ಕೊರೋನ ಸೋಂಕು ಏನೆನ್ನುವುದು ಸರಿಯಾಗಿ ಅರ್ಥವಾಗಿಲ್ಲವೇ?

ಕೊರೋನ ಸೋಂಕು ಏನೆನ್ನುವುದು ಸರಿಯಾಗಿ ಅರ್ಥವಾಗಿಲ್ಲವೇ? – ವಾರ್ತಾಭಾರತಿ, ಅಕ್ಟೋಬರ್ 31, 2020
ಕೊರೋನ ಸೋಂಕಿನ ಬಗ್ಗೆ ಹೆಚ್ಚೇನೂ ತಿಳಿದಿಲ್ಲ, ಅದಿನ್ನೂ ನಿಗೂಢವಾಗಿಯೇ ಇದೆ ಎಂದೆಲ್ಲ ಹೇಳಲಾಗುತ್ತಿದೆ, ಇದು ಇನ್ನಷ್ಟು ಭೀತಿಗೆ, ಗೊಂದಲಗಳಿಗೆ, ಕಾರಣವಾಗುತ್ತಿದೆ.
ಕೊರೋನ ಸೋಂಕು ಇನ್ನೂ ನಿಗೂಢವಾಗಿಯೇ ಉಳಿದಿದೆಯೇ?
ಇಲ್ಲ. ಈ ಹೊಸ ಕೊರೋನ ಸೋಂಕಿನ ಬಗ್ಗೆ ಇಷ್ಟೊಂದು ಅಲ್ಪಾವಧಿಯಲ್ಲಿ ತಿಳಿದುಕೊಳ್ಳಲಾಗಿರುವಷ್ಟು ವಿವರಗಳನ್ನು ಬಹುಷಃ ಬೇರೆ ಯಾವುದೇ ರೋಗದ ಬಗ್ಗೆ ಹೀಗೆ ತಿಳಿದುಕೊಳ್ಳಲು ಸಾಧ್ಯವಾಗಿರಲಿಲ್ಲ. ಕಳೆದ ಡಿಸೆಂಬರ್ ತಿಂಗಳಲ್ಲಿ ಕೇವಲ ಹದಿನೈದೇ ದಿನಗಳಲ್ಲಿ ಈ ಹೊಸ ವೈರಸ್ ಅನ್ನು, ಅದರ ಸಂಪೂರ್ಣ ರಚನೆಯನ್ನು ಪತ್ತೆ ಮಾಡಿದಲ್ಲಿಂದ ಹಿಡಿದು, ಅದರಿಂದುಂಟಾಗುವ ರೋಗದ ಬಗ್ಗೆ ಹೆಚ್ಚಿನ ವಿವರಗಳನ್ನು ಕಂಡುಹಿಡಿಯಲಾಗಿರುವುದು, ಅದರ ಚಿಕಿತ್ಸೆಯ ಬಗ್ಗೆ ಅಧ್ಯಯನಗಳನ್ನು ನಡೆಸಲಾಗಿರುವುದು, ಲಸಿಕೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿರುವುದು, ಮತ್ತು ಈ ಮಾಹಿತಿಯೆಲ್ಲವನ್ನೂ ಉಚಿತವಾಗಿ ಆ ಕೂಡಲೇ ಇಡೀ ವಿಶ್ವಕ್ಕೆ ಒದಗಿಸಲಾಗುತ್ತಿರುವುದು ನಿಜಕ್ಕೂ ಅತ್ಯಪೂರ್ವವಾದ ಮಹತ್ಸಾಧನೆಯೇ ಆಗಿದೆ. ಆದರೆ ಅವೈಚಾರಿಕತೆ, ಭಯ, ರಾಜಕಾರಣ, ವ್ಯಾಪಾರ ಇತ್ಯಾದಿ ಕಾರಣಗಳಿಂದಾಗಿ ಈ ವೈಜ್ಞಾನಿಕ ಸಾಧನೆಗಳನ್ನು ಬಳಸಿಕೊಳ್ಳುವಲ್ಲಿ ಬಹಳಷ್ಟು ತಪ್ಪುಗಳಾಗಿವೆ.
