75 ವರ್ಷ ಕಳೆದ ‘ಸ್ವತಂತ್ರ’ ಭಾರತದಲ್ಲಿ ಆರೋಗ್ಯ ಸೇವೆಗಳು
ವಾರ್ತಾಭಾರತಿ, ಆಗಸ್ಟ್ 15, 2023
ನೆಹರೂ ಆಡಳಿತದಲ್ಲಿ ಸ್ಥಾಪಿಸಲ್ಪಟ್ಟು, ಎಂಬತ್ತರ ದಶಕದಲ್ಲಿ ಏಷ್ಯಾದ ಅತಿ ದೊಡ್ಡ ಔಷಧ ಉತ್ಪಾದಕ ಸಂಸ್ಥೆಯಾಗಿದ್ದ ಇಂಡಿಯನ್ ಡ್ರಗ್ಸ್ ಅಂಡ್ ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್ (ಐಡಿಪಿಎಲ್) ಈಗ ವಿಸರ್ಜನೆಯ ಪಟ್ಟಿಯಲ್ಲಿದೆ ಎನ್ನುವುದು ಸ್ವಾತಂತ್ರ್ಯಾನಂತರದ 75 ವರ್ಷಗಳ ಭಾರತದಲ್ಲಿ ಆರೋಗ್ಯ ಸೇವೆಗಳ ಪಾಡೇನಾಗಿದೆ ಎನ್ನುವುದರ ದ್ಯೋತಕವಾಗಿದೆ.
ಸ್ವಾತಂತ್ರ್ಯಕ್ಕೆ ಸನಿಹದ ಕಾಲದಲ್ಲಿ ಬ್ರಿಟನ್ನಿನಲ್ಲಿ ಲಕ್ಷ ಜನರಿಗೆ 100 ವೈದ್ಯರಿದ್ದಲ್ಲಿ, ಭಾರತದಲ್ಲಿ ಲಕ್ಷಕ್ಕೆ 16ರಷ್ಟು ವೈದ್ಯರಿದ್ದರು. ಬ್ರಿಟನ್ನಿನಲ್ಲಿ ಲಕ್ಷ ಜನರಿಗೆ 714 ಆಸ್ಪತ್ರೆ ಹಾಸಿಗೆಗಳಿದ್ದರೆ, ಭಾರತದಲ್ಲಿ 24 ಹಾಸಿಗೆಗಳಷ್ಟೇ ಲಭ್ಯವಿದ್ದವು. ಅಂತ ಸನ್ನಿವೇಶದಲ್ಲಿ ಬೋಸ್-ನೆಹರೂ ಮುಂದಾಳತ್ವದಲ್ಲಿ ಹಿರಿಯ ವಿಜ್ಞಾನಿ ಕರ್ನಲ್ ಸೋಖಿ ಅಧ್ಯಕ್ಷತೆಯಲ್ಲಿ 1939ರಲ್ಲಿ ರಚಿಸಲಾಗಿದ್ದ ಸಮಿತಿಯು ಸರಕಾರವೇ ಎಲ್ಲರಿಗೂ ಆಧುನಿಕ ವೈದ್ಯವಿಜ್ಞಾನದಲ್ಲಿ ತರಬೇತಾದ ವೈದ್ಯರ ಮೂಲಕ ಸಮಗ್ರ ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸಬೇಕೆಂದೂ, ಸಾವಿರ ಜನಸಂಖ್ಯೆಗೊಬ್ಬ ವೈದ್ಯ ಹಾಗೂ 600 ಜನಸಂಖ್ಯೆಗೊಂದರಂತೆ ಆಸ್ಪತ್ರೆ ಹಾಸಿಗೆ ಒದಗಿಸಬೇಕೆಂದೂ ಸೂಚಿಸಿತು. ಔಷಧಗಳು ಹಾಗೂ ಉಪಕರಣಗಳ ಉತ್ಪಾದನೆಯಲ್ಲಿ ದೇಶವು ಸ್ವಾವಲಂಬಿಯಾಗಬೇಕೆಂದೂ, ಚಿಕಿತ್ಸೆಯಲ್ಲಿ ಬಳಕೆಯಾಗುವ ಯಾವುದೇ ವಸ್ತುಗಳ ಮೇಲೆ ಖಾಸಗಿ ಕಂಪೆನಿಗಳಿಗೆ ಸ್ವಾಮ್ಯತೆಯಿರಕೂಡದೆಂದೂ ಆ ವರದಿಯು ಒತ್ತಾಯಿಸಿತು. ಆಯುರ್ವೇದ, ಸಿದ್ಧ, ನಾಟಿ ಮುಂತಾದ ದೇಸಿ ಪದ್ಧತಿಗಳಿಗೆ ಈ ಉಪಸಮಿತಿಯು ಯಾವುದೇ ಮಹತ್ವ ನೀಡಲಿಲ್ಲ.
