ಹೆಲ್ತ್ ಐಡಿ, ಆರೋಗ್ಯ ಮಾಹಿತಿ ಮತ್ತು ಖಾಸಗಿತನ

ಹೆಲ್ತ್ ಐಡಿಯಿಂದ ಆರೋಗ್ಯ ಮಾಹಿತಿ ಮತ್ತು ಖಾಸಗಿತನ ಹರಣ

ಡಾ| ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು, ಶ್ರೀ ರಾಜಾರಾಂ ತಲ್ಲೂರು, ಉಡುಪಿ

ವಾರ್ತಾಭಾರತಿ, ಅಕ್ಟೋಬರ್ 2, 2021

https://www.varthabharati.in/article/vishesha-varadigalu/308644

ಆಗಸ್ಟ್ 2018ರಲ್ಲಿ ನೀತಿ ಆಯೋಗವು ರಾಷ್ಟ್ರೀಯ ಆರೋಗ್ಯ ಬಣವೆ ಎಂಬ ಹೊಸ ಯೋಜನೆಯ ಕರಡನ್ನು ಪ್ರಕಟಿಸಿತ್ತು. ಅದರ ನೀತ್ಯಾತ್ಮಕ ಮುಂದುವರಿಕೆಯಾಗಿ, ಭಾರತದ ನಾಗರಿಕರಿಗೆ ರಾಷ್ಟ್ರೀಯ ಆರೋಗ್ಯ ಗುರುತು ಚೀಟಿ – ಹೆಲ್ತ್ ಐಡಿ – ಯನ್ನು ನೀಡುವ ಯೋಜನೆಯನ್ನು ಸೆಪ್ಟಂಬರ್ 23ರಂದು ಮಾನ್ಯ ಪ್ರಧಾನಿಗಳು ಘೋಷಿಸಿದ್ದಾರೆ. ಇದರೊಂದಿಗೆ, 2017ರಿಂದೀಚೆಗೆ ಐದು ವರ್ಷಗಳಿಂದ ರೂಪುಗೊಳ್ಳುತ್ತಿದ್ದ ಆರೋಗ್ಯ ಸಂಬಂಧಿ ದತ್ತಾಂಶಗಳ ಕ್ರೋಢೀಕರಣ ಯೋಜನೆಗಳು ಕಾರ್ಯರೂಪಕ್ಕೆ ಬಂದಂತಾಗಿದೆ. ಆಯುಷ್ಮಾನ್ ಭಾರತ ಯೋಜನೆಯನ್ನು ನಿರ್ವಹಿಸುತ್ತಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದಡಿಯಲ್ಲಿ ಈ ಹೆಲ್ತ್ ಐಡಿ ಯೋಜನೆಯನ್ನು ತರಲಾಗಿದೆ.

ಈ ಗುರುತು ಚೀಟಿಯ ನಿಜ ಸ್ವರೂಪ ತಿಳಿಯಬೇಕಾದರೆ ಈ ಆರೋಗ್ಯ ಬಣವೆಯ ಕರಡನ್ನು ಓದಬೇಕು. ಅದರ ಮೊದಲ ಪುಟದಲ್ಲೇ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ॥ ವಿನೋದ್ ಪೌಲ್ ಅವರು ರಾಷ್ಟ್ರೀಯ ಆರೋಗ್ಯ ಬಣವೆಯು ದೂರದರ್ಶಿತ್ವದ, ಗಣಕೀಯ ಚೌಕಟ್ಟಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅದನ್ನು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಬಳಸಬಹುದೆಂದೂ, ಕ್ಷಿಪ್ರವಾದ, ವಿಚ್ಛಿದ್ರಕಾರಿಯಾದ ಬದಲಾವಣೆಗಳನ್ನೂ, ಅನಿರೀಕ್ಷಿತವಾದ ತಿರುವುಗಳನ್ನೂ ಕಾಣಲಿರುವ (ಆರೋಗ್ಯ) ಕ್ಷೇತ್ರಕ್ಕೆ ಅದು ಭವಿಷ್ಯದ ಮಾಹಿತಿ ತಂತ್ರಜ್ಞಾನದ ಮಾರ್ಗೋಪಾಯಗಳನ್ನು ಒದಗಿಸಲಿದೆ ಎಂದೂ ಬರೆದಿದ್ದಾರೆ.

ಇದೇ ಕರಡಿನ ಎರಡನೇ ಪುಟದಲ್ಲಿ ನೀತಿ ಆಯೋಗದ ಮುಖ್ಯ ಆಡಳಿತಾಧಿಕಾರಿ ಅಮಿತಾಭ್ ಕಾಂತ್ ಅವರು ಪ್ರಸ್ತಾವಿತ ಆರೋಗ್ಯ ಬಣವೆಯು ಶಕ್ತಿಶಾಲಿ ಸಾಧನ-ವಿಧಾನಗಳನ್ನು ಬಳಸಿ ಅಗಾಧ ಮಾಹಿತಿಯ ವಿಶ್ಲೇಷಣೆ, ಯಂತ್ರಕಲಿಕೆ, ಕೃತಕ ಬುದ್ದಿಮತ್ತೆ, ಮತ್ತು ಮುಂದಕ್ಕೆ, ನೀತಿ ನಿರೂಪಣೆ ಮಾಡಬಲ್ಲ ಅತ್ಯಾಧುನಿಕ ಗಣಕೀಯ ಭಾಷೆಗಳನ್ನು ಅಭಿವೃದ್ಧಿಪಡಿಸುವವರೆಗೆ ಬೆಳೆಯಲಿದೆ ಎಂದೂ, ಆ ಮೂಲಕ, ಜನತೆ, ಹಣ ಮತ್ತು ಮಾಹಿತಿಗಳ ಹರಿವನ್ನು ಮರುವಿನ್ಯಾಸಗೊಳಿಸಿ, ಎಲ್ಲಾ ರಾಜ್ಯಗಳಿಗೆ ಮತ್ತು ಯೋಜನೆಗಳಿಗೆ ಆರೋಗ್ಯದ ವಿಚಾರದಲ್ಲಿ ಸಮಗ್ರವಾದ ತಳಹದಿಯನ್ನು ಒದಗಿಸಿ, ಆರೋಗ್ಯ ರಕ್ಷಣೆಯ ವೆಚ್ಚವನ್ನು ಗಣನೀಯವಾಗಿ ಇಳಿಸಿ, ನಗದುರಹಿತವಾಗಿಸಿ ಆರೋಗ್ಯ ಸುಧಾರಣೆಗೆ ನೆರವಾಗಲಿದೆ ಎಂದು ಬರೆದಿದ್ದಾರೆ.

ಮತ್ತೀಗ ಪ್ರಧಾನಿಗಳು ಈ ಗುರುತು ಚೀಟಿಯನ್ನು ಉದ್ಘಾಟಿಸುತ್ತಾ, ಹದಿನಾಲ್ಕು ಅಂಕೆಗಳ ಈ ಗುರುತು ಚೀಟಿಯನ್ನು ಪಡೆಯುವುದು ಐಚ್ಛಿಕವಾಗಿದೆ, ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಗೆ ಅದನ್ನು ಜೋಡಿಸಲಾಗುತ್ತದೆ, ಆ ಖಾತೆಯಲ್ಲಿ ಎಲ್ಲಾ ಆರೋಗ್ಯ ದಾಖಲೆಗಳನ್ನು ಶೇಖರಿಸಿಟ್ಟು ದೇಶದಲ್ಲಿ ಎಲ್ಲಿ ಬೇಕಾದರೂ ತೆರೆದು ಬಳಸಬಹುದು, ಇದೊಂದು ಅದ್ಭುತ ಯೋಜನೆ, ಕೊರೋನ ಲಸಿಕೆಗೆ ಬಳಸಲಾಗುತ್ತಿರುವ ಕೋವಿನ್ ಆಪ್ ಕೂಡ ಒಂದು ಮಹತ್ಸಾಧನೆ ಎಂದೆಲ್ಲ ಹೇಳಿದ್ದಾರೆ.

ಇವೆಲ್ಲವನ್ನೂ ಪರಿಗಣಿಸಿ ನೋಡಿದಾಗ ಈ ಯೋಜನೆಯು ಹಲವು ಆತಂಕಗಳನ್ನು ಹುಟ್ಟಿಸುತ್ತದೆ. ಎಲ್ಲೆಡೆಗಳಿಂದ ಎಳೆದು ಪಡೆಯುವ ಮಾಹಿತಿಯನ್ನು ಯಂತ್ರಕಲಿಕೆಯ ಕೃತಕ ಬುದ್ಧಿಮತ್ತೆಯಿಂದ ವಿಶ್ಲೇಷಿಸಿ, ಯಂತ್ರಗಳಿಂದಲೇ ನೀತಿ ನಿರೂಪಣೆ ಮಾಡಿಸಿ, ಸಂಸದೀಯ ಪ್ರಜಾಪ್ರಭುತ್ವವನ್ನು ಬೈಪಾಸ್ ಮಾಡುವುದು ಈ ಯೋಜನೆಯ ಎದ್ದು ಕಾಣುವ ಒಂದು ಸಾಧ್ಯತೆಯಾದರೆ, ಇನ್ನೊಂದೆಡೆ  ದೇಶದ ಎಲ್ಲಾ ಸಾರ್ವಜನಿಕ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಾಹಿತಿಯೂ, ಎಲ್ಲಾ ನಾಗರಿಕರ ಮಾಹಿತಿಯೂ ಆ ಬಣವೆಯೊಳಗೆ ಸೇರಲಿವೆ; ಕೇಂದ್ರ ಹಾಗೂ ರಾಜ್ಯ  ಸರಕಾರಗಳು ಅದನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಬಹುದಾಗಿದೆ; ಭವಿಷ್ಯದ ಮಾಹಿತಿ ತಂತ್ರಜ್ಞಾನವನ್ನು ಕಟ್ಟುವವರಿಗೆ ಒಪ್ಪಿಸಬಹುದಾಗಿದೆ; ಮತ್ತು ಆ ಮೂಲಕ, ಆರೋಗ್ಯ ಕ್ಷೇತ್ರವನ್ನು ಛಿದ್ರಗೊಳಿಸಿ, ಖಾಸಗಿ ದೈತ್ಯರ ಕೈಗಳಿಗೊಪ್ಪಿಸಿ, ಅಲ್ಲಿ ಅನಿರೀಕ್ಷಿತವಾದ ತಿರುವುಗಳನ್ನುಂಟು ಮಾಡಬಹುದಾಗಿದೆ.

ಗೋಪ್ಯತೆಯ ಪ್ರಶ್ನೆಗಳು

ಈ ಯೋಜನೆ ಈಗ ರಾಷ್ಟ್ರೀಯ ಗಣಕೀಕೃತ ಆರೋಗ್ಯ ಅಭಿಯಾನ – ನ್ಯಾಶನಲ್ ಡಿಜಿಟಲ್ ಹೆಲ್ತ್ ಮಿಶನ್ – ಎಂಬ ರೂಪವನ್ನು ಧರಿಸಿ, ಅದರಡಿಯಲ್ಲಿ ಸಾಕಾರಗೊಂಡಿದೆ. ಇತ್ತೀಚೆಗೆ ಇದೇ ಅಭಿಯಾನದ ಅಡಿಯಲ್ಲಿ ಈ ಯೋಜನೆಯ ದತ್ತಾಂಶಗಳ ನಿರ್ವಹಣೆ ಹಾಗೂ ಖಾಸಗಿತನಗಳ ನೀತಿಯನ್ನೂ, ಸಮಾಲೋಚನಾ ಪತ್ರವನ್ನೂ ಪ್ರಕಟಿಸಲಾಗಿದ್ದು, ಅವು ಯೋಜನೆಯ ಒಟ್ಟು ಉದ್ದೇಶಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತುತ್ತಿವೆ.

