ಕೆಪಿಎಂಇ ಮಸೂದೆ ಬಗ್ಗೆ

ಕಾರ್ಪೊರೇಟ್ ಆಸ್ಪತ್ರೆಗಳನ್ನುಬಲಿಷ್ಠಗೊಳಿಸುವ ಸಂಚು

ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯ

ವಾರ್ತಾ ಭಾರತಿ, ಜೂನ್ 20, 2017. ಇಲ್ಲಿದೆ: http://www.varthabharati.in/article/79459

ಸದ್ಯ ರಾಜ್ಯದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ)- 2017’ ಮಸೂದೆ ಚರ್ಚೆಯಲ್ಲಿದೆ. ರಾಜ್ಯದ ಆರೋಗ್ಯ ಸಚಿವರು ಈ ತಿದ್ದುಪಡಿ ಮಸೂದೆ ಜನಪರ ಎನ್ನುತ್ತಾ ಮಂಡನೆ ಮಾಡಿದ್ದರೆ, ಕರ್ನಾಟಕ ವೈದ್ಯಕೀಯ ಮಂಡಳಿ (ಐಎಂಎ) ಸದಸ್ಯರು ಇದು ದೇಶದ ಎಲ್ಲಾ ಕಾನೂನುಗಳನ್ನು ಮೂಲೆ ಗುಂಪು ಮಾಡುವ, ಖಾಸಗಿ ವೈದ್ಯರ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ಹೇರಿ ಅವರು ಕೆಲಸವನ್ನೇ ಮಾಡದಂತಹ ಮಾನ ದಂಡಗಳನ್ನು ಒಳಗೊಂಡ ಕರಾಳ ಮಸೂದೆ ಎಂದು ವಿರೋಧಿಸಿ ಪ್ರತಿಭಟನೆಯನ್ನೂ ವ್ಯಕ್ತಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಮಸೂದೆಗೆ ತಿದ್ದುಪಡಿಗಾಗಿ ರಚಿಸಲಾಗಿದ್ದ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ಸಮಿತಿಯ ನೇತೃತ್ವದ ಸಮಿತಿಯಲ್ಲಿ ಸ್ವತಂತ್ರ ವೈದ್ಯರ ನೆಲೆಯಲ್ಲಿ ಸದಸ್ಯರಾಗಿದ್ದ ಮಂಗಳೂರಿನ ಖ್ಯಾತ ವೈದ್ಯರಾದ ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯರನ್ನು ‘ವಾರ್ತಾಭಾರತಿ’ ಮಾತನಾಡಿಸಿದೆ.

ಕಾರ್ಪೊರೇಟ್ ಆಸ್ಪತ್ರೆಗಳು ನೂರಾರು ಎಕರೆಯಲ್ಲಿ, ಅದೂ ಸರಕಾರದ ಕೊಡುಗೆ ಯೊಂದಿಗೆ ಕಾರ್ಯ ನಿರ್ವಹಿಸುತ್ತವೆ. ಪ್ರಸಕ್ತ ತಿದ್ದುಪಡಿ ಮಸೂದೆ ಜಾರಿಗೊಂಡರೆ, ಇದುವರೆಗೆ ದಂಧೆ, ದರೋಡೆ ಮಾಡುತ್ತಿರುವ ಕಾರ್ಪೊರೇಟ್ ಆಸ್ಪತ್ರೆಗಳು ಇನ್ನೂ ಕೊಬ್ಬಲಿವೆ. ಅವರ ದರದಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ. ಮಾತ್ರವಲ್ಲ ಇನ್ಫ್ಲುಯೆನ್ಸ್ ಮಾಡಿ ದರ ನಿಗದಿ ಮಾಡುವ ಸಾಮರ್ಥ್ಯ ಕಾರ್ಪೊರೇಟ್ ಆಸ್ಪತ್ರೆಗಳಿರುತ್ತದೆ.

ಅವರು ಹೇಳುವಂತೆ, ಪ್ರಸ್ತುತ ಸರಕಾರ ಹೇಳಿಕೊಂಡಿರುವಂತೆ ಈ ತಿದ್ದುಪಡಿ ಮಸೂದೆ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ಸಮಿತಿಯ ವರದಿ ಆಧಾರದಲ್ಲಿ ರೂಪಿತವಾಗಿಲ್ಲ. ಸಮಿತಿಯ ವರದಿಗೆ ತದ್ವಿರುದ್ಧವಾಗಿ ರಾಜ್ಯದ ಆರೋಗ್ಯ ಸಚಿವರು ಈ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದಲ್ಲದೆ, ಈ ಮಸೂದೆ ಜಾರಿಗೊಂಡಲ್ಲಿ ಕರ್ನಾಟಕ ರಾಜ್ಯದಲ್ಲಿ ಯಾವುದೇ ವೈದ್ಯರು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯವೇ ಇಲ್ಲ ಎಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಪ್ರತಿಪಾದಿಸಿದ್ದಾರೆ. ಅವರ ಜತೆಗಿನ ಸಂದರ್ಶನದ ವೇಳೆ ಮಸೂದೆ ಬಗೆಗಿನ ಸಮಗ್ರ ವಿವರದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಗೆ ಆಕ್ಷೇಪವೇಕೆ?

ಡಾ. ಎಸ್. ಕಕ್ಕಿಲ್ಲಾಯ: ರಾಜ್ಯದ ಆರೋಗ್ಯ ಸಚಿವರಾದ ರಮೇಶ್ ಕುಮಾರ್ ಮಂಡಿಸಿರುವ ತಿದ್ದುಪಡಿ ಮಸೂದೆಯಲ್ಲಿ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ಸಮಿತಿ ನೀಡಿರುವ ವರದಿ ಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಈ ಕಾಯ್ದೆಯಿಂದ ಸರಕಾರಿ ಆಸ್ಪತ್ರೆಯನ್ನು ಬಿಡಲಾಗಿದೆ. ಈ ಮಸೂದೆಗೆ ಕರ್ನಾಟಕ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಎಂದು ನಾವು ಹೆಸರಿಸಿದ್ದರೆ, ಅದನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಎಂದೇ ಮಂಡಿಸ ಲಾಗಿತ್ತು. ಸರಕಾರಿ ಆಸ್ಪತ್ರೆಗಳನ್ನು ಈ ಕಾಯ್ದೆಯಿಂದ ಹೊರಗಿಟ್ಟರೆ, ಈಗಾಗಲೇ ವೈದ್ಯರ ಕೊರತೆ, ಬೆಡ್ಗಳ ಕೊರತೆ, ಸಲಕರಣೆ ಗಳ ಕೊರತೆ ಇಲ್ಲದೆ ಶೋಚನೀಯ ಸ್ಥಿತಿಯಲ್ಲಿರುವ ಆಸ್ಪತ್ರೆಗಳು ಸಂಪೂರ್ಣವಾಗಿ ಮುಚ್ಚುವ ಪರಿಸ್ಥಿತಿಗೆ ತಲುಪಲಿವೆ.

ಪ್ರಸಕ್ತ ತಿದ್ದುಪಡಿ ಮಸೂದೆಯ ಪ್ರಕಾರ ವೈದ್ಯರು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನಿಯಂತ್ರಣಕ್ಕೊಳಪಡಬೇಕು. ಹಾಗಿದ್ದರೆ, ನಮ್ಮಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ, ಗ್ರಾಹಕ ನ್ಯಾಯಾಲಯ, ಕ್ರಿಮಿನಲ್ ನ್ಯಾಯಾಲಯ, ಮಾನವ ಹಕ್ಕು ಆಯೋಗ ಇವುಗಳಿಗೆ ಯಾವುದಕ್ಕೂ ಬೆಲೆ ಇಲ್ಲವೇ? ಇವುಗಳು ಯಾವುವೂ ರೋಗಿಗಳಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲವೇ? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕು.

ಜಿಲ್ಲಾ ಪಂಚಾಯತ್ ಸಿಇಒ ಸರಕಾರದ ನೇರ ಅಧೀನದಲ್ಲಿ ಇರುವುದರಿಂದ ವೈದ್ಯರೆಲ್ಲಾ ಸರಕಾರದ ಕಪಿಮುಷ್ಟಿಯಲ್ಲಿರಬೇಕು ಎಂಬುದು ಈ ಮಸೂದೆಯ ಉದ್ದೇಶ.

ಈ ಮಸೂದೆಯ ಪ್ರಕಾರ ರೋಗಿಗಳ ಹಕ್ಕಿನಡಿ ಆತನಿಗೆ ಚಿಕಿತ್ಸೆ ಪಡೆಯುವ ಹಕ್ಕನ್ನು ನೀಡಲಾಗಿದೆ. ರೋಗಿಯು ತನ್ನ ಸಮಸ್ಯೆ ಯನ್ನು ಹೇಳುವಾಗ ವೈದ್ಯ ಅಡ್ಡಿ ಪಡಿಸುವಂತಿಲ್ಲ. ಅಂದರೆ ಪ್ರಶ್ನೆ ಕೇಳುವಂತಿಲ್ಲ. ಪ್ರಶ್ನೆ ಕೇಳಿ ಉತ್ತರ ಪಡೆಯುವುದು ವೈದ್ಯನ ದಿನ ನಿತ್ಯದ ವೃತ್ತಿಯ ಒಂದು ಭಾಗ. ಪ್ರಶ್ನೆಯೇ ಕೇಳುವಂತಿಲ್ಲ. ಕೇಳಿದರೆ ಅದಕ್ಕೆ ದಂಡ ಹಾಕಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯನಾದವ ಚಿಕಿತ್ಸೆ ನೀಡುವುದಾದರೂ ಹೇಗೆ?

ಈ ತಿದ್ದುಪಡಿ ಮಸೂದೆ ಬಗ್ಗೆ ವಿವರ ನೀಡುವಿರಾ?

ಡಾ. ಎಸ್. ಕಕ್ಕಿಲ್ಲಾಯ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ 2007ರಲ್ಲೇ ಕಾನೂನು ಆಗಿ 2010ರಲ್ಲಿ ನಿಯಮಗಳು ಜಾರಿಗೊಂಡಿದ್ದವು. ಆ ಕಾನೂನಿಗೆ ನಮ್ಮ ವಿರೋಧ ಇರಲಿಲ್ಲ. ಅದರಡಿ ನಾವೆಲ್ಲಾ ವೈದ್ಯರು ನೋಂದಾಯಿತರಾಗಿದ್ದೇವೆ. ಯಾವ್ಯಾವ ವೈದ್ಯಕೀಯ ಸಂಸ್ಥೆಗಳು ನುರಿತ ವೈದ್ಯರಿಂದ ನಡೆಸಲ್ಪ ಡುತ್ತವೆಯೋ ಅವುಗಳನ್ನು ಗುರುತಿವುದಷ್ಟೇ ಆ ಕಾನೂನಿನ ಉದ್ದೇಶವಾಗಿತ್ತು. ಬದಲಿಗೆ ನಿಯಂತ್ರಣ, ಬೆಲೆ ನಿಯಂತ್ರಣ, ಶಿಕ್ಷೆ ಆ ಕಾನೂನಿನಲ್ಲಿ ಇರಲಿಲ್ಲ. ನಮ್ಮ ವಿದ್ಯಾರ್ಹತೆ, ಪ್ರಮಾಣ ಪತ್ರ ಪರಿಶೀಲಿಸಿ ನಮಗೆ ಪ್ರಮಾಣ ಪತ್ರ ನೀಡುತ್ತಾರೆ. ನೋಂದಣಿ ಯಾಗದ ನಕಲಿ ವೈದ್ಯರು, ಸಂಸ್ಥೆಗಳಿಗೆ ಜೈಲು ಶಿಕ್ಷೆಯಾಗುತ್ತದೆ ಎಂಬುದು ನಮ್ಮ ಅನಿಸಿಕೆಯಾಗಿತ್ತು. ಆದರೆ ವಿಪರ್ಯಾಸವೆಂದರೆ 2007ರ ಕಾನೂನಿನಡಿ ನಕಲಿ ವೈದ್ಯರಿಗೂ ನೋಂದಣಿ ಮಾತ್ರ ಮುಂದುವವರಿದೆ. ವೈದ್ಯರಲ್ಲದವರು ವೈದ್ಯ ವೃತ್ತಿ ಮಾಡುವುದನ್ನು ತಪ್ಪಿಸುವುದಕ್ಕೋಸ್ಕರ ರೂಪಿತವಾದ ಕಾನೂನಿನಡಿ, ನಕಲಿಯನ್ನು ಒಬ್ಬರನ್ನೂ ಹಿಡಿಯಲಾಗಿಲ್ಲ. ಈ ಕಾನೂನು ಜಾರಿಯು ತನ್ನ ಪ್ರಮುಖ ಉದ್ದೇಶವನ್ನು ಈಡೇರಿಸುವಲ್ಲಿಯೇ ವಿಫಲವಾಗಿದೆ.

