ಮಾದರಿ ವೈದ್ಯೆ ಡಾ. ಅಕ್ಕಮಹಾದೇವಿ

ಮಾದರಿ ವೈದ್ಯೆ ಡಾ. ಅಕ್ಕಮಹಾದೇವಿ

ಹೊಸತು, ಫೆಬ್ರವರಿ-ಮಾರ್ಚ್ 2025

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ವಿಭಾಗದಲ್ಲಿ ಪ್ರೊಫೆಸರ್ ಹಾಗೂ ಮುಖ್ಯಸ್ಥೆಯಾಗಿದ್ದ ಡಾ. ಎ.ಎಸ್. ಅಕ್ಕಮಹಾದೇವಿ ನನ್ನ ಸ್ನಾತಕೋತ್ತರ ವ್ಯಾಸಂಗದ ಗುರುಗಳು, ಸಕ್ಕರೆ ಕಾಯಿಲೆಯಲ್ಲಿ ಅಕ್ಷಿಪಟಲದ ಹಾಗೂ ಮೂತ್ರಪಿಂಡಗಳ ಸಮಸ್ಯೆಗಳ ಬಗ್ಗೆ ನನ್ನ ಸಂಶೋಧನಾ ಕಾರ್ಯದ ಮಾರ್ಗದಶಕರಾಗಿದ್ದವರು. ಹುಬ್ಬಳ್ಳಿಯ ಕೆಎಂಸಿಯಲ್ಲಿ 1992ರ ಮಾರ್ಚ್ ಮೊದಲ ವಾರದಲ್ಲಿ ಎಂಡಿ ಪರೀಕ್ಷೆಯಲ್ಲಿ ಉತ್ತೀರ್ಣನಾದ ಬಳಿಕ ಈ 33 ವರ್ಷಗಳಲ್ಲಿ ನಿತ್ಯದ ವೃತ್ತಿಗೆ ವೈದ್ಯಕೀಯ ಪುಸ್ತಕಗಳ ಪುಟಗಳನ್ನು ತಿರುವಿ ಹಾಕಿ ನೋಡಬೇಕಾದ ಅಗತ್ಯವೇ ಉದ್ಭವಿಸದಂತೆ ನನ್ನಂಥವರನ್ನು ಸಿದ್ಧಗೊಳಿಸಿದ ಶ್ರೇಯಸ್ಸು ಈ ನಮ್ಮ ಗುರುಗಳಿಗೆ ಸಲ್ಲುತ್ತದೆ.

ನಾನು 1989ರಲ್ಲಿ ಅಖಿಲ ಭಾರತ ಹಾಗೂ ರಾಜ್ಯ ಮಟ್ಟಗಳ ಪಿಜಿ ಪರೀಕ್ಷೆ ಪ್ರವೇಶಗಳನ್ನು ಬರೆದಾಗ ಮನೋರೋಗ ತಜ್ಞನಾಗಲು ಬಯಸಿದ್ದೆ. ರಾಜ್ಯ ಮಟ್ಟದ ಪರೀಕ್ಷೆ ಬೇಗನೇ ನಡೆದು, ಫಲಿತಾಂಶವೂ ಬೇಗನೇ ಬಂದು, ನನ್ನ ಎರಡನೇ ಆದ್ಯತೆಯಾಗಿದ್ದ ಮೆಡಿಸಿನ್ (ವೈದ್ಯಕೀಯ ತಜ್ಞ) ವಿಭಾಗದಲ್ಲಿ ಎಂಡಿ ವ್ಯಾಸಂಗಕ್ಕೆ ಹುಬ್ಬಳ್ಳಿಯ ಕೆಎಂಸಿಯಲ್ಲಿ ಪ್ರವೇಶ ದೊರೆತಿತ್ತು. ಅದಕೆ ಸೇರುವುದೋ ಅಥವಾ ಅಖಿಲ ಭಾರತ ಪರೀಕ್ಷೆಯಲ್ಲಿ ಮನೋರೊಘ ವಿಜ್ಞಾನದ ಸೀಟಿಗೆ ಕಾಯುವುದೋ ಎಂಬ ಸಂದಿಗ್ಧತೆಯಲ್ಲಿ ಮಂಗಳೂರಿನ ಸಹಪಾಠಿಗಳಲ್ಲಿ ವಿಚಾರಿಸಿದ್ದೆ. ಅಯ್ಯೋ, ಅಲ್ಲಿನ ವಿಭಾಗ ಮುಖ್ಯಸ್ಥರು ಒಬ್ಬರು ಮೇಡಂ ಅಪ್ಪಾ, ಭಯಂಕರ ಜೋರು, ಟೆರರ್, ಇಲ್ಲಿ ಎಕ್ಸಾಮಿನರ್ ಆಗಿ ಬಂದರೆ ಒಂದಷ್ಟು ಜನರನ್ನು ಫೇಲ್ ಮಾಡುವವರು, ಜಾತಿವಾದಿಯಂತೆ, ಅಲ್ಲಿಗೆ ಯಾಕೆ ಹೋಗ್ತೀಯಾ ಎಂದೆಲ್ಲ ಹೇಳಿಬಿಟ್ಟರು. ಆಗ ಹುಬ್ಬಳ್ಳಿಯಲ್ಲಿ ನನ್ನ ತಮ್ಮ ಎಂಬಿಬಿಎಸ್ ಕೊನೆಯ ವರ್ಷದಲ್ಲಿದ್ದ. ಅವನಲ್ಲಿ ಕೇಳಿದೆ. ಏ, ಸುಮ್ಮನೆ ಎದ್ದುಕೊಂಡು ಬಾ, ಮೊದಲ ಲಿಸ್ಟಲ್ಲೇ ಒಳ್ಳೆಯ ಕಾಲೇಜು ಸಿಕ್ಕಿದೆ, ಸೀದಾ ಇಲ್ಲಿಗೆ ಬಾ ಎಂದ. ಮಂಗಳೂರಿನಲ್ಲಿ ಮನೋರೋಗ ವಿಜ್ಞಾನದಲ್ಲಿ ಗುರುಗಳಾಗಿದ್ದ ಡಾ. ಮಾಧವ ರಾವ್ ಅವರಲ್ಲೂ ಕೇಳಿದೆ. ‘ನನಗೆ ಅವರನ್ನೂ, ಅವರ ಭಾವನನ್ನೂ ಚೆನ್ನಾಗಿ ಗೊತ್ತಿದೆ, ಏನೂ ಯೋಚನೆ ಮಾಡಬೇಡ, ಇಲ್ಲಿನವರ ಮಾತನ್ನೂ ಕೇಳಬೇಡ, ಅಲ್ಲಿಗೇ ಹೋಗು’ ಎಂದರವರು.

ಅಕ್ಕಮಹಾದೇವಿ ಮೇಡಂ ಮೆಡಿಸಿನ್ ವಿಭಾಗದ ಮುಖ್ಯಸ್ಥೆಯಾಗಿದ್ದರಿಂದ ನಾನು ಅವರಲ್ಲಿಗೇ ಹೋಗಿ ಪ್ರವೇಶ ಪತ್ರವನ್ನು ತೋರಿಸಿ ಮೆಡಿಸಿನ್ ವಿಭಾಗಕ್ಕೆ ಸೇರಬೇಕಾಗಿತ್ತು. ಹಾಗೆ ಸೇರಿದವರಲ್ಲಿ ನಾನೇ ಮೊದಲಿಗನಾಗಿದ್ದುದರಿಂದ ಮೇಡಂ ನನ್ನನ್ನು ತಮ್ಮ ಯುನಿಟ್‌‌ನಲ್ಲೇ ಸೇರಿಸಿದರು. ಕೆಎಂಸಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಮೂರು ವರ್ಷಗಳ ವ್ಯಾಸಂಗದುದ್ದಕ್ಕೂ ಒಂದೇ ಯುನಿಟ್‌ನಲ್ಲಿ ಕೆಲಸ ಮಾಡುವ ಪದ್ಧತಿಯಿದ್ದುದರಿಂದ ನಾನು ಮೇಡಂ ಯುನಿಟ್‌ನಲ್ಲೇ ಕೆಲಸ ಮಾಡುವಂತಾಯಿತು, ಸಂಶೋಧನಾ ಕಾರ್ಯಕ್ಕೂ ಅಕ್ಕಮಹಾದೇವಿ ಮೇಡಂ ಅವರೇ ನನ್ನ ಮಾರ್ಗದರ್ಶಕರಾದರು.