ಹೊಸ ಕೊರೋನ ಸೋಂಕು ಎರಡು ಹಂತಗಳಲ್ಲಿ ಉಂಟಾಗುತ್ತದೆ ಎನ್ನುವುದೀಗ ಸ್ಪಷ್ಟವಾಗಿದೆ; ಅದರ ರೋಗಲಕ್ಷಣಗಳೇನು, ರೋಗದ ತೀವ್ರತೆಯನ್ನು ಅಳೆಯುವುದಕ್ಕೆ ಅಗತ್ಯವಾದ ಪರೀಕ್ಷೆಗಳೇನು ಎಂಬುದೆಲ್ಲವೂ ತಿಳಿದಿವೆ.
ಕೊರೋನ ಸೋಂಕಿನ ಮೊದಲ ಹಂತದಲ್ಲಿ ವೈರಾಣುಗಳು ಮೂಗು-ಗಂಟಲುಗಳನ್ನು ಸೋಂಕಿ, ರೋಗರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸುತ್ತವೆ. ಹೆಚ್ಚಿನವರಲ್ಲಿ, ಅದರಲ್ಲೂ ಆರೋಗ್ಯವಂತರು ಮತ್ತು ಕಿರಿವಯಸ್ಕರಲ್ಲಿ, ರೋಗರಕ್ಷಣಾ ವ್ಯವಸ್ಥೆಯು ವೈರಾಣುಗಳನ್ನು ಅಲ್ಲಿಯೇ ನಾಶ ಮಾಡುವ ಮೂಲಕ ಸೋಂಕನ್ನು ನಿಯಂತ್ರಿಸುತ್ತದೆ; ಅವರಲ್ಲಿ ಯಾವುದೇ ಲಕ್ಷಣಗಳೂ ಉಂಟಾಗದೆ, ಅಥವಾ, ಒಂದೆರಡು ದಿನಗಳ ತಲೆನೋವು, ಜ್ವರ, ಗಂಟಲು ನೋವು, ವಾಸನೆ ತಿಳಿಯದಾಗುವುದು ಮುಂತಾದ ಲಕ್ಷಣಗಳಿದ್ದು, ಯಾವುದೇ ಚಿಕಿತ್ಸೆಯೂ ಇಲ್ಲದೆ, ಸೋಂಕು ವಾಸಿಯಾಗುತ್ತದೆ. ಈ ಹಂತದಲ್ಲಿ ಸೋಂಕನ್ನು ನಿಯಂತ್ರಿಸಲು ರೋಗರಕ್ಷಣಾ ವ್ಯವಸ್ಥೆಯು ವಿಫಲವಾದರೆ ರೋಗವು ಎರಡನೇ ಹಂತವನ್ನು ಪ್ರವೇಶಿಸುತ್ತದೆ; ಸೋಂಕಿನ ಲಕ್ಷಣಗಳು ತೊಡಗಿದ ಏಳೆಂಟು ದಿನಗಳಲ್ಲಿ ಶ್ವಾಸಕೋಶಗಳಿಗೂ ಸೋಂಕು ಹರಡಿ, ಉಸಿರಾಟದ ಕಷ್ಟಗಳಾಗಬಹುದು, ಅನ್ಯ ಅಂಗಗಳಿಗೂ ಸಮಸ್ಯೆಗಳಾಗಬಹುದು. ಅಂಥವರಲ್ಲಿ ಪಲ್ಸ್ ಆಕ್ಸಿಮೀಟರ್‌ನಲ್ಲಿ ರಕ್ತದ ಆಮ್ಲಜನಕವನ್ನು ಪರೀಕ್ಷಿಸಿದಾಗ ಅದು 95%ಕ್ಕಿಂತ ಕೆಳಗಿಳಿದಿದ್ದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ.
