‘ಹೊಸತು’ ವಿಶೇಷ ಸಂಚಿಕೆ (ಜನವರಿ 2021) ಯಲ್ಲಿ ಪ್ರಕಟವಾದ ಸಂದರ್ಶನ
ಬಿ.ವಿ.ಕಕ್ಕಿಲ್ಲಾಯರಂಥ ಸ್ವಾತಂತ್ರ್ಯ ಹೋರಾಟಗಾರನ ಪುತ್ರನಾಗಿ, ನಿಮ್ಮ ಬಾಲ್ಯದ ನೆನಪುಗಳು, ತಂದೆಯವರ ಹೋರಾಟದ ಬದುಕನ್ನು ನೀವು, ನಿಮ್ಮ ಕುಟುಂಬ ಗ್ರಹಿಸಿದ ರೀತಿಯ ಬಗ್ಗೆ ಹೇಳಿ?
ಬಿವಿ ಕಕ್ಕಿಲ್ಲಾಯರು ಮದುವೆಯಾಗಿ ವರ್ಷವಾಗುತ್ತಿದ್ದಂತೆ, ನನ್ನ ತಾಯಿ ನನ್ನನ್ನು ಗರ್ಭದಲ್ಲಿ ಧರಿಸಿದ್ದ ದಿನಗಳಲ್ಲಿ, ಭಾರತ ಕಮ್ಯುನಿಸ್ಟ್ ಪಕ್ಷ ಎರಡು ಹೋಳಾಯಿತು, ಪಕ್ಷದ ಮತ್ತು ರೈತ-ಕಾರ್ಮಿಕ ಸಂಘಟನೆಗಳನ್ನು ಒಡೆಯುವ ಕೆಲಸಗಳೂ ಆರಂಭವಾದವು. ಆ ಸಂದಿಗ್ಧ ಸ್ಥಿತಿಯಲ್ಲಿ ತಂದೆಯವರು ರಾಜ್ಯ ಸಮಿತಿಯ ಕಾರ್ಯದರ್ಶಿಯಾದರು. ಆ ನಾಲ್ಕು ವರ್ಷಗಳಲ್ಲಿ ನಾವು ಮಂಗಳೂರು-ಬೆಂಗಳೂರುಗಳ ನಡುವೆ ಮೂರು ಬಾರಿ ಮನೆಗಳನ್ನು ಬದಲಾಯಿಸಬೇಕಾಯಿತಂತೆ. ಈ ಕಾಲಘಟ್ಟದಲ್ಲಿ ಅವರಿಬ್ಬರ ಮೇಲೂ ಅದೆಷ್ಟು ಒತ್ತಡಗಳಾಗಿರಬಹುದು ಎಂದು ಊಹಿಸುವಾಗಲೇ ಕಷ್ಟವೆನಿಸುತ್ತದೆ.
ತಂದೆಗೆ ಪಿತ್ರಾರ್ಜಿತ ಆಸ್ತಿಯ ಪಾಲು ದೊರೆತದ್ದು 1958ರಲ್ಲಾದರೂ ಅದನ್ನು ತನ್ನ ಸುಪರ್ದಿಗೆ ಪಡೆದದ್ದು ಹತ್ತು ವರ್ಷಗಳ ಬಳಿಕ! ಆಸ್ತಿಯ ಸಮೀಪವಿದ್ದ ಬದಿಯಡ್ಕಕ್ಕೆ ನಾವು 1971ರಲ್ಲಿ ಸ್ಥಳಾಂತರಗೊಂಡೆವು, ಮರುವರ್ಷವೇ ಕಕ್ಕಿಲ್ಲಾಯರು ಬಂಟ್ವಾಳದಿಂದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. ನಾವು ಮೂವರು ಮಕ್ಕಳು ಅಮ್ಮನೊಡನೆ ಕೇರಳದ ಬದಿಯಡ್ಕದಲ್ಲಿ, ಅವರು ಶಾಸಕರಾಗಿ, ಭೂಸುಧಾರಣಾ ಹೋರಾಟದ ಮುಂಚೂಣಿಯಲ್ಲಿದ್ದು ಕರ್ನಾಟಕದಲ್ಲಿ! ಅಮ್ಮನಿಗೆ ಎಲ್ಲವನ್ನೂ ನಿಭಾಯಿಸುವುದು ಕಷ್ಟವಾಗಿ 1976ರಲ್ಲಿ ಬಂಟ್ವಾಳದಲ್ಲಿ, ನಂತರ 1977ರಲ್ಲಿ ಮಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಹೋದೆವು. ಆ ದಿನಗಳಲ್ಲಿ ಅಪ್ಪ ಶಾಸಕರಾಗಿದ್ದರೂ ಮನೆಯಲ್ಲಿ ಫೋನ್ ಸಂಪರ್ಕ ಇರಲಿಲ್ಲ. ಬಂಟ್ವಾಳ ಭೂನ್ಯಾಯ ಮಂಡಳಿಯ ಸಭೆಗಳಿಂದ ಕೆಲವೊಮ್ಮೆ ನಡುರಾತ್ರಿಯವರೆಗೂ ತಂದೆಯವರು ಮನೆಗೆ ಮರಳದಿದ್ದಾಗ ಹತ್ತಿರದಲ್ಲೇ ಇದ್ದ ಸಬ್ ಜೈಲಿಗೆ ಹೋಗಿ ಅಲ್ಲಿಂದ ತಾಲೂಕು ಕಚೇರಿಗೆ ಟ್ರಂಕ್ ಕಾಲ್ ಮಾಡುತ್ತಿದ್ದುದು ಈಗಲೂ ಅಚ್ಚಳಿಯದ ನೆನಪಾಗಿದೆ.
ಆ ದಿನಗಳಲ್ಲೇ ತುರ್ತು ಸ್ಥಿತಿ, ಕೋಮು ಗಲಭೆಗಳು, ಬಂಟ್ವಾಳದ ಮಹಾನೆರೆ, ಕೆಲವೊಮ್ಮೆ ಬೆದರಿಕೆಗಳು ಇವೆಲ್ಲವನ್ನೂ ಎದುರಿಸುವುದಾಗಿತ್ತು. ಮತ್ತೆ 1978ರ ಚುನಾವಣೆ, ಅದರಲ್ಲೂ ಗೆಲುವು, ಬಳಿಕ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಅಧ್ಯಕ್ಷತೆ ಹೀಗೆ ಅಪ್ಪ ಸದಾ ತನ್ನ ಕರ್ತವ್ಯಗಳಲ್ಲೇ ತೊಡಗಿಕೊಂಡು ಆಗಾಗ ಬೆಂಗಳೂರಿಗೂ, ರಾಜ್ಯದ ಇತರ ಕಡೆಗಳಿಗೂ ಹೋಗುತ್ತಲೇ ಇದ್ದಾಗ ನಮ್ಮ ಅಮ್ಮ ನಮ್ಮನ್ನೆಲ್ಲ ನೋಡಿಕೊಂಡು, ನಮ್ಮ ಕಲಿಕೆಯನ್ನು ಪ್ರೋತ್ಸಾಹಿಸುತ್ತಾ, ಆಸ್ತಿಯನ್ನೂ, ಮನೆಯನ್ನೂ ನಿಭಾಯಿಸಿದ್ದರು. ನಮ್ಮ ಖರ್ಚಿಗೆಲ್ಲ ಪಿತ್ರಾರ್ಜಿತ ಆಸ್ತಿಯಿಂದ ದೊರೆಯುತ್ತಿದ್ದ ಒಂದಷ್ಟು ಆದಾಯವೇ ಮುಖ್ಯ ಆಧಾರವಾಗಿತ್ತು.
ಆ 70-80ರ ಕಾಲದಲ್ಲಿ ಮೇ ದಿನಾಚರಣೆ, ಅಕ್ಟೋಬರ್ ಕ್ರಾಂತಿಯ ವರ್ಷಾಚರಣೆ, ರೈತ ಕಾರ್ಮಿಕರ ಸಮಾವೇಶಗಳು ಇತ್ಯಾದಿಗಳ ಮೈಲುಗಟ್ಟಲೆ ಉದ್ದದ ಮೆರವಣಿಗೆಗಳಲ್ಲಿ ಸಾಗುವ, ಬಳಿಕ ಸಾವಿರಾರು ಜನರು ನೆರೆಯುತ್ತಿದ್ದ ಸಭೆಗಳಲ್ಲಿ ವೇದಿಕೆಯ ಹಿಂದಿನ ಸಾಲಲ್ಲಿ ಕುಳಿತು ಭಾಷಣಗಳನ್ನು ಆಲಿಸುವ ಭಾಗ್ಯ ದೊರೆಯುತ್ತಿತ್ತು. ಕಕ್ಕಿಲ್ಲಾಯರು ಸುಮಾರು ಒಂದು-ಒಂದೂವರೆ ಗಂಟೆ ನಿರರ್ಗಳವಾಗಿ ತುಳುವಿನಲ್ಲೋ, ಕನ್ನಡದಲ್ಲೋ ಮಾತಾಡುತ್ತಿದ್ದರು; ಭಗವದ್ಗೀತೆ, ಋಗ್ವೇದದಿಂದ ತೊಡಗಿ ಮಾರ್ಕ್ಸ್ ವಾದದ ತಿರುಳನ್ನು ಪೋಣಿಸಿ, ಮತಾಂಧರ ಹುನ್ನಾರಗಳನ್ನೂ ವಿವರಿಸಿ, ಸಮಕಾಲೀನ ಆರ್ಥಿಕ-ಸಾಮಾಜಿಕ ಸಮಸ್ಯೆಗಳನ್ನೂ ಮುಂದಿಟ್ಟು, ನಡುನಡುವೆ ಚಟಾಕಿಗಳನ್ನೂ ಹಾರಿಸಿ ಕಾರ್ಮಿಕರನ್ನು ಕಾಡುವ ವಿಷಯಗಳ ಬಗ್ಗೆ ಮನಮುಟ್ಟುವಂತೆ ವಿವರಿಸುತ್ತಿದ್ದ ಅವರ ಭಾಷಣಗಳಿಂದ ನಾನೂ ಸೇರಿದಂತೆ ಆ ಸಭೆಗಳಲ್ಲಿದ್ದವರೆಲ್ಲರೂ ಬಹಳಷ್ಟು ಕಲಿಯಲು ಸಾಧ್ಯವಾಗುತ್ತಿತ್ತು. ಕಮ್ಯುನಿಸ್ಟ್ ಪಕ್ಷದ ಅನೇಕ ಹಿರಿಯ ನಾಯಕರ ಭಾಷಣಗಳನ್ನು ಕೇಳುವ ಸದವಕಾಶ ಆ ಕಾಲದಲ್ಲಿ ದೊರೆತಿತ್ತು. ಹಾಗೆಯೇ, ಕಕ್ಕಿಲ್ಲಾಯರ ನಿಕಟ ಸಂಗಾತಿಗಳಾಗಿದ್ದ ಎಂಎಸ್ ಕೃಷ್ಣನ್, ಎಸ್ ಆರ್ ಭಟ್, ಶ್ರೀನಿವಾಸ ಭಟ್, ಆರ್ ಎಸ್ ರಾಜಾರಾಮ್, ಪಿ ರಾಮನ್ ಮತ್ತಿತರ ಅನೇಕ ಹಿರಿಯರು ಪರಸ್ಪರ ನಡೆಸುತ್ತಿದ್ದ ಗಹನವಾದ ಹಲವು ಚರ್ಚೆಗಳನ್ನು ನೋಡುವ, ಕೇಳುವ ಅವಕಾಶಗಳೂ ನನ್ನದಾಗಿದ್ದವು. ಜೊತೆಗೆ, ಪಕ್ಷದ ಹಾಗೂ ಎಐಟಿಯುಸಿ ಇತ್ಯಾದಿ ಸಂಘಟನೆಗಳ ಸ್ಥಳೀಯ ಹೋರಾಟಗಳನ್ನು ಕಂಡು, ಕೆಲವದರಲ್ಲಿ ಭಾಗಿಯಾಗಿ, ಅನೇಕ ಚುನಾವಣೆಗಳಲ್ಲಿ ಕಾರ್ಯಕರ್ತನಾಗಿ ದುಡಿದು ಗಳಿಸಿದ ಅನುಭವಗಳು ಇಂದಿಗೂ ಜೊತೆಗೇ ಇವೆ. ಹಾಗೆಯೇ, ನಮ್ಮ ಮನೆಯಲ್ಲಿ ತುಂಬುತ್ತಲೇ ಇದ್ದ ಅನೇಕ ಪುಸ್ತಕಗಳು ನನ್ನ ಅರಿವನ್ನು ವಿಸ್ತರಿಸುವಲ್ಲಿ ಬಹಳಷ್ಟು ನೆರವಾಗಿವೆ.
