ವೈದ್ಯ ವೇಷಧಾರಿಗಳ ಕೈಯಲ್ಲಿ ಕತ್ತರಿ

ವಾರ್ತಾಭಾರತಿ, ಡಿಸೆಂಬರ್ 11, 2020

https://varthabharati.in/article/2020_12_11/270763

ಭಾರತೀಯ ವೈದ್ಯಪದ್ಧತಿಗಳ ಕೇಂದ್ರ ಮಂಡಳಿಯು ಆಯುರ್ವೇದದಲ್ಲಿ ಸ್ನಾತಕೋತ್ತರ ಪದವಿಯ ನಿಯಮಗಳಲ್ಲಿ ತಿದ್ದುಪಡಿ ಮಾಡಿ ಕೆಲವೊಂದು ಶಸ್ತ್ರಕ್ರಿಯೆಗಳ ಹೆಸರುಗಳನ್ನು ಸೇರಿಸಿದ್ದಕ್ಕೆ ವಿರೋಧವಾಗಿ, ಅದು ಚಿಕಿತ್ಸಾಕ್ರಮಗಳ ‘ಮಿಶ್ರಪತಿ’ಯಾಗುತ್ತದೆ ಎಂದು ಖಂಡಿಸಿ, ಆಧುನಿಕ ವೈದ್ಯರ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಡಿಸೆಂಬರ್ 11 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.

ಐಎಂಎಯಿಂದ ಮಿಶ್ರಪತಿಗಳ ವಿರುದ್ಧ, ಆಯುಷ್ ವಿರುದ್ಧ, ನಕಲಿ ಚಿಕಿತ್ಸೆಯ ವಿರುದ್ಧ ಪ್ರತಿಭಟನೆಯಾಗುತ್ತಿರುವುದು ಇದೇ ಮೊದಲಲ್ಲ, ಕಡೆಯೂ ಅಲ್ಲ. ಎಲ್ಲಿಯವರೆಗೆ ನಮ್ಮ ಸರಕಾರಗಳು ಆಧುನಿಕ ವೈದ್ಯಕೀಯ ಚಿಕಿತ್ಸೆಗೂ, ಆಧುನಿಕ ಆರೋಗ್ಯ ಸೇವೆಗಳಿಗೂ ಹಣವೊದಗಿಸುವ ಬದಲು ಯಾರು ಯಾರನ್ನೋ ವೈದ್ಯರೆಂಬ ವೇಷ ಹಾಕಿಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಧನಲಾಭಕ್ಕೆ ಅವಕಾಶ ಮಾಡುತ್ತವೆಯೋ, ಎಲ್ಲಿಯವರೆಗೆ ಐಎಂಎ ಮತ್ತಿತರ ಸಂಘಟನೆಗಳು ಸರ್ಕಾರದೆದುರು ಗೋಣಾಡಿಸುತ್ತಾ ತಮ್ಮ ಆಸ್ಪತ್ರೆಗಳ ಲಾಭವನ್ನಷ್ಟೇ ಪರಿಗಣಿಸುತ್ತವೆಯೋ ಅಲ್ಲಿಯವರೆಗೆ ಇಂಥವು ನಡೆಯುತ್ತಲೇ ಇರುತ್ತವೆ. ಆದ್ದರಿಂದ ಈ ತಥಾಕಥಿತ ಪ್ರತಿಭಟನೆಯ ಬಗ್ಗೆ ಯಾರೂ ಹೆಚ್ಚು ಭ್ರಮಾಧೀನರಾಗದಿರುವುದೇ ಒಳ್ಳೆಯದು.

ಈ ಮುಷ್ಕರಕ್ಕೆ ಕಾರಣವಾಗಿರುವ ಹೊಸ ತಿದ್ದುಪಡಿಗಳ ಮೂಲ ನಿಯಮಗಳು ಕೂಡ ಹೊಸತೇನಲ್ಲ. ಆಯುರ್ವೇದದಲ್ಲಿ ಸ್ನಾತಕೋತ್ತರ ಪದವಿಯ ಈ ನಿಯಮಗಳು 1979ರಲ್ಲೇ ಬಂದರೆ, ಶಲ್ಯ (ಶಸ್ತ್ರಚಿಕಿತ್ಸೆ), ಶಾಲಾಕ್ಯ (ಶಿರೋಭಾಗಕ್ಕೆ ಸಲಕೆ – ಕಡ್ಡಿ – ಬಳಸಿ ಚಿಕಿತ್ಸೆ) ತಂತ್ರಗಳಲ್ಲಿ ಎಂಎಸ್ ಪದವೀಧರರು ಹೊರಬರತೊಡಗಿ ಮೂರು ದಶಕಗಳೇ ಕಳೆದವು. ಈ ಸ್ನಾತಕೋತ್ತರ ನಿಯಮಗಳಲ್ಲಿ [10(8)] ಶಲ್ಯ, ಶಾಲಾಕ್ಯ ಮತ್ತು ಪ್ರಸೂತಿ-ಸ್ತ್ರೀ ರೋಗ ವಿಶೇಷತೆಗಳಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುವ ವಿದ್ಯಾರ್ಥಿಯು ಪರೀಕ್ಷಾ ವಿಧಾನಗಳು, ಶಸ್ತ್ರಕ್ರಿಯಾ ವಿಧಾನಗಳು ಮತ್ತು ಚಿಕಿತ್ಸಾ ವಿಧಾನಗಳಲ್ಲಿ ತರಬೇತಿ ಪಡೆಯಬೇಕು ಎಂದಷ್ಟೇ ಹೇಳಲಾಗಿತ್ತು. ಈ 1979ರ ನಿಯಮಗಳಿಗೆ 40 ವರ್ಷಗಳ ಬಳಿಕ, ಈಗ 2020ರಲ್ಲಿ, ಉಪವಿಧಿ 10(9)ನ್ನು ಸೇರಿಸಿ, ಶಲ್ಯ ಮತ್ತು ಶಾಲಾಕ್ಯ ತಂತ್ರಗಳಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುವವರು ಯಾವೆಲ್ಲಾ ಶಸ್ತ್ರಕ್ರಿಯೆಗಳಲ್ಲಿ ತರಬೇತಿ ಪಡೆಯಬಹುದೆಂದು ನಿರ್ದಿಷ್ಟವಾಗಿ ಹೆಸರಿಸಲಾಗಿದೆ. ಅದನ್ನೇ ಈಗ ಐಎಂಎ ವಿರೋಧಿಸುತ್ತಿದೆ.

