ಕೋಳಿ ಜ್ವರ ಆಯಿತು, ಈಗ ಹಂದಿ ಜ್ವರ!
ವಾರ್ತಾಭಾರತಿ, ಮೇ 15, 2009
ಈಗ ಎಲ್ಲೆಂದರಲ್ಲಿ ಹಂದಿ ಜ್ವರದ್ದೇ ಹುಯಿಲು. ಎಲ್ಲಾ ದೃಶ್ಯ ಮಾಧ್ಯಮಗಳಲ್ಲೂ, ವಾರ್ತಾ ಪತ್ರಿಕೆಗಳ ಮುಖಪುಟಗಳಲ್ಲೂ ಅದರದ್ದೇ ಸುದ್ದಿ. ಎಲ್ಲೆಂದರಲ್ಲಿ ಮುಖ ಮುಚ್ಚಿಕೊಂಡು ಓಡಾಡುವವರ ಚಿತ್ರಗಳು. ಜಗತ್ತಿನಾದ್ಯಂತ ಕೋಟಿಗಟ್ಟಲೆ ಜನ ಸತ್ತು ಉರುಳಲು ಕ್ಷಣಗಣನೆ ಶುರುವಾಗಿದೆಯೇನೋ ಎಂಬಂತೆ ಹೆದರಿಕೆ ಹುಟ್ಟಿಸುವ ಪ್ರಚಾರ. ಆರು ವರ್ಷಗಳ ಹಿಂದೆ ಸಾರ್ಸ್, ಮೂರು ವರ್ಷಗಳ ಹಿಂದೆ ಹಕ್ಕಿ ಜ್ವರ, ಈಗ ‘ಹಂದಿ ಜ್ವರ’. ಮೂರು ವರ್ಷಗಳಿಗೊಂದು ‘ಹೊಸ’ ಸೋಂಕು ರೋಗವೇ? ಹಕ್ಕಿ ಜ್ವರದ ಚಿಕಿತ್ಸೆಗೆಂದು ನಮ್ಮ ಸರಕಾರ ದಾಸ್ತಾನು ಮಾಡಿದ್ದ ಟಾಮಿಫ್ಲು ಇತ್ಯಾದಿ ಔಷಧಗಳು ಬಳಕೆಗೆ ಬಾರದೆ, ಅವಧಿ ಮೀರಿ ತಿಪ್ಪೆ ಸೇರಲು ತಯಾರಾಗುತ್ತಿದ್ದಂತೆ, ಮತ್ತೊಂದು ಸಲ ಅದೇ ಔಷಧಗಳನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿರುವಂತೆ ಕಾಣಿಸುತ್ತಿದೆ. ಹೀಗಾಗಿ, ಈಗ ಅನಾವರಣಗೊಳ್ಳುತ್ತಿರುವ ‘ಹಂದಿ ಜ್ವರ’ದ ವರದಿಗಳನ್ನು ಯಥಾವತ್ತಾಗಿ ನಂಬುವಂತೆಯೂ ಇಲ್ಲ, ಸಾರಾಸಗಟಾಗಿ ಸುಳ್ಳೆಂದು ತಳ್ಳಿ ಹಾಕುವಂತೆಯೂ ಇಲ್ಲ.
ಸೋಂಕು ರೋಗಗಳ ಬಗ್ಗೆ ಜಗತ್ತಿನಾದ್ಯಂತ ಭೀತಿ ಹುಟ್ಟಿಸುವ ಪರಿಪಾಠ ಹೆಚ್ಚು ಸಾಮಾನ್ಯವಾಗುತ್ತಿರುವಂತೆ ಕಂಡು ಬರುತ್ತಿದೆ. ಆರು ವರ್ಷಗಳ ಹಿಂದೆ ಸಾರ್ಸ್ ಕಂಡುಬಂದಾಗಲೂ ಹೀಗೆಯೇ ಆಯಿತು; ಯಾಕೆ, ಹೇಗೆ, ಏನೆಂದು ಗೊತ್ತಿಲ್ಲದ ಅದು ವಿಶ್ವವ್ಯಾಪಿಯಾಗಿ ಕೋಟಿಗಟ್ಟಲೆ ಜನರ ಸಾವಿಗೆ ಕಾರಣವಾಗಬಹುದೆಂಬ ಭಯದಿಂದ ಅತಿರೇಕವೆನಿಸುವಷ್ಟು ಮುಂಜಾಗ್ರತಾ ಕ್ರಮಗಳನ್ನು ಎಲ್ಲೆಡೆ ಕೈಗೊಳ್ಳಲಾಯಿತು. ಮೂರು ವರ್ಷಗಳ ಹಿಂದೆ ಕೋಳಿ ಜ್ವರವೂ ಬಂತು; ಅದು ಮನುಷ್ಯರಿಗೆ ಹರಡಿ ಲಕ್ಷಗಟ್ಟಲೆ ಜನರನ್ನು ಕೊಲ್ಲಬಹುದು ಎಂದು ಯಾರೋ ಒಂದಿಬ್ಬರಿಗೆ ಗುಮಾನಿಯಾದದ್ದಕ್ಕೆ ಕೋಟಿಗಟ್ಟಲೆ ಕೋಳಿಗಳನ್ನು ಕೊಂದು ಸಮಾಧಾನ ಪಟ್ಟುಕೊಂಡೆವು. ಅಷ್ಟರಲ್ಲೇ ಈಗ ‘ಹಂದಿ ಜ್ವರ’ ಎದ್ದಿದೆ. ಇದು ಇಡೀ ವಿಶ್ವವ್ಯಾಪಿಯಾಗಿ ಕೋಟಿಗಟ್ಟಲೆ ಜನರನ್ನು ಕೊಲ್ಲಬಹುದು ಎಂಬ ’ಭಯ’ವನ್ನು ಅಮೆರಿಕಾದ ರೋಗನಿಯಂತ್ರಣ ಸಂಸ್ಥೆ (ಸಿ.ಡಿ.