಾಯಕಾರಿಯಾಗಿದೆ. ರಾಷ್ಟ್ರೀಯ ಆರೋಗ್ಯ ಸೇವೆಗಳಲ್ಲಿ ಆಯುಷ್ ವೈದ್ಯರ ನಿಯೋಜನೆಯನ್ನು ತಡೆಯುವಲ್ಲಿ ವಿಫಲವಾಗಿರುವ ಭಾರತೀಯ ವೈದ್ಯಕೀಯ ಸಂಘವು ಈಗಲೂ ಸುಮ್ಮನಿರುವುದೇ?
ಈ ಹೊಸ ನೀತಿಯನುಸಾರ ಎಲ್ಲಾ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ತಮ್ಮ ಆರೋಗ್ಯ ರಕ್ಷಣೆಗೆ ಯೋಗಾಭ್ಯಾಸವನ್ನು ಮಾಡಬೇಕಾಗುತ್ತದೆ. ಎಲ್ಲಾ ಶಾಲೆಗಳಿಗೆ ಆಟದ ಬಯಲುಗಳನ್ನು ಒದಗಿಸಿ ಮಕ್ಕಳ ಆಟೋಟಗಳನ್ನು ಉತ್ತೇಜಿಸಬೇಕಾದಲ್ಲಿ ಕೋಣೆಯೊಳಗೆ ಧ್ಯಾನಸ್ಥರಾಗುವಂತೆ ಬಲಾತ್ಕರಿಸುವುದರಿಂದ ಆರೋಗ್ಯವೂ ವೃದ್ಧಿಸದು, ಈಗಾಗಲೇ ನಲುಗುತ್ತಿರುವ ಕ್ರೀಡಾ ಕ್ಷಮತೆಯೂ ಬೆಳೆಯದು. ನೌಕರರ ಆರೋಗ್ಯ ರಕ್ಷಣೆಗೆ ಅವರ ಮೇಲಿರುವ ಒತ್ತಡಗಳನ್ನು ಇಳಿಸಬೇಕು, ಪದ್ಮಾಸನವೇಕೆ?
ಒಟ್ಟಿನಲ್ಲಿ ಈ ಹೊಸ ನೀತಿಯಡಿ ಉಚಿತ ಆರೋಗ್ಯ ಕಾರ್ಡ್ ಪಡೆದ ಬಡವರು ಸರಕಾರಿ ಆಸ್ಪತ್ರೆಗಳಲ್ಲಿ ಆಯುಷ್ ವೈದ್ಯರಿಂದಲೂ, ದಾದಿಯರಿಂದಲೂ ಚಿಕಿತ್ಸೆ ಪಡೆಯಬೇಕಾಗುತ್ತದೆ, ಆಧುನಿಕ ಉನ್ನತ ಚಿಕಿತ್ಸೆ ಬೇಕಾದವರು ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ಹಣ ಕೊಟ್ಟು ಹೋಗಬೇಕಾಗುತ್ತದೆ. ಅಂತಲ್ಲಿ ಬಡವರಿಗೆ ರೋಗ ಬಂದರೆ ಒಳ್ಳೆಯ ದಿನಗಳಿರವು.
ಅರುವತ್ತಾರನೇ ಬರಹ : ಇಬೋಲ ಯೋಧರಿಗೆ ಕೋಟಿ ನಮನಗಳು [ಡಿಸೆಂಬರ್ 24, 2014, ಬುಧವಾರ] [ನೋಡಿ | ನೋಡಿ]
ಇತಿಹಾಸದ ಅತಿ ಭೀಕರ ಇಬೋಲ ಸೋಂಕಿನೆದುರು ರಾಜಕೀಯ ಸೋತಿತು, ವೈದ್ಯಕೀಯ ಸ್ಥೈರ್ಯ ಗೆದ್ದಿತು
ಅದು ಈ ವರ್ಷದ ಅತಿ ಭೀಕರ ಯುದ್ಧ. ಅದೆಂತೋ ಒಳಹೊಕ್ಕು ಸಾಯಿಸತೊಡಗಿದ ಅಜ್ಞಾತ ವೈರಿ. ನಾಲ್ಕು ತಿಂಗಳ ಬಳಿಕ ವೈರಿಯ ಗುರುತು ಹತ್ತಿದರೂ ಎದುರಿಸಲು ಸೈನಿಕ ಬಲವಿಲ್ಲ, ತಡೆಯಲು ಕೋಟೆಕೊತ್ತಲಗಳಿಲ್ಲ, ಹೊಡೆದುರುಳಿಸಲು ಶಸ್ತ್ರಗಳಿಲ್ಲ. ತಡೆಯಲೆಂದು ತಾವಾಗಿ ಮುನ್ನುಗ್ಗಿದ ಸಾಹಸಿಗಳಿಗೂ ಗಾಯವಾದರೆ ಮದ್ದಿಲ್ಲ, ಬಿದ್ದರೆ ಎತ್ತುವವರಿಲ್ಲ. ಅಂತಲ್ಲಿ ಸ್ವಂತ ಜೀವದ ಹಂಗಿಲ್ಲದೆ, ವೈರಿಯನ್ನು ಎದೆಗೊಟ್ಟು ತಡೆದು, ಸಮಸ್ತ ಮನುಕುಲವನ್ನು ರಕ್ಷಿಸಿದ ವೀರರಿಗೆ ಟೈಮ್ ಪತ್ರಿಕೆಯಿಂದ ವರ್ಷದ ವ್ಯಕ್ತಿಗಳೆಂಬ ಪುರಸ್ಕಾರ. ನಮ್ಮದಿದೋ ಕೋಟಿ ನಮಸ್ಕಾರ
ಈ ರಣಾಂಗಣವಿರುವುದು ಪಶ್ಚಿಮ ಆಫ್ರಿಕಾದಲ್ಲಿ; ಫ್ರೆಂಚ್ ವಸಾಹತಾಗಿದ್ದ ಗಿನಿ, ಬ್ರಿಟಿಷರಾಳ್ವಿಕೆಯಲ್ಲಿದ್ದ ಸಿಯೆರ ಲಿಯೋನ್ ಹಾಗೂ ಅಮೆರಿಕಾದಿಂದ ಮರಳಿದ ಗುಲಾಮರಿಂದ ಸ್ಥಾಪಿತವಾದ ಲೈಬೀರಿಯಾಗಳಲ್ಲಿ. ಅಂತರ್ಯುದ್ಧ, ಜನಾಂಗೀಯ ಕಲಹ, ರಾಜಕೀಯ ಅಸ್ಥಿರತೆ ಇತ್ಯಾದಿಗಳಿಂದ ಮೊದಲೇ ಜರ್ಜರಿತವಾಗಿರುವ ಈ ದೇಶಗಳಲ್ಲಿ ವಿಪರೀತ ಬಡತನದ ಜೊತೆಗೆ ಮಲೇರಿಯಾ, ಕಾಲೆರಾ, ಲಾಸಾ ಜ್ವರ ಮುಂತಾದ ಮಾರಕ ರೋಗಗಳಿಂದ ನಿತ್ಯವೂ ನೂರಾರು ಜನ ಸಾಯುತ್ತಿರುತ್ತಾರೆ. ಈಗಲೂ ಎಲ್ಲದಕ್ಕೆ ಪಾಶ್ಚಿಮಾತ್ಯರೆದುರು ಕೈಚಾಚುತ್ತಿರುವ ಈ ದೇಶಗಳಲ್ಲಿ ಆಸ್ಪತ್ರೆಗಳು ಅತಿ ವಿರಳ, ಸುಸಜ್ಜಿತ ಆಸ್ಪತ್ರೆಗಳಂತೂ ಇಲ್ಲವೇ ಇಲ್ಲ. ಒಂದು ಕೋಟಿ ಜನರಿರುವ ಗಿನಿಯಲ್ಲಿ ವೈದ್ಯರ ಸಂಖ್ಯೆ 1000, 60 ಲಕ್ಷ ಜನರಿರುವ ಸಿಯೆರ ಲಿಯೋನ್ ನಲ್ಲಿ ಕೇವಲ 500, 40 ಲಕ್ಷ ಜನರಿರುವ ಲೈಬಿರಿಯಾದಲ್ಲಿ ಕೇವಲ 50!
ಹೋದ ವರ್ಷ ಡಿಸೆಂಬರ್ 26ರಂದು ಗಿನಿಯ ಮೆಲಿಯಂಡು ಎಂಬ ಕುಗ್ರಾಮದಲ್ಲಿ ಎಮಿಲ್ ಎಂಬ ಎರಡರ ಬಾಲಕನಿಗೆ ಜ್ವರ, ವಾಂತಿ, ಭೇದಿಗಳು ತೊಡಗಿದವು, ಎರಡೇ ದಿನಗಳಲ್ಲಿ ಆತ ಸಾವನ್ನಪ್ಪಿದ. ಮುಂದಿನೆರಡು ವಾರಗಳಲ್ಲಿ ಆತನ ಅಕ್ಕ, ಅಮ್ಮ, ಅಜ್ಜಿಯೂ ಮೃತರಾದರು. ಇವರ ಸಂಪರ್ಕಕ್ಕೆ ಬಂದಿದ್ದ ಇನ್ನೂ ಹಲವರಿಗೆ ರೋಗ ಹರಡಿತು, ಕೆಲವೇ ದಿನಗಳಲ್ಲಿ ಸಮೀಪದ ಊರುಗಳಲ್ಲೂ ಸಾವುಗಳಾದವು. ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ಆರೋಗ್ಯಕರ್ಮಿಗಳಲ್ಲೂ ಕೆಲವರು ಸಾವನ್ನಪ್ಪಿದರು. ಇವೆಲ್ಲವೂ ಕಾಲೆರಾ, ಮಲೇರಿಯಾ ಅಥವಾ ಲಾಸಾ ಜ್ವರದಂತಹ ಸೋಂಕುಗಳಾಗಿರಬೇಕೆಂದು ಮೊದಲು ಗ್ರಹಿಸಲಾಗಿತ್ತಾದರೂ, ಮಾರ್ಚ್ ಮಧ್ಯದ ವೇಳೆಗೆ ಆ ಬಗ್ಗೆ ಗಂಭೀರವಾದ ಪ್ರಶ್ನೆಗಳೆದ್ದವು.
ಅಂಥದ್ದೊಂದು ರೋಗವನ್ನು ಗಿನಿಯ ವೈದ್ಯರು ಆ ಮೊದಲು ಕಂಡಿರಲಿಲ್ಲ. ಆ ನಿಗೂಢ ಕಾಯಿಲೆಯನ್ನು ಗುರುತಿಸಬಲ್ಲ ವೈದ್ಯರಾಗಲೀ, ಪ್ರಯೋಗಾಲಯಗಳಾಗಲೀ ಗಿನಿಯಲ್ಲಿರಲಿಲ್ಲ. ಅದೇ ಪ್ರದೇಶದಲ್ಲಿ ಮಲೇರಿಯಾ ನಿಯಂತ್ರಣಕ್ಕಾಗಿ ದುಡಿಯುತ್ತಿದ್ದ ಮೆಡ್ಸೆನ್ ಸಾನ್ ಫ್ರಾಂಟಿಯೇರ್ (ಎಂಎಸ್ಸೆಎಫ್, ಗಡಿಯಿಲ್ಲದ ವೈದ್ಯರು) ಸಂಸ್ಥೆಯ ತಜ್ಞರು ಈ ರೋಗಿಗಳ ರಕ್ತದ ಮಾದರಿಗಳನ್ನು ಯೂರೋಪಿಗೆ ಕಳುಹಿಸಿದಾಗ ಇಬೋಲ ಸೋಂಕು ಪತ್ತೆಯಾಯಿತು. ಅಷ್ಟರೊಳಗೆ ಇಬೋಲ ಇನ್ನೂ ಹಲವರಿಗೆ ಹರಡಿತ್ತು, ನೆರೆಯ ಲೈಬೀರಿಯಾ ಹಾಗೂ ಸಿಯೆರಾ ಲಿಯೋನ್ ದೇಶಗಳ ಹಳ್ಳಿಗಳಿಗೂ ಪ್ರವೇಶಿಸಿತ್ತು.
ಅದೇ ಮೊದಲು ಕಾಣಿಸಿಕೊಂಡ ಇಬೋಲವನ್ನೆದುರಿಸಲು ಈ ದೇಶಗಳಲ್ಲಿ ಯಾವ ವ್ಯವಸ್ಥೆಗಳೂ ಇರಲಿಲ್ಲ. ಅಲ್ಲಿನ ಜನರು ಅದನ್ನು ಸುಲಭದಲ್ಲಿ ನಂಬಲಿಲ್ಲ, ಸೂಕ್ತ ಮುಂಜಾಗ್ರತೆಗಳನ್ನು ಕೈಗೊಳ್ಳಲು ಸಿದ್ಧರಾಗಲಿಲ್ಲ. ಇದು ಪಾಶ್ಚಿಮಾತ್ಯರ ಇನ್ನೊಂದು ಷಡ್ಯಂತ್ರವೆಂದುಕೊಂಡ ಕೆಲವರು ಚಿಕಿತ್ಸಾ ಕೇಂದ್ರಗಳಿಗೆ ದಾಳಿಯಿಟ್ಟು, ಇಬೋಲ ರೋಗಿಗಳನ್ನು ಹೊತ್ತೊಯ್ದ ಘಟನೆಗಳೂ ನಡೆದವು. ಅತ್ತ ರೋಗಿಗಳ ಸಂಖ್ಯೆಯು ದಿನೇದಿನೇ ಹೆಚ್ಚತೊಡಗಿದಂತೆ, ಆರೋಗ್ಯ ವ್ಯವಸ್ಥೆಯಿಡೀ ಕುಸಿಯತೊಡಗಿತು. ಶಾಲೆ-ಕಾಲೇಜು-ಸಾರ್ವಜನಿಕ ಆಗುಹೋಗುಗಳು ಮುಚ್ಚತೊಡಗಿದವು, ವಹಿವಾಟು ಸ್ಥಗಿತವಾಯಿತು, ಆರ್ಥಿಕತೆ ನೆಲ ಕಚ್ಚಿತು, ಆಡಳಿತಗಳು ದಿಕ್ಕೆಟ್ಟವು.
ಚಿಕಿತ್ಸಾ ಕೇಂದ್ರಗಳಲ್ಲಿ ಸ್ಥಳವಿಲ್ಲದೆ ರೋಗಿಗಳು ಅಲ್ಲಲ್ಲೇ ಬಿದ್ದಿರುವಂತಾಯಿತು, ನೆಲದ ಮೇಲೆಲ್ಲ ವಾಂತಿ-ಭೇದಿಗಳು ಮೆತ್ತಿಕೊಂಡು ಅಸಹನೀಯವಾಯಿತು. ಇಬೋಲದ ಬಗ್ಗೆ ಹೆದರಿಕೊಂಡ ಕೆಲ ಆರೋಗ್ಯಕರ್ಮಿಗಳು ಕೆಲಸದಿಂದ ತಪ್ಪಿಸಿಕೊಂಡದ್ದೂ ಆಯಿತು. ಅಂತಲ್ಲಿ ಬೆರಳೆಣಿಕೆಯ ವೈದ್ಯರೂ, ದಾದಿಯರೂ ಜೀವದ ಹಂಗು ತೊರೆದು ಹಗಲಿರುಳೆನ್ನದೆ ದುಡಿದರು, ತಮ್ಮಿಂದಾದಷ್ಟು ಶುಶ್ರೂಷೆ ನೀಡಿದರು. ಸೋಂಕಿಗೀಡಾದವರಲ್ಲಿ ಶೇ. 50ರಿಂದ 70ರಷ್ಟು ಸಾವನ್ನಪ್ಪುತ್ತಿದ್ದುದರಿಂದ ಶವವಾಹನಗಳ ಚಾಲಕರು, ಶವಸಂಸ್ಕಾರ ನಡೆಸುವವರು ತೀವ್ರ ಒತ್ತಡಕ್ಕೊಳಗಾದರು. ಇವೆಲ್ಲವುಗಳ ಜೊತೆಗೆ, ರೋಗಿಗಳ ಸಂಪರ್ಕಕ್ಕೆ ಬಂದಿರಬಹುದಾದ ಪ್ರತಿಯೋರ್ವರನ್ನೂ ಗುರುತಿಸಿ ಪ್ರತ್ಯೇಕಿಸುವುದು, ಹೊರ ಹೋಗದಂತೆ ತಡೆಯುವುದು, ಅವರಿಗೆ ಸೋಂಕಿನ ಲಕ್ಷಣಗಳುಂಟಾದರೆ ಕೂಡಲೇ ಚಿಕಿತ್ಸೆಗಾಗಿ ತರುವುದು, ಸೋಂಕು ಪೀಡಿತ ಪ್ರದೇಶಗಳಲ್ಲಿ ಸೂಕ್ಷ್ಮಾಣುನಾಶಕಗಳನ್ನು ಸಿಂಪಡಿಸುವುದು – ಎಲ್ಲವೂ ಅತಿ ದೊಡ್ಡ ಸವಾಲುಗಳೇ ಆಗಿದ್ದವು. ಸಂಪೂರ್ಣವಾಗಿ ಕುಸಿದ ಆಡಳಿತ-ಆರ್ಥಿಕ ವ್ಯವಸ್ಥೆಯಿಂದಾಗಿ ಇವರಿಗೆಲ್ಲ ಸರಿಯಾದ ಭತ್ಯೆಯಾಗಲೀ, ಅಗತ್ಯ ಔಷಧ-ಉಪಕರಣಗಳಾಗಲೀ, ಸುರಕ್ಷತೆಯ ದಿರಿಸುಗಳಾಗಲೀ ದೊರೆಯದೆ ಕಷ್ಟಗಳು ಇನ್ನಷ್ಟು ಹೆಚ್ಚುವಂತಾಯಿತು. ಇದುವರೆಗೆ 19000ಕ್ಕೂ ಹೆಚ್ಚು ಮಂದಿ ಇಬೋಲ ಪೀಡಿತರಾಗಿ, ಅವರಲ್ಲಿ 7400ಕ್ಕೂ ಹೆಚ್ಚು ಜನ ಮೃತರಾಗಿದ್ದಾರೆಂದರೆ ಈ ಬಡರಾಷ್ಟ್ರಗಳಲ್ಲಿ ಇಬೋಲವನ್ನೆದುರಿಸಿದ ಯೋಧರ ಶ್ರಮವೆಂತಹದೆನ್ನುವುದು ಮನದಟ್ಟಾಗಬೇಕು.
ತಮಗೇನಾದರೂ ಇಬೋಲ ತಗಲಿದರೆ ಜೀವವುಳಿಸಬಲ್ಲ ಸೌಲಭ್ಯಗಳಾವುವೂ ತಮ್ಮೂರಲ್ಲಿಲ್ಲ ಎನ್ನುವುದರ ಸ್ಪಷ್ಟ ಅರಿವಿದ್ದರೂ ಲೆಕ್ಕಿಸದೆ ಈ ವೈದ್ಯರು, ದಾದಿಯರು ಮತ್ತಿತರ ಆರೋಗ್ಯ ಕರ್ಮಿಗಳು ದುಡಿಯುತ್ತಿದ್ದಾರೆ. ಅವರಲ್ಲಿ 600ಕ್ಕೂ ಹೆಚ್ಚಿನವರು ಸೋಂಕಿತರಾಗಿ ನರಳಿದ್ದಾರೆ, 350ರಷ್ಟು ಮೃತರಾಗಿದ್ದಾರೆ. ಸಿಯೆರ ಲಿಯೋನ್ ನಲ್ಲಿ ಇಬೋಲ ಹರಡತೊಡಗಿದಾಗ ನೂರಕ್ಕೂ ಹೆಚ್ಚು ರೋಗಿಗಳಿಗೆ ಏಕಾಂಗಿಯಾಗಿ ಶುಶ್ರೂಷೆ ನೀಡಿದ 39ರ ಹರೆಯದ ವೈದ್ಯ ಶೇಕ್ ಉಮರ್ ಖಾನ್ ಜುಲೈ 29ರಂದು ಇಬೋಲಕ್ಕೆ ಬಲಿಯಾದರು. ಹೋದ ವಾರ 67 ವಯಸ್ಸಿನ ಹಿರಿಯ ವೈದ್ಯ ವಿಕ್ಟರ್ ವಿಲೋಬಿ ಮೃತರಾಗುವುದರೊಂದಿಗೆ ಸಿಯೆರ ಲಿಯೋನಿನಲ್ಲಿ ಒಟ್ಟು 11 ವೈದ್ಯರು ಇಬೋಲಕ್ಕೆ ಬಲಿಯಾದಂತಾಗಿದೆ. ಲೈಬೀರಿಯಾ ಮತ್ತು ಗಿನಿಗಳಲ್ಲೂ ಕೆಲವು ವೈದ್ಯರು ಹಾಗೂ ಆರೋಗ್ಯಕರ್ಮಿಗಳು ಇಬೋಲಕ್ಕೆ ಬಲಿಯಾಗಿದ್ದಾರೆ. ನೈಜೀರಿಯಾದಲ್ಲಿ ಹಿರಿಯ ವೈದ್ಯೆಯಾಗಿದ್ದ ಅಮೆಯೋ ಅದಾದೆವೋ ಅವರು ಲೈಬೀರಿಯಾದಿಂದ ಬಂದಿದ್ದ ರೋಗಿಯೊಬ್ಬರಲ್ಲಿ ಇಬೋಲ ಸೋಂಕನ್ನು ತಕ್ಷಣವೇ ಗುರುತಿಸಿ,ತನ್ನ ದೇಶದಲ್ಲಿ ಅದು ಹರಡದಂತೆ ತಡೆದರು; ಆದರೆ ಸ್ವತಃ ಈ ರೋಗಿಯ ಸಂಪರ್ಕಕ್ಕೆ ಬಂದುದರಿಂದ ಎರಡು ವಾರಗಳ ಬಳಿಕ ಸಾವನ್ನಪ್ಪಿದರು.
ಇಬೋಲ ನಿಯಂತ್ರಣದ ಮುಂಚೂಣಿಯಲ್ಲಿರುವುದು ನೊಬೆಲ್ ಪುರಸ್ಕೃತ ಸರ್ಕಾರೇತರ ಸಂಸ್ಥೆ ಮೆಡ್ಸೆನ್ ಸಾನ್ ಫ್ರಾಂಟಿಯೇರ್. ಒಳ ಹೊಕ್ಕುವಲ್ಲಿ ಮೊದಲಿಗರು, ಹೊರಬರುವಲ್ಲಿ ಕಡೆಯವರು ಎಂಬ ತಮ್ಮ ಧ್ಯೇಯಕ್ಕನುಸಾರವಾಗಿ, ಗಿನಿಯಲ್ಲಿ ಮೊದಲ ಇಬೋಲ ಸೋಂಕನ್ನು ಗುರುತಿಸಿದಲ್ಲಿಂದ ತೊಡಗಿ ಇಬೋಲವಿರುವ ಎಲ್ಲ ದೇಶಗಳಲ್ಲೂ ಎಂಎಸ್ಎಫ್ ವೈದ್ಯರು ಹಾಗೂ ಆರೋಗ್ಯಕರ್ಮಿಗಳು ಅವಿರತವಾಗಿ ದುಡಿಯುತ್ತಿದ್ದಾರೆ; 306 ವಿದೇಶಿ ಮತ್ತು 3100ಕ್ಕೂ ಹೆಚ್ಚು ಸ್ಥಳೀಯ ಎಂಎಸ್ಎಫ್ ಸದಸ್ಯರು 7000ಕ್ಕೂ ಹೆಚ್ಚು ಜನರ ಆರೈಕೆ ಮಾಡಿದ್ದಾರೆ. ಎಂಎಸ್ಎಫ್ ನ 27 ಸದಸ್ಯರಿಗೂ ಸೋಂಕು ತಗಲಿದ್ದು, 13 ಮಂದಿ ಮೃತ ಪಟ್ಟಿದ್ದಾರೆ.
ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್, ಚೀನಾ, ಬ್ರೆಜಿಲ್, ಆಸ್ಟ್ರೇಲಿಯಾಗಳಂತಹ ದೊಡ್ಡ, ಶ್ರೀಮಂತ ರಾಷ್ಟ್ರಗಳು ಇಬೋಲ ಪೀಡಿತ ದೇಶಗಳಿಗೆ ನೆರವೀಯಲು ಹಿಂದೆ-ಮುಂದೆ ನೋಡುತ್ತಿದ್ದಾಗ, ಒಂದು ಕೋಟಿ ಜನಸಂಖ್ಯೆಯುಳ್ಳ ಪುಟ್ಟ ಕ್ಯೂಬಾ 500ರಷ್ಟು ವೈದ್ಯರನ್ನೂ, ವೈದ್ಯಕೀಯ ಸಿಬಂದಿಯನ್ನೂ ಕಳುಹಿಸಿತು. ಆದರೆ ಕ್ಯೂಬಾ ವಿರುದ್ಧ ಅಮೆರಿಕಾದ ದಿಗ್ಬಂಧನವಿದ್ದುದರಿಂದ ಇವರೆಲ್ಲರೂ ಸುತ್ತು ಬಳಸಿ ಪ್ರಯಾಣಿಸಬೇಕಾಯಿತು, ವಿಶ್ವ ಸಂಸ್ಥೆಯ ಧನಸಹಾಯದಿಂದಲೂ ವಂಚಿತರಾಗಬೇಕಾಯಿತು. ಇಬೋಲ ಪೀಡಿತರ ಚಿಕಿತ್ಸೆಗೆಂದು ಅಮೆರಿಕಾದ ಸೈನಿಕರು ನಿರ್ಮಿಸಿದ್ದ ಡೇರೆಗಳೊಳಗೆ ಕ್ಯೂಬಾದ ವೈದ್ಯರು ಪ್ರವೇಶಿಸುವ ಬಗ್ಗೆಯೂ ಪ್ರಶ್ನೆಗಳೆದ್ದವು.
ಆದರೆ ಕ್ಯೂಬಾದ ಧೈರ್ಯದಿಂದಾಗಿ ಅನ್ಯಮನಸ್ಕ ದೇಶಗಳ ಧೋರಣೆಯೂ ಬದಲಾಗತೊಡಗಿದೆ. ಅಮೆರಿಕ, ಬ್ರಿಟನ್, ಚೀನ, ಜಪಾನ್, ಭಾರತ ಮುಂತಾದ ದೇಶಗಳು ಇನ್ನಷ್ಟು ನೆರವು ನೀಡಲು ಮುಂದೆ ಬಂದಿವೆ. ಅಮೆರಿಕವು ಐದು ದಶಕಗಳಿಂದ ಕ್ಯೂಬಾದ ಮೇಲೆ ಹೇರಿದ್ದ ದಿಗ್ಬಂಧನವನ್ನು ಮೊನ್ನೆ ತೆರವುಗೊಳಿಸಿದೆ, ಮಾನವೀಯತೆಗೆ ಕೊನೆಗೂ ಜಯವಾಗಿದೆ. ರಾಜಕೀಯವಾಗಿಯೂ, ಆರ್ಥಿಕವಾಗಿಯೂ ಸ್ವತಂತ್ರ-ಸದೃಢವಾಗಿರುವ ನೈಜೀರಿಯಾ ಎರಡೇ ತಿಂಗಳೊಳಗೆ ಎಬೋಲವನ್ನು ಮಟ್ಟ ಹಾಕಿದಲ್ಲಿ, ಪಶ್ಚಿಮದವರನ್ನೇ ನಂಬಿ ಕುಳಿತ ಗಿನಿ, ಲೈಬೀರಿಯಾ ಹಾಗೂ ಸಿಯೆರ ಲಿಯೋನ್ ಇನ್ನೂ ಒದ್ದಾಡುತ್ತಿವೆ ಎನ್ನುವುದರಿಂದ ಎಲ್ಲರೂ ಕಲಿಯಲಿಕ್ಕಿದೆ.
ಪಶ್ಚಿಮ ಆಫ್ರಿಕಾವನ್ನು ಹೈರಾಣಾಗಿಸಿದ ಇಬೋಲ ಸೋಂಕನ್ನು ನಿಭಾಯಿಸುವಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರವು ತೀರಾ ನಿರಾಶಾದಾಯಕವೇ ಆಗಿತ್ತು. ಇಬೋಲ ಹರಡಲಾರಂಭಿಸಿದ ಮೊದಲಲ್ಲಿ ಸ್ಥಳೀಯ ವೈದ್ಯರು ಹಾಗೂ ಸ್ವಯಂಸೇವಾ ಸಂಸ್ಥೆಗಳ ವರದಿಗಳೆಲ್ಲವನ್ನೂ ವಿಶ್ವ ಆರೋಗ್ಯ ಸಂಸ್ಥೆಯು ಕಡೆಗಣಿಸಿತು. ನಂತರದಲ್ಲೂ ವೈದ್ಯಕೀಯ ಸೇವೆಗಳನ್ನಾಗಲೀ, ಧನಸಹಾಯವನ್ನಾಗಲೀ ಕ್ರೋಢೀಕರಿಸುವಲ್ಲಿ ಅದು ವಿಫಲವಾಯಿತು.
ಹೆಚ್ಚಿನ ಮಾಧ್ಯಮಗಳು ತೀರಾ ಬಾಲಿಶವಾಗಿ ವರ್ತಿಸಿದವು, ಇಬೋಲದ ಬಗ್ಗೆ ಸುಳ್ಳುಗಳನ್ನೂ, ಭಯವನ್ನೂ ಹರಡಿದವು. ಸ್ವಯಂಪ್ರೇರಣೆಯಿಂದ ಇಬೋಲ ನಿಯಂತ್ರಣದಲ್ಲಿ ಭಾಗಿಗಳಾಗಿ, ಆಕಸ್ಮಿಕವಾಗಿ ಸೋಂಕಿತರಾದ ವೈದ್ಯರನ್ನೂ, ದಾಯರನ್ನೂ ಜರೆದವು, ಹೀಗಳೆದವು.
ಇಷ್ಟೊಂದು ಕಷ್ಟಗಳ ನಡುವೆ, ಯಾವುದೇ ಫಲಾಪೇಕ್ಷೆಯಿಲ್ಲದೆ, ಜೀವದ ಪರಿವೆಯಿಲ್ಲದೆ, ಇಬೋಲವನ್ನು ಅಲ್ಲಿಗೇ ತಡೆದು ಸಮಸ್ತ ಮನುಕುಲವನ್ನು ರಕ್ಷಿಸಲು ಹೆಣಗಾಡಿದವರೆಲ್ಲರಿಗೆ ಕೋಟಿ ಕೋಟಿ ನಮನಗಳು ಸಾಲವು.
ಅರುವತ್ತೈದನೇ ಬರಹ : ಬಾಳಿಗೆ ಜ್ಯೋತಿಯಾಗದ ಫಲ ಜ್ಯೋತಿಷ [ಡಿಸೆಂಬರ್ 10, 2014, ಬುಧವಾರ] [ನೋಡಿ | ನೋಡಿ]
ಇದುವರೆಗೆ ಯಾವ ಜ್ಯೋತಿಷವಾಣಿಯೂ ಘಟಿಸಿಲ್ಲ, ಘಟಿಸಿರುವುದನ್ನು ಯಾವೊಬ್ಬ ಜ್ಯೋತಿಷಿಯೂ ಊಹಿಸಿಲ್ಲ
ಮುಂದಿನ ಭವಿಷ್ಯವನ್ನು ಇಂದೇ ಹೇಳುವ ಕಾಯಕ ನಾಲ್ಕೈದು ಸಾವಿರ ವರ್ಷಗಳಷ್ಟು ಹಳೆಯದು. ಎಲ್ಲ ಬೀದಿಗಳ ತಿರುವುಗಳಲ್ಲಿ, ಎಲ್ಲ ಪತ್ರಿಕೆಗಳ ಮೂಲೆಗಳಲ್ಲಿ ದೊರೆಯುತ್ತಿದ್ದ ಭವಿಷ್ಯವಾಣಿಗಳು ಈಗೀಗ ಎಲ್ಲ ಟಿವಿ ವಾಹಿನಿಗಳನ್ನೂ ಹೊಕ್ಕಿವೆ, ಸ್ಮಾರ್ಟ್ ಫೋನ್ ಗಳನ್ನೂ ಸೇರಿಕೊಂಡಿವೆ. ಲೈಂಗಿಕ ದೌರ್ಜನ್ಯದ ಭಯಂಕರ ಭವಿಷ್ಯವೂ ಬಿತ್ತರಗೊಳ್ಳತೊಡಗಿದೆ. ಜ್ಯೋತಿಶ್ಶಾಸ್ತ್ರದೆದುರು ಆಧುನಿಕ ವಿಜ್ಞಾನವು ಬಲು ಕುಬ್ಜವೆಂದು ಆಡಳಿತ ಪಕ್ಷದ ಸಂಸದರೊಬ್ಬರು ಘೋಷಿಸಿದ್ದಾರೆ; ಆ ಪಕ್ಷದವರೆಲ್ಲ ಅದಕ್ಕೆ ಮೇಜು ಗುದ್ದಿದ್ದಾರೆ. ಹೀಗೆ ವಿಜ್ಞಾನ-ತಂತ್ರಜ್ಞಾನಗಳ ಅದಮ್ಯ ಸಾಧನೆಗಳ ನಡುವೆ ಫಲ ಜ್ಯೋತಿಷವೂ ಮೆರೆದಾಡುತ್ತಿದೆ.
ಎಂಭತ್ತರ ಮಧ್ಯದಲ್ಲಿ ನಮ್ಮೂರಲ್ಲಿ ಪ್ರಖ್ಯಾತ ಜ್ಯೋತಿಷಿಯೊಬ್ಬರ ಉಪನ್ಯಾಸವಿತ್ತು. ತನ್ನ ಭಾಷಣದುದ್ದಕ್ಕೂ ಆಧುನಿಕ ವಿಜ್ಞಾನವನ್ನು ಹಳಿದು, ಫಲ ಜ್ಯೋತಿಷವೇ ಅತ್ಯದ್ಭುತವಾದ ವಿಜ್ಞಾನವೆಂದು ಅವರು ಹೊಗಳಿಕೊಂಡರು. ನಂತರ ವಿಚಾರವಾದಿ ವೇದಿಕೆಯಿಂದ ಹೋಗಿದ್ದ ನಮ್ಮಲ್ಲೊಬ್ಬರು “ಸ್ವಾಮಿ, ಈ ಫಲ ಜ್ಯೋತಿಷದಿಂದ ಮನುಷ್ಯನಿಗೇನು ಪ್ರಯೋಜನ?” ಅಂತ ಕೇಳಿದರು. “ಫಲ ಜ್ಯೋತಿಷ ಮನುಷ್ಯನ ಬಾಳಿಗೆ ಜ್ಯೋತಿ ಇದ್ದಂತೆ, ಅದು ಅವನ ಜೀವನವನ್ನೇ ಬೆಳಗುತ್ತದೆ” ಎಂದರು ಆ ಜ್ಯೋತಿಷಿ. “ಅರ್ಥವಾಗಲಿಲ್ಲ ಸ್ವಾಮಿ, ಸ್ವಲ್ಪ ಬಿಡಿಸಿ ಹೇಳಿ” ಎಂದರು ನಮ್ಮವರು. “ಜ್ಯೋತಿಷ ಒಂದು ಟಾರ್ಚ್ ಇದ್ದ ಹಾಗೆ, ನಿಮ್ಮ ದಾರಿಯಲ್ಲಿ ಹೊಂಡಗಳಿದ್ದರೆ ತೋರಿಸುತ್ತದೆ, ನೀವು ಅದರೊಳಕ್ಕೆ ಬೀಳದಂತೆ ಕಾಪಾಡುತ್ತದೆ” ಎಂದು ಜ್ಯೋತಿಷಿ ಬೀಗಿದರು. ಅದು ಹೇಗೆ ಅಂದರೆ, “ಅಂತಹಾ ಕಂಟಕಗಳಿಗೆಲ್ಲ ಜ್ಯೋತಿಷಿಗಳೇ ಪರಿಹಾರವನ್ನೂ ಹೇಳ್ತಾರೆ, ಮಾಡ್ತಾರೆ; ಹೋಮ, ತಾಯಿತ, ಮಣಿ, ಬಳೆ ಇತ್ಯಾದಿ” ಎಂಬ ಉತ್ತರ ಬಂತು. “ಸ್ವಾಮಿ, ಈ ಹೋಮ, ತಾಯಿತ ಕಟ್ಟಿದ್ರೆ ಭೂಮಿಗಿಂತ ಕೋಟಿಗಟ್ಟಲೆ ಕಿಮೀ ದೂರದಲ್ಲಿರುವ, ಭೂಮಿಗಿಂತಲೂ ದೊಡ್ಡದಾಗಿರುವ ಗ್ರಹಗಳನ್ನು ಕದಲಿಸುವುದಕ್ಕೆ ಸಾಧ್ಯವೇ? ಹೊಗೆ ಹಾಕಿ, ಬಳೆ ಕಟ್ಟಿದರೆ ಜನ್ಮಕುಂಡಲಿ ಬದಲಾಗುತ್ತದೆಯೇ? ಅದು ಸಾಧ್ಯ ಇದೆ ಅಂದ್ರೆ ನೀವೇ ಹೇಳಿದ ಭವಿಷ್ಯ ಸುಳ್ಳಾಗೋದಿಲ್ವೇ?” ಸಂವಾದ ಅಲ್ಲಿಗೇ ಮುಗಿಯಿತು.
ಫಲ ಜ್ಯೋತಿಷಕ್ಕೆ ವಿಚಾರವಂತರ ವಿರೋಧವು ಬಹು ಹಿಂದಿನದು. ವಿಧಿಯನ್ನು ಹಳಿದು ಗ್ರಹಬಲವನ್ನು ಕಾಯುತ್ತಿರುವುದಕ್ಕೆ ಬುದ್ಧನ ವಿರೋಧವಿತ್ತು. ಶುಭ ಘಳಿಗೆಯನ್ನು ಕಾಯುತ್ತಾ ಕೂರುವುದು ಮೂರ್ಖತನ, ಗುರಿ ಸಾಧನೆಯೊಂದೇ ಶುಭಕಾರ್ಯ, ಆಕಾಶದಲ್ಲಿರುವ ತಾರೆಗಳಿಗೆ ಯಾವ ಪಾತ್ರವೂ ಇಲ್ಲ, ಅವುಗಳನ್ನೆಣಿಸಿ ಸುಳ್ಳು ಹೇಳಿ ಜೀವನ ಸಾಗಿಸುವವರನ್ನು ದೂರವಿಡಬೇಕು ಎನ್ನುವುದು ಬುದ್ಧನ ಉಪದೇಶವಾಗಿತ್ತು. ಫಲ ಜ್ಯೋತಿಷದ ಕಡು ವಿರೋಧಿಯಾಗಿದ್ದ ಸ್ವಾಮಿ ವಿವೇಕಾನಂದ ಹೇಳಿದ್ದಿದು: “ತಾರೆಗಳು ಬರಲಿ, ಅವುಗಳಿಂದೇನು? ನನ್ನ ಜೀವನವನ್ನು ನಕ್ಷತ್ರವೊಂದು ಕದಲಿಸುವುದಾದರೆ, ಅದಕ್ಕೆ ಚಿಕ್ಕಾಸಿನಷ್ಟೂ ಬೆಲೆಯಿಲ್ಲ. ಜ್ಯೋತಿಷಇತ್ಯಾದಿಗಳು ಮನಸ್ಸಿನಲ್ಲಿ ಪ್ರಾಮುಖ್ಯತೆಯನ್ನು ಪಡೆಯಲಾರಂಭಿಸಿದರೆ ನಾವು ಓರ್ವ ವೈದ್ಯರನ್ನು ಕಾಣಬೇಕು, ಒಳ್ಳೆಯ ಆಹಾರವನ್ನೂ, ವಿಶ್ರಾಂತಿಯನ್ನೂ ಪಡೆಯಬೇಕು.” ಮುಂದೆ 1975ರಲ್ಲಿ 18 ನೊಬೆಲ್ ಪುರಸ್ಕೃತರೂ ಸೇರಿದಂತೆ 186 ಹಿರಿಯ ವಿಜ್ಞಾನಿಗಳು ಫಲ ಜ್ಯೋತಿಷಿಗಳ ಸಲಹೆಗಳನ್ನು ವಿಮರ್ಶೆಯಿಲ್ಲದೆ ಪ್ರಕಟಿಸುವುದನ್ನು ವಿರೋಧಿಸಿದ್ದರು, ಅದರಿಂದಾಗಬಹುದಾದ ಹಾನಿಗಳ ಬಗ್ಗೆ ಎಚ್ಚರಿಸಿದ್ದರು.
ಸಾಕ್ಷರತೆ ಹಾಗೂ ತಂತ್ರಜ್ಞಾನದ ಬಳಕೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ಜ್ಯೋತಿಷಕ್ಕೂ ಬೇಡಿಕೆ ಹೆಚ್ಚುತ್ತಿದೆಯೆನ್ನುವುದು ವಿಪರ್ಯಾಸವಾದರೂ ಸತ್ಯವಾಗಿದೆ. ಪ್ರತಿ ನಿತ್ಯ ನೂರಾರು ಕೋಟಿ ಜನ ವಿವಿಧ ಮಾಧ್ಯಮಗಳಲ್ಲಿ ತಮ್ಮ ಭವಿಷ್ಯವನ್ನು ಹುಡುಕುತ್ತಾರೆ ಅಥವಾ ಖಾಸಗಿಯಾಗಿ ಜ್ಯೋತಿಷಿಗಳನ್ನು ಕಾಣುತ್ತಾರೆ. ಜ್ಯೋತಿಷಿಗಳ ನೆರವು ಪಡೆಯುವವರಲ್ಲಿ ಅಧ್ಯಕ್ಷ-ಪ್ರಧಾನಿ-ಮಂತ್ರಿಗಳು, ಉದ್ಯೋಗಪತಿಗಳು, ಕ್ರೀಡಾಪಟುಗಳು, ನಟ-ನಟಿಯರು, ವಿಜ್ಞಾನ ಕರ್ಮಿಗಳು ಹಾಗೂ ಶಿಕ್ಷಕರು ಕಾಣಸಿಗುತ್ತಾರೆ. ಕೆಲವು ಅಧ್ಯಯನಗಳನುಸಾರ ಶೇ.70ಕ್ಕೂ ಹೆಚ್ಚು ಜನರು ಒಮ್ಮಿಲ್ಲೊಮ್ಮೆ ತಮ್ಮ ಭವಿಷ್ಯ ಫಲವನ್ನು ಓದಿರುತ್ತಾರೆ, ಶೇ. 44ರಷ್ಟು ಜನ ಅದನ್ನು ಆಗಾಗ ನೋಡುತ್ತಿರುತ್ತಾರೆ, ಶೇ. 25ರಷ್ಟು ಜನ ಅದನ್ನು ನಂಬುತ್ತಾರೆ ಹಾಗೂ ಶೇ. 6ರಷ್ಟು ಜನ ಅದನ್ನು ಗಂಭೀರವಾಗಿಯೇ ಪರಿಗಣಿಸುತ್ತಾರೆ.
ಈ ಕಾಲದಲ್ಲಿ ಹೆಚ್ಚುತ್ತಿರುವ ಸಂಕೀರ್ಣತೆಯನ್ನೂ, ಗೊಂದಲಗಳನ್ನೂ ನಿಭಾಯಿಸಲಾಗದವರು, ಜೀವನದ ಅನಿಶ್ಚಿತತೆಗಳನ್ನೂ, ಅನಪೇಕ್ಷಿತ ಘಟನೆಗಳನ್ನೂ ಎದುರಿಸಲಾಗದವರು ಜ್ಯೋತಿಷದ ಮೊರೆ ಹೋಗುತ್ತಾರೆಂದು ಮನೋತಜ್ಞರು ವಿಶ್ಲೇಷಿಸುತ್ತಾರೆ. ಸ್ವಯಂ ನಿರ್ಧರಿಸಲಾಗದವರು, ತಮ್ಮ ನಿರ್ಧಾರಗಳ ಹೊಣೆ ಹೊರಲಾಗದವರು, ಸ್ವಂತ ದೌರ್ಬಲ್ಯಗಳನ್ನು ಬಾಹ್ಯ ಕಾರಣಗಳಿಗೆ ಆರೋಪಿಸಲೆಳಸುವವರು ಜ್ಯೋತಿಷಿಗಳ ದಾಸರಾಗುತ್ತಾರೆ. ಜೀವನದ ಕಡುಕಷ್ಟಗಳನ್ನು ನಿತ್ಯವೂ ಏಗುತ್ತಿರುವವರು ಜ್ಯೋತಿಷದಲ್ಲಿ ಪರಿಹಾರವನ್ನು ಹುಡುಕುವುದಿಲ್ಲ. ಹಾಗೆಯೇ, ಸುಶಿಕ್ಷಿತರಾಗಿ, ವಿಷಯ ಸ್ಪಷ್ಟತೆಯುಳ್ಳವರಾಗಿ, ವೈಜ್ಞಾನಿಕ-ವೈಚಾರಿಕ ಮನೋವೃತ್ತಿಯನ್ನು ಮೈಗೂಡಿಸಿಕೊಂಡವರೂ ಅತ್ತ ಸುಳಿಯುವುದಿಲ್ಲ. ತಮ್ಮ ಸ್ಥಿತಿಗತಿಗಳ ಬಗ್ಗೆ ಅತೃಪ್ತರಾಗಿದ್ದು, ವೈಚಾರಿಕತೆಯ ಕೊರತೆಯಿಂದ ದಾರಿ ಕಾಣದೆ ಅತಂತ್ರರಾಗಿರುವವರು ಜ್ಯೋತಿಷಿಗಳನ್ನರಸುತ್ತಾರೆ. ಹಾಗೆಯೇ, ಧಾರ್ಮಿಕ ಎಡಬಿಡಂಗಿತನವುಳ್ಳವರೂ ಜ್ಯೋತಿಷಿಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ.
ಇಷ್ಟೊಂದು ಜನ ತಮ್ಮ ಸ್ವಂತ ವಿವೇಚನೆಯನ್ನು ಕಡೆಗಣಿಸಿ ಗ್ರಹಗತಿಗಳತ್ತ ನೋಡಿದರೆ ಏನಾದೀತು? ಪ್ರಧಾನಿ-ಮುಖ್ಯಮಂತ್ರಿ-ಸಂಸದರಂಥವರು ವಾಸ್ತವವನ್ನು ಬದಿಗಿಟ್ಟು ಜ್ಯೋತಿಷಿಗಳ ಸಲಹೆಯಂತೆ ನಡೆದರೆ ಪ್ರಜೆಗಳ ಪಾಡೇನು? ಖಗೋಲ ವಿಜ್ಞಾನದ ಲೆಕ್ಕಕ್ಕನುಗುಣವಾಗಿ ಉಪಗ್ರಹಗಳನ್ನು ಉಡಾಯಿಸಬೇಕಾದವರು ಜಾತಕ ಫಲವನ್ನು ನಂಬಲಾದೀತೇ? ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವುಳ್ಳವರು ವೈದ್ಯರ ಸಲಹೆಯನ್ನು ಮೀರಿ ವಾರ, ತಿಥಿ, ಕಾಲದ ಹೆಸರಲ್ಲಿ ತಡ ಮಾಡಲಾದೀತೇ? ಗ್ರಹಗತಿ ನೋಡಿ ಹೆರಿಗೆ ಮಾಡಿಸಲ್ಪಟ್ಟ ಮಗು ತನ್ನಿಂತಾನಾಗಿ ಗುರಿ ಮುಟ್ಟೀತೇ? ತನ್ನ ವಿಮಾನಗಳ ಬಗ್ಗೆ ಅಷ್ಟಮಂಗಲ ಪ್ರಶ್ನೆಯಿಟ್ಟವರೊಬ್ಬರು ಕಷ್ಟ ಕಳೆಯದೆ ಮೂಲೆ ಸೇರಿದ್ದೇಕೆ? ಸದಾ ಕಾಲ ಮುಖ್ಯಮಂತ್ರಿಗಳಾಗಿ ಉಳಿಯುವುದಕ್ಕೆ ಜ್ಯೋತಿಷಿಗಳನ್ನು ನಂಬಿದ್ದವರು ಜೈಲು ಪಾಲಾಗಿದ್ದೇಕೆ?
