ಭಾರತದಲ್ಲಿ ಕೊರೋನ ಸೋಂಕು ಭಿನ್ನವಾಗಿದೆಯೇ?

ಭಾರತದಲ್ಲಿ ಕೊರೋನ ಸೋಂಕು ಭಿನ್ನವಾಗಿದೆಯೇ? ವಾರ್ತಾಭಾರತಿ, ಅಕ್ಟೋಬರ್ 30, 2021
ಹೊಸ ಕೊರೋನ ಸೋಂಕು ಭಾರತದಲ್ಲಿ ಹರಡತೊಡಗಿ ಆರೇಳು ತಿಂಗಳುಗಳಾಗಿವೆ. ಮಾರ್ಚ್ 24ರಂದು ರಾಷ್ಟ್ರೀಯ ದಿಗ್ಬಂಧನವನ್ನು ಹೇರಿದಾಗ 564ರಷ್ಟಿದ್ದ ಸೋಂಕಿತರ ಸಂಖ್ಯೆಯು ಈಗ 80ಲಕ್ಷದಷ್ಟಾಗಿದೆ, ಆಗ 10ರಷ್ಟಿದ್ದ ಮೃತರ ಸಂಖ್ಯೆಯು ಒಂದು ಲಕ್ಷ 20 ಸಾವಿರದಷ್ಟಾಗಿದೆ. ಆಗಸ್ಟ್ ತಿಂಗಳ ವೇಳೆಗೆ 37 ಲಕ್ಷದಷ್ಟು ಅಧಿಕೃತ ಪ್ರಕರಣಗಳಿದ್ದಾಗ ಸೋಂಕಿತರ ನಿಜ ಸಂಖ್ಯೆಯು 9 ಕೋಟಿಯಷ್ಟು, ಅಂದರೆ ಸುಮಾರು 25 ಪಟ್ಟು ಹೆಚ್ಚು, ಆಗಿದ್ದಿರಬಹುದು ಎಂದು ಐಸಿಎಂಆರ್ ಹೇಳಿರುವುದನ್ನು ಪರಿಗಣಿಸಿದರೆ, ಈಗ ಸೋಂಕಿತರ ನಿಜ ಸಂಖ್ಯೆಯು 20-35 ಕೋಟಿಗಳಷ್ಟು, ಅಂದರೆ ಜನಸಂಖ್ಯೆಯ 15-25% ರಷ್ಟಾಗಿರಬಹುದು. ಕರ್ನಾಟಕದಲ್ಲಿ ಈಗಾಗಲೇ ಎಂಟು ಲಕ್ಷದಷ್ಟು ಜನರಲ್ಲಿ ಅಧಿಕೃತವಾಗಿ ಕೊರೋನ ಸೋಂಕು ದೃಢಗೊಂಡಿದೆ, ಪರೀಕ್ಷೆಗಳಿಗೆ ಒಳಪಡದವರನ್ನು ಪರಿಗಣಿಸಿದರೆ, ಸೋಂಕಿತರ ಸಂಖ್ಯೆಯು ಇದರ 10-30 ಪಟ್ಟು ಹೆಚ್ಚಿರಬಹುದು; ಅವರಲ್ಲಿ 11 ಸಾವಿರದಷ್ಟು ಮೃತರಾಗಿದ್ದಾರೆ.
