ಭಯಪಡಿಸುವುದು ರೋಗ ನಿರ್ವಹಣೆಗೆ ಮಾರ್ಗವಲ್ಲ

ಭಯಪಡಿಸುವುದು ರೋಗ ನಿರ್ವಹಣೆಗೆ ಮಾರ್ಗವಲ್ಲ

ಟೀಚರ್ ಮಾಸಪತ್ರಿಕೆ, ಸೆಪ್ಟೆಂಬರ್ 2023

ಕೊರೋನ ಸೋಂಕಿನ ನೆಪದಲ್ಲಿ ವಾರಗಟ್ಟಲೆ ಲಾಕ್ ಡೌನ್ ಮಾಡಿ ಮನೆಯೊಳಗೇ ಬಂಧಿಸಿಟ್ಟು, ಮಕ್ಕಳ ಶಾಲೆಗಳನ್ನೂ ತಿಂಗಳುಗಟ್ಟಲೆ ಮುಚ್ಚಿಟ್ಟು, ಎರಡು ವರ್ಷ ಎಲ್ಲರನ್ನೂ ಭಯಭೀತರನ್ನಾಗಿಸಿದ್ದಾಯಿತು. ಈಗ ಪ್ರತಿನಿತ್ಯವೂ ಹಠಾತ್ ಹೃದಯ ಸ್ಥಂಭನದಿಂದ ಅವರಿವರು ಮೃತರಾಗುತ್ತಿರುವ ಸುದ್ದಿಗಳೇ ಟಿವಿ ಮತ್ತಿತರ ಮಾಧ್ಯಮಗಳಲ್ಲಿ ತುಂಬಿಕೊಂಡು, ಆ ಬಗ್ಗೆ ಬಗೆಬಗೆಯ ವಿವರಗಳೂ ಸೇರಿಕೊಂಡು ಎಲ್ಲರಲ್ಲೂ ಭಯವನ್ನೂ, ಗೊಂದಲವನ್ನೂ ಹೆಚ್ಚಿಸುತ್ತಿವೆ. ತಜ್ಞರೆನಿಸಿಕೊಂಡ ವೈದ್ಯರು ಒಬ್ಬೊಬ್ಬರು ಒಂದೊಂದು ಆಧಾರರಹಿತವಾಗಿ ಹೇಳುತ್ತಿರುವುದರಿಂದ ಈ ಗೊಂದಲಗಳು ಇನ್ನಷ್ಟು ಹೆಚ್ಚುತ್ತಿವೆ, ಆಧುನಿಕ ವೈದ್ಯವಿಜ್ಞಾನದ ಬಗ್ಗೆ ಜನರಿಗೆ ವಿಶ್ವಾಸವೇ ಇಲ್ಲದಾಗುವಂತಾಗಿದೆ.

ನಮ್ಮನ್ನು ಕಾಡುವ ರೋಗಗಳನ್ನು ತಡೆಯುವುದೇ ನಮ್ಮೆಲ್ಲರ ಮೊದಲ ಆದ್ಯತೆಯಾಗಿರಬೇಕು. ಆ ಬಳಿಕವೂ ರೋಗವುಂಟಾದರೆ ಅದನ್ನು ಆದಷ್ಟು ಬೇಗನೆ ನಿಖರವಾಗಿ ಗುರುತಿಸಬೇಕು, ಸೂಕ್ತವಾದ ವೈಜ್ಞಾನಿಕ ಚಿಕಿತ್ಸೆಯನ್ನು ನೀಡಬೇಕು, ಆ ಮೂಲಕ ರೋಗದಿಂದಾಗಬಹುದಾದ ಸಮಸ್ಯೆಗಳನ್ನು ತಡೆಯುವಂತಾಗಬೇಕು.

ರೊಗಗಳು ಉಂಟಾಗದಂತೆ ತಡೆಯಬೇಕಾದರೆ ಅವುಗಳ ಕಾರಣಗಳನ್ನು ತಿಳಿಯಬೇಕು, ಆ ರೋಗಕಾರಕಗಳನ್ನು ದೂರವಿಡಬೇಕು. ರೋಗವನ್ನು ಗುರುತಿಸಬೇಕಾದರೆ ಅದರ ಲಕ್ಷಣಗಳನ್ನು ತಿಳಿದಿರಬೇಕು, ದೇಹದಲ್ಲಿ ಅವು ಕಂಡು ಬಂದೊಡನೆ ವೈದ್ಯರ ಗಮನಕ್ಕೆ ತರಬೇಕು, ಸೂಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

