ವೈದ್ಯರೆಲ್ಲ ಕೆಟ್ಟವರಲ್ಲ; ಕೆಟ್ಟವರು ಇಲ್ಲವೆಂದಲ್ಲ
ಸನತ್ ಕುಮಾರ್ ಬೆಳಗಲಿ
ವಾರ್ತಾಭಾರತಿ : ಪ್ರಚಲಿತ :: ನವೆಂಬರ್ 20, 2017 [ಇಲ್ಲಿದೆ: http://www.varthabharati.in/article/prachalita/104745]
ವೈದ್ಯರ ಮುಷ್ಕರ ನಡೆದು ಕೊನೆಗೊಂಡ ಈ ದಿನಗಳಲ್ಲಿ ನನಗೆ 40 ವರ್ಷಗಳ ಹಿಂದಿನ 70ರ ದಶಕದ ಆ ದಿನಗಳು ನೆನಪಿಗೆ ಬಂದವು. ಆಗ ನಮ್ಮ ಕುಟುಂಬ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿತ್ತು. ನನ್ನ ಬದುಕಿನ ಎರಡು ದಶಕಗಳನ್ನು ಕಳೆದಿದ್ದು ಅದೇ ಊರಿನಲ್ಲಿ. ಬುದ್ಧನ ನಂತರ ನಮ್ಮ ಸಮಾಜಕ್ಕೆ ವೈಚಾರಿಕ ಚಿಕಿತ್ಸೆ ನೀಡಿದ ಬಸವಣ್ಣ ಜನಿಸಿದ ಊರು ಬಾಗೇವಾಡಿ. ಈ ಊರಿನಲ್ಲಿ ಆ ಕಾಲದಲ್ಲಿ ಬೆರಳೆಣಿಕೆಯಷ್ಟು ವೈದ್ಯರಿದ್ದರು. ನನಗೆ ನೆನಪಿರುವಂತೆ ನಮ್ಮ ಮನೆಯಿಂದ ಇಬ್ಬರು ವೈದ್ಯರ ಬಳಿ ಕರೆದೊಯ್ಯುತ್ತಿದ್ದರು. ಮೊದಲು ಆಯುರ್ವೇದ ವೈದ್ಯ ಡಾ.ಕಡಿವಾಳ ಅವರ ಬಳಿ ಕರೆದೊಯ್ಯತ್ತಿದ್ದರು. ಆಗ ಅವರ ಪರೀಕ್ಷಾ ಶುಲ್ಕ 2 ರೂಪಾಯಿ. ಅವರು ಕೊಡುವ ಔಷಧಿಗಳಿಗೆ ಕಾಯಿಲೆ ಕಡಿಮೆಯಾಗದಿದ್ದರೆ, ಅಲೋಪಥಿ ವೈದ್ಯ ಡಾ. ಅಹ್ಮದಿ ಅವರ ಬಳಿ ನಾವು ಚಿಕಿತ್ಸೆ ಪಡೆಯುತ್ತಿದ್ದೆವು. ಈ ಅಹ್ಮದಿ ಡಾಕ್ಟರ್ ಬಳಿ ಸಂಘ ಪರಿವಾರದವರು ಸೇರಿದಂತೆ ಊರಿನ ಎಲ್ಲಾ ಜನರು ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಅವರು ಚಿಕಿತ್ಸೆಗೆ ನಿಗದಿಪಡಿಸಿದ ಶುಲ್ಕ 3 ರೂಪಾಯಿ.
ಕೆಮ್ಮು, ನೆಗಡಿ ಏನೇ ಕಾಯಿಲೆ ಬಂದರೂ ಮೊದಲು ಆಯುರ್ವೇದ ಡಾಕ್ಟರ್ ಕಡಿವಾಳ ಬಳಿ ಹೋಗುತ್ತಿದ್ದೆವು. ಅವರು ಮೊದಲು ಕೊಡುತ್ತಿದ್ದ ಔಷಧ ಹೊಟ್ಟೆ ಸಾಫ್ ಮಾಡುವ (ಭೇದಿ ಔಷಧಿ) ಪುಡಿ. ಇದರ ಜೊತೆಗೆ ಕೆಲ ವನಸ್ಪತಿ ಪುಡಿಗಳನ್ನು ಹಳೆಯ ಸುದ್ದಿಪತ್ರಿಕೆಗಳ ಚೀಟಿಯಲ್ಲಿ ಕಟ್ಟಿ ಕೊಡುತ್ತಿದ್ದರು. ಮಲಬದ್ಧತೆಯೇ ಎಲ್ಲಾ ಕಾಯಿಲೆಗೆ ಮೂಲ. ಮೊದಲು ಹೊಟ್ಟೆ ಕ್ಲೀನ್ ಆಗಬೇಕು ಎಂಬುದು ಅವರ ಸಿದ್ಧಾಂತ. ಅವರು ಕೊಡುವ ಔಷಧಿಗೆ ಕಾಯಿಲೆ ವಾಸಿಯಾಗದಿದ್ದರೆ, ಆಲೋಪಥಿ ಡಾಕ್ಟರ್ ಅಹ್ಮದಿ ಬಳಿ ಹೋಗುತ್ತಿದ್ದೆವು. ಅವರು ಇಂಜೆಕ್ಷನ್ ನೀಡಿ, ಗುಣಪಡಿಸುತ್ತಿದ್ದರು. ಇವರಿಬ್ಬರೂ ನಮ್ಮ ಕೈಯನ್ನು ಹಿಡಿದು, ನಾಡಿ ಪರೀಕ್ಷೆ ಮಾಡಿ ಯಾವ ಕಾಯಿಲೆ ಇದೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದರು. ಈಗಿನಂತೆ ಆಗ ಪರೀಕ್ಷಾ ಪ್ರಯೋಗಾಲಯಗಳು ಇರಲಿಲ್ಲ. ಜಿಲ್ಲಾ ಕೇಂದ್ರವಾದ ಬಿಜಾಪುರದಲ್ಲೂ ಪ್ರಯೋಗಾಲಯಗಳು ಇರಲಿಲ್ಲ.
