ಕೊರೋನ: ಸಫಲ ವಿಜ್ಞಾನ, ವಿಫಲ ವೈಜ್ಞಾನಿಕ ಮನೋವೃತ್ತಿ (ಹೊಸತು ಮಾಸಪತ್ರಿಕೆ, ಮಾರ್ಚ್ 2021)
ಹೊಸ ಕೊರೋನ ವೈರಸ್ ಭಾರತಕ್ಕೆ ಹೊಕ್ಕಿ ಒಂದು ವರ್ಷವಾಯಿತು, ಕರ್ನಾಟಕದಲ್ಲಿ, ಆ ಬಳಿಕ ಇಡೀ ದೇಶದಲ್ಲಿ, ಲಾಕ್ ಡೌನ್ ಹೇರಿದ್ದಕ್ಕೂ ವರ್ಷವಾಯಿತು. ವಿಶ್ವದಲ್ಲೇ ಅತಿ ಕಠಿಣದ್ದೆಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಕರೆಯಲ್ಪಟ್ಟ, ಎರಡು ತಿಂಗಳಷ್ಟು ಅತಿ ದೀರ್ಘವಾಗಿದ್ದ, ಕೋಟಿಗಟ್ಟಲೆ ಜನರ ಊಟ, ಕೆಲಸ, ವಸತಿಗಳನ್ನು ಕಿತ್ತುಕೊಂಡ, ಅತಿ ಅಮಾನವೀಯವಾದ, ದಿಗ್ಬಂಧನವನ್ನು ಭಾರತದಲ್ಲಿ ಹೇರಲಾಗಿದ್ದರೂ ಕೊರೋನ ಸೋಂಕು ಅದನ್ನೆಲ್ಲ ದಾಟಿ ಹಳ್ಳಿ-ಹಳ್ಳಿಗಳನ್ನೂ ತಲುಪಿತು. ಈ 2021ರ ಮಾರ್ಚ್ ಮೊದಲ ವಾರದ ವೇಳೆಗೆ ಅಧಿಕೃತವಾಗಿ ಕೊರೋನ ಪ್ರಕರಣಗಳ ಸಂಖ್ಯೆ ಒಂದು ಕೋಟಿ ಹನ್ನೆರಡು ಲಕ್ಷ, ಮೃತರ ಸಂಖ್ಯೆ 158000 ಇದ್ದರೂ, ಸೋಂಕಿತರ ಸಂಖ್ಯೆಯು 90 ಪಟ್ಟು, ಅಂದರೆ 100 ಕೋಟಿಗೂ ಹೆಚ್ಚು, ಮತ್ತು ಮೃತರ ಸಂಖ್ಯೆಯು ಕನಿಷ್ಠ 5 ಪಟ್ಟು ಹೆಚ್ಚು, ಅಂದರೆ ಸುಮಾರು 7 ಏಳು ಲಕ್ಷದಷ್ಟು, ಎಂದು ಹೇಳಲಾಗಿದೆ. ಭಾರತದೊಳಕ್ಕೆ ಕೊರೋನ ಹೊಕ್ಕಿದಾಗಲೇ ಅಂದಾಜಿಸಿದ್ದಂತೆ ಒಂದು ವರ್ಷವಾಗುತ್ತಿದ್ದಂತೆ ಅದು 60-70% ಭಾರತೀಯರಿಗೆ ಹರಡಿಯಾಗಿದೆ, ಅಷ್ಟೊಂದು ಜನರಲ್ಲಿ ಅದರೆದುರು ಪ್ರತಿರೋಧವು ಬೆಳೆದಿರುವುದರಿಂದ ಅದರ ಹರಡುವಿಕೆಯು ಗಣನೀಯವಾಗಿ ತಗ್ಗಿದೆ; ಸೋಂಕಿತರಲ್ಲಿ 0.05-0.5ರಷ್ಟು ಮಂದಿ ಸಾವನ್ನಪ್ಪುವ ಸಾಧ್ಯತೆಗಳಿವೆ ಎಂದು ಕಳೆದ ಮಾರ್ಚ್-ಎಪ್ರಿಲ್ ವೇಳೆಯಲ್ಲೇ ಅಂದಾಜಿಸಿದ್ದಂತೆ ಇದುವರೆಗೆ ಮೃತರಾದವರ ಪ್ರಮಾಣವು 0.07% ಅಷ್ಟೇ ಇದೆ, ಮತ್ತು ಮೃತರಲ್ಲಿ ಹೆಚ್ಚಿನವರು ಮೊದಲೇ ಅತಿ ಗಂಭೀರವಾದ ಸಮಸ್ಯೆಗಳಿದ್ದವರಾಗಿದ್ದರು ಎನ್ನುವುದೂ ಕಂಡು ಬಂದಿದೆ. ಒಟ್ಟಿನಲ್ಲಿ, ಅತಿ ಕಠಿಣ ಲಾಕ್ ಡೌನ್ ನಿಂದ ಕೊರೋನ ಹರಡುವಿಕೆ ತಗ್ಗಲಿಲ್ಲ, ಸಾವಿನ ಪ್ರಮಾಣವೂ ಬದಲಾಗಲಿಲ್ಲ.
ಈ ಒಂದು ವರ್ಷದಲ್ಲಿ ಹೊಸ ಕೊರೋನ ಸೋಂಕನ್ನು ನಾವು ಎದುರಿಸಿದ ಬಗೆಯನ್ನು ಹಿಂತಿರುಗಿ ನೋಡಬೇಕಾದದ್ದು ಅತ್ಯಗತ್ಯವಾಗಿದೆ. ಇಲ್ಲದಿದ್ದರೆ ಈಗ ಮಾಡಿದ ತಪ್ಪುಗಳು ಪುನರಾವರ್ತನೆಯಾಗಲಿವೆ, ಭವಿಷ್ಯದುದ್ದಕ್ಕೂ ಕಾಡಲಿವೆ.
ಈ ಕೊರೋನ ಸೋಂಕು ನಮ್ಮ ವಿಜ್ಞಾನ-ತಂತ್ರಜ್ಞಾನಗಳ ಶಕ್ತಿಯನ್ನು ತೋರಿಸಿಕೊಟ್ಟಿತು, ಜೊತೆಗೆ, ನಮ್ಮಲ್ಲಿ ವೈಜ್ಞಾನಿಕ ಮನೋವೃತ್ತಿ ಮತ್ತು ವೈಚಾರಿಕ ಸಾಮರ್ಥ್ಯಗಳ ಕೊರತೆಯಿದೆ ಎನ್ನುವುದನ್ನೂ ತೋರಿಸಿತು, ವೈಜ್ಞಾನಿಕ ಸಾಧನೆಗಳು ಅದೆಷ್ಟೇ ದೊಡ್ಡದಿದ್ದರೂ ನಮ್ಮ ಜನರಲ್ಲೂ, ಮಾಧ್ಯಮಗಳಲ್ಲೂ, ಆಡಳಿತದಲ್ಲಿರುವರಲ್ಲೂ ವೈಜ್ಞಾನಿಕ ಮನೋವೃತ್ತಿಯಿಲ್ಲದಿದ್ದರೆ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚೆನ್ನುವುದು ಸಾಬೀತಾಯಿತು. ವೈಜ್ಞಾನಿಕ ಮನೋವೃತ್ತಿ ಮತ್ತು ವೈಚಾರಿಕ ಸಾಮರ್ಥ್ಯಗಳಿಲ್ಲದ ವೈಫಲ್ಯವು ವಿಜ್ಞಾನ ಮತ್ತು ತಂತ್ರಜ್ಞಾನಗಳ ಉನ್ನತ ಯಶಸ್ಸನ್ನು ನುಂಗಿ ಹಾಕುತ್ತದೆ ಎನ್ನುವುದು ಈ ಒಂದು ವರ್ಷದಲ್ಲಿ ಶತಸ್ಸಿದ್ಧವಾಯಿತು.
ಚೀನಾದಲ್ಲಿ ಸೋಂಕಿನಿಂದ ಮೊತ್ತಮೊದಲ ವ್ಯಕ್ತಿಯು ಆಸ್ಪತ್ರೆಗೆ ದಾಖಲಾದ ಕೇವಲ ಎರಡೇ ವಾರಗಳಲ್ಲಿ ಅಲ್ಲಿನ ವೈದ್ಯರು ಈ ಹೊಸ ವೈರಾಣುವನ್ನೂ, ಅದರ ಆರ್‌ಎನ್‌ಎ, ಪ್ರೋಟೀನುಗಳನ್ನೂ, ಅವು ದೇಹದೊಳಗೆ ವರ್ತಿಸುವ ಬಗೆಯನ್ನೂ ಗುರುತಿಸಿದ್ದು, ಎರಡೇ ತಿಂಗಳಲ್ಲಿ ಅಲ್ಲಿ ಗುರುತಿಸಲ್ಪಟ್ಟಿದ್ದ 70000ಕ್ಕೂ ಹೆಚ್ಚು ಸೋಂಕಿತರ ಎಲ್ಲ ವಿವರಗಳನ್ನೂ ವಿಶ್ಲೇಷಿಸಿ ಈ ಸೋಂಕು ಯಾರಿಗೆ, ಹೇಗೆ, ಏನು ಮಾಡುತ್ತದೆ, ಯಾರಿಗೆ ಯಾವ ಗಂಭೀರ ಸಮಸ್ಯೆಗಳನ್ನುಂಟು ಮಾಡುತ್ತವೆ ಎಂಬ ವಿವರಗಳನ್ನು ಪ್ರಕಟಿಸಿದ್ದು, ಈ ಹೊಸ ವೈರಸನ್ನು ಪತ್ತೆ ಹಚ್ಚಬಲ್ಲ ಪಿಸಿಆರ್ ಪರೀಕ್ಷೆಯನ್ನು ಸಿದ್ಧಪಡಿಸಿದ್ದು, ಈ ಆರ್‌ಎನ್‌ಎ ಮತ್ತು ಪ್ರೋಟೀನ್‌ಗಳ ಆಧಾರದಲ್ಲಿ ಲಸಿಕೆಗಳ ತಯಾರಿ ಕೂಡಲೇ ಆರಂಭಗೊಂಡದ್ದು, ಆಧುನಿಕ ಮಾಹಿತಿ ತಂತ್ರಜ್ಞಾನದಿಂದ ಇವೆಲ್ಲವೂ ವಿಶ್ವದ ಎಲ್ಲಾ ಮೂಲೆಗಳಿಗೆ ಕ್ಷಣಮಾತ್ರದಲ್ಲಿ ರವಾನೆಯಾಗಿ ಎಲ್ಲರಿಗೂ ಉಚಿತವಾಗಿ ಲಭ್ಯವಾದದ್ದು ಎಲ್ಲವೂ ಮನುಕುಲದ ವೈಜ್ಞಾನಿಕ ಸಾಮರ್ಥ್ಯವೇನೆನ್ನುವುದನ್ನು ತೋರಿಸಿದವು. ಆದರೆ ಈ ಸೋಂಕನ್ನು ನಿಭಾಯಿಸುವಲ್ಲಿ ವಿಜ್ಞಾನಿಗಳ ಬದಲಿಗೆ ರಾಜಕಾರಣಿಗಳ ಪಾರಮ್ಯ, ವೈಜ್ಞಾನಿಕ ಮಾಹಿತಿಯ ಬದಲಿಗೆ ಮಾಧ್ಯಮಗಳ ಕಿರುಚಾಟ, ತಾಳ್ಮೆ ಮತ್ತು ಜಾಣ್ಮೆಗಳ ಬದಲಿಗೆ ಭಯ, ಆತಂಕ ಮತ್ತು ಏನಾದರೂ ಮಾಡಿದ್ದೇವೆಂದು ತೋರಿಸುವ ಹುಚ್ಚಿನಲ್ಲಿ ಕೈಗೊಂಡ ಆಧಾರರಹಿತವಾದ, ತರಾತುರಿಯ ನಿರ್ಧಾರಗಳು ಭಾರತವೂ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ ಕಂಡುಬಂದವು. ಈ ಅವೈಜ್ಞಾನಿಕ, ಅವೈಚಾರಿಕ ವರ್ತನೆಗಳ ದುಷ್ಪರಿಣಾಮಗಳನ್ನು ಈಗ ಮಾತ್ರವಲ್ಲ, ಮುಂದಿನ ಹಲವು ವರ್ಷಗಳವರೆಗೆ ಎಲ್ಲರೂ ಅನುಭವಿಸಬೇಕಾಗಿದೆ.
