ಸಾಮಾಜಿಕ ವೈದ್ಯ ವಿಜ್ಞಾನದಲ್ಲಿ ನನ್ನ ಗುರುಗಳಾಗಿದ್ದ ಡಾ| ಬರ್ಟಿ ಮೋಥಾ ತುಂಬಾ ನೆನಪಾಗುತ್ತಿದ್ದಾರೆ. ನಾನು 1982-88ರ ನಡುವೆ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾಗ ಡಾ| ಮೋಥಾ ಸಾಮಾಜಿಕ ವೈದ್ಯ ವಿಜ್ಞಾನದಲ್ಲಿ ಪ್ರೊಫೆಸರ್ ಆಗಿದ್ದರು. ಅದಕ್ಕೆ ಮೊದಲು ನೈಜೀರಿಯಾದಲ್ಲಿ ದುಡಿದಿದ್ದುದರಿಂದಲೋ ಏನೋ, ಮಲೇರಿಯಾ ಮತ್ತಿತರ ಸೋಂಕು ರೋಗಗಳ ನಿರ್ವಹಣೆಯಲ್ಲಿ ಅವರಿಗೆ ಅಪಾರ ಅನುಭವವಿತ್ತು, ನಿಜಾರ್ಥದಲ್ಲಿ ಅವರು ಸಾಮಾಜಿಕ ವೈದ್ಯ ವಿಜ್ಞಾನಿಯಾಗಿದ್ದರು.
ನಾವು ಎಂಬಿಬಿಎಸ್ ಬಳಿಕ ಕಿರಿಯ ವೈದ್ಯರಾಗಿ ಸಾಮಾಜಿಕ ವೈದ್ಯ ವಿಜ್ಞಾನದ ವಿಭಾಗದಲ್ಲಿ ನಿಯುಕ್ತರಾಗಿದ್ದಾಗ ಮೂಡಬಿದರೆ ಮತ್ತು ಉಳ್ಳಾಲಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿದ್ದ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಆರೋಗ್ಯ ರಕ್ಷಣೆಯ ಬಗ್ಗೆ ಚಿತ್ರ ಪ್ರದರ್ಶನಗಳನ್ನೂ, ಚರ್ಚಾ ಗೋಷ್ಠಿಗಳನ್ನೂ, ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮಗಳನ್ನೂ ನಾವಾಗಿ ಆಯೋಜಿಸಿದ್ದೆವು. ಅದನ್ನು ಬಹುವಾಗಿ ಮೆಚ್ಚಿಕೊಂಡು ಬೆನ್ನು ತಟ್ಟಿದ್ದ ಪ್ರೊ. ಮೋಥಾ ಕೊನೆಯವರೆಗೂ ಅದನ್ನು ಪ್ರೀತಿ, ಅಭಿಮಾನಗಳಿಂದ ಆಗಾಗ ನೆನಪಿಸಿಕೊಳ್ಳುತ್ತಿದ್ದರು.
ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 1989-92ರಲ್ಲಿ ಎಂಡಿ ವ್ಯಾಸಂಗ ಮುಗಿಸಿ ಮಂಗಳೂರಿಗೆ ಮರಳಿ ವೈದ್ಯಕೀಯ ತಜ್ಞನಾಗಿ ವೃತ್ತಿಯನ್ನಾರಂಭಿಸಿದ್ದೆ. ಕೆಲವು ತಿಂಗಳಾಗುತ್ತಿದ್ದಂತೆ, 1993ರ ಆರಂಭದಲ್ಲಿ, ಪ್ರೊ. ಮೋಥಾ ನನ್ನನ್ನು ಬರ ಹೇಳಿ, ‘ಕಕ್ಕಿಲ್ಲಾಯ, ಮಂಗಳೂರಲ್ಲಿ ಮಲೇರಿಯಾ ಕಾಣಿಸತೊಡಗಿದೆ. ಪರವೂರುಗಳ ಕಾರ್ಮಿಕರು ಮಲೇರಿಯಾ ಪರೋಪಜೀವಿಗಳನ್ನು ತಮ್ಮೊಂದಿಗೆ ತಂದಿದ್ದಾರೆ, ಇಲ್ಲಿನ ಹೊಸ ಕಾಂಕ್ರೀಟ್ ಕಟ್ಟಡಗಳಲ್ಲಿ ನೀರು ನಿಂತು ಬೇಕಾದಷ್ಟು ಸೊಳ್ಳೆಗಳು ಬೆಳೆಯುತ್ತಿವೆ, ಸದ್ಯದಲ್ಲೇ ಮಲೇರಿಯಾ ಎಲ್ಲೆಡೆ ಹರಡಲಿದೆ, ಫಾಲ್ಸಿಪಾರಂ ಮಲೇರಿಯಾ ಕಂಡರೆ ಎರಡು ವರ್ಷಗಳಲ್ಲೇ ಜನರು ಸಾಯುವುದನ್ನು ನೋಡಲಿದ್ದೇವೆ, ಈಗಲೇ ಏನಾದರೂ ಮಾಡಬೇಕಲ್ಲ?’ ಎಂದಿದ್ದರು. ‘ನೀವು ಹೇಳಿದಂತೆ ಮಾಡೋಣ ಸರ್, ಏನಾಗಬೇಕು ಹೇಳಿ’ ಎಂದದ್ದಕ್ಕೆ, ಜಿಲ್ಲಾಧಿಕಾರಿಯವರನ್ನು ಕಂಡು ಬರೋಣ ಎಂದಿದ್ದರು.
ಆ ದಿನಗಳಲ್ಲಿ ಅಲ್ಲೊಂದು ಇಲ್ಲೊಂದರಂತೆ ವೈವಾಕ್ಸ್ ಮಲೇರಿಯಾ ಪ್ರಕರಣಗಳು ಕಾಣಿಸತೊಡಗಿದ್ದವು. ಮಲೇರಿಯಾ ಚಿಕಿತ್ಸೆಗೆ ಅಗತ್ಯವಿದ್ದ ಪ್ರೈಮಾಕ್ವಿನ್ ಔಷಧವು ಆ ದಿನಗಳಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿಗಳಲ್ಲಷ್ಟೇ ಲಭ್ಯವಿತ್ತು ಮತ್ತು ಸರಕಾರದ ನೀತಿಯಂತೆ ಕೇವಲ 5 ದಿನಗಳಿಗಷ್ಟೇ ಅದನ್ನು ನೀಡಲಾಗುತ್ತಿತ್ತು. ಅದೇ ಸಮಯದಲ್ಲಿ ಭಾರತೀಯ ವೈದ್ಯಕೀಯ ಸಂಘದ ಸ್ಥಳೀಯ ಘಟಕವು ತನ್ನ ಸದಸ್ಯರಿಗಾಗಿ ಮೆಡಿಲೋರ್ ಎಂಬ ಹೆಸರಲ್ಲಿ ಕಿರುಪತ್ರಿಕೆಯೊಂದನ್ನು ಆರಂಭಿಸಿ ನನ್ನನ್ನು ಸಂಪಾದಕನಾಗಿ ನಿಯೋಜಿಸಿತ್ತು. ನಾನು ಅದರಲ್ಲಿ ಮಲೇರಿಯಾ ಚಿಕಿತ್ಸೆಯ ಬಗ್ಗೆ ಬರೆದಿದ್ದೆ; ಸರಕಾರವು ವೈವಾಕ್ಸ್ ಮಲೇರಿಯಾ ಚಿಕಿತ್ಸೆಗೆ ಪ್ರೈಮಾಕ್ವಿನ್ ಔಷಧವನ್ನು 5 ದಿನಗಳಿಗಷ್ಟೇ ನೀಡುತ್ತಿರುವುದು ಸರಿಯಲ್ಲವೆಂದೂ, ಬಹುಷಃ ಹಣವುಳಿಸುವುದಕ್ಕೆಂದೇ ಹಾಗೆ ಮಾಡುತ್ತಿರಬೇಕೆಂದೂ, ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯಂತೆ 14 ದಿನಗಳಿಗೆ ನೀಡಲು ಸರಕಾರವು ವ್ಯವಸ್ಥೆ ಮಾಡಬೇಕೆಂದೂ ಅದರಲ್ಲಿ ಬರೆದಿದ್ದೆ. ಎರಡು ದಿನಗಳಾಗಬೇಕಾದರೆ ಪ್ರೊ. ಮೋಥಾ ಬರೆದಿದ್ದ ಉದ್ದವಾದ ಪತ್ರವೊಂದು ಕೈಸೇರಿತು! ‘ರಾಷ್ಟ್ರೀಯ ಮಲೇರಿಯಾ ನಿರ್ಮೂಲನಾ ಕಾರ್ಯಕ್ರಮದಲ್ಲಿ ಏನು ಹೇಳಲಾಗಿದೆಯೋ ಅದನ್ನೇ ನಾವು ವೈದ್ಯರಿಗೆ ಹೇಳಬೇಕು, ಇಲ್ಲವಾದರೆ ಗೊಂದಲಗಳಿಗೆ ಕಾರಣವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಏನೇ ಹೇಳಲಿ, ನಮ್ಮಲ್ಲಿ ನಮ್ಮ ಆರೋಗ್ಯ ಕಾರ್ಯಕ್ರಮಗಳ ಸೂಚನೆಗಳನ್ನೇ ಪಾಲಿಸಬೇಕಾಗುತ್ತದೆ. ಇಲ್ಲಿ ಸರಕಾರವೇ ಪ್ರೈಮಾಕ್ವಿನ್ ಕೊಡಬೇಕು, ಅದು 5 ದಿನಗಳಿಗಷ್ಟೇ ಕೊಡುವುದು, ಬೇಕೆಂದರೂ 14 ದಿನಗಳಿಗೆ ಹೇಗೆ ಕೊಡಲು ಸಾಧ್ಯ?’ ಎನ್ನುವುದು ಅದರ ಸಾರವಾಗಿತ್ತು. ಪ್ರೊಫೆಸರಿಗೆ ಕರೆ ಮಾಡಿ ಮಾತಾಡಿದ್ದೆ, ‘ಆ, ಡೋಂಟ್ ವರಿ’ ಎಂದಿದ್ದರು.
ಪ್ರೊ. ಮೋಥಾ ಎಚ್ಚರಿಸಿದ್ದಂತೆ 1995ರ ವೇಳೆಗೆ ಫಾಲ್ಸಿಪಾರಂ ಮಲೇರಿಯಾ ಹೆಚ್ಚತೊಡಗಿ, ಗಂಭೀರ ಸಮಸ್ಯೆಗಳಾಗಿ ಸಾವುಗಳಾಗತೊಡಗಿದವು. ಆಗಲೇ, ಮಲೇರಿಯಾ ನಿಯಂತ್ರಣದ ಬಗ್ಗೆ ಜನಜಾಗೃತಿ ಮೂಡಿಸಲು ನಾವೊಂದು ವಿಚಾರಗೋಷ್ಠಿಯನ್ನು ಏರ್ಪಡಿಸಿದ್ದೆವು. ಅದಾಗಿ ವಾರದ ನಂತರ ಆಗಿನ ಜಿಲ್ಲಾಧಿಕಾರಿಯವರು ಮಲೇರಿಯಾ ನಿಯಂತ್ರಣ ಸಮಿತಿಯನ್ನೇ ರಚಿಸಿ, ನಮ್ಮನ್ನೇ ಅದರಲ್ಲಿ ಸೇರಿಸಿದರು. ನಾನದರ ಕಾರ್ಯದರ್ಶಿಯಾಗಿದ್ದರೆ, ಪ್ರೊ. ಮೋಥಾ ಮುಖ್ಯ ಸಲಹಾಕಾರರಾಗಿದ್ದರು. ಪ್ರೊ. ಮೋಥಾ ಅವರ ಸಲಹೆಯಂತೆ ಮಲೇರಿಯಾ ಪತ್ತೆ, ಗಂಭೀರ ರೂಪದ ಫಾಲ್ಸಿಪಾರಂ ಗುರುತಿಸುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಮಾರ್ಗಸೂಚಿಯನ್ನು ರಚಿಸಿ ಎಲ್ಲ ವೈದ್ಯರಿಗೂ ಕಳುಹಿಸಿದೆವು; ವೈವಾಕ್ಸ್ ಮಲೇರಿಯಾಕ್ಕೆ ಪ್ರೈಮಾಕ್ವಿನ್ ಮಾತ್ರೆಯನ್ನು 5 ದಿನಗಳಿಗೆ ನೀಡಬೇಕು ಎಂಬ ಸರಕಾರದ ನೀತಿಯನ್ನೇ ಅದರಲ್ಲಿ ಹೇಳಿದೆವು!
