ಇಂದು ವಿಜ್ಞಾನ, ತಂತ್ರಜ್ಞಾನ, ಮಾಹಿತಿ ಹಂಚಿಕೆ ಎಷ್ಟೊಂದು ಅದ್ಭುತವಾಗಿದೆ ಮತ್ತು ಅವನ್ನು ಎಷ್ಟೊಂದು ಯಶಸ್ವಿಯಾಗಿ, ಮನುಕುಲದ ಒಳಿತಿಗಾಗಿ ಎಲ್ಲರೊಂದಾಗಿ ಬಳಸಿಕೊಳ್ಳಬಹುದೆನ್ನುವುದಕ್ಕೆ ಈ ಹೊಸ ಕೊರೊನಾ ವೈರಸ್ ಅತ್ಯುತ್ತಮ ನಿದರ್ಶನವಾಗಿದೆ. ಡಿಸೆಂಬರ್ 2019ರಲ್ಲಿ ಚೀನಾದ ಮಧ್ಯದಲ್ಲಿರುವ ಹ್ಯೂಬೆ ಪ್ರಾಂತ್ಯದ ಜನನಿಬಿಡ ಮಹಾನಗರವಾದ ವುಹಾನ್ ನಲ್ಲಿ ಒಂದಷ್ಟು ಜನರು ಒಮ್ಮೆಗೇ ಶ್ವಾಸಕೋಶದ ಸೋಂಕಿಗೀಡಾಗಿ ಆಸ್ಪತ್ರೆಗಳಲ್ಲಿ ದಾಖಲಾದಾಗ ಅದೇನಿರಬಹುದು ಎಂದು ಅತ್ಯಾಧುನಿಕ ಪರೀಕ್ಷೆಗಳನ್ನು ನಡೆಸಿ, ಅದು ಶ್ವಾಸಾಂಗಗಳ ಸೋಂಕನ್ನುಂಟು ಮಾಡುವ ಕೊರೊನಾ ವೈರಸಿನ ಹೊಸ ರೂಪವೆಂದು ಗುರುತಿಸಿ, ಡಿಸೆಂಬರ್ 31ರಂದು ಅಧಿಕೃತವಾಗಿ ಪ್ರಕಟಿಸಲಾಯಿತು, ವಿಶ್ವ ಆರೋಗ್ಯ ಸಂಸ್ಥೆಗೂ ತಿಳಿಸಲಾಯಿತು. ಈ ಹಿಂದೆ 2002-3ರಲ್ಲಿ ಚೀನಾದ ದಕ್ಷಿಣ ಭಾಗದಲ್ಲಿರುವ ಯುನಾನ್ ಪ್ರಾಂತ್ಯದಲ್ಲಿ ಹೀಗೆಯೇ ಶ್ವಾಸಕೋಶಗಳಲ್ಲಿ ತೀವ್ರ ಸೋಂಕುಂಟಾಗುವುದನ್ನು ಗುರುತಿಸಲಾಗಿತ್ತು; ಆದರೆ ಅದೊಂದು ಹೊಸ ವಿಧದ ಕೊರೊನಾ ವೈರಸ್ ಎಂದು ಪತ್ತೆಯಾಗುವುದಕ್ಕೆ ಅಮೆರಿಕದ ಸಿ ಡಿ ಸಿ ಮತ್ತು ಕೆನಡಾದ ವಿಜ್ಞಾನಿಗಳ ಪ್ರಯತ್ನದಿಂದ ಹಲವು ತಿಂಗಳುಗಳಾಗಿದ್ದವು. ಈ ಬಾರಿ ಕೆಲವೇ ದಿನಗಳಲ್ಲಿ ಇದು ಕೊರೊನಾ ವೈರಸಿನ ಇನ್ನೊಂದು ರೂಪವೆಂದು ಗುರುತಿಸುವುದಕ್ಕೆ ಸಾಧ್ಯವಾಯಿತು, 2003ರ ಎಸ್ ಎ ಆರ್ ಎಸ್ ವೈರಸಿನ ಜೊತೆ ಹೋಲಿಕೆಯಿದ್ದುದರಿಂದ ಈ ಹೊಸ ವೈರಸಿಗೆ ಎಸ್ ಎ ಆರ್ ಎಸ್ ಕೊರೊನಾ ವೈರಸ್ 2 ಎಂದು ನಾಮಕರಣ ಮಾಡಲಾಯಿತು.
ಕೋವಿಡ್ 19: ಚಿಕಿತ್ಸೆ ಮತ್ತು ಲಸಿಕೆ ಕುರಿತ ಜಾಗತಿಕ ಸಂಶೋಧನೆಗಳು
ಕಳೆದೆರಡು ತಿಂಗಳಿನಿಂದ ಇಡೀ ವಿಶ್ವದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ, ಮನದಲ್ಲಿ ಸುತ್ತುತ್ತಿರುವ ಒಂದೇ ಒಂದು ವಿಷಯವೆಂದರೆ ಹೊಸ ಕೊರೊನಾ ಸೋಂಕು. ಈ ಹೊಸ ವೈರಾಣುವನ್ನು ತಡೆಯುವುದಕ್ಕೆಂದು ಭಾರತವೂ ಸೇರಿದಂತೆ ಹಲವು ದೇಶಗಳು ಸ್ತಬ್ಧಗೊಂಡಿವೆ, ನೂರಾರು ಕೋಟಿ ಜನರು ಕೆಲಸವನ್ನೆಲ್ಲ ಬಿಟ್ಟು ಮನೆಯೊಳಗಿದ್ದಾರೆ, ಕೆಲವರು ಮನೆಯೊಳಗಿಂದಲೇ ಕೆಲಸ ಮಾಡುತ್ತಿದ್ದಾರೆ, ವ್ಯಾಪಾರ, ಉತ್ಪಾದನೆ ಎಲ್ಲವೂ ವಾರಗಟ್ಟಲೆಯಿಂದ ಸ್ಥಗಿತಗೊಂಡಿವೆ. ಒಂದು ವೈರಸ್ ಸೋಂಕನ್ನು ತಡೆಯುವ ನೆಪದಲ್ಲಿ ಇಷ್ಟೆಲ್ಲ ಮಾಡುವ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನು ಈಗಾಗಲೇ ಹಲವು ಗಣ್ಯಾತಿಗಣ್ಯ ತಜ್ಞರು ಕೇಳಿದ್ದಾರೆ; ಆದರೆ ರಾಜಕಾರಣಿಗಳೇ ಎಲ್ಲವನ್ನೂ ನಿರ್ಧರಿಸುವ ಈ ಯುಗದಲ್ಲಿ ಅಂಥ ತಜ್ಞರ ಧ್ವನಿಗಳು ಕ್ಷೀಣವೆನಿಸಿವೆ, ಹಾಗೆಲ್ಲ ಪ್ರಶ್ನಿಸುವುದೇ ಅಪರಾಧವೆಂಬಂತಾಗಿದೆ. ಕೆಲವು ದಿನಗಳಲ್ಲಿ ಅಮೆರಿಕದ ಅಧ್ಯಕ್ಷರ ಬಗಲಲ್ಲೇ ನಿಂತು ಮಾತಾಡುತ್ತಿದ್ದ ಅತಿ ಹಿರಿಯ ವಿಜ್ಞಾನಿ ಡಾ. ಆಂಥನಿ ಫಾಸಿ ಅದೇನೋ ಒಮ್ಮೆ ರಾಷ್ಟ್ರಾಧ್ಯಕ್ಷರಿಗೆ ಸರಿಯೆನಿಸದ್ದನ್ನು ಹೇಳಿದ ಕಾರಣಕ್ಕೆ ವಜಾಗೊಳ್ಳಬೇಕಾಯಿತೆನ್ನುವುದು ಕೊರೊನಾ ಎಂಬ ಒಂದು ವೈರಾಣು ಸೋಂಕನ್ನುಂಟುಮಾಡದೆಯೂ ಮನುಷ್ಯರ ವರ್ತನೆಗಳನ್ನು ಹೇಗೆ ಅನಾವರಣಗೊಳಿಸುತ್ತಿದೆ ಎನ್ನುವುದು ಅಚ್ಚರಿಯುಂಟು ಮಾಡುತ್ತಿದೆ. ನಮ್ಮಲ್ಲಂತೂ ಕೊರೊನಾ ಪಿಡುಗಿನ ಹೆಸರಲ್ಲಿ ಎಲ್ಲ ಬಗೆಯ ಅರಚಾಟಗಳು ತಾರಕ ಸ್ತರಕ್ಕೆ ತಲುಪಿವೆ. ಈ ಗದ್ದಲ-ಗೊಂದಲಗಳ ನಡುವೆ ಆ ಅತಿ ಸೂಕ್ಷ್ಮವಾದ ಅಗೋಚರ ವೈರಾಣುವಿನ ಬಗೆಗಿನ ಸತ್ಯಗಳೆಲ್ಲ ಅಗೋಚರವಾಗಿಹೋಗಿವೆ.