ಸಿ) ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳು ವ್ಯಕ್ತಪಡಿಸಿವೆ. ಮಾಧ್ಯಮಗಳು ಸಹಜವಾಗಿಯೇ ಇದಕ್ಕೆ ತಾಳ ಹಾಕುತ್ತಿವೆ. ಮುಂದಿನ ದಿನಗಳಲ್ಲಿ, “ಹಂದಿ ಜ್ವರ ಪೀಡಿತರಿಗೆ ಚಿಕಿತ್ಸೆ ನೀಡಲೆಂದು ಕೋಟಿಗಟ್ಟಲೆ ಮೌಲ್ಯದ ’ಔಷಧಗಳನ್ನು’ ಎಲ್ಲಾ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ” ಎಂಬಂತಹ ಹೇಳಿಕೆಗಳನ್ನು ನಮ್ಮ ಮಂತ್ರಿಗಳಿಂದ ನಿರೀಕ್ಷಿಸಬಹುದು. ಈ ’ಭಯಂಕರವಾದ’ ರೋಗಕ್ಕೆ ಒಂದೆರಡು ವೈರಸ್ ನಿರೋಧಕ ಔಷಧಗಳಷ್ಟೇ ಪರಿಣಾಮಕಾರಿಯಾಗಿದ್ದು, ಅವನ್ನು ’ಸಾಕಷ್ಟು ಪ್ರಮಾಣದಲ್ಲಿ’ ಕೂಡಲೇ ಖರೀದಿಸಬೇಕೆಂದೂ, ಜನರ ಬದುಕಿನೊಂದಿಗೆ ಸರಕಾರವು ಚೆಲ್ಲಾಟವಾಡುವುದು ಸರಿಯಲ್ಲವೆಂದೂ ಒತ್ತಾಯಗಳು ಎದ್ದು, ಅದಕ್ಕುತ್ತರವಾಗಿ, ‘ಎಷ್ಟೇ ವೆಚ್ಚವಾದರೂ ಅಂತಹಾ ‘ಜೀವರಕ್ಷಕ’ ಔಷಧಗಳನ್ನು ಖಂಡಿತವಾಗಿಯೂ ಖರೀದಿಸಲಾಗುವುದು’ ಎಂಬ ಆಶ್ವಾಸನೆಯು ಸರಕಾರದಿಂದ ಬರಲಿದೆ. ಈ ಹೊಸ ಸೋಂಕಿಗಾಗಿಯೇ ವಿಶೇಷವಾದ ಲಸಿಕೆಯನ್ನು ತಯಾರಿಸುವುದಾಗಿಯೂ, ಎಲ್ಲಾ ಹಂದಿಗಳಿಗೂ, ಮನುಷ್ಯರಿಗೂ ಅದನ್ನು ಚುಚ್ಚಲೇ ಬೇಕೆಂದೂ ಲಸಿಕೆ ತಯಾರಿಕಾ ಕಂಪೆನಿಗಳಿಂದ ಆಶ್ವಾಸನೆಗಳೂ ಬರಲಿವೆ. ಹಳೆಯ, ಹೊಸದಾದ, ಇನ್ನೂ ಹುಟ್ಟಲಿರುವ ಎಲ್ಲಾ ರೋಗಗಳನ್ನೂ ವಾಸಿ ಮಾಡಬಲ್ಲ ಮತ್ತು ತಡೆಯಬಲ್ಲ ‘ಬದಲಿ ಪದ್ಧತಿಗಳ ತಜ್ಞರು’, ತಮ್ಮಿಂದ ಮಾತ್ರವೇ ಈ ರೋಗವನ್ನು ತಡೆಯಲು ಸಾಧ್ಯ ಎನ್ನುವ ಘೋಷಣೆಗಳನ್ನು ಹೊರಡಿಸಲಿದ್ದಾರೆನ್ನುವುದರಲ್ಲೂ ಸಂಶಯವಿಲ್ಲ. ಇವನ್ನೆಲ್ಲ ನೋಡಿದ, ಕೇಳಿದ ಜನರಲ್ಲಿ ರೋಗವಲ್ಲದಿದ್ದರೂ ಹೆದರಿಕೆಯ ಸನ್ನಿ ಹರಡುವುದಂತೂ ದಿಟ.
ಏನಿದು ಹಂದಿ ಜ್ವರ?
ಮನುಷ್ಯನನ್ನು ಕಾಡುವ ಹತ್ತು ಹಲವು ವೈರಸ್ ಗಳಲ್ಲಿ ಇನ್ ಫ್ಲುಯೆಂಜಾವೂ ಒಂದು. ಹಕ್ಕಿಗಳಲ್ಲೂ, ಕೆಲವು ಪ್ರಾಣಿಗಳಲ್ಲೂ ಇದೇ ಜಾತಿಯ ವೈರಸ್ ಗಳು ಸೋಂಕನ್ನುಂಟು ಮಾಡಬಹುದು. ಅಪರೂಪಕ್ಕೊಮ್ಮೆ ಇವುಗಳಿಂದ ಮನುಷ್ಯರಿಗೂ ಹರಡಬಹುದು. ಈ ವೈರಸ್ ಗಳೊಳಗೆ ತಳಿಬೆರಕೆಯಾಗಿ ಹೊಸ ರೂಪದ ಇನ್ ಫ್ಲುಯೆಂಜಾ ವೈರಸ್ ಉಂಟಾಗಿ ಹೊಸದಾಗಿ ರೋಗವನ್ನು ಹರಡಬಹುದು. ಆಹಾರಕ್ಕಾಗಿ ಪಶುಸಾಕಣೆಯು ಹೆಚ್ಚಿದಂತೆ, ಅಂತಹಾ ಹಕ್ಕಿಗಳು ಹಾಗೂ ಪ್ರಾಣಿಗಳ ಜೊತೆ ಮನುಷ್ಯನ ಸಂಪರ್ಕವು ನಿಕಟಗೊಂಡಂತೆ, ರೋಗ ಹರಡುವಿಕೆಯ ಸಾಧ್ಯತೆಯು ಇನ್ನಷ್ಟು ಹೆಚ್ಚುತ್ತದೆ. ಇತ್ತೀಚೆಗೆ ಸುದ್ದಿಯಲ್ಲಿರುವ ಹಕ್ಕಿ ಜ್ವರ, ಹಂದಿ ಜ್ವರಗಳು ಇದಕ್ಕೆ ಉದಾಹರಣೆಗಳು.
