ಮದ್ದು ನಮಗಾಗಿಯೋ, ನಾವು ಮದ್ದಿಗಾಗಿಯೋ?
ವಾರ್ತಾಭಾರತಿ 13ನೇ ವಾರ್ಷಿಕ ವಿಶೇಷಾಂಕ, 2015, ಅಕ್ಟೋಬರ್ 5, 2015
ಈ ಭೂ ಮಂಡಲವನ್ನು ಆಳುತ್ತಿರುವವರು ಯಾರು? ಮತಾಡಳಿತಗಳು ಮರೆಯಾಗಿವೆ, ಚಕ್ರಾಧಿಪತ್ಯಗಳು ಮುರಿದು ಹೋಗಿವೆ, ಎಲ್ಲೋ ಒಂದೆರಡು ಕಡೆಗಳನ್ನು ಬಿಟ್ಟರೆ ಅರಸೊತ್ತಿಗೆಗಳೆಲ್ಲ ಬಿದ್ದು ಹೋಗಿವೆ, ಸೇನಾಡಳಿತಗಳೂ ಅಲ್ಪಾಯುಗಳಾಗಿವೆ. ಹೆಚ್ಚಿನ ದೇಶಗಳಲ್ಲಿ ಜನರೇ ಆರಿಸಿದ ಆಡಳಿತಗಳು ಅಧಿಕಾರದಲ್ಲಿವೆ.
ಸರಕಾರಗಳೇನೋ ಜನರಾಯ್ಕೆಯಂತಿವೆ. ಆದರೆ ಆಳ್ವಿಕೆ? ಅದು ದುಡ್ಡಿದ್ದವರ ಕೈಯಲ್ಲಿದೆ. ಹಿಂದೆಯೂ ಹಾಗಿತ್ತು, ಈಗಲೂ ಹಾಗೆಯೇ ಇದೆ. ಅಮೆರಿಕದಲ್ಲಿ ಇತ್ತೀಚೆಗೆ ಅಧ್ಯಕ್ಷೀಯ ಚುನಾವಣೆಗೆ 240 ಕೋಟಿ ಡಾಲರ್ (15 ಸಾವಿರ ಕೋಟಿ ರೂ), ಇನ್ನುಳಿದ ಚುನಾವಣೆಗಳಿಗೆ 290 ಕೋಟಿ ಡಾಲರ್ (18 ಸಾವಿರ ಕೋಟಿ ರೂ) ಖರ್ಚಾಗಿದೆ. ನಮ್ಮಲ್ಲಿ ಕಳೆದ ಚುನಾವಣಾ ವರ್ಷದಲ್ಲಿ ದೊಡ್ಡ ರಾಜಕೀಯ ಪಕ್ಷಗಳು ಲೆಕ್ಕಕ್ಕೆ 1000 ಕೋಟಿ ಪಡೆದಿದ್ದರೆ, ಲೆಕ್ಕವಿಲ್ಲದೆ ಮೂವತ್ತು-ನಲುವತ್ತು ಸಾವಿರ ಕೋಟಿ ವ್ಯಯಿಸಿವೆ. ಈ ಕೋಟಿಗಟ್ಟಲೆಯ ಧನಬಲದಲ್ಲಿ ಜನಬೆಂಬಲ ಪಡೆದು ಅಧಿಕಾರಕ್ಕೇರುವವರನ್ನು ಈ ಕೋಟಿಗಳನ್ನು ಕೊಟ್ಟವರು ನಿಯಂತ್ರಿಸುತ್ತಾರೆ, ಹಿಂದೆ ನಿಂತು ಆಳುತ್ತಾರೆ.
ಹೀಗೆ ಕೋಟಿ ಕೊಟ್ಟು ಭೂಲೋಕದ ಹೆಚ್ಚಿನ ಸರಕಾರಗಳನ್ನು ನಿಯಂತ್ರಿಸುತ್ತಿರುವವರು ದೊಡ್ಡ ಉದ್ದಿಮೆದಾರರೇ. ಆರ್ಥಿಕ-ರಾಜಕೀಯ-ಸಾಮಾಜಿಕ ನೀತಿಗಳನ್ನು, ಯೋಜನೆಗಳನ್ನು ಬೋಧಿಸುವವರು ಇವರೇ. ಜನಸಾಮಾನ್ಯರ ಓಟು, ಉದ್ಯಮಿಗಳ ನೋಟು. ಅದರಲ್ಲೂ ಕೃಷಿ ಹಾಗೂ ಆಹಾರೋದ್ಯಮ, ತೈಲೋದ್ಯಮ, ಯುದ್ಧೋದ್ಯಮ ಮತ್ತು ಔಷಧೋದ್ಯಮಗಳದ್ದೇ ಸಿಂಹಪಾಲು. ಈ ಉದ್ಯಮಗಳೊಳಗೆ ಬಿಡಿಸಲಾಗದ ನಂಟಿದೆ, ಎಲ್ಲವೂ ಪರಸ್ಪರ ಪೋಷಿಸಿಕೊಂಡೇ ಬೆಳೆಯುತ್ತವೆ (ಎಲ್ಲವನ್ನೂ ಒಂದೇ ಸೂರಿನಡಿ ಹೊಂದಿರುವ ಬೃಹತ್ ಕಂಪೆನಿಗಳೂ ಇವೆ), ಸರಕಾರಗಳನ್ನು ಜೊತೆಗೂಡಿ ನಿಯಂತ್ರಿಸುತ್ತವೆ.
ಜಾಗತಿಕ ಔಷಧೋದ್ಯಮದ ವಹಿವಾಟು ವರ್ಷಕ್ಕೆ ಸುಮಾರು 1050 ಶತಕೋಟಿ ಡಾಲರುಗಳಷ್ಟು, ಅಂದರೆ ಸುಮಾರು 65 ಲಕ್ಷ ಕೋಟಿ ರೂಪಾಯಿಗಳಷ್ಟು, ದೊಡ್ಡದಿದೆ, ಇನ್ನಷ್ಟು ಬೆಳೆಯುತ್ತಲೇ ಇದೆ. ಇದರ ಮೂರರಲ್ಲೊಂದು ಭಾಗವು ಅಮೆರಿಕದ ಆರು ಹಾಗೂ ಯೂರೋಪಿನ ನಾಲ್ಕು ಬೃಹತ್ ಕಂಪೆನಿಗಳ ನಿಯಂತ್ರಣದಲ್ಲಿದೆ, ಈ ಕಂಪೆನಿಗಳ ವಾರ್ಷಿಕ ವಹಿವಾಟು ತಲಾ 30-40 ಶತಕೋಟಿ ಡಾಲರ್ (ಎರಡೂವರೆ ಲಕ್ಷ ಕೋಟಿ ರೂಪಾಯಿ) ಗಿಂತಲೂ ಹೆಚ್ಚಿದೆ. ಜಾಗತಿಕ ಔಷಧ ವಹಿವಾಟಿನ ಅರ್ಧದಷ್ಟು ಅಮೆರಿಕವೊಂದರಲ್ಲೇ ನಡೆಯುತ್ತಿದೆ.
ಭಾರತದ ಔಷಧ ಉದ್ಯಮವು ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ. ದೇಶದಲ್ಲಿ ವರ್ಷಕ್ಕೆ ಒಂದು ಲಕ್ಷ ಕೋಟಿ ರೂಪಾಯಿ (16 ಶತಕೋಟಿ ಡಾಲರ್) ಗಳಿಗೂ ಹೆಚ್ಚು ಮೌಲ್ಯದ ಔಷಧಗಳು ಮಾರಾಟವಾಗುತ್ತಿವೆ, ಆ ಪೈಕಿ 65 ಸಾವಿರ ಕೋಟಿ ಮೌಲ್ಯದವು ವೈದ್ಯರ ಸಲಹೆಯಿಲ್ಲದೆಯೇ ನೇರವಾಗಿ ಮಾರಲ್ಪಡುತ್ತಿವೆ. ಇನ್ನೊಂದು ಲಕ್ಷ ಕೋಟಿಯಷ್ಟು ಔಷಧಗಳು ಇಲ್ಲಿಂದ ರಫ್ತಾಗುತ್ತಿವೆ. ಇನ್ನೈದು ವರ್ಷಗಳಲ್ಲಿ ನಮ್ಮ ಔಷಧ ಉದ್ದಿಮೆಯ ವಾರ್ಷಿಕ ವಹಿವಾಟು 85 ಶತಕೋಟಿ ಡಾಲರ್ (5 ಲಕ್ಷ ಕೋಟಿ ರೂಪಾಯಿ) ಮೀರಲಿದೆ.