ಮೊದಲ ಹಂತದಲ್ಲಿ ಸೋಂಕನ್ನು ತೊಡೆದು ಹಾಕುವುದಕ್ಕೆ ರೋಗರಕ್ಷಣಾ ವ್ಯವಸ್ಥೆಯೊಂದೇ ಸಮರ್ಥವಾದುದರಿಂದ ಬೇರಾವುದೇ ಚಿಕಿತ್ಸೆಯ ಅಗತ್ಯವಿಲ್ಲ, ಅಂಥ ಔಷಧಗಳು ಲಭ್ಯವೂ ಇಲ್ಲ (ಆಯುಷ್ ಪದ್ಧತಿಗಳಲ್ಲೂ ಇಲ್ಲ). ಸಕ್ಕರೆ, ಹಣ್ಣುಗಳು, ಸಂಸ್ಕರಿತ ಧಾನ್ಯಗಳು ಮತ್ತು ಕರಿದ ತಿನಿಸುಗಳ ಅತಿಯಾದ ಸೇವನೆ, ಮದ್ಯಪಾನ, ಧೂಮಪಾನಗಳು ರೋಗರಕ್ಷಣಾ ವ್ಯವಸ್ಥೆಯನ್ನು ಅಪನಿಯಂತ್ರಿತಗೊಳಿಸುವುದರಿಂದಾಗಿ, ಇವನ್ನು ವರ್ಜಿಸಿದರೆ ಕೊರೋನ ಸೋಂಕನ್ನು ಗೆಲ್ಲುವುದಕ್ಕೆ ಸುಲಭವಾಗುತ್ತದೆ. ಎರಡನೇ ಹಂತದಲ್ಲಿ ರೋಗವು ತೀವ್ರಗೊಂಡರೆ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಆಮ್ಲಜನಕ ನೀಡುವುದು, ಉಸಿರಾಟಕ್ಕೆ ನೆರವಾಗುವುದು ಮತ್ತಿತರ ಜೀವರಕ್ಷಕ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ.
ಆರ್‌ಟಿ ಪಿಸಿಆರ್ ಪರೀಕ್ಷೆಯಲ್ಲಿ ವೈರಸ್ ಪತ್ತೆಯಾಗದಿದ್ದರೆ ಸೋಂಕು ಇಲ್ಲ ಎನ್ನಬಹುದೇ?
ಇಲ್ಲ. ಆರ್‌ಟಿ ಪಿಸಿಆರ್ ಅಥವಾ ಪ್ರತಿಜನಕ (ಆಂಟಿಜೆನ್) ಪರೀಕ್ಷೆಯಲ್ಲಿ ವೈರಸ್ ಪತ್ತೆಯಾಗದಿದ್ದರೆ ಸೋಂಕು ಇಲ್ಲ ಎಂದು ಹೇಳಲಾಗದು, ವೈರಸ್ ಪತ್ತೆಯಾದ ಮಾತ್ರಕ್ಕೆ ಕೊರೋನ ರೋಗವಿದೆ ಎಂದೂ ಹೇಳಲಾಗದು, ಒಮ್ಮೆ ಪತ್ತೆಯಾಗಿ, ಬಳಿಕ ಮರೆಯಾಯಿತು ಎಂದರೆ ರೋಗವು ಸಂಪೂರ್ಣವಾಗಿ ವಾಸಿಯಾಯಿತೆಂದೂ ಆಗದು.