ಜ್ಯೋತಿಷಿಗಳ ಊಹೆ-ಸಲಹೆಗಳೆಲ್ಲವೂ ತೀರಾ ಅಸ್ಪಷ್ಟವಾಗಿರುತ್ತವೆ, ಸಂದಿಗ್ಧವಾಗಿರುತ್ತವೆ, ಎಲ್ಲರಿಗೂ ಅನ್ವಯಿಸುವಂತಿರುತ್ತವೆ, ಒಳಿತು-ಕೆಡುಕುಗಳ ಮಿಶ್ರಣವಾಗಿರುತ್ತವೆ. ಅವನ್ನು ತೀರಾ ವೈಯಕ್ತಿಕವಾದ ಜಾತಕ, ಹಸ್ತರೇಖೆ, ಮುಖಲಕ್ಷಣ ಇತ್ಯಾದಿಗಳಿಗೆ ಹೊಂದಿಸಿಬಿಟ್ಟರೆ ಓದುಗ-ಕೇಳುಗರು ಸುಲಭದಲ್ಲಿ ಒಪ್ಪಿಕೊಳ್ಳುತ್ತಾರೆ! ಇಂತಹ ಸುತ್ತು ಬಳಸಿದ ಊಹೆಗಳು ನಿಜವಾಗಿರುವುದಕ್ಕೆ ಎಲ್ಲೂ ಪುರಾವೆಗಳಿಲ್ಲ. ಅತ್ತ ಜ್ಯೋತಿಷಿಗಳು ಅಪರೂಪಕ್ಕೆ ಮಾಡಿದ ನಿಖರವಾದ ಊಹೆಗಳೆಲ್ಲವೂ ಸುಳ್ಳಾಗಿವೆ. ಚುನಾವಣೆಯ ಫಲಿತಾಂಶವನ್ನು ಕರಾರುವಾಕ್ಕಾಗಿ ಊಹಿಸುವುದಕ್ಕೆ, ಒಂದಷ್ಟು ಜಾತಕಗಳನ್ನು ಸ್ಫುಟಗೊಳಿಸುವುದಕ್ಕೆ ದೇಶ-ವಿದೇಶಗಳ ವಿಚಾರವಾದಿಗಳು ನೀಡುತ್ತಲೇ ಬಂದಿರುವ ಲಕ್ಷಗಟ್ಟಲೆ ರೂಪಾಯಿಗಳ ಪಂಥಾಹ್ವಾನವನ್ನು ಹೆಚ್ಚಿನ ಜ್ಯೋತಿಷಿಗಳು ಸ್ವೀಕರಿಸಿಲ್ಲ, ಪ್ರಯತ್ನಿಸಿದ ಕೆಲವರು ಸಫಲರಾಗಿಲ್ಲ.
ಫಲ ಜ್ಯೋತಿಷವು ಫಲ ನೀಡುವುದಾದರೂ ಹೇಗೆ? ಜ್ಯೋತಿಷವು ಹಿಂದಿನ ತಪ್ಪು ಕಲ್ಪನೆಗಳಿಗೆ ಜೋತು ಬಿದ್ದು, ಅಲ್ಲೇ ಜಡ್ಡುಗಟ್ಟಿದೆ. ಜ್ಯೋತಿಷದಲ್ಲಿ ಬಳಸುವ ನವಗ್ರಹಗಳಲ್ಲಿ ಎರಡು ಗ್ರಹಗಳೇ ಅಲ್ಲ, ಇನ್ನೆರಡಕ್ಕೆ ಅಸ್ತಿತ್ವವೇ ಇಲ್ಲ! ಇರುವವುಗಳ ದೂರ, ಗಾತ್ರಗಳು ಜ್ಯೋತಿಷದ ಎಣಿಕೆಗೆ ಸಿಕ್ಕುವುದೂ ಇಲ್ಲ. ಖಗೋಲದಲ್ಲಿರುವ ಕೋಟಿಗಟ್ಟಲೆ ನಕ್ಷತ್ರ-ಗ್ರಹ-ಉಪಗ್ರಹ ಇತ್ಯಾದಿಗಳಿಗಾಗಲೀ, ನಮ್ಮ ಜೀವಕ್ಕೆ ಅತಿ ಸನಿಹದಲ್ಲಿರುವ ಭೂಮಿಗಾಗಲೀ ಜಾತಕದಲ್ಲಿ ಸ್ಥಳವೇ ಇಲ್ಲ! ಒಬ್ಬೊಬ್ಬ ಜ್ಯೋತಿಷಿಯ ಲೆಕ್ಕಾಚಾರವೂ ಭಿನ್ನವಾಗಿರುವುದರಿಂದ ಅವರ ಊಹೆ-ಸಲಹೆಗಳೂ ಭಿನ್ನವಾಗಿರುತ್ತವೆ; ಒಂದೇ ರಾಶಿಯವರಿಗೆ ಒಂದೊಂದು ಪತ್ರಿಕೆಗಳಲ್ಲಿ ಒಂದೊಂದು ಭವಿಷ್ಯವನ್ನು ಬರೆಯಲಾಗಿರುತ್ತದೆ! ಆಧುನಿಕ ಖಗೋಳ ವಿಜ್ಞಾನವು ಮಂಗಳ ಗ್ರಹದ ಮೇಲೆ ಸವಾರಿ ಮಾಡುತ್ತಿರುವಾಗ ಜಾತಕದ ಮಂಗಳನಿಗೇನು ಬೆಲೆ?!
ಫಲ ಜ್ಯೋತಿಷದಲ್ಲಿ ನಂಬಿಕೆಯು ಸಾಮಾಜಿಕ ಶಿಥಿಲತೆಯನ್ನೂ, ಅದರೊಡನಿರುವ ಅನಿಶ್ಚಿತತೆ ಹಾಗೂ ಆತಂಕಗಳನ್ನೂ ಸೂಚಿಸಿದರೆ, ಅದಕ್ಕೆ ವಿರೋಧವು ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋವೃತ್ತಿಗಳ ಮಟ್ಟವನ್ನು ಸೂಚಿಸುತ್ತದೆ. ವೈಚಾರಿಕತೆ ಹೆಚ್ಚಿದಷ್ಟು ಸಂಕೀರ್ಣತೆಗಳನ್ನೆದುರಿಸುವುದು ಸುಲಭವಾಗುತ್ತದೆ, ಬದುಕು ಹಸನಾಗುತ್ತದೆ, ಸಾಮಾಜಿಕ ಸ್ವಾಸ್ಥ್ಯವು ಬಲಗೊಳ್ಳುತ್ತದೆ. ಆದ್ದರಿಂದ ವಿಚಾರವಂತರೆಲ್ಲರೂ ಫಲ ಜ್ಯೋತಿಷವನ್ನು ಇನ್ನಷ್ಟು ಗಟ್ಟಿಯಾಗಿ ವಿರೋಧಿಸಿ, ಜನರನ್ನು ಅದರಿಂದೀಚೆಗೆ ಸೆಳೆಯಬೇಕಾಗಿದೆ. ನಿತ್ಯಜೀವನದ ಸಮಸ್ಯೆಗಳನ್ನು ವಿಚಾರವಂತಿಕೆಯಿಂದ ಎದುರಿಸಿ, ಪರಿಹರಿಸಿಕೊಳ್ಳಲು ಜನಸಾಮಾನ್ಯರನ್ನು ಸಜ್ಜುಗೊಳಿಸಬೇಕಿದೆ. ವಿಜ್ಞಾನ-ತಂತ್ರಜ್ಞಾನಗಳ ವಿಸ್ಮಯಗಳಿಗೆ, ಅದರ ಅದ್ಭುತ ಸಾಧ್ಯತೆಗಳಿಗೆ ಫಲ ಜ್ಯೋತಿಷವು ಪರ್ಯಾಯವೇ ಅಲ್ಲವೆನ್ನುವುದನ್ನು ಮನಗಾಣಿಸಬೇಕಿದೆ. ಮಾಧ್ಯಮಗಳು ಜ್ಯೋತಿಷ-ಮೂಢನಂಬಿಕೆಗಳ ಬದಲು ವೈಜ್ಞಾನಿಕ-ವೈಚಾರಿಕ ಮನೋವೃತ್ತಿಯನ್ನು ಬೆಳೆಸುವ ಕಾರ್ಯಕ್ರಮಗಳನ್ನು ಬಿತ್ತರಿಸಬೇಕಾಗಿದೆ. ರೋಗ ಬಂದರೆ ನುರಿತ ವೈದ್ಯರಿಂದ, ಆಸ್ತಿ ವಹಿವಾಟಿದ್ದರೆ ಇಂಜಿನಿಯರ್-ವಕೀಲರಿಂದ, ಹಣ ಹೂಡುವಿಕೆಯಿದ್ದರೆ ಅದರಲ್ಲಿ ನುರಿತವರಿಂದ ಸಲಹೆಗಳನ್ನು ಪಡೆಯಬೇಕೇ ಹೊರತು, ಎಲ್ಲ ಬಲ್ಲೆವೆಂದು ನಂಬಿಸಿ, ಸಾವಿರಗಟ್ಟಲೆ ಕಿತ್ತು, ಬಾಯಿಗೆ ಬಂದದ್ದನ್ನು ಹೇಳುವ ಜ್ಯೋತಿಷಿಗಳಿಂದಲ್ಲ ಎನ್ನುವುದನ್ನು ಗಟ್ಟಿಯಾಗಿ ಹೇಳಬೇಕಾಗಿದೆ.
ಅರುವತ್ನಾಲ್ಕನೇ ಬರಹ : ಸಿರಿವಂತರ ಸಮಸ್ಯೆಗಳಿಗೆ ಆದಿವಾಸಿಗಳ ಸಂತಾನಹರಣ [ನವಂಬರ್ 26, 2014, ಬುಧವಾರ] [ನೋಡಿ | ನೋಡಿ]
ಅಭಿವೃದ್ಧಿಯೇ ಅತ್ಯುತ್ತಮ ಗರ್ಭನಿರೋಧಕ ಎಂಬ 1974ರ ಕರಣ್ ಸಿಂಗ್ ಘೋಷಣೆ ಮರೆತೇ ಹೋಗಿದೆ
ಛತ್ತೀಸ್ಗಢದ ಪಾಳು ಬಿದ್ದ ಆಸ್ಪತ್ರೆಯೊಂದರಲ್ಲಿ ಆರೇ ಗಂಟೆಗಳಲ್ಲಿ 83 ಮಹಿಳೆಯರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೊಳಗಾಗಿ, 15 ಮಹಿಳೆಯರು ಸಾವನ್ನಪ್ಪಿ, ಇನ್ನುಳಿದವರು ಸಾವಿನಂಚಿಗೆ ಸರಿಯುವಂತಾದುದು ಭಾರತದ್ದಷ್ಟೇ ಅಲ್ಲ, ಇಡೀ ವಿಶ್ವದ ಕುಟಿಲತೆಯನ್ನು ಒಮ್ಮೆಗೇ ತೆರೆದಿಟ್ಟಿದೆ. ಮಿತಿಗೂ ಹೆಚ್ಚು ಶಸ್ತ್ರಕ್ರಿಯೆಗಳನ್ನು ನಡೆಸಿದ್ದಕ್ಕಾಗಿ ಜೈಲು ಸೇರಿರುವ ಡಾ. ಆರ್. ಕೆ. ಗುಪ್ತಾ ಮೇಲಧಿಕಾರಿಗಳನ್ನು ದೂಷಿಸಿದ್ದಾರೆ. ಬಳಸಲಾಗಿದ್ದ ಔಷಧದಲ್ಲಿ ಇಲಿಯ ವಿಷವಿತ್ತೆಂದು ಬಂಧಿತರಾದ ಕಂಪೆನಿ ಮಾಲಕರು ಇದೆಲ್ಲಾ ಷಡ್ಯಂತ್ರವೆಂದು ದೂರಿದ್ದಾರೆ. ಭಾರತೀಯ ವೈದ್ಯಕೀಯ ಸಂಘವಂತೂ ಈ ದುರ್ಘಟನೆಯನ್ನು ಖಂಡಿಸುವ ಬದಲು ಡಾ. ಗುಪ್ತಾ ಬೆಂಬಲಕ್ಕೆ ನಿಂತಿದೆ. ಇದೇ ಡಾ. ಗುಪ್ತಾ ಅವರನ್ನು ಲಕ್ಷ ಮಹಿಳೆಯರ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಾಗಿ ಸನ್ಮಾನಿಸಿದ್ದ ಆರೋಗ್ಯ ಸಚಿವರು, ಮೃತರ ಬಳಿ ಬಂದು ಗಹಗಹಿಸಿದ್ದಾರೆ. ಸಂತಾನಶಕ್ತಿ ಹರಣ ಕಾರ್ಯಕ್ರಮಗಳನ್ನು ಬೆಂಬಲಿಸುತ್ತಿರುವ ದೇಶದ ಒಳ-ಹೊರಗಿನ ಸಂಸ್ಥೆಗಳು ಈ ದುರಂತವನ್ನು ಕಾಟಾಚಾರಕ್ಕೆ ಖಂಡಿಸಿ, ಸುಮ್ಮನಾಗಿವೆ.
ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆಯರು ಸಾಯುತ್ತಿರುವುದು ಇದೇ ಮೊದಲಲ್ಲ; 2010-13ರಲ್ಲಿ ಅಂತಹ 1.46 ಕೋಟಿ ಶಸ್ತ್ರಕ್ರಿಯೆಗಳಾಗಿದ್ದು, ಅದರಿಂದ 363 ಸಾವುಗಳಾಗಿವೆ, ಪರಿಹಾರಕ್ಕೆಂದು 50 ಕೋಟಿ ವೆಚ್ಚವಾಗಿದೆ. ಈ ನಾಲ್ಕು ದಶಕಗಳಲ್ಲಿ ವಿಶ್ವದಲ್ಲಾದ 35 ಕೋಟಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳಲ್ಲಿ 12 ಕೋಟಿಯಷ್ಟು ನಮ್ಮಲ್ಲೇ ಆಗಿವೆ; ಇಲ್ಲಿನ ವಿವಾಹಿತರಲ್ಲಿ ಶೇ. 37ರಷ್ಟು ಮಹಿಳೆಯರೂ, ಶೇ. 3ರಷ್ಟು ಪುರುಷರೂ ಸಂತಾನಶಕ್ತಿ ಹರಣಕ್ಕೊಳಗಾಗಿದ್ದಾರೆ.
ಕಳೆದ ವರ್ಷ ಸಂತಾನಶಕ್ತಿ ಹರಣಗೊಂಡ 45,79,000ಕ್ಕೂ ಹೆಚ್ಚು ಜನರಲ್ಲಿ ಶೇ. 97ರಷ್ಟು ಮಹಿಳೆಯರೇ ಆಗಿದ್ದಾರೆ, ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ. ಸ್ತ್ರೀಯರಲ್ಲಿ ಅಂಡನಾಳ ಛೇದಿಸಲು ಉದರಕ್ಕೆ ರಂಧ್ರ ಕೊರೆಯಬೇಕಾಗುವುದರಿಂದ ಸಮಸ್ಯೆಗಳಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಗಂಡಸರಲ್ಲಿ ರೇತ್ರನಾಳ ಛೇದನವು ಅತಿ ಸರಳವಿದ್ದರೂ, ಅದರಿಂದ ಪುರುಷತ್ವ ನಶಿಸುತ್ತದೆ, ನಿಶ್ಶಕ್ತಿಯುಂಟಾಗುತ್ತದೆ ಇತ್ಯಾದಿ ಅಪನಂಬಿಕೆಗಳಿಂದ ಮಹಿಳೆಯರೇ ಹೆಚ್ಚಾಗಿ ಶಸ್ತ್ರಕ್ರಿಯೆಗೊಳಗಾಗುತ್ತಿದ್ದಾರೆ. ಸಂತಾನಶಕ್ತಿ ಹರಣಕ್ಕೆ ಪುರುಷರನ್ನು ಪ್ರೇರೇಪಿಸುವಲ್ಲಿ ಇಡೀ ವ್ಯವಸ್ಥೆಯೇ ಸೋತಿದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.
ಎಪ್ಪತ್ತರ ದಶಕದಲ್ಲಿ ಇಂತಿಷ್ಟು ಸಂತಾನಶಕ್ತಿ ಹರಣ ಶಸ್ತ್ರಕ್ರಿಯೆಗಳನ್ನು ನಡೆಸಬೇಕೆಂಬ ಗುರಿಯನ್ನು ವಿಧಿಸಲಾಗುತ್ತಿತ್ತು, ಅದಕ್ಕಾಗಿ ರೋಗಿಗಳು, ಬಡವರು, ದಲಿತರು, ಹಿಂದುಳಿದವರು, ಹಿರಿ ವಯಸ್ಕರು ಎನ್ನದೆ ಸಿಕ್ಕವರನ್ನೆಲ್ಲ ದಾನ-ದಂಡಗಳಿಂದ ಶಸ್ತ್ರಕ್ರಿಯೆಗೊಳಪಡಿಸಲಾಗುತ್ತಿತ್ತು. ಇವನ್ನು ಬೆಂಬಲಿಸಿದ್ದ ಇಂದಿರಾ ಗಾಂಧಿ, ಚೀನಾದ ಕಿಯಾನ್ ಕ್ಸಿನ್ಶೆಂಗ್, ಬಾಂಗ್ಲಾದ ಎರ್ಷಾದ್, ಇಂಡೋನೇಷ್ಯದ ಸುಹಾರ್ತೋ, ಈಜಿಪ್ಟಿನ ಹೊಸ್ನಿ ಮುಬಾರಕ್ ಅವರಿಗೆಲ್ಲ ವಿಶ್ವ ಸಂಸ್ಥೆಯು ಚಿನ್ನದ ಪದಕವನ್ನೂ ನೀಡಿತ್ತು. ಕೈರೋದಲ್ಲಿ 1994ರಲ್ಲಿ ನಡೆದ ಜನಸಂಖ್ಯೆ ಹಾಗೂ ಅಭಿವದ್ಧಿಯ ಮೂರನೇ ಜಾಗತಿಕ ಸಮಾವೇಶದಲ್ಲಿ ಸಂತಾನಶಕ್ತಿ ಹರಣವು ವೈಯಕ್ತಿಕವಾದ ಮುಕ್ತ ಆಯ್ಕೆಯಾಗಿರಬೇಕೆಂದು ಹೇಳಲಾದ ಬಳಿಕ 1996ರಿಂದ ನಮ್ಮಲ್ಲೂ ಅಧಿಕೃತ ಗುರಿ ವಿಧಿಸುವಿಕೆ ಇಲ್ಲವಾಯಿತು, ರಾಷ್ಟ್ರೀಯ ಜನಸಂಖ್ಯಾ ನೀತಿ (2000) ಯಲ್ಲೂ ಸಂತಾನಶಕ್ತಿ ಹರಣವು ಸ್ವಯಂಪ್ರೇರಿತ ಆಯ್ಕೆಯಾಗಿರಬೇಕೆಂದು ಹೇಳಲಾಯಿತು.
ಆದರೆ ಇವೆಲ್ಲ ಕಾಗದದಲ್ಲೇ ಉಳಿದಿವೆ. ಸಿಕ್ಕ ಸಿಕ್ಕವರನ್ನು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಉತ್ತೇಜಿಸುವುದಕ್ಕೂ, ಒಪ್ಪದವರನ್ನು ನಿರುತ್ತೇಜಿಸುವುದಕ್ಕೂ ಹಲಬಗೆಯ ತಂತ್ರಗಳನ್ನು ಹೆಣೆಯಲಾಗಿದೆ. ಎರಡಕ್ಕಿಂತ ಹೆಚ್ಚು ಮಕ್ಕಳಿದ್ದವರು ಪಂಚಾಯತ್ ಸದಸ್ಯರಾಗದಂತೆ ಕೆಲ ರಾಜ್ಯಗಳು ನಿರ್ಬಂಧಿಸಿವೆ; ಸರ್ವೋಚ್ಛ ನ್ಯಾಯಾಲಯವೂ ಅದನ್ನು ಎತ್ತಿ ಹಿಡಿದು, ಪ್ರಜಾಮೌಲ್ಯಗಳಿಗಾಗಿ ಜನಸಂಖ್ಯಾ ನಿಯಂತ್ರಣವನ್ನು ಕಡೆಗಣಿಸಿದರೆ ದೇಶಕ್ಕೇ ಗಂಡಾಂತರ ಎಂದಿದೆ. ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೊಳಗಾಗುವವರಿಗೆ ನಗದು, ಚಿನ್ನದ ಸರ, ಮೊಬೈಲ್ ಫೋನ್ ಮುಂತಾದ ಬಹು ಮಾನಗಳು, ಆಹಾರ, ಮನೆ ಇತ್ಯಾದಿಗಳ ಖರೀದಿಗೆ ಬೆಂಬಲ, ಹೊಸ ಸರಕಾರಿ ನೌಕರಿ ಯಾ ಬಡ್ತಿಯಲ್ಲಿ ಆದ್ಯತೆ ಇತ್ಯಾದಿ ಆಮಿಷಗಳಿವೆ. ಸಂತಾನಶಕ್ತಿ ಹರಣಕ್ಕೆ ಇಬ್ಬರ ಮನವೊಲಿಸಿದರೆ ಏಕನಳಿಕೆಯ ಕೋವಿಗೆ, ಐವರನ್ನು ಕರೆತಂದರೆ ರಿವಾಲ್ವರಿಗೆ, ತಾನೂ ಒಳಗಾಗಿ ಇನ್ನಿಬ್ಬರನ್ನು ಕರೆತಂದರೆ ಎರಡು ನಳಿಕೆಯ ಕೋವಿಗೆ ಪರವಾನಿಗೆ ನೀಡುವ ಯೋಜನೆಗಳು ಉತ್ತರದ ಕೆಲ ರಾಜ್ಯಗಳಲ್ಲಿ ಬಂದಿವೆ! ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಪ್ರೇರೇಪಿಸುವ ಕಾರ್ಯಕರ್ತರಿಗೆ, ಶಸ್ತ್ರಚಿಕಿತ್ಸಕರಿಗೆ ಹಾಗೂ ಆಸ್ಪತ್ರೆಗಳಿಗೆ ನಗದು ಪಾವತಿಯ ಉತ್ತೇಜನಗಳು ಇದ್ದೇ ಇವೆ.