ಹೆಲ್ತ್ ಐಡಿಯಡಿ ಇರುವ ಆರೋಗ್ಯ ಮಿಂದಾಖಲೆಗಳು ಸರಕಾರದ ಸ್ವತ್ತಾಗಿರುತ್ತವೆ ಎಂದೂ, ಅವನ್ನು ಹೆಲ್ತ್ ಐಡಿಯನ್ನು ಹೊಂದಿರುವ ನಾಗರಿಕನಲ್ಲದೆ ಆರೋಗ್ಯ ಸೇವಾ ಸಂಸ್ಥೆಗಳು, ವೈದ್ಯರು, ಸಂಶೋಧನಾ ಸಂಸ್ಥೆಗಳು, ಔಷಧ ಸಂಸ್ಥೆಗಳು/ವಹಿವಾಟುಗಳು ಮತ್ತಿತರರು ನೋಡಬಹುದು ಮತ್ತು ಬಳಸಬಹುದು ಎಂದೂ ಈ ನೀತಿಯಲ್ಲಿ ಹೇಳಲಾಗಿದೆ. ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಆಧುನಿಕ ವೈದ್ಯಕೀಯ ಸಂಸ್ಥೆಗಳು ಮಾತ್ರವಲ್ಲ, ಆಯುಷ್‌ನಂತಹ ಬದಲಿ ಪದ್ಧತಿಗಳವರನ್ನೂ ಸೇರಿಸಲಾಗಿದೆ. ಈ ದಾಖಲೆಗಳ ಗೋಪ್ಯತೆಯ ರಕ್ಷಣೆಯ ಬಗ್ಗೆ ಈ ನೀತಿಯಲ್ಲಿ ಸ್ಪಷ್ಟವಾದ ಮಾಹಿತಿಯಿಲ್ಲ, ಅಂಥ ಕಾನೂನುಗಳೂ ಇದುವರೆಗೆ ಬಂದಿಲ್ಲ. ಅಂದರೆ ಈ ಗುರುತು ಚೀಟಿಯ ಮಿಂದಾಖಲೆಗಳ ಯೋಜನೆಯಿಂದಾಗಿ ಈ ದೇಶದ ನಾಗರಿಕರ ದೈಹಿಕ ಹಾಗೂ ವೈಯಕ್ತಿಕ ಆರೋಗ್ಯದ ವಿವರಗಳೆಲ್ಲವೂ ಸರಕಾರದ ಸ್ವತ್ತಾಗಿ, ಸರಕಾರದ ಮೂಲಕ ಖಾಸಗಿ ಕಂಪೆನಿಗಳ ಬಳಕೆಗೆ ಲಭ್ಯವಾಗಲಿವೆ, ಅವು ಈ ದಾಖಲೆಗಳನ್ನು ಬಳಸುವ ವಿಧಾನಗಳ ಬಗ್ಗೆ ಪಾರದರ್ಶಕತೆ ಇಲ್ಲ ಎಂದಾಗುತ್ತದೆ.

ಯಾರೊಬ್ಬರ ದೈಹಿಕ ಹಾಗೂ ವೈದ್ಯಕೀಯ ಮಾಹಿತಿಗಳನ್ನು ಪಡೆದುಕೊಳ್ಳುವ ಯಾ ಶೇಖರಿಸಿಟ್ಟುಕೊಳ್ಳುವ ಸಾಂವಿಧಾನಿಕ ಅಧಿಕಾರವಾಗಲೀ, ಅಗತ್ಯವಾಗಲೀ ಯಾವುದೇ ಸರಕಾರಕ್ಕಿಲ್ಲ. ಯಾವುದೇ ವೈದ್ಯನಾಗಲೀ, ಆರೋಗ್ಯ ಸೇವಾ ಸಂಸ್ಥೆಯಾಗಲೀ ಯಾವುದೇ ವ್ಯಕ್ತಿಯ ವೈಯಕ್ತಿಕ ಹಾಗೂ ವೈದ್ಯಕೀಯ (ದೈಹಿಕ, ಮಾನಸಿಕ) ಮಾಹಿತಿಯನ್ನು ಯಾರೊಬ್ಬರಿಗೂ ನೀಡುವಂತಿಲ್ಲ; ನ್ಯಾಯಾಲಯದ ಆದೇಶ, ವ್ಯಕ್ತಿಯಿಂದ ಸಮಾಜಕ್ಕೆ ಅಥವಾ ಅನ್ಯರಿಗೆ ತೀವ್ರ ಅಪಾಯವಾಗಬಲ್ಲಂಥ ಸೀಮಿತ ಸಂದರ್ಭಗಳನ್ನು ಬಿಟ್ಟರೆ ವೈದ್ಯಕೀಯ ಮಾಹಿತಿಯನ್ನು ಹೊರಹಾಕುವುದು ವೈದ್ಯಕೀಯ ವೃತ್ತಿ ಸಂಹಿತಿಗೆ ವಿರುದ್ಧವಾಗುತ್ತದೆ, ದಂಡನೀಯವಾಗುತ್ತದೆ. ಹಾಗಿರುವಾಗ ಖಾಸಗಿತನ ಹಾಗೂ ಗೋಪ್ಯತೆಗಳ ಕಾನೂನುಗಳಿಲ್ಲದೆ ಜನರ ವೈಯಕ್ತಿಕ, ವೈದ್ಯಕೀಯ ಮಾಹಿತಿಯನ್ನು ಸರಕಾರವು ಪಡೆಯುವಂತಿಲ್ಲ, ಜನರಾಗಲೀ, ವೈದ್ಯರಾಗಲೀ ಅವನ್ನು ಸರಕಾರಕ್ಕೆ ನೀಡುವಂತಿಲ್ಲ.

ಆಧುನಿಕ ವೈದ್ಯಕೀಯ ಸಂಸ್ಥೆಗಳು ಜನರಿಂದ ಪಡೆದ ಮಾಹಿತಿ, ನಡೆಸಿದ ಪರೀಕ್ಷೆಗಳು ಹಾಗೂ ನೀಡಿದ ಚಿಕಿತ್ಸೆಗಳ ವಿವರಗಳನ್ನು ಆಯುಷ್ ಚಿಕಿತ್ಸಕರು ನೋಡುವುದು ಕೂಡ ಸರಿಯಲ್ಲ, ಅದರ ಅಗತ್ಯವೂ ಇಲ್ಲ, ಅದು ಅಪಾಯಕಾರಿಯೂ ಆಗಬಹುದು. ಹಾಗೆಯೇ ಆಯುಷ್ ಚಿಕಿತ್ಸಕರು ಈ ಆರೋಗ್ಯ ಮಿಂದಾಖಲೆಗಳಲ್ಲಿ ವಿವರಗಳನ್ನು ಸೇರಿಸುವುದು ಅನಗತ್ಯ ಮಾತ್ರವಲ್ಲ, ಆರೋಗ್ಯ ದಾಖಲೆಗಳನ್ನು ಕಲುಷಿತಗೊಳಿಸಿ, ಗೊಂದಲಮಯವಾಗಿಸಬಹುದು. 

ಆಧಾರ್ ಅಪಬಳಕೆ

ಕೊರೋನ ಲಸಿಕೆ ಪಡೆಯುವುದು ಕೂಡ ಐಚ್ಛಿಕವೆಂದು ಹೇಳಲಾಗಿತ್ತು, ಆದರೆ ಲಸಿಕೆಯಿಲ್ಲದಿದ್ದರೆ ಕಾಲೇಜಿಲ್ಲ, ಕಚೇರಿ-ನೌಕರಿಗೆ ಬರುವಂತಿಲ್ಲ, ಪರೀಕ್ಷೆಯಿಲ್ಲ, ಪಡಿತರವಿಲ್ಲ, ಪ್ರಯಾಣವಿಲ್ಲ ಎಂಬಿತ್ಯಾದಿಯಾಗಿ ಕಾಲೇಜು ವಿದ್ಯಾರ್ಥಿಗಳಿಂದ ತೊಡಗಿ, ಖಾಸಗಿ ಉದ್ಯೋಗಿಗಳು, ಸರಕಾರಿ ಸಿಬ್ಬಂದಿ ಸೇರಿದಂತೆ ಎಲ್ಲರನ್ನೂ ಒಂದಲ್ಲೊಂದು ನೆಪದಲ್ಲಿ ಹೆದರಿಸಿ, ಲಸಿಕೆಯನ್ನು ಚುಚ್ಚಲಾಯಿತು, ಲಸಿಕೆಯ ನೆಪದಲ್ಲಿ ಎಲ್ಲರ ಮೊಬೈಲ್ ಒಳಗೂ ಕೋವಿನ್ ಆಪ್ ಹಾಕಿಸಿ, ಅದಕ್ಕೆ ಆಧಾರ್ ಲಗತ್ತಿಸಿ, ಓಟಿಪಿ-ಬೆರಳಚ್ಚು ಒತ್ತಿಸಿ, ಅವರೆಡನ್ನೂ ಖಾತರಿ ಪಡಿಸುವ ಕೆಲಸವೂ ಆಯಿತು. ಪ್ರಧಾನಿಗಳ ಚಿತ್ರಸಹಿತವಾದ ಲಸಿಕೆ ಸರ್ಟಿಫಿಕೇಟಿನಲ್ಲಿ ರಾಷ್ಟ್ರೀಯ ವಿಶಿಷ್ಠ ಆರೋಗ್ಯ ಗುರುತು ಸಂಖ್ಯೆ – ಯುನೀಕ್ ನ್ಯಾಶನಲ್ ಹೆಲ್ತ್ ಐಡಿ- ಯನ್ನು ಕೊಟ್ಟದ್ದೂ ಆಯಿತು. ಅಂದರೆ, ಐಚ್ಚಿಕವೆಂದು ಹೇಳಿದ್ದರೂ ಏನೇನೋ ನೆಪದಲ್ಲಿ ಒತ್ತಾಯಿಸಿ ಲಸಿಕೆ ಕೊಟ್ಟದ್ದು, ಅದಕ್ಕಾಗಿ ಕೋವಿನ್ ಆಪ್ ಹಾಕಿಸಿದ್ದು, ಅದರೊಂದಿಗೆ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಜೋಡಿಸಿದ್ದು, ಯಾವುದೇ ಒಪ್ಪಿಗೆಯಾಗಲೀ, ಸೂಚನೆಯಾಗಲೀ ಇಲ್ಲದೆ ಹೆಲ್ತ್ ಐಡಿ ನೀಡಿದ್ದು ಎಲ್ಲವನ್ನೂ ನೋಡುವಾಗ ಈ ಹೆಲ್ತ್ ಐಡಿ ಮತ್ತು ಅದಕ್ಕೆ ಜೋಡಿಸಲ್ಪಡುವ ಆರೋಗ್ಯ ದಾಖಲೆಗಳ ಬಳಕೆಯು ಐಚ್ಛಿಕವಾಗಿರುತ್ತದೆ, ಈ ದಾಖಲೆಗಳ ಬಳಕೆಯು ಪಾರದರ್ಶಕವಾಗಿರುತ್ತದೆ, ಎಲ್ಲಾ ಗೋಪ್ಯತೆಯನ್ನು ಕಾಪಾಡಲಾಗುತ್ತದೆ ಎಂಬ ಖಾತರಿಯೇನು?

