ಖಾಸಗೀಕರಣದಲ್ಲಿ ನರಳುತ್ತಿರುವ ಆರೋಗ್ಯ ಸೇವೆಗಳು

ಖಾಸಗೀಕರಣದಲ್ಲಿ ನರಳುತ್ತಿರುವ ಆರೋಗ್ಯ ಸೇವೆಗಳು

ಕೆಂಬಾವುಟ ವಿಶೇಷಾಂಕ, ಆಗಸ್ಟ್ 2023

ಸ್ವತಂತ್ರ ಭಾರತದ 75 ವರ್ಷಗಳಲ್ಲಿ ನಾವು ಕಟ್ಟಿದ್ದೆಷ್ಟು, ಕೆಡವಿದ್ದೆಷ್ಟು ಎನ್ನುವುದಕ್ಕೆ ಇಂಡಿಯನ್ ಡ್ರಗ್ಸ್ ಅಂಡ್ ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್ – ಐಡಿಪಿಎಲ್ – ಭಾರತೀಯ ಔಷಧಗಳು ಹಾಗೂ ಔಷಧೀಯ ಉತ್ಪನ್ನಗಳ ಸಂಸ್ಥೆ – ಒಂದೇ ಅತ್ಯುತ್ತಮ ಉದಾಹರಣೆಯಾಗಬಹುದು. ಜವಹರಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದಾಗ 1961ರಲ್ಲಿ ಐಡಿಪಿಎಲ್ ಸ್ಥಾಪನೆಯಾಯಿತು. ನಾವು ಎಂಬತ್ತರ ದಶಕದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾಗ ಈ ಐಡಿಪಿಎಲ್ ಏಷ್ಯಾದ ಅತಿ ದೊಡ್ಡ ಔಷಧ ಉತ್ಪಾದಕ ಸಂಸ್ಥೆಯಾಗಿತ್ತು, ಸರಕಾರಿ ಆಸ್ಪತ್ರೆಗಳಲ್ಲೂ, ಖಾಸಗಿ ವಲಯದಲ್ಲೂ ಆಗ ಬಳಕೆಯಾಗುತ್ತಿದ್ದ ಹೆಚ್ಚಿನ ಔಷಧಗಳು ಐಡಿಪಿಎಲ್ ಉತ್ಪನ್ನಗಳೇ ಆಗಿರುತ್ತಿದ್ದವು. ಅಂಥ ಐಡಿಪಿಎಲ್ ಕಳೆದ ಹತ್ತು ವರ್ಷಗಳಿಂದ ಔಷಧಗಳನ್ನು ಉತ್ಪಾದಿಸುವ ಬದಲಿಗೆ ಖಾಸಗಿ ಕಂಪೆನಿಗಳಿಂದ ಔಷಧಗಳನ್ನು ಖರೀದಿಸಿ ಜನೌಷಧಿ ಕೇಂದ್ರಗಳಿಗೆ ಪೂರೈಸುವ ಮಧ್ಯವರ್ತಿಯಾಗಿಬಿಟ್ಟಿತು, ಮತ್ತೀಗ 2021ರಲ್ಲಿ ಅದು ವಿಸರ್ಜನೆಗೊಳ್ಳಬೇಕಾದ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಲ್ಪಟ್ಟಿದೆ.

ಸ್ವಾತಂತ್ರ್ಯಾನಂತರದ 75 ವರ್ಷಗಳ ಭಾರತದಲ್ಲಿ ಆರೋಗ್ಯ ಸೇವೆಗಳ ಪಾಡೇನಾಗಿದೆ ಎನ್ನುವುದು ಐಡಿಪಿಎಲ್ ಸಂಸ್ಥೆಯೊಂದರ ಪಾಡಿನಲ್ಲೇ ಗೋಚರಿಸುತ್ತದೆ – ಭಾರತದಲ್ಲಿ ಅತ್ಯಾಧುನಿಕ ವೈದ್ಯವಿಜ್ಞಾನದ ಆರೋಗ್ಯ ಸೇವೆಗಳು ಮತ್ತು ಅತ್ಯಾಧುನಿಕ ಔಷಧಗಳು ಎಲ್ಲರಿಗೂ ಉಚಿತವಾಗಿ ಲಭ್ಯವಾಗಬೇಕು, ಅದಕ್ಕಾಗಿ ಆಧುನಿಕ ಔಷಧಗಳ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಬೇಕು ಎಂಬ ಸ್ಪಷ್ಟ ಗುರಿಯೊಂದಿಗೆ ಪ್ರಧಾನಿ ನೆಹರೂ ನೇತೃತ್ವದಲ್ಲಿ ಸರಕಾರಿ ರಂಗದಲ್ಲಿ ಆರಂಭಿಸಿದ್ದ ಅತ್ಯುನ್ನತ ಮಟ್ಟದ ಆಧುನಿಕ ವೈದ್ಯಕೀಯ ಸಂಸ್ಥೆಗಳು ಮತ್ತು ವೈದ್ಯಕೀಯ ಕಾಲೇಜುಗಳು ಹಾಗೂ ಐಡಿಪಿಎಲ್ ಮುಂತಾದ ಸಂಸ್ಥೆಗಳು ತೊಂಬತ್ತರ ದಶಕದಿಂದೀಚೆಗೆ ರೋಗಾವಸ್ಥೆಗೆ ತಳ್ಳಲ್ಪಟ್ಟಿವೆ, ಅವುಗಳ ಸ್ಥಾನವನ್ನು ಖಾಸಗಿ ಸಂಸ್ಥೆಗಳು ಆಕ್ರಮಿಸಿಬಿಟ್ಟಿವೆ, ಐಡಿಪಿಎಲ್ ವಿಸರ್ಜನೆಗೊಳ್ಳುವ ಮಟ್ಟಕ್ಕೆ ತಲುಪಿದೆ, ಜಿಲ್ಲಾಸ್ಪತ್ರೆಗಳೂ ಬಿಕರಿಗೆ ಬಿದ್ದಿವೆ, ಅದರೊಂದಿಗೆ ಎಲ್ಲರಿಗೂ ಉಚಿತವಾಗಿ ಅತ್ಯುತ್ತಮವಾದ ಆರೋಗ್ಯ ಸೇವೆಗಳನ್ನು ಒದಗಿಸುವ ನೆಹರೂ ಆಡಳಿತದ ಕನಸುಗಳು ಮತ್ತು ಯೋಜನೆಗಳು ಕೂಡ ಮಣ್ಣಾಗುತ್ತಿವೆ.

ಸ್ವತಂತ್ರ ಭಾರತವು ಎಲ್ಲಾ ಪ್ರಜೆಗಳಿಗೆ ಆಹಾರ, ಆರೋಗ್ಯ ಮತ್ತು ಶಿಕ್ಷಣವನ್ನು ಒದಗಿಸಬೇಕು, ವೈಜ್ಞಾನಿಕವಾದ, ಪ್ರಗತಿಪರವಾದ ಹಾದಿಯಲ್ಲಿ ಸಾಗಬೇಕು ಎನ್ನುವುದು ನಮ್ಮ ಸ್ವಾತಂತ್ರ್ಯ ಸೇನಾನಿಗಳ ಮಹದಾಸೆಯಾಗಿತ್ತು. ಅದಕ್ಕಾಗಿ, ಬ್ರಿಟಿಷರೆದುರು ಹೋರಾಡುತ್ತಲೇ, ಸ್ವತಂತ್ರ ಭಾರತದ ರೂಪುರೇಷೆಗಳನ್ನೂ ಅವರು ಸಿದ್ದಪಡಿಸತೊಡಗಿದ್ದರು. ಯೂರೋಪ್ ಮತ್ತು ಅಮೆರಿಕಾಗಳಲ್ಲಿ ಶಿಕ್ಷಣ ಪಡೆದಿದ್ದ ನೆಹರೂ, ಬೋಸ್, ಅಂಬೇಡ್ಕರ್ ಅವರಂಥ ನಾಯಕರು ಸ್ವತಂತ್ರ ಭಾರತವೂ ಅತ್ಯಾಧುನಿಕವಾದ, ಜನಪರವಾದ ವ್ಯವಸ್ಥೆಗಳನ್ನು ಹೊಂದಿರಬೇಕೆಂದು ಬಯಸಿದ್ದರು. ಫೆಬ್ರವರಿ 1938ರಲ್ಲಿ ಹರಿಪುರದ ಕಾಂಗ್ರೆಸ್ ಮಹಾಧಿವೇಶನದ ಅಧ್ಯಕ್ಷರಾಗಿದ್ದ ನೇತಾಜಿ ಬೋಸ್ ಅವರು, ಬಡತನ, ಅನಕ್ಷರತೆ ಹಾಗೂ ರೋಗರುಜಿನಗಳ ನಿರ್ಮೂಲನೆಗಾಗಿ ಸಮಾಜವಾದಿ ವ್ಯವಸ್ಥೆಯೊಂದೇ ದಾರಿಯೆಂದು ಹೇಳಿದ್ದರು. ಬಳಿಕ 1939ರಲ್ಲಿ ನೆಹರೂ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಯೋಜನಾ ಸಮಿತಿಯನ್ನು ರಚಿಸಲಾಯಿತು; ಅದರಡಿಯಲ್ಲಿ ಆರೋಗ್ಯ ಯೋಜನೆಯ ಉಪಸಮಿತಿಗೆ ಆಗಿನ ಕಾಲದಲ್ಲಿ ಹಿರಿಯ ವೈದ್ಯ ವಿಜ್ಞಾನಿಯಾಗಿದ್ದ ಕರ್ನಲ್ ಸಾಹಿಬ್ ಸಿಂಗ್ ಸೋಖಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.