ಈ ಇಬ್ಬರು ಡಾಕ್ಟರ್ ಬಳಿ ಕಾಯಿಲೆ ವಾಸಿಯಾಗದಿದ್ದರೆ, ಜಿಲ್ಲಾ ಕೇಂದ್ರವಾದ ಬಿಜಾಪುರಕ್ಕೆ ಹೋಗುತ್ತಿದ್ದೆವು. ಆ ಕಾಲದಲ್ಲಿ ಈಗಿನಂತ ನರ್ಸಿಂಗ್ ಹೋಮ್ಗಳು ಇರಲಿಲ್ಲ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ಇರಲಿಲ್ಲ. ಒಂದೆರಡು ಆಸ್ಪತ್ರೆಗಳಿದ್ದರೂ ಅಲ್ಲಿ ಕಾಯಿಲೆ ಗುಣವಾಗದವರು ಹೋಗುತ್ತಿದ್ದರು. ಇನ್ನು ವಿದೇಶದಿಂದ ಓದಿ ಬಂದ ಡಾ. ಪನ್ಸಾಳಕರ ಎಂಬ ವೈದ್ಯರಿದ್ದರು. ಅವರು ಕೂಡ ಕೈ ಹಿಡಿದು, ನಾಡಿ ಪರೀಕ್ಷಿಸಿ, ಒಮ್ಮಾಮ್ಮೆ ಸ್ಟೆಥೋಸ್ಕೋಪ್ ಬಳಸಿ ರೋಗ ಪತ್ತೆ ಮಾಡುತ್ತಿದ್ದರು. ಅವರ ಔಷಧಿಗೂ ಕಡಿಮೆಯಾಗದಿದ್ದರೆ, ನಮ್ಮ ಜಿಲ್ಲೆ ಪಕ್ಕದ ಮಹಾರಾಷ್ಟ್ರದ ಮೀರಜ್ ಇಲ್ಲವೇ ಸೊಲ್ಲಾಪುರಕ್ಕೆ ಹೋಗುತ್ತಿದ್ದೆವು. ಅಲ್ಲಿ ಒಳ್ಳೆಯ ಆಸ್ಪತ್ರೆಗಳಿದ್ದವು.
ಈ ನೆನಪುಗಳೆಲ್ಲ ಏಕೆ ಬಂದವೆಂದರೆ, 70ರ ದಶಕದಲ್ಲಿ ವೈದ್ಯರ ಬಳಿ ಹೋದರೆ, ಅವರು ಯಾವ ಪರೀಕ್ಷೆಗೂ ಬರೆದುಕೊಡದೇ, ನಾಡಿ ಪರೀಕ್ಷೆ ಮಾಡಿ ಔಷಧಿ ಕೊಡು ತ್ತಿದ್ದರು. ಆದರೆ 80ರ ದಶಕದ ನಂತರ ಜಾಗತೀಕರಣದ ಶಕೆ ಆರಂಭವಾದಾಗ, ವೈದ್ಯಕೀಯ ವೃತ್ತಿ ಕೂಡ ಮಾರುಕಟ್ಟೆ ಮೌಲ್ಯ ಪಡೆಯಿತು. ವೈದ್ಯಕೀಯ ವೃತ್ತಿಯು ಆಧುನಿಕ ಸ್ವರೂಪ ಪಡೆಯಿತು. ಈಗ ಅದೇ ಬಿಜಾಪುರದಲ್ಲಿ ಎರು ಮೆಡಿಕಲ್ ಕಾಲೇಜುಗಳಿವೆ. ಊರು ತುಂಬಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಯಾವುದೇ ಡಾಕ್ಟರ್ ಬಳಿ ಹೋದರೂ ಯಾರು ಸಹ ಕೈ ಮುಟ್ಟಿ ನೋಡುವುದಿಲ್ಲ. ಇಂತಹ ಪರೀಕ್ಷೆ ಮಾಡಿಕೊಂಡು ಬನ್ನಿ ಎಂದು ಲ್ಯಾಬೋರೆಟರಿಗೆ ಚೀಟಿ ಬರೆದುಕೊಡುತ್ತಾರೆ. ಅವೆಲ್ಲ ಪರೀಕ್ಷೆ ಮಾಡಿಕೊಂಡು ಬರಬೇಕೆಂದರೆ, ಬರೀ ಕೆಮ್ಮು, ನೆಗಡಿ, ಜ್ವರಕ್ಕೆ ಒಂದೆರಡು ಸಾವಿರ ರೂಪಾಯಿ ಖರ್ಚು ಆಗುತ್ತದೆ.
ಇನ್ನು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಒಳರೋಗಿಯಾಗಿ ಸೇರಿದರೆ, 8 ದಿನವಿದ್ದು ಹೊರಬಂದರೆ 60 ಸಾವಿರ ರೂಪಾಯಿವರೆಗೆ ಖರ್ಚಾಗುತ್ತದೆ. ಇದೇಕೆ ಹೀಗೆ ಅಂದ್ರೆ, ಕಾಲ ಬದಲಾಗಿದೆ ಎಂಬ ಉತ್ತರವನ್ನು ನಾವೇ ಕಂಡುಕೊಳ್ಳಬೇಕಿದೆ. ಒಂದು ಮೆಡಿಕಲ್ ಸೀಟಿಗೆ ಒಂದು ಕೋಟಿ ರೂಪಾಯಿ ಕ್ಯಾಪಿಟೇಷನ್ ಫೀಸ್ ಕಟ್ಟಬೇಕು. ಇದರ ಜೊತೆಗೆ ನಾನಾ ಶುಲ್ಕಗಳ ರೂಪದಲ್ಲಿ ಲಕ್ಷಾಂತರ ರೂಪಾಯಿ ಕೈ ಬಿಟ್ಟು ಹೋಗುತ್ತದೆ. ಇನ್ನು ಎಂ.ಡಿ ಅಥವಾ ಎಂ.ಎಸ್ ಪದವಿ ಪಡೆಯಬೇಕಿದ್ದರೆ, 4 ಕೋಟಿ ರೂಪಾಯಿ ವ್ಯಯಿಸಬೇಕು. ಇಷ್ಟೆಲ್ಲ ಡಿಗ್ರಿ ಪಡೆದ ನಂತರ ದುಡ್ಡಿದ್ದರೆ, 5-6 ಕೋಟಿ ರೂಪಾಯಿ ಖರ್ಚು ಮಾಡಿ, ಸ್ವಂತ ನರ್ಸಿಂಗ್ ಹೋಂ ಮಾಡಬಹುದು. ಇಲ್ಲವೇ ಇನ್ನೊಬ್ಬರ ಆಸ್ಪತ್ರೆಯಲ್ಲಿ ನೌಕರಿ ಮಾಡಬಹುದು.