ಆ ಕಾನೂನಿಗೆ ತಿದ್ದುಪಡಿ ಮಾಡಲು ಪ್ರಸಕ್ತ ರಾಜ್ಯದ ಆರೋಗ್ಯ ಸಚಿವರಾದ ರಮೇಶ್ ಕುಮಾರ್ ಮುಂದಾದರು. ನ್ಯಾಯ ಮೂರ್ತಿ ವಿಕ್ರಮ್ ಜಿತ್ ಸೇನ್ ಅಧ್ಯಕ್ಷತೆಯಲ್ಲಿ 32 ಮಂದಿಯ ಸಮಿತಿ ರಚನೆಯಾಯಿತು. ನಾನು ಮತ್ತು ಡಾ. ಎಚ್.ಎಸ್. ಅನುಪಮಾ ಸ್ವತಂತ್ರ ವೈದ್ಯರ ನೆಲೆಯಲ್ಲಿ ಸದಸ್ಯರಾಗಿದ್ದೆವು. 2016ರ ಜುಲೈ 28 ಪ್ರಥಮ ಸಭೆ ನಡೆದಿತ್ತು. ಈ ಸಮಿತಿಯಲ್ಲಿ 10 ತಿಂಗಳು ನಾಲ್ಕು ಸಭೆ, ಉಪ ಸಮಿತಿಗಳ ಸಭೆಗಳೂ ಆಗಿವೆ. ಜನರೋಗಿ ಚಳವಳಿ ಎಂಬ ಎನ್ ಜಿ ಒ ಸಂಸ್ಥೆಯ ಜತೆಗೆ ಎಲ್ಲರಿಗೂ ಅವರ ಅಭಿಪ್ರಾಯ ಮಂಡನೆ, ಲಿಖಿತವಾಗಿ ನೀಡಲೂ ಅವಕಾಶ ನೀಡಲಾಗಿತ್ತು. 2017 ಎಪ್ರಿಲ್ 28 ಕೊನೆಯ ಸಭೆ ನಡೆದಿತ್ತು. ಈ ಸಂದರ್ಭ ಮೂರು ಪ್ರಮುಖ ವಿಷಯಗಳು ಚರ್ಚಿಸಲ್ಪಟ್ಟವು. ವೈದ್ಯರನ್ನು ನಿಯಂತ್ರಣ ಮಾಡುವಲ್ಲಿ ಈಗಿನ ಕಾನೂನು ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಜಿಲ್ಲಾ ಮಟ್ಟದಲ್ಲಿ ಮೆಡಿಕಲ್ ಸಂಸ್ಥೆಗಳನ್ನು ನಿಯಂತ್ರಿಸಲು ಈಗ ನೋಂದಣಿ ಪ್ರಾಧಿಕಾರ ಮಾತ್ರವೇ ಇರುವುದು. ಅದು ಸಾಕಾಗುವುದಿಲ್ಲ. ನೋಂದಣಿ ನಿಯಮಗಳನ್ನು ಪಾಲಿಸದಿದ್ದಲ್ಲಿ ಅಥವಾ ತಪ್ಪಿದಲ್ಲಿ ಕಂಡು ಹಿಡಿಯಲು ಪ್ರತ್ಯೇಕ ನಿಯಮ ತರಬೇಕು ಎಂಬುದು ಜನ ರೋಗಿ ಚಳವಳಿಯ ಆಗ್ರಹವಾಗಿತ್ತು. ಅದರ ಜತೆ, ಖಾಸಗಿ ಆಸ್ಪತ್ರೆಗಳ ಬೆಲೆಯನ್ನು ನಿಯಂತ್ರಿಸುವುದು ಕೂಡಾ ಅವರ ಒತ್ತಾಯವಾಗಿತ್ತು. ವೈದ್ಯರ ಬೇಡಿಕೆಯಂತೆ, ಸರಕಾರಿ ಆಸ್ಪತ್ರೆಗಳನ್ನು ಕೂಡಾ ಈ ಕಾಯ್ದೆಯಡಿ ತರಬೇಕು. ಕೇಂದ್ರ ಸರಕಾರದ 2010ರ ಕ್ಲಿನಿಕಲ್ ಎಸ್ಟಾಬ್ಲಿಷ್ಮೆಂಟ್ ಕಾಯ್ದೆಯಡಿ ಸರಕಾರಿ ಆಸ್ಪತ್ರೆಗಳನ್ನೂ ಸೇರಿಸ ಲಾಗಿದೆ. ಕೇರಳದಲ್ಲಿ 2013ರಲ್ಲಿ ಈ ಬಗ್ಗೆ ಕರಡು ಸಿದ್ಧಗೊಂಡು ಸದ್ಯದಲ್ಲೇ ಅದು ಮಂಡನೆ ಆಗಲಿದೆ.

ಆದರೆ ರಾಜ್ಯ ಸರಕಾರದ ತಿದ್ದುಪಡಿ ಮಸೂದೆಯಲ್ಲಿ ಸರಕಾರಿ ಆಸ್ಪತ್ರೆಗಳನ್ನು ಹೊರಗಿಟ್ಟಲ್ಲಿ ಅವುಗಳನ್ನು ಸುಧಾರಿಸುವ, ನಿರ್ವಹಿಸುವ ಬದ್ಧತೆ ಇಲ್ಲ ಎಂದಾಗುತ್ತದೆ. ನೀವು ಬದ್ಧ್ದತೆಯನ್ನು ಜಾಹೀರು ಪಡಿಸಿ, ಅದನ್ನು ಸೇರಿಸಿ. ನ್ಯಾ. ವಿಕ್ರಮ್ ಜಿತ್ ಸೆನ್ ಅವರು ತೀವ್ರವಾಗಿ ಪ್ರತಿಪಾದಿಸಿದ್ದರು. ನಾನು ಸೇರಿದಂತೆ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ)ಯ ಬೇಡಿಕೆಯೂ ಇದಾಗಿತ್ತು. ಕಮಿಟಿ ತನ್ನ ವರದಿಯಲ್ಲಿ ಅದನ್ನು ಶಿಫಾರಸು ಮಾಡಿತ್ತು. ಎಲ್ಲಾ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಸಮಾನ ಮಾನ ದಂಡಗ ಳಿಗೆ ಒಳಪಡಿಸುವುದನ್ನು ಜನರೋಗಿ ಚಳವಳಿ ವಿರೋಧಿಸಿತ್ತು. ಸರಕಾರ ಅದನ್ನು ಮಾಡಲು ಸಾಧ್ಯವಿಲ್ಲ. ಕಾನೂನಿನಲ್ಲಿ ಸೇರಿಸಿ ದರೆ ಸರಕಾರಿ ಆಸ್ಪತ್ರೆಗಳನ್ನು ಮುಚ್ಚಬೇಕು ಎಂಬುದು ಅದರ ವಾದವಾಗಿತ್ತು. ಮುಚ್ಚುವುದು ಯಾಕೆ ಅದನ್ನು ಸುಧಾರಣೆ ಮಾಡಲಿ. ಖಾಸಗಿಯವರ ಕ್ಲಿನಿಕ್, ಆಸ್ಪತ್ರೆಯಲ್ಲಿ ಇರಬೇಕಾದ ಮಾನದಂಡ ಸರಕಾರಿ ಆಸ್ಪತ್ರೆಯಲ್ಲೂ ಸಿಗಲಿ. ಅವರನ್ನು ಯಾಕೆ ಸಣ್ಣ ಗೂಡಿನಲ್ಲಿ ಕೂಡಿ ಹಾಕುವುದು. ಅಲ್ಲಿಗೆ ಬರುವವರು ರೋಗಿಗಳಲ್ಲವೇ. ಅಲ್ಲಿರುವವರು ವೈದ್ಯರಲ್ಲವೇ. ಖಾಸಗಿ ಆಸ್ಪತ್ರೆಗಳಿಗೆ ಪ್ರತ್ಯೇಕ ರೆಗ್ಯುಲೇಟರಿ ಅಥಾರಿಟಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಮೂರ್ತಿಗಳೂ ಒಪ್ಪಿಕೊಂಡಿದ್ದರು.

ಹಾಗಿದ್ದಲ್ಲಿ ವೈದ್ಯರಿಗೆ ನಿಯಂತ್ರಣದ ಅಗತ್ಯವಿಲ್ಲ ಎನ್ನುತ್ತಿದ್ದೀರಾ?

ಡಾ. ಎಸ್. ಕಕ್ಕಿಲ್ಲಾಯ: ವೈದ್ಯರು ತಪ್ಪಿದಾಗ ತನಿಖೆ ಮಾಡಲು ಈಗಾಗಲೇ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಡಿ ವೈದ್ಯರಿಗೇ ಆದ ನೀತಿ ಸಂಹಿತೆಗಳಿವೆ. ತನ್ನ ಪ್ರಾಕ್ಟೀಸ್ನ ಸಂದರ್ಭವೈದ್ಯ ಯಾವುದೇ ರೋಗಿಯ ಜತೆ ಜಾತಿ, ಮತ, ಭೇದ ಭಾವ ದಿಂದ ವರ್ತಿಸುವಂತಿಲ್ಲ. ಅದಕ್ಕೆ ನಾವೆಲ್ಲಾ ಒಳಪಡುತ್ತೇವೆ. ಅದನ್ನು ಮತ್ತೆ ಪ್ರತ್ಯೇಕವಾಗಿ ಕಾನೂನಿನಲ್ಲಿ ಸೇರಿಸುವ ಅಗತ್ಯವಿಲ್ಲ ಎಂದು ಸಮಿತಿ ಸಭೆಯಲ್ಲೂ ನಮ್ಮ ವಾದವಾಗಿತ್ತು. ವೈದ್ಯರಿಂದಾಗುವ ನಿರ್ಲಕ್ಷದ ಬಗ್ಗೆ ದೂರು ನೀಡಲು ಅವಕಾಶ ವಿದೆ. ಎಂದರೆ, ಮೆಡಿಕಲ್ ಕೌನ್ಸಿಲ್ ಕೆಲಸ ಮಾಡುವುದಿಲ್ಲ ಎಂಬ ಆಕ್ಷೇಪ ಸಭೆಯಲ್ಲಿ ವ್ಯಕ್ತವಾಗಿತ್ತು. ಎಷ್ಟು ದೂರು ನೀಡಲಾಗಿದೆ ಎಂದರೆ ಉತ್ತರವಿಲ್ಲ. ದಾಖಲೆಯೂ ಇಲ್ಲ.

ಒಬ್ಬ ರೋಗಿ ಗ್ರಾಹಕನಾಗಿ ಯಾವುದೇ ತೊಂದರೆ ಆಗಿದ್ದಲ್ಲಿ ಅದಕ್ಕೆ ಗ್ರಾಹಕ ನ್ಯಾಯಾಲಯ ಇದೆ. ಸಿವಿಲ್ ಸಮಸ್ಯೆಯಾದರೆ ಸಿವಿಲ್ ನ್ಯಾಯಾಲಯ ಇದೆ, ಕ್ರಿಮಿನಲ್ ಆರೋಪವಾದರೆ ಕ್ರಿಮಿನಲ್ ಕೋರ್ಟ್ ಇದೆ. ದೌರ್ಜನ್ಯವಾದರೆ ಮಾನವ ಹಕ್ಕು ಆಯೋಗವಿದೆ, ಲೈಂಗಿಕ ಶೋಷಣೆಯಾದರೆ ಅದಕ್ಕೆ ಸಂಬಂಧಿಸಿದ ಪ್ರತ್ಯೇಕ ಕಾನೂನು ಇದೆ. ಅದಕ್ಕಾಗಿ ಪ್ರತ್ಯೇಕ ನಿಯಂತ್ರಣ ಘಟಕದ ಅಗತ್ಯವಿಲ್ಲ ಎಂದು ನಾವು ಹೇಳಿದೆವು. ಒಂದೇ ಅಪರಾಧಕ್ಕೆ ಬೇರೆ ಬೇರೆ ಕಡೆ ನ್ಯಾಯದ ಪರಿಸ್ಥಿತಿ ಬರುತ್ತದೆ. ಬೇಡ ಎಂಬುದನ್ನು ನ್ಯಾಯಾಧೀಶರೂ ಒಪ್ಪಿದ್ದರು.

ಇನ್ನು ಬೆಲೆ ನಿಗದಿ ಮಾಡುವುದು. ವೈದ್ಯರು, ವಕೀಲರು, ಸಿಎ, ಆರ್ಕಿಟೆಕ್ಟ್, ಕಂಪೆನಿ ಸೆಕ್ರೆಟರೀಸ್ಗಳು ಪ್ರೊಫೆಶನಲ್ ಕೌನ್ಸಿಲ್ಗೆ ಒಳಪಡುತ್ತಾರೆ. ಸೆಕ್ಷನ್ 27 ಇಂಡಿಯನ್ ಮೆಡಿಕಲ್ ಕೌನ್ಸಿಲ್ ಆಯಕ್ಟ್ನಲ್ಲಿ ಅದು ಸ್ಪಷ್ಟವಾಗಿದೆ. ಯಾರೂ ಅದನ್ನು ನಿಯಂತ್ರಿ ಸುವಂತಿಲ್ಲ. ಹಾಗಂತ ಯಾವುದೇ ವೈದ್ಯ ಬಾಯಿಗೆ ಬಂದಂತೆ ದರ ಪಡೆಯಲಾಗುವುದಿಲ್ಲ. ಅದು ಮಾರುಕಟ್ಟೆಗೆ ಸೀಮಿತವಾಗಿರುತ್ತದೆ. ಆದರೆ, ಪ್ರೊಫೆಶನಲ್ ಚಾರ್ಜಸ್ ವೈದ್ಯರಿಗೆ ಬಿಟ್ಟಿದ್ದು.