ಟೆರರು, ಜೋರು, ಜಾತಿವಾದಿ ಎಂದೆಲ್ಲ ಹೇಳಲ್ಪಟ್ಟಿದ್ದ ಅದೇ ಮೇಡಂ ಅವರ ವಿದ್ಯಾರ್ಥಿಯಾಗಿ ಹುಬ್ಬಳ್ಳಿ ಕೆಎಂಸಿಯಲ್ಲಿ ಕಳೆದ, ಕಲಿತ ಆ 3 ವರ್ಷಗಳಲ್ಲಿ ಒಂದೇ ಒಂದು ಸಲವಾದರೂ ಯಾವುದೇ ಬೈಗುಳಗಳನ್ನು ಕೇಳಿಸಿಕೊಳ್ಳದೆ, ಯಾವುದೇ ಕಷ್ಟಕ್ಕೀಡಾಗದೆ, ಯಾವುದೇ ಕಹಿಯನ್ನಾಗಲೀ, ಭೇದವನ್ನಾಗಲೀ ಅನುಭವಿಸದೆ ಸಂಪೂರ್ಣ ಆತ್ಮ ವಿಶ್ವಾಸವುಳ್ಳ ವೈದ್ಯನಾಗಿ, ಇನ್ನಷ್ಟು ಒಳ್ಳೆಯ ಮನುಷ್ಯನಾಗಿ ಹೊರಬಂದಿದ್ದೇನೆ. ನಮ್ಮನ್ನೆಲ್ಲ ತನ್ನ ಸ್ವಂತ ಮಕ್ಕಳಂತೆ ನೋಡಿಕೊಂಡು ಆ ವರ್ಷಗಳನ್ನು ಎಲ್ಲ ರೀತಿಯಲ್ಲೂ ಅವಿಸ್ಮರಣೀಯವಾಗಿಸಿದ ಶ್ರೇಯಸ್ಸು ಡಾ. ಅಕ್ಕಮಹಾದೇವಿಯವರಿಗೆ ಸಲ್ಲುತ್ತದೆ.

ಹುಬ್ಬಳ್ಳಿ ಕೆಎಂಸಿಯ ವೈದ್ಯಕೀಯ ವಿಭಾಗದಲ್ಲಿ ಆಗ 4 ಯುನಿಟ್ ಗಳಿದ್ದವು, ಒಂದೊಂದರಲ್ಲೂ ಸುಮಾರು 60ರಷ್ಟು ಒಳರೋಗಿಗಳಿರುತ್ತಿದ್ದರು. ಪ್ರತೀ ಯುನಿಟ್ ನಲ್ಲಿ ಐದರಿಂದ ಆರು ಸ್ನಾತಕೋತ್ತರ ವಿದ್ಯಾರ್ಥಿಗಳಿರುತ್ತಿದ್ದರು. ವಾರಕ್ಕೆರಡು ದಿನ ಹೊರರೋಗಿ ವಿಭಾಗವನ್ನೂ ನಿಭಾಯಿಸಬೇಕಿತ್ತು, ಅಲ್ಲಿಗೆ ಬರುತ್ತಿದ್ದ ಇನ್ನೂರರಷ್ಟು ಹೊರರೋಗಿಗಳನ್ನು ನೋಡಬೇಕಿತ್ತು. ಅವರಲ್ಲಿ ಸುಮಾರು ಇಪ್ಪತ್ತರಷ್ಟಾದರೂ ಹೊಸದಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಕರ್ತವ್ಯದಲ್ಲಿರುತ್ತಿದ್ದ ನಾಲ್ಕೈದು ಎಂಡಿ ವಿದ್ಯಾರ್ಥಿಗಳು ಇವರನ್ನೆಲ್ಲ ಸಂಪೂರ್ಣವಾಗಿ ಪರೀಕ್ಷಿಸಿ, ಒಬ್ಬೊಬ್ಬರಿಗೆ ಹತ್ತಿಪ್ಪತ್ತು ಪುಟಗಳ ವರದಿಗಳನ್ನು ಬರೆಯಬೇಕಿತ್ತು, ರಾತ್ರಿ ಪಾಳಿಯಿದ್ದವರಿಗೆ ರಾತ್ರಿಯಿಡೀ ತುರ್ತು ಚಿಕಿತ್ಸೆಗೆ ದಾಖಲಾಗುತ್ತಿದ್ದವರನ್ನು ನಿಭಾಯಿಸುವುದು ಮತ್ತು ಆ ಬಗ್ಗೆ ವರದಿಯನ್ನು ಬರೆಯುವ ಕೆಲಸವೂ ಇತ್ತು. ಮರುದಿನ ಬೆಳಗ್ಗೆ ವಿಭಾಗ ಮುಖ್ಯಸ್ಥರು ವಾರ್ಡ್ ಪರಿಶೀಲನೆಗೆ ಬರುವ ವೇಳೆಗೆ ಎಲ್ಲಾ ವರದಿಗಳೂ, ಎಲ್ಲರ ಕೇಸ್ ಶೀಟ್ ಗಳೂ ಸಿದ್ಧವಿರಬೇಕಾಗುತ್ತಿತ್ತು.

ನಾವು ಎಂಡಿ ಕಲಿತ ಕಾಲದಲ್ಲಿ ಕೆಎಂಸಿಯಲ್ಲಿ ಜೀವರಸಾಯನ ವಿಜ್ಞಾನದ ಪರೀಕ್ಷಾಲಯದಲ್ಲಿ ಸೀಮಿತ ಸೌಲಭ್ಯಗಳಷ್ಟೇ ಇದ್ದವು, ಸಂಜೆಯ ಬಳಿಕ ಹೆಚ್ಚಿನ ತುರ್ತು ಪರೀಕ್ಷೆಗಳು ಲಭ್ಯವಿರುತ್ತಿರಲಿಲ್ಲ. ಅಂತಲ್ಲಿ, ಹೆಚ್ಚಿನ ರೋಗಿಗಳಲ್ಲಿ ಕೇವಲ ರೋಗಲಕ್ಷಣಗಳ ಸವಿವರವಾದ ಪರೀಕ್ಷೆಯ ಮೂಲಕವೇ ರೋಗಪತ್ತೆ ಮಾಡಬೇಕಾಗುತ್ತಿತ್ತು; ಮಿದುಳು ಜ್ವರದಂತಹ ಗಂಭೀರ ಸಮಸ್ಯೆಗಳ ರೋಗಿಗಳು ದಾಖಲಾದರೆ ಅವರ ಬೆನ್ನು ಹುರಿತೆ ನಾವೇ ಸೂಜಿ ಚುಚ್ಚಿ, ದ್ರವವನ್ನು ಸಂಗ್ರಹಿಸಿ, ನಮ್ಮ ಯುನಿಟ್ ಬದಿಯಲ್ಲೇ ಇದ್ದ ಸಣ್ಣ ಪರೀಕ್ಷಾ ಕೊಠಡಿಯಲ್ಲಿ ನಾವೇ ಅದನ್ನು ಪರೀಕ್ಷಿಸಿ ಅದರ ವರದಿಯನ್ನು ಬರೆದು ಚಿಕಿತ್ಸೆಯನ್ನೂ ಆರಂಭಿಸಬೇಕಿತ್ತು. ಅಂತೂ ಮರುದಿನ ಬೆಳಗ್ಗೆ ಮುಖ್ಯಸ್ಥರ ರೌಂಡ್ಸ್ ಆರಂಭವಾಗುವ ಮೊದಲು ಈ ಕೆಲಸಗಳೆಲ್ಲವೂ ಆಗಿರಲೇಬೇಕಿತ್ತು. ಇದನ್ನೆಲ್ಲ ಮಾಡುವಾಗ ಸೂಕ್ತ ಸಲಹೆಗಳನ್ನು ನೀಡಲು ಉಪನ್ಯಾಸಕರೊಬ್ಬರು ನಮ್ಮ ಜೊತೆ ಇರುತ್ತಿದ್ದರು.