ಈ ಔಷಧ ಕಂಪೆನಿಗಳು ಪಡೆಯುವ ಆದಾಯದಲ್ಲಿ ಶೇ. 30ರಷ್ಟು ಲಾಭಾಂಶವಿದೆ, ಶೇ. 30ರಷ್ಟು ಔಷಧಗಳ ಮಾರಾಟವನ್ನು ಪ್ರಚೋದಿಸುವುದಕ್ಕಾಗಿ ವೆಚ್ಚವಾಗುತ್ತದೆ, ಶೇ. 5 ರಷ್ಟು (ಅಥವಾ ಇನ್ನೂ ಕಡಿಮೆ) ಹೊಸ ಔಷಧಗಳ ಸಂಶೋಧನೆಗಾಗಿ ವ್ಯಯವಾಗುತ್ತದೆ. ಅಂದರೆ ಔಷಧಗಳನ್ನು ಹುಡುಕುವುದಕ್ಕೆ ಮಾಡುವ ವೆಚ್ಚಕ್ಕಿಂತ ಐದರಿಂದ ಇಪ್ಪತ್ತು ಪಟ್ಟು ಹೆಚ್ಚು ವೆಚ್ಚವನ್ನು ಅವನ್ನು ‘ಬರೆಸುವುದಕ್ಕೆ’ ಮಾಡಲಾಗುತ್ತದೆ! ಆರೋಗ್ಯ ರಕ್ಷಣೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯೊದಗಿಸಲು ಮಾಡಲಾಗುತ್ತಿರುವ ವೆಚ್ಚವು ಔಷಧಗಳ ಪ್ರಚಾರಕ್ಕೆ ಮಾಡಲಾಗುತ್ತಿರುವ ವೆಚ್ಚದ ಐವತ್ತರಲ್ಲೊಂದು ಭಾಗ ಮಾತ್ರ! ರೋಗ ತಡೆಯುವುದಕ್ಕೆ ಒಂದು ಔನ್ಸ್ ಪ್ರಯತ್ನವು ಒಂದು ಪೌಂಡು (16 ಪಟ್ಟು) ಚಿಕಿತ್ಸೆಗೆ ಸಮ ಎನ್ನುವುದೆಲ್ಲ ಬರೇ ಒಣ ಬುದ್ಧಿ ಮಾತು, ಅಷ್ಟೇ.
ತಮ್ಮ ಔಷಧಗಳ ಬಳಕೆಯನ್ನು ಪ್ರಚೋದಿಸಲು ಕಂಪೆನಿಗಳು ಬಗೆಬಗೆಯ ತಂತ್ರಗಳನ್ನು ಹೂಡುತ್ತವೆ. ವೈದ್ಯರಿಗೆ ಹಲತರದ ಆಮಿಷಗಳನ್ನೂ, ಉಡುಗೊರೆಗಳನ್ನೂ ನೀಡುವುದಲ್ಲದೆ, ಅವರ ವೈಯಕ್ತಿಕ ಅಗತ್ಯಗಳನ್ನು ಪೂರೈಸುವುದೂ ಇದೆ. ನಿರಂತರ ಶಿಕ್ಷಣದ ಹೆಸರಲ್ಲಿ ವಿಶ್ವದ ಮೂಲೆಮೂಲೆಗಳಲ್ಲಿ ಐಷಾರಾಮಿ ಮಹಾಮೇಳಗಳನ್ನು ಆಯೋಜಿಸಿ, ವೈದ್ಯರನ್ನು ಅವಕ್ಕೆ ಹೊತ್ತೊಯ್ದು ಸರ್ವಾತಿಥ್ಯವನ್ನೂ ಒದಗಿಸುವುದು ಸಾಮಾನ್ಯವಾಗುತ್ತಿದೆ. ಈ ಮೇಳಗಳನ್ನು ಆಯೋಜಿಸುವ ವೈದ್ಯಕೀಯ ಸಂಘಟನೆಗಳಿಗೆ ಕಂಪೆನಿಗಳು ದೊಡ್ಡ ದಾನಗಳನ್ನು ನೀಡುತ್ತವೆ. ಹೆಚ್ಚಿನ ವೈದ್ಯಕೀಯ ವಿದ್ವತ್ಪತ್ರಿಕೆಗಳು ಕೂಡ ಈ ದೈತ್ಯ ಕಂಪೆನಿಗಳು ನೀಡುವ ಬಣ್ಣಬಣ್ಣದ ಜಾಹೀರಾತುಗಳ ಬಲದಲ್ಲೇ ಪ್ರಕಟವಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಈ ಕಂಪೆನಿಗಳೇ ಸೇರಿಕೊಂಡು ತಮ್ಮವೇ ಆದ ಸಂಘಗಳನ್ನು ಸ್ಥಾಪಿಸಿಕೊಳ್ಳುತ್ತಿವೆ, ಅವುಗಳ ಹೆಸರಲ್ಲಿ ವಿದ್ವತ್ಪತ್ರಿಕೆಗಳನ್ನೂ, ಮೇಳಗಳನ್ನೂ ನಡೆಸುತ್ತಿವೆ. ಇಂತಹಾ ಮೇಳಗಳಲ್ಲಿ ನಡೆಯುವ ಉಪನ್ಯಾಸ-ಗೋಷ್ಠಿಗಳ ಮೂಲಕ, ಎಲ್ಲೆಡೆ ರಾಚುವ ಜಾಹೀರಾತುಗಳ ಮೂಲಕ ಈ ಕಂಪೆನಿಗಳಿಗೆ ಲಾಭ ತರುವ ಔಷಧಗಳ ಬಗ್ಗೆಯೂ, ಚಿಕಿತ್ಸಾ ಕ್ರಮಗಳ ಬಗ್ಗೆಯೂ, ವೈದ್ಯಕೀಯ ಉಪಕರಣಗಳ ಬಗ್ಗೆಯೂ ವೈದ್ಯರ ಮತಿಮಜ್ಜನ ನಡೆಯುತ್ತದೆ; ಹೊಸ ಹೊಸ ಕಾರಣಗಳಿಗೆ, ಹೆಚ್ಚು ಹೆಚ್ಚು ರೋಗಿಗಳಿಗೆ ಅವನ್ನು ಬಳಸುವಂತೆ ಪ್ರೇರೇಪಿಸಲಾಗುತ್ತದೆ.