ಲಾಕ್ ಡೌನ್ ಎಂಬ ಮೂರ್ಖತನ
ಚೀನಾದ ವುಹಾನ್ ನಗರದಲ್ಲಿ ಕೊರೋನ ಕಂಡುಬಂದ ಮೊದಲಲ್ಲಿ ಅದರ ಬಗ್ಗೆ ಹೆಚ್ಚೇನೂ ತಿಳಿದಿರದಿದ್ದಾಗ ಚೀನಾದ ಆಡಳಿತವು ಆ ನಗರವೊಂದನ್ನು ಮಾತ್ರವೇ ದಿಗ್ಬಂಧನಕ್ಕೊಳಪಡಿಸಿತು, ಬೇರೆ ಊರುಗಳೊಂದಿಗೆ ಸಂಪರ್ಕವನ್ನು ಮುಚ್ಚಿ, ಎಲ್ಲರನ್ನೂ ತಮ್ಮ ಮನೆಯೊಳಗೇ ಉಳಿಯುವಂತೆ ಮಾಡಿ, ಅವರ ಸಕಲ ಅಗತ್ಯಗಳನ್ನೂ, ಆರೋಗ್ಯ ಸೇವೆಗಳನ್ನೂ ಒದಗಿಸಿತು. ಹೀಗೆ ಅದು ಸೋಂಕನ್ನು ತಡೆಯುವಲ್ಲಿ ಯಶಸ್ವಿಯಾಯಿತು. ನಂತರದ ತಿಂಗಳುಗಳಲ್ಲಿಯೂ ಚೀನಾದಲ್ಲಿ ಎಲ್ಲಾದರೂ ಸೋಂಕಿನ ಸಂಶಯವಿದ್ದಾಗ ಸೋಂಕಿತರನ್ನು ಪತ್ತೆ ಹಚ್ಚುವುದಕ್ಕೆ ಊರಿಡೀ ವ್ಯಾಪಕವಾಗಿ ಪರೀಕ್ಷಿಸುವುದು, ಸೋಂಕಿತರನ್ನು ದಿಗ್ಬಂಧಿಸಿಡುವುದು, ಎಲ್ಲರಿಗೂ ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಿರುವುದು ಇವೇ ಮುಂತಾದ ಕಠಿಣ ಕ್ರಮಗಳನ್ನು ಪಾಲಿಸುವ ಮೂಲಕ ಕೊರೋನ ಸೋಂಕನ್ನು ನಿಯಂತ್ರಣದಲ್ಲಿರಿಸಲಾಗಿದೆ. ಈಗ ಅಲ್ಲಿ ಲಸಿಕೆಯನ್ನೂ ವ್ಯಾಪಕವಾಗಿ ನೀಡಲಾಗುತ್ತಿದೆ.
ಚೀನಾದಲ್ಲಿ ಡಿಸೆಂಬರ್ 2019ರಲ್ಲಿ ಕಂಡುಬಂದ ಸೋಂಕು ಫೆಬ್ರವರಿ 2020ರ ಕೊನೆಯ ವೇಳೆಗೆ ಇತರ ದೇಶಗಳಿಗೆ ಹರಡತೊಡಗಿದಾಗ ಚೀನಾದ 70000ಕ್ಕೂ ಹೆಚ್ಚು ಸೋಂಕಿತರ ವಿವರಗಳು ಕೂಡ ಎಲ್ಲಾ ದೇಶಗಳಿಗೆ ತಲುಪಿಯಾಗಿತ್ತು. ಶೇ.80ಕ್ಕೂ ಹೆಚ್ಚು ಸೋಂಕಿತರಲ್ಲಿ ರೋಗ ಲಕ್ಷಣಗಳೇ ಇರುವುದಿಲ್ಲ, ಹಿರಿವಯಸ್ಕರು ಮತ್ತು ಅದಾಗಲೇ ಅನ್ಯ ಕಾಯಿಲೆಗಳಿರುವ ಕೆಲವರಲ್ಲಷ್ಟೇ ಸಮಸ್ಯೆಗಳಾಗಿ 1% ಅಷ್ಟು ಸಾವನ್ನಪ್ಪಬಹುದು, 30 ವರ್ಷಕ್ಕಿಂತ ಕೆಳಗಿನವರಲ್ಲಿ ಸಮಸ್ಯೆಗಳಾಗುವ ಸಾಧ್ಯತೆಗಳು ಅತಿ ವಿರಳ ಎಂಬ ವಿವರಗಳೆಲ್ಲವೂ ಆಗಲೇ ಸ್ಪಷ್ಟವಾಗಿದ್ದವು. ಇವನ್ನಾಧರಿಸಿ ಭಾರತವೂ ಸೇರಿದಂತೆ ಎಲ್ಲಾ ದೇಶಗಳಲ್ಲಿ ಅಲ್ಲಲ್ಲಿಗೆ ಸೂಕ್ತವಾದ, ವೈಜ್ಞಾನಿಕವಾದ ಕ್ರಮಗಳನ್ನು ಕೈಗೊಳ್ಳಲು ಖಂಡಿತಕ್ಕೂ ಸಾಧ್ಯವಿತ್ತು.
ಭೂಲೋಕದಲ್ಲಿರುವ ಎಲ್ಲಾ ಮನುಷ್ಯರು ತಮ್ಮ ಜೀವತಳಿಯನುಸಾರ 99.6% ಸಾಮ್ಯತೆಯನ್ನು ಹೊಂದಿದ್ದರೂ, ಸಾಮಾಜಿಕವಾಗಿ, ಆರ್ಥಿಕವಾಗಿ, ಪೌಷ್ಠಿಕವಾಗಿ, ಆಹಾರ ಮತ್ತು ಜೀವನ ಶೈಲಿಗಳಿಗನುಗುಣವಾಗಿ, ಮತ್ತು ಇವೆಲ್ಲವುಗಳ ಕಾರಣಕ್ಕೆ ರೋಗ ಪ್ರತಿರೋಧ ಶಕ್ತಿಗನುಗುಣವಾಗಿ ಬಹಳಷ್ಟು ಭಿನ್ನರಾಗಿರುತ್ತಾರೆ, ದೇಶದಿಂದ ದೇಶಕ್ಕೆ, ದೇಶದೊಳಗೂ ರಾಜ್ಯ-ಜಿಲ್ಲೆ- ತಾಲೂಕು- ಕುಟುಂಬಗಳೊಳಗೆ ಬೇರೆಯೇ ಆಗಿರುತ್ತಾರೆ. ಆದ್ದರಿಂದ ಕೊರೋನ ಇರಲಿ, ಬೇರಾವುದೇ ಸೋಂಕಿರಲಿ, ನಿಯಂತ್ರಣೋಪಾಯಗಳನ್ನು ರೂಪಿಸುವಾಗ ಈ ಭಿನ್ನತೆಗಳನ್ನು ಪರಿಗಣಿಸುವುದು ಅತ್ಯಗತ್ಯವಾಗಿದ್ದು, ಸಮಸ್ತ ಭೂಲೋಕಕ್ಕೆ ಒಂದೇ ನಿಯಂತ್ರಣೋಪಾಯವಿರಲಾಗದು. ಆದರೆ ಹೊಸ ಕೊರೋನ ಸೋಂಕನ್ನು ನಿಭಾಯಿಸುವಲ್ಲಿ ಈ ಸರಳ ಸತ್ಯವನ್ನೇ ಆಡಳಿತಗಳು ಕಡೆಗಣಿಸಿಬಿಟ್ಟವು. ಚೀನಾ ಅದೇನೋ ಲಾಕ್ ಡೌನ್ ಮಾಡಿತು ಎಂಬುದನ್ನು ಅನುಸರಿಸಿ ಮಾಧ್ಯಮಗಳು ‘ಯಾವಾಗ ಲಾಕ್ ಡೌನ್ ಮಾಡುತ್ತೀರಿ’, ‘ಯಾಕೆ ಈಗಲೇ ಲಾಕ್ ಡೌನ್ ಮಾಡುತ್ತಿಲ್ಲ’ ಎಂದು 24X7 ಗಂಟೆ ಆರ್ಭಟಿಸಿದವು, ಲಾಕ್ ಡೌನ್ ಮಾಡಲೇ ಬೇಕೆಂಬ ಒತ್ತಡವನ್ನು ನಿರ್ಮಿಸಿದವು. ಇಂಥ ಒತ್ತಡಗಳಿಗೆ ಮಣಿದು ಹಲವು ದೇಶಗಳ ಆಡಳಿತಗಳು ಲಾಕ್ ಡೌನ್ ಘೋಷಿಸುವ ಸ್ಪರ್ಧೆಗೆ ಬಿದ್ದವು, ವಿಶ್ವ ಗುರುವಾಗಲು ಹೊರಟಿರುವ ಭಾರತದ ಸರಕಾರವು ಸೋಂಕು ಹರಡುವುದು ಆರಂಭವಾಗುವ ಮೊದಲೇ ಅತಿ ಕಠಿಣ ಲಾಕ್ ಡೌನ್ ಘೋಷಿಸಿಬಿಟ್ಟಿತು!
