ವೈದ್ಯವೃತ್ತಿಯ ಸಾಕ್ಷಿಪ್ರಜ್ಞೆ ಡಾ. ಕೆ ಆರ್ ಶೆಟ್ಟಿ
(ವಾರ್ತಾಭಾರತಿ, ಜನವರಿ 3, 2024)
ಅವಿಭಜಿತ ದಕ್ಷಿಣ ಕನ್ನಡದ ಮೊದಲ ನರರೋಗ ತಜ್ಞರೂ, ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲರೂ ಆಗಿದ್ದ ಡಾ. ಕಾಪು ರಾಧಾಕೃಷ್ಣ ಶೆಟ್ಟಿ (ಡಾ. ಕೆ ಆರ್ ಶೆಟ್ಟಿ) ಇದೇ ಡಿಸೆಂಬರ್ 29ರಂದು ಸಂಜೆ ನಮ್ಮನ್ನಗಲಿದ್ದಾರೆ. ಅವರೊಂದಿಗೆ ಆಧುನಿಕ ವೈದ್ಯವಿಜ್ಞಾನ ಹಾಗೂ ವೈದ್ಯಕೀಯ ವೃತ್ತಿಗಳ ಸಾಕ್ಷಿಪ್ರಜ್ಞೆ ಅಸ್ತಂಗತವಾದಂತಾಗಿದೆ.
ನನ್ನಂಥ ಅನೇಕರಿಗೆ ಡಾ. ಕೆ ಆರ್ ಶೆಟ್ಟಿ ನರವಿಜ್ಞಾನ ಹಾಗೂ ವೈದ್ಯ ವಿಜ್ಞಾನದ ಗುರುಗಳಾಗಿದ್ದುದಷ್ಟೇ ಅಲ್ಲ, ವೈದ್ಯ ವೃತ್ತಿಯ ಉದಾತ್ತ ಧ್ಯೇಯೋದ್ದೇಶಗಳು ಮತ್ತು ವೃತ್ತಿ ಸಂಹಿತೆಗಳ ಪಾಲನೆಯ ಬಗ್ಗೆ ಮಾದರಿಯಾಗಿದ್ದರು. ಭಾಷಣ-ಉಪದೇಶಗಳಲ್ಲಿ ಉದ್ದುದ್ದ ಬೋಧಿಸಿ, ಸ್ವಂತ ಆಚರಣೆಗಳಲ್ಲಿ ಅವಕ್ಕೆ ತದ್ವಿರುದ್ಧವಾಗಿ ವರ್ತಿಸುವವರೇ ಹೆಚ್ಚಿರುವ ಈ ಲೋಕದಲ್ಲಿ ಅದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ ಡಾ. ಕೆ ಆರ್ ಶೆಟ್ಟಿಯವರು ಬರೇ ಬಾಯಿಮಾತಿನ ಭಾಷಣ-ಉಪದೇಶಗಳ ಬದಲಿಗೆ ತನ್ನ ಜೀವನ ಹಾಗೂ ಆಚರಣೆಗಳಿಂದಲೇ ಎಲ್ಲವನ್ನೂ ಬೋಧಿಸಿದ್ದವರಾಗಿದ್ದರು. ನನ್ನ ಪಾಲಿಗಂತೂ ಅವರು ವಿದ್ಯಾರ್ಥಿ ದೆಸೆಯಿಂದಲೇ ಅತ್ಯಂತ ಪ್ರೀತಿಯ ಗುರುಗಳೂ, ಮಾರ್ಗದರ್ಶಕರೂ ಆಗಿದ್ದರು.
ಈಗ ಉಡುಪಿ ಜಿಲ್ಲೆಯಲ್ಲಿರುವ ಕಾಪುವಿನಲ್ಲಿ ಜಮೀನ್ದಾರ ಕುಟುಂಬದಲ್ಲಿ 1936ರಲ್ಲಿ ಹುಟ್ಟಿದ್ದ ರಾಧಾಕೃಷ್ಣ ಶೆಟ್ಟಿಯವರು ತನ್ನ ವ್ಯಕ್ತಿತ್ವವನ್ನು ರೂಪಿಸಿದ್ದು ತನ್ನ ಹೆತ್ತವರು ಎಂದು ತನ್ನ ಸಂಕ್ಷಿಪ್ತ ಆತ್ಮ ವೃತ್ತಾಂತದಲ್ಲಿ ಹೇಳಿಕೊಂಡಿದ್ದರು. ಅವರ ತಂದೆ ತನಗೆ ಸಿಕ್ಕಿದ್ದ ಏಳು ಎಕರೆ ಭೂಮಿಯಲ್ಲಿ ಹಣ್ಣಿನ ಗಿಡಗಳನ್ನು, ಅದರಲ್ಲೂ ವಿಶೇಷವಾಗಿ ಜಿಲ್ಲೆಯಲ್ಲೇ ಮೊದಲಿಗೆ ಚಿಕ್ಕು ಹಣ್ಣಿನ ಗಿಡಗಳನ್ನು, ನೆಟ್ಟು ಯಶಸ್ವಿಯಾಗಿ ಬೆಳೆಸಿದ್ದರು, ಬಳಿಕ 300 ಎಕರೆಗಳಷ್ಟು ದೊಡ್ಡದಾಗಿ ವಿವಿಧ ಹಣ್ಣುಗಳ ತೋಟವನ್ನೇ ಬೆಳೆಸಿ, ತೋಟಗಾರಿಕೆಯೂ ಲಾಭದಾಯಕ ಉದ್ದಿಮೆಯೆಂದು ತೋರಿಸಿಕೊಟ್ಟಿದ್ದರು. ಅವರ ಸಾಧನೆಗೆ ಮೆಚ್ಚಿ ಅಂದಿನ ಬ್ರಿಟಿಷ್ ಅಧಿಕಾರಿಯೊಬ್ಬರು 1000 ಎಕರೆ ಭೂಮಿಯನ್ನು ನೀಡಲು ಮುಂದಾದಾಗ, ಇದ್ದ ಆಸ್ತಿಗೇ ಬೇಲಿ ಹಾಕಲು ಹಣವಿಲ್ಲದವನಿಗೆ ಸಾವಿರ ಎಕರೆ ಅತಿಯಾಯಿತೆಂದು ನಿರಾಕರಿಸಿದ್ದರು. ಮುಂದೆ ಈ ಹಣ್ಣುಗಳ ತಿರುಳನ್ನು ಸಂರಕ್ಷಿಸಿ ಮಾರುವ ಭಾರತ್ ಕ್ಯಾನಿಂಗ್ ಕಂಪೆನಿಯನ್ನು ಸ್ಥಾಪಿಸಿ ಯಶಸ್ವಿಯಾಗಿ ನಡೆಸಿದ್ದರು. ತಂದೆಯವರ ನಿಧನಾನಂತರ ತನ್ನ ತಾಯಿಗೆ ಈ ತೋಟವನ್ನೂ, ಉದ್ದಿಮೆಯನ್ನೂ ಮುನ್ನಡೆಸುವಲ್ಲಿ ಯುವ ರಾಧಾಕೃಷ್ಣ ಶೆಟ್ಟಿ ನೆರವಾಗುತ್ತಿದ್ದರು.