ಪ್ರತಿನಿತ್ಯ ರೋಗಿಗಗಳ ಆರೈಕೆಯ ಕೆಲಸಗಳ ಜೊತೆಗೆ ಎಂಬಿಬಿಸ್ ವಿದ್ಯಾರ್ಥಿಗಳಿಗೆ ಹೇಳಿಕೊಡುವುದು, ಎಂಬಿಬಿಎಸ್ ಮುಗಿಸಿ ಹೌಸ್ ಸರ್ಜನ್ ಆಗಿರುವ ಕಿರಿಯ ವೈದ್ಯರಿಗೆ ರೋಗಿಗಳ ಆರೈಕೆ ಹಾಗೂ ಆಸ್ಪತ್ರೆಯ ವಿವಿಧ ಕೆಲಸಗಳಲ್ಲಿ ತರಬೇತಿ ನೀಡುವುದು, ನಮ್ಮ ನಮ್ಮ ಸಂಶೋಧನಾ ಕಾರ್ಯವನ್ನು ನಡೆಸುವುದು, ವಾರಕ್ಕೆ ಮೂರು ದಿನ ಅಪರಾಹ್ನ ಜರ್ನಲ್ ಕ್ಲಬ್, ವಿಚಾರ ಗೋಷ್ಠಿ, ರೋಗಿಯೊಬ್ಬರ ಬಗ್ಗೆ ಆಳವಾದ ಚರ್ಚೆಗಳಲ್ಲಿ ಭಾಗಿಯಾಗುವುದು ಎಲ್ಲವನ್ನೂ ಮಾಡಬೇಕಿತ್ತು.

ಹೀಗೆ ವೈದ್ಯಕೀಯ ವಿಭಾಗದ ಎಲ್ಲಾ ನಾಲ್ಕು ಯುನಿಟ್‌ಗಳಲ್ಲಿ ಎಡೆಬಿಡದೆ ನಡೆಯುತ್ತಿದ್ದ ಕೆಲಸಗಳೆಲ್ಲವೂ ಸಾಂಗವಾಗಿ ನಡೆಯುವಂತೆ ಮಾಡುವಲ್ಲಿ ವಿಭಾಗ ಮುಖ್ಯಸ್ಥರಿಗೆ ಬಹಳ ದೊಡ್ಡ ಹೊಣೆಗಾರಿಕೆಯಿರುತ್ತಿತ್ತು; ಇಡೀ ವಿಭಾಗದಡಿಯಲ್ಲಿ ಯಾವುದೇ ಸಮಸ್ಯೆಯಾದರೂ ಕೊನೆಗೆ ಅವರೇ ಉತ್ತರ ಹೇಳಬೇಕಾಗುತ್ತಿತ್ತು. ನಾನಿದ್ದ ಆ ಮೂರು ವರ್ಷಗಳಲ್ಲಿ ಕಂಡಂತೆ ಡಾ. ಅಕ್ಕಮಹಾದೇವಿಯವರು ತನ್ನ ಯುನಿಟ್ ಮಾತ್ರವಲ್ಲ, ಎಲ್ಲಾ ಯುನಿಟ್‌ಗಳ ಮೇಲೂ ಸೂಕ್ಷ್ಮವಾಗಿ ಕಣ್ಣಿಟ್ಟು, ಅಷ್ಟೇ ಸೂಕ್ಷ್ಮತೆಯಿಂದ ಎಲ್ಲಾ ಯುನಿಟ್ ಮುಖ್ಯಸ್ಥರನ್ನೂ, ಪ್ರಾಧ್ಯಾಪಕ-ಉಪನ್ಯಾಸಕರನ್ನೂ ವಿಶ್ವಾಸದಲ್ಲಿರಿಸಿಕೊಂಡು ಎಂದಿಗೂ ಯಾವುದೇ ಸಮಸ್ಯೆಯಾಗದಂತೆ ಬಹಳ ಅಚ್ಚುಕಟ್ಟಾಗಿ ಇಡೀ ವೈದ್ಯಕೀಯ ವಿಭಾಗವನ್ನು ನಿರ್ವಹಿಸಿದ್ದರು.

ನಮ್ಮ ಯುನಿಟ್‌ನಲ್ಲಿ ಮೇಡಂ ರೌಂಡ್ಸ್ ಮಾಡುತ್ತಾರೆಂದರೆ ಎಲ್ಲರೂ ತುದಿಗಾಲಲ್ಲಿರುತ್ತಿದ್ದರು, ಮೇಡಂ ಯಾವುದೇ ತಪ್ಪುಗಳನ್ನು ಹುಡುಕಲಾಗದಂತೆ ಆದಷ್ಟು ಎಚ್ಚರಿಕೆ ವಹಿಸುತ್ತಿದ್ದರು. ಸಮಯಕ್ಕೆ ಸರಿಯಾಗಿ ರೌಂಡ್ಸ್ ಆರಂಭವಾಗಬೇಕು, ಯುಜಿ-ಪಿಜಿ ವಿದ್ಯಾರ್ಥಿಗಳೆಲ್ಲರೂ ತಮ್ಮ ಉಡುಪು ಹಾಗೂ ವರ್ತನೆಗಳಲ್ಲಿ ಸಭ್ಯವಾಗಿರಬೇಕು, ರೋಗಿಗಳ ಕೇಸ್ ಶೀಟ್‌ಗಳು ಕ್ರಮಬದ್ಧವಾಗಿ, ಒಪ್ಪವಾಗಿರಬೇಕು ಎಂಬ ನಿಯಮಗಳಿಗೆ ಎಲ್ಲರೂ ಬದ್ಧರಾಗಿರುತ್ತಿದ್ದರು. ನಮ್ಮ ಯುನಿಟ್‌ನ ಪ್ರತಿಯೊಬ್ಬ ರೋಗಿಯ ಕೇಸ್ ಶೀಟ್‌ ಮೇಡಂ ಆಣತಿಯಂತೆ ಒಂದೇ ಕ್ರಮದಲ್ಲಿರುತ್ತಿದ್ದವು – ಮೊದಲಿಗೆ ಆಸ್ಪತ್ರೆಯ ಊಟದ ದಾಖಲೆ, ಅದರ ಹಿಂದೆ ದೇಹದ ತಾಪ, ನಾಡಿ, ರಕ್ತದೊತ್ತಡಗಳ ದಾಖಲೆ, ಅದರ ಹಿಂದೆ ಔಷಧಗಳ ಪಟ್ಟಿ, ಆ ಬಳಿಕ ಒಳರೋಗಿ ನೋಂದಣಿಯ ದಾಖಲೆ, ಬಳಿಕ ಕಿರಿಯ ವೈದ್ಯರು ಬರೆಯುವ ವಿವರಗಳು, ನಂತರ ಪಿಜಿಗಳ ಸವಿವರವಾದ ಟಿಪ್ಪಣಿಗಳು, ನಂತರ ವಿವಿಧ ಪರೀಕ್ಷೆಗಳ ವರದಿಗಳು ಹೀಗೆ ಎಲ್ಲವೂ ತಾರೀಕುವಾರಾಗಿ ಇರಬೇಕಿತ್ತು. ಒಂದು ಪುಟ ಆಚೀಚೆಯಾಗಿ ಮೇಡಂ ಕೈಗೆ ಸಿಕ್ಕರೆ ಹತ್ತು-ಹದಿನೈದು ನಿಮಿಷ ಮೇಡಂ ಕಡೆಯಿಂದ ಉಪದೇಶವಾಗುತ್ತಿತ್ತು, ಉಳಿದ ಚರ್ಚೆಗಳಿಗಿದ್ದ ಸಮಯ ನಷ್ಟವಾಗುತ್ತಿತ್ತು. ಈ ನಷ್ಟದ ಕಾರಣಕ್ಕೆ ಇಂಥ ತಪ್ಪು ಮಾಡಿದ ಕಿರಿಯ ವೈದ್ಯನೋ, ಪಿಜಿಯೋ ರೌಂಡ್ಸ್ ಮುಗಿದ ಮೇಲೆ ಉಳಿದೆಲ್ಲರಿಂದಲೂ ಉಗಿಸಿಕೊಳ್ಳಬೇಕಾಗುತ್ತಿತ್ತು. ಮೊದಮೊದಲು ಈ ಕೇಸ್ ಶೀಟ್ ಕ್ರಮಕ್ಕೆ ಇಷ್ಟೊಂದು ಮಹತ್ವ ಏಕೆ ಎಂದೆನಿಸುತ್ತಿತ್ತು. ಆದರೆ, ಅದರೊಳಗಿನ ಮಾಹಿತಿಯನ್ನು ಸುಲಭವಾಗಿ ಹುಡುಕಿ ತೆಗೆಯಬೇಕಿದ್ದರೆ ಅದು ಅಷ್ಟು ಸುವ್ಯವಸ್ಥಿತವಾಗಿದ್ದರೆ ಮಾತ್ರ ಸಾಧ್ಯ ಎನ್ನುವುದು ಕ್ರಮೇಣ ಅರಿವಾಯಿತು, ಮಾತ್ರವಲ್ಲ, ನಮ್ಮ ವೃತ್ತಿಯಲ್ಲಿ ಪಾಲಿಸಬೇಕಾದ ಶಿಸ್ತಿಗೂ ಅದು ಮಾದರಿಯಾಗಿತ್ತು. ಇಂದಿಗೂ ಕೂಡ ಎಲ್ಲೇ ಆದರೂ ಕೇಸ್ ಶೀಟ್ ಪುಟಗಳನ್ನು ಎಲ್ಲೆಲ್ಲೋ ತಗಲಿಸಿದ್ದರೆ ಮೇಡಂ ಕಲಿಸಿದ ಆ ಕ್ರಮವು ನೆನಪಾಗುತ್ತದೆ.