ಇಂಥ ವಾತಾವರಣದಲ್ಲಿ ನೀವು ನಾಲ್ವರು ಮಕ್ಕಳು ಕೂಡಾ ವೈದ್ಯರಾದದ್ದು ಹೇಗೆ?
ಅಮ್ಮನೇ ನಮ್ಮ ಕಲಿಕೆಗೆ ಪ್ರಧಾನವಾಗಿ ಪ್ರೇರಣೆಯಾಗಿದ್ದವರು, ಶಕ್ತಿಯಾಗಿದ್ದವರು; ಅಪ್ಪನ ಬೆಂಬಲ ಇದ್ದೇ ಇತ್ತು. ತನ್ನ ಕಿರಿಯಣ್ಣನಂತೆ ತನ್ನ ಮಕ್ಕಳೂ ವೈದ್ಯರೇ ಆಗಬೇಕೆಂಬುದು ಅಮ್ಮನ ಒತ್ತಾಸೆಯಾಗಿತ್ತು. ನನಗೆ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ದೊರೆಯಿತು, ಅಲ್ಲಿನ ಶುಲ್ಕವನ್ನು ತೆರುವುದಕ್ಕೆ ಕಷ್ಟವಾದಾಗ ಅಮ್ಮನ ತಮ್ಮ, ನನ್ನ ಸೋದರ ಮಾವ, ತಾನೇ ಮುಂದೆ ಬಂದು ಶುಲ್ಕವನ್ನು ಭರಿಸಿದ್ದಷ್ಟೇ ಅಲ್ಲದೆ, ಎಂಬಿಬಿಎಸ್ ವ್ಯಾಸಂಗದುದ್ದಕ್ಕೂ ನೆರವಾದರು. ನನ್ನ ಮೂವರು ತಮ್ಮಂದಿರೂ ಸಿಇಟಿಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಹುಬ್ಬಳ್ಳಿ ಹಾಗೂ ಮೈಸೂರಿನ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದರು.
ನಾನು ಎಂಬಿಬಿಎಸ್ ಬಳಿಕ ಸಿಇಟಿ ಯಲ್ಲಿ ರಾಜ್ಯಕ್ಕೆ 12ನೇ ರ‌್ಯಾಂಕ್ ಪಡೆದು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯವಿಜ್ಞಾನದಲ್ಲಿ ಎಂಡಿ ವ್ಯಾಸಂಗಕ್ಕೆ ಪ್ರವೇಶ ಪಡೆದೆ. ಆಗಲೂ, ಆ ಬಳಿಕ ಮಂಗಳೂರಿಗೆ ಮರಳಿ ನನ್ನ ವೃತ್ತಿಯಲ್ಲಿ ತೊಡಗಿದಾಗಲೂ ಅಗತ್ಯವಿದ್ದ ಉಪಕರಣಗಳನ್ನು ಕೊಳ್ಳಲು ನನ್ನ ಸೋದರ ಮಾವಂದಿರೇ ನೆರವಾಗಿದ್ದರು. ನನ್ನ ತಮ್ಮ ಸೊಲ್ಲಾಪುರದ ವೈದ್ಯಕೀಯ ಕಾಲೇಜಿನಲ್ಲಿ ಶಿಶು ವಿಜ್ಞಾನದಲ್ಲಿ ಡಿಸಿಎಚ್ ಕಲಿತಾದ ಬಳಿಕ ಸಹಪಾಠಿ ಮಿತ್ರರ ಒತ್ತಾಯಕ್ಕೆ ಮಣಿದು, ಇಂಗ್ಲೆಂಡಿಗೆ ಹೋಗಲು ನಿರ್ಧರಿಸಿದ; ಸ್ವಂತ ಮನೆ ಕಟ್ಟಲೆಂದು ಖರೀದಿಸಿದ್ದ ಸಣ್ಣ ಸ್ಥಳವನ್ನು ಮಾರಿ ಅಮ್ಮ ಅವನಿಗೆ ಹಣ ಹೊಂದಿಸಿದರು. ಇಂಗ್ಲೆಂಡಿನಲ್ಲಿ ಕೆಲಸ ಮಾಡತೊಡಗಿದ ಬಳಿಕ ಅವನು ನೀಡಿದ ಹಣ, ಒಂದಷ್ಟು ಬ್ಯಾಂಕ್ ಸಾಲ ಎಲ್ಲಾ ಬಳಸಿ 1996ರಲ್ಲಿ ತನ್ನಾಸೆಯ ಸ್ವಂತ ಮನೆಯನ್ನು ಅಮ್ಮ ಮಾಡಿಕೊಂಡರು, ಅದಾಗಿ ಎರಡೇ ವರ್ಷಗಳಲ್ಲಿ ಇಲ್ಲವಾದರು. ಇನ್ನಿಬ್ಬರು ತಮ್ಮಂದಿರು ಕೂಡ ಅಣ್ಣನ ಹಿಂದೆಯೇ ಇಂಗ್ಲೆಂಡಿಗೆ ಹೋದರು. ಈಗ ಇಬ್ಬರು ಅಮೆರಿಕಾದಲ್ಲಿ ಶಿಶು ತಜ್ಞ ಹಾಗೂ ಶಸ್ತ್ರಚಿಕಿತ್ಸಾ ತಜ್ಞರಾಗಿದ್ದರೆ ಕಿರಿಯವನು ಇಂಗ್ಲೆಂಡಿನಲ್ಲೇ ಮನೋರೋಗ ತಜ್ಞನಾಗಿ ದುಡಿಯುತ್ತಿದ್ದಾನೆ. ಅವರೆಲ್ಲರೂ ಎಲ್ಲೇ ಇದ್ದರೂ ತಾವು ಸವೆಸಿದ ಬಲು ಕಷ್ಟದ ಹಾದಿಯನ್ನು ಮರೆತಿಲ್ಲ, ಪ್ರತಿಗಾಮಿತ್ವಕ್ಕೆ ವಿರೋಧವಾದ, ಪ್ರಗತಿಪರವಾದ ಹಾದಿಯನ್ನು ಬಿಟ್ಟಿಲ್ಲ.
ಈಗ ನೀಟ್ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆ ಮಾಡುವ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಾನು 10-12ರಲ್ಲಿ ಓದುತ್ತಿದ್ದ 1980-82ರ ಕಾಲದಲ್ಲಿ ಪರೀಕ್ಷೆಗಳಲ್ಲಿ, ಅಂಕ ನೀಡಿಕೆಯಲ್ಲಿ, ಆ ಮೇಲೆ ಸೀಟು ಹಂಚಿಕೆಯಲ್ಲಿ ಬಗೆಬಗೆಯ ಮೋಸಗಳಾಗುತ್ತಿದ್ದುದರಿಂದ ನಮ್ಮ ಕಾಲದ ವಿದ್ಯಾರ್ಥಿಗಳು ಹೋರಾಡಿದ್ದರ ಫಲವಾಗಿ 1984ರಿಂದ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಆರಂಭಗೊಂಡವು. ಆದರೆ ಸರಕಾರ, ನ್ಯಾಯಾಂಗ ಹಾಗೂ ಖಾಸಗಿ ಕಾಲೇಜುಗಳ ಸಮ್ಮಿಲನದಿಂದ ಸಾಮಾನ್ಯ ಪ್ರವೇಶ ಪರೀಕ್ಷೆಗಳ ಆಶಯಗಳೇ ಸೋಲತೊಡಗಿದವು. ಒಂದೊಂದು ರಾಜ್ಯದಲ್ಲಿ ಒಂದೊಂದು ಖಾಸಗಿ ಕಾಲೇಜಿಗೆ ಒಂದೊಂದು ಪ್ರವೇಶ ಪರೀಕ್ಷೆ ನಡೆಯತೊಡಗಿದಂತೆ ಭಾರತೀಯ ವೈದ್ಯಕೀಯ ಮಂಡಳಿ – ಎಂಸಿಐ – ಇಡೀ ದೇಶಕ್ಕೆ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಎಂದು ನೀಟ್ ಅನ್ನು ಆರಂಭಿಸಿತು. ಆದರೆ ಖಾಸಗಿ ಹಿತಾಸಕ್ತಿಗಳ ಲಾಭಕ್ಕೆ ತಕ್ಕಂತೆ ತಿರುಚಲಾಗಿದೆ; ನೀಟ್ ಅರ್ಹತೆಯ ಕನಿಷ್ಠ ಅಂಕಗಳನ್ನು ಕೆಳಗಿಳಿಸಲಾಗಿದೆ, ಶೇಕಡಾ (ಪರ್ಸೆಂಟ್) ಅಂಕಗಳ ಬದಲಿಗೆ ಒಟ್ಟು ವಿದ್ಯಾರ್ಥಿಗಳಲ್ಲಿ ಶೇಕಡಾ ಪ್ರಮಾಣ (ಪರ್ಸೆಂಟೈಲ್)ವೇ ಅರ್ಹತೆಯಾಗಿದೆ, ಖಾಸಗಿ ಕಾಲೇಜುಗಳ ಶುಲ್ಕವನ್ನು ಲಕ್ಷಗಟ್ಟಲೆಗೆ ಏರಿಸಿ ಪ್ರತಿಭಾವಂತರಿಗೆ ದುಸ್ತರವಾಗಿ ಕನಿಷ್ಠ ಅಂಕಗಳಿದ್ದವರಿಗೂ ಹಣಕ್ಕೆ ಸೀಟು ದೊರೆಯುವಂತಾಗಿದೆ. ಸಾಮಾಜಿಕ ನ್ಯಾಯಕ್ಕೆ ಸ್ಥಾನವಿಲ್ಲದಾಗಿ ಸಾಮಾನ್ಯ ವರ್ಗದಿಂದ ಹಿಡಿದು ಪರಿಶಿಷ್ಟ, ಹಿಂದುಳಿದ ಹಾಗೂ ಗ್ರಾಮೀಣ ವರ್ಗಗಳ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಅನ್ಯಾಯವಾಗುತ್ತಿದೆ.
ನೀಟ್ ಪರೀಕ್ಷೆಗೆ ವಿಶೇಷ ತರಬೇತಿಯೂ ದೊಡ್ಡ ಉದ್ಯಮವಾಗಿ ಬೆಳೆದಿದೆ. ಅದನ್ನು ಪಡೆಯಲಾಗದ, ಇಂಗ್ಲಿಷ್ ನಲ್ಲಿ ಪ್ರೌಢಿಮೆಯಿಲ್ಲದ ಮಕ್ಕಳಿಗೆ ವೈದ್ಯಕೀಯ ಶಿಕ್ಷಣವು ಮರೀಚಿಕೆಯಾಗಿದೆ. ನಾವು ವಿದ್ಯಾರ್ಥಿಗಳಾಗಿದ್ದಾಗ ಬಲಿಷ್ಠವಾದ ಹೋರಾಟಗಳಿಂದ ಹೊಸ ಖಾಸಗಿ ಕಾಲೇಜುಗಳನ್ನು ತಡೆಯುವುದಕ್ಕೆ, ಖಾಸಗಿ ಕಾಲೇಜುಗಳ ಶುಲ್ಕವನ್ನು ಇಳಿಸುವುದಕ್ಕೆ ಮತ್ತು ನಿಯಂತ್ರಿಸುವುದಕ್ಕೆ ಸಾಧ್ಯವಾಗಿತ್ತು. ಈಗ ಅಂಥ ಹೋರಾಟಗಳೇ ಇಲ್ಲವಾಗಿವೆ; ಪಾಲಿಗೆ ಬಂದದ್ದೇ ಪಂಚಾಮೃತ ಎಂದು ನಮಿಸುವ ಸ್ಥಿತಿಯಿದೆ.