ಮುಂದಿನ 3-4 ವರ್ಷ ಮಲೇರಿಯಾ ನಿಯಂತ್ರಣ ಸಮಿತಿಯ ನೇತೃತ್ವದಲ್ಲಿ ಮಂಗಳೂರಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಸಾಕಷ್ಟು ಯಶಸ್ವಿಯಾದ ಪ್ರಯತ್ನಗಳಾದವು. ನಂತರ 1999ರಲ್ಲಿ ಸ್ಥಾಪನೆಯಾದ ಹೊಸ ವೈದ್ಯಕೀಯ ಕಾಲೇಜಿನ ವೈದ್ಯವಿಜ್ಞಾನದ ವಿಭಾಗಕ್ಕೆ ನಾನು ಸೇರಬೇಕಾಯಿತು; ಹುಬ್ಬಳ್ಳಿಯಲ್ಲಿ ನನ್ನ ಗುರುಗಳಾಗಿದ್ದ ಪ್ರೊ. ಚಿತ್ತರಂಜನ್ ದಾಸ್ ಹೆಗ್ಡೆ ಅವರಿದ್ದ ಘಟಕದಲ್ಲೇ ನಾನೂ ಸೇರಿಕೊಂಡು, ಮತ್ತೆ ಅವರಿಂದ ಇನ್ನಷ್ಟು ಕಲಿಯುವ ಅವಕಾಶವನ್ನು ದಕ್ಕಿಸಿಕೊಂಡೆ. ಕೆಲವೇ ತಿಂಗಳಲ್ಲಿ ಪ್ರೊ. ಮೋಥಾ ಅದೇ ಕಾಲೇಜಿನ ಸಮುದಾಯ ವೈದ್ಯವಿಜ್ಞಾನದ ವಿಭಾಗಕ್ಕೆ ಹಿರಿಯ ಪ್ರೊಫೆಸರ್ ಆಗಿ ಸೇರಿದರು. ಪ್ರೊ. ಹೆಗ್ಡೆ ಮತ್ತು ಪ್ರೊ. ಮೋಥಾ ಅವರಿಗೆ ಅಕ್ಕಪಕ್ಕದಲ್ಲಿ ಮನೆಗಳನ್ನು ನೀಡಲಾಗಿದ್ದುದರಿಂದ ಇಬ್ಬರೂ ಬಲು ಬೇಗನೆ ಸ್ನೇಹಿತರಾದರು (ನಂತರ ಬಂಧುಗಳೂ ಆಗಿಬಿಟ್ಟರು). ಪ್ರತಿ ದಿನ ಆಸ್ಪತ್ರೆಯಲ್ಲಿ ನಮ್ಮ ಸುತ್ತು ಮುಗಿಸಿ ನಾವು ಕೇಂಟೀನಿಗೆ ಹೋಗುವ ಸಮಯಕ್ಕೆ ಸರಿಯಾಗಿ ಪ್ರೊ. ಮೋಥಾ ನಮ್ಮನ್ನು ಸೇರಿಕೊಳ್ಳುತ್ತಿದ್ದರು, ಬೇರೆ ಬೇರೆ ವಿಷಯಗಳ ಬಗ್ಗೆ ನಾವೆಲ್ಲ ಒಂದಷ್ಟು ಮಾತಾಡಿಕೊಳ್ಳುತ್ತಿದ್ದೆವು. ನಾವು ನೋಡುವ ಆಸಕ್ತಿದಾಯಕವಾದ ಹೊಸ ಹೊಸ ಪ್ರಕರಣಗಳನ್ನು ಜರ್ನಲ್ ಗಳಲ್ಲಿ ವರದಿ ಮಾಡುತ್ತಿರಬೇಕು ಎಂದು ಆಗಾಗ ಪ್ರೊ. ಮೋಥಾ ಹೇಳುತ್ತಲೇ ಇದ್ದರು.
ಆಗೊಮ್ಮೆ ಮೈಸೂರಿನ ವೈದ್ಯಕೀಯ ಕಾಲೇಜಿನ ಹಲವು ವಿದ್ಯಾರ್ಥಿನಿಯರಲ್ಲಿ ಇಲಿ ಜ್ವರವು ಕಂಡುಬಂದ ಬಗ್ಗೆ ವರದಿಯಾಯಿತು. ನಮ್ಮೊಡನಿದ್ದ ಪ್ರೊ. ಮೋಥಾ ಆ ವರದಿಯನ್ನು ನೋಡಿ, ‘ಕಕ್ಕಿಲ್ಲಾಯ, ಇದು ಹೇಗಾಗಿರಬೇಕು ಗೊತ್ತಾ? ಅವರ ಹಾಸ್ಟೆಲಿನ ನೀರಿನ ತೊಟ್ಟಿಯಲ್ಲಿ ಇಲಿಗಳು ಪ್ರವೇಶಿಸಿ ಮೂತ್ರ ವಿಸರ್ಜನೆ ಮಾಡಿರಬೇಕು, ಆ ನೀರನ್ನು ಕುಡಿದು, ಅದರಲ್ಲಿ ಸ್ನಾನ ಮಾಡಿ, ಪಾಪ, ಆ ವಿದ್ಯಾರ್ಥಿನಿಯರಿಗೆ ಇಲಿ ಜ್ವರ ಬಂದಿರಬಹುದು. ಇದು ಸಾಮಾನ್ಯ’ ಎಂದರು. ವಾರದ ನಂತರ ಮೈಸೂರಿನಿಂದ ಬಂದ ವರದಿಯು ಪ್ರೊ. ಮೋಥಾ ಅವರ ಶಂಕೆಯನ್ನು ದೃಢಪಡಿಸಿತ್ತು. ಎಲ್ಲೋ ಆದ ಸೋಂಕಿನ ಬಗ್ಗೆ ಇಲ್ಲೇ ಕೂತು ತರ್ಕಿಸಬಲ್ಲ ಅಪಾರ ಅನುಭವ ಮತ್ತು ಜಾಣ್ಮೆ ಅವರಲ್ಲಿತ್ತು.