ಮಾರ್ಚ್ ಮೊದಲಲ್ಲಿ ಇಟೆಲಿ ಮತ್ತು ಇರಾನ್‌ಗಳ ಕೆಲವು ಊರುಗಳಲ್ಲಿ ಕೊರೋನ ಸೋಂಕು ವ್ಯಾಪಕವಾಗತೊಡಗಿತ್ತು, ನೂರಾರು ಸಾವುಗಳೂ ಆಗಿದ್ದವು, ಬಹುತೇಕ ಎಲ್ಲಾ ಸಾವುಗಳು 65 ವರ್ಷಕ್ಕೆ ಮೇಲ್ಪಟ್ಟವರಲ್ಲೇ ಆಗಿದ್ದವು; ಅಲ್ಲಿಯೂ ಯುವಜನರಲ್ಲಿ ಕೊರೋನ ಸೋಂಕು ಹೆಚ್ಚೇನೂ ಸಮಸ್ಯೆಗಳನ್ನುಂಟು ಮಾಡಿರಲಿಲ್ಲ. ಇಟೆಲಿಯಲ್ಲಿ ಜನಸಂಖ್ಯೆಯ ಶೇ.22ರಷ್ಟು ಹಿರಿವಯಸ್ಕರಿದ್ದುದರಿಂದ ಸಮಸ್ಯೆಗೀಡಾದವರ ಮತ್ತು ಸಾವನ್ನಪ್ಪಿದವರ ಸಂಖ್ಯೆಯು ಅಲ್ಲಿ ಹೆಚ್ಚಿತ್ತು. ಅಂಥ ಸನ್ನಿವೇಶದಲ್ಲಿ ಅಲ್ಲಿ ಸೋಂಕು ಹರಡುತ್ತಿದ್ದ ಊರುಗಳಲ್ಲಿ ಸೀಮಿತ ಲಾಕ್ ಡೌನ್ ಮಾಡಲಾಗಿತ್ತು. ಮಾರ್ಚ್-ಎಪ್ರಿಲ್ ವೇಳೆಗೆ ಇಂಗ್ಲೆಂಡಿನಲ್ಲೂ ಪ್ರಕರಣಗಳು ಏರತೊಡಗಿದ್ದವು, ಅಲ್ಲೂ ಹಿರಿಯ ವಯಸ್ಕರೇ ಹೆಚ್ಚು ತೊಂದರೆಗೀಡಾಗಿದ್ದರು, ವ್ಯಾಪಕ ಲಾಕ್ ಡೌನ್ ಘೋಷಿಸುವುದಕ್ಕೆ ಅಲ್ಲೂ ಮಾಧ್ಯಮಗಳ ಒತ್ತಡಗಳಿದ್ದವು, ಆದರೆ ಅಲ್ಲಿನ ಸರಕಾರವು ವೈದ್ಯಕೀಯ ತಜ್ಞರ ಅಭಿಮತವನ್ನು ಪರಿಗಣಿಸಿ, ಜನರಿಗೆ ಯಾವುದೇ ಕಷ್ಟಗಳಾಗದಂತೆ ಎಚ್ಚರಿಕೆ ವಹಿಸಿ ಸೀಮಿತ ಲಾಕ್ ಡೌನ್ ವಿಧಿಸಿತು.
ಒಮ್ಮೆಗೇ ಹಲವರಿಗೆ ತೀವ್ರ ನಿಗಾ ವ್ಯವಸ್ಥೆ ಬೇಕಾಗುವುದರಿಂದ ಆಸ್ಪತ್ರೆಗಳಲ್ಲಿ ಅವನ್ನು ಒದಗಿಸಲಾಗದೇ, ಹಲವರಿಗೆ ಕೃತಕ ಉಸಿರಾಟದಂಥ ಚಿಕಿತ್ಸೆಯನ್ನು ನೀಡಲಾಗದೆ ಸಾವಿನ ಸಂಖ್ಯೆಯು ಏರುತ್ತದೆ; ಕೊರೋನ ಸೋಂಕಿನ ಚಿಕಿತ್ಸೆಯಲ್ಲಿ ಯಾವುದೇ ನಿರ್ದಿಷ್ಟ ಔಷಧದಿಂದ ಪ್ರಯೋಜನವಾಗದು; ಹೆಚ್ಚಿನವರಿಗೆ ಕೊರೋನ ಸೋಂಕಿನಿಂದ ಯಾವುದೇ ಸಮಸ್ಯೆಯಾಗುವುದಿಲ್ಲ, ಆದ್ದರಿಂದ ಎಲ್ಲರನ್ನೂ ಆಸ್ಪತ್ರೆಗಳಿಗೆ ಕರೆಯಬಾರದು, ಬದಲಿಗೆ ಅವರವರ ಮನೆಗಳಲ್ಲೇ ಇರಲು ಹೇಳಿ, ಸೋಂಕುಂಟಾಗಿ 8-10 ದಿನಗಳಾಗುವಾಗ ಅದು ಉಲ್ಬಣಗೊಳ್ಳುವ ಲಕ್ಷಣಗಳಿದ್ದರೆ ಅಂಥವರನ್ನು ಅಲ್ಲೇ ಪರೀಕ್ಷಿಸಿ ಆಮ್ಲಜನಕ ನೀಡಬಹುದು, ತೀವ್ರ ಸಮಸ್ಯೆಯಾಗುವ ಕೆಲವರನ್ನಷ್ಟೇ ಆಸ್ಪತ್ರೆಗೆ ದಾಖಲಿಸಿದರೆ ಸಾಕು ಎಂಬ ಎಲ್ಲಾ ವಿವರಗಳನ್ನು ಇಟೆಲಿ ಮತ್ತು ಬ್ರಿಟನ್ ನ ವೈದ್ಯರು ಸ್ಪಷ್ಟವಾಗಿ ಮಾರ್ಚ್ ಮಧ್ಯದ ವೇಳೆಗೆ ಪ್ರಕಟಿಸಿದ್ದರು. ಅದೇ ವೇಳೆಗೆ ಚೀನಾದಿಂದ ಇನ್ನಷ್ಟು ವರದಿಗಳು ಪ್ರಕಟವಾಗಿ, ಕೊರೋನಾ ಸೋಂಕು ಮನೆಯ ಹೊರಗಿಗಿಂತ ಮನೆಯೊಳಗೆಯೇ ಪರಸ್ಪರ ಹರಡುವ ಸಾಧ್ಯತೆಯು ನಾಲ್ಕು ಪಟ್ಟು ಹೆಚ್ಚು ಎನ್ನುವುದೂ ಸ್ಪಷ್ಟವಾಗಿತ್ತು.
ಹೀಗೆ ಮಾರ್ಚ್ ಎರಡನೇ ವಾರದ ಹೊತ್ತಿಗೆ ಚೀನಾ, ಇಟೆಲಿಗಳಲ್ಲಿ ಸೋಂಕು ವ್ಯಾಪಕವಾದಾಗ ಸೀಮಿತ ಲಾಕ್ ಡೌನ್ ಮಾಡಲಾಗಿದ್ದನ್ನು ಬಿಟ್ಟರೆ ವಿಶ್ವ ಆರೋಗ್ಯ ಸಂಸ್ಥೆಯಾಗಲೀ, ಅಮೆರಿಕಾ, ಯೂರೋಪ್ ಗಳ ರೋಗ ನಿಯಂತ್ರಣ ಸಂಸ್ಥೆ (ಸಿ.ಡಿ.ಸಿ.) ಗಳಾಗಲೀ ಲಾಕ್ ಡೌನ್ ಮಾಡಬೇಕೆಂದು ಯಾವುದೇ ಸಲಹೆಯನ್ನು ನೀಡಿರಲಿಲ್ಲ. ಭಾರತದಲ್ಲಿ ಮೊದಲ ಕೊರೋನಾ ಪ್ರಕರಣಗಳು ಕಾಣಿಸಿಕೊಂಡ ಆ ದಿನಗಳಲ್ಲಿ ಸೋಂಕನ್ನು ನಿಭಾಯಿಸುವುದಕ್ಕೆ ಅಗತ್ಯವಿದ್ದ ಸಾಕಷ್ಟು ಮಾಹಿತಿಯು ಈ ಎಲ್ಲಾ ದೇಶಗಳಿಂದಲೂ ಲಭ್ಯವಾಗಿತ್ತು. ನಮ್ಮ ಐಸಿಎಂಆರ್ ತಜ್ಞರು ಕೂಡ ಕೊರೋನಾ ನಿಯಂತ್ರಿಸುವ ಬಗ್ಗೆ ಬಹಳ ಎಚ್ಚರಿಕೆಯಿಂದ ಹೇಳಿಕೆಗಳನ್ನು ನೀಡುತ್ತಿದ್ದರು, ಇದೇ ದಿನಗಳಲ್ಲಿ ಬರೆದು ಏಪ್ರಿಲ್ ಮೊದಲ ವಾರದಲ್ಲಿ ಪ್ರಕಟಿಸಿದ್ದ ಲೇಖನದಲ್ಲಿ ಭಾರತಕ್ಕೆ ಲಾಕ್ ಡೌನ್ ಸೂಕ್ತವಾದುದಲ್ಲ ಎಂದೇ ಆ ತಜ್ಞರು ಹೇಳಿದ್ದರು.
ಆದರೆ ಇಂತಹ ತಜ್ಞರ ಅಭಿಪ್ರಾಯಗಳನ್ನು ಕೇಳುವವರಾರು?