ಇವಕ್ಕೆ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್ಎಫ್ ಪಿ ಎ), ಅಮೆರಿಕಾದ ಅಂತಾರಾಷ್ಟ್ರೀಯ ಅಭಿವದ್ಧಿ ಸಂಸ್ಥೆ (ಯು ಎಸ್ ಏಯ್ಡ್), ವಿಶ್ವ ಬ್ಯಾಂಕ್, ಬ್ರಿಟಿಷ್ ಸರಕಾರದ ಅಂತಾರಾಷ್ಟ್ರೀಯ ಅಭಿವದ್ಧಿ ಇಲಾಖೆ, ಬಿಲ್ ಹಾಗೂ ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ, ಅಂತಾರಾಷ್ಟ್ರೀಯ ಕುಟುಂಬ ಯೋಜನಾ ಒಕ್ಕೂಟ (ಐಪಿಪಿಎಫ್), ಮೇರಿ ಸ್ತೋಪ್ಸ್ ಇಂಟರ್ ನ್ಯಾಶನಲ್ ಮುಂತಾದ ಸಂಸ್ಥೆಗಳು ಕೋಟಿಗಟ್ಟಲೆ ನೆರವನ್ನು ನೀಡುತ್ತಿವೆ. ಸಂತಾನಶಕ್ತಿ ಹರಣವು ಸ್ವಯಂಪ್ರೇರಿತ ಆಯ್ಕೆ ಯಾಗಿರಬೇಕೆನ್ನುವ ಸಂಸ್ಥೆಗಳೇ ಆಮಿಷವೊಡ್ಡುವ ಯೋಜನೆಗಳಿಗೆ ನೆರವಾಗುತ್ತಿರುವುದು ಸೋಗಲಾಡಿತನವಷ್ಟೇ ಅಲ್ಲ, ಅನೈತಿಕವೂ, ಅಪಾಯಕಾರಿಯೂ ಆಗಿವೆ. ಹಾಗಾಗಿ, ಛತ್ತೀಸ್ ಗಢದ ದುರಂತಕ್ಕೆ ಇವರೂ ಹೊಣೆಯಾಗುವುದಿಲ್ಲವೇ?
ಹೀಗೆ ವರ್ಷಕ್ಕೆ 45 ಲಕ್ಷ ಶಸ್ತ್ರಕ್ರಿಯೆಗಳನ್ನು ನಡೆಸುವುದಕ್ಕೆ ಸಾಕಷ್ಟು ತಜ್ಞರಾಗಲೀ, ಸುಸಜ್ಜಿತ ಶಸ್ತ್ರಚಿಕಿತ್ಸಾಲಯಗಳಾಗಲೀ ನಮ್ಮಲ್ಲಿಲ್ಲ. ಆದ್ದರಿಂದಲೇ ಪಾಳು ಬಿದ್ದ ಆಸ್ಪತ್ರೆಗಳಲ್ಲೂ, ತಾತ್ಕಾಲಿಕ ಶಿಬಿರಗಳಲ್ಲೂ ಇವನ್ನು ನಡೆಸಲಾಗುತ್ತಿದೆ. ಶಸ್ತ್ರಕ್ರಿಯೆಗೊಳಗಾದವರನ್ನು ಜಗಲಿಗಳಲ್ಲಿ, ಬಯಲುಗಳಲ್ಲಿ, ಹೊಲಗಳಲ್ಲಿ ಮಲಗಿಸಿದ ನಿದರ್ಶನಗಳೂ ಹಲವಿವೆ. ತನ್ನ ನಿಷ್ಠೆಯು ಚಿಕಿತ್ಸಾರ್ಥಿಗಳ ಒಳಿತಿಗಷ್ಟೇ ಮೀಸಲೆಂದೂ, ತಾನು ಯಾವುದೇ ಆಮಿಷ, ಒತ್ತಡಗಳಿಗೆ ಒಳಗಾಗುವುದಿಲ್ಲವೆಂದೂ ಪ್ರತಿಜ್ಞೆಗೈದ ವೈದ್ಯನು ಇಂಥಲ್ಲಿ ಶಸ್ತ್ರಕ್ರಿಯೆ ನಡೆಸುವುದೇಕೆ? ಶಸ್ತ್ರಕ್ರಿಯೆ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲವನ್ನೂ ಸ್ವಚ್ಛ- ಸುರಕ್ಷಿತವಾಗಿರಿಸುವ ಮುಖ್ಯ ಹೊಣೆಗಾರಿಕೆಯೂ ವೈದ್ಯನದಾಗಿರುವಾಗ, ಬೇರೊಬ್ಬರನ್ನು ದೂಷಿಸಿ ಫಲವೇನು? ಆಮಿಷವಿತ್ತ ಸಂಸ್ಥೆಗಳಾಗಲೀ, ಒತ್ತಡ ಹಾಕಿದ ಆಡಳಿತಗಳಾಗಲೀ ವೈದ್ಯನನ್ನು ರಕ್ಷಿಸುವುದಿಲ್ಲ, ಬದಲಿಗೆ ಅವನನ್ನೇ ಜೈಲಿಗೆ ತಳ್ಳುತ್ತವೆ. ಕೊಟ್ಟ ಲಂಚವನ್ನು ಸರಿದೂಗಿಸಲು ಕಳಪೆ ಔಷಧ ಮಾರಿದವನೂ ಒಳ ಹೋಗುತ್ತಾನೆ, ಲಂಚ ತಿಂದವನು ಗಹಗಹಿಸುತ್ತಾನೆ.
ಹೀಗೆಲ್ಲ ಮಾಡಿ ನಮ್ಮ ಜನಸಂಖ್ಯೆಯನ್ನು ಇಳಿಸುವುದಕ್ಕೆ ಪಾಶ್ಚಿಮಾತ್ಯರು ಹಣ ಸುರಿಯುತ್ತಿರುವುದೇಕೆ? ಬಡರಾಷ್ಟ್ರಗಳ ಜನರು ಜಗತ್ತಿಗೇ ಹೊರೆಯೆನ್ನುವ ಭಾವನೆಯು ಕೆಲ ಶ್ರೀಮಂತರಿಗೆ ಮೊದಲೇ ಇತ್ತು. ಡಿಸೆಂಬರ್ 1974ರಲ್ಲಿ ಅಮೆರಿಕಾದ ರಾಷ್ಟ್ರೀಯ ರಕ್ಷಣಾ ಮಂಡಳಿಗಾಗಿ ಹೆನ್ರಿ ಕಿಸಿಂಜರ್ ನೇತತ್ವದಲ್ಲಿ ಸಿದ್ದಗೊಂಡ ‘ರಾಷ್ಟ್ರೀಯ ಸುರಕ್ಷತಾ ಅಧ್ಯಯನ ವರದಿ 200’ ಇದನ್ನು ಗಟ್ಟಿಗೊಳಿಸಿತು (http://pdf.usaid.gov/pdf_docs/PCAAB500.pdf). ಭಾರತ, ಬಂಗ್ಲಾ ದೇಶ, ಪಾಕಿಸ್ತಾನದಂತಹ 13 ಬಡ ದೇಶಗಳಲ್ಲಿ ಜನಸಂಖ್ಯೆ ಹೆಚ್ಚಿದರೆ ಅಲ್ಲೆಲ್ಲ ಯುವಶಕ್ತಿಯು ಪ್ರಬಲವಾಗಿ, ಸಾಮಾಜಿಕ ಅಸ್ಥಿರತೆಯುಂಟಾಗಿ, ತೈಲ, ಖನಿಜಗಳು ಮತ್ತಿತರ ನೈಸರ್ಗಿಕ ಸಂಪನ್ಮೂಲಗಳನ್ನು ಅಲ್ಲಿಂದ ಪಡೆಯಲು ಅಮೆರಿಕಕ್ಕೆ ಕಷ್ಟವಾಗಬಹುದೆಂದು ಈ ರಹಸ್ಯ ವರದಿಯು ಎಚ್ಚರಿಸಿತಲ್ಲದೆ, ಈ ದೇಶಗಳಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸುವುದಕ್ಕೆ ಅಮೆರಿಕದ ಆಡಳಿತವು ಅತ್ಯಂತ ಮಹತ್ವವನ್ನು ನೀಡಬೇಕೆಂದಿತು. ಬಡ ದೇಶಗಳ ನಾಯಕರ ದನಿಯಡಗಿಸಲು ಈ ಕಾರ್ಯಕ್ರಮಗಳನ್ನು ವಿಶ್ವ ಸಂಸ್ಥೆಯ ಜನಸಂಖ್ಯಾ ನಿಧಿಯ ಮೂಲಕವೇ ನಡೆಸಬೇಕೆಂದೂ ಅದು ಸಲಹೆ ನೀಡಿತು. ಮಾತ್ರವಲ್ಲ, ಬಡರಾಷ್ಟ್ರಗಳ ಸಾಮಾಜಿಕ ಹಾಗೂ ಆರ್ಥಿಕ ಅಭಿವದ್ಧಿಯೇ ಜನಸಂಖ್ಯಾ ನಿಯಂತ್ರಣದ ಉದ್ದೇಶವೆನ್ನುವುದನ್ನೂ, ಸಂತಾನಶಕ್ತಿ ಹರಣವು ಮುಕ್ತ ಆಯ್ಕೆಯಾಗಿದ್ದು, ಅದರಲ್ಲಿ ಬಲವಂತವಿರಬಾರದು ಎನ್ನುವುದನ್ನೂ ಒತ್ತಿ ಹೇಳುತ್ತಿರಬೇಕು ಎಂದಿತು. ಇನ್ನೊಂದೆಡೆ, ಜನಸಂಖ್ಯಾ ನಿಯಂತ್ರಣಕ್ಕೊಪ್ಪದ ದೇಶಗಳಿಗೆ ಆಹಾರಧಾನ್ಯಗಳನ್ನು ಪೂರೈಸದೆ ಶಿಕ್ಷಿಸಬೇಕೆಂಬ ಸಲಹೆಯೂ ಇತ್ತು! ಅಲ್ಲಿಂದೀಚೆಗೆ ಆಹಾರ ಕೊರತೆ, ತೈಲ ಅಭಾವ, ತಾಪಮಾನ ಏರಿಕೆ, ಪರಿಸರ ಮಾಲಿನ್ಯ ಇತ್ಯಾದಿ ಎಲ್ಲಾ ಸಮಸ್ಯೆಗಳಿಗೆ ಬಡವರು, ಆದಿವಾಸಿಗಳು, ಹಿಂದುಳಿದವರು ಸೇರಿದಂತೆ ಬಡ ಜನರನ್ನೇ ದೂಷಿಸಲಾಗುತ್ತಿದೆ, ಸಂತಾನಶಕ್ತಿ ಹರಣಕ್ಕೆ ದೂಡಲಾಗುತ್ತಿದೆ.
ಬಡ ಮಹಿಳೆಯರ ಅಂಡನಾಳಗಳನ್ನು ಕತ್ತರಿಸಿದರೆ ತಾಪಮಾನ ಇಳಿಯುತ್ತದೆಯೇ? ಇದೇ ನವೆಂಬರ್ 18ರಂದು ಪ್ರಕಟವಾದ ವರದಿಯ ಅನುಸಾರ ಸದ್ಯಕ್ಕಂತೂ ಹಾಗಾಗದು (ಪಿಎನ್ಎಎಸ್-ನ 18, 2014;111(46):16610) ಭೂ ಪರಿಸರ ವ್ಯವಸ್ಥೆಗಳು ನಶಿಸುತ್ತಿರುವುದಕ್ಕೆ ಶ್ರೀಮಂತ ಕೊಳ್ಳುಬಾಕರು ಹೆಚ್ಚುತ್ತಿರುವುದೇ ಮುಖ್ಯ ಕಾರಣವೆಂದೂ, ಕೇವಲ ಜನಸಂಖ್ಯಾ ನಿಯಂತ್ರಣದಿಂದ ನೂರು ವರ್ಷಗಳಲ್ಲೂ ಇವು ಪರಿಹಾರಗೊಳ್ಳವು ಎಂದೂ ಅದರಲ್ಲಿ ಹೇಳಲಾಗಿದೆ.
ಕಿಸಿಂಜರ್ ವರದಿ ಹಾಗೂ ನಮ್ಮ ತುರ್ತುಸ್ಥಿತಿಗೆ ಮೊದಲು, ಆಗಸ್ಟ್ 1974ರಲ್ಲಿ, ಬುಖಾರೆಸ್ಟ್ ನಲ್ಲಿ ನಡೆದಿದ್ದ ವಿಶ್ವ ಜನಸಂಖ್ಯಾ ಸಮ್ಮೇಳನದಲ್ಲಿ ಅಂದಿನ ಆರೋಗ್ಯ ಸಚಿವರಾಗಿದ್ದ ಕರಣ್ ಸಿಂಗ್ ”ಅಭಿವದ್ಧಿಯಷ್ಟು ಅತ್ಯುತ್ತಮ ಗರ್ಭನಿರೋಧಕ ಬೇರೊಂದಿಲ್ಲ” ಎಂದಿದ್ದರು. ಇಂದು ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ಖಾತರಿ ಇರುವಲ್ಲಿ ಸಂತಾನ ನಿಯಂತ್ರಣವು ಸ್ವಯಂಪ್ರೇರಿತವಾಗಿದ್ದು, ಫಲವತ್ತತೆ ಕನಿಷ್ಠವಿರುತ್ತದೆ ಎನ್ನುವ ವಾಸ್ತವವನ್ನು ನಮ್ಮ ಸರಕಾರಗಳೂ, ವೈದ್ಯರುಗಳೂ ಕಣ್ತೆರೆದು ನೋಡ ಬೇಕಿದೆ; ದಾನ-ದಂಡಯುಕ್ತ ಸಂತಾನಶಕ್ತಿ ಹರಣವನ್ನು ಕೊನೆಗಾಣಿಸಬೇಕಿದೆ.
ಅರುವತ್ಮೂರನೇ ಬರಹ : ಆರೋಗ್ಯರಕ್ಷಣೆಗೆ ನೆಹರೂ ಕನಸು, ಮೋದಿ ಮನಸು [ನವಂಬರ್ 12, 2014, ಬುಧವಾರ] [ನೋಡಿ | ನೋಡಿ]
ನೆಹರೂ ಆಶಿಸಿದ್ದ ಅತ್ಯಾಧುನಿಕ ಉಚಿತ ಆರೋಗ್ಯ ಸೇವೆಗಳು, ಔಷಧಗಳ ಸ್ವಾಮ್ಯತೆ-ಸ್ವಾವಲಂಬನೆ ಇನ್ನೆಲ್ಲಿ?
ಮೋದಿ ಅವರು ಹೊಸ ಪ್ರಧಾನಿಯಾಗಿ ಆರು ತಿಂಗಳಾಗುತ್ತಿರುವಾಗ ಮೊದಲ ಪ್ರಧಾನಿ ನೆಹರೂ ಅವರ 125ನೇ ಜನ್ಮದಿನವೂ ಬಂದಿದೆ, ದೇಶವಾಸಿಗಳ ಆರೋಗ್ಯರಕ್ಷಣೆಗೆ ನೆಹರೂ ಕನಸುಗಳೇನಿದ್ದವು, ಮೋದಿ ಮನದಲ್ಲೇನಿದೆ ಎಂಬುದನ್ನು ಪರಿಶೀಲಿಸುವುದಕ್ಕೊಂದು ಸಂದರ್ಭವೊದಗಿದೆ.
ನಾವು ನಡುರಾತ್ರಿಯಲ್ಲಿ ಸ್ವತಂತ್ರರಾದಾಗ ದೇಶದೆಲ್ಲೆಡೆ ಬಡತನ, ಅಜ್ಞಾನ, ಅನಾರೋಗ್ಯಗಳ ಅಂಧಕಾರವಿತ್ತು. ವರ್ಷಕ್ಕೆ 8 ಕೋಟಿ ಜನಕ್ಕೆ ಮಲೇರಿಯಾ ತಗಲಿ, 8 ಲಕ್ಷ ಜನ ಸಾಯುತ್ತಿದ್ದರು; 50 ಲಕ್ಷ ಕ್ಷಯ ರೋಗಿಗಳಲ್ಲಿ 5 ಲಕ್ಷ ಸಾಯುತ್ತಿದ್ದರು; ಒಂದೂವರೆ ಲಕ್ಷ ಜನ ಸಿಡುಬಿನಿಂದಲೂ, ಇನ್ನೊಂದಷ್ಟು ಲಕ್ಷ ಜನ ಕಾಲೆರಾ, ಪ್ಲೇಗ್ ಮುಂತಾದ ಸೋಂಕುಗಳಿಂದಲೂ ಸಾಯುತ್ತಿದ್ದರು. ಆಗ ನಮ್ಮವರ ನಿರೀಕ್ಷಿತ ಆಯುಸ್ಸು 33 ವರ್ಷಗಳಷ್ಟಿತ್ತು, ಸಾವಿರಕ್ಕೆ 160 ಮಕ್ಕಳು ವರ್ಷ ತುಂಬುವುದರೊಳಗೆ ಸಾಯುತ್ತಿದ್ದರು.
ಬ್ರಿಟಿಷರು ಕೆಲವು ನಗರಗಳಲ್ಲಿ ಆಧುನಿಕ ಆಸ್ಪತ್ರೆಗಳನ್ನು ತೆರೆದಿದ್ದರಾದರೂ, ಬಡವರಿಗೂ, ಹಳ್ಳಿಗರಿಗೂ ಅವು ಎಟಕುತ್ತಿರಲಿಲ್ಲ. ಆಗ ಬ್ರಿಟನ್ನಿನಲ್ಲಿ ಲಕ್ಷ ಜನರಿಗೆ 100 ವೈದ್ಯರಿದ್ದಲ್ಲಿ, ಭಾರತದಲ್ಲಿ ಲಕ್ಷಕ್ಕೆ 16ರಷ್ಟು ವೈದ್ಯರಿದ್ದರು. ಬ್ರಿಟನ್ನಿನಲ್ಲಿ ಲಕ್ಷ ಜನರಿಗೆ 714 ಆಸ್ಪತ್ರೆ ಹಾಸಿಗೆಗಳಿದ್ದರೆ, ಭಾರತದಲ್ಲಿ 24 ಹಾಸಿಗೆಗಳಷ್ಟೇ ಲಭ್ಯವಿದ್ದವು.
ಇಂಗ್ಲೆಂಡ್, ಅಮೆರಿಕಾ, ರಷ್ಯಾ ಮುಂತಾದೆಡೆ ಅಭ್ಯಸಿಸಿದ್ದ ಗಾಂಧಿ, ನೆಹರೂ, ಬೋಸ್, ಅಂಬೇಡ್ಕರ್ ಅಂಥವರಿಗೆ ಭಾರತವೂ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರಬೇಕೆಂಬ ಹೆಬ್ಬಯಕೆಯಿತ್ತು. ಫೆಬ್ರವರಿ 1938ರಲ್ಲಿ ಹರಿಪುರದ ಕಾಂಗ್ರೆಸ್ ಮಹಾಧಿವೇಶನದ ಅಧ್ಯಕ್ಷರಾಗಿದ್ದ ನೇತಾಜಿ ಬೋಸ್ ಅವರು, ಬಡತನ, ಅನಕ್ಷರತೆ ಹಾಗೂ ರೋಗರುಜಿನಗಳ ನಿರ್ಮೂಲನೆಗಾಗಿ ಸಮಾಜವಾದಿ ವ್ಯವಸ್ಥೆಯೊಂದೇ ದಾರಿಯೆಂದು ಹೇಳಿದ್ದರು. ಅದರ ಬೆನ್ನಿಗೇ, ನೆಹರೂ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಯೋಜನಾ ಸಮಿತಿಯನ್ನು ರಚಿಸಲಾಯಿತು; ಅದರಡಿಯಲ್ಲಿ ಹಿರಿಯ ವೈದ್ಯ ವಿಜ್ಞಾನಿ ಕರ್ನಲ್ ಸಾಹಿಬ್ ಸಿಂಗ್ ಸೋಖಿ ಅಧ್ಯಕ್ಷತೆಯಲ್ಲಿ ಆರೋಗ್ಯ ಯೋಜನೆಯ ಉಪಸಮಿತಿಯಿತ್ತು. ಈ ಉಪಸಮಿತಿಯು 1940ರಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಿ, ರೋಗ ರಕ್ಷಣೆ ಹಾಗೂ ಚಿಕಿತ್ಸೆಗಳ ಸಮಗ್ರ ಆರೋಗ್ಯ ಸೇವೆಗಳನ್ನು ಸರಕಾರವೇ ಎಲ್ಲರಿಗೂ ಉಚಿತವಾಗಿ ಒದಗಿಸಬೇಕೆಂದೂ, ಅದಕ್ಕಾಗಿ ಆಧುನಿಕ ವೈದ್ಯವಿಜ್ಞಾನದಲ್ಲಿ ತರಬೇತಾದ ವೈದ್ಯರನ್ನು ಪೂರ್ಣಾವಧಿ ಸೇವೆಗೆ ನಿಯೋಜಿಸಬೇಕೆಂದೂ, ಸಾವಿರಕ್ಕೊಬ್ಬ ವೈದ್ಯ ಹಾಗೂ 600ಕ್ಕೊಂದು ಹಾಸಿಗೆ ಒದಗಿಸಬೇಕೆಂದೂ ಸೂಚಿಸಿತು. ಔಷಧಗಳು ಹಾಗೂ ಉಪಕರಣಗಳ ಉತ್ಪಾದನೆಯಲ್ಲಿ ದೇಶವು ಸ್ವಾವಲಂಬಿಯಾಗಬೇಕೆಂದೂ, ಚಿಕಿತ್ಸೆಯಲ್ಲಿ ಬಳಕೆಯಾಗುವ ಯಾವುದೇ ವಸ್ತುಗಳ ಮೇಲೆ ಖಾಸಗಿ ಕಂಪೆನಿಗಳಿಗೆ ಸ್ವಾಮ್ಯತೆಯಿರಕೂಡದೆಂದೂ ಆ ವರದಿಯು ಒತ್ತಾಯಿಸಿತು. ಆಯುರ್ವೇದ, ಸಿದ್ಧ,ನಾಟಿ ಮುಂತಾದ ದೇಸಿ ಪದ್ಧತಿಗಳಿಗೆ ಸಮಿತಿಯು ಮಹತ್ವ ನೀಡಿರಲಿಲ್ಲ.
ಮುಂದೆ 1943ರಲ್ಲಿ ಬ್ರಿಟಿಷ್ ಸರಕಾರವು ಸರ್ ಜೋಸೆಫ್ ಭೋರ್ ಅವರ ಅಧ್ಯಕ್ಷತೆಯಲ್ಲಿ ಆರೋಗ್ಯ ಸಮೀಕ್ಷೆ ಹಾಗೂ ಅಭಿವೃದ್ಧಿ ಸಮಿತಿಯನ್ನು ರಚಿಸಿತು. ಭೋರ್ ಸಮಿತಿಯ ವರದಿಯು ಸೋಖಿ ಸಮಿತಿಯ ಆಶಯಗಳಿಗೆ ಪೂರಕವಾಗಿತ್ತು; ಪ್ರತಿ 10-20 ಸಾವಿರ ಜನತೆಗೆಂಬಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 30 ಆರೋಗ್ಯ ಕೇಂದ್ರಗಳಿಗೊಂದರಂತೆ ದ್ವಿತೀಯ ಸ್ತರದ ಆಸ್ಪತ್ರೆಗಳು ಹಾಗೂ ಪ್ರತಿ ಜಿಲ್ಲೆಗೊಂದು 2500 ಹಾಸಿಗೆಗಳ ತೃತೀಯ ಸ್ತರದ ಆಸ್ಪತ್ರೆಗಳಿರಬೇಕೆಂಬ ಸಲಹೆ ಅದರಲ್ಲಿತ್ತು.