ಅದಾಗಿ ಒಂದೆರಡು ತಿಂಗಳಲ್ಲಿ ಸುರತ್ಕಲ್ ಪರಿಸರದಲ್ಲಿ ಹಲವರಲ್ಲಿ ಇಲಿ ಜ್ವರ ಕಾಣಿಸಿಕೊಂಡಿತ್ತು, ಕೆಲವರು ಮೃತಪಟ್ಟಿದ್ದರು. ನಮ್ಮ ಕೇಂಟೀನ್ ಮಾತುಕತೆಯ ನಡುವೆ ಪ್ರೊ. ಮೋಥಾ ಹೇಳಿದರು: ‘ನೋಡಿ, ಇಲಿಗಳ ಮೂತ್ರದಿಂದ ಅಥವಾ ಇಲಿಜ್ವರವಿದ್ದ ಆಕಳ ಮೂತ್ರದಿಂದ ಯಾವುದೋ ನದಿ ಅಥವಾ ತೊರೆಯು ಕಲುಷಿತಗೊಂಡ ಕಾರಣಕ್ಕೆ ಹೀಗಾಗಿರಬೇಕು, ಇಲ್ಲವಾದರೆ ಇಷ್ಟೊಂದು ಜನ ಒಮ್ಮೆಗೇ ಸೋಂಕಿತರಾಗಲು ಸಾಧ್ಯವಿಲ್ಲ. ಆಕಳ ಮೂತ್ರದ ಪ್ರಮಾಣ ಲೀಟರುಗಟ್ಟಲೆ ಇರುತ್ತದೆ. ಬೇಕಾದರೆ ನೋಡಿ, ಅಲ್ಲಿ ನದಿಯೋ, ತೊರೆಯೋ ಇದ್ದೇ ಇರುತ್ತದೆ, ಯಾವುದೋ ಹಟ್ಟಿಗಳಿಂದ ಅದು ಕಲುಷಿತಗೊಳ್ಳುತ್ತಿರುತ್ತದೆ’ ಎಂದರು! ನಾವು ಕಣ್ಣು ಬಿಟ್ಟು ನೋಡುತ್ತಿದ್ದಂತೆ, ‘ಕಕ್ಕಿಲ್ಲಾಯ, ನಾವೇ ಏಕೆ ಹೋಗಬಾರದು? ನೀನು ನನ್ನನ್ನು ಕರೆದುಕೊಂಡು ಹೋಗುತ್ತೀಯಾ?’ ಎಂದು ಕೇಳಿಯೇ ಬಿಟ್ಟರು. ಆ ದಿನಗಳಲ್ಲಿ ಅವರಿಗೆ ಎದೆಯ ಬದಿಯಲ್ಲಿ ನರಶೂಲೆ ಕಾಡುತ್ತಿತ್ತು. ‘ಸರ್, ಖಂಡಿತ, ಸಂತೋಷದಿಂದ ಕರೆದುಕೊಂಡು ಹೋಗುತ್ತೇನೆ. ಆದರೆ ನನ್ನ ಎ ಸಿ ಇಲ್ಲದ ಸಣ್ಣ ಮಾರುತಿ 800ರಲ್ಲಿ ನಿಮಗೆ ಕಷ್ಟವಾದೀತಲ್ಲ? ನಿಮ್ಮ ಪಕ್ಕೆಯಲ್ಲಿ ನೋವು ಜಾಸ್ತಿಯಾಗುತ್ತಿದೆಯಲ್ಲ?’ ಎಂದೆ. ‘ಅದೆಲ್ಲ ಚಿಂತೆ ಮಾಡಬೇಡ, ನಾನು ಸರಿಯಿದ್ದೇನೆ. ನಾಳೆಯೇ ಹೋಗೋಣ. ಡಾ. ಹೆಗ್ಡೆ, ಇವನಿಗೆ ಹೊರಡುವುದಕ್ಕೆ ಒಪ್ಪಿಗೆ ಕೊಡಿ’ ಎಂದರು.