ಜನರೋಗಿ ಚಳವಳಿ ರೋಗಿಗಳ ಸನದು ಜಾರಿಗೊಳಿಸಲು ಮುಂದಾಯಿತು. ಇದಕ್ಕೂ ನಮ್ಮ ಆಕ್ಷೇಪವಿತ್ತು. ರೋಗಿಗೆ ಆರೋಗ್ಯದ ಹಕ್ಕನ್ನು ಈ ಕಾನೂನಿನಲ್ಲಿ ಸೇರಿಸಲು ಆಗುವುದಿಲ್ಲ. ಆರೋಗ್ಯ ಎಂಬುದು ಭಾರತದಲ್ಲಿ ಮೂಲಭೂತ ಹಕ್ಕಾಗಿ ಇಲ್ಲ. ಸಂವಿಧಾನದಲ್ಲಿ ಮಾಡುವುದಾಗಿ ಹೇಳಿದ್ದರೂ ಮೂಲಭೂತ ಹಕ್ಕಾಗಿ ಅದು ಬಂದಿಲ್ಲ. ರಾಜ್ಯ ಅಥವಾ ದೇಶದ ಆರೋಗ್ಯ ನೀತಿ ಯಲ್ಲಿ ‘ಆರೋಗ್ಯ ಹಕ್ಕು’ ಎಂಬುದಾಗಿಲ್ಲ. ಮೆಡಿಕಲ್ ಸಂಸ್ಥೆಗಳ ಪರಿಧಿಯಲ್ಲಿ ನೋಂದಣಿ ಮಾಡುವುದು ಮತ್ತು ಅಲ್ಲಿ ಕನಿಷ್ಠ ಸವಲತ್ತುಗಳು ಇದೆಯೇ ಎಂಬುದನ್ನು ಪರಿಶೀಲಿಸುವುದು ಮಾತ್ರ ಒಳಪಡುತ್ತೆ.

ಮೇ 12ರಂದು ಕರಡು ಮಸೂದೆ ತಯಾರಿಸಿ ಸಮಿತಿ ಸದಸ್ಯರಿಗೆ ನೀಡಲಾಗಿತ್ತು. ಅದಕ್ಕೆ ಆಕ್ಷೇಪ ಸಲ್ಲಿಸಿಯಾಗಿತ್ತು. ಆದರೆ ಮಸೂದೆ ಮಂಡನೆಯಾದಾಗ ನಮ್ಮ ಸಮಿತಿ ತಯಾರಿಸಿ ನೀಡಿರುವ ವರದಿ ಕರಡು ಮಸೂದೆಗೆ ಸಂಪೂರ್ಣ ತದ್ವಿರುದ್ಧ ವಾದ ಮಸೂದೆಯನ್ನು ಆರೋಗ್ಯ ಸಚಿವರು ಮಂಡಿಸಿದ್ದರು.

ವೈದ್ಯರು ಪ್ರಶ್ನೆ ಕೇಳಿದರೆ ದಂಡ ವಿಧಿಸಲಾಗುತ್ತೆ ಅಂತೀರಲ್ಲ ಏನಿದು?

ಡಾ. ಎಸ್. ಕಕ್ಕಿಲ್ಲಾಯ: ಅದು ಪ್ರಸಕ್ತ ತಿದ್ದುಪಡಿ ಮಸೂದೆಯಲ್ಲಿ ರುವ ರೋಗಿಯ ಸನ್ನದು. ಪ್ರತಿಯೊಬ್ಬ ವೈದ್ಯ ತಮ್ಮ ರೋಗಿಯ ಸಂಪೂರ್ಣ ಸಮಸ್ಯೆ ಮತ್ತು ಕಳಕಳಿಗಳನ್ನು ಹೇಳುವುದನ್ನು ಮುಗಿಸುವುದಕ್ಕೇ ಮೊದಲೇ ವೈದ್ಯರು ಅಡಚಣೆ ಉಂಟು ಮಾಡದೆ ರೋಗಿ ತನ್ನ ತೃಪ್ತಿಗಾಗಿ ಹೇಳಿಕೊಳ್ಳುವ ಹಕ್ಕು. ಏನಿದರ ಅರ್ಥ, ನನಗೂ ಅರ್ಥವಾಗಿಲ್ಲ. ಅಂದರೆ, ಒಂದು ವೇಳೆ ಮಧ್ಯೆ ರೋಗಿಯಲ್ಲಿ ವೈದ್ಯ ಪ್ರಶ್ನೆ ಕೇಳಿದರೆ ಆತನಿಗೆ ದೂರು ನೀಡುವ ಅಧಿಕಾರ. ದೂರಿನ ಮೇಲೆ ವೈದ್ಯರಿಗೆ ದಂಡ ವಿಧಿಸಲಾಗುತ್ತದೆ. ಅಂದರೆ, ರೋಗಿಯ ಸಮಸ್ಯೆಗಳನ್ನು ಪ್ರಶ್ನಿಸದೆ ಆತ ಚಿಕಿತ್ಸೆ ನೀಡು ವುದು ಹೇಗೆ?

ರೋಗಿಗೆ ಅರ್ಥವಾಗುವ ಭಾಷೆಯಲ್ಲಿ ಮಾಹಿತಿಯನ್ನು ನೀಡುವುದು, ಅಂದರೆ?

ಡಾ. ಎಸ್. ಕಕ್ಕಿಲ್ಲಾಯ: ಅದೂ ಏನೆಂದು ಗೊತ್ತಿಲ್ಲ. ಅಂದರೆ ವೈದ್ಯರು ಎಲ್ಲಾ ಭಾಷೆಯನ್ನು ಕಲಿತಿರಬೇಕು. ಇಲ್ಲವಾದರೆ ರೋಗಿ ನನಗೆ ವೈದ್ಯ ಹೇಳಿದ್ದು ಅರ್ಥವಾಗಿಲ್ಲ ಎಂದು ದೂರು ನೀಡಬಹುದು. ಒಟ್ಟಾರೆ ಇವೆಲ್ಲಾ ಅಸಂಬದ್ಧವಾದುದು. ಇದು ರೋಗಿ ಮತ್ತು ವೈದ್ಯರನ್ನು ಒಬ್ಬರಿಗೊಬ್ಬರು ಎತ್ತಿಕಟ್ಟಿ ಜಿ.ಪಂ. ಸಿಇಒಗೆ ದೂರು ನೀಡಿ, ಅವರು ನ್ಯಾಯ ತೀರ್ಮಾನ ಮಾಡುವುದಾದರೆ ಮೆಡಿಕಲ್ ಕೌನ್ಸಿಲ್ ಇರುವುದಾದರೂ ಯಾತಕ್ಕೆ? ಪ್ರಥಮವಾಗಿ ಸಿಇಒ ಪರಿಧಿಯೊಳಗೆ ಯಾವ ವೈದ್ಯರೂ ಬರುವುದಿಲ್ಲ. ವೈದ್ಯರ ವೃತ್ತಿಪರ ಚಟುವಟಿಕೆಗಳು ಸಂಪೂರ್ಣ ಮೆಡಿಕಲ್ ಕೌನ್ಸಿಲ್ನ ವ್ಯಾಪ್ತಿಗೊಳಪಡುತ್ತವೆ. ವೈದ್ಯನ ಚಟುವಟಿಕೆಗಳು ಶಿಕ್ಷಾರ್ಹವಾದರೆ ಯಾವ ವೈದ್ಯನೂ ಕೆಲಸ ಮಾಡುವಂತಿಲ್ಲ. ಎಲ್ಲಾ ವೈದ್ಯರೂ ಆಡಿಯೋ ವೀಡಿಯೊ ಇಟ್ಟು ತಿರುಗಾಡಬೇಕಾದ ಪರಿಸ್ಥಿತಿ ಬರಬಹುದು. ನಾವು ಇದನ್ನು ವಿರೋಧಿಸುತ್ತೇವೆ.

ಬೇಕಾ ಬಿಟ್ಟಿಯಾಗಿ ದರ ನಿಗದಿಪಡಿಸುವ ಆಸ್ಪತ್ರೆಗಳಿಗೆ ದರ ನಿಯಂತ್ರಣ ಬೇಡವೆನ್ನುವಿರಾ?

ಡಾ. ಎಸ್. ಕಕ್ಕಿಲ್ಲಾಯ: ದರ ನಿಗದಿ ಇದರಿಂದ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಸಮಸ್ಯೆ ಆಗುವುದಿಲ್ಲ. ಇದೀಗ ಎಲ್ಲಾ ಸಣ್ಣ ಆಸ್ಪತ್ರೆ ಗಳಲ್ಲಿಯೂ ಅಲ್ಟ್ರಾ ಸೌಂಡ್, ಕಂಪ್ಯೂಟರ್, ಲ್ಯಾಪ್ರೋಸ್ಕೋಪಿ, ಎಂಡೋಸ್ಕ್ರೋಪಿ ಸಲಕರಣೆಗಳಿರುತ್ತವೆ. ಆದರೆ ಇದರ ದರ ಕಾರ್ಪೊರೇಟ್ ಆಸ್ಪತ್ರೆಗಳಿಗಿಂತ ಭಿನ್ನವಾಗಿರುವುದಿಲ್ಲ. ಬೆಸ್ಟ್ ಆಫ್ ಟೆಕ್ನಾಲಜಿ. ಪರಿಕರಗಳ ಬೆಲೆ ಸಾಮಾನ್ಯವಾಗಿ ಒಂದೇ ಆಗಿರುತ್ತದೆ. ಅದಕ್ಕೆ ಮಾಡುವ ವೆಚ್ಚ ಸಮವಾಗಿರುತ್ತದೆ. ಕಟ್ಟಡ ವೆಚ್ಚದಲ್ಲಿ ಕಾರ್ಪೊರೇಟ್ ಹಾಗೂ ಸಣ್ಣ ಹಾಗೂ ಮಧ್ಯಮ ಆಸ್ಪತ್ರೆಗಳ ಮಧ್ಯೆ ವ್ಯತ್ಯಾಸವಿರುತ್ತದೆ. ಆದರೆ ಕಾರ್ಪೊರೇಟ್ ಹಾಗೂ ಸಣ್ಣ ಮತ್ತು ಮಧ್ಯಮ ಆಸ್ಪತ್ರೆಗಳ ನಡುವಿನ ಆದಾಯಕ್ಕೂ ವ್ಯತ್ಯಾಸವಿರುತ್ತದೆ.

ವೈದ್ಯಕೀಯ ತಂತ್ರಜ್ಞಾನ ಇಂದು ಕ್ಷಿಪ್ರಗತಿಯಲ್ಲಿ ಬೆಳವಣಿಗೆಯಾಗುತ್ತಿದೆ. ವರ್ಷಕ್ಕೊಂದು ಹೊಸ ಮೆಶಿನ್ ಬರುತ್ತದೆ. 3 ವರ್ಷದ ಹಿಂದಿನ ಸಿಟಿ ಸ್ಕಾನರ್ ಇಂದು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಡಯಾಗ್ನೋಸಿಸ್ ಮಾಡಲು ಸಾಧ್ಯವಾಗುವುದಿಲ್ಲ.