ಹೀಗೆ, 1979ರಲ್ಲಿ ಬಂದ ಆಯುರ್ವೇದದ ಸ್ನಾತಕೋತ್ತರ ವ್ಯಾಸಂಗದ ನಿಯಮಗಳಿಗೆ 2020ರಲ್ಲಿ ತಿದ್ದುಪಡಿ ಮಾಡಿ ಏನನ್ನು ಕಲಿಸಬೇಕೆಂದು ಪಟ್ಟಿ ಮಾಡಲಾಗುತ್ತದೆ ಎಂದಾದರೆ ಈ ಮೂರ್ನಾಲ್ಕು ದಶಕಗಳಲ್ಲಿ ಅದೇ ಆಯುರ್ವೇದದ ಎಂಎಸ್ ಪಡೆದವರಿಗೆ ಯಾವ ತರಬೇತಿಯನ್ನು ಯಾರಿಂದ ನೀಡಲಾಗಿತ್ತು, ಅವರು ಕಲಿತ ಶಸ್ತ್ರಕ್ರಿಯೆಗಳೇನು, ಅವರು ಪಡೆದ ಪದವಿಗಳ ಅರ್ಥವೇನು, ‘ಶಸ್ತ್ರಚಿಕಿತ್ಸಕರು’ ಎಂದು ಹೇಳಿಕೊಂಡು ಇಷ್ಟು ವರ್ಷಗಳಲ್ಲಿ ಅವರೆಲ್ಲರೂ ಮಾಡುತ್ತಿದ್ದುದೇನು, ಅವಕ್ಕೆಲ್ಲ ಅರಿವಳಿಕೆಯನ್ನೂ, ಪ್ರತಿಜೈವಿಕ ಔಷಧಗಳನ್ನೂ ಬಳಸಲಾಗಿತ್ತೇ, ಹೌದೆಂದಾದರೆ ಅದಕ್ಕೆ ಕಾನೂನಿನ ಮಾನ್ಯತೆ ಇತ್ತೇ ಎಂಬ ಹಲವಾರು ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ. ಈ ಬಗ್ಗೆ ಐಎಂಎ ಅಥವಾ ಆಧುನಿಕ ಶಸ್ತ್ರಚಿಕಿತ್ಸಾ ತಜ್ಞರ ಸಂಘಟನೆಗಳಿಗೆ ಅರಿವಿತ್ತೇ, ಅವೇನಾದರೂ ಇವನ್ನು ಪ್ರಶ್ನಿಸಿದ್ದವೇ, ಆಗ ಪ್ರಶ್ನಿಸಿರದಿದ್ದರೆ ಈಗ ಪ್ರಶ್ನಿಸುತ್ತಿರುವುದಕ್ಕೆ ಅರ್ಥವೇನು ಎಂದೂ ಕೇಳಬೇಕಾಗುತ್ತದೆ.

ಈ ತಿದ್ದುಪಡಿಗಳನ್ನು ಐಎಂಎ ಪ್ರಶ್ನಿಸಿ ತೋರಿಕೆಗಾಗಿ ಪ್ರತಿಭಟನೆಗಿಳಿದಿದ್ದರೆ, ಆಯುರ್ವೇದ ವೈದ್ಯರು ಅವನ್ನು ಸಹಜವಾಗಿಯೇ ಬೆಂಬಲಿಸುತ್ತಿದ್ದಾರೆ. ಈ ಸರಕಾರವು ಮಾಡುತ್ತಿರುವುದೆಲ್ಲವೂ ಸರಿಯೇ ಎಂದು ಬೆಂಬಲಿಸುವ ಆಧುನಿಕ ವೈದ್ಯರೂ, ಅವರಲ್ಲಿ ಶಸ್ತ್ರಚಿಕಿತ್ಸಕರೂ, ಕೂಡ ಸರಕಾರದ ಬೆಂಬಲಕ್ಕೆ ಎಂದಿನಂತೆ ನಿಂತಿದ್ದಾರೆ. ಈ ತಿದ್ದುಪಡಿಗಳನ್ನು ಬೆಂಬಲಿಸುತ್ತಿರುವ ಆಯುರ್ವೇದದವರು ಮತ್ತು ಅವರ ಜೊತೆಗೂಡಿರುವ ಆಧುನಿಕ ವೈದ್ಯರು ಎಷ್ಟು ಉಗ್ರರಾಗಿದ್ದಾರೆಂದರೆ ಆಯುರ್ವೇದವೇ ಆಧುನಿಕ ವಿಜ್ಞಾನದ ಅಪ್ಪ-ಅಮ್ಮ, ಆದ್ದರಿಂದ ಅದನ್ನು ಪ್ರಶ್ನಿಸುವುದು ಮಹಾದ್ರೋಹ ಎಂದೆಲ್ಲ ಕಿರುಚತೊಡಗಿದ್ದಾರೆ, ದಾವೆ ಹೂಡುವ ಬೆದರಿಕೆಗಳನ್ನೂ ಒಡ್ಡಿದ್ದಾರೆ!