ಇದೇ ಅವಧಿಯಲ್ಲಿ ಕೊರೋನ ಸೋಂಕಿನ ಬಗ್ಗೆ ಇನ್ನಷ್ಟು ಅಧ್ಯಯನಗಳಾಗಿವೆ, ನಮ್ಮದೇ ದೇಶದ, ನಮ್ಮದೇ ರಾಜ್ಯದ ಅನುಭವಗಳು ಕೂಡ ನಮಗೀಗ ಲಭ್ಯವಿವೆ. ಇವುಗಳಿಂದ ಯಾವುದು ಸತ್ಯ, ಯಾವುದು ಮಿಥ್ಯ, ಯಾವುದು ಬೇಕು, ಯಾವುದು ಬೇಡ, ಯಾವುದು ಸರಿ, ಯಾವುದು ತಪ್ಪು ಎಂಬುದೆಲ್ಲವೂ ಸ್ಪಷ್ಟಗೊಳ್ಳುತ್ತಿವೆ. ದಿಗ್ಬಂಧನದಿಂದ ಕೊರೋನ ನಿಯಂತ್ರಣಗೊಳ್ಳುವುದಿಲ್ಲ, ಕೊರೋನ ಹರಡುವಿಕೆಯನ್ನು ತಡೆಯಲು ಸಾಧ್ಯವಿಲ್ಲ; ಕೊರೋನ ವೈರಸ್‌ಗೆ ಚಿಕಿತ್ಸೆ ಲಭ್ಯವಿಲ್ಲ, ಅದರ ಅಗತ್ಯವೂ ಇಲ್ಲ, ಹೆಚ್ಚಿನ ಸೋಂಕಿತರಲ್ಲಿ ಕೊರೋನ ಸೋಂಕು ಯಾವುದೇ ಚಿಕಿತ್ಸೆಯಿಲ್ಲದೆಯೇ ತಾನಾಗಿ ವಾಸಿಯಾಗುತ್ತದೆ; ಹಿರಿವಯಸ್ಕರು ಮತ್ತು ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ, ವಿಪರೀತ ಬೊಜ್ಜು, ಹೃದ್ರೋಗ ಇತ್ಯಾದಿಗಳಿರುವವರಲ್ಲಿ ರೋಗವು ಉಲ್ಬಣಿಸುವ ಸಾಧ್ಯತೆಗಳಿದ್ದು, ಅಂಥವರನ್ನು ಸುರಕ್ಷಿತವಾಗಿರಿಸಬೇಕು; ಸೋಂಕಿನ ಲಕ್ಷಣಗಳಿರುವವರು ಮನೆಯಲ್ಲೇ ಉಳಿದು ಇತರರಿಗೆ ಹರಡದಂತೆ ಎಚ್ಚರಿಕೆ ವಹಿಸಿ ನೆರವಾಗಬೇಕು, ಮತ್ತು ತಮ್ಮ ದೇಹಸ್ಥಿತಿಯ ಮೇಲೆ ನಿಗಾ ವಹಿಸಿ, ತಮ್ಮ ಆಮ್ಲಜನಕದ ಮಟ್ಟವನ್ನು ನೋಡುತ್ತಿದ್ದು, ಅದು 95% ಕ್ಕಿಂತ ಕೆಳಗಿಳಿದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು; ಸಮಸ್ಯೆಗಳಾದವರ ಚಿಕಿತ್ಸೆಗೆ ಆಧುನಿಕ ವೈದ್ಯವಿಜ್ಞಾನದ ಆಸ್ಪತ್ರೆಗಳನ್ನು ಪ್ರತ್ಯೇಕವಾಗಿ ಸಜ್ಜುಗೊಳಿಸಬೇಕು ಎಂದು ಮಾರ್ಚ್ ಮೊದಲಿನಿಂದ ನಾವು ಹೇಳುತ್ತಲೇ ಬಂದಿದ್ದ ವೈಜ್ಞಾನಿಕ ವಿಚಾರಗಳೆಲ್ಲವೂ ಈಗ ಶತಸಿದ್ಧಗೊಂಡಿವೆ, ಮುಂದಿನ ದಿನಗಳಲ್ಲಿ ಕೊರೋನ ಸೋಂಕು ಇನ್ನಷ್ಟು ಹರಡುವಾಗಲೂ ಇವೇ ಸತ್ಯಗಳು ಪ್ರಸ್ತುತವಾಗಿರಲಿವೆ.
ಈ ಹಿನ್ನೆಲೆಯಲ್ಲಿ, ಕೊರೋನ ಸೋಂಕು ಈಗ ವ್ಯಾಪಕವಾಗಿ ಹರಡುತ್ತಿದ್ದಂತೆ ಎದ್ದಿರುವ ಕೆಲವು ಸಂದೇಹಗಳಿಗೆ ಉತ್ತರಿಸುವ ಪ್ರಯತ್ನವನ್ನಿಲ್ಲಿ ಮಾಡಿದ್ದೇವೆ.
ಭಾರತದಲ್ಲಿ ಕೊರೋನ ಸೋಂಕು ಅನ್ಯ ದೇಶಗಳಿಗಿಂತ ಭಿನ್ನವಾಗಿದೆಯೇ?