ಆ ಕಾಲದಲ್ಲಿ ಹುಬ್ಬಳ್ಳಿಯ ಕೆಎಂಸಿಯು ಇಡೀ ಉತ್ತರ ಕರ್ನಾಟಕಕ್ಕೆ ಉನ್ನತ ಚಿಕಿತ್ಸೆಯ ಆಸ್ಪತ್ರೆಯಾಗಿತ್ತು. ಪತ್ತೆ ಹಚ್ಚುವುದಕ್ಕೆ ಕಷ್ಟಕರವಾಗಿದ್ದ, ಸಂಕೀರ್ಣವಾಗಿದ್ದ, ದೀರ್ಘ ಕಾಲದಿಂದ ಕಾಡುತ್ತಿದ್ದು ಬೇರೆಡೆ ಪರಿಹಾರ ಕಾಣದಿದ್ದ ಸಮಸ್ಯೆಗಳಿದ್ದವರು ಕೆಎಂಸಿಯನ್ನು ಹುಡುಕಿಕೊಂಡು ಬರುತ್ತಿದ್ದರು. ಸಿಟಿ ಸ್ಕಾನ್ ತೀರಾ ಹೊಸದಾಗಿದ್ದು, ಎಂಆರ್‌ಐ ಸ್ಕಾನ್ ಇನ್ನೂ ಲಭ್ಯವಿಲ್ಲದೇ ಇದ್ದ ಆ ಕಾಲದಲ್ಲಿ ಕೆಎಂಸಿಯಲ್ಲಿ ಇವುಗಳಂತೂ ಹೋಗಲಿ, ಉದರದ ಸಮಸ್ಯೆಗಳನ್ನು, ಹೃದ್ರೋಗಗಳನ್ನು ನಿಖರವಾಗಿ ಗುರುತಿಸಲು ನೆರವಾಗುವ ಅಲ್ಟ್ರಾ ಸೌಂಡ್ ಸ್ಕಾನ್ ಕೂಡ ಲಭ್ಯವಿರಲಿಲ್ಲ. ಹಲವು ಸಾಮಾನ್ಯವಾದ ರಕ್ತದ ಪರೀಕ್ಷೆಗಳೂ ಲಭ್ಯವಿರಲಿಲ್ಲ ಅಥವಾ ತುರ್ತಿನಲ್ಲಿ, ಬೇಕೆಂದಾಗ ದೊರೆಯುವಂತಿರಲಿಲ್ಲ. ಹಾಗಾಗಿ 

ರೋಗಿಯನ್ನು ಕೂಲಂಕಷವಾಗಿ ಪರೀಕ್ಷಿಸುವ ಮೂಲಕವಷ್ಟೇ ರೋಗವೇನೆಂದು ನಿರ್ಧರಿಸಬೇಕಿತ್ತು. ಬೆಂಗಳೂರು, ಮೈಸೂರುಗಳ ವೈದ್ಯಕೀಯ ಕಾಲೇಜುಗಳಲ್ಲಿದ್ದ ದೊಡ್ಡ ಹೆಸರಿನ ಪ್ರೊಫೆಸರುಗಳು ಯಾರೂ ಹುಬ್ಬಳ್ಳಿಯ ಕೆಎಂಸಿಗೆ ವರ್ಗವಾಗಿ ಬರಲು ಒಪ್ಪುತ್ತಲೇ ಇರಲಿಲ್ಲ. ಅಂತಲ್ಲಿ ಹುಬ್ಬಳ್ಳಿಯ ಕೆಎಂಸಿಯನ್ನು ಇಡೀ ಉತ್ತರ ಕರ್ನಾಟಕದ ಜನರ ವಿಶ್ವಾಸವನ್ನು ಗಳಿಸಿ ಅತ್ಯುತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ಆಸ್ಪತ್ರೆಯನ್ನಾಗಿ ಮಾಡುವುದಕ್ಕೆ ಅಲ್ಲಿದ್ದ ವೈದ್ಯರ ಕಾರ್ಯಕ್ಷಮತೆ ಮತ್ತು ಬದ್ಧತೆಗಳೇ ಕಾರಣವಾಗಿದ್ದವೆನ್ನುವುದು ನಿಸ್ಸಂದೇಹ.