ಆಧಾರ್ ಯೋಜನೆಗೆ ಇದುವರೆಗೂ ನಮ್ಮ ಸಂಸತ್ತು ಅಂಗೀಕಾರ ನೀಡಿಲ್ಲ. ಮಾರ್ಚ್ 2016ರಲ್ಲಿ ತಂದ ಆಧಾರ್ ಕಾಯಿದೆಯನುಸಾರ ಆಧಾರ್ ಸಂಖ್ಯೆಯನ್ನು ಒಕ್ಕೂಟ ಸರಕಾರದ ಹಣದ ನೆರವಿನ ಸವಲತ್ತುಗಳನ್ನು ಪಡೆಯುವುದಕ್ಕೆ (ಪಡಿತರ, ಆಯುಷ್ಮಾನ್ ಭಾರತ ಸೇವೆ ಇತ್ಯಾದಿ) ಮತ್ತು ಪ್ಯಾನ್ ಸಂಖ್ಯೆಗೆ ಜೋಡಿಸುವುದಕ್ಕೆ ಮಾತ್ರವೇ ಬಳಸಬೇಕೆಂದು ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟ ಪಡಿಸಿದೆ. ಅದೇ ಆಧಾರ್ ಕಾಯಿದೆಯ [2(ಕೆ)]ಯಲ್ಲಿ ವ್ಯಕ್ತಿಯ ವೈದ್ಯಕೀಯ ಮಾಹಿತಿಯನ್ನು ಸಂಗ್ರಹಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ರಾಷ್ಟ್ರೀಯ ಆರೋಗ್ಯ ಮಿಂದಾಖಲೆಗಳ ಯೋಜನೆಯಾಗಲೀ, ಹೆಲ್ತ್ ಐಡಿ ಯೋಜನೆಯಾಗಲೀ ಅಧಿಕೃತ ನೀತಿಗಳಾಗಿ ಸಂಸತ್ತಿನ ಮುಂದೆ ಮಂಡಿತವಾಗಿಲ್ಲ, ಅನುಮೋದನೆಯನ್ನೂ ಪಡೆದಿಲ್ಲ. ಹೀಗೆ ಸಂಸತ್ತಿನ ಅನುಮೋದನೆಯಿಲ್ಲದೆ, ಯಾವುದೇ ಕಾನೂನಿನ ಆಧಾರವಿಲ್ಲದೆ, ಖಾಸಗಿತನದ ರಕ್ಷಣೆ ಹಾಗೂ ಗೋಪ್ಯತೆಯ ರಕ್ಷಣೆಗಳ ಬಗ್ಗೆಯೂ ಯಾವುದೇ ನಿಯಮಗಳಿನ್ನೂ ರೂಪಿತವಾಗದೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರೆ ಅದರ ಅರ್ಥವೇನು?

ಆದರೆ ಸಂಸತ್ತಿನ ಅನುಮೋದನೆಯಿಲ್ಲದಿದ್ದರೂ ಸರಕಾರವೇ ಆಧಾರ್ ಅನ್ನು ಎಲ್ಲೆಂದರಲ್ಲಿ ತಗಲಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಆಸ್ಪತ್ರೆಗಳಲ್ಲಿ ದಾಖಲಾಗುವುದಕ್ಕೆ, ಗರ್ಭಿಣಿಯರ ಸ್ಕಾನಿಂಗ್ ಪರೀಕ್ಷೆಗೆ, ಗರ್ಭಪಾತ ಮಾಡಿಸುವುದಕ್ಕೆ, ಆರೋಗ್ಯ ವಿಮೆ ಮತ್ತಿತರ ವಿಮೆಗಳಿಗೆ, ಮತ್ತೀಗ ಲಸಿಕೆ ಹಾಕಿಸುವುದಕ್ಕೆ ಆಧಾರ್ ನೀಡುವಂತೆ ಒತ್ತಾಯಿಸಲಾಗುತ್ತಿದೆ, ಜನರು ತೆಪ್ಪಗೆ ನೀಡುತ್ತಿದ್ದಾರೆ, ರೋಗಿಗಳ ಹಿತರಕ್ಷಕರಾಗಬೇಕಾದ ವೈದ್ಯರು ತೆಪ್ಪಗಿರುವುದಷ್ಟೇ ಅಲ್ಲ, ಈ ತಪ್ಪಿನಲ್ಲಿ ಸಹಕರಿಸುತ್ತಿದ್ದಾರೆ. ಯಾವ ಕಾನೂನಿನ ಆಧಾರವಿಲ್ಲದೆಯೇ ನಡೆಯುತ್ತಿರುವ ಈ ಕೆಲಸಗಳ ಜೊತೆಗೆ ಈಗ ಆರೋಗ್ಯ ಗುರುತು ಚೀಟಿಯ ಯೋಜನೆಯನ್ನೂ ಸೇರಿಸಲಾಗಿದೆ.

ಗೋಪ್ಯತೆಯಿಲ್ಲದೆ ಆರೋಗ್ಯ ಮಾಹಿತಿ ಪಡೆಯಲಾಗದು

ಭಾರತದಲ್ಲಿ ಸದ್ಯಕ್ಕೆ ದತ್ತಾಂಶ ಸುರಕ್ಷೆ ಕಾನೂನು ಎಂದರೆ ಮಾಹಿತಿ ತಂತ್ರಜ್ಞಾನ  (ಸಕಾರಣ ಸುರಕ್ಷಾ ಕ್ರಮಗಳು ಮತ್ತು ಕಾರ್ಯವಿಧಾನಗಳು ಮತ್ತು ಸೂಕ್ಮ ವೈಯಕ್ತಿಕ ದತ್ತಾಂಶ ಅಥವಾ ಮಾಹಿತಿ) ನಿಯಮಗಳು, 2011 ರ ಅಡಿ ಬರುವ ನಿಯಮಗಳಾಗಿದ್ದು ಇದಕ್ಕೆ ಶಾಸನಾತ್ಮಕ ಆಧಾರ ಎಂದರೆ ಮಾಹಿತಿ ತಂತ್ರಜ್ಞಾನ ಕಾಯಿದೆ, 2000.

ವೈಯಕ್ತಿಕ ದತ್ತಾಂಶಗಳ ಸಂರಕ್ಷಣೆ ಮಸೂದೆ 2019 ನ್ನು ಲೋಕಸಭೆಯಲ್ಲಿ 2019ರ ಡಿಸೆಂಬರ್‌ನಲ್ಲಿ ಮಂಡಿಸಲಾಗಿದ್ದು, ಅದಿನ್ನೂ ಸ್ಥಾಯೀ ಸಮಿತಿಯ ಪರಿಶೀಲನೆಯಲ್ಲಿದೆ. ಇಂತಹ ಸನ್ನಿವೇಶದಲ್ಲಿ ಜನರ ಆರೋಗ್ಯ-ವೈದ್ಯಕೀಯ ಮಾಹಿತಿಗಳನ್ನು ಯಾವುದೋ ಐಟಿ ಕಾಯಿದೆಯ ಅಡಿಯಲ್ಲಿ ಕ್ರೋಢೀಕರಿಸಿ ವಿಮೆ, ಆರೋಗ್ಯ ಸೇವೆಯಂತಹ ವಾಣಿಜ್ಯ ಹಿತಾಸಕ್ತಿಗಳಿರುವ ವ್ಯವಸ್ಥೆಯ ಕೈಗೆ ಒಪ್ಪಿಸುವುದು ಅತ್ಯಂತ ಅಪಾಯಕಾರಿ ಸನ್ನಿವೇಶವಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ ಈ ರೀತಿ ಒಮ್ಮೆ ಡೇಟಾ ಹಸ್ತಾಂತರ ಆದ ಬಳಿಕ ಮುಂದೆ ತಪ್ಪಿನ ಅರಿವಾಗುವ ಸ್ಥಿತಿ ಬಂದರೂ ಆಗಿರುವ ಹಾನಿಯನ್ನು ಸರಿಪಡಿಸಲು ಸಾಧ್ಯವಾಗದು.

ವೈಯಕ್ತಿಕ ದತ್ತಾಂಶಗಳ ಕಾನೂನು ಜಾರಿಗೆ ಬರದೆ ಅದನ್ನು ಆಧರಿಸಿರುವ ಹತ್ತಾರು ದತ್ತಾಂಶ ಸಂಬಂಧಿ ಕಾನೂನುಗಳನ್ನು ಸಂಸದೀಯ ವ್ಯವಸ್ಥೆಯನ್ನು ಬೈಪಾಸ್ ಮಾಡಿ ಜಾರಿಗೆ ತರಲು ಹವಣಿಸುತ್ತಿರುವುದು ಪ್ರಜಾತಂತ್ರ  ವ್ಯವಸ್ಥೆಗೆ ಅಪಾಯಕಾರಿ. ಬೇರೆ ದೇಶಗಳಲ್ಲೂ ಇಂತಹ ವ್ಯವಸ್ಥೆ ಇದೆ ಎಂದು ಬೊಟ್ಟು ಮಾಡುವ ಮೊದಲು ಡೇಟಾ ಸುರಕ್ಷೆಗಳಿಗೆ ಸಂಬಂಧಿಸಿ ಮುಂಚೂಣಿಯಲ್ಲಿವೆ ಎಂದು ಪರಿಗಣಿತವಾಗುವ ಯುರೋಪಿಯನ್ ಸಮುದಾಯ 2016 ರಲ್ಲೇ ವೈಯಕ್ತಿಕ ಡೇಟಾ ಸುರಕ್ಷೆ ಕಾನೂನನ್ನು ಅಂಗೀಕರಿಸಿದೆ ( Regulation (EU) 2016/679 on the protection of personal data.) ಎಂಬುದನ್ನು ಗಮನಿಸಬೇಕು. ಅಮೆರಿಕದ ಆರೋಗ್ಯ ವ್ಯವಸ್ಥೆ ಕೂಡ ಇಂತಹ ಕಾಯಿದೆಯೊಂದರ ಅಡಿಯೇ (The Health Information Probability and Accountability Act (HIPAA)) ಕಾರ್ಯಾಚರಿಸುತ್ತಿದೆ ಎಂಬುದನ್ನು ಪರಿಗಣಿಸಬೇಕು. ಇಷ್ಟು ಸುರಕ್ಷೆ ಇದ್ದೂ, ಆ ದೇಶಗಳಲ್ಲಿ ದತ್ತಾಂಶ ಅಪಬಳಕೆಯ ಬಗ್ಗೆ ಚರ್ಚೆ ನಡೆದಿದೆ. ಭಾರತದಲ್ಲಿ ಇಂತಹ ಯಾವುದೇ ಸುರಕ್ಷಿತ ಕಾನೂನು ತಳಪಾಯ ಇಲ್ಲದೆ ನೇರವಾಗಿ ಆರೋಗ್ಯ ಡೇಟಾಗಳನ್ನು ಸಂಗಹಿಸುವುದು ತಪ್ಪಾಗುತ್ತದೆ.