ನೀಟ್ ಮೂಲಕ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಯನ್ನು ಹೀಗೆ ಕೇಂದ್ರೀಕರಿಸುವುದು ರಾಜ್ಯದ ಸ್ವಾಯತ್ತತೆಗೆ ಧಕ್ಕೆ ಉಂಟು ಮಾಡುತ್ತದೆಯೇ?
ತಮಿಳುನಾಡು, ಆಂಧ್ರದಂತಹ ರಾಜ್ಯಗಳು ಇದನ್ನು ಬಹು ಹಿಂದಿನಿಂದಲೇ ವಿರೋಧಿಸುತ್ತಾ ಬಂದಿವೆ. ಕೇಂದ್ರೀಕೃತ ನೀಟ್ ಪರೀಕ್ಷೆಯ ಸಮಸ್ಯೆಗಳು, ಖಾಸಗಿ ವಿಶ್ವವಿದ್ಯಾಲಯಗಳ ಸೀಟುಗಳನ್ನು ಕೇಂದ್ರ ಮಟ್ಟದಲ್ಲೇ ಹಂಚುತ್ತಿರುವುದು, ಮತ್ತು ಈಗ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ಸಂಪೂರ್ಣ ನಿಯಂತ್ರಣವು ಎನ್‌ಎಂಸಿಯ ಮೂಲಕ ಕೇಂದ್ರ ಸರಕಾರದ ಮುಷ್ಠಿಯೊಳಗಾಗಿರುವುದು ರಾಜ್ಯಗಳಿಗೆ ಯಾವ ದನಿಯೂ ಇಲ್ಲದಂತೆ ಮಾಡಿ, ಅವುಗಳ ಸ್ವಾಯತ್ತತೆಗೆ ಖಂಡಿತಕ್ಕೂ ಧಕ್ಕೆಯುಂಟು ಮಾಡಿವೆ, ಎಲ್ಲವನ್ನೂ ಖಾಸಗಿ-ಕಾರ್ಪರೇಟ್ ಶಕ್ತಿಗಳಿಗೆ ಒಪ್ಪಿಸಿದಂತಾಗಿದೆ.
ನಮ್ಮ ರಾಜ್ಯದ ಬೊಕ್ಕಸದ ಹಣದಿಂದ ನಡೆಯುವ ವೈದ್ಯಕೀಯ ಕಾಲೇಜುಗಳಿಗೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳನ್ನೇಕೆ ಆಯ್ಕೆ ಮಾಡಬೇಕು? ನಮ್ಮ ರಾಜ್ಯದ ವಿದ್ಯಾರ್ಥಿಗಳು ಅನ್ಯ ರಾಜ್ಯಗಳಿಗೆ ಹೋಗಿ ಅಷ್ಟೇ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಾರೆಯೇ?
ಎಂಬಿಬಿಎಸ್ ನ 15%, ಸ್ನಾತಕೋತ್ತರ ವ್ಯಾಸಂಗದ 50% ಹಾಗೂ ಅತ್ಯುನ್ನತ ವ್ಯಾಸಂಗದ 100% ಸೀಟುಗಳು ಕೇಂದ್ರ ಮಟ್ಟದಲ್ಲೇ ಹಂಚಲ್ಪಡುತ್ತವೆ. ಈ ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಸೀಟುಗಳು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿರುವುದರಿಂದ ಮತ್ತು ಎಲ್ಲಾ ರಾಜ್ಯಗಳ ಹೆಚ್ಚಿನ ಸರಕಾರಿ ವೈದ್ಯಕೀಯ ಕಾಲೇಜುಗಳು ಉತ್ತಮವಾಗಿಯೇ ಇರುವುದರಿಂದ, ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಹೊರ ರಾಜ್ಯಗಳ ಒಳ್ಳೆಯ ಸರಕಾರಿ ಕಾಲೇಜುಗಳಲ್ಲಿ ಕಲಿಯುವುದಕ್ಕೆ ಅವಕಾಶವಾಗುತ್ತದೆ; ನನ್ನಿಬ್ಬರು ತಮ್ಮಂದಿರಿಗೂ ಸೊಲ್ಲಾಪುರ ಹಾಗೂ ಮುಂಬಯಿಯ ಅತ್ಯುತ್ತಮ ಕಾಲೇಜುಗಳಲ್ಲಿ ಕಲಿಯಲು ಅವಕಾಶವಾಗಿತ್ತು.
ಆದರೆ, ನಮ್ಮ ರಾಜ್ಯ ಸರಕಾರವು ಮಾಡಿರುವ ನಿಯಮಗಳಿಂದಾಗಿ ರಾಜ್ಯದಲ್ಲಿ ಐದು ವರ್ಷ ಕಲಿತವರು, ಅಂದರೆ ರಾಜ್ಯದ ಖಾಸಗಿ ಕಾಲೇಜಿನಲ್ಲಿ ಹಣ ಕೊಟ್ಟು ಎಂಬಿಬಿಎಸ್ ಸೀಟು ಪಡೆದ ಅನ್ಯ ರಾಜ್ಯದ ವಿದ್ಯಾರ್ಥಿಗಳು ಕೂಡ, ರಾಜ್ಯದೊಳಗಿನ ಸರಕಾರಿ ಕೋಟಾದ 50% ಸ್ನಾತಕೋತ್ತರ ಸೀಟುಗಳನ್ನು ಪಡೆಯಲು ಅವಕಾಶವಾಗುತ್ತಿದೆ, ಇದು ಕನ್ನಡಿಗ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ವಂಚನೆಯಾಗಿದೆ. ಈ ಅನ್ಯಾಯದ ವಿರುದ್ಧ ಕಳೆದ ಮೂರು ವರ್ಷಗಳಿಂದ ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ.
ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಹೀಗೆ ವ್ಯಾಪಾರೀಕರಣ, ಖಾಸಗಿಕರಣಕ್ಕೊಳಗಾಗುತ್ತಿರುವಾಗ ನಿಮ್ಮ ಸಲಹೆ ಏನು?
ತೊಂಬತ್ತರ ದಶಕದಿಂದೀಚಿನ ಹೊಸ ಆರ್ಥಿಕ ವ್ಯವಸ್ಥೆಯಡಿಯಲ್ಲಿ ಶಿಕ್ಷಣ, ಅದರಲ್ಲೂ ಉನ್ನತ ಶಿಕ್ಷಣ, ಆರೋಗ್ಯ ಸೇವೆ ಎಲ್ಲವೂ ಸರಕಾರದ ಪಾಲಿಗೆ ಅನುತ್ಪಾದಕ, ಅನವಶ್ಯಕ ಎನಿಸಿ ಖಾಸಗಿ ಶಕ್ತಿಗಳಿಗೆ ಒಪ್ಪಿಸಲ್ಪಟ್ಟಲ್ಲಿಂದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಗುಣಾತ್ಮಕ, ನೈತಿಕ ಅಧಪತನವು ಭೀಕರವಾಗುತ್ತಲೇ ಸಾಗಿದೆ. ಇದು ಇವತ್ತು ಎಲ್ಲಿಗೆ ತಲುಪಿದೆಯೆಂದರೆ ವೈದ್ಯಕೀಯ ವ್ಯಾಸಂಗದಲ್ಲಿರುವ ವಿದ್ಯಾರ್ಥಿಗಳು ಸುಲಭದಲ್ಲಿ ಉತ್ತೀರ್ಣರಾಗುತ್ತಿದ್ದಾರೆ, ಸ್ವತಂತ್ರವಾಗಿ ಶಸ್ತ್ರಕ್ರಿಯೆಗಳನ್ನು ನಡೆಸುವ ಅನುಭವವನ್ನೇ ಗಳಿಸದೆ ಶಸ್ತ್ರಚಿಕಿತ್ಸೆಯಲ್ಲಿ ಎಂಎಸ್ ಪಡೆಯುತ್ತಾರೆ. ಹೊಸ ಎನ್ಎಂಸಿ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಗಳಡಿಯಲ್ಲಿ ವೈದ್ಯಕೀಯ ಶಿಕ್ಷಣವು ಇನ್ನಷ್ಟು ಖಾಸಗೀಕರಣಗೊಂಡು, ಅನಿಯಂತ್ರಿತಗೊಂಡು, ಆಯುಷ್ ಜೊತೆ ಕಲಬೆರಕೆಗೊಂಡು ಇನ್ನೊಂದು ಹತ್ತು ವರ್ಷಗಳ ಬಳಿಕ ಭಾರತದ ವೈದ್ಯರು ಇಲ್ಲಿಗೂ, ಎಲ್ಲಿಗೂ ಸಲ್ಲದವರಾಗುವ ಎಲ್ಲ ಸಾಧ್ಯತೆಗಳೂ ಇವೆ.
ಇದನ್ನೆಲ್ಲ ಸರಿಪಡಿಸಬೇಕಿದ್ದರೆ ದೊಡ್ಡ ಕ್ರಾಂತಿಯೇ ಆಗಬೇಕಾದೀತು. ಈಗಲೂ ಕೂಡ ನಮ್ಮ ರಾಜ್ಯದಲ್ಲೂ, ದೇಶದಲ್ಲೂ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳು ಮತ್ತು ಅತ್ಯುತ್ತಮ ಆಸ್ಪತ್ರೆಗಳು – ಎಐಐಎಂಎಸ್, ನಿಮ್ಹಾನ್ಸ್, ಜಯದೇವ, ಕಿದ್ವಾಯಿ ಇತ್ಯಾದಿ – ಸರಕಾರಿ ಸಂಸ್ಥೆಗಳೇ ಆಗಿವೆ. ಎಲ್ಲಾ ಹಳ್ಳಿಗಳಲ್ಲಿ ಜನರಿಗೆ ಲಭ್ಯವಿರುವುದು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳೂ, ಉಪಕೇಂದ್ರಗಳೂ ಆಗಿವೆ. ಆದ್ದರಿಂದ ದೇಶದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಗುಣಾತ್ಮಕವಾಗಿಯೂ, ನೈತಿಕವಾಗಿಯೂ ಬಲಗೊಳ್ಳಬೇಕಾದರೆ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಬಲಿಷ್ಠಗೊಳಿಸುವುದೊಂದೇ ದಾರಿಯಾಗಿದೆ.