ನಂತರ 1943ರಲ್ಲಿ ಬ್ರಿಟಿಷ್ ಸರಕಾರವು ಸರ್ ಜೋಸೆಫ್ ಭೋರ್ ಅವರ ಅಧ್ಯಕ್ಷತೆಯಲ್ಲಿ ರಚಿಸಿದ ಆರೋಗ್ಯ ಸಮೀಕ್ಷೆ ಹಾಗೂ ಅಭಿವೃದ್ಧಿ ಸಮಿತಿಯು ಕೂಡ ಸೋಖಿ ಸಮಿತಿಯ ಆಶಯಗಳಿಗೆ ಪೂರಕವಾಗಿದ್ದ ವರದಿಯನ್ನೇ ನೀಡಿತು; ಪ್ರತಿ 10-20 ಸಾವಿರ ಜನತೆಗೆಂಬಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 30 ಆರೋಗ್ಯ ಕೇಂದ್ರಗಳಿಗೊಂದರಂತೆ ದ್ವಿತೀಯ ಸ್ತರದ ಆಸ್ಪತ್ರೆಗಳು ಹಾಗೂ ಪ್ರತಿ ಜಿಲ್ಲೆಗೊಂದು 2500 ಹಾಸಿಗೆಗಳ ತೃತೀಯ ಸ್ತರದ ಆಸ್ಪತ್ರೆಗಳಿರಬೇಕೆಂಬ ಸಲಹೆ ಅದರಲ್ಲಿತ್ತು..
ಸೋಖಿ ಸಮಿತಿ, ಭೋರ್ ಸಮಿತಿಗಳ ಆಶಯಗಳನ್ನು ಸಾಕಾರಗೊಳಿಸಲು ಹೊರಟ ನೆಹರೂ ಸರಕಾರದ ಮೊದಲ ಮೂರು ಪಂಚವಾರ್ಷಿಕ ಯೋಜನೆಗಳ ಅಂತ್ಯಕ್ಕೆ 4631 ಆರೋಗ್ಯ ಕೇಂದ್ರಗಳು, ದಿಲ್ಲಿಯ ಎಐಐಎಂಎಸ್, ಚಂಡೀಗಢದ ಪಿಜಿಐ, ಬೆಂಗಳೂರಿನ ಮನೋರೋಗ ಸಂಸ್ಥೆಯಂತಹ ಅತ್ಯುನ್ನತ ವೈದ್ಯಕೀಯ ಸಂಸ್ಥೆಗಳು ಸ್ಥಾಪನೆಗೊಂಡವು. ಔಷಧಗಳು ಹಾಗೂ ಲಸಿಕೆಗಳಲ್ಲಿ ಸ್ವಾವಲಂಬನೆಗಾಗಿ ಸರಕಾರಿ ರಂಗದಲ್ಲಿ ಹಿಂದುಸ್ಥಾನ್ ಆಂಟಿಬಯಾಟಿಕ್ಸ್, ಐಡಿಪಿಎಲ್ ನಂತಹ ಸಂಸ್ಥೆಗಳನ್ನು ಸ್ಥಾಪಿಸಲಾಯಿತು, ಲಸಿಕೆ ಹಾಗೂ ಔಷಧ ಸಂಶೋಧನೆಗಾಗಿ ಬ್ರಿಟಿಷ್ ಸರಕಾರ ಸ್ಥಾಪಿಸಿದ್ದ ಮುಂಬಯಿಯ ಹಾಫ್ ಕಿನ್ಸ್ ಸಂಸ್ಥೆ, ಕಸೋಲಿಯ ಸಂಶೋಧನಾ ಸಂಸ್ಥೆ, ಕೂನೂರಿನ ಪಾಶ್ಚರ್ ಸಂಸ್ಥೆ ಮುಂತಾದವನ್ನು ಇನ್ನಷ್ಟು ಬಲಪಡಿಸಲಾಯಿತು. ಮಲೇರಿಯಾ, ಕ್ಷಯ, ಕುಷ್ಠ, ಕಾಲೆರಾ, ಪ್ಲೇಗ್ ಮುಂತಾದ ರೋಗಗಳ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು; 1953ರಲ್ಲಿ ಆರಂಭಗೊಂಡ ಮಲೇರಿಯಾ ನಿಯಂತ್ರಣ ಕಾರ್ಯಕ್ರಮದ ಫಲವಾಗಿ ವರ್ಷಕ್ಕೆ 8 ಕೋಟಿಯಷ್ಟಿದ್ದ ಮಲೇರಿಯಾ ಪ್ರಕರಣಗಳು 1961ರ ವೇಳೆಗೆ ಕೇವಲ 5 ಲಕ್ಷಕ್ಕಿಳಿದವು. ನೆಹರೂ ಅವರ 17 ವರ್ಷಗಳ ಆಡಳಿತದ ಅಂತ್ಯಕ್ಕೆ ಭಾರತೀಯರ ನಿರೀಕ್ಷಿತ ಆಯುಸ್ಸು 33ರಿಂದ 45ಕ್ಕೇರಿತ್ತು, ಶಿಶು ಮರಣ ಪ್ರಮಾಣವು ಸಾವಿರಕ್ಕೆ 160ರಿಂದ 140ಕ್ಕೆ ಇಳಿದಿತ್ತು.