ಅಂಡರ್ ಸ್ಟಾಂಡಿಗ್ ಆಫ್ ಸ್ಟ್ರೋಕ್ ಆಯಂಡ್ ಟ್ರೀಟ್ಮೆಂಟ್ ಕೂಡಾ ಇಂದು ಬದಲಾಗಿದೆ. ಬ್ರೇನ್ ಸರ್ಜರಿ… ಎಲ್ಲವೂ ಬದಲಾಗಿದೆ. ಹಿಂದೆ ದೇಹದ ಭಾಗಗಳನ್ನು ಕೊಯ್ದು ಮಾಡುವ ಸರ್ಜರಿಗಳನ್ನು ಇಂದು ಸಣ್ಣ ರಂಧ್ರ ಮಾಡಿ ಮಾಡಲಾಗುತ್ತಿದೆ. ಅಂತಹ ತಂತ್ರಜ್ಞಾನದ ಉಪಕರಣಗಳನ್ನು ಇಂದು ಸಣ್ಣ ಆಸ್ಪತ್ರೆಗಳಲ್ಲೂ ಅಳವಡಿಸಲಾಗುತ್ತಿದೆ. ಸಣ್ಣ ಸಣ್ಣ ವೈದ್ಯರೂ ತಮ್ಮ ಆಸಕ್ತಿಯನ್ನು ಹೊಸ ಆವಿಷ್ಕಾರಕ್ಕೆ ತಕ್ಕುದಾಗಿ ತಮ್ಮ ತಂತ್ರಜ್ಞಾನವನ್ನು ಹೆಚ್ಚಿಸಿಕೊಂಡು ಕಲಿತುಕೊಂಡು, ಸ್ವಂತ ಖರ್ಚಿನಲ್ಲಿ ಅದಕ್ಕೆ ತಕ್ಕುದಾದ ಉಪಕರಣಗಳನ್ನು ಖರೀದಿಸಿ ರೋಗಿಗಳಿಗೆ ಒದಗಿಸುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ದೊಡ್ಡ ಆಸ್ಪತ್ರೆಗೆ ಹೆಚ್ಚಿನ ದರವನ್ನು ವಿಧಿಸಿ, ಸಣ್ಣ ಆಸ್ಪತ್ರೆಗೆ ಕಡಿಮೆ ದರವನ್ನು ವಿಧಿಸಿದರೆ ಸಣ್ಣ ಆಸ್ಪತ್ರೆಗಳು ಕೆಲಸ ಮಾಡಲು ಸಾಧ್ಯವಿಲ್ಲ. ಸಣ್ಣ ಆಸ್ಪತ್ರೆಯವರು ಉಪಕರಣಗಳಿಗೆ ಸಾಲ ಮಾಡಿದ್ದನ್ನು ತೀರಿಸಬೇಡವೇ. ನಿರ್ವಹಣೆ ಮಾಡಬೇಡವೇ?

ಅಂದರೆ ಕಾರ್ಪೊರೇಟ್ ಆಸ್ಪತ್ರೆಗಳು ತಮಗಿಷ್ಟ ಬಂದ ದರ ವಿಧಿಸಬಹುದು ಎನ್ನುತ್ತೀರಾ?

ಡಾ. ಎಸ್. ಕಕ್ಕಿಲ್ಲಾಯ: ಕಾರ್ಪೊರೇಟ್ ಆಸ್ಪತ್ರೆಗಳ ಬಗ್ಗೆ ನನಗೆ ಯಾವುದೇ ಸಹಾನುಭೂತಿಯೂ ಇಲ್ಲ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದೇ ಅಂತಹ ಆಸ್ಪತ್ರೆಗಳ ದರೋಡೆಕೋರ ನೀತಿಯಿಂದ. ಆದರೆ ವಾಸ್ತವದಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳನ್ನು ಸಾಕುತ್ತಿರುವುದು ಇದೇ ಸರಕಾರ.

ಬೆಂಗಳೂರಿನ ಹೃದಯ ಭಾಗದಲ್ಲಿ ವೈದ್ಯರೊಬ್ಬರು ಹೃದಯಾಲಯವನ್ನು ತೆರೆಯುವುದಾದರೆ, ಸರಕಾರ ಎಕರೆಗಟ್ಟಲೆ ಜಾಗವನ್ನು ಬೋರಿಂಗ್ ಆಸ್ಪತ್ರೆ ಪಕ್ಕದಲ್ಲಿ ಬಿಟ್ಟುಕೊಡಲು ತಯಾರಾಗುತ್ತದೆ. ಹಳ್ಳಿಗಳಿಗೆ ವೈದ್ಯರು ಬರುವುದಿಲ್ಲ ಎಂಬುದು ಸರಕಾರದ ಆರೋಪ. ಹಾಗಿರುವಾಗ, ಕೋಟಿಗಟ್ಟಲೆ ದುಡ್ಡು ಇರುವವರಿಗೆ ಸರಕಾರ ಜಾಗ ನೀಡಬೇಕಾಗಿಲ್ಲ. ಅವರಿಗೆ ಬ್ಯಾಂಕ್ ನವರು ಸಾಲ ಕೂಡಾ ಕೊಡುತ್ತಾರೆ. ಹಳ್ಳಿಯ ಆಸ್ಪತ್ರೆಯಲ್ಲಿ ಸರ್ಜನ್ ಒಬ್ಬ ಆಸ್ಪತ್ರೆ ಮಾಡುತ್ತೇನೆ ಎಂದಾದರೆ, ಹತ್ತಿಪ್ಪತ್ತು ಸೆಂಟ್ಸ್ ಜಾಗ ಕೇಳಿದರೆ ಅದನ್ನು ಕೊಡಬೇಕು. ಅವನಿಗೆ ಶೇ. 4 ದರದಲ್ಲಿ ಸಾಲ ನೀಡಬೇಕು. ಅದನ್ನು ಸರಕಾರ ಮಾಡುತ್ತಿಲ್ಲ. ಸರಕಾರದ ವೈದ್ಯಕೀಯ ನೀತಿಯೇ ಉಲ್ಟಾ.

ಆಸ್ಪತ್ರೆಗಳು ದುಡ್ಡಿಗಾಗಿ ರೋಗಿಗಳನ್ನು ಪೀಡಿಸುತ್ತವೆ ಎಂಬ ಆರೋಪವಿದೆಯಲ್ಲಾ?

ಡಾ. ಎಸ್. ಕಕ್ಕಿಲ್ಲಾಯ: ಆಸ್ಪತ್ರೆಯಲ್ಲಿ ಹೆಣ ಇಟ್ಟುಕೊಂಡು ದುಡ್ಡು ಮಾಡುತ್ತಾರೆ. ಹೆಣಕ್ಕೆ ವೆಂಟಿಲೇಶನ್ ಮಾಡುತ್ತಾರೆ ಎಂದು ದೂರಲಾಗುತ್ತದೆ. ಈ ಬಗ್ಗೆ ಸಮಿತಿ ಸಭೆಯಲ್ಲೂ ಆಕ್ಷೇಪ ವ್ಯಕ್ತವಾಗಿತ್ತು. ಆ ಬಗ್ಗೆ ದೂರು ನೀಡಲಾಗಿದೆಯಾ ಎಂದು ನಾನು ಪ್ರಶ್ನಿಸಿದ್ದೆ. ಉತ್ತರ ಸಿಗಲಿಲ್ಲ. ಹೆಣಕ್ಕೆ ವೆಂಟಿಲೇಶನ್ ಮಾಡುವುದು ಹೇಗೆ ಹೇಳಿ ನಾವೂ ಕಲಿಯುತ್ತೇವೆ ಎಂದರೆ ಅದಕ್ಕೂ ನಿರುತ್ತರ. ಸತ್ತ ಅರ್ಧ ಗಂಟೆಯಲ್ಲಿ ದೇಹ ದೃಢಗೊಳ್ಳುತ್ತದೆ. ಅದಕ್ಕೆ ವೆಂಟಿಲೇಶನ್ ಕೊಡುವುದು ಹೇಗೆ? ಅದು ಒಳ ಹೋಗುತ್ತದೆಯೇ? ಆದರೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಮರಣ ಹೊಂದಿದ ಮೇಲೆ ಹಣವೇ ಪಡೆಯಬಾರದೆಂದರೆ ಅರ್ಥವೇನು? ವೆಂಟಿಲೇಟ್, ಡಯಾಲಿಸ್ ಮಾಡಿದ ಖರ್ಚನ್ನು ಆಸ್ಪತ್ರೆ ಭರಿಸಲು ಸಾಧ್ಯವೇ? ಪ್ರತಿಯೊಂದಕ್ಕೂ ವೈದ್ಯರ ಮೇಲೆ ಗೂಬೆ ಕೂರಿಸಲಾಗದು. ರೋಗಿಯ ಕಡೆಯಿಂದಲೂ ತಪ್ಪಾಗಿರಬಹುದಲ್ಲವೇ.

ಸಣ್ಣ, ಮಧ್ಯಮ ಹಾಗೂ ಕಾರ್ಪೊರೇಟ್ ಆಸ್ಪತ್ರೆಗಳ ವ್ಯತ್ಯಾಸ ಸ್ಪಷ್ಟಪಡಿಸುವಿರಾ?

ಡಾ. ಎಸ್. ಕಕ್ಕಿಲ್ಲಾಯ: ಗ್ರಾಮಾಂತರ ಪ್ರದೇಶಗಳಲ್ಲಿ ಆರೇಳು ಸಾವಿರ ರೂ. ದರದಲ್ಲಿ ಸಿಸೇರಿಯನ್ ನಡೆಸುವ ಆಸ್ಪತ್ರೆಗಳು ಇಂದಿಗೂ ನಮ್ಮಲ್ಲಿವೆ. 50ರಿಂದ 60 ಹಾಸಿಗೆಗಳ ವ್ಯವಸ್ಥೆಯಲ್ಲಿ ಇವು ಕಾರ್ಯನಿರ್ವಹಿಸುತ್ತವೆ. ಅಲ್ಲಿ ಸ್ಪೆಷಲ್ ವಾರ್ಡ್ ಗಳಲ್ಲಿ ಇರುವ ರೋಗಿಗಳಿಗೆ ಸ್ವಲ್ಪ ಹೆಚ್ಚು ಚಾರ್ಜ್ ಮಾಡಿ, ಜನರಲ್ ವಾರ್ಡ್ನವರಿಗೆ ಸ್ವಲ್ಪ ಕಡಿಮೆ ಚಾರ್ಜ್ ಮಾಡುತ್ತಾರೆ. ಹೊಸ ಉಪಕರಣಗಳಿಂದ ಅವರಿಗೆ ನಷ್ಟವಾಗುತ್ತದೆ. ಆದರೆ ಫಾರ್ಮಸಿ ಮತ್ತು ಲ್ಯಾಬ್ ನಲ್ಲಿ ಅವರಿಗೆ ಸ್ವಲ್ಪ ಆದಾಯವಾಗುತ್ತದೆ. ಈ ರೀತಿಯಾಗಿ ಸಣ್ಣ ಹಾಗೂ ಮಧ್ಯಮ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತವೆ. ಕಾರ್ಪೊರೇಟ್ ಆಸ್ಪತ್ರೆಗಳು ನೂರಾರು ಎಕರೆಯಲ್ಲಿ, ಅದೂ ಸರಕಾರದ ಕೊಡುಗೆಯೊಂದಿಗೆ ಕಾರ್ಯ ನಿರ್ವಹಿಸುತ್ತವೆ.

ಪ್ರಸಕ್ತ ತಿದ್ದುಪಡಿ ಮಸೂದೆ ಜಾರಿಗೊಂಡರೆ, ಇದುವರೆಗೆ ದಂಧೆ, ದರೋಡೆ ಮಾಡುತ್ತಿರುವ ಕಾರ್ಪೊರೇಟ್ ಆಸ್ಪತ್ರೆಗಳು ಇನ್ನೂ ಕೊಬ್ಬಲಿವೆ. ಅವರ ದರದಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ. ಮಾತ್ರವಲ್ಲ ಇನ್ಫ್ಲುಯೆನ್ಸ್ ಮಾಡಿ ದರ ನಿಗದಿ ಮಾಡುವ ಸಾಮರ್ಥ್ಯ ಕಾರ್ಪೊರೇಟ್ ಆಸ್ಪತ್ರೆಗಳಿರುತ್ತದೆ.

ಸಣ್ಣ ಹಾಗೂ ಮಧ್ಯಮ ಆಸ್ಪತ್ರೆಗಳು ನಾಶವಾದರೆ, ಪ್ರಯೋಜನವಾಗುವುದು ಕಾರ್ಪೊರೇಟ್ ಆಸ್ಪತ್ರೆಗಳಿಗೆ. ಅದಕ್ಕಾಗಿಯೇ ಇಷ್ಟು ನಿರ್ಬಂಧಗಳನ್ನು ಹೇರಲಾಗುತ್ತಿದೆ. ಸಣ್ಣ ಆಸ್ಪತ್ರೆಗಳನ್ನು ಮುಚ್ಚಿ ಕಾರ್ಪೊರೇಟ್ ಆಸ್ಪತ್ರೆಗಳನ್ನು ಸಾಕುವುದು. ಅದನ್ನು ನಿನ್ನೆ ಸಚಿವರೇ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾ ಆಸ್ಪತ್ರೆಗಳಿಗೆ ಕಟ್ಟಡ ಕಟ್ಟಿ ವ್ಯವಸ್ಥೆಗಳನ್ನು ಒದಗಿಸಿ, ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಾಗಿ ಕಾರ್ಪೊರೇಟ್ ಆಸ್ಪತ್ರೆಗಳಿಗೆ ವಹಿಸಿಕೊಡಲಾಗುವುದು ಎಂಬುದು ಅವರ ಹೇಳಿಕೆಯಾಗಿತ್ತು. ಒಂದು ಕಡೆ ಖಾಸಗಿ ಆಸ್ಪತ್ರೆಗಳು ದುಡ್ಡು ಕೊಳ್ಳೆಹೊಡೆಯುತ್ತಿವೆ. ದರೋಡೆ ಮಾಡುತ್ತಿವೆ ಎನ್ನುತ್ತಾರೆ. ಮತ್ತೊಂದೆಡೆ ಸರಕಾರಿ ಆಸ್ಪತ್ರೆಯನ್ನೇ ಅವರಿಗೆ ಬಿಟ್ಟು ಕೊಡುತ್ತಾರೆ.