ಕಲಿಕೆಯಲ್ಲಿ ಮುಂದಿದ್ದ ರಾಧಾಕೃಷ್ಣ ಶೆಟ್ಟರು 1953ರಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆದರು. ಅಲ್ಲಿ ಮಂಗಳೂರಿನ ಎವಿ ಶೆಟ್ಟಿ (ಮುಂದೆ ಮಂಗಳೂರಿನ ಖ್ಯಾತ ಹೃದ್ರೋಗ ತಜ್ಞರಾದವರು), ಸಿ ಆರ್ ಕಾಮತ್ (ಮುಂದೆ ಮಂಗಳೂರಿನ ಖ್ಯಾತ ನೇತ್ರ ತಜ್ಞರಾದವರು), ನರಸಿಂಹ ಸೋಮಯಾಜಿ (ನನ್ನ ಸೋದರ ಮಾವ, ಮುಂದೆ ಅಮೆರಿಕದಲ್ಲಿ ಮೊದಲ ಪಚನಾಂಗ ತಜ್ಞರಲ್ಲಿ ಒಬ್ಬರಾದವರು) ಮುಂತಾದವರು ಡಾ. ಕೆ ಆರ್ ಶೆಟ್ಟಿಯವರ ಸಹಪಾಠಿಗಳಾಗಿದ್ದರು, ಆಪ್ತರಾಗಿಯೇ ಉಳಿದಿದ್ದರು.
ಮದ್ರಾಸಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಬಳಿಕ ಡಾ. ಕೆ ಆರ್ ಶೆಟ್ಟಿ ಮುಂಬಯಿಯ ಗ್ರಾಂಟ್ ಮೆಡಿಕಲ್ ಕಾಲೇಜಿನಲ್ಲಿ ಖ್ಯಾತ ನರರೋಗ ತಜ್ಞ ಡಾ. ವಾಡಿಯಾ ಅವರಡಿಯಲ್ಲಿ ಕಲಿತು ನರರೋಗ ತಜ್ಞರಾದರು, 1963ರಲ್ಲಿ ಮಂಗಳೂರಿಗೆ ಮರಳಿ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಡಿಯಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ತಜ್ಞರಾಗಿ ಸೇರಿದರು.
ಬ್ರಿಟಿಷರ ಕಾಲದಲ್ಲಿ 1848ರಲ್ಲಿ ಸರಕಾರಿ ಆಸ್ಪತ್ರೆಯಾಗಿ ಆರಂಭಗೊಂಡಿದ್ದ ವೆನ್ಲಾಕ್ ಆಸ್ಪತ್ರೆಯನ್ನು 1953ರಲ್ಲಿ ಖಾಸಗಿ ವಲಯದಲ್ಲಿ ಆರಂಭಗೊಂಡಿದ್ದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿಗೆ (ಕೆಎಂಸಿ) ಚಿಕಿತ್ಸಾ ತರಬೇತಿಗಾಗಿ ನೀಡಲಾಗಿತ್ತು. ಅಂದಿನಿಂದ ಇಂದಿನವರೆಗೆ ವೆನ್ಲಾಕ್ ಆಸ್ಪತ್ರೆಯು ಅತ್ತ ಸರಕಾರದ ಮಟ್ಟಿಗೆ ಕೇವಲ ಜಿಲ್ಲಾಸ್ಪತ್ರೆಯಾಗಿ, ಇತ್ತ ಖಾಸಗಿ ಕೆಎಂಸಿಯ ಪಾಲಿಗೆ ಕೇವಲ ಸರಕಾರಿ ಆಸ್ಪತ್ರೆಯಷ್ಟೇ ಆಗಿ ಹೊಯ್ದಾಡುತ್ತಲೇ ಇದೆ.
ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣದ ಅವಕಾಶದ ಕಾರಣಕ್ಕೋ ಏನೋ, ಅರುವತ್ತರ ದಶಕದಲ್ಲಿ ಅನೇಕ ತಜ್ಞ ವೈದ್ಯರು ಮಂಗಳೂರಿಗೆ ಬಂದರು, ಕೆಎಂಸಿಯನ್ನು ಸೇರಿ ವೆನ್ಲಾಕ್ ನಲ್ಲಿ ಕಲಿಸತೊಡಗಿದರು. ಆದರೆ ಕಾಲೇಜಿನ ಲೆಕ್ಕದಲ್ಲಿ ಅವರಿಗೆ ಕೇವಲ ನೂರಿನ್ನೂರು ರೂಪಾಯಿ ಸಂಬಳವಷ್ಟೇ ಇದ್ದು, ಜೀವನಕ್ಕಾಗಿ ಅವರೆಲ್ಲರೂ ತಮ್ಮ ಖಾಸಗಿ ವೈದ್ಯಕೀಯ ವೃತ್ತಿಯನ್ನೇ ಅವಲಂಬಿಸಬೇಕಿತ್ತು. ಡಾ. ಕೆ ಆರ್ ಶೆಟ್ಟರು 1963ರಲ್ಲಿ ಕೆಎಂಸಿ-ವೆನ್ಲಾಕ್ ಸೇರಿದಾಗ ಇದೇ ಸನ್ನಿವೇಶವಿತ್ತು.
ಇನ್ನಷ್ಟು ಕಲಿಯುವ ಹಂಬಲವಿದ್ದ ಡಾ. ಕೆ ಆರ್ ಶೆಟ್ಟರು ನಾಲ್ಕೇ ವರ್ಷಗಳಲ್ಲಿ ಮಂಗಳೂರನ್ನು ಬಿಟ್ಟು ನರವಿಜ್ಞಾನದಲ್ಲಿ ಉನ್ನತ ವ್ಯಾಸಂಗಕ್ಕೆ ಇಂಗ್ಲೆಂಡಿಗೆ ಹೋದರು. ಮಂಗಳೂರಲ್ಲಿ ಕೆಲಸ ಮಾಡಿದ ಆ 4 ವರ್ಷಗಳಲ್ಲಿ ತಾನು ಮೊದಲು ಮದರಾಸು-ಮುಂಬಯಿಗಳಲ್ಲಿ ಕಲಿತದ್ದನ್ನು ಮರೆತು ಬಿಟ್ಟಿದ್ದೆನೇನೋ ಎನ್ನುವ ಸಂಶಯವು ಇಂಗ್ಲೆಂಡಿನಲ್ಲಿ ಕೆಲಸ ಮಾಡತೊಡಗಿದಾಗ ತನಗೆ ಮೂಡಿತ್ತು ಎಂದು ಡಾ. ಕೆ ಆರ್ ಶೆಟ್ಟಿ ಬರೆದುಕೊಂಡಿದ್ದಾರೆ.
