ಕರ್ನಾಟಕ ವಿಧಾನಸಭೆಗೆ ಚುನಾವಣೆಗಳು ಬಂದಿವೆ. ರಾಜ್ಯದ ಹಿತರಕ್ಷಣೆಗಾಗಿ, ಭವಿಷ್ಯದ ನಿರ್ಮಾಣಕ್ಕಾಗಿ ನೀತಿಗಳನ್ನು, ಯೋಜನೆಗಳನ್ನು ರೂಪಿಸಬಲ್ಲ, ಜನಪರವಾದ, ದೂರದೃಷ್ಟಿಯ ಆಡಳಿತವನ್ನು ನೀಡಬಲ್ಲ ಸರಕಾರವನ್ನು ನಾವೀಗ ಆರಿಸಬೇಕಾಗಿದೆ. ಇಂದು ಚುನಾವಣೆಗೆ ಸ್ಪರ್ಧಿಸುತ್ತಿರುವವರಲ್ಲಿ ಅಂತಹ ಸಾಮರ್ಥ್ಯವಾಗಲೀ, ಇಚ್ಚೆಯಾಗಲೀ ಇವೆಯೇ, ಅವನ್ನು ಅಳೆಯುವ ಬಯಕೆಯಾಗಲೀ, ಜವಾಬ್ದಾರಿಯಾಗಲೀ ಮತದಾರರಲ್ಲಿ ಇವೆಯೇ ಎನ್ನುವುದಕ್ಕೆ ಮುಂಬರುವ ಚುನಾವಣೆಗಳಲ್ಲಿ ಉತ್ತರ ದೊರೆಯಲಿದೆ.
ಯಾವುದೇ ಸರಕಾರವು ಜನಪರವಾಗಿ, ಭವಿಷ್ಯದ ಆಶೋತ್ತರಗಳ ಈಡೇರಿಕೆಗಾಗಿ ಕೆಲಸ ಮಾಡಬೇಕಿದ್ದರೆ ಅದರ ನೀತಿನಿರೂಪಣೆಯು ಸಾಕ್ಷ್ಯಾಧಾರಿತವಾಗಿರಲೇ ಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಸರಕಾರದ ಯೋಜನೆಗಳು ಜಾತಿ, ಮತ, ಮಠ, ಮಾಧ್ಯಮಗಳ ಒತ್ತಾಯ, ಒತ್ತಡ, ಗಲಾಟೆ-ಗದ್ದಲಗಳನ್ನು ಸಮಾಧಾನ ಪಡಿಸುವುದಕ್ಕಾಗಿಯೇ ರೂಪುಗೊಳ್ಳುತ್ತಿರುವಂತೆ ಕಾಣುತ್ತಿವೆ. ಊರು-ಕೇರಿ-ರಸ್ತೆಗಳ ಹೆಸರುಗಳ ಬದಲಾವಣೆ, ಎಲ್ಲೆಂದರಲ್ಲಿ ಜಾತಿವಾರಾಗಿ ಪ್ರತಿಮೆಗಳ ಸ್ಥಾಪನೆ, ಮಠ-ಮಂದಿರಗಳಿಗೆ ಕೋಟಿಗಟ್ಟಲೆ ಅನುದಾನ ಸಮರ್ಪಣೆ, ಸಾವಿರಾರು ಕೋಟಿಗಳ ರಂಗುರಂಗಿನ ಯೋಜನೆಗಳ ಬರೇ ಘೋಷಣೆ ಇವೇ ಸಾಮಾನ್ಯವಾಗಿ ಹೋಗಿವೆ. ಜನರ ಹೊಟ್ಟೆ-ಬಟ್ಟೆ-ಆರೋಗ್ಯಗಳಿಗಾಗಿ ಸಾಕ್ಷ್ಯಾಧಾರಿತ ಯೋಜನೆಗಳ ಬದಲು ಜುಟ್ಟು-ಬೊಟ್ಟುಗಳಿಗಾಗಿ, ಭಾವನಾತ್ಮಕ ಆಟಗಳಿಗಾಗಿ ಸಾಂಕೇತಿಕ ಯೋಜನೆಗಳೇ ರಾರಾಜಿಸುವಂತಾಗಿದೆ.
ಕೊರೋನ ನಿರ್ವಹಣೆಯ ತಪ್ಪುಗಳು
ನಮ್ಮ ರಾಜಕಾರಣಿಗಳು ಅದೆಷ್ಟು ವೈಚಾರಿಕವಾಗಿ ನೀತಿಗಳನ್ನು ರೂಪಿಸುತ್ತಾರೆ, ನಮ್ಮ ಜನರು ಅದೆಷ್ಟು ವೈಚಾರಿಕವಾಗಿ, ಧೈರ್ಯವಾಗಿ ಅವನ್ನು ಪರಾಮರ್ಶಿಸುತ್ತಾರೆ ಎನ್ನುವುದನ್ನು ಕೊರೋನ ಕಾಲದಲ್ಲಿ ನೋಡಲಿಲ್ಲವೇ? ಸರಕಾರವು ತಜ್ಞರನ್ನು ಕಡೆಗಣಿಸಿ ತಜ್ಞರಲ್ಲದವರನ್ನು ಸಮಿತಿಗಳಲ್ಲಿ ತುಂಬಿಸಿ, ತೀರಾ ಅವೈಜ್ಞಾನಿಕವಾದ, ಜನವಿರೋಧಿಯಾದ ಕ್ರಮಗಳನ್ನು ಹೇರಿ, ಅದಕ್ಕೆ 150 ವರ್ಷಗಳಷ್ಟು ಹಳೆಯ ಕಾನೂನನ್ನು ಬಳಸಿಕೊಂಡಿತು. ಇವನ್ನು ಪ್ರಶ್ನಿಸಿ ವೈಜ್ಞಾನಿಕ ವಿಧಾನಗಳನ್ನು ತಿಳಿಸಬೇಕಿದ್ದ ವೈದ್ಯರು ಮತ್ತು ವೈದ್ಯಕೀಯ ಸಂಘಟನೆಗಳು ಸರಕಾರ ಮಾಡಿದ್ದೇ ಸರಿ ಎಂದು ಜೊತೆ ಸೇರಿದರು. ಇವುಗಳಿಂದ ಜನರ ಮೇಲಾದ ಕಷ್ಟಗಳನ್ನು ಎತ್ತಿ ತೋರಿಸಬೇಕಿದ್ದ ಮಾಧ್ಯಮಗಳು ಸರಕಾರದ ನಿಲುವನ್ನೇ ಬೆಂಬಲಿಸಿ, ಜನರನ್ನು ಪ್ರತಿನಿತ್ಯವೂ ಇನ್ನಷ್ಟು ಹೆದರಿಸಿ, ವಿಭಜಿಸಿ, ವ್ಯಂಗ್ಯವಾಡಿ ಹಿಂಸಿಸಿದವು. ವಿಚಾರವಾದಿಗಳು, ವೈಜ್ಞಾನಿಕ ಮನೋವೃತ್ತಿಯವರು ಎಂದೆಲ್ಲ ಹೇಳಿಕೊಳ್ಳುವ ಹಲವರು ಕೂಡ ಈ ಅವೈಜ್ಞಾನಿಕವಾದ, ಅನಗತ್ಯವಾದ, ಅನ್ಯಾಯದ ಕ್ರಮಗಳನ್ನು ಪ್ರಶ್ನಿಸದೇ ಬೆಂಬಲಿಸಿದರು. ಇವೆಲ್ಲವುಗಳ ಅಡಿಯಲ್ಲಿ ಜನಸಾಮಾನ್ಯರು ದಿಕ್ಕು ತೋಚದೆ ನರಳಿದರು.
ಕೊರೋನ ಬಂತು, ಎಲ್ಲೆಡೆ ಎಲ್ಲರಿಗೆ ಹರಡಿತು, ಸಮಸ್ಯೆಯಾಗುವವರಿಗೆ ಆಯಿತು. ಆದರೆ ಅವೈಜ್ಞಾನಿಕವಾಗಿದ್ದ, ನ್ಯಾಯಬಾಹಿರವಾಗಿದ್ದ ಕ್ರಮಗಳನ್ನು ಹೇರಿದ್ದ ರಾಜಕಾರಣಿಗಳು ಈಗ ತಮ್ಮ ಆ ನಡೆಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ; ತಾವು ಮಾಡಿದ್ದೆಲ್ಲವೂ ಅತ್ಯಂತ ಸಮಂಜಸವಾಗಿತ್ತು, ಅತ್ಯುತ್ತಮವಾಗಿತ್ತು ಎಂದು ಹೊಗಳಿಕೊಳ್ಳುವುದಷ್ಟೇ ಅಲ್ಲ, ತಮ್ಮಿಂದಾಗಿಯೇ ಜನರೆಲ್ಲರೂ ಜೀವಂತವಾಗಿ ಉಳಿದಿದ್ದಾರೆ, ಇಲ್ಲವಾದರೆ ಎಲ್ಲರೂ ಸತ್ತೇ ಹೋಗುತ್ತಿದ್ದರು ಎಂದು ಪ್ರತಿನಿತ್ಯ ಹೇಳಿಕೊಳ್ಳುತ್ತಿದ್ದಾರೆ. ಆಗ ಬೊಬ್ಬೆ ಹಾಕಿದ್ದ ಮಾಧ್ಯಮಗಳಾಗಲೀ, ಸರಕಾರವನ್ನು ಬೆಂಬಲಿಸಿದ್ದ ವೈದ್ಯರಾಗಲೀ ಕೊರೋನ ಕಾಲದ ತಪ್ಪುಗಳ ಬಗ್ಗೆ ಈಗ ಬರುತ್ತಲೇ ಇರುವ ವರದಿಗಳ ಬಗ್ಗೆ ಚಕಾರವೆತ್ತುತ್ತಿಲ್ಲ, ಹಿಂದೆ ಮಾಡಿದ್ದ ತಪ್ಪುಗಳನ್ನು ಪ್ರಶ್ನಿಸುತ್ತಿಲ್ಲ; ತಾವೂ ಆ ಅನ್ಯಾಯಗಳಿಗೆ ಪಾಲುದಾರರೆಂಬ ಪಾಪಪ್ರಜ್ಞೆಯೋ, ತಮ್ಮ ಮೆಚ್ಚಿನ ಸರಕಾರಕ್ಕೆ ಮುಜುಗರವುಂಟು ಮಾಡಬಾರದೆಂಬ ಕಳಕಳಿಯೋ ಇರಬಹುದು! ಇವುಗಳಿಂದ ನರಳಿದ ಜನರೂ ಕೂಡ ಸರಕಾರವನ್ನು ಪ್ರಶ್ನಿಸದೆ ತಮ್ಮೊಳಗೇ ಗೊಣಗುತ್ತಾ ಸುಮ್ಮನಿದ್ದಾರೆ, ಜನರಿಗೆ ಬಲಾಢ್ಯರನ್ನು ಎದುರಿಸುವ ಭಯವೋ ಏನೋ?