ನಮ್ಮನ್ನು ಕಾಡುತ್ತಿರುವ ಹೆಚ್ಚಿನ ಸೋಂಕುಗಳನ್ನು ನಾವು ನಮ್ಮ ವಿಕಾಸದ ಹಾದಿಯಲ್ಲೇ ಪಡೆದುಕೊಂಡು ಬಂದಿದ್ದೇವೆ. ಇನ್ನೂ ಕೆಲವು ಸೋಂಕುಗಳು ನಮ್ಮ ಸುತ್ತಲಿನ ಪ್ರಾಣಿ-ಪಕ್ಷಿಗಳೊಡನೆ ನಮ್ಮ ಸಂಪರ್ಕಗಳಿಂದ ನಮ್ಮೊಳಕ್ಕೆ ಹೊಕ್ಕಿವೆ, ಈಗಲೂ ಹೊಕ್ಕುತ್ತಿವೆ. ಹತ್ತು-ಹನ್ನೆರಡು ಸಾವಿರ ವರ್ಷಗಳಿಂದೀಚೆಗೆ ನಾವು ಧಾನ್ಯಗಳನ್ನು ಬೆಳೆಯತೊಡಗಿ ಅದಕ್ಕಾಗಿ ಕಾಡುಗಳನ್ನು ಕಡಿದು, ನೆಲದಲ್ಲಿ ನೀರು ನಿಲ್ಲಿಸತೊಡಗಿದ ಬಳಿಕ ಕೆಲವು ಸೋಂಕುಗಳನ್ನು ಹರಡುವ ಸೊಳ್ಳೆ, ಉಣ್ಣಿ ಇತ್ಯಾದಿ ಕೀಟಗಳು ಹೆಚ್ಚಿ ಆ ಸೋಂಕುಗಳ ಹರಡುವಿಕೆಯೂ ಹೆಚ್ಚಲು ಕಾರಣವಾಯಿತು. ಮಲೇರಿಯಾ, ಟೈಫಸ್, ಪ್ಲೇಗ್ ಸೋಂಕುಗಳು ಹೀಗೆಯೇ ಹರಡಿ ಕೋಟಿಗಟ್ಟಲೆ ಜನರನ್ನು ಕೊಂದು ಮನುಕುಲದ ಇತಿಹಾಸವನ್ನಷ್ಟೇ ಅಲ್ಲ, ಯುದ್ಧಗಳ ಫಲಿತಾಂಶಗಳನ್ನು, ಆ ಮೂಲಕ ರಾಜ್ಯ-ದೇಶಗಳ ಗಡಿಗಳನ್ನೂ ಬದಲಿಸಿವೆ. ಪ್ರತಿಜೈವಿಕಗಳನ್ನು ಕಂಡುಕೊಂಡ ಬಳಿಕ ಟೈಫಸ್, ಪ್ಲೇಗ್ ಗಳು ಸಂಪೂರ್ಣವಾಗಿ ಮರೆಯಾಗಿವೆ. ದೇಶವು ಸ್ವತಂತ್ರಗೊಂಡಾಗ ವರ್ಷಕ್ಕೆ 8 ಕೋಟಿ ಜನರನ್ನು ಸೋಂಕಿ, 8 ಲಕ್ಷ ಜನರನ್ನು ಕೊಲ್ಲುತ್ತಿದ್ದ ಮಲೇರಿಯಾ, 1951ರ ಮಲೇರಿಯಾ ನಿಯಂತ್ರಣ ಕಾರ್ಯಕ್ರಮದ ಬಳಿಕ ಬಹಳಷ್ಟು ಇಳಿಯಿತು, ಆ ಬಳಿಕ ಬೃಹತ್ ನಿರ್ಮಾಣಗಳು ನಡೆಯುತ್ತಿದ್ದಲ್ಲಿ ನೀರು ನಿಂತು ಸೊಳ್ಳೆ ಬೆಳೆದಲ್ಲಿ ಅದು ಹರಡುತ್ತಿತ್ತು, ಈಗ ಅದನ್ನು ಕೂಡ ಸಾಕಷ್ಟು ನಿಯಂತ್ರಿಸಲಾಗಿದೆ.