ಇಂಗ್ಲೆಂಡಿನಲ್ಲಿ ಮೂರು ವರ್ಷಗಳ ವ್ಯಾಸಂಗದ ಬಳಿಕ ಡಾ. ಕೆ ಆರ್ ಶೆಟ್ಟಿ ಮತ್ತೆ ತನ್ನೂರಿನ ತುಡಿತಕ್ಕೊಳಗಾಗಿ ಮಂಗಳೂರಿಗೆ ಬಂದರು, ಮತ್ತೆ ಕೆಎಂಸಿ-ವೆನ್ಲಾಕ್ ಸೇರಿದರು. ಅದೇ ಕಾಲದಲ್ಲಿ ಇಂಗ್ಲೆಂಡಿನಲ್ಲೇ ಉನ್ನತ ವ್ಯಾಸಂಗ ಮಾಡಿ ಹೃದ್ರೋಗ ತಜ್ಞರಾಗಿದ್ದ ಡಾ. ಎವಿ ಶೆಟ್ಟಿ, ಹೃದಯದ ಶಸ್ತ್ರಚಿಕಿತ್ಸಕರಾಗಿದ್ದ ಡಾ. ಎಸ್ ಆರ್ ಉಳ್ಳಾಲ್, ಮಿದುಳು ಹಾಗೂ ನರ ಶಸ್ತ್ರಚಿಕಿತ್ಸಕರಾಗಿದ್ದ ಡಾ. ಕೋದಂಡರಾಮ್ ಕೂಡ ಅದೇ ಸಮಯದಲ್ಲಿ ಕೆಎಂಸಿ-ವೆನ್ಲಾಕ್ ಸೇರಿದ್ದರು. ಇಂಥ ಉನ್ನತ ತಜ್ಞರು ಸೇವೆಗಾಗಿ ಸೇರಿದ್ದರೂ ಅವರಿಗೆ ಅಗತ್ಯವಿದ್ದ ಉಪಕರಣಗಳಾಗಲೀ, ವ್ಯವಸ್ಥೆಗಳಾಗಲೀ ವೆನ್ಲಾಕ್ ಆಸ್ಪತ್ರೆಯಲ್ಲಿ ಲಭ್ಯವಿರಲಿಲ್ಲ. ಕೇವಲ ಜಿಲ್ಲಾಸ್ಪತ್ರೆಯಲ್ಲಿ ಅವನ್ನೆಲ್ಲ ಕೊಡಲಾಗದೆಂದು ಸರಕಾರ ಹೇಳಿದರೆ, ಅಷ್ಟು ಹೊತ್ತಿಗೆ ಮಣಿಪಾಲದಲ್ಲಿ ತನ್ನದೇ ಆಸ್ಪತ್ರೆ ತೆರೆದಿದ್ದ ಕೆಎಂಸಿಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಇಂಥ ಉನ್ನತ ಸೌಲಭ್ಯಗಳಿಗೆ ಖರ್ಚು ಮಾಡುವ ಅಗತ್ಯ ಕಾಣಿಸಿಲ್ಲದೇ ಹೋಗಿರಬಹುದು. ಅಂತೂ ದೇಶ-ವಿದೇಶಗಳಲ್ಲಿ ಅತ್ಯುನ್ನತವಾದ, ವಿಶೇಷ ವ್ಯಾಸಂಗಗಳನ್ನೆಲ್ಲ ಮಾಡಿ ಮಂಗಳೂರಿಗೆ ಹೊಸ ಹುರುಪಿನೊಂದಿಗೆ ಬಂದಿದ್ದ ಈ ವಿಶೇಷ ತಜ್ಞರಿಗೆ ಎಲ್ಲಿಂದಲೂ ಉತ್ತೇಜನ ದೊರೆಯದಾಯಿತು.
ಇಂಥ ಸನ್ನಿವೇಶದಲ್ಲಿ ತಾವು ಪಡೆದಿದ್ದ ಅತ್ಯುನ್ನತ ಕೌಶಲವನ್ನು ತಮ್ಮೂರಿನ ಜನರಿಗೆ ಒದಗಿಸುವ ಹಠದಿಂದ ಡಾ. ಕೆ ಆರ್ ಶೆಟ್ಟಿ ಅವರ ನೇತೃತ್ವದಲ್ಲಿ ಈ ಯುವ ವೈದ್ಯರೆಲ್ಲರೂ ಹೊಸ ಸಾಹಸಕ್ಕೆ ಕೈಹಾಕಿದರು, ಆಗಲೇ ಇದ್ದ ಶಿಶು ತಜ್ಞ ಡಾ ಪಿ ಎನ್ ಕೃಷ್ಣಮೂರ್ತಿ, ಶಸ್ತ್ರ ಚಿಕಿತ್ಸಾ ತಜ್ಞ ಡಾ ಕೆ ಆರ್ ಬಲ್ಲಾಳ್ ಮುಂತಾದವರೂ ಜೊತೆಯಾದರು. ಆಗ ವೆನ್ಲಾಕ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿದ್ದ ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಪಿ ಎನ್ ಆರಿಗ ಅವರ ಮನವೊಲಿಸುವಲ್ಲಿ ಈ ವೈದ್ಯರು ಯಶಸ್ವಿಯಾದರು. ಊರು-ಪರವೂರುಗಳ ದಾನಿಗಳನ್ನು ಕಾಡಿ ಬೇಡಿ ಹಣ ಸಂಗ್ರಹಿಸಿ ಮಂಗಳೂರು ಮೆಡಿಕಲ್ ರಿಲೀಫ್ ಸೊಸೈಟಿ (ಎಂಎಂಆರ್ ಎಫ್) ಎಂಬ ಸಂಸ್ಥೆಯನ್ನು ಸ್ಥಾಪಿಸಿಬಿಟ್ಟರು. ದೇಶದಲ್ಲೇ ಮೊದಲ ಬಾರಿಗೆ ಸರಕಾರಿ ಜಿಲ್ಲಾಸ್ಪತ್ರೆಯೊಂದರಲ್ಲಿ ಪರಿಣತ ವೈದ್ಯರೇ ತಾವಾಗಿ ಜನರ ನೆರವಿನೊಂದಿಗೆ ಅತ್ಯುನ್ನತ ಸೌಲಭ್ಯಗಳನ್ನು ಸ್ಥಾಪಿಸಲು ಹೊರಟ ಈ ಯೋಜನೆಯನ್ನು ಆಗಿನ ರಾಷ್ಟ್ರಪತಿಗಳಾಗಿದ್ದ ಶ್ರೀ ವಿವಿ ಗಿರಿಯವರು ಜನವರಿ 26, 1971ರಂದು ಉದ್ಘಾಟಿಸಿದರು.