ಇಂತಹಾ ಕೆಎಂಸಿಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುವುದು ದೊಡ್ಡ ಸದವಕಾಶವೇ ಆಗಿತ್ತು. ಪ್ರತೀ ವಾರವೂ ಹಲತರದ ಸಂಕೀರ್ಣ ಸಮಸ್ಯೆಗಳವರು ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಅವರ ರೋಗವನ್ನು ನಿರ್ಧರಿಸಿ, ಚಿಕಿತ್ಸೆಯನ್ನು ಆರಂಭಿಸುವ ಜವಾಬ್ದಾರಿಯು ಮೊದಲಿಗೆ ಸ್ನಾತಕೋತ್ತರ ವಿದ್ಯಾರ್ಥಿಗಳದಾಗಿರುತ್ತಿತ್ತು, ಜೊತೆಗಿರುತ್ತಿದ್ದ ಉಪನ್ಯಾಸಕರು ಅದಕ್ಕೆ ನೆರವಾಗುತ್ತಿದ್ದರು. ಮರುದಿನ ಬೆಳಗ್ಗೆ ಮೇಡಂ ರೌಂಡ್ಸ್‌ನಲ್ಲಿ ಇವನ್ನು ಇನ್ನಷ್ಟು ವಿವರವಾಗಿ ಚರ್ಚಿಸಲಾಗುತ್ತಿತ್ತು. ಮೇಡಂ ರೋಗಿಯ ವಿವರಗಳನ್ನು ಕೇಳಿಸಿಕೊಂಡ ಮೇಲೆ ಎದೆಯ ಮೇಲೆ ಒಂದೆರಡು ನಿಮಿಷ ಸ್ಟೆಥೋಸ್ಕೋಪಿಟ್ಟು ‘ಏ ಇದು ಟಿಬಿ ಇದೆ ನೋಡಿ’ ಎಂದೋ, ರೋಗಿಯ ಕೈ ಹಿಡಿದು ನಮ್ಮ ಕೈಗೆ ಕೊಟ್ಟು, ‘ನೋಡಿ, ಇದು ಅಕ್ರೋಮೆಗಲಿ ಕೈ’ ಎಂದೋ ಹೇಳಿಬಿಡುತ್ತಿದ್ದರು. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್ ಕಲಿಯುತ್ತಿದ್ದಾಗ ಅಲ್ಲಿದ್ದ ಗುರುಗಳ ಬಗ್ಗೆ ಅತಿರಥ ಮಹಾರಥರೆಂಬ ಹೊಗಳಿಕೆಗಳನ್ನೆಲ್ಲ ಕೇಳಿಸಿಕೊಂಡಿದ್ದ ನನಗೆ ಅಕ್ಕಮಹಾದೇವಿ ಮೇಡಂ ಹೀಗೆ ಅತಿ ಸುಲಭದಲ್ಲಿ, ಯಾವ ಹಮ್ಮುಬಿಮ್ಮುಗಳೂ ಇಲ್ಲದೆ ರೋಗವನ್ನು ನಿರ್ಧರಿಸಿ ಹೇಳಿಬಿಡುತ್ತಿದ್ದುದು ಅಚ್ಚರಿಯುಂಟು ಮಾಡುತ್ತಿತ್ತು, ಅವರ ಬಗ್ಗೆ ಅಪಾರ ಅಭಿಮಾನವನ್ನೂ ಹುಟ್ಟಿಸಿತ್ತು. ಮಂಗಳೂರಿನಲ್ಲಿ ಮೇಡಂ ಬಗ್ಗೆ ಕೇಳಿಸಿಕೊಂಡು, ಹುಬ್ಬಳ್ಳಿಯಲ್ಲಿ ಸೇರಿ ಒಂದೆರಡು ತಿಂಗಳಲ್ಲಿ ಮಂಗಳೂರಿನ ಗುರುಗಳ ಬಗ್ಗೆ ನನ್ನ ಹಿರಿಯ ಪಿಜಿಯಾಗಿದ್ದ ಡಾ. ಪ್ರಭಾಕರ್ ಬಳಿ ಹೊಗಳಿದ್ದೆ;  ‘ಇರು, ಮೂರು  ತಿಂಗಳಾಗಲಿ’ ಎಂದಷ್ಟೇ ಅವರು ಹೇಳಿದ್ದರು, ಅದೇಕೆ ಎನ್ನುವುದು ಬೇಗನೇ ಅರ್ಥವಾಗಿತ್ತು!

ತನ್ನ ಯುನಿಟ್‌ನಲ್ಲಿದ್ದ ಹಿರಿಯ-ಕಿರಿಯ ಪಿಜಿಗಳೆಲ್ಲರ ಬಗ್ಗೆ ಅಕ್ಕಮಹಾದೇವಿ ಮೇಡಂ ಅವರಿಗೆ ಅಪರಿಮಿತ ವಿಶ್ವಾಸವಿತ್ತು, ಅವರ ಮತ್ತು ಇತರ ಪ್ರಾಧ್ಯಾಪಕರ ಮೇಲ್ವಿಚಾರಣೆಯಲ್ಲಿ ರೋಗಿಗಳ ನಿಭಾವಣೆಯಲ್ಲಿ ನಮಗೆ ಸಾಕಷ್ಟು ಸ್ವಾತಂತ್ರ್ಯವನ್ನವರು ನೀಡಿದ್ದರು. ನಾವೇನಾದರೂ ಅಪರೂಪದ ಕಾಯಿಲೆಯನ್ನು ಗುರುತಿಸಿದರೆ ಮೇಡಂ ಸಂತೋಷದಿಂದ ಬೆಂಬಲಿಸುತ್ತಿದ್ದರು. ನಾನು ಸೇರಿ ನಾಲ್ಕೈದು ತಿಂಗಳಾಗುವಾಗ ಹೊಸಪೇಟೆಯಿಂದ ಹದಿಹರೆಯದ ಹುಡುಗನೊಬ್ಬ ತಿಂಗಳುಗಟ್ಟಲೆಯ ಜ್ವರವೆಂದು ದಾಖಲಾಗಿದ್ದ. ಆತನ ಉದರದೊಳಗೆ ಯಕೃತ್ತು ಮತ್ತು ಪ್ಲೀಹಗಳು ಬಹಳ ದೊಡ್ಡದಾಗಿ ಊದಿಕೊಂಡಿದ್ದುದನ್ನು ಗುರುತಿಸಿ ಅದು ಕಾಲಾ ಅಜರ್ ಎಂಬ ರೋಗವಿರಬಹುದು ಎಂದು ಬರೆದಿದ್ದೆ, ಮರುದಿನ ಮೇಡಂ ರೌಂಡ್ಸ್ ಮಾಡುವಾಗ ಹಾಗೆಯೇ ಹೇಳಿದ್ದೆ. ಆದರೆ ಜೊತೆಗಿದ್ದ ಇನ್ನೊಬ್ಬ ಪ್ರಾಧ್ಯಾಪಕರು ‘ಕಾಲಾ ಅಜರ್ ಇಲ್ಲಿ ಎಲ್ಲಿ ಮೇಡಂ’ ಎಂದು ನಕ್ಕು ಬಿಟ್ಟರು. ಮೇಡಂ ನನ್ನ ಪರವಹಿಸಿ, ‘ಯಾಕೋ, ಬಿಹಾರದ ಹುಡುಗ, ಹೊಸಪೇಟೆಗೆ ಕೆಲಸಕ್ಕೆ ಬಂದವನು, ತಿಂಗಳುಗಟ್ಟಲೆಯ ಜ್ವರ, ಕಾಲಾ ಅಜರ್ ಲಕ್ಷಣಗಳೆಲ್ಲವೂ ಇದೆಯಲ್ಲ, ಯಾಕಾಬಾರದು’ ಎಂದು ಹೇಳಿ, ರೋಗವನ್ನು ಖಚಿತ ಪಡಿಸಲು ಮೂಳೆಮಜ್ಜೆಯ ಪರೀಕ್ಷೆ ಮಾಡುವಂತೆ ಸೂಚಿಸಿದರು. ಅದರಲ್ಲಿ ರೋಗವು ಸಾಬೀತಾಗಿತ್ತು. ಇಂಥ ಅನೇಕ ಅನುಭವಗಳು ನಮಗೆಲ್ಲಾ ಪಿಜಿಗಳಿಗೂ ಆಗಿದ್ದವು.