ಪ್ರತಿಯೊಂದು ಸೋಂಕು ರೋಗಕ್ಕೂ ಅದರದೇ ಆದ ವಿಶಿಷ್ಠ ಲಕ್ಷಣಗಳಿರುತ್ತವೆ, ಗತಿಯಿರುತ್ತದೆ, ಅವುಗಳ ಆಧಾರದಲ್ಲಿ ಸೋಂಕನ್ನು ಗುರುತಿಸುವುದು ಕಷ್ಟವಾಗದು. ಉದಾಹರಣೆಗೆ ಶ್ವಾಸಾಂಗದ ಸೋಂಕಿನಲ್ಲಿ ಕೆಮ್ಮು, ನೆಗಡಿ, ಗಂಟಲು ಅಥವಾ ಉಸಿರಾಡುವಾಗ ಎದೆ ಬದಿಯಲ್ಲಿ ನೋವು ಇತ್ಯಾದಿಗಳಿದ್ದರೆ, ಮೂತ್ರಾಂಗಗಳ ಸೋಂಕಿನಲ್ಲಿ ಉರಿಮೂತ್ರ, ಬೆನ್ನು ಯಾ ಕಿಬ್ಬೊಟ್ಟೆ ನೋವು ಇರಬಹುದು; ಉದರದೊಳಗಿನ ಅಂಗಗಳ ಸೋಂಕಿದ್ದರೆ ಉದರ ಭಾಗದ ನೋವು, ವಾಕರಿಕೆ, ಭೇದಿ ಇತ್ಯಾದಿಗಳಿರಬಹುದು; ಕೈಕಾಲುಗಳ ಸೋಂಕಿದ್ದರೆ ಆ ಭಾಗದ ಬಾವು, ನೋವು, ಕೆಂಪಾಗುವಿಕೆ ಇರಬಹುದು. ಸೋಂಕು ರೋಗಗಳಲ್ಲಿ ಜ್ವರವು ಸಾಮಾನ್ಯವಾಗಿದ್ದು, ಬ್ಯಾಕ್ಟೀರಿಯಾಗಳಿಂದ ಹಾಗೂ ಮಲೆರಿಯಾದಂತಹ ಪರೋಪಜೀವಿಗಳಿಂದ ಉಂಟಾಗುವ ಸೋಂಕಿನಲ್ಲಿ ಜ್ವರದ ಜೊತೆಗೆ ಚಳಿ ಮತ್ತು ನಡುಕಗಳಿರಬಹುದು. ಜ್ವರದ ಜೊತೆಗೆ ತಲೆನೋವು ಕೂಡ ಸಾಮಾನ್ಯವಾಗಿರಬಹುದು, ಆದರೆ ವಿಪರೀತ ತಲೆನೋವು, ಪ್ರಜ್ಞಾವಸ್ಥೆಯ ಬದಲಾವಣೆಗಳು ಮಿದುಳು ಜ್ವರದ ಲಕ್ಷಣಗಳಾಗಿರಬಹುದು.

ವೈರಾಣುಗಳಿಂದ ಉಂಟಾಗುವ ಸೋಂಕುಗಳೇ ಅತ್ಯಂತ ಸಾಮಾನ್ಯವಾಗಿದ್ದು, ಮೂರ್ನಾಲ್ಕು ದಿನಗಳಲ್ಲಿ ಯಾವುದೇ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿಲ್ಲದೆ, ದೇಹದ ರೋಗ ರಕ್ಷಣಾ ವ್ಯವಸ್ಥೆಯಿಂದಲೇ ನಿಯಂತ್ರಿಸಲ್ಪಟ್ಟು ವಾಸಿಯಾಗುತ್ತವೆ. ಫ್ಲೂ, ಕೊರೋನ, ಸಾಮಾನ್ಯ ನೆಗಡಿ ಇತ್ಯಾದಿಗಳು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ. ತೀರಾ ಅಪರೂಪಕ್ಕೆ, ವ್ಯಕ್ತಿಯಲ್ಲಿ ಅನ್ಯ ಕಾಯಿಲೆಗಳಿದ್ದು ರೋಗರಕ್ಷಣಾ ವ್ಯವಸ್ಥೆಯ ಕಾರ್ಯಗಳು ಏರುಪೇರಾಗಿದ್ದರೆ ಈ ಸಾಮಾನ್ಯ ಸೋಂಕುಗಳೂ ಬಿಗಡಾಯಿಸಬಹುದು. ಆದ್ದರಿಂದ ಯಾರಲ್ಲೇ ಆಗಲಿ ಇಂಥ ಸೋಂಕುಗಳು ಮೂರ್ನಾಲ್ಕು ದಿನಗಳಲ್ಲಿ ಉಲ್ಬಣಿಸುತ್ತಿರುವ ಲಕ್ಷಣಗಳಿದ್ದರೆ ನುರಿತ ವೈದ್ಯರನ್ನು ಕಾಣಬೇಕಾಗುತ್ತದೆ.