ಮನಬಂದಂತೆ ಅವೈಜ್ಞಾನಿಕವಾದ ನೀತಿಗಳನ್ನು ಮಾಡುವ ಸರಕಾರಗಳು, ಅವನ್ನು ಬೊಬ್ಬಿರಿಸಿ ಬೆಂಬಲಿಸುವ ಮಾಧ್ಯಮಗಳು ಮತ್ತು ಬೆಂಬಲಿಗರು, ಕಷ್ಟಗಳನ್ನೆಲ್ಲ ಸಹಿಸಿಕೊಂಡು ಹೆದರಿ ತೆಪ್ಪಗಿರುವ ಜನರು ಇಂದಿನ ಸಾಮಾಜಿಕ-ರಾಜಕೀಯ ಸಂರಚನೆಯಾಗಿದ್ದಾರೆ ಎನ್ನುವುದನ್ನು ಕೊರೋನ ಕಾಲವು ತೋರಿಸಿಕೊಟ್ಟಿದೆ. ನಮ್ಮ ಜನರಿಗೆ, ನಮ್ಮ ನಾಡಿಗೆ ಒಳಿತಾಗಬೇಕಿದ್ದರೆ ಈ ಸಂರಚನೆಯನ್ನು ಕೆಡವಬೇಕಾಗುತ್ತದೆ. ವೈಜ್ಞಾನಿಕವಾಗಿ, ಸಾಕ್ಷ್ಯಾಧಾರಿತವಾಗಿ, ಜನಹಿತದ ನೀತಿಗಳನ್ನು ನಿರೂಪಿಸುವ ಸರಕಾರಗಳು, ವೈಜ್ಞಾನಿಕ-ವೈಚಾರಿಕ ನಿಲುವುಗಳಿಗೆ ಬದ್ಧರಾಗಿ ಸರಕಾರಕ್ಕೆ ಸೂಕ್ತ ಮಾರ್ಗದರ್ಶನ ಮಾಡುವ ವೈದ್ಯರು ಮತ್ತು ತಜ್ಞರು, ಸರಕಾರವನ್ನು ಸದಾ ಪ್ರಶ್ನಿಸುತ್ತಾ, ಜನಪರವಾಗಿ ವರ್ತಿಸುವ ಮಾಧ್ಯಮಗಳು, ಸರಕಾರದೆದುರು ತಮ್ಮ ಕಷ್ಟಗಳನ್ನೂ, ಬೇಡಿಕೆಗಳನ್ನೂ ದಿಟ್ಟವಾಗಿ ಎತ್ತಿಹಿಡಿಯಬಲ್ಲ ಜನರು ಇದ್ದರೆ ಮಾತ್ರವೇ ನಿಜವಾದ ಪ್ರಗತಿಯು ಸಾಧ್ಯವಾದೀತು.
ಕೊರೋನ ಆರಂಭದಲ್ಲಿ ಕೇವಲ 11 ಪ್ರಕರಣಗಳಷ್ಟೇ ಇದ್ದಾಗ ನಮ್ಮ ರಾಜ್ಯದಲ್ಲಿ ಶಾಲೆ, ಕಾಲೇಜು, ಮಳಿಗೆ, ಸಿನಿಮಾಗಳನ್ನು ಮುಚ್ಚಲಾಯಿತು, ಮದುವೆ ಮುಂತಾದ ಸಮಾರಂಭಗಳನ್ನು ರದ್ದು ಪಡಿಸಲಾಯಿತು. ಹೀಗೆ ಮುಚ್ಚುವುದರಿಂದ ಸೋಂಕನ್ನು ನಿಯಂತ್ರಿಸಬಹುದೆಂಬುದಕ್ಕೆ ಯಾವ ಆಧಾರವೂ ಇರಲಿಲ್ಲ, ಹಿಂದಿನ ಅನುಭವವೂ ಇರಲಿಲ್ಲ, ದೇಶದ ಅಥವಾ ಅಂತರರಾಷ್ಟ್ರೀಯ ಮಟ್ಟದ ಯಾವ ತಜ್ಞರಾಗಲೀ, ಸಂಸ್ಥೆಯಾಗಲೀ ಅಂಥ ಕ್ರಮವನ್ನು ಸೂಚಿಸಿರಲೂ ಇಲ್ಲ. ಆದರೂ ಒಬ್ಬ ಹೃದಯ ಶಸ್ತ್ರಚಿಕಿತ್ಸಕನ ನಾಟಕೀಯ ಬೆದರಿಕೆಗಳಿಗೆ ಮಣಿದ ರಾಜ್ಯ ಸರಕಾರವು ಅಂಥ ನಿರ್ಧಾರವನ್ನು ಮಾಡಿತ್ತು. ಅದನ್ನು ಬೇರೆ ವೈದ್ಯರಾಗಲೀ, ವಿರೋಧ ಪಕ್ಷಗಳಾಗಲೀ, ಮಾಧ್ಯಮಗಳಾಗಲೀ ಪ್ರಶ್ನಿಸಲಿಲ್ಲ, ಬದಲಿಗೆ ಬೆಂಬಲಿಸಿದವು. ಈ ಹಠಾತ್ ನಿರ್ಧಾರದಿಂದ ಅಪಾರ ಕಷ್ಟಗಳಿಗೀಡಾದ ಜನರೂ ಪ್ರಶ್ನಿಸಲಿಲ್ಲ, ಪ್ರತಿಭಟಿಸಲೂ ಇಲ್ಲ. ಪ್ರಶ್ನಿಸಿ, ವಿರೋಧಿಸಿದ್ದ ಈ ಲೇಖಕನ ಮೇಲೆ ಸರಕಾರದ ಬೆಂಬಲಿಗರೆನಿಸಿಕೊಂಡ ಕೆಲವರು ಪೋಲೀಸ್ ಠಾಣೆಯೊಂದರಲ್ಲಿ ದೂರನ್ನು ದಾಖಲಿಸಿದ್ದರು! ಹೀಗೆ ಎಲ್ಲರೂ ಸುಮ್ಮನಿದ್ದು ಸಹಕರಿಸಿದ ಕಾರಣಕ್ಕೆ ಆ ಅವೈಜ್ಞಾನಿಕವಾಗಿದ್ದ, ಅನಗತ್ಯವಾಗಿದ್ದ ನಿರ್ಧಾರವು ಜಾರಿಯಾಯಿತು. ಅದಾಗಿ ಒಂದೇ ವಾರದಲ್ಲಿ 138ಕೋಟಿ ಜನರಿರುವ ದೇಶದಲ್ಲಿ ಕೇವಲ 570ರಷ್ಟು ಕೊರೋನ ಪ್ರಕರಣಗಳಿದ್ದಾಗ, ಸಮುದಾಯದಲ್ಲಿ ಸೋಂಕಿನ ಹರಡುವಿಕೆಯೇ ಇಲ್ಲದೇ ಇದ್ದಾಗ, ಹಠಾತ್ತನೆ ರಾತೋರಾತ್ರಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿ ಮೂರು ವಾರದವರೆಗೆ ಸ್ತಬ್ಧಗೊಳಿಸಲಾಯಿತು, ಮತ್ತೂ ಮುಂದುವರಿಸಲಾಯಿತು. ಲಾಕ್ ಡೌನ್ ಮಾಡುವುದರಿಂದ ಮೂರೇ ವಾರದಲ್ಲಿ ಕುರುಕ್ಷೇತ್ರವನ್ನು ಗೆದ್ದಂತೆ ಸೋಂಕಿನೆದುರು ಜಯಿಸಬಹುದೆಂದು ಪ್ರಧಾನಿಗಳೂ ಘೋಷಿಸಿದ್ದಾಯಿತು, ಮೇ 14, 2020ರ ಬಳಿಕ ಒಂದೇ ಒಂದು ಹೊಸ ಪ್ರಕರಣಗಳು ಇರುವುದಿಲ್ಲ ಎಂದು ನೀತಿ ಆಯೋಗದ ತಜ್ಞರೊಬ್ಬರು ಹೇಳಿದ್ದೂ ಆಯಿತು. ಆದರೆ ಅವೆಲ್ಲವೂ ಸುಳ್ಳಾದವು; ಕೊರೋನ ಹರಡುತ್ತಲೇ ಹೋಯಿತು. ಲಾಕ್ ಡೌನ್ ಕಾರಣಕ್ಕೆ ಜನರು ದಿಕ್ಕಿಲ್ಲದೆ ನೂರಾರು ಮೈಲು ನಡೆದೇ ಹೊರಟರು, ಹಲವರು ದಾರಿಯಲ್ಲೇ ಸತ್ತರು. ಈ ಬರ್ಬರ ಕಷ್ಟಗಳಿಂದಾಗಿ, ಹರಡುವಿಕೆ ಇಲ್ಲದಿದ್ದಾಗ ವಿಧಿಸಲಾಗಿದ್ದ ಲಾಕ್ ಡೌನ್ ಅನ್ನು ಹರಡುವಿಕೆ ಏರುತ್ತಿದ್ದಾಗ ಸಡಿಲಿಸಲೇಬೇಕಾಯಿತು, ಸೋಂಕು ಇನ್ನಷ್ಟು ಹರಡಿತು. ಇವನ್ನೆಲ್ಲ ಪ್ರಶ್ನಿಸಬೇಕಿದ್ದ ‘ತಜ್ಞರು’, ಮಾಧ್ಯಮಗಳು, ಜನರು ಎಲ್ಲರೂ ತೆಪ್ಪಗಿದ್ದರು.