ಪರಿಣಾಮಗಳು ಆಪತ್ಕಾರಿ

ಸರಕಾರವು ತನ್ನ ಸ್ವತ್ತಾಗಿಸಿಕೊಳ್ಳುವ ಕೋಟಿಗಟ್ಟಲೆ ಜನರ ವೈಯಕ್ತಿಕ, ವೈದ್ಯಕೀಯ ಮಾಹಿತಿಯನ್ನು ಯಂತ್ರಕಲಿಕೆಯ ಕೃತಕ ಬುದ್ಧಿಮತ್ತೆಯ ವಿಶ್ಲೇಷಣೆಗೊಳಪಡಿಸುವ ಆರೋಗ್ಯ ಬಣವೆಯ ಯೋಜನೆಯನ್ನು ಊಹಿಸಿಕೊಳ್ಳುವುದೇ ಭಯಾನಕವೆನಿಸುತ್ತದೆ. ಇಂಥ ಅಗಾಧ ಮಾಹಿತಿಯನ್ನು ವಿಶ್ಲೇಷಿಸಿ, ಯಂತ್ರಗಳಿಂದಲೇ ನೀತಿ ನಿರೂಪಣೆ ಮಾಡಿಸಿ, ಪ್ರಜಾಪ್ರಭುತ್ವವನ್ನೇ ನಾಶ ಮಾಡುವ ಅಪಾಯ ಒಂದೆಡೆಯಾದರೆ, ಜನರಿಗೆ ಆರೋಗ್ಯ ಸೇವೆಗಳನ್ನು ಅಥವಾ ಆರೋಗ್ಯ ವಿಮೆಯನ್ನು ಒದಗಿಸುವ ಯಾ ನಿರಾಕರಿಸುವ ನಿರ್ಧಾರಗಳನ್ನು ಇವೇ ಯಂತ್ರಗಳ ವಿಶ್ಲೇಷಣೆಗೆ ಒಪ್ಪಿಸುವ ಅಪಾಯವೂ ಇದೆ. ವಿಮಾ ಕಂಪೆನಿಗಳು ಈ ಮಾಹಿತಿಯನ್ನು ಪಡೆಯಲು ಸಾಧ್ಯವಾದರೆ ವ್ಯಕ್ತಿಯ ಆರೋಗ್ಯ ವಿಮೆಯ ಮೊತ್ತ ಹಾಗೂ ಅದರ ಕಂತಿನ ಮೊತ್ತವನ್ನು ತಮ್ಮಿಷ್ಟದಂತೆ ತಿದ್ದುವುದಕ್ಕೆ ಯಾ ನಿರಾಕರಿಸುವುದಕ್ಕೆ ಅವಕಾಶವಾಗಬಹುದು. ಅಷ್ಟೇ ಅಲ್ಲ, ಆಸ್ಪತ್ರೆಗಳಿಗೆ ದಾಖಲಾಗುವ ಸಂದರ್ಭಗಳಲ್ಲಿ ವಿಮೆಯ ಪಾವತಿಯ ನಿರ್ಧಾರಗಳನ್ನು ಈ ಕೃತಕ ಬುದ್ಧಿಮತ್ತೆಯ ಯಂತ್ರಗಳೇ ನಿರ್ವಹಿಸುವ, ಪ್ರಶ್ನಾತೀತವೆಂದು ಕಂಪೆನಿಗಳು ಹೇಳಿಕೊಳ್ಳಬಹುದಾದ, ಕ್ರಮಗಳೂ ಬರಬಹುದು.

ವಿಮೆ ಮತ್ತು ಬ್ಯಾಂಕ್‌ಗಳಿಗೆ ವ್ಯಕ್ತಿಗಳ ಆರೋಗ್ಯ ಮಾಹಿತಿಯು ಲಭ್ಯವಾಗುವಂತಿದ್ದರೆ ವಿಮೆಯ ಕಂತು, ವಿವಿಧ ಸಾಲಗಳ ಮೇಲಿನ ಬಡ್ಡಿಗಳ ಮೇಲೆ ಅವು ಪ್ರಭಾವ ಬೀರಬಹುದು, ಇವನ್ನೆಲ್ಲ ಲೆಕ್ಕ ಹಾಕುವುದಕ್ಕೂ ಯಾಂತ್ರಿಕ ವಿಶ್ಲೇಷಣೆಗಳ ಬಳಕೆಯಾಗಬಹುದು.

ವ್ಯಕ್ತಿಗಳ ಖಾಸಗಿ ಮಾಹಿತಿ ಮತ್ತು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ಮಾಹಿತಿಯು ಸರಕಾರದ ಸ್ವತ್ತಾಗಿ, ಆ ಮೂಲಕ ಅನ್ಯರ ಪಾಲಾಗುವಾಗ ಈ ಶಕ್ತಿಗಳಿಗೆ ವ್ಯಕ್ತಿಗಳ ಖಾಸಗಿ ಜೀವನವನ್ನು ನಿಯಂತ್ರಿಸುವುದಕ್ಕೆ, ಬ್ಲಾಕ್‌ಮೇಲ್-ಸುಲಿಗೆ ಮಾಡುವುದಕ್ಕೆ ಎಲ್ಲಾ ರೀತಿಯ ಅವಕಾಶಗಳನ್ನು ಒದಗಿಸಬಹುದು.

ಆಸ್ಪತ್ರೆ ಹಾಗೂ ಆರೋಗ್ಯ ಸೇವೆಗಳವರಿಗೆ, ಔಷಧ ಸಂಶೋಧಕರು, ಉತ್ಪಾದಕರು ಮತ್ತು ಮಾರಾಟಗಾರರಿಗೆ ವೈಯಕ್ತಿಕ ವೈದ್ಯಕೀಯ ಮಾಹಿತಿಯನ್ನು ಒದಗಿಸುವುದರಲ್ಲೂ ಅನೇಕ ಅಪಾಯಗಳಿವೆ. ವ್ಯಕ್ತಿಯ ಫೋನ್‌ಗಳಿಗೆ ಆಯಾ ರೋಗಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗಳು, ಪರೀಕ್ಷಾಲಯಗಳು, ಔಷಧ ಹಾಗೂ ವೈದ್ಯಕೀಯ ಉಪಕರಣಗಳ ಜಾಹೀರಾತುಗಳ ಪ್ರಚಾರಕ್ಕೆ ಇವು ಅನುಕೂಲವೊದಗಿಸಬಹುದು. ಈಗಾಗಲೇ ಆನ್‌ಲೈನ್ ಔಷಧ ಮಾರಾಟವು ವೇಗವಾಗಿ ಬೆಳೆಯುತ್ತಿದ್ದು, ಈ ಗುರುತು ಚೀಟಿಯ ಯೋಜನೆಯಿಂದ ಇಂಥ ಕಂಪೆನಿಗಳಿಗೆ ಸುಗ್ಗಿಯೇ ಆಗಬಹುದು.

ಕೊರೋನ ಕಾಲದಲ್ಲಿ ವೈದ್ಯರು ಹೆದರಿ ಮನೆಗಳಲ್ಲೇ ಉಳಿದು ಆನ್‌ಲೈನ್ ಸಲಹೆ ಹಾಗೂ ಚಿಕಿತ್ಸೆಗಳನ್ನು ನಡೆಸುವ ಪ್ರಯತ್ನಗಳು ಬೆಳೆದಿದ್ದವು. ಇನ್ನು ಈ ಮಿಂಬಲೆಯ ಆರೋಗ್ಯ ದಾಖಲೆಯ ವ್ಯವಸ್ಥೆಯಲ್ಲಿ ಇಂಥ ಆನ್‌ಲೈನ್ ಸಮಾಲೋಚನೆಗಳನ್ನು ಹಾಗೂ ಚಿಕಿತ್ಸೆಗಳನ್ನು ನೀಡಲು ಬಗೆಬಗೆಯ ವೇದಿಕೆಗಳು ರೂಪುಗೊಳ್ಳಲಿವೆ. ಇವು ಆನ್‌ಲೈನ್ ಔಷಧ ಮಾರಾಟದ ಜೊತೆಗೂಡಿದಾಗ ಇಡೀ ಆರೋಗ್ಯ ಸೇವಾ ವ್ಯವಸ್ಥೆಯೇ ಛಿದ್ರಗೊಳ್ಳುವ ಹಾಗೂ ಜನರ ಆರೋಗ್ಯದ ಮೇಲೆ ಹಲಬಗೆಯ ವ್ಯತಿರಿಕ್ತ ಪರಿಣಾಮಗಳಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಆರೋಗ್ಯ ಸೇವೆಗಳನ್ನು ಕೇವಲ ವ್ಯಾಪಾರದ ಸರಕಾಗಿ, ಲಾಭದ ಮೂಲವಾಗಿ ನೋಡುವ ಈ ವ್ಯವಸ್ಥೆಯ ಎಲ್ಲಾ ಅಪಾಯಗಳನ್ನು ಮುಂಗಾಣುವುದು ಅತ್ಯಗತ್ಯವಾಗಿದೆ.

ಆರೋಗ್ಯ ಸೇವೆಗಳನ್ನು ಹೀಗೆ ವಿಚ್ಛಿದ್ರಗೊಳಿಸಿ, ಬದಲಿ ಪದ್ಧತಿಗಳನ್ನು ಆಧುನಿಕ ವೈದ್ಯಕೀಯ ಸೇವೆಗಳೊಂದಿಗೆ ಬೆರೆಸಿ, ಎಲ್ಲ ಬಗೆಯ ಗೊಂದಲಗಳನ್ನೂ ಹುಟ್ಟಿಸುವ ಈ ಆರೋಗ್ಯ ಚೀಟಿಯ ಯೋಜನೆಯ ಜೊತೆಗೆ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಧುನಿಕ ವೈದ್ಯಕೀಯ ಶಿಕ್ಷಣದಲ್ಲಿ ಬದಲಿ ಪದ್ಧತಿಗಳನ್ನು ತೂರಿಸಿರುವುದು, ಆಧುನಿಕ ವೈದ್ಯಕೀಯ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದ್ದ ಎಂಸಿಐಯನ್ನು ನಿರ್ನಾಮ ಮಾಡಿ ಆಧುನಿಕ ವೈದ್ಯಕೀಯ ಶಿಕ್ಷಣ ಹಾಗೂ ವೃತ್ತಿಯಲ್ಲಿ ಬದಲಿ ಪದ್ಧತಿಗಳ ಬೆರಕೆಗಳಿಗೂ, ಕಾರ್ಪರೇಟ್ ಶಕ್ತಿಗಳ ಭಾಗೀದಾರಿಕೆಗೂ ಅವಕಾಶ ನೀಡುವ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ತಂದಿರುವುದು ಎಲ್ಲವೂ ದೇಶದ ಆರೋಗ್ಯ ಸೇವೆಗಳನ್ನು ಲಾಭಕೋರ ಕಂಪೆನಿಗಳಿಗೆ ಒಪ್ಪಿಸಿ ಜನರನ್ನು ಗತಿಹೀನರಾಗಿ ಮಾಡುವ ಮಹಾ ಯೋಜನೆಯ ಭಾಗಗಳೇ ಆಗಿವೆ.

ಇಲಾಜು 21 – ಆಧಾರ್ ಅಯೋಮಯ ಆಗಿರುವಾಗಲೇ ಬರುತ್ತಿದೆ ಮತ್ತೊಂದು ಅನಾರೋಗ್ಯ ಯೋಜನೆ

(ದಿ ಸ್ಟೇಟ್.ನ್ಯೂಸ್, ಆಗಸ್ಟ್ 23, 2018)

ಆಧಾರ್ ಯೋಜನೆಗೆ ದೇಶದ ಸಂಸತ್ತು ಇನ್ನೂ ಪೂರ್ಣ ಅನುಮೋದನೆಯನ್ನು ಕೊಟ್ಟಿಲ್ಲ; ಅದರ ಸಾಂವಿಧಾನಿಕ, ನ್ಯಾಯಿಕ ಸಿಂಧುತ್ವದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಇನ್ನೂ ಅಂತಿಮ ತೀರ್ಪು ನೀಡಿಲ್ಲ. ಹಾಗಿದ್ದರೂ, ಕೇಂದ್ರ ಸರಕಾರವು ಒಂದರ ಹಿಂದೊಂದರಂತೆ ಆಧಾರ್ ಆಧಾರಿತ ಯೋಜನೆಗಳನ್ನು ಘೋಷಿಸುತ್ತಲೇ ಇದೆ; ಇದೀಗ ನಿತಿ ಆಯೋಗವು ರಾಷ್ಟ್ರೀಯ ಆರೋಗ್ಯ ಬಣವೆ ಎಂಬ ಹೊಸ ಯೋಜನೆಯ ಕರಡನ್ನು ಪ್ರಕಟಿಸಿದೆ. ಐವತ್ತು ಕೋಟಿ ಭಾರತೀಯರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲಿದೆ ಎನ್ನಲಾಗುತ್ತಿರುವ ಆಯುಷ್ಮಾನ್ ಭಾರತ ಯೋಜನೆಗೆ ಇದು ಬೆನ್ನುಲುಬಾಗಲಿದೆ ಎಂದು ಹೇಳಲಾಗಿದೆ. ಆದರೆ ವಾಸ್ತವದಲ್ಲಿ ಇದು ಆಯುಷ್ಮಾನ್ ಭಾರತದ ಬೆನ್ನೇರಿ ಕೋಟಿಗಟ್ಟಲೆ ಭಾರತೀಯರ ಆರೋಗ್ಯ ಮಾಹಿತಿಯನ್ನು ಮತ್ತು ಎಲ್ಲ ವೈದ್ಯಕೀಯ ಸಂಸ್ಥೆಗಳ ವಿವರಗಳನ್ನು ಪಡೆದುಕೊಳ್ಳುವ ಯೋಜನೆಯಾಗಿದೆ, ಮತ್ತು ಆ ಮಾಹಿತಿಯೆಲ್ಲವನ್ನೂ ಖಾಸಗಿ ದೈತ್ಯ ಕಂಪೆನಿಗಳಿಗೆ, ವಿಮಾ ಕಂಪೆನಿಗಳಿಗೆ, ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆಯ ಸಾಧನಗಳನ್ನು ಬೆಳೆಸಬಯಸಿರುವವರಿಗೆ ದಾಟಿಸುವ ಉಪಾಯವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗೆ ವಿಶೇಷ ಮಹತ್ವವಿದೆ, ವಿಪರೀತ ಬೇಡಿಕೆಯೂ ಇದೆ. ಯಾರಿಗೆ ಯಾವ ರೋಗ ಇದೆ ಎನ್ನುವುದು ಗೊತ್ತಾಗಿಬಿಟ್ಟರೆ ಅವರನ್ನು ಸತಾಯಿಸಬಹುದು, ವಿಮೆಯನ್ನು ನಿರಾಕರಿಸಬಹುದು ಅಥವಾ ಕಂತನ್ನು ಏರಿಸಬಹುದು, ಸಾಲವನ್ನು ತಡೆಹಿಡಿಯಬಹುದು ಅಥವಾ ಆಸ್ತಿಯನ್ನು ಲಪಟಾಯಿಸುವ ಯೋಜನೆಯನ್ನೂ ಹಾಕಿಕೊಳ್ಳಬಹುದು. ಆದ್ದರಿಂದಲೇ ಭಾರತದ ಪ್ರಜೆಗಳ ಆರೋಗ್ಯ ಮಾಹಿತಿಯನ್ನು ಪಡೆಯುವುದಕ್ಕೆ ಹಲವರು ಉತ್ಸುಕರಾಗಿದ್ದಾರೆ, ಆಧಾರ್ ಬೆರಳಚ್ಚಿಗೆ ಅದನ್ನು ಜೋಡಿಸಿ ಇನ್ನಷ್ಟು ನಿಖರಗೊಳಿಸಲು ಕಾತರರಾಗಿದ್ದಾರೆ.

ಆಧಾರ್ ಆರಂಭಗೊಂಡಾಗಲೇ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವ ಮಹಾ ಯೋಜನೆಯೂ ರೂಪ ತಳೆದಿದೆ, ಆಧಾರ್ ಪ್ರಾಧಿಕಾರದ ಮೊದಲ ಅಧ್ಯಕ್ಷ ನಂದನ್ ನಿಲೇಕಣಿಯವರು ಅಂದಿನಿಂದಲೂ ಅದರ ಬೆನ್ನಿಗಿದ್ದಾರೆ. ಈ ಯೋಜನೆಗೆ ಪುಷ್ಠಿ ನೀಡಲೆಂದು ಫೆಬ್ರವರಿ 2016ರಲ್ಲಿ ಕೇಂದ್ರ ಸರಕಾರವು ಆರೋಗ್ಯದ ಮಿಂದಾಖಲೆಗಳ ಮಾನದಂಡಗಳನ್ನೂ, ಆಧಾರ್‌ ಜೋಡಣೆಯ ಪ್ರಸ್ತಾವವನ್ನೂ ಪ್ರಕಟಿಸಿದೆ. ಬಳಿಕ, ಮಾರ್ಚ್ 2017ರಲ್ಲಿ, ಪ್ರಕಟಿಸಿದ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ ಅದಕ್ಕೆ ಇನ್ನಷ್ಟು ತುಂಬಲಾಗಿದೆ: ರಾಷ್ಟ್ರೀಯ ಗಣಕೀಕೃತ ಆರೋಗ್ಯ ಪ್ರಾಧಿಕಾರವನ್ನು ರಚಿಸುವುದು; ಆಸ್ಪತ್ರೆಗಳಿಂದ, ವೈದ್ಯರಿಂದ, ಧರಿಸುವ ಸಾಧನಗಳು ಮತ್ತು ಬಳಸುವ ಫೋನ್‌ಗಳಿಂದ, ಹೀಗೆ ಎಲ್ಲೆಡೆಗಳಿಂದ ದೇಶದ ಎಲ್ಲಾ ನಾಗರಿಕರ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವುದು; ಇವುಗಳನ್ನು ಬಳಸಿ ಸಮಗ್ರ ಆರೋಗ್ಯ ಮಾಹಿತಿ ಜಾಲವನ್ನು ಸ್ಥಾಪಿಸುವುದು; ಮತ್ತು ಮಾಹಿತಿ ಸಂಗ್ರಹಣೆಯಲ್ಲೂ, ಅದರ ವಿಶ್ಲೇಷಣೆ ಹಾಗೂ ಹಂಚಿಕೆಗಳಲ್ಲೂ ಖಾಸಗಿ ವಲಯವನ್ನು ಒಳಗೊಳ್ಳುವುದು ಈ ಆರೋಗ್ಯ ನೀತಿಯೊಳಗೆ ಅಡಕವಾಗಿದೆ. ಇಂತಹ ಅಡಿಪಾಯದ ಮೇಲೆ ಈಗ ರಾಷ್ಟ್ರೀಯ ಆರೋಗ್ಯ ಬಣವೆಯ ಕರಡು ಮೇಲೆದ್ದಿದೆ.

ಈ ಕರಡು ಬಣವೆಯ ಹೊದಿಕೆಯನ್ನು ಸರಿಸಿದರೆ ನಡುಕವೇ ಹುಟ್ಟುತ್ತದೆ. ಮೊದಲ ಪುಟದಲ್ಲಿ ನಿತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ॥ ವಿನೋದ್ ಪೌಲ್ ಅವರು ವಿಚ್ಛಿದ್ರತೆಯನ್ನು ಸಂಭ್ರಮಿಸಿರುವುದು ಕಾಣುತ್ತದೆ. ರಾಷ್ಟ್ರೀಯ ಆರೋಗ್ಯ ಬಣವೆಯು ದೂರದರ್ಶಿತ್ವದ, ಗಣಕೀಯ ಚೌಕಟ್ಟಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅದನ್ನು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಬಳಸಬಹುದೆಂದೂ, ಕ್ಷಿಪ್ರವಾದ, ವಿಚ್ಛಿದ್ರಕಾರಿಯಾದ ಬದಲಾವಣೆಗಳನ್ನೂ, ಅನಿರೀಕ್ಷಿತವಾದ ತಿರುವುಗಳನ್ನೂ ಕಾಣಲಿರುವ (ಆರೋಗ್ಯ) ಕ್ಷೇತ್ರಕ್ಕೆ ಅದು ಭವಿಷ್ಯದ ಮಾಹಿತಿ ತಂತ್ರಜ್ಞಾನದ ಮಾರ್ಗೋಪಾಯಗಳನ್ನು ಒದಗಿಸಲಿದೆ ಎಂದೂ ಡಾ॥ ಪೌಲ್ ಬರೆದಿದ್ದಾರೆ. ಇದರರ್ಥವೇನೆಂದರೆ, ದೇಶದ ಎಲ್ಲಾ ಸಾರ್ವಜನಿಕ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಾಹಿತಿಯೂ, ಎಲ್ಲಾ ನಾಗರಿಕರ ಮಾಹಿತಿಯೂ ಬಣವೆಯೊಳಗೆ ಸೇರಲಿವೆ; ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅದನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಬಹುದಾಗಿದೆ; ಭವಿಷ್ಯದ ಮಾಹಿತಿ ತಂತ್ರಜ್ಞಾನವನ್ನು ಕಟ್ಟುವವರಿಗೆ ಒಪ್ಪಿಸಬಹುದಾಗಿದೆ; ಮತ್ತು ಆ ಮೂಲಕ, ಆರೋಗ್ಯ ಕ್ಷೇತ್ರವನ್ನು ಛಿದ್ರಗೊಳಿಸಿ, ಖಾಸಗಿ ದೈತ್ಯರ ಕೈಗಳಿಗೊಪ್ಪಿಸಿ, ಅನಿರೀಕ್ಷಿತವಾದ ತಿರುವುಗಳನ್ನುಂಟು ಮಾಡಬಹುದಾಗಿದೆ.

ಕರಡಿನ ಎರಡನೇ ಪುಟದಲ್ಲಿ ನಿತಿ ಆಯೋಗದ ಮುಖ್ಯ ಆಡಳಿತಾಧಿಕಾರಿ ಅಮಿತಾಭ್ ಕಾಂತ್ ಅವರ ಯೋಚನೆಗಳಿವೆ. ಪ್ರಸ್ತಾವಿತ ಆರೋಗ್ಯ ಬಣವೆಯು ಶಕ್ತಿಶಾಲಿ ಸಾಧನ-ವಿಧಾನಗಳನ್ನು ಬಳಸಿ ಅಗಾಧ ಮಾಹಿತಿಯ ವಿಶ್ಲೇಷಣೆ, ಯಂತ್ರಕಲಿಕೆ, ಕೃತಕ ಬುದ್ದಿಮತ್ತೆ, ಮತ್ತು ಮುಂದಕ್ಕೆ, ನೀತಿ ನಿರೂಪಣೆ ಮಾಡಬಲ್ಲ ಅತ್ಯಾಧುನಿಕ ಗಣಕೀಯ ಭಾಷೆಗಳನ್ನು ಅಭಿವೃದ್ಧಿಪಡಿಸುವವರೆಗೆ ಬೆಳೆಯಲಿದೆ ಎಂದೂ, ಆ ಮೂಲಕ, ಜನತೆ, ಹಣ ಮತ್ತು ಮಾಹಿತಿಗಳ ಹರಿವನ್ನು ಮರುವಿನ್ಯಾಸಗೊಳಿಸಿ, ಎಲ್ಲಾ ರಾಜ್ಯಗಳಿಗೆ ಮತ್ತು ಯೋಜನೆಗಳಿಗೆ ಆರೋಗ್ಯದ ವಿಚಾರದಲ್ಲಿ ಸಮಗ್ರವಾದ ತಳಹದಿಯನ್ನು ಒದಗಿಸಿ, ಆರೋಗ್ಯ ರಕ್ಷಣೆಯ ವೆಚ್ಚವನ್ನು ಗಣನೀಯವಾಗಿ ಇಳಿಸಿ, ನಗದುರಹಿತವಾಗಿಸಿ ಆರೋಗ್ಯ ಸುಧಾರಣೆಗೆ ನೆರವಾಗಲಿದೆ ಎಂದು ಕಾಂತ್ ಬರೆದಿದ್ದಾರೆ. ಈ ಅತ್ಯಾಕರ್ಷಕ ಪದಸರಣಿಯ ಹಿಂದೆ ಭಯಾನಕವಾದ ಯೋಜನೆಯೇ ಅಡಗಿರುವಂತೆ ಕಾಣುತ್ತದೆ. ಎಲ್ಲೆಡೆಗಳಿಂದ ಎಳೆದು ಪಡೆಯುವ ಮಾಹಿತಿಯನ್ನು ಯಂತ್ರಕಲಿಕೆಯ ಕೃತಕ ಬುದ್ಧಿಮತ್ತೆಯಿಂದ ವಿಶ್ಲೇಷಿಸಿ, ಯಂತ್ರಗಳಿಂದಲೇ ನೀತಿ ನಿರೂಪಣೆ ಮಾಡಿಸಿ, ಸಂಸದೀಯ ಪ್ರಜಾಪ್ರಭುತ್ವವನ್ನು ಧ್ವಂಸಗೊಳಿಸುವ ತೀರಾ ಅಮಾನವೀಯವಾದ ಯೋಜನೆ ಇದಾಗಿರುವಂತೆ ಕಾಣುತ್ತದೆ.