ನನ್ನ ಕೆಲಸಗಳನ್ನು ಮೇಡಂ ಬೆಂಬಲಿಸಿದ ರೀತಿಯನ್ನು ಎಂದಿಗೂ ಮರೆಯಲಾಗದು. ನಾನು ಕೆಎಂಸಿಗೆ ಸೇರಿದಾಗ ಹಾಸ್ಟೆಲ್ ಸೌಲಭ್ಯ ದೊರೆಯದೆ ಕಷ್ಟವಾಗಿತ್ತು. ಆಗ ಪ್ರಿನ್ಸಿಪಾಲರಾಗಿದ್ದವರಲ್ಲಿ ಕೇಳಿದರೆ ದಬಾಯಿಸಿ ಕಳಿಸಿಬಿಟ್ಟರು. ಆಸ್ಪತ್ರೆಯಲ್ಲಿ ಕಂಡಿದ್ದ ಕೊರತೆಗಳನ್ನು ನನ್ನಲ್ಲಿದ್ದ ಕ್ಯಾಮರಾದಲ್ಲಿ ಸೆರೆ ಹಿಡಿದು, ಪತ್ರಿಕೆಗಳಿಗೆ ಕಳಿಸಿದೆ. ಆಗ ಹೌಸ್ ಸರ್ಜನ್ ಆಗಿದ್ದ ನನ್ನ ತಮ್ಮ ಮತ್ತವನ ಸಹ ಕಿರಿಯ ವೈದ್ಯರೊಡನೆ ಸಮಾಲೋಚಿಸಿ, ಕಿರಿಯ ವೈದ್ಯರ ಸಂಘವನ್ನು ರಚಿಸಿ, ಈ ಎಲ್ಲಾ ಸಮಸ್ಯೆಗಳ ಬಗ್ಗೆ ರಾಜ್ಯದ ಆರೋಗ್ಯ ಸಚಿವರಿಗೆ ಉದ್ದನೆಯ ಮನವಿಯನ್ನು ಕಳಿಸಿದೆವು. ಈ ಎಲ್ಲಾ ವಿಚಾರಗಳನ್ನೂ ಅಕ್ಕಮಹಾದೇವಿ ಮೇಡಂ ಅವರಿಗೆ ತಿಳಿಸಿದ್ದೆ. ಎರಡೇ ವಾರಗಳಲ್ಲಿ ಆರೋಗ್ಯ ಸಚಿವರಾಗಿದ್ದ ಜೆಎಸ್ ದೇಶ್‌ಮುಖ್ ಕೆಎಂಸಿಗೆ ಭೇಟಿ ನೀಡಿ ಎಲ್ಲವನ್ನೂ ನಾವು ತೋರಿಸಿದ್ದ ಎಲ್ಲಾ ಸಮಸ್ಯೆಗಳನ್ನೂ ಖುದ್ದಾಗಿ ಪರಿಶೀಲಿಸಿ, ಕೂಡಲೇ ಅವನ್ನು ಸರಿಪಡಿಸುವಂತೆ ಆದೇಶಿಸಿದರು, ಮಾತ್ರವಲ್ಲ, ಎರಡು ವಾರ ಕಳೆಯಬೇಕಾದರೆ ಪ್ರಿನ್ಸಿಪಾಲರನ್ನು ವರ್ಗಾಯಿಸುವ ಆದೇಶವನ್ನೂ ಹೊರಡಿಸಿಬಿಟ್ಟರು. ಆ ಪ್ರಿನ್ಸಿಪಾಲರ ಬಗ್ಗೆ ಅನೇಕರಿಗೆ ಅಸಮಾಧಾನವೇ ಇದ್ದುದರಿಂದ ಈ ವರ್ಗಾವಣೆಗೆ ಪ್ರಶಂಸೆಯೇ ಬಂತು.

ಇದಾಗಿ ಕೆಲವೇ ದಿನಗಳಲ್ಲಿ, ಆ ಪ್ರಿನ್ಸಿಪಾಲರು ಇನ್ನೇನು ಊರು ಬಿಡಬೇಕಾಗಿದ್ದಾಗ, ಆಗಿನ ಪ್ರಧಾನಿ ರಾಜೀವ್ ಗಾಂಧಿ ಹುಬ್ಬಳ್ಳಿಗೆ ಬರುವವರಿದ್ದರು. ನನ್ನ ರಕ್ತದ ಗುಂಪು ಅವರಿಗೆ ತಾಳೆಯಾಗುತ್ತಿದ್ದುದರಿಂದ ಮಂಗಳೂರಲ್ಲೂ ಅವರ ಭೇಟಿಯ ಸಂದರ್ಭದಲ್ಲಿ ನನ್ನ ಹೆಸರನ್ನು ದಾನಿಗಳ ಪಟ್ಟಿಯಲ್ಲಿ ಸೇರಿಸುತ್ತಿದ್ದರು. ಹುಬ್ಬಳ್ಳಿ ಭೇಟಿಯ ವೇಳೆ ಆ ಗುಂಪಿನವರ ಮಾಹಿತಿಯನ್ನು ಕೇಳಿದಾಗ ನನ್ನದನ್ನು ನೀಡಿದ್ದೆ. ಅದಾಗಿ ಒಂದೆರಡು ದಿನಗಳಲ್ಲಿ, ನಾವೆಲ್ಲರೂ ಕಾಫಿ ಕುಡಿಯುತ್ತಿದ್ದಾಗ ಮೇಡಂ ನನ್ನನ್ನು ನೋಡಿ, ‘ಏನೋ, ನೀನು ಪ್ರಧಾನಿಗೆ ಸೆಕ್ಯುರಿಟಿ ರಿಸ್ಕ್ ಅಂತೆ, ಪ್ರಿನ್ಸಿಪಾಲ್ ಹೇಳಿದ್ರು’ ಎಂದು ಜೋರಾಗಿ ನಕ್ಕರು. ನನಗೆ ಏನೆಂದು ಅರ್ಥವಾಗದೆ ಅವರತ್ತ ನೋಡಿದಾಗ, ‘ನಿನ್ನ ಬ್ಲಡ್ ಗ್ರೂಪ್ ತಾಳೆಯಾಗುತ್ತದೆ ಅಂತ ಹೆಸರು ಕೊಟ್ಟಿದ್ದೆಯಂತೆ, ನನ್ನಲ್ಲಿ ಹೀಗೆ ಹೇಳಿದರು ನೋಡಪ್ಪಾ’ ಎಂದು ನಕ್ಕರು ಮೇಡಂ. ಆ ಪ್ರಿನ್ಸಿಪಾಲರು ವರ್ಗವಾಗಿ ಹೋಗುವಾಗ ವಿಭಾಗ ಮುಖ್ಯಸ್ಥರಲ್ಲಿ ಹೀಗೆಲ್ಲ ಹೇಳಿ ನನ್ನ ಬಗ್ಗೆ ಕೆಟ್ಟ ಭಾವನೆ ಮೂಡುವಂತೆ ಮಾಡಿದ ಪ್ರಯತ್ನವು ಅಲ್ಲಿಗೇ ಮುಗಿದು ಹೋಗಿತ್ತು! ತನ್ನ ಯುನಿಟ್ಟಿಗೆ ಕೇವಲ ಮೂರ್ನಾಲ್ಕು ತಿಂಗಳ ಹಿಂದಷ್ಟೇ ಸೇರಿದ್ದವನ ಬಗ್ಗೆ ಪ್ರಿನ್ಸಿಪಾಲರೇ ಬೇಡದ್ದನ್ನು ಹೇಳಿದರೂ ಕೇಳಿಸಿಕೊಳ್ಳದಷ್ಟು ವಿಶ್ವಾಸವನ್ನು ಮೇಡಂ ಅದು ಹೇಗೆ ಪಡೆದುಕೊಂಡರೆನ್ನುವುದು ನನಗೆ ಇಂದಿಗೂ ಅರ್ಥವಾಗದೇ ಉಳಿದಿದೆ. ನಮ್ಮ ಬಗ್ಗೆ ಅವರು ಹೊಂದಿದ್ದ ಆ ತಾಯಿ ಸಹಜ ಪ್ರೀತಿ ಮತ್ತು ವಿಶ್ವಾಸಗಳೇ ನಮ್ಮನ್ನು ಅಲ್ಲಿ ತನ್ಮಯತೆಯಿಂದ ಕೆಲಸ ಮಾಡಲು ಮತ್ತು ಕಲಿಯಲು ಪ್ರೇರಕ ಶಕ್ತಿಯಾದ್ದಿಗಿರಬಹುದು.