ಸರಕಾರದ ತನ್ನ ಮಸೂದೆ ಜನಪರ ಎನ್ನುತ್ತಿದೆಯಲ್ಲಾ?

ಡಾ. ಎಸ್. ಕಕ್ಕಿಲ್ಲಾಯ: ಇದಕ್ಕೆ ಸಚಿವರು ಉತ್ತರಿಸಬೇಕು. ಇದನ್ನು ಅವರು ಜನಪರ ಎನ್ನುವುದಿದ್ದರೆ, ನ್ಯಾ. ವಿಕ್ರಮ್ ಜಿತ್ ವರದಿ ಜನವಿರೋಧಿಯೇ ಎಂಬುದನ್ನು ಅವರು ಹೇಳಬೇಕು. ಇದು ಅವರ ವರದಿಗೆ ಸಂಪೂರ್ಣ ತದ್ವಿರುದ್ಧವಾದುದು. ಜನವಿರೋಧಿ ವರದಿ ನೀಡಿರುವುದಾಗಿ ಅವರು ಬಾಯಿ ಬಿಟ್ಟು ಹೇಳಲಿ. ಅವರೇ ನೇಮಕ ಮಾಡಿದ ವಿಕ್ರಮ್ ಜಿತ್ ಸೇನ್, ಅವರೇ ನೇಮಕ ಮಾಡಿದ ಸದಸ್ಯರು. ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅದನ್ನು ಸ್ವೀಕರಿಸಲಾಗಿದೆ ಎಂದು ಹೇಳಿ 15 ದಿನಗಳಲ್ಲಿ ತದ್ವಿರುದ್ಧವಾದ ಮಸೂದೆ ಮಂಡಿಸಿ ಇದು ಜನಪರ ಎಂದು ಹೇಳುವುದಾದರೆ ಸಮಿತಿ ವರದಿ ಜನವಿರೋಧಿಯೇ? ಹಾಗಾದರೆ ಯಾವ ರೀತಿ ಯಲ್ಲಿ ಜನವಿರೋಧಿ ಎಂದು ತಿಳಿಸಲಿ. ಸರಕಾರಿ ಆಸ್ಪತ್ರೆಗಳನ್ನು ಮುಚ್ಚಿಸುವುದು ಯಾವ ರೀತಿಯಲ್ಲಿ ಜನಪರ?

ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರಕಾರ ವಿಫಲರಾಗಿರುವುದರಿಂದಲೇ ಜನ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಯಾವ ಖಾಸಗಿ ಆಸ್ಪತ್ರೆ ಕೂಡಾ ಉಚಿತವಾಗಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಅಷ್ಟೊಂದು ಹೂಡಿಕೆ ಮಾಡಿ, ಉಚಿತ ಚಿಕಿತ್ಸೆಯ ನಿರೀಕ್ಷೆ ಯಾವ ನ್ಯಾಯ?

ಅಂದರೆ, ನಿಮ್ಮ ಪ್ರಕಾರ ಇದಕ್ಕೇನು ಪರಿಹಾರ?

ಡಾ. ಎಸ್. ಕಕ್ಕಿಲ್ಲಾಯ: ಸಣ್ಣ ಮತ್ತು ಮಧ್ಯಮ ಆಸ್ಪತ್ರೆಗಳು ಈಗಾಗಲೇ ಕಷ್ಟದಲ್ಲಿ ನಡೆಸಲ್ಪಡುತ್ತಿವೆ. ಸರಕಾರದ ಯೋಜನೆಗಳು ಯಶಸ್ವಿನಿ, ಆರೋಗ್ಯಶ್ರೀ, ಸಣ್ಣ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ. ಯಾವುದೇ ಸಣ್ಣ ಆಸ್ಪತ್ರೆ ಸರಕಾರಿ ನಿಯಮಗಳಡಿ ನೋಂದಣಿ ಆಗಿದ್ದಲ್ಲಿ ಅವರಿಗೆ ಪ್ರಮಾಣ ಪತ್ರವಿರುತ್ತದೆ. ಹಾಗಿದ್ದಲ್ಲಿ ಸರಕಾರಿ ಸೌಲಭ್ಯಗಳನ್ನು ಒದಗಿಸಲು ಏನು ಕಷ್ಟ? ರೋಗಿಗೆ, ತನ್ನ ಸ್ಥಳೀಯ ವೈದ್ಯನಿಂದಲೇ ಕಡಿಮೆ ವೆಚ್ಚದಲ್ಲಿ ಸೌಲಭ್ಯ ದೊರೆಯುತ್ತದೆ.

ಕಳೆದ ಐದು ವರ್ಷಗಳಲ್ಲಿ ಯಶಸ್ವಿನಿ ಸ್ಕೀಮ್ ಒಂದರಲ್ಲಿ 500 ಕೋಟಿ ಅಧಿಕ ಹಣವನ್ನು 20 ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಸರಕಾರ ನೀಡಿದೆ. ಅದರಲ್ಲಿ ಶೇ. 60ರಷ್ಟು ಹಣ ಒಂದು ಗ್ರೂಪಿನ ಆಸ್ಪತ್ರೆಗಳಿಗೆ ಸಂದಾಯವಾಗಿದೆ. ಇದೇ ಕೋಟಿಗಟ್ಟಲೆ ಹಣವನ್ನು ಸರಕಾರಿ ಆಸ್ಪತ್ರೆಗಳಿಗೆ ವ್ಯಯಿಸಬಹುದಿತ್ತಲ್ಲ? ಒಂದು ವರ್ಷ 10 ಕೋಟಿ ರೂ. ವೆನ್ಲಾಕ್ ಜಿಲ್ಲಾಸ್ಪತ್ರೆಗೆ ನೀಡಿ. ಇನ್ನೊಂದು ವರ್ಷ ಮೆಗ್ಗಾನ್ ಗೆ ನೀಡಿ. ಅದೇ ರೀತಿ ಮಾಡಿ ಉಪಕರಣ ನೀಡಿ, ಅವರಿಗೆ ಸ್ವಾತಂತ್ರ ನೀಡಿ. ಸರಕಾರಿ ಆಸ್ಪತ್ರೆಗಳನ್ನು ವಿಕೇಂದ್ರೀಕರಣಗೊಳಿಸಲಿ. ಪ್ರಾಥರ್ಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆಗಳನ್ನು ಪಂಚಾಯತ್ ಗಳಿಗೆ ವಹಿಸಿಕೊಡಲಿ. ಒಂದನೇ ಮೂರು ಭಾಗ ಹಣ ರಾಜ್ಯ ಸರಕಾರ ನೀಡಲಿ. ಇನ್ನೊಂದು ಭಾಗ ಸ್ಥಳೀಯಾಡಳಿತ, ಸ್ಥಳೀಯ ಜನರು ನೀಡಲಿ. ತಮ್ಮಲ್ಲಿಯ ಆಸ್ಪತ್ರೆಯೊಂದು ಉದ್ಧಾರವಾಗುವುದಾದರೆ ಅದಕ್ಕೆ ಸ್ಥಳೀಯರು ಖಂಡಿತಾ ಮುಂದೆ ಬರುತ್ತಾರೆ. ಸ್ಥಳೀಯ ವೈದ್ಯರನ್ನು ನೇಮಕ ಮಾಡಲಿ. ಜನರು ಭಾಗವಹಿಸಿದಾಗ ಆಸ್ಪತ್ರೆ ಉತ್ತಮವಾಗುತ್ತದೆ. ಆದರೆ ಇದರಲ್ಲಿ ಪಾರದರ್ಶಕತೆ ಬೇಕು.

ಸಣ್ಣ ಆಸ್ಪತ್ರೆಗಳಿಗೆ ಪ್ರೋತ್ಸಾಹ ನೀಡಿ. ಡಾ. ಅನುಪಮ ಸೇರಿದಂತೆ ಮುಚ್ಚಿರುವ ಅಂತಹ ಆಸ್ಪತ್ರೆಗಳನ್ನು ಮತ್ತೆ ತೆರೆಯಲು ಸರಕಾರ ಬದ್ಧತೆ ಪ್ರದರ್ಶಿಸಿ ಪ್ರೋತ್ಸಾಹಿಸಲಿ. ಈಗಾಗಲೇ ಕಾರ್ಪೊರೇಟ್ ಸಂಸ್ಥೆಗೆ ನಮ್ಮ ಉಡುಪಿ ಆಸ್ಪತ್ರೆ ನೀಡಿಯಾಗಿದೆ. ವೆನ್ಲಾಕ್ ಆಸ್ಪತ್ರೆಯನ್ನೂ ಮತ್ತೆ ಖಾಸಗಿ ಒಡೆತನಕ್ಕೆ ನೀಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆಲ್ಲಾ ಕಡಿವಾಣ ಬೀಳಲಿ.

ಸರಕಾರದಿಂದ ಆಯುಷ್ ಉತ್ತೇಜನದ ಬಗ್ಗೆ ನಿಮ್ಮ ಅಭಿಪ್ರಾಯ?

ಡಾ. ಎಸ್. ಕಕ್ಕಿಲ್ಲಾಯ: ಆಯುಷ್ ಗೆ ಖರ್ಚಾಗುವುದು ರಾಷ್ಟ್ರೀಯ ಆರೋಗ್ಯ ಮಿಶನ್ ಹಣ. ಅದಕ್ಕೆ ಪ್ರತ್ಯೇಕ ಬಜೆಟ್. ಅದರಲ್ಲಿ ಎಷ್ಟು ಬೇಕಾದರೂ ಹಣ ಮಾಡಬಹುದು. ಇತ್ತೀಚೆಗೆ ಗರ್ಭಿಣಿಯರ ತಲಾ 9 ಸಾವಿರ ರೂ. ವೌಲ್ಯದ ಕಿಟ್ ಗಾಗಿ 9 ಕೋಟಿ ಖರ್ಚು ಮಾಡಲಾಗಿದೆ. ಗರ್ಭಿಣಿಯರ ಆರೈಕೆ ಮಾಡುವುದು ಅಲೋಪತಿ ವೈದ್ಯರು. ಆಯುರ್ವೇದದವರಿಂದ ಡೆಲಿವರಿ ವ್ಯವಸ್ಥೆಯೇ ಇಲ್ಲ. ಆದರೆ ಕಿಟ್ ಕೊಡುವುದು ಆಯುಷ್ ನವರು. ಹೇಳುವವರೂ ಇಲ್ಲ ಕೇಳುವವರೂ ಇಲ್ಲ.

ಆಯುಷ್ ನವರಿಗೆ ತರಬೇತಿ ನೀಡುವ ನಿರ್ಧಾರದ ವಿರುದ್ಧ ಈಗಾಗಲೇ ರಿಟ್ ಅರ್ಜಿ ಸಲ್ಲಿಸಲಾಗಿದೆ. ಅಲೋಪತಿ ವೈದ್ಯರು ಮಾತ್ರವೇ ಅಲೋಪತಿ ಚಿಕಿತ್ಸೆ ಒದಗಿಸಬೇಕು. ಆಯುರ್ವೇದದಿಂದ ತುರ್ತು ಚಿಕಿತ್ಸೆಯೂ ಲಭ್ಯವಿಲ್ಲ. ಈ ಪದ್ಧತಿಯಡಿ ತುರ್ತು ಚಿಕಿತ್ಸೆ ಬಗ್ಗೆ ತರಬೇತಿಯೂ ಇಲ್ಲ. ಹೃದಯಾಘಾತವಾದವರು, ಫಿಟ್ಸ್ ನವರು ಅಲ್ಲಿಗೆ ಹೋಗಲು ಸಾಧ್ಯವೇ?

ಖಾಸಗಿ ವೈದ್ಯರ ವಿರೋಧಕ್ಕೆ ಮನ್ನಣೆ ಸಿಗುವ ಭರವಸೆ ಇದೆಯೇ?