ಮರುದಿನ ಬೆಳಗ್ಗೆಯೇ ಕಾಲೇಜಿನಿಂದ ಹೊರಟು, ಸುರತ್ಕಲ್, ಕಟೀಲು, ಬಜ್ಪೆ ಪರಿಸರವೆಲ್ಲಾ ಸುತ್ತಿದೆವು. ಪ್ರೊ. ಮೋಥಾ ಊಹಿಸಿದ್ದಂತೆಯೇ ಅಲ್ಲಿ ನಡೆದಿತ್ತು. ಅಲ್ಲಿ ಅದಾಗಲೇ ಇಳಿಜ್ವರದಿಂದ ಗುಣಮುಖರಾಗಿದ್ದ ಒಬ್ಬರನ್ನು ಪರೀಕ್ಷಿಸುತ್ತಿದ್ದಾಗ ಅವರ ಕಾಲಿನಲ್ಲಿದ್ದ ತುರಿಕಜ್ಜಿಯೊಂದು ಪ್ರೊ. ಮೋಥಾ ಕಣ್ಣಿಗೆ ಬಿತ್ತು. ‘ಇದು ಕರುಳಿನ ಜಂತುಗಳು ಪ್ರವೇಶಿಸಿದಾಗ ಆಗುವ ಕಜ್ಜಿಯಂತಿದೆ. ಕಲುಷಿತವಾದ ನೀರಿನಲ್ಲಿರುವ ಇಲಿ ಜ್ವರದ ಬ್ಯಾಕ್ಟೀರಿಯಾಗಳು ಇಂಥ ಕಜ್ಜಿಗಳ ಮೂಲಕ ಅವರ ದೇಹವನ್ನು ಪ್ರವೇಶಿಸಲು ಸುಲಭವಾಗಿರಬಹುದು’ ಎಂದರು. ಇವೆಲ್ಲವನ್ನೂ ಆ ಬಳಿಕ ನಾವು ಆಕ್ಸ್ ಫರ್ಡ್ ವಿವಿಯ ಸಮಾವೇಶದಲ್ಲೂ, ವೈದ್ಯಕೀಯ ವಿದ್ವತ್ ಪತ್ರಿಕೆಗಳಲ್ಲೂ ವರದಿ ಮಾಡಿದ್ದೆವು.
ಅದಾಗಿ ಕೆಲವು ತಿಂಗಳಲ್ಲಿ ಅವರು ತನ್ನೂರಿಗೆ ಮರಳಿದರು. ನೆನಪಾದಾಗಲೆಲ್ಲ ಕರೆ ಮಾಡಿ ವಿಚಾರಿಸುತ್ತಿದ್ದರು, ಮಂಗಳೂರಿನಲ್ಲಿ ಮಲೇರಿಯಾ ಹೇಗಿದೆ ಎಂದು ಕೇಳುವುದಕ್ಕೆ ಮರೆಯುತ್ತಿರಲಿಲ್ಲ. ಮೊದಲಿದ್ದಂತೆ ಸರಿಯಾಗಿ ನಡೆಯುತ್ತಿಲ್ಲ ಸರ್ ಎಂದು ನಾನೆಂದರೆ, ‘ಓ, ಯೂಸ್ ಲೆಎಸ್ ಫೆಲೋಸ್’ ಎನ್ನುತ್ತಿದ್ದರು. ತಿರುವನಂತಪುರದ ಬಳಿಯ ತನ್ನ ಮನೆಗೆ ಮರಳಿ ಎರಡು ವರ್ಷಗಳಲ್ಲಿ ಅವರು ನಮ್ಮನ್ನಗಲಿ ಹೋದರು. (ಸುಮಾರು ಅದೇ ಸಮಯದಲ್ಲಿ ಮಲೇರಿಯಾ ಚಿಕಿತ್ಸೆಗೆ ಪ್ರೈಮಾಕ್ವಿನ್ ಮಾತ್ರೆಯನ್ನು 5 ದಿನಗಳಿಗೆ ಬದಲಾಗಿ 14 ದಿನಗಳಿಗೆ ನೀಡಬೇಕು ಎಂದು ಸರಕಾರವು ತನ್ನ ನೀತಿಯನ್ನು ಬದಲಿಸಿತು. ಪ್ರೊ. ಮೋಥಾ ಇದ್ದಿದ್ದರೆ ‘ಇನ್ನು ನೀನು ಆವತ್ತು ಬರೆದಿದ್ದಂತೆಯೇ 14 ದಿನಗಳ ಚಿಕಿತ್ಸೆ ಎಂದು ಬರೆಯಲು ಅಡ್ಡಿಯಿಲ್ಲ’ ಎನ್ನುತ್ತಿದ್ದರೇನೋ!)
