Arrogant Employers, Neglected Employees

ಉಳ್ಳವರ ದಾರ್ಷ್ಟ್ಯ, ನೌಕರರ ಹಿತ ನಿರ್ಲಕ್ಷ್ಯ

ಪ್ರಜಾವಾಣಿ, ಜನವರಿ 18, 2025

‘ವಾರಕ್ಕೆ 90 ಗಂಟೆ ದುಡಿಯಬೇಕು, ರವಿವಾರವೂ ದುಡಿಯಬೇಕು, ಮನೆಯಲ್ಲಿದ್ದು ಹೆಂಡತಿಯ ಮುಖವನ್ನು ದಿಟ್ಟಿಸುವುದೇನಿದೆ?’ ಎನ್ನುತ್ತಾರೆ ಲಾರ್ಸೆನ್ ಟೂಬ್ರೊ ಇನ್ಫೋಟೆಕ್ ಅಧ್ಯಕ್ಷ ಸುಬ್ರಮಣ್ಯನ್. ಪ್ರಧಾನಿ 100 ಗಂಟೆ ಕೆಲಸ ಮಾಡುತ್ತಾರೆ, ನೌಕರರು ವಾರಕ್ಕೆ ಎಪ್ಪತ್ತು ಗಂಟೆ ದುಡಿಯಬೇಕು ಎನ್ನುತ್ತಾರೆ ಇನ್ಫೋಸಿಸ್ ನಾರಾಯಣಮೂರ್ತಿ. ಯಾರೆಷ್ಟು ನಿದ್ದೆಗೆಟ್ಟಿದ್ದಾರೆ ಎಂದು ನೋಡಿದವರಿಲ್ಲ, ಆದರೆ ಇವರಿಂದ ಎಲ್ಲರ ನಿದ್ದೆಗೆಡುತ್ತಿದೆ. ವಿಶ್ವಮಾನ್ಯ ನಿಯಮಗಳನ್ನು ಧಿಕ್ಕರಿಸಿ, ತಮ್ಮದೇ ನೌಕರರ ಹಿತವನ್ನೂ ಕಡೆಗಣಿಸಿ ಹೀಗೆಲ್ಲ ಹೇಳುತ್ತಾರೆಂದರೆ ಇಂದಿನ ಭಾರತದಲ್ಲಿ ಉಳ್ಳವರ ದಾರ್ಷ್ಟ್ಯತನವು ಎಲ್ಲಿಗೆ ತಲುಪಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಯಾವುದೇ ಕಾರ್ಮಿಕನನ್ನು ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ದುಡಿಸುವಂತಿಲ್ಲ ಎನ್ನುವುದು ವಿಶ್ವದೆಲ್ಲೆಡೆ ಇರುವ ಕಾನೂನಾಗಿದೆ. ಇದು ಕಾರ್ಮಿಕರ ಬಲಿದಾನಗಳಿಂದ ದೊರೆತದ್ದೇ ಹೊರತು ಯಾರೋ ಪುಕ್ಕಟೆಯಾಗಿ ನೀಡಿದ್ದಲ್ಲ. ಕೈಗಾರಿಕಾ ಕ್ರಾಂತಿಯ ಹೊಸ ಯಂತ್ರಗಳಲ್ಲಿ ಗಾಣದೆತ್ತುಗಳಂತೆ 12-20ಗಂಟೆ ದುಡಿಸುತ್ತಿದ್ದುದನ್ನು ಪ್ರತಿಭಟಿಸಿ ‘8 ಗಂಟೆ ದುಡಿಮೆ, 8 ಗಂಟೆ ವಿನೋದ, 8 ಗಂಟೆ ನಿದ್ದೆ’ ಎಂದು ವಿಶ್ವದಾದ್ಯಂತ ಕಾರ್ಮಿಕರು ಮುಷ್ಕರ ಹೂಡಿದ್ದರು. ಮೇ 1, 1886 ರಿಂದ ಅಮೆರಿಕಾದ ಶಿಕಾಗೋ ನಗರದಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆಯ ಮೇಲೆ ಪೋಲೀಸರ ಅಮಾನುಷ ದಾಳಿಗಳಲ್ಲಿ ಅನೇಕರು ಸತ್ತರು, ನಾಯಕರು ಗಲ್ಲಿಗೇರಿಸಲ್ಪಟ್ಟರು. ಅವರ ಬಲಿದಾನದ ನೆನಪಿಗಾಗಿಯೇ ಮೇ 1 ಅಂತರರಾಷ್ಟ್ರೀಯ ಕಾರ್ಮಿಕರ ದಿನವಾಯಿತು. ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಎಐಎಸ್‌ಎಫ್ ಸದಸ್ಯನಾಗಿದ್ದೆ ಎಂದು ಹೇಳಿಕೊಳ್ಳುವ ನಾರಾಯಣಮೂರ್ತಿಯವರಿಗೆ ಮೇ ದಿನದ ಈ ಮಹತ್ವವು ನೆನಪಿಲ್ಲವೇ?