ವೈದ್ಯಕೀಯ ಶಿಕ್ಷಣದ ಗುಣಮಟ್ಟವು ಸುಧಾರಿಸಬೇಕಿದ್ದರೆ ಇನ್ನು ಹೊಸ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡಬಾರದು, ಮತ್ತು ಈಗಿರುವ ಖಾಸಗಿ ಕಾಲೇಜುಗಳ ಮೇಲೆ ಕಠಿಣವಾದ ಷರತ್ತುಗಳನ್ನು ವಿಧಿಸಿ, ಸಾಧ್ಯವಾದಷ್ಟು ಬೇಗನೆ ಅವನ್ನು ರಾಷ್ಟ್ರೀಕರಿಸುವ ಯೋಜನೆಯನ್ನು ಹಾಕಿಕೊಳ್ಳಬೇಕು. ನೀಟ್ ಪರೀಕ್ಷೆಗಳು ಪ್ರಾದೇಶಿಕ ಭಾಷೆಗಳಲ್ಲೂ ನಡೆಯಬೇಕು, ಎಲ್ಲಾ ವೈದ್ಯಕೀಯ ಸೀಟುಗಳ ಹಂಚಿಕೆಗೆ ನೀಟ್ ಅಂಕಗಳಷ್ಟೇ ಆಧಾರವಾಗಿರಬೇಕು, ಎಲ್ಲಾ ಖಾಸಗಿ ಕಾಲೇಜುಗಳ ಶುಲ್ಕವನ್ನು ಸರಕಾರಿ ಕಾಲೇಜುಗಳ ಮಟ್ಟಕ್ಕೇ ಇಳಿಸಬೇಕು, ಹೆಚ್ಚು ಶುಲ್ಕ ವಿಧಿಸಿ ಅರ್ಹರನ್ನು ವಂಚಿಸಿ, ಕಡಿಮೆ ಅಂಕವುಳ್ಳವರಿಗೆ ಸೀಟುಗಳನ್ನು ಒದಗಿಸುವುದಕ್ಕೆ ಅವಕಾಶವಿರಬಾರದು, ಖಾಸಗಿ ಕಾಲೇಜುಗಳಲ್ಲಿ 15% ಸೀಟುಗಳನ್ನಷ್ಟೇ ಕಾಲೇಜು ಆಡಳಿತದ ಕೋಟಾಕ್ಕೆ ಬಿಡಬೇಕು, ಬೇರೆಲ್ಲವೂ ಸರಕಾರಿ ಕೋಟಾಕ್ಕೆ ಒಳಪಡಬೇಕು, ಸಾಮಾಜಿಕ ನ್ಯಾಯದ ಸಾಂವಿಧಾನಿಕ ಖಾತರಿಗಳು ಖಾಸಗಿ ಕಾಲೇಜುಗಳಿಗೂ ಅನ್ವಯಿಸಬೇಕು, ಇವೆಲ್ಲಕ್ಕೆ ಒಪ್ಪದ ಕಾಲೇಜುಗಳು ಸರಕಾರದ ಸುಪರ್ದಿಗೆ ಸೇರಬೇಕು.
ನೆಹರೂ ಆಡಳಿತದ ದೂರದೃಷ್ಟಿಯಿಂದಾಗಿ ಅತ್ಯುತ್ತಮವಾದ, ಜಾಗತಿಕ ಗುಣಮಟ್ಟದ ಆಧುನಿಕ ವೈದ್ಯಕೀಯ ಶಿಕ್ಷಣವು ದೊರೆತು, ನಮ್ಮವರು ಎಲ್ಲಾ ದೇಶಗಳಲ್ಲೂ ಸರಿಸಾಟಿಯಾಗಿ ದುಡಿಯುವುದಕ್ಕೆ ಸಮರ್ಥರಾಗುವಂತಾಯಿತು. ಈಗ ಆಧುನಿಕ ವೈದ್ಯ ವಿಜ್ಞಾನವು ಅತಿ ತ್ವರಿತವಾಗಿ ಬೆಳೆಯುತ್ತಿರುವಾಗ ನಮ್ಮ ವೈದ್ಯಕೀಯ ಶಿಕ್ಷಣವೂ ಅದಕ್ಕೆ ತಾಳೆಯಾಗಬೇಕಾಗುತ್ತದೆ. ಆದರೆ ವೈದ್ಯಕೀಯ ಶಿಕ್ಷಣದ ರೂಪುರೇಷೆಗಳನ್ನು ನಿರ್ಧರಿಸುವ ಅಧಿಕಾರವನ್ನು ವೈದ್ಯರ ಸ್ವಾಯತ್ತ ಸಂಸ್ಥೆಯ ಬದಲಿಗೆ ಕೇಂದ್ರ ಸರಕಾರದ ಕೈಗೊಂಬೆಯಾಗಿರುವ ಎನ್ಎಂಸಿಗೆ ನೀಡಲಾಗಿದೆ, ಆಯುಷ್ ಇಲಾಖೆಯ ಸಚಿವರು ಅಧ್ಯಕ್ಷರಾಗಿರುವ ಸಮಿತಿಯು ಎಂಬಿಬಿಎಸ್ ವ್ಯಾಸಂಗದಲ್ಲಿ ಒಂದು ವರ್ಷದಷ್ಟು ಕಡಿತ ಮಾಡಬೇಕೆಂದು ಶಿಫಾರಸು ಮಾಡುತ್ತಿದೆ! ರಾಷ್ಟ್ರೀಯ ಶಿಕ್ಷಣ ನೀತಿಯು ವೈದ್ಯಕೀಯ ಶಿಕ್ಷಣದಲ್ಲಿ ಎಲ್ಲಾ ಬದಲಿ ಪದ್ಧತಿಗಳನ್ನೂ ಕಲಬೆರಕೆ ಮಾಡಹೊರಟಿದೆ; ಆಯುಷ್ ತರಬೇತಾದವರಿಗೆ ಶಸ್ತ್ರಕ್ರಿಯೆಗಳನ್ನು ಕಲಿಸುವ ನಿಯಮಗಳೂ ಬಂದಿವೆ. ಇವೆಲ್ಲವೂ ನಮ್ಮ ದೇಶದ ಆಧುನಿಕ ವೈದ್ಯಕೀಯ ವ್ಯವಸ್ಥೆಯನ್ನು ಛಿದ್ರಗೊಳಿಸಿ, ಕೆಲವರಿಗೆ ವೈದ್ಯರೆಂಬ ವೇಷ ಹಾಕಿಸಿ ಖಾಸಗಿ, ಕಾರ್ಪರೇಟ್ ಆಸ್ಪತ್ರೆಗಳಲ್ಲೂ, ಸರಕಾರಿ ಆರೋಗ್ಯ ಸೇವೆಗಳಲ್ಲೂ ಅತಿ ಕಡಿಮೆ ಸಂಬಳಕ್ಕೆ ದುಡಿಸುವ ಯೋಜನೆಯಂತೆ ಕಾಣುತ್ತಿದೆ. ಇದನ್ನು ತಡೆಯಬೇಕಾದರೆ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಪಡಿಸಿ, ಎನ್ಎಂಸಿಯನ್ನು ಬರಖಾಸ್ತು ಮಾಡಿಸಿ, ವೈದ್ಯರಿಂದಲೇ ಚುನಾಯಿತವಾದ, ಸ್ವಾಯತ್ತ ವೈದ್ಯಕೀಯ ಮಂಡಳಿಗೆ ಆಧುನಿಕ ವೈದ್ಯ ವೃತ್ತಿಯ ಎಲ್ಲ ಆಯಾಮಗಳನ್ನು ನಿಯಂತ್ರಿಸುವ ಮತ್ತು ಪರಿಷ್ಕರಿಸುವ ಹೊಣೆಯನ್ನು ನೀಡಬೇಕಾಗುತ್ತದೆ.
ಇಂದು ಅತ್ಯಾಧುನಿಕ ತಂತ್ರಜ್ಞಾನವು ವೈದ್ಯಕೀಯ ಚಿಕಿತ್ಸೆಯ ಅನಿವಾರ್ಯ ಅಂಗವಾಗುತ್ತಿರುವುದರಿಂದ ಖಾಸಗಿ ಕಂಪೆನಿಗಳಿಂದ ಅವನ್ನು ಪಡೆಯಬೇಕಾದರೆ ದುಬಾರಿ ದರವನ್ನು ನೀಡಲೇ ಬೇಕಾಗುತ್ತದೆ. ಸರಕಾರಿ ಆಸ್ಪತ್ರೆಗಳಲ್ಲಿ ಇವನ್ನು ಅಳವಡಿಸಿಕೊಳ್ಳಲು ಹಣದ ಕೊರತೆ ಮತ್ತು ಭ್ರಷ್ಟಾಚಾರಗಳು ಅಡ್ಡಿಯಾಗುತ್ತಿವೆ; ಖಾಸಗಿ ಆಸ್ಪತ್ರೆಗಳು ಇವಕ್ಕೆ ಹಣ ಹೂಡಿ ಲಾಭಾಂಶವನ್ನು ಸೇರಿಸಿಕೊಂಡಾಗ ಅದನ್ನು ನಿಯಂತ್ರಿಸುವುದಕ್ಕೂ ಮಿತಿಯಿರುತ್ತದೆ. ಈ ಆಧುನಿಕ ತಂತ್ರಜ್ಞಾನದ ಸದ್ಬಳಕೆ, ದುರ್ಬಳಕೆ, ಇತಿಮಿತಿಗಳು, ಎಲ್ಲವನ್ನೂ ಈ ಕೊರೋನ ಕಾಲದಲ್ಲಿ ನಾವು ಸ್ಪಷ್ಟವಾಗಿ ನೋಡಿದ್ದೇವೆ. ಸರಕಾರಿ ಆಸ್ಪತ್ರೆಗಳಲ್ಲಿ ಜೀವರಕ್ಷಕ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾದುದು, ಪಿಎಂ ಕೇರ್ಸ್ ಹೆಸರಲ್ಲಿ ದೊಡ್ಡ ಸುದ್ದಿಯಾಗಿ ಬಂದ ವೆಂಟಿಲೇಟರ್‌ಗಳು ಮೂಲೆಯಲ್ಲೇ ಉಳಿದದ್ದು, ಉಚಿತ ಚಿಕಿತ್ಸೆಯು ಭಾಷಣಗಳಲ್ಲೇ ಉಳಿದದ್ದು, ವೈದ್ಯರಿಗೂ, ದಾದಿಯರಿಗೂ ಮೊದಲು ಚಪ್ಪಾಳೆ, ಹೂಮಳೆಗಳಾಗಿ, ಕೊನೆಗೆ ಸಂಬಳವೇ ಇಲ್ಲದಾಗಿ, ಟೀಕೆ-ಬೈಗುಳ- ಆಪಾದನೆಗಳ ಸುರಿಮಳೆಗಳಾದದ್ದು, ಚಪ್ಪಾಳೆ ತಟ್ಟಿಸಿದವರು ತಣ್ಣಗೆ ತಪ್ಪಿಸಿಕೊಂಡದ್ದು ಎಲ್ಲವನ್ನೂ ನೋಡಿದ್ದೇವೆ.
ಆದ್ದರಿಂದ ಅತ್ಯಾಧುನಿಕವಾದ ಆರೋಗ್ಯ ಸೇವೆಗಳು ಎಲ್ಲರಿಗೂ ಲಭಿಸುವಂತಾಗಬೇಕಾದರೆ ಸರಕಾರವು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ, ಉಪಕೇಂದ್ರಗಳಿಂದ ತೊಡಗಿ, ಅತ್ಯುನ್ನತ ಆಸ್ಪತ್ರೆಗಳವರೆಗೆ ಎಲ್ಲಾ ಸ್ತರಗಳಲ್ಲೂ ಆರು ಪಟ್ಟಾದರೂ ಹೆಚ್ಚು ಹಣವನ್ನು ವಿನಿಯೋಗಿಸಬೇಕು. ವಿದೇಶಿ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಖರೀದಿಸಿ ಸರಕಾರಿ ಆಸ್ಪತ್ರೆಗಳಲ್ಲಿ ಒದಗಿಸುವ ಜೊತೆಗೆ, ನಮ್ಮ ದೇಶದ ಸಾರ್ವಜನಿಕ ರಂಗದಲ್ಲಿರುವ ಸಂಶೋಧನಾ ಸಂಸ್ಥೆಗಳಿಗೆ, ಔಷಧ ಸಂಸ್ಥೆಗಳಿಗೆ ಸಾಕಷ್ಟು ಹಣವೊದಗಿಸಿ ಹೊಸ ಔಷಧಗಳು, ಲಸಿಕೆಗಳು ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ನೆರವಾಗಬೇಕು.
ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ಸದಸ್ಯತ್ವ, ಕಾರ್ಯಶೈಲಿ, ಕಾಲೇಜುಗಳಿಗೆ ಮನ್ನಣೆ ಕೊಡುವುದು ಇತ್ಯಾದಿಗಳ ಬಗ್ಗೆ ಏನನಿಸುತ್ತದೆ?
ಎಂಸಿಐ ಈಗಿಲ್ಲ, ಅದನ್ನು ಕಿತ್ತು ಹಾಕಿ ರಾಷ್ಟ್ರೀಯ ವೈದ್ಯಕೀಯ ಆಯೋಗ – ಎನ್‌ಎಂಸಿ – ತರಲಾಗಿದೆ. ವೈದ್ಯಕೀಯ ಶಿಕ್ಷಣದ ಖಾಸಗೀಕರಣ ಮತ್ತು ಲಾಭಕೋರತನಗಳು ಹೆಚ್ಚತೊಡಗಿದಲ್ಲಿಂದ ಎಂಸಿಐಯಲ್ಲಿ ರಾಜಕಾರಣಿಗಳು ಮತ್ತು ಉದ್ಯಮಪತಿಗಳ ಹಸ್ತಕ್ಷೇಪವು ಹೆಚ್ಚತೊಡಗಿತ್ತು; ಚುನಾವಣೆಗಳು ಸರಿಯಾಗಿ ನಡೆಯದಾದವು, ಹಲವು ಬಾರಿ ಸರಕಾರವೇ ಎಂಸಿಐಗೆ ಆಡಳಿತ ಮಂಡಳಿಗಳನ್ನು ನೇಮಿಸಿತ್ತು. ತೊಂಬತ್ತರ ದಶಕದ ಕೊನೆಗೆ ಇನ್ನಷ್ಟು ಖಾಸಗಿ ಕಾಲೇಜುಗಳನ್ನು ತೆರೆಯಲು ಸಿದ್ಧತೆಗಳಾಗುತ್ತಿದ್ದಂತೆ ರಾಜಕಾರಣಿಗಳು ಮತ್ತು ಖಾಸಗಿ ಹಿತಾಸಕ್ತಿಗಳ ಜೊತೆ ಹೊಂದಿಕೊಂಡಿದ್ದ ಕೆಲವರು ಎಂಸಿಐ ಮೇಲೆ ನಿಯಂತ್ರಣ ಸಾಧಿಸಿಕೊಂಡರು. ಅವರಲ್ಲೊಬ್ಬರು ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋದರೂ, ಅಲ್ಲಿಂದ ಹೊರಬಂದು ಮತ್ತೆ ಗುಜರಾತಿನಿಂದ ಎಂಸಿಐಗೆ ನೇಮಕಗೊಂಡರು. ಎಂಸಿಐ ಭ್ರಷ್ಟಾಚಾರದ ಕೂಪವೆಂದು ದಿಲ್ಲಿ ಉಚ್ಚ ನ್ಯಾಯಲಯವೇ ಹೇಳಿತು, ವೈದ್ಯಕೀಯ ಕಾಲೇಜಿಗೆ ಅನುಮತಿ ಕೊಡಲೆತ್ನಿಸಿದ ಹಗರಣದಲ್ಲಿ ಕೆಲವು ನ್ಯಾಯಾಧೀಶರ ಮೇಲೂ ಆರೋಪಗಳಾದವು, ಸರ್ವೋಚ್ಚ ನ್ಯಾಯಾಲಯದಲ್ಲೂ ಆ ಬಗ್ಗೆ ಪ್ರಶ್ನೆಗಳೆದ್ದವು. ಆದರೆ ಭ್ರಷ್ಟರೆನ್ನಲಾದವರನ್ನು ಶಿಕ್ಷಿಸುವ ಬದಲಿಗೆ ಎಂಸಿಐ ಎಂಬ ಸಂಸ್ಥೆಯನ್ನೇ ಧ್ವಂಸ ಮಾಡಲಾಯಿತು. ಅದರ ಬದಲಿಗೆ, ಖಾಸಗಿ ಹಾಗೂ ಕಾರ್ಪರೇಟ್ ಹಿತಾಸಕ್ತಿಗಳಿಗೆ ಇನ್ನಷ್ಟು ಅನುಕೂಲ ಮಾಡಿಕೊಡಬಲ್ಲ, ರಾಜಕಾರಣಿಗಳ ಹಿಡಿತಕ್ಕೊಳಪಟ್ಟ, ಎನ್‌ಎಂಸಿ ತರಲಾಯಿತು; ಎಲ್ಲಾ ರಾಜ್ಯ ಸರ್ಕಾರಗಳೂ, ಎಲ್ಲಾ ರಾಜಕೀಯ ಪಕ್ಷಗಳೂ ಅದನ್ನು ಅನುಮೋದಿಸಿದವು, ಅನೇಕ ಜನಪರವೆಂಬ ಸಂಘಟನೆಗಳೂ ಕೂಡ ಅದನ್ನು ಬೆಂಬಲಿಸಿದವು!
ವೈದ್ಯರ ನೋಂದಣಿ ಮಾಡುವುದಕ್ಕೆ ಮತ್ತು ಅನೈತಿಕ ವರ್ತನೆಯ ಬಗ್ಗೆ ತನಿಖೆ ನಡೆಸುವುದಕ್ಕೆ ಸ್ಥಾಪಿತವಾಗಿರುವ ರಾಜ್ಯ ವೈದ್ಯಕೀಯ ಮಂಡಳಿಗಳು ಕೂಡ ಕಾಯಿದೆಯ ವ್ಯಾಪ್ತಿಯನ್ನು ಮೀರುವುದು ಸಾಮಾನ್ಯವಾಗುತ್ತಿವೆ. ಕರ್ನಾಟಕದ ವೈದ್ಯಕೀಯ ಮಂಡಳಿಯು ಕಾನೂನಿನ ಮನ್ನಣೆಯಿಲ್ಲದೆಯೇ ಮರುನೋಂದಣಿಯನ್ನು ಹೇರಹೊರಟಾಗಲೂ, 2016ರಲ್ಲಿ ಕ್ಲಪ್ತವಾಗಿ ಚುನಾವಣೆ ನಡೆಸದಿದ್ದಾಗಲೂ ಉಚ್ಚ ನ್ಯಾಯಾಲಯಕ್ಕೆ ಹೋಗಿ ತಡೆದಿದ್ದೇವೆ, 2020ರ ಜನವರಿಯಲ್ಲಿ ಚುನಾವಣೆಯಾಗುವಂತೆ ಮಾಡಿದ್ದೇವೆ. ಸರಕಾರವು ಐದು ಸದಸ್ಯರನ್ನು ನಾಮಕರಣ ಮಾಡುವಾಗ ಮಹಿಳೆಯರು ಮತ್ತು ಪ್ರಾತಿನಿಧ್ಯ ಪಡೆಯದ ಅನ್ಯ ವರ್ಗಗಳವರನ್ನು ಪರಿಗಣಿಸಬೇಕೆಂದು ಕಾಯಿದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದ್ದರೂ, ರಾಜ್ಯ ಸರಕಾರವು ಮೇಲ್ವರ್ಗದ 5 ಪುರುಷರನ್ನೇ ನೇಮಿಸಿದ್ದನ್ನು ಪ್ರಶ್ನಿಸಿ ನಾನು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯು ಪುರಸ್ಕೃತಗೊಂಡು, ಸರಕಾರವು ಆ ಪಟ್ಟಿಯನ್ನೀಗ ಹಿಂಪಡೆಯುವಂತಾಗಿದೆ. ಆದರೆ ಹೆಚ್ಚಿನ ವೈದ್ಯರು ಮತ್ತು ವೈದ್ಯಕೀಯ ಸಂಘಟನೆಗಳು ಇವನ್ನೆಲ್ಲ ಪ್ರಶ್ನಿಸುವ ಬದಲು ಅವುಗಳೊಡನೆ ಹೊಂದಾಣಿಕೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ; ಭ್ರಷ್ಟರಾಗಿರುವವರು ಭ್ರಷ್ಟರನ್ನೇ ಆರಿಸುತ್ತಾರೆ.
ಈ ಕೊರೋನ ಇನ್ನೂ ಎಷ್ಟು ವರ್ಷ ಬಾಧಿಸಬಹುದು, ಲಸಿಕೆ ಶಾಶ್ವತ ಪರಿಹಾರವೆ?
ಕೊರೋನ ಸೋಂಕು ಈಗಾಗಲೇ ಕರ್ನಾಟಕದ, ಹಾಗೂ ಭಾರತದ ಸುಮಾರು 60% ಜನರಿಗೆ ತಗಲಿರಬಹುದೆಂದು ಸರಕಾರದ ಪ್ರತಿನಿಧಿಗಳೇ ಹೇಳಿದ್ದಾರೆ. ಅವರನುಸಾರ, ಒಟ್ಟು ಪ್ರಕರಣಗಳ ಸಂಖ್ಯೆಯು ಅಧಿಕೃತ ಪ್ರಕರಣಗಳ 40-90 ಪಟ್ಟು ಹೆಚ್ಚಿರಬಹುದು. ಅಂದರೆ, ದೇಶದಲ್ಲೀಗ ಅಧಿಕೃತ ಪ್ರಕರಣಗಳು ಒಂದು ಕೋಟಿಯಷ್ಟಿರುವಾಗ ಒಟ್ಟು ಪ್ರಕರಣಗಳು 90 ಕೋಟಿಯಷ್ಟಾಗಿರಬಹುದು, ರಾಜ್ಯದಲ್ಲಿ 9 ಲಕ್ಷ ಇರುವಲ್ಲಿ 4 ಕೋಟಿಯಷ್ಟಾಗಿರಬಹುದು; ಅವರೆಲ್ಲರೂ ಕೊರೋನ ಸೋಂಕಿನೆದುರು ರೋಗರಕ್ಷಣಾ ಶಕ್ತಿಯನ್ನು ಪಡೆದಿರುತ್ತಾರೆ. ಆದ್ದರಿಂದ ಸೋಂಕಿನ ಹರಡುವಿಕೆಯು ಇನ್ನು ಗಣನೀಯವಾಗಿ ಇಳಿಯಲಿದೆ, ನಾವು ಜುಲೈ-ಆಗಸ್ಟ್ ನಲ್ಲೇ ನಮ್ಮ ‘ಕೊರೋನ ಹೆದರದಿರೋಣ’ ಕೃತಿಯಲ್ಲಿ ಹೇಳಿದ್ದಂತೆ ಜನವರಿ-ಫೆಬ್ರವರಿ 2021ರ ವೇಳೆಗೆ ಅದು ವಿರಳವಾಗಲಿದೆ. ಈಗ ಸೋಂಕಿತರಾಗದೆ ಉಳಿದವರು ಮುಂದೆ ಎಂದಾದರೂ ಅದನ್ನು ಪಡೆಯುವ ಸಾಧ್ಯತೆಗಳಿವೆ; ಸೋಂಕಿನಿಂದ ತೀವ್ರ ಸಮಸ್ಯೆಗಳಾಗುವ ಅಪಾಯವುಳ್ಳವರು ಆ ಬಗ್ಗೆ ಎಚ್ಚರದಿಂದಿರಬೇಕಾಗುತ್ತದೆ.