ಇದರ ನಡುವೆ ಈಗಲೂ ಕೆಲ ವೈದ್ಯರು ಇದ್ದಾರೆ. ಅವರು ಯಾವುದೇ ಪರೀಕ್ಷೆಗೆ ಬರೆದುಕೊಡುವುದಿಲ್ಲ. ಅತ್ಯಂತ ಕಡಿಮೆ ಶುಲ್ಕ ಪಡೆಯುವ ಇವರ ಬಳಿ ಬಡವರು ಹೋಗುತ್ತಾರೆ. ಬಿಜಾಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ 92 ವಯಸ್ಸಿನ ವೈದ್ಯರೊಬ್ಬರು ಕೇವಲ 10 ರೂಪಾಯಿ ಶುಲ್ಕ ಪಡೆದು, ತಮ್ಮ ಬಳಿ ಬರುವ ರೋಗಿಗಳನ್ನು ಗುಣಪಡಿಸಿ ಕಳುಹಿಸುತ್ತಾರೆ. ಮಂಡ್ಯದಲ್ಲಿ ಡಾ. ಶಂಕರಗೌಡ ಅವರು ಕೇವಲ 5 ರೂಪಾಯಿ ಶುಲ್ಕ ಪಡೆದು, ಚಿಕಿತ್ಸೆ ನೀಡುತ್ತಾರೆ. ಈ ವ್ಯಾಪಾರಿ ಜಗತ್ತಿನಲ್ಲಿ ಇಂಥವರೂ ಇದ್ದಾರೆ.
ಇಂದಿನ ತಲೆಮಾರಿನಲ್ಲೂ ಲಾಭದ ದುರಾಸೆಯಿಲ್ಲದೆ ತಮ್ಮ ಬಳಿ ಬರುವ ರೋಗಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುವ ವೈದ್ಯರೂ ಇದ್ದಾರೆ. ಮಂಗಳೂರಿನ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಧಾರವಾಡದ ಡಾ. ಸಂಜೀವ ಕುಲಕರ್ಣಿ, ಹೊನ್ನಾವರ ತಾಲೂಕಿನ ಕಾಡಿನಂಚಿನಲ್ಲಿರುವ ಡಾ. ಎಚ್.ಎಸ್.ಅನುಪಮಾ ಮತ್ತು ಡಾ. ಕೃಷ್ಣ. ದಾವಣಗೆರೆಯ ಡಾ. ವಸುಧೇಂದ್ರ. ಇಂಥ ಅನೇಕ ವೈದ್ಯರು ಈ ಕಾಲದಲ್ಲೂ ಕಡಿಮೆ ಶುಲ್ಕ ಪಡೆದು ಚಿಕಿತ್ಸೆ ನೀಡುತ್ತಿದ್ದಾರೆ.
ವೈದ್ಯಕೀಯ ವಿಜ್ಞಾನದ ಆಧುನಿಕ ತಂತ್ರಜ್ಞಾನ ಪ್ರಯೋಜನವನ್ನು ಪಡೆಯ ಬಾರದೆಂದು ನಾನು ಹೇಳುವುದಿಲ್ಲ. ಈ ಎಲ್ಲಾ ಸೌಲಭ್ಯಗಳನ್ನು ಪಡೆದು, ರೋಗಿಗಳನ್ನು ಗುಣಪಡಿಸಲೇಬೇಕು. ಕಕ್ಕಿಲ್ಲಾಯ ಮತ್ತು ಅನುಪಮಾರಂಥ ವೈದ್ಯರು ಅನಿವಾರ್ಯ ಎನ್ನಿಸಿದ್ದಲ್ಲಿ ಮಾತ್ರವೇ ರೋಗಿಗಳಿಗೆ ಪರೀಕ್ಷೆಗೆ ಬರೆದು ಕೊಡುತ್ತಾರೆ. ಆದರೆ ಕೆಲ ವೈದ್ಯರು ದುಬಾರಿ ಪರೀಕ್ಷೆಗಳಿಗೆ ರೋಗಿಗಳನ್ನು ಗುರಿ ಪಡಿಸಿ, ಜೇಬು ಖಾಲಿ ಮಾಡಿಸು ತ್ತಾರೆ. ಮೊದಲೇ ಸೋತು ಸಣ್ಣವಾದ ರೋಗಿಗಳು ಈ ದುಬಾರಿ ವೆಚ್ಚದಿಂದ ಬಳಲಿ ಬೆಂಡಾ ಗುತ್ತಾರೆ. ಇದನ್ನು ಕಂಡು ಆರೋಗ್ಯ ಸಚಿವ ರಮೇಶಕುಮಾರ್ ಕೆಂಡಾಮಂಡಲ ಗೊಂಡು ಕೆಪಿಎಂಇ ಕಾಯ್ದೆ ತಂದು ವೈದ್ಯರಿಗೆ ಕಡಿವಾಣ ಹಾಕಲು ಹೊರಟರು.
ಈ ತಿದ್ದುಪಡಿ ಮಸೂದೆಯನ್ನು ಇನ್ನೂ ಸದನದಲ್ಲಿ ಮಂಡಿಸಿಲ್ಲ. ಆದರೆ ಕರ್ನಾ ಟಕದ ಕೆಲ ಖಾಸಗಿ ವೈದ್ಯರು ಮುಷ್ಕರ ನಡೆಸಿದರು. ಇದರ ಪರಿಣಾಮ 30 ಮಂದಿ ಅಸುನೀಗಿದರು. ಆದರೆ ಹೈಕೋರ್ಟ್ ಮುಷ್ಕರ ನಿಲ್ಲಿಸುವಂತೆ ಆದೇಶಿಸಿದ್ದರಿಂದ ಮತ್ತು ಮುಖ್ಯಮಂತ್ರಿಗಳು ಸಭೆ ನಡೆದು ಮಾತುಕತೆ ನಡೆಸಿದ ಪರಿಣಾಮವಾಗಿ ವೈದ್ಯರು ಮುಷ್ಕರ ನಿಲ್ಲಿಸಬೇಕಾಯಿತು.