ಈ ಹೊಸ ವೈರಸ್ ಹೇಗೆ ಹರಡುತ್ತದೆ, ಹೇಗೆ ರೋಗವನ್ನುಂಟು ಮಾಡುತ್ತದೆ, ಹೀಗೆ ಸಮಸ್ಯೆಗಳನ್ನುಂಟು ಮಾಡುತ್ತದೆ ಎಂಬ ಬಗ್ಗೆ ಈ 4 ತಿಂಗಳಲ್ಲಿ ಸಾಕಷ್ಟು ವಿವರಗಳನ್ನು ಕಲೆಹಾಕಲಾಗಿದೆ. ಈ ವಿವರಗಳನ್ನು ಎಲ್ಲಾ ವೈದ್ಯಕೀಯ ಹಾಗೂ ವೈಜ್ಞಾನಿಕ ಪತ್ರಿಕೆಗಳಲ್ಲಿ ಬೇಗಬೇಗನೆ ಮುಕ್ತವಾಗಿ ಹಂಚಿಕೊಳ್ಳಲಾಗಿದ್ದು, ಈ ಹೊಸ ವೈರಸಿನ ಎಲ್ಲಾ ರಹಸ್ಯಗಳನ್ನೂ ಭೇದಿಸುವುದಕ್ಕೆ ವಿಶ್ವದ ಅತ್ಯುತ್ತಮ ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆಗಳೆಲ್ಲವೂ ಜೊತೆಗೂಡಿ ಶ್ರಮಿಸುತ್ತಿವೆ.
ಈ ಹೊಸ ಕೊರೊನಾ ಸೋಂಕಿನಿಂದ ಒಮ್ಮೆಗೇ ಸಾವಿರಾರು ಜನರು ಸೋಂಕಿತರಾಗಿ, ಅವರಲ್ಲಿ ಶೇ 5ರಷ್ಟು ಜನರು ಗಂಭೀರ ಸಮಸ್ಯೆಗೀಡಾಗುತ್ತಿರುವುದರಿಂದ ಒಮ್ಮೆಗೇ ಹಾಗೆ ಸಮಸ್ಯೆಗೀಡಾದ ನೂರಾರು ರೋಗಿಗಳು ಆಸ್ಪತ್ರೆಗಳಿಗೆ ಬರುವುದರಿಂದ ಅವರೆಲ್ಲರಿಗೆ ಚಿಕಿತ್ಸೆ ನೀಡಲಾಗದೆ ಕೆಲವರು ಸಾವನ್ನಪ್ಪುತ್ತಿರುವುದನ್ನು ಯೂರೋಪ್ ಮತ್ತು ಅಮೆರಿಕದಲ್ಲಿ ಕಾಣುತ್ತಿದ್ದೇವೆ. ಒಟ್ಟಾರೆಯಾಗಿ ಕೊರೊನಾ ಸೋಂಕಿತರಲ್ಲಿ ಶೇ. 80ರಷ್ಟು ಮಂದಿ ಯಾವುದೇ ರೋಗಲಕ್ಷಣಗಳನ್ನೂ ಹೊಂದದೆ ಗುಣಮುಖರಾಗುತ್ತಾರೆ, ಇನ್ನುಳಿದವರಲ್ಲೂ ಹೆಚ್ಚಿನವರು ಸೌಮ್ಯವಾದ ಕಾಯಿಲೆಯನ್ನು ಹೊಂದಿ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲದೆಯೇ ವಾರದೊಳಗೆ ಗುಣಮುಖರಾಗುತ್ತಾರೆ, ಕೇವಲ 3-5% ಸೋಂಕಿತರಷ್ಟೇ ಸಮಸ್ಯೆಗೀಡಾಗಬಹುದು, ಅವರಲ್ಲಿ ಕೆಲವರಿಗೆ ಜೀವರಕ್ಷಕ ಚಿಕಿತ್ಸೆಯು ಬೇಕಾಗಬಹುದು; ಒಟ್ಟಿನಲ್ಲಿ ಶೇ. 0.03-0.5ರಷ್ಟು ಮಾತ್ರವೇ ಸಾವನ್ನಪ್ಪುತ್ತಾರೆ. ಆದರೆ ಸಾವಿರಾರು ಜನರು ಸೋಂಕಿಗೀಡಾದಾಗ ಈ 0.5% ಕೂಡ ಸಾಕಷ್ಟಾಗುವುದರಿಂದಲೇ ಅದೀಗ ಬಹು ದೊಡ್ಡ ವಿಷಯವಾಗಿ ಎಲ್ಲರನ್ನೂ ಭೀತಿಗೆ ತಳ್ಳುವಂತಾಗಿದೆ. ಹೀಗೆ ಸಮಸ್ಯೆಗೀಡಾಗುವವರಲ್ಲಿ ಬಹುತೇಕರು ಕೂಡ ಹಿರಿವಯಸ್ಕರು, ರಕ್ತದ ಏರೊತ್ತಡ, ಸಕ್ಕರೆ ಕಾಯಿಲೆ, ಹೃದ್ರೋಗ, ಕ್ಯಾನ್ಸರ್ ಮುಂತಾದ ರೋಗಗಳನ್ನು ಅದಾಗಲೇ ಹೊಂದಿದ್ದವರು ಎನ್ನುವುದೆಲ್ಲ ಈಗ ಬಹಳ ಸ್ಪಷ್ಟವಾಗಿ ಕಂಡುಬಂದಿರುವುದರಿಂದ ಅವರನ್ನು ಸುರಕ್ಷಿತವಾಗಿಟ್ಟರೆ ಕೊರೊನಾ ಸೋಂಕಿನಿಂದ ಆಗಬಹುದಾದ ಜೀವಹಾನಿಯನ್ನೂ ಗಣನೀಯವಾಗಿ ತಗ್ಗಿಸಬಹುದು ಎನ್ನುವುದನ್ನು ಹಲವು ತಜ್ಞರೀಗ ಹೇಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಹೊಸ ಕೊರೊನಾ ಸೋಂಕಿಗೆ ಚಿಕಿತ್ಸೆಯ ಅಗತ್ಯವಿದೆಯೇ, ಇದ್ದರೆ ಅದು ಹೇಗಿರಬೇಕು, ಏನಿರಬೇಕು ಎಂಬ ಬಗ್ಗೆ ಈಗ ಬಹು ದೊಡ್ಡ ಚರ್ಚೆಯಾಗುತ್ತಿದೆ, ಹಲವೆಡೆ ತ್ವರಿತಗತಿಯ ಅಧ್ಯಯನಗಳೂ ನಡೆಯುತ್ತಿವೆ. ಚೀನಾ ಹಾಗೂ ಫ್ರಾನ್ಸ್ ದೇಶಗಳಲ್ಲಿ ಸೋಂಕಿನಿಂದ ಸಮಸ್ಯೆಗಳಾದವರಿಗೆ ನೀಡಿದ್ದ ಚಿಕಿತ್ಸೆಗಳ ಫಲಿತಾಂಶಗಳ ಆಧಾರದಲ್ಲಿ ಈಗಾಗಲೇ ಲಭ್ಯವಿರುವ ಕೆಲವು ಔಷಧಗಳನ್ನು ಕೊರೊನಾ ಚಿಕಿತ್ಸೆಯಲ್ಲಿ ಬಳಸಬಹುದೆನ್ನುವ ಬಗ್ಗೆ ಒಂದಿಷ್ಟು ಆಶಾಭಾವನೆಯು ಮೂಡಿತ್ತು. ಅವುಗಳ ಆಧಾರದಲ್ಲಿ ಭಾರತದಿಂದಲೂ ಕೆಲವು ಆರಂಭಿಕ ಸಲಹೆಗಳು ಪ್ರಕಟವಾಗಿದ್ದವು. ಅಮೆರಿಕದ ಅಧ್ಯಕ್ಷರಂತೂ ಇನ್ನಷ್ಟು ಮುಂದೆ ಹೋಗಿ ಕೆಲವು ಔಷಧಗಳನ್ನು ಒತ್ತಾಯಪೂರ್ವಕವಾಗಿ ಆಮದು ಮಾಡಿಕೊಂಡು ಕೂಡಿಟ್ಟದ್ದೂ ಆಯಿತು. ಆದರೆ ಈ ಎಲ್ಲಾ ಔಷಧಗಳ ಬಗ್ಗೆ ಕಳೆದ ಕೆಲವು ವಾರಗಳಲ್ಲಿ ಹಲವು ದೇಶಗಳಲ್ಲಿ ಇನ್ನಷ್ಟು ಅಧ್ಯಯನಗಳಾಗಿದ್ದು, ಮೊದಲು ಮೂಡಿದ್ದ ಆಶಾಭಾವನೆಗಳಿಗೆ ಬಹಳಷ್ಟು ಹಿನ್ನಡೆಯಾದಂತಿದೆ.
ಈ ಹೊಸ ಕೊರೊನಾ ವೈರಸ್ ಮನುಷ್ಯನ ಜೀವಕಣಗಳಲ್ಲಿರುವ ಆಂಜಿಯೋ ಟೆನ್ಸಿನ್ ಕನ್ವರ್ಟಿಂಗ್ ಎಂಜೈಮ್ 2 (ACE2) ಎಂಬ ಗ್ರಾಹಿಗೆ ತಗಲಿ, ಅದರ ಮೂಲಕ ಜೀವಕಣಗಳ ಒಳಗೆ ಪ್ರವೇಶಿಸಿ, ಅಲ್ಲಿ ವೃದ್ಧಿಯಾಗುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ TMPRSS2 ಎಂಬ ಸಂಯುಕ್ತವು ಭಾಗಿಯಾಗುತ್ತದೆ ಎನ್ನುವುದೀಗ ದೃಢಪಟ್ಟಿದೆ. ಯಾವ ಅಂಗಾಶಗಳ ಜೀವಕಣಗಳಲ್ಲಿ ACE2 ಹೆಚ್ಚಿನ ಪ್ರಮಾಣದಲ್ಲಿವೆಯೋ, ಆ ಜೀವಕಣಗಳ ಒಳಗೆ ಕೊರೊನಾ ವೈರಸ್ ಹೆಚ್ಚಿನ ಸಂಖ್ಯೆಯಲ್ಲಿ ನುಗ್ಗುತ್ತದೆ. ಹೀಗೆ, ACE2 ಹೆಚ್ಚಾಗಿರುವ ಮೂಗು ಹಾಗೂ ಗಂಟಲಿನ ಜೀವಕಣಗಳ ಒಳಗೆ ಕೊರೊನಾ ವೈರಸ್ ಮೊದಲಿಗೆ ಪ್ರವೇಶಿಸಿ ಬೆಳೆಯತೊಡಗುತ್ತವೆ. ಕೆಲವರಲ್ಲಿ ಕರುಳಿನಲ್ಲೂ ಇರುವ ACE2 ಗ್ರಾಹಿಗಳಿಗೆ ತಗಲಿ ಅಲ್ಲೂ ಬೆಳೆಯಬಹುದು. ಮೂಗು-ಗಂಟಲಲ್ಲಿ ಬೆಳೆಯುತ್ತಿದ್ದಂತೆ ಅದನ್ನು ಗುರುತಿಸುವ ನಮ್ಮ ರೋಗರಕ್ಷಣಾ ವ್ಯವಸ್ಥೆಯು ವೈರಾಣುಗಳು ಬೆಳೆಯುತ್ತಿರುವ ಜೀವಕಣಗಳನ್ನು ನಾಶ ಮಾಡಿ, ವೈರಾಣುವಿನ ಬೆಳವಣಿಗೆಯನ್ನು ತಡೆಯಲುದ್ಯುಕ್ತವಾಗುತ್ತದೆ, ಅದಕ್ಕಾಗಿ ಸೈಟೊಕೈನ್ ಗಳೆಂಬ ಕೆಲವು ವಿಶೇಷ ಸಂಯುಕ್ತಗಳನ್ನು ಸ್ರವಿಸುತ್ತದೆ. ರೋಗರಕ್ಷಣಾ ವ್ಯವಸ್ಥೆಯ ಕಣಗಳು ಮತ್ತು ಅವು ಸ್ರವಿಸುವ ವಿವಿಧ ಸೈಟೊಕೈನ್ ಗಳ ದಾಳಿಯು ನಡೆಯುತ್ತಿದ್ದಂತೆ ಜ್ವರ, ಗಂಟಲು ನೋವು, ಭೇದಿ, ಮೈಕೈ ಮತ್ತು ತಲೆ ನೋವು, ವಾಸನೆ ಹಾಗೂ ರುಚಿ ಗ್ರಹಣ ಶಕ್ತಿಯು ಇಲ್ಲವಾಗುವುದು ಇವೇ ಮುಂತಾದ ರೋಗಲಕ್ಷಣಗಳುಂಟಾಗುತ್ತವೆ. ಈ ದಾಳಿ ನಾಲ್ಕೈದು ದಿನ ಮುಂದುವರಿದು, ರೋಗರಕ್ಷಣಾ ಕಣಗಳು, ಸೈಟೋಕೈನ್ ಗಳು ಮತ್ತು ವೈರಾಣುವನ್ನು ಮಣಿಸುವುದಕ್ಕೆ ರೋಗಿಯ ರಕ್ಷಣಾ ವ್ಯವಸ್ಥೆಯು ಸ್ರವಿಸುವ ಪ್ರತಿಕಾಯಗಳು ಈ ವೈರಾಣುಗಳನ್ನು ಯಶಸ್ವಿಯಾಗಿ ನಿಯಂತ್ರಿಸಿದರೆ ರೋಗವು ಶಮನವಾಗುತ್ತದೆ; ಅದರ ಜೊತೆಗೆ ರೋಗರಕ್ಷಣಾ ವ್ಯವಸ್ಥೆಯ ದಾಳಿಯೂ ಇಳಿಯತೊಡಗಿ, ರೋಗಲಕ್ಷಣಗಳು ಕೂಡ ಮರೆಯಾಗುತ್ತವೆ. ಇದು ನಮ್ಮ ದೇಹವೇ ನಡೆಸುವ ಪ್ರಕ್ರಿಯೆಯಾಗಿದ್ದು ಇದಕ್ಕೆ ಹೊರಗಿನಿಂದ ಯಾವುದೇ ಔಷಧಗಳ ಅಗತ್ಯವುಂಟಾಗುವುದೇ ಇಲ್ಲ. ಕೆಲವರಲ್ಲಿ ಈ ರೋಗರಕ್ಷಣಾ ವ್ಯವಸ್ಥೆಯ ದಾಳಿಯು ವಿಫಲವಾದರೆ, ಅಥವಾ ಉಗ್ರವಾಗಿ, ಅನಿಯಂತ್ರಿತವಾಗಿ ಮುಂದುವರಿದರೆ ಮೂಗು, ಗಂಟಲುಗಳಷ್ಟೇ ಅಲ್ಲದೆ ACE2 ಗ್ರಾಹಿಗಳು ಹೆಚ್ಚಾಗಿರುವ ಶ್ವಾಸಕೋಶಗಳು, ರಕ್ತನಾಳಗಳು, ಹೃದಯ, ಮೂತ್ರಪಿಂಡಗಳು ಮುಂತಾದ ಅಂಗಗಳಲ್ಲೂ ವೈರಾಣುಗಳು ಬೆಳೆಯತೊಡಗಿ ಕೊರೊನಾ ಸೋಂಕು ಗಂಭೀರ ರೂಪವನ್ನು ತಾಳಬಹುದು. ಈ ಸಮಸ್ಯೆಗಳಾಗುವುದಕ್ಕೆ ಸೋಂಕಿನ ಲಕ್ಷಣಗಳು ಆರಂಭಗೊಂಡು ಏಳೆಂಟು ದಿನಗಳಾಗಬಹುದು, ಮತ್ತು ಹತ್ತು-ಹನ್ನೊಂದನೇ ದಿನದ ಹೊತ್ತಿಗೆ ಇವು ಬಿಗಡಾಯಿಸಿ, ಆಸ್ಪತ್ರೆಗೆ ದಾಖಲಾಗುವ ಸ್ಥಿತಿಯುಂಟಾಗಬಹುದು. ಹೀಗೆ ಗಂಭೀರ ಸಮಸ್ಯೆಗಳುಂಟಾದವರಲ್ಲಿ ನಡೆಸಲಾಗಿರುವ ಅಧ್ಯಯನಗಳಲ್ಲಿ ಸೈಟೊಕೈನ್ ಪ್ರಮಾಣಗಳು ಬಹಳಷ್ಟು ಏರಿರುವುದು, ಶ್ವಾಸಕೋಶಗಳಲ್ಲಿ ಆಮ್ಲಜನಕದ ಹರಿವಿಗೆ ತೊಡಕುಂಟಾಗಿರುವುದು, ಹೃದಯದ ಸ್ನಾಯುಗಳಿಗೆ ಹಾನಿಯಾಗಿರುವುದು, ರಕ್ತನಾಳಗಳಿಗೆ ಹಾನಿಯಾಗಿರುವುದು ಮತ್ತು ರಕ್ತ ಹೆಪ್ಪುಗಟ್ಟಿರುವುದು ಇವೇ ಮುಂತಾದ ಸಮಸ್ಯೆಗಳಾಗುವುದನ್ನು ಗುರುತಿಸಲಾಗಿದೆ.
ಹಿರಿವಯಸ್ಕರು, ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ, ಹೃದ್ರೋಗ, ಶ್ವಾಸಕೋಶಗಳ ಕಾಯಿಲೆ, ಮೂತ್ರ ಪಿಂಡಗಳ ವೈಫಲ್ಯ, ಕ್ಯಾನ್ಸರ್ ಇತ್ಯಾದಿ ಗಂಭೀರ ಸಮಸ್ಯೆಗಳುಳ್ಳವರಲ್ಲಿ ರೋಗರಕ್ಷಣಾ ವ್ಯವಸ್ಥೆಯು ಸುನಿಯಂತ್ರಿತವಾಗಿಲ್ಲದಿರುವುದು ಅಥವಾ ದುರ್ಬಲವಾಗಿರುವುದು ಮತ್ತು ACE2 ಗ್ರಾಹಿಗಳು ಸುಲಭದಲ್ಲಿ ವೈರಾಣುಗಳನ್ನು ಜೀವಕಣಗಳೊಳಕ್ಕೆ ಸೇರಿಸಲು ಅವಕಾಶವೀಯುವುದು ಅಂಥವರಲ್ಲಿ ಕೊರೊನಾ ಸೋಂಕು ಉಲ್ಬಣಿಸಲು ಕಾರಣವಾಗುತ್ತವೆ ಎಂದು ಹೊಸ ಅಧ್ಯಯನಗಳಲ್ಲೀಗ ತಿಳಿದುಬಂದಿವೆ.