ಮೂರು ವರ್ಷಗಳಿಂದ ಸುದ್ದಿಯಲ್ಲಿರುವ ಹಕ್ಕಿ ಜ್ವರಕ್ಕೆ ಇನ್ ಫ್ಲುಯೆಂಜಾ ಎ (H5N1) ವೈರಸ್ ಕಾರಣ. ಇದು ತನ್ನ ರೂಪವನ್ನು ಬದಲಿಸಿ, ಮನುಷ್ಯನನ್ನು ಕಾಡಬಲ್ಲ H1N1 ಆಗಿ, ವಿಶ್ವವ್ಯಾಪಿ ಸೋಂಕನ್ನುಂಟುಮಾಡುವ ಸಾಧ್ಯತೆಗಳಿವೆಯೆಂದೂ, ಆದ್ದರಿಂದ ಅದನ್ನು ನಿಯಂತ್ರಿಸುವುದಕ್ಕಾಗಿ ಜ್ವರ ಬಾಧಿತವಾದ ಮತ್ತು ಅವುಗಳ ಜೊತೆಗಿದ್ದ ಕೋಳಿಗಳೆಲ್ಲವನ್ನೂ ಕೊಲ್ಲಬೇಕೆಂದೂ ತೀರ್ಮಾನಿಸಿ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋಟಿಗಟ್ಟಲೆ ಕೋಳಿಗಳನ್ನು ಕೊಲ್ಲಲಾಯಿತು. ಹಕ್ಕಿ ಜ್ವರದ ಲಸಿಕೆಯ ವಹಿವಾಟು ಬಹಳ ಜೋರಾಗಿ ನಡೆಯಿತು. ಅದನ್ನು ಗುಣಪಡಿಸಲು ಟಾಮಿಫ್ಲು ಎಂಬ ಔಷಧವೊಂದಕ್ಕೆ ಮಾತ್ರ ಸಾಧ್ಯವೆಂದು ಡಂಗುರ ಸಾರಿಸಿ ಅದನ್ನು ತಯಾರಿಸುವ ಗಿಲಿಯಡ್ ಕಂಪೆನಿಯ ಮಾಲಕನಾದ ಡೊನಾಲ್ಡ್ ರಮ್ಸ್ ಫೆಲ್ಡ್ (ಜಾರ್ಜ್ ಬುಷ್ ನಿಂದ ಅಮೆರಿಕಾದ ರಕ್ಷಣಾ ಕಾರ್ಯದರ್ಶಿಯಾಗಿ ನಿಯುಕ್ತನಾಗಿದ್ದವನು) ಬಿಲಿಯಗಟ್ಟಲೆ ಬಾಚಿಕೊಂಡದ್ದೂ ಆಯಿತು. ಅದರ ಬೆನ್ನಲ್ಲೇ ಈ ‘ಹೊಸ ಸೋಂಕು’ ತಲೆಯೆತ್ತಿದೆ.
ಎಲ್ಲಿಂದ ಬಂತು ಈ ಹಂದಿ ಜ್ವರ? ಜಗತ್ತಿನ ಅತಿ ದೊಡ್ಡ ಹಂದಿ ಮಾಂಸ ಪೂರೈಕೆದಾರನಾದ ಸ್ಮಿತ್ ಫೀಲ್ಡ್ ಕಂಪೆನಿಯು ಮೆಕ್ಸಿಕೋದ ಲ ಗ್ಲೋರಿಯಾದಲ್ಲಿ ನಡೆಸುತ್ತಿರುವ ಹಂದಿ ಸಾಕಣಾಲಯವೇ ಈ ಹೊಸ ಸೋಂಕಿನ ಮೂಲವೆಂದು ಹೇಳಲಾಗುತ್ತಿದೆ. ಅಲ್ಲಿ ಉಸಿರಾಡಲೂ ಜಾಗವಿಲ್ಲದಂತೆ ಕೂಡಿ ಹಾಕಿದ್ದ ಹಂದಿಗಳ ಮಧ್ಯೆ ಈ ವೈರಸ್ ಹರಡಿ, ಅವುಗಳ ಸಂಪರ್ಕಕ್ಕೆ ಬಂದ ಮನುಷ್ಯರಿಗೂ ಹರಡಿ, ನಂತರ ಮನುಷ್ಯರಿಂದ ಮನುಷ್ಯರಿಗೆ ಹರಡಿತು ಎನ್ನಲಾಗುತ್ತಿದೆ. ಆದರೆ ಈ ಹೊಸ ವೈರಸ್ ಹಂದಿಗಳಲ್ಲಿ ಹರಡುತ್ತಿಲ್ಲವೆಂದು ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಸ್ಥೆ [FAO] ಹೇಳಿದ್ದು, ಹೊಸ ವೈರಸ್ ನ ಹಂದಿ ಮೂಲದ ಬಗ್ಗೆ ಹಂದಿ ಸಾಕಣೆಗಾರರು ತಗಾದೆ ಎತ್ತಿದ್ದರಿಂದ ಅದನ್ನೀಗ ಹಂದಿಜ್ವರವೆಂದು ಕರೆಯದೆ ಇನ್ ಫ್ಲುಯೆಂಜಾ ಎ (H1N1) ಎಂದೇ ಕರೆಯಲಾಗುತ್ತಿದೆ.
ನಿಜಕ್ಕೂ ಹೊಸದಾದ ವೈರಸ್ಸೇ?