ಸ್ವಾತಂತ್ರ್ಯಕ್ಕೆ ಸನಿಹದ ಕಾಲದಲ್ಲಿ ಬ್ರಿಟನ್ನಿನಲ್ಲಿ ಲಕ್ಷ ಜನರಿಗೆ 100 ವೈದ್ಯರಿದ್ದಲ್ಲಿ, ಭಾರತದಲ್ಲಿ ಲಕ್ಷಕ್ಕೆ 16ರಷ್ಟು ವೈದ್ಯರಿದ್ದರು. ಬ್ರಿಟನ್ನಿನಲ್ಲಿ ಲಕ್ಷ ಜನರಿಗೆ 714 ಆಸ್ಪತ್ರೆ ಹಾಸಿಗೆಗಳಿದ್ದರೆ, ಭಾರತದಲ್ಲಿ 24 ಹಾಸಿಗೆಗಳಷ್ಟೇ ಲಭ್ಯವಿದ್ದವು. ಅಂತ ಸನ್ನಿವೇಶದಲ್ಲಿ ಕರ್ನಲ್ ಸೋಖಿ ನೇತೃತ್ವದ ಉಪಸಮಿತಿಯು 1940ರಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಿ, ರೋಗ ರಕ್ಷಣೆ ಹಾಗೂ ಚಿಕಿತ್ಸೆಗಳ ಸಮಗ್ರ ಆರೋಗ್ಯ ಸೇವೆಗಳನ್ನು ಸರಕಾರವೇ ಎಲ್ಲರಿಗೂ ಉಚಿತವಾಗಿ ಒದಗಿಸಬೇಕೆಂದೂ, ಅದಕ್ಕಾಗಿ ಆಧುನಿಕ ವೈದ್ಯವಿಜ್ಞಾನದಲ್ಲಿ ತರಬೇತಾದ ವೈದ್ಯರನ್ನು ಪೂರ್ಣಾವಧಿ ಸೇವೆಗೆ ನಿಯೋಜಿಸಬೇಕೆಂದೂ, ಸಾವಿರ ಜನಸಂಖ್ಯೆಗೊಬ್ಬ ವೈದ್ಯ ಹಾಗೂ 600 ಜನಸಂಖ್ಯೆಗೊಂದರಂತೆ ಆಸ್ಪತ್ರೆ ಹಾಸಿಗೆ ಒದಗಿಸಬೇಕೆಂದೂ ಸೂಚಿಸಿತು. ಔಷಧಗಳು ಹಾಗೂ ಉಪಕರಣಗಳ ಉತ್ಪಾದನೆಯಲ್ಲಿ ದೇಶವು ಸ್ವಾವಲಂಬಿಯಾಗಬೇಕೆಂದೂ, ಚಿಕಿತ್ಸೆಯಲ್ಲಿ ಬಳಕೆಯಾಗುವ ಯಾವುದೇ ವಸ್ತುಗಳ ಮೇಲೆ ಖಾಸಗಿ ಕಂಪೆನಿಗಳಿಗೆ ಸ್ವಾಮ್ಯತೆಯಿರಕೂಡದೆಂದೂ ಆ ವರದಿಯು ಒತ್ತಾಯಿಸಿತು. ಆಯುರ್ವೇದ, ಸಿದ್ಧ, ನಾಟಿ ಮುಂತಾದ ದೇಸಿ ಪದ್ಧತಿಗಳಿಗೆ ಈ ಉಪಸಮಿತಿಯು ಯಾವುದೇ ಮಹತ್ವ ನೀಡಲಿಲ್ಲ.

ನಂತರ 1943ರಲ್ಲಿ ಬ್ರಿಟಿಷ್ ಸರಕಾರವು ಸರ್ ಜೋಸೆಫ್ ಭೋರ್ ಅವರ ಅಧ್ಯಕ್ಷತೆಯಲ್ಲಿ ರಚಿಸಿದ ಆರೋಗ್ಯ ಸಮೀಕ್ಷೆ ಹಾಗೂ ಅಭಿವೃದ್ಧಿ ಸಮಿತಿಯು ಕೂಡ ಸೋಖಿ ಸಮಿತಿಯ ಆಶಯಗಳಿಗೆ ಪೂರಕವಾಗಿದ ವರದಿಯನ್ನೇ ನೀಡಿತು; ಪ್ರತಿ 10-20 ಸಾವಿರ ಜನತೆಗೆಂಬಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 30 ಆರೋಗ್ಯ ಕೇಂದ್ರಗಳಿಗೊಂದರಂತೆ ದ್ವಿತೀಯ ಸ್ತರದ ಆಸ್ಪತ್ರೆಗಳು ಹಾಗೂ ಪ್ರತಿ ಜಿಲ್ಲೆಗೊಂದು 2500 ಹಾಸಿಗೆಗಳ ತೃತೀಯ ಸ್ತರದ ಆಸ್ಪತ್ರೆಗಳಿರಬೇಕೆಂಬ ಸಲಹೆ ಅದರಲ್ಲಿತ್ತು. ಇಂದಿಗೂ ಕೂಡ ಇದೇ ಭೋರ್ ಸಮಿತಿಯ ವರದಿಯನ್ನು ಭಾರತದ ಆರೋಗ್ಯ ಸೇವೆಗಳ ಮೂಲಾಧಾರವೆಂದು ಪರಿಗಣಿಸಲಾಗುತ್ತಿದೆ.

ದೇಶವು 1947ರಲ್ಲಿ ನಾವು ಸ್ವತಂತ್ರಗೊಂಡಾಗ ಬಡತನ, ಅಜ್ಞಾನ, ಅನಾರೋಗ್ಯ, ಹಸಿವು ಎಲ್ಲೆಡೆ ತುಂಬಿ ಹೋಗಿದ್ದವು. ವರ್ಷಕ್ಕೆ 8 ಕೋಟಿ ಜನಕ್ಕೆ ಮಲೇರಿಯಾ ತಗಲಿ, 8 ಲಕ್ಷ ಜನ ಸಾಯುತ್ತಿದ್ದರು; 50 ಲಕ್ಷ ಕ್ಷಯ ರೋಗಿಗಳಲ್ಲಿ 5 ಲಕ್ಷ ಸಾಯುತ್ತಿದ್ದರು; ಒಂದೂವರೆ ಲಕ್ಷ ಜನ ಸಿಡುಬಿನಿಂದಲೂ, ಇನ್ನೊಂದಷ್ಟು ಲಕ್ಷ ಜನ ಕಾಲೆರಾ, ಪ್ಲೇಗ್ ಮುಂತಾದ ಸೋಂಕುಗಳಿಂದಲೂ ಸಾಯುತ್ತಿದ್ದರು. ಆಗ ನಮ್ಮವರ ನಿರೀಕ್ಷಿತ ಆಯುಸ್ಸು 33 ವರ್ಷಗಳಷ್ಟಿತ್ತು, ಸಾವಿರಕ್ಕೆ 160 ಮಕ್ಕಳು ವರ್ಷ ತುಂಬುವುದರೊಳಗೆ ಸಾಯುತ್ತಿದ್ದರು.

ಸೋಖಿ ಸಮಿತಿ, ಭೋರ್ ಸಮಿತಿಗಳ ಆಶಯಗಳನ್ನು ಸಾಕಾರಗೊಳಿಸಲು ಹೊರಟ ನೆಹರೂ ಸರಕಾರದ ಮೊದಲ ಮೂರು ಪಂಚವಾರ್ಷಿಕ ಯೋಜನೆಗಳ ಅಂತ್ಯಕ್ಕೆ 4631 ಆರೋಗ್ಯ ಕೇಂದ್ರಗಳು, ದಿಲ್ಲಿಯ ಏಮ್ಸ್, ಚಂಡೀಗಢದ ಪಿಜಿಐ, ಬೆಂಗಳೂರಿನ ಮನೋರೋಗ ಸಂಸ್ಥೆಯಂತಹ ಅತ್ಯುನ್ನತ ವೈದ್ಯಕೀಯ ಸಂಸ್ಥೆಗಳು ಸ್ಥಾಪನೆಗೊಂಡವು. ಲಸಿಕೆ ಹಾಗೂ ಔಷಧ ಸಂಶೋಧನೆಗಾಗಿ ಬ್ರಿಟಿಷ್ ಸರಕಾರ ಸ್ಥಾಪಿಸಿದ್ದ, ಮುಂಬಯಿಯ ಹಾಫ್ ಕೈನ್ಸ್ ಸಂಸ್ಥೆ, ಕಸೋಲಿಯ ಸಂಶೋಧನಾ ಸಂಸ್ಥೆ, ಕೂನೂರಿನ ಪಾಶ್ಚರ್ ಸಂಸ್ಥೆ ಮುಂತಾದವನ್ನು ಇನ್ನಷ್ಟು ಬಲಪಡಿಸಲಾಯಿತು. ಕರ್ನಲ್ ಸೋಖಿ ಅವರು 1930ರ ದಶಕದಲ್ಲಿ ಹಾಫ್ ಕೈನ್ಸ್ ಸಂಸ್ಥೆಯನ್ನು ಸೇರಿ ಅದನ್ನು ಬಹು ಎತ್ತರಕ್ಕೆ ಬೆಳೆಸಿದ್ದರು; 1945ರಲ್ಲಿ ಬಳಕೆಗೆ ಬಂದಿದ್ದ ಮಹಾ ಪ್ರತಿಜೈವಿಕ ಪೆನಿಸಿಲಿನ್ ಅನ್ನು ಭಾರತದಲ್ಲೇ ಉತ್ಪಾದಿಸಲು ಕರ್ನಲ್ ಸೋಖಿಯವರು 1946ರಲ್ಲೇ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದರು, 1954ರಲ್ಲಿ ನೆಹರೂ ಆಡಳಿತದಲ್ಲಿ ಅದನ್ನೇ ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಎಂಬ ಹೆಸರಲ್ಲಿ ಇನ್ನಷ್ಟು ವಿಸ್ತರಿಸಲಾಯಿತು, ಔಷಧಗಳಲ್ಲಿ ಸ್ವಾವಲಂಬನೆಗಾಗಿ ಸರಕಾರಿ ರಂಗದಲ್ಲಿ ಐಡಿಪಿಎಲ್ ನಂತಹ ಸಂಸ್ಥೆಗಳನ್ನು ಕೂಡಾ ಸ್ಥಾಪಿಸಲಾಯಿತು.

ಮಲೇರಿಯಾ, ಕ್ಷಯ, ಕುಷ್ಠ, ಕಾಲೆರಾ, ಪ್ಲೇಗ್ ಮುಂತಾದ ರೋಗಗಳ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು; ಸ್ವಾತಂತ್ರ್ಯ ದೊರಕಿದಾಗ ವರ್ಷಕ್ಕೆ 8 ಕೋಟಿಯಷ್ಟಿದ್ದ ಮಲೇರಿಯಾ ಪ್ರಕರಣಗಳ ಸಂಖ್ಯೆಯು 1953ರಲ್ಲಿ ಆರಂಭಗೊಂಡ ಮಲೇರಿಯಾ ನಿಯಂತ್ರಣ ಕಾರ್ಯಕ್ರಮದ ಫಲವಾಗಿ 1961ರ ವೇಳೆಗೆ ಕೇವಲ 5 ಲಕ್ಷಕ್ಕಿಳಿಯಿತು. ಪ್ಲೇಗ್, ಕಾಲೆರಾದಂತಹ ಸೋಂಕುಗಳು ಗಣನೀಯವಾಗಿ ತಗ್ಗಿದವು ಅಥವಾ ಮರೆಯಾದವು. ಇವೆಲ್ಲವುಗಳಿಂದಾಗಿ 17 ವರ್ಷಗಳ ನೆಹರೂ ಆಡಳಿತದ ಅಂತ್ಯಕ್ಕೆ ಭಾರತೀಯರ ನಿರೀಕ್ಷಿತ ಆಯುಸ್ಸು 33ರಿಂದ 45ಕ್ಕೇರಿತ್ತು, ಶಿಶು ಮರಣ ಪ್ರಮಾಣವು ಸಾವಿರಕ್ಕೆ 160ರಿಂದ 140ಕ್ಕೆ ಇಳಿದಿತ್ತು.

ಭೋರ್ ಸಮಿತಿಯು ರಾಷ್ಟ್ರೀಯ ಉತ್ಪನ್ನದ ಶೇ. 15ನ್ನು ಆರೋಗ್ಯ ಸೇವೆಗಳಿಗೆ ಒದಗಿಸಬೇಕೆಂದು ಶಿಫಾರಸು ಮಾಡಿದ್ದರೂ, ಮೊದಲ ಯೋಜನೆಯಲ್ಲಿ ಶೇ.3.3ರಷ್ಟು ಒದಗಿಸಲಾಗಿತ್ತು, ಮೂರನೇ ಯೋಜನೆಯಲ್ಲಿ ಇದು ಶೇ. 2.6ಕ್ಕಿಳಿಯಿತು. ನೆಹರೂ ನಂತರ ಇದು ಇಳಿಯುತ್ತಲೇ ಹೋಗಿ, ಹನ್ನೊಂದನೇ ಯೋಜನೆಯ ವೇಳೆಗೆ ಕೇವಲ ಶೇ. 0.9 ಆಯಿತು. ಈಗಿನ ಸರಕಾರದ ಹೊಸ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ 2025ಕ್ಕೆ ಶೇ. 2.5ರಷ್ಟನ್ನು ಆರೋಗ್ಯ ಸೇವೆಗಳಿಗೆ ಒದಗಿಸುವ ಬಗ್ಗೆ ಹೇಳಲಾಗಿದ್ದರೂ, ಈವರೆಗೆ ಅದು ಮೂಗಿಗೆ ಸವರಿದ ಬೆಣ್ಣೆಯಂತಷ್ಟೇ ಆಗಿದೆ. ಹೀಗೆ ಸರಕಾರಿ ಆರೋಗ್ಯ ಸೇವೆಗಳ ಕಡೆಗಣನೆ ಹೆಚ್ಚಿದಂತೆ ಸರಕಾರಿ ಆಸ್ಪತ್ರೆಗಳು ಸೌಲಭ್ಯಗಳಿಲ್ಲದೇ ಸೊರಗಿದವು, ಗ್ರಾಮೀಣ ಪ್ರದೇಶಗಳಂತೂ ತೀರಾ ಕಡೆಗಣಿಸಲ್ಪಟ್ಟವು.

ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಭೋರ್ ಸಮಿತಿಯು ಹಾಕಿದ ಇತರ ಗುರಿಗಳನ್ನು ಈಡೇರಿಸುವುದಕ್ಕೂ ನಮಗೆ ಸಾಧ್ಯವಾಗಿಲ್ಲ. ದೇಶದಲ್ಲೀಗ 25140ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, 35602 ಜನಸಂಖ್ಯೆಗೊಂದಷ್ಟೇ ಆಗಿದೆ. ಸಮುದಾಯ ಕೇಂದ್ರಗಳ ಸಂಖ್ಯೆ 5481ರಷ್ಟಾಗಿದ್ದು, 1,20,000 ಜನಸಂಖ್ಯೆಗೊಂದು ಇರಬೇಕಾದಲ್ಲಿ 163300 ಜನರಿಗೊಂದಷ್ಟೇ ಆಗಿದೆ. ಅನೇಕ ರಾಜ್ಯಗಳಲ್ಲಿ ಈ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯ ಕೊರತೆಯಿದೆ, ಔಷಧಗಳು ಹಾಗೂ ಇತರ ಉಪಕರಣಗಳ ಕೊರತೆಯೂ ಇದೆ. ಈ ಸರಕಾರದ ಹೊಸ ಆರೋಗ್ಯ ನೀತಿಯಲ್ಲಿ ಜಿಲ್ಲಾಸ್ಪತ್ರೆಗಳನ್ನು, ಕೆಲವು ಸಮುದಾಯ ಆರೋಗ್ಯ ಕೇಂದ್ರಗಳನ್ನು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗಿಯವರಿಗೆ ಒಪ್ಪಿಸುವ ಪ್ರಸ್ತಾವವಿದ್ದು, ಕರ್ನಾಟಕದ 9 ಜಿಲ್ಲೆಗಳೂ ಸೇರಿದಂತೆ ಕೆಲವೆಡೆ ಅದರ ಜಾರಿಗೆ ಸಿದ್ಧತೆಗಳಾಗುತ್ತಿವೆ. ಅದರೊಂದಿಗೆ ಇದುವರೆಗೆ ಮಾಡಿರುವ ಆರೋಗ್ಯ ಕೇಂದ್ರಗಳನ್ನೂ ಬಿಡದೆ ಮಾರಿದಂತಾಗಲಿದೆ.

ಪ್ರತೀ ಸಾವಿರ ಜನರಿಗೆ ಒಬ್ಬ ವೈದ್ಯನಿರಬೇಕೆಂಬ ಸೋಖಿ-ಬೋರ್ ಸಮಿತಿಗಳ ಗುರಿಯನ್ನು ಕೂಡ ಇನ್ನೂ ತಲುಪಲಾಗಿಲ್ಲ. ದೇಶದಲ್ಲೀಗ ಸುಮಾರು 8 ಲಕ್ಷ ಆಧುನಿಕ ವೈದ್ಯವಿಜ್ಞಾನದ ವೈದ್ಯರಿರಬಹುದೆಂದು ಅಂದಾಜಿದ್ದು, 1600 ಜನರಿಗೆ ಒಬ್ಬ ವೈದ್ಯನಿದ್ದಂತಾಗುತ್ತದೆ. ಇವರಲ್ಲಿ ಹೆಚ್ಚಿನವರು ನಗರ ಪ್ರದೇಶಗಳಲ್ಲೇ ಕಾರ್ಯನಿರ್ವಹಿಸುತ್ತಿರುವುದರಿಂದ ಗ್ರಾಮೀಣ ಭಾಗಗಳಲ್ಲಿ ಆಧುನಿಕ ವೈದ್ಯರ ಕೊರತೆಯು ಇನ್ನೂ ಹೆಚ್ಚಿದೆ. ಅಂತಲ್ಲಿ ಬದಲಿ ಪದ್ಧತಿಗಳವರೂ, ನಕಲಿಗಳೂ ತಳವೂರಿ ಆಧುನಿಕ ವೈದ್ಯರಂತೆ ಚಿಕಿತ್ಸೆ ನೀಡುತ್ತಿದ್ದಾರೆ. ಈಗ ವರ್ಷಕ್ಕೆ ಒಂದು ಲಕ್ಷಕ್ಕೂ ಮಿಕ್ಕಿ ಎಂಬಿಬಿಎಸ್ ಸೀಟುಗಳು ಲಭ್ಯವಿದ್ದರೂ, ಅವುಗಳಲ್ಲಿ ಶೇ. 55ರಷ್ಟು ಸೀಟುಗಳನ್ನು ಖಾಸಗಿ ಕಾಲೇಜುಗಳಲ್ಲಿ ಮಾರಾಟಕ್ಕೆ ಇಡಲಾಗಿದೆ. ವೈದ್ಯಕೀಯ ಶಿಕ್ಷಣದ ಆದ್ಯತೆಗಳು ಹೀಗೆ ವ್ಯಾಪಾರವೇ ಆಗಿರುವುದರಿಂದಲೂ, ವೈದ್ಯರಿಗೆ ಸಂಬಳ ಕೊಡಲು ಸರಕಾರಗಳಿಗೆ ಇಚ್ಚಾಶಕ್ತಿಯೇ ಇಲ್ಲದಿರುವುದರಿಂದಲೂ ಗ್ರಾಮೀಣ ಭಾಗಗಳಲ್ಲಿ ವೈದ್ಯರ ಕೊರತೆಯು ಬೇಗನೇ ನೀಗುವ ಲಕ್ಷಣಗಳು ಕಾಣುತ್ತಿಲ್ಲ. ಈಗ ಕ್ಯೂಬಾ, ಯೂರೋಪ್ ಹಾಗೂ ಮಧ್ಯ ಪ್ರಾಚ್ಯದ ದೇಶಗಳಲ್ಲಿ ಸಾವಿರ ಜನರಿಗೆ 7ರಷ್ಟು ವೈದ್ಯರಿರುವಾಗ, ನಾವು ಇನ್ನೂ 1943ರಲ್ಲಿ ಹಾಕಿದ ಸಾವಿರ ಜನರಿಗೆ ಒಬ್ಬ ವೈದ್ಯನ ಗುರಿಯನ್ನೇ ತಲುಪಲು ಸಾಧ್ಯವಾಗಿಲ್ಲ.