ಈ ಅವೈಜ್ಞಾನಿಕ, ಅಮಾನವೀಯ ದಿಗ್ಬಂಧನಗಳನ್ನು ಹೇರಲು 1857ರ ಸಾಂಕ್ರಾಮಿಕ ಕಾಯಿಲೆಗಳ ಕಾಯಿದೆ ಹಾಗೂ 2005ರ ವಿಕೋಪ ನಿರ್ವಹಣಾ ಕಾಯಿದೆಗಳನ್ನು ಬಳಸಿಕೊಳ್ಳಲಾಗಿತ್ತು. ಈ ಕಾಯಿದೆಗಳಲ್ಲಿ ಕೇವಲ ತಾತ್ಕಾಲಿಕ ನಿರ್ಬಂಧಗಳನ್ನು ವಿಧಿಸುವಂತೆ, ಮತ್ತು ಅವುಗಳಿಂದಾಗುವ ಸಕಲ ನಷ್ಟಗಳಿಗೆ ಪರಿಹಾರವನ್ನು ಒದಗಿಸುವಂತೆ ಸ್ಪಷ್ಟವಾಗಿ ಹೇಳಲಾಗಿದ್ದರೂ, ಕೊರೋನ ನೆಪದಲ್ಲಿ ವಿಧಿಸಿದ್ದ ದಿಗ್ಬಂಧನಗಳು ತಿಂಗಳುಗಟ್ಟಲೆ ಸಾಗಿದವು, ಸೂಕ್ತ ಪರಿಹಾರವನ್ನೂ ನೀಡಲಿಲ್ಲ. ಕೇಂದ್ರ ಸರಕಾರವು ಮಾರ್ಚ್ 14, 2020ರಂದು ಕೋವಿಡ್ ಅನ್ನು ರಾಷ್ಟ್ರೀಯ ವಿಕೋಪ ಎಂದು ಘೋಷಿಸಿತ್ತು. ಹಾಗೆ ಘೋಷಿತವಾದ ವಿಕೋಪಗಳಲ್ಲಿ ಮೃತರಾದವರಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರವನ್ನು ನೀಡುವುದಕ್ಕೆ ಎಪ್ರಿಲ್ 8, 2015ರಲ್ಲೇ ಅಧಿಸೂಚನೆಯು ಪ್ರಕಟವಾಗಿತ್ತು. ಆದರೆ ಕೋವಿಡ್‌ನಿಂದ ಮೃತರಾದವರಿಗೆ ಪರಿಹಾರ ನೀಡುವ ಬಗ್ಗೆ ಆಡಳಿತವು ಸುಮ್ಮನಿದ್ದಾಗ ಗೌರವ್ ಕುಮಾರ್ ಮತ್ತು ರೀಪಕ್ ಕನ್ಸಾಲ್ ಎಂಬ ವಕೀಲರಿಬ್ಬರು ಸರ್ವೋಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದರು. ಅದಕ್ಕುತ್ತರವಾಗಿ ಕೇಂದ್ರ ಸರಕಾರವು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈಗಾಗಲೇ ಹಣವಿಲಲ್ಲದೆ ತತ್ತರಿಸುತ್ತಿವೆ, ನಡೆಯುತ್ತಲೇ ಇರುವ ಸಾಂಕ್ರಾಮಿಕವೆಂಬ ವಿಕೋಪಕ್ಕೆ ಪರಿಹಾರ ನೀಡಲಾಗದು, ನ್ಯಾಯಾಲಯವು ಇಂಥ ನೀತಿನಿರೂಪಣೆಯ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಕೂಡದು ಎಂದು ಜಾರಿಕೊಂಡಿತು. ಕೊನೆಗೆ ಅಕ್ಟೋಬರ್ 4, 2021ರಂದು ಸರ್ವೋಚ್ಛ ನ್ಯಾಯಾಲಯವು ಕೋವಿಡ್‌ನಿಂದ ಮೃತರಾದವರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶ ಹೊರಡಿಸಿತು.
ಆದರೆ ಹಠಾತ್ತಾಗಿ ಘೋಷಿಸಿದ ಲಾಕ್ ಡೌನ್ ನಿಂದಾಗಿ ಮನೆ, ಉದ್ಯೋಗ, ವಹಿವಾಟು ಎಲ್ಲವನ್ನೂ ಕಳೆದುಕೊಂಡವರಿಗೆ ಯಾವ ಪರಿಹಾರವೂ ದೊರೆಯಲಿಲ್ಲ. ಕೋವಿಡ್ ನೆಪದಲ್ಲಿ ಅನಗತ್ಯವಾಗಿ ಲಾಕ್ ಡೌನ್ ಹೇರಿ ಕೋಟಿಗಟ್ಟಲೆ ಜನರ ಜೀವನೋಪಾಯವನ್ನು ಕಸಿದುಕೊಂಡ ಬಳಿಕ ಜನರ ಆಕ್ರಂದನ ಏರಿದಂತೆ ಅತಿ ಬಡವರಿಗೆ ಧಾನ್ಯಗಳನ್ನು ಒದಗಿಸುವ ಘೋಷಣೆಯಾಯಿತು. ದುಡಿದು ತಿನ್ನುತ್ತಿದ್ದವರ ದುಡಿತವನ್ನೇ ಇಲ್ಲವಾಗಿಸಿ ಒಂದಿಷ್ಟು ಅಕ್ಕಿ ಕೊಟ್ಟದ್ದನ್ನೇ ಮಹತ್ಸಾಧನೆ ಎಂಬಂತೆ ಬಿಂಬಿಸಿದ್ದೂ ಆಯಿತು. ಇದನ್ನೂ ಕೂಡ ಯಾರೂ ಪ್ರಶ್ನಿಸಲಿಲ್ಲ!
ಕೋವಿಡ್ ಎದುರಿಸಲು ಭಾರತಕ್ಕೆ ಸಾಧ್ಯವಿರಲಿಲ್ಲ, ಮಾಸ್ಕ್-ಪಿಪಿಇ ಭಾರತದಲ್ಲಿ ಸಾಕಷ್ಟಿರಲಿಲ್ಲ, ಆ ಸಿದ್ಧತೆಗಾಗಿ ಲಾಕ್ ಡೌನ್ ಮಾಡಲಾಯಿತು ಎಂದೇ ಸರಕಾರ ಮತ್ತದರ ಬೆಂಬಲಿಗರು ಹೇಳುತ್ತಾ ಬಂದರು, ಈಗಲೂ ಅದನ್ನೇ ಹೇಳುತ್ತಿದ್ದಾರೆ. ವಾಸ್ತವವೇನೆಂದರೆ, ಕೊರೋನಕ್ಕೆ ಮೊದಲಲ್ಲೂ ಭಾರತದಿಂದ ಮಾಸ್ಕ್-ಪಿಪಿಇ ರಫ್ತಾಗುತ್ತಿದ್ದವು, ಅವುಗಳ ಉತ್ಪಾದನೆಯನ್ನು ಹೆಚ್ಚಿಸುವುದಕ್ಕೆ ಲಾಕ್ ಡೌನ್ ಮಾಡಿ ಎಲ್ಲವನ್ನೂ ಮುಚ್ಚಿ ಅಡ್ಡಿ ಪಡಿಸುವುದು ಬೇಕಾಗಿರಲಿಲ್ಲ, ಬದಲಿಗೆ ಉತ್ಪಾದನಾ ಘಟಕಗಳನ್ನು ಹೆಚ್ಚಿಸಿ ಇನ್ನಷ್ಟು ಜನರನ್ನು ಕೆಲಸಕ್ಕಿಳಿಸುವುದಷ್ಟೇ ಸಾಕಿತ್ತು! ಲಾಕ್ ಡೌನ್ ಮಾಡಿದ್ದರಿಂದ ಸಿದ್ಧತೆಗೆ ಸಹಾಯವಾಗುವುದಿರಲಿ, ನಿತ್ಯದ ಆರೋಗ್ಯ ಸೇವೆಗೆಳೆಲ್ಲವೂ ಬಾಧಿತವಾದವು, ಶಸ್ತ್ರಚಿಕಿತ್ಸೆಗಳು, ಹೆರಿಗೆ ಮತ್ತು ಮಕ್ಕಳ ಆರೋಗ್ಯ ಸೇವೆಗಳು, ಕ್ಯಾನ್ಸರ್ ಚಿಕಿತ್ಸೆ, ಹೃದಯ, ಮೂತ್ರಪಿಂಡಗಳ ಸಮಸ್ಯೆಗಳಿದ್ದವರ ಚಿಕಿತ್ಸೆ ಎಲ್ಲವೂ ತೀವ್ರವಾಗಿ ಬಾಧಿತವಾದವು. ಅತ್ತ ಕೊರೋನ ಚಿಕಿತ್ಸೆಗೂ ಸರಿಯಾದ ವ್ಯವಸ್ಥೆಗಳಾಗಲಿಲ್ಲ; ಯಾವುದೇ ಸಾಕ್ಷ್ಯಾಧಾರಗಳಿಲ್ಲದ, ಅನಗತ್ಯವಾದ ಔಷಧಗಳ ಬಳಕೆಯನ್ನು ಸೂಚಿಸಲಾಯಿತು, ಯಾವುದೇ ಉಪಯೊಗವಿಲ್ಲದ ಆಯುರ್ವೇದ, ಹೋಮಿಯೋಪತಿ ಚಿಕಿತ್ಸೆಯನ್ನು ವೈಭವೀಕರಿಸಲಾಯಿತು. ಶೇ.99ರಷ್ಟು ಸೋಂಕಿತರು ಯಾವುದೇ ಸಮಸ್ಯೆಗಳಿಲ್ಲದೆ ತಾವಾಗಿ ಗುಣಮುಖರಾಗುತ್ತಾರೆನ್ನುವುದು ಸ್ಪಷ್ಟವಿದ್ದರೂ ಎಲ್ಲಾ ಸೋಂಕಿತರನ್ನು ಪ್ರತ್ಯೇಕಿಸಿ ದಾಖಲಿಸುವುದಕ್ಕಾಗಿ ಕ್ರೀಡಾಂಗಣಗಳಲ್ಲಿ, ಮೈದಾನಗಳಲ್ಲಿ, ಸಭಾಭವನಗಳಲ್ಲಿ ವ್ಯವಸ್ಥೆ ಮಾಡಲಾಯಿತು, ಅದಕ್ಕೆ ಕೋಟಿಗಟ್ಟಲೆ ವ್ಯಯಿಸಲಾಯಿತು, ಆದರೆ ಅವುಗಳಿಗೆ ಹೋಗಲು ಯಾರೂ ಒಪ್ಪದೆ ಅವೆಲ್ಲವೂ ವ್ಯರ್ಥವಾಯಿತು. ಆಸ್ಪತ್ರೆಗಳಲ್ಲಿಯೂ ಹಾಸಿಗೆಗಳನ್ನು ಕಾದಿರಿಸುವ ವ್ಯವಸ್ಥೆ ಮಾಡಿ, ಅದನ್ನು ಯಾರ‍್ಯಾರದೋ ನಿಯಂತ್ರಣಕ್ಕೊಪ್ಪಿಸಿ, ಅದರಲ್ಲೂ ಹಗರಣಗಳಾಗಿ, ಅಗತ್ಯವಿಲ್ಲದವರಿಗೆ ದೊರೆತು ಅಗತ್ಯವಿದ್ದವರು ಕಾದು ನರಳುವಂತಾಯಿತು. ಆಮ್ಲಜನಕದ ವಿತರಣೆಯನ್ನೂ ಕೇಂದ್ರೀಕೃತವಾಗಿ ನಿಯಂತ್ರಿಸಿ ಅಗತ್ಯವಿದ್ದಲ್ಲಿಗೆ ಸಾಕಷ್ಟು ಆಮ್ಲಜನಕ ದೊರೆಯದಂತಾಯಿತು, ಚಾಮರಾಜನಗರವೂ ಸೇರಿದಂತೆ ಹಲವೆಡೆ ಆಮ್ಲಜನಕ ದೊರೆಯದೆ ಸೋಂಕಿತರು ಸಾವನ್ನಪ್ಪುವಂತಾಯಿತು.
ಕೊರೋನದಿಂದ ಮೃತರಾದವರ ದೇಹದಿಂದ ಸೋಂಕು ಹರಡುವ ಸಾಧ್ಯತೆಗಳಿಲ್ಲವೆಂದೂ, ಸರಳ ಎಚ್ಚರಿಕೆಗಳನ್ನು ಪಾಲಿಸಿ ಮನೆಯವರೇ ಅಂತ್ಯಕ್ರಿಯೆ ನಡೆಸಬಹುದೆಂದೂ ಐಸಿಎಂಆರ್ ಮತ್ತು ಕೇಂದ್ರ ಆರೋಗ್ಯ ಇಲಾಖೆಗಳು ಮಾರ್ಚ್ 15, 2020ರಂದೇ ಸ್ಪಷ್ಟವಾದ ಸೂಚಿಯನ್ನು ಪ್ರಕಟಿಸಿದ್ದವು. ಹಾಗಿದ್ದರೂ ಮೃತದೇಹಗಳ ಅಂತ್ಯಕ್ರಿಯೆಗಳಿಗೆ ಬಗೆಬಗೆಯ ಅಡ್ಡಿಯೊಡ್ಡಲಾಯಿತು, ತಮ್ಮ ಅನುಮತಿಯಿಲ್ಲದೆ ಯಾರ ಅಂತ್ಯಕ್ರಿಯೆಯನ್ನೂ ನಡೆಸುವಂತಿಲ್ಲವೆಂದು ಕೆಲವು ಶಾಸಕರು ಮತ್ತು ಸಂಸದರು ಅಪ್ಪಣೆ ಕೊಟ್ಟದ್ದೂ ಆಯಿತು, ಕೋವಿಡ್ ನಿಂದ ಮೃತರಾದ ಕೇಂದ್ರ ಸಚಿವರ ದೇಹವನ್ನು ಜೆಸಿಬಿ ಮೂಲಕ ಎಸೆದ ದೃಶ್ಯಗಳನ್ನು ಟಿವಿ ವಾಹಿನಿಗಳು ಬಿತ್ತರಿಸಿದ್ದೂ ಆಯಿತು. ಬಳಿಕ 2021ರಲ್ಲಿ ಎರಡನೇ ಅಲೆಯಲ್ಲಿ ಇನ್ನೂ ಹೆಚ್ಚು ಮಂದಿ ಮೃತರಾದಾಗ ಮೊದಲ ಅಲೆಯ ವೇಳೆ ಹೇರಿದ್ದ ಈ ನಿರ್ಬಂಧಗಳು ಯಾರ ನೆನಪಿಗೂ ಬರಲೇ ಇಲ್ಲ.
ಹೀಗೆ ಕೋವಿಡ್ ನಿರ್ವಹಣೆಯ ಪ್ರತಿ ಹಂತದಲ್ಲಿ, ಪ್ರತಿ ವಲಯದಲ್ಲಿ ಎಲ್ಲ ಬಗೆಯ ತಪ್ಪುಗಳೇ ಆದವು. ಮೊದಲ ವರ್ಷ ಮುಗಿಯುತ್ತಿದ್ದಂತೆ ಯಾವುದೋ ಲೆಕ್ಕಾಚಾರವನ್ನಾಧರಿಸಿ ದೇಶದಲ್ಲಿ ಶೇ.70ಕ್ಕೂ ಹೆಚ್ಚು ಜನರಿಗೆ ಸೋಂಕು ತಗಲಿಯಾಗಿರುವುದರಿಂದ ಭಾರತವು ಕೊರೋನ ಯುದ್ಧವನ್ನು ಜಯಿಸಿದಂತಾಯಿತು ಎಂದು ಫೆಬ್ರವರಿ 2021ರಲ್ಲಿ ಪ್ರಧಾನಮಂತ್ರಿಗಳೇ ಘೋಷಿಸಿದ್ದಾಯಿತು. ಅದರ ಬೆನ್ನಿಗೆ ಅನೇಕ ಕಡೆ ಆಸ್ಪತ್ರೆಗಳಲ್ಲಿ ಮಾಡಲಾಗಿದ್ದ ಒಂದಷ್ಟು ಸೌಲಭ್ಯಗಳನ್ನೂ ತೆಗೆದುಹಾಕಲಾಯಿತು. ಎಲ್ಲರೂ ನಿರಾಳರಾದಾಗ ಅದುವರೆಗೆ ಕೊರೋನ ಸೋಂಕು ತಗಲಿರದೇ ಇದ್ದವರಿಗೆ ಮಾರ್ಚ್ 2021ರ ಹೊತ್ತಿಗೆ ಕೊರೋನ ಸೋಂಕತೊಡಗಿತು.