ಔಷಧ ಕಂಪೆನಿಗಳು ವೈದ್ಯರನ್ನಷ್ಟೇ ಪೋಷಿಸುವುದಲ್ಲ. ಆರೋಗ್ಯ ಸೇವಾ ವ್ಯವಸ್ಥೆಯ ತಲೆಯಿಂದ ಬುಡದವರೆಗೂ ತುಂಡುಪಾವತಿಗಳನ್ನು ಸಲ್ಲಿಸಲಾಗುತ್ತದೆ. ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲ, ಖಾಸಗಿ ಆಸ್ಪತ್ರೆಗಳಲ್ಲೂ ಆಗುತ್ತವೆ. ಉಪಕರಣಗಳ ಖರೀದಿ, ಔಷಧಗಳ ಖರೀದಿ, ವಿವಿಧ ಪರೀಕ್ಷೆಗಳು ಹಾಗೂ ಚಿಕಿತ್ಸೆಗಳ ಬಳಕೆ, ರೋಗರಕ್ಷಣಾ ವಿಧಾನಗಳ ನೀತಿನಿರೂಪಣೆ, ಆರೋಗ್ಯ ವಿಮೆ ಇವೇ ಮುಂತಾದ ಎಲ್ಲ ಸ್ತರಗಳಲ್ಲೂ ಕಾಣದ ಕೈವಾಡವಿದ್ದೇ ಇರುತ್ತದೆ. ಇಂತಹ ಒತ್ತಡಗಳ ಕಾರಣದಿಂದಲೇ ಅಮೆರಿಕಾದಲ್ಲಿ ಅರ್ಧದಷ್ಟು ಹೃದಯದ ರಕ್ತನಾಳಗಳ ಚಿಕಿತ್ಸೆಗಳೂ, ಮೂರರಲ್ಲೊಂದು ಮಂಡಿ ಬದಲಿಸುವ ಶಸ್ತ್ರಚಿಕಿತ್ಸೆಗಳೂ, ಆಧುನಿಕ ಮಾಮೊಗ್ರಫಿ ಪರೀಕ್ಷೆಗಳೂ ಅನಗತ್ಯವಾಗಿ ನಡೆಸಲ್ಪಡುತ್ತವೆ ಎನ್ನಲಾಗಿದೆ. ನಮ್ಮ ಸ್ಥಿತಿಯೇನೂ ಬೇರೆಯಿಲ್ಲ.
ವಿಶ್ವ ಆರೋಗ್ಯ ಸಂಸ್ಥೆಗೂ ಇದು ಗೊತ್ತಿದೆ. ಆರೋಗ್ಯ ಸೇವೆಗಳನ್ನು ಒದಗಿಸುವವರು ಹಾಗೂ ಪಡೆಯುವವರ ಸಾಮಾಜಿಕ, ವೈದ್ಯಕೀಯ, ಆರ್ಥಿಕ ಹಿತಾಸಕ್ತಿಗಳಿಗೂ, ಔಷಧ ಉತ್ಪಾದಕರ ವ್ಯಾವಹಾರಿಕ ಹಿತಾಸಕ್ತಿಗಳಿಗೂ ಸಂಘರ್ಷವಿದ್ದೇ ಇರುತ್ತದೆ, ಇದು ಔಷಧಗಳ ವೈಚಾರಿಕ ಬಳಕೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿದೆ. ಯಾವ ಕಾಯಿಲೆಗಳಿಗೆ ಯಾವ ಔಷಧಗಳು ಅತಿ ಹೆಚ್ಚು ಪರಿಣಾಮಕಾರಿಯೆಂದು ಔಷಧ ಕಂಪೆನಿಗಳೇ ಹೇಳಹೊರಟಾಗ ಇದು ಇನ್ನಷ್ಟು ಉತ್ಕಟವಾಗಿರುತ್ತದೆ; ಕಂಪೆನಿಗಳು ತಮ್ಮ ಹಿತಾಸಕ್ತಿಗಳಿಗೆ ಅನುಗುಣವಾಗಿಯೇ ಔಷಧಗಳ ಬಳಕೆಯನ್ನು ಮುಂದೊತ್ತುತ್ತವೆ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ಸೇರಿದಂತೆ ವಿವಿಧ ವೈದ್ಯಕೀಯ ಸಂಘಟನೆಗಳೂ, ವೈದ್ಯರನ್ನು ನಿಯಂತ್ರಿಸುವ ವೈದ್ಯಕೀಯ ಪರಿಷತ್ತುಗಳೂ ಚಿಕಿತ್ಸಾಕ್ರಮಗಳ ಬಳಕೆಯಲ್ಲಿ ಇಂತಹ ಬಾಹ್ಯ ಪ್ರಭಾವಗಳನ್ನು ತಗ್ಗಿಸಲು ಕಠಿಣವಾದ ವೃತ್ತಿಸಂಹಿತೆಗಳನ್ನೂ, ನೀತಿನಿಯಮಗಳನ್ನೂ ರೂಪಿಸಿವೆ. ಆದರೂ ಈ ಪ್ರಭಾವಗಳು ಕಡಿಮೆಯಾಗುವ ಬದಲು ಹೆಚ್ಚುತ್ತಲೇ ಇವೆ. ವೈದ್ಯಕೀಯ ಶಿಕ್ಷಣದ ಖಾಸಗೀಕರಣವು ಹೊಸ ವೈದ್ಯರನ್ನು ಖಾಸಗಿ ಕಂಪೆನಿಗಳ ಮಧ್ಯವರ್ತಿಗಳನ್ನಾಗಿ ರೂಪಿಸುತ್ತಿರುವ ಈ ದಿನಗಳಲ್ಲಿ ಇದು ಕಳವಳಕಾರಿ ಮಟ್ಟವನ್ನು ತಲುಪಿದೆ.
ಖಾಸಗಿ ಕಂಪೆನಿಗಳು ಹೊಸ ಔಷಧಗಳ ಸಂಶೋಧನೆಗೆ ಹಣ ಹೂಡುವಾಗಲೂ ಲಾಭವನ್ನೇ ಮುಖ್ಯವಾಗಿ ಪರಿಗಣಿಸುತ್ತವೆ. ಹೆಚ್ಚು ಮಾರಾಟವಾಗಬಲ್ಲ, ಹೆಚ್ಚು ಲಾಭ ಗಳಿಸಬಲ್ಲ ಔಷಧಗಳನ್ನು ಅಭಿವೃದ್ಧಿ ಪಡಿಸುವುದಕ್ಕೇ ಈ ಕಂಪೆನಿಗಳು ಆದ್ಯತೆಯನ್ನು ನೀಡುತ್ತವೆ. ಬಡದೇಶಗಳ ಬಹುಪಾಲು ಜನರನ್ನು ಕಾಡುವ ಸೋಂಕು ರೋಗಗಳಿಗೆ ಚಿಕಿತ್ಸೆಯನ್ನು ಹುಡುಕುವಲ್ಲಿ ಈ ಕಂಪೆನಿಗಳಿಗೆ ಆಸಕ್ತಿಯಿರುವುದಿಲ್ಲ; ಬದಲಿಗೆ, ಶ್ರೀಮಂತ ದೇಶಗಳಲ್ಲಿ ಕಂಡುಬರುವ ರೋಗಗಳಿಗೇ ಅವು ಆದ್ಯತೆಯನ್ನು ನೀಡುತ್ತವೆ. ಕಂಪೆನಿಗಳಿಗೆ ಲಾಭ ತರುವ ಕಾಯಿಲೆಗಳಿದ್ದರಷ್ಟೇ ಚಿಕಿತ್ಸೆ ಖಚಿತ, ಇಲ್ಲವಾದರೆ ಸಂಶಯ ಎನ್ನುವ ಸ್ಥಿತಿಯು ವಿಶ್ವದ ಆರ್ಥ ವ್ಯವಸ್ಥೆಯು ಎಷ್ಟು ನ್ಯಾಯೋಚಿತವಾಗಿದೆ ಎನ್ನುವುದನ್ನು ತೋರಿಸುತ್ತದೆ.