ವಸ್ತುಸ್ಥಿತಿ ಹೀಗಿದ್ದರೂ ದೇಶದಲ್ಲಿ ಆರೇಳು ಲಕ್ಷದಷ್ಟು ಬದಲಿ ಪದ್ಧತಿಗಳ ಚಿಕಿತ್ಸಕರು ಇದ್ದಾರೆಂದೂ, ಅವರನ್ನೂ ಸೇರಿಸಿದರೆ 15 ಲಕ್ಷದಷ್ಟು ವೈದ್ಯರು ಇದ್ದಂತಾಗುತ್ತದೆ ಎಂದೂ, ಅದರೊಂದಿಗೆ 800-900 ಜನರಿಗೊಬ್ಬ ವೈದ್ಯನಿದ್ದಂತಾಗಿ ವಿಶ್ವ ಆರೋಗ್ಯ ಸಂಸ್ಥೆಯ ಸಾವಿರ ಜನರಿಗೊಬ್ಬ ವೈದ್ಯನೆಂಬ ಗುರಿಯನ್ನು ಈಗಾಗಲೇ ಮೀರಲಾಗಿದೆಯೆಂದೂ ಸರಕಾರವು ಸಂಸತ್ತಿನಲ್ಲಿ ಹೇಳಿಕೊಂಡಿದೆ! ಹುಟ್ಟಿನಿಂದ ಸಾವಿನವರೆಗೆ ಎಲ್ಲಾ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ಆಧುನಿಕ ವೈದ್ಯ ವಿಜ್ಞಾನವೂ, ಒಂದೇ ಒಂದು ರೋಗಕ್ಕೆ ಸಾಕ್ಷ್ಯಾಧಾರಿತವಾದ ಪರಿಣಾಮಕಾರಿ ಚಿಕಿತ್ಸೆ ನೀಡಲಾಗದ ಬದಲಿ ಪದ್ಧತಿಗಳೂ ಒಂದೇ ತೆರನವು ಎಂಬಂತೆ ಬಿಂಬಿಸಿ, ಅವೆಲ್ಲ ಸೇರಿ ಅಗತ್ಯಕ್ಕೂ ಹೆಚ್ಚು ವೈದ್ಯರಿದ್ದಾರೆ ಎಂದು ಸಾಧಿಸಲು ಪ್ರಯತ್ನಿಸುವ ಮೂಲಕ ಸರಕಾರವು ಎಲ್ಲರನ್ನೂ ಅಣಕಿಸುತ್ತಿದೆ. ಅದೇ ಸರಕಾರವು ಅದೇ ಹುರುಪಿನಲ್ಲಿ ಸಾಕಷ್ಟು ವೈದ್ಯರು ಲಭ್ಯವಿಲ್ಲದ ಕಾರಣಕ್ಕೆ ಜಿಲ್ಲೆಗೊಂದು ಆಧುನಿಕ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಹೊರಟಿದ್ದೇವೆ ಎಂದೂ ಹೇಳಿಕೊಳ್ಳುತ್ತಿದೆ, ಅದಕ್ಕಾಗಿ ಆಧುನಿಕ ವೈದ್ಯಕೀಯ ಶಿಕ್ಷಣದ ನಿಯಮಗಳನ್ನೂ ಬದಲಿಸಿ ಖಾಸಗಿ ಬಂಡವಾಳಗಾರರಿಗೆ ಜಿಲ್ಲಾಸ್ಪತ್ರೆಗಳನ್ನು ಮಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವುದಕ್ಕೆ ಅನುಕೂಲ ಮಾಡಿಕೊಡುವುದಕ್ಕೂ ಮುಂದಾಗಿದೆ!

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಆಧುನಿಕ ವೈದ್ಯವಿಜ್ಞಾನದ ಶಿಕ್ಷಣ ಹಾಗೂ ವೃತ್ತಿಗೆ ಮಹತ್ವವನ್ನು ನೀಡಿದ್ದರಿಂದಾಗಿ ಸ್ವಾತಂತ್ರ್ಯಾನಂತರದ ಏಳು ದಶಕಗಳಲ್ಲಿ ಭಾರತವು ಆರೋಗ್ಯ ರಕ್ಷಣೆಯಲ್ಲಿ ಸಾಕಷ್ಟು ಸಾಧನೆಯನ್ನು ಮಾಡಲು ಸಾಧ್ಯವಾಯಿತು. ನೆಹರೂ ಕಾಲಾವಧಿಯ ಅಂತ್ಯಕ್ಕೆ 160 ರಿಂದ 140ಕ್ಕೆ ಇಳಿದಿದ್ದ ಶಿಶು ಮರಣ ಪ್ರಮಾಣವು 2014ರ ವೇಳೆಗೆ 39ಕ್ಕೆ ಇಳಿಯಿತು, ಕಳೆದ ವರ್ಷ ಅದು 27ಕ್ಕೆ ಇಳಿದಿದೆ. ಸಾಕ್ಷರತೆ, ಬಡತನ ನಿರ್ಮೂಲನೆ, ಅರೋಗ್ಯ ಸೇವೆಗಳಲ್ಲಿ ಸಮಾಜವಾದಿ ಪಥವನ್ನು ಹಿಡಿದಿರುವ ಕೇರಳ ರಾಜ್ಯವು ಪ್ರಾಥಮಿಕ ಆರೋಗ್ಯ ಸೇವೆಗಳಿಗೆ ಒತ್ತು ನೀಡಿದ್ದರಿಂದಾಗಿ ಅಲ್ಲಿನ ಶಿಶು ಮರಣ ಪ್ರಮಾಣವು ಕೇವಲ 6ಕ್ಕೆ ಇಳಿದಿದೆ, ಇದು ಅಮೆರಿಕಾದಂತಹ ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮವಾಗಿದೆ. ಕರ್ನಾಟಕದಲ್ಲಿ ಶಿಶು ಮರಣ ಪ್ರಮಾಣವು ಈಗ 20 ಆಗಿ, ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದ್ದರೂ, 2017-18ರಲ್ಲಿ ಕೇರಳದ 10-11ರ ಪ್ರಮಾಣಕ್ಕೆ ಅತಿ ಸನಿಹದಲ್ಲಿದ್ದ ಅವಿಭಿಜಿತ ದಕ್ಷಿಣ ಕನ್ನಡ ಜಿಲ್ಲೆ, 2022ರಲ್ಲ್ಲೂ ಅದೇ ಮಟ್ಟದಲ್ಲಿ ಉಳಿದಿದ್ದು, ಕೇರಳಕ್ಕಿಂತ ಹಿಂದೆ ಬಿದ್ದಿರುವುದನ್ನು ಸೂಚಿಸುತ್ತದೆ, ಇದಕ್ಕೆ ಅಲ್ಲಿನ ರಾಜಕೀಯ-ಸಾಮಾಜಿಕ ವ್ಯವಸ್ಥೆಗಳಲ್ಲಾಗಿರುವ ಪಲ್ಲಟಗಳೂ ಕಾರಣವಾಗಿರಬಹುದು.

ಹೆರಿಗೆ, ಪ್ರಸವೋತ್ತರ ಆರೈಕೆ, ಮಕ್ಕಳ ಆರೋಗ್ಯ ರಕ್ಷಣೆ, ಸಾರ್ವತ್ರಿಕ ಲಸಿಕೆ ಹಾಕಿಸುವಿಕೆ, ಸಾಂಕ್ರಾಮಿಕ ರೋಗಗಳ ತಡೆ, ಇತ್ಯಾದಿ ಎಲ್ಲಕ್ಕೂ ಸಾರ್ವಜನಿಕ ಆರೋಗ್ಯ ಕ್ಷೇತ್ರವೇ ಅತಿ ಮುಖ್ಯವಾಗಿದೆ. ಎಐಐಎಂಎಸ್, ನಿಮ್ಹಾನ್ಸ್ ನಂತಹ ದೇಶದ ಅತ್ಯುನ್ನತ ಆರೋಗ್ಯ ಸಂಸ್ಥೆಗಳೂ ಸಾರ್ವಜನಿಕ ರಂಗದಲ್ಲೇ ಇವೆ. ಖಾಸಗಿ ಆಸ್ಪತ್ರೆಗಳು ಮುಖ್ಯವಾಗಿ ಚಿಕಿತ್ಸಕ ಸೇವೆಗಳನ್ನಷ್ಟೇ ಒದಗಿಸುತ್ತವೆ. ತೊಂಬತ್ತರ ದಶಕದಿಂದೀಚೆಗಿನ ಹೊಸ ಆರ್ಥಿಕ ನೀತಿಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ವೈದ್ಯಕೀಯ ಸೇವೆಗಳಲ್ಲಿ ಖಾಸಗಿ ರಂಗಕ್ಕೇ ಹೆಚ್ಚು ಮಹತ್ವ ನೀಡಲಾಗುತ್ತಿರುವುದರಿಂದ ಸಾರ್ವಜನಿಕ ರಂಗದ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಹಾಗೂ ಸಂಶೋಧನಾ ಸಂಸ್ಥೆಗಳು ಸೊರಗುತ್ತಾ ಸಾಗಿವೆ. ಈಗಿನ ಸರಕಾರದ ಬಹು ಪ್ರಚಾರದ ಆಯುಷ್ಮಾನ್ ಭಾರತ್ ಯೋಜನೆ, ಮತ್ತು ಅದಕ್ಕೆ ಪ್ರೇರಣೆಯಾಗಿದ್ದ ಕರ್ನಾಟಕದ ಕಾರ್ಪರೇಟ್ ಆಸ್ಪತ್ರೆಯ ಮಾಲಕರೊಬ್ಬರ ಸಲಹೆಯೆ ಮೇರೆಗೆ ಆರಂಭಿಸಲಾಗಿದ್ದ ಯಶಸ್ವಿನಿ ಯೋಜನೆಗಳು ಸರಕಾರದ ಹಣವನ್ನು ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ಒದಗಿಸುವ ಬದಲಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಕೆಲವಷ್ಟೇ ನಿರ್ದಿಷ್ಟ ಚಿಕಿತ್ಸೆಗಳಿಗೆ ದಾಟಿಸುವ ಯೋಜನೆಗಳಾಗಿವೆ. ಇವುಗಳಿಂದಾಗಿ ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಇನ್ನಷ್ಟು ಕೊರತೆಯಾಗುತ್ತಿದೆ.

ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ಭಾರತೀಯ ಮಹಾಲೆಕ್ಕಪಾಲರ ಮೊತ್ತಮೊದಲ ವರದಿಯನ್ನು ಕಳೆದ ವಾರವಷ್ಟೇ ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಇದುವರೆಗೆ ಸುಮಾರು 67000 ಕೋಟಿಯಷ್ಟು ಹಣವನ್ನು ಅದಕ್ಕಾಗಿ ವ್ಯಯಿಸಲಾಗಿದೆ ಎನ್ನಲಾಗಿದೆ. ಆದರೆ ಸುಮಾರು 10 ಲಕ್ಷ ಫಲಾನುಭವಿಗಳನ್ನು ಒಂದೇ ದೂರವಾಣಿ ಸಂಖ್ಯೆಯಡಿ ನೋಂದಾಯಿಸಿರುವುದು, ಆಸ್ಪತ್ರೆಗಳ ಒಟ್ಟು ಸಾಮರ್ಥ್ಯಕ್ಕಿಂತ 2-3 ಪಾಲು ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿರುವುದು, ಸುಮಾರು 400ರಷ್ಟು ಮೃತ ವ್ಯಕ್ತಿಗಳ ಹೆಸರಲ್ಲಿ ಹಣ ಪಡೆದಿರುವುದು, ಹಲವು ರಾಜ್ಯಗಳಲ್ಲಿ ಅಗತ್ಯಕ್ಕಿಂತ ತೀರಾ ಕಡಿಮೆ ಪ್ರಮಾಣದ ಆಸ್ಪತ್ರೆಗಳು ನೋಂದಾಯಿಸಿರುವುದು ಅಥವಾ ನೋಂದಾಯಿಸಿರುವ ಆಸ್ಪತ್ರೆಳು ಕೂಡ ಚಿಕಿತ್ಸೆ ನೀಡಲು ಒಪ್ಪದಿರುವುದು ಇವೇ ಮುಂತಾದ ಹಲವು ಸಮಸ್ಯೆಗಳನ್ನು ಆ ವರದಿಯಲ್ಲಿ ಹೇಳಲಾಗಿದೆ. ಅಂದರೆ 67000 ಕೋಟಿಯಷ್ಟು ಸರಕಾರಿ ಬೊಕ್ಕಸದ ಹಣವು ಆಸ್ಪತ್ರೆಗಳಿಗೆ ಸಂದಾಯವಾದರೂ ತೃಪ್ತಿದಾಯಕವಾಗಿಲ್ಲ ಎನ್ನುವುದು ಕಾಣುತ್ತದೆ. ಬೊಕ್ಕಸದ ಹಣವನ್ನು ಹೀಗೆ ಖಾಸಗಿ ಆಸ್ಪತ್ರೆಗಳಿಗೆ ಸುರಿಯುವ ಬದಲು ಸಾರ್ವಜನಿಕ ರಂಗದ ಆರೋಗ್ಯ ಸಂಸ್ಥೆಗಳನ್ನು ಬಲಪಡಿಸಲು ಬಳಸಬಾರದೇ?

ನೆಹರೂ ಆಡಳಿತವು ಅತ್ಯಾಧುನಿಕ ಔಷಧಗಳು ಹಾಗೂ ಲಸಿಕೆಗಳ ಸಂಶೋಧನೆ ಹಾಗೂ ಉತ್ಪಾದನೆಗಳಲ್ಲಿ ಸ್ವಾವಲಂಬನೆಯಿರಬೇಕು ಮತ್ತು ಅವು ನಮ್ಮ ಜನರಿಗೆ ಉಚಿತವಾಗಿ ಅಥವಾ ಅತಿ ಕಡಿಮೆ ದರದಲ್ಲಿ ದೊರೆಯಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಸಾರ್ವಜನಿಕ ರಂಗದಲ್ಲೇ ಸ್ಥಾಪಿಸಿದ್ದ ಉನ್ನತ ಸಂಸ್ಥೆಗಳೆಲ್ಲವೂ 90ರ ದಶಕದಿಂದೀಚೆಗೆ ಅವಗಣನೆಗೀಡಾಗಿ ಈಗ ಬಾಗಿಲು ಹಾಕುವ ಮಟ್ಟಕ್ಕೆ ತಲುಪಿವೆ. ಹೀಗೆ ಔಷಧಗಳು ಮತ್ತು ಲಸಿಕೆಗಳು ಖಾಸಗಿ ಕಂಪೆನಿಗಳ ಸ್ವತ್ತುಗಳಾಗಿಬಿಟ್ಟಿರುವುದರಿಂದ ಕಳೆದ ಏಳೆಂಟು ವರ್ಷಗಳಲ್ಲಿ ಅನೇಕ ಅತಿ ಸಾಮಾನ್ಯ ಬಳಕೆಯ ಔಷಧಗಳ ದರಗಳು ಮೂರರಿಂದ ನಾಲ್ಕು ಪಟ್ಟು ಏರಿಕೆಯಾಗಿವೆ. ಅದರ ನಡುವೆ 2008ರಲ್ಲಿ ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಆರಂಭಿಸಿದ್ದ ಜನೌಷಧಿ ಯೋಜನೆಗೆ ಇತ್ತೀಚೆಗೆ ವಿಪರೀತ ಪ್ರಚಾರ ನೀಡಿ ಅದನ್ನೇ ಬಹು ದೊಡ್ಡ ಉಪಕಾರ ಎಂಬಂತೆ ಬಿಂಬಿಸಲಾಗುತ್ತಿದೆ. ಇಂದು ಬಳಸಲ್ಪಡುತ್ತಿರುವ ಔಷಧಗಳಲ್ಲಿ ಒಂದು ಸಣ್ಣ ಪಾಲಷ್ಟೇ ಈ ಕೇಂದ್ರಗಳಲ್ಲಿ ಲಭ್ಯವಿರುವುದರಿಂದ ಹೆಚ್ಚಿನ ಔಷಧಗಳಿಗೆ ದುಬಾರಿಯಾಗಿರುವ ಖಾಸಗಿ ಕಂಪೆನಿಗಳ ಉತ್ಪನ್ನಗಳನ್ನೇ ನೆಚ್ಚಿಕೊಂಡು, ತಮ್ಮ ಚಿಕಿತ್ಸೆಯ ಅಗತ್ಯಗಳನ್ನು ಪೂರೈಸಿಕೊಳ್ಳಲು ಜನರು ಒದ್ದಾಡುವ ಸ್ಥಿತಿಯೊದಗಿದೆ.

ಬ್ರಿಟಿಷ್ ಆಡಳಿತವು ಭಾರತೀಯರಿಗೆ ಲಸಿಕೆ ನೀಡಲೆಂದು ಸ್ಥಾಪಿಸಿದ್ದ ಮುಂಬಯಿಯ ಹಾಫ್‌ಕಿನ್ಸ್ ಸಂಸ್ಥೆ, ಕೂನೂರಿನ ಪಾಶ್ಚರ್ ಸಂಸ್ಥೆ ಹಾಗೂ ಕಸೌಲಿಯ ಸಂಶೋಧನಾ ಸಂಸ್ಥೆಗಳು ಸ್ವಾತಂತ್ರ್ಯಾನಂತರದಲ್ಲಿ ದೇಶದ ಮಕ್ಕಳಿಗೂ, ವಯಸ್ಕರಿಗೂ ಲಸಿಕೆಗಳನ್ನು ಒದಗಿಸುವ ಮೂಲಕ ಡಿಫ್ತೀರಿಯಾ, ನಾಯಿಕೆಮ್ಮು, ಧನುರ್ವಾತ, ಪೋಲಿಯೋ, ರೇಬೀಸ್, ಕ್ಷಯ ಮುಂತಾದ ಮಾರಕ ರೋಗಗಳನ್ನು ಯಶಸ್ವಿಯಾಗಿ ನಿವಾರಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದವು, ಆದರೆ ತೊಂಬತ್ತರ ದಶಕದ ಬಳಿಕ ಇವುಗಳನ್ನು ಅಧುನಿಕ ತಂತ್ರಜ್ಞಾನಗಳೊಂದಿಗೆ ನವೀಕರಿಸುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆಸಕ್ತಿ ಕಳೆದುಕೊಂಡವು, ಅದೇ ನೆಪದಲ್ಲಿ ಇವನ್ನು ಬದಿಗೊತ್ತಿ ಖಾಸಗಿ ಲಸಿಕೆ ಕಂಪೆನಿಗಳನ್ನು ಉತ್ತೇಜಿಸಲಾಯಿತು. ಕೊರೋನಾ ಸಾಂಕ್ರಾಮಿಕದೆದುರು ಲಸಿಕೆ ನೀಡುವುದನ್ನು ಬಲು ದೊಡ್ಡ ಸಾಧನೆಯೆಂಬಂತೆ ಬಿಂಬಿಸುತ್ತಿರುವ ಸರಕಾರವು ಆ ಲಸಿಕೆಗಳಲ್ಲಿ ಒಂದನ್ನು ವಿದೇಶಿ ಕಂಪೆನಿಗಳು ಅಭಿವೃದ್ಧಿ ಪಡಿಸಿ ಭಾರತದ ಖಾಸಗಿ ಲಸಿಕೆ ಉತ್ಪಾದನಾ ಸಂಸ್ಥೆಯು ತಯಾರಿಸಿ ಸರಕಾರವು ಅದಕ್ಕೆ ಸಾವಿರಗಟ್ಟಲೆ ಕೋಟಿ ಹಣ ತೆತ್ತು ಖರೀದಿಸಿತು ಎನ್ನುವುದನ್ನು, ಇನ್ನೊಂದು ಲಸಿಕೆಯ ಅಭಿವೃದ್ಧಿಯಲ್ಲಿ ಸರಕಾರಿ ಸಂಸ್ಥೆಗಳು ಮಹತ್ವದ ಪಾತ್ರ ವಹಿಸಿದ್ದರೂ, ಅದನ್ನು ಕೂಡ ಖಾಸಗಿ ಕಂಪೆನಿಯೇ ತಯಾರಿಸಿ ಲಾಭದ ಬಹು ದೊಡ್ಡ ಪಾಲನ್ನು ಆ ಕಂಪೆನಿಗೇ ನೀಡಲಾಯಿತು ಎನ್ನುವುದನ್ನೂ ಮರೆಮಾಚಿದೆ. ನೆಹರೂ ಆಡಳಿತದ ಆಶಯಗಳು ಸಾಕಾರಗೊಂಡು ಲಸಿಕೆ ಸಂಶೋಧನೆ ಹಾಗೂ ಉತ್ಪಾದನೆ ಸಾರ್ವಜನಿಕ ಕಂಪೆನಿಗಳಲ್ಲೇ ನಡೆದಿದ್ದರೆ ಸರಕಾರದ ದುಡ್ಡೂ ಉಳಿಯುತ್ತಿತ್ತು, ದೇಶದ ಗೌರವವೂ ನೂರ್ಮಡಿಯಾಗುತ್ತಿತ್ತು.