ಖಾಸಗಿ ವೈದ್ಯರನ್ನು ಮಣಿಸಲು ತಂದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆಗೆ ಡಾ. ಶ್ರೀನಿವಾಸ ಕಕ್ಕಿಲ್ಲಾಯರಂತಹ ವೈದ್ಯರು ವಿರೋಧ ವ್ಯಕ್ತಪಡಿ ಸಿದರು. ಈ ಕಾಯ್ದೆ ಮೇಲ್ನೋಟಕ್ಕೆ ಬಡವರ ಪರ ಇದ್ದರೂ ಕೂಡ ಸಣ್ಣಪುಟ್ಟ ನಗರಗಳಲ್ಲಿ ದವಾಖಾನೆಯನ್ನು ತೆರೆದು, ಆಸ್ಪತ್ರೆಗಳನ್ನು ಆರಂಭಿಸಿ, ರೋಗಿಗಳ ಕಾಯಿಲೆ ಗುಣಪಡಿಸುವಂತಹ ವೈದ್ಯರಿಗೆ ಇದರಿಂದ ತೊಂದರೆ ಆಗುತ್ತದೆ. ಇದು ಬಹುದೊಡ್ಡ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಮಾತ್ರ ಉಪಯುಕ್ತ. ಈ ಕಾಯ್ದೆ ಜಾರಿಗೆ ತರುವ ಮುನ್ನ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ ಎಂದು ಅವರು ಹೇಳುತ್ತಾರೆ.
ಇದಕ್ಕೆ ಪ್ರತಿಯಾಗಿ ಕರ್ನಾಟಕ ಜನಾರೋಗ್ಯದಂತಹ ಸಂಘಟನೆಗಳು ಹಿಂದುಳಿದ ಪ್ರದೇಶಗಳಲ್ಲಿ ಖಾಸಗಿ ಆಸ್ಪತ್ರೆಗಳು ನಡೆಸುವ ಪಾತಕಗಳ ಚರಿತ್ರೆಯನ್ನೇ ಬಿಚ್ಚಿಡುತ್ತವೆ. ಹೈದರಾಬಾದ್ ಕರ್ನಾಟಕದಂತಹ ಪ್ರದೇಶದಲ್ಲಿ ಹೊಟ್ಟೆ ನೋವು ಎಂದು ಬರುವ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕುತ್ತಾರೆ. ಕೆಲವು ಕಡೆ ಹೆಣವನ್ನು ಆಸ್ಪತ್ರೆಯಲ್ಲಿ ಇಟ್ಟುಕೊಂಡು ದುಬಾರಿ ಶುಲ್ಕ ಕಟ್ಟಿದರೆ ಮಾತ್ರ ಹೆಣ ಕೊಡುವುದಾಗಿ ರೋಗಿಗಳನ್ನು ಸತಾಯಿಸುತ್ತಾರೆಂದು ಜನಾರೋಗ್ಯ ಸಂಘಟನೆಯ ಅಖಿಲಾ ವಾಸನ್ ಮತ್ತು ವಿಜಯಕುಮಾರ್ ಸೀತಪ್ಪ ಅವರ ವಾದ.
ಇದನ್ನೆಲ್ಲ ಅವಲೋಕಿಸಿ, ಆರೋಗ್ಯ ಸಚಿವ ರಮೇಶ ಕುಮಾರ್ ಕೆಪಿಎಂಇ ಕಾಯ್ದೆಗೆ ತಿದ್ದುಪಡಿ ತರಲು ಮುಂದಾದರು. ರಮೇಶ ಕುಮಾರ್ ಅವರನ್ನು ನನಗೆ ನಾಲ್ಕು ದಶಕಗಳಿಂದ ಗೊತ್ತು. ಅವರ ಜನಪರ ಕಾಳಜಿ ಪ್ರಶ್ನಾತೀತ. ಅವರ ಭಾಷೆ ಸ್ವಲ್ಪ ಒರಟಾದರೂ ತುಂಬಾ ಮೃದು ಹೃದಯದ ವ್ಯಕ್ತಿ. ಈ ಕೆಪಿಎಂಇ ಕಾಯ್ದೆಯ ತಿದ್ದುಪಡಿ ಮಸೂದೆ ಯನ್ನು ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲು ಮುಂದಾದಾಗ, ಈಶ್ವರಪ್ಪರಂತಹ ಕೆಲ ಬಿಜೆಪಿ ಸದಸ್ಯರು ತುಂಬಾ ಹಗುರವಾಗಿ ಮಾತನಾಡಿದರು. ಇದರಿಂದ ಕೆರಳಿದ ರಮೇಶ ಕುಮಾರ್ ವಿಧೇಯಕ ಮಂಡನೆಯಾಗದಿದ್ದರೆ, ರಾಜೀನಾಮೆ ಕೊಡುವ ಬೆದರಿಕೆ ಹಾಕಿದರೆಂದು ತಿಳಿದು ಬಂದಿದೆ. ಈ ಸಂದರ್ಭ ದಲ್ಲಿ ಸದನದಲ್ಲಿ ಮಾತನಾಡಿದ ಅವರು, ಬಲ ಎಂದರೆ ಬಲಿಷ್ಠರು, ಎಡ ಎಂದರೆ ನಿರ್ಗತಿಕರು. ಪ್ರಸಂಗ ಬಂದರೆ, ನಾನು ಮತ್ತು ನಮ್ಮ ನಾಯಕರು ಎಡದತ್ತ ವಾಲುತ್ತೇವೆ ಹೊರತು ಬಲದತ್ತ ಅಲ್ಲ ಎಂದು ಸದನದಲ್ಲಿ ಘೋಷಿಸಿದರು.