ವೈದ್ಯವಿಜ್ಞಾನ ಯಾರ ಸೊತ್ತೂ ಅಲ್ಲ, ಆಯುರ್ವೇದ, ಯೋಗ ಇತ್ಯಾದಿಗಳು ಕೂಡ  ಯಾರ ಸೊತ್ತೂ ಅಲ್ಲ. ಆ ಕಾಲದ ಆಯುರ್ವೇದವು ಕೂಡ ಆಗಿನ ಮೆಸೊಪೊಟೋಮಿಯಾ, ಈಜಿಪ್ಟ್, ಗ್ರೀಸ್, ಚೀನಾಗಳ ವೈದ್ಯಕೀಯ ಪದ್ಧತಿಗಳನ್ನು ತನ್ನೊಳಗೆ ಸೇರಿಸಿಕೊಂಡಿತ್ತು, ಆಧುನಿಕ ವೈದ್ಯವಿಜ್ಞಾನವು ಕೂಡ ಆಯುರ್ವೇದವೂ ಸೇರಿದಂತೆ ಎಲ್ಲೆಡೆಗಳ ಜ್ಞಾನವನ್ನು ಹೀರಿಕೊಂಡೇ ಬೆಳೆಯಿತು. ಆಯುರ್ವೇದದಂಥ ಪ್ರಾಚೀನ ಪದ್ಧತಿಗಳು ಅಲ್ಲಲ್ಲೇ ನಿಂತವು, ಆಧುನಿಕ ವೈದ್ಯ ವಿಜ್ಞಾನವು ಮಾತ್ರ ಬೆಳೆಯುತ್ತಲೇ ಹೋಯಿತು. ಆದ್ದರಿಂದ ಆಯುರ್ವೇದವೇ ಶ್ರೇಷ್ಠ, ಎಲ್ಲದರ ತಂದೆ-ತಾಯಿ ಎಂದು ಹಕ್ಕು ಸಾಧಿಸುವುದರಲ್ಲಾಗಲೀ, ಈಗ ಆಯುರ್ವೇದ ಕಲಿತವರಿಗೆ ಆಧುನಿಕ ವೈದ್ಯವಿಜ್ಞಾನದ ಎಲ್ಲವುಗಳ ಮೇಲೆ ಅಧಿಕಾರವಿದೆ, ಅವರೂ ಅವೆಲ್ಲವನ್ನೂ ಮಾಡಬಹುದು ಎಂದು ವಾದಿಸುವುದರಲ್ಲಾಗಲೀ ಯಾವ ಅರ್ಥವೂ ಇಲ್ಲ. ಪ್ರಾಚೀನ ಆಯುರ್ವೇದಕ್ಕೆ ಆಧುನಿಕ ವೈದ್ಯವಿಜ್ಞಾನವನ್ನು ಬೆರೆಸುವುದೆಂದರೆ ಆ ಎರಡೂ ಪದ್ಧತಿಗಳಿಗೆ ಮಾತ್ರವಲ್ಲ, ಚಿಕಿತ್ಸೆಗಾಗಿ ಬರುವವರಿಗೂ ಮೋಸ, ಅನ್ಯಾಯ ಮಾಡಿದಂತಾಗುತ್ತದೆ.

ಆಯುರ್ವೇದದಲ್ಲಿ ಹೇಳಲಾಗಿರುವ ಶಲ್ಯ-ಶಾಲಾಕ್ಯ ತಂತ್ರಗಳೆಲ್ಲವೂ ಮೂರ್ನಾಲ್ಕು ಸಾವಿರ ವರ್ಷಗಳಷ್ಟು ಹಳೆಯವು. ಆ ಕಾಲದಲ್ಲಿ ಯುದ್ಧ-ಕಲಹಗಳಲ್ಲಾದ ಗಾಯಗಳಿಗೆ ಹೊಲಿಗೆ ಹಾಕುವುದು, ಮೂಳೆ ಮುರಿತಗಳನ್ನು ಸರಿಪಡಿಸುವುದು, ಕೀವು ತುಂಬಿದ ಗುಳ್ಳೆಗಳನ್ನು, ಕಾಣುವ ಗೆಡ್ಡೆಗಳನ್ನು ತೆಗೆಯುವುದು, ಮೂಲವ್ಯಾಧಿಗೆ ಚಿಕಿತ್ಸೆ, ಕರುಳು ಅಥವಾ ಮೂತ್ರ ಕೋಶಗಳು ಕಟ್ಟಿಕೊಂಡು ವಿಸರ್ಜನೆಗೆ ತೊಡಕಾಗಿ ಭೀಕರ ಕಷ್ಟಗಳಾದರೆ ಅವನ್ನು ಕೊರೆದು ಬಿಡಿಸುವುದು ಇವೇ ಮುಂತಾದ ಪ್ರಾಣವುಳಿಸುವ ಅನಿವಾರ್ಯ ಶಸ್ತ್ರಕ್ರಿಯೆಗಳನ್ನು, ಜೀವ ಹಿಂಡುವ ನೋವನ್ನು ಶಮನಗೊಳಿಸುವ ಶಸ್ತ್ರಕ್ರಿಯೆಗಳನ್ನು ಮಾತ್ರ ಮಾಡಲಾಗುತ್ತಿತ್ತು. ಅವುಗಳಲ್ಲಿ ಬದುಕಿದರೆ ಮಹಾ ಸಾಧನೆ, ಸತ್ತರೆ ವಿಫಲ ಪ್ರಯತ್ನ ಎಂದಷ್ಟೇ ಆಗುತ್ತಿತ್ತು. ಆ ಕಾಲದಲ್ಲಿ ಶಸ್ತ್ರಕ್ರಿಯೆಯ ನೋವನ್ನು ಮರೆಸಲು ಮದ್ಯಪೇಯಗಳು, ಅಫೀಮು, ಭಂಗಿ ಇತ್ಯಾದಿ ಅಮಲೇರಿಸುವ ಪದಾರ್ಥಗಳನ್ನು ಬಳಸಲಾಗುತ್ತಿತ್ತು.

ಈಗ ಸೇರಿಸಲಾಗಿರುವ ಹೊಸ ನಿಯಮಗಳಲ್ಲಿ ಈ ಶಸ್ತ್ರಕ್ರಿಯೆಗಳನ್ನೇ ಹೆಸರಿಸಿ ಪಟ್ಟಿ ಮಾಡಲಾಗಿದೆ. ಅವುಗಳ ಜೊತೆಗೆ, ಉದರ ತೆರೆಯುವುದು, ಪಿತ್ತ ಕೋಶ ತೆಗೆಯುವುದು ಇತ್ಯಾದಿ ಕೆಲವನ್ನೂ ಸೇರಿಸಲಾಗಿದೆ. ಮೂಲವ್ಯಾಧಿಯ ಚಿಕಿತ್ಸೆಗೆ ಲೇಸರ್ ಚಿಕಿತ್ಸೆ ಎಂಬುದನ್ನೂ, ಕಣ್ಣಿನ ಪೊರೆ ಚಿಕಿತ್ಸೆಯಲ್ಲಿ ಕೆಲವು ಅತ್ಯಾಧುನಿಕ ವಿಧಾನಗಳನ್ನೂ, ಕಣ್ಣಿನೊಳಗೆ ಮಸೂರವಿರಿಸುವುದನ್ನೂ ಈ ನಿಯಮಗಳಲ್ಲಿ ತೂರಿಸಲಾಗಿದೆ.