ಭೋರ್ ಸಮಿತಿಯು ರಾಷ್ಟ್ರೀಯ ಉತ್ಪನ್ನದ ಶೇ. 15ನ್ನು ಆರೋಗ್ಯ ಸೇವೆಗಳಿಗೆ ಒದಗಿಸಬೇಕೆಂದು ಶಿಫಾರಸು ಮಾಡಿದ್ದರೂ, ಮೊದಲ ಯೋಜನೆಯಲ್ಲಿ ಶೇ.3.3 ಒದಗಿಸಲಷ್ಟೇ ಸಾಧ್ಯವಾಗಿತ್ತು. ನೆಹರೂ ನಂತರ ಇದು ಇಳಿಯುತ್ತಲೇ ಹೋಗಿ, ಹನ್ನೊಂದನೇ ಯೋಜನೆಯ ವೇಳೆಗೆ ಕೇವಲ ಶೇ. 0.9 ಆಯಿತು. ಈಗಿನ ಸರಕಾರದ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ 2025ಕ್ಕೆ ಶೇ. 2.5ರಷ್ಟನ್ನು ಆರೋಗ್ಯ ಸೇವೆಗಳಿಗೆ ಒದಗಿಸುವ ಬಗ್ಗೆ ಹೇಳಲಾಗಿದ್ದರೂ, ಈವರೆಗೆ ಅದರ ಲಕ್ಷಣಗಳಿಲ್ಲ.
ಭೋರ್ ಸಮಿತಿಯ ಇತರ ಗುರಿಗಳನ್ನು ತಲುಪುವುದಕ್ಕೂ ಈ 75 ವರ್ಷಗಳಲ್ಲಿ ಸಾಧ್ಯವಾಗಿಲ್ಲ. ದೇಶದಲ್ಲೀಗ 25140ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, 35602 ಜನಸಂಖ್ಯೆಗೊಂದಷ್ಟೇ ಆಗಿದೆ. ಸಮುದಾಯ ಕೇಂದ್ರಗಳ ಸಂಖ್ಯೆ 5481ರಷ್ಟಾಗಿದ್ದು, 1,20,000 ಜನಸಂಖ್ಯೆಗೊಂದು ಇರಬೇಕಾದಲ್ಲಿ 163300 ಜನರಿಗೊಂದಷ್ಟೇ ಆಗಿದೆ. ಅನೇಕ ರಾಜ್ಯಗಳಲ್ಲಿ ಈ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯ ಕೊರತೆಯಿದೆ, ಔಷಧಗಳು ಹಾಗೂ ಉಪಕರಣಗಳ ಕೊರತೆಯೂ ಇದೆ. ಈಗಿನ ಸರಕಾರದ ಆರೋಗ್ಯ ನೀತಿಯಲ್ಲಿ ಜಿಲ್ಲಾಸ್ಪತ್ರೆಗಳನ್ನು, ಸಮುದಾಯ ಆರೋಗ್ಯ ಕೇಂದ್ರಗಳನ್ನು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗಿಯವರಿಗೆ ಒಪ್ಪಿಸುವ ಪ್ರಸ್ತಾವವಿದ್ದು, ಕರ್ನಾಟಕದ 9 ಜಿಲ್ಲೆಗಳೂ ಸೇರಿದಂತೆ ಕೆಲವೆಡೆ ಅದಕ್ಕೆ ಸಿದ್ಧತೆಗಳಾಗುತ್ತಿವೆ.
ಪ್ರತೀ ಸಾವಿರ ಜನರಿಗೆ ಒಬ್ಬ ವೈದ್ಯನಿರಬೇಕೆಂಬ ಸೋಖಿ-ಬೋರ್ ಸಮಿತಿಗಳ ಗುರಿಯನ್ನು ಕೂಡ ಇನ್ನೂ ತಲುಪಲಾಗಿಲ್ಲ. ದೇಶದಲ್ಲೀಗ ಸುಮಾರು 8 ಲಕ್ಷ ಆಧುನಿಕ ವೈದ್ಯವಿಜ್ಞಾನದ ವೈದ್ಯರಿರಬಹುದೆಂದು ಅಂದಾಜಿದ್ದು, 1600 ಜನರಿಗೆ ಒಬ್ಬ ವೈದ್ಯನಿದ್ದಂತಾಗುತ್ತದೆ. ಇವರಲ್ಲಿ ಹೆಚ್ಚಿನವರು ನಗರ ಪ್ರದೇಶಗಳಲ್ಲೇ ಕಾರ್ಯನಿರ್ವಹಿಸುತ್ತಿರುವುದರಿಂದ ಗ್ರಾಮೀಣ ಭಾಗಗಳಲ್ಲಿ ಆಧುನಿಕ ವೈದ್ಯರ ಕೊರತೆಯು ಇನ್ನೂ ಹೆಚ್ಚಿದೆ. ಅಂತಲ್ಲಿ ಬದಲಿ ಪದ್ಧತಿಗಳವರೂ, ನಕಲಿಗಳೂ ತಳವೂರಿ ಆಧುನಿಕ ವೈದ್ಯರಂತೆ ಚಿಕಿತ್ಸೆ ನೀಡುತ್ತಿದ್ದಾರೆ. ಈಗ ವರ್ಷಕ್ಕೆ ಒಂದು ಲಕ್ಷಕ್ಕೂ ಮಿಕ್ಕಿ ಎಂಬಿಬಿಎಸ್ ಸೀಟುಗಳು ಲಭ್ಯವಿದ್ದರೂ, ಗ್ರಾಮೀಣ ಭಾಗಗಳಲ್ಲಿ ವೈದ್ಯರ ಕೊರತೆಯು ಬೇಗನೇ ನೀಗುವ ಲಕ್ಷಣಗಳು ಕಾಣುತ್ತಿಲ್ಲ. ಈಗ ಕ್ಯೂಬಾ, ಯೂರೋಪ್ ಹಾಗೂ ಮಧ್ಯ ಪ್ರಾಚ್ಯದ ದೇಶಗಳಲ್ಲಿ ಸಾವಿರ ಜನರಿಗೆ 7ರಷ್ಟು ವೈದ್ಯರಿರುವಾಗ, ನಾವು ಇನ್ನೂ 1943ರಲ್ಲಿ ಹಾಕಿದ ಸಾವಿರ ಜನರಿಗೆ ಒಬ್ಬ ವೈದ್ಯನ ಗುರಿಯನ್ನೇ ತಲುಪಲು ಸಾಧ್ಯವಾಗಿಲ್ಲ.