ನೆಹರೂ ಸರಕಾರದ ಮೊದಲ ಮೂರು ಪಂಚವಾರ್ಷಿಕ ಯೋಜನೆಗಳ ಅಂತ್ಯಕ್ಕೆ 4631 ಆರೋಗ್ಯ ಕೇಂದ್ರಗಳಾದವು; ದಿಲ್ಲಿಯ ಏಮ್ಸ್, ಚಂಡೀಗಢದ ಪಿಜಿಐ, ಬೆಂಗಳೂರಿನ ಮನೋರೋಗ ಸಂಸ್ಥೆಯಂತಹ ಅತ್ಯುನ್ನತ ವೈದ್ಯಕೀಯ ಸಂಸ್ಥೆಗಳು ಸ್ಥಾಪನೆಗೊಂಡವು. ಔಷಧಗಳಲ್ಲಿ ಖಾಸಗಿ ಲಾಭಕೋರತನಕ್ಕೆ ಅವಕಾಶವಿರಕೂಡದೆಂಬ ನೆಹರೂ ಆಶಯಕ್ಕನುಗುಣವಾಗಿ ಹಿಂದುಸ್ಥಾನ್ ಆಂಟಿಬಯಾಟಿಕ್ಸ್, ಇಂಡಿಯನ್ ಡ್ರಗ್ಸ್ ಅಂಡ್ ಫಾರ್ಮಸ್ಯುಟಿಕಲ್ಸ್ ನಂತಹ ಸಂಸ್ಥೆಗಳನ್ನು ಸ್ಥಾಪಿಸಲಾಯಿತು, ಲಸಿಕೆ ಸಂಶೋಧನಾ ಸಂಸ್ಥೆಯನ್ನು ಬಲಪಡಿಸಲಾಯಿತು. ಮಲೇರಿಯಾ, ಕ್ಷಯ, ಕುಷ್ಠ,ಕಾಲೆರಾ ಮುಂತಾದ ರೋಗಗಳ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮಗಳೂ ಆರಂಭಗೊಂಡವು; 1953ರಲ್ಲಿ ಆರಂಭಗೊಂಡ ಮಲೇರಿಯಾ ನಿಯಂತ್ರಣ ಕಾರ್ಯಕ್ರಮದ ಫಲವಾಗಿ 1961ರ ವೇಳೆಗೆ ಮಲೇರಿಯಾ ಪೀಡಿತರ ಸಂಖ್ಯೆಯು ವರ್ಷಕ್ಕೆ ಏಳೂವರೆ ಕೋಟಿಯಿಂದ ಕೇವಲ 5 ಲಕ್ಷಕ್ಕಿಳಿಯಿತು. ಒಟ್ಟಿನಲ್ಲಿ, ನೆಹರೂ ಯುಗಾಂತ್ಯಕ್ಕೆ ಭಾರತೀಯರ ನಿರೀಕ್ಷಿತ ಆಯುಸ್ಸು 33ರಿಂದ 45ಕ್ಕೇರಿತ್ತು, ಶಿಶು ಮರಣ ಪ್ರಮಾಣವು ಸಾವಿರಕ್ಕೆ 160ರಿಂದ 140ಕ್ಕೆ ಇಳಿದಿತ್ತು.
ನೆಹರೂ ನಂತರದಲ್ಲಿ ಆರೋಗ್ಯ ಕ್ಷೇತ್ರದ ಅವಗಣನೆ ಹೆಚ್ಚತೊಡಗಿತು. ಭೋರ್ ಸಮಿತಿಯು ರಾಷ್ಟ್ರೀಯ ಉತ್ಪನ್ನದ ಶೇ. 15ನ್ನು ಆರೋಗ್ಯ ಸೇವೆಗಳಿಗೆ ಒದಗಿಸಬೇಕೆಂದು ಶಿಫಾರಸು ಮಾಡಿದ್ದರೂ, ಮೊದಲ ಯೋಜನೆಯಲ್ಲಿ ಶೇ.3.3ರಷ್ಟು ಒದಗಿಸಲಾಗಿತ್ತು, ಮೂರನೇ ಯೋಜನೆಯಲ್ಲಿ ಇದು ಶೇ. 2.6ಕ್ಕಿಳಿಯಿತು. ನೆಹರೂ ನಂತರ ಇದು ಇಳಿಯುತ್ತಲೇ ಹೋಗಿ, ಹನ್ನೊಂದನೇ ಯೋಜನೆಯ ವೇಳೆಗೆ ಕೇವಲ ಶೇ. 0.9 ಆಯಿತು. ಸರಕಾರಿ ಆಸ್ಪತ್ರೆಗಳು ಸೌಲಭ್ಯಗಳಿಲ್ಲದೇ ಸೊರಗಿದವು, ಗ್ರಾಮೀಣ ಪ್ರದೇಶಗಳಂತೂ ತೀರಾ ಕಡೆಗಣಿಸಲ್ಪಟ್ಟವು. ಸರಕಾರಿ ಆರೋಗ್ಯ ವ್ಯವಸ್ಥೆಯು ಕುಟುಂಬ ಕಲ್ಯಾಣ-ರೋಗ ನಿಯಂತ್ರಣಕ್ಕೆ ಸೀಮಿತಗೊಂಡು, ಚಿಕಿತ್ಸೆಯ ಹೊಣೆ ಕಡಿಮೆಯಾಗುತ್ತಾ ಸಾಗಿತು. ವೈದ್ಯಕೀಯ ಶಿಕ್ಷಣವನ್ನು ಕಡೆಗಣಿಸಿದ್ದರಿಂದ ತಜ್ಞವೈದ್ಯರ ಕೊರತೆಯಾಯಿತು.
ಸರಕಾರ ಕೈಬಿಟ್ಟದ್ದನ್ನು ಖಾಸಗಿ ವಲಯ ಬಾಚಿಕೊಂಡಿತು. ನೆಹರೂ ಇದ್ದಾಗಲೇ ಹಣಕ್ಕಾಗಿ ಸೀಟು ಕೊಡುವ ಕೆಲ ಖಾಸಗಿ ವೈದ್ಯಕೀಯ ಕಾಲೇಜುಗಳು ತೆರೆದುಕೊಂಡರೆ, ಈಗ ಅವು ನಾಯಿಕೊಡೆಗಳಂತೆ ಏಳುತ್ತಿವೆ. ಹಾಗೆಯೇ ಖಾಸಗಿ ಆಸ್ಪತ್ರೆಗಳೂ ಹೆಚ್ಚಿದವು; ಬಡವರಿಗೆ ಉಚಿತ ಚಿಕಿತ್ಸೆಯ ಭರವಸೆಯಿತ್ತು ಸರಕಾರದಿಂದ ಭೂಮಿಯನ್ನೂ, ತೆರಿಗೆ ವಿನಾಯಿತಿಗಳನ್ನೂ ಪಡಕೊಂಡು ಮಹಾ ಅಸ್ಪತ್ರೆಗಳೂ ಎದ್ದವು. ಈಗ ಸರಕಾರಗಳು ಆರೋಗ್ಯ ವಿಮೆಯ ಹೆಸರಲ್ಲಿ ಇವೇ ಖಾಸಗಿ ಆಸ್ಪತ್ರೆಗಳಿಗೆ ಕೋಟಿಗಟ್ಟಲೆ ಸುರಿಯತೊಡಗಿವೆ, ಭರವಸೆಗಳು ಮರೆತು ಹೋಗಿವೆ.
ಹದಿಮೂರು ವರ್ಷ ಮೋದಿಯಾಳ್ವಿಕೆಯಲ್ಲಿದ್ದ ಗುಜರಾತಿನ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯು ಶೇ. 34ರಷ್ಟಿದೆ, ಇದು ರಾಷ್ಟ್ರೀಯ ಸರಾಸರಿಗಿಂತ ಮೂರು ಪಟ್ಟು ಹೆಚ್ಚು. ಸರಕಾರಿ ಆರೋಗ್ಯ ವ್ಯವಸ್ಥೆಯು ಬಲವಾಗಿರುವ ಕೇರಳದಲ್ಲಿ ಶಿಶುಗಳು ಹಾಗೂ ತಾಯಂದಿರ ಸಾವಿನ ಪ್ರಮಾಣವು ದೇಶದಲ್ಲೇ ಅತಿ ಕಡಿಮೆಯಿದ್ದರೆ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಅಮೃತಂ ಯೋಜನೆ, ಚಿರಂಜೀವಿ ಯೋಜನೆ ಮುಂತಾದ ವಿಮಾ ಯೋಜನೆಗಳಿರುವ ಗುಜರಾತಿನಲ್ಲಿ ಅವು ಕೇರಳಕ್ಕಿಂತ ಮೂರು ಪಟ್ಟು ಹೆಚ್ಚಿವೆ. ಮೋದಿ ಪ್ರಣಾಳಿಕೆಯಲ್ಲಿಯೂ ಗುಜರಾತ್ ಮಾದರಿಯ ಬಗ್ಗೆ ಹೇಳಲಾಗಿರುವುದರಿಂದ ಖಾಸಗಿ ಆಸ್ಪತ್ರೆಗಳಿಗೆ ಬೊಕ್ಕಸದ ಹಣ ಸುರಿಯುವ ಯೋಜನೆಗಳನ್ನು ಮುಂಬರುವ ದಿನಗಳಲ್ಲಿ ನಿರೀಕ್ಷಿಸಬಹುದಾಗಿದೆ.
ವೈದ್ಯವಿಜ್ಞಾನದಲ್ಲಿ ಅತ್ಯುನ್ನತ ತರಬೇತಿ ಪಡೆದವರನ್ನು ಸರಕಾರಿ ಆಸ್ಪತ್ರೆಗಳಲ್ಲಿ ನಿಯೋಜಿಸಬೇಕೆಂಬ ಸೋಖಿ-ಭೋರ್-ನೆಹರೂ ಆಶಯಗಳು ಮಣ್ಣುಪಾಲಾಗಿ, ಬದಲಿ ಚಿಕಿತ್ಸಕರು ಸರಕಾರಿ ಸೇವೆಯನ್ನು ಹೊಕ್ಕುತ್ತಿದ್ದಾರೆ. ವಾಜಪೇಯಿ ಸರಕಾರವು 2003ರಲ್ಲಿ ಯೋಗಾಭ್ಯಾಸವನ್ನೂ ವೈದ್ಯಪದ್ಧತಿಗಳ ಪಟ್ಟಿಗೆ ಸೇರಿಸಿ ಆಯುಷ್ ಎಂಬ ವಿಭಾಗವನ್ನು ಆರಂಭಿಸಿತು. ಭೋರ್ ಸಮಿತಿಯ ವರದಿಯನ್ನು ಉಲ್ಲೇಖಿಸಿ, ಆ ವರದಿಯಲ್ಲಿ ಎಲ್ಲೂ ಹೇಳದ ಯೋಗಾಭ್ಯಾಸವನ್ನು 2005ರ ರಾಷ್ಟ್ರೀಯ ಪಠ್ಯ ಚೌಕಟ್ಟಿನೊಳಕ್ಕೂ ಸೇರಿಸಲಾಯಿತು. ಹಳ್ಳಿಗಳಲ್ಲಿ ಉತ್ತಮ ಸಂಬಳವಿತ್ತು ತಜ್ಞರನ್ನು ನೇಮಿಸುವ ಬದಲು ಗ್ರಾಮೀಣ ಆರೋಗ್ಯ ಅಭಿಯಾನದಲ್ಲಿ 11400ಕ್ಕೂ ಹೆಚ್ಚು ಬದಲಿ ಚಿಕಿತ್ಸಕರನ್ನು ನಿಯುಕ್ತಿಗೊಳಿಸಲಾಗಿದೆ, 11ನೇ ಯೋಜನೆಯಲ್ಲಿ ಆಯುಷ್ ಸೇವೆಗೆ 3000 ಕೋಟಿಯಷ್ಟು ಖರ್ಚಾಗಿದೆ. ಮೋದಿ ಪ್ರಣಾಳಿಕೆಯಲ್ಲೂ ಯೋಗ ಮತ್ತು ಆಯುರ್ವೇದಗಳಿಗೆ ವಿಶೇಷ ಉತ್ತೇಜನವನ್ನು ನೀಡುವ ಬಗ್ಗೆ ಹೇಳಲಾಗಿದೆ, ಅದಕ್ಕೊಬ್ಬ ಮಂತ್ರಿಯೂ ಬಂದಾಗಿದೆ. ಡೆಂಗಿ, ಮಲೇರಿಯಾಗಳನ್ನು ನಿಯಂತ್ರಿಸುವ ಬದಲು ಆಧಾರರಹಿತ ಬದಲಿ ಚಿಕಿತ್ಸೆಯನ್ನು ನೀಡುವುದಕ್ಕೆ, ಸುರಕ್ಷಿತ ಗರ್ಭಪಾತಕ್ಕೆ ಸೌಲಭ್ಯಗಳನ್ನೊದಗಿಸುವ ಬದಲು ಆಯುಷ್ ಚಿಕಿತ್ಸಕರಿಂದಲೂ ಗರ್ಭಪಾತ ಮಾಡಿಸುವುದಕ್ಕೆ ಹೊಸ ಸರಕಾರವು ಹೊರಟಾಗಿದೆ.
ನೆಹರೂ ಕಾಲದ ಸರಕಾರಿ ಔಷಧ-ಲಸಿಕೆಗಳ ಕಂಪೆನಿಗಳು ರೋಗಗ್ರಸ್ತವಾಗಿವೆ. ಖಾಸಗಿ ಕಂಪೆನಿಗಳಿಗೆ ಔಷಧಗಳ ಸ್ವಾಮ್ಯತೆಯನ್ನು ನಿರಾಕರಿಸಿದ್ದ ನೆಹರೂ ಕಾಲದ ಕಾನೂನು ತದನಂತರ ಬದಲಾಗಿದ್ದರೂ, ಜೀವರಕ್ಷಕವಾದ, ಅತಿ ಮುಖ್ಯ ಔಷಧಗಳನ್ನು ತಯಾರಿಸಲು ನಮ್ಮ ಕಂಪೆನಿಗಳಿಗೆ ಇದುವರೆಗೆ ಅವಕಾಶವಿದೆ. ಮೊನ್ನೆ ಅಮೆರಿಕಾದಲ್ಲಿ ಮೋದಿ ಮತ್ತು ಒಬಾಮ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಈ ಸ್ವಾಮ್ಯತೆಯ ಕಾಯಿದೆಯನ್ನು ಪರಿಶೀಲಿಸುವ ಬಗ್ಗೆ ಹೇಳಲಾಗಿದ್ದು, ಔಷಧಗಳನ್ನು ತಯಾರಿಸುವ ನಮ್ಮ ಹಕ್ಕಿಗೂ ಚ್ಯುತಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಸರಕಾರವು ಎಲ್ಲರಿಗೂ ಉಚಿತವಾಗಿ ನೀಡಬೇಕಿದ್ದ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಔಷಧಗಳು ಖಾಸಗಿ ಮುಷ್ಠಿಯೊಳಗಾಗುತ್ತಿವೆ, ಖಾಸಗಿಯಾಗಿರಬೇಕಾಗಿದ್ದ ಬದಲಿ ಪದ್ಧತಿಗಳು ಸರಕಾರಿ ಆಸ್ಪತ್ರೆಗಳಲ್ಲಿ ಬೆಳೆಯುತ್ತಿವೆ. ಸಮಗ್ರ ಆರೋಗ್ಯ ರಕ್ಷಣೆಗೆ ಶಿಕ್ಷಣ, ಉತ್ತಮ ಆಹಾರ, ನೈರ್ಮಲ್ಯ ಹಾಗೂ ನುರಿತ ವೈದ್ಯರ ಬದಲಿಗೆ ಯೋಗ-ಕಷಾಯಗಳನ್ನು ಮುಂದೊತ್ತಲಾಗುತ್ತಿದೆ, ಹಳ್ಳಿಯ ಬಡವರಿಗೆ ಅದಷ್ಟೇ ಸಾಕೆನ್ನುವ ಧೋರಣೆ ಬೆಳೆಯುತ್ತಿದೆ. ಹಾಗಿರುವಾಗ, ಖಾಸಗಿ ಆಸ್ಪತ್ರೆಯ ಅಮೀರರಿಂದ ಬೆನ್ನು ತಟ್ಟಿಸಿಕೊಳ್ಳುವ, ಬದಲಿ ಚಿಕಿತ್ಸೆಯ ನಕಲಿ ಫಕೀರರ ಕೈಕುಲುಕುವ ದೇಶದ ವಜೀರರು ಒಳ್ಳೆಯ ದಿನಗಳನ್ನೆಂತು ತಂದಾರೆಂದು ಗರೀಬರು ಕಾಯುತ್ತಿದ್ದಾರೆ.
ಅರುವತ್ತೆರಡನೇ ಬರಹ : ಸೊಪ್ಪು ತಿನ್ನದಿದ್ದರೆ ತಪ್ಪು, ತಿಂದರೂ ತಪ್ಪು [ಅಕ್ಟೋಬರ್ 29, 2014, ಬುಧವಾರ] [ನೋಡಿ | ನೋಡಿ]
ನಾವೆಲ್ಲ ನಿತ್ಯ ಉಪಯೋಗಿಸುವ ಸಸ್ಯಾಹಾರದಲ್ಲಿ ಅನ್ನಾಂಗ-ಖನಿಜಾಂಶಗಳು ಕಡಿಮೆ, ವಿಷಾಂಶಗಳು ಹೆಚ್ಚು
ಹೃದ್ರೋಗ, ಕ್ಯಾನ್ಸರ್ ಇತ್ಯಾದಿಗಳನ್ನು ದೂರವಿಡಲು ಹಣ್ಣು-ತರಕಾರಿಗಳನ್ನು ಯಥೇಷ್ಟವಾಗಿ ತಿನ್ನಬೇಕೆಂದು ಹೇಳಲಾಗುತ್ತದೆ. ಆದರೆ, ಅವೇ ಹಣ್ಣು-ತರಕಾರಿಗಳಿಗೆ ಸುರಿಯುತ್ತಿರುವ ರಸಗೊಬ್ಬರ-ಕೀಟನಾಶಕಗಳಿಂದ ಇಂತಹಾ ರೋಗಗಳು ಹೆಚ್ಚುತ್ತಿವೆ ಎಂದೂ ಹೇಳಲಾಗುತ್ತದೆ. ಇದೆಂತಹಾ ವಿಪರ್ಯಾಸ? ತಿನ್ನದಿದ್ದರೂ ರೋಗ, ತಿಂದರೂ ರೋಗ!
ತಿನ್ನಬಲ್ಲ ಗಿಡ-ಹೂವು-ಹಣ್ಣುಗಳೆಲ್ಲವೂ ಮೊದಲು ನಿಸರ್ಗಸಹಜ ನೆಲಗೊಬ್ಬರವನ್ನುಂಡು ಬೆಳೆಯುತ್ತಿದ್ದರೆ, ಈ ನೂರು ವರ್ಷಗಳಿಂದ ಕೃತಕ ರಸಗೊಬ್ಬರಗಳು, ಎಪ್ಪತ್ತು ವರ್ಷಗಳಿಂದ ಕೃತಕ ಕೀಟನಾಶಕಗಳು, ಕೃಷಿಯ ಭಾಗವಾದವು. ಮಣ್ಣಿಗೆ ರಂಜಕವನ್ನು ಸೇರಿಸುವುದಕ್ಕೆ ಫಾಸ್ಫೇಟ್, ಸಾರಜನಕಕ್ಕೆ ನೈಟ್ರೇಟ್, ಪೊಟಾಸಿಯಂಗೆ ಪೊಟಾಷ್ ಬಂದವು, ಅವುಗಳನ್ನು ಉತ್ಪಾದಿಸುವ ಬೃಹತ್ ಕಾರ್ಖಾನೆಗಳೂ ಬಂದವು (ಅದೇ ನೈಟ್ರೇಟಿನಿಂದ ಅಗಣಿತ ಯುದ್ಧ-ಕಲಹ-ಸ್ಫೋಟಗಳಲ್ಲಿ ಲಕ್ಷಗಟ್ಟಲೆ ಸಾವುಗಳಾದವು). ಡಿಡಿಟಿ, ಗಾಮಾಕ್ಸೇನ್ ಗಳಿಂದ ತೊಡಗಿ ಬಗೆಬಗೆಯ ಆರ್ಗಾನೋಫಾಸ್ಫೇಟ್, ಪೈರೆಥ್ರಂ ಕೀಟನಾಶಕಗಳೆಲ್ಲ ಬಂದವು. ಇಂದು, ಗೆಡ್ಡೆ-ಬೀಜ ಬಿತ್ತುವಲ್ಲಿಂದ ಫಲದವರೆಗೆ, ಹೂವಿನಿಂದ ಹಣ್ಣಿನವರೆಗೆ ಬಗೆಬಗೆಯ ರಸಗೊಬ್ಬರಗಳು, ಕಳೆ-ಕೀಟ-ಶಿಲೀಂಧ್ರ ನಾಶಕಗಳು, ಕಾಯಿ ಮಾಗಿಸುವ ರಾಸಾಯನಿಕಗಳು, ಮೇಣದ ಹೊದಿಕೆಗಳು ನಮ್ಮ ಸಸ್ಯಾಹಾರವನ್ನು ಸೇರಿಕೊಳ್ಳುತ್ತಿವೆ. ಅನ್ನಾಂಗ-ಖನಿಜಾಂಶ-ಉತ್ಕರ್ಷಣ ನಿರೋಧಕಗಳು ತುಂಬಿರುವ ನೈಸರ್ಗಿಕ ಸಸ್ಯಾಹಾರವು ನಮ್ಮ ಆರೋಗ್ಯಕ್ಕೆ ಪೂರಕವಾಗಿದ್ದರೆ, ರಸಗೊಬ್ಬರ-ಕೀಟನಾಶಕ ನುಂಗಿ ಬೆಳೆದ ಈಗಿನ ಸಸ್ಯಾಹಾರವು ಆರೋಗ್ಯಕ್ಕೆ ಮಾರಕವಾಗುತ್ತಿದೆ.
ಈಗ ಪ್ರತಿ ವರ್ಷ ವಿಶ್ವದಲ್ಲಿ 19 ಕೋಟಿ ಟನ್ನುಗಳಷ್ಟು, ಭಾರತದಲ್ಲಿ 3 ಕೋಟಿ ಟನ್ನುಗಳಷ್ಟು, ರಸಗೊಬ್ಬರಗಳನ್ನು ಬಳಸಲಾಗುತ್ತಿದೆ. ಪ್ರತಿ ವರ್ಷ ವಿಶ್ವದಲ್ಲಿ 25 ಲಕ್ಷ ಟನ್, ನಮ್ಮಲ್ಲಿ 2 ಲಕ್ಷ ಟನ್, ಕಳೆ-ಕೀಟನಾಶಕಗಳನ್ನು ಬಳಸಲಾಗುತ್ತಿದೆ. ಜನಸಂಖ್ಯೆ ಹೆಚ್ಚುತ್ತಾ, ಕೃಷಿಯೋಗ್ಯ ಭೂಮಿಯು ಕಡಿಮೆಯಾಗುತ್ತಿದ್ದಂತೆ ಇವುಗಳನ್ನು ಬಳಸುವ ಒತ್ತಡವೂ ಹೆಚ್ಚುತ್ತಿದೆ. ಹಿತಮಿತ ಬಳಕೆಯ ಮಾನದಂಡಗಳೆಲ್ಲ ಕಡೆಗಣಿಸಲ್ಪಡುತ್ತಿವೆ, ಕಣ್ಗಾವಲು ವಿಫಲವಾಗುತ್ತಿದೆ, ಲಾಭವೊಂದೇ ಮುಖ್ಯವಾಗುತ್ತಿದೆ. ರಸಗೊಬ್ಬರ ಹಾಗೂ ಕೀಟನಾಶಕಗಳ ಅತಿಬಳಕೆಯಿಂದ ಭೂ-ಜಲ-ವಾಯು ಮಾಲಿನ್ಯವಷ್ಟೇ ಅಲ್ಲದೆ, ಸಕಲ ಜೀವರಾಶಿಯ ಮೇಲೆ, ಆಹಾರಸಂಕಲೆಯ ಮೇಲೆ, ಸಸ್ಯ-ಮಾಂಸಾಹಾರಗಳ ಗುಣಮಟ್ಟದ ಮೇಲೆ, ಹಲಬಗೆಯ ದುಷ್ಪರಿಣಾಮಗಳಾಗುತ್ತಿವೆ.