ದಿನಕ್ಕೆ 8 ಗಂಟೆ, ವಾರಕ್ಕೆ 48 ಗಂಟೆ ಮೀರದ ದುಡಿಮೆಯ ಬೇಡಿಕೆಯನ್ನು ಮೊದಲ ಮಹಾಯುದ್ಧದ ಕೊನೆಗೆ, ಜುಲೈ 28, 1919ರಂದು, ಸಹಿ ಹಾಕಿದ ವರ್ಸೈ ಒಪ್ಪಂದದಲ್ಲೇ ಸೇರಿಸಲಾಗಿತ್ತು. ಅದೇ ವರ್ಷಾಂತ್ಯಕ್ಕೆ ನಡೆದ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐಎಲ್ಒ) ಮೊತ್ತಮೊದಲ ಸಮ್ಮೇಳನದ ನಿರ್ಣಯದ ಮೊದಲಲ್ಲೇ ಇದನ್ನು ಘೋಷಿಸಲಾಯಿತು; 1930ರಲ್ಲಿ ನಡೆದ ಐಎಲ್ಒ ಸಮ್ಮೇಳನವು ಇದನ್ನು ಕಚೇರಿ ಹಾಗೂ ವಹಿವಾಟುಗಳ ನೌಕರರಿಗೂ ವಿಸ್ತರಿಸಿತು. ಭಾರತದಲ್ಲಿ 1948ರ ಕಾರ್ಖಾನೆಗಳ ಕಾಯಿದೆ 7:51, ಕರ್ನಾಟಕ ಅಂಗಡಿಗಳು ಮತ್ತು ಸಂಸ್ಥೆಗಳ ಕಾಯಿದೆ 1961ರ 3:7(1), ಮತ್ತು ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ದುಡಿಮೆಯ ನಿಬಂಧನೆಗಳು 2020, ಕಂಡಿಕೆ 25, 26 ಎಲ್ಲವೂ ಕೆಲಸದ ಅವಧಿಯನ್ನು ವಾರಕ್ಕೆ 48 ಗಂಟೆಗಳಿಗೆ ಸೀಮಿತಗೊಳಿಸಿವೆ, ಮಾತ್ರವಲ್ಲ, 8 ಗಂಟೆಗಿಂತ ಹೆಚ್ಚು ದುಡಿಸಿದರೆ ದುಪ್ಪಟ್ಟು ಭತ್ಯೆಯನ್ನು ನೀಡಬೇಕೆಂದೂ ವಿಧಿಸಿವೆ.