ಆರೋಗ್ಯ ಬಣವೆಯು ಭಾರತ ಬಣವೆಯೆಂಬ ಯೋಜನೆಯ ಭಾಗವೆಂದು ಬಹಳ ಹೆಮ್ಮೆಯಿಂದ ಈ ಕರಡಿನಲ್ಲಿ ಹೇಳಲಾಗಿದೆ. ಈ ಭಾರತ ಬಣವೆಯೆಂಬುದು ಇದ್ದುದನ್ನೆಲ್ಲ ಛಿದ್ರಗೊಳಿಸಿ ಇಲ್ಲವಾಗಿಸುವ ಬಹು ದೊಡ್ಡ ಯೋಜನೆಯಂತಿದೆ. ಈ ಭಾರತ ಬಣವೆಯೊಳಗೆ ಒಪ್ಪಿಗೆ ಪದರ, ನಗದುರಹಿತ ಪದರ, ಕಾಗದರಹಿತ ಪದರ, ಉಪಸ್ಥಿತಿರಹಿತ ಪದರ ಎಂಬ ನಾಲ್ಕು ‘ಪದರ’ಗಳಿವೆಯೆಂದು ಹೇಳಲಾಗಿದೆ. ಎಲ್ಲದಕ್ಕೂ ಬೆರಳಚ್ಚು ಒತ್ತಿ ಒಪ್ಪಿಗೆ ನೀಡುವುದು, ಎಲ್ಲ ವಹಿವಾಟನ್ನೂ ನಗದಿಲ್ಲದೆ ನಡೆಸುವುದು, ಎಲ್ಲ ದಾಖಲೆಗಳನ್ನೂ ಕಾಗದವಿಲ್ಲದೆಯೇ ನಿರ್ವಹಿಸುವುದು ಮತ್ತು ಮಸಿಯಿಲ್ಲದೆಯೇ ಸಹಿಯೊತ್ತುವುದು, ವ್ಯಕ್ತಿಯ ಬದಲು ಬೆರಳೊತ್ತುವ ಫೋನ್ ಇತ್ಯಾದಿ ಉಪಕರಣಗಳ ಮೂಲಕವೇ ಎಲ್ಲ ಕೆಲಸಗಳನ್ನೂ ಮಾಡಿಸುವುದು ಈ ಭಾರತ ಬಣವೆಯಡಿ ಸಿದ್ಧಗೊಳ್ಳುತ್ತಿರುವ ತಂತ್ರಾಂಶಗಳ ಉದ್ದೇಶವಾಗಿದೆ.

ಇರುವುದನ್ನೆಲ್ಲ ಇಲ್ಲವಾಗಿಸುವ ಈ ಭಾರತ ಬಣವೆಯೊಳಗೆ ಆರೋಗ್ಯ ಬಣವೆಯೂ ಒಂದು ಪದರವಾಗಿ, ಅದರೊಳಗೂ ಒಂದಷ್ಟು ಪದರಗಳಿರಲಿವೆ. ಆರೋಗ್ಯ ಸೇವೆಗಳನ್ನು ಒದಗಿಸುವ ಮತ್ತು ಪಡೆಯುವವರೆಲ್ಲರ ಸಕಲ ವಿವರಗಳು, ಆರೋಗ್ಯ ಸೇವೆಗಳ ನೀಡಿಕೆ ಮತ್ತು ಅದಕ್ಕೆ ಶುಲ್ಕ ಪಾವತಿಯ ವಿವರಗಳು ಮತ್ತು ಅವುಗಳಲ್ಲಾಗುವ ಮೋಸಗಳ ಪತ್ತೆ, ವ್ಯಕ್ತಿ ಮತ್ತು ಸಂಶೋಧನಾ ಸಂಸ್ಥೆಗಳು ಪಡೆದುಕೊಳ್ಳಬಹುದಾದ ವೈಯಕ್ತಿಕ ಆರೋಗ್ಯ ದಾಖಲೆಗಳು, ಈ ಎಲ್ಲ ಮಾಹಿತಿಯನ್ನು ವಿಶ್ಲೇಷಿಸುವ ಮತ್ತು ನೀತಿ ನಿರೂಪಣೆಗೆ ಬಳಸಿಕೊಳ್ಳುವ ತಂತ್ರಗಳು, ಇವೆಲ್ಲಕ್ಕೂ ಅಗತ್ಯವಾದ ನೆರವನ್ನೊದಗಿಸುವ ವ್ಯವಸ್ಥೆಗಳು ಈ ಆರೋಗ್ಯ ಬಣವೆಯ ಪದರಗಳಾಗಿರಲಿವೆ. ಅಂದರೆ ದೇಶದ ಪ್ರತಿಯೊಬ್ಬನ ದೈಹಿಕ ವಿವರಗಳನ್ನು ಸಂಗ್ರಹಿಸಿ, ಎಲ್ಲಿ ಹೋದರೂ ಅಲ್ಲಿ ಬೆಂಬತ್ತಿ, ಮೋಸಗಾರನೆಂದು ಸಂಶಯಿಸಿ, ಆ ಮಾಹಿತಿಯನ್ನು ವಿಮಾ ಕಂಪೆನಿಗಳಿಗೂ ಸಂಶೋಧನಾ ಸಂಸ್ಥೆಗಳಿಗೂ ರವಾನಿಸಿ, ಆರೋಗ್ಯ ಸೇವೆಗಳನ್ನು ಒದಗಿಸುವ ಯಾ ನಿರಾಕರಿಸುವ ಸಂಪೂರ್ಣ ಅಧಿಕಾರವು ಈ ಯಂತ್ರಗಳ ಮೂಲಕ ಸರಕಾರ ಹಾಗೂ ವಿಮಾ ಕಂಪೆನಿಗಳದ್ದಾಗಲಿದೆ.

ಸರಕಾರವನ್ನು ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಹಿಡಿದು ಹಿಂಸಿಸುವ ಶಕ್ತಿಯಾಗಿ, ಖಾಸಗಿ ಶಕ್ತಿಗಳಿಗೆ ಒದಗಿಸುವ ದಲ್ಲಾಳಿಯಾಗಿ ಬೆಳೆಸುವ ಭಾರತ ಬಣವೆಯ ಒಳಗೆ ಯಾರಿದ್ದಾರೆನ್ನುವುದು ನಿಗೂಢವಾಗಿಯೇ ಇದೆ. ಎಲ್ಲ ದೇಶವಾಸಿಗಳಿಂದ ಆಧಾರ್ ಆಧಾರಿತ ವೈಯಕ್ತಿಕ ಮಾಹಿತಿಯನ್ನು ಅಸಾಂವಿಧಾನಿಕವಾಗಿ ಪಡೆಯಲೆತ್ನಿಸುತ್ತಿರುವ ಸರಕಾರವು ಭಾರತ ಬಣವೆಯ ಹಿಂದಿರುವ ವ್ಯಕ್ತಿಗಳ ಗೋಫ್ಯತೆಯನ್ನು ರಕ್ಷಿಸುತ್ತಿರುವುದು ಇಡೀ ಯೋಜನೆಯ ನಿಜರೂಪವನ್ನು ತೋರಿಸುತ್ತದೆ. ಆಧಾರ್ ಯೋಜನೆಯ ಆರಂಭದ ವರ್ಷಗಳಲ್ಲಿ ಅದಕ್ಕೆ ನೇತೃತ್ವ ನೀಡಿದ್ದ ಮಹಾನ್ ತಂತ್ರಜ್ಞರೇ ಆಧಾರ್ ಆಧಾರಿತ ಮಾಹಿತಿಯ ಸಂಗ್ರಹಣೆ ಹಾಗೂ ವಿಶ್ಲೇಷಣೆಗೆ ಯಂತ್ರಕಲಿಕೆಯ ತಂತ್ರಗಳನ್ನು ಹೆಣೆಯುವ ಬಣವೆಗಳೊಳಗೆ ಅಡಗಿರುವ ಬಗ್ಗೆ ಮಾಧ್ಯಮಗಳಲ್ಲಿ ಊಹಾಪೋಹವಿರುವುದು ಇಡೀ ವ್ಯವಸ್ಥೆಯಲ್ಲಿರುವ ಅಪಾಯವನ್ನು ತೋರಿಸುತ್ತದೆ.

ಇಲಾಜು 7 – ಆಧಾರ್‌ನಿಂದ ಜನರ ಆರೋಗ್ಯ, ಚಿಕಿತ್ಸೆಯ ವೈಯಕ್ತಿಕ ಮಾಹಿತಿ ಬಟಾಬಯಲು!

(ದಿ ಸ್ಟೇಟ್.ನ್ಯೂಸ್, ಫೆಬ್ರವರಿ 6, 2018)

ಈಗಷ್ಟೇ ಹುಟ್ಟಿದ ಮಗುವಿನಿಂದ ಹಿಡಿದು, ಕೊನೆಗಾಲದಲ್ಲಿರುವ ವೃದ್ಧರವರೆಗೆ ಎಲ್ಲರ ಕೈಬೆರಳುಗಳು, ಕಣ್ಣಿನ ಪಾಪೆಗಳು ಮತ್ತು ಭಾವಚಿತ್ರಗಳು ಈಗ ಭಾರತ ಸರಕಾರದ ಸೊತ್ತು. ಕನಿಷ್ಠ ಸರಕಾರ, ಗರಿಷ್ಠ ಆಡಳಿತ ಎಂದವರು ಪ್ರತಿಯೊಬ್ಬ ಭಾರತೀಯನ ಪ್ರತಿಯೊಂದು ಕೆಲಸಕ್ಕೂ ಕೇಂದ್ರದ ಅನುಮತಿಯಿರಬೇಕೆಂಬ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ. ವ್ಯವಹರಿಸುವುದಕ್ಕೆ, ಪಡಿತರದ ಊಟಕ್ಕೆ, ವಿಮೆಗೆ, ರೋಗದ ಚಿಕಿತ್ಸೆಗೆ, ಗರ್ಭಪಾತಕ್ಕೆ ಆಧಾರ್ ಬೆರಳಚ್ಚಿನ ಒಪ್ಪಿಗೆ ಪಡೆಯಬೇಕಾದ ಅಮಾನವೀಯ ವ್ಯವಸ್ಥೆಗೆ ಪಕ್ಷಭೇದವಿಲ್ಲದೆ ರಾಜ್ಯ ಸರಕಾರಗಳೂ ಒಪ್ಪಿವೆ, ರೋಗಿಗಳ ಹಿತರಕ್ಷಕರಾಗಬೇಕಾದ ವೈದ್ಯರೂ ಮೌನವಾಗಿದ್ದಾರೆ.