ಇಂಥ ತಿದ್ದುಪಡಿಗಳ ನಿಜವಾದ ಉದ್ದೇಶಗಳೇನಿರಬಹುದು? ಪ್ರಾಚೀನ ಶಲ್ಯ-ಶಾಲಾಕ್ಯ ತಂತ್ರಗಳನ್ನು ಆಧುನಿಕ ಶಸ್ತ್ರಕ್ರಿಯಾ ವಿಧಾನಗಳೊಂದಿಗೆ ಸಮೀಕರಿಸಿ ಅವುಗಳಿಗೆ ಕಾನೂನಿನ ಮಾನ್ಯತೆಯನ್ನು ಒದಗಿಸುವುದು ಈ ಹೊಸ ನಿಯಮಗಳ ಉದ್ದೇಶಗಳಲ್ಲೊಂದು. ಇತ್ತೀಚೆಗೆ ಮಹಾರಾಷ್ಟ್ರದ ಉಚ್ಚ ನ್ಯಾಯಾಲಯವು ಮಹಿಳೆಯೊಬ್ಬರ ಮೇಲೆ ಶಸ್ತ್ರಕ್ರಿಯೆ ನಡೆಸಿ ಅವರ ಸಾವಿಗೆ ಕಾರಣರಾದುದಕ್ಕೆ ಇಬ್ಬರು ಆಯುರ್ವೇದ ‘ಶಸ್ತ್ರಚಿಕಿತ್ಸಕರನ್ನು’ 10 ವರ್ಷಗಳ ಜೈಲುವಾಸಕ್ಕೆ ಕಳುಹಿಸಿದೆ, ಅರಿವಳಿಕೆ ನೀಡಿದ್ದ ಆಧುನಿಕ ವೈದ್ಯರನ್ನು ಮುಕ್ತಗೊಳಿಸಿದೆ. ಆ ಹಿನ್ನೆಲೆಯಲ್ಲಿ ಈ ನಿಯಮಗಳಾಗಿವೆ ಎಂಬ ವಾದಗಳಿವೆಯಾದರೂ, ಈ ಹೊಸ ನಿಯಮಗಳು ಇನ್ನು ಮುಂದೆ ತರಬೇತಾಗುವವರಿಗೆ ಅನ್ವಯವಾಗಬಹುದೇ ಹೊರತು, ಈಗಾಗಲೇ ಸ್ಪಷ್ಟ ತರಬೇತಿಯಿಲ್ಲದೆಯೇ ಆಯುರ್ವೇದದ ಎಂಎಸ್ ಪಡೆದವರಿಗೆ ಅನ್ವಯಿಸಲಾರದು. ಹಾಗಿದ್ದರೂ, ಈ ನಿಯಮಗಳ ಮೂಲಕ ಆಯುರ್ವೇದದಲ್ಲಿ ತರಬೇತಾದವರಿಗೆ ಆಧುನಿಕ ಆಸ್ಪತ್ರೆಗಳನ್ನೂ, ಅಲ್ಲಿನ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಸೌಲಭ್ಯಗಳನ್ನೂ ಬಳಸಿಕೊಳ್ಳುವುದಕ್ಕೆ, ಅಥವಾ ಆಧುನಿಕ ಆಸ್ಪತ್ರೆಗಳನ್ನು ನಡೆಸುವುದಕ್ಕೆ ಮಾನ್ಯತೆಯನ್ನು ಒದಗಿಸುವುದು ಉದ್ದೇಶವಾಗಿರಬಹುದು. ಶಲ್ಯ-ಶಾಲಾಕ್ಯಗಳು ಏನೇ ಇದ್ದರೂ ಅತಿ ಸೀಮಿತವಾಗಿರುವುದರಿಂದ ಮತ್ತು ಮಧ್ಯ, ಭಂಗಿ, ಅಫೀಮುಗಳನ್ನು ಬಳಸಿ ಈಗ ಶಸ್ತ್ರಕ್ರಿಯೆ ಮಾಡಲು ಸಾಧ್ಯವಿಲ್ಲದಿರುವುದರಿಂದ ಆಯುರ್ವೇದದ ಶಲ್ಯ-ಶಾಲಾಕ್ಯದವರಿಗೆ ಆಧುನಿಕ ಶಸ್ತ್ರಚಿಕಿತ್ಸಕರನ್ನೂ, ಆಧುನಿಕ ಅರಿವಳಿಕೆ ತಜ್ಞರನ್ನೂ ಗುಟ್ಟಾಗಿ ಬಳಸಿಕೊಳ್ಳುವುದಕ್ಕೆ ಕಾನೂನಿನ ಮಾನ್ಯತೆ ಒದಗಿಸುವುದು ಇನ್ನೊಂದು ಉದ್ದೇಶವಾಗಿರಬಹುದು.

ಈ ಸರಕಾರವು ಆರಂಭದಿಂದಲೇ ಜಾರಿಗೊಳಿಸುತ್ತಿರುವ ಕಾರ್ಯಯೋಜನೆಯನ್ನು ಅರ್ಥ ಮಾಡಿಕೊಂಡರೆ ಇನ್ನಷ್ಟು ದೊಡ್ಡ ಕಾರಣಗಳು ಗೋಚರಿಸುತ್ತವೆ. ಆಧುನಿಕ ವೈದ್ಯವೃತ್ತಿಯನ್ನು ನಿಯಂತ್ರಿಸುತ್ತಿದ್ದ, ಆಧುನಿಕ ವೈದ್ಯರಿಂದಲೇ ಚುನಾಯಿತಗೊಳ್ಳುತ್ತಿದ್ದ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿದ್ದ ಭಾರತೀಯ ವೈದ್ಯಕೀಯ ಪರಿಷತ್ತನ್ನು (ಎಂಸಿಐ) ಭ್ರಷ್ಟಾಚಾರದ ನೆಪದಲ್ಲಿ ಬರ್ಖಾಸ್ತು ಮಾಡಿ, ಅದರ ಆಡಳಿತವನ್ನು ತಾನೇ ನೇಮಿಸಿದ ಆಡಳಿತಗಾರರ ಸಮಿತಿಗೆ ಒಪ್ಪಿಸಿ, ಆ ಬಳಿಕ ತಾನೇ ನೇಮಿಸುವ ಸದಸ್ಯರುಳ್ಳ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು (ಎನ್‌ಎಂಸಿ) ಈ ಸರಕಾರವು ತಂದಿರುವುದು ಆ ಮಹಾ ಯೋಜನೆಯ ಮುಖ್ಯ ಭಾಗವಾಗಿದೆ. ಎನ್‌ಎಂಸಿ ಯೋಜನೆಯನ್ನು ಐಎಂಎ ಹೆಸರಿಗಷ್ಟೇ ವಿರೋಧಿಸಿತ್ತು, ಅನೇಕ ವೈದ್ಯರೂ, ಐಎಂಎಯ ನಾಯಕರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅದನ್ನು ಬೆಂಬಲಿಸಿದ್ದರು. ಎಂಸಿಐ ನಾಶಗೊಂಡದ್ದು ಈಗ ಎಲ್ಲಿಗೆ ತಲುಪಿದೆಯೆಂದರೆ, ಈ ಹಿಂದೆ ಆಧುನಿಕ ವೈದ್ಯಕೀಯ ಶಿಕ್ಷಣದ ಸ್ವರೂಪವನ್ನು ಎಂಸಿಐಯಲ್ಲಿದ್ದ ಆಧುನಿಕ ವೈದ್ಯಕೀಯ ಪರಿಣತರೇ ನಿರ್ಧರಿಸುತ್ತಿದ್ದರೆ, ಈಗ ಆಧುನಿಕ ವೈದ್ಯ ಶಿಕ್ಷಣ ಪರಿಷ್ಕರಣೆಯ ಸಮಿತಿಗೆ ಆಯುಷ್ ಇಲಾಖೆಯ ಸಚಿವರು ಮುಖ್ಯಸ್ಥರಾಗಿದ್ದಾರೆ, ಆಧುನಿಕ ವೈದ್ಯಕೀಯ ಶಿಕ್ಷಣವನ್ನು ಐದೂವರೆ ವರ್ಷಗಳಿಗೆ ಬದಲಾಗಿ ನಾಲ್ಕೂವರೆ ವರ್ಷಗಳಿಗೆ ಇಳಿಸಬೇಕೆಂದು ಸಲಹೆ ನೀಡುತ್ತಾರೆ!

ಈ ಸರಕಾರವು ಭಾರತದ ವೈದ್ಯಕೀಯ ವ್ಯವಸ್ಥೆಯನ್ನು ವಿಚ್ಛಿದ್ರಗೊಳಿಸಲು (ಎಲ್ಲವನ್ನೂ ಛಿದ್ರ ಛಿದ್ರಗೊಳಿಸಬೇಕು ಎಂದು ನೀತಿ ಆಯೋಗದ ಮುಖ್ಯಾಧಿಕಾರಿ ಅಮಿತಾಭ್ ಕಾಂತ್ ಅವರು ಬಹಳ ಇಷ್ಟದಿಂದ, ಪದೇ ಪದೇ ಹೇಳಿಕೊಳ್ಳುವುದರಿಂದ ಈ ಸರಕಾರದ ನೀತಿಯು ಅದೇ ಆಗಿದೆ ಎಂದುಕೊಳ್ಳಬಹುದು) ಅತ್ಯುತ್ಸುಕವಾಗಿರುವ ಈ ಸರಕಾರವು ಈಗಾಗಲೇ ಪ್ರಕಟಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವೈದ್ಯಕೀಯ ಶಿಕ್ಷಣದ ಬಗ್ಗೆ ಪುಟ 50ರಲ್ಲಿ (20.5) ಹೇಳಲಾಗಿರುವುದನ್ನು ನೋಡಿದರೆ ಆಯುರ್ವೇದದ ಈ ಹೊಸ ನಿಯಮಗಳು ಇನ್ನಷ್ಟು ಅರ್ಥವಾಗುತ್ತವೆ. ಭಾರತದಲ್ಲಿ ಬದಲಿ ಪದ್ಧತಿಗಳಿರುವುದರಿಂದ ವೈದ್ಯಕೀಯ ಶಿಕ್ಷಣದೊಳಗೆ ಅವನ್ನು ಸುಸಂಯೋಜಿಸಿ, ಎಲ್ಲಾ ವೈದ್ಯಕೀಯ  ವಿದ್ಯಾರ್ಥಿಗಳಿಗೂ ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪತಿ, ಯೋಗ ಎಲ್ಲವನ್ನೂ ಕಲಿಸಲಾಗುತ್ತದೆ, ಆ ಮೂಲಕ ಭಾರತದ ಮುಂದಿನ ಪೀಳಿಗೆಯ ವೈದ್ಯರನ್ನು ವಿಶ್ವ ಗುರು ಮಾಡಲಾಗುತ್ತದೆ ಎಂದು ಈ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೇಳಲಾಗಿದೆ. ಆದ್ದರಿಂದ, ಎಲ್ಲವನ್ನೂ ಕಲಸಿ ಬೆರಕೆ ಮಾಡುವ ಯೋಜನೆಯಿರುವ ಶಿಕ್ಷಣ ನೀತಿ, ಅತ್ತ ಆಧುನಿಕ ವೈದ್ಯ ಶಿಕ್ಷಣ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿ ಆಯುಷ್ ಸಚಿವರು, ನಾಶವಾಗಿರುವ ಆಧುನಿಕ ವೈದ್ಯರ ಸ್ವಾಯತ್ತ ಸಂಸ್ಥೆ ಎಂಸಿಐ, ಅದರ ಬದಲಿಗೆ ಸರಕಾರದ ಅಧೀನವಿರುವ ಎನ್ಎಂಸಿ, ಇವೆಲ್ಲವುಗಳ ನಡುವೆ, ಸರಕಾರದ ಮಾತಲ್ಲೇ ಹೇಳುವುದಾದರೆ, ಈ ಸಮಗ್ರ ವಿಚ್ಚಿದ್ರಕಾರಿ ಕಾರ್ಯಯೋಜನೆಯ ಸಣ್ಣ ಭಾಗವಾಗಿ ಈ ಹೊಸ ನಿಯಮಗಳು ಬಂದಿವೆ ಎಂದು ತಿಳಿಯುವುದರಲ್ಲಿ ಯಾವ ತಪ್ಪೂ ಆಗಲಾರದು.

ಜೊತೆಗೆ, ಈ ಎನ್‌ಎಂಸಿ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಗಳೆಲ್ಲವೂ ಆರೋಗ್ಯ ಸೇವೆಗಳು ಮತ್ತು ವೈದ್ಯಕೀಯ ಶಿಕ್ಷಣಗಳಲ್ಲಿ ಕಾರ್ಪರೇಟ್ ಕ್ಷೇತ್ರಕ್ಕೆ ಮುಕ್ತ ಅವಕಾಶವನ್ನು ಒದಗಿಸುವ ಉದ್ದೇಶವನ್ನು ಹೊಂದಿರುವುದನ್ನು ಅವುಗಳ ಕರಡುಗಳಲ್ಲೇ ಹೇಳಲಾಗಿತ್ತು. ಆದ್ದರಿಂದ ವೈದ್ಯಕೀಯ ಶಿಕ್ಷಣದ ಅವಧಿಯನ್ನು ಇಳಿಸುವುದು, ಆಯುಷ್ ಮತ್ತು ಆಧುನಿಕ ವೈದ್ಯಕೀಯ ವ್ಯವಸ್ಥೆಯನ್ನು ಕಲಬೆರಕೆ ಮಾಡುವುದು ಎಲ್ಲವೂ ಒಮ್ಮಿಂದೊಮ್ಮೆಗೇ ಲಕ್ಷಗಟ್ಟಲೆ ವೈದ್ಯ ವೇಷಧಾರಿಗಳನ್ನು ಸೃಷ್ಟಿಸಿ, ಅವರನ್ನು ಅತಿ ಕಡಿಮೆ ಸಂಬಳದಲ್ಲಿ ಈ ಕಾರ್ಪರೇಟ್ ಆಸ್ಪತ್ರೆಗಳಲ್ಲಿ ಜೀತದಾಳುಗಳಾಗಿ ದುಡಿಯುವಂತೆ ಮಾಡುವುದಕ್ಕೆ ನೆರವಾಗಲಿವೆ.

ಈ ಹೊಸ ನಿಯಮಗಳಿಂದ ಮತ್ತು ಎಲ್ಲವನ್ನೂ ಕಲಬೆರಕೆ ಮಾಡುವ ಸರಕಾರದ ಮಹಾ ಯೋಜನೆಯಿಂದ ಆಯುರ್ವೇದ ಚಿಕಿತ್ಸಕರಿಗಾಗಲೀ, ಆಯುರ್ವೇದಕ್ಕಾಗಲೀ ಯಾವ ಪ್ರಯೋಜನವೂ ಆಗದು, ಬದಲಿಗೆ ಹಾನಿಯೇ ಆಗಬಹುದು. ಈಗ 2020ರಲ್ಲಿ ಈ ನಿಯಮಗಳನ್ನು ತರುವ ಮೂಲಕ 1979ರಿಂದ ಆಯುರ್ವೇದ ಶಲ್ಯ-ಶಾಲಾಕ್ಯ ತಂತ್ರಗಳಲ್ಲಿ ಎಂಎಸ್ ಪದವಿ ಪಡೆದವರು ನಿರ್ದಿಷ್ಟವಾಗಿ ಏನನ್ನೂ ಕಲಿತಿಲ್ಲ ಎಂದು ಭಾರತೀಯ ಪದ್ಧತಿಗಳ ಮಂಡಳಿಯೂ, ಸರಕಾರವೂ ಒಪ್ಪಿಕೊಂಡಂತಾಯಿತು; ಯಾವುದೇ ಹೊಸ ನಿಯಮಗಳು ಪೂರ್ವಾನ್ವಯವಾಗುವುದಿಲ್ಲವಾದ್ದರಿಂದ ಈಗಾಗಲೇ ಶಲ್ಯ-ಶಾಲಾಕ್ಯಗಳಲ್ಲಿ ಎಂಎಸ್ ಪಡೆದವರಿಗೆ ಯಾವ ತರಬೇತಿಯೂ ಆಗಿಲ್ಲ ಎನ್ನುವುದು ಬಹಿರಂಗಗೊಂಡದ್ದಷ್ಟೇ ಆಯಿತಲ್ಲದೆ ಪ್ರಯೋಜನವೇನೂ ಆಗುವುದಿಲ್ಲ. ಈ ನಿಯಮಗಳಲ್ಲಿ ಆಧುನಿಕ ಶಸ್ತ್ರಕ್ರಿಯೆಗಳನ್ನೂ ಸೇರಿಸಲಾಗಿರುವುದು ಭಾರತೀಯ ವೈದ್ಯ ಪದ್ಧತಿಗಳ ವ್ಯಾಪ್ತಿಗೆ ಹೊರತಾಗಿರುವುದರಿಂದ ಅದು ಕಾನೂನುಬಾಹಿರವೆನಿಸಿ, ಈ ನಿಯಮಗಳಡಿ ಕಲಿಯಲಿರುವ ಹೊಸ ವಿದ್ಯಾರ್ಥಿಗಳಿಗೂ ಈ ನಿಯಮಗಳಿಂದ ಯಾವುದೇ ಪ್ರಯೋಜನವಾಗದು. ಇಂಥ ಅಸಂಬದ್ಧ ನಿಯಮಗಳು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೇಳಲಾಗಿರುವ ‘ಸಂಯೋಜಿತ’ ಕಲಬೆರಕೆಗಳು ಎಲ್ಲವೂ ಆಯುರ್ವೇದ ಮತ್ತಿತರ ಪದ್ಧತಿಗಳನ್ನು ಸಂಪೂರ್ಣವಾಗಿ ಕುಲಗೆಡಿಸುವುದರಿಂದ ಸದ್ಯೋಭವಿಷ್ಯದಲ್ಲಿ ಅವೆಲ್ಲವೂ ನಿರ್ನಾಮವಾಗುವುದಕ್ಕೆ ಕಾರಣವಾಗಲಿವೆ.