ಈ ಪರೀಕ್ಷೆಗಳು ಮೂಗು-ಗಂಟಲಲ್ಲಿ ಕೊರೋನ ವೈರಸ್ ಇದೆಯೇ ಎನ್ನುವುದನ್ನಷ್ಟೇ ತಿಳಿಸುತ್ತವೆಯೇ ಹೊರತು, ಆ ವೈರಸ್‌ನಿಂದ ರೋಗವುಂಟಾಗಿದೆಯೇ, ಆಗಿದ್ದರೆ ಅದರ ತೀವ್ರತೆಯೆಷ್ಟು, ರೋಗವು ಎರಡನೇ ಹಂತಕ್ಕೆ ಹೋಗಿದೆಯೇ ಇಲ್ಲವೇ ಎಂಬುದನ್ನು ತಿಳಿಸುವುದಿಲ್ಲ. ಆದ್ದರಿಂದ ಕೊರೋನ ವೈರಸ್ ಅನ್ನು ಮೂಗು-ಗಂಟಲಲ್ಲಿ ಪತ್ತೆ ಹಚ್ಚುವ ಆರ್‌ಟಿ ಪಿಸಿಆರ್ ಅಥವಾ ಆಂಟಿಜೆನ್ ಪರೀಕ್ಷೆಗಳ ವರದಿಗಳನ್ನು ಅರ್ಥೈಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ.
ಕೊರೋನ ಸೋಂಕು ತಗಲಿದವರಲ್ಲಿ ರೋಗಲಕ್ಷಣಗಳು ಆರಂಭವಾದ ಬಳಿಕ ಒಂದು ವಾರದವರೆಗೆ ಆರ್‌ಟಿ ಪಿಸಿಆರ್ ಅಥವಾ ಆಂಟಿಜೆನ್ ಕ್ಷಿಪ್ರ ಪರೀಕ್ಷೆಯು ಸಾಮಾನ್ಯವಾಗಿ ಪಾಸಿಟಿವ್ ಆಗಿರುತ್ತದೆ. ಒಂದು ವಾರ ಕಳೆದಾಗ ರೋಗವು ವಾಸಿಯಾದರೆ (ಮೊದಲ ಹಂತ) ಅಂಥ ಹೆಚ್ಚಿನವರಲ್ಲಿ ಮೂಗು-ಗಂಟಲುಗಳಿಂದ ವೈರಸ್ ಮರೆಯಾಗುತ್ತದೆ, ಮತ್ತೆ ಪರೀಕ್ಷೆ ಮಾಡಿಸಿದರೆ ಅವರಲ್ಲಿ ನೆಗೆಟಿವ್ ಆಗಿರುತ್ತದೆ. ಆದರೆ ರೋಗವು ಎರಡನೇ ವಾರದಲ್ಲೂ ಮುಂದುವರಿದು ಎರಡನೇ ಹಂತಕ್ಕೆ ಹೋದರೆ, ಕೆಲವರ ಮೂಗಿನಲ್ಲಿ ವೈರಸ್ ಉಳಿದಿರಬಹುದು, ಇನ್ನು ಕೆಲವರಲ್ಲಿ ಮೂಗಿನಿಂದ ಮರೆಯಾಗಿ ಶ್ವಾಸಕೋಶಗಳಲ್ಲಷ್ಟೇ ಇರಬಹುದು; ಇಂಥವರಲ್ಲಿ ಪರೀಕ್ಷೆ ನಡೆಸಿದರೆ ಕೆಲವರಲ್ಲಿ ಪಾಸಿಟಿವ್ ಬರಬಹುದು, ಇನ್ನು ಕೆಲವರಲ್ಲಿ ನೆಗೆಟಿವ್ ಬರಬಹುದು. ಆದ್ದರಿಂದ ಎರಡನೇ ವಾರದ ಹೊತ್ತಿಗೆ ಸ್ಪಷ್ಟವಾದ ಕೊರೋನ ಲಕ್ಷಣಗಳಿದ್ದರೂ ಆರ್ ಟಿ ಪಿಸಿಆರ್ ಪರೀಕ್ಷೆಯಲ್ಲಿ ವೈರಸ್ ಪತ್ತೆಯಾಗದಿದ್ದರೆ ಕೊರೋನ ಸೋಂಕು ಇಲ್ಲ ಎಂದು ಹೇಳಲಿಕ್ಕಾಗದು. ಅಂಥವರಲ್ಲಿ ಈ ಪರೀಕ್ಷೆಯನ್ನು ಮತ್ತೆ ನಡೆಸಬೇಕಾಗಬಹುದು ಅಥವಾ ಕೊರೋನ ಪ್ರತಿಕಾಯಗಳನ್ನು (ಆಂಟಿಬಾಡಿ) ಪತ್ತೆ ಹಚ್ಚುವ ಪರೀಕ್ಷೆಗಳನ್ನು ಮಾಡಬೇಕಾಗಬಹುದು. ಅವುಗಳಲ್ಲೂ ಕೊರೋನ ಸೋಂಕು ಪತ್ತೆಯಾಗದಿದ್ದರೆ, ಮತ್ತು ಕೊರೋನದಿಂದ ತೀವ್ರ ಸಮಸ್ಯೆಯಾಗಿರುವ ಬಗ್ಗೆ ಬಲವಾದ ಸಂಶಯಗಳಿದ್ದರೆ, ಎದೆಯ ಕ್ಷಕಿರಣ ಅಥವಾ ಸಿಟಿ ಸ್ಕಾನ್ ಪರೀಕ್ಷೆಗಳನ್ನು ಮಾಡಬೇಕಾಗಬಹುದು. ಆದರೆ ಸಿಟಿ ಸ್ಕಾನ್ ಪರೀಕ್ಷೆಯನ್ನು ಹೀಗೆ ವಿವೇಚನೆಯಿಂದ ನಡೆಸಬೇಕಲ್ಲದೆ, ಪ್ರತಿಯೋರ್ವರಿಗೂ ಅದನ್ನು ನಡೆಸುವ, ಅಥವಾ ಒಂದೇ ವ್ಯಕ್ತಿಯಲ್ಲಿ ಮತ್ತೆ ಮತ್ತೆ ನಡೆಸುವ, ಅಗತ್ಯವಿಲ್ಲ.
ಕೊರೋನ ರೋಗದ ಲಕ್ಷಣಗಳು (ತಲೆ ನೋವು, ಜ್ವರ, ಕೆಮ್ಮು, ಬಳಲಿಕೆ) ಇರುವವರು, ಅದರಲ್ಲೂ ಹಿರಿವಯಸ್ಕರು ಮತ್ತು ಸೋಂಕು ತೀವ್ರಗೊಳ್ಳುವ ಅಪಾಯವುಳ್ಳವರು, ಆರ್‌ಟಿ ಪಿಸಿಆರ್ ಪರೀಕ್ಷೆ ಮಾಡಿರಲಿ, ಇಲ್ಲದಿರಲಿ, ಅದು ಪಾಸಿಟಿವ್ ಇರಲಿ, ನೆಗೆಟಿವ್ ಇರಲಿ, ಕನಿಷ್ಠ ಎರಡು ವಾರಗಳವರೆಗೆ ತಮ್ಮ ದೇಹಸ್ಥಿತಿಯ ಮೇಲೆ, ರಕ್ತದಲ್ಲಿ ಆಮ್ಲಜನಕದ ಪ್ರಮಾಣದ ಮೇಲೆ, ನಿಗಾ ವಹಿಸಬೇಕಾದದ್ಫು ಅತಿ ಮುಖ್ಯ. ಅಂಥವರಲ್ಲಿ ರಕ್ತದ ಆಮ್ಲಜನಕದ ಮಟ್ಟವು 95%ಕ್ಕಿಂತ ಕೆಳಗಿಳಿದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು. ರೋಗಲಕ್ಷಣಗಳು ಮುಂದುವರಿದಿರುವಾಗ ಆರ್‌ಟಿ ಪಿಸಿಆರ್ ಮರು ಪರೀಕ್ಷೆಯು ನೆಗೆಟಿವ್ ಎಂದಾದರೆ ರೋಗವು ವಾಸಿಯಾಯಿತೆಂದು ಸುಮ್ಮನಿರಬಾರದು ಅಥವಾ ನಿಗಾ ವಹಿಸುವುದನ್ನು ಬಿಡಬಾರದು. ಅಂಥವರು ಮತ್ತೆ ಒಂದೆರಡು ವಾರಗಳವರೆಗೆ ತಮ್ಮ ದೇಹ ಸ್ಥಿತಿಯ ಮೇಲೆ ನಿಗಾ ವಹಿಸಲೇ ಬೇಕು.