ಡಾ. ಎಸ್. ಕಕ್ಕಿಲ್ಲಾಯ: ರಾಜ್ಯದ ವೈದ್ಯರೆಲ್ಲಾ ಸೇರಿ ಬೆಂಗಳೂರಿನಲ್ಲಿ ಬೀದಿಗಿಳಿದು ಪ್ರತಿಭಟಿಸಿದ್ದೇವೆ. ಎಲ್ಲಾ ಸಚಿವರು, ಶಾಸಕರು, ಅಧಿಕಾರಿಗಳನ್ನು ಭೇಟಿ ಮಾಡಿ ನಮ್ಮಿಂದಾಗುವ ಪ್ರಯತ್ನ ಮಾಡಿದ್ದೇವೆ. ಇದು ಹುಚ್ಚು ಕಾನೂನು, ಯಾವ ವೈದ್ಯನೂ ಪ್ರಾಕ್ಟೀಸ್ ಮಾಡಲು ಸಾಧ್ಯವಿಲ್ಲ. ರೋಗಿಯಲ್ಲಿ ಮಾತನಾಡಿದ ಕೂಡಲೇ ದಂಡ ಕಟ್ಟುವ ಕಾನೂನು ಪ್ರಪಂಚದ ಎಲ್ಲಿಯೂ ಇಲ್ಲ. ಅದನ್ನು ವಾಪಾಸು ಪಡೆಯಿರಿ. ಪ್ರತಿಷ್ಠೆಯ ವಿಷಯವನ್ನಾಗಿಸಬೇಡಿ ಎಂದು ಸರಕಾರವನ್ನು ಆಗ್ರಹಿಸಿದ್ದೇವೆ.

ಎಲ್ಲ ವೈದ್ಯರೂ ಕಳ್ಳರಲ್ಲ

ಪ್ರಜಾವಾಣಿ, ನವೆಂಬರ್ 13, 2017 ಇಲ್ಲಿದೆ: https://www.prajavani.net/news/article/2017/11/13/532626.html

ರಾಜ್ಯದ ಖಾಸಗಿ ವೈದ್ಯರನ್ನು ಮಣಿಸಲು ಕೆಪಿಎಂಇ ಕಾಯಿದೆಗೆ ತಿದ್ದುಪಡಿ ಮಾಡಲು ಸರಕಾರವು ಮುಂದಾಗಿದೆ. ವೈದ್ಯರು ಯಾವುದೇ ನಿಯಂತ್ರಣಕ್ಕೊಳಪಡಲು ಸಿದ್ಧರಿಲ್ಲ, ಅವರ ಕುಕೃತ್ಯಗಳನ್ನು ಶಿಕ್ಷಿಸುವುದಕ್ಕೆ ಈಗ ಯಾವ ವ್ಯವಸ್ಥೆಯೂ ಇಲ್ಲ, ವೈದ್ಯರ ಧನದಾಹವು ಮಿತಿಮೀರಿದ್ದು ಅದನ್ನು ಸರಕಾರವು ನಿರ್ಬಂಧಿಸಲೇ ಬೇಕು, ಆದ್ದರಿಂದ ಇಂತಹಾ ಕಾನೂನು ಅತ್ಯಗತ್ಯ ಎನ್ನುವುದು ಕೆಪಿಎಂಇ ಕಾಯಿದೆಗೆ ತಿದ್ದುಪಡಿ ಬೇಕು ಎನ್ನುವವರ ವಾದಗಳಾಗಿವೆ. ಆದರೆ, ವಾಸ್ತವದಲ್ಲಿ, ಸರಕಾರದ ನಿರ್ಲಕ್ಷ್ಯದಿಂದ ಸಾರ್ವಜನಿಕ ಆರೋಗ್ಯ ಸೇವೆಗಳು ನೆಲ ಕಚ್ಚಿದ್ದು, ಶೇ. 80ರಷ್ಟು ಜನರು ಖಾಸಗಿ ಆರೋಗ್ಯ ಸೇವೆಗಳಿಗೆ ಖರ್ಚು ಮಾಡಬೇಕಾದ ಕಷ್ಟಕ್ಕೆ ಸಿಲುಕಿರುವಾಗ, ಅದನ್ನೆಲ್ಲ ಮರೆಮಾಚಲು ಚುನಾವಣೆಯ ವೇಳೆ ಈ ತಿದ್ದುಪಡಿಗಳ ಆಮಿಷವನ್ನು ಒಡ್ಡಲಾಗುತ್ತಿದೆ.
ನವೆಂಬರ್ ಏಳರಂದು ಆರೋಗ್ಯ ಸಚಿವರು ನೀಡಿರುವ ಹೇಳಿಕೆಯಲ್ಲಿ, ಗ್ರಾಹಕರ ವೇದಿಕೆಗಳು ದೂರುಗಳನ್ನು ಪರಿಹರಿಸಲು ದೀರ್ಘ ಸಮಯವನ್ನು ತೆಗೆದುಕೊಳ್ಳುವುದರಿಂದ, ವೈದ್ಯರನ್ನು 45 ದಿನಗಳೊಳಗೆ ಕ್ಷಿಪ್ರ ವಿಚಾರಣೆಗೆ ಒಳಪಡಿಸುವುದಕ್ಕಾಗಿ ಜಿಲ್ಲಾ ಮಟ್ಟದ ಕುಂದುಕೊರತೆಗಳ ಸಮಿತಿಗಳನ್ನು ರಚಿಸಲು ಈ ತಿದ್ದುಪಡಿಗಳನ್ನು ತರಲಾಗುತ್ತಿದೆ ಎಂದಿದ್ದಾರೆ.

ತೀರಾ ನಿರಾಧಾರವಾದ ಈ ಒಂದೇ ಹೇಳಿಕೆಯು ಸಾಂವಿಧಾನಿಕ ವ್ಯವಸ್ಥೆಯನ್ನು ಅಪಮಾನಿಸಿ, ಬುಡಮೇಲು ಮಾಡುವ ದುರುದ್ದೇಶವನ್ನು ಎತ್ತಿ ತೋರಿಸುತ್ತದೆ. ರಾಜ್ಯದ ವೈದ್ಯರು ಇಂತಹಾ ದುರುದ್ದೇಶದ ವಿರುದ್ದವೇ ಪ್ರತಿಭಟನೆಗೆ ಇಳಿದಿದ್ದಾರೆ.

ಕೆಪಿಎಂಇ ತಿದ್ದುಪಡಿಗೆಂದು ಇದೇ ಸರಕಾರವು ನೇಮಿಸಿದ್ದ ನ್ಯಾ. ವಿಕ್ರಂಜಿತ್ ಸೆನ್ ಸಮಿತಿಯು ಗ್ರಾಹಕರ ವೇದಿಕೆಗಳಲ್ಲಿ ಪರಿಹಾರ ಪಡೆಯುವ ಅವಕಾಶಗಳು ಇರುವ ಕಾರಣಕ್ಕೇ ಜಿಲ್ಲಾ ಸಮಿತಿಯ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. ವೈದ್ಯರನ್ನು ನಿಯಂತ್ರಿಸಲು ವೃತ್ತಿಸಂಹಿತೆ, ವೈದ್ಯಕೀಯ ಪರಿಷತ್ತಿನ ನಿಯಮಗಳು, ಗ್ರಾಹಕರ ರಕ್ಷಣಾ ಕಾಯಿದೆ, 2007ರ ಕೆಪಿಎಂಇ ಕಾಯಿದೆ, ವೈದ್ಯ ವೃತ್ತಿಗೆ ಸಂಬಂಧಿಸಿದ ಹಾಗೂ ಇನ್ನೂ ಹಲವು ಕಾನೂನುಗಳು ಇರುವುದರಿಂದ ಹೊಸ ಸಮಿತಿಯ ಅಗತ್ಯವಿಲ್ಲ ಎನ್ನುವುದು ಕಾನೂನು ತಜ್ಞರ ಅಭಿಮತವೂ ಆಗಿತ್ತು. ಅವೆಲ್ಲ ಏನಾದವು?

ಗ್ರಾಹಕರ ವೇದಿಕೆಗಳ ಬಗ್ಗೆ ಹೇಳಿರುವುದೂ ಸುಳ್ಳು. ಈ ಮೇ 31 ರವರೆಗೆ 31 ಜಿಲ್ಲಾ ಗ್ರಾಹಕ ವೇದಿಕೆಗಳಲ್ಲಿ ಶೇ. 95ರಷ್ಟು, ಹಾಗೂ ರಾಜ್ಯ ಆಯೋಗದಲ್ಲಿ ಶೇ. 84ರಷ್ಟು ಪ್ರಕರಣಗಳು ಈಗಾಗಲೇ ಪರಿಹರಿಸಲ್ಪಟ್ಟಿವೆ. ಸರಾಸರಿ ಶೇ. 10-12ರಷ್ಟು ವೈದ್ಯಕೀಯ ನಿರ್ಲಕ್ಷ್ಯದ ದೂರುಗಳಾಗಿದ್ದು, 23.5 ಲಕ್ಷ ರೂ ಪರಿಹಾರವನ್ನು ನೀಡಿದ ನಿದರ್ಶನವೂ ಇದೆ. ಆಯೋಗಕ್ಕೆ ಬಸವ ಭವನದ ಮೂಲೆಯಲ್ಲಿ ಈ ಸರಕಾರ ಒದಗಿಸಿರುವ ಸಣ್ಣ ಕೊಠಡಿಯ ಇಕ್ಕಟ್ಟಿನಲ್ಲೂ 3 ಸದಸ್ಯರು ತಿಂಗಳಿಗೆ 200 ಪ್ರಕರಣಗಳನ್ನು ಪರಿಹರಿಸುತ್ತಿದ್ದಾರೆ. ವೈದ್ಯರ ಕತ್ತು ಹಿಸುಕುವ ಕಾನೂನು ತರಲೆಂದು ಆಯೋಗವನ್ನು ಅವಮಾನಿಸುವ ಬದಲು ದೊಡ್ಡ ಕೊಠಡಿಯನ್ನು ನೀಡಿದರಾಗದೇ?

ರಾಜ್ಯ ವೈದ್ಯಕೀಯ ಪರಿಷತ್ತಿಗೆ ಕಳೆದ 5 ವರ್ಷಗಳಲ್ಲಿ 329 ದೂರುಗಳು ಬಂದಿದ್ದು, 33 ವೈದ್ಯರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಪರಿಷತ್ತು ಸರಿಯಿಲ್ಲ ಎಂದು ಹೇಳಿ ಹೊಸ ಸಮಿತಿಯನ್ನು ತರಹೊರಟಿರುವ ಸರಕಾರವು ಇದೇ ಪರಿಷತ್ತಿಗೆ 2016ರಲ್ಲಿ ನಡೆಸಬೇಕಾಗಿದ್ದ ಚುನಾವಣೆಯನ್ನು ಇನ್ನೂ ನಡೆಸಿಲ್ಲ!

ಈಗಿರುವ 2007ರ ಕೆಪಿಎಂಇ ಕಾಯಿದೆಯಡಿಯಲ್ಲೂ ತಪ್ಪಿತಸ್ಥ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಬಹುದು, ಅಂತಹಾ ನಿದರ್ಶನಗಳೂ ಇವೆ. ಕಲಬುರಗಿಯಲ್ಲಿ ಹಲವರ ಗರ್ಭಕೋಶಗಳನ್ನು ತೆಗೆದ ಪ್ರಕರಣಗಳಲ್ಲಿ ಈ ಕಾನೂನಿನಡಿಯಲ್ಲೇ ಆಸ್ಪತ್ರೆಗಳ ಪರವಾನಿಗೆಯನ್ನು ಕೂಡಲೇ ರದ್ದು ಪಡಿಸಲಾಗಿತ್ತು, ಒಂದು ಆಸ್ಪತ್ರೆಯು ಹೆಸರು ಬದಲಿಸಿ ಮತ್ತೆ ತೆರೆದರೂ, ಈಗದನ್ನು ಮುಚ್ಚಿಸಲಾಗಿದೆ. ಜಿಲ್ಲಾಡಳಿತ, ವೈದ್ಯಕೀಯ ಪರಿಷತ್ತು ಹಾಗೂ ನ್ಯಾಯಾಲಯಗಳಲ್ಲಿ ಈ ಪ್ರಕರಣಗಳ ವಿಚಾರಣೆಯು ನಡೆಯುತ್ತಿದೆ.

ಆದರೆ ಇವು ಯಾವುವೂ ಸರಿಯಿಲ್ಲವೆಂದು ಸುಳ್ಳು ಹೇಳಿ, ಅಪರ ಯಾ ವಿಶೇಷ ಜಿಲ್ಲಾಧಿಕಾರಿಗಳು ಮುಖ್ಯಸ್ಥರಾಗಿರುವ ಸಮಿತಿಗಳಲ್ಲಿ ವಕೀಲರ ನೆರವೂ ಇಲ್ಲದೆ ಕ್ಷಿಪ್ರ ವಿಚಾರಣೆಗೆ ವೈದ್ಯರನ್ನು ಗುರಿಪಡಿಸಬೇಕು ಎನ್ನುವ ಅಸಾಂವಿಧಾನಿಕವಾದ, ಅಪಾಯಕಾರಿಯಾದ ತಿದ್ದುಪಡಿಗೆ ಹೊರಟಿರುವುದೇ ನಮ್ಮ ವಿರೋಧಕ್ಕೆ ಪ್ರಮುಖ ಕಾರಣವಾಗಿದೆ.