ಇಂದು ತಿನ್ನುತ್ತಿರುವ ಆಹಾರದಲ್ಲಿ ಸಾಕಷ್ಟು ಪೋಷಕಾಂಶಗಳಿಲ್ಲದೆ ವಿಶ್ವದ ಮುನ್ನೂರು ಕೋಟಿ ಜನ ನ್ಯೂನಪೋಷಣೆಯಿಂದ ಬಳಲುತ್ತಿದ್ದಾರೆ. ಕೃತಕ ಗೊಬ್ಬರಗಳಲ್ಲಿ ಸಾರಜನಕ, ರಂಜಕ,ಪೊಟಾಸಿಯಂನಂತಹ ಕೆಲವೇ ಲವಣಾಂಶಗಳಿರುವುದರಿಂದ ಆಹಾರಬೆಳೆಗಳಿಗೂ ಇವಿಷ್ಟೇ ಲಭ್ಯವಾಗುತ್ತವೆ. ಇಂದು ಕೃಷಿಭೂಮಿಯಲ್ಲಿ ಸಾರಜನಕ, ರಂಜಕ, ಪೊಟಾಸಿಯಂಗಳ ಪ್ರಮಾಣವು ಶೇ. 55-85ರಷ್ಟು ಕಡಿಮೆಯಿದೆ, ಕಬ್ಬಿಣ, ಸತುವು, ಅಯೊಡಿನ್, ಸೆಲೆನಿಯಂ, ತಾಮ್ರ, ಮ್ಯಾಂಗನೀಸ್, ಮೊಲಿಬ್ದಿನಂ, ಬೋರಾನ್ ಮುಂತಾದ ಖನಿಜಾಂಶಗಳ ಪ್ರಮಾಣವು ಶೇ. 10-49ರಷ್ಟು ಕಡಿಮೆಯಿದೆ. ಇದರಿಂದಾಗಿ, ಆಹಾರಬೆಳೆಗಳೂ, ಅವನ್ನು ತಿನ್ನುವ ಮನುಷ್ಯರೂ ಅತ್ಯಗತ್ಯವಾದ ಈ ಖನಿಜ-ಲವಣಾಂಶಗಳಿಂದ ವಂಚಿತರಾಗುತ್ತಿದ್ದಾರೆ. ಈ ಖನಿಜಾಂಶಗಳ ಕೊರತೆಯಿಂದ ದೇಹದ ಅಂಗಾಂಗಗಳ ಕಾರ್ಯಗಳು, ರೋಗರಕ್ಷಣಾ ಸಾಮರ್ಥ್ಯ, ಮಕ್ಕಳ ಮನೋದೈಹಿಕ ಬೆಳವಣಿಗೆ, ಬುದ್ಧಿಮತ್ತೆ, ಏಕಾಗ್ರತೆ ಮುಂತಾದೆಲ್ಲವೂ ಬಾಧಿಸಲ್ಪಡುತ್ತವೆ; ಹಸಿವು ಮತ್ತು ಪಚನಕ್ರಿಯೆಗಳು ಬಾಧಿಸಲ್ಪಟ್ಟು ಇತರ ಪೋಷಕಾಂಶಗಳ ಹೀರುವಿಕೆಗೂ ಅಡ್ಡಿಯಾಗುತ್ತದೆ, ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇಂದು ವಿಶ್ವದ ಇನ್ನೂರು ಕೋಟಿ ಜನ ಸತುವಿನ ಕೊರತೆಯಿಂದ ಬಗೆಬಗೆಯ ತೊಂದರೆಗಳಿಗೀಡಾಗುತ್ತಿದ್ದಾರೆ, ವರ್ಷಕ್ಕೆ ಎಂಟು ಲಕ್ಷ ಜನ, ಅವರಲ್ಲಿ ನಾಲ್ಕೂವರೆ ಲಕ್ಷ ಮಕ್ಕಳು, ಸಾವನ್ನಪ್ಪುತ್ತಿದ್ದಾರೆ. ನಮ್ಮ ದೇಶದ ಶೇ. 90ಕ್ಕೂ ಹೆಚ್ಚು ಜನರಲ್ಲಿ ಕಬ್ಬಿಣದ ಕೊರತೆಯಿದೆ, ಶೇ. 40-60ರಷ್ಟು ಜನರಲ್ಲಿ (ಶೇ. 85ರಷ್ಟು ಗರ್ಭಿಣಿಯರು, ಶೇ. 74ರಷ್ಟು ಮಕ್ಕಳು ಮತ್ತು ಶೇ. 90ರಷ್ಟು ಹದಿಹರೆಯದ ಹುಡುಗಿಯರಲ್ಲಿ) ರಕ್ತಹೀನತೆಯಿದೆ. ಭಾರತವೂ ಸೇರಿದಂತೆ ವಿಶ್ವದ ಮೂರರಲ್ಲೊಂದು ಮಗುವಿನಲ್ಲಿ, ಆರರಲ್ಲೊಬ್ಬಳು ಗರ್ಭಿಣಿಯಲ್ಲಿ ಎ ಅನ್ನಾಂಗದ ಕೊರತೆಯಿದೆ, ಸುಮಾರು ಆರೂವರೆ ಲಕ್ಷ ಮಕ್ಕಳು ಅದರಿಂದಾಗಿ ಸಾವನ್ನಪ್ಪುತ್ತಿದ್ದಾರೆ, ಐದು ಲಕ್ಷ ಮಕ್ಕಳು ಅಂಧರಾಗುತ್ತಿದ್ದಾರೆ. ಜೊತೆಗೆ, ಕೃತಕ ರಸಗೊಬ್ಬರಗಳಿಂದ ಕ್ಯಾಡ್ಮಿಯಂ, ಸೀಸ, ಪಾದರಸ, ಆರ್ಸೆನಿಕ್, ನಿಕಲ್ ಮುಂತಾದ ಲೋಹಾಂಶಗಳು ಮಣ್ಣನ್ನು ಸೇರಿ, ಕ್ಯಾನ್ಸರ್, ಮೂತ್ರಪಿಂಡಗಳ ಕಾಯಿಲೆ ಇತ್ಯಾದಿಗಳಿಗೆ ಕಾರಣವಾಗಬಹುದೆಂದೂ ಹೇಳಲಾಗುತ್ತಿದೆ.
ಕಳೆ-ಕೀಟನಾಶಕಗಳು ನೇರವಾಗಿಯೂ, ಪರೋಕ್ಷವಾಗಿಯೂ, ನಮ್ಮೊಳಗೆ ಹೊಕ್ಕುತ್ತಿವೆ. ವಿಷಪ್ರೋಕ್ಷಿತ ಧಾನ್ಯ-ಎಲೆ-ಸೊಪ್ಪು-ತರಕಾರಿ-ಹೂವು-ಹಣ್ಣು-ಬೀಜಗಳ ಮೂಲಕವೂ, ಅವನ್ನು ತಿಂದ ಇತರ ಪ್ರಾಣಿ-ಪಕ್ಷಿಗಳ ಹಾಲು ಹಾಗೂ ಮಾಂಸದ ಮೂಲಕವೂ ಇವು ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಇಂದು ಮಾರುಕಟ್ಟೆಗಳಲ್ಲಿ ದೊರೆಯುವ ಯಾವುದೇ ಆಹಾರವಸ್ತುವೂ ಕೀಟನಾಶಕ ಮುಕ್ತವೆಂದು ಹೇಳಲಾಗದು. ನಮ್ಮ ದೇಶದ ವಿವಿಧೆಡೆಗಳಲ್ಲಿ ನಡೆಸಲಾಗಿರುವ ಪರೀಕ್ಷೆಗಳನುಸಾರ, ಹಣ್ಣು-ತರಕಾರಿಗಳು, ಧಾನ್ಯಗಳು, ಚಹಾ, ಲಘು ಪೇಯಗಳು, ಹಾಲು, ಮೊಟ್ಟೆ, ಮಾಂಸಗಳ ಶೇ. 11ರಿಂದ 85ರಷ್ಟು ಮಾದರಿಗಳಲ್ಲಿ ಬಗೆಬಗೆಯ ಕೀಟನಾಶಕಗಳನ್ನು ಗುರುತಿಸಲಾಗಿದೆ.
ಕೀಟನಾಶಕಗಳ ಬಳಕೆಯಿಂದ ಪರಿಸರ ಹಾಗೂ ಪ್ರಾಣಿ-ಪಕ್ಷಿ ಸಂಕುಲದ ಮೇಲುಂಟಾಗುವ ದುಷ್ಪರಿಣಾಮಗಳ ಬಗ್ಗೆ ಹಲವು ವರದಿಗಳಿದ್ದರೂ, ವಿಷಪ್ರೋಕ್ಷಿತ ಆಹಾರದಿಂದ ಮನುಷ್ಯರ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ನಿಖರವಾದ ಮಾಹಿತಿಯ ಕೊರತೆಯಿದೆಯೆಂದೇ ಹೇಳಬಹುದು. ಅನ್ಯಪ್ರಾಣಿಗಳಿಗಾಗುವ ಸಮಸ್ಯೆಗಳ ಆಧಾರದಲ್ಲಿ, ಇಂತಹ ವಿಷಯುಕ್ತವಾದ ಆಹಾರವನ್ನು ದೀರ್ಘಕಾಲ ಸೇವಿಸುವುದರಿಂದ ವಿವಿಧ ಕ್ಯಾನ್ಸರುಗಳು, ನಿರ್ನಾಳ ವ್ಯವಸ್ಥೆಯ (ವಿವಿಧ ಹಾರ್ಮೋನುಗಳ) ಸಮಸ್ಯೆಗಳು, ನಿರ್ವೀರ್ಯತೆ ಹಾಗೂ ಬಂಜೆತನ, ನರಮಂಡಲದ ಸಮಸ್ಯೆಗಳು, ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಮನೋದೈಹಿಕ ಬೆಳವಣಿಗೆಯ ಸಮಸ್ಯೆಗಳು, ಯಕೃತ್ತು, ಶ್ವಾಸಾಂಗ ಹಾಗೂ ಮೂತ್ರಪಿಂಡಗಳ ಕಾಯಿಲೆಗಳು ಉಂಟಾಗಬಹುದೆಂದು ಹೇಳಲಾಗುತ್ತದೆ.
ಇವನ್ನೆಲ್ಲ ಪರಿಹರಿಸಲೋಸುಗ ಹೊಸ ಕೃಷಿಕ್ರಾಂತಿಗೆ ಸಿದ್ಧತೆಯಾಗುತ್ತಿದೆ; ಖನಿಜಾಂಶಭರಿತ ಹೊಸ ರಸಗೊಬ್ಬರಗಳನ್ನು, ಪರಿಸರ ಸ್ನೇಹಿಯೆನ್ನಲಾಗುವ ಕಳೆ-ಕೀಟನಾಶಕಗಳನ್ನು, ವಿಷಪೂರಿತವಾದ ಯಾ ಅನ್ನಾಂಗಭರಿತವಾದ ಕುಲಾಂತರಿ ಸಸ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಇವುಗಳು ಕಂಪೆನಿಗಳಿಗೆ ಲಾಭವನ್ನಿತ್ತರೂ, ನಮ್ಮ ಆರೋಗ್ಯವನ್ನು ಸುಧಾರಿಸುತ್ತವೆಯೆನ್ನಲಾಗದು. ಅವನ್ನು ಕಾಯಲಾಗದು, ಸಾವಯವ-ಸುಸ್ಥಿತ ಕೃಷಿಪದ್ಧತಿಯನ್ನು ನಂಬಿಕೊಂಡಿದ್ದರೂ ಸಾಲದು. ಹಾಗಿರುವಾಗ, ನಮ್ಮ ದೇಹವನ್ನು ರಕ್ಷಿಸಿಕೊಳ್ಳಬೇಕಾದರೆ, ಲಭ್ಯವಿರುವ ಆಹಾರವಸ್ತುಗಳನ್ನೇ ಜಾಣ್ಮೆಯಿಂದ ಬಳಸಿಕೊಳ್ಳುವ ಉಪಾಯಗಳನ್ನು ಹುಡುಕಬೇಕಾಗುತ್ತದೆ.
ಅಗತ್ಯವುಳ್ಳ ಪೋಷಕಾಂಶಗಳೆಲ್ಲವನ್ನೂ ಪಡೆಯುವುದಕ್ಕಾಗಿ ವೈವಿಧ್ಯಮಯವಾದ ಆಹಾರವನ್ನು ತಿನ್ನಬೇಕು. ಪ್ರಕೃತಿದತ್ತವಾದ, ಸಾಂಪ್ರದಾಯಿಕವಾದ, ಹಳ್ಳಿ-ಕಾಡುಗಳಲ್ಲಿ ದೊರೆಯುವ ಸೊಪ್ಪು-ತರಕಾರಿ-ಕಾಯಿ-ಬೀಜಗಳನ್ನೂ, ದ್ವಿದಳ ಧಾನ್ಯಗಳನ್ನೂ, ಅಣಬೆಗಳನ್ನೂ ಹೆಚ್ಚು ಹೆಚ್ಚು ತಿನ್ನಬೇಕು. ರಸಗೊಬ್ಬರ ಹಾಗೂ ಕೀಟನಾಶಕಗಳಿಲ್ಲದೆಯೇ ಬೆಳೆಯುವ ಹಲಸು, ದೀವಿಹಲಸು, ಬಿದಿರು, ನುಗ್ಗೆ ಮುಂತಾದ ಸಸ್ಯಗಳ ಉತ್ಪನ್ನಗಳನ್ನು, ಚಟ್ಟೆ ಸೊಪ್ಪು, ಕೆಸುವಿನ ಸೊಪ್ಪು, ನೆಲಬಸಳೆ ಮುಂತಾದ ವನ್ಯ ಸೊಪ್ಪು-ತರಕಾರಿಗಳನ್ನು ಹೆಚ್ಚು ಸೇವಿಸಬಹುದು; ಹಾಗೆಯೇ, ಸ್ವತಃ ಬೆಳೆಸಿದ ಅಥವಾ ಪರಿಚಯಸ್ಥರು ಬೆಳೆಸಿದ ವಿಷರಹಿತ ತರಕಾರಿಗಳಿದ್ದರೆ ಒಳ್ಳೆಯದು.
ಮಾರುಕಟ್ಟೆಯಲ್ಲಿ ವಿಷದ ಬಣ್ಣ-ವಾಸನೆಗಳಿಲ್ಲದ, ಮೇಣ ಮೆತ್ತಿಲ್ಲದ, ಸೊಪ್ಪು-ತರಕಾರಿಗಳನ್ನು ಆಯ್ದುಕೊಳ್ಳಬೇಕು. ಹಣ್ಣಿನ ಸೇವನೆಯನ್ನು ಕಡಿತಗೊಳಿಸಿದರೆ ಕೀಟ-ಶಿಲೀಂಧ್ರನಾಶಕಗಳು, ಹಣ್ಣಾಗಿಸುವ ವಿಷಗಳು, ಮೇಣ ಇವೆಲ್ಲವನ್ನೂ ಕಡಿಮೆ ಮಾಡಿದಂತಾಗುತ್ತದೆ, ಜೊತೆಗೆ, ಸಕ್ಕರೆಯ ಸೇವನೆಯಲ್ಲೂ ಕಡಿತವಾಗುತ್ತದೆ. ತರಕಾರಿಗಳನ್ನು ಶುದ್ಧ ತಣ್ಣೀರಿನಲ್ಲಿ ಐದಾರು ಬಾರಿ ತೊಳೆಯುವುದರಿಂದ 70-80% ಕೀಟನಾಶಕಗಳನ್ನು ನಿರ್ಮೂಲನೆ ಮಾಡಬಹುದು; ಸೊಪ್ಪುಗಳ ಎಲೆ-ಕಾಂಡಗಳನ್ನು ಬೇರ್ಪಡಿಸಿ, 2% ಉಪ್ಪಿನ (ಅಥವಾ 10% ವಿನೆಗರ್) ದ್ರಾವಣದಲ್ಲಿ ತೊಳೆದರೆ ಹೆಚ್ಚಿನ ಕೀಟನಾಶಕಗಳನ್ನು ತೆಗೆಯಬಹುದು. ಸಿಪ್ಪೆಗಳನ್ನು ಕಿತ್ತರೆ ಅಂಟಿರುವ ವಿಷಗಳೂ, ಮೇಣಗಳೂ ನಿರ್ಮೂಲನೆಯಾಗುತ್ತವೆ. ತರಕಾರಿಗಳನ್ನು ತೊಳೆದಾದ ಬಳಿಕ ಸ್ವಲ್ಪ ಹೊತ್ತು ಬಿಸಿನೀರು ಅಥವಾ ಹಬೆಯಲ್ಲಿಟ್ಟರೆ ಕೀಟನಾಶಕಗಳು ಕಳಚಿಕೊಳ್ಳುತ್ತವೆ. ತರಕಾರಿ, ಮಾಂಸ, ಹಾಲುಗಳನ್ನು ಕಾಯಿಸಿ-ಬೇಯಿಸಿದಾಗಲೂ ಕೀಟನಾಶಕಗಳು ಪ್ರತ್ಯೇಕಿಸಲ್ಪಡುತ್ತವೆ.
ಸಂಸ್ಕರಿತ, ಸಿದ್ಧ ತಿನಿಸುಗಳಲ್ಲಿ ಕೀಟನಾಶಕಗಳು ಮತ್ತಿತರ ವಿಷಗಳು ಇರುವುದಿಲ್ಲ; ಆದರೆ ಅವುಗಳಲ್ಲಿ ಅನ್ನಾಂಗ-ಖನಿಜಾಂಶಗಳಂತಹ ಪೋಷಕಾಂಶಗಳೂ ಇರುವುದಿಲ್ಲ, ದೇಹಕ್ಕೆ ಅವು ಒಗ್ಗದೆ ರೋಗಗಳೂ ತಪ್ಪುವುದಿಲ್ಲ.
ಹಿಂದಿನ ಕಾಲದಲ್ಲಿ ಒಳ್ಳೆಯ ಆಹಾರವು ಅದರಷ್ಟಕ್ಕೇ ಬೆಳೆಯುತ್ತಿತ್ತು, ಮನುಷ್ಯರು ಅದನ್ನು ಹುಡುಕಿ ಅಂಡಲೆಯಬೇಕಿತ್ತು, ಇಂದು ಆಹಾರವನ್ನು ನಾವೇ ಬೆಳೆಯುತ್ತಿದ್ದೇವೆ, ಆದರೆ ಶುದ್ಧವಾದ, ಪೌಷ್ಟಿಕವಾದ ಆಹಾರವನ್ನು ಕಾಣುವುದೇ ಕಷ್ಟವಾಗಿದೆ. ಹಾಗಿರುವಾಗ, ನಮ್ಮ ವಠಾರಗಳಲ್ಲಿ, ತಾರಸಿಗಳಲ್ಲಿ, ಹೂಕುಂಡಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಬದಿಗಳಲ್ಲಿ, ಎಲ್ಲೆಲ್ಲಿ ಸಾಧ್ಯವೂ ಅಲ್ಲೆಲ್ಲ, ಸುಲಭವಾಗಿ ಬೆಳೆಯಬಲ್ಲ ವನ್ಯ ಸೊಪ್ಪು-ತರಕಾರಿಗಳನ್ನು ಬೆಳೆಸಬಾರದೇಕೆ?
ಅರುವತ್ತೊಂದನೇ ಬರಹ : ಒಳ್ಳೆಯ ಮಾಂಸಾಹಾರ ಎಲ್ಲರಿಗೂ ದೊರೆಯಲಿ [ಅಕ್ಟೋಬರ್ 15, 2014, ಬುಧವಾರ] [ನೋಡಿ | ನೋಡಿ]
ಮಾಂಸೋತ್ಪಾದನೆಯನ್ನು ಕಟ್ಟುನಿಟ್ಟಾಗಿ ಪಾರದರ್ಶಕವಾಗಿ ನಿಯಂತ್ರಿಸುವ ಅಗತ್ಯವಿದೆ
ಕೋಳಿಸಾಕಣೆಯಲ್ಲಿ ಪ್ರತಿಜೈವಿಕಗಳ ಬಳಕೆಯಿಂದ ಮನುಷ್ಯರಿಗೆ ಅಪಾಯವಿದೆಯೆಂದು ಇತ್ತೀಚೆಗೆ ವರದಿಯಾಗಿತ್ತು. ಹೆದರಿದ ಕೆಲವರು ಕೋಳಿಸೇವನೆಯನ್ನು ಬಿಟ್ಟದ್ದಾಯಿತು. ನಮ್ಮ ಆಹಾರವು ವ್ಯಾಪಾರದ ಸರಕಾದಂತೆ, ಅದರಲ್ಲಿ ಲಾಭದಾಸೆ ಹೆಚ್ಚಿದಂತೆ ಇಂತಹ ಸುದ್ದಿಗಳು ಹೆಚ್ಚುತ್ತಲೇ ಇವೆ. ಆದರೆ ಆಹಾರೋದ್ಯಮವನ್ನು ನೆಚ್ಚಿಕೊಳ್ಳದೆ ನಾವಿಂದು ಊಟ ಮಾಡಲಾದೀತೇ?
ಮೊದ-ಮೊದಲಲ್ಲಿ ಮನುಷ್ಯನು ಆಹಾರಕ್ಕಾಗಿ ಅಲೆದು-ಬೇಟೆಯಾಡುತ್ತಿದ್ದ; 13-15000 ವರ್ಷಗಳಿಂದೀಚೆಗೆ ಕುರಿ, ಆಡು, ಆಕಳು, ಹಂದಿ, ಕೋಳಿ, ಬಾತು ಮುಂತಾದ ಪ್ರಾಣಿ-ಪಕ್ಷಿಗಳನ್ನೂ, ಕೆಲವು ಸಸ್ಯಗಳನ್ನೂ, ಆಹಾರಕ್ಕಾಗಿ ಪಳಗಿಸಿ, ಸಾಕಿ, ಬೆಳೆಸತೊಡಗಿದ. ಇವುಗಳ ಜೊತೆಗೆ, ಸಿಂಹ, ಚಿರತೆ, ಆನೆ, ಮಂಗ, ಹಾವು, ಕಪ್ಪೆ, ಇಲಿ, ನಾಯಿ ಇತ್ಯಾದಿ ಎಪ್ಪತ್ತರಷ್ಟು ಪ್ರಾಣಿಗಳು ಹಾಗೂ ಕಾಗೆ, ಗೂಬೆ, ಗಿಡುಗ ಮುಂತಾದ ತೊಂಭತ್ತರಷ್ಟು ಪಕ್ಷಿಗಳು ತಿನ್ನಲು ಯೋಗ್ಯವೆಂದು 2000 ವರ್ಷಗಳಿಗೂ ಹಿಂದಿನ ಚರಕ ಸಂಹಿತೆಯಲ್ಲಿ ಪಟ್ಟಿ ಮಾಡಲಾಗಿದೆ. [ಸೂತ್ರಸ್ಥಾನ, 27:35-52] ಕಾಲ ಕಳೆದು, ಕೃಷಿಭೂಮಿ ಹಿಗ್ಗಿ, ಕಾಡುಗಳು ಮರೆಯಾಗಿ, ಬೇಟೆ ದುರ್ಲಭವಾಗಿ ಈಗ ಐದಾರು ಬಗೆಯ ಸಾಕು ಪ್ರಾಣಿ-ಪಕ್ಷಿಗಳಷ್ಟೇ ಮಾಂಸಾಹಾರಕ್ಕೆ ಉಳಿದುಕೊಂಡಿವೆ; ಕೀಟಗಳು, ಹಾವುಗಳು, ಇಲಿ, ನಾಯಿ ಇತ್ಯಾದಿಗಳು ನಮ್ಮ ದೇಶದಲ್ಲೂ, ಇತರೆಡೆಗಳಲ್ಲೂ ಸೀಮಿತವಾಗಿ ಸೇವಿಸಲ್ಪಡುತ್ತಿವೆ.