ಹಣದಾಹಿ ವೈದ್ಯರಿಗೆ ಕಡಿವಾಣ ಹಾಕಲು 2007ರಲ್ಲೇ ಜಾರಿಗೆ ಬಂದ ಕೆಪಿಎಂಇ ಕಾನೂನಿನ ಪರಿಣಾಮವಾಗಿ ಹಳ್ಳಿಯ ಬಡವರ ಮಧ್ಯೆ ಕೆಲಸ ಮಾಡಬೇಕೆಂದು ಕವಲಕ್ಕಿಗೆ ಹೋಗಿ, ಹೆರಿಗೆ ಆಸ್ಪತ್ರೆ ಮಾಡಿದ್ದ ಡಾ.ಅನುಪಮಾ ಅವರು ತಮ್ಮ ಆಸ್ಪತ್ರೆ ಯನ್ನು ಮುಚ್ಚಬೇಕಾಯಿತು. ಯಾಕೆಂದರೆ, ಈ ಕಾನೂನು ಮೇಲ್ನೋಟಕ್ಕೆ ಜನಪರ ವಾಗಿದ್ದರೂ ಕೂಡ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದರಿಂದ ಬಡವರ ಪಾಲಿಗೆ ಯಮಪಾಶವಾಗಿದೆ. ಆರ್ಟಿಇ ಕಾಯ್ದೆಯಂತೆ ಈ ಕಾಯ್ದೆಯು ದುರುಪಯೋಗ ಆಗುವ ಸೂಚನೆಗಳಿವೆ. ಬ್ಲಾಕ್ಮೇಲ್ ಮಾಡುವವರಿಗೆ ಇದು ಅಸ್ತ್ರವಾಗುತ್ತದೆಯೆಂದು ಇದನ್ನು ವಿರೋಧಿಸುವವರ ವಾದವಾಗಿದೆ.
ಈ ಕಾನೂನಿನ ಎರಡು ವಿರುದ್ಧ ಧ್ರುವಗಳಲ್ಲಿ ಇರುವ ರಮೇಶ ಕುಮಾರ ಮತ್ತು ಶ್ರೀನಿವಾಸ ಕಕ್ಕಿಲ್ಲಾಯ ಇಬ್ಬರೂ ನನಗೆ ಗೊತ್ತು. ಇಬ್ಬರ ಸಾಮಾಜಿಕ ಕಾಳಜಿ ಪ್ರಶ್ನಾತೀತ.ಬಡವರನ್ನು ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲೇಬೇಕು ಎಂಬುದು ರಮೇಶಕುಮಾರ್ ಅವರ ಹಠ. ಈ ಕಾನೂನು ದುರುಪಯೋಗ ಆಗುತ್ತದೆ ಮತ್ತು ಇದರಿಂದ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಉಪಯೋಗ ಆಗುತ್ತದೆ ಎಂಬುದು ಶ್ರೀನಿವಾಸ ಕಕ್ಕಿಲ್ಲಾಯ ಅವರ ಅಭಿಪ್ರಾಯ. ಈ ಎರಡರಲ್ಲೂ ಸತ್ಯಾಂಶವಿದೆ. ವೈದ್ಯರು ಕೂಡ ಇದೇ ಸಮಾಜದಿಂದ ಬಂದವರು. ಈ ಸಮಾಜದಲ್ಲಿರುವ ಒಳ್ಳೆಯವರು ಮತ್ತು ಕೆಟ್ಟವರು ವೈದ್ಯ ಸಮುದಾಯದಲ್ಲೂ ಇದ್ದಾರೆ. ಡಾ. ಕಕ್ಕಿಲ್ಲಾಯ ಮತ್ತು ಅನುಪಮಾ ಅಂಥವರು ಏನನ್ನೂ ಆಶಿಸದೇ ಬಡವರ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರೆ, ಇನ್ನು ಅನೇಕ ವೈದ್ಯರು ತಮ್ಮ ಆಸ್ಪತ್ರೆಗಳ ಐಸಿಯುನಲ್ಲಿ ಹೆಣ ಇಟ್ಟುಕೊಂಡು ಹಣ ವಸೂಲಿ ಮಾಡುತ್ತಾರೆ.
ಎರಡು ತಿಂಗಳ ಹಿಂದೆ ನಾನು ಬಿಜಾಪುರಕ್ಕೆ ಹೋದಾಗ, ನನ್ನ ಪರಿಚಯದ ಡಾ. ಅಗರ್ವಾಲ ಬಳಿ ಚಿಕಿತ್ಸೆಗೆಂದು ಹೋದೆ. ಮಧುಮೇಹದಿಂದ ಬಳಲುತ್ತಿರುವ ನನ್ನ ರಕ್ತದ ಸ್ಯಾಂಪಲ್ನ್ನು ಪರೀಕ್ಷಿಸಿದಾಗ, ನನಗೆ ಸಕ್ಕರೆ ಪ್ರಮಾಣ 501 ದಾಟಿತ್ತು. ಆಗ ಅವರು ತಕ್ಷಣವೇ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದರು. ಕಿಡ್ನಿಗೆ ತೊಂದರೆ ಉಂಟಾಗಿದ್ದರಿಂದ ಸಕ್ಕರೆ ಪ್ರಮಾಣ ಹೆಚ್ಚಾಗಿತ್ತು. ಅದಕ್ಕಾಗಿ ಲೇಸರ್ ಸರ್ಜರಿಯನ್ನು ಮಾಡಿದರು. ನಾನು ಒಂದು ವಾರ ಅಲ್ಲಿದ್ದು, ಬಿಡುಗಡೆಯಾಗಿ ಬರುವಾಗ ಅವರು ಚಿಕಿತ್ಸೆಗೆ ನಿಗದಿಪಡಿಸಿದ್ದ ಹಣ ಕಟ್ಟಬೇಕಾಯಿತು. ಅವರು ತುಂಬಾ ಚೆನ್ನಾಗಿ ನೋಡಿ ಕೊಂಡಿದ್ದರಿಂದ ಕಟ್ಟಿದ ಹಣ ದುಬಾರಿ ಅನ್ನಿಸಲಿಲ್ಲ. ಈ ಡಾ. ಅಗರ್ವಾಲ್ ವೈದ್ಯರ ಮುಷ್ಕರ ನಡೆದ ಸಂದರ್ಭದಲ್ಲಿ ನನಗೆ ಫೋನ್ ಮಾಡಿ, ಆರೋಗ್ಯ ಸಚಿವರು ನಮ್ಮನ್ನು ದರೋಡೆಕೋರರು ಎಂದು ಕರೆಯುತ್ತಿದ್ದಾರೆ. ಇದರಿಂದ ತುಂಬಾ ನೋವಾಗಿದೆ. ರೋಗಿಗಳ ಸೇವೆಗೆಂದೇ ಆಸ್ಪತ್ರೆ ನಿರ್ಮಿಸಿದ್ದೇನೆ ಹೊರತು ಲಾಭ ಗಳಿಸುವ ಉದ್ದೇಶವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜಾಪುರದಂತಹ ಹಿಂದುಳಿದ ಪ್ರದೇಶದಲ್ಲಿ ಅಗರವಾಲ್ ಅಂಥವರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡಿದ್ದಾರೆ. ತಮ್ಮ ಬಳಿ ಬಂದ ರೋಗಿಗಳನ್ನು ಬಡವರು, ಶ್ರೀಮಂತರು ಇರಲಿ ಪ್ರೀತಿಯಿಂದ ಮಾತನಾಡುತ್ತಾರೆ. ಚಿಕಿತ್ಸೆಗೆ ಅವರು ನಿಗದಿಪಡಿಸಿದ ಶುಲ್ಕ ದುಬಾರಿ ಅನ್ನಿಸಿದರೂ ಅವರ ಆಸ್ಪತ್ರೆಗೆ ಹೋಗಿ ಬರುವ ರೋಗಿಗಳು ಗುಣಮುಖರಾಗುತ್ತಾರೆ ಎಂಬ ಭಾವನೆ ಆ ಜಿಲ್ಲೆಯಲ್ಲಿದೆ. ಇಂಥವರನ್ನು ತೀರ ದರೋಡೆಕೋರರು ಎಂದು ಕರೆಯಲು ನನಗೂ ಮನಸ್ಸು ಆಗುತ್ತಿಲ್ಲ.
ಖಾಸಗಿ ವೈದ್ಯರನ್ನು ನಿಯಂತ್ರಿಸಲು ಈಗ ಸಾಕಷ್ಟು ಕಾನೂನುಗಳಿವೆ. ಆ ಯಾವ ಕಾನೂನುಗಳು ಜಾರಿಗೆ ಬಂದಿಲ್ಲ. ಆ ಕಾನೂನುಗಳನ್ನು ಬಳಸಿಕೊಂಡು ವೈದ್ಯರಿಂದ ಸೇವೆ ಪಡೆಯುವ ಜಾಗೃತಿ ಜನರಲ್ಲಿ ಉಂಟಾಗಿಲ್ಲ. ಹೀಗಾಗಿ ನೀವು ಇನ್ನೊಂದು ಹೊಸ ಕಾನೂನು ತಂದರೂ ಅದರ ಹೆಚ್ಚಿನ ಉಪಯೋಗ ಆಗುವುದಿಲ್ಲ ಎಂಬ ವಾದದಲ್ಲೂ ಹುರುಳಿಲ್ಲ.
ಸಮಾಜವಾದಿ ಸೋವಿಯತ್ ರಶ್ಯವಿದ್ದಾಗ, ಅಲ್ಲಿ ಎಲ್ಲ ರೋಗಿಗಳಿಗೂ ಉಚಿತ ಚಿಕಿತ್ಸೆಯಿತ್ತು. ಹೃದಯ ಶಸ್ತ್ರಚಿಕಿತ್ಸೆಗೂ ರೋಗಿಗಳು ಶುಲ್ಕ ಕಟ್ಟಬೇಕಿರಲಿಲ್ಲ. ಈಗ ಸಮಾಜವಾದ ಉಳಿದುಕೊಂಡಿರುವ ಕ್ಯೂಬಾದಲ್ಲಿ ಅತ್ಯಂತ ಕಡಿಮೆ ದರದಲ್ಲಿ ನಾನಾ ಕಾಯಿಲೆಗಳನ್ನು ಗುಣಪಡಿಸುವ ಆಸ್ಪತ್ರೆಗಳಿವೆ. ಕೇವಲ 10 ಸಾವಿರ ರೂಪಾಯಿಯಲ್ಲಿ ಅಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಅಂತಲೇ ಕ್ಯೂಬಾದ ಕಡು ವೈರಿಯಾದ ಅಮೆರಿಕದ ಪ್ರಜೆಗಳು ಕೂಡ ಕಾಯಿಲೆ ಉಲ್ಬಣಿಸಿದರೆ, ಕ್ಯೂಬಾಗೆ ಧಾವಿಸಿ ಬರುತ್ತಾರೆ. ವೈದ್ಯಕೀಯ ಎಂಬುದು ಅಲ್ಲಿ ಸೇವೆ ಆಗಿದೆ. ವ್ಯಾಪಾರವಾಗಿಲ್ಲ.
ಆದರೆ ನವ ಉದಾರವಾದಿ ಆರ್ಥಿಕ ನೀತಿ ಒಪ್ಪಿಕೊಂಡಿರುವ ಭಾರತದಲ್ಲಿ ವೈದ್ಯಕೀಯ ಸೇವೆ ಎಂಬುದು ಹಣ ಗಳಿಸುವ ವ್ಯಾಪಾರವಾಗಿ ಮೂರು ದಶಕಗಳು ಕಳೆದಿವೆ. ಈ ವ್ಯವಸ್ಥೆ ತನ್ನ ಲೋಪವನ್ನು ಮುಚ್ಚಿಕೊಳ್ಳಲು ಎಷ್ಟೇ ಜನಪರ ಕಾನೂನುಗಳನ್ನು ತಂದರೂ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಇದಕ್ಕೆ ಬದಲಾಗಿ, ಸಾರ್ವಜನಿಕ ಆರೋಗ್ಯ ಸೇವೆಯನ್ನು ಬಲಪಡಿಸಬೇಕಿದೆ. ಮುಂಚೆ ಶೇ 70ರಷ್ಟು ಜನರು ಸರಕಾರಿ ಆಸ್ಪತ್ರೆ ಅವಲಂಬಿಸಿದ್ದರು. ಈಗ ತದ್ವಿರುದ್ಧವಾಗಿ ಶೇ 90ರಷ್ಟು ಜನ ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗಿದ್ದಾರೆ. ಸರಕಾರಿ ಆಸ್ಪತ್ರೆಗೆ ಜನ ಬರುವುದಿಲ್ಲವೆಂದಲ್ಲ. ಈಗಲೂ ಯಾವುದೇ ಊರಿನ ಸರಕಾರಿ ಆಸ್ಪತ್ರೆಗೆ ಹೋದರೆ, ಆ ಆಸ್ಪತ್ರೆಗಳು ಜನರಿಂದ ತುಂಬಿ ತುಳುಕಿರುತ್ತವೆ.