ಚೀನಾದಲ್ಲಿ ಬಹಳಷ್ಟು ಜನರಲ್ಲಿ ಈ ಹೊಸ ಕೊರೊನಾ ಸೊಂಕುಂಟಾದಾಗ ಅಲ್ಲಿನ ವೈದ್ಯರು ಈ ಹಿಂದಿನ ಸಾರ್ಸ್ ಸೋಂಕಿನ ಚಿಕಿತ್ಸೆಯ ಅನುಭವದ ಆಧಾರದಲ್ಲಿ ಕೆಲವೊಂದು ಔಷಧಗಳನ್ನು ಪ್ರಯೋಗಿಸಿ ನೋಡಿದರು, ಗುಣಮುಖರಾದ ರೋಗಿಗಳ ರಕ್ತದ್ರವವನ್ನು ಗಂಭೀರ ಸ್ವರೂಪದ ಕಾಯಿಲೆಯಿದ್ದವರಿಗೆ ಕೊಡುವ ಪ್ರಯತ್ನವನ್ನೂ ಮಾಡಿದರು. ಈ ಎಲ್ಲಾ ಅನುಭವಗಳನ್ನು ಕೂಡಲೇ ಪ್ರಕಟಿಸಿ ವಿಶ್ವದ ಇತರ ವೈದ್ಯರಿಗೂ ಆ ಮಾಹಿತಿಯೆಲ್ಲವನ್ನೂ ಒದಗಿಸಿದರು. ಈ ಆರಂಭಿಕ ಅಧ್ಯಯನಗಳ ಆಧಾರದಲ್ಲಿ ಕೆಲವು ಔಷಧಗಳು ಮತ್ತು ಚಿಕಿತ್ಸಾಕ್ರಮಗಳ ಬಗ್ಗೆ ಇತರ ದೇಶಗಳಲ್ಲೂ ಅಧ್ಯಯನಗಳು ಆರಂಭಗೊಂಡವು. ವಿಶ್ವ ಆರೋಗ್ಯ ಸಂಸ್ಥೆಯು ಅಂತಹ ನಾಲ್ಕು ಚಿಕಿತ್ಸಾ ವಿಧಾನಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ SOLIDARITY ಎಂಬ ಹೆಸರಲ್ಲಿ ಅಧ್ಯಯನಗಳಿಗೆ ಚಾಲನೆ ನೀಡಿದೆ. ಈಗ ಈ ಎಲ್ಲಾ ಅಧ್ಯಯನಗಳನ್ನು ಗಂಭೀರ ಸಮಸ್ಯೆಯುಳ್ಳವರಲ್ಲಷ್ಟೇ ನಡೆಸಲಾಗುತ್ತಿದ್ದರೂ, ಕೊರೊನಾ ಸೋಂಕು ಸೃಷ್ಟಿಸಿರುವ ಭೀತಿಯಿಂದಾಗಿ ಇಂತಹ ಅಧ್ಯಯನಗಳಿಗೆ ಬಹು ಸುಲಭವಾಗಿ ಒಪ್ಪಿಗೆ ದೊರೆಯುತ್ತಿದೆ; ಆದ್ದರಿಂದ ಬಹು ತ್ವರಿತವಾಗಿ ಇವುಗಳ ಪರಿಣಾಮಗಳು ತಿಳಿದುಬರಲಿವೆ. ಜೊತೆಗೆ, ಈ ಹೊಸ ಕೊರೊನಾ ವೈರಾಣುವಿನ ಸೋಂಕನ್ನು ತಡೆಯಬಲ್ಲ ಲಸಿಕೆಯ ಸಂಶೋಧನೆಯೂ ಹಲವೆಡೆ ಆರಂಭಗೊಂಡಿದ್ದು, ಸಾಕಷ್ಟು ಪೈಪೋಟಿಯೇ ನಡೆಯತೊಡಗಿದೆ.
ಕೊರೊನಾ ಸೋಂಕು ದೇಹದೊಳಗೆ ಪ್ರವೇಶಿಸಿ, ಬೆಳೆದು, ರೋಗರಕ್ಷಣಾ ವ್ಯವಸ್ಥೆಯೊಂದಿಗೆ ಸೆಣಸಾಡುವ ವಿವಿಧ ಹಂತಗಳಿಗೆ ಅನುಗುಣವಾಗಿ ವಿವಿಧ ಔಷಧಗಳನ್ನು ಕೊರೊನಾ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ, ಸಂಶೋಧಿಸಲಾಗುತ್ತಿದೆ. ACE2 ಗ್ರಾಹಿಗೆ ತಗಲದಂತೆ ಪ್ರತಿಕಾಯಗಳನ್ನು ಬಳಸುವುದು, TMPRSS2 ಅನ್ನು ನಿರ್ಬಂಧಿಸುವುದು, ವೈರಾಣುವು ಜೀವಕಣದೊಳಗೆ ವೃದ್ಧಿಯಾಗುವುದನ್ನು ತಡೆಯುವುದು, ಸೈಟೊಕೈನ್ ಮತ್ತು ರೋಗರಕ್ಷಣಾ ವ್ಯವಸ್ಥೆಯ ಅತಿರೇಕವನ್ನು ತಡೆಯುವುದು ಇತ್ಯಾದಿ ದಾರಿಗಳನ್ನು ಹುಡುಕಲಾಗುತ್ತಿದೆ.
ACE2 ಮತ್ತು TMPRSS2 ಅನ್ನು ನಿರ್ಬಂಧಿಸಬಲ್ಲ ಔಷಧಗಳು ಇನ್ನಷ್ಟೇ ಲಭ್ಯವಾಗಬೇಕಿವೆ. ಕೊರೊನಾದಿಂದ ಸೋಂಕಿತರಾಗಿ ವಾಸಿಯಾದವರ ರಕ್ತದಲ್ಲಿ ಕೊರೊನಾ ವೈರಾಣುವನ್ನು ಮಣಿಸಬಲ್ಲ ಪ್ರತಿಕಾಯಗಳಿರುವುದರಿಂದ, ಅಂಥವರ ರಕ್ತದ್ರವವನ್ನು ಇನ್ನೊಬ್ಬ ಸೋಂಕಿತನಿಗೆ ನೀಡಿದರೆ ಅವನಲ್ಲಿರುವ ವೈರಾಣುವನ್ನು ನಿಸ್ತೇಜಗೊಳಿಸುವ ಸಾಧ್ಯತೆಗಳಿರುತ್ತವೆ. ಅತಿ ಗಂಭೀರ ಸಮಸ್ಯೆಯಿದ್ದ 15 ಕೊರೊನಾ ರೋಗಿಗಳಿಗೆ ಹೀಗೆ ಸೋಂಕಿತರ ರಕ್ತದ್ರವವನ್ನು ನೀಡಿ, ಅವರು ಗುಣಮುಖರಾಗಿರುವ ಅಧ್ಯಯನಗಳು ಈಗಾಗಲೇ ಪ್ರಕಟವಾಗಿದ್ದು, ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಅದನ್ನು ಪ್ರಯೋಗಿಸುವ ಪ್ರಯತ್ನಗಳು ಆರಂಭಗೊಂಡಿವೆ. ಅವುಗಳ ಸವಿವರವಾದ ವರದಿಗಳು ಇನ್ನಷ್ಟೇ ಬರಬೇಕಾಗಿವೆ. ಈ ನಡುವೆ, ಅಮೆರಿಕದ ಸೋಂಕು ರೋಗ ತಜ್ಞರ ಸಂಘವು (IDSA) ಸಿದ್ಧಪಡಿಸಿರುವ ವರದಿಯಲ್ಲಿ, ಕೇವಲ 15 ರೋಗಿಗಳಲ್ಲಿ ಬಳಸಿದ ಸೀಮಿತ ಅನುಭವವಷ್ಟೇ ಇರುವುದರಿಂದ ರಕ್ತದ್ರವವನ್ನು ಗಂಭೀರ ಸಮಸ್ಯೆಗಳಾದವರಲ್ಲಿ ಪ್ರಾಯೋಗಿಕವಾಗಿ ಬಳಸಬಹುದೆಂದು ಹೇಳಿದೆ. ಆದ್ದರಿಂದ ಸೋಂಕಿನಿಂದ ಗುಣಪಟ್ಟವರ ರಕ್ತದ್ರವವನ್ನು ಕೊರೊನಾ ಸೋಂಕು ಉಂಟಾಗದಂತೆ ಅಥವಾ ಅದು ದೇಹದೊಳಗೆ ಬೆಳೆಯದಂತೆ ತಡೆಯುವುದಕ್ಕೆ ಬಳಸಲಾಗುವುದಿಲ್ಲ, ಅತಿ ಗಂಭೀರ ಸಮಾಯೆಯಾದ ಕೆಲವರಲ್ಲಷ್ಟೇ ಪ್ರಾಯೋಗಿಕವಾಗಿ ಬಳಸಬಹುದು.