ವಸ್ತುಸ್ಥಿತಿ ಹೀಗಿದ್ದರೂ, ದೇಶದಲ್ಲಿ ಆರೇಳು ಲಕ್ಷದಷ್ಟು ಬದಲಿ ಪದ್ಧತಿಗಳ ಚಿಕಿತ್ಸಕರಿದ್ದು, ಅವರನ್ನೂ ಸೇರಿಸಿಕೊಂಡರೆ 15 ಲಕ್ಷದಷ್ಟು ವೈದ್ಯರಿದ್ದಂತಾಗಿ, 800-900 ಜನರಿಗೊಬ್ಬ ವೈದ್ಯನಿದ್ದಂತಾಗುತ್ತದೆ, ಹಾಗೆ ಸಾವಿರ ಜನರಿಗೊಬ್ಬ ವೈದ್ಯನೆಂಬ ಗುರಿಯನ್ನು ಈಗಾಗಲೇ ಮೀರಲಾಗಿದೆ ಎಂದು ಸರಕಾರವು ಸಂಸತ್ತಿನಲ್ಲಿ ಹೇಳಿಕೊಂಡಿದೆ! ಒಂದೆಡೆ ಆಧುನಿಕ ವೈದ್ಯ ವಿಜ್ಞಾನವೂ, ಬದಲಿ ಪದ್ಧತಿಗಳು ಎಲ್ಲ ಸೇರಿ ಅಗತ್ಯಕ್ಕೂ ಹೆಚ್ಚು ವೈದ್ಯರಿದ್ದಾರೆ ಎಂದು ಸಾಧಿಸಹೊರಟಿರುವ ಸರಕಾರವು, ಇನ್ನೊಂದೆಡೆ, ಸಾಕಷ್ಟು ವೈದ್ಯರು ಲಭ್ಯವಿಲ್ಲದ ಕಾರಣಕ್ಕೆ ಜಿಲ್ಲೆಗೊಂದು ಆಧುನಿಕ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಹೊರಟಿದ್ದೇವೆ ಎಂದೂ ಹೇಳಿಕೊಳ್ಳುತ್ತಿದೆ, ಅದಕ್ಕಾಗಿ ಖಾಸಗಿ ಬಂಡವಾಳಗಾರರಿಗೆ ಜಿಲ್ಲಾಸ್ಪತ್ರೆಗಳನ್ನು ಮಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವುದಕ್ಕೆ ಅನುಕೂಲ ಮಾಡಿಕೊಡುವುದಕ್ಕೂ ಹೊರಟಿದೆ!
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಆಧುನಿಕ ವೈದ್ಯವಿಜ್ಞಾನಕ್ಕೆ ಮಹತ್ವವನ್ನು ನೀಡಿದ್ದರಿಂದಾಗಿ ನೆಹರೂ ಕಾಲಾವಧಿಯ ಅಂತ್ಯಕ್ಕೆ 160 ರಿಂದ 140ಕ್ಕೆ ಇಳಿದಿದ್ದ ಶಿಶು ಮರಣ ಪ್ರಮಾಣವು 2014ರ ವೇಳೆಗೆ 39ಕ್ಕೆ ಇಳಿಯಿತು, ಕಳೆದ ವರ್ಷ ಅದು 27ಕ್ಕೆ ಇಳಿದಿದೆ. ಸಾಕ್ಷರತೆ ಹಾಗೂ ಅರೋಗ್ಯ ಸೇವೆಗಳಲ್ಲಿ ಸಮಾಜವಾದಿ ಪಥವನ್ನು ಹಿಡಿದಿರುವ ಕೇರಳ ರಾಜ್ಯವು ಪ್ರಾಥಮಿಕ ಆರೋಗ್ಯ ಸೇವೆಗಳಿಗೆ ಒತ್ತು ನೀಡಿದ್ದರಿಂದಾಗಿ ಅಲ್ಲಿನ ಶಿಶು ಮರಣ ಪ್ರಮಾಣವು ಕೇವಲ 6ಕ್ಕೆ ಇಳಿದಿದೆ, ಇದು ಅಮೆರಿಕಾದಂತಹ ದೇಶಗಳಿಗೆ ಸಮವಾಗಿದೆ. ಕರ್ನಾಟಕದಲ್ಲಿ ಶಿಶು ಮರಣ ಪ್ರಮಾಣವು 20 ಇದ್ದು, ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ. ಆದರೆ, 2017-18ರಲ್ಲಿ ಕೇರಳದ 10-11ರ ಪ್ರಮಾಣಕ್ಕೆ ಅತಿ ಸನಿಹದಲ್ಲಿದ್ದ ಅವಿಭಿಜಿತ ದಕ್ಷಿಣ ಕನ್ನಡ ಜಿಲ್ಲೆಯು 2022ರಲ್ಲೂ ಅಲ್ಲೇ ಉಳಿದಿದ್ದು, ಕೇರಳಕ್ಕಿಂತ ಹಿಂದೆ ಬಿದ್ದಂತಾಗಿದೆ. ಇದು ಇಲ್ಲಿನ ರಾಜಕೀಯ-ಸಾಮಾಜಿಕ ವ್ಯವಸ್ಥೆಗಳಿಂದ ಸಮಸ್ಯೆಯಾಗಿರುವುದನ್ನು ಸೂಚಿಸುತ್ತದೆ.