ನಮ್ಮಲ್ಲೀಗ 60 ವರ್ಷಕ್ಕಿಂತ ಕಿರಿಯ ವಯಸ್ಕರು ಮತ್ತು ಆರೋಗ್ಯವಂತರೆಂದು ಕಂಡುಬರುತ್ತಿದ್ದ ಕೆಲವರು ಕೊರೋನ ಸೋಂಕಿನಿಂದ ಮೃತರಾಗುತ್ತಿರುವ ವರದಿಗಳು ಬರುತ್ತಿರುವುದರಿಂದ, ಇಲ್ಲಿ ಕೊರೋನ ಸೋಂಕು ಹೆಚ್ಚು ಉಗ್ರವಾಗಿ ವರ್ತಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ತದ್ವಿರುದ್ಧವಾಗಿ, ಭಾರತದಲ್ಲಿ ಅತಿ ಕಡಿಮೆ ಸಾವುಗಳಾಗಿವೆ, ದಿಗ್ಬಂಧನ ವಿಧಿಸಿದ್ದರಿಂದ 25 ಲಕ್ಷ ಸಾವುಗಳನ್ನು ತಡೆಯಲು ಸಾಧ್ಯವಾಯಿತು ಎಂದು ಸರಕಾರವು ಹೇಳಿಕೊಳ್ಳುತ್ತಿದೆ.
ಇವೆರಡೂ ನಿಜವಲ್ಲ. ಭಾರತದಲ್ಲಿ ಕೊರೋನ ಸೋಂಕು ಇತರ ದೇಶಗಳಿಗಿಂತ ಹೆಚ್ಚು ಉಗ್ರವಾಗಿಲ್ಲ, ಯಾವುದೇ ಹಂತದಲ್ಲಿ ಇಲ್ಲಿ 25 ಲಕ್ಷ ಸಾವುಗಳಾಗುವ ಸಾಧ್ಯತೆಗಳು ಇರಲೇ ಇಲ್ಲ.
ಚೀನಾದ ಆರಂಭಿಕ ವರದಿಗಳನುಸಾರ ಅಲ್ಲಿ ಶೇ.1.4ರಷ್ಟು ಸೋಂಕಿತರು ಸಾವನ್ನಪ್ಪಿದ್ದರು, ಅವರಲ್ಲಿ ಹೆಚ್ಚಿನವರು 60 ವರ್ಷಕ್ಕಿಂತ ಹಿರಿಯರೂ, ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ, ಹೃದ್ರೋಗಗಳಿಂದ ಮೊದಲೇ ಬಳಲುತ್ತಿದ್ದವರೂ ಆಗಿದ್ದರು. ನಂತರ ಯೂರೋಪ್ ಮತ್ತು ಅಮೆರಿಕಾಗಳಲ್ಲಿಯೂ ಕೊರೋನ ಇದೇ ತೆರನಾಗಿತ್ತು, ಅಲ್ಲಿ ಹಿರಿವಯಸ್ಕರ ಜನಸಂಖ್ಯೆಯು ಶೇ.20ಕ್ಕೂ ಹೆಚ್ಚಿದ್ದುದರಿಂದ ಜೀವಹಾನಿಯು ಹೆಚ್ಚಾಗಿತ್ತು. ಆ ನಂತರದಲ್ಲಿ ಪ್ರಕಟವಾದ ಅನೇಕ ವಿಶ್ಲೇಷಣೆಗಳಲ್ಲಿ 30 ವರ್ಷಕ್ಕಿಂತ ಕೆಳಗಿನ ಆರೋಗ್ಯವಂತರಲ್ಲಿ ಸಾವಿನ ಪ್ರಮಾಣವು ಹತ್ತು ಲಕ್ಷಕ್ಕೆ 3ರಷ್ಟು ಇರುತ್ತದೆ ಎಂದೂ, 80ಕ್ಕಿಂತ ಮೇಲ್ಪಟ್ಟು, ಜೊತೆಗೆ ಅನ್ಯ ರೋಗಗಳನ್ನು ಹೊಂದಿರುವವರಲ್ಲಿ ನೂರಕ್ಕೆ 7 ರಷ್ಟಿರಬಹುದೆಂದೂ, ಒಟ್ಟಾರೆಯಾಗಿ ಹತ್ತು