ಇತ್ತೀಚೆಗೆ ಸಾಮಾನ್ಯವಾಗುತ್ತಿರುವ ಡೆಂಗಿ ಜ್ವರವು ಈಡೀಸ್ ಜಾತಿಯ ಸೊಳ್ಳೆಗಳಿಂದ ಹರಡುತ್ತದೆ. ಈ ಸೊಳ್ಳೆಯು ಅಲ್ಲಲ್ಲಿ ನಿಲ್ಲುವ ಶುದ್ಧ ನೀರಿನ ಸಂಗ್ರಹಗಳಲ್ಲಿ ವೃದ್ಧಿಯಾಗುವುದರಿಂದ ಮಳೆಗಾಲದಲ್ಲಿ, ಮನೆಯ ಸುತ್ತಲೂ ಯಾ ತಾರಸಿಯಲ್ಲಿ ಅಥವಾ ತೋಟಗಳಲ್ಲಿ ನಿಲ್ಲುವ ನೀರಿನಲ್ಲಿ ಬೆಳೆಯುತ್ತವೆ, ಅದು ಡೆಂಗೀ ಹರಡಲು ಕಾರಣವಾಗುತ್ತದೆ. ಡೆಂಗೀ ಜ್ವರವು ಕೂಡ ಹೆಚ್ಚಿನವರಲ್ಲಿ ವಾರದೊಳಗೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲದೆ ವಾಸಿಯಾಗುತ್ತದೆ. ಆದರೆ ಅಪರೂಪಕ್ಕೊಮ್ಮೆ ಡೆಂಗೀ ಉಲ್ಬಣಿಸಿ ಗಂಭೀರ ಸಮಸ್ಯೆಗಳಾಗಬಹುದು; ಮೂರು-ನಾಲ್ಕನೇ ದಿನಗಳಲ್ಲಿ ಜ್ವರವು ಇಳಿಯುತ್ತಿದ್ದಂತೆ ರಕ್ತದೊತ್ತಡದಲ್ಲಿ ಇಳಿಕೆಯಾಗುವುದು, ಕಾಲುಗಳಲ್ಲಿ ಚರ್ಮದಡಿ ರಕ್ತಸ್ರಾವದ ಕಲೆಗಳು ಗೋಚರಿಸುವುದು, ಹೊಟ್ಟೆ ಉಬ್ಬರಿಸಿದಂತಾಗುವುದು, ಎದ್ದು ನಿಲ್ಲುವಾಗ ತಲೆ ಸುತ್ತುವುದು ಇತ್ಯಾದಿ ಲಕ್ಷಣಗಳಿದ್ದರೆ ಆಸ್ಪತ್ರೆಯಲ್ಲಿ ದಾಖಲಾಗಬೇಕಾಗುತ್ತದೆ. ಕೊರೋನ, ಫ್ಲೂ ಸೋಂಕುಗಳಲ್ಲಿ ಯಾರಲ್ಲಿ ರೋಗ ಬಿಗಡಾಯಿಸಬಹುದೆಂದು ಮೊದಲೇ ಅಂದಾಜು ಮಾಡಲು ಸಾಧ್ಯವಿದೆ, ಆದರೆ ಡೆಂಗೀ ಸೋಂಕಿನಲ್ಲಿ ಈ ಸಮಸ್ಯೆಗಳು ಯಾರಲ್ಲಿ ಉಂಟಾಗುತ್ತವೆ ಎಂದು ಅಂದಾಜಿಸುವುದು ಸಾಧ್ಯವಿಲ್ಲ, ಆದ್ದರಿಂದ ಡೆಂಗೀ ರೋಗಲಕ್ಷಣಗಳುಳ್ಳವರು ಜ್ವರ ತೊಡಗಿದ ಬಳಿಕ 4-6ನೇ ದಿನಗಳಲ್ಲಿ ಎಚ್ಚರಿಕೆಯಿಂದ ತಮ್ಮ ಲಕ್ಷಣಗಳನ್ನು ಗಮನಿಸುವುದು ಅಗತ್ಯ.

ಈ ಸೋಂಕು ರೋಗಗಳನ್ನು ಎದುರಿಸುವುದಕ್ಕೆ ಆಯಾ ಊರುಗಳಲ್ಲಿ ಆಯಾ ಕಾಲದಲ್ಲಿ ಈ ಸೋಂಕುಗಳ ಹರಡುವಿಕೆಯ ಬಗ್ಗೆ ಮಾಹಿತಿಯನ್ನು ಹೊಂದಿರಬೇಕು, ಸೋಂಕಿತರಾಗುವ ಸಾಧ್ಯತೆಗಳ ಬಗ್ಗೆ ಜಾಗೃತರಾಗಿರಬೇಕು. ಊರಲ್ಲಿ ಡೆಂಗಿ, ಮಲೇರಿಯದಂತಹ ಸೋಂಕುಗಳು ಹರಡುತ್ತಿದ್ದರೆ ಜ್ವರವುಳ್ಳವರು ಇವುಗಳ ಬಗ್ಗೆ ಪರೀಕ್ಷಿಸಿಕೊಳ್ಳಬೇಕು.