ವಿದೇಶಗಳಲ್ಲಿ ಸಂಶೋಧಿಸಿದ ಔಷಧಗಳನ್ನು ನಮ್ಮ ದೇಶದ ಕಂಪೆನಿಗಳು ಉತ್ಪಾದಿಸುವುದಕ್ಕೆ ಅನುಕೂಲವಾಗುವಂತೆ ದೇಶದ ಹಕ್ಕು ಸ್ವಾಮ್ಯತೆಯ ನಿಯಮಗಳನ್ನು ರೂಪಿಸಲಾಗಿತ್ತು, ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದರು. ಈ ನಿಯಮದ ಲಾಭ ಪಡೆದು ಹೊಸ ಔಷಧಗಳನ್ನೆಲ್ಲ ಹಕ್ಕುಸ್ವಾಮ್ಯತೆಯ ಹಂಗಿಲ್ಲದೆ ಉತ್ಪಾದಿಸತೊಡಗಿ ಭಾರತದ ಅನೇಕ ಔಷಧ ಉತ್ಪಾದಕ ಕಂಪೆನಿಗಳು ಬೃಹತ್ತಾಗಿ ಬೆಳೆದವು, ಹೆಚ್‌ಐವಿ ಚಿಕಿತ್ಸೆಯ ಔಷಧಗಳನ್ನು ಹೀಗೆಯೇ ಉತ್ಪಾದಿಸಿ ಆಫ್ರಿಕಾದ ದೇಶಗಳಿಗೆ ಅತಿ ಕಡಿಮೆ ದರದಲ್ಲಿ ಒದಗಿಸಿ, ಅದಕ್ಕಿದಿರಾದ ವ್ಯಾಜ್ಯಗಳಲ್ಲೂ ಗೆದ್ದು, ಮಾರಕವೆನಿಸಿದ್ದ ಆ ಸೋಂಕನ್ನು ನಿಯಂತ್ರಿಸುವಲ್ಲಿಯೂ ಭಾರತದ ಕಂಪೆನಿಗಳು ಐತಿಹಾಸಿಕ ಪಾತ್ರವನ್ನು ನಿರ್ವಹಿಸಿದ್ದವು. ಅಂಥ ಹಕ್ಕುಸ್ವಾಮ್ಯತೆಯ ನಿಯಮಗಳನ್ನು ಈ ಕೆಲವು ವರ್ಷಗಳಿಂದ ಬದಲಿಸಲಾಗಿದ್ದು, ಹೊಸ ಔಷಧಗಳನ್ನು ಇಲ್ಲಿ ಸುಲಭವಾಗಿ ಉತ್ಪಾದಿಸುವುದಕ್ಕೆ ಇನ್ನೀಗ ಕಷ್ಟವಾಗಲಿದೆ.

ಈಗ ಕೆಲವೇ ವರ್ಷಗಳ ಹಿಂದೆ ಇಂತಹ ಕ್ರಾಂತಿಕಾರಿ ಸಾಧನೆಗೆ ಹೆಸರಾಗಿದ್ದ ಭಾರತದ ಔಷಧೋದ್ಯಮವು ಈಗ ಮಕ್ಕಳ ಸಾವುಗಳಿಗಾಗಿ ಅಪಖ್ಯಾತಿ ಪಡೆಯುವಂತಾಗಿದೆ. ಗುಣಮಟ್ಟದ ನಿಯಂತ್ರಣವಿಲ್ಲದೆ, ಔಷದಗಳಲ್ಲಿ ವಿಷಾಂಶಗಳು ಸೇರಿಕೊಂಡು ಭಾರತದಿಂದ ರಫ್ತಾದ ಕೆಮ್ಮಿನ ಸಿರಪ್ ಇತ್ಯಾದಿಗಳನ್ನು ಸೇವಿಸಿದ ಮಕ್ಕಳು ಆಫ್ರಿಕಾ ಹಾಗೂ ಯೂರೋಪಿನ ದೇಶಗಳಲ್ಲಿ ಸಾವನ್ನಪ್ಪಿದ ಬಗ್ಗೆ ಇತ್ತೀಚೆಗೆ ವರದಿಗಳಾಗಿದ್ದವು. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಬದಲು ಸರಕಾರವು ಮೊದಲಲ್ಲಿ ಈ ವರದಿಗಳನ್ನು ತಳ್ಳಿ ಹಾಕಲು ಪ್ರಯತ್ನಿಸಿತು, ಕಂಪೆನಿಗಳನ್ನು ರಕ್ಷಿಸಲು ಹೆಣಗಾಡಿತು, ಸರಕಾರದ ಬೆಂಬಲಿಗ ಪ್ರಚಾರಕರು ಹಗಲು-ರಾತ್ರಿ ಅದಕ್ಕಾಗಿ ದುಡಿದದ್ದೂ ಆಯಿತು. ಕೊನೆಗೆ ವಿಶ್ವ ಆರೋಗ್ಯ ಸಂಸ್ಥೆಯೇ ಈ ಬಗ್ಗೆ ಆತಂಕ ಪಡಿಸಿದಾಗ ಒಂದಿಷ್ಟು ವಿಚಾರಣೆ ನಡೆಸುವ ಹೇಳಿಕೆಗಳು ಬಂದವು. ಮೊನ್ನೆ ಸಂಸತ್ತಿನಲ್ಲಿ ಅನುಮೋದಿಸಿದ ಮಸೂದೆಯಲ್ಲಿ ಇನ್ನು ಮುಂದೆ ತಪ್ಪಿತಸ್ಥ ಔಷಧ ಕಂಪೆನಿಗಳು ತಮ್ಮ ಅಪರಾಧಕ್ಕಾಗಿ ಜೈಲು ಶಿಕ್ಷೆಯ ಬದಲು ಒಂದಷ್ಟು ದಂಡ ಕಟ್ಟಿದರೆ ಸಾಕೆಂಬ ಅನುಕೂಲವನ್ನು ಮಾಡಿಕೊಡಲಾಗಿರುವುದರಿಂದ ಇಂತಹಾ ಕೃತ್ಯಗಳಿಗೆ ಸಮಸ್ಯೆಯಾಗಲಾರದು.

ಕೊರೋನ ಕಾಲದಲ್ಲಿ ತುರ್ತುಸ್ಥಿತಿಯ ನೆಪವೊಡ್ಡಿ ಲಸಿಕೆಗಳು ಮತ್ತು ಔಷಧಗಳಿಗೆ ಅವುಗಳ ಸಾಧಕ-ಬಾಧಕಗಳ ಬಗ್ಗೆ ಸರಿಯಾದ ಪರೀಕ್ಷೆಗಳೇ ನಡೆದಿರದಿದ್ದರೂ ತುರ್ತು ಅನುಮೋದನೆಗಳನ್ನು ನೀಡಲಾಗಿತ್ತು. ಈಗ ಇನ್ನಷ್ಟು ಔಷಧಗಳಿಗೆ ಹಾಗೂ ಲಸಿಕೆಗಳಿಗೆ ಹೀಗೆಯೇ ತುರ್ತು ಅನುಮೋದನೆ ನೀಡಲು ಇದೇ ಮಾರ್ಗವನ್ನು ಬಳಸಿಕೊಳ್ಳುವ ಲಕ್ಷಣಗಳು ಗೋಚರಿಸತೊಡಗಿವೆ.

ಸಾಕ್ಷ್ಯಾಧಾರಿತವಾದ ಆಧುನಿಕ ವೈದ್ಯವಿಜ್ಞಾನವನ್ನು ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಬದಲಿ ಪದ್ಧತಿಗಳೊಂದಿಗೆ ಸಮೀಕರಿಸಿರುವುದಷ್ಟೇ ಅಲ್ಲ, ಆಧುನಿಕ ವೈದ್ಯಕೀಯ ಶಿಕ್ಷಣದಲ್ಲಿ ಬದಲಿ ಪದ್ಧತಿಗಳನ್ನು ಕಲಬೆರಕೆ ಮಾಡಿ ಹಾಳುಗೆಡಹುವ ಕೆಲಸವು ಕೂಡ ಎಗ್ಗಿಲ್ಲದೆ ನಡೆಯುತ್ತಿದೆ. ಆರೋಗ್ಯ ಸೇವೆಗಳೆಲ್ಲವೂ ಆಧುನಿಕ ವೈದ್ಯವಿಜ್ಞಾನದ್ದಾಗಿರಬೇಕು ಎಂಬ ಸೋಖಿ-ಭೋರ್ ಸಮಿತಿಗಳ ಆಶಯಕ್ಕೆ ಅನುಗುಣವಾಗಿ ನೆಹರೂ ಕಾಲದಿಂದಲೂ ನಮ್ಮ ದೇಶದಲ್ಲಿ ಅತ್ಯುತ್ತಮವಾದ ವಿಶ್ವದರ್ಜೆಯ ಆಧುನಿಕ ವೈದ್ಯಕೀಯ ಶಿಕ್ಷಣವನ್ನು ನೀಡಲಾಗುತ್ತಿತ್ತು, ಇಲ್ಲಿ ಕಲಿತು ವೈದ್ಯರಾದವರು ಬ್ರಿಟನ್, ಅಮೆರಿಕಾದಂತಹ ದೇಶಗಳಲ್ಲೂ ಅಲ್ಲಿನ ವೈದ್ಯರಿಗೆ ಸರಿಸಾಟಿಯಾಗಿ, ಅಥವಾ ಅವರಿಗಿಂತಲೂ ಮಿಗಿಲಾಗಿ ವೈದ್ಯವೃತ್ತಿ ನಡೆಸಲು ಸಾಧ್ಯವಾಗುತ್ತಿತ್ತು, ಮಾತ್ರವಲ್ಲ, ಕಳೆದ ಕೆಲವು ವರ್ಷಗಳಿಂದ ವಿದೇಶೀಯರು ಕೂಡ ಭಾರತದಲ್ಲಿ ಆಧುನಿಕ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಬರುವಂತಾಗಿತ್ತು. ನಮ್ಮ ದೇಶದ ಆಧುನಿಕ ವೈದ್ಯವಿಜ್ಞಾನದ ಈ ಸಾಧನೆಗಳನ್ನು ಮಣ್ಣುಪಾಲಾಗಿಸುವ ಯೋಜನೆಯನ್ನು ಈಗ ತರಾತುರಿಯಿಂದ ಕಾರ್ಯಗತಗೊಳಿಸಲಾಗುತ್ತಿದೆ.