ಸಾವಿರಕ್ಕೆ 4-50 (0.04%-0.5%) ರಷ್ಟಿರಬಹುದೆಂದೂ ಹೇಳಲಾಯಿತು. ನಮ್ಮ ದೇಶದಲ್ಲಿ ಆಗಿರಬಹುದಾದ ಒಟ್ಟು ಪ್ರಕರಣಗಳನ್ನು ಪರಿಗಣಿಸಿದರೆ, ಸಾವಿನ ಪ್ರಮಾಣವು ಅದೇ ಪ್ರಮಾಣದಲ್ಲಿದೆ (0.05%) ಎನ್ನಬಹುದು. ನಮ್ಮ ರಾಜ್ಯದಲ್ಲಿ ಕೂಡ ದೃಢಪಟ್ಟ ಕೊರೋನ ಸೋಂಕಿತರಲ್ಲಿ ಮೃತರಾದವರ ಪ್ರಮಾಣವು 1.7% ಆಗಿದೆ, ಪರೀಕ್ಷೆಗೊಳಪಡದಿರುವ ಒಟ್ಟು ಸೋಂಕಿತರ ಅಂದಾಜನ್ನು ಪರಿಗಣಿಸಿದರೆ ಮೃತರ ಪ್ರಮಾಣವು 0.07% (10 ಸಾವಿರಕ್ಕೆ 7) ಇರಬಹುದು. ಅಂದರೆ ಭಾರತದಲ್ಲೂ, ಕರ್ನಾಟಕದಲ್ಲೂ ಕೊರೋನ ಸೋಂಕಿನ ಸಮಸ್ಯೆಗಳು ಒಟ್ಟಾರೆಯಾಗಿ ನಿರೀಕ್ಷಿತ ಮಟ್ಟದಲ್ಲೇ ಇವೆ ಎಂದಾಯಿತು.
ಭಾರತದಲ್ಲಿ ಅತಿ ಕಡಿಮೆ ಸಾವುಗಳಾಗಿವೆ ಎನ್ನುವಂತೆಯೂ ಇಲ್ಲ. ಆರೋಗ್ಯ ಸೇವೆಗಳು ಅತ್ಯುತ್ತಮವಾಗಿರುವ ಶ್ರೀಮಂತ ದೇಶಗಳಲ್ಲಿ ಸಾವಿನ ಪ್ರಮಾಣವು ಕಡಿಮೆಯಿರಬಹುದೆಂಬ ಅಂದಾಜಿಗೆ ವ್ಯತಿರಿಕ್ತವಾಗಿ ಅಮೆರಿಕ, ಬ್ರಿಟನ್, ಇಟೆಲಿ, ಸ್ಪೇನ್, ಫ್ರಾನ್ಸ್‌ನಂತಹ ದೇಶಗಳಲ್ಲಿ ಕೊರೋನದಿಂದ ಅತ್ಯಧಿಕ ಪ್ರಮಾಣದಲ್ಲಿ ಸಾವುಗಳಾಗಿವೆ. ಇದಕ್ಕಿದಿರಾಗಿ, ಭಾರತ, ಶ್ರೀಲಂಕಾ, ಪಾಕಿಸ್ತಾನವೂ ಸೇರಿದಂತೆ ಸಿರಿವಂತವೆನಿಸಿಲ್ಲದ ಹೆಚ್ಚಿನ ದೇಶಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸಾವುಗಳಾಗಿವೆ. ಆದರೆ, ದಕ್ಷಿಣ ಏಷ್ಯಾದ ನೆರೆಹೊರೆಗೆ ಹೋಲಿಸಿದರೆ ಭಾರತದಲ್ಲೇ ಅತ್ಯಧಿಕ ಸಾವುಗಳಾಗಿವೆ; ಭಾರತದಲ್ಲಿ ಪ್ರತಿ ದಶಲಕ್ಷ ಜನರಲ್ಲಿ 83 ಮಂದಿ ಕೊರೋನ ಸೋಂಕಿನಿಂದ ಮೃತರಾಗಿದ್ದರೆ, ನೇಪಾಲದಲ್ಲಿ ದಶಲಕ್ಷ ಜನರಲ್ಲಿ 21, ಪಾಕಿಸ್ತಾನದಲ್ಲಿ 30, ಬಾಂಗ್ಲಾದಲ್ಲಿ 33, ಶ್ರೀಲಂಕಾದಲ್ಲಿ ಒಬ್ಬರು ಮೃತರಾಗಿದ್ದಾರೆ.