ಇನ್ ಫ್ಲುಯೆಂಜಾ ಹೊಸತೇನಲ್ಲ. ಇನ್ ಫ್ಲುಯೆಂಜಾ ಎ (H1N1), ಇನ್ ಫ್ಲುಯೆಂಜಾ ಎ (H3N2), ಇನ್ ಫ್ಲುಯೆಂಜಾ ಬಿ ಇತ್ಯಾದಿ ವಿವಿಧ ಬಗೆಯ ಇನ್ ಫ್ಲುಯೆಂಜಾ ವೈರಸ್ ಗಳು ಹಲವು ವರ್ಷಗಳಿಂದ ಮನುಷ್ಯನನ್ನು ಕಾಡುತ್ತಿದ್ದು, ಪ್ರತಿ ವರ್ಷ, ಮುಖ್ಯವಾಗಿ ಚಳಿಗಾಲದಲ್ಲಿ, ಲಕ್ಷಗಟ್ಟಲೆ ಜನ ಫ್ಲು ಸೋಂಕಿನಿಂದ ಬಾಧಿತರಾಗುತ್ತಾರೆ ಹಾಗೂ ಸುಮಾರು ಐದು ಲಕ್ಷದಷ್ಟು ಜನ, ಹೆಚ್ಚಾಗಿ ಹಿರಿವಯಸ್ಸಿನವರು, ಅದರಿಂದಾಗಿ ಸಾವನ್ನಪ್ಪುತ್ತಾರೆ. ಇನ್ ಫ್ಲುಯೆಂಜಾ ವೈರಸ್ ಗಳು ಆಗಾಗ ತಮ್ಮ ರೂಪವನ್ನು ಬದಲಿಸಿಕೊಳ್ಳುವಲ್ಲಿ ನಿಷ್ಣಾತವಾಗಿದ್ದು, ಕೆಲವೊಮ್ಮೆ ಹೊಸ ವೈರಸ್ ಗಳ [ಉದಾಹರಣೆಗೆ 2002ರಲ್ಲಿ ಕಂಡುಬಂದ ಇನ್ ಫ್ಲುಯೆಂಜಾ ಎ (H1N2)] ಹುಟ್ಟಿಗೂ ಕಾರಣವಾಗುತ್ತವೆ. ಮನುಷ್ಯರು, ಹಂದಿಗಳು ಮತ್ತು ಹಕ್ಕಿಗಳನ್ನು ಕಾಡುವ ಇನ್ ಫ್ಲುಯೆಂಜಾ ವೈರಸ್ ಗಳ ತಳಿಬೆರಕೆಯಾಗಿ ಹೊಸ ವೈರಸ್ ಉಂಟಾಗಿರುವುದನ್ನು ಹಂದಿಗಳ ದೇಹದಲ್ಲಿ 1998ರಲ್ಲೇ ಗುರುತಿಸಲಾಗಿತ್ತು ಮತ್ತು 2005ರಿಂದ 2009ರವರೆಗೆ ಈ ಹಂದಿ ಮೂಲದ ವೈರಸ್ ಗಳಿಂದ ಮನುಷ್ಯರಿಗೆ ಸೋಂಕು ತಗಲಿದ 12 ಪ್ರಕರಣಗಳು ಅಮೆರಿಕದಿಂದ ವರದಿಯಾಗಿದ್ದವು. ಈ ವರ್ಷದ ಎಪ್ರಿಲ್ 15 ಹಾಗೂ 17ರಂದು ಅಮೆರಿಕದ ಸಿಡಿಸಿ ಸಂಸ್ಥೆಯು ಕ್ಯಾಲಿಫೋರ್ನಿಯಾದ ಇಬ್ಬರು ಜ್ವರ ಪೀಡಿತ ಮಕ್ಕಳಲ್ಲಿ ಇನ್ನೊಂದು ಹೊಸ ಮಾದರಿಯ ಇನ್ ಫ್ಲುಯೆಂಜಾ ವೈರಸ್ ಅನ್ನು ಗುರುತಿಸಿತು. ಇದನ್ನು ಇನ್ ಫ್ಲುಯೆಂಜಾ ಎ (H1N1) ಎಂದು ಹೆಸರಿಸಲಾಗಿದ್ದು, ಇದನ್ನು ಹಂದಿಗಳಲ್ಲಾಗಲೀ, ಮನುಷ್ಯರಲ್ಲಾಗಲೀ ಹಿಂದೆಂದೂ ಕಂಡಿರಲಿಲ್ಲವೆಂದು ಹೇಳಲಾಗುತ್ತಿದೆ. ಕೆನಡಾದ ವಿಜ್ಞಾನಿಗಳು ಈ ವೈರಸ್ ತಳಿಯ ವಿವರಗಳನ್ನು ಸಂಪೂರ್ಣವಾಗಿ ಬಿಡಿಸಿದ್ದಾರೆಂದು ಈಗಾಗಲೇ ವರದಿಯಾಗಿದೆ. ಮನುಷ್ಯರು, ಹಂದಿಗಳು ಮತ್ತು ಹಕ್ಕಿಗಳ ಇನ್ ಫ್ಲುಯೆಂಜಾ ವೈರಸ್ ಗಳ ತಳಿಬೆರಕೆಯಿಂದಲೇ ಈ ಹೊಸ ವೈರಸ್ ಉಂಟಾಗಿರಬಹುದೆಂಬುದು ವಿಜ್ಞಾನಿಗಳ ಊಹೆಯಾಗಿದೆ. ಈ ಹೊಸ ಇನ್ ಫ್ಲುಯೆಂಜಾ ಎ (H1N1) ವೈರಸ್ ಈಗಾಗಲೇ ಹರಡುತ್ತಲಿದ್ದು ಇದು ವಿಶ್ವವ್ಯಾಪಿಯಾಗಬಹುದೆಂಬ ಭಯವನ್ನು ವ್ಯಕ್ತಪಡಿಸಲಾಗಿದೆ. ಹಿಂದೆ 1918-1920ರಲ್ಲಿ ಲಕ್ಷಗಟ್ಟಲೆ ಜನರ ಸಾವಿಗೆ ಕಾರಣವಾಯಿತೆನ್ನಲಾದ ಸ್ಪಾನಿಷ್ ಫ್ಲು ವನ್ನುಂಟುಮಾಡಿದ H1N1 ವೈರಸ್ ನೊಂದಿಗೆ ಈ ಹೊಸ ವೈರಸ್ ಸಾಮ್ಯತೆಯನ್ನು ಹೊಂದಿರುವುದು ಆತಂಕಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಹೇಗಿದ್ದರೂ, ಈ ವೈರಸ್ ಹೊಸದೇ ಅಥವಾ ಸದಾ ತನ್ನ ರೂಪವನ್ನು ಬದಲಿಸಿಕೊಳ್ಳುವಲ್ಲಿ ನಿಷ್ಣಾತವಾಗಿರುವ ಇನ್ ಫ್ಲುಯೆಂಜಾ ಎ (H1N1) ವೈರಸ್ ನ ಮತ್ತೊಂದು ರೂಪವಷ್ಟೆಯೇ ಎನ್ನುವ ಸತ್ಯ ಹೊರಬೀಳುವ ಬಗ್ಗೆ ಖಾತರಿಯಿಲ್ಲ. ಈ ‘ಹೊಸ’ ಸೋಂಕು ಬೇಸಗೆಯಲ್ಲಿ ಆರಂಭಗೊಂಡಿರುವುದು ಮತ್ತು ಯುವಜನರೂ ಅದಕ್ಕೆ ಬಲಿಯಾಗಿರುವುದು ಸ್ವಲ್ಪ ವಿಶೇಷವಾದ್ದರಿಂದ ಇಷ್ಟೊಂದು ಗದ್ದಲಕ್ಕೆ ಕಾರಣವಾಗಿರಬಹುದು.