ಹೆಣವಿಟ್ಟು ಹಣಕ್ಕಾಗಿ ಪೀಡಿಸುತ್ತಾರೆ ಎನ್ನುವ ಆರೋಪವನ್ನು ಪ್ರತಿನಿತ್ಯವೂ ಮಾಡಲಾಗುತ್ತಿದೆ. 2015ರಲ್ಲಿ ರಾಜ್ಯದಲ್ಲಾದ 393731 ಸಾವುಗಳಲ್ಲಿ 146414 ಸಾವುಗಳು 1692 ಆಸ್ಪತ್ರೆಗಳಲ್ಲಾಗಿವೆ. ಬಾಯಿಗೆ ಬಂದಂತೆ ಆರೋಪಿಸುವ ಬದಲು, ಇವುಗಳಲ್ಲಿ ಅದೆಷ್ಟು ಪ್ರಕರಣಗಳಲ್ಲಿ ಹಣಕ್ಕಾಗಿ ಪೀಡಿಸಲಾಗಿತ್ತೆನ್ನುವುದನ್ನು ಹೇಳಲಿ. ಅಪರೂಪಕ್ಕೊಮ್ಮೆ, ಯಾವುದೋ ಕಾರಣಗಳಿಗೆ ನಡೆದಿರಬಹುದಾದ ಕೆಲವು ಪ್ರಕರಣಗಳನ್ನೇ ದೊಡ್ಡದು ಮಾಡಿ, ಎಲ್ಲಾ ವೈದ್ಯರೂ ಹೆಣವಿಟ್ಟು ಹಣ ಕೀಳುವವರೆಂದು ಆರೋಪಿಸುವುದು ವೈದ್ಯವಿರೋಧಿ ಹುಚ್ಚಾಟವಾಗಿದೆ.

ನಮ್ಮ ದೇಶದಲ್ಲಿ ವೈದ್ಯಕೀಯ ಚಿಕಿತ್ಸೆಗೆ ತಗಲುವ ವೆಚ್ಚಗಳ ಬಗ್ಗೆ ಸ್ಪಷ್ಟ ಮಾಹಿತಿಯೇ ಲಭ್ಯವಿಲ್ಲದಿರುವಾಗ ಸರಕಾರವು ದರವನ್ನು ನಿಗದಿಪಡಿಸುತ್ತದೆನ್ನುವುದು ಹುಂಬತನ. ಕೇಂದ್ರ ಸರಕಾರದ ಅಂತಹಾ ಪ್ರಯತ್ನವು 5 ವರ್ಷಗಳಾದರೂ ಕೈಗೂಡಿಲ್ಲ. ಕರ್ನಾಟಕ ಜ್ಞಾನ ಆಯೋಗದ ವರದಿಯಂತೆ, ಆರೋಗ್ಯ ಸುರಕ್ಷಾ ಯೋಜನೆಗಳಲ್ಲಿ ನೀಡಲಾಗುತ್ತಿರುವ ದರಗಳು, ಆಸ್ಪತ್ರೆಗಳು ಮಾಡುವ ಖರ್ಚಿನ ಶೇ. 7-70 ರಷ್ಟನ್ನು ಮಾತ್ರ ಭರಿಸುತ್ತವೆ; ಅಂದರೆ ಉಳಿದ ಖರ್ಚಿನ ನಷ್ಟವನ್ನು ಖಾಸಗಿ ಆಸ್ಪತ್ರೆಗಳೇ ಸಹಿಸುತ್ತವೆ. ಆದ್ದರಿಂದ, ಜನರಿಗೆ ಅತಿ ಕಡಿಮೆ ದರದಲ್ಲಿ ಅತ್ಯುತ್ತಮ ಚಿಕಿತ್ಸೆಯು ದೊರೆಯಬೇಕಾದರೆ, ಸರಕಾರಿ ಆಸ್ಪತ್ರೆಗಳು ಸುಸಜ್ಜಿತಗೊಳ್ಳಬೇಕೇ ಹೊರತು, ಖಾಸಗಿ ವೈದ್ಯರ ಕತ್ತು ಹಿಸುಕಿದರಾಗದು. ಕಾರ್ಪರೇಟ್ ಆಸ್ಪತ್ರೆಗಳಲ್ಲಾಗಲೀ, ಇನ್ಯಾವುದೇ ಆಸ್ಪತ್ರೆಗಳಲ್ಲಾಗಲೀ ದುಬಾರಿ ಚಿಕಿತ್ಸೆಯ ಬಗ್ಗೆ ನಿರ್ದಿಷ್ಟ ದೂರುಗಳಿದ್ದರೆ, ಸಂಬಂಧಿತ ಕಾನೂನುಗಳಡಿಯಲ್ಲಿ ತನಿಖೆಗೊಳಪಡಿಸಬೇಕೇ ಹೊರತು ಎಲ್ಲಾ ವೈದ್ಯರನ್ನೂ ದೂಷಿಸುವುದಲ್ಲ.

ಕೋಟಿ ಕೊಟ್ಟವರು ಲೂಟಿ ಮಾಡುತ್ತಿದ್ದಾರೆ ಎನ್ನುವವರು ನೀಟ್ ಬಂದ ಮೇಲೂ ಕೋಟಿಗೆ ಸೀಟು ಕೊಡಲು ಅವಕಾಶವಿತ್ತಿರುವ ಈ ಸರಕಾರವನ್ನು ಪ್ರಶ್ನಿಸುವುದಿಲ್ಲ, ಬದಲಿಗೆ ವೈದ್ಯರೇ ಪ್ರಶ್ನಿಸಿದ್ದಾರೆ. ಈ ಅಸಾಂವಿಧಾನಿಕ ತಿದ್ದುಪಡಿಗಳನ್ನು ಪ್ರತಿಭಟಿಸುತ್ತಿರುವ ಬಹುತೇಕ ವೈದ್ಯರು ಸ್ವಸಾಮರ್ಥ್ಯದಿಂದ ವೈದ್ಯರಾಗಿ ಹಗಲಿರುಳು ದುಡಿಯುತ್ತಿರುವವರೇ ಹೊರತು, ಕೋಟಿ ಕೊಟ್ಟು ಸೀಟು ಪಡೆದವರಲ್ಲ.

‘ಮಂಥರೆ ಹಟ’ದಿಂದ ಲಾಭವೇ ಆಗಿದೆ!

ಪ್ರಜಾವಾಣಿ, ನವೆಂಬರ್ 29, 2017 ಇಲ್ಲಿದೆ: https://www.prajavani.net/news/article/2017/11/28/536433.html

ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಕೆಪಿಎಂಇ 2017 ಮಸೂದೆಯನ್ನು ವಿಧಾನ ಮಂಡಲ ಅನುಮೋದಿಸಿದೆ. ಎಪ್ರಿಲ್ 28ರಂದು ನ್ಯಾ. ವಿಕ್ರಂಜಿತ್ ಸೆನ್ ಸಮಿತಿ ಮಾಡಿದ್ದ ಯಾವ ಶಿಫಾರಸುಗಳನ್ನು ಆರೋಗ್ಯ ಸಚಿವರು ಕಡೆಗಣಿಸಿದ್ದರೋ, ಅವುಗಳಲ್ಲಿ ಸರಕಾರಿ ಆಸ್ಪತ್ರೆಗಳನ್ನು ಕಾಯಿದೆಯಡಿ ತರಬೇಕೆಂಬುದನ್ನುಳಿದು ಇತರೆಲ್ಲಾ ಶಿಫಾರಸುಗಳು ಕೊನೆಗೂ ಮನ್ನಣೆ ಪಡೆದಿವೆ. ಇದನ್ನು ಸಾಧಿಸಲು ಜೂನ್ 16ಕ್ಕೆ ರಾಜ್ಯದ 12 ಸಾವಿರ ವೈದ್ಯರಿಂದ ಬೆಂಗಳೂರು ಚಲೋ, ನವೆಂಬರ್ 3ರಂದು ರಾಜ್ಯವ್ಯಾಪಿ ಮುಷ್ಕರ, ನವೆಂಬರ್ 13ಕ್ಕೆ 30 ಸಾವಿರಕ್ಕೂ ಹೆಚ್ಚು ವೈದ್ಯರಿಂದ ಬೆಳಗಾವಿ ಚಲೋ, ನಂತರ ಸರದಿ ಉಪವಾಸ ಹಾಗೂ ಹಲವು ಜಿಲ್ಲೆಗಳಲ್ಲಿ ವೃತ್ತಿಸ್ಥಗಿತ ಎಲ್ಲವನ್ನೂ ಮಾಡಬೇಕಾಯಿತು. ಎಪ್ರಿಲ್ 28ರಂದು ನ್ಯಾ. ಸೆನ್, ಆರೋಗ್ಯ ಸಚಿವರು ಹಾಗೂ ಇಲಾಖೆಯ ಮುಖ್ಯ ಕಾರ್ಯದರ್ಶಿಯವರು ಒಟ್ಟಿಗೇ ಮಾಡಿದ್ದ ಘೋಷಣೆಗಳನ್ನು ಪಾಲಿಸಿದ್ದರೆ ಈ ಸತ್ಯಾಗ್ರಹಗಳ ಅಗತ್ಯವೇ ಇರಲಿಲ್ಲ.

ಈ ಮಸೂದೆಯ ಬಗ್ಗೆ ಸಾಕಷ್ಟು ಚರ್ಚೆಯೂ ಆಯಿತು; ಜೂನ್ 16ರಿಂದ ಜೋರಾಗಿ, ನವೆಂಬರ್ 3ರ ಬಳಿಕ ತಾರಕಕ್ಕೇರಿತು. ಮಸೂದೆಯನ್ನು ವಿರೋಧಿಸಿ ಪ್ರತಿಭಟಿಸಿದವರಲ್ಲಿ ತಮ್ಮಷ್ಟಕ್ಕೇ ವೃತ್ತಿನಿರತರಾಗಿರುವ ವೈದ್ಯರೇ ತುಂಬಿದ್ದರು, ಕೋಟಿಗಟ್ಟಲೆ ತೊಡಗಿಸಿದ ಕಾರ್ಪರೇಟ್ ಆಸ್ಪತ್ರೆಗಳವರೂ ಅಲ್ಪಸಂಖ್ಯೆಯಲ್ಲಿದ್ದರು. ಮಸೂದೆಯ ಪರವಾಗಿಯೂ ಹಲತರದ ಅಭಿಪ್ರಾಯಗಳುಳ್ಳವರಿದ್ದರು: ಖಾಸಗಿ ವೈದ್ಯರೆಲ್ಲರೂ ಒಂದೇ ಲಾಬಿಯವರು, ಅವರೆಲ್ಲರನ್ನೂ ಒಂದೇ ರೀತಿ ಕಟ್ಟಿಹಾಕಬೇಕು ಎಂದು ಕೆಲವು ಚಳುವಳಿಗಾರರು ವಾದಿಸುತ್ತಿದ್ದರೆ, ಬಹುತೇಕ ವೈದ್ಯರು ಒಳ್ಳೆಯವರು, ಆದರೆ ಕೆಟ್ಟವರನ್ನು ಸರಕಾರವು ನಿಯಂತ್ರಿಸಲೇಬೇಕು ಎಂದು ಇನ್ನು ಹಲವರು ಕೇಳುತ್ತಿದ್ದರು, ಈ ಕಾನೂನು ಬಂದರೆ ಆರೋಗ್ಯ ಸೇವೆಗಳು ತುಸು ಅಗ್ಗವಾಗಬಹುದೆಂದು ಆಸೆ ಹೊತ್ತ ಜನಸಾಮಾನ್ಯರೂ ಇದ್ದರು. ಹೀಗೆ ಈ ಎರಡೂ ಕಡೆಗಳಲ್ಲಿ ಬಗೆಬಗೆಯ ಅಭಿಪ್ರಾಯಗಳಿದ್ದವು, ಪರ-ವಿರೋಧಗಳಿಗೆ ಬೇರೆ ಬೇರೆ ಕಾರಣಗಳಿದ್ದವು.