ಯಾವುದೇ ರೋಗಲಕ್ಷಣಗಳಿಲ್ಲದೆ, ಯಾವುದೋ ಕಾರಣಕ್ಕೆ ಆರ್‌ಟಿ ಪಿಸಿಆರ್ ಮಾಡಿಸಿಕೊಂಡು ಅದು ಪಾಸಿಟಿವ್ ಬಂದಿದ್ದರೆ, ಏಳೆಂಟು ದಿನಗಳವರೆಗೆ ನಿಗಾ ವಹಿಸುವುದೊಳ್ಳೆಯದು.
ಈಗಾಗಲೇ ಕೊರೋನ ಸೋಂಕಿತರಾದವರು ಏನು ಮಾಡಬೇಕು?
ಈಗಾಗಲೇ ಕೊರೋನ ಸೋಂಕನ್ನು ಪಡೆದವರಲ್ಲಿ ಹೆಚ್ಚಿನವರು ರೋಗಲಕ್ಷಣಗಳೇ ಇಲ್ಲದೆ, ಅಥವಾ ಸೌಮ್ಯ ರೂಪದ ರೋಗವನ್ನು ಹೊಂದಿ ವಾರದೊಳಗೆ ಗುಣಮುಖರಾಗಿದ್ದಾರೆ, ಅವರೆಲ್ಲರಲ್ಲೂ ಕೊರೋನ ಸೋಂಕಿನ ವಿರುದ್ಧ ರಕ್ಷಣಾ ಶಕ್ತಿಯು ಬೆಳೆದಿದ್ದು, ಅವರು ಹಿಂದಿನಂತೆಯೇ ತಮ್ಮ ನಿತ್ಯ ಕಾರ್ಯಗಳಲ್ಲಿ ತೊಡಗಬಹುದು.
ಕೊರೋನ ರೋಗದಿಂದ ತೀವ್ರ ಸಮಸ್ಯೆಗಳಾಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚೇತರಿಸಿಕೊಂಡವರಲ್ಲೂ ಹೆಚ್ಚಿನವರು ಹೀಗೆಯೇ ಮತ್ತೆ ತಮ್ಮ ಹಿಂದಿನ ಮಟ್ಟಕ್ಕೆ ಮರಳಬಹುದು. ಶ್ವಾಸಕೋಶಗಳಲ್ಲಿ ಗಂಭೀರವಾದ ಸಮಸ್ಯೆಗಳಾಗಿದ್ದವರು, ಕೃತಕ ಉಸಿರಾಟದ ಅಗತ್ಯವುಂಟಾಗಿದ್ದವರು ಶ್ವಾಸಕೋಶಗಳಲ್ಲಿ ಶಾಶ್ವತವಾದ ಹಾನಿಯನ್ನು ಎದುರಿಸಬೇಕಾಗಬಹುದು. ಅಂಥವರಿಗೆ ಮನೆಯಲ್ಲೇ ಹೆಚ್ಚುವರಿ ಆಮ್ಲಜನಕವನ್ನು ನೀಡಬೇಕಾಗಬಹುದು, ಉಸಿರಾಟವನ್ನು ಬಲಪಡಿಸುವ ಶಾರೀರಿಕ ಚಿಕಿತ್ಸೆ (ಫಿಸಿಯೋಥೆರಪಿ) ಮತ್ತು ಇತರ ಚಿಕಿತ್ಸೆಗಳೂ ಬೇಕಾಗಬಹುದು. ಕೆಲವರಲ್ಲಿ ಬಳಲಿಕೆ, ಮೈಕೈ ನೋವು, ನರಮಾನಸಿಕ ಸಮಸ್ಯೆಗಳು ಕೆಲಕಾಲ ಮುಂದುವರಿಯಬಹುದು. ಇವೇನೇ ಇದ್ದರೂ ವೈಜ್ಞಾನಿಕವಾಗಿ, ತಜ್ಞ ವೈದ್ಯರ ಸಲಹೆಗಳಂತೆ ಪರಿಹಾರವನ್ನು ಪಡೆಯಬೇಕು; ಇವುಗಳಿಗೆ ಆಯುಷ್, ಯೋಗ ಇತ್ಯಾದಿಗಳನ್ನು ನೆಚ್ಚಿಕೊಂಡರಾಗದು.