ಶ್ರೀಮಂತ ದೇಶಗಳಲ್ಲಿ ಸಕ್ಕರೆ ಮತ್ತು ಧಾನ್ಯಾಧಾರಿತ ಆಹಾರಗಳ ಬಳಕೆ, ಧೂಮಪಾನ, ಮದ್ಯಪಾನ ಅಧಿಕವಾಗಿವೆ, ಹಿರಿ ವಯಸ್ಕರ ಸಂಖ್ಯೆಯೂ ಅಧಿಕವೇ ಇದೆ. ಇದಕ್ಕೆ ಹೋಲಿಸಿದರೆ, ಭಾರತ ಮತ್ತು ದಕ್ಷಿಣ ಏಷ್ಯಾದ ದೇಶಗಳಲ್ಲಿ ಬಡತನವು ಹೆಚ್ಚು, ಸಕ್ಕರೆ ಕಾಯಿಲೆ, ಬೊಜ್ಜು ಇತ್ಯಾದಿ ಸಮಸ್ಯೆಗಳು ಕಡಿಮೆ, ಹಿರಿವಯಸ್ಕರ ಸಂಖ್ಯೆಯು ಕೂಡ ಕಡಿಮೆಯೇ. ಜೊತೆಗೆ, ದಕ್ಷಿಣ ಏಷ್ಯಾದ ಜನಸಂದಣಿ, ಸ್ವಚ್ಚತೆಯ ಕೊರತೆ, ಮೊದಲೇ ಆಗಿರಬಹುದಾದ ಅನ್ಯ ವಿಧದ ಕೊರೋನ ಸೋಂಕುಗಳು ಇತ್ಯಾದಿ ಕಾರಣಗಳಿಂದ ಇಲ್ಲಿನವರ ರೋಗರಕ್ಷಣಾ ವ್ಯವಸ್ಥೆಯು ಹೆಚ್ಚು ಸುನಿಯಂತ್ರಿತವಾಗಿ ಹೊಸ ಕೊರೋನ ಸೋಂಕನ್ನು ನಿಭಾಯಿಸಿರುವ ಸಾಧ್ಯತೆಗಳಿವೆ. ಭಾರತದಲ್ಲಿ ಸೋಂಕು ಇನ್ನೂ ಹರಡುತ್ತಲೇ ಇರುವುದರಿಂದ ಸಾವಿನ ಸಂಖ್ಯೆಯು ಹೆಚ್ಚಲಿದೆಯಾದರೂ, ಮೊದಲಲ್ಲಿ ಭೀತಿ ಹುಟ್ಟಿಸಿದ್ದಷ್ಟು, ಅಥವಾ ಸರಕಾರವು ಹೇಳಿಕೊಳ್ಳುತ್ತಿರುವಷ್ಟು ಸಾವುಗಳಾಗುವ ಸಾಧ್ಯತೆಗಳು ಇಲ್ಲವೇ ಇಲ್ಲ ಎನ್ನುವುದು ಸುಸ್ಪಷ್ಟವಾಗಿದೆ.
ಭಾರತದಲ್ಲಿ ಯುವಜನರು ಕೊರೋನಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆಯೇ?