‘ಹಂದಿ ಜ್ವರ’ ಎಲ್ಲೆಲ್ಲಿದೆ? ಮಾರ್ಚ್ ತಿಂಗಳಲ್ಲಿ ಮೊದಲ ಬಾರಿಗೆ ಮೆಕ್ಸಿಕೋ ದೇಶದಲ್ಲಿ ಕಂಡುಬಂದ ಈ ಸೋಂಕು ರೋಗವು (ಎಪ್ರಿಲ್ ನಲ್ಲಿ ಅದರ ವೈರಸ್ ಗುರುತಿಸಲ್ಪಟ್ಟಿತು), ಮೆಕ್ಸಿಕೋಗೆ ಭೇಟಿಯಿತ್ತ ಪ್ರವಾಸಿಗಳ ಮೂಲಕ ಈಗಾಗಲೇ ಅಮೆರಿಕಾ, ಕೆನಡಾ, ಸ್ಪೇನ್, ಇಂಗ್ಲೆಂಡ್, ನ್ಯೂಜಿಲೆಂಡ್ ಮುಂತಾದ 30 ರಾಷ್ಟ್ರಗಳ ನಾಗರಿಕರಿಗೆ ಹರಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮೇ 12ರ ವರೆಗೆ, 30 ದೇಶಗಳಲ್ಲಿ ಒಟ್ಟು 5251 ಪ್ರಕರಣಗಳು ದೃಢಪಟ್ಟಿದ್ದು, 61 ಜನ (ಮೆಕ್ಸಿಕೋದಲ್ಲಿ 56, ಅಮೆರಿಕಾದಲ್ಲಿ 3, ಕೆನಡಾದಲ್ಲಿ 1, ಕೋಸ್ತಾ ರಿಕಾದಲ್ಲಿ 1) ಅದರಿಂದಾಗಿ ಸಾವನ್ನಪ್ಪಿದ್ದಾರೆ. ಈ ವರೆಗೆ ವರದಿಯಾಗಿರುವ ಹೊಸ ಪ್ರಕರಣಗಳಲ್ಲಿ ಹೆಚ್ಚಿನವು ಅಮೆರಿಕಾ, ಮೆಕ್ಸಿಕೋ ಹಾಗೂ ಕೆನಡಾಗಳಲ್ಲಿಯೇ ಕಂಡುಬರುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯು ಎಪ್ರಿಲ್ ಮಧ್ಯದಿಂದಲೇ ತುರ್ತು ನಿಯಂತ್ರಣ ಕ್ರಮಗಳ ಬಗ್ಗೆ ಎಚ್ಚರಿಕೆಯನ್ನು ಹೊರಡಿಸಿದ್ದು, ವಿಶ್ವವ್ಯಾಪಿ ಸೋಂಕಿನ ಅಪಾಯವಿದೆಯೆಂದು ಹೇಳಿದೆ.
ಭಾರತದಲ್ಲಿ ಇದುವರೆಗೆ ಏಳೆಂಟು ಜನ ಫ್ಲೂ ಶಂಕಿತರನ್ನು ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು, ಅವರಾರಲ್ಲೂ ಈ ಸೋಂಕು ದೃಢಪಟ್ಟಿಲ್ಲ. ಮೇ 8ರ ವರದಿಯಂತೆ, ಬೆಂಗಳೂರಿನಲ್ಲಿ ಇಬ್ಬರು ಶಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ರಕ್ತ ಪರೀಕ್ಷೆಯ ವರದಿಗಳನ್ನು ಕಾಯಲಾಗುತ್ತಿದೆ.
‘ಹಂದಿ ಜ್ವರ’ ಹರಡುವುದು ಹೇಗೆ?
ಮೊದಲಲ್ಲಿ ಹಂದಿಗಳ ನಿಕಟ ಸಂಪರ್ಕಕ್ಕೆ ಬಂದ ಮನುಷ್ಯರಿಗೆ (ಹಂದಿ ಸಾಕಣೆಯ ಕೆಲಸಗಾರರಿರಬಹುದು) ಹರಡಿದ ಹೊಸ ಇನ್ ಫ್ಲುಯೆಂಜಾ ರೋಗವು, ಈಗ ರೋಗ ಪೀಡಿತರಾದ ಮನುಷ್ಯರಿಂದ ಇತರರಿಗೆ ಹರಡುತ್ತಿದೆ. ಈ ವರೆಗೆ ವರದಿಯಾದ ಪ್ರಕರಣಗಳನ್ನು ಗಮನಿಸಿದರೆ, ಈ ಹೊಸ ಸೋಂಕು ಸಾಕಷ್ಟು ತ್ವರಿತವಾಗಿ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಮರ್ಥ್ಯವನ್ನು ಹೊಂದಿರುವುದು ಕಂಡುಬರುತ್ತದೆ.