ಕೊರೋನ ಸೋಂಕು ಮರುಕಳಿಸುತ್ತದೆಯೇ?
ಇಲ್ಲವೆಂದೇ ಹೇಳಬಹುದು. ಇದುವರೆಗೆ ವಿಶ್ವದಲ್ಲಿ 4 ಕೋಟಿ 40 ಲಕ್ಷದಷ್ಟು ಕೊರೋನ ಪ್ರಕರಣಗಳು ವರದಿಯಾಗಿರುವಲ್ಲಿ, ಕೇವಲ 6 (ಹಾಂಗ್‌ಕಾಂಗ್, ಅಮೆರಿಕಾ, ಬೆಲ್ಜಿಯಂ, ಈಕ್ವಡಾರ್‌ಗಳಿಂದ ತಲಾ ಒಂದು, ಭಾರತದಿಂದ ಎರಡು) ಪ್ರಕರಣಗಳು ಮಾತ್ರವೇ ಮರು ಸೋಂಕುಗಳೆಂದು ವರದಿಯಾಗಿವೆ. ಈ ಆರು ಪ್ರಕರಣಗಳನ್ನು ವಿಶ್ಲೇಷಿಸಿದಾಗಲೂ ಅವು ಮರು ಸೋಂಕುಗಳೆಂದು ಖಚಿತವಾಗಿ ಹೇಳುವಂತಿಲ್ಲ ಎನ್ನುವುದು ಕಂಡುಬರುತ್ತದೆ. ಆದ್ದರಿಂದ ಈಗಾಗಲೇ ಕೊರೋನ ಸೋಂಕನ್ನು ಹೊಂದಿ ಗುಣಮುಖರಾಗಿರುವವರು ಮರು ಸೋಂಕಿನ ಬಗ್ಗೆ ಚಿಂತಿತರಾಗಿರುವ ಅಗತ್ಯವಿಲ್ಲ.
ಕೊರೋನ ಸೋಂಕಿನಿಂದ ಮುಕ್ತಿ ಇಲ್ಲವೇ?
ಖಂಡಿತಕ್ಕೂ ಇದೆ, ಇಂತಹ ಅಥವಾ ಇದಕ್ಕಿಂತಲೂ ಭೀಕರವಾದ ಸೋಂಕುಗಳು ಹಿಂದೆಯೂ ಇದ್ದವು, ಇನ್ನು ಮುಂದೆಯೂ ಬರಬಹುದು. ಆಧುನಿಕ ವೈದ್ಯ ವಿಜ್ಞಾನ-ತಂತ್ರಜ್ಞಾನಗಳ ನೆರವಿನಿಂದ ಅವನ್ನು ಎದುರಿಸಿ ನಾವು ಗೆದ್ದಿದ್ದೇವೆ, ಮುಂದೆಯೂ ಗೆಲ್ಲಲಿದ್ದೇವೆ.