ಇಲ್ಲ. ಅನ್ಯ ದೇಶಗಳಂತೆ ಭಾರತದಲ್ಲೂ ಹಿರಿವಯಸ್ಕರೇ ಹೆಚ್ಚಾಗಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಕೊರೋನಾದಿಂದ ಒಟ್ಟು ಮೃತರಾದವರಲ್ಲಿ ಶೇ. 3 ರಷ್ಟು 30 ವರ್ಷಕ್ಕಿಂತ ಕೆಳಗಿನವರಾದರೆ, ಚೀನಾದಲ್ಲಿ 2.5% ಮೃತರು 40 ವರ್ಷಕ್ಕಿಂತ ಕಿರಿಯರು, ಅಮೆರಿಕಾದಲ್ಲಿ 3.1% ಮೃತರು 45 ವರ್ಷಕ್ಕಿಂತ ಕಿರಿಯರು. ಕರ್ನಾಟಕದಲ್ಲಿ ಕೊರೋನ ಸೋಂಕಿನಿಂದ ಮೃತರಾದವರಲ್ಲಿ 10 ವರ್ಷದ ಒಳಗಿನವರು 0.2%, 11-20 ವರ್ಷದವರು 0.5%, 20-30ರೊಳಗಿನವರು 2.4%. ಅಂದರೆ, ಕಿರಿಯರ ಜನಸಂಖ್ಯೆಯ ಪ್ರಮಾಣಗಳನ್ನು ಪರಿಗಣಿಸಿದರೆ, ಭಾರತದ ಕಿರಿಯರಲ್ಲಿ ಕೊರೋನದಿಂದಾದ ಸಮಸ್ಯೆಗಳು ಚೀನಾ ಮತ್ತು ಅಮೆರಿಕಾಗಳಲ್ಲಿದ್ದಂತೆಯೇ ಇವೆ.
ಯಾವುದೇ ಸಮಸ್ಯೆಗಳಿಲ್ಲದಿದ್ದ ಆರೋಗ್ಯವಂತರು ಕೊರೋನ ಸೋಂಕಿಗೆ ಬಲಿಯಾಗುತ್ತಿದ್ದಾರೆಯೇ?
ಯಾವುದೇ ಅನ್ಯ ರೋಗಗಳಿಲ್ಲದ ಮೂವತ್ತು ವರ್ಷಕ್ಕೆ ಕೆಳಗಿನವರು ಕೊರೋನ ಸೋಂಕಿನಿಂದ ಸಾಯುವ ಸಾಧ್ಯತೆಗಳು ಹತ್ತು ಲಕ್ಷಕ್ಕೆ ಮೂರರಷ್ಟು, ಅಂದರೆ ಇಲ್ಲವೇ ಇಲ್ಲವೆನ್ನುವಷ್ಟು, ಸಣ್ಣದಾಗಿವೆ. ನಮ್ಮ ದೇಶದಲ್ಲೂ ಮೂವತ್ತು ವರ್ಷಕ್ಕಿಂತ ಕೆಳಗಿನವರಾಗಿ ಮೃತಪಟ್ಟವರಲ್ಲಿ ಬಹುತೇಕ ಎಲ್ಲರಲ್ಲೂ ಆ ಮೊದಲೇ ಗಂಭೀರವಾದ ಅನ್ಯ ಕಾಯಿಲೆಗಳು (ಅನುವಂಶೀಯ ರೋಗಗಳು, ಹೃದ್ರೋಗ, ಮೂತ್ರಪಿಂಡಗಳ ಕಾಯಿಲೆ, ಕ್ಯಾನ್ಸರ್ ಇತ್ಯಾದಿ) ಇದ್ದವೆಂದು ವರದಿಗಳಾಗಿವೆ. ಹಿರಿಯ ವಯಸ್ಸಿನ ಮೃತರಲ್ಲೂ ಹೆಚ್ಚಿನವರು ಇಂಥವೇ ಅನ್ಯ ಕಾಯಿಲೆಗಳಿದ್ದವರಾಗಿದ್ದರು.