ಸೋಂಕುಗಳ ಇರುವಿಕೆಯ ಬಗ್ಗೆ, ರೋಗ ಲಕ್ಷಣಗಳ ಬಗ್ಗೆ, ತಡೆಯುವ ಕ್ರಮಗಳ ಬಗ್ಗೆ ಮನೆಮನೆಗೂ ಮಾಹಿತಿ ತಲುಪಿಸಲು ಶಾಲೆಗಳು ಉತ್ತಮ ಅವಕಾಶವನ್ನೊದಗಿಸುವುದರಿಂದ ಸಮುದಾಯ ಆರೋಗ್ಯ ಪಾಲನೆಯಲ್ಲಿ ಶಾಲೆಗಳಿಗೂ, ಶಿಕ್ಷಕರಿಗೂ ಮಹತ್ವದ ಪಾತ್ರವಿದೆ.

ಮೇಲೆ ಹೇಳಿರುವಂತೆ ಸೋಂಕುಗಳು ಮನುಷ್ಯರೊಳಕ್ಕೆ ಹೊಕ್ಕುವುದಕ್ಕೆ ಮತ್ತು ಹರಡುತ್ತಿರುವುದಕ್ಕೆ ನಾಗರಿಕತೆಯ ಉಗಮವೂ, ಬೆಳವಣಿಗೆಗಳೂ ಕಾರಣವಾಗಿವೆಯಾದರೆ, ಆಧುನಿಕ ಆಹಾರ ಹಾಗೂ ಜೀವನ ಶೈಲಿಗಳಿಂದ ಉಂಟಾಗುತ್ತಿರುವ ಆಧುನಿಕ ರೋಗಗಳು ಈ ಸೋಂಕುಗಳು ಉಲ್ಬಣಿಸುವುದಕ್ಕೆ ಕಾರಣವಾಗುತ್ತಿವೆ. ಸಕ್ಕರೆ ಕಾಯಿಲೆಯುಳ್ಳವರಲ್ಲಿ ಎಲ್ಲ ಸೋಂಕುಗಳೂ ಗಂಭೀರಗೊಳ್ಳುವ ಅಪಾಯವಿರುತ್ತದೆ. ಕೊರೋನ ಸೋಂಕು ಬಿಗಡಾಯಿಸಿರುವವರಲ್ಲಿ ಬಹುತೇಕರು ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ, ಬೊಜ್ಜು, ಹೃದ್ರೋಗ ಮುಂತಾದ ಆಧುನಿಕ ರೋಗಗಳಿದ್ದವರೇ ಆಗಿದ್ದರು ಎನ್ನುವುದು ಗಮನಾರ್ಹವಾಗಿದೆ.

ಆಧುನಿಕ ರೋಗಗಳೆಂದು ಪರಿಗಣಿಸಲ್ಪಡುತ್ತಿರುವ ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ, ಬೊಜ್ಜು, ಹೃದಯಾಘಾತ ಹಾಗೂ ಪಾರ್ಶ್ವವಾಯುಗಳಿಗೆ ಕಾರಣವಾಗುವ ರಕ್ತನಾಳಗಳ ಕಾಯಿಲೆ, ರಕ್ತದಲ್ಲಿ ಟ್ರೈಗ್ಲಿಸರೈಡ್ ಏರಿಕೆ (ಬಹು ಪ್ರಚಾರದ ಕೊಲೆಸ್ಟರಾಲ್ ಏರಿಕೆಗಿಂತ ಟ್ರೈಗ್ಲಿಸರೈಡ್ ಏರಿಕೆಗೆ ಹೆಚ್ಚಿನ ಮಹತ್ವವಿದೆ), ಯೂರಿಕಾಮ್ಲದ ಏರಿಕೆ, ಯಕೃತ್ತಿನಲ್ಲಿ ಮೇದಸ್ಸಿನ ಶೇಖರಣೆ ಇತ್ಯಾದಿಗಳೆಲ್ಲವೂ ಆಧುನಿಕ ಆಹಾರ ಹಾಗೂ ಜೀವನಶೈಲಿಗಳೊಂದಿಗೆ ನೇರವಾದ ಸಂಬಂಧವನ್ನು ಹೊಂದಿವೆ.