ಯಾವುದೇ ಪ್ರದೇಶದಲ್ಲಿ 50-60% ಜನರಿಗೆ ಕೊರೋನ ಹರಡಿದ ಬಳಿಕ ಅವರೆಲ್ಲರಲ್ಲಿ ಸೋಂಕು ನಿರೋಧಕ ಶಕ್ತಿಯು ಬೆಳೆದು, ಸೋಂಕಿನ ಹರಡುವಿಕೆಯು ವಿರಳಗೊಳ್ಳಲಿದೆ. ನಮ್ಮ ದೇಶದಲ್ಲಿ ಈ ವರೆಗೆ 20-30% ಸೋಂಕಿತರಾಗಿರಬಹುದೆಂದು ಅಂದಾಜಿಸಲಾಗಿದ್ದು ಇನ್ನು 3-4 ತಿಂಗಳಲ್ಲಿ ಇನ್ನಷ್ಟು ಜನರು ಸೋಂಕಿತರಾದಾಗ ಈ ಹಂತವನ್ನು ತಲುಪುವ ಎಲ್ಲಾ ಸಾಧ್ಯತೆಗಳಿವೆ. ಅಂದರೆ ಈ ವರ್ಷಾಂತ್ಯದ ವೇಳೆಗೆ ಭಾರತದ ಹೆಚ್ಚಿನ ಭಾಗಗಳಲ್ಲಿ, ಅದರಲ್ಲೂ ದೊಡ್ದ ನಗರಗಳಲ್ಲಿ, ಕೊರೋನ ಹರಡುವಿಕೆಯು ವಿರಳಗೊಳ್ಳಲಿದೆ. ಆದರೆ ಸೋಂಕಿನ ನೆಪದಲ್ಲಿ ಭೀತಿ ಹುಟ್ಟಿಸಿ ನಿಯಂತ್ರಿಸುವ ಪ್ರಯತ್ನಗಳು ವಿರಳವಾಗಲಿವೆಯೇ ಎನ್ನುವುದನ್ನು ಕಾದು ನೋಡಬೇಕಷ್ಟೆ.
ಕೊರೋನ ಹರಡುವಿಕೆಯು ವಿರಳವಾದರೂ, ಈ ಬಾರಿ ಸೋಂಕಿಗೆ ಒಳಗಾಗದವರು ಮುಂದೆ ಅದನ್ನು ಪಡೆಯುವ ಸಾಧ್ಯತೆಗಳು ಇದ್ದೇ ಇರುತ್ತವೆ. ಆರೋಗ್ಯವಂತರಿಗೆ, ಕಿರಿವಯಸ್ಕರಿಗೆ ತಗಲಿದರೆ ಅದು ಇತರ ಜ್ವರ-ಕೆಮ್ಮುಗಳಂತೆ ಕಾಡಿ ತಾನಾಗಿ ವಾಸಿಯಾಗಲಿದೆ, ಆದರೆ, ಹಿರಿವಯಸ್ಕರಿಗೆ, ಅನ್ಯ ರೋಗಗಳುಳ್ಳವರಿಗೆ ತಗಲಿದರೆ ಸಮಸ್ಯೆಗಳನ್ನುಂಟು ಮಾಡಬಹುದು. ಈ ಸೋಂಕಿನ ಬಗ್ಗೆ ಆಧುನಿಕ ವೈದ್ಯವಿಜ್ಞಾನದ ವೈದ್ಯರಿಗೆ ಈಗ ಸಾಕಷ್ಟು ಅನುಭವವಾಗಿರುವುದರಿಂದ ಮುಂದಿನ ದಿನಗಳಲ್ಲಿ ಯಾರಲ್ಲೇ ಅದು ಉಂಟಾದರೂ ಅದನ್ನು ನಿಭಾಯಿಸುವುದು ಕಷ್ಟವಾಗದು. ಸೋಂಕು ಉಲ್ಬಣಿಸುವ ಅಪಾಯವುಳ್ಳವರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಿದ್ದು, ಸೋಂಕಿನ ಲಕ್ಷಣಗಳು ತೊಡಗಿದರೆ ಈಗ ಸೂಚಿಸಲಾಗಿರುವ ಎಚ್ಚರಿಕೆಯ ಕ್ರಮಗಳನ್ನು ಪಾಲಿಸಬೇಕಾಗುತ್ತದೆ.

Be the first to comment

Leave a Reply

Your email address will not be published.


*