ಹಾಗಿರುವಾಗ, 70-90 ಗಂಟೆ ದುಡಿಯಬೇಕೆಂದು ಈ ಐಟಿ ದೈತ್ಯರು ನಿರ್ಭಿಡೆಯಿಂದ ಹೇಳುವುದಕ್ಕೆ ಕಾರಣವೇನು? ತಮ್ಮ ನೌಕರರಿಗೂ, ರಾಜಕೀಯ ಪಕ್ಷಗಳಿಗೂ ವಿಪರೀತ ಬುದ್ಧಿವಾದ ಹೇಳುವ ಈ ಕಂಪೆನಿಗಳು ಕಳೆದ 90ರ ದಶಕದ ಆರಂಭದಲ್ಲಿ ಐಟಿ ಕ್ರಾಂತಿಯ ಹೊಸತನದ ದುರ್ಲಾಭವನ್ನು ಪಡೆದು ಸರಕಾರಗಳಿಂದ ಭೂಮಿ, ಇತರ ಸೌಲಭ್ಯಗಳು, ಬಗೆಬಗೆಯ ವಿನಾಯಿತಿಗಳು ಎಲ್ಲವನ್ನೂ ಪಡೆದುಕೊಂಡವು. ಉದ್ಯೋಗಿಗಳ ದುಡಿಮೆಯ ಶರತ್ತುಗಳನ್ನು ತಿಳಿಸಬೇಕೆಂದು ವಿಧಿಸಿರುವ 1946ರ ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ಕಾಯಿದೆಯಿಂದಲೂ ಕರ್ನಾಟಕದ ಐಟಿ ಕಂಪೆನಿಗಳು 1999ರಿಂದಲೇ ವಿನಾಯಿತಿಯನ್ನು ಪಡೆದುಕೊಂಡವು, ಜೂನ್ 2024ರಲ್ಲಿ ಇದನ್ನು ಮತ್ತೆ 5 ವರ್ಷಗಳಿಗೆ ಮುಂದುವರಿಸಲಾಗಿದೆ. ಐಟಿ ಉದ್ಯೋಗಿಗಳ ಹಿತಾಸಕ್ತಿಗಳನ್ನು ಕಡೆಗಣಿಸಿ, ಮಾಲಿಕರಿಗೆ ಮಣೆ ಹಾಕುವಲ್ಲಿ ಕಾಂಗ್ರೆಸ್-ಭಾಜಪಗಳಲ್ಲಿ ಯಾವುದೇ ವ್ಯತ್ಯಾಸವೂ ಕಾಣುವುದಿಲ್ಲ. ಇಂಥ ವಿನಾಯಿತಿಗಳಿಂದಾಗಿಯೇ ಅತಿ ಕಡಿಮೆ ಸಂಬಳಕ್ಕೆ, ಹೆಚ್ಚುವರಿ ಭತ್ಯೆಯೂ ಇಲ್ಲದೆ, ಅತಿ ಹೆಚ್ಚು ದುಡಿಸುವುದರಲ್ಲಿ ಭಾರತದ ಐಟಿ ಕಂಪೆನಿಗಳು ಅಗ್ರಣಿಗಳಾಗಿವೆ.