ಕೊರೋನ ವೈರಸ್ ವಿರುದ್ಧ ಇದೇ ಮೊದಲಿಗೆ ಅವಸರವಸರವಾಗಿ, ಹೊಸ ತಂತ್ರಜ್ಞಾನದಿಂದ ಕೆಲವು ಲಸಿಕೆಗಳನ್ನು ಸಿದ್ಧಪಡಿಸಲಾಗಿದೆ. ಈ ಲಸಿಕೆಗಳ ದಕ್ಷತೆ ಮತ್ತು ಸುರಕ್ಷತೆಗಳೆರಡೂ ಇನ್ನೂ ಶತಸಿದ್ಧವಾಗಿಲ್ಲ; ಎರಡು ಸಲ ಚುಚ್ಚಿಸಿಕೊಂಡ 70% ಜನರಲ್ಲಿ ಸೋಂಕಿನ ತೀವ್ರತೆಯು ಕಡಿಮೆಯಾಗುತ್ತದೆ ಎನ್ನಲಾಗಿದ್ದರೂ, ಸೋಂಕು ತಗಲದಂತೆ ತಡೆಯಬಹುದೆನ್ನುವುದು ದೃಢಗೊಂಡಿಲ್ಲ. ಹಿರಿಯ ವಯಸ್ಕರಿಗೆ, ಆರೋಗ್ಯ ಕರ್ಮಿಗಳಿಗೆ ಅವನ್ನೀಗ ನೀಡಲಾಗುತ್ತಿದ್ದರೂ, ಸಾಧಕ-ಬಾಧಕಗಳನ್ನು ಕಾದು ನೋಡಬೇಕಷ್ಟೇ. ಏನಿದ್ದರೂ, ಈಗಾಗಲೇ ಸೋಂಕು ತಗಲಿರುವವರಿಗೆ ಲಸಿಕೆಯ ಅಗತ್ಯವೇ ಇಲ್ಲ. ಹೊಸ ಕೊರೋನ ವೈರಾಣುವಿನಲ್ಲೂ 120ರಷ್ಟು ರೂಪಾಂತರಿತ ಬಗೆಗಳನ್ನು ಗುರುತಿಸಲಾಗಿದ್ದು, ಅಲ್ಲೊಂದು ಇಲ್ಲೊಂದು ವರದಿಯ ಬಗ್ಗೆಯೂ ಹೆದರಬೇಕಿಲ್ಲ.
ಕೋವಿಡ್ ಕುರಿತು ಸರ್ಕಾರಕ್ಕೆ ಅವೈಜ್ಞಾನಿಕ ಸಲಹೆ ಕೊಡುತ್ತಿರುವ ವೈದ್ಯಕೀಯ ತಜ್ಞರ ಸಮಿತಿಯ ಉದ್ದೇಶ ಏನು?
ಅದನ್ನು ಅವರೇ ಹೇಳಬೇಕು! ರಾಜ್ಯದಲ್ಲೂ, ಕೇಂದ್ರದಲ್ಲೂ ಕೊರೋನ ನಿಯಂತ್ರಣದ ನಿರ್ಧಾರಗಳಲ್ಲಿ ದೇಶದ ಉನ್ನತ ತಜ್ಞರು ಕಡೆಗಣಿಸಲ್ಪಟ್ಟರೆನ್ನುವುದು ನಿಸ್ಸಂಶಯ. ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಅರಿವು, ಅನುಭವಗಳಿರುವ ರೋಗ ಪ್ರಸರಣ ತಜ್ಞರು, ಸಮುದಾಯ ಆರೋಗ್ಯ ತಜ್ಞರು, ವೈರಾಣು ತಜ್ಞರು ಕೊರೋನ ಕಾರ್ಯಪಡೆಯ ನೇತೃತ್ವ ವಹಿಸಬೇಕಿತ್ತು, ಅವರ ಬದಲು ಹೃದ್ರೋಗ ತಜ್ಞರು, ಶಸ್ತ್ರಚಿಕಿತ್ಸಕರಂಥವರಿದ್ದರು! ಹೃದಯದ ಶಸ್ತ್ರಚಿಕಿತ್ಸಕರೊಬ್ಬರು ಒತ್ತಡ ಹೇರಿದ ಕಾರಣಕ್ಕೆ ಮಾರ್ಚ್ ಎರಡನೇ ವಾರದಲ್ಲಿ ರಾಜ್ಯದಲ್ಲಿ ಕೇವಲ 11 ಪ್ರಕರಣಗಳಷ್ಟೇ ಇದ್ದರೂ ಎಲ್ಲಾ ಮಳಿಗೆ, ಸಿನಿಮಾ, ಶಾಲೆ, ಮದುವೆಗಳನ್ನು ಮುಚ್ಚಲು ನಿರ್ಧರಿಸಲಾಯಿತು! ಅದಾಗಿ 10 ದಿನಗಳಲ್ಲಿ ಪ್ರಧಾನಿಯವರು ಇಡೀ ದೇಶವನ್ನೇ ರಾತೋರಾತ್ರಿ ಲಾಕ್ ಡೌನ್ ಮಾಡಿಬಿಟ್ಟರು. ಐಸಿಎಂಆರ್ ತಜ್ಞರು, ಡಾ॥ ಜೇಕಬ್ ಜಾನ್, ಡಾ॥ ಜಯಪ್ರಕಾಶ್ ಮುಳಿಯಿಲ್ ಅವರಂಥ ಹಿರಿಯ ತಜ್ಞರು ಇವನ್ನೆಲ್ಲ ಪ್ರಶ್ನಿಸಿದರೂ ನಿರರ್ಥಕವಾಯಿತು, ಮಾಡಿದ್ದೆಲ್ಲವೂ ಸರಿಯೇ ಎಂದು ಸಮರ್ಥಿಸಿಕೊಳ್ಳಲಾಯಿತು. ಯಾವಾಗ ಯಾವುದನ್ನು ಮಾಡಬೇಕಿತ್ತೋ ಅದನ್ನು ಮಾಡದೆ, ಮಾಡಬಾರದದ್ದನ್ನೇ ಮಾಡಲಾಯಿತು. ಹಾಗಾಗಿ ಈ ಕಾರ್ಯಪಡೆಗಳು ನೀಡಿದ ಯಾವೊಂದು ಸಲಹೆಯೂ ಕೊರೋನ ನಿಯಂತ್ರಿಸುವಲ್ಲಾಗಲೀ, ರೋಗಿಗಳ ಚಿಕಿತ್ಸೆಯಲ್ಲಾಗಲೀ ಉಪಯೋಗಕ್ಕೆ ಬರಲೇ ಇಲ್ಲ, ಬದಲಿಗೆ ಅನೇಕ ಸಮಸ್ಯೆಗಳನ್ನೂ, ಗೊಂದಲಗಳನ್ನೂ ಉಂಟುಮಾಡಿದವು, ಅಪಾರವಾದ ಕಷ್ಟ- ನಷ್ಟಗಳೇ ಆದವು.
ವಿಶ್ವದ ಜನತೆಯ ಆರೋಗ್ಯ ರಕ್ಷಣೆಯಲ್ಲಿ WHO ಪಾತ್ರ, ಮಾರ್ಗದರ್ಶನ ಸೂಕ್ತವಾಗಿದೆಯೇ?
ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಅತ್ಯುತ್ತಮ ತಜ್ಞರಿದ್ದಾರೆ, ಎಲ್ಲೆಡೆಗಳಿಂದ ಲಭ್ಯವಾಗುವ ಮಾಹಿತಿಯೆಲ್ಲವನ್ನೂ ಪರಿಗಣಿಸಿ ಸಮತೋಲಿತವಾದ, ವೈಜ್ಞಾನಿಕವಾಗಿ ಸಾಕ್ಷ್ಯಾಧಾರಿತವಾದ ಮತ್ತು ಎಲ್ಲಾ ದೇಶಗಳಲ್ಲಿ, ವಿಶೇಷವಾಗಿ ಬಡ ದೇಶಗಳಲ್ಲಿ, ಅನ್ವಯಿಸಬಹುದಾದ ಸಲಹೆಗಳನ್ನು ಪ್ರಕಟಿಸುವ ಗುರುತರವಾದ ಜವಾಬ್ದಾರಿಯನ್ನು ಅವರು ನಿಭಾಯಿಸಬೇಕಾಗುತ್ತದೆ. ಹಾಗೆ ನೋಡಿದರೆ WHO ಸಾಕಷ್ಟು ಒಳ್ಳೆಯ ಕೆಲಸಗಳನ್ನೇ ಮಾಡುತ್ತಿದೆ ಎನ್ನಬಹುದು. ಆದರೆ WHO ಅಮೆರಿಕಾದಂತಹ ದೇಶಗಳ ಅನುದಾನವನ್ನೇ ಅವಲಂಬಿಸಿರುವುದರಿಂದ, ಮತ್ತು ಅಂತಹ ಆಡಳಿತಗಳ ಹಿಂದೆ ಖಾಸಗಿ-ಕಾರ್ಪರೇಟ್ ದೈತ್ಯ ಹಿತಾಸಕ್ತಿಗಳ ಒತ್ತಡಗಳಿರುವುದರಿಂದ ಅನೇಕ ಸಂದರ್ಭಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಕಷ್ಟಕ್ಕೀಡಾಗಿದೆ. ಈ ಕೊರೋನ ಸೋಂಕಿನ ಸಂದರ್ಭದಲ್ಲೂ ಸೋಂಕಿನ ಮೂಲ ಮತ್ತು ಹರಡುವಿಕೆಯ ಬಗ್ಗೆ, ದಿಗ್ಬಂಧನಗಳ ಬಗ್ಗೆ, ಮಾಸ್ಕ್ ಧಾರಣೆಯ ಬಗ್ಗೆ, ಚಿಕಿತ್ಸೆಯ ಬಗ್ಗೆ, ಹೊಸ ಔಷಧಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಬಹು ಎಚ್ಚರಿಕೆಯಿಂದ, ಪ್ರಬಲ ಸಾಕ್ಷ್ಯಾಧಾರಗಳನ್ನಷ್ಟೇ ಪರಿಗಣಿಸಿ ತನ್ನ ಅಭಿಮತವನ್ನು ಪ್ರಕಟಿಸಿತ್ತು. ಆದರೆ ಮಾಧ್ಯಮದ ಒತ್ತಡಗಳು, ಅಮೆರಿಕಾದ ಅಧ್ಯಕ್ಷರಿಂದ ಅನುದಾನ ಹಿಂತೆಗೆತ ಇತ್ಯಾದಿ ಕ್ರಮಗಳು ವಿಶ್ವ ಆರೋಗ್ಯ ಸಂಸ್ಥೆಗೆ ಪೇಚುಂಟುಮಾಡಿದವು, ಗೊಂದಲಗಳಿಗೆ ಕಾರಣವಾದವು. ಇವನ್ನು ಎದುರಿಸುವುದು ಸುಲಭದ ಕೆಲಸವೇನಲ್ಲ.
ಆಯುಷ್ ಕಾರ್ಯವೈಖರಿ ಕುರಿತು ನಿಮ್ಮ ಅಭಿಪ್ರಾಯವೇನು?