ಮಲೇರಿಯಾ ಚಿಕಿತ್ಸೆಯಲ್ಲಿ 1947ರಿಂದಲೇ ಬಳಕೆಯಲ್ಲಿರುವ ಕ್ಲೋರೋಕ್ವಿನ್ ಮತ್ತು ಅದರ ಇನ್ನೊಂದು ಸಂಯುಕ್ತವಾದ ಹೈಡ್ರಾಕ್ಸಿ ಕ್ಲೋರೋಕ್ವಿನ್ ಗಳು ಜೀವಕಣಗಳೊಳಗೆ ಆಮ್ಲೀಯತೆಯನ್ನು ಇಳಿಸುವ ಮೂಲಕ ಮತ್ತು ವೈರಾಣುವಿನ ಬೆಳವಣಿಗೆಯ ಕೆಲವು ಹಂತಗಳಿಗೆ ಅಡ್ಡಿಯುಂಟುಮಾಡುವ ಮೂಲಕ ಕೊರೊನಾ ಸೋಂಕು ವೃದ್ಧಿಯಾಗದಂತೆ ತಡೆಯಬಲ್ಲದೆಂದೂ, ಸೋಂಕಿನಿಂದ ಉಂಟಾಗಬಲ್ಲ ಸಮಸ್ಯೆಗಳನ್ನು ತಡೆಯುವಲ್ಲಿಯೂ ನೆರವಾಗಬಹುದೆಂದೂ ಕೆಲವು ವರದಿಗಳಲ್ಲಿ ಹೇಳಲಾಗಿತ್ತು. ಅವುಗಳ ಆಧಾರದಲ್ಲಿ, ಮತ್ತು ಚೀನಾ ಹಾಗೂ ಫ್ರಾನ್ಸ್ ದೇಶಗಳಲ್ಲಿ ಕೊರೊನಾ ಪೀಡಿತರಲ್ಲಿ ಕ್ಲೋರೋಕ್ವಿನ್ ಬಳಸಿ ನಡೆಸಲಾಗಿದ್ದ ಆರಂಭಿಕ ಅಧ್ಯಯನಗಳ ಆಧಾರದಲ್ಲಿ ಕೊರೊನಾ ಸೋಂಕನ್ನು ತಡೆಯುವುದಕ್ಕೆ ಮತ್ತು ಸಮಸ್ಯೆಗಳಾಗದಂತೆ ಚಿಕಿತ್ಸೆ ನೀಡುವುದಕ್ಕೆ ಕ್ಲೋರೋಕ್ವಿನ್ ಬಳಸಬಹುದೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯೂ ಸೇರಿದಂತೆ ಕೆಲವೆಡೆಗಳಲ್ಲಿ ಸಲಹೆ ನೀಡಲಾಯಿತು. ಅಮೆರಿಕದ ಅಧ್ಯಕ್ಷ ಟ್ರಂಪ್ ಇನ್ನೂ ಮುಂದಕ್ಕೆ ಹೋದರು; ತಮ್ಮ ದೇಶವಾಸಿಗಳಿಗೆ ಕೊರೊನಾ ವಿರುದ್ಧದ ಹೋರಾಟಕ್ಕೆಂದು ಕೋಟಿಗಟ್ಟಲೆ ಕ್ಲೋರೋಕ್ವಿನ್ ಗುಳಿಗೆಗಳನ್ನು ಭಾರತದಂತಹ ದೇಶಗಳಿಂದ ಒತ್ತಾಯಪೂರ್ವಕವಾಗಿ ತರಿಸಿಕೊಂಡರು. ಈಗ ಕೊರೊನಾ ಸೋಂಕಿತರಲ್ಲಿ ಕ್ಲೋರೋಕ್ವಿನ್ ಬಳಕೆಯ ಬಗ್ಗೆ ಇನ್ನಷ್ಟು ಅಧ್ಯಯನಗಳ ವರದಿಗಳು ಪ್ರಕಟವಾಗಿದ್ದು, ಅದರಿಂದ ಪ್ರಯೋಜನಕ್ಕಿಂತ ಹೆಚ್ಚು ಹಾನಿಯೇ ಆಗುವ ಸಾಧ್ಯತೆಗಳಿವೆಯೆಂದೂ, ಅದನ್ನು ಬಳಸುವುದಿದ್ದರೆ ಹೃದ್ರೋಗ ತಜ್ಞರ ನಿಗಾವಣೆಯಲ್ಲಷ್ಟೇ ಬಳಸಬೇಕೆಂದೂ ಎಚ್ಚರಿಸಲಾಗಿದೆ; ಅಮೆರಿಕದ ಔಷಧ ನಿಯಂತ್ರಣ ಸಂಸ್ಥೆಯಾದ ಎಫ್ ಡಿ ಎ ಕೂಡ ಈ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಕೊರೊನಾ ಚಿಕಿತ್ಸೆಯಲ್ಲಿ ಕ್ಲೋರೋಕ್ವಿನ್ ಜೊತೆಗೆ ಇನ್ನೊಂದು ಸೂಕ್ಷ್ಮಾಣು ನಿರೋಧಕ ಅಜಿತ್ರೋಮೈಸಿನ್ ಸೇರಿಸಿದರೆ ಪ್ರಯೋಜನವಾಗಬಹುದೆಂಬ ಸಲಹೆಗಳೂ ಕೂಡ ಅಧ್ಯಯನಗಳಲ್ಲಿ ದೃಢಪಟ್ಟಿಲ್ಲ, ಮಾತ್ರವಲ್ಲ, ಅವುಗಳ ಬಳಕೆಯಿಂದಲೂ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಾಗುವ ಬಗ್ಗೆ ಎಚ್ಚರವಹಿಸಬೇಕೆಂದು ಹೇಳಲಾಗಿದೆ. IDSA ವರದಿಯಲ್ಲಿಯೂ ಕ್ಲೋರೋಕ್ವಿನ್ ಮತ್ತು ಅಜಿತ್ರೋಮೈಸಿನ್ ಗಳನ್ನು ಅಧ್ಯಯನಗಳಿಗಾಗಿ ಪ್ರಾಯೋಗಿಕವಾಗಿ ಮಾತ್ರ ಬಳಸಬಹುದೆಂದು ಸೂಚಿಸಿದೆ. ಒಟ್ಟಿನಲ್ಲಿ ಕೊರೊನಾ ಪಿಡುಗಿಗೆ ದಿವ್ಯೌಷಧವೆಂಬಂತೆ ಬಿಂಬಿಸಲಾಗಿದ್ದ ಕ್ಲೋರೋಕ್ವಿನ್ ಎರಡೇ ವಾರಗಳಲ್ಲಿ ಮೂಲೆಗುಂಪಾಗುವಂತಾಗಿದೆ.