ಶತಮಾನದ ಹಿಂದೆ 8 ಗಂಟೆಗಿಂತ ಹೆಚ್ಚು ದುಡಿಯೆವು ಎಂದು ಪ್ರತಿಭಟಿಸಿ ಕಾರ್ಮಿಕರು ಹುತಾತ್ಮರಾಗಿದ್ದರೆ, ಇಂದು ಅನೇಕರು ತಮ್ಮ ಎಳೆಯ ವಯಸ್ಸಿನಲ್ಲೇ ಕೆಲಸದ ಒತ್ತಡದಿಂದ ಹುತಾತ್ಮರಾಗುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಐಟಿ, ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಉದ್ಯೋಗಿಗಳು ಕೆಲಸದ ಒತ್ತಡವನ್ನು ತಾಳಲಾರದೆ ಸಾವಿಗೆ ಶರಣಾಗುತ್ತಿರುವ ವರದಿಗಳು ಪ್ರತೀ ತಿಂಗಳು 2-3ರಂತೆ ಬರುತ್ತಲೇ ಇವೆ. ಭಾರತದಲ್ಲಿ ಆತ್ಮಹತ್ಯೆಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಶೇ.4-5ರಷ್ಟು ಏರಿಕೆಯಾಗುತ್ತಿದ್ದು, ಕೆಲಸದ ಒತ್ತಡಗಳು, ಖಿನ್ನತೆ, ಆತಂಕ, ಒಂಟಿತನಗಳು ಪ್ರಮುಖ ಕಾರಣಗಳಾಗಿವೆ. ಶೇ. 80ಕ್ಕೂ ಹೆಚ್ಚು ಐಟಿ ಉದ್ಯೋಗಿಗಳು ಅಧಿಕ ಕೆಲಸದ ಒತ್ತಡವನ್ನು ಅನುಭವಿಸುತ್ತಿದ್ದು, ಶೇ. 40ರಷ್ಟು ಮಂದಿ ಅದರಿಂದ ಖಿನ್ನತೆಗೂ, ಆತಂಕಕ್ಕೂ ಒಳಗಾಗುತ್ತಿದ್ದಾರೆಂದೂ, ಶೇ. 60ರಷ್ಟು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆಂದೂ, ಇದರಿಂದಾಗಿ ಧೂಮಪಾನ ಹಾಗೂ ಮದ್ಯಪಾನದ ಚಟಗಳು ಹೆಚ್ಚುತ್ತಿವೆಯೆಂದೂ, ಗಂಡ-ಹೆಂಡತಿಯರಿಗೆ ಬೆರೆಯುವುದಕ್ಕೂ ಆಗದೆ ವಿಚ್ಛೇದನಗಳು ಹೆಚ್ಚುತ್ತಿವೆಯೆಂದೂ ಅಧ್ಯಯನಗಳು ತೋರಿಸಿವೆ. ಇವುಗಳ ಮೂಲ ಕಾರಣವನ್ನು ಸರಿಪಡಿಸುವ ಬದಲು ಯೋಗಾಭ್ಯಾಸ, ದಿನಕ್ಕೊಂದರಂತೆ ಹುಟ್ಟುತ್ತಿರುವ ಬಾಬಾಗಳ ಉಪದೇಶ ಮುಂತಾದವನ್ನು ಉದ್ಯೋಗಿಗಳ ಮೇಲೆ ಹೇರಲಾಗುತ್ತಿದೆ.