ಈಗ 2000ಕ್ಕೂ ಹೆಚ್ಚು ಬಗೆಯ ಔಷಧಗಳು ಮಾರುಕಟ್ಟೆಯಲ್ಲಿವೆ. ನಮ್ಮ ದೇಶದಲ್ಲಿ ಸುಮಾರು 1000 ಕಂಪೆನಿಗಳು 80000ಕ್ಕೂ ಹೆಚ್ಚು ಹೆಸರುಗಳಲ್ಲಿ, ಬಗೆಬಗೆಯ ರೂಪಗಳಲ್ಲಿ, ಬೆರಕೆಗಳಲ್ಲಿ, ಈ ಔಷಧಗಳನ್ನು ಮಾರಾಟ ಮಾಡುತ್ತಿವೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯು 2011ರಲ್ಲಿ ಪ್ರಕಟಿಸಿದ ಅಗತ್ಯ ಔಷಧಗಳ ಮಾದರಿ ಪಟ್ಟಿಯಲ್ಲಿ ಕೇವಲ 367 ಔಷಧಗಳನ್ನಷ್ಟೇ ಹೆಸರಿಸಲಾಗಿತ್ತು. ಅದೇ ವರ್ಷ ನಮ್ಮ ದೇಶದಲ್ಲಿ ಪ್ರಕಟಿಸಿದ ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯಲ್ಲಿ ಕೇವಲ 348 ಔಷಧಗಳನ್ನು ಸೇರಿಸಲಾಗಿತ್ತು. ಅಂದರೆ ಇನ್ನುಳಿದ ಔಷಧಗಳೆಲ್ಲವೂ ರೋಗಪೀಡಿತರಿಗಿಂತ ಹೆಚ್ಚಾಗಿ ಕಂಪೆನಿಗಳ ಅಗತ್ಯಕ್ಕಷ್ಟೇ ಮಾರುಕಟ್ಟೆಯಲ್ಲಿವೆ ಎಂದಾಯಿತು. ಈ ದಶಕದಲ್ಲಿ ಅಭಿವೃದ್ಧಿ ಪಡಿಸಲಾಗಿರುವ 500ರಷ್ಟು ಹೊಸ ಔಷಧಗಳಲ್ಲಿ ಹೆಚ್ಚಿನವು ಅತ್ಯಗತ್ಯವೆನಿಸುವ ಪಟ್ಟಿಯಲ್ಲಿ ಸೇರಿಕೊಳ್ಳಲಾರವು.
ಇಂದು ಅತಿ ಹೆಚ್ಚು ಬಳಕೆಯಾಗುತ್ತಿರುವ ಔಷಧಗಳೆಂದರೆ ನೋವು ನಿವಾರಕಗಳು, ಪ್ರತಿಜೈವಿಕಗಳು, ಮಧುಮೇಹ, ರಕ್ತದ ಏರೊತ್ತಡ ಹಾಗೂ ಕೊಲೆಸ್ಟರಾಲ್ ಇಳಿಸುವ ಔಷಧಗಳು, ಜಠರದ ಆಮ್ಲ ನಿರೋಧಕಗಳು, ಕ್ಯಾನ್ಸರ್ ಚಿಕಿತ್ಸೆಯ ಔಷಧಗಳು ಹಾಗೂ ಬಗೆಬಗೆಯ ಪೌಷ್ಟಿಕಾಂಶಗಳ ಮಿಶ್ರಣಗಳು. ವೈದ್ಯರು, ಔಷಧ ವ್ಯಾಪಾರಿಗಳು, ಜನಸಾಮಾನ್ಯರೆಲ್ಲರಿಂದ ಅತಿ ಹೆಚ್ಚು ದುರ್ಬಳಕೆಯಾಗುತ್ತಿರುವ ಔಷಧಗಳೂ ಇವೇ ಆಗಿವೆ. ಇವುಗಳ ಬಳಕೆಯು ಎಷ್ಟು ಸಾಮಾನ್ಯವೆಂದರೆ ಭೂಮಿಯ ಮೇಲಿರುವ ಎಲ್ಲ ಮನುಷ್ಯರೂ, ಎಲ್ಲ ಸಾಕು ಪ್ರಾಣಿಗಳೂ ಒಂದಲ್ಲೊಂದು ಬಾರಿ ಇವನ್ನು ನುಂಗಿರುವುದು ಖಂಡಿತ!
ಹತ್ತೊಂಬತ್ತನೇ ಶತಮಾನದ ಮಧ್ಯದಲ್ಲಿ ವಿಲೋ ತೊಗಟೆಯಿಂದ ಸಾಲಿಸಿಲಿಕ್ ಆಮ್ಲವನ್ನು ಪ್ರತ್ಯೇಕಿಸಿ, ನೋವು ನಿವಾರಕ ಮಾತ್ರಗಳನ್ನು ಮಾರತೊಡಗಿದ ಬಳಿಕ ಮನುಷ್ಯರಿಗೆ ನೋವನ್ನು ಸಹಿಸಿಕೊಳ್ಳುವುದೇ ಮರೆತು ಹೋಗಿದೆ, ಪ್ರತಿಯೊಬ್ಬರೂ ಜ್ವರ-ನೋವು ನಿವಾರಕ ಔಷಧಗಳ ದಾಸರಾಗಿ ಬಿಟ್ಟಿದ್ದಾರೆ. ಇಂದು ಉರಿಯೂತ-ನೋವು ನಿವಾರಕಗಳ ಜಾಗತಿಕ ವಹಿವಾಟು ವರ್ಷಕ್ಕೆ 24 ಶತಕೋಟಿ ಡಾಲರುಗಳಷ್ಟಿದೆ, ನೋವು ನಿವಾರಕ ಮುಲಾಮುಗಳ ವಹಿವಾಟೇ 4 ಶತಕೋಟಿ ಡಾಲರುಗಳಷ್ಟಿದೆ. ಎರಡು-ಮೂರು ಬಗೆಯ ಜ್ವರ ಹಾಗೂ ನೋವು ನಿವಾರಕಗಳನ್ನು ವಿವಿಧ ಪ್ರಮಾಣಗಳಲ್ಲಿ ಬೆರೆಸಲಾಗಿರುವ ಸುಮಾರು 800 ವಿಧದ ಮಾತ್ರೆಗಳು ನಮ್ಮ ದೇಶದಲ್ಲಿ ಲಭ್ಯವಿವೆ. ಇಂತಹ ಬೆರಕೆಯಿಂದ ನೋವು ಶಮನವು ದುಪ್ಪಟ್ಟಾಗದಿದ್ದರೂ ದರವು ದುಪ್ಪಟ್ಟಾಗುತ್ತದೆ, ಅಡ್ಡ ಪರಿಣಾಮಗಳು ಹಲವು ಪಟ್ಟು ಹೆಚ್ಚುತ್ತವೆ. ರೋಗಿಗೆ ಕಷ್ಟ- ನಷ್ಟ, ಕಂಪೆನಿಗಷ್ಟೇ ಲಾಭ.
ಹೀಗೆ ಪ್ರತಿನಿತ್ಯ ನುಂಗುತ್ತಿರುವ ನೋವು ನಿವಾರಕಗಳಿಂದ ಹಲವು ಗಂಭೀರ ಅಡ್ಡ ಪರಿಣಾಮಗಳಾಗಬಹುದು. ಡೈಕ್ಲೋಫೆನಾಕ್, ಇಬುಪ್ರೊಫೆನ್, ಎಟೊರೊಕಾಕ್ಸಿಬ್ ಮುಂತಾದ ಉರಿಯೂತ ನಿವಾರಕಗಳು ಜಠರದ ಹುಣ್ಣಿಗೂ, ರಕ್ತಸ್ರಾವಕ್ಕೂ ಕಾರಣವಾಗಬಹುದು, ಹೃದಯಾಘಾತ, ಪಾರ್ಶ್ವವಾಯು, ಗರ್ಭಪಾತ, ಪುರುಷರಲ್ಲಿ ನಿಮಿರುವಿಕೆಯ ಸಮಸ್ಯೆ ಇತ್ಯಾದಿ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಅಮೆರಿಕವೊಂದರಲ್ಲೇ ವರ್ಷಕ್ಕೆ 16000ಕ್ಕೂ ಹೆಚ್ಚು ಜನರು ಇಂತಹ ಅಡ್ಡ ಪರಿಣಾಮಗಳಿಂದ ಸಾವನ್ನಪ್ಪುತ್ತಿದ್ದಾರೆ. ಈ ಔಷಧಗಳನ್ನು ತಿಂದ ಸಾಕುಪ್ರಾಣಿಗಳೂ ಸತ್ತಿವೆ, ಅವುಗಳ ಹೆಣಗಳನ್ನು ಭಕ್ಷಿಸಿದ ಹದ್ದುಗಳೂ ಮರೆಯಾಗಿವೆ.