ಪಾರಂಪರಿಕ, ಪ್ರಾಚೀನ ಚಿಕಿತ್ಸಾ ಪದ್ಧತಿಗಳು ವಿಶ್ವದೆಲ್ಲೆಡೆ ಇವೆಯಾದರೂ, ಆಧುನಿಕ ವೈದ್ಯವಿಜ್ಞಾನಕ್ಕೆ ಪರ್ಯಾಯವಾಗಿ ಅವನ್ನು ಎಲ್ಲೂ ಪೋಷಿಸಲಾಗುತ್ತಿಲ್ಲ. ಹೆರಿಗೆ, ನವಜಾತ ಶಿಶುಗಳ ರಕ್ಷಣೆ-ಆರೈಕೆಗಳಿಂದ ತೊಡಗಿ ವೃದ್ಧಾಪ್ಯದ ಆರೈಕೆಗಳವರೆಗೆ, ಮಲೇರಿಯಾ, ಕೊರೋನಗಳಿಂದ ಹೃದಯಾಘಾತ, ಕ್ಯಾನ್ಸರ್‌ವರೆಗೆ ಎಲ್ಲವನ್ನೂ ನಿಭಾಯಿಸುತ್ತಿರುವುದು ಆಧುನಿಕ ವೈದ್ಯವಿಜ್ಞಾನವೇ ಹೊರತು ಆಯುಷ್ ಅಲ್ಲ, ಇವನ್ನು ನಿಭಾಯಿಸುವ ತರಬೇತಿಯಾಗಲೀ, ಅನುಭವವಾಗಲೀ ಈಗಿನ ಆಯುಷ್ ಚಿಕಿತ್ಸರಿಗೆ ದೊರೆಯುವುದೇ ಇಲ್ಲ. ನಮ್ಮ ರಾಷ್ಟ್ರೀಯ ಸಮೀಕ್ಷೆಯನುಸಾರ 93% ಹೊರರೋಗಿಗಳು ಮತ್ತು 99.7% ಒಳರೋಗಿಗಳು ಆಧುನಿಕ ಚಿಕಿತ್ಸೆಯನ್ನೇ ಪಡೆಯುತ್ತಾರೆ. ಆದ್ದರಿಂದ ಯಾವುದೋ ಆಸೆ ಹೊತ್ತು ಆಯುಷ್ ತರಬೇತಿ ಪಡೆದವರು ವಾಸ್ತವದ ಅರಿವಾದಾಗ ಹತಾಶರಾಗುತ್ತಾರೆ, ಕಡಿಮೆ ಸಂಬಳಕ್ಕೆ ದುಡಿಯುವ ಒತ್ತಡಕ್ಕೆ ಸಿಲುಕುತ್ತಾರೆ, ತಮಗೂ ಆಧುನಿಕ ಔಷಧಗಳನ್ನು ಬಳಸಲು ಬಿಡಬೇಕೆಂದು ಬೇಡಿಕೆಯಿಡುತ್ತಾರೆ. ಆಯುಷ್ ಬಗ್ಗೆ ಸ್ವತಂತ್ರ ಅಧ್ಯಯನಗಳಾಗಲಿ, ಒಳ್ಳೆಯದೇ; ಆದರೆ ಆಯುಷ್ ಚಿಕಿತ್ಸಕರೆಂದು ತರಬೇತಿ ನೀಡಿ ಅವರಿಗೂ, ಜನರಿಗೂ ಅನ್ಯಾಯ ಮಾಡುವುದು ಸರಿಯಲ್ಲ. ನೆಹರೂ ನೀತಿಗಳಲ್ಲಿ ಮತ್ತು ಭೋರ್ ಸಮಿತಿಯ ವರದಿಗಳಲ್ಲಿ ಆಯುಷ್ ಪದ್ಧತಿಗಳಿಗೆ ಯಾವುದೇ ಸ್ಥಾನವಿರಲಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.
ಆಯುರ್ವೇದ ತರಬೇತಿ ಹೊಂದಿರುವವರಿಗೆ ಶಸ್ತ್ರಕ್ರಿಯೆಗೆ ಅವಕಾಶ ನೀಡುವುದು ಉಚಿತವೇ? ಅಂಥವರಿಗೆ ವಿಶೇಷ ತರಬೇತಿಗೆ ಕ್ರಮವೇನಾದರೂ ಉಂಟೇ?
ಪ್ರಾಚೀನ ಆಯುರ್ವೇದದಲ್ಲಿ ಗಾಯಗಳನ್ನು ಹೊಲಿಯುವುದು, ಕರುಳು ಅಥವಾ ಮೂತ್ರಕೋಶಗಳಿಗೆ ತೊಡಕಾಗಿ ಜೀವಕ್ಕೆ ಸಂಚಕಾರ ಬಂದರೆ ಅವನ್ನು ಕೊರೆಯಲೆತ್ನಿಸುವುದು ಇವೇ ಕೆಲವು ತುರ್ತು ಶಸ್ತ್ರಕ್ರಿಯೆಗಳನ್ನು ಮಾಡಲಾಗುತ್ತಿತ್ತು, ನೋವು ನಿವಾರಣೆಗೆ ಮದ್ಯ, ಅಫೀಮು, ಭಂಗಿಗಳನ್ನು ಬಳಸಲಾಗುತ್ತಿತ್ತು. ಆಧುನಿಕ ಶಸ್ತ್ರಚಿಕಿತ್ಸೆಯು ಒಂದೆರಡು ಸಾವಿರ ವರ್ಷಗಳಷ್ಟು ಮುಂದುವರಿದಿದ್ದು, ಅತ್ಯುತ್ತಮವಾದ ಅರಿವಳಿಕೆ, ಸೋಂಕು ನಿಯಂತ್ರಣ, ಅತ್ಯಾಧುನಿಕ ತಂತ್ರಜ್ಞಾನದಿಂದ ಅತಿ ಸಣ್ಣ ರಂಧ್ರಗಳ ಮೂಲಕ ಶಸ್ತ್ರಕ್ರಿಯೆಗಳು, ಯಾಂತ್ರೀಕೃತ ಶಸ್ತ್ರಕ್ರಿಯೆಗಳೆಲ್ಲವೂ ಬಂದಿವೆ. ಈ ಕ್ರಮಗಳ ಅರಿವೇ ಇಲ್ಲದ, ಆಧುನಿಕ ವೈದ್ಯ ವಿಜ್ಞಾನದ ಪರಿಕಲ್ಪನೆಯೇ ಇಲ್ಲದ ಆಯುರ್ವೇದ ವೈದ್ಯರಿಗೆ ಅದೇ ಪ್ರಾಚೀನ ಶಸ್ತ್ರಕ್ರಿಯೆಗಳಲ್ಲಿ ತರಬೇತಿ ನೀಡಿ ಯಾವುದೇ ಪ್ರಯೋಜನವಾಗದು, ಆಧುನಿಕ ಶಸ್ತ್ರಕ್ರಿಯೆಗಳನ್ನು ಅವರಿಗೆ ಕಲಿಸುವುದು ಕಾನೂನಿನ ಹಾಗೂ ನೈತಿಕ ನೆಲೆಯಿಂದಲೂ ತಪ್ಪಾಗುತ್ತದೆ, ರೋಗಿಗಳಿಗೂ ಅನ್ಯಾಯ ಮಾಡಿದಂತಾಗುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಮಾಡಲು ಎಂಬಿಬಿಎಸ್ ಬದಲಿಗೆ ಹಿಂದೆ ಇದ್ದ ಎಲ್‌ಎಂಪಿ ಮಾದರಿ ಶಿಕ್ಷಣ ನೀಡುವುದು ಶಕ್ಯವೇ? ಇಲ್ಲದಿದ್ದರೆ ಗ್ರಾಮಾಂತರದಲ್ಲಿ ಸೇವೆ ಮಾಡಲು ವೈದ್ಯರ ಮನವೊಲಿಸುವುದು ಹೇಗೆ?
ಆರೋಗ್ಯ ಸೇವೆಗಳ ಮಟ್ಟಿಗೆ ಗ್ರಾಮೀಣ ಜನರ ಅಗತ್ಯಗಳು ನಗರವಾಸಿಗಳ ಅಗತ್ಯಗಳಿಗಿಂತ ಯಾವ ರೀತಿಯಲ್ಲೂ ಕಡಿಮೆಯಲ್ಲ, ಬದಲಿಗೆ, ಹೆಚ್ಚು ಸಂಕೀರ್ಣವೇ ಆಗಿವೆ. ಆದ್ದರಿಂದ ಗ್ರಾಮೀಣ ಆರೋಗ್ಯ ಸೇವೆಗಳನ್ನು ಯಾವ ಕಾರಣಕ್ಕೂ ಕೀಳಂದಾಜು ಮಾಡಬಾರದು.
ಆಧುನಿಕ ವೈದ್ಯಕೀಯ ಚಿಕಿತ್ಸೆಯು ಬಹು ದೊಡ್ಡದಾಗಿ ಬೆಳೆದಿರುವುದರಿಂದ ಎಂಬಿಬಿಎಸ್ ಮಟ್ಟದಲ್ಲಿ ದೊರೆಯುವ ಅನುಭವ, ತರಬೇತಿಗಳು ಅತಿ ಸೀಮಿತವಾಗಿರುತ್ತವೆ, ಅದನ್ನು ಇನ್ನಷ್ಟು ಕಡಿತಗೊಳಿಸುವುದರಿಂದ ವೈದ್ಯವೃತ್ತಿಗೆ ಅಪಚಾರವಾಗುತ್ತದೆ, ಅಂಥವರನ್ನು ಗ್ರಾಮೀಣ ಪ್ರದೇಶಗಳಲ್ಲಿ ನಿಯೋಜಿಸಿದರೆ ಅಲ್ಲಿನ ಜನರಿಗೂ ಅನ್ಯಾಯವಾಗುತ್ತದೆ. ಬದಲಿಗೆ, ಎಂಬಿಬಿಎಸ್ ಬಳಿಕ ಗ್ರಾಮೀಣ ಹಾಗೂ ಕುಟುಂಬ ಆರೋಗ್ಯ ಸೇವೆಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಅಥವಾ ಪದವಿಗಳನ್ನು ಆರಂಭಿಸಿದರೆ ಒಳ್ಳೆಯದು.
ವೈದ್ಯರು ಹಳ್ಳಿಗಳಲ್ಲಿ ಸೇವೆ ಸಲ್ಲಿಸಬೇಕಾದರೆ ಈಗಿರುವುದಕ್ಕಿಂತ 4 ಪಟ್ಟು ಹೆಚ್ಚು ಸಂಬಳ ಕೊಡಬೇಕು, ಕೆಲಸದ ಖಾತರಿಯಿರಬೇಕು, ಸ್ನಾತಕೋತ್ತರ ವ್ಯಾಸಂಗಕ್ಕೆ ಹೆಚ್ಚುವರಿ ಅಂಕಗಳನ್ನು ನೀಡಬೇಕು, ಆರೋಗ್ಯ ಕೇಂದ್ರಗಳನ್ನು ಸುಸಜ್ಜಿತ, ಸುರಕ್ಷಿತಗೊಳಿಸಬೇಕು. ಅಲ್ಪ ಸಂಬಳಕ್ಕೆ ಆಯುಷ್ ಚಿಕಿತ್ಸಕರನ್ನು ನೇಮಿಸುವುದು, ದಾದಿಯರಿಗೆ ತರಬೇತಿ ನೀಡುವುದು, ಕಾರ್ಪರೇಟ್ ಆಸ್ಪತ್ರೆಗಳ ಜೊತೆ ಸೇರಿ ಟೆಲಿ ಮೆಡಿಸಿನ್ ನಡೆಸುವುದು ಇತ್ಯಾದಿಗಳು ಪರಿಹಾರವಾಗದು.
ಔಷಧ ತಯಾರಿಸುವ ಕಂಪೆನಿಗಳು ವೈದ್ಯರನ್ನು ಪುಸಲಾಯಿಸಿ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುತ್ತಾರೆಂಬ ಆಕ್ಷೇಪವನ್ನು ಆಗಾಗ್ಗೆ ಎತ್ತಲಾಗುತ್ತದೆ. ಖಚಿತವಾಗಿ ಇರುವ ಸನ್ನಿವೇಶವೇನು?