ದೇಶದಲ್ಲಿ ಕೊರೋನ ಸೋಂಕಿನಿಂದಾದ ಮೊದಲ ಮೃತ್ಯು ಮಾರ್ಚ್ 12, 2020ರಂದು ಕರ್ನಾಟಕದ ಕಲುಬುರ್ಗಿಯಲ್ಲಾಯಿತು. ಆ ದಿನದವರೆಗೆ ರಾಜ್ಯದಲ್ಲಿ ಗುರುತಿಸಲಾಗಿದ್ದ ಕೊರೋನ ಸೋಂಕಿತರ ಒಟ್ಟು ಸಂಖ್ಯೆ 11 ಆಗಿತ್ತು. ಮರುದಿನ, ಮಾರ್ಚ್ 13ರಂದು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಎಲ್ಲಾ ಶಾಲೆ-ಕಾಲೇಜುಗಳು, ವಾಣಿಜ್ಯ ಮಳಿಗೆಗಳು, ಚಿತ್ರಮಂದಿರಗಳು, ಸಭಾಂಗಣಗಳು, ಮದುವೆ ಸಮಾರಂಭಗಳು ಎಲ್ಲವನ್ನೂ ಮುಚ್ಚುವುದಕ್ಕೆ ನಿರ್ಧರಿಸಲಾಯಿತು. ಬೆಂಗಳೂರಿನ ಹೃದಯ ಶಸ್ತ್ರಚಿಕಿತ್ಸಕರೊಬ್ಬರು ಇಟೆಲಿಯಲ್ಲಾದಂತೆ ಇಲ್ಲೂ ಆಗುವ ಮೊದಲೇ ಎಲ್ಲವನ್ನೂ ಮುಚ್ಚಿಬಿಡಬೇಕು ಎಂದು ಒತ್ತಾಯಿಸಿದ್ದು, ಸರ್ಕಾರ ಏನಾದರೂ ಮಾಡಿ ತೋರಿಸಲೇ ಬೇಕು ಎಂಬ ಮಾಧ್ಯಮಗಳ ಒತ್ತಡ, ಸರಕಾರ ಏನೂ ಮಾಡುತ್ತಿಲ್ಲವೆಂದು ವಿರೋಧ ಪಕ್ಷಗಳು ಕೂಗೆಬ್ಬಿಸಬಹುದೆಂಬ ಆತಂಕಗಳು ಈ ನಿರ್ಧಾರಕ್ಕೆ ಕಾರಣವಾದವು ಎಂದು ಹೇಳಲಾಯಿತು. ಇಡೀ ರಾಜ್ಯದಲ್ಲಿ ಮೂರ್ನಾಲ್ಕು ನಗರಗಳಲ್ಲಿ ಒಟ್ಟು ಕೇವಲ 11 ಪ್ರಕರಣಗಳಿದ್ದಾಗ, ಅವರೆಲ್ಲವೂ ಆಸ್ಪತ್ರೆಗಳಲ್ಲೇ ಸುರಕ್ಷಿತರಾಗಿದ್ದಾಗ, ಶಾಲೆ-ಮಳಿಗೆ-ಮದುವೆಗಳಲ್ಲಿ ಒಬ್ಬರೇ ಒಬ್ಬ ಸೋಂಕಿತರು ಇದ್ದಿರುವ ಸಾಧ್ಯತೆಗಳೇ ಇಲ್ಲದಿದ್ದಾಗ ಇಡೀ ರಾಜ್ಯದ ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲಾಯಿತು! ಇದು ಅತ್ಯಾತುರದ, ಮೂರ್ಖತನದ ನಿರ್ಧಾರ, ಇದನ್ನು ಪ್ರಶ್ನಿಸಿ ಪ್ರತಿಭಟಿಸಬೇಕು ಎಂದದ್ದಕ್ಕೆ ಸರಕಾರದ ಬೆಂಬಲಿಗರಿಂದ ಟೀಕೆಗಳ ಸುರಿಮಳೆಯಾಯಿತು.
ಮಾಧ್ಯಮಗಳು ಈ ನಿರ್ಧಾರವನ್ನು ಹೊಗಳಿದವು, ರಾಜಕೀಯ ಪಕ್ಷಗಳವರು ಏನೂ ಹೇಳಲಾಗದೆ ಬಾಯಿ ಮುಚ್ಚಿ ಕುಳಿತರು, ಜನ ಸಾಮಾನ್ಯರು ಏನು ಮಾಡುವುದೆಂದು ಅರ್ಥವಾಗದೆ ಬಂದದ್ದನ್ನು ಎದುರಿಸುವುದೆಂದು ಸುಮ್ಮನಾದರು. ಕರ್ನಾಟಕದ್ದಾಗಿ ವಾರವಾಗುತ್ತಿದ್ದಂತೆ ಪ್ರಧಾನಿಗಳು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿ ಮಾರ್ಚ್ 22ರಂದು ದೇಶವಿಡೀ ಜನತಾ ಕರ್ಫ್ಯೂ ಪಾಲಿಸಬೇಕೆಂದೂ, ಅದೇ ದಿನ ಸಂಜೆ 5ಕ್ಕೆ ಎಲ್ಲರೂ ಚಪ್ಪಾಳೆ, ಜಾಗಟೆ, ಶಂಖ ಬಾರಿಸಬೇಕೆಂದೂ ಹೇಳಿದರು, ಜನರು ಚಾಚೂ ತಪ್ಪದೆ ಪಾಲಿಸಿದರು. ಮತ್ತೆ ಮಾರ್ಚ್ 24ರ ರಾತ್ರಿ 8 ಗಂಟೆಗೆ ಬಂದು ಆ ಮಧ್ಯರಾತ್ರಿಯಿಂದ 21 ದಿನಗಳ ಕಾಲ ಇಡೀ ದೇಶವನ್ನೇ ದಿಗ್ಬಂಧನಕ್ಕೊಳಪಡಿಸಲಾಗುತ್ತದೆಂದೂ, ಹಾಗೆ ಮಾಡಿದರೆ ಕೊರೋನ ಕುರುಕ್ಷೇತ್ರವನ್ನು ಗೆದ್ದೇ ಗೆಲ್ಲುತ್ತೇವೆಂದೂ ಹೇಳಿದರು. ಆಗ ಇಡೀ ದೇಶದಲ್ಲಿದ್ದುದು ಕೇವಲ 562 ಪ್ರಕರಣಗಳು, ಅವರೂ ಕೂಡ ಆಸ್ಪತ್ರೆಗಳಲ್ಲೇ ಪ್ರತ್ಯೇಕಿಸಲ್ಪಟ್ಟಿದ್ದರು, ಊರಲ್ಲಿ ತಿರುಗುವವರು ಯಾರಿರಲಿಲ್ಲ. ಇರದೇ ಇದ್ದ ಕೊರೋನ ಕುರುಕ್ಷೇತ್ರಕ್ಕಾಗಿ ಮಾಡಿದ ಲಾಕ್ ಡೌನ್ ಜನರ ಜೀವನವನ್ನೇ ಕುರುಕ್ಷೇತ್ರವನ್ನಾಗಿಸಿತು; ಪರವೂರುಗಳಿಗೆ ಹೋಗಿದ್ದವರು ತಿಂಗಳುಗಟ್ಟಲೆ ಅಲ್ಲಲ್ಲೇ ಸಿಕ್ಕಿಕೊಂಡರು, ದುಡಿಯಲೆಂದು ವಲಸೆ ಬಂದಿದ್ದವರು ಮನೆ, ಕೆಲಸ, ಊಟ, ಎಲ್ಲವನ್ನೂ ರಾತೋರಾತ್ರಿ ಕಳೆದುಕೊಂಡು ಬೀದಿಗೆ ಬಿದ್ದರು, ಕೆಲವರು ಸತ್ತರೂ ಪರವಾಗಿಲ್ಲವೆಂದು ಸಾವಿರಾರು ಕಿಮೀ ನಡೆದೇ ತಮ್ಮೂರುಗಳತ್ತ ಸಾಗಿದರು. ಇಲ್ಲದಿದ್ದ ಕೊರೋನಾ ನಿಯಂತ್ರಿಸುವುದಕ್ಕೆ ಮಾಡುವುದೇನಿಲ್ಲದೆ ಬೀದಿಪಾಲಾದವರಿಗೆ ಊಟ, ಬಟ್ಟೆ, ನೆಲೆ ಒದಗಿಸುವುದೇ ಕೆಲಸವಾಗಿಬಿಟ್ಟಿತು, ಸರಕಾರ ಹೇಳಿಕೆ ಕೊಡುವುದರಲ್ಲಿ ಮೈಮರೆಯಿತು, ಮಾಧ್ಯಮಗಳು ಹೆದರಿಸುವುದರಲ್ಲಿ, ಜನರ ಕಷ್ಟಗಳನ್ನು ಅವಹೇಳನ ಮಾಡುವಲ್ಲಿ ನಿರತವಾದವು, ಅಂತಲ್ಲಿ ದೇಶವಾಸಿಗಳೇ ಒಬ್ಬರಿಗೊಬ್ಬರು ನೆರವಾಗಿ ಮಾನವೀಯತೆ ಮೆರೆದರು.
ಮೊದಲಲ್ಲಿ 3 ವಾರಗಳಿಗಿದ್ದ ಲಾಕ್ ಡೌನ್ ಎರಡು ತಿಂಗಳವರೆಗೆ ಮುಂದುವರಿಯಿತು, ಕೊರೋನ ಓಡಿಸಲು ಪ್ರಧಾನಿಯ ಆಣತಿಯಂತೆ ದೀಪ ಆರಿಸಿ ಹಣತೆ ಹೊತ್ತಿಸಿಯೂ ಆಯಿತು. ಕೊರೋನ ವೈರಾಣು ತನ್ನಷ್ಟಕ್ಕೆ ಒಬ್ಬೊಬ್ಬರ ಮನೆಯೊಳಗೆ ಹೊಕ್ಕಿ ಹರಡಿತು, ಅಷ್ಟರಲ್ಲಿ ಲಾಕ್ ಡೌನ್ ನ ಬರ್ಬರತೆ ಅಸಹನೀಯವಾಗಿದ್ದರಿಂದಲೂ, ಆರ್ಥಿಕತೆ ಸಂಪೂರ್ಣವಾಗಿ ನಾಶವಾಗಿದ್ದರಿಂದಲೂ ಅದನ್ನು ಸಡಿಲಿಸಲೇಬೇಕಾಯಿತು; ಹೀಗೆ, ಕೊರೋನಾ ಇಲ್ಲದಿದ್ದಾಗ ಹೇರಲಾಗಿದ್ದ ಲಾಕ್ ಡೌನ್ ಅನ್ನು ಕೊರೋನಾ ಹರಡತೊಡಗಿದಾಗ ತೆಗೆಯಲಾಯಿತು; ಮುಂದಿನ ಐದಾರು ತಿಂಗಳಲ್ಲಿ ದೇಶದ 70% ಜನರಿಗೆ ಕೊರೋನಾ ಹರಡಿತು, ಏಳೆಂಟು ಲಕ್ಷ ಜನರು ಮೃತ ಪಟ್ಟರು. ಬಹುಷಃ ಇಂಥ ವಿಶಿಷ್ಟವಾದ, ಬರ್ಬರವಾದ ಲಾಕ್ ಡೌನ್ ಮಾಡಿ ಕೊರೋನಾವನ್ನೂ ನಿಯಂತ್ರಿಸದೆ, ಆರ್ಥಿಕತೆಯನ್ನೂ ಪುಡಿಗಟ್ಟಿದ ದೇಶ ನಮ್ಮದೊಂದೇ ಇರಬೇಕು! ಅಮೆರಿಕ, ಕೆನಡಾ ಮುಂತಾದ ದೇಶಗಳಲ್ಲಿ ಸೀಮಿತ ಲಾಕ್ ಡೌನ್ ಮಾಡಲಾಗಿತ್ತಾದರೂ ಸರಕಾರಗಳು ಜನರಿಗೆ ಹಣವೂ ಸೇರಿದಂತೆ ಎಲ್ಲ ನೆರವನ್ನೂ ನೀಡಿದವು; ಭಾರತದಲ್ಲಿ ಸರಕಾರ ಹಣ ಕೊಡುವುದಿರಲಿ, ಜನರಿಂದಲೇ ದೇಣಿಗೆ ಕೇಳಿತು, ಪಿಎಮ್ ಕೇರ್ಸ್ ಹೆಸರಲ್ಲಿ ಸಂಬಳಕ್ಕೂ ಕತ್ತರಿ ಹಾಕಿತು. ಆರೋಗ್ಯ ಕಾರ್ಯಕರ್ತರಿಗೆ ಕೊರೋನಾ ಯೋಧರು ಎಂಬ ಬಿರುದು ನೀಡಿ ಚಪ್ಪಾಳೆ ತಟ್ಟಿದ್ದಷ್ಟೇ ಬಂತು; ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು ಎಲ್ಲರ ಸಂಬಳದಲ್ಲಿ ಸುಮಾರು 6 ತಿಂಗಳವರೆಗೆ 30-75% ಕಡಿತವಾಯಿತು.