ಸೋಂಕುಕಾರಕ ಸೂಕ್ಷ್ಮಾಣುಗಳನ್ನು ನಾಶಪಡಿಸುವ ಪ್ರತಿಜೈವಿಕ ಔಷಧಗಳನ್ನು ಗುರುತಿಸಿ ಬಳಸತೊಡಗಿದ್ದು ಇಪ್ಪತ್ತನೇ ಶತಮಾನದ ಅತಿ ಮಹತ್ವದ ಸಾಧನೆಯೆನ್ನುವುದು ನಿಸ್ಸಂದೇಹ. ಅದರಿಂದಾಗಿಯೇ ಕೋಟಿಗಟ್ಟಲೆ ಸಾವು-ನೋವುಗಳಿಗೆ ಕಾರಣವಾಗುತ್ತಿದ್ದ ಪ್ಲೇಗ್, ಮಲೇರಿಯಾ, ಕ್ಷಯ, ಕೊಲೆರಾ, ಟೈಫಾಯ್ಡ್, ಆಮಶಂಕೆ, ಧನುರ್ವಾತ, ಡಿಫ್ತೀರಿಯಾ, ಕುಷ್ಠ, ಗುಹ್ಯ ರೋಗಗಳು ಮುಂತಾದವನ್ನು ನಿಯಂತ್ರಿಸುವುದಕ್ಕೆ ಸಾಧ್ಯವಾಯಿತು, ಶಸ್ತ್ರಚಿಕಿತ್ಸೆ, ಹೆರಿಗೆ, ನವಜಾತ ಶಿಶುಗಳ ಆರೈಕೆ ಇತ್ಯಾದಿಗಳೆಲ್ಲವೂ ಹೆಚ್ಚು ಸುರಕ್ಷಿತವಾದವು, ಇನ್ನೂ ಹಲವು ಕೋಟಿ ಜನರು ಬದುಕುಳಿದರು.
ಆದರೆ ಮನುಷ್ಯರ ಸೋಂಕುಗಳ ಚಿಕಿತ್ಸೆಗಷ್ಟೇ ಸೀಮಿತವಾಗಬೇಕಿದ್ದ ಈ ಪ್ರತಿಜೈವಿಕಗಳನ್ನು ಕೃಷಿ, ಹೈನುಗಾರಿಕೆ, ಪ್ರಾಣಿ-ಪಕ್ಷಿ ಸಾಕಣೆ ಮುಂತಾದೆಲ್ಲೆಡೆ ಅನಿಯಂತ್ರಿತವಾಗಿ ಬಳಸತೊಡಗಿದ್ದರಿಂದ ಹೆಚ್ಚಿನ ಸೂಕ್ಷ್ಮಾಣುಗಳು ಅವುಗಳ ವಿರುದ್ಧ ರೋಧಶಕ್ತಿಯನ್ನು ಬೆಳೆಸಿಕೊಳ್ಳುವಂತಾಗಿದೆ. ಹಾಗಾಗಿ, ಈ ಅತ್ಯಮೂಲ್ಯ ಔಷಧಗಳು ನಿಷ್ಪ್ರಯೋಜಕವಾಗಿ, ನಿಯಂತ್ರಣಕ್ಕೆ ಬಂದಿದ್ದ ಸೋಂಕುಗಳೆಲ್ಲವೂ ಮತ್ತೆ ಸಾವು-ನೋವುಗಳನ್ನುಂಟು ಮಾಡುವ ಅಪಾಯವು ತಲೆದೋರಿದೆ. ಇಪ್ಪತ್ತನೇ ಶತಮಾನದ ಮಧ್ಯದಲ್ಲಿ ಕಂಡು ಹಿಡಿಯಲಾದ ಇಪ್ಪತ್ತಕ್ಕೂ ಹೆಚ್ಚು ಜಾತಿಯ ಸೂಕ್ಷ್ಮಾಣು ನಿರೋಧಕಗಳನ್ನು ಬಿಟ್ಟರೆ, ಅಷ್ಟೊಂದು ಪರಿಣಾಮಕಾರಿಯಾದ ಹೊಸ ಔಷಧಗಳು ನಂತರ ಬರಲಿಲ್ಲ. ಇದ್ದವುಗಳನ್ನೇ ಅಷ್ಟಿಷ್ಟು ಬದಲಿಸಿ, ಜೊತೆ ಬೆರೆಸಿ, ಲಾಭದಾಸೆಗಾಗಿ ಅನಗತ್ಯ ಬಳಕೆಯನ್ನು ಪ್ರಚೋದಿಸಿದ್ದರಿಂದಾಗಿ ಈ ಅತ್ಯಮೂಲ್ಯ ಔಷಧಗಳು ಮೊನಚು ಕಳೆದುಕೊಳ್ಳುವಂತಾಗಿದೆ.
ನಮ್ಮ ಪಚನಾಂಗದೊಳಗೆ ನೂರು ಲಕ್ಷ ಕೋಟಿಗೂ ಹೆಚ್ಚು ಸೂಕ್ಷ್ಮಾಣುಗಳು ವಾಸಿಸುತ್ತಿದ್ದು, ನಮ್ಮ ಆಹಾರವನ್ನು ಜೀರ್ಣಿಸುವಲ್ಲಿ ನೆರವಾಗುತ್ತವೆ, ಮಾತ್ರವಲ್ಲ, ಪಚನಾಂಗದ ಹಾಗೂ ದೇಹದ ರೋಗರಕ್ಷಣಾ ವ್ಯವಸ್ಥೆಯನ್ನು ಗಟ್ಟಿಗೊಳಿಸುವಲ್ಲೂ ನೆರವಾಗುತ್ತವೆ. ಪ್ರತಿಜೈವಿಕಗಳ ಬಳಕೆಯು ಈ ಉಪಕಾರಿ ಸೂಕ್ಷ್ಮಾಣುಗಳನ್ನು ನಾಶಪಡಿಸುವುದರಿಂದ ಬೊಜ್ಜು, ಮಧುಮೇಹ, ಸಂಧಿವಾತ, ಖಿನ್ನತೆ, ಆತಂಕ ಮುಂತಾದ ಮಾನಸಿಕ ಸಮಸ್ಯೆಗಳು, ಮಕ್ಕಳಲ್ಲಿ ಕಂಡುಬರುವ ಸ್ವಲೀನತೆ, ಅಸ್ತಮಾ ಇತ್ಯಾದಿ ಹಲವು ಕಾಯಿಲೆಗಳಿಗೆ ದಾರಿ ಮಾಡಬಹುದೆಂದು ಇತ್ತೀಚಿನ ಅಧ್ಯಯನಗಳು ತೋರಿಸಿವೆ. ಸೋಂಕು ನಿಯಂತ್ರಿಸುವ ಔಷಧಗಳನ್ನು ದುರ್ಬಳಕೆ ಮಾಡಿದ್ದರಿಂದ ಸೋಂಕುಗಳು ಬಗ್ಗದಂತಾಗಿವೆ, ಸೋಂಕಲ್ಲದ ಆಧುನಿಕ ಕಾಯಿಲೆಗಳೂ ಹೆಚ್ಚುವಂತಾಗಿದೆ.