ಹುಬ್ಬಳ್ಳಿಯ ಕೆಎಂಸಿಯಲ್ಲಿದ್ದ ಮೂರು ವರ್ಷಗಳಲ್ಲೂ ನಾವೇ ಸ್ಥಾಪಿಸಿದ್ದ ಕಿರಿಯ ವೈದ್ಯರ ಸಂಘದಲ್ಲಿ ಸಕ್ರಿಯನಾಗಿ ದುಡಿದಿದ್ದೆ, ಪ್ರತೀ ವರ್ಷವೂ ಖಾಸಗಿ ಕಾಲೇಜುಗಳ ಸ್ಥಾಪನೆಯನ್ನು ವಿರೋಧಿಸುವುದು, ಪ್ರವೇಶ ಪರೀಕ್ಷೆಗಳ ಸುಧಾರಣೆ, ಹುಬ್ಬಳ್ಳಿ ಹಾಗೂ ಬಳ್ಳಾರಿ ವೈದ್ಯಕೀಯ ಕಾಲೇಜುಗಳ ಸಿಬ್ಬಂದಿ ಕೊರತೆಯ ನಿವಾರಣೆ, ಹಾಸ್ಟೆಲ್, ಲೈಬ್ರರಿ ಮತ್ತಿತರ ಮೂಲ ಸೌಕರ್ಯಗಳ ಸುಧಾರಣೆ, ಈ ಎರಡು ಕಾಲೇಜುಗಳಿಗೆ ಸ್ವಾಯತ್ತ ಸ್ಥಾನಮಾನ, ಕಿರಿಯ ವೈದ್ಯರ ವೇತನದಲ್ಲಿ ಏರಿಕೆ ಇವೇ ಮುಂತಾದ ಬೇಡಿಕೆಗಳಿಗಾಗಿ ಮುಷ್ಕರಗಳನ್ನು ನಡೆಸಿ ಬಹಳಷ್ಟು ಯಶಸ್ವಿಯೂ ಆಗಿದ್ದೆವು. ನಾನು 1992ರ ಫೆಬ್ರವರಿ ಕೊನೆಗೆ ಎಂಡಿ ಪರೀಕ್ಷೆಯನ್ನು ಬರೆಯಬೇಕಿತ್ತು; 1991ರ ನವೆಂಬರ್-ಡಿಸೆಂಬರ್ ನಲ್ಲಿ ರಾಜ್ಯದ ಸರಕಾರಿ ವೈದ್ಯಕೀಯ ಕಾಲೇಜುಗಳ ಪ್ರಾಧ್ಯಾಪಕರೇ ಮುಷ್ಕರ ಹೂಡಿದ್ದರು. ಅವರಿಗೆ ಬೆಂಬಲವಾಗಿ ವಿದ್ಯಾರ್ಥಿಗಳನ್ನು ಸಂಘಟಿಸುವ ಕೆಲಸವನ್ನು ನಾನು ಮಾಡುತ್ತಿದ್ದೆ. ಆಗ ಸ್ತ್ರೀರೋಗ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದ ಡಾ. ಶಶಿಕಲಾ ಹಿರೇಮಠ ಅವರು ನನ್ನನ್ನು ಕರೆದು, ‘ನಮ್ಮ ಮುಷ್ಕರಕ್ಕೆ ದುಡಿಯುವುದು ಸಾಕು, ಸುಮ್ಮನೆ ಹೋಗಿ ಪರೀಕ್ಷೆಗೆ ಓದು’ ಎಂದು ಗದರಿದ್ದರು. ಮುಶಃಕರ ಮುಗಿದು ಕೆಲವೇ ದಿನಗಳಲ್ಲಿ ಡಾ. ಅಕ್ಕಮಹಾದೇವಿ ನನ್ನನ್ನು ಕರೆದು, ಪರೀಕ್ಷೆಗೆ ಓದುವುದಕ್ಕೆ ಬಿಡುಗಡೆ ಮಾಡುತ್ತೇನೆ, ಹೋಗಿ ಓದು ಎಂದರು. ‘ಮೇಡಂ, ಪರವಾಗಿಲ್ಲ, ಇನ್ನೆರಡು ವಾರ ತಡವಾದರೂ ತೊಂದರೆಯಿಲ್ಲ’ ಎಂದೆ. ‘ನೋಡಪ್ಪಾ, ಬೇರೆಯವರ ಡ್ಯೂಟಿ ಎಲ್ಲಾ ಮಾಡಿದ್ದೀಯಾ, ಲೆಕ್ಕಕ್ಕಿಂತ ಹೆಚ್ಚು ಕೆಲಸ ಮಾಡಿಯಾಗಿದೆ, ನೀನು ಬಿಡುಗಡೆಯಾಗಬಹುದು’ ಎಂದು ನಮ್ಮ ಪಾಳಿಯ ಪುಸ್ತಕವನ್ನೇ ತೋರಿಸಿ ಹೇಳಿದರು. ಹುಬ್ಬಳ್ಳಿ ಕೆಎಂಸಿಯ ಈ ಪ್ರೊಫೆಸರುಗಳು ನಮ್ಮನ್ನು ಅದೆಷ್ಟು ಸೂಕ್ಷ್ಮವಾಗಿ ಗಮನಿಸುತ್ತಿದ್ದರು, ನಮ್ಮ ಬಗ್ಗೆಯೂ, ನಮ್ಮ ಕೆಲಸದ ಬಗ್ಗೆಯೂ ಅದೆಷ್ಟು ಪ್ರೀತಿ, ಅಭಿಮಾನಗಳನ್ನು ಹೊಂದಿದ್ದರೆನ್ನುವುದಕ್ಕೆ ಇಂತಹಾ ಸಾವಿರ ನಿದರ್ಶನಗಳನ್ನು ಕೊಡಬಹುದು.

ಡಾ. ಅಕ್ಕಮಹಾದೇವಿಯವರ ನೇತೃತ್ವದಲ್ಲಿ ಹುಬ್ಬಳ್ಳಿಯ ವೈದ್ಯಕೀಯ ವಿಭಾಗದಲ್ಲಿ ನನ್ನಂಥ ಸ್ನಾತಕೋತ್ತರ ವಿದ್ಯಾರ್ಥಿಗಳ ಕಲಿಕೆಗೆ ಎಲ್ಲಾ ಸ್ವಾತಂತ್ರ್ಯವನ್ನೂ, ಮಾರ್ಗದರ್ಶನವನ್ನೂ, ಉತ್ತೇಜನವನ್ನೂ ನೀಡಿದ್ದರಿಂದ ಮೂರು ವರ್ಷಗಳ ಅಂತ್ಯದಲ್ಲಿ ಎಂಡಿ ಪದವಿಯನ್ನು ಪಡೆದಾಗ ಎಲ್ಲೇ ಇದ್ದರೂ ಸ್ವತಂತ್ರವಾಗಿ, ಹೆಚ್ಚೇನೂ ಆಧುನಿಕ ಉಪಕರಣಗಳ ನೆರವಿಲ್ಲದೆಯೇ, ವೈದ್ಯಕೀಯ ವೃತ್ತಿಯನ್ನು ನಡೆಸಬಲ್ಲ ಆತ್ಮವಿಶ್ವಾಸವು ತುಂಬಿಕೊಳ್ಳುವಂತಾಗಿತ್ತು. ಹೃದ್ರೋಗ, ನರರೋಗ ಹಾಗೂ ಮೂತ್ರಪಿಂಡಗಳ ರೋಗಗಳ ವಿಭಾಗಗಳಲ್ಲಿ ಸುಪರ್ ಸ್ಪೆಷಾಲಿಟಿ ಕಲಿಕೆಯು (ಡಿಎಂ) ಆ ದಿನಗಳಲ್ಲಿ ಆರಂಭಗೊಂಡಿತ್ತಾದರೂ, ನಮ್ಮಲ್ಲಿ ಹೆಚ್ಚಿನವರು ತಮ್ಮ ತಮ್ಮ ಊರುಗಳಲ್ಲಿ ವೈದ್ಯಕೀಯ ತಜ್ಞರಾಗಿಯೇ ವೃತ್ತಿಯನ್ನಾರಂಭಿಸಿದೆವು. 