ಆದರೆ, ಯಾವುದೇ ಸಮಸ್ಯೆಗಳೇ ಇಲ್ಲದಿದ್ದ ಕೆಲವರು ಕೊರೋನ ಸೋಂಕಿಗೆ ಬಲಿಯಾಗಿರುವುದು ಇಲ್ಲವೆಂದಲ್ಲ. ಅಮೆರಿಕದಲ್ಲೂ ಇಂಥ ಕೆಲವು ವರದಿಗಳಾಗಿವೆ. ಇಂಥ ಪ್ರಕರಣಗಳು ತೀರಾ ಅಪರೂಪದ್ದಾಗಿದ್ದರೂ, ಕೊರೋನ ಸೋಂಕಿನ ಬಗ್ಗೆ ಈಗಾಗಲೇ ಉಂಟಾಗಿರುವ ಭೀತಿಯನ್ನು ಇನ್ನಷ್ಟು ಹೆಚ್ಚಿಸಲು ಇವು ಸಾಕಾಗುತ್ತವೆ. ಹೀಗೆ ಮೃತಪಟ್ಟಿರುವ ಪ್ರಕರಣಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದರೆ, ಹೆಚ್ಚಿನ ಪ್ರಕರಣಗಳಲ್ಲಿ ಒಂದಲ್ಲೊಂದು ಅನ್ಯ ಸಮಸ್ಯೆಗಳು ಮೊದಲೇ ಇತ್ತೆನ್ನುವುದು ಕಂಡುಬರುತ್ತದೆ. ಅದುವರೆಗೆ ಪತ್ತೆಯಾಗದೇ ಇದ್ದ ಅಥವಾ ಬಂಧುಮಿತ್ರರ ಅರಿವಿಗೆ ಬಾರದೇ ಇದ್ದ, ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ, ಹೃದಯದ ರಕ್ತನಾಳಗಳ ಕಾಯಿಲೆ, ಮೇದಸ್ಸಿನ ಸಮಸ್ಯೆಗಳು (ರಕ್ತದಲ್ಲಿ ಅಧಿಕ ಪ್ರಮಾಣದ ಟ್ರೈಗ್ಲಿಸರೈಡ್, ಯಕೃತ್ತಿನಲ್ಲಿ ಮೇದಸ್ಸಿನ ಶೇಖರಣೆ – ಫ್ಯಾಟಿ ಲಿವರ್) ಇತ್ಯಾದಿಗಳು, ಸಮಸ್ಯೆಯೆಂದೇ ಪರಿಗಣಿಸಲ್ಪಡದಿರುವ ಅತಿ ತೂಕ ಅಥವಾ ಬೊಜ್ಜು ಮುಂತಾದ ಕಾಯಿಲೆಗಳು ಅಂಥವರಲ್ಲಿ ಇದ್ದಿರುವ ಸಾಧ್ಯತೆಗಳಿವೆ. ಇನ್ನು ಕೆಲವು ತೀರಾ ಅಪರೂಪದ ಪ್ರಕರಣಗಳಲ್ಲಿ ಔಷಧಗಳ ಅಡ್ಡ ಪರಿಣಾಮಗಳಾಗಿರುವ ಸಾಧ್ಯತೆಗಳೂ ಇವೆ. ಕರ್ನಾಟಕದಲ್ಲಿ ಕೊರೋನದಿಂದ ಮೃತರಾದವರ ಬಗ್ಗೆ ಸವಿವರವಾದ ಮಾಹಿತಿಯೆಲ್ಲವೂ ಸರಕಾರದ ಬಳಿಯಿರುವುದರಿಂದ, ಇವುಗಳನ್ನು ವಿಶ್ಲೇಷಿಸಿ ಜನರ ಮುಂದಿಟ್ಟರೆ ಅನಗತ್ಯವಾದ ಊಹಾಪೋಹಗಳಿಗೆ, ಅಪಪ್ರಚಾರಗಳಿಗೆ, ಆತಂಕಗಳಿಗೆ ತೆರೆಯೆಳೆಯಲು ಸಾಧ್ಯವಿದೆ. ಮಾತ್ರವಲ್ಲ, ಕೊರೋನ ರೋಗವು ಉಲ್ಬಣಿಸಲು ಕಾರಣವಾಗಬಲ್ಲ ಬೊಜ್ಜು, ಸಕ್ಕರೆ ಕಾಯಿಲೆ ಇತ್ಯಾದಿಗಳನ್ನು ಗುರುತಿಸಿ ನಿಯಂತ್ರಿಸಿಕೊಳ್ಳುವ ಬಗ್ಗೆ, ಅವಕ್ಕೆ ಕಾರಣವಾಗುವ ಸಕ್ಕರೆಭರಿತ ಆಹಾರ, ಮದ್ಯಪಾನ, ಧೂಮಪಾನಗಳನ್ನು ನಿಯಂತ್ರಿಸಿಕೊಳ್ಳುವ ಬಗ್ಗೆ ಜನರಿಗೆ ಅರಿವುಂಟುಮಾಡುವ ಕೆಲಸವನ್ನೂ ಮಾಡಬಹುದಾಗಿದೆ.

Be the first to comment

Leave a Reply

Your email address will not be published.


*