ಯಾವುದೇ ಸೋಂಕು ಹರಡತೊಡಗಿದಾಗ ಅದರ ಬಗ್ಗೆ ಚಿಂತಿಸಿ, ಅದರ ಜಾಡು ಹಿಡಿದು ತನಿಖೆ ಮಾಡಿ, ನಮ್ಮ ಊರಿಗೆ ಸೂಕ್ತವೆನಿಸುವ ನಿಯಂತ್ರಣೋಪಾಯಗಳನ್ನು ಸೂಚಿಸುತ್ತಿದ್ದ ಪ್ರೊ. ಮೋಥಾ ಈ ಕೊರೋನಾ ಕಾಲದಲ್ಲಿ ತುಂಬಾ ನೆನಪಾಗುತ್ತಿದ್ದಾರೆ.
ಆ ಕಾಲದಲ್ಲಿ ಅವರಂಥ ಹಿರಿಯ ಸಮುದಾಯ ಆರೋಗ್ಯ ತಜ್ಞರು ಹೇಳುವುದನ್ನು ಆಗಿನ ಸರಕಾರಗಳು, ಅವುಗಳ ಅಧಿಕಾರಿಗಳು ಕೇಳುತ್ತಿದ್ದರು, ಅವರ ಸಲಹೆಗಳನ್ನು ಪಾಲಿಸುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಅವರ ಪೀಳಿಗೆಯ ತಜ್ಞರು ನಿವೃತ್ತರಾಗಿದ್ದಾರೆ; ಅವರಲ್ಲಿ ಹಲವರು ಸುಮ್ಮನಿದ್ದಾರೆ, ಕೆಲವರು ತಮ್ಮ ಅಭಿಪ್ರಾಯಗಳನ್ನು ಹೇಳಿದರೂ ಸರಕಾರವು ಅವನ್ನು ಪರಿಗಣಿಸುವಂತೆ ಕಾಣುತ್ತಿಲ್ಲ. ವೆಲ್ಲೂರಿನ ಸಿಎಂಸಿಯ ನಿವೃತ್ತ ವೈರಾಣು ತಜ್ಞ ಡಾ| ಜೇಕಬ್ ಜಾನ್, ಅದೇ ಸಂಸ್ಥೆಯ ನಿವೃತ್ತ ಡೀನ್ ಹಾಗೂ ರೋಗ ನಿಯಂತ್ರಣ ತಜ್ಞ ಡಾ| ಜಯಪ್ರಕಾಶ್ ಮುಳಿಯಿಲ್, ಐಸಿಎಂಆರ್ ನ ಕೆಲವು ಹಿರಿಯ ವಿಜ್ಞಾನಿಗಳು ಕೊರೋನಾ ಸೋಂಕನ್ನು ನಿಯಂತ್ರಿಸಲು ನಮ್ಮ ದೇಶಕ್ಕೆ ಸೂಕ್ತವೆನಿಸುವ ಕ್ರಮಗಳನ್ನು ಮಾರ್ಚ್ ಮೊದಲಿನಿಂದಲೇ ಹೇಳುತ್ತಾ ಬಂದಿದ್ದಾರೆ. ಆದರೆ ಅವನ್ನು ಯಾರೂ ಪರಿಗಣಿಸಿದಂತಿಲ್ಲ.
ಈಗಲೂ ಎಲ್ಲಾ ಜಿಲ್ಲೆಗಳಲ್ಲಿ ಆಡಳಿತದ ವತಿಯಿಂದ ಪ್ರತಿನಿತ್ಯ ನಡೆಯುತ್ತಿರುವ ಸಭೆಗಳಲ್ಲಿ ಈಗಿನ ಸಮುದಾಯ ವೈದ್ಯಕೀಯ ತಜ್ಞರು, ಇತರ ವೈದ್ಯರು ಭಾಗವಹಿಸುತ್ತಲೇ ಇದ್ದಾರೆ. ಕೊರೋನಾ ಸೋಂಕಿನ ನಿಯಂತ್ರಣ ಎಲ್ಲರೆದುರಿಗಿದೆ.
Leave a Reply