ವಾಣಿಜ್ಯ ಮಳಿಗೆಗಳನ್ನು ಮುಚ್ಚುವಲ್ಲಿ ಮೊದಲಿಗನಾಗಿದ್ದ ಕರ್ನಾಟಕಕ್ಕೆ 15000 ಕೋಟಿಯಷ್ಟು ತೆರಿಗೆ ನಷ್ಟವಾಯಿತು, ರಾಜ್ಯದ ಒಟ್ಟು ಉತ್ಪನ್ನವು 2.6% ಕೆಳಗಿಳಿಯಿತು, ಕೇಂದ್ರದಿಂದ ಬರಬೇಕಿದ್ದ ಹಣವೂ ಬಾರದಾಯಿತು, 20000 ಕೋಟಿಗೂ ಹೆಚ್ಚು ಸಾಲ ಎತ್ತಬೇಕಾಯಿತು. ದೇಶದ ಆರ್ಥಿಕತೆಗೆ ಲಕ್ಷ ಕೋಟಿಯಷ್ಟು ನಷ್ಟವಾಯಿತು, ಅಭಿವೃದ್ಧಿ ದರವು 23% ಕುಸಿಯಿತು, ಕೋಟಿಗಟ್ಟಲೆ ಜನರು ನಿರುದ್ಯೋಗಿಗಳಾದರು. ಇವಕ್ಕೆ ಕೊರೋನ ವೈರಸ್ ಅಥವಾ ಕೋವಿಡ್ ರೋಗ ಕಾರಣವಲ್ಲ, ಅವೈಜ್ಞಾನಿಕವಾದ, ಅವೈಚಾರಿಕವಾದ, ಅತ್ಯಾತುರದ ಲಾಕ್ ಡೌನ್ ಮಾತ್ರ ಕಾರಣ. ಆದರೆ ಈ ಲಾಕ್ ಡೌನ್ ಅನ್ನು ಮೂರು-ನಾಲ್ಕು ವೈದ್ಯಕೀಯ ತಜ್ಞರನ್ನು ಬಿಟ್ಟರೆ ಯಾವ ರಾಜಕೀಯ ಪಕ್ಷಗಳಾಗಲೀ, ಕಾರ್ಮಿಕ ಸಂಘಟನೆಗಳಾಗಲೀ, ವೈದ್ಯಕೀಯ ಸಂಘಟನೆಗಳಾಗಲೀ ಪ್ರಶ್ನಿಸಲಿಲ್ಲ, ವಿರೋಧಿಸಲಿಲ್ಲ, ಎಷ್ಟೇ ಕಷ್ಟಗಳಾದರೂ ಜನರೂ ಸಹಿಸಿಕೊಂಡರು. ಮಾಧ್ಯಮಗಳ ಭರಾಟೆಯಿದ್ದರೆ ಎಂಥ ತಪ್ಪನ್ನೂ ಸರಿಯಷ್ಟೇ ಅಲ್ಲ, ಮಹತ್ಕಾರ್ಯವೆಂದೇ ಬಿಂಬಿಸಲು ಸಾಧ್ಯವಿದೆ, ಜನರನ್ನು ನಂಬಿಸಲು ಸಾಧ್ಯವಿದೆ ಎನ್ನುವುದನ್ನು ಕೊರೋನ ಲಾಕ್ ಡೌನ್ ಮತ್ತೊಮ್ಮೆ ತೋರಿಸಿಕೊಟ್ಟಿತು. ನೋಟು ರದ್ಧತಿ, ಜೆಎನ್‌ಯು ದಾಳಿ, ಸಿಎಎ, 370ನೆ ವಿಧಿಯ ರದ್ಧತಿ ಎಲ್ಲವೂ ಹೀಗೆಯೇ ನಡೆದವು, ವಿರೋಧ ಪಕ್ಷಗಳೂ, ಜನರೂ ಅದೇನೋ ಮಹಾ ಸತ್ಕಾರ್ಯಗಳೆಂದು ನಂಬಿದರು, ಕೆಟ್ಟರು. ಕೊರೋನ ಹೆಸರಲ್ಲಿ ಗಂಟೆ ಬಾರಿಸಲು, ದೀಪ ಬೆಳಗಿಸಲು ಹೇಳಿದ್ದು ಜನರು ಆದೇಶಗಳನ್ನು ಅದೆಷ್ಟು ಪಾಲಿಸುತ್ತಾರೆನ್ನುವ ಪರೀಕ್ಷೆಯೂ ಆಗಿದ್ದಿರಬಹುದು; ಅದರಲ್ಲಿ ಜನರು ತಮ್ಮ ಬಾಗುವಿಕೆಯನ್ನು ಪ್ರಸ್ತುತ ಪಡಿಸಿದ್ದು ಆಳುವವರ ಮನಸ್ಸಿಗೆ ಮುದ ನೀಡಿರಬಹುದು; ಅದಾದ ನಂತರದ ಒಂದು ವರ್ಷದಲ್ಲಿ ಯಾವ ಚರ್ಚೆಯೂ ಇಲ್ಲದೆ ಕೃಷಿ ಕಾಯಿದೆಗಳು ಬಂದವು, ಪೆಟ್ರೋಲ್, ಡೀಸಲ್, ಅಡುಗೆ ಅನಿಲಗಳ ಬೆಲೆಗಳು ಗಗನಕ್ಕೇರಿದವು, ಸರಕಾರಿ ಆಸ್ತಿಗಳು ರಾಶಿ ರಾಶಿಯಾಗಿ ಮಾರಾಟಕ್ಕೆ ಬಿದ್ದವು. ಜನರೂ, ವಿರೋಧ ಪಕ್ಷಗಳೂ ಸುಮ್ಮನಿರುತ್ತಾರೆನ್ನುವುದು ಕೊರೋನಾ ಕಾಲದಲ್ಲಿ ಸಾಬೀತಾಗಿರುವಾಗ ಇನ್ನೇನು ಮಾಡುವುದಕ್ಕೂ ಹಿಂಜರಿಕೆ ಏಕಿರಬೇಕು?
ಯಾರಿಗೂ ಬೇಡವಾದ ಶಾಲೆಗಳು
ಜೂನ್ ತಿಂಗಳಿಂದ ಲಾಕ್ ಡೌನ್ ಅನ್ನು ಸಡಿಲಿಸುತ್ತಾ ಬರಲಾಯಿತಾದರೂ ಶಾಲೆ-ಕಾಲೇಜುಗಳು ತೆರೆಯಲೇ ಇಲ್ಲ. ಕೊರೋನದಿಂದ ಗಂಭೀರ ಸಮಸ್ಯೆಗಳಾಗಬಲ್ಲ ವಯಸ್ಕರನ್ನು ಎಲ್ಲೆಡೆ ತಿರುಗಾಡಲು ಅವಕಾಶ ನೀಡಲಾಯಿತು, ಆದರೆ ಕೊರೋನ ಸೋಂಕಿನಿಂದ ರೋಗ ಲಕ್ಷಣಗಳಾಗಲೀ, ಸಮಸ್ಯೆಗಳಾಗಲೀ ಆಗುವ ಸಾಧ್ಯತೆಗಳು ಅತಿ ವಿರಳವಾಗುಳ್ಳ 20 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಶಾಲೆಗಳಿಗೆ ಹೋಗದಂತೆ ಮನೆಯೊಳಕ್ಕೇ ಆನ್ ಲೈನ್ ತರಗತಿಗಳೆಂದು ಬಂಧಿಸಿಡಲಾಯಿತು! ಮಕ್ಕಳಿಗೆ ಶಾಲೆಗಳಲ್ಲಿ ಇತರ ಮಕ್ಕಳೊಂದಿಗೆ ಬೆರೆಯದಂತೆ ನಿರ್ಬಂಧಿಸಿದ್ದರೂ, ಹಿರಿಯರೊಂದಿಗೆ ಊರಿಡೀ ಸುತ್ತುವುದಕ್ಕೆ ಅವಕಾಶ ನೀಡಲಾಯಿತು! ಶಾಲೆ-ಅಂಗನವಾಡಿಗಳಿಲ್ಲದೆ ಬಿಸಿಯೂಟವೂ ಇಲ್ಲವಾಯಿತು.
ಈ ಅನ್ಯಾಯದಿಂದಾಗಿ ಈಗ 3-15 ವರ್ಷ ವಯಸ್ಸಿನ ಮಕ್ಕಳ ದೈಹಿಕ, ಮಾನಸಿಕ, ಪೌಷ್ಠಿಕ, ಶೈಕ್ಷಣಿಕ ಬೆಳವಣಿಗೆಗಳು ಶಾಶ್ವತವಾಗಿ ಕುಂಠಿತಗೊಂಡಿವೆ; ಮಕ್ಕಳಲ್ಲಿ ಕುಪೋಷಣೆಯು 40% ಏರಿದೆ. ಮಕ್ಕಳ ಮೇಲೆ ಬಗೆಬಗೆಯ ದೌರ್ಜನ್ಯಗಳು, ಬಾಲ್ಯ ವಿವಾಹ, ಬಾಲ್ಯದ ದುಡಿಮೆ ಎಲ್ಲವೂ ಹೆಚ್ಚಿವೆ, ಶಾಲೆಗಳಿಲ್ಲದೆ ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಶ್ವತವಾಗಿ ಶಾಲೆ ತೊರೆದಿದ್ದಾರೆ. ಬಡವರು, ಗ್ರಾಮೀಣ ವಾಸಿಗಳು, ಹಿಂದುಳಿದ ವರ್ಗದ ಮಕ್ಕಳು ಶಾಲೆ, ಊಟಗಳಿಲ್ಲದೆ, ಆನ್ ಲೈನ್ ಕಲಿಕೆಯೂ ಸಾಧ್ಯವಾಗದೆ ಅತಿ ಹೆಚ್ಚು ವಂಚಿತರಾಗಿದ್ದಾರೆ.