ಜಠರದಲ್ಲಿ ಆಮ್ಲದ ಸ್ರಾವವನ್ನು ತಡೆಯುವ ಔಷಧಗಳಿಗೂ ವಿಪರೀತ ಬೇಡಿಕೆಯನ್ನು ಸೃಷ್ಟಿಸಲಾಗಿದೆ. ಒಮೆಪ್ರಝಾಲ್ ಹಾಗೂ ಲಾನ್ಸೋಪ್ರಝಾಲ್ ನಂತಹ ಹೊಸ ಆಮ್ಲ ನಿರೋಧಕ ಔಷಧಗಳು ಮಾರುಕಟ್ಟೆಗೆ ಬಂದದ್ದು 1988-90ರಲ್ಲಿ. ಒಂದು ದಶಕದೊಳಗೆ ಇವು ಅತಿ ಹೆಚ್ಚು ಮಾರಾಟವಾಗುವ ಔಷಧಗಳಾಗಿ ಬಿಟ್ಟವು; ಹದಿನೈದು ವರ್ಷಗಳಲ್ಲಿ 80 ಕೋಟಿ ಮನುಷ್ಯರಲ್ಲಿ ಬಳಸಲ್ಪಟ್ಟವು. ಈಗ ಈ ಆಮ್ಲನಿರೋಧಕ ಔಷಧಗಳನ್ನು ಒಂದರ ಹಸುಳೆಗಳಿಂದ ತೊಂಭತ್ತರ ವೃದ್ಧರವರೆಗೆ ಎಲ್ಲರಲ್ಲೂ ವಿಪರೀತವಾಗಿ ಬಳಸಲಾಗುತ್ತಿದ್ದು, ಅವುಗಳ ವಾರ್ಷಿಕ ವಹಿವಾಟು 30 ಶತಕೋಟಿ ಡಾಲರ್ ಗಿಂತಲೂ ಹೆಚ್ಚಿದೆ. ಹದಿನೈದು ದಿನಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಇವನ್ನು ಬಳಸಬಾರದೆಂಬ ಸಲಹೆಗಳಿದ್ದರೂ, ಹೆಚ್ಚಿನವರಲ್ಲಿ ಇವನ್ನು ತಿಂಗಳುಗಟ್ಟಲೆ, ವರ್ಷಗಟ್ಟಲೆ ನೀಡಲಾಗುತ್ತಿದೆ. ಹೀಗೆ ದೀರ್ಘ ಕಾಲ ಇವನ್ನು ಬಳಸಿದರೆ ಮೂಳೆ ಮುರಿತದ ಸಾಧ್ಯತೆಗಳು ಹೆಚ್ಚುತ್ತವೆ, ಪಚನಕ್ರಿಯೆ ದುರ್ಬಲವಾಗುತ್ತದೆ, ಶ್ವಾಸಾಂಗ ಹಾಗೂ ಪಚನಾಂಗಗಳ ಸೋಂಕುಗಳೂ ಹೆಚ್ಚಬಹುದು. ಆದರೆ ಇಂತಹ ಅಡ್ಡ ಪರಿಣಾಮಗಳ ಗೊಡವೆ ಯಾರಿಗೆಲ್ಲಿ? ಸಿಕ್ಕಿದ್ದನ್ನು ತಿನ್ನಲೇಬೇಕು, ಬಿಡಲಾಗದು; ಅದರಿಂದ ಹೊಟ್ಟೆ ಉರಿಯತೊಡಗಿದರೆ ಆಮ್ಲ ನಿರೋಧಕಗಳನ್ನು ನುಂಗುತ್ತಾ ಇದ್ದರಾಯಿತು, ಅಷ್ಟೇ.
ಕಳೆದ ಐವತ್ತು ವರ್ಷಗಳಿಂದ ಮನುಷ್ಯರನ್ನು ‘ಕಾಡುತ್ತಿರುವ’ ಅತ್ಯಂತ ಭೀಕರ ‘ಕಾಯಿಲೆ’ಎಂದರೆ ಕೊಲೆಸ್ಟರಾಲ್. ಪ್ರತಿಯೋರ್ವ ಮನುಷ್ಯನ ದೇಹದೊಳಗೂ ಉತ್ಪಾದಿಸಲ್ಪಡುವ, ಪ್ರತಿಯೊಂದು ಜೀವಕಣದಲ್ಲೂ ಇರುವ, ದೇಹದ ಹಲವು ಪ್ರಕ್ರಿಯೆಗಳಲ್ಲಿ ಭಾಗಿಯಾಗುವ ಸಂಯುಕ್ತವೊಂದನ್ನು ಅತಿ ದುರುಳನೆಂದು ಬಿಂಬಿಸಿ, ಆಗಾಗ ಅದರ ಮಟ್ಟವನ್ನು ಪರೀಕ್ಷಿಸಬೇಕೆಂದು ಹೆದರಿಸಿ, ಅದನ್ನು ಅತಿ ಕನಿಷ್ಠ ಮಟ್ಟದಲ್ಲಿರಿಸಲು ಎಲ್ಲ ವಯಸ್ಕರೂ ನಿರಂತರವಾಗಿ ಔಷಧಗಳನ್ನು ತಿನ್ನುತ್ತಿರಬೇಕೆಂದು ಒತ್ತಡ ಹೇರುವಲ್ಲಿ ಔಷಧ ಕಂಪೆನಿಗಳು ಯಶಸ್ವಿಯಾಗಿರುವುದು ಅವುಗಳ ಜಾಣ್ಮೆಗೆ ಅತ್ಯುತ್ತಮ ನಿದರ್ಶನವಾಗಿದೆ.
ಇಂದು ವಿಶ್ವದ 30 ಕೋಟಿಗೂ ಹೆಚ್ಚು ಜನರು, ನಾಲ್ಕರಲ್ಲೊಬ್ಬ ಮಧ್ಯವಯಸ್ಕರು, ರಕ್ತದ ಕೊಲೆಸ್ಟರಾಲ್ ಇಳಿಸುವ ಸ್ಟಾಟಿನ್ ನಂತಹ ಔಷಧಗಳನ್ನು ಸೇವಿಸುತ್ತಾರೆ. ಈ ವಹಿವಾಟು ವರ್ಷಕ್ಕೆ 25 ಶತಕೋಟಿ ಡಾಲರ್ (155000 ಕೋಟಿ ರೂಪಾಯಿ) ನಷ್ಟಿದೆ, ಅದರಲ್ಲಿ ಅರ್ಧದಷ್ಟು ಎರಡೇ ಕಂಪೆನಿಗಳ ಪಾಲಾಗುತ್ತಿದೆ. ಆದರೆ ಈ ಔಷಧಗಳ ಸೇವನೆಯಿಂದ ವಿಶೇಷವಾದ ಪ್ರಯೋಜನಗಳಿವೆಯೆನ್ನುವುದಕ್ಕೆ ಆಧಾರಗಳಿಲ್ಲವೆಂದೂ, ಕೊಲೆಸ್ಟರಾಲ್ ಪ್ರಮಾಣವನ್ನು ನಿರ್ದಿಷ್ಟ ಮಟ್ಟಕ್ಕಿಳಿಸುವುದಕ್ಕೆ ಈ ಔಷಧಗಳನ್ನು ಸೇವಿಸುವ ಅಗತ್ಯವಿಲ್ಲವೆಂದೂ 2013ರ ನವೆಂಬರ್ 15ರಂದು ಪ್ರಕಟವಾಗಿರುವ ವರದಿಯಲ್ಲಿ ಹೇಳಲಾಗಿದೆ. ಸ್ಟಾಟಿನ್ ಔಷಧಗಳನ್ನು ಬಳಸುವವರಲ್ಲಿ ಸ್ನಾಯುಗಳ ಸಮಸ್ಯೆಗಳು, ಮಧುಮೇಹ, ಯಕೃತ್ತಿನ ತೊಂದರೆಗಳು, ಕಣ್ಣಿನ ಪೊರೆ, ಲೈಂಗಿಕ ನಿಶ್ಶಕ್ತಿ, ಮರೆಗುಳಿತನ ಮತ್ತಿತರ ನರಮಂಡಲದ ತೊಂದರೆಗಳು, ಮೂತ್ರಪಿಂಡಗಳ ವೈಫಲ್ಯ, ರಕ್ತನಾಳಗಳ ಕ್ಯಾಲ್ಸೀಕರಣ, ಕ್ಯಾನ್ಸರ್ ಗಳು, ಸೋಂಕುಗಳು ಇವೇ ಮುಂತಾದ ಹಲವು ಗಂಭೀರ ಸಮಸ್ಯೆಗಳನ್ನೂ ಗುರುತಿಸಲಾಗಿದೆ. ದೈತ್ಯ ಕಂಪೆನಿಗಳ ಆಟಗಳಿಗೆ ನಾವು ತೆರುತ್ತಿರುವ ಬೆಲೆಯೆಷ್ಟು?!