ವೆನ್ಲಾಕ್ ನಲ್ಲಿ ನಾಲ್ಕು ವಿಶೇಷ ಘಟಕಗಳನ್ನು ಸ್ಥಾಪಿಸಲು ವೈದ್ಯರೇ ಹಠತೊಟ್ಟು ಸಂಸ್ಥೆಯೇನೋ ಹುಟ್ಟಿತು, ಆದರೆ ಸಮಸ್ಯೆಗಳು ಹೆಚ್ಚಾದವು! ನರರೋಗ ಚಿಕಿತ್ಸೆ, ಮಿದುಳು ಹಾಗೂ ನರಗಳ ಶಸ್ತ್ರಚಿಕಿತ್ಸೆ, ಹೃದ್ರೋಗ ಚಿಕಿತ್ಸೆ ಹಾಗೂ ಹೃದ್ರೋಗ ಶಸ್ತ್ರಚಿಕಿತ್ಸೆಗಳ ನಾಲ್ಕು ಘಟಕಗಳಿಗೆ 80 ಹಾಸಿಗೆಗಳ ವಿಭಾಗವನ್ನು ಒದಗಿಸಲು ಕೆಎಂಸಿ ಸಿದ್ಧವಾಗಲಿಲ್ಲ. ಈ ವೈದ್ಯರು ಸರಕಾರವನ್ನು ಬೆಂಬತ್ತಿದರು, ಅದಕ್ಕೆ ನಿಮ್ಹಾನ್ಸ್ ನ ಸ್ಥಾಪಕ ನಿರ್ದೇಶಕ ಡಾ. ಆರ್ ಎಂ ವರ್ಮಾ ಮತ್ತು ಹೃದಯ ಶಸ್ತ್ರಚಿಕಿತ್ಸಕರೊಬ್ಬರ ಸಮಿತಿಯನ್ನು ರಚಿಸಲಾಯಿತು; ವೆನ್ಲಾಕ್ ನಲ್ಲಿ ಇಂಥ ವಿಶೇಷ ಘಟಕಗಳ ಅಗತ್ಯವು ಖಂಡಿತಕ್ಕೂ ಇದೆ, ಮಾತ್ರವಲ್ಲ, ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ ಅಂಥ ಘಟಕಗಳಾಗಬೇಕು ಎಂದು ಡಾ. ವರ್ಮಾ ಸರ್ಕಾರಕ್ಕೆ ಹೇಳಿದರು. ಆದರೆ ಭ್ರಷ್ಟ ಅಧಿಕಾರಿಗಳ ಅಡ್ಡಗಾಲು ಮುಂತಾದ ಸಮಸ್ಯೆಗಳು ಎದುರಾದವು, ಸುಮಾರು 17 ಸಲ ಡಾ. ಕೆ ಆರ್ ಶೆಟ್ಟಿ ಮತ್ತಿತರರು ಬೆಂಗಳೂರಿಗೆ ಹೋಗಬೇಕಾಯಿತು. ಕೊನೆಗೆ ಉಳ್ಳಾಲ ಶ್ರೀನಿವಾಸ ಮಲ್ಯರ ನೆನಪಿನಲ್ಲಿ ಅವರ ಹೆಸರಿನ ಟ್ರಸ್ಟ್ ಅಧ್ಯಕ್ಷರಾಗಿದ್ದ ಮಣೇಲ್ ಶ್ರೀನಿವಾಸ ನಾಯಕರು ಮೂರು ಲಕ್ಷ ರೂಪಾಯಿ ಒದಗಿಸಿದರು, ಅದಕ್ಕಿಂತಲೂ ಬಹು ದೊಡ್ಡ ಮೊತ್ತವನ್ನು ಸರಕಾರ ಒದಗಿಸಿತು, ವೆನ್ಲಾಕ್ ಆಸ್ಪತ್ರೆಯ ಹೊರರೋಗಿ ವಿಭಾಗದ ಮೇಲೆ ಇನ್ನೊಂದು ಮಹಡಿಯನ್ನೇ ಕಟ್ಟಿ ಅಲ್ಲಿ ಈ ನಾಲ್ಕು ಘಟಕಗಳನ್ನೂ, ಅವಕ್ಕೆ ಅಗತ್ಯವಾದ ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿಯನ್ನೂ ನಿರ್ಮಿಸಿ ಹೊಸ ಸೂಪರ್ ಸ್ಪೆಷಾಲಿಟಿ ವಿಭಾಗವನ್ನು ನಿರ್ಮಿಸಲಾಯಿತು. ತೆರೆದ ಹೃದಯದ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಹಾರ್ಟ್-ಲಂಗ್ ಮೆಷಿನ್ ಅನ್ನು 35000 ರೂ ವೆಚ್ಚದಲ್ಲಿ ಖರೀದಿಸಲಾಯಿತು, ಅದನ್ನು ಬಳಸಲು ತರಬೇತಿ ನೀಡಲು ಲಂಡನ್ನಿನ ಹಾರ್ ಫೀಲ್ಡ್ ಆಸ್ಪತ್ರೆಯ ತಂತ್ರಜ್ಞರು ಬಂದರು, ರೋಗತಜ್ಞ ಡಾ. ಟಿಎ ಬೈಲೂರ್ ಅವರು ಅದರಲ್ಲಿ ತರಬೇತಾದರು. ಈ ವಿಶೇಷ ಘಟಕವನ್ನು ಜನವರಿ 3, 1975ರಂದು ಆಗಿನ ಉಪರಾಷ್ಟ್ರಪತಿ ಶ್ರೀ ಬಿಡಿ ಜತ್ತಿಯವರು ಉದ್ಘಾಟಿಸಿದರು.