ಮೊದಲೆಲ್ಲ ಅಪರಾಧ ನಡೆದ ಸ್ಥಳದಿಂದ ಬೆರಳಚ್ಚುಗಳನ್ನು ಸಂಗ್ರಹಿಸಿ, ಶಂಕಿತರ ಬೆರಳಚ್ಚಿನೊಂದಿಗೆ ತಾಳೆ ಹಾಕಿ, ಅಪರಾಧಿಗಳನ್ನು ಗುರುತಿಸುವುದಿತ್ತು. ಈ ಆಧಾರ್ ವ್ಯವಸ್ಥೆಯಲ್ಲಿ, ಎಲ್ಲ ಭಾರತೀಯರೂ ಕಳ್ಳ-ಸುಳ್ಳರೇನೋ ಎಂಬಂತೆ, ಎಲ್ಲರ ಬೆರಳಚ್ಚುಗಳನ್ನು ಸಂಗ್ರಹಿಸಿಟ್ಟುಕೊಂಡು, ಬ್ಯಾಂಕ್ ಖಾತೆ, ಮೊಬೈಲ್ ಸಂಪರ್ಕ ಮತ್ತದರ ಜಿಪಿಎಸ್, ಎಲ್ಲ ಬಗೆಯ ವಿಮೆ, ಆರೋಗ್ಯ ಸೇವೆ, ಶಾಲೆ-ಕಾಲೇಜು-ಪರೀಕ್ಷೆ-ಉದ್ಯೋಗಗಳಿಗೆ ದಾಖಲಾತಿ, ಮದುವೆ ಇತ್ಯಾದಿಯಾಗಿ ಹುಟ್ಟಿನಿಂದ ಸಾವಿನವರೆಗೆ ಎಲ್ಲವನ್ನೂ ಆಧಾರ್ ಸಂಖ್ಯೆಗೆ ಗಂಟು ಹಾಕಿ, ಆ ಬೆರಳಚ್ಚಿನ ವ್ಯಕ್ತಿಯು ಎಲ್ಲಿ, ಯಾವಾಗ, ಏನು ಮಾಡಿದ್ದಾನೆ ಎಂದು ಹಿಂಬಾಲಿಸಲಾಗುತ್ತದೆ, ಪ್ರತೀ ನಾಗರಿಕನ ಬಗ್ಗೆ ಅಂತಹ ಅಗಾಧ ಪ್ರಮಾಣದ ಮಾಹಿತಿನ್ನು ಸರಕಾರವು ಸಂಗ್ರಹಿಸಿಟ್ಟುಕೊಳ್ಳುವುದಕ್ಕೂ, ಖಾಸಗಿ ಕಂಪೆನಿಗಳೊಂದಿಗೆ ಹಂಚಿಕೊಳ್ಳುವುದಕ್ಕೂ ಸಾಧ್ಯವಾಗುತ್ತದೆ.

ಆಧಾರ್ ಯೋಜನೆ, ಅದರ ಗೌಪ್ಯತೆ ಮತ್ತು ಬಳಕೆಗಳಿಗೆ ನಮ್ಮ ಸಂಸತ್ತು ಇನ್ನೂ ಪೂರ್ಣ ಅನುಮೋದನೆಯನ್ನು ನೀಡಿಲ್ಲ. ಹಾಗಿದ್ದರೂ, ಸರಕಾರದ ನೆರವನ್ನು ಪಡೆಯಲು ಆಧಾರ್ ಕಡ್ಡಾಯವೆಂದು ಆಯವ್ಯಯ ಪಟ್ಟಿಯೊಳಗೆ ತೂರಿಸಿ, ಮೊಬೈಲ್ ಸಂಪರ್ಕದಿಂದ ಹಿಡಿದು ಆರೋಗ್ಯ ಸೇವೆಗಳವರೆಗೆ ಎಲ್ಲಕ್ಕೂ ಆಧಾರ್ ಬೇಕೇ ಬೇಕೆಂದು ಬೆದರಿಸಲಾಗುತ್ತಿದೆ. ಅತ್ತ, ಆಧಾರ್ ಮೂಲಕ ಸೋರಿಕೆಯನ್ನು ತಡೆದುದರಿಂದ ಹೆಚ್ಚೇನೂ ಉಳಿಸಲಾಗಿಲ್ಲ ಎಂದು ರಿಸರ್ವ್ ಬ್ಯಾಂಕಿನ ವರದಿಯೇ ಒಪ್ಪಿದೆ. ಇವನ್ನೆಲ್ಲ ನೋಡುವಾಗ, ಸರಕಾರದ ನೆರವಿಗೆ ಆಧಾರ್ ಪಡೆಯಬೇಕೆನ್ನುವ ನೆಪದಲ್ಲಿ ಎಲ್ಲರ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕಿ, ಖಾಸಗಿ ಸಂಸ್ಥೆಗಳಿಗೆ ಒಪ್ಪಿಸುವುದೇ ಆಧಾರ್ ಹಿಂದಿನ ಮುಖ್ಯ ಉದ್ದೇಶವೆಂಬ ಸಂಶಯಗಳೇಳುತ್ತವೆ. ಆಧಾರ್‌ ಯೋಜನೆಯ ಹಿಂದಿರುವ ದಿಗ್ಗಜ ತಂತ್ರಜ್ಞರೆಲ್ಲರೂ ಆಧಾರ್ ಆಧಾರಿತ ಕಾರ್ಪರೇಟ್ ಯೊಜನೆಗಳಲ್ಲೂ, ತೆರಿಗೆ ಸಂಗ್ರಹದ ವ್ಯವಸ್ಥೆಯಲ್ಲೂ ಭಾಗಿಗಳಾಗಿದ್ದಾರೆ ಎನ್ನುವುದು ಇದನ್ನು ಪುಷ್ಟೀಕರಿಸುತ್ತದೆ.

ವೈಯಕ್ತಿಕ ಮಾಹಿತಿಯ ಸಂಗ್ರಹ, ಬಳಕೆ ಮತ್ತು ಹಂಚಿಕೆಯ ಬಗ್ಗೆ ಸ್ಪಷ್ಟವಾದ ನಿರ್ಬಂಧಗಳಿಲ್ಲದೆ, ಖಾಸಗಿ ಕಂಪೆನಿಗಳಿಗೂ ಅವಕಾಶವಿತ್ತಿರುವುದರಿಂದ, 125 ಕೋಟಿ ಭಾರತೀಯರ ಮಹಾ ಮಾಹಿತಿಯ ಬಗ್ಗೆ ಕಾರ್ಪರೇಟ್ ಹಾಗೂ ತಂತ್ರಜ್ಞಾನ ಕಂಪೆನಿಗಳು ಅತ್ಯಾಸಕ್ತಿಯಿಂದ ದುಡಿಯತೊಡಗಿವೆ. ಅನ್ಯ ದೇಶಗಳೂ ಈ ಮಾಹಿತಿಯನ್ನು ಪಡೆಯುವುದಕ್ಕೆ ಉತ್ಸುಕವಾಗಿವೆ; ನಮ್ಮ ರೈತರ (ಅಂದರೆ ಬಹುತೇಕ ಭಾರತೀಯರ) ಆಧಾರ್ ಮಾಹಿತಿಯನ್ನು ಹಂಚಿಕೊಳ್ಳುವ ಬಗ್ಗೆ ಇಸ್ರೇಲ್‌ ಈಗಾಗಲೇ ಪ್ರಸ್ತಾಪಿಸಿದೆ. ಕೋಟಿಗಟ್ಟಲೆ ಭಾರತೀಯರಿಗೆ ಅತಿ ಕಡಿಮೆ ದರದಲ್ಲಿ ಮೊಬೈಲ್ ಒದಗಿಸಿರುವ ಅತಿ ದೊಡ್ಡ ಕಂಪೆನಿಯು ಮಹಾ ಮಾಹಿತಿ ವಿಶ್ಲೇಷಣೆಗಾಗಿ ಇಸ್ರೇಲ್ ಜೊತೆ ಒಡಂಬಡಿಕೆಗೆ ಹೊರಟಿದೆ. ಒಟ್ಟಿನಲ್ಲಿ ಆಧಾರ್ ಜೋಡಿತ ಮಾಹಿತಿಗೆ ಈಗಾಗಲೇ ವಿಪರೀತ ಬೇಡಿಕೆ ಕುದುರಿದೆ.

ಅದರಲ್ಲೂ, ಪ್ರತೀ ನಾಗರಿಕನ ಜನ್ಮಾರಭ್ಯ ಆರೋಗ್ಯ ಮಾಹಿತಿಯನ್ನು ಕಲೆ ಹಾಕುವುದೇ ಆಧಾರ್ ಯೋಜನೆಯ ಮುಖ್ಯ ಉದ್ದೇಶವಿರುವಂತೆ ತೋರುತ್ತಿದೆ. ಆಧಾರ್ ಯೋಜನೆಯ ರೂವಾರಿ ನಂದನ್ ನಿಲೇಕಣಿ ಮೊದಲಿನಿಂದಲೂ ಅದನ್ನು ಹೇಳುತ್ತಲಿದ್ದಾರೆ. ಕೇಂದ್ರ ಸರಕಾರವು ಹೆಣೆಯುತ್ತಿರುವ ತಂತ್ರಗಳೂ ಅದನ್ನೇ ಸೂಚಿಸುತ್ತಿವೆ. ಆರೋಗ್ಯ ಸಂಬಂಧಿ ಮಿಂದಾಖಲೆಗಳ ಮಾನದಂಡಗಳನ್ನು ಫೆಬ್ರವರಿ 2016ರಲ್ಲಿ ಪ್ರಕಟಿಸಲಾಗಿದ್ದು, ಆಧಾರ್‌ ಜೋಡಣೆಗೆ ಆದರಲ್ಲಿ ಮಹತ್ವ ನೀಡಲಾಗಿದೆ. ಸರಕಾರಿ ನೆರವಿಗೆ ಆಧಾರ್ ಕಡ್ಡಾಯಗೊಳಿಸಿ ಮಾರ್ಚ್ 2016ರಲ್ಲಿ ತಂದ ಆಧಾರ್ ಕಾಯಿದೆಯಲ್ಲಿ [2(ಕೆ)] ವ್ಯಕ್ತಿಯ ವೈದ್ಯಕೀಯ ವಿವರಗಳನ್ನು ಸಂಗ್ರಹಿಸುವಂತಿಲ್ಲ ಎಂದು ಹೇಳಲಾಗಿದ್ದರೂ, ಸರಕಾರವೇ ಅದನ್ನು ಮೀರಿ, ಆಸ್ಪತ್ರೆ ದಾಖಲಾತಿ, ವೈದ್ಯಕೀಯ ಪರೀಕ್ಷೆಗಳು ಮತ್ತು ಕೆಲವು ಚಿಕಿತ್ಸೆಗಳಿಗೆ ಆಧಾರ್ ಕಡ್ಡಾಯಗೊಳಿಸತೊಡಗಿದೆ. ಮಾರ್ಚ್ 2017ರಲ್ಲಿ ಪ್ರಕಟಿಸಿದ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ ರಾಷ್ಟ್ರೀಯ ಗಣಕೀಕೃತ ಆರೋಗ್ಯ ಪ್ರಾಧಿಕಾರವನ್ನು ರಚಿಸಿ, 2025ರ ವೇಳೆಗೆ ದೇಶದ ನಾಗರಿಕರ ರೋಗಗಳು ಮತ್ತು ಆರೋಗ್ಯ ಸರ್ವೇಕ್ಷಣೆಯ ವಿವರಗಳಿರುವ ಆಧಾರ್ ಜೋಡಿತ ಆರೋಗ್ಯ ಮಾಹಿತಿ ಜಾಲವನ್ನೂ, ಆರೋಗ್ಯ ಮಾಹಿತಿ ವಿನಿಮಯ ವ್ಯವಸ್ಥೆಯನ್ನೂ ಎಲ್ಲೆಡೆ ಸ್ಥಾಪಿಸುವ ಬಗ್ಗೆ ಹೇಳಲಾಗಿದೆ. ದೇಶದ ಎಲ್ಲಾ ಖಾಸಗಿ ಹಾಗೂ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ, ಜನರ ಮೊಬೈಲ್ ಮತ್ತು ಇತರ ಧರಿಸುವ ಸಾಧನಗಳಲ್ಲಿ ಮತ್ತು ಮಿಂಬಲೆಯಲ್ಲಿ ಲಭ್ಯವಾಗುವ ಎಲ್ಲಾ ಭಾರತೀಯರ ಆರೋಗ್ಯ ಸಂಬಂಧಿ ಮಿಂದಾಖಲೆಗಳನ್ನು ಸಂಯೋಜಿಸುವ ಬಗ್ಗೆಯೂ ಅದರಲ್ಲಿ ಹೇಳಲಾಗಿದೆ. ಈ ಮಾಹಿತಿಗಳ ಸಂಗ್ರಹ, ವಿಶ್ಲೇಷಣೆ ಹಾಗೂ ಹಂಚಿಕೆಗಳಲ್ಲಿ ಖಾಸಗಿ ವಲಯವು ಭಾಗಿಯಾಗಲಿದೆ ಎಂದೂ ಹೇಳಲಾಗಿದೆ.