ಆದರೆ ಡಾ. ಅಕ್ಕಮಹಾದೇವಿಯವರ ಕಲಿಕೆಯ ತುಡಿತವು ಮುಗಿದಿರಲಿಲ್ಲ. ನಾನು 1992ರ ಮಾರ್ಚ್‌ನಲ್ಲಿ ಮಂಗಳೂರಿಗೆ ಮರಳಿದ ವೇಳೆಗೆ ಮೇಡಂ ಮೂತ್ರಪಿಂಡಗಳ ರೋಗಗಳ ಬಗ್ಗೆ, ಮತ್ತು ಮೂತ್ರಪಿಂಡಗಳ ವೈಫಲ್ಯವಿದ್ದವರಿಗೆ ಡಯಾಲಿಸಿಸ್ ನಡೆಸುವ ಬಗ್ಗೆ ತರಬೇತಿ ಪಡೇಯಲು ಬೆಂಗಳೂರಿಗೆ ಹೋದರು, ಅಲ್ಲಿಂದ ಮೂತ್ರಪಿಂಡಗಳ ಸಮಸ್ಯೆಗಳ ಬಗ್ಗೆ ದಕ್ಷಿಣ ಭಾರತದಲ್ಲೇ ಅತ್ಯುತ್ತಮ ಆಸ್ಪತ್ರೆಯಿನಿಸಿದ್ದ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೂ ಹೋದರು. ಅಲ್ಲಿ ತರಬೇತಿಯ ಬಳಿಕ ಅಲ್ಲಾ ಅಡೆತಡೆಗಳನ್ನೆದುರಿಸಿ  ಹುಬ್ಬಳ್ಳಿಯ ಕೆಎಂಸಿಯಲ್ಲಿ ಡಯಾಲಿಸಿಸ್ ಘಟಕವನ್ನು ಸ್ಥಾಪಿಸಿದರು, ಇದು ಉತ್ತರ ಕರ್ನಾಟಕದಲ್ಲೇ ಮೊತ್ತಮೊದಲ ಸರಕಾರಿ ಡಯಾಲಿಸಿಸ್ ಸೌಲಭ್ಯವಾಯಿತು.

ಕೆಎಂಸಿಯಿಂದ ನಿವೃತ್ತರಾಗುವ ಸಮಯದಲ್ಲಿ ಡಾ. ಅಕ್ಕಮಹಾದೇವಿ ಅವರಿಗೆ ಅನ್ನನಾಳದಲ್ಲಿ ಗಂಭೀರ ಸಮಸ್ಯೆಯಾಗಿತ್ತು. ತಾವೇ ಮುಂಬಯಿಯ ಪ್ರತಿಷ್ಠಿತ ಆಸ್ಪತ್ರೆಗೆ ಹೋಗಿ, ಅದಕ್ಕೆ ಕ್ಲಿಷ್ಟವಾದ ಶಸ್ತ್ರಕ್ರಿಯೆಯನ್ನು ಮಾಡಿಸಿಕೊಂಡು, ಉಳಿದ ಚಿಕಿತ್ಸೆಯನ್ನೂ ಪಡೆದುಕೊಂಡು ಬಂದಿದ್ದರು. ನಾವು ಅವರನ್ನು ಕಾಣಲು ಹೋದಾಗ ತೀರಾ ಕೃಷಕಾಯರಾಗಿದ್ದರೂ ಎಂದಿನ ಉತ್ಸಾಹವನ್ನೂ, ಧೈರ್ಯವನ್ನೂ ಉಳಿಸಿಕೊಂಡಿದ್ದರು.

ಕೆಎಂಸಿಯಿಂದ ನಿವೃತ್ತರಾಗಿ, ಐದು ವರ್ಷ ಅಲ್ಲೇ ಡಯಾಲಿಸಿಸ್ ಘಟಕದ ಮುಖ್ಯಸ್ಥೆಯಾಗಿ ಮುಂದುವರಿದ ಬಳಿಕ ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ನೆಫ್ರಾಲಜಿ ವಿಭಾಗವನ್ನು ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಈಗ ತನ್ನ 85ನೇ ವಯಸ್ಸಿನಲ್ಲೂ ಅದೇ ಆಸ್ಪತ್ರೆಯಲ್ಲಿ ಅದೇ ಹುಮ್ಮಸ್ಸಿನಿಂದ ತನ್ನ ವೃತ್ತಿಯನ್ನು ಬದ್ಧತೆಯಿಂದ ನಡೆಸುತ್ತಿದ್ದಾರೆ.

ಹುಟ್ಟುವಾಗಲೇ ಬೆರಳುಗಳ ಊನತೆಯನ್ನು ಪಡೆದಿದ್ದರೂ ಅದನ್ನು ಮೀರಿ ತನ್ನ ಛಲದಿಂದಲೇ ಎಂಬಿಬಿಎಸ್ ಪದವಿಯನ್ನು ಪಡೆದು, ಬಳಿಕ ವೈದ್ಯವಿಜ್ಞಾನದಲ್ಲಿ ಎಂಡಿ ಪದವಿಯನ್ನು ಪಡೆದು, ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ, ಮುಖ್ಯವಾಗಿ ಹುಬ್ಬಳ್ಳಿಯ ಕೆಎಂಸಿಯಲ್ಲಿ, ಪ್ರಾಧ್ಯಾಪಕರಾಗಿ, ಬಳಿಕ ವಿಭಾಗ ಮುಖ್ಯಸ್ಥರಾಗಿ, ಪುರುಷ ಪಾರಮ್ಯದ ವೈದ್ಯಕೀಯ ವಲಯದಲ್ಲಿ ಎಲ್ಲರ ಪ್ರೀತಿ-ವಿಶ್ವಾಸಗಳ ಮೂಲಕ ತನ್ನ ವಿಭಾಗವನ್ನು ಅತ್ಯುತ್ತಮವಾಗಿ ಮುನ್ನಡೆಸಿ, ತನ್ನೆಲ್ಲಾ ವಿದ್ಯಾರ್ಥಿಗಳನ್ನು ಅತ್ಯುತ್ತಮ ವೈದ್ಯರನ್ನಾಗಿ ರೂಪಿಸಿ, ಉತ್ತರ ಕರ್ನಾಟಕದಲ್ಲೇ ಮೊತ್ತಮೊದಲಾದ ಸರಕಾರಿ ಡಯಾಲಿಸಿಸ್ ಘಟಕವನ್ನು ಸ್ಥಾಪಿಸಿ, ಅಲ್ಲಿ ಮೂತ್ರಪಿಂಡಗಳ ರೋಗಗಳ ವಿಶೇಷ ವಿಭಾಗವು ಬಲವಾಗಿ ಬೆಳೆಯುವಂತೆ ಮಾಡಿದ ಡಾ. ಅಕ್ಕಮಹಾದೇವಿ ಅವರಿಗೆ ಕರ್ನಾಟಕ ಸುವರ್ಣ ಸಂಭ್ರಮ ಪುರಸ್ಕಾರ ಸಂದಿರುವುದು ಆ ಪುರಸ್ಕಾರಕ್ಕೇ ಸಂದಿರುವ ಗೌರವವಾಗಿದೆ. ಡಾ. ಅಕ್ಕಮಹಾದೇವಿ ಇನ್ನೂ ಉನ್ನತವಾದ ಪುರಸ್ಕಾರಗಳಿಗೆ, ಎಲ್ಲರ ಗೌರವಾದರಗಳಿಗೆ ಅರ್ಹರಾಗಿದ್ದಾರೆ. ರಾಜ್ಯದ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅವರಂತೆ ನಿಸ್ವಾರ್ಥವಾಗಿ, ಬದ್ಧತೆಯಿಂದ ದುಡಿದು ಅನೇಕ ಉತ್ತಮ ವೈದ್ಯರನ್ನು ರೂಪಿಸಿದ ಗುರುಗಳನ್ನು ರಾಜ್ಯ ಸರಕಾರವೂ, ನಮ್ಮ ಸಮಾಜವೂ ಗುರುತಿಸಿ ಗೌರವಿಸಬೇಕಿದೆ.

Be the first to comment

Leave a Reply

Your email address will not be published.


*