ಈ ನಿಯಮಗಳನ್ನು ವಿರೋಧಿಸಿ ಈಗ ಮುಷ್ಕರ ಹೂಡುವುದಕ್ಕೆ ಐಎಂಎ ಮತ್ತಿತರ ಆಧುನಿಕ ವೈದ್ಯರ ಸಂಘಟನೆಗಳಿಗೆ ಯಾವ ನೈತಿಕತೆಯೂ ಇಲ್ಲ. ಈ ಮೂರ್ನಾಲ್ಕು ದಶಕಗಳಲ್ಲಿ ಆಯುರ್ವೇದ ಎಂಎಸ್ ತರಬೇತಿಯನ್ನು ಪ್ರಶ್ನಿಸಲಾಗಿತ್ತೇ, ಆಯುರ್ವೇದದ ಶಲ್ಯ-ಶಾಲಾಕ್ಯ ತರಬೇತಾದವರಿಗೆ ಶಸ್ತ್ರಕ್ರಿಯೆ ನಡೆಸುವಲ್ಲಿ ನೆರವಾದ ಆಧುನಿಕ ವೈದ್ಯರ ಮೇಲೆ ಕ್ರಮ ಕೈಗೊಳ್ಳಲಾಗಿತ್ತೇ ಎಂಬ ಬಗ್ಗೆ ಈ ಸಂಘಟನೆಗಳು ಉತ್ತರಿಸಬೇಕಾಗುತ್ತದೆ. ಅನೇಕ ಆಧುನಿಕ ಆಸ್ಪತ್ರೆಗಳಲ್ಲಿ ಆಯುಷ್ ತರಬೇತಾದವರನ್ನು ಕಾರ್ಯನಿರತ ವೈದ್ಯರಾಗಿ ನಿಯೋಜಿಸುತ್ತಿರುವುದು ಸಾಮಾನ್ಯವಾಗಿದ್ದು, ಅತಿ ಹೆಚ್ಚಿನ ಕ್ಷಮತೆಯ ಅಗತ್ಯವುಳ್ಳ ತೀವ್ರ ನಿಗಾ ಘಟಕಗಳು, ತುರ್ತು ಚಿಕಿತ್ಸಾ ಘಟಕಗಳು,  ಶಸ್ತ್ರಕ್ರಿಯೆಗೊಳಗಾದವರ ನಿಗಾವಣಾ ಘಟಕಗಳು ಮುಂತಾದೆಡೆಗಳಲ್ಲಿ ಆಯುಷ್ ತರಬೇತಾದವರನ್ನು ನಿಯೋಜಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ, ಕೆಲವೆಡೆ ಆಯುಷ್ ತರಬೇತಾದವರು ಆಧುನಿಕ ಶಸ್ತ್ರಚಿಕಿತ್ಸಾ ತಜ್ಞರಿಗೆ ಶಸ್ತ್ರಚಿಕಿತ್ಸೆಯ ಸಹಾಯಕರಾಗಿ ಕೆಲಸ ಮಾಡುತ್ತಿರುವ ವರದಿಗಳೂ ಆಗಿವೆ. ಇವುಗಳ ಬಗ್ಗೆ ಅಲ್ಲೊಂದು ಇಲ್ಲೊಂದು ಹೇಳಿಕೆಗಳನ್ನು ಕೊಟ್ಟದ್ದು ಬಿಟ್ಟರೆ ಇವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಐಎಂಎ ಆಗಲೀ, ಇತರ ಸಂಘಟನೆಗಳಾಗಲೀ ಯಾವ ಗಂಭೀರ ಪ್ರಯತ್ನವನ್ನೂ ಮಾಡಿಲ್ಲ. ಅಷ್ಟೇ ಅಲ್ಲ, ವೈದ್ಯಕೀಯ ಚಿಕಿತ್ಸೆಗೆ ಯಾವ ಸಂಬಂಧವೂ ಇಲ್ಲದ, ಯಾವುದೇ ರೋಗದ ಚಿಕಿತ್ಸೆಯಲ್ಲಿ ಪ್ರಯೋಜನವಿದೆಯೆಂಬುದಕ್ಕೆ ಯಾವ ದೃಢವಾದ ಆಧಾರಗಳೂ ಇಲ್ಲದ ‘ಯೋಗಾಭ್ಯಾಸದ’ ಸೌಲಭ್ಯಗಳನ್ನು ಇಂದು ಹೆಚ್ಚಿನ ಆಧುನಿಕ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತಿರುವುದು ಮಾತ್ರವಲ್ಲ, ಆಧುನಿಕ ವೈದ್ಯ ವಿಜ್ಞಾನದ ಬಹುತೇಕ  ಎಲ್ಲಾ ಸಮಾವೇಶಗಳಲ್ಲಿ ‘ಯೋಗ ಗುರುಗಳು’, ‘ಸದ್ಗುರುಗಳು’, ‘ಶ್ರೀ ಶ್ರೀಗಳು’, ಹಿಂದಿನ ಜನ್ಮ, ಪುನರ್ಜನ್ಮ ಹಾಗೂ ಮುಂದಿನ ಜನ್ಮಗಳ ಮಹಾಗುರುಗಳು ಎಲ್ಲರಿಗೂ ಪ್ರವಚನ, ಸತ್ಸಂಗ, ಶಿಬಿರ ಇತ್ಯಾದಿಗಳನ್ನು ನಡೆಸುವುದಕ್ಕೆ ಅವಕಾಶ ನೀಡಲಾಗುತ್ತಿದೆ, ಇವನ್ನು ಪ್ರಶ್ನಿಸಿದವರನ್ನು ಮತದ್ರೋಹಿಗಳು, ದೇಶದ್ರೋಹಿಗಳು ಎಂದೆಲ್ಲ ಜರಿಯಲಾಗುತ್ತಿದೆ. ಇಂಥ ಆಧುನಿಕ ವೈದ್ಯಕೀಯ ಸಂಘಟನೆಗಳು ಮತ್ತವುಗಳ ನಾಯಕರು ಈ ಆಯುರ್ವೇದದ ಹೊಸ ನಿಯಮವನ್ನು ವಿರೋಧಿಸುವುದಕ್ಕೆ ಅದಾವ ನೈತಿಕತೆಯನ್ನು ಹೊಂದಿದ್ದಾರೆ?