ಜಗತ್ತಿನ ಎಲ್ಲಾ ದೇಶಗಳಲ್ಲಿ ಶಾಲೆಗಳನ್ನು ತೆರೆಯಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ, ಸಿ.ಡಿ.ಸಿ., ಯುನಿಸೆಫ್ ಮುಂತಾದವು ಕೂಡ ಶಾಲೆಗಳನ್ನು ತೆರೆಯುವುದು ಅತ್ಯಗತ್ಯವೆಂದು ಹೇಳಿವೆ. ಆದರೆ ನಮ್ಮಲ್ಲಿ ಸರ್ಕಾರವಾಗಲೀ, ಅವು ನೇಮಿಸಿರುವ ತಥಾಕಥಿತ ತಜ್ಞರ ಸಮಿತಿಗಳಾಗಲೀ, ವೈದ್ಯಕೀಯ ಸಂಘಟನೆಗಳಾಗಲೀ ಶಾಲೆಗಳನ್ನು ತೆರೆಯುವ ಬಗ್ಗೆ ಹಿಂದೇಟು ಹಾಕಿವೆ. ಹೆಚ್ಚಿನ ವಿದ್ಯಾರ್ಥಿ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಶಾಲೆ-ಕಾಲೇಜು ತೆರೆಯುವುದರ ಬಗ್ಗೆ ಮೌನವಾಗಿವೆ.
ರಾಜ್ಯದಲ್ಲಿ ಕೆಲವು ಸಂಘಟನೆಗಳು ಮತ್ತು ಮಕ್ಕಳ ಹಿತಾಸಕ್ತಿಗಳ ಬಗ್ಗೆ ಕಾಳಜಿಯುಳ್ಳವರು ನಡೆಸಿದ ಅಭಿಯಾನದಿಂದಾಗಿ 6ನೇ ತರಗತಿಗಿಂತ ಮೇಲಿನವು ತೆರೆಯುವಂತಾಯಿತು, ಸರ್ವೋಚ್ಚ ನ್ಯಾಯಾಲಯದ ಆಣತಿಯಂತೆ ಅಂಗನವಾಡಿಗಳು ಕೂಡಾ ತೆರೆದಿವೆ. ಆದರೆ ಅಲ್ಲೆಲ್ಲೂ ಬಿಸಿಯೂಟವನ್ನು ಇನ್ನೂ ಆರಂಭಿಸಲಾಗಿಲ್ಲ, 1-5ನೇ ತರಗತಿಗಳೂ ತೆರೆದಿಲ್ಲ. ಎಲ್ಲವನ್ನೂ ತೆರೆದು ಈ ಮಕ್ಕಳನ್ನು ಮಾತ್ರವೇ ಕೂಡಿಡಲಾಗಿರುವುದಕ್ಕೆ ಕಾರಣವಿನ್ನೂ ನಿಗೂಢವೇ ಆಗಿದೆ. ಒಟ್ಟಿನಲ್ಲಿ ಜನರು ತಮ್ಮ ಮಕ್ಕಳ ಕಲಿಕೆಗಾಗಿ ಒತ್ತಾಯಿಸದಿದ್ದರೆ, ಪ್ರಜ್ಞಾವಂತರು ಬಾಯಿ ತೆರೆಯದಿದ್ದರೆ ಆಡಳಿತವು ಅತಾರ್ಕಿಕವಾದ ನಿರ್ಧಾರಗಳನ್ನು ತಳೆಯುವುದನ್ನು ತಡೆಯುವುದಕ್ಕೆ ಸಾಧ್ಯವಿಲ್ಲ ಎನ್ನುವುದಂತೂ ದಿಟವಾಯಿತು.
ಸಾಕ್ಷ್ಯಾಧಾರಗಳಿಲ್ಲದೆ ಕೊಟ್ಟ ಚಿಕಿತ್ಸೆ
ಮಾರ್ಚ್ 2020ರ ವೇಳೆಗೆ ಕೊರೋನ ದೇಶದೊಳಕ್ಕೆ ಬರುತ್ತಿದ್ದಂತೆ ಚೀನಾದಿಂದ ಬಂದಿದ್ದ ಕೆಲವು ಆರಂಭಿಕ ವರದಿಗಳನುಸಾರ ಒಂದಷ್ಟು ಹಳೆಯ ಔಷಧಗಳನ್ನು ಈ ಹೊಸ ಸೋಂಕಿನ ಚಿಕಿತ್ಸೆಯಲ್ಲಿ ಮತ್ತು ಆರೋಗ್ಯ ಕರ್ಮಿಗಳಲ್ಲಿ ಅದನ್ನು ತಡೆಯುವುದಕ್ಕೆ ಬಳಸಬಹುದು ಎಂದು ಹೇಳಲಾಗಿತ್ತು. ಕರ್ನಾಟಕದಲ್ಲಿ ಮೇ 15ರ ಹೊತ್ತಿಗೆ ರಾಜ್ಯ ಸರಕಾರವೇ ಒಂದು ಚಿಕಿತ್ಸಾ ಕಾರ್ಯಸೂಚಿಯನ್ನು ಪ್ರಕಟಿಸಿತ್ತು, ಅದರಲ್ಲಿ ಬಗೆಬಗೆಯ ಪರೀಕ್ಷೆಗಳ ಬಗ್ಗೆ ಮತ್ತು ಹಲತರದ ಔಷಧಗಳ ಬಗ್ಗೆ ಹೇಳಲಾಗಿತ್ತು. ಆದರೆ ಇವು ಯಾವುದಕ್ಕೂ ಸಾಕ್ಷ್ಯಾಧಾರಗಳಿಲ್ಲವೆಂದೂ, ಅವುಗಳನ್ನು ಬಳಸುವುದರಿಂದ ಪ್ರಯೋಜನಕ್ಕಿಂತ ಹೆಚ್ಚು ಹಾನಿಗೂ, ಅನಗತ್ಯ ಖರ್ಚಿಗೂ ಕಾರಣವಾಗಬಹುದೆಂದೂ, ಆದ್ದರಿಂದ ಅದನ್ನು ಕೂಡಲೇ ಹಿಂಪಡೆಯಬೇಕೆಂದೂ ನಾವು ಬರೆದಿದ್ದೆವು. ಆದರೆ ಅವುಗಳ ಬಳಕೆ ಮುಂದುವರಿಯಿತು.
ವಿಶ್ವ ಆರೋಗ್ಯ ಸಂಸ್ಥೆ, ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಗಳು ಮುಂತಾದವರ ನೇತೃತ್ವದಲ್ಲಿ ನಡೆಸಲಾದ ಉನ್ನತ ಮಟ್ಟದ ಅಧ್ಯಯನಗಳಲ್ಲಿ ಈ ಹೊಸ ಕೊರೋನ ಸೋಂಕಿಗೆ ಯಾವ ಔಷಧಗಳಿಂದಲೂ ಯಾವುದೇ ಪ್ರಯೋಜನವಿಲ್ಲವೆಂದೂ, ಅವುಗಳನ್ನು ಬಳಸಿದರೆ ಹಾನಿಯೇ ಆಗಬಹುದೆಂದೂ ಅಕ್ಟೋಬರ್ ವೇಳೆಗೆ ಸ್ಪಷ್ಟವಾಗಿ ಹೇಳಲಾಯಿತು. ಆದರೆ ಸರಕಾರದ ಚಿಕಿತ್ಸಾ ಕಾರ್ಯಸೂಚಿಯನ್ನು ಹಿಂಪಡೆಯಲಿಲ್ಲ! ಔಷಧಗಳ ಅಡ್ಡ ಪರಿಣಾಮಗಳಿಂದ ಕೆಲವರು ಮೃತರಾದಾಗ ಮತ್ತೆ ಆ ಬಗ್ಗೆ ನಾವೇ ಬರೆದೆವು, ಆದರೂ ಅದೇ ಕಾರ್ಯಸೂಚಿ ಈಗಲೂ ಮುಂದುವರಿದಿದೆ. ಕೆಲದಿನಗಳ ಹಿಂದೆ ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಈ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದ್ದೂ ಆಗಿದೆ.
ಆದ್ದರಿಂದ, ಈ ಒಂದು ವರ್ಷದಲ್ಲಿ ನಮ್ಮ ದೇಶದಲ್ಲಿ ಕೊರೋನಾ ನಿಭಾಯಿಸುವುದಕ್ಕೆ ಬಳಸಲಾದ ಔಷಧಗಳ ಬಗ್ಗೆ ಮತ್ತು ಅವುಗಳಿಂದಾಗಿರಬಹುದಾದ ಸಮಸ್ಯೆಗಳ ಬಗ್ಗೆ ಹಾಗೂ ಕೊರೋನದಿಂದಾಗಿರುವ ಎಲ್ಲಾ ಸಾವುಗಳ ಬಗ್ಗೆ ಪ್ರಾಮಾಣಿಕವಾದ, ಸವಿವರವಾದ ಅಧ್ಯಯನಗಳಾಗಬೇಕಾದ ಅಗತ್ಯವಿದೆ.
ಅವಸರದ ಲಸಿಕೆಗಳಿಂದ ಗೊಂದಲ
ಹೊಸ ಕೊರೋನ ವೈರಸ್ ನ ತಳಿ ಮತ್ತು ಪ್ರೋಟೀನುಗಳ ವಿವರಗಳು ಹದಿನೈದೇ ದಿನಗಳಲ್ಲಿ ತಿಳಿದೊಡನೆ ಅವುಗಳ ಆಧಾರದಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಸ್ಪರ್ಧೆಯೇ ಆರಂಭವಾಯಿತು. ನಿಷ್ಕ್ರಿಯಗೊಳಿಸಲಾದ ವೈರಸ್ ಅನ್ನು ಬಳಸಿದ ಲಸಿಕೆ (ಭಾರತದ ಕೊವಾಕ್ಸಿನ್), ಇನ್ನೊಂದು ಬಗೆಯ ವೈರಸ್‌ನೊಳಕ್ಕೆ ಕೊರೋನ ವೈರಸ್‌ನ ತುಣುಕನ್ನು ಸೇರಿಸಿರುವ ಲಸಿಕೆ (ಆಕ್ಸ್‌ಫರ್ಡ್ ಅಭಿವೃದ್ಧಿ ಪಡಿಸಿ ಭಾರತದಲ್ಲಿ ಉತ್ಪಾದಿಸುವ ಕೋವಿಶೀಲ್ಡ್), ಹಾಗೂ ವೈರಸ್‌ನ ಪ್ರೋಟೀನನ್ನು ಉತ್ಪಾದಿಸುವ ಎಂಆರ್‌ಎನ್‌ಎ ತುಣುಕನ್ನು ಮನುಷ್ಯನ ಜೀವಕೋಶಗಳೊಳಗೆ ಸೇರಿಸಿ, ಅವು ಆ ಪ್ರೋಟೀನನ್ನು ಉತ್ಪಾದಿಸುವಂತೆ ಮಾಡುವ ಎಂಆರ್‌ಎನ್‌ಎ ಲಸಿಕೆಗಳು (ಅಮೆರಿಕದ ಫೈಜರ್ ಮತ್ತು ಮೊಡರ್ನ) ಸ್ಪರ್ಧೆಯಲ್ಲಿ ಮುನ್ನುಗ್ಗಿದವು. ಮಾನವನ ಜೀವಕೋಶಗಳೇ ವೈರಸ್ ಪ್ರೋಟೀನ್ ತಯಾರಿಸುವಂತೆ ಮಾಡುವ ಎಂಆರ್‌ಎನ್‌ಎ ತಂತ್ರಜ್ಞಾನವನ್ನು ಲಸಿಕೆಗಳಿಗಾಗಿ ಇದೇ ಮೊದಲು ಬಳಸಲಾಗಿದ್ದರೂ, ಈ ಹೊಸ ವಿಧದ ಲಸಿಕೆಗಳಿಂದಾಗಬಲ್ಲ ದೀರ್ಘಕಾಲೀನ ಸಮಸ್ಯೆಗಳ ಬಗ್ಗೆ ಪರೀಕ್ಷೆಗಳು ಮುಗಿಯುವ ಮೊದಲೇ ಅಮೆರಿಕದಲ್ಲಿ ಅವನ್ನು ತುರ್ತು ಸ್ಥಿತಿಯೆಂದು ಬಳಸಲು ಅನುಮತಿ ನೀಡಲಾಗಿದೆ.