ಬಹು ಪ್ರಚಾರದ ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ಮಹಾಲೆಕ್ಕಪಾಲರ ಮೊತ್ತಮೊದಲ ವರದಿಯನ್ನು ಕಳೆದ ವಾರವಷ್ಟೇ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಇದುವರೆಗೆ ಸುಮಾರು 67000 ಕೋಟಿ ಹಣವನ್ನು ಅದಕ್ಕಾಗಿ ವ್ಯಯಿಸಲಾಗಿದೆ ಎಂದು ಹೇಳಲಾಗಿದ್ದರೂ, ಸುಮಾರು 10 ಲಕ್ಷ ಫಲಾನುಭವಿಗಳನ್ನು ಒಂದೇ ದೂರವಾಣಿ ಸಂಖ್ಯೆಯಡಿ ನೋಂದಾಯಿಸಿರುವುದು, ಆಸ್ಪತ್ರೆಗಳ ಒಟ್ಟು ಸಾಮರ್ಥ್ಯಕ್ಕಿಂತ 2-3 ಪಾಲು ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿರುವುದು, ಹಲವು ರಾಜ್ಯಗಳಲ್ಲಿ ಅಗತ್ಯಕ್ಕಿಂತ ತೀರಾ ಕಡಿಮೆ ಪ್ರಮಾಣದ ಆಸ್ಪತ್ರೆಗಳು ನೋಂದಾಯಿಸಿರುವುದು ಅಥವಾ ನೋಂದಾಯಿಸಿರುವ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಒಪ್ಪದಿರುವುದು ಇವೇ ಮುಂತಾದ ಹಲವು ಸಮಸ್ಯೆಗಳನ್ನು ಆ ವರದಿಯಲ್ಲಿ ಹೇಳಲಾಗಿದೆ. ಬೊಕ್ಕಸದ ಹಣವನ್ನು ಹೀಗೆ ಖಾಸಗಿ ಆಸ್ಪತ್ರೆಗಳಿಗೆ ಸುರಿಯುವ ಬದಲು ಸಾರ್ವಜನಿಕ ರಂಗದ ಆರೋಗ್ಯ ಸಂಸ್ಥೆಗಳನ್ನು ಬಲಪಡಿಸಲು ಬಳಸಬಾರದೇ?
ನೆಹರೂ ಕಾಲದಲ್ಲಿ ಸ್ಥಾಪನೆಗೊಂಡಿದ್ದ ಐಡಿಪಿಎಲ್ ನಂತಹ ಸಂಸ್ಥೆಗಳು 90ರ ದಶಕದಿಂದೀಚೆಗೆ ಅವಗಣನೆಗೀಡಾಗಿ ಈಗ ಬಾಗಿಲು ಹಾಕುವ ಮಟ್ಟಕ್ಕೆ ತಲುಪಿವೆ. ಔಷಧಗಳು ಮತ್ತು ಲಸಿಕೆಗಳು ಖಾಸಗಿ ಕಂಪೆನಿಗಳ ಸ್ವತ್ತುಗಳಾಗಿಬಿಟ್ಟಿರುವುದರಿಂದ ಕಳೆದ ಏಳೆಂಟು ವರ್ಷಗಳಲ್ಲಿ ಅನೇಕ ಅತಿ ಸಾಮಾನ್ಯ ಬಳಕೆಯ ಔಷಧಗಳ ದರಗಳು ಮೂರರಿಂದ ನಾಲ್ಕು ಪಟ್ಟು ಏರಿಕೆಯಾಗಿವೆ. ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 2008ರಲ್ಲಿ ಆರಂಭಿಸಿದ್ದ ಜನೌಷಧಿ ಯೋಜನೆಗೆ ಇತ್ತೀಚೆಗೆ ವಿಪರೀತ ಪ್ರಚಾರ ನೀಡಿ ಅದನ್ನೇ ಬಹು ದೊಡ್ಡ ಉಪಕಾರ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಇಂದು ಬಳಸಲ್ಪಡುತ್ತಿರುವ ಔಷಧಗಳಲ್ಲಿ ಒಂದು ಸಣ್ಣ ಪಾಲಷ್ಟೇ ಈ ಕೇಂದ್ರಗಳಲ್ಲಿ ಲಭ್ಯವಿದ್ದು, ತಮ್ಮ ಚಿಕಿತ್ಸೆಯ ಅಗತ್ಯಗಳನ್ನು ಪೂರೈಸಿಕೊಳ್ಳಲು ಜನರು ಒದ್ದಾಡುವ ಸ್ಥಿತಿಯೊದಗಿದೆ.