ವಾನರನಿಂದ ಮಾನವನ ವಿಕಾಸಕ್ಕೆ ಆಹಾರದ ಅಲಭ್ಯತೆಯೇ ಪ್ರಮುಖ ಕಾರಣವಾಗಿತ್ತು. ಲಭ್ಯವಾಗದ ಹಣ್ಣುಗಳನ್ನು ಬಿಟ್ಟು ಮೀನು ಮತ್ತಿತರ ಜಲಚರಗಳನ್ನು, ಬಳಿಕ ಬೇಟೆಯಾಡಿ ಪಡೆದ ಮಾಂಸಗಳನ್ನು ಸೇವಿಸಿ ಆಧುನಿಕ ಮಾನವನ ವಿಕಾಸವಾಯಿತು. ಎರಡೂವರೆ ಲಕ್ಷ ವರ್ಷಗಳ ಅಸ್ತಿತ್ವದುದ್ದಕ್ಕೂ ಬೇಟೆಯಾಡಿ ಆಹಾರವನ್ನು ಸಂಗ್ರಹಿಸಿ ತಿಂದು ಬದುಕಿದ ಮನುಷ್ಯರು ಧಾನ್ಯಗಳನ್ನು ಬೆಳೆಯತೊಡಗಿದ್ದು ಕೇವಲ 10-12 ಸಾವಿರ ವರ್ಷಗಳಿಂದೀಚೆಗಷ್ಟೇ, ಅವುಗಳೇ ನಮ್ಮ ಮುಖ್ಯ ಆಹಾರಗಳಾದದ್ದು 3-4 ಸಾವಿರ ವರ್ಷಗಳಿಂದಷ್ಟೇ. ತೀರಾ ಇತ್ತೀಚೆಗೆ, ಅಂದರೆ ಆರೇಳು ದಶಕಗಳಿಂದಷ್ಟೇ, ಧಾನ್ಯಗಳನ್ನು ಸಂಸ್ಕರಿಸಿ ತಯಾರಿಸಿದ ತಿನಿಸುಗಳು, ಸಕ್ಕರೆಭರಿತ ತಿನಿಸುಗಳು, ಹಣ್ಣುಗಳು ಹಾಗೂ ಹಾಲು ಮತ್ತದರ ಉತ್ಪನ್ನಗಳೇ ನಮ್ಮ ಮುಖ್ಯ ಆಹಾರಗಳಾಗಿವೆ. ಈ ಬದಲಾವಣೆಗೆ ಪ್ರಚೋದನೆ ನೀಡುತ್ತಾ ಬಂದಿರುವುದು ವೈದ್ಯರು ಮತ್ತು ಆಹಾರವನ್ನು ಸೂಚಿಸುವ ವಿವಿಧ ‘ತಜ್ಞ ಸಂಘಟನೆ’ಗಳೇ ಎನ್ನುವುದು ವಿಪರ್ಯಾಸವಾಗಿದೆ. ಆಹಾರಕ್ರಮವು ಹೀಗೆ ಹೆಚ್ಚು ಹೆಚ್ಚು ‘ಆಧುನಿಕ’ಗೊಂಡಂತೆ ‘ಆಧುನಿಕ ರೋಗಗಳೂ’ ಏರುತ್ತಲೇ ಸಾಗಿವೆ, ಆರೇಳು ದಶಕಗಳ ಹಿಂದೆ 60-70ರ ವಯಸ್ಸಿನ ಧನಿಕರನ್ನಷ್ಟೇ ಕಾಡುತ್ತಿದ್ದ ಈ ರೋಗಗಳು ಈಗ 20-30ರಲ್ಲೇ ಸಾಮಾನ್ಯರಲ್ಲೇ ಉಂಟಾಗುತ್ತಿವೆ.

ಈ ರೋಗಗಳನ್ನು ತಡೆಯಬೇಕಾದರೆ ಆಹಾರದಲ್ಲಿ ಮಾಡಿರುವ ಕೆಟ್ಟ ಬದಲಾವಣೆಗಳನ್ನು ತಿದ್ದಿ ಪಶುವಿನ ಹಾಲು ಹಾಗೂ ಧಾನ್ಯ-ಸಕ್ಕರೆಗಳ ಬಳಕೆಯನ್ನು ಕನಿಷ್ಠಗೊಳಿಸಬೇಕಾಗುತ್ತದೆ. ಇದನ್ನು ಶಿಶುವು ಗರ್ಭದಲ್ಲಿರುವಾಗ ತಾಯಿಯಿಂದಲೇ ಆರಂಭಿಸಿ, ಮಗುವು ಬೆಳೆಯುತ್ತಿದ್ದಂತೆ ಮುಂದುವರಿದು ಜೀವನವಿಡೀ ಪಾಲಿಸಬೇಕಾಗುತ್ತದೆ.