ಜನವರಿ 2021ರಲ್ಲಿ ಕೊರೋನ ಲಸಿಕೆಗಳಿಗೆ ಸರಿಯಾದ ಪರೀಕ್ಷೆಗಳು ಮುಗಿಯುವ ಮುನ್ನವೇ ತುರ್ತು ಪರವಾನಿಗೆ ನೀಡಲಾಯಿತು. ಮೊದಲಲ್ಲಿ ಆರೋಗ್ಯ ಸೇವೆಗಳವರಿಗೆ ನೀಡಿ, ಎರಡು ತಿಂಗಳ ಬಳಿಕ ಹಿರಿವಯಸ್ಕರಿಗೂ ನೀಡಲಾರಂಭಿಸಲಾಯಿತು. ಒಂದೆಡೆ ಕೊರೋನ ಮತ್ತೆ ಹರಡುತ್ತಿದ್ದಂತೆ ಲಸಿಕೆ ಹಾಕುವ ಕಾರ್ಯವೂ ಭರದಿಂದ ಸಾಗಿತು. ಆಗಲೇ ಸೋಂಕು ತಗಲಿದ್ದವರಲ್ಲಿ ರೋಗರಕ್ಷಣೆ ಬೆಳೆಯುವುದರಿಂದ ಲಸಿಕೆ ಹಾಕುವ ಅಗತ್ಯವಿರದಿದ್ದರೂ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಹೇಳಲಾಯಿತು. ಮೊದಲಲ್ಲಿ ಲಸಿಕೆಗೆ ಹಣ ಕೊಟ್ಟು ಪಡೆಯಬೇಕೆಂದ ಸರಕಾರವು, ಸರ್ವೋಚ್ಚ ನ್ಯಾಯಾಲಯದ ಆದೇಶದ ಬಳಿಕ ಉಚಿತವಾಗಿ ಕೊಡಲು ಒಪ್ಪಬೇಕಾಯಿತು. ಅಧಿಕೃತ ಪ್ರಕಟನೆಗಳಲ್ಲಿ ಲಸಿಕೆ ಪಡೆಯುವುದು ಅವರವರ ಇಚ್ಛೆಗೆ ಬಿಟ್ಟದ್ದೆಂದು ಹೇಳಲಾಗಿತ್ತಾದರೂ, ತಳಮಟ್ಟದಲ್ಲಿ ಲಸಿಕೆಯಿಲ್ಲದೆ ಪ್ರವೇಶವಿಲ್ಲ, ಪಡಿತರವಿಲ್ಲ ಎಂಬಿತ್ಯಾದಿ ಕಾರಣಗಳನ್ನು ಹೇಳಿ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸಲಾಯಿತು. ಅನೇಕರು ಇದರ ವಿರುದ್ಧ ನ್ಯಾಯಾಯಗಳಿಗೆ ಹೋದರು, ಕೊನೆಗೆ ಸರ್ವೋಚ್ಚ ನ್ಯಾಯಾಲಯವು ಜೇಕಬ್ ಪುಳಿಯಿಲ್ ಅವರ ಅರ್ಜಿಯ ಮೇಲೆ ಮೇ 2, 2022ರಂದು ಆದೇಶ ಹೊರಡಿಸಿ ಲಸಿಕೆ ಹಾಕಿಸಿಕೊಳ್ಳುವುದು ಐಚ್ಚಿಕವೆಂದು ಸ್ಪಷ್ಟ ಪಡಿಸಿತು. ಆದರೆ ಅಷ್ಟರೊಳಗೆ ಶೇ.90ಕ್ಕೂ ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡಾಗಿತ್ತು. ವಿಶ್ವದ ಅತಿ ದೊಡ್ಡ ಜನಸಂಖ್ಯೆಯ ದೇಶದಲ್ಲಿ ವಿಶ್ವದ ಅತಿ ದೊಡ್ಡ ಲಸಿಕಾ ಕಾರ್ಯಕ್ರಮದಲ್ಲಿ 200 ಕೋಟಿ ಲಸಿಕೆ ಚುಚ್ಚಲಾಯಿತು ಎಂದು ನಗುತ್ತಾ ಬೀಗುವ ಪಟಗಳಿದ್ದ ಜಾಹೀರಾತುಗಳನ್ನು ಎಲ್ಲೆಡೆ ಅಂಟಿಸಲಾಯಿತು.
ಕೋವಿಡ್ ಕಾಲದುದ್ದಕ್ಕೂ ಶಾಲೆ-ಕಾಲೇಜುಗಳನ್ನು ಅನಗತ್ಯವಾಗಿ ಮುಚ್ಚಲಾಯಿತು, ಆನ್‌ಲೈನ್ ಶಿಕ್ಷಣದ ನೆಪದಲ್ಲಿ ಎಲ್ಲ ಮಕ್ಕಳ ಕೈಗೂ ಸ್ಮಾರ್ಟ್ ಫೋನ್ ಕೊಡಲಾಯಿತು. ಶಾಲೆಗಳಲ್ಲಿ ದೊರೆಯುತ್ತಿದ್ದ ಬಿಸಿಯೂಟ, ಆರೋಗ್ಯ ಪಾಲನೆ, ಆಪ್ತ ಸಮಾಲೋಚನೆಗಳು ಇಲ್ಲವಾದವು. ಇವುಗಳಿಂದ ಮಕ್ಕಳ ದೈಹಿಕ, ಮಾನಸಿಕ, ಶೈಕ್ಷಣಿಕ, ಬೌದ್ಧಿಕ ಬೆಳವಣಿಗೆಗಳಿಗೆ ಶಾಶ್ವತವಾದ ಹಾನಿಯಾಗಲಿದೆ ಎಂಬ ಎಚ್ಚರಿಕೆಗಳನ್ನು ಕಡೆಗಣಿಸಲಾಯಿತು. ಮಾಧ್ಯಮಗಳು, ಎಲ್ಲಾ ರಾಜಕೀಯ ಪಕ್ಷಗಳು ಈ ಅಕ್ಷಮ್ಯ ತಪ್ಪಿಗೆ ಜೊತೆಯಾದರು, ಹೆತ್ತವರೂ ಕೂಡ ವಿಪರೀತವಾಗಿ ಭಯಗೊಂಡು ಪ್ರಶ್ನಿಸುವ ಧೈರ್ಯವನ್ನೇ ತೋರಲಿಲ್ಲ.
ಹೀಗೆ ಒಂದರ ನಂತರ ಒಂದು ಅವೈಜ್ಞಾನಿಕ ಅವಾಂತರಗಳ ಬಳಿಕವೂ ಅವೇ ‘ತಜ್ಞರಿಂದ’, ಅವೇ ‘ಕಾರ್ಯಪಡೆಗಳಿಂದ’ ಜನರನ್ನು ಹೆದರಿಸುವ, ನಿರ್ಬಂಧಿಸುವ ಕೆಲಸಗಳು ಮುಂದುವರಿದವು. ಕೊರೋನ ಮೂರನೇ ಅಲೆ ಬರುತ್ತದೆ, ಮಕ್ಕಳನ್ನು ವಿಶೇಷವಾಗಿ ಕಾಡುತ್ತದೆ ಎಂದು ಹೆದರಿಸಿ ಮತ್ತೊಂದಷ್ಟು ಕಾಲ ಶಾಲೆಗಳನ್ನು ಮುಚ್ಚಲಾಯಿತು, ದಿನಕ್ಕೆ ಒಂದೂವರೆ ಲಕ್ಷ ಮಕ್ಕಳು ಸೋಂಕಿತರಾಗುವುದಕ್ಕೆ ಸಿದ್ಧತೆಗಾಗಿ ಆಸ್ಪತ್ರೆಗಳಲ್ಲಿ ಮಕ್ಕಳ ಐಸಿಯು ಮಾಡಲಾಗುವುದೆಂದು ಹೇಳಲಾಯಿತು, ಮಕ್ಕಳಿಗೆ ಮತ್ತಷ್ಟು ಮಾಸ್ಕ್ ಹಾಕಿಸಿ ಲಸಿಕೆಯನ್ನೂ ನೀಡಲಾರಂಭಿಸಲಾಯಿತು. ಮೂರನೇ ಅಲೆ ಬರಲೇ ಇಲ್ಲ, ಮಕ್ಕಳಿಗೆ ಏನೂ ಆಗಲೂ ಇಲ್ಲ. ಆ ಬಳಿಕ ನಾಲ್ಕನೇ ಅಲೆ ಎಂದು ಹೆದರಿಸಲಾಯಿತು, ಡಿಸೆಂಬರ್ 2022ಕ್ಕೆ ಚೀನಾದಲ್ಲಿ ಸೋಂಕು ಹರಡಿದಾಗ ಅಲ್ಲಿಂದ ಬರುವವರಿಗೆ ಪರೀಕ್ಷೆಯಾಗಬೇಕು, ಎರಡು ವಾರ ಪ್ರತ್ಯೇಕವಾಗಿರಬೇಕು ಎಂದೆಲ್ಲ ಹೇಳಲಾಯಿತು, ಎರಡೇ ದಿನಗಳಲ್ಲಿ ಅವು ಕೂಡ ಠುಸ್ ಆದವು.
ಇಷ್ಟೆಲ್ಲ ಅವಾಂತರಗಳನ್ನು ಮಾಡುತ್ತಲೇ ಹೋದರೂ ಸರಕಾರಗಳು ತಮ್ಮ ಕ್ರಮಗಳನ್ನು ಸಮರ್ಥಿಸಿಕೊಂಡದ್ದಷ್ಟೇ ಅಲ್ಲ, ಹೊಗಳಿಕೊಂಡವು, ತಮ್ಮಿಂದಾಗಿಯೇ ಜನರೆಲ್ಲರೂ ಬದುಕುಳಿದರು ಎಂದು ಕೊಚ್ಚಿಕೊಂಡವು. ಅದಕ್ಕೆ ಮಾಧ್ಯಮಗಳೂ, ಸರಕಾರದ ಬೆಂಬಲಿಗರೂ ಜೊತೆಯಾದರು. ಕೋವಿಡ್ ಕಾಲದುದ್ದಕ್ಕೂ ಸರಕಾರವನ್ನು ಪ್ರಶ್ನಿಸದೇ ಉಳಿದಿದ್ದ, ಅಥವಾ ಬೆಂಬಲಿಸಿಯೂ ಇದ್ದ, ಪ್ರತಿಪಕ್ಷಗಳು ಮತ್ತು ‘ವಿಚಾರವಾದಿ’ಗಳು ಏನೂ ಹೇಳಲಾಗದೆ ತೆಪ್ಪಗಿರಬೇಕಾಯಿತು.