ಭಾರತದ ಆಧುನಿಕ ವೈದ್ಯಕೀಯ ವ್ಯವಸ್ಥೆಯನ್ನು ನಾಶ ಮಾಡಿ, ಸಾಕ್ಷ್ಯಾಧಾರಗಳಿಲ್ಲದ ಆಯುರ್ವೇದ, ಯೋಗ ಇತ್ಯಾದಿಗಳನ್ನು ಕಲಬೆರಕೆ ಮಾಡುವ ಯೋಜನೆಯನ್ನು ಜಾರಿಗೊಳಿಸುವುದಕ್ಕೆ, ಆಧುನಿಕ ವೈದ್ಯಕೀಯ ಶಿಕ್ಷಣವನ್ನೂ, ಆಧುನಿಕ ವೈದ್ಯಕೀಯ ವೃತ್ತಿಯನ್ನೂ ಸರಕಾರವೇ ನಿಯಂತ್ರಿಸುವುದಕ್ಕೆ ಆಧುನಿಕ ವೈದ್ಯವಿಜ್ಞಾನದ ಶಿಕ್ಷಣ ಹಾಗೂ ವೃತ್ತಿಯನ್ನು ನಿಯಂತ್ರಿಸುವ ಸಾಂವಿಧಾನಿಕ, ಚುನಾಯಿತ ಸಂಸ್ಥೆಯಾಗಿದ್ದ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ)ಯನ್ನು ಬರ್ಖಾಸ್ತು ಮಾಡಿ, ಅದರ ಬದಲಿಗೆ ಕೇಂದ್ರ ಸರಕಾರವೇ ನೇಮಿಸುವ, ಅದರ ಕೈಗೊಂಬೆಯಾಗುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ)ವನ್ನು 2019ರಲ್ಲಿ ರಚಿಸಲಾಗಿದೆ. ಈ ಎನ್‌ಎಂಸಿಯ ಗತಿ ಹೇಗಿದೆಯೆಂದರೆ ಅದರ ಸಲಹಾ ಮಂಡಳಿಯ 83 ಸ್ಥಾನಗಳಲ್ಲಿ 49 ಸ್ಥಾನಗಳು ಸೆಪ್ಟೆಂಬರ್ 24, 2022ರ ಬಳಿಕ ಖಾಲಿಯಿವೆ, ಅದರ ನಾಲ್ಕು ಮಂಡಳಿಗಳಲ್ಲಿ ತಲಾ ಐವರಂತೆ 20 ಸದಸ್ಯರು ಇರಬೇಕಾದಲ್ಲಿ ಒಂಬತ್ತು ಸ್ಥಾನಗಳು ಖಾಲಿಯಿವೆ, ವೈದ್ಯರ ನೋಂದಣಿ ಮತ್ತು ನಿಯಂತ್ರಣ ಮಾಡುವ ಮಂಡಳಿಗೆ ಅಧ್ಯಕ್ಷರೇ ಇಲ್ಲ! ಹೀಗೆ ಅಧ್ಯಕ್ಷರು-ಸದಸ್ಯರು ಇಲ್ಲದ ಮಂಡಳಿಗಳ ಎನ್‌ಎಂಸಿಯು ದೇಶದ ಆಧುನಿಕ ವೈದ್ಯವಿಜ್ಞಾನದ ಶಿಕ್ಷಣ ಮತ್ತು ವೃತ್ತಿಯನ್ನು ನಿಯಂತ್ರಿಸುತ್ತಿದೆ, ವೈದ್ಯಕೀಯ ಶಿಕ್ಷಣದ ಪಠ್ಯಕ್ರಮಗಳನ್ನು ರೂಪಿಸುತ್ತಿದೆ, ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕೆ, ವೃತ್ತಿ ನೋಂದಣಿಗೆ, ನೀತಿ ಸಂಹಿತೆಗೆ ನಿಯಮಗಳನ್ನು ಮಾಡುತ್ತಿದೆ, ಒಮ್ಮೆ ರಾಜ್ಯಪತ್ರದಲ್ಲಿ ಪ್ರಕಟಿಸಿದ್ದನ್ನು ಎರಡೇ ವಾರಗಳಲ್ಲಿ ಹಿಂಪಡೆದು ಮತ್ತೆ ಕರಡಿನ ರೂಪದಲ್ಲಿ ಪ್ರಕಟಿಸುತ್ತಿದೆ!

ಆಧುನಿಕ ವೈದ್ಯಕೀಯ ಪದವಿಯ ವ್ಯಾಸಂಗದಲ್ಲಿ ಚರಕ ಶಪಥ ಬೋಧನೆ, ಯೋಗಾಭ್ಯಾಸ, ಯೋಗ ದಿನಾಚರಣೆ, ಗಿಡಮೂಲಿಕೆ ನೆಡುವುದು ಮುಂತಾದವನ್ನು ಸೇರಿಸಬೇಕೆಂದು ಎನ್‌ಎಂಸಿ ಸ್ನಾತಕ ಶಿಕ್ಷಣ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಇತ್ತೀಚೆಗೆ ಪ್ರಕಟಿಸಿದ ಪಠ್ಯಕ್ರಮದಲ್ಲಿ ಅದನ್ನು ತಡೆಹಿಡಿದಿರುವಂತೆ ಕಾಣುತ್ತಿದ್ದರೂ, ಈ ಪಠ್ಯಕ್ರಮವನ್ನೇ ಹಿಂಪಡೆದು ಮತ್ತೆ ಕರಡಿನ ರೂಪದಲ್ಲಿ ಪ್ರಕಟಿಸಿರುವುದು ಸಂಶಯಗಳಿಗೆ ಕಾರಣವಾಗಿದೆ. ಅದರ ನಡುವೆ ಆಡುಭಾಷೆಯಲ್ಲೇ ಆಧುನಿಕ ವೈದ್ಯಕೀಯ ಶಿಕ್ಷಣ ನೀಡುವುದಾಗಿ ಘೋಷಿಸಿ, ಮೊದಲ ಎಂಬಿಬಿಎಸ್ ವ್ಯಾಸಂಗದ ಮೂರು ಪುಸ್ತಕಗಳ ಹೊದಿಕೆಗಳನ್ನು ಹಿಂದಿ ಭಾಷೆಯಲ್ಲಿ ಕೇಂದ್ರ ಹೃಹ ಸಚಿವರು ಬಿಡುಗಡೆಗೊಳಿಸಿದ್ದೂ ಆಯಿತು, ಕೆಲವು ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿದ್ದೂ ಆಯಿತು. ಕೆಲವು ವಾರಗಳಲ್ಲಿ ಮೂರರಲ್ಲಿ ಎರಡು ಪುಸ್ತಕಗಳು ಹೊರಬಂದಾಗ ಆಂಗ್ಲ ಪದಗಳನ್ನೇ ಹಿಂದಿಯಲ್ಲಿ ನೀಡಲಾಗಿತ್ತು, ಮೂರನೆಯದು ಹೊರಬರಲೇ ಇಲ್ಲ! ಅಲ್ಲಿಗೆ ಈ ಪ್ರಹಸನ ಅಪಹಾಸ್ಯಕ್ಕೀಡಾಗಿ ಕೊನೆಯಾದಂತಾಗಿದೆ! ಈ ಹುಚ್ಚಾಟದಲ್ಲಿ ಆಧುನಿಕ ವೈದ್ಯಕೀಯ ಶಿಕ್ಷಣವನ್ನು ಹಾಳುಗೆಡವಿದರೆ ನಮ್ಮ ಭವಿಷ್ಯದ ವೈದ್ಯರು ಇಲ್ಲಾಗಲೀ, ವಿದೇಶಗಳಲ್ಲಾಗಲೀ ಕೆಲಸ ಮಾಡಲು ಸಾಧ್ಯವಾಗದು, ಚಿಕಿತ್ಸೆ ಹಾಗೂ ಸಂಶೋಧನಾ ಕಾರ್ಯಗಳಲ್ಲಿ ಸಹಯೋಗವೂ ಸಾಧ್ಯವಾಗದು. ಈ ಹೊಸ ಪಠ್ಯಕ್ರಮದ ವ್ಯಾಸಂಗಕ್ಕೆ ಭಾರತೀಯ ವೈದ್ಯಕೀಯ ಪದವಿ ಎಂದು ಹೆಸರಿಸಿರುವುದು ಕೂಡ ಅನೇಕ ಗೊಂದಲಗಳಿಗೆ, ಸಂಶಯಗಳಿಗೆ ಹಾಗೂ ಸಮಸ್ಯೆಗಳಿಗೆ ಕಾರಣವಾಗಲಿದೆ.