ಕೋವಿಶೀಲ್ಡ್ ಲಸಿಕೆಯ ಮೂರನೇ ಹಂತದ ಪರೀಕ್ಷೆಗಳಾಗಿದ್ದರೂ, ಭಾರತದಲ್ಲಾದ ಪರೀಕ್ಷೆಗಳ ವರದಿಗಳನ್ನು ಪ್ರಕಟಿಸುವ ಮೊದಲೇ ಇಲ್ಲೂ ಅದಕ್ಕೆ ತುರ್ತು ಬಳಕೆಯ ಅನುಮತಿ ನೀಡಲಾಗಿದೆ. ಕೊವಾಕ್ಸೀನ್ ಲಸಿಕೆಗೆ ಮೂರನೇ ಹಂತದ ಪರೀಕ್ಷೆಗಳು ಮುಗಿಯುವ ಮೊದಲೇ ಪ್ರಯೋಗಾರ್ಥ ಬಳಕೆಗೆ ಅನುಮತಿ ನೀಡಲಾಗಿದೆ. ಭಾರತದಲ್ಲಿ ಕಳೆದ ಆಗಸ್ಟ್‌ನಲ್ಲೇ ಈ ಲಸಿಕೆಗಳನ್ನು ತರುವ ಪ್ರಯತ್ನಗಳಾಗಿದ್ದರೂ, ವಿಜ್ಞಾನಿಗಳ ವಿರೋಧದಿಂದಾಗಿ ಅದು ಸಾಧ್ಯವಾಗಿರಲಿಲ್ಲ; ಈ ಜನವರಿಯಲ್ಲಿ ಹೀಗೆ ಅವಸರವಸರವಾಗಿ ಅವನ್ನು ನೀಡಲಾರಂಭಿಸಿ, ವಿಶ್ವದ ಅತಿ ದೊಡ್ಡ ಲಸಿಕಾ ಕಾರ್ಯಕ್ರಮ ಎಂದು ಪ್ರತಿನಿತ್ಯ ಹೇಳಿಕೊಳ್ಳಲಾಗುತ್ತಿದೆ. ಆದರೆ ವಾಸ್ತವದಲ್ಲಿ ಆರೋಗ್ಯ ಕಾರ್ಯಕರ್ತರಿಗೆಂದು ನಿಗದಿಯಾಗಿದ್ದ ಮೊದಲ ಸುತ್ತಿನಲ್ಲಿ ಅರ್ಧಕ್ಕರ್ಧ ಮಂದಿಯಷ್ಟೇ ಮೊದಲ ಡೋಸನ್ನು ಪಡೆದರು, ಅವರಲ್ಲಿ ಅರ್ಧದಷ್ಟು ಮಾತ್ರವೇ ಎರಡನೇ ಡೋಸನ್ನು ಹಾಕಿಸಿಕೊಂಡರು. ಎರಡನೇ ಸುತ್ತಿನಲ್ಲೂ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ನಮ್ಮ ಜನರಿಗೆ ಹುಮ್ಮಸ್ಸಿದ್ದಂತೆ ಕಾಣುವುದಿಲ್ಲ.
ಈಗಾಗಲೇ ಹೆಚ್ಚಿನವರನ್ನು ಸೋಂಕಿ ಹೋಗಿರುವ, ಬಹುತೇಕ ಸೋಂಕಿತರಲ್ಲಿ ಯಾವುದೇ ಸಮಸ್ಯೆಯನ್ನೂ ಉಂಟು ಮಾಡದಿರುವ ಸೋಂಕಿಗೆ ಸಾಧಕ-ಬಾಧಕಗಳ ಬಗ್ಗೆ ಪೂರ್ಣ ಮಾಹಿತಿಯಿನ್ನೂ ಲಭ್ಯವಿಲ್ಲದಿರುವ ಲಸಿಕೆಗಳನ್ನು ನೀಡಹೊರಟಿದ್ದರ ಹಿಂದೆ ವ್ಯಕ್ತಿಗಳ ರಾಜಕೀಯ ವರ್ಚಸ್ಸನ್ನು, ಕಂಪೆನಿಗಳ ಲಾಭವನ್ನು ಬೆಳೆಸುವ ಉದ್ದೇಶವಿದ್ದಿರಬಹುದು. ಆದರೆ ಜನರಿಗೆ ಸತ್ಯವನ್ನು ಹೇಳದೆ, ವಿಶ್ವಾಸವನ್ನು ಗಳಿಸದೆ ಏನನ್ನೋ ಮಾಡಿದ್ದೇವೆಂದು ತೋರಿಸಲು ಹೊರಟರೆ, ವೈಜ್ಞಾನಿಕ ಸಾಧನೆಗಳೇ ನಂಬಲನರ್ಹವಾಗಿ ಬಿಡುತ್ತವೆ, ಜನರು ತಮ್ಮ ಸ್ವಂತ ವಿವೇಚನೆಯನ್ನು ಬಳಸಿ ತಮಗೆ ಒಳಿತೆನಿಸುವುದನ್ನೇ ಮಾಡುತ್ತಾರೆ ಎನ್ನುವುದು ಮತ್ತೊಮ್ಮೆ ಸ್ಪಷ್ಟವಾಗಿದೆ.
ಎರಡನೇ ಅಲೆ, ವಿದೇಶಿ ರೂಪಾಂತರಿತ ಬಗೆಗಳೆಂಬ ಬೆದರು ಬೊಂಬೆಗಳು
ಮೇಲೆ ಹೇಳಿದಂತೆ ಭಾರತದಲ್ಲಿ ಈಗಾಗಲೇ ಕೊರೋನಾ ಸೋಂಕಿನ ಮೊದಲ ಅಲೆಯ ಉಬ್ಬರ ಇಳಿದಿದೆ, ಮಾರ್ಚ್-ಡಿಸೆಂಬರ್ ನಡುವೆ ದೇಶದ 60-70% ಜನರು ಸೋಂಕಿತರಾಗಿದ್ದಾರೆ. ಇನ್ನುಳಿದವರು ಮುಂದಿನ ದಿನಗಳಲ್ಲಿ ಸೋಂಕಿತರಾಗಬಹುದು, ಆದ್ದರಿಂದ ರೋಗ ಉಲ್ಬಣಗೊಳ್ಳುವ ಸಾಧ್ಯತೆಗಳಿರುವವರು ವಿಶೇಷ ಎಚ್ಚರಿಕೆ ವಹಿಸಿಕೊಂಡು, ಸೋಂಕು ತಗಲಿ ಉಲ್ಬಣಗೊಳ್ಳುವ ಲಕ್ಷಣಗಳಿದ್ದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಮೊದಲ ಅಲೆಯು ಈಗಾಗಲೇ ಇಳಿದಿರುವುದರಿಂದ ಈ ಹಿಂದೆ ಉಂಟಾದಂತೆ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳು ದೊರೆಯದಂತಾಗುವ ಸ್ಥಿತಿಯುಂಟಾಗದು. ಆದ್ದರಿಂದ ಎರಡನೆಯ, ಮೂರನೆಯ ಇತ್ಯಾದಿ ಅಲೆಗಳ ಬಗ್ಗೆ ಏನೇ ಹೇಳಿದರೂ ಈಗಾಗಲೇ ಕಂಡಿರುವುದಕ್ಕಿಂತ ದೊಡ್ಡದಾದ ಅಲೆಯುಂಟಾಗದು.
ವೈರಸ್ ಗಳಲ್ಲಿ ಸಣ್ಣ ರೂಪಾಂತರಗಳು ಅತಿ ಸಾಮಾನ್ಯವಾಗಿದ್ದು, ಹೊಸ ಕೊರೋನಾ ವೈರಸ್ ನಲ್ಲಿ ಈಗಾಗಲೇ 3000ಕ್ಕೂ ಹೆಚ್ಚು ರೂಪಾಂತರಗಳನ್ನು ಗುರುತಿಸಲಾಗಿದೆ, ಆದರೆ ಇವು ಯಾವುವೂ ಕೂಡ ಸೋಂಕಿನ ತೀವ್ರತೆಯನ್ನು ಹೆಚ್ಚಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹಾಗೆಯೇ, ಒಮ್ಮೆ ಸೋಂಕಿತರಾದವರಿಗೆ ಮತ್ತೊಮ್ಮೆ ಸೋಂಕು ತಗಲುವುದಾಗಲೀ, ರೂಪಾಂತರಿತ ವಿಧಗಳಿಂದ ಸೋಂಕುಂಟಾಗುವುದಾಗಲೀ ಇಲ್ಲವೆಂದೇ ಹೇಳಬಹುದು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆಸಿರುವ ಅಧ್ಯಯನದಂತೆ ರಾಜ್ಯದಲ್ಲಿ ದೇಶದ ಹಾಗೂ ವಿಶ್ವದ ಇತರೆಡೆಗಳಿಗಿಂತ ಹೆಚ್ಚು ಬಗೆಯ ರೂಪಾಂತರಗಳನ್ನು ಗುರುತಿಸಲಾಗಿದ್ದು, ಅನ್ಯ ದೇಶಗಳಿಂದ ಬಂದ ವಿಧಗಳು ಇಲ್ಲಿ ವಿಶೇಷ ಸಮಸ್ಯೆಯನ್ನೇನೂ ಉಂಟು ಮಾಡವು.