ಹುಟ್ಟಿನಿಂದ ಸಾವಿನವರೆಗೆ ಪ್ರತಿಯೊಬ್ಬ ಭಾರತೀಯನ ಆರೋಗ್ಯದ ಸ್ಥಿತಿಗತಿ, ವೈದ್ಯಕೀಯ ಭೇಟಿಗಳು, ಪರೀಕ್ಷೆಗಳು, ಪಡೆದ ಲಸಿಕೆಗಳು ಮತ್ತು ಚಿಕಿತ್ಸೆಗಳು ಮುಂತಾದ ಸಕಲ ವಿವರಗಳನ್ನು ನಿಜಕಾಲದಲ್ಲಿ ದಾಖಲಿಸುವುದು, ವಿಶ್ಲೇಷಿಸುವುದು, ಮತ್ತು ಖಾಸಗಿ ಆಸ್ಪತ್ರೆಗಳು, ಸಂಶೋಧನಾ ಸಂಸ್ಥೆಗಳು ಹಾಗೂ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಇವನ್ನು ಹಂಚಿಕೊಳ್ಳುವುದು ಆಧಾರ್ ಯೋಜನೆಯ ಮಹಾ ಉದ್ದೇಶವೆನ್ನಲು ಇಷ್ಟು ಸಾಲದೇ? ಯಾವ ಪ್ರದೇಶದಲ್ಲಿ ಯಾರಿಗೆ ಯಾವ ರೋಗವಿದೆ, ಯಾವ ವೈದ್ಯರು ಯಾರಿಗೆ ಯಾವ ಚಿಕಿತ್ಸೆ ನೀಡುತ್ತಾರೆ, ಯಾವ ವ್ಯಕ್ತಿ ಯಾವ ರೋಗಕ್ಕೆ ಯಾರಿಂದೆಲ್ಲ ಏನೆಲ್ಲ ಚಿಕಿತ್ಸೆ ಪಡೆಯುತ್ತಾನೆ ಎಂಬುದೆಲ್ಲವನ್ನೂ ತಿಳಿದು ಅಂಥವರನ್ನು ವಹಿವಾಟಿನ ದಾಳಗಳಾಗಿಸಲು ಖಾಸಗಿ ಕಂಪೆನಿಗಳಿಗೆ ಇದರಿಂದ ಅತಿ ಸುಲಭವಾಗಲಿದೆ. ಹಾಗೆಯೇ, ವ್ಯಕ್ತಿಗೆ ತಗಲಿದ ರೋಗದ ಕಳಂಕವನ್ನು ಶಾಶ್ವತಗೊಳಿಸಿ, ಸತಾಯಿಸುವುದಕ್ಕೂ, ವಿಮೆಯನ್ನು ನಿರಾಕರಿಸುವುದಕ್ಕೂ, ಕಂತನ್ನು ಬೇಕಾಬಿಟ್ಟಿ ಹೆಚ್ಚಿಸುವುದಕ್ಕೂ ಸಮರ್ಥನೆಯೊದಗಲಿದೆ.

ವೈದ್ಯಕೀಯ ದಾಖಲೆಗಳನ್ನು ಆಧಾರ್‌ ಜೊತೆ ಗಣಕೀಕರಿಸುವುದರಿಂದ ಎಲ್ಲೇ ಹೋದರೂ ತ್ವರಿತ ಚಿಕಿತ್ಸೆ ಪಡೆಯುವುದು ಸುಲಭವಾಗಲಿದೆ ಎಂಬ ಸಬೂಬನ್ನು ನೀಡಲಾಗುತ್ತಿದೆ. ಆದರೆ ಮಿಂದಾಖಲೆಗಳ ಮಾನದಂಡಗಳನ್ನು ಗಮನಿಸಿದರೆ ಈ ಬಗ್ಗೆಯೂ ಸಂಶಯಗಳೇಳುತ್ತವೆ. ಈ ದಾಖಲೆಗಳನ್ನು ನೋಡುವುದಕ್ಕೆ, ಪಡೆಯುವುದಕ್ಕೆ, ಸೇರಿಸುವುದಕ್ಕೆ ರೋಗಿ ಹಾಗೂ ವೈದ್ಯನ ಬೆರಳಚ್ಚುಗಳ ಸಮ್ಮತಿ ಬೇಕಾಗುತ್ತದೆ; ಬೇರೆ ವೈದ್ಯರ ಬಳಿಗೆ ಹೋದರೆ ಮತ್ತೆ ಎಲ್ಲರೂ ಬೆರಳೊತ್ತಬೇಕಾಗುತ್ತದೆ. ತುರ್ತು ಸ್ಥಿತಿಗಳಲ್ಲಿ ಬೇರೆ ವೈದ್ಯರಿದ್ದರಂತೂ ಇದು ಇನ್ನಷ್ಟು ಜಟಿಲವಾಗುತ್ತದೆ. ಎಲ್ಲೋ ಒಂದೆಡೆ ಮಾಹಿತಿಯನ್ನು ಸೇರಿಸುವಾಗ ತಪ್ಪಾಗಿದ್ದರೆ, ಅದನ್ನು ಸರಿಪಡಿಸಲು ರೋಗಿಯು ಮತ್ತಷ್ಟು ಹೆಣಗಾಡಬೇಕಾಗುತ್ತದೆ. ನಮ್ಮ ದೇಶದಲ್ಲಿ ರೋಗ ಪತ್ತೆ ಮತ್ತು ಚಿಕಿತ್ಸೆಯ ಕ್ರಮಗಳು, ಕೌಶಲ್ಯಗಳು, ಸೌಲಭ್ಯಗಳು ಹಲತೆರನಾಗಿರುವುದರಿಂದ ಇಂತಹ ಕೇಂದ್ರೀಕೃತ ವ್ಯವಸ್ಥೆಯು ಅಪಾರ ತೊಂದರೆಗಳನ್ನುಂಟು ಮಾಡುವ ಸಾಧ್ಯತೆಗಳೇ ಹೆಚ್ಚು. ವೈದ್ಯಕೀಯ ಸಿಬಂದಿಯು ಈ ದಾಖಲೆಗಳನ್ನು ತುಂಬುವುದಕ್ಕೇ ಕಾಲವ್ಯಯ ಮಾಡಬೇಕಾಗಿ, ರೋಗಿಗಳ ಆರೈಕೆಯೂ ಇನ್ನಷ್ಟು ಬಳಲಲಿದೆ, ಹೊಟ್ಟೆಗೆ ಹಿಟ್ಟಿಲ್ಲದಲ್ಲಿ ಜುಟ್ಟಿಗೆ ಮಲ್ಲಿಗೆ ಹೂವಾಗಲಿದೆ.

ಆಹಾರ ಮತ್ತು ಸರಕಾರಿ ಆರೋಗ್ಯ ಸೇವೆಗಳಿಗೆ ಆಧಾರ್ ಕಡ್ಡಾಯ ಮಾಡಿದ್ದರಿಂದ ಈಗಾಗಲೇ ಅನೇಕರಿಗೆ ಸಮಸ್ಯೆಗಳಾದ ಬಗ್ಗೆ ವರದಿಗಳಾಗಿವೆ. ಬೆರಳಚ್ಚು ತಾಳೆಯಾಗದೆ, ಸರ್ವರ್ ದೊರಕದೆ, ಪಡಿತರ ತಪ್ಪಿ ಹಸಿವಿನಿಂದ ಸತ್ತದ್ದು, ಕುಷ್ಠದಿಂದ ಬೆರಳುಗಳು ಮತ್ತು ಮುಖಚರ್ಯೆ ಬದಲಾಗಿ ಆಹಾರ-ಔಷಧ ಸಿಗದಾಗಿದ್ದು, ಆಧಾರ್ ಕಾರಣಕ್ಕೆ ಆಸ್ಪತ್ರೆಗಳಲ್ಲಿ ಗರ್ಭಪಾತ ಮಾಡಿಸದೆ ನಕಲಿಗಳಿಂದ ಮಾಡಿಸಿ ಸಾವನ್ನಪ್ಪಿದ್ದು, ಆಧಾರ್ ಗುರುತಿಸಿಕೊಳ್ಳಲು ಒಪ್ಪದೆ ಎಚ್‌ಐವಿ ಚಿಕಿತ್ಸೆ ತೊರೆದದ್ದು ಎಲ್ಲ ಆಗಿವೆ. ಆಧಾರ್ ಇಲ್ಲದೆ ಆರೋಗ್ಯ ಸೇವೆ ಇಲ್ಲ ಎಂಬಂತಾದರೆ, ಬೆರಳಚ್ಚು ತಪ್ಪಿದರೆ, ಎಂದಿನ ವೈದ್ಯರು ಇಲ್ಲದಿದ್ದರೆ, ಮಾಹಿತಿಯಲ್ಲಿ ತಪ್ಪಿದ್ದರೆ, ಸರ್ವರ್ ಮೌನವಾದರೆ ಚಿಕಿತ್ಸೆಯೇ ಸಿಗದಂತಾಗಲಿದೆ. ಅದೇನೇ ಆದರೂ ಮಾಹಿತಿ ಕಣಜವನ್ನು ನಿಯಂತ್ರಿಸುವ ಮಹಾ ಬಂಡವಾಳಗಾರರಿಗೆ ಒಳ್ಳೆಯದೇ ಆಗಲಿದೆ.

Be the first to comment

Leave a Reply

Your email address will not be published.


*