ಮೊದಲ ಆರೇಳು ದಶಕಗಳಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆಗಳನ್ನು ಒದಗಿಸುವ ಮೂಲಕ ಡಿಫ್ತೀರಿಯಾ, ನಾಯಿಕೆಮ್ಮು, ಧನುರ್ವಾತ, ಪೋಲಿಯೋ, ರೇಬೀಸ್, ಕ್ಷಯ ಮುಂತಾದ ಮಾರಕ ರೋಗಗಳನ್ನು ನಿವಾರಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದ ಹಾಫ್‌ಕಿನ್ಸ್ ಸಂಸ್ಥೆ, ಪಾಶ್ಚರ್ ಸಂಸ್ಥೆ ಹಾಗೂ ಕಸೌಲಿಯ ಸಂಶೋಧನಾ ಸಂಸ್ಥೆಗಳು ನವೀಕರಣಗೊಳ್ಳದೆ ಬದಿಗೆ ಸರಿಸಲ್ಪಟ್ಟವು, ಖಾಸಗಿ ಲಸಿಕೆ ಕಂಪೆನಿಗಳು ಬೆಳೆದವು. ಇದೇ ಕಾರಣಕ್ಕೆ ಕೊರೋನಾ ಸೋಂಕಿಗೆ ವಿದೇಶಿ ಕಂಪೆನಿಗಳು ಅಭಿವೃದ್ಧಿ ಪಡಿಸಿ ಭಾರತದ ಖಾಸಗಿ ಲಸಿಕೆ ಉತ್ಪಾದನಾ ಸಂಸ್ಥೆಯು ತಯಾರಿಸಿದ್ದ ಲಸಿಕೆಯನ್ನು ಸಾವಿರಗಟ್ಟಲೆ ಕೋಟಿ ಸುರಿದು ಖರೀದಿಸಬೇಕಾಯಿತು, ಇನ್ನೊಂದು ಲಸಿಕೆಯ ಅಭಿವೃದ್ಧಿಯಲ್ಲಿ ನಮ್ಮದೇ ಸರಕಾರಿ ಸಂಸ್ಥೆಗಳ ಮಹತ್ವದ ಪಾತ್ರವಿದ್ದರೂ, ಅದನ್ನು ಕೂಡ ಖಾಸಗಿ ಕಂಪೆನಿಯೇ ತಯಾರಿಸಿ ಲಾಭದ ಬಹು ದೊಡ್ಡ ಪಾಲನ್ನು ಆ ಕಂಪೆನಿಗೇ ನೀಡಲಾಯಿತು. ಇವನ್ನು ಕೂಡ ಭಯಂಕರ ಸಾಧನೆಯೆಂಬಂತೆ ಬಿಂಬಿಸಲಾಗುತ್ತಿರುವುದು ಈ ಕಾಲದ ಕುಚೋದ್ಯವೇ ಸರಿ.
ವಿದೇಶಗಳಲ್ಲಿ ಸಂಶೋಧಿಸಿದ ಔಷಧಗಳನ್ನು ನಮ್ಮ ದೇಶದ ಕಂಪೆನಿಗಳು ಉತ್ಪಾದಿಸುವುದಕ್ಕೆ ಅನುಕೂಲವಾಗುವಂತೆ ದೇಶದ ಹಕ್ಕು ಸ್ವಾಮ್ಯತೆಯ ನಿಯಮಗಳನ್ನು ರೂಪಿಸಲಾಗಿತ್ತು. ಈ ನಿಯಮದ ಲಾಭ ಪಡೆದು ಭಾರತದ ಅನೇಕ ಔಷಧ ಕಂಪೆನಿಗಳು ಬೃಹತ್ತಾಗಿ ಬೆಳೆದವು, ಹೆಚ್‌ಐವಿ ಚಿಕಿತ್ಸೆಯ ಔಷಧಗಳನ್ನು ಹೀಗೆಯೇ ಉತ್ಪಾದಿಸಿ ಆಫ್ರಿಕಾದ ದೇಶಗಳಿಗೆ ಅತಿ ಕಡಿಮೆ ದರದಲ್ಲಿ ಒದಗಿಸಿ, ಮಾರಕವೆನಿಸಿದ್ದ ಆ ಸೋಂಕನ್ನು ನಿಯಂತ್ರಿಸುವಲ್ಲಿ ಭಾರತದ ಕಂಪೆನಿಗಳು ಐತಿಹಾಸಿಕ ಪಾತ್ರವನ್ನು ನಿರ್ವಹಿಸಿದ್ದವು. ಅಂಥ ಹಕ್ಕುಸ್ವಾಮ್ಯತೆಯ ನಿಯಮಗಳನ್ನು ಈ ಕೆಲವು ವರ್ಷಗಳಿಂದ ಬದಲಿಸಲಾಗಿದ್ದು, ಹೊಸ ಔಷಧಗಳನ್ನು ಇಲ್ಲಿ ಸುಲಭವಾಗಿ ಉತ್ಪಾದಿಸುವುದು ಕಷ್ಟವಾಗಲಿದೆ. ಕೊರೋನ ಕಾಲದಲ್ಲಿ ತುರ್ತುಸ್ಥಿತಿಯ ನೆಪವೊಡ್ಡಿ ಲಸಿಕೆಗಳು ಮತ್ತು ಔಷಧಗಳಿಗೆ ಅವುಗಳ ಸಾಧಕ-ಬಾಧಕಗಳ ಬಗ್ಗೆ ಸರಿಯಾದ ಪರೀಕ್ಷೆಗಳೇ ನಡೆದಿರದಿದ್ದರೂ ತುರ್ತು ಅನುಮೋದನೆಗಳನ್ನು ನೀಡಲಾಗಿತ್ತು. ಈಗ ಇನ್ನಷ್ಟು ಔಷಧಗಳಿಗೆ ಹಾಗೂ ಲಸಿಕೆಗಳಿಗೆ ತುರ್ತು ಅನುಮೋದನೆ ನೀಡುವ ಇದೇ ಮಾರ್ಗವನ್ನು ಬಳಸಿಕೊಳ್ಳುವ ಲಕ್ಷಣಗಳು ಗೋಚರಿಸತೊಡಗಿವೆ. ತಪ್ಪಿತಸ್ಥ ಕಂಪೆನಿಗಳು ಕೇವಲ ದಂಡ ಕಟ್ಟಿ ಪಾರಾಗುವಂತೆಯೂ ನಿಯಮಗಳನ್ನು ಬದಲಿಸಲಾಗಿದೆ.
ಆಧುನಿಕ ವೈದ್ಯಕೀಯ ಶಿಕ್ಷಣದಲ್ಲಿ ಬದಲಿ ಪದ್ಧತಿಗಳನ್ನು ಕಲಬೆರಕೆ ಮಾಡಿ ಹಾಳುಗೆಡಹುವ ಯೋಜನೆಯೂ, ಆಡುಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣ ಎಂಬ ಪ್ರಹಸನವೂ ಆರಂಭಗೊಂಡಿವೆ. ನೆಹರೂ ಕಾಲದಿಂದಲೂ ನಮ್ಮ ದೇಶದಲ್ಲಿ ನೀಡಲಾಗುತ್ತಿರುವ ಅತ್ಯುತ್ತಮ ಆಧುನಿಕ ವೈದ್ಯಕೀಯ ಶಿಕ್ಷಣಕ್ಕೂ, ಅದರಿಂದ ಇಲ್ಲಿ ನೀಡಲಾಗುತ್ತಿರುವ ಆಧುನಿಕ ಚಿಕಿತ್ಸೆಗೂ ವಿಶ್ವಮನ್ನಣೆಯಿದೆ; ಇಲ್ಲಿ ಕಲಿತ ವೈದ್ಯರು ಬ್ರಿಟನ್, ಅಮೆರಿಕಾದಂತಹ ದೇಶಗಳಲ್ಲೂ ಅತ್ಯುತ್ತಮವಾಗಿ ವೈದ್ಯವೃತ್ತಿ ನಡೆಸುತ್ತಿದ್ದಾರೆ, ವಿದೇಶೀಯರು ಕೂಡ ಭಾರತದಲ್ಲಿ ಆಧುನಿಕ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಬರುತ್ತಿದ್ದಾರೆ. ಇದನ್ನು ನಾಶ ಮಾಡುವ ಕೆಲಸ ಆರಂಭಗೊಂಡಿದೆ.
ಆಧುನಿಕ ವೈದ್ಯಕೀಯ ವ್ಯವಸ್ಥೆಯನ್ನು ನಾಶ ಮಾಡುವುದಕ್ಕಾಗಿ ವೈದ್ಯಕೀಯ ಶಿಕ್ಷಣದ ನಿಯಂತ್ರಣವನ್ನೇ ಸರಕಾರವು ವಶ ಪಡಿಸಿಕೊಂಡಿದೆ. ವೈದ್ಯರಿಂದಲೇ ಚುನಾಯಿತ ಸಂಸ್ಥೆಯಾಗಿದ್ದ ಎಂಸಿಐಯನ್ನು ಬರ್ಖಾಸ್ತು ಮಾಡಿ, ಅದರ ಬದಲಿಗೆ ಕೇಂದ್ರ ಸರಕಾರವೇ ನೇಮಿಸುವ ಕೈಗೊಂಬೆ ಎನ್‌ಎಂಸಿಯನ್ನು 2019ರಲ್ಲಿ ರಚಿಸಲಾಗಿದೆ. ಸಲಹಾ ಮಂಡಳಿಯ 83 ಸ್ಥಾನಗಳಲ್ಲಿ 49 ಸ್ಥಾನಗಳು ಖಾಲಿಯಿರುವ, ನಾಲ್ಕು ಮಂಡಳಿಗಳಲ್ಲಿ 20 ಸದಸ್ಯರಲ್ಲಿ 9 ಸ್ಥಾನಗಳು ಖಾಲಿಯಿರುವ ಎನ್ ಎಂಸಿ ವೈದ್ಯಕೀಯ ಶಿಕ್ಷಣದ ಪಠ್ಯಕ್ರಮಗಳನ್ನು ರೂಪಿಸುತ್ತಿದೆ, ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕೆ, ವೃತ್ತಿ ನೋಂದಣಿಗೆ, ನೀತಿ ಸಂಹಿತೆಗೆ ನಿಯಮಗಳನ್ನು ಮಾಡುತ್ತಿದೆ!