ರೋಗಿಯ ಕೆಮ್ಮು ಯಾ ಸೀನಿನ ಮೂಲಕ ಇನ್ ಫ್ಲುಯೆಂಜಾ ವೈರಸ್ ಇತರರಿಗೆ ಹರಡುತ್ತದೆ. ಕೆಮ್ಮು ಯಾ ಸೀನಿನ ಮೂಲಕ ವೈರಸ್ ಸಿಂಪಡಣೆಗೊಂಡ ಜಾಗಗಳನ್ನು ಮುಟ್ಟಿ ಅದೇ ಬೆರಳುಗಳಿಂದ ಮುಖ ಯಾ ಕಣ್ಣುಗಳನ್ನು ಒರೆಸಿಕೊಳ್ಳುವುದರಿಂದಲೂ ರೋಗವು ಹರಡಬಹುದು. ಸೋಂಕಿನ ಲಕ್ಷಣಗಳು ಕಂಡುಬಂದ ಒಂದರಿಂದ ಏಳು ದಿನಗಳವರೆಗೆ ಅದು ಇತರರಿಗೆ ಹರಡಬಹುದು.
ರೋಗ ಲಕ್ಷಣಗಳೇನು?
ಹೊಸ ಇನ್ ಫ್ಲುಯೆಂಜಾ ಎ (H1N1) ಸೋಂಕು, ಸಾಮಾನ್ಯವಾಗಿ ಕಂಡುಬರುವ ಫ್ಲೂ ಜ್ವರದ ಲಕ್ಷಣಗಳನ್ನೇ ಹೊಂದಿರುತ್ತದೆ. ಜ್ವರ, ಮೈಕೈ ನೋವು, ತಲೆ ನೋವು, ಗಂಟಲು ನೋವು, ಕೆಮ್ಮು ಇತ್ಯಾದಿ ಲಕ್ಷಣಗಳು ಸಾಮಾನ್ಯವಾಗಿದ್ದು, ವಾಂತಿ, ಬೇಧಿ, ನ್ಯುಮೋನಿಯಾ ಇತ್ಯಾದಿ ತೊಂದರೆಗಳು ಅಪರೂಪದಲ್ಲಿ ಉಂಟಾಗಬಹುದು.
ಇನ್ ಫ್ಲುಯೆಂಜಾ ಎ (H1N1) ಗೆ ಚಿಕಿತ್ಸೆ ಇದೆಯೇ?
ಹೆಚ್ಚಿನ ರೋಗಿಗಳಲ್ಲಿ ಇನ್ ಫ್ಲುಯೆಂಜಾ ತನ್ನಿಂತಾನಾಗಿ, ಯಾವುದೇ ಚಿಕಿತ್ಸೆಯಿಲ್ಲದೆಯೇ, ಗುಣ ಹೊಂದುತ್ತದೆ.
ಒಸೆಲ್ಟಾಮಿವಿರ್ (ಅದೇ, ರಮ್ಸ್ ಫೆಲ್ಡನ ಗಿಲಿಯಡ್ ಕಂಪೆನಿಯ ಟಾಮಿಫ್ಲು) ಮತ್ತು ಜನಾಮಿವಿರ್ (ಇನ್ನೊಂದು ದೈತ್ಯ ಕಂಪೆನಿ ಗ್ಲಾಕ್ಸೋದ ರೆಲೆಂಜಾ) ಎಂಬ ಹೊಸ ಔಷಧಗಳು ರೋಗದ ತೀವ್ರತೆಯನ್ನು ಕಡಿಮೆ ಮಾಡಿ (5-7 ದಿನಗಳ ಜ್ವರವನ್ನು 4-6 ದಿನಗಳಿಗೆ ಇಳಿಸಿ), ಅಪರೂಪಕ್ಕೊಮ್ಮೆ ಅದರಿಂದಾಗಬಹುದಾದ ಸಮಸ್ಯೆಗಳನ್ನು ತಡೆಯಬಲ್ಲವೆಂದು ಹೇಳಲಾಗುತ್ತಿದೆ. ಇನ್ ಫ್ಲುಯೆಂಜಾದಿಂದ ಗಂಭೀರವಾದ ಸಮಸ್ಯೆಗಳುಂಟಾಗುವ ಅಪಾಯವು ಹೆಚ್ಚಿರುವವರಲ್ಲಿ ಮಾತ್ರವೇ ಈ ಔಷಧಗಳನ್ನು ಬಳಸಬೇಕೆಂದೂ, ಅನಗತ್ಯವಾಗಿ ಇವನ್ನು ಅತಿಬಳಕೆ ಮಾಡಬಾರದೆಂದೂ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಸಿ.ಡಿ.ಸಿ ಗಳು ಸಲಹೆ ನೀಡಿವೆ. ಅಲ್ಲದೆ, ಈ ಔಷಧಗಳ ಬಳಕೆಯಿಂದ ವೈರಸ್ ತನ್ನ ರೂಪವನ್ನು ಬದಲಿಸುವ ಸಾಧ್ಯತೆ ಹೆಚ್ಚುವುದೆಂದು ಈ ಮೊದಲೇ ವರದಿಯಾಗಿತ್ತು. ಹಾಗಿದ್ದರೂ ಅವುಗಳನ್ನು ಖರೀದಿಸಿ ದಾಸ್ತಾನು ಮಾಡಲು ಜಗತ್ತಿನಾದ್ಯಂತದ ಸರಕಾರಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಇನ್ನೊಂದೆಡೆ, ಬೆಂಗಳೂರಿನಂತಹಾ ನಗರಗಳಲ್ಲಿರುವ ಖಾಸಗಿ ಔಷಧದ ಅಂಗಡಿಗಳಲ್ಲಿ, ವೈದ್ಯರ ಚೀಟಿಯಿಲ್ಲದೆಯೂ ಕೇಳಿದವರಿಗೆಲ್ಲ ಈ ಔಷಧಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ.ಆದರೆ, ಯಾವುದೇ ಔಷಧಗಳಿಲ್ಲದೆಯೇ ಹೆಚ್ಚಿನವರಲ್ಲಿ ರೋಗವು ವಾಸಿಯಾಗುವುದರಿಂದ ಅವನ್ನು ತಿನ್ನಲು ಯಾರೂ ಹಂಬಲಿಸಬೇಕಿಲ್ಲ, ದುಬಾರಿ ಬೆಲೆ ತೆತ್ತು ಖಾಸಗಿಯಾಗಿ ಸಂಗ್ರಹಿಸಿಕೊಳ್ಳಬೇಕಿಲ್ಲ.