ಕೊರೋನ ಕಲಿಸಿದ ಸತ್ಯಗಳು
ತಥಾಕಥಿತ ತಜ್ಞರೂ, ಅಂಥವರ ‘ಕಾರ್ಯಪಡೆ’ಗಳೂ, ಅವನ್ನು ನೇಮಿಸಿದ ಸರಕಾರಗಳೂ ಕೈಗೊಂಡ ಈ ಕ್ರಮಗಳು ತೀರಾ ಅವೈಜ್ಞಾನಿಕವಾಗಿದ್ದವು, ಅನಗತ್ಯವಾಗಿದ್ದವು, ಅಮಾನವೀಯವಾಗಿದ್ದವು ಎನ್ನುವುದಕ್ಕೆ ಮೊದಲಿನಿಂದಲೇ ಸಾಕ್ಷ್ಯಾಧಾರಗಳಿದ್ದವು, ಅವನ್ನು ಈ ಮೂರು ವರ್ಷಗಳಲ್ಲಿ ಕಂಡುಬಂದಿರುವ ಆ ಕ್ರಮಗಳ ಫಲಿತಾಂಶಗಳು ಇನ್ನಷ್ಟು ಪುಷ್ಟೀಕರಿಸಿವೆ. ಲಾಕ್ ಡೌನ್, ಶಾಲೆ ಮುಚ್ಚುವಿಕೆ, ಗಡಿ ಮುಚ್ಚುವಿಕೆ, ಜನರು ಒಟ್ಟುಗೂಡುವುದರ ಮೇಲಿನ ನಿರ್ಬಂಧಗಳು ಇವು ಯಾವುವೂ ಕೂಡ ಕೋವಿಡ್‌ನಿಂದ ಸಾವುಗಳಾಗದಂತೆ ತಡೆಯುವಲ್ಲಿ ಯಾವುದೇ ಪರಿಣಾಮವನ್ನು ಬೀರಲಿಲ್ಲ ಎಂದು ಅಮೆರಿಕದ ಪ್ರತಿಷ್ಠಿತ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ತಜ್ಞರ ವರದಿಯಲ್ಲಿ ಹೇಳಲಾಗಿದೆ. ಲಾಕ್ ಡೌನ್ ಮಾಡುವುದು ಅಸಂಬದ್ಧವೆಂದೂ, ಸಾಂಕ್ರಾಮಿಕಗಳ ನಿರ್ವಹಣೆಯಲ್ಲಿ ಅವುಗಳ ಬಳಕೆಯನ್ನು ತಿರಸ್ಕರಿಸಬೇಕೆಂದೂ, ಅವುಗಳಿಂದಾಗಿ ಆರ್ಥಿಕ ಚಟುವಟಿಕೆಗಳಿಗೆ ಹೊಡೆತವುಂಟಾಯಿತು, ನಿರುದ್ಯೋಗ ಹೆಚ್ಚಿತು, ಕಲಿಕೆಗೆ ಅಡ್ಡಿಯಾಯಿತು, ಕೌಟುಂಬಿಕ ಹಿಂಸೆಯೂ ಹೆಚ್ಚಿತು, ಪ್ರಜಾಸತ್ತಾತ್ಮಕ ವ್ಯವಸ್ಥೆಗಳು ನಿರ್ಬಂಧಿತವಾದವು, ರಾಜಕೀಯ ಆಸ್ಥಿರತೆಗೆ ಕಾರಣವಾಯಿತು ಎಂದೂ ಆ ವರದಿಯಲ್ಲಿ ಹೇಳಲಾಗಿದೆ. ಶಾಲೆ-ಕಾಲೇಜುಗಳನ್ನು ಮುಚ್ಚಿದ್ದರಿಂದ ಮಕ್ಕಳ ಮೇಲೆ, ಮತ್ತವರ ಕಲಿಕೆಯ ಮೇಲೆ, ಅಪಾರವಾದ ಹಾಗೂ ಶಾಶ್ವತವಾದ ಹಾನಿಯಾಗಿರುವ ಬಗ್ಗೆ ಅನೇಕ ವರದಿಗಳೂ ಪ್ರಕಟವಾಗಿವೆ. ಯಾವುದೇ ವಿಧದ ಮಾಸ್ಕ್ ಬಳಕೆಯಿಂದ ಕೊರೋನ ಹರಡುವುದನ್ನು ತಡೆಯಲಾಗದು, ಸಾನಿಟೈಸರ್ ಬಳಕೆಯಿಂದಲೂ ಹೆಚ್ಚೇನೂ ಪ್ರಯೋಜನವಿಲ್ಲ ಎನ್ನುವುದೂ ಈಗ ಸಾಬೀತಾಗಿಬಿಟ್ಟಿದೆ. ಕೋವಿಡ್ ಚಿಕಿತ್ಸೆಗೆ ಸೂಚಿಸಲಾಗಿದ್ದ ಔಷಧಗಳು ನಿರುಪಯುಕ್ತವಾಗಿದ್ದವೆನ್ನುವುದೂ ದೃಢಪಟ್ಟಿದೆ. ಅವಸರವಸರವಾಗಿ, ಸರಿಯಾದ ಪರೀಕ್ಷೆಗಳೂ ಮುಗಿಯದೆ ಕೊಡಿಸಲಾದ ಲಸಿಕೆಗಳ ಅಡ್ಡ ಪರಿಣಾಮಗಳ ಬಗ್ಗೆ ಅನೇಕ ವರದಿಗಳು ಪ್ರಕಟವಾಗಿದ್ದು, ಅದಾಗಲೇ ಸೋಂಕಿತರಾದವರಲ್ಲಿ ಉತ್ತಮ ರೋಗರಕ್ಷಣೆಯಿರುತ್ತದೆಂದೂ, ಅಂಥವರಿಗೆ ಲಸಿಕೆ ನೀಡುವುದರಿಂದ ಹೆಚ್ಚೇನೂ ಪ್ರಯೋಜನವಿಲ್ಲವೆಂದೂ ಅಧ್ಯಯನಗಳೂ ದೃಢಪಡಿಸಿವೆ.
ಆದರೆ ಅವೈಜ್ಞಾನಿಕ ಕೋವಿಡ್ ನೀತಿಗಳನ್ನು ಹೇರಿದ್ದ ಸರಕಾರ ಮತ್ತದರ ಸಮಿತಿಗಳಾಗಲೀ, ಅವನ್ನು ಬೆಂಬಲಿಸಿ ಬೊಬ್ಬಿರಿದಿದ್ದ ಮಾಧ್ಯಮಗಳಾಗಲೀ, ವೈದ್ಯಕೀಯ ಸಂಘಟನೆಗಳಾಗಲೀ ಈ ಸಾಕ್ಷ್ಯಾಧಾರಗಳತ್ತ ತಿರುಗಿಯೂ ನೋಡಿದಂತಿಲ್ಲ, ತಪ್ಪು ಮಾಡಿರುವುದನ್ನು ಒಪ್ಪಿಯೂ ಇಲ್ಲ. ಕೋವಿಡ್ ಲಸಿಕೆಗಳ ಅಡ್ಡ ಪರಿಣಾಮದಿಂದ ಮೃತರಾದ ಇಬ್ಬರು ಯುವತಿಯರ ಹೆತ್ತವರು ಪರಿಹಾರಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಲೇರಿದ್ದು, ಲಸಿಕೆ ಪಡೆಯುವುದು ಐಚ್ಛಿಕವಾಗಿತ್ತೆಂದೂ, ಅಂಥ ಪರಿಹಾರ ನೀಡುವುದಕ್ಕೆ ಕೇಂದ್ರ ಸರಕಾರವಾಗಲೀ, ಲಸಿಕೆ ತಯಾರಕರಾಗಲೀ ಹೊಣೆಯಲ್ಲವೆಂದೂ ಕೇಂದ್ರ ಸರಕಾರವು ನ್ಯಾಯಾಲಯದಲ್ಲಿ ಹೇಳಿಯಾಗಿದೆ.
ಒಟ್ಟಿನಲ್ಲಿ ಕೊರೋನ ಎಂಬ ಸೋಂಕನ್ನು ನಿಭಾಯಿಸುವಲ್ಲಿ ಸರಕಾರವು ಅವೈಜ್ಞಾನಿಕವಾದ, ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕ್ರಮಗಳನ್ನು ಜನರ ಮೇಲೆ ಹೇರಿತು, ತಜ್ಞರನ್ನು ಕಡೆಗಣಿಸಿ ತನಗೆ ಆಪ್ತರಾದವರನ್ನೇ ತಜ್ಞರೆಂದು ಪರಿಗಣಿಸಿ ಪರಸ್ಪರ ಅನುಕೂಲಕರವಾದ ನೀತಿಗಳನ್ನು ಹೇರಿತು, ವೈದ್ಯರೂ, ಅವರ ಸಂಘಟನೆಗಳೂ ಸರಕಾರದ ಈ ತಪ್ಪುಗಳನ್ನು ಪ್ರಶ್ನಿಸುವ ಬದಲಿಗೆ ಪ್ರಶ್ನಾತೀತವಾಗಿ ಬೆಂಬಲಿಸಿದರು, ಮಾಧ್ಯಮಗಳೂ ಸರಕಾರದ ಪರವಾಗಿ ಕಿರುಚಾಡಿ ಜನರನ್ನೇ ಅಪರಾಧಿಗಳೆಂದು ಬಿಂಬಿಸಿ ಬೆದರಿಸಿದವು, ವಿರೋಧ ಪಕ್ಷಗಳು ಕೂಡ ತಮ್ಮ ಪಾತ್ರವನ್ನು ನಿರ್ವಹಿಸುವಲ್ಲಿ ಎಡವಿದವು. ಈ ತಪ್ಪುಗಳನ್ನು ಪ್ರಶ್ನಿಸಿದ, ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ ಕೆಲವೇ ಕೆಲವು ವೈದ್ಯರನ್ನು ಮತ್ತು ತಜ್ಞರನ್ನು ಹೀಗಳೆಯಲಾಯಿತು, ಅವರು ಹೊಂದಿದ್ದ ಜವಾಬ್ದಾರಿಯುತ ಸ್ಥಾನಗಳಿಂದ ಕಿತ್ತೆಸೆಯಲಾಯಿತು, ಫೇಸ್ ಬುಕ್ ಮತ್ತು ಟ್ವಿಟರ್ ಗಳಿಂದ ನಿಷೇಧಿಸಲಾಯಿತು, ಕೆಲವರ ಮೇಲೆ ಪೋಲೀಸ್ ಪ್ರಕರಣಗಳೂ ದಾಖಲಾದವು. ಇದೆಲ್ಲವೂ ಕರ್ನಾಟಕ ರಾಜ್ಯ, ಭಾರತ ದೇಶಗಳಲ್ಲಿ ಮಾತ್ರ ಆದದ್ದಲ್ಲ, ಅಮೆರಿಕಾ ಸೇರಿದಂತೆ ಅನೇಕ ದೇಶಗಳಲ್ಲೂ ಆಯಿತು.