ವೈರಾಣುಗಳ ಬೆಳವಣಿಗೆಯನ್ನು ನಿಯಂತ್ರಿಸಬಲ್ಲ ಕೆಲವು ವೈರಾಣು ನಿರೋಧಕ ಔಷಧಗಳನ್ನು ಕೊರೊನಾ ಚಿಕಿತ್ಸೆಯಲ್ಲಿ ಪ್ರಯತ್ನಿಸಬಹುದೆಂದು ಆರಂಭದಲ್ಲಿ ಹೇಳಲಾಗಿತ್ತು. ಫ್ಲೂ ಸೋಂಕಿಗೆ ಬಳಸುವ ಗಿಲಿಯಡ್ ಕಂಪೆನಿಯ ಒಸೆಲ್ಟಮಿವಿರ್, ಎಚ್ ಐ ವಿ ನಿರೋಧಕ ಔಷಧಗಳಾದ ಲೊಪಿನಾವಿರ್ ಮತ್ತು ರಿಟೊನಾವಿರ್, ಇಬೋಲಾ ಚಿಕಿತ್ಸೆಯಲ್ಲಿ ವಿಫಲ ಪ್ರಯತ್ನವಾಗಿದ್ದ ಗಿಲಿಯಡ್ ಕಂಪೆನಿಯ ರೆಮ್ಡಿಸಿವಿರ್ ಗಳನ್ನು ಕೊರೊನಾ ಚಿಕಿತ್ಸೆಯಲ್ಲಿ ಪ್ರಯೋಗಿಸುವ ಪ್ರಯತ್ನಗಳಾಗಿವೆ. ವಿಶ್ವ ಸಂಸ್ಥೆಯ ಅಧ್ಯಯನಗಳಲ್ಲೂ ಇವು ಸೇರಿಕೊಂಡಿವೆ. ರೆಮ್ಡಿಸಿವಿರ್ ಹೆಸರು ಮೇಲೆದ್ದೊಡನೆ ಗಿಲಿಯಡ್ ಕಂಪೆನಿಯ ಪಾಲುಮೌಲ್ಯವೂ ಜಿಗಿದಾಗಿದೆ. ಆದರೆ ರೆಮ್ಡಿಸಿವಿರ್ ಉಪಯುಕ್ತತೆಯ ಬಗ್ಗೆ ಈಗಷ್ಟೇ ಬಂದಿರುವ ವರದಿಗಳು ನಿರಾಶಾದಾಯಕವಾಗಿದ್ದು, ಅದರಿಂದ ಹೆಚ್ಚೇನೂ ನಿರೀಕ್ಷೆ ಉಳಿಯಲಾರದು. ಇನ್ನುಳಿದ ಲೊಪಿನಾವಿರ್ / ರಿಟೊನಾವಿರ್ ಉಪಯುಕ್ತತೆಯ ಬಗ್ಗೆಯೂ, ಅವುಗಳ ಜೊತೆಗೆ ಉರಿಯೂತ ನಿಯಂತ್ರಣದಲ್ಲಿ ಪಾಲ್ಗೊಳ್ಳುವ ಸಂಯುಕ್ತವಾದ ಇಂಟರ್ ಫೆರಾನ್ ಬೀಟಾವನ್ನು ಸೇರಿಸಿ ಚಿಕಿತ್ಸೆ ನೀಡುವ ಸಾಧ್ಯತೆಗಳ ಬಗ್ಗೆಯೂ ಅಧ್ಯಯನಗಳು ಆರಂಭಗೊಂಡಿವೆ. ಇವುಗಳ ಫಲಿತಾಂಶಗಳು ಇನ್ನಷ್ಟೇ ತಿಳಿಯಬೇಕಾಗಿದ್ದು, ಸದ್ಯದ ಮಟ್ಟಿಗೆ ಇವೆಲ್ಲವೂ ಪ್ರಾಯೋಗಿಕ ಔಷಧಗಳಷ್ಟೇ ಆಗಿ ಬಲಸಲ್ಪಡಲಿವೆ; IDSA ವರದಿಯಲ್ಲೂ ಹಾಗೆಯೇ ಸೂಚಿಸಲಾಗಿದೆ.
ಇನ್ನು ಕೊರೊನಾ ಪೀಡಿತರಲ್ಲಿ ರೋಗರಕ್ಷಣಾ ವ್ಯವಸ್ಥೆಯು ಹದ್ದು ಮೀರಿ ವರ್ತಿಸದಂತೆ ತಡೆದು, ಗಂಭೀರ ಸಮಸ್ಯೆಗಳಾದವರಿಗೆ ಚಿಕಿತ್ಸೆ ನೀಡಲು ರೋಗರಕ್ಷಣಾ ವ್ಯವಸ್ಥೆಯನ್ನು ಮಣಿಸುವ ಸ್ಟೀರಾಯ್ಡ್ ಔಷಧಗಳು ಮತ್ತು ಹೊಸಬಗೆಯ ತೋಸಿಲಿಝುಮಾಬ್ ನಂತಹ ಔಷಧಗಳನ್ನು ಕೂಡ ಪ್ರಯೋಗಿಸಲಾಗುತ್ತಿದೆ. IDSA ವರದಿಯನುಸಾರ, ಇವೆಲ್ಲವನ್ನೂ ಕೆಲವರಲ್ಲಿ ಕೇವಲ ಪ್ರಾಯೋಗಿಕವಾಗಿ ಬಳಸಬಹುದೇ ಹೊರತು ಅನಿರ್ಬಂಧಿತವಾಗಿ ಬಳಸಬಾರದು.
ಕೊರೊನಾ ಸೋಂಕನ್ನು ತಡೆಯಲು ಹೊಸ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಕೆಲಸವು ಚೀನಾದಿಂದ ಹಿಡಿದು ಭಾರತದವರೆಗೆ ಹಲವು ದೇಶಗಳಲ್ಲಿ ಆರಂಭಗೊಂಡಿದೆ. ಈ ಪ್ರತ್ಯೇಕ ಸಂಶೋಧನೆಗಳು ಬೇರೆ ಬೇರೆಯಾದ ವಿಧಾನಗಳಿಂದ ರೋಗರಕ್ಷಣೆಯನ್ನು ನೀಡಬಲ್ಲ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಹೊರಟಿದ್ದು, ಯಾವ ವಿಧಾನವು ಅಂತಿಮವಾಗಿ ಫಲಪ್ರದವಾಗಬಹುದೆಂದು ಈಗಲೇ ಹೇಳುವಂತಿಲ್ಲ. ಆದರೂ ಕೂಡ, ಈ ಸಂಶೋಧನೆಗೆ ಕೈಹಾಕಿರುವ ಎಲ್ಲಾ ಖಾಸಗಿ ಕಂಪೆನಿಗಳ ಪಾಲು ಮೌಲ್ಯವು ಈಗಾಗಲೇ ಮೇಲೇರಿಯಾಗಿದೆ! ಈ ಹೊಸ ಕೊರೊನಾ ವೈರಾಣುವಿನ ತಳಿಯಲ್ಲಿ ಮೂವತ್ತು ಬಗೆಯ ಬದಲಾವಣೆಗಳಾಗಿರುವುದನ್ನು ವಿಜ್ಞಾನಿಗಳು ಈಗಾಗಲೇ ಗುರುತಿಸಿರುವುದರಿಂದ, ಅದರೆದುರಿಗೆ ಲಸಿಕೆಯನ್ನು ತಯಾರಿಸುವುದು ಇನ್ನಷ್ಟು ಕ್ಲಿಷ್ಟವಾಗಲಿದೆ. ಜೊತೆಗೆ, ಸಹಜವಾಗಿ ಸೋಂಕನ್ನು ಪಡೆದವರ ದೇಹದಲ್ಲೂ ಪ್ರತಿಕಾಯಗಳ ಪ್ರಮಾಣವು ನಿರೀಕ್ಷಿತ ಮಟ್ಟದಲ್ಲಿಲ್ಲ ಎನ್ನುವ ಅಂಶವೂ ಕೂಡ ಈ ಲಸಿಕೆಗಳಿಂದ ಅದೆಷ್ಟು ಪ್ರಯೋಜನವಾಗಬಹುದೆನ್ನುವ ಬಗ್ಗೆ ಪ್ರಶ್ನೆಗಳನ್ನೆತ್ತಿವೆ.