ಡಾ ಕೆ ಆರ್ ಶೆಟ್ಟಿಯವರ ಹಠಬಿಡದ ಪ್ರಯತ್ನಗಳಿಂದ, ದೇಶದಲ್ಲೇ ಮೊದಲಿಗೆ, ಜಿಲ್ಲಾಸ್ಪತ್ರೆಯೊಂದರಲ್ಲಿ, ಖಾಸಗಿ ವೈದ್ಯರ ಮುತುವರ್ಜಿಯಿಂದ, ದಾನಿಗಳ ನೆರವಿನಿಂದ, ಜನವರಿ 1975ರಲ್ಲಿ ಸೂಪರ್ ಸ್ಪೆಷಾಲಿಟಿ ವಿಭಾಗವು ಉದ್ಘಾಟಿಸಲ್ಪಟ್ಟಿತಾದರೂ, ಅದಕ್ಕೆ ಕಾರಣಕರ್ತರಾದ ಡಾ ಕೆ ಆರ್ ಶೆಟ್ಟಿ ಅದೇ 1975ರ ಮೇ ತಿಂಗಳಲ್ಲಿ ಮಂಗಳೂರನ್ನು ಬಿಟ್ಟು ಅಮೆರಿಕಾಕ್ಕೆ ತೆರಳುವಂತಾಯಿತು! ಈ ಅಪಾರ ಪರಿಶ್ರಮದಿಂದ ಡಾ. ಕೆ ಆರ್ ಶೆಟ್ಟಿ ಸಾಕಷ್ಟು ಒತ್ತಡಕ್ಕೊಳಗಾಗಿದ್ದರು, ಜೊತೆಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತದಿಂದಲೂ ಅವರಿಗೆ ಸಮಸ್ಯೆಗಳಾದವು, ಅವರನ್ನು ‘ನಿಗಾವಣೆಯ ಪಟ್ಟಿ’ಯಲ್ಲಿ ಹಾಕಲಾಯಿತು! ಇವೆಲ್ಲದರಿಂದ ಬೇಸತ್ತು ಮಂಗಳೂರನ್ನು ತೊರೆದು ಅಮೆರಿಕಾಕ್ಕೆ ಹೋಗಲು ಡಾ. ಕೆ ಆರ್ ಶೆಟ್ಟಿ ನಿರ್ಧರಿಸಿದ್ದರು.
ಮೂರು ವರ್ಷಕ್ಕೂ ಹೆಚ್ಚು ಕಾಲ ಅಮೆರಿಕಾದಲ್ಲಿ ನರವಿಜ್ಞಾನದ ಅತ್ಯಾಧುನಿಕ ಬೆಳವಣಿಗೆಗಳ ಬಗ್ಗೆ, ಆಗಷ್ಟೇ ಬಳಕೆಗೆ ಬರತೊಡಗಿದ್ದ ಸಿಟಿ ಸ್ಕಾನ್, ಎಂಆರ್ ಐ ಮುಂತಾದ ತಂತ್ರಜ್ಞಾನಗಳ ಬಗ್ಗೆ ತರಬೇತಿಯನ್ನೂ, ಅನುಭವವನ್ನೂ ಗಳಿಸಿಕೊಂಡು, ಡಾ. ಕೆ ಆರ್ ಶೆಟ್ಟಿ ಮತ್ತೆ ಮಂಗಳೂರಿಗೆ ಮರಳಿದರು. ವೆನ್ಲಾಕ್ ಆಸ್ಪತ್ರೆಯ ಸೆಳೆತ ಅವರನ್ನು ಬಿಡಲಿಲ್ಲ.
ವೆನ್ಲಾಕ್ ಆಸ್ಪತ್ರೆಯಲ್ಲಿ ಮತ್ತೆ ಎಂಎಂಆರ್ ಎಫ್ ಅನ್ನು ಬಲಪಡಿಸುವ ಶ್ರಮ ಅವರಿಂದಾಯಿತು, ಮೂತ್ರಾಂಗಗಳ ಶಸ್ತ್ರಚಿಕಿತ್ಸೆ ಹಾಗೂ ಮಕ್ಕಳ ಶಸ್ತ್ರಚಿಕಿತ್ಸೆಗಳ ವಿಭಾಗಗಳನ್ನು ಎಂಎಂಆರ್ ಎಫ್ ಪ್ರಯತ್ನದಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಆರಂಭಿಸಲಾಯಿತು. ಈಗ ಕೆಲವು ವರ್ಷಗಳ ಹಿಂದೆ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿ ಪ್ರತ್ಯೇಕವಾದ, ಸುಸಜ್ಜಿತವಾದ ಪ್ರಾದೇಶಿಕ ಮಕ್ಕಳ ಚಿಕಿತ್ಸಾ ಕೇಂದ್ರವನ್ನೂ, ಲೇಡಿ ಗೋಷನ್ ಆಸ್ಪತ್ರೆಯ ಅತ್ಯಾಧುನಿಕ ಸೌಲಭ್ಯಗಳನ್ನೂ ಎಂಎಂಆರ್ ಎಫ್ ಪ್ರಯತ್ನದಿಂದ ಆರಂಭಿಸಲಾಗಿದೆ.
ಕೆಎಂಸಿಯ ಆಡಳಿತವು ಎರಡನೇ ತಲೆಮಾರಿಗೆ ವರ್ಗಾವಣೆಯಾಗುವುದರೊಂದಿಗೆ ಡಾ. ಕೆ ಆರ್ ಶೆಟ್ಟಿಯವರ ಕೆಲಸಕ್ಕೆ ಇನ್ನಷ್ಟು ಮನ್ನಣೆ ದೊರೆತಂತೆ ಕಾಣುತ್ತದೆ; 1985ರಲ್ಲಿ ಅವರನ್ನು ಮಂಗಳೂರು ಕೆಎಂಸಿಯ ಉಪಪ್ರಾಂಶುಪಾಲರಾಗಿ ನೇಮಿಸಲಾಯಿತು.