ಅತಿಯಾದ ಕೆಲಸದ ಒತ್ತಡಗಳಿಂದ ಯುವ ಜನರಲ್ಲಿ ಬೊಜ್ಜು, ಹೃದಯಾಘಾತ, ಹಠಾತ್ ಹೃದಯ ಸ್ಥಂಭನ, ಮಿದುಳಿನ ಆಘಾತಗಳೂ ಹೆಚ್ಚುತ್ತಿವೆ. ಶೇ. 90ಕ್ಕೂ ಹೆಚ್ಚು ಐಟಿ ಉದ್ಯೋಗಿಗಳಲ್ಲಿ ಅತಿಯಾದ ಕೆಲಸದಿಂದ ಕುತ್ತಿಗೆ, ಭುಜ, ಬೆರಳುಗಳ ನೋವು, ಕಣ್ಣಿನ ತೊಂದರೆ ಇತ್ಯಾದಿಗಳಾಗುವುದನ್ನು ಗುರುತಿಸಲಾಗಿದೆ. ಸುಮಾರು 7,40,000 ನೌಕರರಲ್ಲಿ ನಡೆಸಿದ ಅಧ್ಯಯನದಂತೆ, ವಾರಕ್ಕೆ 55 ಗಂಟೆಗಿಂತ ಹೆಚ್ಚು ದುಡಿಯುವವರಲ್ಲಿ 2000ನೇ ವರ್ಷಕ್ಕೆ ಹೋಲಿಸಿದರೆ 2016ರ ವೇಳೆಗೆ ಹೃದಯಾಘಾತದ ಸಾವುಗಳಲ್ಲಿ ಶೇ.42ರಷ್ಟು ಮತ್ತು ಮಿದುಳಿನ ಆಘಾತದ ಸಾವುಗಳಲ್ಲಿ ಶೇ.19ರಷ್ಟು ಏರಿಕೆಯಾಗಿದೆ. ಐದು ವರ್ಷ ಪಾಳಿ ಬದಲಿಸುತ್ತಾ ಕೆಲಸ ಮಾಡುವವರಲ್ಲಿ ಹೃದಯಾಘಾತವು ಶೇ. 7 ರಷ್ಟು ಹೆಚ್ಚುತ್ತದೆ ಎನ್ನಲಾಗಿದೆ. ಕೊರೋನಾ ನೆಪದಲ್ಲಿ ಲಾಕ್ ಡೌನ್ ಮಾಡಿ, ಮನೆಯಿಂದಲೇ ಕೆಲಸ ಎಂಬುದನ್ನು ಆರಂಭಿಸಿ, ಲಸಿಕೆಯನ್ನೂ ಕೊಟ್ಟು, ಜನರು ಮನೆಯಲ್ಲೂ ನೆಮ್ಮದಿಯಿಲ್ಲದೆ, ಸಾಮಾಜಿಕ ಸಂವಹನಗಳೂ ಇಲ್ಲದೆ, ಶೀಘ್ರ ತಿನಿಸುಗಳ ದಾಸರಾಗಿ, ಬೊಜ್ಜು ಬೆಳೆಸಿ, ಇನ್ನಷ್ಟು ಸಮಸ್ಯೆಗಳಿಗೀಡಾಗುವಂತಾಗಿದೆ.

ವಾರಕ್ಕೆ 55 ಗಂಟೆಗಿಂತ ಹೆಚ್ಚು ದುಡಿಯುವುದರಿಂದ ಗಂಭೀರವಾದ ಅಪಾಯವುಂಟಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಐಎಲ್‌ಒಗಳು ಎಚ್ಚರಿಕೆ ನೀಡಿವೆ. ಆದ್ದರಿಂದ ಸರಕಾರವು ಈ ಐಟಿ ಕಂಪೆನಿಗಳಿಗೆ ಕಾರ್ಮಿಕ ಕಾಯಿದೆಗಳಿಂದ ನೀಡಿರುವ ಎಲ್ಲಾ ವಿನಾಯಿತಿಗಳನ್ನು ಕೂಡಲೇ ಹಿಂಪಡೆದು, ವಾರಕ್ಕೆ 48 ಗಂಟೆಗಳ ಮಿತಿಯನ್ನು ಕಡ್ಡಾಯ ಮಾಡಬೇಕು, ಉಡಾಫೆಯ ಹೇಳಿಕೆಗಳನ್ನು ನೀಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ದೇಶದ ಪ್ರಜೆಗಳ ನೆಮ್ಮದಿ ಹಾಗೂ ಆರೋಗ್ಯಗಳೇ ದೇಶದ ಅಭಿವೃದ್ಧಿಯ ಮಾನಕವೇ ಹೊರತು ನಾಲ್ಕೈದು ಕಂಪೆನಿಗಳ ಕೋಟಿಗಟ್ಟಲೆ ಲಾಭವಲ್ಲ.

Arrogant Employers, Neglected Employees

‘Work 90 hours a week, work even on Sundays, why stay at home and stare at wife’s face?’ says Larsen & Toubro Infotech Chairman Subramanian. When our Prime Minister works 100 hours, why can’t employees work 70 hours a week, asks Infosys’ Narayana Murthy. No one has seen any of these being sleepless, but they are making everyone lose their sleep. Such statements, defying universally accepted rules and ignoring the interests of their own employees, clearly show the heights of arrogance such technocrats have reached in present day India.