ವೈದ್ಯರನ್ನು ಪುಸಲಾಯಿಸುವುದಕ್ಕೆ ಹಣ, ಹೆಂಡ, ಪ್ರವಾಸಗಳಷ್ಟೇ ಅಲ್ಲ, ಎಲ್ಲ ಬಗೆಯ ಅನೈತಿಕ ವಿಧಾನಗಳನ್ನು ಬಳಸಲಾಗುತ್ತಿರುವ ಬಗ್ಗೆ ಅನೇಕ ಪ್ರತಿಷ್ಠಿತ ವೈದ್ಯಕೀಯ ಜರ್ನಲ್‌ಗಳಲ್ಲಿ ಅಗ್ರ ಲೇಖನಗಳೇ ಪ್ರಕಟವಾಗಿವೆ. ಆದರೆ ಇವನ್ನು ತಡೆಯಲು ಗಂಭೀರ ಪ್ರಯತ್ನಗಳೇನೂ ಆಗುತ್ತಿಲ್ಲ. ವೈದ್ಯಕೀಯ ಸಂಘಟನೆಗಳ ಸಮಾವೇಶಗಳಲ್ಲಿ ಎಲ್ಲಾ ಕಂಪೆನಿಗಳು ನೀರಿನಂತೆ ಹಣ ಸುರಿಯುತ್ತಲೇ ಇವೆ, ನಿಯಮಗಳಡಿಯಲ್ಲಿ ನುಸುಳುವ ಉಪಾಯಗಳು ಇದ್ದೇ ಇರುತ್ತವೆ. ಎಲ್ಲಿಯವರೆಗೆ ಆರೋಗ್ಯ ಸೇವೆಗಳು, ಔಷಧ ಸಂಶೋಧನೆ ಮತ್ತು ಪೂರೈಕೆಗಳು ಖಾಸಗಿ ಹಿಡಿತದಿಂದ ಬಿಡುಗಡೆಗೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಇವು ಇದ್ದೇ ಇರುತ್ತವೆ.
ಕೇವಲ ವೈದ್ಯರಾಗಿರದೇ ಸಾಮಾಜಿಕ, ರಾಜಕೀಯ ಚಿಂತನೆ, ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೀರಿ. ಇಂದಿನ ಕೋಮುವಾದಿ, ಕಾರ್ಪೋರೇಟ್ ಪರ ರಾಜಕಾರಣ, ಹಾಗೂ ಎಡ ಪಂಥೀಯ ಪರ್ಯಾಯ ರಾಜಕಾರಣದ ಕುರಿತು ನಿಮ್ಮ ಅಭಿಪ್ರಾಯವೇನು?
ದೇಶದ ರಾಜಕಾರಣವು ತೀರಾ ಅಪಾಯಕಾರಿ ಸ್ಥಿತ್ಯಂತರದಲ್ಲಿದೆ. ಹಲವು ದಶಕಗಳ ಕಾಲ ನಿರಂತರವಾಗಿ ಅಧಿಕಾರವನ್ನು ಅನುಭವಿಸಿದ್ದ ಕಾಂಗ್ರೆಸ್ ಪಕ್ಷವು ದುರಹಂಕಾರ, ಒಳಜಗಳಗಳಿಂದ, ಕೋಮುವಾದಿ, ಭ್ರಷ್ಟ, ಜನವಿರೋಧಿ ಶಕ್ತಿಗಳ ಜೊತೆ ಅನೈತಿಕ ಹೊಂದಾಣಿಕೆಗಳಿಂದ ಶಿಥಿಲಗೊಂಡಿದೆ. ಪಂಥ ಶ್ರೇಷ್ಠತೆಯ ವ್ಯಸನದಿಂದ ಭಾರತ ಕಮ್ಯುನಿಸ್ಟ್ ಪಕ್ಷವನ್ನೂ, ರೈತ-ಕಾರ್ಮಿಕ ಸಂಘಟನೆಗಳನ್ನೂ ಒಡೆದ, ಒಡೆಯುತ್ತಲೇ ಇರುವ ಪರಮ ಅನ್ಯಾಯದಿಂದಾಗಿ ವೈಚಾರಿಕವಾದ, ಜನಪರವಾದ ಪ್ರತಿರೋಧವೂ ದಿಕ್ಕೆಟ್ಟಿದೆ. ಈ ಸನ್ನಿವೇಶದ ಲಾಭ ಪಡೆದು ಮತೀಯವಾದಿ, ಮನುವಾದಿ, ಜನವಿರೋಧಿ ಶಕ್ತಿಗಳು ಬಲವಾಗಿ ಬೆಳೆದಿವೆ, ಮನೆಮನೆಗೆ ತಲುಪಬಲ್ಲ ಕಾರ್ಯಕರ್ತರ ಪಡೆಗಳನ್ನೇ ಕಟ್ಟಿವೆ, ಎಲ್ಲ ಬಗೆಯ ಮಾಧ್ಯಮಗಳನ್ನೂ ಆಕ್ರಮಿಸಿಕೊಂಡಿವೆ; ದೊಡ್ಡ ಕಾರ್ಪರೇಟ್ ಶಕ್ತಿಗಳು ಇವಕ್ಕೆ ಸಕಲ ನೆರವನ್ನೂ ನೀಡುತ್ತಿವೆ, ತಮಗೆ ಬೇಕಾದ ಕಾಯಿದೆಗಳನ್ನೂ ಬರೆಸುತ್ತಿವೆ. ಎಡಪಕ್ಷಗಳು ಜನಪರ ಸಂಘರ್ಷಗಳನ್ನು ನಡೆಸುತ್ತಲೇ ಕಾಂಗ್ರೆಸ್ ಜೊತೆಗಿದ್ದು ಅದನ್ನು ಸರಿದಾರಿಯಲ್ಲಿ ನಡೆಸಬೇಕು, ಇಲ್ಲವಾದರೆ ಫ್ಯಾಸಿಸ್ಟ್ ಶಕ್ತಿಗಳಿಗೆ ಅವಕಾಶವಾಗಲಿದೆ ಎಂದು 60ರ ದಶಕದಲ್ಲಿ ಡಾಂಗೆಯವರು ಹೇಳಿದ್ದು ನಿಜವಾಗಿ ಹೋಗಿದೆ.
ಈಗ ಕಾರ್ಪರೇಟ್-ಫ್ಯಾಸಿಸ್ಟ್ ಕೂಡಾಟದಲ್ಲಿ ಸಾಂವಿಧಾನಿಕ ಸಂಸ್ಥೆಗಳು, ಜನಪರ ನೀತಿಗಳು, ಸಾರ್ವಜನಿಕ ರಂಗದ ಬಲಿಷ್ಠ ಸಂಸ್ಥೆಗಳು ಎಲ್ಲವೂ ಧ್ವಂಸಗೊಳ್ಳುತ್ತಿರುವುದನ್ನು ತಡೆಯಬೇಕಿದ್ದರೆ ಜನರಿಗೆ ಇವನ್ನೆಲ್ಲ ವಿವರಿಸುವ ಕೆಲಸವಾಗಬೇಕು, ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಅದಕ್ಕಾಗಿ ತಳಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆಯಾಗಲೇಬೇಕು.
ಕಾಂಗ್ರೆಸ್ ಮುಕ್ತ ಭಾರತವೆಂಬ ಬಲಪಂಥೀಯರ ಬೊಬ್ಬೆ, ಕಾಂಗ್ರೆಸ್ ಮುಕ್ತ ಪ್ರತಿಪಕ್ಷವೆಂಬ ‘ಎಡ’ಪಂಥೀಯರ ಬಯಕೆ, ಎರಡೂ ಅವಾಸ್ತವಿಕವೇ. ಕಾಂಗ್ರೆಸ್‌ಗೆ ದೇಶವ್ಯಾಪಿ ನೆಲೆಯಿದೆ, ಈಗಲೂ 20%ನಷ್ಟು ಮತದಾರರ ವಿಶ್ವಾಸವಿದೆ, 6 ರಾಜ್ಯಗಳಲ್ಲಿ ಅಧಿಕಾರವಿದೆ, ಅದನ್ನು ಕಡೆಗಣಿಸಲಾದೀತೇ? ರಾಹುಲ್ ಗಾಂಧಿಗೆ ಗಟ್ಟಿಯಾದ ಫ್ಯಾಸಿಸ್ಟ್ ವಿರೋಧಿ, ಆರೆಸೆಸ್ ವಿರೋಧಿ ನಿಲುವಿದೆ ಎನ್ನುವುದು ಸ್ಪಷ್ಟ. ರಾಹುಲ್ ಬಗ್ಗೆ ಅನೇಕ ಹಿರಿಯ ಚಿಂತಕರಿಗೆ ಅಪಾರ ಪ್ರೀತಿ, ಅಭಿಮಾನಗಳಿವೆ ಎನ್ನುವುದನ್ನೂ ತುಂಬಾ ಹತ್ತಿರಯಿಂದ ನಾನು ಕಂಡಿದ್ದೇನೆ. ಮೋದಿ-ಆರೆಸೆಸ್ ನೀತಿಗಳ ವಿರುದ್ಧವಾಗಿ ನೇರ ಹೋರಾಟಕ್ಕಿಳಿಯುವ ರಾಹುಲ್ ಮತ್ತು ಸ್ವ -ಹಿತಾಸಕ್ತಿಗಳಿಗಾಗಿ ಹೊಂದಾಣಿಕೆಗಳನ್ನು ಮಾಡಬಯಸುವ ಹಳಬರ ನಡುವಿನ ಸಂಘರ್ಷವೇ ಅಧ್ಯಕ್ಷತೆಯ ಚರ್ಚೆ ಎಂದು ನನಗನಿಸುತ್ತಿದೆ.
ಕಮ್ಯುನಿಸ್ಟ್ ಪಕ್ಷವನ್ನು ಒಡೆದ ತಪ್ಪನ್ನು ಒಪ್ಪಿಕೊಂಡು ಮತ್ತೆ ಒಂದಾಗಲೇಬೇಕು. ಲೋಕದ ಮಜೂರರೆಲ್ಲರೂ ಒಗ್ಗಟ್ಟಾಗಿರಿ, ಶುದ್ಧ ಕ್ರಾಂತಿ ಆಗಲೇಬೇಕು ಎಂದೆಲ್ಲ ಕೂಗುತ್ತ ಇಲ್ಲಿಯ ರೈತ-ಕಾರ್ಮಿಕ ಸಂಘಟನೆಗಳನ್ನು ಒಡೆಯುತ್ತಿದ್ದರೆ, ಪಂಚಾಯತ್ ಚುನಾವಣೆಯಲ್ಲಿ ಎದುರಾಳಿಯನ್ನು ಸೋಲಿಸುವುದಕ್ಕೂ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರೆ ಎಡಪಂಥೀಯ ರಾಜಕಾರಣ ಎಲ್ಲಿಗೆ ತಲುಪಬಹುದು? ಜೈ ಭೀಮ್, ಲಾಲ್ ಸಲಾಂ ಎಂಬ ಘೋಷಣೆಯಷ್ಟೇ ಸಾಲದು; ಕಟ್ಟಕಡೆಯ ದಮನಿತರ ವಿಮೋಚನೆಗೆ ಬಾಬಾ ಸಾಹೇಬರು ತೋರಿರುವ ಮಾರ್ಗವನ್ನು ದುಡಿಯುವವರೆಲ್ಲರ ವಿಮೋಚನೆಗೆ ಮಾರ್ಕ್ಸ್-ಎಂಗೆಲ್ಸ್ ತೋರಿರುವ ದಾರಿಯ ಜೊತೆ ಸೇರಿಸಿ, ಎಲ್ಲ ದಮನಿತರ ದನಿಯಾಗಿ ಹೋರಾಡಬೇಕಾಗಿದೆ. ಮಾರ್ಕ್ಸ್-ಎಂಗೆಲ್ಸ್ ಹೇಳಿದ್ದಷ್ಟೇ ಸರಿ, ಕ್ರಾಂತಿ ಘಟಿಸಿಯೇ ತೀರುತ್ತದೆ ಎಂದು ವಾದಿಸುವುದು ಮಾರ್ಕ್ಸ್-ಎಂಗೆಲ್ಸ್ ಅವರಿಗೆ ಅವಮಾನ ಮಾಡಿದಂತೆಯೇ ಸರಿ.
Leave a Reply