ನಾನು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ 1982ರಿಂದ 88ರ ನಡುವೆ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದಾಗ ನರವಿಜ್ಞಾನದ ಬಗ್ಗೆ ಡಾ. ಕೆ ಆರ್ ಶೆಟ್ಟಿಯವರ ಮೃದು-ಮೆಲುದನಿಯ ಪಾಠಗಳನ್ನು ಕೇಳುವುದಕ್ಕೆ ಮೊದಲ ಸಾಲಲ್ಲೇ ಕುಳಿತುಕೊಳ್ಳುತ್ತಿದ್ದೆ. ಬಳಿಕ 1987ರಲ್ಲಿ ನಮ್ಮ ಇಂಟರ್ನ್ ಶಿಪ್ ಆರಂಭಗೊಂಡಾಗ ಸಮುದಾಯ ಆರೋಗ್ಯ ವಿಭಾಗದ ಇಂಟರ್ನ್ ಶಿಪ್ ಗೆ ಮೂಡಬಿದರೆ ಮತ್ತು ಉಳ್ಳಾಲಗಳ ಆರೋಗ್ಯ ಕೇಂದ್ರಗಳಲ್ಲೇ ಉಳಿದುಕೊಳ್ಳಬೇಕೆಂಬ ನಿಯಮವನ್ನು ಅದೇ ಮೊದಲ ಸಲ ಕಡ್ಡಾಯ ಮಾಡಲಾಯಿತು. ಮೂರು ತಿಂಗಳ ಕಾಲ ದಿನವಿಡೀ ಅಲ್ಲೇ ಇದ್ದು ಮಾಡುವುದೇನೆಂದು ಯೋಚಿಸಿ ಕಾಲೇಜಲ್ಲಿ ಎಲ್ಲೋ ಒಳಗಿಟ್ಟಿದ್ದ ಪ್ರೊಜೆಕ್ಟರ್ ಅನ್ನು ಹೊರತೆಗೆದು, ವಾರ್ತಾ ಇಲಾಖೆಯಿಂದ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳ ರೀಲುಗಳನ್ನು ತಂದು ಮೂಡಬಿದರೆ ಹಾಗೂ ಬಳಿಕ ಉಳ್ಳಾಲಗಳ ಎಲ್ಲಾ ಶಾಲೆಗಳಲ್ಲಿ ಅವನ್ನು ತೋರಿಸುವ ಕೆಲಸ ಮಾಡಿದೆವು. ಡಾ. ಕೆ ಆರ್ ಶೆಟ್ಟಿ ಅದನ್ನು ಬಹಳ ಮೆಚ್ಚಿ ಕೊಂಡಿದ್ದರು, ಉತ್ತೇಜಿಸಿದ್ದರು. ನಮ್ಮ ಪೋಸ್ಟಿಂಗ್ ಕೊನೆಯಲ್ಲಿ ಮೂಡಬಿದರೆಯಲ್ಲೂ, ಉಳ್ಳಾಲದಲ್ಲೂ ಆ ವಲಯಗಳ ಶಾಲಾ ಶಿಕ್ಷಕರಿಗೆ ಒಂದು ದಿನದ ತರಬೇತಿ ಶಿಬಿರಗಳನ್ನು ಆಯೋಜಿಸಿದ್ದೆವು. ಮೂಡಬಿದರೆಯಲ್ಲಿ ನಮ್ಮದೇ ಮೆಸ್ ನಲ್ಲಿ ಅವರಿಗೆ ಊಟದ ವ್ಯವಸ್ಥೆ ಮಾಡಿದ್ದೆವು. ಆದರೆ ಮಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ನಡೆಸಿದ ಕಾರ್ಯಕ್ರಮಕ್ಕೆ ಕಾಲೇಜು ಯಾ ವಿಭಾಗದ ವತಿಯಿಂದ ಊಟದ ವ್ಯವಸ್ಥೆ ಮಾಡಲು ಸಾಧ್ಯವಾಗದೆಂದು ಹೇಳಲಾಯಿತು. ಆಗ ಉಪ ಪ್ರಾಂಶುಪಾಲರಾಗಿದ್ದ ಡಾ. ಕೆ ಆರ್ ಶೆಟ್ಟಿಯವರು, ತಾನೇ ನೂರು ರೂಪಾಯಿ ನನ್ನ ಕೈಗೆ ಕೊಟ್ಟು, ತನ್ನ ಸಹೋದ್ಯೋಗಿಗಳಾಗಿದ್ದ ಡಾ. ಪಿ ಎನ್ ಕೃಷ್ಣಮೂರ್ತಿ, ಡಾ. ಕೆವಿ ದೇವಾಡಿಗ, ಡಾ. ಕೋದಂಡರಾಮ್, ಡಾ. ಎವಿ ಶೆಟ್ಟಿ, ಡಾ ಎಸ್ ಆರ್ ಉಳ್ಳಾಲ್ ಮತ್ತು ಡಾ. ಸಿಆರ್ ಕಾಮತ್ ಅವರಿಂದಲೂ ತಲಾ 100 ರೂ ಪಡೆಯುವಂತೆ ಹೇಳಿದರು, ಹೀಗೆ ನಮ್ಮ ಕಾರ್ಯಕ್ರಮವು ಸಾಂಗವಾಗಿ ನಡೆಯುವಂತೆ ನೆರವಾದರು. ಆಗ ಅವರೆಲ್ಲರಿಗೆ ಕಾಲೇಜು ಕೊಡುತ್ತಿದ್ದ ಮಾಸಿಕ ವೇತನ ಕೇವಲ 250 ರೂಪಾಯಿಯಷ್ಟೇ ಇತ್ತು, ತಮ್ಮ ಖಾಸಗಿ ವೈದ್ಯಕೀಯ ವೃತ್ತಿಯಿಂದಲೇ ಅವರೆಲ್ಲ ಸಂಪಾದಿಸಬೇಕಿತ್ತು; ಅಂತಲ್ಲಿ, ಕಾಲೇಜಿನ ವಿದ್ಯಾರ್ಥಿಗಳಾಗಿ ನಾವು ನಡೆಸಿದ್ದ ಕಾರ್ಯಕ್ರಮಕ್ಕೆ ಕಾಲೇಜು ಕೊಡದಿದ್ದ ಹಣವನ್ನು ತಾವು ಮತ್ತು ತಮ್ಮ ಮಿತ್ರರ ಸ್ವಂತ ಸಂಪಾದನೆಯಿಂದ ನಮಗೆ ಡಾ. ಕೆ ಆರ್ ಶೆಟ್ಟಿ ಒದಗಿಸಿದ್ದರು!
ಅದೇ ವರ್ಷದ ಕೊನೆಗೆ ಅಖಿಲ ಭಾರತ ಜನವಿಜ್ಞಾನ ಜಾಥಾ ನಡೆದಾಗ ಅದಕ್ಕೆ ಎಲ್ಲಾ ರೀತಿಯ ಸಹಕಾರ ಹಾಗೂ ನೆರವನ್ನು ಡಾ. ಕೆ ಆರ್ ಶೆಟ್ಟಿ ಒದಗಿಸಿದ್ದರು. ಆ ಕಾಲದಲ್ಲಿ ಸಾಮಾನ್ಯವಾಗಿ ಬಳಸುತ್ತಿದ್ದ ಸೈಕ್ಲೋಸ್ಟೈಲ್ ಪ್ರತಿಗಳನ್ನು ಮಾಡುವುದಕ್ಕೆ, ಮಾತ್ರವಲ್ಲ, ಆಗಷ್ಟೇ ಕಾಲೇಜಿಗೆ ಹೊಸದಾಗಿ ಬಂದಿದ್ದ ಜೆರಾಕ್ಸ್ ಯಂತ್ರವನ್ನು ಬಳಸಿಕೊಳ್ಳುವುದಕ್ಕೆ ಅವರು ಅನುಕೂಲ ಮಾಡಿಕೊಟ್ಟಿದ್ದರು.