ಇವೆಲ್ಲದರ ನಡುವೆ, ಯಾವುದೇ ಕಾನೂನಿನ ಬಲವಿಲ್ಲದೆ ದೇಶದ ಪ್ರತಿಯೊಬ್ಬ ವೈದ್ಯ, ಪ್ರತಿಯೊಂದು ಆರೋಗ್ಯ ಸೇವಾ ಸಂಸ್ಥೆ ಮತ್ತು ಪ್ರತಿಯೋರ್ವ ನಾಗರಿಕ ಆರೋಗ್ಯ ಸಂಬಂಧಿತವಾದ ಎಲ್ಲಾ ಮಾಹಿತಿಯನ್ನು ಕೇಂದ್ರೀಕೃತವಾದ ಗಣಕ ವ್ಯವಸ್ಥೆಯಲ್ಲಿ ಸೇರಿಸಬೇಕೆಂಬ ವ್ಯವಸ್ಥೆಯನ್ನು ಮಾಡಲಾಗಿದೆ. ಇದು ಐಚ್ಛಿಕವೆಂದು ಹೇಳುತ್ತಲೇ ಯಾವುದೇ ಸೂಚನೆಯಿಲ್ಲದೆ, ಅನುಮತಿಯಿಲ್ಲದೆ, ಕೊರೋನ ಲಸಿಕೆ ಪಡೆದ ಎಲ್ಲರಿಗೂ ವಿಶಿಷ್ಠ ಆರೋಗ್ಯ ದಾಖಲೆಯ ಸಂಖ್ಯೆಯನ್ನು ಈಗಾಗಲೇ ನೀಡಲಾಗಿದೆ, ಎಲ್ಲಾ ವೈದ್ಯರೂ ಕಡ್ಡಾಯವಾಗಿ ನೋಂದಾಯಿಸಬೇಕೆಂದು ಕೆಳಮಟ್ಟದ ಅಧಿಕಾರಿಗಳಿಂದ ಸುತ್ತೋಲೆಗಳನ್ನು ಕಳಿಸಲಾಗುತ್ತಿದೆ.
ಇವೆಲ್ಲವನ್ನೂ ನೋಡಿದರೆ, ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಅತ್ಯಾಧುನಿಕವಾದ ಭವ್ಯ ಭಾರತದ ನಿರ್ಮಾಣಕ್ಕಾಗಿ ಆಶಿಸಿದ್ದ ಗಾಂಧಿ-ಬೋಸ್-ನೆಹರೂ ನೇತೃತ್ವದ ನಾಯಕರು ಹಾಕಿಕೊಟ್ಟ ದಾರಿಯಿಂದ ನಾವು ವಿಮುಖರಾಗಿರುವುದು ಸ್ಪಷ್ಟವಾಗಿದೆ. ಅಧುನಿಕ ವೈದ್ಯವಿಜ್ಞಾನದ ಮೂಲಕ ಎಲ್ಲರಿಗೂ ಉತ್ಕೃಷ್ಟವಾದ ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸುವುದಕ್ಕೆ, ಔಷಧ ಹಾಗೂ ಲಸಿಕೆಗಳ ಸಂಶೋಧನೆ ಹಾಗೂ ಉತ್ಪದನೆಗಳಲ್ಲಿ ಸ್ವಾವಲಂಬಿಗಳಾಗುವುದಕ್ಕೆ ಅವರು ಹಾಕಿಕೊಟ್ಟಿದ್ದ ಅಡಿಪಾಯವನ್ನು ಸಡಿಲಿಸಿ ಬೀಳಿಸುವ ಕೆಲಸ ಎಗ್ಗಿಲ್ಲದೆ ಸಾಗುತ್ತಿದೆ. ಹಾಗಿರುವಾಗ ಮುಂಬರುವ ವರ್ಷಗಳಲ್ಲಿ ಸರಕಾರಿ ಆಸ್ಪತ್ರೆಗಳು ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವ ದಲ್ಲಾಳಿಗಳಾಗಿ, ವೈದ್ಯಕೀಯ ಶಿಕ್ಷಣವು ಕಲಸುಮೇಲೋಗರವಾಗಿ, ಆರೋಗ್ಯ ಮಾಹಿತಿಯೆಲ್ಲವೂ ಖಾಸಗಿ ಹಿತಾಸಕ್ತಿಗಳ ಆಸ್ತಿಯಾಗಿ ಒಳ್ಳೆಯ ದಿನಗಳೆಂದು ಹೇಳಲ್ಪಡಬಹುದು.
Leave a Reply