ಮೇಲೆ ಹೇಳಿದಂತೆ, ವೈದ್ಯಕೀಯ ಕ್ಷೇತ್ರವನ್ನು ಛಿದ್ರಗೊಳಿಸುವ ತನ್ನ ಕಾರ್ಯಯೋಜನೆಯ ಭಾಗವಾಗಿ ಕೇಂದ್ರ ಸರಕಾರವು ಎನ್‌ಎಂಸಿ ತರಲು ಹೊರಟಾಗ ಐಎಂಎ ತೋರಿಕೆಯ ಪ್ರತಿಭಟನೆಗಳನ್ನು ನಡೆಸಿತಾದರೂ, ಅದು ಮಂಡನೆಯಾಗಿ ಅನುಮೋದನೆಗೊಳ್ಳುವಾಗ ಸುಮ್ಮನಿದ್ದು ಸಹಕರಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಅದೇ ವಿಚ್ಛಿದ್ರಕಾರಿ ಕಾರ್ಯತಂತ್ರದ ಭಾಗವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ವೈದ್ಯ ಶಿಕ್ಷಣವನ್ನು ಕಲಬೆರಕೆ ಮಾಡುವ ಬಗ್ಗೆ ಪ್ರಸ್ತಾಪಿಸಿದಾಗ ಐಎಂಎ ಸುಮ್ಮನಿದ್ದಿತ್ತು, ಈಗ ಆ ನೀತಿಯು ಪ್ರಕಟವಾಗಿರುವಾಗಲೂ ಐಎಂಎ ವತಿಯಿಂದ ಪಿಸುದನಿಯೂ ಹೊರಟಿಲ್ಲ. ಈಗ ಆಡಳಿತದಲ್ಲಿರುವ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೇ ಈ ವಿಚ್ಛಿದ್ರಕಾರಿ ನೀತಿಗಳ ಬಗ್ಗೆ, ಆಯುಷ್ ಅನ್ನೇ ಮುಖ್ಯಗೊಳಿಸುವ ಬಗ್ಗೆ, ಎಲ್ಲೆಡೆಯೂ ಯೋಗಾಭ್ಯಾಸವನ್ನು ತೂರುವ ಬಗ್ಗೆ ಅತಿ ಸ್ಪಷ್ಟವಾಗಿ ಹೇಳಲಾಗಿದ್ದರೂ, ಆ ಹಂತದಲ್ಲಿ ಐಎಂಎ ಅದನ್ನು ಪ್ರಶ್ನಿಸಲಿಲ್ಲ, ಅವನ್ನು ಬದಲಿಸದಿದ್ದರೆ ಮತ ನೀಡಲಾಗದೆಂದು ಹೇಳಲೂ ಇಲ್ಲ. ಆ ಪ್ರಣಾಳಿಕೆಗೆ ಮತ ಕೊಟ್ಟ ಮೇಲೆ, ಆ ಸರಕಾರವು ನೀತಿಗಳನ್ನು ರೂಪಿಸುತ್ತಿದ್ದಾಗ ಸುಮ್ಮನಿದ್ದ ಮೇಲೆ, ಆ ದೊಡ್ಡ ಕಾರ್ಯತಂತ್ರದ ಭಾಗವಾಗಿ ಈ ಸಣ್ಣ ಮಟ್ಟಿನ ನಿಯಮಗಳನ್ನು ತಂದಾಗ ಮುಷ್ಕರ ಹೂಡುವುದು ಎಲ್ಲ ರೀತಿಯಿಂದಲೂ ದಿವಾಳಿತನವೂ, ವಿಫಲ ಪ್ರಯತ್ನವೂ ಆಗುತ್ತವೆ, ಬೇರೇನಲ್ಲ.

ಒಟ್ಟಿನಲ್ಲಿ, ಆಯುಷ್ ತರಬೇತಿ ಪಡೆದವರು ಆಯುಷ್ ಹಿಡಿದು ಏನೂ ಮಾಡಲಾಗದೆ, ಆಧುನಿಕ ಚಿಕಿತ್ಸೆಗಂತೂ ಸಾಟಿಯಾಗಲಾಗದೆ, ಗತಿಯಿಲ್ಲದಂತಾಗಿರುವುದು, ಆಧುನಿಕ ವೈದ್ಯಕೀಯ ಸಂಘಟನೆಗಳ ಸೋಗಲಾಡಿತನಕ್ಕೆ ಮಿತಿಯಿಲ್ಲದಂತಾಗಿರುವುದು, ಸರಕಾರಕ್ಕೆ ದೇಶದ ಆರೋಗ್ಯ ಸೇವೆಗಳನ್ನು ಅತ್ಯಾಧುನಿಕಗೊಳಿಸುವಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮತಿಯಿಲ್ಲದಂತಾಗಿರುವುದು, ಜನಸಾಮಾನ್ಯರಿಗೆ ಇವು ಸುಲಭದಲ್ಲಿ ಅರ್ಥವಾಗುವ ಸ್ಥಿತಿಯಿಲ್ಲದಂತಾಗಿರುವುದು ನಮ್ಮ ದೇಶದ ಆರೋಗ್ಯ ಸೇವೆಗಳ ಮೇಲಾಗುತ್ತಿರುವ ಮಾರಣಾಂತಿಕ ಪ್ರಹಾರಕ್ಕೆ ಕಾರಣಗಳಾಗಿವೆ. ಅದು ಅರ್ಥವಾಗದೆ, ಆ ಮಹಾ ಯೊಜನೆಯನ್ನು ವಿರೋಧಿಸಿ ಸೋಳಿಸದೆ, ಈ ತೋರಿಕೆಯ ಮುಶ್ಕರಗಳಿಂದ ಯಾವ ಸಾಧನೆಯೂ ಆಗಲಾರದು.

Be the first to comment

Leave a Reply

Your email address will not be published.


*