ಇಂಟರ್ನ್ ಶಿಪ್ ಮುಗಿದ ಬಳಿಕ ಕಾಲೇಜಿನಲ್ಲಿ ತಾತ್ಕಾಲಿಕ ಹುದ್ದೆಯೊಂದಕ್ಕೆ ಅರ್ಜಿ ಹಾಕಿದ್ದೆ, ಮಾಡಿದ್ದ ಕೆಲಸವನ್ನು ಪರಿಗಣಿಸಿ ಅದು ಸಿಗಬಹುದೆಂಬ ವಿಶ್ವಾಸವೂ ಇತ್ತು. ಆದರೆ ಒಂದೆರಡು ವಾರ ಕಳೆದಾಗ ಡಾ. ಕೆ ಆರ್ ಶೆಟ್ಟಿ ಬರಹೇಳಿದರು, ಅಂದು ಅವರು ಪ್ರಭಾರ ಪ್ರಾಂಶುಪಾಲರಾಗಿ ಕುಳಿತಿದ್ದರು. ‘ನೀನು ತಾತ್ಕಾಲಿಕ ಹುದ್ದೆಗೆ ಸೇರಬೇಕಿದ್ದರೆ ಶರತ್ತುಗಳಿಗೆ ಒಪ್ಪಬೇಕಾಗುತ್ತದೆ’ ಎಂದರು. ಈ ಹಿಂದೆ ಅಂಥದ್ದನ್ನು ಕೇಳಿರಲಿಲ್ಲವಲ್ಲ ಎಂದದ್ದಕ್ಕೆ, ಈಗ ಕೇಳಿದ್ದಾರೆ, ಏನು ಮಾಡುತ್ತೀಯಾ ಎಂದು ಎಂದಿನ ವಾತ್ಸಲ್ಯದಿಂದಲೇ ಕೇಳಿದರು. ಸರ್, ಸ್ನಾತಕೋತ್ತರ ವ್ಯಾಸಂಗಕ್ಕೆ ಸೀಟು ಸಿಕ್ಕರೆ ಬಿಟ್ಟು ಹೋಗಲೇ ಬೇಕಾಗುತ್ತದೆ, ಶರತ್ತುಗಳಿಗೆ ಹೇಗೆ ಒಪ್ಪಲಿ ಎಂದೆ. ಹೋಗಿ ಚೆನ್ನಾಗಿ ಓದಿಕೋ ಎಂದು ಹೇಳಿ ಕಳಿಸಿಕೊಟ್ಟರು. ನಾನು ಕಣ್ಣಾನ್ನೂರಿನ ಆಸ್ಪತ್ರೆಯೊಂದರಲ್ಲಿ ತಾತ್ಕಾಲಿಕ ಕಿರಿಯ ವೈದ್ಯನಾಗಿ ಸೇರಿಕೊಂಡೆ. ಒಂದೆರಡು ತಿಂಗಳು ಕಳೆದು ಮನೆಗೆ ಬಂದಿದ್ದವನು ಹಾಗೆಯೇ ವೆನ್ಲಾಕ್ ಕಡೆ ಹೋಗಿದ್ದಾಗ ಡಾ. ಕೆ ಆರ್ ಶೆಟ್ಟಿ ಎದುರಾದರು. ಹೇಗಿದ್ದೀಯಾ, ಏನು ಮಾಡುತ್ತಿದ್ದೀಯಾ ಎಂದು ಕೇಳಿ, ನಾನೀಗ ಪ್ರಾಂಶುಪಾಲನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ, ನೀನು ಬಂದು ಸೇರಬಹುದು ಎಂದರು. ನನ್ನ ಮೇಲೆ ಅವರಿಟ್ಟಿದ್ದ ಪ್ರೀತಿ-ವಿಶ್ವಾಸಗಳಿಗೆ ವಂದಿಸಿ, ಕಣ್ಣಾನ್ನೂರಿನಲ್ಲೇ ಮುಂದುವರಿಯುತ್ತೇನೆ ಸರ್ ಎಂದಿದ್ದೆ.
ಡಾ. ಕೆ ಆರ್ ಶೆಟ್ಟಿ ಕೇವಲ ಎರಡೇ ವರ್ಷ ಪ್ರಾಂಶುಪಾಲರಾಗಿದ್ದರು, 1990ರಲ್ಲೇ ರಾಜೀನಾಮೆ ನೀಡಿದರು. ಪ್ರಾಂಶುಪಾಲನಾಗಿ ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರೂ, ತನ್ನ ಮಕ್ಕಳ ವಿದ್ಯಾಭ್ಯಾಸ, ವೈದ್ಯ ವೃತ್ತಿಯನ್ನು ನಿಭಾಯಿಸುವ ಸವಾಲುಗಳು ಮತ್ತು ಭಾಷಣ ಬಿಗಿಯುವಲ್ಲಿ ಎದುರಾಗುತ್ತಿದ್ದ ಒತ್ತಡಗಳಿಂದಾಗಿ ತಾನು ಪದತ್ಯಾಗ ಮಾಡಲು ನಿರ್ಧರಿಸಿದ್ದೆ ಎಂದು ಡಾ. ಕೆ ಆರ್ ಶೆಟ್ಟಿ ಬರೆದುಕೊಂಡಿದ್ದಾರೆ.
ಆ ಬಳಿಕ ಡಾ ಕೆ ಆರ್ ಶೆಟ್ಟಿ ಅಂಬೇಡ್ಕರ್ ವೃತ್ತದಲ್ಲಿರುವ ಮಣಿಪಾಲ ಸಮೂಹದ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ನ ಮುಖ್ಯಸ್ಥರಾಗಿ ಅದನ್ನು ಬೆಳೆಸುವುದಕ್ಕೆ ಎಂಟು ವರ್ಷ ದುಡಿದರು. ನಂತರ ಕೆಲವು ಹೊಸ ವೈದ್ಯಕೀಯ ಕಾಲೇಜುಗಳಿಗೆ ಸಲಹೆಗಾರರಾಗಿದ್ದರು.
ಮಂಗಳೂರಲ್ಲಿ ಮಲೇರಿಯಾ ಏರುತ್ತಿದ್ದಾಗ 1995ರಲ್ಲಿ ಅಂದಿನ ಜಿಲ್ಲಾಧಿಕಾರಿಯವರು ಮಲೇರಿಯಾ ನಿಯಂತ್ರಣ ಕ್ರಿಯಾ ಸಮಿತಿಯನ್ನು ರಚಿಸಿದ್ದರು. ಡಾ. ಕೆ ಆರ್ ಶೆಟ್ಟಿ ಮಲೇರಿಯಾ ನಿಯಂತ್ರಣ ಸಮಿತಿಯ ಮಾರ್ಗದರ್ಶಕರಲ್ಲೊಬ್ಬರಾಗಿದ್ದುಕೊಂಡು, ಕೊನೆಯವರೆಗೂ ಅದರ ಪ್ರಗತಿ ಹಾಗೂ ಸಾಧನೆಗಳ ಬಗ್ಗೆ ನಿಗಾ ವಹಿಸಿದ್ದರು. ಕೆಲವು ವರ್ಷಗಳ ಹಿಂದೆ ಮಲೇರಿಯಾ ನಿಯಂತ್ರಣಕ್ಕೆ ಮಂಗಳೂರಿಗೆ ಸೂಕ್ತವಾದ ತಂತ್ರಾಂಶವನ್ನು ರೂಪಿಸುವ ಯೋಜನೆಯನ್ನು ಮಾಡಿದಾಗ ಅದಕ್ಕೆ ಅಗತ್ಯ ಬಿದ್ದ ಹಣಕಾಸಿನ ನೆರವನ್ನು ನೀಡಲು ಡಾ. ಕೆ ಆರ್ ಶೆಟ್ಟಿಯವರು ಮಂಗಳೂರು ಮೆಡಿಕಲ್ ರಿಲೀಫ್ ಸೊಸೈಟಿಯ ಮೂಲಕ ವ್ಯವಸ್ಥೆ ಮಾಡಿದ್ದರು.