ಆದರೆ ಅದಕ್ಕೆ ತಕ್ಕ ಸೌಕರ್ಯಗಳು ಅಲ್ಲಿಲ್ಲ. ಅನೇಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ. ಇನ್ನೂ ಅನೇಕ ಸರಕಾರಿ ಆಸ್ಪತ್ರೆಗಳಲ್ಲಿ ಸಂಬಳಕ್ಕಾಗಿ ಇಲ್ಲಿ ಕೆಲಸ ಮಾಡಿ, ಹೆಚ್ಚಿನ ಸಂಬಳಕ್ಕಾಗಿ ಕೆಲ ಹೊತ್ತು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ದುಡಿಯುತ್ತಾರೆ. ಅನೇಕ ಸರಕಾರಿ ಆಸ್ಪತ್ರೆಗಳು ಆಧುನಿಕ ತಂತ್ರಜ್ಞಾನದ ಕೊರತೆಯಿಂದ ಬಳಲುತ್ತಿವೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಟಿ ಸ್ಕಾನ್ ಮತ್ತು ಡಯಾಲಿಸಿಸ್ ಸೌಲಭ್ಯಗಳನ್ನು ಡಿ.1ರೊಳಗೆ ಅಳವಡಿಸುವುದಾಗಿ ಆರೋಗ್ಯ ಸಚಿವರು ಹೇಳಿದ್ದಾರೆ. ಇದು ಸ್ವಾಗತಾರ್ಹ ಕ್ರಮ. ಸರಕಾರಿ ಆಸ್ಪತ್ರೆಗಳನ್ನು ಬಲ ಪಡಿಸಿ, ಖಾಸಗಿ ಆಸ್ಪತ್ರೆಗಳಿಗೆ, ಅನಿವಾರ್ಯವಾಗಿ ಹೋಗುವ ಜನರ ನೋವು ಮತ್ತು ಸಂಕಟಗಳಿಗೆ ಸ್ಪಂದಿಸಿದರೆ ಎಷ್ಟೋ ಪ್ರಯೋಜನವಾಗುತ್ತದೆ. ಇವತ್ತಿನ ನವ ಉದಾರವಾದಿ ಆರ್ಥಿಕ ನೀತಿಯನ್ನು ಇಟ್ಟುಕೊಂಡು ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಸರಕಾರದ ಪ್ರಯತ್ನ ಸ್ವಾಗತಾರ್ಹವಾದರೂ ಅದೊಂದೆ ಸಮಸ್ಯೆಗೆ ಪರಿಹಾರವಲ್ಲ ಎಂಬುದು ಮನಗಾಣಬೇಕಿದೆ.
ಬಿಜಾಪುರದಂತಹ ಹಿಂದುಳಿದ ಪ್ರದೇಶದಲ್ಲಿ ಅಗರ್ವಾಲ್ ಅಂಥವರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡಿದ್ದಾರೆ. ತಮ್ಮ ಬಳಿ ಬಂದ ರೋಗಿಗಳನ್ನು ಬಡವರಿರಲಿ, ಶ್ರೀಮಂತರಿರಲಿ ಪ್ರೀತಿಯಿಂದ ಮಾತನಾಡುತ್ತಾರೆ. ಚಿಕಿತ್ಸೆಗೆ ಅವರು ನಿಗದಿಪಡಿಸಿದ ಶುಲ್ಕ ದುಬಾರಿ ಅನ್ನಿಸಿದರೂ ಅವರ ಆಸ್ಪತ್ರೆಗೆ ಹೋಗಿ ಬರುವ ರೋಗಿಗಳು ಗುಣಮುಖರಾಗುತ್ತಾರೆ ಎಂಬ ಭಾವನೆ ಆ ಜಿಲ್ಲೆಯಲ್ಲಿದೆ. ಇಂಥವರನ್ನು ತೀರ ದರೋಡೆಕೋರರು ಎಂದು ಕರೆಯಲು ನನಗೂ ಮನಸ್ಸು ಆಗುತ್ತಿಲ್ಲ. ಖಾಸಗಿ ವೈದ್ಯರನ್ನು ನಿಯಂತ್ರಿಸಲು ಈಗ ಸಾಕಷ್ಟು ಕಾನೂನುಗಳಿವೆ. ಆ ಯಾವ ಕಾನೂನುಗಳೂ ಜಾರಿಗೆ ಬಂದಿಲ್ಲ. ಆ ಕಾನೂನುಗಳನ್ನು ಬಳಸಿಕೊಂಡು ವೈದ್ಯರಿಂದ ಸೇವೆ ಪಡೆಯುವ ಜಾಗೃತಿ ಜನರಲ್ಲಿ ಉಂಟಾಗಿಲ್ಲ. ಹೀಗಾಗಿ ನೀವು ಇನ್ನೊಂದು ಹೊಸ ಕಾನೂನು ತಂದರೂ ಅದರ ಹೆಚ್ಚಿನ ಉಪಯೋಗ ಆಗುವುದಿಲ್ಲ ಎಂಬ ವಾದದಲ್ಲೂ ಹುರುಳಿಲ್ಲದಿಲ್ಲ.