ಎನ್‌ಎಂಸಿಯು ಸಂಪೂರ್ಣವಾಗಿ ಕೇಂದ್ರ ಸರಕಾರದ ಅಧೀನವಾಗಿಬಿಟ್ಟಿರುವುದರಿಂದ ಆಧುನಿಕ ವೈದ್ಯಕೀಯ ಶಿಕ್ಷಣದ ಸ್ನಾತಕ, ಸ್ನಾತಕೋತ್ತರ ಹಾಗೂ ಅದಕ್ಕೂ ಉನ್ನತ ಮಟ್ಟದ ಕಲಿಕೆಗೆ ಪ್ರವೇಶಾತಿ ಕೇಂದ್ರ ಸರಕಾರದ ಕೈಯೊಳಗೆ ಆದಂತಾಗಿದೆ. ವೈದ್ಯಕೀಯ ಶಿಕ್ಷಣದ ಎಂಬಿಬಿಎಸ್ ಪ್ರವೇಶಾತಿಗೆ ನೀಟ್ ಆಧಾರದಲ್ಲಿ ಈಗ ರಾಜ್ಯದಲ್ಲಿ ಕೌನ್ಸೆಲಿಂಗ್ ನಡೆಸಲಾಗುತ್ತಿರುವ 85% ಸೀಟುಗಳಿಗೆ ಇನ್ನು ದಿಲ್ಲಿಯಿಂದಲೇ ಕೌನ್ಸೆಲಿಂಗ್ ನಡೆಸುವುದಕ್ಕೆ ಸಿದ್ಧತೆಗಳಾಗುತ್ತಿವೆ ಎಂದು ವರದಿಯಾಗಿರುವುದು ಕಾರ್ಯರೂಪಕ್ಕೆ ಬಂದರೆ ರಾಜ್ಯದ ಸರಕಾರಿ ಕಾಲೇಜುಗಳಲ್ಲಿ ಮತ್ತು ಖಾಸಗಿ ಕಾಲೇಜುಗಳಲ್ಲಿರುವ ಸರಕಾರಿ ಕೋಟಾದ ಸೀಟುಗಳ ಮೇಲೆ ರಾಜ್ಯಕ್ಕಿರುವ ಹಕ್ಕು ನಷ್ಟವಾಗಲಿದೆ, ಅದರಿಂದ ರಾಜ್ಯದ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳ, ಅದರಲ್ಲೂ ಬಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳ ವೈದ್ಯಕೀಯ ಶಿಕ್ಷಣಾವಕಾಶಗಳ ಮೇಲೆ ತೀವ್ರ ಪರಿಣಾಮಗಳನ್ನು ಬೀರಲಿವೆ.

ಇವೆಲ್ಲದರ ನಡುವೆ, ದೇಶದ ಪ್ರತಿಯೊಬ್ಬ ವೈದ್ಯ, ಪ್ರತಿಯೊಂದು ಆರೋಗ್ಯ ಸೇವಾ ಸಂಸ್ಥೆ ಮತ್ತು ಪ್ರತಿಯೋರ್ವ ನಾಗರಿಕ ಆರೋಗ್ಯ ಸಂಬಂಧಿತವಾದ ಎಲ್ಲಾ ಮಾಹಿತಿಯನ್ನು ಕೇಂದ್ರೀಕೃತವಾದ ಗಣಕ ವ್ಯವಸ್ಥೆಯಲ್ಲಿ ಸೇರಿಸಬೇಕೆಂಬ ವ್ಯವಸ್ಥೆಯನ್ನು ಮಾಡಲಾಗಿದೆ. ಇದು ಐಚ್ಛಿಕವೆಂದು ಹೇಳುತ್ತಲೇ ಯಾವುದೇ ಸೂಚನೆಯಿಲ್ಲದೆ, ಅನುಮತಿಯಿಲ್ಲದೆ, ಕೊರೋನ ಲಸಿಕೆ ಪಡೆದ ಎಲ್ಲರಿಗೂ ವಿಶಿಷ್ಠ ಆರೋಗ್ಯ ದಾಖಲೆಯ ಸಂಖ್ಯೆಯನ್ನು ಈಗಾಗಲೇ ನೀಡಲಾಗಿದೆ, ಎಲ್ಲಾ ವೈದ್ಯರೂ ಕಡ್ಡಾಯವಾಗಿ ನೋಂದಾಯಿಸಬೇಕೆಂದು ಕೆಳಮಟ್ಟದ ಅಧಿಕಾರಿಗಳಿಂದ ಸುತ್ತೋಲೆಗಳನ್ನು ಕಳಿಸಲಾಗುತ್ತಿದೆ. ಈ ಗಣಕೀಕೃತ ವ್ಯವಸ್ಥೆಗೆ ಕಾನೂನಿನ ಚೌಕಟ್ಟಾಗಲೀ, ಮಾಹಿತಿಯ ಗೌಪ್ಯತೆಯ ನಿಯಮಗಳಾಗಲೀ, ಗೌಪ್ಯತೆಯ ವಿವರಗಳಾಗಲೀ ಯಾವುವೂ ಲಭ್ಯವಿಲ್ಲ. ಅಂದರೆ ಈ ದೇಶದ ನಾಗರಿಕರ ಅತ್ಯಂತ ಗೌಪ್ಯವಾಗಿರಬೇಕಾದ ಆರೋಗ್ಯ ಮಾಹಿತಿಯನ್ನು ತನಗೆ ಬೇಕಾದಂತೆ ಪಡೆದು ಸಂಗ್ರಹಿಸಿ ತನ್ನಿಷ್ಟದಂತೆ ಹಿತಾಸಕ್ತರಿಗೆ ಹಂಚುವ ವ್ಯವಸ್ಥೆಯನ್ನು ಯಾವ ಕಾನೂನಿನ ಹಂಗೂ ಇಲ್ಲದೆ ಸರಕಾರವು ಮಾಡುತ್ತಿದೆ ಎಂದಾಗುತ್ತದೆ. ಇಷ್ಟೆಲ್ಲ ಆಗುತ್ತಿರುವಾಗಲೂ ವೈದ್ಯರು ಮತ್ತವರ ಸಂಘಟನೆಗಳು ತೆಪ್ಪಗೆ ಪಿಳಿಪಿಳಿ ನೋಡಿಕೊಂಡು ಕುಳಿತಿವೆ ಎನ್ನುವುದು ಈ ದೇಶದ ಇಂದಿನ ಸ್ಥಿತಿಯನ್ನು ತೋರಿಸುತ್ತದೆ.

ಇವೆಲ್ಲವನ್ನೂ ನೋಡಿದರೆ, ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಅತ್ಯಾಧುನಿಕವಾದ ಭವ್ಯ ಭಾರತದ ನಿರ್ಮಾಣಕ್ಕಾಗಿ ಆಶಿಸಿದ್ದ ಗಾಂಧಿ-ಬೋಸ್-ನೆಹರೂ ನೇತೃತ್ವದ ನಾಯಕರು ಹಾಕಿಕೊಟ್ಟ ದಾರಿಯಿಂದ ನಾವು ವಿಮುಖರಾಗಿರುವುದು ಸ್ಪಷ್ಟವಾಗಿದೆ. ಅಧುನಿಕ ವೈದ್ಯವಿಜ್ಞಾನದ ಮೂಲಕ ಎಲ್ಲರಿಗೂ ಉತ್ಕೃಷ್ಟವಾದ ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸುವುದಕ್ಕೆ, ಔಷಧ ಹಾಗೂ ಲಸಿಕೆಗಳ ಸಂಶೋಧನೆ ಹಾಗೂ ಉತ್ಪದನೆಗಳಲ್ಲಿ ಸ್ವಾವಲಂಬಿಗಳಾಗುವುದಕ್ಕೆ ಅವರು ಹಾಕಿಕೊಟ್ಟಿದ್ದ ಅಡಿಪಾಯವನ್ನು ಸಡಿಲಿಸಿ ಬೀಳಿಸುವ ಕೆಲಸ ಎಗ್ಗಿಲ್ಲದೆ ಸಾಗುತ್ತಿದೆ. ಹಾಗಿರುವಾಗ ಮುಂಬರುವ ವರ್ಷಗಳಲ್ಲಿ ಸರಕಾರಿ ಆಸ್ಪತ್ರೆಗಳು ರೋಗಿಗಳಿಗೆ ಸೀಮಿತ ಚಿಕಿತ್ಸೆ ನೀಡಿ ಆ ಬಳಿಕ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವ ದಲ್ಲಾಳಿಗಳಾಗಬಹುದು, ಕಾರ್ಪರೇಟ್ ಒತ್ತಡಗಳಿಗೆ ಸಿಕ್ಕಿ ಸಣ್ಣ ಹಾಗೂ ಮಧ್ಯಮ ಗಾತ್ರದ ಆಸ್ಪತ್ರೆಗಳು ಬಾಗಿಲು ಮುಚ್ಚಬಹುದು, ಈ ಕಾರ್ಪರೇಟ್ ದೈತ್ಯರು ಆರೋಗ್ಯ ಸೇವೆಗಳನ್ನೂ, ವೈದ್ಯಕೀಯ ಶಿಕ್ಷಣವನ್ನೂ ಸಂಪೂರ್ಣವಾಗಿ ವಶಪಡಿಸಿಕೊಳ್ಳಬಹುದು, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯೆಲ್ಲವೂ ಖಾಸಗಿ ಹಿತಾಸಕ್ತಿಗಳ ಪಾಲಾಗಿ ಬಗೆಬಗೆಯ ಸಂಕಟಗಳು ಎದುರಾಗಬಹುದು, ತಂತ್ರಜ್ಞಾನ ಕಂಪೆನಿಗಳು ಆ ಅಗಾಧ ಮಾಹಿತಿಯನ್ನು ವಿಶ್ಲೇಷಿಸಿ, ಎಲ್ಲರನ್ನೂ ನಿಯಂತ್ರಿಸುವುದಕ್ಕೆ, ಸರಕಾರದ ನೀತಿಗಳನ್ನೂ ಬರೆಯುವುದಕ್ಕೆ, ಬಗೆಬಗೆಯ ತಂತ್ರಗಳನ್ನು ಹೆಣೆಯಬಹುದು. ಭಾರತದ ಆರೋಗ್ಯ ಸೇವೆಗಳ ಭವಿಷ್ಯ ಇದು.

Be the first to comment

Leave a Reply

Your email address will not be published.


*