ಮನುಷ್ಯನ ದೇಹದೊಳಗೆ ಈ ‘ಆಧುನಿಕ’ ರೋಗಗಳು ಉಂಟಾಗುವ ಮುನ್ಸೂಚನೆಗಳನ್ನು ಹೊರಗಿನಿಂದಲೇ ಗುರುತಿಸಬಹುದು. ದೇಹದ ತೂಕ ಹೆಚ್ಚುತ್ತಾ ಹೋಗುವುದು, ಕುತ್ತಿಗೆ ಹಾಗೂ ಕಂಕುಳಿನ ಬಣ್ಣ ಕಪ್ಪಾಗುವುದು, ತಲೆಹೊಟ್ಟು, ವಯಸ್ಕರಲ್ಲೂ ಮೊಡವೆಗಳೇಳುವುದು, ಕಿರಿವಯಸ್ಕರಲ್ಲೇ ಕೂದಲು ಬಿಳುಪಾಗುವುದು, ತಲೆಕೂದಲು ಕಡಿಮೆಯಾಗುವುದು, ಪದೇ ಪದೇ ತುರಿಕಜ್ಜಿಗಳಾಗುವುದು ಇತ್ಯಾದಿಗಳೆಲ್ಲವೂ ದೇಹದೊಳಗಿನ ಅನಾರೋಗ್ಯಕರ ಬದಲಾವಣೆಗಳನ್ನು ಸೂಚಿಸುತ್ತವೆ. ಇಂಥ ಲಕ್ಷಣಗಳಿದ್ದರೆ ಜಾಗೃತರಾಗಬೇಕು, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಇತ್ತೀಚೆಗೆ ಯುವಜನರಲ್ಲೂ ಹಠಾತ್ ಹೃದಯ ಸ್ಥಂಭನದಿಂದ ಸಾವುಗಳಾಗುತ್ತಿರುವ ಬಗ್ಗೆ ಪ್ರತಿನಿತ್ಯವೂ ವರದಿಗಳಾಗುತ್ತಿವೆ, ಅವುಗಳ ಬಗ್ಗೆ ಬಗೆಬಗೆಯ ವಿಶ್ಲೇಷಣೆಗಳೂ ನಡೆಯುತ್ತಿವೆ. ಹೃದಯಾಘಾತಕ್ಕೆ ಹೃದಯಕ್ಕೆ ರಕ್ತ ಪೂರೈಸುವ ನಾಳಗಳಲ್ಲಿ ಸಮಸ್ಯೆಗಳಾಗುವುದೇ ಅತಿ ಮುಖ್ಯ ಕಾರಣವಾಗಿವೆ. ಇದಕ್ಕೂ ನಮ್ಮ ಆಹಾರ ಹಾಗೂ ಜೀವನಶೈಲಿಗಳೇ ಕಾರಣಗಳಾಗಿದ್ದು, ಇವು ಸರಿಯಿರದಿದ್ದರೆ ಕಾಯಿಲೆಯೂ ಎಳವೆಯಿಂದಲೇ ತೊಡಗಿ ಹೆಚ್ಚುತ್ತಾ ಹೋಗುತ್ತದೆ.