ಇಂದಿಗೂ ಭಾರತದಲ್ಲಿ ಶೇ. 88ರಷ್ಟು, ಅನ್ಯ ದೇಶಗಳಲ್ಲಿ ಶೇ.95ರಷ್ಟು ಮನುಷ್ಯರು ಮಾಂಸಾಹಾರಿಗಳಾಗಿದ್ದಾರೆ. ಮಾಂಸಾಹಾರವು ಹಸಿವನ್ನು ಬೇಗನೇ ಇಂಗಿಸಿ ಸಂತೃಪ್ತಿಯನ್ನು ನೀಡುವುದರಿಂದಲೂ, ಹೆಚ್ಚಿನ ಪೋಷಕಾಂಶಗಳನ್ನು ಒದಗಿಸಿ ದೇಹಕ್ಕೆ ಬಲ ನೀಡುವುದರಿಂದಲೂ ಹೆಚ್ಚಿನವರು ಅದನ್ನೇ ಬಯಸುತ್ತಾರೆ. ನಮ್ಮ ನಗರಗಳು ಬೆಳೆದು, ಮಧ್ಯಮ ವರ್ಗಗಳು ಬೆಳೆಯುತ್ತಿದ್ದಂತೆ ಮಾಂಸಾಹಾರದ ಬಳಕೆಯು ಇನ್ನಷ್ಟು ಹೆಚ್ಚುತ್ತಲಿದೆ.
ಹೀಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅತ್ಯಾಧುನಿಕ ವಿಜ್ಞಾನ-ತಂತ್ರಜ್ಞಾನಗಳೆಲ್ಲವನ್ನೂ ಮಾಂಸೋತ್ಪಾದನೆಯಲ್ಲಿ ಬಳಸಲಾಗುತ್ತಿದೆ. ಹದಿನೆಂಟನೇ ಶತಮಾನದ ಮಧ್ಯದವರೆಗೆ ಧಾನ್ಯಗಳನ್ನೂ, ಪ್ರಾಣಿ-ಪಕ್ಷಿಗಳನ್ನೂ ಮನೆಮಂದಿಯೇ ಸಾಕಿ-ಬೆಳೆಸುತ್ತಿದ್ದರೆ, ಈ 150 ವರ್ಷಗಳಲ್ಲಿ ಪಶು-ಪಕ್ಷಿ ಸಾಕಣೆಯು ಒಂದು ಬೃಹತ್ ಉದ್ಯಮವಾಗಿ ಬೆಳೆದಿದೆ; ಇಂದು ಶೇ.50-75ರಷ್ಟು ಮಾಂಸ-ಮೊಟ್ಟೆಗಳು ಉದ್ಯಮ ಮೂಲದ್ದಾಗಿವೆ. ನಮ್ಮ ದೇಶದಲ್ಲಿ ಕೋಳಿಸಾಕಣೆಯು ಬಹುದೊಡ್ಡದಾಗಿ ಬೆಳೆದಿದೆ; ಮತ್ಸ್ಯೋದ್ಯಮವು ಹೆಚ್ಚಾಗಿ ಸಮುದ್ರ-ಸಾಗರಗಳನ್ನೇ ಅವಲಂಬಿಸಿದೆ. ಅಂತಹಾ ಬಲಿಷ್ಠ ಆಹಾರೋದ್ಯಮದ ಪ್ರಭಾವದೆಡೆಯಲ್ಲಿ ರಹಸ್ಯಗಳು ಹೊರಬರುವುದು ಸುಲಭವಿಲ್ಲ. ಆಹಾರದ ಉತ್ಪಾದನೆ, ಸಂಸ್ಕರಣೆ, ಸಂಗ್ರಹ, ಸಾಗಾಟ, ಮಾರಾಟಗಳಲ್ಲಿ ಇರಬಹುದಾದ ಸಮಸ್ಯೆಗಳನ್ನು ಅರಿಯುವುದೂ ಸುಲಭವಲ್ಲ.
ಹಿಂದೆ ಸಾಕುಪ್ರಾಣಿಗಳಿಗೆ ಹುಲ್ಲು-ಕಡ್ಡಿಗಳೇ ಆಹಾರವಾಗಿದ್ದರೆ, ಈಗ ಜೋಳ, ಸೋಯಾ ಮಂತಾದ ಧಾನ್ಯಗಳನ್ನೂ, ಅವುಗಳ ಹಿಂಡಿಗಳನ್ನೂ ತಿನ್ನಿಸಲಾಗುತ್ತಿದೆ. ಇಂದು ಬೆಳೆಯುವ ಧಾನ್ಯಗಳಲ್ಲಿ ಶೇ. 35ಕ್ಕೂ ಹೆಚ್ಚಿನವು ಸಾಕುಪ್ರಾಣಿಗಳ ಹೊಟ್ಟೆಗಳನ್ನೇ ಸೇರುತ್ತಿವೆ. ನಿಸರ್ಗಸಹಜವಲ್ಲದ ಈ ಧಾನ್ಯಾಹಾರವನ್ನು ಸೇವಿಸುವುದರಿಂದಲೂ, ಕೂಡಿ-ಕಟ್ಟಿ ಬೆಳೆಸುವುದರಿಂದಲೂ ಸಾಕುಪ್ರಾಣಿ-ಪಕ್ಷಿಗಳಿಗೆ ಸೋಂಕಿನ ಅಪಾಯ ಹೆಚ್ಚುತ್ತದೆ. ಪ್ರತಿಜೈವಿಕಗಳನ್ನು ಬಳಸಿದರೆ ಸಾಕುಪ್ರಾಣಿಗಳು ರೋಗರಹಿತವಾಗಿ ಬೇಗನೆ ಬೆಳೆಯುತ್ತವೆ ಎನ್ನುವುದು 1950ರಲ್ಲಿ ಗೊತ್ತಾದ ಬಳಿಕ ಪಶು-ಪಕ್ಷಿ ಆಹಾರಗಳಲ್ಲಿ ಪ್ರತಿಜೈವಿಕಗಳ ಬೆರೆಸುವಿಕೆ ತೊಡಗಿತು. ಇಂದು ಉತ್ಪಾದನೆಯಾಗುವ ಪ್ರತಿಜೈವಿಕಗಳಲ್ಲಿ ಶೇ. 90ರಷ್ಟು ಆಹಾರೋದ್ಯಮಕ್ಕೇ ಹೋಗುತ್ತಿವೆ. ಮನುಷ್ಯರಲ್ಲಿ ಚಿಕಿತ್ಸೆಗಾಗಿ ಬಳಸುವ ಪ್ರತಿಜೈವಿಕಗಳನ್ನು ಸಾಕುಪ್ರಾಣಿ-ಪಕ್ಷಿಗಳಲ್ಲಿ ಬಳಸಬಾರದೆಂಬ ನಿರ್ಬಂಧಗಳಿದ್ದರೂ ಅದರ ಪಾಲನೆಯಾಗುವ ಖಾತರಿಯಿಲ್ಲ.
ಇತ್ತೀಚೆಗೆ ದಿಲ್ಲಿಯಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಶೇ. 40ರಷ್ಟು ಕೋಳಿಮಾಂಸದ ಮಾದರಿಗಳಲ್ಲಿ ಪ್ರತಿಜೈವಿಕಗಳಿದ್ದುದು ಪತ್ತೆಯಾಗಿತ್ತು. ಅಂತಹಾ ಮಾಂಸವನ್ನು ತಿಂದರೆ ವ್ಯಕ್ತಿಯ ಕರುಳಲ್ಲಿರುವ ಬ್ಯಾಕ್ಟೀರಿಯಾಗಳು ರೋಧಶಕ್ತಿ ಬೆಳೆಸಿಕೊಂಡು, ಚಿಕಿತ್ಸೆಗೆ ಬಗ್ಗದಂತಾಗುತ್ತವೆ ಎನ್ನಲಾಗಿತ್ತು. ಆದರೆ, ಬ್ಯಾಕ್ಟೀರಿಯಾಗಳು ಪ್ರತಿಜೈವಿಕಗಳೆದುರು ರೋಧಶಕ್ತಿ ಬೆಳೆಸಿಕೊಳ್ಳುವುದಕ್ಕೆ ಪ್ರಾಣಿ-ಪಕ್ಷಿ ಸಾಕಣೆಯಲ್ಲಿ ಪ್ರತಿಜೈವಿಕಗಳ ಅತಿ ಬಳಕೆಯೊಂದೇ ಕಾರಣವಲ್ಲ, ಮನುಷ್ಯರಲ್ಲಿ ಅವುಗಳ ಬೇಕಾಬಿಟ್ಟಿ ಬಳಕೆಯೂ ಕಾರಣವಾಗಿದೆ. ಆದ್ದರಿಂದ ಎಲ್ಲೆಡೆ ಪ್ರತಿಜೈವಿಕಗಳ ಬಳಕೆಗೆ ಕಡಿವಾಣ ಹಾಕಬೇಕಾಗಿದೆ. ಕೇವಲ ಕೋಳಿಮಾಂಸ ಸೇವನೆಯನ್ನು ತ್ಯಜಿಸುವುದರಿಂದ ಬ್ಯಾಕ್ಟೀರಿಯಾಗಳಲ್ಲಿ ರೋಧಶಕ್ತಿ ಬೆಳೆಯುವುದನ್ನು ತಡೆಯಲಾಗದು.
ಪ್ರತಿಜೈವಿಕಗಳನ್ನು ಹೆಚ್ಚು ಬಳಸದೆಯೇ ಪಶು-ಪಕ್ಷಿ ಸಾಕಣೆ ಮಾಡುವ ವಿಧಾನಗಳು ಈಗೀಗ ಬಲಗೊಳ್ಳುತ್ತಿವೆ. ಬೇಗನೇ ಬೆಳೆಯಬಲ್ಲ, ಹೆಚ್ಚು ಮಾಂಸವನ್ನು ನೀಡಬಲ್ಲ ಪ್ರಾಣಿ-ಪಕ್ಷಿಗಳ ತಳಿಗಳನ್ನು ಕಳೆದ ಐದಾರು ದಶಕಗಳಲ್ಲಿ ಗುರುತಿಸಿ, ಅಭಿವೃದ್ಧಿಪಡಿಸಲಾಗಿದೆ. ಹೆಚ್ಚಿನ ದೊಡ್ಡ ಸಾಕಣಾಲಯಗಳಲ್ಲಿ ಸ್ವಚ್ಛತೆ, ಉಷ್ಣತೆ, ಆಹಾರ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತಿದೆ. ನಿರ್ದಿಷ್ಟ ಸೋಂಕುಗಳನ್ನು ತಡೆಯಲು ಲಸಿಕೆಗಳನ್ನೂ ಬಳಸಲಾಗುತ್ತಿದೆ. ಪ್ರತಿಜೈವಿಕಗಳನ್ನು ಆಹಾರದಲ್ಲಿ ಬೆರೆಸದೆ, ಸೋಂಕು ತಗಲಿದರಷ್ಟೇ ನೀಡುವ ಪದ್ಧತಿ ಹೆಚ್ಚುತ್ತಿದೆ. ಆರೇಳು ವಾರಗಳಲ್ಲೇ ಬೆಳೆದು ಉತ್ತಮ ಮಾಂಸ-ಮೊಟ್ಟೆಗಳನ್ನು ನೀಡಬಲ್ಲ ವಿಶೇಷ ಕೋಳಿತಳಿಗಳು ನಮ್ಮ ದೇಶದಲ್ಲೂ ಲಭ್ಯವಿವೆ. ಅಂತಹ ಉತ್ತಮ ಕೋಳಿಮಾಂಸವನ್ನು ನಂಬಲರ್ಹವಾದ, ಸ್ವಚ್ಛತೆಯುಳ್ಳ, ಉತ್ತಮ ಸಂಸ್ಕರಣಾ ಸೌಲಭ್ಯಗಳುಳ್ಳ ಅಂಗಡಿಗಳಿಂದ ಖರೀದಿಸಬಹುದು. ಮೊಟ್ಟೆಗಳನ್ನು ಖರೀದಿಸುವಾಗಲೂ ಹೊಸದಾದ, ಬಿರುಕಿಲ್ಲದೆ ಸರಿಯಾದ ಆಕಾರದಲ್ಲಿರುವ, ಸ್ವಚ್ಛವಾದ, ಹೊರಗಿನ ವಾಸನೆಗಳಿಂದ ಮುಕ್ತವಾಗಿರುವಂತಹವುಗಳನ್ನು ಹುಡುಕಬೇಕು.
ಹೊರದೇಶಗಳಲ್ಲಿ 18-22 ತಿಂಗಳುಗಳಲ್ಲೇ ಬೆಳೆಯಬಲ್ಲ ಆಡು, ಕುರಿ ಮತ್ತಿತರ ಜಾನುವಾರು ತಳಿಗಳನ್ನು ಮಾಂಸಕ್ಕಾಗಿ ಬಳಸಲಾಗುತ್ತದೆ; ನಮ್ಮಲ್ಲಿನ್ನೂ ಹಾಗಿಲ್ಲ. ಅಮೆರಿಕಾದಲ್ಲಿ ಜಾನುವಾರುಗಳ ಬೆಳವಣಿಗೆಯನ್ನು ಪ್ರಚೋದಿಸುವ ಹಾರ್ಮೋನುಗಳನ್ನು ಬಳಸಲಾಗುತ್ತಿದೆಯಾದರೂ, ನಮ್ಮಲ್ಲಿಲ್ಲ. ನಮ್ಮ ದೇಶದ ಆಡು, ಕುರಿ ಮತ್ತಿತರ ಜಾನುವಾರುಗಳು ಹುಲ್ಲಿನ ಮೇವನ್ನೇ ಹೆಚ್ಚಾಗಿ ಅವಲಂಬಿಸಿದ್ದು, ಉತ್ತಮ ಮಾಂಸವನ್ನು ಒದಗಿಸಬಲ್ಲವು. ಬಡಜನರ ನ್ಯೂನ ಪೋಷಣೆಯನ್ನು ನಿವಾರಿಸಲು ಇವು ನೆರವಾಗಬಲ್ಲವು. ಹುಲ್ಲು ಸೇವಿಸಿ, ಅಡ್ಡಾಡಿಕೊಂಡಿದ್ದ ಆಡು-ಜಾನುವಾರುಗಳ ಕೆಂಪು ಮಾಂಸವು ಅತ್ಯುತ್ತಮವಾದ ಪೋಷಕಾಂಶಗಳನ್ನು ಒದಗಿಸುತ್ತದೆಯೆಂದೂ, ಅದರ ಸೇವನೆಯಿಂದ ಮೇದಸ್ಸಿನ (ಕೊಲೆಸ್ಟರಾಲ್) ಪ್ರಮಾಣದ ಮೇಲೆ ಯಾ ಹೃದಯದ ಮೇಲೆ ದುಷ್ಪರಿಣಾಮಗಳಾಗುತ್ತವೆ ಎನ್ನುವುದಕ್ಕಾಗಲೀ, ಕ್ಯಾನ್ಸರಿಗೆ ಕಾರಣವಾಗುತ್ತದೆ ಎನ್ನುವುದಕ್ಕಾಗಲೀ ಆಧಾರಗಳಿಲ್ಲವೆಂದೂ ಹಲವು ವರದಿಗಳಲ್ಲಿ ಹೇಳಲಾಗಿದೆ. [ಮೀಟ್ ಸಯನ್ಸ್, 2014-98(3):452;ಬ್ರಿಟಿಷ್ ಜ ನ್ಯೂಟ್ರಿ, 2012-107(10):1403; ಆರ್ಕೈವ್ಸ್ ಇಂಟ ಮೆಡಿ, 1999-159(12)1331; ಅಮೆ ಜ ಕ್ಲಿನಿ ನ್ಯೂಟ್ರಿ, 2012-96(2):446]
ಮಾಂಸ, ಮೊಟ್ಟೆ, ಮೀನುಗಳು ಕೆಡದಂತೆ ರಕ್ಷಿಸಲು ಶೀತಲೀಕರಣವನ್ನೂ, ಮನುಷ್ಯರಿಗೆ ಹಾನಿಯುಂಟುಮಾಡದ ಉಪ್ಪು ಮತ್ತಿತರ ರಾಸಾಯನಿಕ ಸಂಯುಕ್ತಗಳನ್ನೂ ಬಳಸಲಾಗುತ್ತಿದೆ. ದೇಶದ ಕೆಲವೆಡೆ ಮೀನಿಗೆ ಫಾರ್ಮಲಿನ್ ನಂತಹ ಹಾನಿಕಾರಕ ಸಂಯುಕ್ತಗಳನ್ನು ಬೆರೆಸುವ ಬಗ್ಗೆ ವರದಿಗಳಾಗಿವೆ. ಇದನ್ನು ಬರಿಗಣ್ಣಿನಿಂದ ಗುರುತಿಸುವುದು ಸುಲಭವಲ್ಲ. ಒಳ್ಳೆಯ ಮೀನು ತಾಜಾತನದ, ಮೃದುವಾದ ಪರಿಮಳವನ್ನು ಹೊಂದಿರಬೇಕು, ಗಾಢವಾದ ವಾಸನೆ ಅಥವಾ ದುರ್ನಾತವಿರಬಾರದು; ಗಟ್ಟಿಯಾಗಿದ್ದು, ಹೊಳಪಿರಬೇಕು, ಒತ್ತಿ ಬಿಟ್ಟರೆ ಪುಟಿಯಬೇಕು; ಕಿವಿರುಗಳು ಗಾಢಕೆಂಪಿರಬೇಕು, ಕಣ್ಣುಗಳು ಸ್ವಚ್ಛವಾಗಿ, ಸ್ವಲ್ಪ ಹೊರಕ್ಕೆ ಉಬ್ಬಿರಬೇಕು; ಸಿಗಡಿಯು ಪಾರದರ್ಶಕವಾಗಿ, ವಾಸನೆರಹಿತವಿರಬೇಕು.
ವಿಶ್ವಾದ್ಯಂತ ಆಹಾರದ ಸುರಕ್ಷಿತತೆಯನ್ನು ಖಾತರಿಗೊಳಿಸುವ ವ್ಯವಸ್ಥೆಯನ್ನು ಬಲಪಡಿಸುವ ಪ್ರಯತ್ನಗಳಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆಹಾರ ಮತ್ತು ಕೃಷಿ ಸಂಸ್ಥೆಗಳು ರೂಪಿಸಿರುವ ಅಂತರರಾಷ್ಟ್ರೀಯ ಆಹಾರ ಮಾನದಂಡಗಳಲ್ಲಿ (http://www.codexalimentarius.org/standards/en/) ಆಹಾರೋದ್ಯಮವು ಪಾಲಿಸಬೇಕಾದ ಕಟ್ಟುನಿಟ್ಟಿನ ಕ್ರಮಗಳನ್ನು ಸೂಚಿಸಲಾಗಿದೆ. ನಮ್ಮ ಆಹಾರೋದ್ಯಮದ ಮೇಲೆ ನಿಗಾ ವಹಿಸಲು ಭಾರತೀಯ ಆಹಾರ ಸುರಕ್ಷಿತತೆ ಹಾಗೂ ಮಾನದಂಡಗಳ ಪ್ರಾಧಿಕಾರವನ್ನು (http://www.fssai.gov.in/) ಸ್ಥಾಪಿಸಲಾಗಿದ್ದು, ಜಿಲ್ಲೆಗೊಬ್ಬ ಆಹಾರ ಸುರಕ್ಷಣಾಧಿಕಾರಿಯನ್ನು ನೇಮಿಸಲಾಗುತ್ತಿದೆ.
ವಿಶ್ವದ 680 ಕೋಟಿಗೂ ಹೆಚ್ಚು ಮಾಂಸಾಹಾರಿ ಮನುಷ್ಯರಿಗೆ ಮೀನು-ಮಾಂಸ-ಮೊಟ್ಟೆಗಳನ್ನು ಒದಗಿಸಬೇಕಾದರೆ ಉದ್ಯಮದ ನೆರವಿಲ್ಲದೆ ಸಾಧ್ಯವಾಗದು. ಮನುಷ್ಯರಿಗೆ ಅತ್ಯಗತ್ಯವಾದ ಮೇದಸ್ಸು, ಪ್ರೋಟೀನುಗಳು, ವಿಟಮಿನ್ ಬಿ12, ಕಬ್ಬಿಣ ಮುಂತಾದ ಖನಿಜಾಂಶಗಳನ್ನು ಯಥೇಷ್ಟವಾಗಿ ಒದಗಿಸುವ ಮಾಂಸಾಹಾರವನ್ನು ಕಡಿತಗೊಳಿಸಿದರೆ ಆರೋಗ್ಯಕ್ಕೆ ಒಳಿತಾಗದು. ನಮ್ಮ ದೇಶದಲ್ಲಿ ದೊರೆಯುವ ಮೀನು-ಮೊಟ್ಟೆ-ಮಾಂಸಗಳು ಆರೋಗ್ಯಕರವಾಗಿವಂತೆಯೂ, ಅಗತ್ಯವುಳ್ಳವರೆಲ್ಲರನ್ನೂ ತಲುಪುವಂತೆಯೂ ಮಾಡುವುದಕ್ಕೆ ಸುಸ್ಪಷ್ಟವಾದ ನೀತಿ ನಿರೂಪಣೆ ಹಾಗೂ ನಿಯಂತ್ರಣಾ ವ್ಯವಸ್ಥೆ ಬರಬೇಕಾಗಿದೆ.
ಅರುವತ್ತನೇ ಬರಹ : ಬಾಯಿ ಕಟ್ಟಿ, ನೆಲ ಮೆಟ್ಟಿದರೆ ಹೃದಯ ಗಟ್ಟಿ [ಅಕ್ಟೋಬರ್ 1, 2014, ಬುಧವಾರ] [ನೋಡಿ | ನೋಡಿ]
ಸರಳ ಜೀವನ, ಮಿತ ಆಹಾರ, ನಿಯತ ವ್ಯಾಯಾಮಗಳು ಹೃದ್ರೋಗವನ್ನು ತಡೆಯಬಲ್ಲವು, ಯೋಗಾಭ್ಯಾಸವಲ್ಲ
ಸೆಪ್ಟೆಂಬರ್ 29ರ ವಿಶ್ವ ಹೃದಯ ದಿನಾಚರಣೆ ಮುಗಿದು 48 ಗಂಟೆಗಳಲ್ಲಿ ಮತ್ತೊಂದು ಲಕ್ಷ ಜನ ಹೃದಯ ಹಾಗೂ ರಕ್ತನಾಳಗಳ ಕಾಯಿಲೆಯಿಂದ ಮೃತರಾಗಿರುತ್ತಾರೆ. ಮನುಕುಲವನ್ನು ಕಾಡುವ ಈ ನಂ. 1 ಕಾಯಿಲೆ, ಮೂರರಲ್ಲೊಂದು ಸಾವಿಗೆ ಕಾರಣವಾಗುತ್ತಿದೆ. ನಮ್ಮ ದೇಶದಲ್ಲೂ ಸಾವಿಗೆ ಅತಿ ಸಾಮಾನ್ಯ ಕಾರಣ ಅದುವೇ; ಪ್ರತೀ ವರ್ಷ ಅದಕ್ಕೆ ಬಲಿಯಾಗುವ ಭಾರತೀಯರ ಸಂಖ್ಯೆ ಸುಮಾರು 30 ಲಕ್ಷದಷ್ಟು. ನಲುವತ್ತರ ವಯಸ್ಸು ದಾಟಿದರೆ ಇಬ್ಬರಲ್ಲೊಬ್ಬ ಗಂಡಸಿಗೆ, ಮೂರರಲ್ಲೊಬ್ಬ ಹೆಂಗಸಿಗೆ ಹೃದಯಾಘಾತದ ಅಪಾಯ ಎದುರಾಗುತ್ತದೆ.