ನನ್ನ ಬಗ್ಗೆ ಡಾ ಕೆ ಆರ್ ಶೆಟ್ಟಿಯವರಿಗಿದ್ದ ಅಪಾರ ವಾತ್ಸಲ್ಯವನ್ನು ನೆನೆಯದಿರಲು ಸಾಧ್ಯವೇ ಇಲ್ಲ. ಹೊಸ ವೈದ್ಯಕೀಯ ಕಾಲೇಜಿನಲ್ಲಿ ನಾನೂ ಸೇರಿದ್ದಾಗ ಅಲ್ಲಿ ಕ್ಲಿನಿಕಲ್ ಸೊಸೈಟಿ, ನಿರಂತರ ಕಲಿಕಾ ಕಾರ್ಯಕ್ರಮಗಳು ಮತ್ತು ಕಾಲೇಜಿನ ಹೆಸರಲ್ಲೇ ಒಂದು ಜರ್ನಲ್ ಮಾಡುವಂತೆ ಅವರು ನನಗೆ ಒಂದು ಸಾಲಿನಲ್ಲಿ ಆಣತಿ ಮಾಡಿದ್ದರು, ಎಲ್ಲವನ್ನೂ ಮಾಡಿ ಅವರಿಂದ ಮೆಚ್ಚುಗೆ ಗಳಿಸಿದ್ದೆ. ಅಲ್ಲೊಂದು ಸಂಶೋಧನಾ ಕೇಂದ್ರವನ್ನು ಆರಂಭಿಸುವ ಯೋಜನೆಯಿಂದ ನಾನು ಹಿಂದೆ ಸರಿಯಬೇಕಾಗಿ ಬಂದಾಗ ಡಾ. ಕೆ ಆರ್ ಶೆಟ್ಟರು ನನಗೊಂದು ಈ ಮೇಲ್ ಮಾಡಿ, ನೀನು ಆಡಳಿತದೊಂದಿಗೆ ಸ್ವಲ್ಪ ಸುಧಾರಿಸಿಕೊಂಡು ಹೋಗಬೇಕು ಎಂಬರ್ಥದಲ್ಲಿ ಬರೆದಿದ್ದರು, ನನಗೆ ಅದು ಅತೀವ ಕಸಿವಿಸಿಯನ್ನುಂಟು ಮಾಡಿತ್ತಾದರೂ ಅವರಲ್ಲಿ ಏನನ್ನೂ ಹೇಳುವ ಧೈರ್ಯ ಮಾಡಲಿಲ್ಲ. ಕೊನೆಗೆ ನಾನು ಆ ಕಾಲೇಜಿಗೆ ರಾಜೀನಾಮೆಯಿತ್ತು ಹೊರನಡೆದು ಕೆಲವು ತಿಂಗಳುಗಳ ಬಳಿಕ ಡಾ. ಕೆ ಆರ್ ಶೆಟ್ಟರು ಕರೆ ಮಾಡಿ ‘ಹೇಗಿದ್ದೀಯಾ, ಕೆಲಸವೆಲ್ಲ ಹೇಗೆ ನಡೆಯುತ್ತಿದೆ’ ಎಂದಷ್ಟೇ ಕೇಳಿದ್ದು ನನ್ನ ಮನಸ್ಸನ್ನು ಸಂಪೂರ್ಣವಾಗಿ ಹಗುರಗೊಳಿಸಿಬಿಟ್ಟಿತ್ತು. ತೀರಾ ಇತ್ತೀಚಿನವರೆಗೂ ಹೀಗೆಯೇ ಮೂರ್ನಾಲ್ಕು ತಿಂಗಳುಗಳಿಗೊಮ್ಮೆ ಕರೆ ಮಾಡಿ ಅವರು ನನ್ನನ್ನು ವಿಚಾರಿಸಿಕೊಳ್ಳುತ್ತಿದ್ದರು, ಕೊರೋನ ಕಾಲದ ಘಟನೆಗಳ ಸಂದರ್ಭದಲ್ಲೂ ಹಾಗೆಯೇ ಅವರ ಕರೆ ಬಂದದ್ದು ಬಹಳಷ್ಟು ಧೈರ್ಯವನ್ನು ತುಂಬಿತ್ತು.
ಮಂಗಳೂರಿನಲ್ಲಿ ಆಧುನಿಕ ವೈದ್ಯವಿಜ್ಞಾನದ ಬೆಳವಣಿಗೆಗೆ, ಉತ್ತಮ ವೈದ್ಯರನ್ನು ಉತ್ತೇಜಿಸುವುದಕ್ಕೆ, ವೈಜ್ಞಾನಿಕ ಮನೋವೃತ್ತಿಯನ್ನು ಪ್ರೋತ್ಸಾಹಿಸುವುದಕ್ಕೆ, ರಾಜಿರಹಿತವಾಗಿ ವ್ಯವಸ್ಥೆಯನ್ನು ಎದುರಿಸಿ ಹಠದಿಂದ ಒಳ್ಳೆಯದನ್ನು ಸಾಧಿಸುವುದಕ್ಕೆ ಡಾ. ಕೆ ಆರ್ ಶೆಟ್ಟಿ ಹಾಕಿಕೊಟ್ಟಿರುವ ಮೇಲ್ಪಂಕ್ತಿಯನ್ನು ಮುಟ್ಟುವುದು ಸುಲಭವಲ್ಲ, ಅದರ ಒಂದಿಷ್ಟನ್ನಾದರೂ ಮಾಡಲು ಪ್ರಯತ್ನಿಸಿದರೆ ಅದುವೇ ಈ ನಮ್ಮ ಗುರುವಿಗೆ ನಾವು ನೀಡಬಹುದಾದ ಅತ್ಯುತ್ತಮ ನಮನವಾದೀತು.
Leave a Reply