ಮಧುಮೇಹ ಹಾಗೂ ರಕ್ತದ ಏರೊತ್ತಡಗಳಿಗೆ ಬಳಸುವ ಔಷಧಗಳ ವಹಿವಾಟು ಸಹ ಬಲು ದೊಡ್ಡದಿದೆ. ಮಧುಮೇಹಕ್ಕೆ ಬಳಸುವ ಔಷಧಗಳ ಜಾಗತಿಕ ವಹಿವಾಟು ಸುಮಾರು 50 ಶತಕೋಟಿ ಡಾಲರುಗಳಷ್ಟಿದ್ದು, ಇನ್ನೆರಡು ವರ್ಷಗಳಲ್ಲಿ ಸುಮಾರು 70 ಶತಕೋಟಿ ಡಾಲರುಗಳಷ್ಟಾಗುವ ನಿರೀಕ್ಷೆಯಿದೆ. ಇದರಲ್ಲಿ ಅರ್ಧದಷ್ಟು ಇನ್ಸುಲಿನ್ ಚುಚ್ಚುಮದ್ದಿನ ಮಾರಾಟದಿಂದಲೇ ಬರುತ್ತಿದೆ. ರಕ್ತದೊತ್ತಡವನ್ನು ಇಳಿಸುವ ಔಷಧಗಳ ಮಾರುಕಟ್ಟೆ ಮೌಲ್ಯವು ವರ್ಷಕ್ಕೆ 40 ಶತಕೋಟಿ ಡಾಲರ್ ಗಿಂತಲೂ ಹೆಚ್ಚಿದೆ. ಇತ್ತೀಚೆಗೆ ಬೊಜ್ಜು, ಮಧುಮೇಹ, ರಕ್ತದ ಏರೊತ್ತಡ ಮುಂತಾದವು ದುಪ್ಪಾಟ್ಟಾಗಿ, ಕಿರಿವಯಸ್ಕರನ್ನೂ ಕಾಡತೊಡಗಿರುವಂತೆ ಔಷಧ ಕಂಪೆನಿಗಳ ಆದಾಯವೂ ಗಗನಮುಖಿಯಾಗುತ್ತಿದೆ. ಬೇಕಾದದ್ದನ್ನು ತಿಂದು ಆಲಸಿಗಳಾಗಿರಲು ಅವಕಾಶವಿದೆ ಎಂದಾದರೆ ಮುಷ್ಠಿ ತುಂಬ ಔಷಧಗಳನ್ನು ನುಂಗುವುದಕ್ಕೆ ನಮ್ಮ ಜನರೂ ಸಿದ್ಧರಿದ್ದಾರೆ. ಆದ್ದರಿಂದಲೇ, ಇಂದಿನ ಆಹಾರವೂ, ಜೀವನಶೈಲಿಯೂ ಈ ಎಲ್ಲ ಆಧುನಿಕ ರೋಗಗಳಿಗೆ ಕಾರಣಗಳೆನ್ನುವುದಕ್ಕೆ ಬೆಟ್ಟದಷ್ಟು ಸಾಕ್ಷ್ಯಗಳಿದ್ದರೂ ಜನರಿಗದು ಬೇಕಾಗಿಲ್ಲ, ವೈದ್ಯರಿಗದು ಕಾಣಿಸುವುದಿಲ್ಲ, ಕಂಪೆನಿಗಳಿಗಂತೂ ಇಷ್ಟವಾಗುವುದೇ ಇಲ್ಲ.
ಇನ್ನು ವಿಟಮಿನ್ ಗಳು, ಕ್ಯಾಲ್ಸಿಯಂ ಮತ್ತಿತರ ಖನಿಜಾಂಶಗಳು, ಪ್ರೊಟೀನುಗಳು ಇವೇ ಮುಂತಾದವನ್ನು ಬೆರೆಸಿರುವ ನೂರೆಂಟು ಬಗೆಯ ಮಾತ್ರೆಗಳು, ಟಾನಿಕ್ಕುಗಳು, ಪುಡಿಗಳು ಮಾರುಕಟ್ಟೆಯಲ್ಲಿ ಹೇರಳವಾಗಿವೆ. ವಿಶ್ವದ ಮೂರರಲ್ಲಿಬ್ಬರು ಇವನ್ನು ಸೇವಿಸುತ್ತಾರೆ, ಅವುಗಳ ಜಾಗತಿಕ ವಹಿವಾಟು ವರ್ಷಕ್ಕೆ 50 ಶತಕೋಟಿ ಡಾಲರ್ ಗಳಷ್ಟಿದೆ. ಆದರೆ ಇವುಗಳ ಸೇವನೆಯಿಂದ ಮೂಳೆಸವೆತ, ಹೃದ್ರೋಗ, ಮರೆಗುಳಿತನ, ಕ್ಯಾನ್ಸರ್ ಮುಂತಾದ ಯಾವುದೇ ಸಮಸ್ಯೆಗಳನ್ನು ತಡೆಯಲು ಸಾಧ್ಯವಿಲ್ಲವೆಂದೂ, ಆಯುಷ್ಯವರ್ಧನೆಯೇನೂ ಆಗುವುದಿಲ್ಲವೆಂದೂ ಹಲವು ಅಧ್ಯಯನಗಳು ಶ್ರುತ ಪಡಿಸಿವೆ. ಇವುಗಳಿಂದ ಅನಗತ್ಯ ವೆಚ್ಚವಷ್ಟೇ ಅಲ್ಲ, ಕೆಲವೊಂದು ಸಮಸ್ಯೆಗಳೂ ಆಗಬಹುದೆಂದು ಹೇಳಲಾಗಿದೆ.
ಇಂದು ಔಷಧ ಕಂಪೆನಿಗಳಿಗೆ ಎಲ್ಲಕ್ಕಿಂತ ಹೆಚ್ಚು ಆಕರ್ಷಕವೆನಿಸಿರುವುದು ಕ್ಯಾನ್ಸರ್ ಚಿಕಿತ್ಸೆ. ದಶಕಗಳ ಹಿಂದೆ ಅಪರೂಪವಾಗಿದ್ದ ಕ್ಯಾನ್ಸರ್ ಇತ್ತೀಚೆಗೆ ಬಹು ಸಾಮಾನ್ಯವಾಗುತ್ತಿದೆ, ನಗರವಾಸಿಗಳನ್ನೂ, ವಯಸ್ಕರನ್ನಷ್ಟೇ ಅಲ್ಲ, ಗ್ರಾಮೀಣವಾಸಿಗಳನ್ನೂ,ಮಕ್ಕಳನ್ನೂ ಕಾಡುತ್ತಿದೆ. ವಿಶ್ವದಲ್ಲಿ ವರ್ಷಕ್ಕೆ ಒಂದೂವರೆ ಕೋಟಿಯಷ್ಟು ಜನರಲ್ಲಿ ಹೊಸದಾಗಿ ಕ್ಯಾನ್ಸರ್ ಗುರುತಿಸಲ್ಪಡುತ್ತಿದ್ದು, 85 ಲಕ್ಷದಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ನಮ್ಮ ದೇಶದಲ್ಲೂ ಪ್ರತಿ ವರ್ಷ 10 ಲಕ್ಷ ಜನರಲ್ಲಿ ಹೊಸದಾಗಿ ಕ್ಯಾನ್ಸರ್ ಪತ್ತೆಯಾಗುತ್ತಿದೆ, ಮೂರೂವರೆ ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಈಗ ಕ್ಯಾನ್ಸರ್ ಚಿಕಿತ್ಸೆಯ ಜಾಗತಿಕ ವಹಿವಾಟು 124 ಶತಕೋಟಿ ಡಾಲರ್ ಇದ್ದು, 2020ರವೇಳೆಗೆ 173 ಶತಕೋಟಿ ಡಾಲರ್ ಗಳಿಗೆ ಏರಲಿದೆ. ಕ್ಯಾನ್ಸರ್ ಹೆಚ್ಚಿದಂತೆ ಕಂಪೆನಿಗಳಿಗೂ ಸುಗ್ಗಿ!