ಹೆಚ್ಚಿನವರಲ್ಲಿ ಹೃದಯಾಘಾತದ ಮುನ್ಸೂಚನೆಗಳೂ ಇರುತ್ತವೆ; ಅವನ್ನು ಕಡೆಗಣಿಸದೆ ಕೂಡಲೇ ಪರೀಕ್ಷಿಸಿಕೊಂಡು ಸೂಕ್ತ ಕ್ರಮಗಳನ್ನು ಕೈಗೊಂಡರೆ ಹೃದಯಾಘಾತವನ್ನು ತಡೆಯಲು ಸಾಧ್ಯವಾಗುತ್ತದೆ. ನಿತ್ಯವೂ ಅಭ್ಯಾಸವಾಗಿರುವ ಕೆಲಸವನ್ನು ಮಾಡುವಾಗ ಅಥವಾ ನಡೆಯುತ್ತಾ ಸಾಗುವಾಗ ಕುತ್ತಿಗೆ ಯಾ ಎದೆ ಒತ್ತಿದಂತಾಗುವುದು, ಹೊಟ್ಟೆಯ ಮೇಲ್ಭಾಗ ಯಾ ಎದೆಯಲ್ಲಿ ತುಂಬಿ ಬಂದಂತಾಗುವುದು, ಎದೆ, ಕತ್ತು ಅಥವಾ ಭುಜದಲ್ಲಿ ಸೆಳೆತ ಯಾ ನೋವಾಗುವುದು, ಆಯಾಸ ಯಾ ಉಸಿರಾಡಲು ಕಷ್ಟವೆನಿಸುವುದು ಮುಂತಾದ ಯಾವುದೇ ತೊಂದರೆಗಳಾದರೂ ಹೃದ್ರೋಗಕ್ಕೆ ಪರೀಕ್ಷೆಗಳನ್ನು ಮಾಡಿಸುವುದು ಒಳ್ಳೆಯದು. ಇಂಥ ಲಕ್ಷಣಗಳು ಸ್ಪಷ್ಟವಾಗಿರುವವರಲ್ಲಿ ಇಸಿಜಿ ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆಗಳು ಕಾಣಿಸದಿದ್ದರೆ ಹೃದಯದಲ್ಲಿ ಸಮಸ್ಯೆಯಿಲ್ಲ ಎಂದು ಖಾತರಿ ಪಡಿಸಲು ಟ್ರೆಡ್ ಮಿಲ್ ಅಥವಾ ಆಂಜಿಯೋಗ್ರಾಮ್ ಮಾಡಬೇಕಾಗಲೂ ಬಹುದು.

ಒಟ್ಟಿನಲ್ಲಿ, ಸೋಂಕು ರೋಗಗಳ ತೀವ್ರತೆಯನ್ನು ತಡೆಯುವುದಕ್ಕೂ, ಸೋಂಕಲ್ಲದ ಆಧುನಿಕ ರೋಗಗಳನ್ನು ತಡೆಯುವುದಕ್ಕೂ ನಮ್ಮ ಆಹಾರ ಹಾಗೂ ಜೀವನಶೈಲಿಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳಬೇಕು. ನಮ್ಮ ದೇಹಕ್ಕನುಗುಣವಾಗಿ ನಮ್ಮ ಆಹಾರವಿರಬೇಕೇ ಹೊರತು ನಮ್ಮ ಆಹಾರಕ್ಕನುಗುಣವಾಗಿ ದೇಹವು ಬದಲಾಗದು, ಬದಲಿಗೆ ರೋಗಕ್ಕೀಡಾಗುತ್ತದೆ ಎನ್ನುವುದು ಅರ್ಥವಾಗಬೇಕು. ಸಕ್ಕರೆ, ಸಿಹಿತಿನಿಸುಗಳು, ಹಣ್ಣುಗಳು ಹಾಗೂ ಅವುಗಳ ಉತ್ಪನ್ನಗಳು, ಪಶುಗಳ ಹಾಲು ಮತ್ತು ಉತ್ಪನ್ನಗಳು, ಸಂಸ್ಕರಿತ ಧಾನ್ಯಗಳ ತಿನಿಸುಗಳು ಇಲ್ಲವಾಗಬೇಕು ಅಥವಾ ಅತ್ಯಲ್ಪವಾಗಬೇಕು; ತರಕಾರಿಗಳು, ಬೀಜಗಳು, ಮೊಟ್ಟೆ, ಮೀನು, ಮಾಂಸಗಳು ಆಹಾರದ ಮುಖ್ಯ ಭಾಗಗಳಾಗಿರಬೇಕು. ಈ ಅಭ್ಯಾಸಗಳು ಎಳವೆಯಲ್ಲೇ ತೊಡಗಬೇಕು, ಅವನ್ನು ಉತ್ತೇಜಿಸಲು ಶಾಲೆಗಳಲ್ಲಿ ಕ್ರಮ ವಹಿಸಬೇಕು. ಜೊತೆಗೆ ನಿಯತವಾದ ಬೀಸು ನಡಿಗೆ, ಆಟೋಟಗಳಿರಬೇಕು. ಜಿಮ್ ನಲ್ಲಿ ದೇಹದಾರ್ಢ್ಯ ಬೆಳೆಯಬಹುದು, ಆರೋಗ್ಯ ಭಾಗ್ಯದ ಖಾತರಿಯಿರದು. ಯೋಗ ಎಂದು ಹೇಳಲಾಗುತ್ತಿರುವುದರಿಂದ ಯಾವುದೇ ರೋಗವನ್ನು ತಡೆಯಲಾಗದು, ಚಿಕಿತ್ಸೆಯನ್ನೂ ನೀಡಲಾಗದು.

Be the first to comment

Leave a Reply

Your email address will not be published.


*