ಸಾಕ್ಷ್ಯಾಧಾರಿತ ನೀತಿ ನಿರೂಪಣೆಯೊಂದೇ ದಾರಿ
ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಹೊಸ ಸರಕಾರವನ್ನು ಆಯ್ಕೆ ಮಾಡಬೇಕಾಗಿರುವಾಗ ಕೊರೋನ ಕಾಲದಲ್ಲಿ ನಡೆದ ಈ ಅಚಾತುರ್ಯಗಳನ್ನು ಪರಿಗಣಿಸಬೇಡವೇ? ಸಾಕ್ಷ್ಯಾಧಾರಿತವಾಗಿ, ವೈಜ್ಞಾನಿಕವಾಗಿ, ಮಾನವೀಯವಾಗಿ, ಜನಹಿತಕ್ಕಾಗಿ ಆಡಳಿತ ನಡೆಸಬಲ್ಲವರನ್ನು ಆಯ್ಕೆ ಮಾಡಬೇಡವೇ? ಮುಂಬರುವ ಸರಕಾರವು ಸಾಕ್ಷ್ಯಾಧಾರಿತವಾಗಿಯೇ ನೀತಿ ನಿರೂಪಣೆ ಮಾಡಬೇಕೇ ಹೊರತು ಜಾತಿ-ಮತ-ಮಠಗಳ ಹೆಸರಲ್ಲಿ ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ಆಡಳಿತ ನಡೆಸಬಾರದು ಎಂಬ ಸ್ಪಷ್ಟ ಸಂದೇಶವನ್ನು ಮತಾಕಾಂಕ್ಷಿ ರಾಜಕಾರಣಿಗಳಿಗೆ ನೀಡಬೇಡವೇ?
ಸಾಕ್ಷ್ಯಾಧಾರಿತ ನೀತಿನಿರೂಪಣೆ ಮಾಡಬೇಕಾದರೆ ಸರಕಾರದ ಬಳಿ ರಾಜ್ಯದ ಜನತೆಯ ಬಗ್ಗೆ ಸಕಲ ಮಾಹಿತಿಯೂ ಇರಬೇಕಾಗುತ್ತದೆ, ಸಾಕ್ಷ್ಯಾಧಾರಿತವಾಗಿ, ಜನಪರವಾಗಿ ಸಲಹೆ ನೀಡಬಲ್ಲ ತಜ್ಞರನ್ನು ಬಳಸಿಕೊಳ್ಳಬೇಕಾಗುತ್ತದೆ, ಇವು ಸಾಧ್ಯವಾಗುವಂತೆ ಮಾಧ್ಯಮಗಳು, ವಿರೋಧ ಪಕ್ಷಗಳು ಮತ್ತು ಮತದಾರರು ಸರಕಾರದ ಮೇಲೆ ಸದಾ ಕಣ್ಣಿಟ್ಟು ಎಚ್ಚರಿಸುತ್ತಿರಬೇಕಾಗುತ್ತದೆ. ಆದರೆ ಕಳೆದ ಐದಾರು ವರ್ಷಗಳಲ್ಲಿ ಕೇವಲ ಗಲಾಟೆಗಳಲ್ಲೇ ಕಾಲಹರಣ ಮಾಡಲಾಗಿದೆ, ಮಾಹಿತಿ ಕ್ರೋಢೀಕರಣವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ, ಲಭ್ಯ ವಾಸ್ತವಾಂಶಗಳನ್ನೂ ಬಚ್ಚಿಟ್ಟು ಸುಳ್ಳುಗಳನ್ನೇ ಪ್ರಚಾರ ಮಾಡಲಾಗುತ್ತಿದೆ. ಅಂತಲ್ಲಿ ವಸ್ತುನಿಷ್ಠ ಆಡಳಿತದ ಬದಲಿಗೆ ಕೇವಲ ಭಾವನಾತ್ಮಕ ಯೋಜನೆಗಳು, ಪ್ರತಿಮೆಗಳ ಸ್ಥಾಪನೆ, ರಸ್ತೆ-ಪ್ರದೇಶಗಳ ಮರುನಾಮಕರಣ ಮುಂತಾದವೇ ರಾರಾಜಿಸುತ್ತಿರುತ್ತವೆ.
ನೂರೈವತ್ತು ವರ್ಷಗಳಿಂದ ಪ್ರತೀ 10 ವರ್ಷದಲ್ಲೊಮ್ಮೆ ನಡೆಯುತ್ತಲೇ ಬಂದಿದ್ದ ಜನಗಣತಿಯನ್ನು ನಡೆಸುವ ಆಸಕ್ತಿಯಾಗಲೀ, ಸಾಮರ್ಥ್ಯವಾಗಲೀ ನಮ್ಮ ಸರಕಾರಕ್ಕೆ ಇದ್ದಂತಿಲ್ಲ; ಸ್ವಾತಂತ್ರ್ಯಾನಂತರದಲ್ಲಿ ಹೀಗಾಗಿರುವುದು ಇದೇ ಮೊದಲಿಗೆ 2021ರ ಜನಗಣತಿ ನಡೆದಿಲ್ಲ, ನಡೆಯುವ ಸೂಚನೆಗಳೂ ಇಲ್ಲ. ಸಿಎಎ ತಂದು, ಎನ್‌ಪಿಆರ್ ಎಂದು ಬೊಬ್ಬೆ ಹಾಕಿ, ದೇಶದಿಂದ ಓಡಿಸಲ್ಪಡುವವರಿಗಾಗಿ ದಿಗ್ಬಂಧನ ಕೇಂದ್ರಗಳನ್ನು ಕಟ್ಟಿ, ಸಿಎಎಯಲ್ಲಿರುವ ತಪ್ಪುಗಳ ಕಾರಣಕ್ಕೆ ಅದಕ್ಕೆ ನಿಯಮಗಳನ್ನೇ ರೂಪಿಸಲು ವಿಫಲರಾಗಿ, ನಡುವಲ್ಲಿ ಕೊರೋನ ನಿಭಾವಣೆಯಲ್ಲೂ ಎಡವಿ ಜನಗಣತಿಯೇ ಇಲ್ಲವಾಯಿತು. ಅಂಥ ಮಹತ್ವದ ಮಾಹಿತಿಯನ್ನೇ ಹೊಂದದೆ ಯಾವುದೇ ಯೋಜನೆಗಳನ್ನು ವೈಜ್ಞಾನಿಕವಾಗಿ ರೂಪಿಸಲು ಸಾಧ್ಯವಾಗದು, ಆದರೆ ಅಂಥ ಅಗತ್ಯವೇ ನಮ್ಮ ಸರಕಾರಕ್ಕೆ ಇದ್ದಂತಿಲ್ಲ.
ಜಾತಿಗಣತಿಯನ್ನು ನಡೆಸಬೇಕೆಂಬ ಬೇಡಿಕೆ ಹೆಚ್ಚುತ್ತಿದ್ದರೂ ಸ್ಥಾಪಿತ ಹಿತಾಸಕ್ತಿಗಳ ವಿರೋಧದಿಂದಾಗಿ ಅದೂ ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಸಿದ್ಧರಾಮಯ್ಯ ಸರಕಾರ 2015ರಲ್ಲೇ ಜಾತಿಗಣತಿ ನಡೆಸಿತ್ತಾದರೂ ಅದರ ವರದಿಯನ್ನು ಬಹಿರಂಗಪಡಿಸದಂತೆ ತಡೆಯಲಾಗಿದೆ. ಅಂದರೆ ಹಿಂದುಳಿದ ಜನವರ್ಗಗಳ ಏಳಿಗೆಗೆ ಯೋಜನೆಗಳನ್ನು ರೂಪಿಸುವುದಕ್ಕೆ ಅವರ ಮಾಹಿತಿಯನ್ನೇ ಇಲ್ಲದಂತೆ ಮಾಡುವ ಹುನ್ನಾರಗಳು ಮೇಲುಗೈ ಸಾಧಿಸುತ್ತಲೇ ಬಂದಿವೆ. ಹೀಗೆ ಸಾಕ್ಷ್ಯಾಧಾರಿತವಾಗಿ ನೀತಿ ನಿರೂಪಿಸುವ ಬದಲಿಗೆ ಒಂದೊಂದು ಜಾತಿಯ ಸ್ವ-ಘೋಷಿತ ನಾಯಕರನ್ನೂ, ಅಲ್ಲಲ್ಲಿ ವಾರಕ್ಕೊಬ್ಬರಂತೆ ಉದ್ಭವಿಸುತ್ತಿರುವ ಜಾತಿ ಮಠಾಧಿಪತಿಗಳನ್ನೂ ಮುಂದಿಟ್ಟು ಮಠಗಳಿಗೆ, ಮಂದಿರಗಳಿಗೆ, ಪ್ರತಿಮೆಗಳಿಗೆ, ಭವನಗಳಿಗೆ, ಸಮಾವೇಶಗಳಿಗೆ ಕೋಟಿಗಟ್ಟಲೆ ಅನುದಾನ ನೀಡುವುದೇ ಅಭಿವೃದ್ಧಿ ಯೋಜನೆಯೆಂಬಂಥ ಸ್ಥಿತಿಗೆ ತಲುಪಿದ್ದೇವೆ.