Almost all countries of the world have enacted laws that no worker can be made to work more than 8 hours a day. This limit on working hours was not granted by someone for nothing, but was earned through the sacrifices of the working class movement. In the late nineteenth century, workers around the world went on long drawn strikes demanding ‘8 hours of work, 8 hours of recreation, 8 hours of sleep’, in protest against the new machines of the Industrial Revolution, which forced them to work for 12-20 hours a day like slaves. Huge protests of workers that started in Chicago from May 1, 1886 were subjected to brutal police attacks and leaders were hanged. May 1 became International Workers’ Day in commemoration of their sacrifice.Has Mr. Narayana Murthy, who claims to have been a member of the leftist student organization AISF, forgot this significance of May Day?

The demand for restricting the working hours to 8 hours a day and 48 hours a week was included in the Treaty of Versailles, signed on July 28, 1919, at the end of World War I. The same was included as the second clause in the resolution of the first conference of the International Labor Organization (ILO) held at the end of the same year. The ILO conference held in 1930 extended this to office and commercial workers. In India, the Factories Act 7:51 of 1948, the Karnataka Shops and Establishments Act 3:7(1) of 1961, and the Occupational Safety, Health and Labour Regulations 2020, Sections 25 and 26 all limit the working hours to 48 hours per week, and also provide for double the allowance for working overtime beyond 8 hours.

With such laws in place, how do these IT giants so boldly ask their employees to work 70-90 hours per week? These companies, who are now so profusely advising their employees and political parties, had taken advantage of the novelty of the IT revolution in the early 90s and got land, other facilities, and various exemptions from the governments. Karnataka’s IT companies have obtained exemption from the Industrial Employment (Standing Orders) Act of 1946 since 1999, which mandates disclosure of working conditions of employees, and this exemption was extended for another 5 years in June 2024. There is no difference between the Congress and the BJP in pandering to the owners of the IT firms, ignoring the interests of employees. It is only because of such exemptions that Indian IT companies are at the forefront of forcing their employees to work for maximum hours for the lowest wages, without any additional allowances.

While workers were martyred a century ago protesting against working more than 8 hours, today many are becoming martyrs at a young age due to unbearable pressures of excessive work. For the last three to four years, there have been 2-3 reports every month of employees of IT, banks and financial institutions committing suicide due to work pressure. The cases of suicide in India are increasing by 4-5% year on year, with work pressure, depression, anxiety and loneliness being the main reasons. Studies have shown that more than 80% of IT employees are experiencing high work pressure, 40% are suffering from depression and anxiety, 60% are suffering from insomnia, smoking and alcohol addiction are increasing due to this, and divorces are increasing due to husbands and wives not being able to find enough time to be together. Instead of correcting the root cause of these, yoga practice, preachings of Babas who pop up every day, and other such measures are being imposed on employees. 

Due to excessive work pressure, obesity, heart attack, sudden cardiac arrest, and stroke are also increasing in young people. It has been identified that more than 90% of IT employees suffer from neck, shoulder, finger pain, eye problems, etc. due to excessive work. According to a study conducted on about 7,40,000 employees, compared to 2000, by 2016 there was a 42% increase in heart attack deaths and a 19% increase in stroke deaths among those working more than 55 hours a week. It has been reported that heart attacks increase by 7% among those working for five years in shifts. Lockdowns  work from home, and vaccinations etc., under the pretext of COVID have worsened the situation, with loss of recreation at home, reduction in social interactions, increasing dependence on fast food, all contributing to obesity and other health issues.

The World Health Organization and ILO have warned that working more than 55 hours a week can pose a serious risk. Therefore, the government should immediately withdraw all exemptions from labor laws given to these IT companies, make a 48-hour workweek mandatory, and take stern action against those who make outrageous statements. The well-being and health of the country’s citizens is the only yardstick of development, not the crores of profits of four or five companies.

Be the first to comment

Leave a Reply

Your email address will not be published.


*