ಆದರೆ ಇದು ಅಥವಾ ಅದು, ನಡುವೆ ಬೇರೇನಿಲ್ಲ ಎಂಬ ಮನಸ್ಥಿತಿಯೇ ಬಲಗೊಳ್ಳುತ್ತಿರುವ ಇಂದಿನ ಸನ್ನಿವೇಶದಲ್ಲಿ, ಅತಿ ಸಂಕೀರ್ಣವಾದ ವೈದ್ಯವೃತ್ತಿಯ ಬಗೆಗಿನ ಚರ್ಚೆಯೂ ಅದು ಅಥವಾ ಇದು ಎಂಬಲ್ಲಿಗೆ ಬಂತು. ತಮ್ಮ ವೃತ್ತಿಸ್ವಾತಂತ್ರ್ಯದ ರಕ್ಷಣೆಗಾಗಿ ಈ ತಿದ್ದುಪಡಿಗಳ ವಿರುದ್ಧ ಸೆಟೆದೆದ್ದ ವೈದ್ಯರೆಲ್ಲರನ್ನೂ ಕಾರ್ಪರೇಟ್ ದಲ್ಲಾಳಿಗಳೆಂದೂ, ಧನದಾಹಿಗಳೆಂದೂ, ರಕ್ತ ಹೀರುವವರೆಂದೂ ಜರೆಯಲಾಯಿತು. ಅಲ್ಲಿಲ್ಲಿ ನಡೆದ ಪ್ರಕರಣಗಳನ್ನೇ ಹಿಗ್ಗಿಸಿ, ಸುಳ್ಳುಗಳನ್ನೂ, ಅರ್ಧ ಸತ್ಯಗಳನ್ನೂ ಬೆರೆಸಿ ಆರೋಪಗಳ ಸುರಿಮಳೆಗೈಯುತ್ತಿದ್ದ ಕೆಲವರು ತಾವಷ್ಟೇ ಆರು ಕೋಟಿ ಕನ್ನಡಿಗರ ಹಿತರಕ್ಷಕರು ಎಂದು ಹಠ ಹಿಡಿದರು. ತಮಗೆ ಗೊತ್ತಿರುವುದೇ ಪರಮ ಸತ್ಯ, ಅದನ್ನೊಪ್ಪದವರೆಲ್ಲರೂ ದ್ರೋಹಿಗಳು ಎಂದು ನೇರವಾಗಿ ವ್ಯಕ್ತಿನಿಂದನೆಗೇ ಇಳಿಯುವ ಭೀಕರ ರೋಗವು ಕೆಪಿಎಂಇ ಚರ್ಚೆಯೊಳಗೂ ವ್ಯಾಪಿಸಿತು.

ಈ ಕೆಪಿಎಂಇ ಚರ್ಚೆ ಮೂರು ತಿಂಗಳಿನದಲ್ಲ, ಜುಲೈ 2016ರ ಕೊನೆಗೆ ನ್ಯಾ. ವಿಕ್ರಂಜಿತ್ ಸೆನ್ ಅಧ್ಯಕ್ಷತೆಯಲ್ಲಿ ಅದಕ್ಕಾಗಿ ಸಮಿತಿಯೊಂದನ್ನು ರಚಿಸಿದಾಗಲೇ ಅದು ಆರಂಭವಾಗಿತ್ತು. ರಾಜ್ಯದ ಎಲ್ಲಾ ವೈದ್ಯರು ಬರೆಯುವ ಎಲ್ಲಾ (ದಿನಕ್ಕೆ ಲಕ್ಷಗಟ್ಟಲೆ) ಚೀಟಿಗಳನ್ನು ಔಷಧ ನಿಯಂತ್ರಕರಿಂದ ತನಿಖೆಗೊಳಪಡಿಸಬೇಕು, ಹೆಚ್ಚು ಬರೆದವರನ್ನು ದಂಡ ಸಂಹಿತೆಯ 420ನೇ ಪ್ರಕರಣದಡಿ ಶಿಕ್ಷಿಸಬೇಕು ಎಂಬ ಅತಿ ಬಾಲಿಶ, ನ್ಯಾಯಬಾಹಿರ ಬೇಡಿಕೆಯು ಮೊದಲ ಸಭೆಯಲ್ಲಿ ಪ್ರಸ್ತಾಪಿಸಲ್ಪಟ್ಟಾಗಲೇ ಈ ತಿದ್ದುಪಡಿಗಳ ಗತಿಯೇನಾಗಲಿದೆ ಎನ್ನುವುದು ವೈದ್ಯರಾದ ನಮಗೆ ತಿಳಿದುಹೋಗಿತ್ತು. ಆದ್ದರಿಂದಲೇ ನಮ್ಮೆಲ್ಲ ಅಹವಾಲುಗಳನ್ನು ಸವಿವರವಾಗಿ, ಸಾಧಾರವಾಗಿ ಬರೆದೇ ಕೊಟ್ಟಿದ್ದೆವು. ಆಧಾರರಹಿತ ಆರೋಪಗಳ ಮೂಲಕ ಸಮಿತಿಯನ್ನು ತಪ್ಪು ದಾರಿಗೆಳೆಯಲು ನಡೆಸಿದ ಪ್ರಯತ್ನಗಳನ್ನು ಅಲ್ಲಿಂದಲ್ಲಿಗೇ ಎತ್ತಿ ತೋರಿಸಿದ್ದೆವು. ಸಾರ್ವಜನಿಕ ಆರೋಗ್ಯದ ಬಗ್ಗೆ ಅಧ್ಯಯನ ನಡೆಸಿದ್ದೇವೆ ಎಂದವರ ಅಧ್ಯಯನಗಳ ಮಟ್ಟವೇನು ಎನ್ನುವುದನ್ನೂ ಸಾಬೀತು ಪಡಿಸಿದ್ದೆವು. ಕೇಂದ್ರ ಸರಕಾರದ ವೈದ್ಯಕೀಯ ಸಂಸ್ಥೆಗಳ ಕಾಯಿದೆಯನ್ನು, ಅದನ್ನು ಅನುಸರಿಸಿರುವ ಕೇರಳವೂ ಸೇರಿದಂತೆ ಇತರ 11 ರಾಜ್ಯಗಳ ಮಾದರಿಯನ್ನು ಇಲ್ಲೂ ಅನುಸರಿಸುವಂತೆ ನಾವು ಮಾಡಿದ ಮನವಿಗಳನ್ನು ಪರಿಗಣಿಸದೆ, ಪಶ್ಚಿಮ ಬಂಗಾಳದ ವೈದ್ಯ ವಿರೋಧಿ ಕಾಯಿದೆಯನ್ನು ಮುಂದಿಟ್ಟಾಗ ಬಲವಾಗಿ ವಿರೋಧಿಸಿದ್ದೆವು.

ನಮ್ಮ ಸಂವಿಧಾನ, ವಿವಿಧ ಕಾನೂನುಗಳು, ನಮ್ಮ ವೃತ್ತಿ ಸಂಹಿತೆ ಹಾಗೂ ನಿಯಮಗಳು, ಸರ್ವೋಚ್ಚ ನ್ಯಾಯಾಲಯದ ಹಲವು ತೀರ್ಪುಗಳು ಇತ್ಯಾದಿಯಾಗಿ ನಾವು ಮಂಡಿಸಿದ ಆಧಾರಗಳನ್ನು ಯಾರೊಬ್ಬರೂ ಪ್ರಶ್ನಿಸಲಿಲ್ಲ, ವಿರೋಧಿಸಲೂ ಇಲ್ಲ. ತಿದ್ದುಪಡಿಗಳ ಪರವಹಿಸಿದವರು ಭಾವನಾತ್ಮಕವಾಗಿ ವಾದಿಸಿದರೇ ಹೊರತು, ಅವಕ್ಕೆ ಸೂಕ್ತ ಆಧಾರಗಳನ್ನು ಒದಗಿಸಲಿಲ್ಲ. ವೈದ್ಯವಿರೋಧಿ ತಿದ್ದುಪಡಿಗಳು ಜನಪರ ಹೇಗಾಗುತ್ತವೆ, ಮಸೂದೆಯು ಜನಪರ ಎಂದಾದರೆ ನ್ಯಾ. ಸೆನ್ ಸಮಿತಿಯ ವರದಿಯು ಜನವಿರೋಧಿಯಾಗಿತ್ತೇ ಎಂಬ ಪ್ರಶ್ನೆಗಳಿಗೂ ಉತ್ತರ ದೊರೆಯಲಿಲ್ಲ. ಕಾನೂನು ರಚನೆಯ ಪ್ರಕ್ರಿಯೆಯು ವಸ್ತುನಿಷ್ಠವಾಗಿರಬೇಕು, ಸಂವಿಧಾನಬದ್ಧವಾಗಿರಬೇಕು, ಜನರಿಗಷ್ಟೇ ಅಲ್ಲ, ಅತ್ಯಂತ ಕ್ಲಿಷ್ತಕರವಾದ ವೃತ್ತಿಯಲ್ಲಿರುವ ವೈದ್ಯರಿಗೂ ನ್ಯಾಯವೊದಗಬೇಕು ಎಂಬ ಮೂಲಭೂತ ಆಶಯಗಳೆಲ್ಲ ಬದಿಗೆ ಸರಿದು, ಬೀದಿ ರಂಪದಿಂದಲೇ ಕಾನೂನನ್ನು ಹೇರಬಹುದೆನ್ನುವ ಪ್ರವೃತ್ತಿಯು ಮೊದಲಿಂದ ಕೊನೆಯವರೆಗೆ ನಿಚ್ಚಳವಾಗಿ ಕಂಡು ಬಂತು.
ರಾಜ್ಯದ 40000ದಷ್ಟು ವೈದ್ಯರು ಪ್ರತಿಭಟನೆಗಳಲ್ಲಿ ನೇರವಾಗಿ ಭಾಗಿಯಾದುದು ಹಾಗೂ ಇನ್ನುಳಿದವರು ವೃತ್ತಿಯಿಂದ ದೂರವುಳಿದುದು ವೈದ್ಯರಲ್ಲಿದ್ದ ಆತಂಕವನ್ನು ಎತ್ತಿ ತೋರಿಸಿತು. ಪಕ್ಷಬೇಧವಿಲ್ಲದೆ ಹೆಚ್ಚಿನ ನಾಯಕರೂ ವೈದ್ಯರ ಬೇಡಿಕೆಗಳಿಗೆ ಸಹಾನುಭೂತಿ ವ್ಯಕ್ತಪಡಿಸಿದರು. ಹೆಚ್ಚಿನ ಪತ್ರಿಕೆಗಳೂ, ಟಿವಿ ವಾಹಿನಿಗಳೂ ಸರಕಾರದ ನಿಲುವನ್ನು ಪ್ರಶ್ನಿಸಿದವು. ಸರಕಾರಿ ಆಸ್ಪತ್ರೆಗಳನ್ನು ಕಾಯಿದೆಯಡಿ ತರಬೇಕೆನ್ನುವ ನಮ್ಮ ಬೇಡಿಕೆಗೂ ವ್ಯಾಪಕ ಬೆಂಬಲ ದೊರೆಯಿತು; ತನ್ನ ಮನೆಯನ್ನೇ ಸರಿಯಾಗಿಡದ ಸರಕಾರವು ಖಾಸಗಿ ವೈದ್ಯರನ್ನು ನಿಯಂತ್ರಿಸುವುದರ ಔಚಿತ್ಯವನ್ನು ಹಲವರು ಪ್ರಶ್ನಿಸಿದರು. ಇವನ್ನೆಲ್ಲ ಪರಿಗಣಿಸಿ, ಮಾನ್ಯ ಮುಖ್ಯಮಂತ್ರಿಗಳು ಮುತುವರ್ಜಿ ವಹಿಸಿ, ಜನರಿಗೂ ನ್ಯಾಯವೊದಗುವ, ವೈದ್ಯರಿಗೂ ಅನ್ಯಾಯವಾಗದ ಮಸೂದೆಯನ್ನು ಅನುಮೋದಿಸಲಾಯಿತು. ಇದನ್ನು ಖಾಸಗಿ ಹಿತಾಸಕ್ತಿಗಳಿಗೆ ಶರಣಾಗತಿ ಎನ್ನುವುದು ಆತ್ಮವಂಚನೆ ಅಷ್ಟೇ.

ಅನೇಕರು ಮಂಥರೆ ತರಹ ಹುಳಿ ಹಿಂಡಿದ್ದಾರೆ ಎಂದು ಮಾನ್ಯ ಆರೋಗ್ಯ ಸಚಿವರು ಹೇಳಿದ್ದಾರೆ. ನಾವು ವೈದ್ಯರೇ ಮಂಥರೆಯರು ಎಂದಾದರೆ ಹೆಮ್ಮೆಯಿಂದಲೇ ಅದನ್ನು ಒಪ್ಪಿಕೊಳ್ಳುತ್ತೇವೆ. ಮಂಥರೆಯ ಹಠದಿಂದ ದಶರಥನ ಮಾತು ಉಳಿಯಿತು, ಜೀವವುಳಿಸಿದ ಕೈಕೇಯಿಗೆ ಅನ್ಯಾಯವಾಗುವುದು ತಪ್ಪಿತು, ಭರತನಿಗೆ ಅಧಿಕಾರವೂ ಸಿಕ್ಕಿತು. ನಮ್ಮ ಪ್ರತಿಭಟನೆಯಿಂದಲೂ ಆಡಳಿತದ ಮಾತು ಉಳಿಯಿತು, ನ್ಯಾ. ಸೆನ್ ವರದಿ ಜಾರಿಯಾಯಿತು, ಜೀವವುಳಿಸುವ ವೈದ್ಯರಿಗೆ ಅನ್ಯಾಯವಾಗುವುದು ತಪ್ಪಿತು, ಜನರಿಗೆ ದೂರು ಸಲ್ಲಿಸುವ ಅಧಿಕಾರವೂ ಸುಲಭವಾಯಿತು.

ಪ್ರಜಾವಾಣಿ, ಸಂಗತ ಜೂನ್ 15, 2017, 2017

Be the first to comment

Leave a Reply

Your email address will not be published.


*