ಆದ್ದರಿಂದ ಇಂಥ ಬೆದರುಬೊಂಬೆಗಳನ್ನು ಮುಂದಿಟ್ಟು ಜನರನ್ನು ಸದಾ ಭಯದಲ್ಲಿರಿಸುವುದು, ಶಾಲೆಗಳನ್ನೂ, ಐಟಿ ಮುಂತಾದ ಸಂಸ್ಥೆಗಳನ್ನೂ ಮುಚ್ಚಿರಿಸುವುದು ನ್ಯಾಯವಲ್ಲ. ಇವನ್ನೇ ನಂಬಿ ಬದುಕುತ್ತಿರುವ ಲಕ್ಷಗಟ್ಟಲೆ ಶಿಕ್ಷಕರು, ನೌಕರರು, ವಾಹನಗಳನ್ನು ನಡೆಸುವವರು, ವಸತಿ-ಊಟಗಳನ್ನು ಒದಗಿಸುವವರು, ಇತರ ವ್ಯಾಪಾರಸ್ಥರು ಎಲ್ಲರೂ ಈ ಒಂದು ವರ್ಷದಿಂದ ಅತೀವ ಕಷ್ಟಗಳಿಗೀಡಾಗಿದ್ದಾರೆ. ಆದ್ದರಿಂದ ಆಧಾರರಹಿತವಾದ ಭಯವನ್ನು ಬಿಟ್ಟು ಈ ಎಲ್ಲಾ ಸಂಸ್ಥೆಗಳನ್ನೂ ಮತ್ತೆ ತೆರೆಯಬೇಕಾಗಿದೆ, ಮಕ್ಕಳು, ಪೋಷಕರು, ಉದ್ಯೋಗಿಗಳು ಮತ್ತೆಲ್ಲರ ಮನೋದೈಹಿಕ ಆರೋಗ್ಯಕ್ಕೂ, ಆರ್ಥಿಕತೆಗೂ ಇದು ಅತ್ಯಗತ್ಯವಾಗಿದೆ.
ಎಲ್ಲೆಡೆ ಹೊರಬಿದ್ದ ಸುಪ್ತ ಅಮಾನವೀಯತೆ
ಈ ಕೊರೋನ ಕಾಲವು ನಮ್ಮ ವಿಜ್ಞಾನ-ತಂತ್ರಜ್ಞಾನವನ್ನೂ, ಮಾನವೀಯ ಕಾಳಜಿಯನ್ನೂ ತೋರಿಸಿದಂತೆಯೇ ಹಲವರೊಳಗೆ ಹುದುಗಿದ್ದ ಅಮಾನವೀಯತೆಯನ್ನೂ ಅನಾವರಣಗೊಳಿಸಿತು. ಡಿಸೆಂಬರ್ 2019ರಲ್ಲಿ ತೊಡಗಿದ ಕೊರೋನ ಸೋಂಕು ಮಾರ್ಚ್ 2020ರ ಹೊತ್ತಿಗೆ ಎಲ್ಲಾ ದೇಶಗಳಿಗೆ ವ್ಯಾಪಿಸಿತು, ಎಲ್ಲೂ ಯಾವೊಂದು ನಿರ್ದಿಷ್ಟ ವ್ಯಕ್ತಿಯನ್ನಾಗಲೀ, ಸಮುದಾಯವನ್ನಾಗಲೀ ಸೋಂಕು ಹರಡಿದ್ದಕ್ಕೆ ದೂಷಿಸಿದ್ದಾಗಲಿಲ್ಲ. ಆದರೆ ಭಾರತದಲ್ಲಿ ಮೊದಲ ದಿನಗಳಿಂದಲೇ ಮುಸ್ಲಿಮರನ್ನು, ತಬ್ಲಿಘಿ ಸಮಾವೇಶದಲ್ಲಿದ್ದವರನ್ನು, ಕೊರೋನ ಹರಡುವಿಕೆಗೆ ಹೊಣೆಯಾಗಿಸಿ ಮಾಧ್ಯಮಗಳಲ್ಲಿ ಬೊಬ್ಬಿರಿಯಲಾಯಿತು, ಅವರಿದ್ದ ಜಾಗಗಳನ್ನು ದಿಗ್ಬಂಧಿಸಲಾಯಿತು. ವೈದ್ಯ-ದಾದಿಯರಿಗೆ ಚಪ್ಪಾಳೆ ತಟ್ಟಿದ ಮರುದಿನವೇ ಅವರಲ್ಲಿ ಕೆಲವರನ್ನು ಮನೆಗಳಿಂದ ಹೊರಹಾಕಲಾಯಿತು, ಅಸ್ಪೃಶ್ಯರಂತೆ ದೂರವಿಡಲಾಯಿತು. ಕೊರೋನ ಸೋಂಕಿತರಿದ್ದ ಮನೆಗಳನ್ನು, ಊರು-ಕೇರಿಗಳನ್ನು, ರಾಜ್ಯಗಳನ್ನು ಕೂಡ, ಅಪರಾಧಿಗಳಂತೆ ಬಿಂಬಿಸಲಾಯಿತು, ಕೇಂದ್ರ ಸರಕಾರದ ಬೆಂಬಲಿಗರಂತೂ ಕೊರೋನ ಹೆಚ್ಚಿದ್ದ ಅನ್ಯ ಪಕ್ಷಗಳ ಆಡಳಿತದ ರಾಜ್ಯಗಳನ್ನು ಹೀಗಳೆಯುತ್ತಲೇ ಸಂಭ್ರಮಿಸಿದರು. ಟಿವಿ ವಾಹಿನಿಗಳಂತೂ ಕೊರೋನ ಸೋಂಕಿತರನ್ನು ರಾಕ್ಷಸ-ರಾಕ್ಷಸಿಯರು, ದೇಶದ್ರೋಹಿಗಳು, ಭಯೋತ್ಪಾದಕರು ಎಂಬರ್ಥದಲ್ಲೇ ಬಿಂಬಿಸಿದವು, ಮಾತ್ರವಲ್ಲ, ಲಾಕ್ ಡೌನ್ ಕಾಲದಲ್ಲಿ ದಿನಸಿ-ತರಕಾರಿ ಕೊಳ್ಳಲು ಹೋದವರನ್ನು, ನಂತರ ಮದ್ಯಪೇಯಗಳನ್ನು ಪಡೆಯಲು ಹೋದವರನ್ನು ಕೂಡ ಮಹಾಪರಾಧಿಗಳೆಂಬಂತೆ ತೋರಿಸಿದವು. ಟಿವಿ ಮತ್ತಿತರ ಮಾಧ್ಯಮಗಳು ಮನಬಂದಂತೆ, ಆಧಾರರಹಿತವಾಗಿ, ಧೂರ್ತತನದಿಂದ ವರದಿ ಮಾಡುತ್ತಾ ಜನರನ್ನು ಸಂಶಯ ಹಾಗೂ ಭೀತಿಗಳಲ್ಲಿ ಕೆಡವಿದವು.
ಮಂಗಳೂರಿನಲ್ಲಿ ಒಂದು ಆಸ್ಪತ್ರೆಯಲ್ಲಿ ಕೊರೋನ ಗುರುತಿಸಲ್ಪಟ್ಟಾಗ ಅಲ್ಲಿದ್ದ ವೈದ್ಯರನ್ನೂ, ಸಿಬ್ಬಂದಿಯನ್ನೂ, ರೋಗಿಗಳನ್ನೂ ಒಳಗೇ ಇಟ್ಟು ಇಡೀ ಆಸ್ಪತ್ರೆಯನ್ನೇ 3 ವಾರಗಳ ಕಾಲ ದಿಗ್ಬಂಧಿಸಲಾಯಿತು. ಅಲ್ಲಿಗೆ ಸಂಬಂಧಿಸಿದ ರೋಗಿಯೊಬ್ಬರನ್ನು ಪರೀಕ್ಷಿಸಿದ್ದಕ್ಕಾಗಿ ಒಬ್ಬ ಹಿರಿಯ ವೈದ್ಯರ ಮೇಲೆ ಅಪರಾಧ ಪ್ರಕರಣ ದಾಖಲಿಸಲಾಯಿತು. ಆಸ್ಪತ್ರೆಯೇ ಕೊರೋನಾ ಹರಡುವುದಕ್ಕೆ ಕಾರಣವೆಂದು ಕಿರುಚಲಾಯಿತಾದರೂ, ಆಸ್ಪತ್ರೆಗೆ ಕೊರೋನ ತಲುಪುದಕ್ಕಾಗಿ ಮೂಲ ಕಾರಣವಾಗಿದ್ದರೆನ್ನಲಾದವರ ಬಗ್ಗೆ ಒಂದಕ್ಷರವೂ ಎಲ್ಲೂ ಹೊರಬರಲಿಲ್ಲ.
ಲಾಕ್ ಡೌನ್ ಕಾರಣಕ್ಕೆ ಮನೆಗಳಿಗೆ ನಡೆದೇ ಸಾಗಿದ ವಲಸೆ ಕಾರ್ಮಿಕರ ಬಗ್ಗೆಯೂ ಅವಹೇಳನವಾಯಿತು, ರೈಲು ಹರಿದು ಹಳಿಯ ಮೇಲೆ ಪ್ರಾಣ ತೆತ್ತವರ ಬಗ್ಗೆಯೂ ಕೀಳಾಗಿ ಬರೆಯಲಾಯಿತು. ಕೊರೋನದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೂ ಪ್ರತಿಭಟನೆಗಳಾದವು, ಕೆಲವೆಡೆ ಜನಪ್ರತಿನಿಧಿಗಳೇ ಗದ್ದಲವೆಬ್ಬಿಸಿದ್ದೂ ಆಯಿತು.
ಕೊರೋನ ಕಾಲದಲ್ಲಿ ನಡೆದ ಇಂಥ ಅನೇಕ ಅಮಾನವೀಯ ಘಟನೆಗಳನ್ನು ಮರೆಯಲಾಗದು, ಮರೆಯಬಾರದು.
ಒಟ್ಟಿನಲ್ಲಿ ಒಂದು ಹೊಸ ಸೋಂಕನ್ನು ನಿಭಾಯಿಸುವಲ್ಲಿ ವಿಜ್ಞಾನ-ತಂತ್ರಜ್ಞಾನಗಳು ಅತ್ಯುನ್ನತ ಸ್ತರದಲ್ಲಿ ಕಾರ್ಯ ನಿರ್ವಹಿಸಿದರೂ ಕೂಡ, ರಾಜಕಾರಣ, ಆಡಳಿತ, ಮಾಧ್ಯಮಗಳು, ಜಾಗತಿಕ ವ್ಯಾಪಾರಿ ಹಿತಾಸಕ್ತಿಗಳು ಅತಿ ನಿರಾಶಾಜನಕವಾಗಿ, ಸಂವೇದನಾಹೀನವಾಗಿ ವರ್ತಿಸಿದವು. ಹಿಂದೆ 2009 ರ ಫ್ಲೂ ಸೋಂಕಿನ ಸಂದರ್ಭದಲ್ಲಿ ಕೆಲವು ತಿಂಗಳ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯು ತಾನೆಸಗಿದ ತಪ್ಪುಗಳಿಗೆ ಕ್ಷಮೆ ಯಾಚಿಸಿತ್ತು; ಈ ಹೊಸ ಕೊರೋನ ಸೋಂಕನ್ನು ನಿಭಾಯಿಸುವಲ್ಲಿ ಅದಕ್ಕಿಂತಲೂ ಭೀಕರವಾದ ತಪ್ಪುಗಳಾಗಿದ್ದು, ಅವಕ್ಕಾಗಿ ಯಾರು, ಯಾವಾಗ ಕ್ಷಮೆ ಯಾಚಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.
Leave a Reply