ಹೃದಯ ದಿನಾಚರಣೆಯಂತಹ ಕಾರ್ಯಕ್ರಮಗಳು ಎಡೆಬಿಡದೆ ನಡೆಯುತ್ತಿದ್ದಂತೆ ಹೃದ್ರೋಗಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಏರುತ್ತಲಿದೆ. ಬಹಳಷ್ಟು ಜನ ಹೃದ್ರೋಗವಿಲ್ಲದಿದ್ದರೂ ಬಗೆಬಗೆಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿರುತ್ತಾರೆ, ಅತ್ತ ನಿಜಕ್ಕೂ ಹೃದ್ರೋಗವುಳ್ಳ ಹಲವರು ಅಜ್ಞಾನದಿಂದಲೋ, ಔದಾಸೀನ್ಯದಿಂದಲೋ ಅದನ್ನು ಕಡೆಗಣಿಸಿ ಕಷ್ಟಕ್ಕೊಳಗಾಗುತ್ತಿರುತ್ತಾರೆ. ಹಾಗೆಯೇ, ಎದೆಬೇನೆ ಎಂದವರಲ್ಲೆಲ್ಲ ವೈದ್ಯರು ಇಸಿಜಿ, ಆಂಜಿಯೋಗ್ರಾಂ ಇತ್ಯಾದಿ ಮಾಡಿಸುವುದಿದೆ, ಆದರೆ ನಿಜಕ್ಕೂ ಹೃದ್ರೋಗದ ಲಕ್ಷಣಗಳುಳ್ಳವರಲ್ಲಿ ಇವನ್ನು ಮರೆಯುವುದೂ ಇದೆ. ಅಂತೂ ಹೃದ್ರೋಗಗಳಿಂದಾಗಿ ವರ್ಷಕ್ಕೆ 60 ಲಕ್ಷ ಕೋಟಿಯಷ್ಟು ವೆಚ್ಚವಾಗುತ್ತಿದೆ, 1.7 ಕೋಟಿಗೂ ಹೆಚ್ಚು ಜನ ಸಾಯುತ್ತಿದ್ದಾರೆ; 2030ರ ವೇಳೆಗೆ ಇದು 2.3 ಕೋಟಿಯಷ್ಟಾಗಲಿದೆ.
ಒಂದೆರಡು ದಶಕಗಳ ಹಿಂದೆ ಹೃದಯಾಘಾತವು 60-70ರ ವಯಸ್ಸಿನವರಲ್ಲಿ ಹೆಚ್ಚು ಸಾಮಾನ್ಯವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ 20-30 ವಯಸ್ಸಿನವರೂ ಹೃದಯಾಘಾತಕ್ಕೀಡಾಗುತ್ತಿದ್ದಾರೆ. ಆಗ ಮುಟ್ಟು ನಿಂತ, ಹಿರಿವಯಸ್ಸಿನ ಮಹಿಳೆಯರಲ್ಲಷ್ಟೇ ಹೃದಯಾಘಾತವಾಗುತ್ತಿದ್ದರೆ, ಈಗೀಗ 30-40ರ ಮಹಿಳೆಯರಲ್ಲೂ ಆಗುತ್ತಿದೆ. ಮೊದಲು ನಗರಗಳಲ್ಲೇ ಹೆಚ್ಚಿದ್ದುದು ಈಗ ಹಳ್ಳಿಗಳನ್ನೂ ಕಾಡುತ್ತಿದೆ, ಅಲ್ಲಿ ಸೌಲಭ್ಯಗಳ ಕೊರತೆಯಿಂದ ಸಾವುಗಳೂ ಹೆಚ್ಚುತ್ತಿವೆ. ಈ ಎರಡು ದಶಕಗಳಲ್ಲಿ ಮಾರುಕಟ್ಟೆ ಮುಕ್ತವಾಗಿ, ಸ್ವಂತ ಕೃಷಿ ದೂರವಾಗಿ, ಹಗಲು-ರಾತ್ರಿ ದುಡಿತವಾಗಿ, ಸಿದ್ಧತಿನಿಸುಗಳೇ ಆಹಾರವಾದ ಬಳಿಕ ಆಧುನಿಕ ರೋಗಗಳೂ ಹೆಚ್ಚತೊಡಗಿವೆ, ಕಿರಿಯರನ್ನೂ ಕಾಡತೊಡಗಿವೆ.
ದೇಹದಲ್ಲಿ ಉರಿಯೂತ ಹೆಚ್ಚುವುದರಿಂದ ರಕ್ತನಾಳಗಳು ಹಾನಿಗೀಡಾಗಿ ಹೃದಯಾಘಾತ, ಮಿದುಳಿನ ಆಘಾತ (ಪಾರ್ಶ್ವವಾಯು)ಗಳಂತಹ ಮಾರಕ ಸಮಸ್ಯೆಗಳುಂಟಾಗುತ್ತವೆ ಎನ್ನುವುದಕ್ಕೆ ಪ್ರಬಲವಾದ ಆಧಾರಗಳೀಗ ಲಭ್ಯವಾಗುತ್ತಿವೆ. ಅನೈಸರ್ಗಿಕವಾದ, ಶರ್ಕರಭರಿತವಾದ, ಸಂಸ್ಕರಿಸಲ್ಪಟ್ಟ ಆಹಾರವೂ, ಧೂಮಪಾನ, ಮದ್ಯಪಾನ, ವ್ಯಾಯಾಮದ ಕೊರತೆಗಳೂ ನಮ್ಮ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತವೆ, ರಕ್ತನಾಳಗಳಿಗೆ ಹಾನಿಯುಂಟು ಮಾಡುತ್ತವೆ. ಬೊಜ್ಜು, ಮಧುಮೇಹ, ರಕ್ತದಲ್ಲಿ ಅಧಿಕ ಕೊಬ್ಬಿನಾಂಶ, ಅಧಿಕ ರಕ್ತದೊತ್ತಡಗಳೂ ಇವೇ ಕಾರಣಗಳಿಂದಾಗುತ್ತವೆ, ಇವಿದ್ದವರಿಗೆ ಹೃದಯಾಘಾತದ ಅಪಾಯವೂ ಹೆಚ್ಚಿರುತ್ತದೆ. ರಕ್ತನಾಳಗಳಿಗೆ ಹಾನಿಯಾಗುವ ಪ್ರಕ್ರಿಯೆಯು ತೀರಾ ಎಳವೆಯಲ್ಲಿ, ಗರ್ಭಸ್ಥ ಶಿಶುವಾಗಿರುವಾಗಲೇ, ತೊಡಗುತ್ತದೆ. ಹಿಂದಿನವರು 50-60 ವರ್ಷಗಳಲ್ಲಿ ತಿಂದು, ಸೇದಿ ಉಂಟುಮಾಡುತ್ತಿದ್ದ ಹಾನಿಯನ್ನು ಇಂದಿನವರು ಹತ್ತಿಪ್ಪತ್ತು ವರ್ಷಗಳಲ್ಲೇ ಮಾಡುತ್ತಿರುವುದರಿಂದ ಅಷ್ಟೇ ಬೇಗನೆ ರೋಗಗ್ರಸ್ತರಾಗುತ್ತಿದ್ದಾರೆ.
ಕಳೆದೆರಡು ದಶಕಗಳಿಂದ ಈ ರಕ್ತನಾಳಘಾತಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ರಕ್ತದ ಏರೊತ್ತಡದಿಂದ ಬಳಲುವವರ ಪ್ರಮಾಣವು ನಗರಗಳಲ್ಲಿ ಶೇ. 25-40ಕ್ಕೆ, ಹಳ್ಳಿಗಳಲ್ಲಿ ಶೇ. 10-15ಕ್ಕೆ ತಲುಪಿದೆ. ಮಧುಮೇಹವುಳ್ಳವರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಿ, ನಗರಗಳಲ್ಲಿ ಶೇ. 10-15 ಹಾಗೂ ಹಳ್ಳಿಗಳಲ್ಲಿ ಶೇ.3-5 ರಷ್ಟಾಗಿದೆ. ಎಲ್ಲೆಡೆ ಬೊಜ್ಜಿನ ಸಮಸ್ಯೆಯೂ ಹೆಚ್ಚುತ್ತಿದೆ, ರಕ್ತದ ಕೊಲೆಸ್ಟರಾಲ್, ಟ್ರೈಗ್ಲಿಸರೈಡ್ ನಂತಹ ಕೊಬ್ಬಿನ ಪ್ರಮಾಣಗಳಲ್ಲಿ ಏರಿಕೆಯಾಗುತ್ತಲಿದೆ. ಧೂಮಪಾನ, ಮದ್ಯಪಾನಗಳ ಪಿಡುಗು ಹೆಚ್ಚುತ್ತಿದೆ, ಎಲ್ಲ ರೀತಿಯ ಒತ್ತಡಗಳೂ ಹೆಚ್ಚುತ್ತಿವೆ, ತಿನ್ನುವುದು ಹೆಚ್ಚಿ ವ್ಯಾಯಾಮ ಕಡಿಮೆಯಾಗುತ್ತಿದೆ.
ಹೃದಯದ ಸ್ನಾಯುಗಳಿಗೆ ನಿರಂತರವಾಗಿ ರಕ್ತ ಪೂರೈಸುವುದಕ್ಕೆ ಬಲಭಾಗದಲ್ಲೊಂದು, ಎಡ ಭಾಗದಲ್ಲೆರಡು ಪರಿಧಮನಿಗಳಿವೆ. ಈ ಮೂರರಲ್ಲಿ ಯಾವುದೊಂದು ಮುಚ್ಚಿ ಹೋದರೂ ಹೃದಯದ ಸ್ನಾಯು ಹಾನಿಗೀಡಾಗಿ, ಹೃದಯಾಘಾತವಾಗುತ್ತದೆ. ರಕ್ತನಾಳದ ಒಳವ್ಯಾಸವು 70% ಕಡಿಮೆಯಾದಾಗ ರಕ್ತಪೂರೈಕೆಯು ಗಣನೀಯವಾಗಿ ಕಡಿಮೆಯಾಗಿ, ಹೃದಯಕ್ಕಾಗುವ ಕಷ್ಟಗಳು ಪ್ರಕಟಗೊಳ್ಳುತ್ತವೆ. ಶೇ.90ರಷ್ಟು ಮುಚ್ಚಿಕೊಂಡಾಗ ಅವು ತೀವ್ರವಾಗುತ್ತವೆ, ಪೂರ್ತಿ ಮುಚ್ಚಿದಾಗ ಹೃದಯಾಘಾತವಾಗುತ್ತದೆ. ಒಂದೇ ರಕ್ತನಾಳದಲ್ಲಿ ತೊಂದರೆಯಿದ್ದವರಿಗೆ ಕಷ್ಟಗಳು ಕಡಿಮೆ, ಮೂರೂ ರಕ್ತನಾಳಗಳಲ್ಲಿ ಕಾಯಿಲೆಯಿದ್ದವರಿಗೆ ಹೆಚ್ಚು.
ಹೃದಯಾಘಾತಕ್ಕೊಳಗಾಗುವ ಹೆಚ್ಚಿನವರಲ್ಲಿ ಒಂದಲ್ಲೊಂದು ರೀತಿಯ ಲಕ್ಷಣಗಳು ಇದ್ದೇ ಇರುತ್ತವೆ. ಯಾವುದೇ ಪೂರ್ವಲಕ್ಷಣಗಳಿಲ್ಲದೆ ಹಠಾತ್ ಹೃದಯಾಘಾತವಾಗುವುದು ವಿರಳವೇ. ಹೆಚ್ಚಿನ ಹೃದ್ರೋಗಿಗಳು ನಡೆದಾಡುವಾಗ, ಕೆಲಸ ಮಾಡುವಾಗ, ಅಥವಾ ಹೊಟ್ಟೆ ತುಂಬ ತಿಂದಾಗ ಕಷ್ಟಗಳನ್ನು ಅನುಭವಿಸುತ್ತಾರೆ. ನಡೆದಾಡುವಾಗ ಎದೆ ಯಾ ಕತ್ತು ಹಿಂಡಿದಂತಾಗುವುದು, ಎದೆ ಉಬ್ಬಿ ಬಂದಂತಾಗುವುದು ಯಾ ಭಾರವೆನಿಸುವುದು, ಎದೆಯ ಮಧ್ಯದಲ್ಲಿ, ಭುಜಗಳಲ್ಲಿ, ಕತ್ತಿನಲ್ಲಿ, ಬೆನ್ನಿನ ಮೇಲ್ಭಾಗದಲ್ಲಿ, ದವಡೆಯಲ್ಲಿ ನೋವು ಅಥವಾ ಸೆಳೆತ ಉಂಟಾಗುವುದು, ಉಸಿರಾಟಕ್ಕೆ ಕಷ್ಟವೆನಿಸುವುದು, ಎದೆ ಬಡಿತ ಹೆಚ್ಚುವುದು,ತಲೆ ಸುತ್ತಿದಂತಾಗುವುದು – ಇವೆಲ್ಲವೂ ಹೃದ್ರೋಗದ ಲಕ್ಷಣಗಳಾಗಿರಬಹುದು. ಎದೆ ನೋವಷ್ಟೇ ಹೃದ್ರೋಗದ ಲಕ್ಷಣವಲ್ಲ, ಎದೆ ನೋವಿಗೆ ಹೃದ್ರೋಗವೊಂದೇ ಕಾರಣವೂ ಅಲ್ಲ. ಆದ್ದರಿಂದ ನಡೆದಾಡುವಾಗ ಅಥವಾ ದುಡಿಯುವಾಗ ಯಾವುದೇ ರೀತಿಯ ಕಷ್ಟವೆನಿಸಿದರೂ ಜಾಗೃತರಾಗಬೇಕು, ಕೂಡಲೇ ವೈದ್ಯರನ್ನು ಕಾಣಬೇಕು. ವೈದ್ಯರೂ ಇಂತಹಾ ಲಕ್ಷಣಗಳಿರುವವರನ್ನು ಹೃದ್ರೋಗದ ಸಾಧ್ಯತೆಗಳಿಗಾಗಿ ಪರೀಕ್ಷೆಗಳಿಗೆ ಒಳಪಡಿಸಬೇಕು.
ಹೃದಯದ ರಕ್ತನಾಳಗಳ ಕಾಯಿಲೆಯನ್ನು ಗುರುತಿಸಲು ಇಸಿಜಿಯಂತಹ ಸರಳ ಪರೀಕ್ಷೆಗಳಿಂದ ಹಿಡಿದು ಆಂಜಿಯೋಗ್ರಾಂನಂತಹ ಅತಿ ನಿಖರವಾದ ಪರೀಕ್ಷೆಗಳು ಲಭ್ಯವಿವೆ. ಹೃದ್ರೋಗದ ಲಕ್ಷಣಗಳುಳ್ಳವರಲ್ಲಿ ಈ ಪರೀಕ್ಷೆಗಳನ್ನು ನಡೆಸುವುದು ಅತ್ಯಗತ್ಯ. ಆದರೆ ಯಾವುದೇ ಲಕ್ಷಣಗಳಿಲ್ಲದವರಲ್ಲಿ ಇವನ್ನು ನಡೆಸಿದರೆ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಬಹುದು, ಗೊಂದಲ, ಆತಂಕಗಳಿಗೂ, ಇನ್ನಷ್ಟು ಅನಗತ್ಯ ಪರೀಕ್ಷೆ-ಚಿಕಿತ್ಸೆಗಳಿಗೂ ದಾರಿಯಾಗಬಹುದು.
ಪರಿಧಮನಿಗಳ ಕಾಯಿಲೆಯುಳ್ಳವರಲ್ಲಿ ಕೆಲವೊಮ್ಮೆ ಇಸಿಜಿಯಲ್ಲಿ ಯಾವುದೇ ಬದಲಾವಣೆಗಳು ಗೋಚರಿಸುವುದಿಲ್ಲ. ಇನ್ನು ಕೆಲವರಲ್ಲಿ ಇಸಿಜಿಯಲ್ಲಿ ಬದಲಾವಣೆಗಳಿದ್ದರೂ ಹೃದ್ರೋಗವಿಲ್ಲದಿರಬಹುದು. ಆದ್ದರಿಂದ ಇಸಿಜಿಯೊಂದನ್ನೇ ನೋಡಿ ಹೃದ್ರೋಗದ ಬಗ್ಗೆ ಖಚಿತವಾಗಿ ಹೇಳಲಾಗದು. ಅಂಥ ಸನ್ನಿವೇಶಗಳಲ್ಲಿ ಟ್ರೆಡ್ ಮಿಲ್ ಪರೀಕ್ಷೆಯನ್ನು ನಡೆಸಬೇಕಾಗಬಹುದು.
ಆಂಜಿಯೋಗ್ರಾಂ ಪರೀಕ್ಷೆಯಲ್ಲಿ ಹೃದಯದ ಪರಿಧಮನಿಗಳೊಳಕ್ಕೆ ಸೂಕ್ಷ್ಮವಾದ ನಳಿಕೆಯೊಂದನ್ನು ತೂರಿಸಿ, ಅವುಗಳ ಮೂಲಕ ವಿಶೇಷ ಸಂಯುಕ್ತವೊಂದನ್ನು ಹರಿಸಿ, ಅವುಗಳ ಕ್ಷಕಿರಣ ಚಿತ್ರವನ್ನು ಪಡೆದು,ಯಾವ್ಯಾವ ಪರಿಧಮನಿಗಳಿಗೆ ಎಷ್ಟು ಹಾನಿಯಾಗಿದೆ ಎನ್ನುವುದನ್ನು ನಿಖರವಾಗಿ ನೋಡಬಹುದು. ಅಲ್ಲದೆ, ಮುಚ್ಚಿರಬಹುದಾದ ರಕ್ತನಾಳಗಳನ್ನು ಅದೇ ತೂರುನಳಿಕೆಯ ಮೂಲಕ ತೆರೆದು ಸರಿಪಡಿಸಬಹುದು. ಆಗ ತಾನೇ ಹೃದಯಾಘಾತವಾದವರಲ್ಲಿ, ಅಥವಾ ಹೃದಯಾಘಾತವಾಗುವ ಅಪಾಯವು ತೀವ್ರವಾಗುಳ್ಳವರಲ್ಲಿ ಈ ಪರೀಕ್ಷೆ-ಚಿಕಿತ್ಸೆಗಳು ಸಂಜೀವಿನಿಯಾಗುತ್ತವೆ.
ಆದರೆ ಇಂದು ಶೇ. 25ಕ್ಕೂ ಹೆಚ್ಚು ಸಂದರ್ಭಗಳಲ್ಲಿ ಇಂತಹ ದುಬಾರಿ ಪರೀಕ್ಷೆ-ಚಿಕಿತ್ಸೆಗಳನ್ನು ಹೃದ್ರೋಗದ ಯಾವುದೇ ಲಕ್ಷಣಗಳಿಲ್ಲದವರಲ್ಲಿ ಅನಗತ್ಯವಾಗಿ ನಡೆಸಲಾಗುತ್ತಿದೆ. ಈ ಅತ್ಯಾಧುನಿಕ ಚಿಕಿತ್ಸೆಗಳು ಖಾಸಗಿ ಆಸ್ಪತ್ರೆಗಳಲ್ಲೇ ಹೆಚ್ಚಾಗಿ ಲಭ್ಯವಿರುವುದರಿಂದ ಜನಸಾಮಾನ್ಯರಿಗೆ ಎಟಕುವುದಿಲ್ಲ; ಮಾತ್ರವಲ್ಲ, ಲಾಭಕ್ಕಾಗಿ ದುರುಪಯೋಗವಾಗುವ ಸಾಧ್ಯತೆಗಳೂ ಹೆಚ್ಚುತ್ತವೆ. ಸರಕಾರಕ್ಕೆ ಮನಸ್ಸಿದ್ದರೆ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಈ ಸೌಲಭ್ಯಗಳನ್ನು ಒದಗಿಸುವುದಕ್ಕೆ ಕಷ್ಟವೇನಿಲ್ಲ.
ನಮ್ಮ ಆಹಾರ ಹಾಗೂ ಜೀವನಶೈಲಿಗಳನ್ನು ಸರಿಪಡಿಸಿಕೊಂಡರೆ ಹೃದ್ರೋಗವನ್ನಷ್ಟೇ ಅಲ್ಲ, ಇತರ ಆಧುನಿಕ ರೋಗಗಳನ್ನೂ ತಡೆಯುವುದಕ್ಕೆ ಸಾಧ್ಯವಿದೆ. ಗರ್ಭಸ್ಥ ಮಗುವನ್ನು ರಕ್ಷಿಸುವಲ್ಲಿಂದಲೇ ಈ ಕೆಲಸ ತೊಡಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಿಹಿಯ ಸೇವನೆಯನ್ನು – ಸಕ್ಕರೆ, ಸಿಹಿತಿಂಡಿಗಳು, ಚಾಕಲೇಟು, ಲಘುಪೇಯಗಳು, ಐಸ್ ಕ್ರೀಂ ಇತ್ಯಾದಿಗಳನ್ನು, ಸಂಪೂರ್ಣವಾಗಿ ತ್ಯಜಿಸಬೇಕು, ಹಣ್ಣು ಮತ್ತು ಹಣ್ಣಿನ ರಸಗಳನ್ನು ವಿಪರೀತವಾಗಿ ಸೇವಿಸುವುದನ್ನು ಬಿಡಬೇಕು, ಬ್ರೆಡ್ಡು, ಬಿಸ್ಕತ್ತು, ನೂಡಲ್ಸ್, ಪೀಜಾ ಮುಂತಾದ ಎಲ್ಲಾ ಸಂಸ್ಕರಿತ ತಿನಿಸುಗಳನ್ನು ಬಿಡಬೇಕು. ಹಾಗೆಯೇ ಕರಿದ ತಿನಿನಿಸುಗಳನ್ನೂ ತ್ಯಜಿಸಬೇಕು. ಪ್ರಾಣಿಜನ್ಯ ಹಾಲು ಮತ್ತದರ ಉತ್ಪನ್ನಗಳನ್ನೂ ಬಿಟ್ಟರೆ ಒಳ್ಳೆಯದು. ಉಪ್ಪಿನ ಬಳಕೆಗೂ ಮಿತಿಯಿರಬೇಕು. ತರಕಾರಿ, ಮೊಳೆತ ಕಾಳುಗಳು, ಬೀಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು, ಮೀನು ಕೂಡಾ ಒಳ್ಳೆಯದು. ಮೊಟ್ಟೆ, ಮಾಂಸಗಳನ್ನು ಹಿತಮಿತವಾಗಿ ಸೇವಿಸಬಹುದು. ಧೂಮಪಾನ, ಮದ್ಯಪಾನಗಳನ್ನು ಸಂಪೂರ್ಣವಾಗಿ ವರ್ಜಿಸಬೇಕು. ಪ್ರತಿನಿತ್ಯ 30-40 ನಿಮಿಷ ವೇಗವಾಗಿ ನಡೆಯುವುದು ಅಥವಾ ಈಜುವುದು ಒಳ್ಳೆಯದು. ಯೋಗಾಭ್ಯಾಸದಿಂದ ಹೃದಯಾಘಾತವನ್ನು ತಡೆಯಬಹುದೆನ್ನುವುದಕ್ಕೆ ದೃಢವಾದ ಆಧಾರಗಳಿಲ್ಲ (ಕೊಕ್ರೇನ್ ಡಾಟಾಬೇಸ್, 2014(5):ಸಿಡಿ0100722012 ಹಾಗೂ 2012(12)ಸಿಡಿ009506). ವಿಪರೀತ ಆಹಾರ, ಧೂಮಪಾನ, ಮದ್ಯಪಾನಗಳಿಲ್ಲದಂತೆ ಬಾಯಿ ಕಟ್ಟಿಕೊಂಡರೆ, ನಿತ್ಯವೂ ನಡೆದಾಡುತ್ತಿದ್ದರೆ ಹೃದಯಾಘಾತವನ್ನು ತಡೆಯಬಹುದು, ಯೋಗಾಭ್ಯಾಸದಿಂದಲ್ಲ.