ಮಕ್ಕಳಲ್ಲಿ ಕ್ಷಯ ರೋಗ ತಡೆಗೆ ನೀಡಲಾಗುವ ಬಿಸಿಜಿ ಲಸಿಕೆಯನ್ನು ಹಾಕಲಾಗಿರುವ ಭಾರತದಂತಹ ದೇಶಗಳಲ್ಲಿ ಕೊರೊನಾ ಸೋಂಕು ಹರಡದಿರಲು ಸಾಧ್ಯವಾಗಬಹುದು ಎಂಬ ಕೆಲವು ವರದಿಗಳು ಅಲ್ಲಿಗೇ ತಣ್ಣಗಾಗಿವೆ. ಪುಣ್ಯಭೂಮಿಗೆ ಕೊರೊನಾ ಬರುವುದಿಲ್ಲ ಎಂಬಲ್ಲಿಂದ ಹಿಡಿದು ನಮಸ್ತೇ, ಕಷಾಯ, ಸಾರು-ಸಾಂಬಾರು, ಮೂತ್ರ-ಸೆಗಣಿ, ಯೋಗಾಸನ, ಮಂತ್ರ-ತಂತ್ರ -ಪ್ರಾರ್ಥನೆ-ಪೂಜೆ, ಇತ್ಯಾದಿಗಳು ಕೊರೊನಾವನ್ನು ಅಲ್ಲಿಂದಲ್ಲಿಗೆ ಮುಗಿಸಿಬಿಡುತ್ತವೆ ಎಂಬ ಅಗ್ಗಳಿಕೆಯ ಪ್ರಲಾಪಗಳು ಮಾಯವಾಗಿವೆ. ಆಯುರ್ವೇದ, ಹೋಮಿಯೋಪತಿ ಇತ್ಯಾದಿ ಪದ್ಧತಿಗಳಿಂದ ಕೊರೊನಾ ತಡೆಯಬಹುದು, ಚಿಕಿತ್ಸೆ ನೀಡಬಹುದು ಎಂಬ ಆಧಾರರಹಿತ ಹೇಳಿಕೆಗಳು ದಂಡನಾರ್ಹವೆಂದು ಕೇಂದ್ರ ಆಯುಷ್ ಇಲಾಖೆಯೇ ಆಜ್ಞೆ ಮಾಡಿಯಾಗಿದೆ. ಜಗತ್ತಿನ ಎಲ್ಲ ದೇಶ-ಪ್ರದೇಶಗಳಿಗೂ ಈ ಹೊಸ ಕೊರೊನಾ ಸೋಂಕು ಹರಡಿದ್ದು, ಎಲ್ಲೆಡೆಯೂ ಅದರ ತಡೆಯುವಿಕೆಗೆ ಮತ್ತು ಚಿಕಿತ್ಸೆಗೆ ಆಧುನಿಕ ವೈದ್ಯವಿಜ್ಞಾನವನ್ನೇ ಅನುಸರಿಸಲಾಗುತ್ತಿದೆ, ಗಂಭೀರ ಸಮಸ್ಯೆಗೀಡಾದವರಿಗೆ ಆಧುನಿಕ ವೈದ್ಯಕೀಯ ಚಿಕಿತ್ಸೆಗಳನ್ನಷ್ಟೇ ನೀಡಲಾಗುತ್ತಿದೆ. ವಿಜ್ಞಾನ, ಆಧುನಿಕ ತಂತ್ರಜ್ಞಾನ, ಆಧುನಿಕ ವೈದ್ಯಕೀಯ ವ್ಯವಸ್ಥೆ, ವೈಜ್ಞಾನಿಕ ಚಿಂತನೆಗಳಷ್ಟೇ ನಂಬಲರ್ಹವಾಗಿವೆ, ಜೀವವುಳಿಸುವಂಥವಾಗಿವೆ, ಮನುಕುಲಕ್ಕೆ ಒಳಿತನ್ನುಂಟು ಮಾಡುವಂಥವಾಗಿವೆ ಎನ್ನುವುದನ್ನು ಹೊಸ ಕೊರೊನಾ ಪಿಡುಗಿನ ಸಂಕಷ್ಟವು ತೋರಿಸಿಕೊಟ್ಟಿದೆ.
ಒಟ್ಟಿನಲ್ಲಿ, ಹೊಸ ಕೊರೊನಾ ಸೋಂಕು ಶೇ.80ಕ್ಕೂ ಹೆಚ್ಚು ಜನರಲ್ಲಿ ಯಾವುದೇ ರೋಗಲಕ್ಷಣಗಳಿಲ್ಲದೆಯೇ ತನ್ನಿಂತಾನಾಗಿ ವಾಸಿಯಾಗುತ್ತದೆ. ಗಂಭೀರ ಸಮಸ್ಯೆಗೀಡಾದ ಕೆಲವರಿಗೆ ಕೃತಕ ಉಸಿರಾಟ ಅಥವಾ ಇತರ ಉನ್ನತ ಚಿಕಿತ್ಸೆಯ ಅಗತ್ಯವುಂಟಾಗಬಹುದು. ಈ ಎಲ್ಲಾ ಚಿಕಿತ್ಸೆಗಳು ಸಾಮಾನ್ಯವಾಗಿ ಆಧುನಿಕ ವೈದ್ಯವಿಜ್ಞಾನದಲ್ಲಿ ಬಳಸುವ ಜೀವರಕ್ಷಕ ಚಿಕಿತ್ಸೆಗಳೇ ಆಗಿದ್ದು, ಕೊರೊನಾ ಸೋಂಕಿಗೆಂದು ವಿಶೇಷವಾದ ಚಿಕಿತ್ಸೆಗಳೇನಲ್ಲ, ಆದ್ದರಿಂದ ಕೊರೊನಾ ನಿಭಾಯಿಸುವುದಕ್ಕೆ ಹೊಸ ಔಷಧಗಳಿಗೆ, ಲಸಿಕೆಗಳಿಗೆ ಕಾದುಕೊಂಡಿರಬೇಕಾಗಿಲ್ಲ.
Leave a Reply