ಸಮಾಜವಾದಿ ಸೋವಿಯತ್ ರಶ್ಯವಿದ್ದಾಗ, ಅಲ್ಲಿ ಎಲ್ಲ ರೋಗಿಗಳಿಗೂ ಉಚಿತ ಚಿಕಿತ್ಸೆಯಿತ್ತು. ಹೃದಯ ಶಸ್ತ್ರಚಿಕಿತ್ಸೆಗೂ ರೋಗಿಗಳು ಶುಲ್ಕ ಕಟ್ಟಬೇಕಿರಲಿಲ್ಲ. ಈಗ ಸಮಾಜವಾದ ಉಳಿದು ಕೊಂಡಿರುವ ಕ್ಯೂಬಾದಲ್ಲಿ ಅತ್ಯಂತ ಕಡಿಮೆ ದರದಲ್ಲಿ ನಾನಾ ಕಾಯಿಲೆಗಳನ್ನು ಗುಣಪಡಿಸುವ ಆಸ್ಪತ್ರೆಗಳಿವೆ. ಕೇವಲ 10 ಸಾವಿರ ರೂಪಾಯಿಯಲ್ಲಿ ಅಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಅಂತಲೇ ಕ್ಯೂಬಾದ ಕಡು ವೈರಿಯಾದ ಅಮೆರಿಕದ ಪ್ರಜೆಗಳು ಕೂಡ ಕಾಯಿಲೆ ಉಲ್ಬಣಿಸಿದರೆ, ಕ್ಯೂಬಾಗೆ ಧಾವಿಸಿ ಬರುತ್ತಾರೆ. ವೈದ್ಯಕೀಯ ಎಂಬುದು ಅಲ್ಲಿ ಸೇವೆ ಆಗಿದೆ. ವ್ಯಾಪಾರವಾಗಿಲ್ಲ.
ಆದರೆ ನವ ಉದಾರವಾದಿ ಆರ್ಥಿಕ ನೀತಿ ಒಪ್ಪಿಕೊಂಡಿರುವ ಭಾರತದಲ್ಲಿ ವೈದ್ಯಕೀಯ ಸೇವೆ ಎಂಬುದು ಹಣ ಗಳಿಸುವ ವ್ಯಾಪಾರವಾಗಿ ಮೂರು ದಶಕಗಳು ಕಳೆದಿವೆ. ಈ ವ್ಯವಸ್ಥೆ ತನ್ನ ಲೋಪವನ್ನು ಮುಚ್ಚಿಕೊಳ್ಳಲು ಎಷ್ಟೇ ಜನಪರ ಕಾನೂನುಗಳನ್ನು ತಂದರೂ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಇದಕ್ಕೆ ಬದಲಾಗಿ, ಸಾರ್ವಜನಿಕ ಆರೋಗ್ಯ ಸೇವೆಯನ್ನು ಬಲಪಡಿಸಬೇಕಿದೆ. ಮುಂಚೆ ಶೇ.70ರಷ್ಟು ಜನರು ಸರಕಾರಿ ಆಸ್ಪತ್ರೆಯನ್ನು ಅವಲಂಬಿಸಿದ್ದರು. ಈಗ ತದ್ವಿರುದ್ಧವಾಗಿ ಶೇ.90ರಷ್ಟು ಜನ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಸರಕಾರಿ ಆಸ್ಪತ್ರೆಗೆ ಜನ ಬರುವುದಿಲ್ಲವೆಂದಲ್ಲ. ಈಗಲೂ ಯಾವುದೇ ಊರಿನ ಸರಕಾರಿ ಆಸ್ಪತ್ರೆಗೆ ಹೋದರೆ, ಆ ಆಸ್ಪತ್ರೆಗಳು ಜನರಿಂದ ತುಂಬಿ ತುಳುಕಿರುತ್ತವೆ.
ಆದರೆ ಅದಕ್ಕೆ ತಕ್ಕ ಸೌಕರ್ಯಗಳು ಅಲ್ಲಿಲ್ಲ. ಅನೇಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ. ಇನ್ನೂ ಅನೇಕ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸಂಬಳಕ್ಕಾಗಿ ಇಲ್ಲಿ ಕೆಲಸ ಮಾಡಿ, ಹೆಚ್ಚಿನ ಸಂಬಳಕ್ಕಾಗಿ ಕೆಲ ಹೊತ್ತು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ದುಡಿಯುತ್ತಾರೆ. ಅನೇಕ ಸರಕಾರಿ ಆಸ್ಪತ್ರೆಗಳು ಆಧುನಿಕ ತಂತ್ರಜ್ಞಾನದ ಕೊರತೆಯಿಂದ ಬಳಲುತ್ತಿವೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಟಿ ಸ್ಕಾನ್ ಮತ್ತು ಡಯಾಲಿಸಿಸ್ ಸೌಲಭ್ಯಗಳನ್ನು ಡಿ.1ರೊಳಗೆ ಅಳವಡಿಸುವುದಾಗಿ ಆರೋಗ್ಯ ಸಚಿವರು ಹೇಳಿದ್ದಾರೆ. ಇದು ಸ್ವಾಗತಾರ್ಹ ಕ್ರಮ. ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ಖಾಸಗಿ ಆಸ್ಪತ್ರೆಗಳಿಗೆ, ಅನಿವಾರ್ಯವಾಗಿ ಹೋಗುವ ಜನರ ನೋವು ಮತ್ತು ಸಂಕಟಗಳಿಗೆ ಸ್ಪಂದಿಸಿದರೆ ಎಷ್ಟೋ ಪ್ರಯೋಜನವಾಗುತ್ತದೆ. ಇವತ್ತಿನ ನವ ಉದಾರವಾದಿ ಆರ್ಥಿಕ ನೀತಿಯನ್ನು ಇಟ್ಟುಕೊಂಡು ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಸರಕಾರದ ಪ್ರಯತ್ನ ಸ್ವಾಗತಾರ್ಹವಾದರೂ ಸಮಸ್ಯೆಗೆ ಅದೊಂದೆ ಪರಿಹಾರವಲ್ಲ ಎಂಬುದನ್ನು ಮನಗಾಣಬೇಕಿದೆ
Leave a Reply