ಇನ್ ಫ್ಲುಯೆಂಜಾ ಎ (H1N1) ತಡೆಯುವುದು ಹೇಗೆ?
ಇನ್ ಫ್ಲುಯೆಂಜಾ ಎ (H1N1) ಹರಡಿರುವ ದೇಶಗಳಿಂದ ಮರಳಿದವರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದರೆ ಅವರನ್ನು ಪ್ರತ್ಯೇಕಿಸಿ, ರೋಗವು ವಾಸಿಯಾಗುವವರೆಗೆ ನಿಗಾ ವಹಿಸಬೇಕು ಮತ್ತು ಅಗತ್ಯವಿದ್ದಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಬೇಕು.
ಸೋಂಕು ತಗಲಿರಬಹುದಾದ ರೋಗಿಗಳಿಂದ ದೂರವಿರುವುದು, ಕೈಗಳನ್ನು ಚೆನ್ನಾಗಿ ತೊಳೆಯುವುದು, ಮುಖ ಹಾಗೂ ಕಣ್ಣುಗಳನ್ನು ಅಶುದ್ಧವಾದ ಕೈಗಳಿಂದ ಒರೆಸದಿರುವುದು ಇವೇ ಮೊದಲಾದ ಸರಳ ಕ್ರಮಗಳಿಂದ ಸೋಂಕನ್ನು ತಡೆಯಬಹುದು. ವೈಟಮಿನ್ ಡಿ ಹಾಗೂ ವೈಟಮಿನ್ ಸಿ ಯಥೇಷ್ಟವಾಗಿರುವ ಮೀನು, ಮೊಟ್ಟೆ, ನೆಲ್ಲಿ, ಲಿಂಬೆ, ಸೊಪ್ಪು ಹಾಗೂ ತರಕಾರಿಗಳನ್ನು ಒಳಗೊಂಡ ಒಳ್ಳೆಯ ಆಹಾರ, ಪ್ರತಿದಿನ 30-45 ನಿಮಿಷಗಳ ಸರಳ ವ್ಯಾಯಾಮ ಮತ್ತು ನಿದ್ದೆಗಳಿಂದ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ಹೊಸ ಇನ್ ಫ್ಲುಯೆಂಜಾ ಎ (H1N1) ವಿರುದ್ಧ ಲಸಿಕೆಯು ಲಭ್ಯವಿಲ್ಲ. ಇನ್ ಫ್ಲುಯೆಂಜಾ ವೈರಾಣು ಪದೇ ಪದೇ ತನ್ನ ರೂಪವನ್ನು ಬದಲಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಅದರ ವಿರುದ್ಧ ಯಾವುದೇ ಲಸಿಕೆಯನ್ನು ಬಳಸಿದರೂ ಪ್ರಯೋಜನವು ತಾತ್ಕಾಲಿಕ ಅಥವಾ ಸೊನ್ನೆ, ಅಷ್ಟೇ. ಈಗ ಲಭ್ಯವಿರುವ ಇನ್ ಫ್ಲುಯೆಂಜಾ ಲಸಿಕೆಯು ಇನ್ ಫ್ಲುಯೆಂಜಾ ಎ (H1N1), ಇನ್ ಫ್ಲುಯೆಂಜಾ ಎ (H3N2) ಮತ್ತು ಇನ್ ಫ್ಲುಯೆಂಜಾ ಬಿ ವೈರಸ್ ಗಳ ವಿರುದ್ಧ ಪರಿಣಾಮಕಾರಿಯಾಗಿದ್ದರೂ, ಹೊಸದಾಗಿ ಗೋಚರಿಸಿರುವ ಇನ್ ಫ್ಲುಯೆಂಜಾ ಎ (H1N1) ವಿರುದ್ಧ ಅದು ನಿಷ್ಪ್ರಯೋಜಕವೆಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. ಲಕ್ಷಗಟ್ಟಲೆ ಜನ ಹೊಸ ಲಸಿಕೆ ಚುಚ್ಚಿಸಿಕೊಂಡ ಕೆಲ ಸಮಯದಲ್ಲೇ ಹೊಸ ರೂಪದಲ್ಲಿ ಇನ್ ಫ್ಲುಯೆಂಜಾ ವೈರಾಣು ಮತ್ತೆ ಪ್ರತ್ಯಕ್ಷ! ಮತ್ತೆ ಹೊಸ ಲಸಿಕೆ! ಹೊಸ ಫ್ಯಾಷನ್ ಶುರುವಾದಾಗ ಹಳೆ ಅಂಗಿ ವ್ಯರ್ಥವಾದಂತೆ! ಹೊಸ ಲಸಿಕೆಯನ್ನು ಶೀಘ್ರದಲ್ಲಿಯೇ ಸಿದ್ದಪಡಿಸಲು ಯತ್ನಿಸಲಾಗುವುದೆಂದು ಘೋಷಿಸಲಾಗಿದ್ದರೂ ಅದು ಬರಲು ವರ್ಷಗಳೇ ಬೇಕು, ಬಂದರೂ ನಮ್ಮ ಕೈಗೆಟಕದು; ನಾವದನ್ನು ನಂಬಿ ಕಾಯುತ್ತಾ ಕೂರುವ ಅಗತ್ಯವೂ ಇಲ್ಲ.
ಹಂದಿಗಳನ್ನು ಕೊಲ್ಲಬೇಕೆ? ಹಂದಿ ಮಾಂಸವನ್ನು ತಿನ್ನಬಾರದೇ?