ಜಾತಿಗೊಂದು ನಾಯಕ, ಸಾಧಕರ ಪ್ರತಿಮೆ ನಿಲ್ಲಿಸುವ ಕೆಲಸವು ಆ ಸಾಧಕರಿಗೆ ಮಾಡುತ್ತಿರುವ ಅವಮಾನವೆಂದು ಹೇಳುವವರೇ ಇಲ್ಲವಾಗಿದೆ. ಸಾಧಕರು, ಸುಧಾರಕರು, ಹೋರಾಟಗಾರರು, ಕವಿಗಳು, ಮಹಾತ್ಮರು ಯಾರೇ ಇರಲಿ, ಅವರು ತಮ್ಮ ಜಾತಿಗಾಗಿ ಹೋರಾಡಿದವರಲ್ಲ, ಬದಲಿಗೆ ಇಡೀ ಸಮಾಜಕ್ಕಾಗಿ, ಸಮಷ್ಠಿಯ ಹಿತಕ್ಕಾಗಿ, ನಾಡಿಗಾಗಿ, ದೇಶಕ್ಕಾಗಿ ದುಡಿದವರು, ಅಂಥವರನ್ನು ಯಾವುದೇ ಜಾತಿಗೆ ಕಟ್ಟಿ ಹಾಕುವುದು ಅವಮಾನವಲ್ಲದೆ ಮತ್ತೇನು?
ಇಂದು ಕಾಂಕ್ರೀಟ್ ಸುರಿಯುವುದನ್ನೇ ಅಭಿವೃದ್ಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಎಕ್ಸ್‌ಪ್ರೆಸ್ ಹೆದ್ದಾರಿಗಳು, ನೂರು ಕಿಮೀಗೊಂದು ಅಂತರರಾಷ್ಟ್ರೀಯ ವಿಮಾನತಾಣ, ಮೆಟ್ರೋ, ನೀರು ಹೋಗಲು ಸಾಧ್ಯವೇ ಇಲ್ಲದ ನೀರು ಸಾಗಣೆಯ ಯೋಜನೆಗಳು, ಇತ್ಯಾದಿಯಾಗಿ ಬೇಕಾಬಿಟ್ಟಿಯಾಗಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಇವುಗಳ ಅಗತ್ಯ, ಧಾರಣಾ ಸಾಮರ್ಥ್ಯ, ಪ್ರಯೋಜನ-ಲಾಭಗಳು, ಪರಿಸರದ ಮೇಲೆ ಸಾಧಕ-ಬಾಧಕಗಳು ಮುಂತಾದವನ್ನು ಪರಿಗಣಿಸುವುದಕ್ಕಿಂತ ಹೆಚ್ಚಾಗಿ ಕಾಂಕ್ರೀಟಿನಿಂದ ಸುರಿಯುವ ನಲವತ್ತೋ ಅರುವತ್ತೋ ಪಾಲೇ ಮುಖ್ಯವಾಗಿರುವಂತಿದೆ. ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಹೊಡೆಯುವಿಕೆಯೂ ಸ್ಮಾರ್ಟ್ ಆಗಿಯೇ ನಡೆದಿರುವಂತಿದೆ.
ಕೊರೋನ ಕಾಲದಲ್ಲಿ ಆಸ್ಪತ್ರೆ-ಐಸಿಯುಗಳಿಗೆ ಕಾಯಕಲ್ಪ ನೀಡಲು ಕೋಟಿಗಟ್ಟಲೆ ವ್ಯಯಿಸಿದ್ದಾಗಿ ಹೇಳಲಾಗಿತ್ತು. ಅದು ನಿಜವೇ ಆಗಿದ್ದರೆ ಕೋವಿಡ್ ಮುಗಿದ ಬಳಿಕವೂ ಆ ಸೌಲಭ್ಯಗಳು ಲಭ್ಯವಿರಬೇಕಿತ್ತು. ಆದರೆ ಅಂಥದ್ದೇನೂ ಕಾಣಸಿಗುವುದಿಲ್ಲ. ರಾಜ್ಯದ ಆರೋಗ್ಯ ಕೇಂದ್ರಗಳಲ್ಲೂ, ಆಸ್ಪತ್ರೆಗಳಲ್ಲೂ ವೈದ್ಯರು ಮತ್ತು ಇತರ ಸಿಬ್ಬಂದಿಯ ಕೊರತೆ ಮುಂದುವರಿದಿದೆ, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಇದು ಇನ್ನಷ್ಟು ಗಂಭೀರವಾಗಿದೆ. ಗುರುತು ಚೀಟಿ ಇಲ್ಲದ ಕಾರಣಕ್ಕೆ ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿ ಆಕೆಯೂ, ಗರ್ಭಸ್ಥ ಶಿಶುಗಳೂ ಸಾವನ್ನಪ್ಪಿದ್ದು, ಹೆರಿಗೆಗೆ ಲಂಚ ಕೇಳಿ ದೊರೆಯದ ಕಾರಣಕ್ಕೆ ಹೆರಿಗೆ ಮಾಡಿಸದೆ ಸಾವುಂಟಾದದ್ದು, ಬೇರೆ ಸಮಸ್ಯೆಗಳಿಗೂ, ಅಪಘಾತಗಳಿಗೂ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರೆಯದಿರುವುದು ಮುಂತಾದವು ಪ್ರತಿನಿತ್ಯವೂ ವರದಿಯಾಗುತ್ತಿವೆ.
ಶಾಲಾ ಶಿಕ್ಷಣದ ದುರ್ಗತಿಯ ಬಗ್ಗೆ ಬರೆದಷ್ಟೂ ಮುಗಿಯದು. ರಾಜ್ಯದ ಸರಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಕಟ್ಟಡಗಳಿಲ್ಲ, ಇದ್ದ ಕಟ್ಟಡಗಳಿಗೆ ಸುಣ್ಣ-ಬಣ್ಣ-ಸುಸ್ಥಿತಿ ಇಲ್ಲ, ಮಕ್ಕಳಿಗೆ ಪುಸ್ತಕಗಳಿಲ್ಲ, ಇರುವ ಪುಸ್ತಕಗಳ ಪಠ್ಯಗಳು ಅಯೋಗ್ಯರ ಪರಿಷ್ಕರಣೆಯಿಂದಾಗಿ ಸರಿಯಿಲ್ಲ, ಕೋವಿಡ್ ಬಳಿಕ ಪಾಠಗಳೇ ನಡೆಯುತ್ತಿಲ್ಲ, ಕಲಿಕಾ ಚೇತರಿಕೆಯೇ ಚೇತರಿಸಲಿಲ್ಲ, ಮಕ್ಕಳ ಕಲಿಕೆ ಮೂರ್ನಾಲ್ಕು ವರ್ಷ ಹಿಮ್ಮೆಟ್ಟಿದರೂ ಚಿಣ್ಣರಿಗೆ ಎಲ್ಲೂ ಇಲ್ಲದ ಪರೀಕ್ಷೆಗಳನ್ನು ಮಾಡಿ ಹಿಂಸಿಸುವುದಕ್ಕೆ ಮಂತ್ರಿಗಳು ಹಠ ಬಿಡುವುದಿಲ್ಲ, ಇಷ್ಟೆಲ್ಲ ದುರವಸ್ಥೆಗಳಿದ್ದರೂ ಪೋಷಕರಾಗಲೀ, ಶಾಲಾಭಿವೃದ್ಧಿ ಸಮಿತಿಗಳವರಾಗಲೀ ಒಂದಕ್ಷರ ಸೊಲ್ಲೆತ್ತುವುದಿಲ್ಲ ಎಂಬುದು ಇಂದಿನ ವಾಸ್ತವವಾಗಿದೆ.
ಶಿಕ್ಷಕರನ್ನೂ, ವೈದ್ಯರನ್ನೂ ನೇಮಿಸಿದರೆ ಅವರ ಸಂಬಳಗಳಿಂದ 40-60 ಹೊಡೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೋ ಏನೋ, ಕಾಂಕ್ರೀಟಿಗೆ ಸುರಿದು ಪಾಲು ಪಡೆಯುವುದಷ್ಟೇ ಅಭಿವೃದ್ಧಿ ಎನ್ನುವಂತಾಗಿದೆ. ಜನರೂ ಭ್ರಷ್ಟರಾಗಿ ಭ್ರಷ್ಟರನ್ನೇ ಆಯ್ಕೆ ಮಾಡುವಂತಾಗಿದೆ. ಅಂತಲ್ಲಿ, ಇಂದಿಗೆ, ಮುಂದಿಗೆ ಒಳಿತಾಗಬೇಕಾದರೆ ವೈಜ್ಞಾನಿಕವಾದ, ಸಾಕ್ಷ್ಯಾಧಾರಿತವಾದ ನೀತಿ ನಿರೂಪಣೆ ಸಾಧ್ಯವಾಗಬೇಕು, ಅದಾಗಬೇಕಿದ್ದರೆ ವೈಜ್ಞಾನಿಕ ಮನೋವೃತ್ತಿಯ ಆಡಳಿತ ಬರಬೇಕು, ಅದಾಗಬೇಕಿದ್ದರೆ ಜನರಲ್ಲಿ ವೈಜ್ಞಾನಿಕ ಮನೋವೃತ್ತಿ ಬಲಿಯಬೇಕು. ಕೋವಿಡ್ ಕಾಲದಲ್ಲಿ ಮೇಲಿದ್ದವರು ಹೇಳಿದ್ದನ್ನು, ಮಾಡಿದ್ದನ್ನು ಪ್ರಶ್ನಿಸದೆ, ಪ್ರತಿಭಟಿಸದೆ ಎಲ್ಲಾ ಬಗೆಯ ಕಷ್ಟಗಳಿಗೀಡಾದುದನ್ನು ಜನರು ಮರೆಯದೆ ವಿಚಾರವಂತರಾಗಿ ಮತ ನೀಡಿದರೆ ಜನಪರವಾದ ಆಡಳಿತವನ್ನು ಪಡೆಯುವುದು ಕಷ್ಟವೇನಲ್ಲ. ಆದರೆ ಪ್ರಜೆಗಳು ಸತ್ತವರಂತೆ ವರ್ತಿಸಿದರೆ ಪ್ರಜಾಸತ್ತೆ ಸತ್ತೇ ಹೋಗುತ್ತದೆ.
ಹೊಸತು ಪತ್ರಿಕೆ ಎಪ್ರಿಲ್ 2023
Leave a Reply