ಕ್ಯಾನ್ಸರ್ ಹೆಚ್ಚುತ್ತಿರುವುದಕ್ಕೆ ಕಾರಣಗಳನ್ನು ಕೆದಕಿದರೆ ಮತ್ತೆ ಆಹಾರ, ಜೀವನಶೈಲಿ, ಪರಿಸರ ಮಾಲಿನ್ಯ, ಕೀಟನಾಶಕಗಳು, ಪ್ಲಾಸ್ಟಿಕ್ ಬಳಕೆ ಮುಂತಾದವು ಎದ್ದು ತೋರುತ್ತವೆ. ಸಕ್ಕರೆಭರಿತವಾದ, ಸಂಸ್ಕರಿತ ಆಹಾರವನ್ನು ತಯಾರಿಸುವುದೂ ದೈತ್ಯ ಕಂಪೆನಿಗಳೇ, ಬಗೆಬಗೆಯ ವಿಷಗಳನ್ನೂ, ಕೀಟನಾಶಕಗಳನ್ನೂ ಪರಿಸರಕ್ಕೆ ಬಿಟ್ಟು, ನಮ್ಮ ಆಹಾರ-ನೀರು-ಗಾಳಿಗಳನ್ನು ಕಲುಷಿತಗೊಳಿಸುವುದೂ ಕಂಪೆನಿಗಳೇ, ಇವುಗಳಿಂದೆಲ್ಲ ಕ್ಯಾನ್ಸರ್ ಬಂದರೆ ಅದಕ್ಕೆ ಔಷಧ ನೀಡುವುದೂ ಕಂಪೆನಿಗಳೇ! ಈ ಎಲ್ಲ ಕಂಪೆನಿಗಳ ವಹಿವಾಟು ಜೊತೆಜೊತೆಗೇ ಹೆಚ್ಚಿ, ಅವುಗಳ ಮೌಲ್ಯ ವರ್ಧನೆಯಾಗಿ, ಷೇರು ಪೇಟೆಯ ಸೂಚ್ಯಂಕ ಮೇಲೇರಿದಂತೆ ದೇಶದ ಅಭಿವೃದ್ಧಿಯೂ ಆಗುತ್ತದೆ, ಅಲ್ಲವೇ? ದೇಶವಾಸಿಗಳು ರೋಗಗ್ರಸ್ತರಾದರೇನು, ದೇಶ ಅಭಿವೃದ್ಧಿಯಾದರೆ ಸಾಕು!
ಹಾಗಾದರೆ ಔಷಧಗಳೇ ಬೇಡವೇ? ಬೇಕೇ ಬೇಕು. ವಿಪರೀತ ನೋವು-ಉರಿಯೂತಗಳಿದ್ದರೆ ಅವನ್ನು ತಗ್ಗಿಸುವ ಔಷಧಗಳನ್ನು ಹಿತಮಿತವಾಗಿ ಬಳಸಬೇಕು. ಗಂಭೀರ ಸೋಂಕುಗಳನ್ನು ಗುಣಪಡಿಸುವುದಕ್ಕೆ ಪ್ರತಿಜೈವಿಕಗಳು ಬೇಕು; ಅಗತ್ಯವಿದ್ದಾಗಲಷ್ಟೇ ಅವನ್ನು ಬಳಸಬೇಕು. ಕ್ಯಾನ್ಸರ್ ಬೆಳೆದಿದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆಯೂ ಬೇಕು. ರಕ್ತದೊತ್ತಡ, ಹೃದ್ರೋಗಗಳಿದ್ದರೆ ಅವನ್ನು ನಿಯಂತ್ರಿಸುವ ಔಷಧಗಳು ಬೇಕು, ಆಹಾರ ಹಾಗೂ ಜೀವನಶೈಲಿಯ ಬದಲಾವಣೆಗಳಿಂದ ಇವು ಸುಧಾರಿಸಿದರೆ ಕಾಲಕ್ರಮೇಣ ಈ ಔಷಧಗಳ ಬಳಕೆಯನ್ನು ಇಳಿಸಿ, ನಿಲ್ಲಿಸಬಹುದು. ಒಂದನೇ ವಿಧದ ಮಧುಮೇಹವುಳ್ಳವರು ಇನ್ಸುಲಿನ್ ಪಡೆಯಲೇ ಬೇಕು; ಎರಡನೇ ವಿಧದ ಮಧುಮೇಹವುಳ್ಳವರಲ್ಲಿ ಹೆಚ್ಚಿನವರು ಆಹಾರದ ನಿಯಂತ್ರಣದಿಂದಲೇ ತಮ್ಮ ರಕ್ತದ ಗ್ಲೂಕೋಸನ್ನು ನಿಯಂತ್ರಿಸಿಕೊಳ್ಳಬಹುದು. ರಕ್ತದ ಕೊಲೆಸ್ಟರಾಲ್ ಇಳಿಸುವುದಕ್ಕೆಂದು ಸ್ಟಾಟಿನ್ ತಿನ್ನುವ ಅಗತ್ಯವಿಲ್ಲ; ರಕ್ತನಾಳಗಳ ಕಾಯಿಲೆಯ ಅಪಾಯವುಳ್ಳವರಷ್ಟೇ ಅದನ್ನು ಸೇವಿಸಿದರೆ ಸಾಕು. ವಿಟಮಿನ್, ಕ್ಯಾಲ್ಸಿಯಂ ಇತ್ಯಾದಿಗಳು ಹೆಚ್ಚಿನವರಿಗೆ ಅನಗತ್ಯ.
ಜನರಿಗೆ ನಿಜಕ್ಕೂ ಅಗತ್ಯವುಳ್ಳ ಔಷಧಗಳನ್ನು ಅಭಿವೃದ್ಧಿ ಪಡಿಸಿ, ಉಚಿತವಾಗಿ ಅಥವಾ ಮಿತದರದಲ್ಲಿ ಒದಗಿಸಬೇಕಾದರೆ ಜನಪರವಾದ ಆಡಳಿತ ವ್ಯವಸ್ಥೆಯಿದ್ದರೆ ಮಾತ್ರ ಸಾಧ್ಯವಾದೀತು. ಈಗಿರುವ ಸರಕಾರಗಳು ಬೆರಳೆಣಿಕೆಯ ಖಾಸಗಿ ಕಂಪೆನಿಗಳನ್ನು ಪೋಷಿಸುವಂಥವು, ಆ ಕಂಪೆನಿಗಳ ಧನಬೆಂಬಲದಿಂದ ಅಧಿಕಾರಕ್ಕೇರುವಂಥವು, ತಮ್ಮನ್ನೂ ಪೋಷಿಸಿಕೊಂಡು, ಕಂಪೆನಿಗಳಿಗೆ ಮತ್ತೆ ಋಣಸಂದಾಯ ಮಾಡುವಂಥವು. ಈ ವ್ಯವಸ್ಥೆ ಇರುವವರೆಗೆ ಜನಸಾಮಾನ್ಯರು ರೋಗಪೀಡಿತರಾಗಿರುತ್ತಾರೆ, ಔಷಧಗಳ ದಾಸರಾಗಿರುತ್ತಾರೆ; ರೋಗಗಳನ್ನು ಹೆಚ್ಚಿಸುವ ಕಂಪೆನಿಗಳೂ, ಆ ರೋಗಗಳಿಗೆ ಔಷಧಗಳನ್ನೊದಗಿಸುವ ಕಂಪೆನಿಗಳೂ ಆರೋಗ್ಯವಂತವಾಗಿರುತ್ತವೆ.
Leave a Reply