ಕೋಳಿ ಜ್ವರವು ಕೋಳಿಗಳನ್ನು ಬಾಧಿಸುವ ಸೋಂಕು; ಅದು ಕೋಳಿಗಳಲ್ಲಿ ಹರಡುತ್ತಿದ್ದರೆ ಆ ವೈರಸ್ ಕ್ರಮೇಣವಾಗಿ ರೂಪ ಬದಲಿಸಿಕೊಂಡು ಮನುಷ್ಯರನ್ನು ಕಾಡಬಲ್ಲ ವೈರಸ್ ಆಗಿ ಬದಲಾಗಬಹುದೆಂಬ ‘ಭಯದಿಂದ’ ಕೋಟಿಗಟ್ಟಲೆ ಕೋಳಿಗಳನ್ನು ನಾವು ಕೊಂದೆವು. ಆದರೆ ಮೂರು ವರ್ಷಗಳ ನಂತರವೂ ಕೋಳಿಜ್ವರದ ವೈರಸ್ ಬದಲಾಗಲಿಲ್ಲ, ಅತಿ ನಿಕಟವಾದ ಸಂಪರ್ಕಕ್ಕೆ ಬಂದ ಅತ್ಯಲ್ಪ ಸಂಖ್ಯೆಯ ಮನುಷ್ಯರಿಗಷ್ಟೇ ಹರಡಿತು.
ಈಗ ಹಂದಿಗಳಲ್ಲಿ ಹೊಸ ವೈರಸ್ ಹುಟ್ಟಿ ಮನುಷ್ಯರಿಗೆ ಹರಡುತ್ತಿದೆಯೆಂದ ಮೇಲೆ ಹಂದಿಗಳನ್ನೂ ಕೊಲ್ಲಬೇಡವೇ? ಮೇಲೆ ಹೇಳಿರುವಂತೆ, ಈ ಹೊಸ ವೈರಸ್ ಹಂದಿಗಳಲ್ಲಿ ಹರಡುತ್ತಿರುವ ಬಗ್ಗೆ ವರದಿಗಳಿಲ್ಲ. ಅದೀಗ ಏನಿದ್ದರೂ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿರುವ ಸೋಂಕಷ್ಟೇ ಆಗಿದೆ. ಆದ್ದರಿಂದ ಹಂದಿಗಳನ್ನು ಕೊಲ್ಲುವ ಅಗತ್ಯವಿಲ್ಲ, ಹಂದಿ ಮಾಂಸದ ಸೇವನೆಯಿಂದ ಈ ಸೋಂಕು ಹರಡುವುದೂ ಇಲ್ಲ. ಆದರೆ ಈಗಾಗಲೇ ಸಾಕಷ್ಟು ಹೆದರಿರುವ ಜನ ಹಂದಿ ಮಾಂಸದ ಸೇವನೆಯನ್ನು ಬಿಟ್ಟಿದ್ದಾರಂತೆ, ಜಗತ್ತಿನಾದ್ಯಂತ ಹಂದಿ ಮಾಂಸಕ್ಕೀಗ ಬೇಡಿಕೆಯೇ ಇಲ್ಲವಂತೆ!
ನಾವೀಗ ಹೆದರಬೇಕೆ?
‘ಹಂದಿ ಜ್ವರ’ ತೀರಾ ಹೊಸತೇನಲ್ಲ, ಮನುಷ್ಯರಿಗೆ ಹರಡಿರುವುದೂ ಇದೇ ಮೊದಲಲ್ಲ. ಆದರೆ ಈ ಬಾರಿ ವೈರಸ್ ನ ಸ್ವರೂಪವು ಬದಲಾಗಿರುವುದರಿಂದ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಎಲ್ಲಾ ರಾಷ್ಟ್ರಗಳಿಗೂ ನಿಯಂತ್ರಣ ಕ್ರಮಗಳ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಿದ್ದು, ನಮ್ಮ ದೇಶದಲ್ಲೂ ಹೊರದೇಶಗಳಿಂದ ಬರುವವರ ಮೇಲೆ ನಿಗಾ ವಹಿಸಲಾಗುತ್ತಿದೆ. (ಹಿಂದೆ ಸಾರ್ಸ್ ಸೋಂಕು ಕಂಡು ಬಂದಾಗಲೂ ಹೀಗೆಯೇ ಮಾಡಲಾಗಿತ್ತು). ಸೂಕ್ತವಾದ ಕ್ರಮಗಳನ್ನು ಕೈಗೊಂಡರೆ ಈ ಸೋಂಕಿನ ಹರಡುವಿಕೆಯನ್ನು ತಡೆಯುವುದೇನೂ ಕಷ್ಟವಾಗದು. ಆದ್ದರಿಂದ ಹಂದಿ ಜ್ವರದ ಬಗ್ಗೆ ಹೆದರಬೇಕಾಗಿಲ್ಲ, ಜಾಗರೂಕರಾಗಿರಬೇಕು, ಅಷ್ಟೆ. ಅನಗತ್ಯವಾದ ಔಷಧಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವೂ ಆಗದು.
ರೋಗಗಳ ಬಗ್ಗೆ ಅಮಾಯಕ ಜನರಲ್ಲಿ ಭೀತಿ ಹುಟ್ಟಿಸುವ ಪ್ರವೃತ್ತಿಯು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಕಂಡುಬರುತ್ತಿರುವುದು ಕಳವಳಕಾರಿಯಾಗಿದೆ. ಯಾವುದೇ ಗೊಂದಲಗಳಿಗೂ, ಸಮೂಹ ಭಯಕ್ಕೂ ಕಾರಣವಾಗದಂತೆ ಸರಿಯಾದ, ಸ್ಪಷ್ಟವಾದ ಮಾಹಿತಿಯನ್ನು ಜನರಿಗೆ ಒದಗಿಸುವುದು ಸಮುದಾಯದ ಆರೋಗ್ಯ ರಕ್ಷಣಾ ಕಾರ್ಯಕ್ರಮಗಳಲ್ಲಿ ಅತ್ಯಗತ್ಯವಾಗಿದ್ದು, ಅಂತಹಾ ಗುರುತರವಾದ ಜವಾಬ್ದಾರಿಯನ್ನು ನಮ್ಮ ಸರಕಾರಗಳೂ, ಮಾಧ್ಯಮಗಳೂ, ವೈದ್ಯಕೀಯ ಸಮುದಾಯವೂ ನಿರ್ವಹಿಸಬೇಕಾಗಿದೆ.
Leave a Reply